ಯಾರಾದರೂ ನಮ್ಮ ಮೇಲೆ ಇಲ್ಲ
ಸಲ್ಲದ ಆರೋಪಗಳನ್ನು ಹಾಗೂ ನಿಂದನೆಯನ್ನು ಮಾಡಿದರೆ ಏನು ಮಾಡಬೇಕು? ‘ನಾನು ಸರಿಯಾಗಿದ್ದೇನೆ ಯಾರು
ಏನಾದರೂ ಅಂದುಕೊಳ್ಳಲಿ ಬಿಡು’ ಎಂದು ಸುಮ್ಮನಿರಬೇಕಾ? ಇಲ್ಲವೇ ಸೂಕ್ತ ಸಮರ್ಥನೆಗಳನ್ನು
ಕೊಟ್ಟು ಉತ್ತರಿಸಬೇಕಾ? ಸುಮ್ಮನಿದ್ದರೆ ಸುಳ್ಳು ಆರೋಪಗಳನ್ನೇ ಸತ್ಯವೆಂದು ನಂಬುವವರೂ ಇರುತ್ತಾರೆ.
ಒಂದೇ ಸುಳ್ಳನ್ನು ಹಲವಾರು ಸಲ ಕೇಳಿದರೆ ಅದು ಸತ್ಯದ ಭ್ರಮೆಯನ್ನು ಹುಟ್ಟಿಸುವ ಅಪಾಯವೂ ಇದ್ದದ್ದೇ.
ಈಗ ಸುಮ್ಮನಿರುವುದಕ್ಕಿಂತಲೂ ಸತ್ಯವನ್ನು ಹೇಳುವ ಅಗತ್ಯವಿದೆ.
ಇಷ್ಟಕ್ಕೂ ಏನಾಯ್ತಪಾಂತದ್ರೆ..
ಮೊನ್ನೆ ಮಾರ್ಚ 28ರಂದು ಕಲಬುರಗಿ ರಂಗಾಯಣದ ಕುರಿತು ಲೇಖನವೊಂದನ್ನು ಬರೆದು ರಂಗಾಯಣಕ್ಕೆ ಸಂಬಂಧ ಪಟ್ಟವರಿಗೆ
ಮಾತ್ರ ವ್ಯಯಕ್ತಿಕವಾಗಿ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದೆ. ಯಾವ ಗ್ರುಪ್‌ಗಳಿಗೂ ಹಾಕುವ ಅಗತ್ಯ
ನನಗೆ ಕಂಡುಬರಲಿಲ್ಲ. ಯಾಕೆಂದರೆ ರಂಗಾಯಣ ಆಯೋಜಿಸಿದ ನಾಟಕೋತ್ಸವವೊಂದು ನೀತಿ ಸಂಹಿತೆ ನೆಪದಲ್ಲಿ ರದ್ದಾಗಿತ್ತು.
ಹೇಗಾದರೂ ಮಾಡಿ ಆ ನಾಟಕೋತ್ಸವ ನಿಲ್ಲದಂತೆ ನೋಡಿಕೊಳ್ಳಬೇಕೆಂದು ರಂಗಸಮಾಜದ ಸದಸ್ಯರು ಹಾಗೂ ಸಂಸ್ಕೃತಿ
ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಲೇಖನ ಕಳುಹಿಸಿದ್ದೆ. ಆ ಲೇಖನ ಹೀಗಿದೆ...
ನೀತಿ ಸಂಹಿತೆಗೆ ನಾಟಕೋತ್ಸವ ಬಲಿ! ನಾಟಕ ಪ್ರದರ್ಶನಕ್ಕೆ ಬೇಕೆ ನಾಕಾಬಂದಿಯ ಬೇಲಿ...?
ಶಾಪಗ್ರಸ್ತವಾಗಿರುವ ಕಲಬುರಗಿ ರಂಗಾಯಣಕ್ಕೆ ಯಾವಾಗ ವಿಮೋಚನೆ ಸಿಗುತ್ತೊ ಗೊತ್ತಿಲ್ಲ. ಆರಂಭದಿಂದ ಒಂದಿಲ್ಲ ಒಂದು ಸಮಸ್ಯೆಗಳು ಉದ್ಬವವಾಗುತ್ತಲೇ ಇವೆ. ಈಗ ಹಮ್ಮಿಕೊಂಡ ನಾಟಕೋತ್ಸವವನ್ನೇ ನಿಲ್ಲಿಸಬೇಕಾಗಿ ಬಂದಿದೆ. ಕಲಬುರಗಿ ರಂಗಾಯಣವು ಎಪ್ರಿಲ್ 1 ರಿಂದ 9 ರ ವರೆಗೆ ಕಲಬುರಗಿಯ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ "ನವರಂಗ ನವರಸ ದಶಾವತಾರ ನಾಟ್ಯ ಮಹೋತ್ಸವ"ದ ಹೆಸರಲ್ಲಿ 9 ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ಕುಂದಾಪುರ, ಉಡುಪಿ, ಬೆಂಗಳೂರು, ಶೇಷಗಿರಿ ಹಾಗೂ ಕಲಬುರಗಿಯ ರಂಗತಂಡಗಳು ನಾಟಕಗಳನ್ನು ಪ್ರದರ್ಶಿಸುತ್ತಿವೆ. ನಾಟಕೋತ್ಸವದ ಪೂರ್ವಬಾವಿ ತಯಾರಿಗಳೂ ಮುಗಿದಿವೆ. ಒಂಬತ್ತೂ ತಂಡಗಳು ನಾಟಕಗಳನ್ನು ಪ್ರದರ್ಶಿಸಲು ತಯಾರಿ ಮಾಡಿಕೊಂಡಿವೆ. ಕಲಬುರಗಿ ರಂಗಾಯಣವೂ ಸಹ ಮೈಸೂರಿನಿಂದ ಹಿರಿಯ ರಂಗಕರ್ಮಿ ಗಂಗಾಧರಸ್ವಾಮಿಯವರನ್ನು ಕರೆಸಿ ರಂಗಾಯಣದ ಕಲಾವಿದರಿಗಾಗಿ ಹೊಸ ನಾಟಕ ನಿರ್ಮಿಸುತ್ತಿದೆ. ತಿಂಗಳುಗಳ ಕಾಲ ಕಲಾವಿದರುಗಳೆಲ್ಲಾ ತುಂಬಾ ಶ್ರಮವಹಿಸಿ ಹಗಲು ರಾತ್ರಿ ನಾಟಕದ ತಾಲಿಂ ಮಾಡಿ ಪ್ರದರ್ಶನಕ್ಕೆ ಉತ್ಸಾಹದಿಂದ ಸಿದ್ದತೆ ಮಾಡಿಕೊಂಡಿದ್ದಾರೆ.
ಆದರೆ... ಇನ್ನೇನು ನಾಟಕೋತ್ಸವ ಶುರುವಾಗುವುದಕ್ಕೆ ಮೂರೇ ದಿನ ಬಾಕಿ ಇರುವಾಗ ರಂಗಾಯಣದ ಪಾರ್ಟ ಟೈಂ ಆಡಳಿತಾದಿಕಾರಿ ಬಿ.ನಾಗರಾಜರವರು "ನಾಟಕೋತ್ಸವ ನಿಲ್ಲಿಸಿ" ಎಂದು ಪರಮಾನು ಹೊರಡಿಸಿ ಎಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದರು. ಕಾರಣ ಕೇಳಿದರೆ ಕೋಡ್ ಆಪ್ ಕಂಡಕ್ಟ್ ಅಂದರೆ ಚುನಾವಣಾ ನೀತಿ ಸಂಹಿತೆಯಂತೆ.
ನೀತಿ ಸಂಹಿತೆ ಅಪ್ಲೈ ಆಗೋದು ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಮಾತ್ರ ಎನ್ನುವ ಕನಿಷ್ಟ ಪರಿಜ್ಞಾನವಾದರೂ ಆಡಳಿತಾಧಿಕಾರಿಗೆ ಇರಬೇಕಿತ್ತು.
ಜಿಲ್ಲೆಯ ಚುನಾವಣಾಧಿಕಾರಿಯಾದ ಡಿಸಿ ಅವರಲ್ಲಿಗೆ ಹೋಗಿ "ನಾವು ರಾಜಕೀಯೇತರ ರಂಗೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜಕೀಯಕ್ಕೆ ಸಂಬಂಧಪಟ್ಟ ಯಾವ ರಾಜಕಾರಣಿಗಳನ್ನೂ ಕರೆಯುತ್ತಿಲ್ಲ. ಈ ನಾಟಕೋತ್ಸವ ಒಂದು ತಿಂಗಳ ಮೊದಲೇ ನಿಶ್ಚಯವಾಗಿದೆ.. ಆದ್ದರಿಂದ ರಂಗೋತ್ಸವ ಮಾಡಲು ಅನುಮತಿ ಕೊಡಿ ಹಾಗೂ ರಂಗಮಂದಿರ ಬಿಟ್ಟುಕೊಡಿ" ಎಂದು ವಿನಂತಿಸಿ ಕೊಂಡು ಅನುಮತಿ ಪಡೆಯಬೇಕಿತ್ತು. ಆದರೆ ಈ ಯಾವ ಕೆಲಸವನ್ನೂ ಮಾಡದೇ ಕೋಡ್ ಆಪ್ ಕಂಡಕ್ಟ್ ಎಂದು ಉಡಾಪೆಯಾಗಿ ಮಾತಾಡುವ ಬಿ.ನಾಗರಾಜ್ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.
