ಬಸವರಾಜ್ ಸೂಳೇರಿಪಾಳ್ಯ ಇನ್ನಿಲ್ಲ
ಎನ್ನುವ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಭೌತಿಕವಾಗಿ ಇನ್ನಿಲ್ಲವಾದರೂ ಅವರು ರಚಿಸಿದ ಅಪರೂಪದ
ನಾಟಕಗಳು ಬಹುಕಾಲ ಜೊತೆ ಇದ್ದೇ ಇರುತ್ತವಲ್ಲಾ. ನಿಜ ಹೇಳಬೇಕೆಂದರೆ ಇನ್ನೂ ಆರವತ್ತೂ ದಾಟದ ಸೂಳೇರಿಪಾಳ್ಯರದು
ಸಾಯುವ ವಯಸ್ಸೇನಲ್ಲಾ. ಆದರೂ ಸಾವನ್ನು ತಾವೇ ಆವಾಹಿಸಿಕೊಳ್ಳುವ ಅವರ ಪ್ರಯತ್ನ ಇಲ್ಲಿವರೆಗೂ ಯಶಸ್ವಿಯಾಗಿರಲಿಲ್ಲ.
ಆದರೆ ಸೆಪ್ಟಂಬರ್ 3 ರಂದು ಸಾವು ಹೇಳದೇ ಕೇಳದೇ ಬಂದು ಬಸವರಾಜ್‌ರವರ ಅರಿವಿಗೂ ಬರದಂತೆ ನಿದ್ದೆಯಲ್ಲೇ
ಪ್ರಾಣವನ್ನು ಸೆಳೆದೊಯ್ಯಿತು. ಮಲಗಿದ್ದಲ್ಲೇ ಮಲಗಿದ್ದಂತೆಯೇ ಈ ಬೆಡಗಿನ ಕವಿಯ ಹೃದಯ ಬಡಿತವನ್ನು ನಿಲ್ಲಿಸಿತ್ತು.
ಅನುದಿನವೂ ಜೊತೆಯಲಿದ್ದ ಹಂಸ (ಪ್ರಾಣ) ಒಂದು ಮಾತು ಹೇಳದೇ ಹಾರಿಹೋಗಿತ್ತು. ರಂಗಗೆಳೆಯ ಸೂಳೇರಿಪಾಳ್ಯ
ಇನ್ನು ನೆನಪು ಮಾತ್ರ.
ರಂಗಭೂಮಿಯಲ್ಲಿ ರಂಗಗೆಳೆಯರೆಲ್ಲಾ
ಸೂಳೇರಿಪಾಳ್ಯರನ್ನು ಪ್ರೀತಿಯಿಂದ ಕರೆಯುತ್ತಿದ್ದುದೇ ಬಚ್ಚಿ ಎಂದು. ಹಿಂದೆ ಹಲವಾರು ಬಾರಿ ತೀವ್ರತರವಾಗಿ
ಅನಾರೋಗ್ಯಕ್ಕೊಳಗಾಗಿ ತಿಂಗಳಾನುಗಂಟಲೆ ಆಸ್ಪತ್ರೆಗೆ ಸೇರಿದ್ದರೂ ಇನ್ನೂ ಬದುಕಬೇಕೆನ್ನುವ ಬಯಕೆಯಿಂದಾಗಿ
ಬಚ್ಚಿ ಮತ್ತೆ ಮತ್ತೆ ಮರುಜನ್ಮ ಪಡೆದವರಂತೆ ಮನೆಗೆ ಮರಳುತ್ತಿದ್ದರು. ಪ್ರತಿ ಬಾರಿ ಸಾವಿನ ಕೈಯಿಂದ
ಪಾರಾಗಿ ಬಂದಾಗಲೆಲ್ಲಾ ನಾಟಕ ಬರೆದು ತಮ್ಮ ಅಸ್ತಿತ್ವವನ್ನು ರುಜುವಾತು ಪಡೆಸುತ್ತಲೇ ಇದ್ದರು. ಆದರೆ
ಹತ್ತು ದಿನಗಳ ಹಿಂದೆ ಅವರ ಆತ್ಮೀಯ ಮಿತ್ರ ವಿನೋದ್ ಸಾವನ್ನು ಬಚ್ಚಿಯಿಂದ ಅರಗಿಸಿಕೊಳ್ಳಲಾಗಲಿಲ್ಲ.
