ಮಂಗಳವಾರ, ಆಗಸ್ಟ್ 8, 2017

ಅಕಾಡೆಮಿ ವಾರಸದಾರರ ಆಯ್ಕೆ ಮತ್ತು ಸಚಿವೆ ಉಮಾಶ್ರೀಯವರ ಕಾಣ್ಕೆ :

ಅಂತೂ ಬಂತು ಸಾಂಸ್ಕತಿಕ ನೀತಿ;  ತಪ್ಪಿತು ಅಪೂರ್ಣಾವಧಿ ಭೀತಿ :





ಅಂತೂ ಇಂತೂ  ಆರು ಅಕಾಡೆಮಿ ಹಾಗೂ ಎರಡು ಪ್ರಾಧಿಕಾರಗಳಿಗೆ ವಾರಸುದಾರರನ್ನು ನೇಮಿಸಿ ಆಗಸ್ಟ್ 7 ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ಆದೇಶ ಹೊರಡಿಸಿತು. ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳ ಅವಧಿ ಫೆಬ್ರುವರಿ 27ಕ್ಕೆ ಮುಗಿದು ಈಗಾಗಲೇ ಐದು ತಿಂಗಳುಗಳೇ ಗತಿಸಿದ್ದವು. ಕಳೆದ ಮೂರು ತಿಂಗಳಿಂದಾ ಅಕಾಡೆಮಿಗಳಿಗೆ ಅಧ್ಯಕ್ಷರ ಆಯ್ಕೆ ನಾಳೆ ಆಗುತ್ತದೆ, ನಾಡದ್ದು ಆಗುತ್ತದೆ, ಇನ್ನು ನಾಲ್ಕು ದಿನಗಳಲ್ಲಿ ಆಗುತ್ತದೆ, ಮುಂದಿನವಾರ ಗ್ಯಾರಂಟಿ ಆಗುತ್ತದೆ ಎನ್ನುವ ಗಾಳಿ ಸುದ್ದಿಗಳು ಕನ್ನಡ ರಂಗಭೂಮಿಯ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಲೇ ಇದ್ದವು. ಹಲವರ ನಿರೀಕ್ಷೆಗಳೂ ಗರಿಗೆದರಿ ತಣ್ಣಗಾಗಿದ್ದವು.

ಆದಷ್ಟು ಬೇಗ ಅಕಾಡೆಮಿಗಳಿಗೆ ನೇಮಕವಾಗುವುದು ಒಳಿತು.. ಯಾಕೆಂದರೆ ಹಾಲಿ ಸರಕಾರದ ಅಧಿಕಾರದ ಅವಧಿ ಉಳಿದಿರೋದೆ ಇನ್ನು ಎಂಟೊಂಬತ್ತು ತಿಂಗಳುಗಳು ಮಾತ್ರ. ಮುಂದೆ ಬೇರೆ ಸರಕಾರ ಬಂದರೆ ಅಕಾಡೆಮಿಗಳನ್ನು ಬರಕಾಸ್ತ್ ಮಾಡಬಹುದಾಗಿದೆ. ಬಾಕಿ ಇರುವ ಚಿಕ್ಕ ಅವಧಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿದರೂ ಅವರಿಗೆ ಕೆಲಸ ಮಾಡಲು ಪೂರ್ಣಾವಧಿ ಅವಕಾಶವೇ ಸಿಕ್ಕುವುದಿಲ್ಲಾ.. ಹೀಗಾಗಿ ಈ ಸರಕಾರ ಆಯ್ಕೆ ಪ್ರಕ್ರಿಯೆಯನ್ನು ಮಾಡುವುದೇ ಇಲ್ಲಾ.. ಎನ್ನುವುದು ಹಲವರ ಅಪನಂಬಿಕೆಯಾಗಿತ್ತು. ಅದಕ್ಕಾಗಿಯೇ ಸಚಿವೆ ಉಮಾಶ್ರೀಯವರು ಕಾಲಹರಣ ಮಾಡುತ್ತಿದ್ದಾರೆಂದೇ ಎಲ್ಲರೂ ಭಾವಿಸಿಯಾಗಿತ್ತು. ಕಲಾವಿದೆಯಾದ ಉಮಾಶ್ರೀಯವರಿಗೆ ಅಕಾಡೆಮಿಗಳ ಬಗ್ಗೆ ನಿರ್ಲಕ್ಷ ಧೋರಣೆ ಇದೆ ಎಂದೂ ಪುಕಾರು ಹುಟ್ಟಿಸಲಾಗಿತ್ತು, ಕಲೆ ಸಾಹಿತ್ಯ ಸಂಸ್ಕೃತಿಗಿಂತಲೂ ರಾಜಕಾರಣವೇ ಉಮಾಶ್ರೀಯವರಿಗೆ ಮುಖ್ಯವಾಗಿದೆ.. ಹೀಗಾಗಿ ಅಕಾಡೆಮಿಗಳಿಗೆ ಆಯ್ಕೆ ಮಾಡುವುದು ಅವರ ಆದ್ಯತೆಯಲ್ಲಿ ಇಲ್ಲವೇ ಇಲ್ಲಾ ಎಂದು ಕುಹಕ ನುಡಿಯಲಾಗುತ್ತಿತ್ತು.

ಕೆಲವಾರು ಜನ ರಂಗಗೆಳೆಯರು ನನಗೂ ಆಗಾಗ ಪೋನ್ ಮಾಡಿ ಎಲ್ಲದರ ಬಗ್ಗೆಯೂ ಬರೆಯುತ್ತೀರಿ, ಆದರೆ ಈ ಅಕಾಡೆಮಿಗಳಿಗೆ ನೇಮಕಗಳನ್ನು ನಿರ್ಲಕ್ಷ ಮಾಡಿದ ಸಂಸ್ಕೃತಿ ಇಲಾಖೆಯ ವಿಳಂಬ ನೀತಿಯ ಬಗ್ಗೆ ಯಾಕೆ ದ್ವನಿ ಎತ್ತುತ್ತಿಲ್ಲಾ?... ಎಂದು ಆಕ್ಷೇಪಣೆಯನ್ನೂ ವ್ಯಕ್ತಪಡಿಸಿದ್ದರು. ಕಾಯ್ದು ನೋಡಿ ಎನ್ನುವುದಷ್ಟೇ ಉಮಾಶ್ರೀಯವರ ಹಾಗೆ ನನ್ನದೂ ಉತ್ತರವಾಗಿತ್ತು. ಯಾಕೆಂದರೆ ಸಚಿವೆಯವರು ಯಾಕೆ ವಿಳಂಬ ಮಾಡುತ್ತಿದ್ದಾರೆಂಬುದರ ಬಗ್ಗೆ ನನಗೆ ಸ್ಪಷ್ಟವಾದ ಅರಿವಿತ್ತು ಹಾಗೂ ಅವರು ತೆಗೆದುಕೊಂಡ ನಿಲುವಿಗೆ ನನ್ನ ಬೆಂಬಲವೂ ಇತ್ತು.