ಈ ಅಧಿಕಾರಿಗೆ ನಾಟಕದ ತಯಾರಿಯ ಹಿಂದಿರುವ ಶ್ರಮದ ಬಗ್ಗೆ ಅರಿವಿದೆಯಾ? ನಾಟಕೋತ್ಸವದ ಪೂರ್ವಭಾವಿ ಸಿದ್ದತೆಗಳ ಹಿಂದಿರುವ ಪರಿಶ್ರಮದ ಕುರಿತು ತಿಳುವಳಿಕೆ ಇದೆಯಾ? ಹೋಗಲಿ ಚುನಾವಣಾ ನೀತಿ ಸಂಹಿತೆಗೂ ಹಾಗೂ ರಾಜಕೀಯ ರಹಿತ ಸಾಂಸ್ಕೃತಿಕ ನೀತಿಗೂ ಸಂಬಂಧವಿಲ್ಲ ಎನ್ನುವ ಕನಿಷ್ಟ ಮಾಹಿತಿಯಾದರೂ ಇದೆಯಾ? ಅದೆಷ್ಟೋ ಜನರ ಪರಿಶ್ರಮದಿಂದ ಆಯೋಜನೆಗೊಳ್ಳುತ್ತಿರುವ ನಾಟಕೋತ್ಸವವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿ ಎಂದು ಆದೇಶಿಸುವುದು ರಂಗಭೂಮಿಗೆ ಮಾಡುವ ಅವಮಾನವಲ್ಲವೆ. ನಾಟಕದ ಗಂಧ ಗಾಳಿ ಇಲ್ಲದ ಇಂತಹ ಅಧಿಕಾರಿಗಳ ಅವಿವೇಕದ ಆತುರದ ನಿರ್ಧಾರದಿಂದಾಗಿ ಹಲವಾರು ರಂಗತಂಡಗಳು, ಕಲಾವಿದರು ಹಾಗೂ ಆಯೋಜಕರುಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಪ್ರದರ್ಶನ ಇಲ್ಲವೇ ಮರುಪ್ರದರ್ಶನಕ್ಕೆ ರಂಗತಂಡಗಳು ಖರ್ಚು ಮಾಡಲಾದ ಸಮಯ ಶ್ರಮ ಹಾಗೂ ಹಣ ವ್ಯರ್ಥವಾಗಲಿದೆ. ಚುನಾವಣೆ ಮುಗಿದು ನೀತಿ ಸಂಹಿತೆ ತೆರವುಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬೇಕು. ಅಲ್ಲಿವರೆಗೂ ರಂಗತಂಡಗಳು ತಮ್ಮ ಕಲಾವಿದರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೆ? ರಂಗ ನಿರ್ಮಿತಿಗೆ ಖರ್ಚಾದ ಹಣವನ್ನು ಯಾರು ಭರಿಸುತ್ತಾರೆ?
ಈ ಆಡಳಿತಾಧಿಕಾರಿಯ ಮೇಲಾಧಿಕಾರಿಗಳಾದ ಅಷ್ಟೂ ಜಂಟಿ ನಿರ್ದೇಶಕರಿಗೆ ಪೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅವರಿಗೆ ಹೇಳಿ... ಇವರನ್ನು ಕೇಳಿ... ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದರು. ನೇರವಾಗಿ ಸಂಸ್ಕೃತಿ ಇಲಾಖೆಯ ಸಚಿವರಿಗೆ ತಿಳಿಸಬೇಕೆಂದರೆ ಚುನಾವಣೆ ಡಿಕ್ಲೇರ್ ಆಗಿದ್ದರಿಂದ ಅವರೂ ಏನೂ ಮಾಡಲು ಸಾಧ್ಯವಿಲ್ಲ ಹಾಗೂ ಅವರು ಹೇಳಿದರೂ ಈಗ ಅಧಿಕಾರಿಗಳು ಕೇಳುವುದಿಲ್ಲ. ಹಗಲೂ ರಾತ್ರಿ ಈ ನಾಟಕೋತ್ಸವಕ್ಕಾಗಿ ಶ್ರಮಿಸಿದ ಕಲಬುರಗಿ ರಂಗಾಯಣದ ನಿರ್ದೇಶಕರಾದ ಮಹೇಶ ಪಾಟೀಲರಂತೂ ಉತ್ಸಾಹವನ್ನೇ ಕಳೆದುಕೊಂಡು ಅಸಹಾಯಕರಾಗಿ ಆಕಾಶ ನೋಡುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ಗಾದೆ ಮಾತೊಂದಿದೆ. ಅದು "ಊದುವುದು ಕೊಟ್ಟು ಒದರುವುದನ್ನು ತೆಗೆದುಕೊಂಡಂತೆ" ಎಂದು. ಈಗ ಮಹೇಶ ಪಾಟೀಲರ ಪರಿಸ್ಥಿತಿಯೂ ಹಾಗೆ ಆಗಿದೆ. ಈ ಮೊದಲಿದ್ದ ಆಡಳಿತಾಧಿಕಾರಿ ದತ್ತಪ್ಪನವರ ಅಸಾಧ್ಯ ಅಸಹಕಾರದಿಂದ ರೋಸಿಹೋಗಿ ಕಂಗಾಲಾದ ಪಾಟೀಲರು ಅವರನ್ನು ಬದಲಾಯಿಸಿ ಎಂದು ಅವಲತ್ತುಕೊಂಡರು. ಸಚಿವೆ ಉಮಾಶ್ರಿಯವರೇ ರಂಗಸಮಾಜದ ಸಭೆಯಲ್ಲಿ ದತ್ತಪ್ಪನವರನ್ನು ವಾಚಾಮಗೋಚರವಾಗಿ ಬೈದು ಬೆವರಿಳಿಸಿ ತಕ್ಷಣ ಆಡಳಿತಾಧಿಕಾರಿಯನ್ನು ಬದಲಾಯಿಸಲು ಆದೇಶಿಸಿದರು. ಆಗ ಪಾರ್ಟ ಟೈಂ ಆಡಳಿತಾಧಿಕಾರಿಯಾಗಿ ಬಂದವರೇ ಬಿ.ನಾಗರಾಜ್. ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ನಾಗರಾಜರವರಿಗೆ ಹೆಚ್ಚುವರಿಯಾಗಿ ಕಲಬುರಗಿ ರಂಗಾಯಣದ ಹೊಣೆಗಾರಿಕೆಯನ್ನು ವಹಿಸಿಕೊಡಲಾಯಿತು. ಅಸಲಿಗೆ ಅವರಿಗೆ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಸಕ್ತಿಯೇ ಇರಲಿಲ್ಲ. ಆದರೆ ಸಂಸ್ಕೃತಿ ಇಲಾಖೆಯ ನಿರ್ದೇಶಕರ ಒತ್ತಡದ ಆದೇಶದ ಮೇರೆಗೆ ಬೇರೆ ದಾರಿಯಿಲ್ಲದೆ ರಂಗಾಯಣದ ಜವಾಬ್ದಾರಿ ವಹಿಸಿಕೊಂಡರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥರಾದರು. ನಿಯಮಿತವಾಗಿ ರಂಗಾಯಣದ ಕಛೇರಿಗೆ ಬರದೇ ಯಾವಾಗಲೋ ಬರುವುದು ಹಾಗೂ ಬಂದಾಗಲೂ ರಂಗಾಯಣದ ನಿರ್ದೇಶಕರು ಹಾಗೂ ಕಲಾವಿದರ ಬೇಕು ಬೇಡಗಳಿಗೆ ಕಿವಿಯಾಗದೆ ನಿರ್ಲಕ್ಷ ಮಾಡುವುದನ್ನು ರೂಢಿಸಿಕೊಂಡರು. ಚೆಕ್ಕುಗಳಿಗೆ ಸಹಿ ಮಾಡಲು ನೂರೆಂಟು ಕೊಕ್ಕೆಗಳನ್ನು ಹಾಕತೊಡಗಿದರು. ದಿನನಿತ್ಯದ ರಂಗಾಯಣದ ಖರ್ಚುಗಳಿಗೂ ಹಣ ದೊರೆಯದಂತಾಯಿತು. ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಅದು ಹೇಗೋ ರಂಗಾಯಣವನ್ನು ಇಲ್ಲಿವರೆಗೆ ಪಾಟೀಲರು ನಿಭಾಯಿಸಿಕೊಂಡು ಬಂದರು. ಆದರೆ ನಾಗರಾಜರ ಅಸಹಕಾರ ನಿರಂತರವಾಯಿತು... ಆಗಲೇ ಮಹೇಶ ಪಾಟೀಲರ ಅನುಭವಕ್ಕೆ ಬಂತು ತಾನು ಊದುವುದನ್ನು ಕೊಟ್ಟು ಒದರುವುದನ್ನು ತಂದುಕೊಂಡಿದ್ದೇನೆ ಎಂದು. ಆದರೆ ಈಗ ಏನೂ ಮಾಡಲಾಗದೆ.... ರಂಗಾಯಣವನ್ನು ಮುನ್ನಡೆಸಲು ಆಡಳಿತಾತ್ಮಕ ಸಹಕಾರ ಸಿಗದೇ, ತಮ್ಮ ಯೋಜನೆ ಹಾಗೂ ಆಲೋಚನೆಗಳನ್ನು ಅಂದುಕೊಂಡಂತೆ ಮಾಡಲಾಗದೆ ಪಾಟೀಲರು ನಿಜಕ್ಕೂ ಅಸಹಾಯಕರಾಗಿದ್ದಂತೂ ಸತ್ಯ. ತಮ್ಮ ಗೋಳನ್ನು ಸಂಬಂಧಪಟ್ಟ ಅಧಿಕಾರಿಗಳು ಇಲ್ಲವೇ ರಂಗಸಮಾಜದ ಸದಸ್ಯರುಗಳೊಂದಿಗೆ ಮುಕ್ತವಾಗಿ ಹೇಳಿಕೊಳ್ಳಲೂ ಮುಜುಗರ ಪಡುವ ಮಹೇಶ ಪಾಟೀಲರೆಂಬ ಸಂಕೋಚ ಜೀವಿಯ ಸಂಕಟಗಳಿಗೆ ಪರಿಹಾರವಂತೂ ಈ ಸಧ್ಯಕ್ಕೆ ಸಿಗುವಂತಿಲ್ಲ. ಈಗಿರುವ ಸರಕಾರಿ ಅವ್ಯವಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಪಾಟೀಲರಿಗೆ ಸಾಧ್ಯವಾಗುತ್ತಿಲ್ಲ... ತನ್ನ ಜೊತೆ ಹೊಂದಾಣಿಕೆ ಮಾಡಿಕೊಳ್ಳದವರನ್ನು ಸುಸೂತ್ರವಾಗಿ ಕೆಲಸ ಮಾಡಲು ಈ ವ್ಯವಸ್ಥೆ ಬಿಡುವುದಿಲ್ಲ.
