ತುಂಬಾ
ದಿನಗಳ ನಂತರ ಮಳೆಯೊಂದು ಬಂದು ಸಂತಸ ತಂದು ಹೋದರೂ ಮಳೆ ಹನಿ ಇನ್ನೂ ನಿಂತಿಲ್ಲಾ. ವಾರಸುದಾರರಿಲ್ಲದೇ
ನಿಷ್ಕ್ರೀಯವಾಗಿದ್ದ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ಸರಕಾರ ಯಾರನ್ನಾದರೂ ಸರಿ ನೇಮಕ ಮಾಡಿದರೆ ಸಾಕು
ಎಂದು ಬಹುತೇಕರ ಬಯಕೆಯಾಗಿತ್ತು. ಸಾಂಸ್ಕೃತಿಕ ನೀತಿಯ ಕರಡು ಸಚಿವ ಸಂಪುಟದಲ್ಲಿ ಅನುಮೋದನೆಗೊಳ್ಳುವವರೆಗೂ
ಕಾಯ್ದ ಸಚಿವೆ ಉಮಾಶ್ರೀಯವರು ಆರು ಅಕಾಡೆಮಿ ಹಾಗೂ ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು
ನೇಮಕ ಮಾಡಿ ಆದೇಶ ಹೊರಡಿಸಿದರು. ಸಾಂಸ್ಕೃತಿಕ ವಲಯಕ್ಕೆ ಒಂದಿಷ್ಟು ನೆಮ್ಮದಿ ತಂದಿತು.
ಸಧ್ಯ
ಅಕಾಡೆಮಿ ಪ್ರಾಧಿಕಾರಗಳು ಮತ್ತೆ ಕ್ರಿಯಾಶೀಲವಾದವಲ್ಲಾ ಎಂದು ನಿಟ್ಟುಸಿರು ಬಿಡುತ್ತಿರುವಂತೆಯೇ ಪ್ರಾದೇಶಿಕವಾರು
ಸದಸ್ಯರ ಆಯ್ಕೆ ಆಗಿಲ್ಲಾ ಎಂಬ ಅಪಸ್ವರಗಳು ಕೆಲವು ಜಿಲ್ಲೆಗಳಲ್ಲಿ ಎದ್ದಿತು. ನಾಟಕ ಅಕಾಡೆಮಿಯಲ್ಲಿ
ತಮ್ಮ ಜಿಲ್ಲೆಯವರಿಗೆ ಪ್ರಾತಿನಿದ್ಯತೆ ಸಿಕ್ಕಿಲ್ಲವೆಂದು ಶಿವಮೊಗ್ಗ ಮೈಸೂರು ಬೆಳಗಾವಿ ಜಿಲ್ಲೆಯ ಕೆಲವು
ರಂಗಕರ್ಮಿಗಳು ಅಸಮಾಧಾನಗೊಂಡು ಜಾಲತಾಣಗಳಲ್ಲಿ ಪ್ರತಿಕ್ರಿಯಿಸತೊಡಗಿದರು. ಇದು ಸಹಜವೂ ಆಗಿತ್ತು. ತಮ್ಮ
ಜಿಲ್ಲೆಗಳಿಗೆ ಅಕಾಡೆಮಿಯಲ್ಲಿ ಪ್ರತಿನಿದ್ಯತೆ ಸಿಗಬೇಕು ಹಾಗೂ ಅಕಾಡೆಮಿಯ ಯೋಜನೆಗಳ ಪ್ರಯೋಜನ ನಮ್ಮ
ಜಿಲ್ಲೆಗೂ ಸಿಗಬೇಕು ಎನ್ನುವುದು ಆಯಾ ಜಿಲ್ಲಾ ಕೇಂದ್ರಗಳ ರಂಗಕರ್ಮಿಗಳ ಬಯಕೆಯಾಗಿದ್ದರಲ್ಲಿ ತಪ್ಪೇನೂ
ಇಲ್ಲಾ.
ಆದರೆ..
ಒಟ್ಟು ಕರ್ನಾಟಕದಲ್ಲಿರುವುದು ಮೂವತ್ತು ಜಿಲ್ಲೆಗಳು. ಆದರೆ ಸರಕಾರಿ ನಿಬಂಧನೆಗಳ ಪ್ರಕಾರ ಅಕಾಡೆಮಿಯ ಸದಸ್ಯರ ಸಂಖ್ಯೆ 15 ಮೀರುವಂತಿಲ್ಲಾ.
ಕೊಂಕಣಿ ಹಾಗೂ ತುಳು ಅಕಾಡೆಮಿಗಳ ಸದಸ್ಯರ ಸಂಖ್ಯೆಯನ್ನು ಹತ್ತರಿಂದ ಹನ್ನೆರಡಕ್ಕೆ ಈ ಸಲ ಹೆಚ್ಚಿಸಲಾಗಿದೆ.
