ಸೋಮವಾರ, ಜುಲೈ 9, 2018

ಮರೆತೆನೆಂದರೂ ಮರೆಯಲಾಗದ ಭರಣಿ ಇನ್ನಿಲ್ಲಾ..




ಗೋಪಿ ಇನ್ನಿಲ್ಲಾ ಅಂತಾ ಸುದ್ದಿ ಗೊತ್ತಾದಾಗ ಮರಳಿ ಪ್ರಶ್ನಿಸಿದ್ದೇ ಯಾವ ಗೋಪಿ ಎಂದು. ಅದೇ  ನಮ್ಮ ಗೋಪಿನಾಥ... ಕೆನರಾ ಬ್ಯಾಂಕ್ ಗೋಪಿನಾಥ ಎಂದು ಉತ್ತರ ಕಿವಿಗಪ್ಪಳಿಸಿದರೂ ಮತ್ತೆ ಗೊಂದಲ, ಮತ್ತದೇ ಮರುಪ್ರಶ್ನೆ... ಯಾರವರು? ಅದೇ ಸರ್ ನಮ್ಮ ಭರಣಿ ಹೊರಟೋದ್ರು... ಎಂಬುದು ಕೇಳಿಬಂದಾಗ ಖಾತ್ರಿಯಾಯ್ತು   ರಂಗ ನಿರ್ದೇಶಕ ಭರಣಿಯವರು ಖಾಯಂ ಆಗಿ ನೇಪತ್ಯಕ್ಕೆ ಸೇರಿಹೋಗಿದ್ದಾರೆಂದು

ಸಾವು ಅನಿರೀಕ್ಷಿತವಂತೂ ಆಗಿರಲಿಲ್ಲವಾದ್ದರಿಂದ ಸುದ್ದಿ ಕೇಳಿ ಮನಸಿಗೆ ಆಘಾತವಾಗಲಿಲ್ಲ. ಭರಣಿ ಹದಿಮೂರು ದಿನಗಳ ಹಿಂದೆ ಜಿಬಿಎಸ್ ಆಸ್ಪತ್ರೆ ಸೇರಿದಾಗಲೇ ಸಂದೇಹವಿತ್ತು ಉಳಿಯುವುದು ಡೌಟ್ ಎಂದು. ಯಾಕೆಂದರೆ ಅವರ ದೇಹದ ಪರಿಸ್ಥಿತಿಯೇ ಅಷ್ಟೊಂದು ಅದ್ವಾನವಾಗಿತ್ತು. ಸಣ್ಣಕರಳು ಯಾವತ್ತೋ ಕಂತು ಕಂತಲ್ಲಿ ಬೆಂದು ಹೋಗಿತ್ತು. ಕಿಡ್ನಿ ಕೈಕೊಟ್ಟಿತ್ತು, ಬೆನ್ನು ನೋವು ಹೈರಾಣ ಮಾಡಿತ್ತು. ಶ್ವಾಸಕೋಶಗಳು ಮುಷ್ಕರ ಹೂಡಿ ವರ್ಷಗಳೇ ಕಳೆದಿದ್ದವು. ಆದರೂ ಗಟ್ಟಿ ಜೀವ ಇಷ್ಟು ದಿನ ಬದುಕಿದ್ದೇ ಪವಾಡ. ಎಲ್ಲವೂ ನೆಟ್ಟಗಿದ್ದಿದ್ದರೆ  ಕ್ರಿಯಾಶೀಲ ನಿರ್ದೇಶಕನ ಅಕಾಲಿಕ ಸಾವಿನ ಸುದ್ದಿ ಇಷ್ಟು ಬೇಗ ಬರುತ್ತಿರಲಿಲ್ಲ