ವಿನೋದ್ ‘ವಿಶ್ವಾಲಯ’ ಎನ್ನುವ ಅನಾಥ ಮಕ್ಕಳ ಆಶ್ರಮ
ನಡೆಸುತ್ತಿದ್ದರು. ಬದುಕಿನಲ್ಲಿ ಬೇಸರಗಳಾದಾಗಲೆಲ್ಲಾ ಬಚ್ಚಿ ಹೋಗಿದ್ದು ಬರುತ್ತಿದ್ದುದೇ ವಿಶ್ವಾಲಯಕ್ಕೆ.
ಅದೊಂದು ಅವರಿಗೆ ನೆಮ್ಮದಿಯ ಜಾಗವಾಗಿತ್ತು. ಗೆಳೆಯನ ಅಕಾಲಿಕ ಅಗಲಿಕೆಯಿಂದ ಜರ್ಜರಿತನಾದ ಬಚ್ಚಿಗೆ
ಬದುಕೇ ಬೇಸರವಾದಂತನಿಸಿತು. ಬದುಕಿಗಿಂತ ಸಾವೇ ಸುಂದರ ಎಂದು ಬಚ್ಚಿ ನಿರ್ಧರಿಸಿದರಾ? ಹೋಗುವ ಮೊದಲು
ಮಾತುಕೊಟ್ಟಂತೆ ನಾಟಕವನ್ನು ಬರೆದು ಮುಗಿಸಬೇಕೆಂದುಕೊಂಡರಾ?
ಯಾಕೆಂದರೆ... ಎರಡು ತಿಂಗಳಿಂದ
ನಾಟಕವೊಂದನ್ನು ಬರೆದು ಕೊಡಲು ರೂಪಾಂತರದ ಚಂದ್ರುರವರು ಬಚ್ಚಿಯನ್ನು ಒತ್ತಾಯಿಸುತ್ತಲೇ ಇದ್ದರು. ಆ
ಕುರಿತು ಮಾತುಕತೆ ಚರ್ಚೆಗಳಾಗಿದ್ದರೂ ಬಚ್ಚಿ ಒಂದಕ್ಷರವನ್ನೂ ಬರೆದಿರಲಿಲ್ಲ. ಯಾವಾಗ ಅಂತರಂಗದ ಗೆಳೆಯ
ವಿನೋದ ನಿಧನರಾದರೋ ಆಗ ಸಾವಿನ ಕುರಿತು ಬಚ್ಚಿ ತೀವ್ರವಾಗಿ ಯೋಚಿಸತೊಡಗಿದರು. ವಿನೋದ್ ಅಂತ್ಯಕ್ರಿಯೆ ಮುಗಿಸಿದ ಮಾರನೆಯ ದಿನವೇ ನಾಟಕ ಬರೆಯಲು
ಆರಂಭಿಸಿದರು. ದಿನಕ್ಕೊಂದು ದೃಶ್ಯಗಳು ಮೂಡಿಬರತೊಡಗಿದವು. ಕೇವಲ ಒಂದು ವಾರದೊಳಗೆ ಇಡೀ ನಾಟಕವನ್ನು
ಬರೆದು ಮುಗಿಸಿದರು. ಹಿಂದೆ ಎಂದೆಂದೂ ಇಷ್ಟು ಬೇಗ ನಾಟಕ ಬರೆದವರೇ ಅಲ್ಲ. ಕೆಎಸ್‌ಡಿಎಲ್ ಚಂದ್ರುರವರು
ನಾಟಕ ಬರೆಸಲೆಂದು ತಿಂಗಳಾನುಗಂಟಲೇ ಪ್ರತ್ಯೇಕ ಕೋಣೆಯನ್ನು ಮಾಡಿಕೊಟ್ಟರೂ ಒಂದಕ್ಷರ ಬರೆಯಲು ಅವರಿಂದ
ಸಾಧ್ಯವಾಗಿರಲಿಲ್ಲ. ವರ್ಷಾನುಗಂಟಲೇ ಹಿಂದೆ ಬಿದ್ದು
ನಾಟಕ ಬರೀ ಎಂದರೂ ಬರೆದವರಲ್ಲ. ತನಗಿಷ್ಟ ಬಂದಾಗ, ಒಳತುಡಿತ ಹೆಚ್ಚಾದಾಗ ಸುದೀರ್ಘ ಸಮಯ ತೆಗೆದುಕೊಂಡು
ಕಾದಂಬರಿಗಳ ರೂಪಾಂತರವನ್ನು ಮಾಡಿ ನಾಟಕ ಬರೆದುಕೊಡುತ್ತಿದ್ದರು. ಅಂತಹ ಅಂತರ್ಮುಖಿ ಬಚ್ಚಿ ವಾರವೊಂದರಲ್ಲಿ
ಪ್ರತಿದಿನ ಬರೆದು ಸ್ವತಂತ್ರ ನಾಟಕ ಪೂರ್ಣಗೊಳಿಸಿದ್ದರು. ಸೆಪ್ಟಂಬರ್ 1 ರಂದು ನಾಟಕ ಬರೆಯುವುದು ಮುಗಿಯಿತು. ಎರಡರಂದು ಚಂದ್ರುರವರಿಗೆ ತಲುಪಿಸಿ ಅಭಿಪ್ರಾಯ ಕೇಳಿದರು.