ಇರುವ 15 ಸದಸ್ಯತ್ವವನ್ನು 15 ಜಿಲ್ಲೆಗಳಿಗೆ ಹಂಚುವುದಾದರೂ ಹೇಗೆ? ಎನ್ನುವುದು ಸರಕಾರದ ಮುಂದಿರುವ
ಸವಾಲು. ಯಾವುದೇ 15 ಜಿಲ್ಲೆಗಳಿಗೆ ಪ್ರಾತಿನಿದ್ಯತೆ ಕೊಟ್ಟರೂ ಇನ್ನು ಬಾಕಿ ಉಳಿದಿರುವ 15 ಜಿಲ್ಲೆಗಳವರು
ಮುನಿಸಿಕೊಳ್ಳುತ್ತಾರೆ. ಪ್ರಾತಿನಿದ್ಯತೆ ಸಿಗದವರು ಅಪಸ್ವರ ಎತ್ತುತ್ತಾರೆ. ಇದು ಬಗೆಹರೆಯಲಾಗದ ಸಮಸ್ಯೆ.
ಬಗೆಹರಿಸಲೇಬೇಕೆಂದರೆ,..
ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿದ್ಯತೆ ಸಿಗಲೇಬೇಕೆಂದರೆ ಸದಸ್ಯರುಗಳ ಸಂಖ್ಯೆಯನ್ನು 15 ರಿಂದ 30ಕ್ಕೆ
ಏರಿಸಬೇಕೆಂದು ಸರಕಾರವನ್ನು ರಂಗಕರ್ಮಿ ಕಲಾವಿದರುಗಳು ಒತ್ತಾಯಿಸಬೇಕಾಗುತ್ತದೆ. ಇಷ್ಟಕ್ಕೂ ನೇಮಕಗೊಂಡ
ಸದಸ್ಯರುಗಳಿಗೇನೂ ಸರಕಾರ ಸಂಬಳ ಕೊಡುವುದಿಲ್ಲಾ. ಹೀಗಾಗಿ ಸರಕಾರದ ಮೇಲೆ ಆರ್ಥಿಕ ಹೊರೆಯೂ ಆಗುವುದಿಲ್ಲಾ.
ಅಮ್ಮಮ್ಮಾ ಅಂದರೆ ಮೂರು ತಿಂಗಳಿಗೊಮ್ಮೆ ಕರೆಯುವ ಮೀಟಿಂಗ್‌ಗಳಿಗೆ ಸದಸ್ಯರು ಬಂದು ಹೋಗುವ ಖರ್ಚು ಕೊಟ್ಟರೆ
ಸಾಕು. ಆದರೆ.. ಮೂವತ್ತು ಜಿಲ್ಲೆಯ ಸದಸ್ಯರುಗಳ ಬೇಡಿಕೆಗಳನ್ನು ನಿಭಾಯಿಸುವಷ್ಟು ಅಕಾಡೆಮಿ ಶ್ರೀಮಂತವಾಗಿಲ್ಲವಲ್ಲಾ.
ಪ್ರತಿ ಜಿಲ್ಲೆಯ ಪ್ರತಿನಿಧಿಯೂ ಸಹ ತನ್ನ ಜಿಲ್ಲೆಯ ರಂಗಭೂಮಿಗೆ ಹೆಚ್ಚು ಅನುದಾನ ಬೇಕು, ಯೋಜನೆಗಳ
ಪ್ರಯೋಜನೆ ಬೇಕು ಎಂದು ಕೇಳುವವರೆ. ಯಾಕೆಂದರೆ ಅದು ಅವರ ಹಕ್ಕು. ತಾವು ಪ್ರತಿನಿಧಿಸುವ ಜಿಲ್ಲೆಯ ರಂಗಕರ್ಮಿಗೆ
ಪ್ರತಿ ವರ್ಷ ಪ್ರಶಸ್ತಿ ಕೊಡಲೇಬೇಕೆಂದು ಒತ್ತಾಯಿಸುತ್ತಾರೆ. ಯಾಕೆಂದರೆ ಪ್ರತಿಯೊಬ್ಬ ಸದಸ್ಯರಿಗೂ
ಪ್ರಶಸ್ತಿಗಾಗಿ ತಮ್ಮ ಜಿಲ್ಲೆಯ ಮೂವರನ್ನು ಸೂಚಿಸುವ ಹಾಗೂ ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಜವಾಬ್ದಾರಿ
ವಹಿಸಲಾಗಿರುತ್ತದೆ. ಅಕಾಡೆಮಿಯ ಯೋಜನೆಗಳು ತಮ್ಮ ಜಿಲ್ಲೆಯಲ್ಲಿ ಕಾರ್ಯಗತವಾಗಬೇಕು ಎಂದು ಒತ್ತಾಯಿಸುವ
ಸದಸ್ಯರೂ ಇರುತ್ತಾರೆ. ಸಂಖ್ಯೆ ಹೆಚ್ಚಾದಷ್ಟೂ ಅಕಾಡೆಮಿಗಳ ಸಭೆಗಳಲ್ಲಿ ಪರ ವಿರೋಧಗಳು, ಗಲಾಟೆ ಸಂಘರ್ಷಗಳೂ
ಹೆಚ್ಚಾಗುತ್ತವೆ. ಹೇಗೆ ಯಾವುದೇ ಸರಕಾರದ ಮಂತ್ರಿ ಮಂಡಲಗಳಲ್ಲಿ ಪ್ರತಿ ಜಿಲ್ಲೆಗೂ ಮಂತ್ರಿಗಳನ್ನು
ಆಯ್ಕೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ಅಕಾಡೆಮಿಯಲ್ಲೂ ಸಹ ಜಿಲ್ಲೆಗೊಬ್ಬರಂತೆ ಸದಸ್ಯರನ್ನಾಗಿ ಮಾಡಲು
ಸಾಧ್ಯವಿಲ್ಲಾ..