ನಾವೆಲ್ಲರೂ ಸಾವಿನ ನೆರಳಿನಿಂದ ಸದಾ ದೂರ ಓಡಿ ಹೋಗಿ ಬದುಕಬೇಕೆಂದು ಬಯಸುವಾಗ ಮರಣವನ್ನ ಬೆಂಬತ್ತಿ ಹೋಗಿ ಆಲಂಗಿಸಿಕೊಂಡ ಭರಣಿ ಅನ್ಯಾಯವಾಗಿ ಅಕಾಲಿಕ ಸಾವನ್ನು ತಂದುಕೊಂಡಿದ್ದು ಆತಂಕಕಾರಿ ಸಂಗತಿ. ಇರಬೇಕು.... ಮದ್ಯಪಾನಕ್ಕೂ ಒಂದು ಮಿತಿ ಇರಬೇಕು..., ಇರಬೇಕು.. ಧೂಮಪಾನಕ್ಕೂ ಒಂದಿಷ್ಟಾದರೂ ನಿಯಂತ್ರಣ ಇರಬೇಕು.. ಆದರೆ ಎರಡೂ ಪೀಡೆಗಳು ಅನಿಯಂತ್ರಿತವಾದರೆ ಎಂತಹ ಆರೋಗ್ಯವಂತ ದೇಹವಾದರೂ ದುರ್ಬಲವಾಗುವುದರಲ್ಲಿ ಸಂದೇಹವೇ ಇಲ್ಲ. ಭರಣಿಯ ದೇಹ ಎರಡೂ ಭಯಾನಕ ವ್ಯಸನಗಳನ್ನು ನಿರಂತರವಾಗಿ ಸಹಿಸಿಕೊಂಡೂ ಇಷ್ಟೊಂದು ವರ್ಷಗಳ ಕಾಲ ಬಾಳಿಕೆ ಬಂದಿದ್ದೇ ಸೋಜಿಗದ ಸಂಗತಿ

ಇಲ್ಲಾ... ಕ್ರಿಯಾಶೀಲ ಭರಣಿ ಇನ್ನೂ ಇರಬೇಕಿತ್ತು. ಎಂತಾ ಚೆಂದದ ನಾಟಕಗಳನ್ನು ನಿರ್ದೇಶಿಸುತ್ತಿದ್ದರು. ಒಂದಕ್ಕಿಂತಾ ಒಂದು ವಿಭಿನ್ನ ಮತ್ತು ಅನನ್ಯ. ಅವರು ನಾಟಕ ಒಂದನ್ನು ನಿರ್ದೇಶಿಸುವ ರೀತಿಯೇ ಕಲಾವಿದರಿಗೆ ಉಲ್ಲಾಸ ತರುವಂತಹುದು. ತಾನೊಬ್ಬ ನಿರ್ದೇಶಕ ಅಂತಾ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಯಾವಾಗಲೂ ಸಹನೆಯ ಸ್ನೇಹಿತನಂತೆ ನಗುತ್ತಾ ಅಭಿನಯವನ್ನು ಕಲಿಸಿಕೊಡುವ ಬಗೆಯೇ ನಟರಲ್ಲಿ ಸ್ತೈರ್ಯವನ್ನು ಕೊಡುವಂತಿತ್ತು