ಮೂರರಂದು ಚಿರನಿದ್ರೆಗೆ ಜಾರಿದರು.
ಅವರು ಬರೆದುಕೊಟ್ಟ ಕೊಟ್ಟ
ಕೊನೆಯ ನಾಟಕದ ಹೆಸರು “ಆರದಿರಲಿ ಬೆಳಕು”. ಅವರ ಮೊಟ್ಟಮೊದಲು ಬರೆದ
ಮಳೆಬೀಜ ನಾಟಕದಂತೆಯೇ ಕೊಟ್ಟಕೊನೆಯ ನಾಟಕವೂ ಸಹ ಸ್ವತಂತ್ರ ನಾಟಕ ಕೃತಿಯಾಗಿದೆ. ನಡುವೆ ಬರೆದ ನಾಟಕಗಳೆಲ್ಲಾ
ರಂಗರೂಪಾಂತರ ಮಾಡಿದಂತಹವು. ಕಾಕತಾಳೀಯವೋ ಎಂಬಂತೆ “ಆರದಿರಲಿ ಬೆಳಕು” ಸಹ ಸಾವಿನ ಕುರಿತಾದ ನಾಟಕ.
ಆತ್ಮಹತ್ಯೆಯನ್ನೇ ಥೀಮ್ ಆಗಿಸಿಕೊಂಡಿರುವ ನಾಟಕ. ಗೆಳೆಯನ ಸಾವಿನ ಆಘಾತದ ಜೊತೆಗೆ, ಸಾವಿನ ಕುರಿತ ನಾಟಕ
ಬರೆಯುತ್ತಾ ಬರೆಯುತ್ತಾ ಬಚ್ಚಿ ಮರಣದ ಕುರಿತು ಯೋಚಿಸುತ್ತಾ, ಧ್ಯಾನಿಸುತ್ತಾ ಸಾವನ್ನೇ ಸಾಕ್ಷಾತ್ಕಾರಗೊಳಿಸಿಕೊಂಡು
ಬದುಕಿನ ಬೆಳಕನ್ನು ಆರಿಸಿಕೊಂಡರು. ‘ಆರದಿರಲಿ ಬೆಳಕು’ ನಾಟಕಕ್ಕೆ ಬಚ್ಚಿ ಬರೆದ ಹಾಡೂ
ಕೂಡಾ ಸಾವಿನ ಕುರಿತದ್ದೆ. ಅದು ಹೀಗಿದೆ..
ನಾನು ಸಾವಿನೂರಿನ ರಾಜ
ನಾವು ಜೀವದೂರಿನ ಜನರು
ನಂಬಿಕೆ ನಮ್ಮ ಉಸಿರು..
ಪ್ರೀತಿ ಭರವಸೆಯ ಹಾದಿಯಲ್ಲಿ
ಅರಳಿವೆ ಬಾಳೆಯ ಹೂವು..
ಈ ಲೋಕದಲ್ಲಿ ಎಲ್ಲೆಡೆ ತುಂಬಿದೆ
ಬರೀ ಗೋಳು ನೋವು..