ಇನ್ನೊಂದು
ಸಮಸ್ಯೆ ಸದಸ್ಯರ ನೇಮಕದಲ್ಲಿದೆ. ಅದೇನೆಂದರೆ ಆಯ್ಕೆಯಾದ ಒಬ್ಬ ಸದಸ್ಯ ಯಾವುದೋ ಒಂದು ಜಿಲ್ಲೆಯಲ್ಲಿ
ಹುಟ್ಟಿ ಬೆಳೆದಿದ್ದು ಬೇರೆ ಜಿಲ್ಲಾಕೇಂದ್ರದಲ್ಲಿ ವಾಸಿಸುತ್ತಿರುತ್ತಾನೆ. ಆಗ ಅಂತವರನ್ನು ಯಾವ ಜಿಲ್ಲೆಯ
ಪ್ರತಿನಿಧಿ ಎಂದು ಗುರುತಿಸಬೇಕು? ಹುಟ್ಟಿ ಬೆಳೆದ ಜಿಲ್ಲೆಯ ಪ್ರತಿನಿಧಿ ಎಂದು ಗುರುತಿಸಿ ಸದಸ್ಯರನ್ನಾಗಿಸಿದರೆ
ಆ ಜಿಲ್ಲೆಯವರಿಗೆ ಅಸಮಾಧಾನ. ಇಲ್ಲೇ ಇದ್ದು ರಂಗಚಟುವಟಿಕೆಗಳನ್ನು ಕಟ್ಟುತ್ತಿರುವ ನಮಗೆ ಸಿಗದ ಅವಕಾಶ,
ನಮ್ಮ ಜಿಲ್ಲೆಯ ಹೆಸರಲ್ಲಿ ಬೇರೆ ಜಿಲ್ಲೆಯ ನಗರ ವಾಸಿಯಾಗಿರುವವನಿಗೆ ದಕ್ಕಿದ್ದು ಸರಿಯಲ್ಲಾ ಎಂದು
ಅಪಸ್ವರ ಏಳುತ್ತದೆ. ಈ ಸಮಸ್ಯೆ ಕೇವಲ ಅಕಾಡೆಮಿಗಳ ನೇಮಕದಲ್ಲಿ ಮಾತ್ರವಲ್ಲಾ ಸರಕಾರದ ಎಲ್ಲಾ ಪ್ರಶಸ್ತಿ
ಪುರಸ್ಕಾರದ ಸಮಯದಲ್ಲೂ ಉಲ್ಬಣಗೊಳ್ಳುತ್ತದೆ. ಇದಕ್ಕೆ ಏನು ಪರಿಹಾರ ಎನ್ನುವುದು ಸರಕಾರಕ್ಕೂ ಗೊತ್ತಿಲ್ಲಾ.
ವ್ಯಕ್ತಿಯೊಬ್ಬನನ್ನು ಜನ್ಮಸ್ಥಳದಿಂದ ಗುರುತಿಸುವುದೋ ಇಲ್ಲವೇ ಕಾಯಕಸ್ಥಳದಿಂದಲೋ ಎನ್ನುವುದು ಬಗೆಹರಿಯದ
ಪ್ರಶ್ನೆಯಾಗಿದೆ. ಯಾಕೆಂದರೆ ಬಹುತೇಕ ಪ್ರತಿಭಾವಂತರು ನೌಕರಿಗಾಗಿಯೋ, ಉದರಪೋಷಣೆಗಾಗಿಯೋ, ತಮ್ಮ ಪ್ರತಿಭೆಗೆ
ಸಿಗುವ ಹೆಚ್ಚಿನ ಅವಕಾಶಗಳಿಗಾಗಿಯೋ ಬೆಂಗಳೂರು, ಮೈಸೂರುಗಳಂತಹ ಮಹಾನಗರಗಳಿಗೆ ವಲಸೆ ಬಂದು ಅಲ್ಲಿಯೇ
ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ತಾವಿದ್ದಲ್ಲೇ
ಕಲೆ ಸಾಹಿತ್ಯ ಸಾಂಸ್ಕೃತಿಕ ವಲಯಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹೀಗಿರುವಾಗ ಅಂತವರನ್ನು ಅವರ
ಮೂಲ ಜಿಲ್ಲೆಯ ಜೊತೆಗೆ ಗುರುತಿಸಿ ಪದವಿ ಪ್ರಶಸ್ತಿ
ಕೊಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ
ಬಹಳ ಹಿಂದಿನಿಂದಲೂ ಇದೆ. ಹೀಗೆ ವಲಸೆ ಬಂದವರದು ಒಂದು ರೀತಿ ಅತಂತ್ರ ಪರಿಸ್ಥಿತಿ. ದಶಕಗಳ ಕಾಲ ಊರನ್ನು
ಬಿಟ್ಟು ಬಂದಿದ್ದರಿಂದ ಆ ಜಿಲ್ಲೆಯವರು ತಮ್ಮವನನ್ನೇ ಹೊರಗಿನವನು ಎಂದು ಭಾವಿಸುತ್ತಾರೆ. ಇನ್ನು ನಗರದ