ಕಲಬುರಗಿ ರಂಗಾಯಣದ ಪ್ರಸ್ತುತ ಸಮಸ್ಯೆಗಳಿಗೆ ರಂಗಾಯಣದ ಕ್ಷೇಮಕ್ಕಾಗಿಯೇ ರೂಪಗೊಂಡ ರಂಗಸಮಾಜ ಕೂಡಲೇ ಸ್ಪಂದಿಸಬೇಕಿದೆ. ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮಾನ್ಯ ವಿಶುಕುಮಾರರವರು ಈ ಕೂಡಲೇ ರಂಗ ಸಮಾಜದ ಸದಸ್ಯರ ಆಯೋಗವೊಂದನ್ನು ಕಲಬುರಗಿಗೆ ಕಳುಹಿಸಿ ಅಲ್ಲಿರುವ ಸಮಸ್ಯೆಗಳ ಕುರಿತು ವರದಿ ತರಿಸಿಕೊಂಡು ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ರಂಗ ಸಮಾಜದ ಸದಸ್ಯರುಗಳು 'ಸರಕಾರ ಸಭೆ ಕರೆದಾಗ ಮಾತಾಡಿದರಾಯಿತು' ಎನ್ನುವ ಧೋರಣೆಯನ್ನು ಪಕ್ಕಕ್ಕಿಟ್ಟು ರಂಗಾಯಣದ ಮನೆಗೆ ಬೆಂಕಿ ಬಿದ್ದಾಗ ಕೂಡಲೇ ಹೋಗಿ ಅದನ್ನು ನಂದಿಸುವ ಕೆಲಸವನ್ನು ಮಾಡಬೇಕಿದೆ. ಮಾನ್ಯ ವಿಶುಕುಮಾರರವರು ಸಾಧ್ಯವಾದಷ್ಟೂ ಬೇಗ ಕಲಬುರಗಿ ರಂಗಾಯಣಕ್ಕೆ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಕನಿಷ್ಟ ಸಹಾನುಭೂತಿ ಇರುವ ಪುಲ್ ಟೈಂ ಆಡಳಿತಾಧಿಕಾರಿಯನ್ನು ನಿಯಮಿಸಬೇಕಿದೆ. ಇದಕ್ಕಾಗಿ ರಂಗಸಮಾಜದ ಸದಸ್ಯರುಗಳು ಒತ್ತಾಯಿಸಬೇಕಿದೆ.
ಎಲ್ಲಕ್ಕಿಂತ ಮೊದಲು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಈಗಾಗಲೇ ಹಮ್ಮಿಕೊಂಡ ನಾಟಕೋತ್ಸವಕ್ಕೆ ಇರುವ ಅಡತಡೆಗಳನ್ನು ನಿವಾರಿಸಲು ಈಗಿರುವ ಪಾರ್ಟ ಟೈಂ ಆಡಳಿತಾಧಿಕಾರಿ ನಾಗರಾಜರವರಿಗೆ ತಕ್ಷಣ ಆದೇಶಿಸಬೇಕಿದೆ. ನಾಗರಾಜರಿಂದ ಈ ಕೆಲಸ ಆಗದೇ ಹೋದಲ್ಲಿ ಕಲಬುರಗಿ ಡಿಸಿಯವರಿಗೆ ಪೋನ್ ಮಾಡಿ ವಸ್ತು ಸ್ಥಿತಿಯನ್ನು ವಿವರಿಸಿ ಪಂಡಿತ್ ರಂಗಮಂದಿರದಲ್ಲಿ ನಾಟಕೋತ್ಸವ ನಡೆಸಲು ಅನುಮತಿಯನ್ನು ಪಡೆಯಲು ಪ್ರಯತ್ನಿಸಬೇಕಿದೆ. ಒಟ್ಟಿನ ಮೇಲೆ ಹಲವರ ಪರಿಶ್ರಮದಿಂದ ಆಯೋಜನೆಗೊಳ್ಳುತ್ತಿರುವ ಕಲಬುರಗಿ ರಂಗಾಯಣದ ಮಹತ್ವಾಂಕಾಕ್ಷಿ ರಂಗೋತ್ಸವ ಯಶಸ್ವಿಯಾಗಬೇಕಿದೆ. ಏನೇ ಆಗಲಿ "ಶೋ ಮಸ್ಟ್ ಗೋ ಆನ್" ಎನ್ನುವ ರಂಗಭೂಮಿಯ ಘೋಷವಾಖ್ಯ ಇಲ್ಲಿ ನಿಜವಾಗಬೇಕಿದೆ..”
ಸಂಬಂಧಪಟ್ಟವರು ಈ ಲೇಖನವನ್ನು ಓದಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಆದರೆ ಈ ಲೇಖನವನ್ನು
ಅದು ಹೇಗೋ ಎಲ್ಲಿಂದಲೋ ತೆಗೆದುಕೊಂಡ ಮಹದೇವ್ ಹಡಪದ್ ಎನ್ನುವ ಯುವ ರಂಗನಿರ್ದೇಶಕ ತಾನೂ ಓದಿ ಸುಮ್ಮನಾಗಬಹುದಾಗಿತ್ತು.
ಆದರೆ ಅದ್ಯಾವುದೋ ಹಳೆಯ ಅಸಮಾಧಾನ ಅವರನ್ನು ಸುಮ್ಮನಿರಲು ಬಿಡದೇ ನನ್ನ ಲೇಖನವನ್ನು ವಿಶ್ವರಂಗ ಎನ್ನುವ
ಕಲಬುರಗಿಯ ವಾಟ್ಸಾಪ್ ಗ್ರುಪ್ನಲ್ಲಿ ಪೋಸ್ಟ್ ಮಾಡಿದ. ಅಷ್ಟೇ ಆದರೆ ಸಮಸ್ಯೆ ಇರುತ್ತಿರಲಿಲ್ಲ. ಯಡಹಳ್ಳಿ
ಬಕೆಟ್ ಹಿಡಿಯುತ್ತಾನೆಂದು ಕಮೆಂಟ್ ಮಾಡಿದ್ದ. ಬಕೆಟ್ ಹಿಡಿದುವುದಕ್ಕೆ ಸಮರ್ಥನೆ ಕೊಡು ಎಂದು ಕೇಳಿದರೆ..
“ನನ್ನ
ಸೀತಾಂತರಾಳ ನಾಟಕ ಮಾಡಿಸಿದ್ದಕ್ಕೆ, ಹಾಗೂ ಕಲಬುರಗಿ
ರಂಗಾಯಣದಲ್ಲಿ ನಾಟಕ ರಚನಾ ಕಮ್ಮಟದ ನಿರ್ದೇಶಕನಾಗಿದ್ದಕ್ಕೆ ನಾನು ರಂಗಾಯಣದ ನಿರ್ದೇಶಕರಿಗೆ ಬಕೆಟ್
ಹಿಡಿದು ಓಲೈಸಿದೆ” ಎಂದು ವಾಟ್ಸಾಪಲ್ಲಿ ಹಡಪದ್ ಉತ್ತರಿಸಿದ್ದು ಸತ್ಯಕ್ಕೆ
ದೂರವಾಗಿದ್ದಾಗಿತ್ತು. ಆದರೆ.. ಸತ್ಯವೇನೆಂದರೆ ನಾನು ರಚಿಸಿದ ಸೀತಾಂತರಾಳ ನಾಟಕವನ್ನು ಸಾಣೇಹಳ್ಳಿಯ
ವೈ.ಡಿ.ಬದಾಮಿಯವರು ನಿರ್ದೇಶಿಸಿದ್ದು ಅದನ್ನು ಕಲಬುರಗಿಗೆ ಕರೆಯಿಸಿ ಪ್ರದರ್ಶಿಸಿದ್ದು ರಂಗಸಂಗಮ ಎನ್ನುವ
ತಂಡವೇ ಹೊರತು ರಂಗಾಯಣವಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ನಾನು ನಾಟಕ ರಚನಾ ತಂತ್ರಗಳು
ಕುರಿತು ಪಾಠ ಮಾಡಿದ್ದು ಅದರಲ್ಲಿ ಭಾಗವಹಿಸಿದವರಿಗೆ ಇಷ್ಟವಾಗಿ ಅವರು ಮಹೇಶ ಪಾಟೀಲರಿಗೆ ಹೇಳಿದ್ದರಿಂದ
ರಂಗಾಯಣದ ನಿರ್ದೇಶಕರಾದ ಅವರು ನಮ್ಮಲ್ಲೂ ಒಂದು ನಾಟಕ ರಚನಾ ಕಮ್ಮಟ ಮಾಡಿ ಎಂದು ಒತ್ತಾಯಿಸಿದರು. ಕೆಲವು
ಯುವಕರಿಗೆ ಉಪಯೋಗವಾಗುವುದಾದರೆ ಆಗಲಿ ಎಂದು ಒಪ್ಪಿಕೊಂಡು ಎರಡು ದಿನಗಳ ನಾಟಕ ರಚನಾ ಕಮ್ಮಟವನ್ನು ಯಶಸ್ವಿಯಾಗಿ
ಮಾಡಿ ಬಂದಿದ್ದೆ. ನಾನು ಕಮ್ಮಟದ ನಿರ್ದೇಶಕನಾಗಿ ಬರುತ್ತೇನೆಂದು ಯಾರಿಗೂ ಕೇಳಿಯೂ ಇರಲಿಲ್ಲಾ.. ಅದಕ್ಕಾಗಿ
ಹಡಪದ್ ಹೇಳಿದಂತೆ ಬಕೆಟ್ ಹಿಡಿಯುವ ಕೆಲಸವನ್ನೂ ಮಾಡಿರಲಿಲ್ಲಾ. ಆ ಕಮ್ಮಟದಿಂದ ರಂಗಾಯಣದ ಕಲಾವಿದರುಗಳಿಗೆ
ಉಪಯೋಗವಾಯಿತೇ ಹೊರತು ನನಗಂತೂ ಏನೂ ಉಪಯೋಗ ಇಲ್ಲ. ಆದರೂ ಮಹಾದೇವ್ ಹಡಪದರಂತವರು ಪೂರ್ವಗ್ರಹ ಪೀಡಿತರಾಗಿ
ಬಕೆಟ್ ಹಿಡಿದೆ ಎಂದು ಸುಳ್ಳು ಆರೋಪ ಮಾಡುವುದು ತಪ್ಪಲಿಲ್ಲ. ಹೀಗಾಗಿ ವಾಟ್ಸಾಪಲ್ಲಿ ಉತ್ತರಿಸುತ್ತಾ
“ನಾನೊಬ್ಬನೇ
ಹೋಗಿ ನಾಟಕ ರಚನಾ ಕಮ್ಮಟ ಮಾಡಿಕೊಟ್ಟು ಬಂದಿದೇನೆಯೇ ಹೊರತು ಕುಟುಂಬ ಪರಿವಾರವನ್ನು ಕರೆದುಕೊಂಡು ಹೋಗಿ
ಆಯೋಜಕರಿಗೆ ಭಾರವಾಗಿಲ್ಲಾ” ಎಂದು ಕಮೆಂಟ್ ಮಾಡಿದ್ದಕ್ಕೆ ಹಡಪದ್ ಮೈಯೆಲ್ಲಾ ಉರಿದು
ಹೋಯಿತು. ತನಗೆ ಸಂಬಂಧವಿಲ್ಲದ ವಿಷಯದ ಬಗ್ಗೆ ತಾನು ಕಾಮೆಂಟ್ ಮಾಡಬಹುದು.. ಅದಕ್ಕೆ ಉತ್ತರವಾಗಿ ಕಮೆಂಟ್
ಮಾಡಿದ್ದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಬದಲು ಹಡಪದ್ ಸಿಟ್ಟು ನೆತ್ತಿಗೇರಿತು.