ಆದರೆ.. ಬಹುತೇಕರಿಗೆ ಆಂತರಿಕ ತಾಂತ್ರಿಕ ಸಮಸ್ಯೆಗಳು ಏನೆಂಬುದರ ಅರಿವಿರಲಿಲ್ಲಾ. ಅದರ ಬಗ್ಗೆ ಸಚಿವೆ ಉಮಾಶ್ರೀಯವರಿಗೆ ಮಾತ್ರ ಸ್ಪಷ್ಟವಾಗಿ ಗೊತ್ತಿತ್ತು. ಎಲ್ಲರೂ ಅಕಾಡೆಮಿಗಳಿಗೆ ವಾರಸುದಾರರ ಆಯ್ಕೆ ಬಗ್ಗೆ ಅತುರದಿಂದರಬೇಕಾದರೆ.. ಉಮಾಶ್ರೀಯವರು ಅಕಾಡೆಮಿ ಹಾಗೂ ಪ್ರಾಧಿಕಾರಗಳ ದೀರ್ಘಾಯುಷ್ಯದ ಬಗ್ಗೆ ಯೋಚಿಸಿದ್ದರು. ಆಯ್ಕೆ ಪ್ರಕ್ರಿಯೆ ಎಷ್ಟೇ ವಿಳಂಬವಾದರೂ ಚಿಂತೆಯಿಲ್ಲಾ ಆದರೆ ಆಯ್ಕೆಗೊಂಡವರು ಮೂರು ವರ್ಷಗಳ ಪೂರ್ಣಾವಧಿಯನ್ನು ಮುಗಿಸಬೇಕು ಎನ್ನುವುದರ ಬಗ್ಗೆ ಚಿಂತಿಸಿದರು. ಅವರಿವರ ಒತ್ತಡಕ್ಕೆ ಮಣಿದು ಸಚಿವೆ ಆತುರದ ನಿರ್ಧಾರ ತೆಗೆದುಕೊಂಡಿದ್ದರೆ ಅಕಾಡೆಮಿಗಳಿಗೆ ಆಯ್ಕೆಯಾದವರು ಅಕಾಲಿಕವಾಗಿ ಮನೆಗೆ ಹೋಗಬೇಕಾಗಿತ್ತು.  ಆದರೆ.. ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಲೋಕದ ಯಾವ ಒತ್ತಡಕ್ಕೂ ಮಣಿಯದೆ.. ರಾಜಕೀಯ ಶಕ್ತಿಗಳ ಒತ್ತಾಸೆಗಳಿಗೆ ತಲೆಬಾಗದೇ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಆಯ್ಕೆ ಪ್ರಕ್ರಿಯೆಯನ್ನೇ ಉಮಾಶ್ರೀಯವರು ತಡೆಹಿಡಿದು, ಮುಂದೂಡಿ ಯಾವ ಆರೋಪಗಳಿಗೂ ಉತ್ತರಿಸುವ ಗೋಜಿಗೆ ಹೋಗದೆ ಸೂಕ್ತ ಕಾಲಕ್ಕಾಗಿ ಕಾಯುತ್ತಿದ್ದರು..

ಒಂದು ತಿಂಗಳ ಹಿಂದೆಯೇ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಾಗಬಹುದಾಗಿದ್ದವರ ಸಂಭವನೀಯ ಪಟ್ಟಿ ಸಿದ್ದವಾಗಿತ್ತು. ಒಂದೆರಡು ಅಕಾಡೆಮಿಗಳಿಗೆ ಅಧ್ಯಕ್ಷಗಿರಿ ಆಕಾಂಕ್ಷಿಗಳು ಸೃಷ್ಟಿಸಿದ ಒತ್ತಡವನ್ನು ಹೊರತು ಪಡಿಸಿ ಬೇರೇನು ಅಂತಹ ದೊಡ್ಡ ಗಂಡಾಂತರಗಳಿರಲಿಲ್ಲಾ. ಸದ್ದಿಲ್ಲದೇ ಎಲ್ಲ ಸಿದ್ದತೆಗಳನ್ನೂ ಸಚಿವೆ ಮುಗಿಸಿ, ಆಯ್ಕೆ ಪ್ರಕ್ರಿಯೆಯ ಪಟ್ಟಿಯನ್ನು ಸಿದ್ದಗೊಳಿಸಿ ಅಕಾಡೆಮಿಗಳ ಅಯುಷ್ಯನ್ನು ಹೆಚ್ಚಿಸಬಹುದಾದ ಗಳಿಗೆಗಾಗಿ ಕಾಯುತ್ತಿದ್ದರು. ಕರಡೊಂದರ ಅನುಮೋದನೆಗಾಗಿ ನಿರೀಕ್ಷಿಸುತ್ತಿದ್ದರು. ಅದು ಆಗಸ್ಟ್ 7 ರಂದು ನೆರವೇರಿತು.  ಅವತ್ತು ರಾಜ್ಯ ಸಚಿವ ಸಂಪುಟದಲ್ಲಿ ಐತಿಹಾಸಿ ಸಾಂಸ್ಕೃತಿಕ ನೀತಿಯ ಜಾರಿಗೆ ಒಪ್ಪಿಗೆ ದೊರಕಿತ್ತು.

ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಕರ್ನಾಟಕಕ್ಕೆ ಸಾಂಸ್ಕೃತಿಕ ನೀತಿಯೊಂದನ್ನು ಜಾರಿಗೆ ತರಲು ಉದ್ದೇಶಿಸಿ ಬರಗೂರು ರಾಮಚಂದ್ರಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ರಾಜ್ಯಾದ್ಯಂತ ಅಧ್ಯಯನ ಮಾಡಿ ಸಾಂಸ್ಕೃತಿಕ ನೀತಿಯ ಕರುಡೊಂದನ್ನು ಸರಕಾರಕ್ಕೆ ಸಲ್ಲಿಸಿತ್ತು. ವಿರೋಧ ಪಕ್ಷಗಳು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರಿಂದ ಆ ಕರುಡನ್ನು ಪರಿಷ್ಕರಿಸಲು ಸಚಿವ ಎಚ್.ಕೆ.ಪಾಟೀಲರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಲಾಯಿತು. ಸಾಂಸ್ಕೃತಿಕ ನೀತಿಯ ಸಾಧ್ಯತೆ ಬಾಧ್ಯತೆಗಳನ್ನೆಲ್ಲಾ ಪರಿಶೀಲಿಸಿ ಅಂತಿಮ ವರದಿ ಬಂದ ನಂತರ ಆಗಸ್ಟ್ 7 ರಂದು ಸಾಂಸ್ಕೃತಿಕ ಕರುಡು ನೀತಿಯನ್ನು ಜಾರಿಮಾಡಲು ಸಚಿವ ಸಂಪುಟ ನಿರ್ಧರಿಸಿತು. ಅದನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರರವರು ಪ್ರಕಟಿಸಿದಾಗ ಎಲ್ಲರಿಗಿಂತ ಹೆಚ್ಚು ಸಂತಸ ಪಟ್ಟವರು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರೆಂಬುದು ನಿರ್ವಿವಾದ. ಯಾಕೆಂದರೆ ಇದು ಅವರಿಗೆ ಸಂಬಂಧಪಟ್ಟ ಇಲಾಖೆಗೆ ಅತೀ ಹೆಚ್ಚು ಸೂಕ್ತವಾದ ಕಾನೂನಾಗಿತ್ತು. ಕಾಲಮಿತಿಯಲ್ಲಿ ಪ್ರಶಸ್ತಿಗಳನ್ನು ನೀಡುವುದು, ಕಲಾವಿದರುಗಳ ಗೌರವಧನ ಹೆಚ್ಚಿಸುವುದು, ಪ್ರಾಧಿಕಾರ ಮತ್ತು ಅಕಾಡೆಮಿಗಳನ್ನು ಸಬಲೀಕರಣಗೊಳಿಸುವುದು, ಕನ್ನಡ ಭಾಷಾ ಶಾಸ್ತ್ರೀಯ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡುವುದು, ರಂಗಮಂದಿರಗಳ ನಿರ್ಮಾಣ, ರಂಗಾಯಣಗಳ ನಿರ್ವಹಣೆ, ಉತ್ಸವಗಳಲ್ಲಿ ಸ್ಥಳೀಯ ಕಲಾವಿದರುಗಳಿಗೆ ಆದ್ಯತೆ... ಹೀಗೆ ಹಲವಾರು ಸಕಾರಾತ್ಮಕ ಅಂಶಗಳು ಈ ಸಾಂಸ್ಕೃತಿಕ ಕರುಡು ನೀತಿಯಲ್ಲಿವೆ. ಇವೆಲ್ಲವುಗಳೂ ಜಾರಿಯಾದರೆ ಕನ್ನಡ ಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿಗಳು ಉಳಿದು ಬೆಳೆಯುತ್ತವೆ.

ಈ ಒಂದು ಸಾಂಸ್ಕೃತಿಕ ಕರಡು ಕಾನೂನಾಗಿ ರೂಪಗೊಳ್ಳುವುದಕ್ಕಾಗಿಯೇ ಸಚಿವೆ ಉಮಾಶ್ರೀಯವರು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದಿದ್ದರು. ಯಾಕೆಂದರೆ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳ ಅವಧಿ ಮೂರು ವರ್ಷಗಳು. ಈಗಿರುವ ಕಾನೂನಿನ ಪ್ರಕಾರ ಸರಕಾರದ ವಿವೇಚನೆಯ ಮೇರೆಗೆ ಅಕಾಡೆಮಿ ಮತ್ತು ಪ್ರಾಧಿಕಾರಗಳನ್ನು ಯಾವಾಗ ಬೇಕಾದರೂ ಬರಕಾಸ್ತು ಮಾಡಬಹುದಾಗಿದೆ. ಅಧ್ಯಕ್ಷರು ಹಾಗೂ ಸದಸ್ಯರುಗಳ ರಾಜೀನಾಮೆ ಪಡೆಯಬಹುದಾಗಿದೆ. ಕಾಂಗ್ರೆಸ್ ಸರಕಾರ ಬಂದಾಗ ಆ ಕೆಲಸ ಮಾಡಿತ್ತು. ಆದರೆ ಇನ್ನು ಮೇಲೆ ಅದು ಅಷ್ಟು ಸುಲಭವಲ್ಲಾ.. ಯಾಕೆಂದರೆ ಸಾಂಸ್ಕೃತಿಕ ನೀತಿ ಕಾನೂನಾಗಿರುವುದರಿಂದ ಅದರಲ್ಲಿ ಎಲ್ಲಾ ಅಕಾಡೆಮಿ, ಪ್ರಾಧಿಕಾರಗಳ ಅವಧಿ ಮೂರು ವರ್ಷ ಖಡ್ಡಾಯವಾಗಿದ್ದರಿಂದ, ಇನ್ನು ಮುಂದೆ ಯಾವುದೇ ಸರಕಾರ ಬಂದರೂ ಅಧ್ಯಕ್ಷರುಗಳನ್ನಾಗಲೀ ಇಲ್ಲವೇ ಸದಸ್ಯರುಗಳನ್ನಾಗಲೀ ಬದಲಾಯಿಸುವಂತಿಲ್ಲಾ. ಹೀಗಾಗಿ ಅಧ್ಯಕ್ಷರಾದವರಿಗೆ ತಮ್ಮ ಯೋಜನೆ ಹಾಗೂ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪೂರ್ಣಾವಧಿ ಸಿಕ್ಕಂತಾಗುತ್ತದೆ. ಇದರಿಂದಾಗಿ ಅಕಾಡೆಮಿಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗುವ ಸಾಧ್ಯತೆಗಳಿವೆ.