ಜನ ಈತ ವಲಸೆಬಂದವನೆಂದೇ ಭಾವಿಸುತ್ತಾರೆ. ಹೀಗಾಗಿ ಊರು ಬಿಟ್ಟು ಊರಿಗೆ,, ಜಿಲ್ಲೆ ಬಿಟ್ಟು ಜಿಲ್ಲೆಗೆ
ಬಂದು ಬದುಕು ಕಟ್ಟಿಕೊಂಡು ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡವರದು ಒಂದು ರೀತಿಯಲ್ಲಿ ತ್ರಿಶಂಕು
ಸ್ಥಿತಿಯೇ ಆಗಿರುತ್ತದೆ. ಇನ್ನೂ ನೌಕರಿಯ ಮೇಲೆ ಆಗಾಗ ಜಿಲ್ಲೆಯನ್ನು ಬದಲಾಯಿಸುವವರ ಪರಿಸ್ಥಿತಿಯಂತೂ
ಇನ್ನೂ ಅಯೋಮಯ.
ಬೆಂಗಳೂರಿನವರಿಗೆ
ಹೆಚ್ಚು ಪ್ರಾತಿನಿದ್ಯತೆ ದಕ್ಕಿದೆ ಎನ್ನುವ ಇನ್ನೊಂದು ಆರೋಪವೂ ಪ್ರತಿಸಲದಂತೆ ಈ ಸಲವೂ ಕೇಳು ಬರುತ್ತದೆ.
ಎಲ್ಲಿ ಹೆಚ್ಚು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆಯೋ ಅಲ್ಲಿಯವರಿಗೆ ಹೆಚ್ಚು ಅವಕಾಶಗಳು ಸಿಗುವುದು
ಸಹಜವಾಗಿದೆ. ಇಡೀ ಕರ್ನಾಟಕದಲ್ಲಿ ವರ್ಷಪೂರಾ ಕಲೆ ಸಾಹಿತ್ಯ ಹಾಗೂ ರಂಗಚಟುವಟಿಕೆಗಳು ನಿರಂತರವಾಗಿ
ಬೆಂಗಳೂರಲ್ಲಿ ನಡೆಯುತ್ತವೆ. ಮೈಸೂರು ನಗರವನ್ನು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ
ಚಟುವಟಿಕೆಗಳು ನಡೆಯುವುದಿಲ್ಲಾ ಎನ್ನುವುದರಲ್ಲಿ ಸುಳ್ಳಿಲ್ಲಾ. ಶಿವಮೊಗ್ಗ ಧಾರವಾಡಗಳಲ್ಲಿ ಸಾಂಸ್ಕೃತಿಕ
ಚಟುವಟಿಕೆಗಳು ನಡೆಯುತ್ತವೆಯಾದರೂ ವರ್ಷಪೂರ್ತಿ ಇರುವುದಿಲ್ಲಾ. ಇನ್ನು ಕೆಲವು ಜಿಲ್ಲಾ ಕೆಂದ್ರಗಳಲ್ಲೂ
ಸಹ ನಾಟಕ ಚಟುವಟಿಕೆಗಳು ನಗಣ್ಯವಾಗಿವೆ. ಹೆಚ್ಚು ಕೆಲಸ ಮಾಡುವವರಿಗೆ ಹೆಚ್ಚು ಪ್ರಾತಿನಿದ್ಯತೆ ಸಿಕ್ಕುವುದು
ಸಹಜ ನ್ಯಾಯವಾಗಿದೆ. ಹಾಗೆಯೇ ಎಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕುಂಟಿತವಾಗಿವೆಯೋ ಅಲ್ಲಿಯೂ ಸಹ ಪ್ರಾತಿನಿದ್ಯತೆಯನ್ನು
ಕೊಟ್ಟು ಚಟುವಟಿಕೆಗಳು ಹೆಚ್ಚುವಂತೆ ಮಾಡುವುದೂ ಸಹ ಸರಕಾರದ ಕರ್ತವ್ಯವಾಗಿದೆ.
ಇಷ್ಟಕ್ಕೂ
ಅಕಾಡೆಮಿಗೆ ನೇಮಕಗೊಂಡ ಎಲ್ಲಾ ಸದಸ್ಯರೂ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ತಮ್ಮ ಜಿಲ್ಲೆಯಲ್ಲಿ
ಸಾಧ್ಯವಾದಷ್ಟು ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆಂಬುದೂ ಸಹ ಬಹುತೇಕ ಸಲ ಸುಳ್ಳಾಗಿದೆ.