ಇಂತಹ ಸ್ನೇಹಜೀವಿ ಭರಣಿಯವರ ನಿಜವಾದ ಹೆಸರು ವಿ.ಗೋಪಾಲಕೃಷ್ಣ. ಊರು ಮೈಸೂರು. ಕೆನರಾ ಬ್ಯಾಂಕಲ್ಲಿ ಉದ್ಯೋಗಿಯಾಗಿ ನೇಮಕಗೊಂಡ ನಂತರ ಮಡಿಕೇರಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದು ಬಿಟ್ಟರೆ ಮಿಕ್ಕೆಲ್ಲಾ ಸೇವಾವಧಿಯನ್ನು ಪೂರ್ಣಗೊಳಿಸಿದ್ದು ಬೆಂಗಳೂರಿನ ಕೆನರಾ ಬ್ಯಾಂಕುಗಳ ಬೇರೆ ಬೇರೆ ಬ್ರ್ಯಾಂಚುಗಳಲ್ಲೇ. ಅಂತರ್ ಬ್ಯಾಂಕ್ ನಾಟಕೋತ್ಸವಗಳಲ್ಲಿ ಭಾಗವಹಿಸುತ್ತಾ, ಅಭಿನಯಿಸುತ್ತಾ, ನಾಟಕಗಳನ್ನು ನಿರ್ದೇಶಿಸುತ್ತಾ ರಂಗಭೂಮಿಯಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡವರು ಭರಣಿ. ಕೆನರಾ ಬ್ಯಾಂಕಿನಲ್ಲಿಯೇ ಬದ್ದತೆಯಿಂದ ದುಡಿದಿದ್ದರೆ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಬಹುದಾಗಿತ್ತು. ಆದರೆ ಮದ್ಯಪಾನ, ಧೂಮಪಾನದಂತೆಯೇ ನಾಟಕವೂ ಕೂಡಾ ಭರಣಿಗೆ ಬಿಟ್ಟೆನೆಂದರೂ ಬಿಡಲಾಗದ ವ್ಯಸನವಾಗಿತ್ತು. ಬೆಂಗಳೂರಿನಲ್ಲೇ  ನಾಟಕಗಳನ್ನು ಮಾಡಿಸುತ್ತಲೇ ಇರಬೇಕು ಎನ್ನುವ ಹಂಬಲದಿಂದ ಕೊನೆಯವರೆಗೂ ದೊರೆತ ಎಲ್ಲಾ ಪ್ರಮೋಶನ್ ಗಳನ್ನೂ ನಿರಾಕರಿಸಿ ಕ್ಲರ್ಕ್ ಆಗಿಯೇ ಉಳಿದರು. ಪ್ರಮೋಶನ್ ಒಪ್ಪಿಕೊಂಡರೆಲ್ಲಿ ಬೆಂಗಳೂರು ಬಿಟ್ಟು ಬೇರೆ ಊರಿಗೆ ವರ್ಗ ಮಾಡುತ್ತಾರೆಯೋ ಎಂಬ ಆತಂಕದಿಂದ ಇದ್ದ ಹುದ್ದೆಯಲ್ಲೇ ಹೊಟ್ಟೆಪಾಡಿಗಾಗಿ ಮುಂದುವರೆದರು. ನಾಟಕಗಳ ಮೂಲಕ ರಂಗಬದ್ದತೆಯನ್ನು ಸಾಬೀತುಪಡಿಸಲು ಪ್ರಯತ್ನಿಸಿದರು. ಕತ್ತಲೆ ಬೆಳಕು, ಗರ್ಭಗುಡಿ, ಫಾದರ್, ನೆರಳು, ಪೀಠಾರೋಹಣ, ಏಕಲವ್ಯ, ಆಸ್ಪೋಟ, ಹುಯ್ಯಲವೋ ಡಂಗೂರವ, ಅದರೇಶಿ ಪರದೇಶಿಯಾದ… ಹೀಗೆ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು. ಕೆಲವಾರು ನಾಟಕಗಳಲ್ಲಿ ನಟಿಸಿದ್ದರು.


ಇಷ್ಟೆಲ್ಲಾ ಕ್ರಿಯಾಶೀಲವಾಗಿ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡರೂ ಎಂದೂ ಹೆಸರು ಹಣದ ಹಿಂದೆ ಭರಣಿ ಬಿದ್ದವರಲ್ಲ. ಕೀರ್ತಿ ಶನಿ ಅವರ ಹೆಗಲೇರಲಿಲ್ಲ, ಅವರು ನಿರ್ದೇಶಿಸಿದ ಯಾವ ನಾಟಕಕ್ಕೂ ತಮ್ಮ ಮೂಲ ಹೆಸರನ್ನು ಹಾಕಿಕೊಳ್ಳುತ್ತಲೂ ಇರಲಿಲ್ಲ. ತಮ್ಮ ಹೆಸರಿನ ಬದಲಾಗಿ ಜನ್ಮ ನಕ್ಷತ್ರವಾದ ಭರಣಿ ನಕ್ಷತ್ರದ ಹೆಸರನ್ನೇ ಸಾಂಕೇತಿಕವಾಗಿ ಬಳಸುತ್ತಿದ್ದರು. ಹೀಗಾಗಿ ಭರಣಿ ಅಂದರೆ ಯಾರು ಎಂಬುದೇ ಎಷ್ಟೊ ರಂಗಾಸಕ್ತರಿಗೆ ಗೊತ್ತೇ ಆಗುತ್ತಿರಲಿಲ್ಲ. ಅನಾಮದೇಯವಾಗಿಯೇ ಕೆಲಸ ಮಾಡಲು ಗೋಪಿ ಬಯಸಿದ್ದರಿಂದ ಕೊನೆಯವರೆಗೂ ಭರಣಿ ನಾಮದೇಯರಾಗಿಯೇ ಉಳಿದುಕೊಂಡರು. ರಂಗಭೂಮಿಯ ಕೇಂದ್ರ ಬಿಟ್ಟು ಪರೀಧಿಯಲ್ಲಿಯೇ ನಾಟಕಗಳನ್ನು ಕಟ್ಟಿಕೊಟ್ಟರು. ಸಂದೇಶ ಹಾಗೂ ಕಲಾ ರಂಗಲೋಕ ಎಂಬ ಎರಡು ರಂಗ ತಂಡಗಳನ್ನು ಕಟ್ಟಿ ಹಲವಾರು ನಾಟಕಗಳನ್ನು ನಿರ್ದೇಶಿಸಿದರು.