ಹೀಗೆ ಸಾವು ಎನ್ನುವುದು ಬೆಂಬಿಡದೇ
ಬಚ್ಚಿಯನ್ನು ಎಡಬಿಡದೇ ಕಾಡತೊಡಗಿತ್ತು. ಗೋಳು ನೋವು ತುಂಬಿದ ಲೋಕದಿಂದ ನೆಮ್ಮದಿಯ ಚಿರನಿದ್ರೆಗೆ ಹೊರಟುಹೋದರು.
ಜೀವದೂರಿನ ಜನರ ಸಹವಾಸ ತೊರೆದು ಸಾವಿನೂರಿಗೆ ರಾಜನಾಗುವ ನಂಬಿಕೆಯಿಂದ ನೀಗಿಕೊಂಡರು. ರಂಗಮಿತ್ರ ಬಚ್ಚಿ
ಇನ್ನಿಲ್ಲವಾದರು. ಇನ್ನೊಂದು ವಾರ ಇದ್ದಿದ್ದರೆ ತಮ್ಮ “ಆರದಿರಲಿ ಬೆಳಕು ” ನಾಟಕವನ್ನು ರಂಗದಮೇಲೆ ನೋಡಬಹುದಾಗಿತ್ತು.
ಇನ್ನೊಂದು ಹತ್ತು ವರ್ಷ ಬದುಕಿದ್ದರೆ ಇನ್ನೂ ಹತ್ತಾರು ಅಪರೂಪದ ನಾಟಕಗಳನ್ನು ಬರೆದು ಕೊಡಬಹುದಿತ್ತು.
ಹೀಗೆ.. ರಂಗಭೂಮಿಯ ಕೈಬಿಟ್ಟು ನಾಟಕಕಾರ ದಿಡೀರನೆ ನಿರ್ಗಮಿಸಬಾರದಿತ್ತು.
ಬಸವರಾಜ ಸೂಳೇರಿಪಾಳ್ಯ ಒಬ್ಬ
ಉತ್ತಮ ಕವಿಯೆಂಬುದನ್ನು ಸಾಹಿತ್ಯ ವಲಯ ಗುರಿತಿಸಲೇ ಇಲ್ಲಾ. ವ್ಯಕ್ತಿಗತ ಖುಷಿಗಾಗಿ ಕವಿತೆಗಳನ್ನು
ಬರೆದು ಅತ್ಮೀಯ ಸ್ನೇಹಿತರ ಮುಂದೆ ಓದಿ ಆನಂದ ಪಡುತ್ತಿದ್ದ ಬಚ್ಚಿ ಸಾಹಿತ್ಯ ಲೋಕ ಗುರುತಿಸುವಂತೆ ಯಾವ
ಪ್ರಯತ್ನವನ್ನೂ ಮಾಡಲಿಲ್ಲ. ಕೊಳ್ಳೇಗಾಲದ ಬಸಪ್ಪನದೊಡ್ಡಿ ಎನ್ನುವ ಹಳ್ಳಿಗಾಡಿನಿಂದ ಬೆಂಗಳೂರಿಗೆ ಬದುಕು
ಅರಸಿ ಬಂದ ಬಸವರಾಜ ಕೆಲವಾರು ಎನ್‌ಜಿಓ ಗಳಲ್ಲಿ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ಕವಿತೆ ಬರೆಯುತ್ತಾ
ಕಾಲಕಳೆಯುತ್ತಿದ್ದರು. ಇವರ ಬರವಣಿಗೆಯ ಶಕ್ತಿಯನ್ನು ಮೊದಲು ಗುರುತಿಸಿದ್ದು ದಾರಾವಾಹಿ ಜಗತ್ತು. ಹೀಗೆಯೇ
ಊರ್ವಶಿ ಎನ್ನುವ ದಾರಾವಾಹಿಗೆ ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬರೆಯುತ್ತಿರುವಾಗ ಬಚ್ಚಿಯ ಬರವಣೆಗೆಯೊಳಗಿನ
ಕಾವ್ಯಾತ್ಮಕ ನಾಟಕೀಯ ಗುಣಗಳನ್ನು ಪತ್ತೆ ಹಚ್ಚಿದವರು
ರೂಪಾಂತರ ತಂಡದ ರೂವಾರಿ ಕೆ.ಎಸ್.ಡಿ.ಎಲ್ ಚಂದ್ರುರವರು. ರಂಗನಿರ್ದೇಶಕರಾದ ಚಂದ್ರು ತಮ್ಮ ರೂಪಾಂತರ
ತಂಡಕ್ಕೆ ಒಂದು ನಾಟಕವನ್ನು ಬರೆದು ಕೊಡಲು ಬಚ್ಚಿಯನ್ನು ಆಗ್ರಹಿಸಿದರು. ಆಗ 2003ರಲ್ಲಿ ಮೂಡಿ ಬಂದಿದ್ದೇ
ಬಚ್ಚಿಯ ಮೊಟ್ಟಮೊದಲ ಸ್ವತಂತ್ರ ನಾಟಕ ಕೃತಿ “ಮಳೆಬೀಜ”. ಚಂದ್ರುರವರ ನಿರ್ದೇಶನದಲ್ಲಿ
ಈ ನಾಟಕ ಅತ್ಯಂತ ಯಶಸ್ವಿಯಾಗಿತ್ತು. ಕನ್ನಡ ರಂಗಭೂಮಿಗೆ ಒಬ್ಬ ಭರವಸೆಯ ನಾಟಕಕಾರನ ಪ್ರವೇಶವಾಗಿತ್ತು.