ಅಕಾಡೆಮಿಯ ಯೋಜನೆ ಅನುದಾನಗಳನ್ನು ತಮ್ಮ ಸ್ವಾರ್ಥಕ್ಕೆ ಹಾಗೂ ಸ್ವಜನಪಕ್ಷಪಾತಕ್ಕೆ ಬಳಸಿಕೊಂಡವರೂ ಬೇಕಾದಷ್ಟಿದ್ದಾರೆ.
ಅಷ್ಟೇ ಯಾಕೆ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಮಾರಿಕೊಂಡವರೂ ಇದ್ದಾರೆ. ಜಿಲ್ಲೆಗೊಬ್ಬ ಪ್ರತಿನಿಧಿ
ಅಕಾಡೆಮಿಗಳಿಗೆ ಆಯ್ಕೆ ಆದ ತಕ್ಷಣ ಆ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರುತ್ತವೆ ಎನ್ನುವ
ನಿರೀಕ್ಷೆ ಬಹುತೇಕ ಸಲ ನಿರಾಸೆಯನ್ನುಂಟು ಮಾಡಿದೆ. ಹಾಗೆಯೇ ಅಕಾಡೆಮಿಯಲ್ಲಿ ಪ್ರಾತಿನಿದ್ಯತೆ ಸಿಗಲಿ
ಬಿಡಲಿ ತಮ್ಮ ಪ್ರದೇಶಗಳಲ್ಲಿ ತಮ್ಮ ಪಾಡಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತರಾಗಿರುವ ಬೇಕಾದಷ್ಟು
ಕ್ರಿಯಾಶೀಲರು ಇದ್ದಾರೆಂಬುದೂ ಸುಳ್ಳಲ್ಲಾ. ಇಷ್ಟಕ್ಕೂ ಒಂದು ಜಿಲ್ಲೆಯ ಒಬ್ಬರಿಗೆ ಅಕಾಡೆಮಿಯಲ್ಲಿ
ಸದಸ್ಯಗಿರಿ ದೊರಕಿತು ಎಂದ ತಕ್ಷಣ ಆ ಜಿಲ್ಲೆಯಲ್ಲಿ ರಂಗಚಟುವಟಿಕೆಗಳು ತೀವ್ರಗೊಳ್ಳುತ್ತವೆ ಎನ್ನುವುದೂ
ನಂಬಲಾಗದ ಮಾತು.
ಹೀಗಾಗಿ
ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಅಕಾಡೆಮಿಯಂತಹ ಸರಕಾರಿ ಪ್ರತಿನಿಧಿಕ ಸಂಸ್ಥೆಗಳಿಗೆ ಪ್ರಾದೇಶಿಕವಾರು
ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವೇ ಆಗಿದೆ. ಅದರಲ್ಲೂ ಸಾಮಾಜಿಕ
ನ್ಯಾಯ, ಜಾತಿ ಸಮೀಕರಣಗಳನ್ನೂ ಇಟ್ಟುಕೊಂಡು ಇರುವ ಹದಿನೈದು ಸದಸ್ಯರನ್ನು ವಿವಾದಾತೀತವಾಗಿ ಆಯ್ಕೆ
ಮಾಡುವುದಂತೂ ಯಾರಿಂದಲೂ ಸಾಧ್ಯವಿಲ್ಲಾ. ಯಾರು ಯಾವ ಜಿಲ್ಲೆಯಿಂದ, ಯಾವ ಮಾನದಂಡಗಳಿಂದ ಆಯ್ಕೆಯಾದರೂ
ಚಿಂತೆಯಿಲ್ಲಾ ಹಾಗೆ ಆಯ್ಕೆಯಾದವರು ಅಕಾಡೆಮಿಗೆ ಸದಸ್ಯರಾಗಲು ಅರ್ಹರಾಗಿದ್ದಾರೋ ಇಲ್ಲವೋ, ಆಯಾ ಕ್ಷೇತ್ರಕ್ಕೆ
ಕೊಡುಗೆಯನ್ನು ಕೊಟ್ಟಿದ್ದಾರೋ ಇಲ್ಲವೋ.... ಎನ್ನುವುದನ್ನು ಪರಿಗಣಿಸುವುದು ಉತ್ತಮ. ಎರಡು ನಾಟಕ ಬರೆದು
ನಾಟಕಕಾರ ಎಂದುಕೊಂಡವರು, ನಾಲ್ಕು ನಾಟಕಗಳಲ್ಲಿ ನಟಿಸಿ ತಾನೂ ಕಲಾವಿದ ಎಂದು ಘೋಷಿಸಿಕೊಂಡವರು, ಯಾವುದೇ
ಪ್ರತಿಭೆ ಇರದಿದ್ದರೂ ಯಾರೋ ಬೇರೆಯವರು ನಿರ್ಮಿಸಿದ ನಾಟಕಗಳ ಉತ್ಸವ ಆಯೋಜಿಸಿ ತಾನೂ ರಂಗಸಂಘಟಕ ಎಂದು