ಈ ಎಲ್ಲಾ ತಾಂತ್ರಿಕ ವಿಚಾರಗಳು ಗೊತ್ತಿಲ್ಲದ ಹಲವರು ಸಂಸ್ಕೃತಿ ಇಲಾಖೆಯ ವಿಳಂಬ ನೀತಿಯನ್ನು ಬೈದರು. ಸಚಿವೆ ಉಮಾಶ್ರೀಯವರನ್ನು ನಿಷ್ಕ್ರೀಯ ಮಂತ್ರಿಣಿ ಎಂದು ಕೆಲವರು ನಿಂದಿಸಿದವರು. ಆದರೆ.. ತಾಳಿದವರು ಬಾಳಿಯಾರು.. ಎನ್ನುವ ಪಾಠವನ್ನು ಹೇಳಿಕೊಟ್ಟ ಉಮಾಶ್ರೀಯವರು ತಮ್ಮ ವಿಳಂಬ ನೀತಿಯಿಂದಾಗುವ ಪ್ರಯೋಜನಗಳ ಬಗ್ಗೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟು ಆಡಿಕೊಳ್ಳುವವರ ಬಾಯಿ ಮುಚ್ಚಿಸಿದರು. ನೇಮಕಾತಿ ಎಷ್ಟೇ ವಿಳಂಬವಾದರೂ ಈಗ ನೇಮಕಗೊಂಡವರನ್ನು ಮೂರು ವರ್ಷಗಳ ಕಾಲ ಯಾವುದೇ ಸರಕಾರ ತೆಗೆದುಹಾಕುವ ಹಾಗಿಲ್ಲವಲ್ಲಾ.. ಇದಕ್ಕೆ ದೂರದೃಷ್ಟಿ ಎನ್ನುವುದು. ಕೆಲವೊಮ್ಮೆ ವಿಳಂಬತನವೂ ಸಹ ಹೊಸ ವಿಕಾಸಕ್ಕೆ ದಾರಿಯಾಗಬಲ್ಲುದು. ಜೊತೆಗೆ ಸಾಂಸ್ಕೃತಿಕ ನೀತಿ ಜಾರಿಯಾಗುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೇಲೆ ಕಾಲಕಾಲಕ್ಕೆ ಒತ್ತಡವನ್ನು ಹಾಕುತ್ತಲೇ ಬಂದ ಉಮಾಶ್ರೀಯವರು ಕೊನೆಗೂ ಆ ಕರಡು ಅಂಗೀಕಾರವಾಗುವಂತೆ ನೋಡಿಕೊಂಡಿದ್ದು ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಅವರು ಕೊಟ್ಟ ಮಹಾನ್ ಕೊಡುಗೆಯಾಗಿದೆ. ಯಾಕೆಂದರೆ ಯಾವುದೇ ಸರಕಾರ ಆಂತರಿಕ ಇಲ್ಲವೇ ಬಾಹ್ಯ ಒತ್ತಡಗಳಿಲ್ಲದಿದ್ದರೆ ಏನನ್ನೂ ಮಾಡುವುದಿಲ್ಲಾ. ಅದರಲ್ಲೂ ರಾಜಕಾರಣಕ್ಕೆ ಯಾವುದೇ ರೀತಿಯಲ್ಲಿ ಲಾಭದಾಯಕವಲ್ಲದ ಸಾಂಸ್ಕೃತಿಕ ನೀತಿಗಳೂ ಯಾವುದೇ ಸರಕಾರಗಳ ಆದ್ಯತೆಯೂ ಅಲ್ಲಾ. ಅದು ಆದ್ಯತೆ ಆಗಿದ್ದರೆ, ಭಾಷೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆ ಕುರಿತು ಹಿಂದಿನ ಎಲ್ಲಾ ನಮೂನಿ ಸರಕಾರಗಳಿಗೆ ಬದ್ದತೆ ಇದ್ದಿದ್ದರೆ ಈ ಸಾಂಸ್ಕೃತಿಕ ನೀತಿ ಎಂದೋ ಜಾರಿಗೆ ಬರಬೇಕಾಗಿತ್ತು. ಆದರೆ.. ಈಗಲಾದರೂ ಬಂದಿತಲ್ಲಾ ಎನ್ನುವುದೇ ನಮಗೆಲ್ಲರಿಗೂ ಹರ್ಷದಾಯಕ. ಅದಕ್ಕಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಹಾಗೂ ಸಚಿವೆ ಉಮಾಶ್ರೀಯವರನ್ನೂ ಎಲ್ಲರೂ ಅಭಿನಂದಿಸಲೇಬೇಕು. ಇಡೀ ಸಾಂಸ್ಕೃತಿಕ ಲೋಕ ಸಾಂಸ್ಕೃತಿಕ ನೀತಿಯ ಜಾರಿಯನ್ನು ಸಂಭ್ರಮಿಸಬೇಕು.

ಸಾಂಸ್ಕೃತಿಕ ನೀತಿಯ ಕರುಡು ಆಗಸ್ಟ್ 7 ರಂದು ಬೆಳಿಗ್ಗೆ ಸಚಿವ ಸಂಪುಟದಲ್ಲಿ ಯಾವಾಗ ಜಾರಿಯಾಯಿತೋ ಆಗ ಉಮಾಶ್ರೀಯವರು ಒಂದು ಕ್ಷಣವೂ ವ್ಯರ್ಥಮಾಡದೇ ಮಾಡಿದ ಮೊಟ್ಟಮೊದಲ ಕೆಲಸವೇನೆಂದರೆ ಆರು ಅಕಾಡೆಮಿ ಹಾಗೂ ಎರಡು ಪ್ರಾಧಿಕಾರಗಳಿಗೆ ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದ ಅಧ್ಯಕ್ಷರು ಮತ್ತು ಸದಸ್ಯರುಗಳ ಹೆಸರುಗಳನ್ನು ಅನೌನ್ಸ್ ಮಾಡಿದ್ದು. ಅದೇ ದಿನ ಸಂಜೆ ಆಯ್ಕೆಗೊಂಡವರ ಹೆಸರುಗಳ ಪಟ್ಟಿ ಎಲ್ಲಾ ಮಾಧ್ಯಮಗಳಿಗೆ ತಲುಪಿಯಾಗಿತ್ತು. ಅಧ್ಯಕ್ಷರಾದವರಿಗೆ ಅಧ್ಯಕ್ಷರಾಗಿದ್ದಕ್ಕಿಂತಲೂ ನಿರ್ವಿಘ್ನವಾಗಿ ಕಾರ್ಯ ನಿರ್ವಹಿಸಲು ಮೂರು ವರ್ಷಗಳ ಅವಧಿ ಸಿಕ್ಕಿತಲ್ಲಾ ಎನ್ನುವ ಸಂತಸ ಇಮ್ಮಡಿಯಾಗಿತ್ತು.