ಅವತ್ತಿನಿಂದ ಬರವಣಿಗೆಯನ್ನೇ
ಬದುಕು ಮಾಡಿಕೊಂಡ ಬಚ್ಚಿ ನಿರಂತರವಾಗಿ ಟಿವಿ ದಾರಾವಾಹಿಗಳಿಗೆ ಚಿತ್ರಕತೆ ಸಂಭಾಷಣೆ ಬರೆಯತೊಡಗಿದರು.
ಊರ್ವಶಿ, ಅಕ್ಬರ್ ಬೀರಬಲ್ ದಾರಾವಾಹಿಯ ನಂತರ ಅವರು ಸ್ಕ್ರಿಪ್ಟ್ ಬರೆದ “ಲಕ್ಷ್ಮೀ ಬಾರಮ್ಮ” ದಾರಾವಾಹಿ ಅಪಾರ ಜನಮನ್ನಣೆ ಗಳಿಸಿತು. ನಂತರ ದಿನಕ್ಕೆರಡು
ಎಪಿಸೋಡ್ ಬರೆಯುವುದು ಅವರ ವೃತ್ತಿಯೇ ಆಯಿತು. ನಾಲ್ಕು ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಬಚ್ಚಿ
ಬರೆದಿದ್ದಾರೆ. ಒಲವೇ ವಿಸ್ಮಯ, ಬನದ ನೆರಳು, ರಾಮಧಾನ್ಯ ಎನ್ನುವ ಮೂರು ಸಿನೆಮಾಗಳಿಗೆ ಚಿತ್ರಕತೆಯನ್ನೂ
ಸಹ ರಚಿಸಿ ಸಿನೆಮಾ ಕ್ಷೇತ್ರದಲ್ಲೂ ತಮ್ಮ ಬರಹದ ಪ್ರತಿಭೆಯನ್ನು ತೋರಿಸಿದ್ದಾರೆ.