ಇಷ್ಟಕ್ಕೆ ಇದು ಮುಗಿದಿದ್ದರೆ
ಸರಿಯಾಗಿತ್ತು. ಆದರೆ.. ಮಾರನೆಯ ದಿನ ಪೋನ್ ಮಾಡಿದ ಹಡಪದ್ “ಅಕಾಡೆಮಿಯ ಸದಸ್ಯನಾಗಿ ಹೀಗೆ
ಕಾಮೆಂಟ್ ಮಾಡಿದ್ದು ನಾಚಿಗೆಗೇಡಿನ ಕೆಲಸ, ನೀನು ಬಕೆಟ್ ಹಿಡಿಯೋದು ನನಗೆ ಗೊತ್ತು. ಪೈಲ್ ಹಿಡಿದುಕೊಂಡು
ಅಧಿಕಾರಗಳ ಕಛೇರಿಗೆ ಹೋಗಿ ಅವರನ್ನು ಬ್ಲಾಕ್‌ಮೇಲ್ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಿರುವುದೂ ಗೊತ್ತು.
ಅವರಿವರ ಹತ್ತಿರ ಹಣ ತೆಗೆದುಕೊಂಡಿದ್ದು ಗೊತ್ತು, ಬಕೆಟ್ ಹಿಡಿದು ನಾಟಕ ಅಕಾಡೆಮಿಯ ಸದಸ್ಯನಾಗಿದ್ದೂ ಗೊತ್ತು.. ನಾನು ಹಾಗೂ ನನ್ನ ಕುಟುಂಬ ಊಟ ಮಾಡಿದ್ದನ್ನು
ಆಡಿಕೊಳ್ತೀಯಾ..” ಎಂದು ಏನೇನೋ ಆರೋಪಗಳ ಮಳೆ ಸುರಿಸತೊಡಗಿದ್ದು ನನ್ನನ್ನು
ಕೆರಳಿಸಿತು. ಆಗಲೇ ನಾನು ಗಂಜಿಗಿರಾಕಿ ಎಂದು ತಪರಾಕಿ ಹಾಕಿದ್ದು. ಆ ಯಾವ ಆರೋಪಗಳಲ್ಲೂ ಕಿಂಚಿತ್ತೂ
ಸತ್ಯ ಇರಲಿಲ್ಲ. ಯಾಕೆಂದರೆ ನಾನು ಇಲ್ಲಿವರೆಗೂ ಅನಗತ್ಯವಾಗಿ ಕನ್ನಡ ಭವನದ ಮೆಟ್ಟಿಲು ಹತ್ತಿದವನಲ್ಲ.
ನನ್ನ ರಂಗಗುರುಗಳಾದ ಆರ್.ನಾಗೇಶರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅಭಿನಂದಿಸಲು ಹೋಗಿದ್ದೆ.
ಹಾಗೂ ಯಾರೇ ನಾಟಕ ಅಕಾಡೆಮಿಯ ಅಧ್ಯಕ್ಷರಾದರೂ ಮೊದಲ ಬಾರಿಗೆ ಹೋಗಿ ಅಭಿನಂದಿಸಿ ಅವರ ಸಂದರ್ಶನ ಪಡೆದು
ಬಂದರೆ ಮುಂದೆ ಯಾವತ್ತೂ ಯಾವುದೇ ಕಾರಣಕ್ಕೂ ನಾನು ಆಕಡೆ ಹೋಗುತ್ತಲೇ ಇರಲಿಲ್ಲ. ಇನ್ನು ಪೈಲ್ ಹಿಡಿದುಕೊಂಡು
ಹೋಗಿ ಅಧಿಕಾರಿಗಳನ್ನು ಹೆದರಿಸಿ ಲಾಭ ಮಾಡಿಕೊಳ್ಳುವದೆಲ್ಲಿಂದ ಬಂತು. ನಾನು ಕನ್ನಡ ಭವನದ ಮೆಟ್ಟಿಲನ್ನು
ಹತ್ತಿದ್ದೂ ಸಹ ನಾಟಕ ಅಕಾಡೆಮಿಯ ಸದಸ್ಯನಾಗಿ ನಾಮಿನೇಟ್ ಆದಮೇಲೆಯೇ.
ನಾಟಕ ಅಕಾಡೆಮಿಯ ಸದಸ್ಯರನ್ನಾಗಿ ಮಾಡಿ ಎಂದು ಯಾರನ್ನೂ ನಾನು ಕೇಳಿಕೊಂಡಿಲ್ಲಾ..
ಲಾಭಿ ಮಾಡಿಲ್ಲಾ.. ಬಕೆಟ್ ಹಿಡಿದಿಲ್ಲಾ.. ಆದರೆ.. ಎರಡು ದಶಕಗಳಿಂದ ನನಗೆ ಆತ್ಮೀಯರಾದ ಜೆ.ಲೋಕೇಶರವರು
ನನ್ನ ರಂಗಭೂಮಿಯ ಕೆಲಸ ಹಾಗೂ ಬರವಣಿಗೆ ನೋಡಿ ಮೆಚ್ಚಿದವರು. ನಾನು ನಿರ್ದೇಶಿಸಿದ ನಾಟಕಗಳನ್ನು ನೋಡಿದ್ದರು.
ಅವರು ನಿರ್ಮಿಸಿದ ರಂಗವಿಹಂಗಮ ರಂಗದಾರಾವಾಹಿಗೆ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಹೀಗಾಗಿ
ನಾಟಕ ಅಕಾಡೆಮಿಯಲ್ಲಿ ಸದಸ್ಯನಾಗಿ ಇರಲೇಬೇಕೆಂದು ಬಯಸಿ ಕೋಆಪ್ಟ್ ಮಾಡಿಕೊಂಡರು. ಇವತ್ತಿಗೂ ಲೋಕೇಶರವರನ್ನು
ಯಾರು ಬೇಕಾದರೂ ಕೇಳಿ, ನನ್ನನ್ನು ಸದಸ್ಯನನ್ನಾಗಿ ಮಾಡಿಕೊಳ್ಳಲೇಬೇಕೆಂದು ಎಂದೂ ಅವರನ್ನು ಒತ್ತಾಯಿಸಿದವನಲ್ಲ,
ಅವರಿವರಿಂದ ಹೇಳಿಸಿದವನಲ್ಲಾ. ಲಾಭಿ ಮಾಡುವುದು.. ಹಣ ಇಲ್ಲವೇ ಅಧಿಕಾರಕ್ಕೆ ಹಪಾಹಪಿಸುವುದು ನನ್ನ
ಜಾಯಮಾನವೇ ಅಲ್ಲ. ಇಷ್ಟಕ್ಕೂ ನಾಟಕ ಅಕಾಡೆಮಿಯ ಸದಸ್ಯತ್ವ ಎನ್ನುವುದು ಸಂಬಳ ಅಥವಾ ಗಿಂಬಳದ ಹುದ್ದೆಯಲ್ಲಾ..
ಅದೊಂದು ಗೌರವದ ಕೆಲಸ ಅಷ್ಟೇ. ಜೆ.ಲೋಕೇಶರವರಂತಹ ರಂಗಸಂಘಟಕರ ಜೊತೆಗೆ ನಾಟಕ ಅಕಾಡೆಮಿಯ ಕೆಲಸ ಮಾಡಲು
ಒಪ್ಪಿಕೊಂಡು ಈಗಲೂ ಅವರ ಯೋಜನೆಗಳ ಸಾಕಾರಕ್ಕೆ ನನ್ನ ಕೈಲಾದಷ್ಟು ಸಹಕರಿಸುತ್ತಿರುವೆ.