ಮೊದಲು ಸಾಂಸ್ಕೃತಿಕ ನೀತಿ ಜಾರಿ ಬರಲಿ ಆಮೇಲೆ ಆಯ್ಕೆ ಪ್ರಕ್ರಿಯೆ ಮಾಡಿದರಾಯಿತು ಎಂದು ಸಚಿವೆ ಸುಮ್ಮನಿರಲಿಲ್ಲಾ. ಎರಡು ತಿಂಗಳಿಂದಾ ಆಯ್ಕೆ ಪ್ರಕ್ರಿಯೆ ತೀವ್ರವಾಗಿತ್ತು. ಕಳೆದ ಸಲದಂತೆ ಈ ಸಲವೂ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲು ಕಮಿಟಿಯೊಂದನ್ನು ಮಾಡಿದರೆ ಹಲವಾರು ದಾಕ್ಷಿಣ್ಯಗಳಿಗೆ ತಲೆಬಾಗಬೇಕಾಗುತ್ತದೆ ಎಂದು ಮನಗಂಡಿದ್ದ ಉಮಾಶ್ರೀಯವರು ಈ ಸಲ ಯಾವುದೇ ಸಮಿತಿ ರಚನೆ ಮಾಡದೇ ತಾವೇ ಖುದ್ದಾಗಿ ಕೂತು ಆಯ್ಕೆ ಪ್ರಕ್ರಿಯೆಯನ್ನು ಮಾಡಿ ಮುಗಿಸಿದರು. ಯಾರು ಅಧ್ಯಕ್ಷರಾಗಬೇಕು ಎನ್ನುವುದರ ಬಗ್ಗೆ ಎಲ್ಲರ ಸಲಹೆಗಳನ್ನು ಕೇಳಿ ತಿಳಿದುಕೊಂಡರಾದರೂ ಅಂತಿಮ ತೀರ್ಮಾನ ಅವರದೇ ಆಗಿತ್ತು. ಮುಖ್ಯಮಂತ್ರಿಗಳು ಕೊಟ್ಟ ಸಂಪೂರ್ಣ ಸ್ವಾತಂತ್ರ್ಯವೂ ಉಮಾಶ್ರೀಯವರಿಗೆ ವರದಾನವಾಗಿತ್ತು. ಕಳೆದ ಸಲ ಬಹುತೇಕ ಅಕಾಡೆಮಿಗಳು ನಿರೀಕ್ಷಿತವಾಗಿ ಕೆಲಸ ಮಾಡದೇ ಇದ್ದುದರಿಂದ ಈ ಸಲ ಅತೀ ಹೆಚ್ಚು ಮುತುವರ್ಜಿ ವಹಿಸಿ ಆಯ್ಕೆಗಳನ್ನು ಮಾಡಲಾಯ್ತು. ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಈ ಬಾರಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಸದಸ್ಯರುಗಳ ಪಟ್ಟಿಯನ್ನು ನೋಡಿದರೆ ಶೇಕಡಾ ಎಂಬತ್ತರಷ್ಟು ಸೂಕ್ತವಾದವರ ಆಯ್ಕೆ ಮಾಡಲಾಗಿದೆ ಎಂಬುದು ಅರಿವಿಗೆ ಬರದೇ ಇರದು. ಕಳೆದ ಸಲ ಸಾಹಿತ್ಯ ಅಕಾಡೆಮಿಯನ್ನು ಹೊರತು ಪಡಿಸಿ ಬೇರೆಲ್ಲಾ ಅಕಾಡೆಮಿಗಳು ಹೇಳಿಕೊಳ್ಳುವಂತಹ ಕೆಲಸಗಳನ್ನು ಮಾಡದೇ ಹೋದವು. ಕೆಲವು ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರಂತೂ ನಿಷ್ಕ್ರೀಯರಾಗಿದ್ದರು. ಅಧ್ಯಕ್ಷರುಗಳೇ ಕ್ರಿಯಾಶೀಲವಾಗಿ ಕೆಲಸ ಮಾಡದೇ ಇದ್ದಾಗ ಸದಸ್ಯರುಗಳು ತಮ್ಮ ಇತಿ ಮಿತಿಯಲ್ಲಿ ಫಲಾನುಭವಿಗಳಾಗಿ ವ್ಯಯಕ್ತಿಕ ಪ್ರಯೋಜನ ಪಡೆದು ಸುಮ್ಮನಿದ್ದರು. ಈ ಎಲ್ಲ ವಿಫಲತೆಗಳಿಂದ ಅಪಾರ ಅನುಭವವನ್ನು ಗಳಿಸಿದ ಉಮಾಶ್ರೀಯವರು ಈ ಸಲ ಅಧ್ಯಕ್ಷರುಗಳಷ್ಟೇ ಅಲ್ಲಾ ಸದಸ್ಯರುಗಳ ಅಯ್ಕೆಯಲ್ಲೂ ಸಹ ತುಂಬಾನೇ ಕಾಳಜಿವಹಿಸಿದ್ದು ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ.

ಸಾಹಿತ್ಯ ಅಕಾಡೆಮಿಗೆ ಡಾ.ಅರವಿಂದ ಮಾಲಗತ್ತಿ, ನಾಟಕ ಅಕಾಡೆಮಿಗೆ ಜೆ.ಲೊಕೇಶ್, ಜಾನಪದ ಅಕಾಡೆಮಿಗೆ ಟಿ.ಡಾಕಪ್ಪ, ಶಿಲ್ಪಕಲಾ ಅಕಾಡೆಮಿಗೆ ಕಾಳಾಚಾರ್, ತುಳು ಸಾಹಿತ್ಯ ಅಕಾಡೆಮಿಗೆ ಎ.ಸಿ.ಭಂಡಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಆರ್.ಪಿ.ನಾಯಕ್, ಸಂಗೀತ ನೃತ್ಯ ಅಕಾಡೆಮಿಗೆ ಫಯಾಜ್  ಖಾನ್, ಹಾಗೂ ಪುಸ್ತಕ ಪ್ರಾಧಿಕಾರಕ್ಕೆ ಡಾ.ವಸುಂಧರಾ ಭೂಪತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ.ಮರುಳಸಿದ್ದಪ್ಪನವರುಗಳು ಅಧ್ಯಕ್ಷರಾಗಿ ಆಯ್ಕೆಗೊಂಡು ನಿಯಮಿಸಲ್ಪಟ್ಟಿದ್ದಾರೆ. ಇದರಲ್ಲಿ ಯಾವ ಹೆಸರನ್ನೂ ತೆಗೆದು ಹಾಕುವಂತಿಲ್ಲಾ. ಎಲ್ಲರೂ ತಮ್ಮ ಜೀವಮಾನವನ್ನೆಲ್ಲಾ ತಮ್ಮ ಕ್ಷೇತ್ರಗಳಲ್ಲಿ ಸವೆಸಿ ಕೊಡುಗೆ ಕೊಟ್ಟವರು ಹಾಗೂ ಆಯಾ ಹುದ್ದೆಗಳಿಗೆ ಸೂಕ್ತವಾದವರು. ಹೀಗಾಗಿ ಈ ಯಾವ ಆಯ್ಕೆಗಳ ಬಗ್ಗೆ ಎಲ್ಲಿಯೂ ಅಪಸ್ವರಗಳಿಲ್ಲಾ. ಜೊತೆಗೆ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಸದಸ್ಯರಾದವರಲ್ಲಿ ಹೆಚ್ಚು ಜನ ಅರ್ಹರಾದವರಿದ್ದಾರೆ. ಕಳೆದ ಸಲ ಹೆಚ್ಚು ವಯಸ್ಸಾದವರಿಗೆ, ಕೂತರೆ ಏಳಲಾಗದವರಿಗೆ, ಕ್ರಿಯಾಶೀಲತೆ ಖಾಲಿಯಾದವರಿಗೆ ಸದಸ್ಯತ್ವಗಿರಿ ಕೊಡಲಾಗಿತ್ತು. ಹೀಗಾಗಿ ಅಕಾಡೆಮಿ ಹಾಗೂ ಪ್ರಾಧಿಕಾರಗಳು ಏಳಲಾಗದೇ ಕೂತವು, ಕೆಲವು ಕೂರಲೂ ಆಗದೆ ಮಲಗಿದವು. ಈ ಸಲ ಸದಸ್ಯರಾಗಿ  ಆಯ್ಕೆಯಾದವರಲ್ಲಿ ಹೆಚ್ಚು ಜನ ಯುವಕರು ಹಾಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ  ಇನ್ನೂ ಕ್ರಿಯಾಶೀಲವಾಗಿದ್ದವರು ಎನ್ನುವುದು ಅಕಾಡೆಮಿಗಳ ಭವಿಷ್ಯದ ಬಗ್ಗೆ ಭರವಸೆ ಮೂಡಿದೆ.