ಭರಣಿಯ ಹಾಗೆಯೇ ಕೆನರಾ ಬ್ಯಾಂಕಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಅವರು ಗೆಳೆಯರ ಬಳಗ ಎನ್ನುವ ರಂಗ ತಂಡ ಕಟ್ಟಿಕೊಂಡು ರಂಗಸಂಘಟನೆ ಮಾಡುತ್ತಿದ್ದರು. ಶ್ರೀನಿವಾಸ್ ಕೂಡಾ ರಂಗ ಸಂಘಟನೆಯಲ್ಲಿ ಎತ್ತಿದ ಕೈ. ಅವರ ಜೊತೆಗೆ ಭರಣಿಯೆಂಬ ರಂಗ ನಿರ್ದೇಶಕ ಸೇರಿದಾಗ ವಿಗಡ ವಿಕ್ರಮರಾಯ, ಫಾದರ್...ಮುಂತಾದ ಉತ್ತಮ ನಾಟಕಗಳು ಮೂಡಿ ಬಂದವು. ಯಾವಾಗ ಶ್ರೀನಿವಾಸ್ ರೈಲು ಅಪಘಾತದಲ್ಲಿ ತಾಯಿಯೊಂದಿಗೆ ಧಾರುಣವಾಗಿ ಮರಣವನ್ನಪ್ಪಿದರೋ ಆಗ ಜೀವನೋತ್ಸಾಹದ ಗಣಿಯಂತಿದ್ದ ಭರಣಿ ಮಾನಸಿಕವಾಗಿ ಜರ್ಜರಿತರಾದರು. ಗೆಳೆಯರ ಬಳಗದ ಸೀನ ದೂರಾದಂತೆ ಕುಡಿತ ಹತ್ತಿರವಾಗತೊಡಗಿತು. ಸೀನನ ಸಾವು ಭರಣಿಯಲ್ಲಿ ಒಂದು ರೀತಿಯ ವೈರಾಗ್ಯವನ್ನು ತಂದಿತು. ನಂತರವೂ ಒತ್ತಾಯಕ್ಕೆ ಕಟ್ಟು ಬಿದ್ದು ದೃಶ್ಯ ರಂಗ ಕಲಾ ಸಂಘಕ್ಕೆ ಪೀಠಾರೋಹನ, ಫಾದರ್ ಹಾಗೂ ಅದರೇಶಿ.. ನಾಟಕಗಳನ್ನು ನಿರ್ದೇಶಿಸಿದ್ದರು.  ಆದರೆ… ಬರುಬರುತ್ತಾ ಮೊದಲಿನ ತೀವ್ರತೆ ಹಾಗೂ ಆಸಕ್ತಿಯನ್ನು ಕಳೆದುಕೊಂಡರು. ಕ್ರಿಯಾಶೀಲತೆಯ ಜಾಗವನ್ನು ಹತಾಶೆ, ವ್ಯಸನಗಳು ಆಕ್ರಮಿಸಿಕೊಂಡವು. ಸಾವಕಾಶವಾಗಿ ರಂಗಭೂಮಿಯಿಂದ ವಿಮುಖರಾಗತೊಡಗಿದರು.