ಕರ್ನಾಟಕ ಸರಕಾರದ ವಿಶೇಷ ಘಟಕಕ
ಯೋಜನೆಯಡಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಆಸಕ್ತ ಅಭ್ಯರ್ಥಿಗಳಿಗೆ
ರಂಗಕಮ್ಮಟಗಳನ್ನು ಆಯೋಜಿಸುತ್ತದೆ. ಕರ್ನಾಟಕದ ಬೇರೆ ಬೇರೆ ವಲಯಗಳಲ್ಲಿ ಎಂಟು ಶಿಬಿರಗಳನ್ನು 2017-18ನೇ
ಸಾಲಿನಲ್ಲಿ ಮಾಡುವುದೆಂದು ನಾಟಕ ಅಕಾಡೆಮಿಯಲ್ಲಿ ನಿರ್ಣಯವಾಯಿತು. ಪ್ರತಿಯೊಂದು ಕಮ್ಮಟದ ಮೇಲುಸ್ತುವಾರಿ
ನೋಡಿಕೊಳ್ಳುವ ಜವಾಬ್ದಾರಿಯನ್ನು ಒಬ್ಬೊಬ್ಬ ಸದಸ್ಯರಿಗೆ ವಹಿಸಲಾಗಿತ್ತು. ಅದರಂತೆ ನನಗೆ ಚಿತ್ರದುರ್ಗದ
ಮುರಘಾಮಠದಲ್ಲಿ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗಾಗಿ ಮಾಡುವ ಕಮ್ಮಟದ ಹೊಣೆಗಾರಿಕೆಯನ್ನು ವಹಿಸಲಾಗಿತ್ತು.
ಹಾಗೂ ಪ್ರತಿಯೊಂದು ಕಮ್ಮಟಕ್ಕೂ ಇಬ್ಬರು ರಂಗಶಿಕ್ಷಣ ಪಡೆದ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ನಿರ್ದೇಶಕರನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿತ್ತು. ನಿರ್ದೇಶಕರ ಆಯ್ಕೆ ಕಮಿಟಿಯಲ್ಲೂ
ನಾನಿದ್ದೆ. ಈ ಯೋಜನೆಯ ಬಗ್ಗೆ ಗೊತ್ತಾಗಿ ಅಕಾಡೆಮಿ ಅಧ್ಯಕ್ಷರನ್ನು ಸಂಪರ್ಕಿಸಿದ ಮಹಾದೇವ್ ಹಡಪದ್
ನನಗೆ ಕಮ್ಮಟದ ನಿರ್ದೇಶಕರಾಗುವ ಅವಕಾಶ ಕೊಡಿ ಎಂದು
ಕೇಳಿದರು. ಅದು ಸಾಧ್ಯವಿಲ್ಲಾ ಯಾಕೆಂದರೆ ಎಸ್ಸಿ ಎಸ್ಟಿ ಯಾಗಿದ್ದವರು ಮಾತ್ರ ಅದಕ್ಕೆ ಅರ್ಹರು
ಎಂದು ಅಧ್ಯಕ್ಷರು ಹೇಳಿದ ತಕ್ಷಣ “ಹಾಗಾದರೆ ನನ್ನ ಹೆಂಡತಿ ಎಸ್ಸಿ ಇರುವುದರಿಂದ ಅವರಿಗಾದರೂ
ಸ್ಕೀಮ್ ಕೊಡಿ” ಎಂದು ಆಗ್ರಹಿಸಿದರು. ಅದಕ್ಕೆ ಅಧ್ಯಕ್ಷರು ಅನುಮತಿಸಿದರು.
ಆಗ ನಾನು ಹಡಪದರವರಿಗೆ “ ಇಬ್ಬರು ಪುಟ್ಟ ಮಕ್ಕಳಿದ್ದಾರೆ ಅವರನ್ನು ಬಿಟ್ಟು ಅದು
ಹೇಗೆ ಒಂದು ತಿಂಗಳು ನಾಟಕ ಕಮ್ಮಟ ಮಾಡಲು ಗಾಯತ್ರಿಯವರಿಗೆ ಸಾಧ್ಯ?” ಎಂದು ಕೇಳಿದೆ. ಮಕ್ಕಳನ್ನು
ನೋಡಿಕೊಳ್ಳಲು ಮನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇನೆಂದು ಅವರು ಹೇಳಿದ ಮೇಲೆ ರಂಗ ಕಮ್ಮಟದ
ನಿರ್ದೇಶಕರಾಗಲು ಗಾಯತ್ರಿ ಹಡಪದರವರಿಗೆ ಲಿಖಿತವಾಗಿ ಆರ್ಡರ್ ಕಳುಹಿಸಲಾಯಿತು. ಇನ್ನೊಬ್ಬ ನಿರ್ದೇಶಕರನ್ನಾಗಿ
ಪ್ರಶಾಂತ್ ಸಿದ್ದಿಯವರನ್ನು ಆಯ್ಕೆ ಮಾಡಿ ಕಳುಹಿಸಲಾಯಿತು.
ಒಪ್ಪಿಕೊಂಡಂತೆ ಗಾಯತ್ರಿಯವರೊಬ್ಬರೇ
ಬಂದು 30 ದಿನಗಳ ಕಾಲ ರಂಗಕಮ್ಮಟ ನಡೆಸಿ ಒಂದು ನಾಟಕವನ್ನು ನಿರ್ದೇಶಿಸಿ ಹೋಗಿದ್ದರೆ ಸರಿಯಾಗುತ್ತಿತ್ತು.
ಅದರೆ ಗಂಡ ಹೆಂಡತಿ ಇಬ್ಬರೂ ತಮ್ಮ ಪುಟ್ಟ ಮಕ್ಕಳನ್ನು ಕರೆದುಕೊಂಡು ಚಿತ್ರದುರ್ಗಕ್ಕೆ ಬಂದು ಒಂದು
ತಿಂಗಳ ಕಾಲ ಮಠದಲ್ಲಿ ಇದ್ದರು. ಗಾಯತ್ರಿಯವರು ಮಕ್ಕಳನ್ನು ನೋಡಿಕೊಂಡರೆ ಅವರ ಬದಲಾಗಿ ಮಹಾದೇವ್‌ರವರೇ
ನಾಟಕವನ್ನು ನಿರ್ದೇಶಿಸಿದರು. ತಮ್ಮ ಊಟ ವಸತಿಯನ್ನು ನಿರ್ದೇಶಕರಿಗೆ ಅಕಾಡೆಮಿ ಕೊಡಮಾಡುವ 50 ಸಾವಿರ
ರೂಪಾಯಿ ಗೌರವ ಸಂಭಾವನೆಯಲ್ಲಿಯೇ ನಿರ್ದೇಶಕರು ನೋಡಿಕೊಳ್ಳಬೇಕಾಗಿತ್ತು. ಆದರೆ ಅಕಾಡೆಮಿಯ ಅಧ್ಯಕ್ಷರ
ಮನವಿಯ ಮೇರೆಗೆ ಮುರುಘಾಮಠದವರು ವಿಐಪಿ ಕೊಠಡಿಯನ್ನು ವಾಸಕ್ಕೆ ಕೊಟ್ಟರು. ಜೊತೆಗೆ ಕೊಠಡಿಗೆ ಊಟವನ್ನು
ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಬೆಳಿಗ್ಗೆ ಟೀ, ಕಾಫಿ, ತಿಂಡಿಗಾಗಿ ಮಠದ ಹೊರಗಡೆಯ ಹೊಟೇಲಿನಲ್ಲಿ
ಹೋಗಿ ಪಡೆಯಲು ಅನುವು ಮಾಡಿಕೊಟ್ಟರು. ಹಾಗೂ ಆ ಹೊಟೀಲಿನ ಬಿಲ್ಲನ್ನೂ ಸಹ ಮಠದವರೇ ಭರಿಸಿದರು. ಮಠದ
ಆಡಳಿತಾಧಿಕಾರಿಗಳು ಕೆಲವೊಮ್ಮೆ ನನ್ನಲ್ಲಿ “ನೀವು ಇಬ್ಬರು ನಿರ್ದೇಶಕರನ್ನು
ಮಾತ್ರ ಕಳುಹಿಸುತ್ತೇನೆಂದು ಹೇಳಿದಿರಿ.. ಇಲ್ಲಿ ನೋಡಿದರೆ ಒಂದು ಕುಟುಂಬ ಪರಿವಾರವೇ ಬಂದಿದೆ.. ನಮಗೆ
ಒಂದಿಷ್ಟು ಬರ್ಡನ್ ಆಗುತ್ತಿದೆ” ಎಂದು ಹೇಳಿದರು. “ಅದೆಷ್ಟೋ ಜನಕ್ಕೆ ಮಠ ಊಟ ನೀಡುತ್ತಿದೆ.
ಕಲಾವಿದರ ಕುಟುಂಬಕ್ಕೂ ಊಟ ನೀಡಿದರೆ ಪುಣ್ಯ ಬರುತ್ತದೆ” ಎಂದು ಹೇಳಿ ಅವರ ಅಸಮಾಧಾನವನ್ನು
ತಣಿಸುವ ಪ್ರಯತ್ನವನ್ನು ನಾನು ಮಾಡಿದೆ. ಮಠದೊಳಗಿನ ಊಟಕ್ಕಿಂತಲೂ ಹೊರಗಡೆ ಹೋಟೇಲಿನ ಬಿಲ್ಲೇ ಜಾಸ್ತಿ
ಬಂದಾಗಲೂ ಮಠದ ಆಡಳಿತದವರು ಗೊಣಗಿದರು. ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೂ ಮಹಾದೇವ್ ಹಡಪದ್ ನನಗೆ
ಕೆಲವು ಸಲ ಪೋನ್ ಮಾಡಿ “ಕಾಸ್ಟೂಮ್ ಕೊಡ್ತಿಲ್ಲಾ,, ಸೆಟ್ ಪ್ರಾಪ್ಸ್ ಕೊಡ್ತಿಲ್ಲ..