ಕರ್ನಾಟಕ ನಾಟಕ ಅಕಾಡೆಮಿಗಳ ವಿಷಯಕ್ಕೆ ಬಂದರೆ.. ಕಳೆದ ಸಲ ರಾಜಕೀಯ ಒತ್ತಡಗಳಲ್ಲಿ ದಿಡೀರ್ ಎಂದು ಮುಂಚೂಣಿಗೆ ಬಂದ ಶೇಖ್ ಮಾಸ್ತರ್‌ರವರು ಸಮಗ್ರ ರಂಗಭೂಮಿ ಬೆಳವಣಿಗೆಗೆ ನಾಯಕತ್ವ ವದಗಿಸಲು ಸಾಧ್ಯವೇ ಇರಲಿಲ್ಲಾ. ಅವರ ಜೊತೆ ಸದಸ್ಯರಾದ ಕೆಲವರು ಶೇಖ ಮಾಸ್ತರರಿಗೆ ನೆಟ್ಟಗೆ ಕೆಲಸ ಮಾಡಲೂ ಬಿಡಲಿಲ್ಲಾ. ಹೀಗಾಗಿ ನಾಟಕ ಅಕಾಡೆಮಿಯ ಲೆಕ್ಕ ಪುಸ್ತಕಗಳಲ್ಲಿ ಕಾರ್ಯಕ್ರಮಗಳ ಪಟ್ಟಿ ನಮೂದಾಗಿದ್ದರೂ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳೂ ಕಾರ್ಯರೂಪಕ್ಕೆ ಬರಲೇ ಇಲ್ಲಾ. ಯಾಕೆಂದರೆ ಅಲ್ಲಿ ಕ್ರಿಯಾಶೀಲ ಮೆದುಳೆ ಇರಲಿಲ್ಲಾ.  ಅಲ್ಪಸ್ವಲ್ಪ ಮಿದುಳಿದ್ದ ಗುಡಿಹಳ್ಳಿ ನಾಗರಾಜರಂತವರು ಅಕಾಡೆಮಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡು ಅಧ್ಯಕ್ಷರಾದವರ ದಿಕ್ಕು ತಪ್ಪಿಸಿ ಇಡೀ ನಾಟಕ ಅಕಾಡೆಮಿಯನ್ನು ನಿಷ್ಕ್ರೀಯ ಅಕಾಡೆಮಿಯನ್ನಾಗಿಸಿದರು. ಇದೆಲ್ಲವೂ ಕಾಲಕಾಲಕ್ಕೆ ಉಮಾಶ್ರೀಯವರ ಗಮನಕ್ಕೆ ಬಂದು ಅನೇಕ ಸಲ ನೊಂದುಕೊಂಡರಾದರೂ ಅವರು ಏನೂ ಮಾಡಲಾಗದೇ ಅಸಹಾಯಕರಾಗಿದ್ದರು. ಹಿಂದೆ ಆದ ತಪ್ಪು ಮತ್ತೆ ಮರುಕಳಿಸಬಾರದು ಎಂದು ಈ ಸಲ ಅತೀ ಹೆಚ್ಚು ಕಾಳಜಿ ವಹಿಸಿ ರಂಗಸಂಪದದ ಜೆ.ಲೊಕೇಶರವರಿಗೆ ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಯನ್ನು ವಹಿಸಿಕೊಟ್ಟಿದ್ದಾರೆ. ರಾಜಕೀಯ ಒತ್ತಡಗಳಿಲ್ಲದಿದ್ದರೆ ಕಳೆದ ಸಲವೇ ಲೊಕೇಶರವರು ನಾಟಕ ಅಕಾಡೆಮಿಯ ಪಟ್ಟವೇರಬೇಕಿತ್ತು. ಹಾಗಾಗದಿದ್ದುದೇ ಒಳಿತಾಯಿತು. ಯಾಕೆಂದರೆ ಕಳೆದ ಸಲ ಆಯ್ಕೆಯಾದ ಸದಸ್ಯರುಗಳಲ್ಲಿ ಬಹುತೇಕರು ಲೊಕೇಶರವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವವರಾಗಿರಲಿಲ್ಲಾ. ಯಾಕೆಂದರೆ ಲೊಕೇಶರವರಿಗೆ ಸ್ವಾರ್ಥಿಗಳು, ಸೋಮಾರಿಗಳು ಹಾಗೂ ರಂಗವಿರೋಧಿಗಳನ್ನು ಕಂಡರೆ ಆಗುವುದಿಲ್ಲಾ.
 