ವಾದಿಸುವವರೆಲ್ಲಾ ತಮಗೂ ಅಕಾಡೆಮಿಯಲ್ಲಿ ಪ್ರಾತಿನಿದ್ಯತೆ ಸಿಗಲೇಬೇಕು ಎಂದು ಲಾಬಿ ಮಾಡಿ ಆಯ್ಕೆಯಾದರೆ
ಅದು ಪ್ರಶ್ನಾರ್ಹ. ಆದ್ದರಿಂದ ನಮ್ಮ ಜಿಲ್ಲೆಗೆ ಪ್ರಾತಿನಿದ್ಯತೆ ಸಿಗಲಿಲ್ಲಾ... ಬೇರೆ ನಗರ ವಾಸಿಗಳಿಗೆ
ನಮ್ಮ ಜಿಲ್ಲೆಯ ಹೆಸರಲ್ಲಿ ಆಯ್ಕೆ ಮಾಡಲಾಗಿದೆ.. ಎಂದೆಲ್ಲಾ ಮುನಿಸು ಮನಸ್ಥಾಪಗಳನ್ನು ವ್ಯಕ್ತಪಡಿಸುವ
ಬದಲು ಅಕಾಡೆಮಿಯನ್ನು ಹೇಗೆ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಸಂಸ್ಥೆಯನ್ನಾಗಿಸಿಬೇಕು
ಹಾಗೂ ಈಗ ಸರಕಾರದಿಂದ ನೇಮಕವಾಗಿರುವ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಉಪಯೋಗಿಸಿಕೊಂಡು, ಅಕಾಡೆಮಿಯ
ಯೋಜನೆಗಳನ್ನು ಬಳಸಿಕೊಂಡು ತಮ್ಮ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೇಗೆಲ್ಲಾ ವಿಸ್ತರಿಸಬೇಕು
ಎನ್ನುವತ್ತ ರಂಗಕರ್ಮಿಗಳು ಚಿತ್ತ ಕೊಟ್ಟರೆ ಸಮಗ್ರ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವ್ಯಕ್ತಿಗತ
ಬಯಕೆಗಳಿಗಿಂತಲೂ ರಂಗಭೂಮಿ ಬೆಳವಣಿಗೆ ದೊಡ್ಡದು ಎಂದು ಅರಿತುಕೊಂಡರೆ ರಂಗಕರ್ಮಿ ಎಂದೆನಿಸಿಕೊಂಡಿದ್ದಕ್ಕೂ
ಸಾರ್ಥಕವಾಗುತ್ತದೆ.
ಈ
ಸಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒಂದು ಮಹತ್ವದ ತೀರ್ಮಾಣ ಮಾಡಿದೆ. ಅದೇನೆಂದರೆ ಈಗಾಗಲೇ ಒಂದು
ಸಲ ಸದಸ್ಯರಾಗಿದ್ದವರಿಗೆ ಮತ್ತೊಂದು ಸಲ ಸದಸ್ಯತ್ವ ಕೊಡದಂತೆ ನಿರ್ಬಂಧಿಸಿದೆ. ಈ ಹಿಂದೆ ಕೆಲವರು ಎರಡೆರಡು
ಅವಧಿಗೆ ಒಂದೇ ಅಕಾಡೆಮಿ ಅಥವಾ ಪ್ರಾಧಿಕಾರಕ್ಕೆ ಸದಸ್ಯರಾದವರೂ ಇದ್ದಾರೆ. ಆದರೆ.. ಬೇರೆಯವರಿಗೂ ಅವಕಾಶಗಳು
ಸಿಗಲಿ ಎನ್ನುವ ಸದಾಶಯದಿಂದ ಸಚಿವೆ ಉಮಾಶ್ರೀಯವರು ಈಗಾಗಲೇ ಒಂದು ಸಲ ಸದಸ್ಯರಾಗಿ ಸೇವೆ ಸಲ್ಲಿಸಿದವರಿಗೆ
ಇನ್ನೊಂದು ಸಲ ಸದಸ್ಯರಾಗಲು ಅವಕಾಶವನ್ನು ಈ ಸಲ ನಿರಾಕರಿಸಿದ್ದಾರೆ. ಈಗಾಗಲೇ ಒಂದು ಸಲ ಸದಸ್ಯರಾಗಿ
ಆಯ್ಕೆಯಾಗಿದ್ದ ಪ್ರಕಾಶ್ ಕಂಬತ್ತಳ್ಳಿ ಹಾಗೂ ಇನ್ನೂ ಇಬ್ಬರು ಸದಸ್ಯರುಗಳನ್ನು ಕಣ್ತಪ್ಪಿನಿಂದ ಸದಸ್ಯರನ್ನಾಗಿ
ಈ ಸಲ ನೇಮಿಸಲಾಗಿತ್ತು. ಇದು ಇಲಾಖೆಯ ಗಮನಕ್ಕೆ ಬಂದ ಕೂಡಲೇ ನೇಮಕಾತಿಯನ್ನು ಹಿಂಪಡೆಯಲಾಯಿತು.