ನನಗೆ ನಾಟಕ ಮಾಡಿಸಲು ಸಾಧ್ಯವೇ ಇಲ್ಲಾ.. ನಾನು ಕೆಲಸ ನಿಲ್ಲಿಸಿ ಹೊರಡುತ್ತೇವೆ..” ಎಂದು ಹೇಳುತ್ತಲೇ ಇದ್ದರು.
ಆಗಲೂ ಸಮಾಧಾನ ಮಾಡಿ ಮಠದ ಆಡಳಿತಾಧಿಕರಿಗಳಿಗೆ ಪೋನ್ ಮಾಡಿ ನಾಟಕಕ್ಕೆ ಬೇಕಾದ ಪರಿಕರಗಳನ್ನು ಬೇಗನೇ
ಒದಗಿಸಿಕೊಡಿ ಎಂದು ವಿನಂತಿಸುತ್ತಲೇ ಇದ್ದೆ. ಹೇಗಾದರಾಗಲಿ
ರಂಗಕಮ್ಮಟ ಯಶಸ್ವಿಯಾಗಲಿ.. ಉತ್ತಮ ನಾಟಕಗಳು ನಿರ್ಮಾಣವಾಗಲಿ.. ಇದರಿಂದ ನಾಟಕ ಅಕಾಡೆಮಿಗೂ ಹೆಸರು
ಬರಲಿ ಎಂಬುದೊಂದೇ ನನ್ನ ಬಯಕೆಯಾಗಿತ್ತು.
ಇಷ್ಟೆಲ್ಲಾ ಸಹಕಾರ ಕೊಟ್ಟರೂ
ಸಹ ಅನಗತ್ಯವಾಗಿ ಹಡಪದ್ ಅದ್ಯಾಕೋ ನನ್ನ ಮೇಲೆ ದ್ವೇಷ ಸಾಧಿಸತೊಡಗಿದರು. ತಮಗೆ ಸಂಬಂಧವೇ ಇಲ್ಲದ ವಿಷಯವನ್ನಿಟ್ಟುಕೊಂಡು
ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದು ಅಕ್ಷಮ್ಯ. ಹಡಪದ್ ಪೋನ್ ಮಾಡಿ ನಿಂದಿಸತೊಡಗಿದಾಗ ನಾನು ಕೇಳಿದ್ದು
‘ಒಬ್ಬರನ್ನು
ಕರೆದರೆ ಇಡೀ ಕುಟುಂಬವೇ ಹೋಗಿದ್ದು ಎಷ್ಟು ಸರಿ’ ಎಂದು. ಅದಕ್ಕೆ ವಿಪರೀತಗಳನ್ನು ಕಲ್ಪಿಸಿಕೊಂಡ ಮಹಾದೇವ್ ಮತ್ತೆ ಇಲ್ಲ ಸಲ್ಲದ ಹುಸಿ ಆರೋಪಗಳನ್ನು
ಮಾಡಿ ನಿಂದಿಸತೊಡಗಿದ್ದು ಅಸಹನೀಯ. “ಅಟ್ರಾಸಿಟಿ ಕೇಸ್ ಹಾಕ್ತೀನಿ, ಮಾನನಷ್ಟ ಮೊಕದ್ದಮೆ
ಹೂಡ್ತೀನಿ, ಅಕಾಡೆಮಿಯ ಮುಂದೆ ಬಂದು ಕುಟುಂಬ ಪರಿವಾರ ಸಮೇತವಾಗಿ ಧರಣಿ ಮಾಡ್ತೀನಿ, ನಿಮ್ಮ ಮನೆಯ ಮುಂದೆ
ಬಂದು ನಮ್ಮ ಸಾವಿಗೆ ನೀವೇ ಕಾರಣವೆಂದು ಬರೆದಿಟ್ಟು ಕುಟುಂಬದವರೆಲ್ಲಾ ವಿಷ ಕುಡಿದು ಸಾಯ್ತೇವೆ..” ಎನ್ನುವ ಅತಿರೇಕದ ಮಾತುಗಳನ್ನು.
ಇದರ ಜೊತೆಗೆ ವಾಟ್ಸಾಪ್ ಗ್ರುಪ್ ಗಳಲ್ಲಿ ಮೇಸೇಜ್ ಹಾಕಿ ಹಾಗೂ ಪೋನ್ ಮಾಡಿ ಜನರನ್ನು ನಂಬಿಸಲು “ಯಡಹಳ್ಳಿ ಜಾತಿ ನಿಂದನೆ ಮಾಡಿದ್ದಾನೆ..
ತಾನು ಜಮೀನ್ದಾರ ಎಂದು ಹೇಳಿಕೊಳ್ಳುತ್ತಾನೆ.. ನನ್ನನ್ನು ಬಡವ ಎಂದು ಆಡಿಕೊಂಡಿದ್ದಾನೆ.. ನನ್ನ ಹೆಂಡತಿಯನ್ನು ನಿಂದಿಸಿದ್ದಾನೆ. ಪೋನ್ ಕಾಲ್ ಆಡಿಯೋ ರೆಕಾರ್ಡ ನನ್ನ ಹತ್ತಿರ
ಇದೆ”
ಎಂದು ಇಲ್ಲದ್ದನ್ನು ಹೇಳಿ ನನ್ನ ವಿರುದ್ದ ಕೆಲವರನ್ನು ಎತ್ತಿ ಕಟ್ಟುವ ಹುನ್ನಾರವನ್ನು ಸತತವಾಗಿ ಮಾಡಿದ್ದು
ನನಗಂತೂ ಬೇಸರತರಿಸಿತು. ಸತ್ಯ ಏನೆಂದರೆ ನಾನು ಹಡಪದರವರ ಹೆಂಡತಿಯ ವಿಷಯವನ್ನೇ ಪೋನಲ್ಲಿ ಪ್ರಸ್ತಾಪ
ಮಾಡಿಲ್ಲ. ಮಾಡಿದ್ದರ ಬಗ್ಗೆ ಸಾಕ್ಷಿಯನ್ನೂ ಕೊಡದೇ ಸುಳ್ಳನ್ನು ಸಾರುತ್ತಾ ಸತ್ಯವೆಂದು ನಂಬಿಸುವ ಕೆಲಸವನ್ನು
ಮಾಡುವುದನ್ನೇ ಕಾಯಕಮಾಡಿಕೊಂಡ ಹಡಪದ್ ಬಗ್ಗೆ ನನಗೆ ಸಹಾನುಬೂತಿ ಇದೆ. ಖಾಸಗಿ ಮಾತುಕತೆಗಳನ್ನು ರೆಕಾರ್ಡ
ಮಾಡಿಕೊಂಡು ಮಾತಾಡಲಾರದ್ದನ್ನು ಮಾತಾಡಿದ್ದಾರೆಂದು ಆರೋಪಿಸುವ iಹಾದೇವ್ ಪೋನ್ ರಿಸೀವ್ ಮಾಡುವುದರ
ಬಗ್ಗೆ ಆತಂಕವೂ ಇದೆ.
ರಂಗತರಬೇತಿ ನೀಡಿ ನಾಟಕ ನಿರ್ದೇಶಿಸಲು
ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿರ್ದೇಶಕರುಗಳಿಗೆ ಅವಕಾಶ ಸಿಗಲಿ ಎಂಬುದು ಈ ಯೋಜನೆಯ ಉದ್ದೇಶಗಳಲ್ಲೊಂದಾಗಿದೆ.
ಆದರೆ ಪತ್ನಿಯ ಹೆಸರಲ್ಲಿ ಸ್ಕೀಮ್ ಪಡೆದು ಪತಿಯೇ ನಾಟಕ ನಿರ್ದೇಶಿಸಿದ್ದು ಸರಕಾರಿ ಯೋಜನೆಯ ದುರ್ಬಳಕೆಯಾಗಿದೆ.
ಅಕಾಡೆಮಿ ಆಯ್ಕೆಮಾಡಿದ ನಿರ್ದೇಶಕಿ ಮಾತ್ರ ಬಂದು ರಂಗತರಬೇತಿ ಕೊಟ್ಟು ನಾಟಕ ನಿರ್ದೇಶಿಸಬೇಗಿತ್ತು..