ಜೆ.ಲೊಕೇಶ್‌ರವರು
ಇಲ್ಲಿ ಜೆ.ಲೊಕೇಶ್‌ರವರ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇಬೇಕು. ಇಲ್ಲಿವರೆಗೂ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿದ್ದವರೆಲ್ಲಾ ನಟರು, ನಿರ್ದೇಶಕರು, ನಾಟಕಕಾರರು ಇಲ್ಲವೇ ಸಂಗೀತಗಾರರು ಆಗಿದ್ದವರು. ಆದರೆ ಜೆ.ಲೊಕೇಶ್‌ರವರು ಇದ್ಯಾವುದೂ ಅಲ್ಲಾ. ಆದರೆ.. ಈ ಎಲ್ಲರನ್ನು ಒಗ್ಗೂಡಿಸಿ ರಂಗಚಟುವಟಿಕೆಗಳನ್ನು ಹುರುಪಿನಿಂದ ಮಾಡಬಹುದಾದ ಉತ್ಸಾಹಿ ರಂಗಸಂಘಟಕರು. ರಂಗಸಂಪದ ರಂಗತಂಡದ ಬೆನ್ನುಲುಬಾಗಿದ್ದವರು,  ಯೂನಿಯನ್ ಲೀಡರ್ ಆಗಿದ್ದ  ಲೊಕೇಶರವರಿಗೆ ಸೈದ್ದಾಂತಿಕ ನಿಲುವಿದೆ, ವೈಚಾರಿಕ ಬದ್ಧತೆ ಇದೆ, ರಾಜಿರಹಿತ ಮನೋಭಾವವಿದೆ, ಅಂದುಕೊಂಡ ಕೆಲಸವನ್ನು ಶತಾಯ ಗತಾಯ ಯಶಸ್ವಿಯಾಗಿ ಮಾಡಬೇಕೆಂಬ ತುಡಿತವೂ ಇದೆ. ಈಗ ಬ್ಯಾಂಕಿನ ಕೆಲಸದಿಂದ ನಿವೃತ್ತರಾಗಿದ್ದರಿಂದ ಬೇಕಾದಷ್ಟು ಸಮಯವೂ ಇದೆ.  ತಮ್ಮೆಲ್ಲಾ ಸಂಘಟನಾ ಸಾಮರ್ಥ್ಯ, ಸಮಯ ಹಾಗೂ ಯೋಜನೆಗಳನ್ನು ಬದ್ದತೆಯಿಂದ ಲೊಕೇಶರವರು ಕಾರ್ಯರೂಪಕ್ಕೆ ತಂದರೆ ಹಲವಾರು ವರ್ಷಗಳಿಂದ ನಿಷ್ಕ್ರೀಯವಾಗಿರುವ ನಾಟಕ ಅಕಾಡೆಮಿ ಸಮಗ್ರ ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯಾಗಬಹುದಾಗಿದೆ.  ಮತ್ತೆ ಕ್ರಿಯಾಶೀಲತೆಯಿಂದ ನಿರಂತರವಾಗಿ ಕೆಲಸಮಾಡಬಹುದಾಗಿದೆ. ಲೋಕೇಶರವರು ಅಪಾರವಾದ ಸಹನೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಟ್ಟ ಗುರಿಯತ್ತ ದಿಟ್ಟವಾದ ಹೆಜ್ಜೆಗಳನ್ನು ಯೋಜನಾಬದ್ಧವಾಗಿ ಹಾಕಿದರೆ  ನಾಟಕ ಅಕಾಡೆಮಿಯನ್ನು ಗಮನಾರ್ಹವಾಗಿ ಬೆಳೆಸಬಹುದಾಗಿದೆ ಹಾಗೂ ಆ ಎಲ್ಲಾ ಸಾಧ್ಯತೆಗಳೂ ಅವರಲ್ಲಿವೆ. ಅಂತೂ ಕರ್ನಾಟಕ ನಾಟಕ ಅಕಾಡೆಮಿಗೆ ಒಬ್ಬ ಪೂರ್ಣಾವಧಿ ಅಧ್ಯಕ್ಷರು ದೊರೆತಂತಾಯ್ತು.