ಇತ್ತೀಚೆಗೆ ಅಂದರೆ ಐದು ತಿಂಗಳ ಹಿಂದೆ 2018 ಜನವರಿಯಲ್ಲಿ ಬ್ಯಾಂಕ್ ನೌಕರಿಯಿಂದ ನಿವೃತ್ತರಾದ ನಂತರ ಭರಣಿಗೆ ಒಂಟಿತನ ತೀವ್ರವಾಗಿ ಕಾಡತೊಡಗಿತ್ತು. ಜೊತೆಗೆ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಹೆಂಡತಿ ಮತ್ತು ಇದ್ದ ಒಬ್ಬನೇ ಮಗನಿಂದ ದೂರವಾಗಿಯೇ ಇದ್ದ ಭರಣಿ ಏಳು ವರ್ಷಗಳಿಂದ ರಂಗಕರ್ಮಿಯೊಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದು ಅಕ್ಷರಶಃ ಒಂಟಿಯಾಗಿ ಬದುಕು ತಳ್ಳುತ್ತಿದ್ದರು. ಅಚ್ಚರಿಯ ಸಂಗತಿ ಏನೆಂದರೆ ಇಳಿ ವಯಸ್ಸಿನಲ್ಲಿ ಹಠಕ್ಕೆ ಬಿದ್ದ ಅವರ ಹೆಂಡತಿ ಕೋರ್ಟ ಮೆಟ್ಟಿಲೇರಿ ಒಂದು ವರ್ಷದ ಹಿಂದೆ ವಿಚ್ಚೇದನೆ ಪಡೆದು ಪತಿಯ ಸಂಬಂಧವನ್ನೇ ಹರಿದುಕೊಂಡಿದ್ದರು. ಹತ್ತು ವರ್ಷವಿದ್ದಾಗ ಮಗನ ಮುಖ ನೋಡಿದ್ದಷ್ಟೇ ಭರಣಿಗೆ ನೆನಪು. ಆ ನಂತರ ಮಗನ ಸಂಪರ್ಕವೂ ಇಲ್ಲದೇ ಭರಣಿಯ ನೊಂದ ಜೀವ ಹೈರಾಣಾಗಿ ಹೋಗಿತ್ತು. ಇಳಿ ವಯಸ್ಸಿನಲ್ಲಿ ಮಗನನ್ನು ನೋಡಿಕೊಳ್ಳಬೇಕೆಂದರೂ ಆತ ಅಮೇರಿಕಕ್ಕೆ ಹೋಗಿ ಸೆಟಲ್ ಆಗಿದ್ದಾಗಿತ್ತು. ಎಲ್ಲ ಇದ್ದೂ ಅನಾಥನಂತೆ ಬದುಕುವ ದುಃಖ ಭಾವಜೀವಿಯಾಗಿದ್ದ ಭರಣಿಗೆ ಎಡಬಿಡದೇ ಎದೆಗೆ ಚುಚ್ಚಿ ಕಾಡುತ್ತಿತ್ತು.  ಇಂತಹ ಅಸಹನೀಯ ಸಂದರ್ಭದಲ್ಲಿ ಕೊನೆಯವರೆಗೂ ಸಾತ್ ನೀಡಿ ಸಾಂತ್ವನ ಕೊಟ್ಟಿದ್ದು ಧೂಮ- ಮದ್ಯಪಾನಗಳೇ. ದೇಹದ ಒಂದೊಂದೇ ಭಾಗಗಳು ಆಗಾಗ ಕೆಲಸ ನಿಲ್ಲಿಸಿ ಧರಣಿ ಹೂಡಿದರೂ ಎಚ್ಚರಗೊಳ್ಳದ ಭರಣಿ ನಶೆಯ ಲೋಕದಲ್ಲಿ ತಮ್ಮ ಏಕಾಂತಕ್ಕೆ ಸಮಾಧಾನ ತಂದುಕೊಳ್ಳುತ್ತಿದ್ದರು. ಭರಣಿಯ ವ್ಯಯಕ್ತಿಕ ಬದುಕಿನ ಪುಟಗಳನ್ನು ಹೀಗೆ ತೆರೆಯುತ್ತಾ ಹೋದರೆ ನೋವಿನ ಸಂಪುಟಗಳೇ ತೆರೆದುಕೊಳ್ಳುತ್ತವೆ. ಕ್ರಿಯಾಶೀಲ ವ್ಯಕ್ತಿಯೊಬ್ಬನ ದುರಂತದ ಬದುಕಿನ ಒಳಸುಳಿಗಳು ಇಷ್ಟೊಂದು ನೋವಿನಿಂದ ಕೂಡಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲವಾಗಿದೆ.

ಕೊನೆಗೆ ಹದಿಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವಿನ ಜೊತೆಗೆ ಸೆಣಸಿ ಕಾಲನ ಮುಂದೆ ಶರಣಾದರು. 2018 ಜುಲೈ 8 ರಂದು  ಕೊನೆಯುಸಿರೆಳೆದರು. ಭರಣಿ ಮರಳಿ ಬಾರದ ಲೋಕ ಸೇರಿಕೊಂಡರು. ಅವರ ಕ್ರಿಯಾಶೀಲತೆ ನಮಗೆಲ್ಲಾ ಮಾದರಿಯಾಗಲಿ. ಅನಗತ್ಯ ವ್ಯಸನಗಳು ತರುವ ದುರಂತಗಳು ಎಚ್ಚರಿಕೆಯ ಪಾಠವಾಗಲಿ.  

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