ಆದರೆ ಇಡೀ ಕುಟುಂಬವೇ ಬಂದು ಒಂದು ತಿಂಗಳ ಕಾಲ ಶಿಬಿರದ ಸಂಘಟಕರಿಗೆ ಭಾರವಾಗಿದ್ದು ನೈತಿಕವಾಗಿ ಒಪ್ಪತಕ್ಕದ್ದಂತೂ
ಅಲ್ಲಾ. ಇದನ್ನು ಆರಂಭದ ದಿನವೇ ಯೋಜನೆಯ ಸದಸ್ಯ ಸಂಚಾಲಕನಾಗಿದ್ದ ನಾನು ವಿರೋಧಿಸಬಹುದಾಗಿತ್ತು. ನಿರ್ದೇಶಕಿ
ಮಾತ್ರ ಇರಲಿ ಎಂದು ಹೇಳಬಹುದಾಗಿತ್ತು. ನಿಮ್ಮ ಊಟ ವಸತಿಗಳ ವ್ಯವಸ್ಥೆ ಮತ್ತು ಖರ್ಚುಗಳನ್ನು ನೀವೇ
ನೋಡಿಕೊಳ್ಳಿ ಎಂದು ಆಗ್ರಹಿಸಬಹುದಾಗಿತ್ತು. ಮಠದ ಸಂಘಟಕರಿಗೆ ಹೆಚ್ಚುವರಿಯಾಗಿ ಟೀ ಕಾಫಿ ತಿಂಡಿ ಕೊಡುವ
ಅಗತ್ಯವಿಲ್ಲವೆಂದು ತಿಳಿಸಬಹುದಾಗಿತ್ತು. ಯೋಜನೆಯ ಉದ್ದೇಶ ದುರ್ಬಳಕೆಯಾಗುತ್ತಿದೆ ಎಂದು ಅಕಾಡೆಮಿ
ಅಧ್ಯಕ್ಷರಿಗೆ ದೂರಬಹುದಾಗಿತ್ತು. ಸದಸ್ಯ ಸಂಚಾಲಕರ ರಿಪೋರ್ಟನಲ್ಲಿ ಇದನ್ನೆಲ್ಲಾ ನಮೂದಿಸಿ ನಿರ್ದೇಶಕರ
ಗೌರವ ಸಂಭಾವನೆ ತಡೆಹಿಡಿಯಬಹುದಾಗಿತ್ತು. ಆದರೆ.. ಇದ್ಯಾವುದನ್ನೂ ನಾನು ಮಾಡಲಿಲ್ಲಾ.. ಮಾಡಲು ಮನಸ್ಸು
ಒಪ್ಪಲಿಲ್ಲಾ.. ಯಾಕೆಂದರೆ ಮಾನವೀಯತೆ ಅಡ್ಡಬಂದಿತ್ತು. ನಿರ್ದೇಶಕಿ ಒಬ್ಬರೇ ಒಂದು ತಿಂಗಳು ಕಾಲ ಇಬ್ಬರು
ಪುಟ್ಟ ಮಕ್ಕಳನ್ನು ಬಿಟ್ಟು ದೂರ ಇದ್ದರೆ ಆ ಮಕ್ಕಳ
ಮನಸ್ಸಿಗೆ ಆಘಾತವಾಗಬಹುದು. ತಾಯಿ ಮಕ್ಕಳನ್ನು ಅಗಲಿಸಿದ ಗಿಲ್ಟ್ ಇಂದಲ್ಲಾ ಮುಂದೆ ಕಾಡಬಹುದು. ಅಕಾಡೆಮಿ ಕೊಡುವ ಅರ್ಧ ಲಕ್ಷ
ಸಂಭಾವನೆ ಒಬ್ಬ ರಂಗಕಲಾವಿದನ ಕುಟುಂಬದ ನಿರ್ವಹಣೆಗೆ ಉಪಯೋಗವಾಗಬಹುದು. ಎಷ್ಟೋ ಜನರಿಗೆ ಊಟ ಹಾಕುವ
ಮಠ ಒಬ್ಬ ಕಲಾವಿದರ ಕುಟುಂಬಕ್ಕೆ ಊಟ ನೀಡಿದರೆ ತಪ್ಪೇನು? ಎಂದುಕೊಂಡು ನಾನು ಸುಮ್ಮನಿದ್ದೆ. ಚಿತ್ರದುರ್ಗಕ್ಕೆ
ಹೋದಾಗಲೆಲ್ಲಾ ಪ್ರೀತಿ ವಿಶ್ವಾಸದಿಂದಲೇ ಹಡಪದ್ ಕುಟುಂಬದ ಜೊತೆಗೆ ನಡೆದುಕೊಂಡೆ. ಮಠದ ಆಡಳಿತಾಧಿಕಾರಿಗಳಿಗೇ
ಹೊಂದಿಕೊಂಡು ಹೋಗಲು ವಿನಂತಿಸಿಕೊಂಡೆ. ‘ನಾಟಕ ನಿರ್ಮಿತಿಯನ್ನು ಬಿಟ್ಟು
ಹೋಗುತ್ತೇನೆ’ ಎಂದು ಆಗಾಗ ಹಡಪದ್ ಮಾಡುವ ಒತ್ತಡವನ್ನೂ ಸಹಿಸಿಕೊಂಡೆ. ಇಷ್ಟೆಲ್ಲಾ ಮಾನವೀಯತೆ ತೋರಿದರೂ ಮಹಾದೇವ್ ನನ್ನ ಮೇಲೆ ವಿಷ
ಕಾರುವುದನ್ನು ನಿಲ್ಲಿಸಲಿಲ್ಲ. ಸುಳ್ಳು ಆರೋಪ ಹಾಗೂ ಕೀಳು ಮಟ್ಟದ ನಿಂದನೆಯನ್ನು ಬಿಡಲಿಲ್ಲ.
ಅವತ್ತು ಜನವರಿ 30ನೇ ತಾರೀಕು
ರಂಗಕಮ್ಮಟದ ಸಮಾರೋಪ ಹಾಗೂ ನಾಟಕ ಪ್ರದರ್ಶನವನ್ನು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಸಮಾರೋಪದ ಸಭೆ ಆರಂಭವಾದಾಗ ನಿರೂಪಕರು ನಾಟಕದ ನಿರ್ದೇಶಕಿ ಗಾಯತ್ರಿಯವರು ವೇದಿಕೆಗೆ ಬರಬೇಕು ಎಂದು
ಅನೌನ್ಸ್ ಮಾಡಿದರೆ ಬಂದು ಕುಳಿತವರು ಮಹಾದೇವ್ ಹಡಪದ್. ಜನರಿಗೆ ಒಂದಿಷ್ಟು ಗಲಿಬಿಲಿ. ಯಾಕೆಂದರೆ ಕರೆದಿದ್ದು
ಮಹಿಳೆಯ ಹೆಸರಾದರೆ ಇಲ್ಲಿ ಬಂದು ಕುಳಿತದ್ದು ಪುರುಷ. ಅದು ಹೋಗಲಿ.... ಮಹಾದೇವ್ ಕಿವಿಯಲ್ಲಿ “ಗಾಯತ್ರಿಯವರನ್ನು ಕರೆದುಕೊಂಡು
ಬನ್ನಿ.. ಅಕಾಡೆಮಿಯ ದಾಖಲೆಗೆ ಪೊಟೋ ಕೊಡಬೇಕಾಗುತ್ತದೆ. ಅದರಲ್ಲಿ ನಿರ್ದೇಶಕಿ ಇರಬೇಕು” ಎಂದು ವಿನಂತಿಸಿಕೊಂಡೆ. ಆಗ
ಮಹಾದೇವ್ “ ಇಲ್ಲಾ ಸರ್ ಅವಳು ಮಕ್ಕಳನ್ನು ಸಂಬಾಳಿಸುತ್ತಿದ್ದಾಳೆ..
ಅವಳು ಬಂದರೆ ಮಕ್ಕಳು ರಂಪಾಟ ಮಾಡುತ್ತಾರೆ..” ಎಂದರು. ಏನು ಹೇಳಬೇಕು ಎಂದು
ತಿಳಿಯದೇ ನಾನೂ ಸುಮ್ಮನಾದೆ. ಆ ಸಮಾರೋಪದಲ್ಲಿ ಪತ್ನಿಯ ಹೆಸರಲ್ಲಿ ಸನ್ಮಾನವನ್ನೂ ಸ್ವೀಕರಿಸಿದ್ದು
ಪತಿಯೇ. ಆದರೂ ನಾನು ಸುಮ್ಮನಿದ್ದೆ ಯಾಕೆಂದರೆ ನಾಟಕವನ್ನು ನಿರ್ದೇಶಿಸಿದ್ದು ಅಸಲಿಗೆ ಮಹಾದೇವ್ ಆಗಿದ್ದರು.
ತಾಂತ್ರಿಕವಾಗಿ ಗಾಯತ್ರಿಯವರಿಗೆ ಸನ್ಮಾನ ಸಿಗಬೇಕಿತ್ತು. ಆದರೆ.. ನಾಟಕದ ನಿರ್ದೇಶನಕ್ಕೆ ಶ್ರಮವಹಿಸಿದ್ದು
ಹಡಪದ್ ಆಗಿದ್ದರು. ಕೆಲಸ ಮಾಡಿದವರಿಗೆ ಸನ್ಮಾನ ಸಿಕ್ಕಂತಾಯಿತು. ಆದರೆ.. ಪತ್ನಿ ಸೈಡ್ ವಿಂಗಲ್ಲಿದ್ದರೂ
ಪತಿ ಬಂದು ವೇದಿಕೆ ಅಲಂಕರಿಸಿ ಸನ್ಮಾನ ಸ್ವೀಕರಿಸಿದ್ದು ನೈತಿಕವಾಗಿ ಹಾಗೂ ತಾಂತ್ರಿಕವಾಗಿ ಒಪ್ಪತಕ್ಕ
ಮಾತೇ ಅಲ್ಲಾ.. ಆದರೆ ಇದುವರೆಗೂ ಈ ಯಾವ ವಿಷಯವನ್ನೂ ನಾನು ಅಕಾಡೆಮಿಯ ಅಧ್ಯಕ್ಷರ ಮುಂದಾಗಲೀ ಇಲ್ಲವೇ
ಬೇರೆ ಯಾರ ಮುಂದಾಗಲೀ ಬಾಯಿ ಬಿಟ್ಟಿಲ್ಲಾ. ಆದರೆ ಈ ಎಲ್ಲಾ ವಿಷಯ ಎಲ್ಲರಿಗೂ ಗೊತ್ತಾಗುವಂತೆ ಮಾಡಲು
ಪ್ರೇರೇಪಿಸಿದ್ದು ಖುದ್ದು ಹಡಪದ್‌ರವರೇ ಹೊರತು ಮತ್ಯಾರೂ ಅಲ್ಲಾ.