ಜೊತೆಗೆ ಈ ಸಲ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದವರಲ್ಲಿ ಬಹುತೇಕರು ಕ್ರಿಯಾಶೀಲವಾಗಿರುವ ಯುವಕರು. ಬೇಲೂರು ರಘುನಂದನ್ ಕೆಲವಾರು ಅಪರೂಪದ ನಾಟಕಗಳನ್ನು ಕೊಟ್ಟ ಸೂಕ್ಷ್ಮಪ್ರಜ್ಙೆಯ ಸಕ್ರೀಯ ಕವಿ ಹಾಗೂ ಏನನ್ನಾದರೂ ಮಾಡಬಲ್ಲೆನೆಂಬ ಆತ್ಮವಿಶ್ವಾಸ ಇರುವವರು. ಕನ್ನಡ ರಂಗಭೂಮಿಯ ಭರವಸೆಯ ಯುವ ಪ್ರತಿಭೆ ಪ್ರಸಾಧನ ಕಲಾವಿದ ರಾಮಕೃಷ್ಣ ಬೆಳ್ತೂರು ರಂಗಭೂಮಿಗೆ ಪೂರ್ಣಾವಧಿಯಾಗಿ ಬದುಕನ್ನೇ ಸವೆಸಿದವರು. ಪ್ರಸಾಧನವನ್ನು ವೃತ್ತಿಯನ್ನಾಗಿಸಿಕೊಂಡು ನಟನೆ, ನಿರ್ದೇಶನಗಳನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಆಧುನಿಕ ರಂಗಭೂಮಿಯ ರಂಗನೇಪತ್ಯದಲ್ಲಿ ಬದ್ಧತೆಗೆ ದೊಡ್ಡ ಹೆಸರು ವಿಠ್ಠಲ್ ಅಪ್ಪಯ್ಯ. ಯಾವುದೇ ಕೆಲಸ ವಹಿಸಿದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಕೌಶಲ್ಯ ಇರುವವರು. ಯುವಕರ ಜೊತೆಗೆ ಯುವಕರಾಗಿ ಸದಾ ಉತ್ಸಾಹದಿಂದ ಕ್ರಿಯಾಶೀಲರಾಗಿರುವವರು. ಅಭಿನಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ವೆಂಕಟರಾಜು ಪಾದರಸದಂತೆ ಓಡಾಡಿ ಕೆಲಸ ಮಾಡಬಲ್ಲ ಪ್ರತಿಭಾವಂತ ನಟ. ಹವ್ಯಾಸಿ ರಂಗಭೂಮಿಗೆ ಪರೋಕ್ಷವಾಗಿ ತೊಡಗಿಸಿಕೊಂಡ ಪತ್ರಕರ್ತ, ಪ್ರಕಾಶಕ, ಮುದ್ರಕ ಬಿ.ಎಸ್.ವಿದ್ಯಾರಣ್ಯರವರಂತೂ ಈಗಲೂ ಯುವಕರನ್ನು ನಾಚಿಸುವಂತಾ ನಡೆ ಮತ್ತು ನುಡಿ. ಉಡುಪಿಯ ಯುವ ರಂಗಕರ್ಮಿ ಬಾಸುಮಾ ಕೊಡಗು ನಾಟಕವನ್ನೇ ವೃತ್ತಿಯಾಗಿ ತೆಗೆದುಕೊಂಡು ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರಂಗಾಯಣದ ಸದಸ್ಯರಾಗಿ ಸೇವೆಗೈದು, ರಂಗಭೂಮಿಯ ಅನುಭವವಿರುವ ಪತ್ರಕರ್ತ ಲೇಖಕ ಗಣೇಶ್ ಅಮೀನಗಡ ಸ್ನೇಹಜೀವಿ. ಉತ್ಸಾಹದಿಂದ ಪುಟಿಯುತ್ತಿರುವ ಯುವಕ ಕಲಬುರ್ಗಿಯ ಸಂದೀಪ್‌ಗೆ ಏನನ್ನಾದರೂ ಮಾಡಬೇಕೆಂಬ ಅದಮ್ಯ ತುಡಿತವಿದೆ. ರಾಯಚೂರಿನ ಗಾನ ಕೋಗಿಲೆ ಶಾಂತಾ ಕುಲಕರ್ಣಿಯವರ ರಂಗಗೀತೆಗೆ ಮರುಳಾಗದವರು ಯಾರೂ ಇಲ್ಲಾ. ಇಂತಹ ಉತ್ಸಾಹಿ ಯುವ ತಂಡವನ್ನು ಜೆ.ಲೊಕೇಶ್‌ರವರಿಗೆ ಉಮಾಶ್ರೀಯವರು ಕೊಟ್ಟಿದ್ದಾರೆ. ಇವರ ಜೊತೆಗೆ ಪೌರಾಣಿಕ ರಂಗಭೂಮಿಯಿಂದ ಬಳ್ಳಾರಿಯ ಶಿವಕುಮಾರಿ ಹಾಗೂ ಗದಗಿನ ಕೇದಾರಸ್ವಾಮಿ, ವೃತ್ತಿ ರಂಗಭೂಮಿಯಿಂದ ವಿಜಯಪುರದ ಪ್ರೇಮಾ ತಾಳಿಕೋಟೆ, ಗ್ರಾಮೀಣ ರಂಗಭೂಮಿಯಿಂದ ಧಾರವಾಡದ ಬಸವರಾಜಪ್ಪ ಶಿವಪ್ಪ ದೊಡ್ಡಮನಿಯವರು ಸಹ ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸಾಮಾಜಿಕ ನ್ಯಾಯ, ಜಾತಿ ಸಮೀಕರಣಗಳನ್ನೆಲ್ಲಾ ತೂಗಿಸಿಕೊಂಡು, ರಾಜಕೀಯ ಒತ್ತಡಗಳನ್ನು ಸಹಿಸಿಕೊಂಡು, ಸಾಧ್ಯವಾದಷ್ಟೂ ಕ್ರಿಯಾಶೀಲವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ಹುಡುಕಿ ಕರೆತಂದು ನಾಟಕ ಅಕಾಡೆಮಿಗೆ ಬಲವನ್ನು ಕೊಟ್ಟಿರುವ ಸಚಿವೆ ಉಮಾಶ್ರೀ ಅಭಿನಂದನೀಯ ಕೆಲಸವನ್ನು ಮಾಡಿದ್ದಾರೆ. ರಂಗಭೂಮಿಗೆ ತಮ್ಮ ಬದ್ಧತೆ ಎಷ್ಟಿದೆ ಎಂಬುದನ್ನು ಈ ಆಯ್ಕೆ ವಿಷಯದಲ್ಲಿ ಸಾಬೀತು ಮಾಡಿದ್ದಾರೆ.  ಆಯ್ಕೆಯಲ್ಲಿ ಬೇಕಾದಷ್ಟು ವಿಳಂಬವಾದರೂ ಆಗಿದ್ದೆಲ್ಲಾ ಒಳಿತೆ ಅನ್ನುವಂತೆ ಆಗಿದೆ. ಇನ್ನು ಸಚಿವೆ ಉಮಾಶ್ರೀಯವರು ಹಾಗೂ ರಂಗಕರ್ಮಿ ಕಲಾವಿದರುಗಳು ಮತ್ತು ಸಾಹಿತ್ಯ ಸಾಂಸ್ಕೃತಿಕ ಲೋಕದ ಕ್ರಿಯಾಶೀಲರು ಇಟ್ಟ ನಿರೀಕ್ಷೆಗಳನ್ನು ತಮ್ಮ ಕ್ರಿಯಾಶೀಲ ಕೆಲಸಗಳಿಂದ ಸಾಬೀತು ಪಡಿಸುವ ಹೊಣೆಗಾರಿಕೆ ಈಗ ಆಯ್ಕೆಗೊಂಡ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರದ್ದಾಗಿದೆ. ಕೊಟ್ಟ ಜವಾಬ್ದಾರಿಯನ್ನು ವೃತ್ತಿಪರವಾಗಿ ಎಲ್ಲರೂ ನಿಭಾಯಿಸಬೇಕಾಗಿದೆ. ಅನುದಾನ ಪ್ರಶಸ್ತಿಗಳನ್ನು ಹಂಚುವುದಕ್ಕಷ್ಟೇ ಅಕಾಡೆಮಿಗಳು ಸೀಮಿತವಾಗದೇ ಹೆಚ್ಚೆಚ್ಚು ಕ್ರಿಯಾಶೀಲವಾಗಿ ಯೋಜನೆಗಳನ್ನು ರೂಪಿಸಬೇಕಿದೆ.. ಹಾಗೂ ಅಕಾಡೆಮಿಗಳು ಕೇವಲ ದ್ವೀಪಗಳಾಗದೇ ಆಯಾ ಕ್ಷೇತ್ರದ ಪ್ರತಿಭಾವಂತರೆಲ್ಲರನ್ನೂ ಜೊತೆ ಸೇರಿಸಿಕೊಂಡು ಸಮಗ್ರವಾಗಿ ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ. ಸರಕಾರ ವಿಶ್ವಾಸವಿಟ್ಟು ಕೊಟ್ಟ ಅಧಿಕಾರವನ್ನು ಸ್ವಾರ್ಥರಹಿತವಾಗಿ ಬಳಸಿ ಮಹತ್ತರವಾದದ್ದನ್ನು ಕಟ್ಟಬೇಕಿದೆ. ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸರಕಾರವು ಕೊಟ್ಯಾಂತರ ರೂಪಾಯಿ ಜನರ ತೆರಿಗೆಯ ಹಣವನ್ನು ಖರ್ಚುಮಾಡಿ ಅಕಾಡೆಮಿಗಳನ್ನು ಸೃಷ್ಟಿಸಿ ಸಾಕುತ್ತಿದೆ. ಹಾಗೂ ಖರ್ಚಾಗುವ ಪ್ರತಿಯೊಂದು ರೂಪಾಯಿಗೂ ಅಕಾಡೆಮಿ ಹಾಗೂ ಪ್ರಾಧಿಕಾರಗಳು ಉತ್ತರದಾಯಿತ್ವವನ್ನು ಹೊಂದಿವೆ. ಎಲ್ಲಾ ಕನ್ನಡಿಗರೂ ಇಟ್ಟ ಅಪಾರ ನಿರೀಕ್ಷೆಯನ್ನು ಹುಸಿ ಮಾಡದಂತೆ, ಸರಕಾರ ಹಾಗೂ ಸಂಸ್ಕೃತಿ ಸಚಿವೆ ಇಟ್ಟಿರುವ ಅದಮ್ಯ ವಿಶ್ವಾಸಕ್ಕೆ ಚ್ಯುತಿಬಾರದಂತೆ, ಅನನ್ಯ ಸಿದ್ಧತೆ ಹಾಗೂ ಅಪಾರ ಬದ್ಧತೆಗಳಿಂದ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಹಾಲಿ ವಾರಸುದಾರರು ಶ್ರಮಿಸುತ್ತಾ, ಸಂಸ್ಕೃತಿ ಕಟ್ಟುವ ಕಾಯಕವನ್ನು ಮನಪೂರ್ವಕವಾಗಿ ಮಾಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ. 

-ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