ಇದರಿಂದಾಗಿ
“ಒಂದು
ಸಲ ಒಂದು ಅವಧಿಗೆ ಅಧ್ಯಕ್ಷರಾದವರಿಗೂ ಇದೇ ಮಾನದಂಡವನ್ನು ಬಳಸಬೇಕು, ಮತ್ತೊಮ್ಮೆ ಅವರಿಗೆ ಅವಕಾಶ ಕೂಡದು” ಎಂಬ ಒತ್ತಾಯವೂ ಕೇಳಿ ಬಂದಿತು.
ಈಗಾಗಲೇ ಒಂದು ಸಲ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ.ಕೆ.ಮರುಳಸಿದ್ದಪ್ಪನವರನ್ನು ಈ
ಸಲ ಮತ್ತೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಕೆಲವರಲ್ಲಿ
ಅಸಮಾಧಾನವನ್ನು ಹುಟ್ಟಿಸಿತು. ಈಗಾಗಲೇ ಸದಸ್ಯರಾಗಿ ನೇಮಕ ಮಾಡಿ ಮೂರೇ ದಿನಗಳಲ್ಲಿ ಆಯ್ಕೆಯಾದವರ ನೇಮಕಾತಿ
ಆದೇಶವನ್ನು ಹಿಂಪಡಿಯಲಾಗಿದ್ದರಿಂದ ಅವರೂ ಸಹ ‘ಒಬ್ಬರಿಗೊಂದು ಇನ್ನೊಬ್ಬರಿಗೆ
ಇನ್ನೊಂದು ರೀತಿಯ ನ್ಯಾಯವೇ?’ ಎಂದು ಅಸಹನೆಯನ್ನು ವ್ಯಕ್ತಪಡಿಸಿದರು. ‘ಇದು ಸಂಸ್ಕೃತಿ ಇಲಾಖೆಯ ದ್ವಂದ್ವ
ನೀತಿ’
ಎಂದು ಆರೋಪಿಸಿದ ಕೃಷ್ಣ ಕೊಲ್ಹಾರ್ ಕುಲಕರ್ಣಿಯವರು ತಮ್ಮ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯತ್ವಕ್ಕೆ
ರಾಜೀನಾಮೆಯನ್ನು ಕೊಟ್ಟು ತಮ್ಮ ಪ್ರತಿಭಟನೆಯನ್ನು ತೋರಿಸಿ ಆತುರದ ನಿರ್ಧಾರವನ್ನು ತೆಗೆದುಕೊಂಡರು.
ಸಿಕ್ಕ ಹೊಣೆಗಾರಿಕೆಯನ್ನು ನಿಭಾಯಿಸದೇ ಪಲಾಯಣವಾದ ಮಾಡಿದರು. ಅಕಾಡೆಮಿಯೇ ಬೇರೆ ಪ್ರಾಧಿಕಾರವೇ ಬೇರೆ
ಎಂದು ಇಲಾಖೆಯ ಅಧಿಕಾರಿಗಳು ಮರುಳಸಿದ್ದಪ್ಪನವರ ನೇಮಕಾತಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಹಾಗಾದರೆ ಒಬ್ಬರೇ ವ್ಯಕ್ತಿ ಬೇರೆ ಬೇರೆ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಬೇರೆ ಬೇರೆ ಅವಧಿಯಲ್ಲಿ
ಆಯ್ಕೆಯಾಗಬಹುದೇ? ಎನ್ನುವ ಪ್ರಶ್ನೆಯನ್ನೂ ಸಹ ಕೆಲವರು ಎತ್ತಿದ್ದಾರೆ.
ಯಾರು
ಏನೇ ಹೇಳಿದರೂ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಸರಕಾರದ
ವಿವೇಚನೆಯ ಕೆಲಸವೇ ಆಗಿದೆ. ಬರಗೂರರ ಸಾಂಸ್ಕೃತಿಕ ನೀತಿಯಲ್ಲಿ ಈ ಆಯ್ಕೆಯನ್ನು ತಜ್ಞರ ಸಮಿತಿ ನಿರ್ಧರಿಸಬೇಕು
ಎಂದಿತ್ತು. ಆದರೆ ಅದನ್ನು ಪರಿಷ್ಕರಣಾ ಸಮಿತಿ ತಿರಸ್ಕರಿಸಿ ನೇಮಕಾತಿಯ ಹಕ್ಕನ್ನು ಸರಕಾರದ ಇಲಾಖೆಗಳ
ವಿವೇಚನೆಗೆ ಬಿಟ್ಟಿದೆ. ಬರಗೂರುರ ನೇತೃತ್ವದ ಸಾಂಸ್ಕೃತಿಕ ಕರಡು ನೀತಿಯ ಯಥಾವತ್ ಜಾರಿಗಾಗಿ ಕಲೆ ಸಾಹಿತ್ಯ
ಸಾಂಸ್ಕೃತಿಕ ವಲಯದವರು ಒತ್ತಾಯಿಸಬೇಕಿತ್ತು. ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಿತ್ತು. ಅದ್ಯಾವುದನ್ನೂ
ಮಾಡದೇ ಇರುವುದರಿಂದ ಅನಿವಾರ್ಯವಾಗಿ ಸರಕಾರ ನೇಮಕ ಮಾಡಿದವರನ್ನು ಈಗ ಒಪ್ಪಿಕೊಳ್ಳಲೇ ಬೇಕು. ಇಷ್ಟಕ್ಕೂ
ಮರುಳಸಿದ್ದಪ್ಪನವರು ಪ್ರಾಧಿಕಾರದ ಅಧ್ಯಕ್ಷರಾಗುವುದಕ್ಕೆ ಯೋಗ್ಯರಾಗಿದ್ದಾರೆ. ಅವರ ಅಧ್ಯಯನ ಹಾಗೂ
ಅನುಭವ ಆ ಹುದ್ದೆಗೆ ನ್ಯಾಯವದಗಿಸಬಲ್ಲುದಾಗಿದೆ. ಅವರ ನೇಮಕಾತಿ ಯಾರಿಂದ ಯಾವ ಕಾರಣಕ್ಕೆ ಹೇಗೆ ಆಯ್ತು
ಎನ್ನುವುದಕ್ಕಿಂತಲೂ ಅವರು ಆ ಹುದ್ದೆಗೆ ಅರ್ಹರು ಹೌದೋ ಅಲ್ಲವೋ ಎನ್ನುವುದೇ ಇಲ್ಲಿ ಮುಖ್ಯವಾಗಿದೆ.