ನನ್ನ ಮೇಲೆ ಅನಗತ್ಯವಾಗಿ ಯಾವಾಗ
ಸುಳ್ಳು ಆರೋಪವನ್ನು ವಾಟ್ಸಾಪ್ ಮೂಲಕ ಹಡಪದ್ ಮಾಡತೊಡಗಿದರೋ ಆಗ ನಾನು ಅವರೇ ಪೋನ್ ಮಾಡಿದಾಗ ಮೇಲಿನ
ವಿಷಯವನ್ನು ಪ್ರಸ್ತಾಪಿಸಿ ಪ್ರಶ್ನಿಸಿದ್ದೆ. ಹೀಗೆ ಪ್ರಶ್ನಿಸಿದ್ದೇ ದೊಡ್ಡ ತಪ್ಪೇನೋ ಎನ್ನುವಂತೆ
ತಾನು ಮಾಡಿದ ತಪ್ಪು ನಿರ್ದಾರಗಳನ್ನು ಮುಚ್ಚಿಕೊಳ್ಳಲು ಮತ್ತೆ ಸುಳ್ಳು ಆರೋಪಗಳ ಸಹಾಯವನ್ನೇ ಪಡೆದ
ಮಹಾದೇವ್ ನಿರಂತರವಾಗಿ ಸುಳ್ಳುಗಳನ್ನು ಹೇಳಿ ಸತ್ಯದ ಭ್ರಮೆಯನ್ನು ಹುಟ್ಟಿಸುವ ಪ್ರಯತ್ನವನ್ನು ಗಟ್ಟಿಯಾಗಿ
ಮಾಡತೊಡಗಿದರು. ನಾಟಕ ಅಕಾಡೆಮಿಯ ಅಧ್ಯಕ್ಷರಿಗೆ ಪೋನ್ ಮಾಡಿ ಕೇಸ್ ಹಾಕುವೆ, ಧರಣಿ ಮಾಡುವೆ ಎಂದು ಹೆದರಿಸಲು
ನೋಡಿದರು. ರಂಗಾಯಣದ ನಿರ್ದೇಶಕರಿಗೆ ಪೋನ್ ಮಾಡಿ ನಿಂದಿಸಿ ಕೇಸ್ ಹಾಕುವೆ ಎಂದು ದಮಕಿ ಹಾಕಿದರು. ಮೂರು
ದಶಕಗಳಲ್ಲಿ ಎಂದೂ ಸಹ ಯಾವುದೇ ಇಲಾಖೆಯ ಅನುದಾನವನ್ನು ಪಡೆಯದೇ ರಂಗಕೆಲಸಗಳನ್ನು ನನ್ನ ಕೈಲಾದಷ್ಟು
ಮಾಡಿಕೊಂಡು ಬರುತ್ತಿರುವ ನನ್ನ ಮೇಲೆ “ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ಹಣ ಮಾಡಿಕೊಂಡಿದ್ದಿ,
ಬಕೆಟ್ ಹಿಡಿದು ಅಕಾಡೆಮಿಗೆ ಬಂದಿದ್ದೀ ಅಂತೆಲ್ಲಾ” ಕೀಳು ಮಟ್ಟದ ಆರೋಪ ಮಾಡಿ
ನಿಂದಿಸಿದ್ದು ತುಂಬಾ ಬೇಸರದ ಸಂಗತಿ. ಈ ಯಾವ ಆರೋಪಗಳಿಗೂ
ಯಾವುದೇ ಸಾಕ್ಷಿ ಪುರಾವೆಗಳೂ ಇಲ್ಲಾ. ಸರಕಾರಿ ಸ್ಕೀಂಗಳನ್ನು ಪಡೆದು ಲಕ್ಷಾಂತರ ಹಣ ಪಡೆದುಕೊಂಡಿರುವ,
ಇಲಾಖೆಯಿಂದ ಲಕ್ಷಾಂತರ ಹಣ ಅನುದಾನವನ್ನು ಪಡೆಯುತ್ತಿರುವ ಮಾಹಾದೇವ್‌ರವರಿಗೆ ಕಂಡವರೆಲ್ಲಾ ಹಾಗೇ ಮಾಡುತ್ತಾರೆಂಬ
ಬ್ರಮೆ ಇದೆ. ಅದಕ್ಕಾಗಿ ಅಕಾರಣವಾಗಿ ಆರೋಪ ಮಾಡುವ ಕಾಯಕಕ್ಕೆ ಇಳಿದಿದ್ದು ದುರದುಷ್ಟಕರ.
ನನಗೆ ನಿಷ್ಟುರವಾದಿ ಎಂದವರಿದ್ದಾರೆ.
ಖಾರವಾಗಿ ಬರೆಯುತ್ತಾನೆಂದು ಆರೋಪಿಸಿದವರಿದ್ದಾರೆ. ಆದರೆ ಬ್ಲಾಕ್‌ಮೇಲ್ ಮಾಡಿ ಹಣ ಮಾಡುತ್ತೇನೆ, ಬಕೆಟ್
ಹಿಡಿಯುತ್ತೇನೆಂದು ಸುಳ್ಳು ಆರೋಪ ಮಾಡಿದವರು ಮಾತ್ರ ಈ ಹಡಪದ್ ಒಬ್ಬರೇ. ಮಹಾದೇವ್‌ರಂತಹ ಹತ್ತಾರು
ಜನ ಅದೆಷ್ಟೇ ಆರೋಪ ಮಾಡಿದರೂ ನನ್ನ ಬಗ್ಗೆ ಗೊತ್ತಿರುವವರು ನಂಬುವುದಿಲ್ಲ. ಏನೂ ಗೊತ್ತಿಲ್ಲದವರು ಇದ್ದರೂ ಇರಬಹದೇನೋ ಎಂದುಕೊಳ್ಳಬಹುದೆಂಬುದಕ್ಕೆ
ಇಷ್ಟೆಲ್ಲ ಕ್ಲಾರಿಫಿಕೇಶನ್ ಕೊಡಬೇಕಾಯ್ತು. ಸತ್ಯಕ್ಕಾಗಿ.. ನಾನು ನಂಬಿದ ತಾತ್ವಿಕ ಸಿದ್ದಾಂತಕ್ಕಾಗಿ
ಅದೆಂತಹುದೇ ಅಡೆತಡೆ ಬಂದರೂ ಎದರಿಸಲು ಸಿದ್ದನಾಗಿದ್ದೇನೆ. ಈ ಕಾನೂನು ಕೇಸುಗಳು ನನಗೇನೂ ಹೊಸತಲ್ಲಾ. ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದೇ
ದಲಿತರ ಹಿತಾಸಕ್ತಿಯ ಪರವಾಗಿರುವ ಅಟ್ರಾಸಿಟಿ ಕಾನೂನನ್ನು ಸೇಡಿಗಾಗಿ ದುರ್ಬಳಕೆ ಮಾಡಿಕೊಂಡು ಗೆಲ್ಲುವುದಕ್ಕಂತೂ
ಆಗುವುದಿಲ್ಲ. ನಾಳೆ ಸಾಕ್ಷಿಯೇ ಇಲ್ಲದೇ ಕೇಸು ಬಿದ್ದು ಹೋಗಿ ಸುಳ್ಳು ಕೇಸು ಹಾಕಿದ್ದು ಸಾಬೀತಾದರೆ
ಏಳು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವ ಅರಿವೂ ಹಡಪದ್‌ನಂತವರಿಗಿಲ್ಲ. ಸಾಮಾಜಿಕ
ಜಾಲತಾಣಗಳಲ್ಲಿ ನಿಂದಿಸುವುದು, ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡುತ್ತೇನೆಂದು ಹೆದರಿಸುವುದು,
ಬ್ಲಾಕ್‌ಮೇಲ್ ಮಾಡುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುವುದು ಶಿಕ್ಷಾರ್ಹ ಅಪರಾಧ
ಎನ್ನುವ ಕನಿಷ್ಟ ಪರಿಜ್ಞಾನವೂ ಮಹಾದೇವ್ ಹಡಪದ್‌ಗೆ ಇಲ್ಲ. ಬರೀ ಆವೇಶ, ಸೇಡಿನ ಮನೋಭಾವ ಹಾಗೂ ನಕಾರಾತ್ಮಕ
ಭಾವನೆಗಳು ವ್ಯಕ್ತಿತ್ವವನ್ನೇ ನಾಶ ಪಡಿಸುತ್ತವೆ. ಒಂದಿಷ್ಟು ನಾಟಕ ನಿರ್ದೇಶನದ ಪ್ರತಿಭೆ ಇರುವ ಮಹಾದೇವ್
ಹೀಗೆಲ್ಲ ತಮ್ಮ ಸಮಯ ಶ್ರಮವನ್ನು ದ್ವೇಷಿಸುವುದಕ್ಕೆ ಮೀಸಲಿಡುವ ಬದಲು ಇನ್ನಷ್ಟು ಉತ್ತಮ ನಾಟಕಗಳನ್ನು
ಕಟ್ಟುವುದರಲ್ಲಿ ತೊಡಗಿಸಿಕೊಂಡರೆ ಇಂದಲ್ಲಾ ನಾಳೆ ದೊಡ್ಡ ಹೆಸರು ಮಾಡಬಹುದು. ತಮಗೆ ಸಂಬಂಧಿಸದ ವಿಷಯಗಳಲ್ಲಿ ಮೂಗು ತೂರಿಸುವ ಬದಲು ತಮಗೆ ಗೊತ್ತಿರುವ ವಿಷಯಗಳತ್ತ ಗಮನ
ಹರಿಸುವುದು ಉತ್ತಮ. ನಾವೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ರಂಗಭೂಮಿಯ ಕುಟುಂಬದ ಸದಸ್ಯರಾಗಿದ್ದೇವೆ.
ಒಬ್ಬರ ಮೇಲೆ ಇನ್ನೊಬ್ಬರು ಹಗೆ ಸಾಧಿಸುವುದನ್ನು ಬಿಟ್ಟು, ಅಸೂಯೆ ಪಡುವುದನ್ನು ಬದಿಗಿಟ್ಟು ಒಬ್ಬರಿಗೊಬ್ಬರು
ಪೂರಕವಾಗಿ ಸಹಕರಿಸುತ್ತಾ ರಂಗಭೂಮಿಯನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸುವುದು ಸಾರ್ಥಕತೆಯನ್ನು ತರಬಲ್ಲುದು,
ಇದರಿಂದ ರಂಗಭೂಮಿಯೂ ಬೆಳೆಯಬಲ್ಲುದು.
-ಶಶಿಕಾಂತ ಯಡಹಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