ಇದೇ ಮಾನದಂಡ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೂ ಅನ್ವಯಿಸುತ್ತದೆ.
ಈ ಸಲ ಬಹುತೇಕ ಅರ್ಹರಾದವರ ನೇಮಕವಾಗಿದ್ದೊಂದು ಸಮಾಧಾನ. ಹಾಗೆ ನೇಮಕಗೊಂಡವರನ್ನು ವಿರೋಧಿಸುವ ಬದಲು
ಒಪ್ಪಿಕೊಂಡು ಅವರಿಂದ ಹೆಚ್ಚು ಕೆಲಸಗಳನ್ನು ನಿರೀಕ್ಷಿಸುವುದು ಹಾಗೂ ಕೆಲಸಗಳು ಆಗದಿದ್ದರೆ ಒತ್ತಾಯಿಸುವುದು
ನಮ್ಮ ನಮ್ಮೆಲ್ಲರ ಕೆಲಸವಾಗಿದೆ.
ಈಗ
ತಾನೇ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ನೇಮಕಗೊಂಡವರ ಯೋಜನಾ ಸಿದ್ದತೆ ಹಾಗೂ ಕಾರ್ಯಬದ್ದತೆಗಳನ್ನು
ಕಾಲಮಿತಿಯಲ್ಲಿ ಪರಿಶೀಲಿಸದೇ ಆಯ್ಕೆ ಪ್ರಕ್ರಿಯೆಯನ್ನೇ ಪ್ರಶ್ನಿಸುವುದು ಆತುರದ ನಿರ್ಧಾರವಾಗುತ್ತದೆ.
ಇನ್ನೂ ಮೂರು ವರ್ಷ ಸಮಯವಿದೆ. ಅಷ್ಟರಲ್ಲಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳ ಯೋಗ್ಯತೆ ಹಾಗೂ ಅರ್ಹತೆಗಳು
ಅವರ ಕೆಲಸಗಳ ಮೂಲಕ ಗೊತ್ತಾಗುತ್ತದೆ. ಉತ್ತಮ ಕೆಲಸಗಳನ್ನು ಮಾಡಿದರೆ ಶ್ಲಾಘಿಸಿ ಗೌರವಿಸೋಣ. ಏನೂ ಕ್ರೀಯಾಶೀಲ
ಕೆಲಸಗಳನ್ನು ಮಾಡದೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಖಂಡಿಸಿ ಪ್ರತಿಭಟಿಸೋಣ.. ಈ ಸಧ್ಯಕ್ಕೆ
ನಮಗಿರುವ ಆಯ್ಕೆ ಇದೊಂದೇ.. ಆರಂಭದಲ್ಲೇ ಖಂಡಿಸುವುದು, ಪ್ರಶ್ನಿಸುವುದು ಇಲ್ಲವೇ ಪ್ರತಿಭಟಿಸುವುದು
ತರವಲ್ಲಾ.. ಎಲ್ಲರ ಯೋಗ್ಯತೆಯನ್ನು ಕಾಲವೇ ನಿರ್ಣಯಿಸುತ್ತದೆ. ಅಲ್ಲಿವರೆಗೂ ನಾವೂ ನೀವೂ ಕಾಯಬೇಕಿದೆ.
ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳೂ ತಮ್ಮ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ಕೆಲಸಗಳನ್ನು ಮಾಡಿ
ತಮ್ಮ ಇತಿಮಿತಿಗಳಲ್ಲಿ ಸಾಂಸ್ಕೃತಿಕ ಕ್ಷೇತ್ರವನ್ನು ವಿಸ್ತರಿಸಲಿ ಎಂದು ಆಶಿಸೋಣ.
-ಶಶಿಕಾಂತ
ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