ಆದರೆ.. ದಾರಾವಾಹಿ ಸಿನೆಮಾಗಳ
ಸ್ಕ್ರಿಪ್ಟ್ ಬರವಣಿಗೆ ಬಚ್ಚಿಗೆ ಎಂದೂ ತೃಪ್ತಿ ಕೊಡಲೇ ಇಲ್ಲಾ. ಹೊಟ್ಟೆಪಾಡಿಗಾಗಿ ಬರೆಯುತ್ತಿರುವೆನೆಂದು
ಆಗಾಗ ಗೆಳೆಯರ ಮುಂದೆ ಹೇಳುತ್ತಲೇ ಇದ್ದರು. ಅವರು ಆತ್ಮತೃಪ್ತಿಗಾಗಿ ಕವಿತೆಗಳನ್ನು ಬರೆದರೆ.. ಮನತೃಪ್ತಿಗಾಗಿ
ರಂಗಪಠ್ಯಗಳನ್ನು ಬರೆಯುತ್ತಿದ್ದರು. ದಾರಾವಾಹಿಗಳನ್ನು ಬಾಹ್ಯ ಒತ್ತಡಕ್ಕೊಳಗಾಗಿ ಬರೆದರೆ, ಕವಿತೆ
ನಾಟಕಗಳನ್ನು ಆಂತರಿಕ ಒತ್ತಡದ ಉತ್ಪನ್ನವಾಗಿಸಿಕೊಂಡಿದ್ದರು. ತನ್ನಿಚ್ಚೆ ಬಂದಾಗ, ಬರೆಯುವ ಇಚ್ಚೆ ತೀವ್ರವಾದಾಗ ಮಾತ್ರ
ಕಾವ್ಯ ನಾಟಕಗಳ ರಚನೆ ಆಗುತ್ತಿತ್ತು. ಒಳಒತ್ತಡ ಬರದೇ ಕೋಟಿ ರೂಪಾಯಿ ಕೊಡ್ತೇನೆಂದರೂ ಒಂದೇ ಒಂದು ನಾಟಕ
ಅವರಿಂದ ಹುಟ್ಟಿ ಬರುತ್ತಿರಲಿಲ್ಲ. ಅಪ್ಪಟ ಕವಿ ನಾಟಕಕಾರನಿಗೆ ಇರಬೇಕಾದದ್ದೇ ಇಂತಹ ಗುಣ. ತನ್ನಿಚ್ಚೆಯಂತೆ
ನೋಡುವ, ತನ್ನಿಚ್ಚೆಯಂತೆ ಹಾಡುವ, ತನ್ನಿಚ್ಚೆ ಬಂದಾಗ ಬರೆಯುವ ಗುಣವೇ ಕಲಾತ್ಮಕ ಕೃತಿ ರಚನೆಯನ್ನು
ಸಾಧ್ಯವಾಗಿಸಬಲ್ಲವು. ಬಚ್ಚಿ ಈ ವಿಚಾರದಲ್ಲಿ ತಾನೊಲಿದಂತೆ ಹಾಡುವ ಹಕ್ಕಿಯಾಗಿದ್ದರು. ತಾನೇ ಕಟ್ಟಿಕೊಂಡ
ವ್ಯಸನದ ಲೋಕದಲ್ಲಿ ಸದಾ ತಲ್ಲೀಣರಾಗಿದ್ದರು.
ರೂಪಾಂತರ ತಂಡಕ್ಕಾಗಿ ಲಂಕೇಶರ
ಕಾದಂಬರಿ ಆಧರಿಸಿ ಮುಸ್ಸಂಜೆ ಕಥಾಪ್ರಸಂಗ, ಶಿವರಾಂ ಕಾರಂತರ ಕೃತಿ ಆಧರಿಸಿ ಮೈಮನಗಳ ಸುಳಿಯಲ್ಲಿ, ಡಾ.ಶಾಂತರಸರ
ಕೃತಿಯಾಧಾರಿತ ಬಡೇಸಾಬು ಪುರಾಣ, ವಸುದೇವರವರ ಕಾದಂಬರಿಯಾಧರಿಸಿ ಮೋಹನಸ್ವಾಮಿ, ಕನಕದಾಸರ ಮಹಾಕಾವ್ಯ
ಮೋಹನ ತರಂಗಿಣಿ, ಪ್ರಕಾಶರವರ ಕಾದಂಬರಿಯಾಧರಿಸಿ ತಿಮ್ಮಜ್ಜಿ ಮ್ಯಾಗ್ಲುಂಡಿ.. ನಾಟಕಗಳನ್ನು ರಚಿಸಿ,
ಕೊನೆಯದಾಗಿ ‘ಆರದಿರಲಿ ಬೆಳಕು’ ಸ್ವತಂತ್ರ ನಾಟಕವನ್ನು ಬರೆದು
ನಿರ್ಗಮಿಸಿದರು. ಸಾವಿನ ಹೊಗೆ ಎನ್ನುವ ಬೀದಿ ನಾಟಕವನ್ನೂ ಸಹ ರೂಪಾಂತರಕ್ಕೆ ಬರೆದು ಕೊಟ್ಟಿದ್ದರು.
ಈ ಎಲ್ಲಾ ನಾಟಕಗಳನ್ನು ಕೆ.ಎಸ್.ಡಿ.ಎಲ್ ಚಂದ್ರೂರವರೇ ತಮ್ಮ ರೂಪಾಂತರ ರಂಗತಂಡಕ್ಕೆ ನಿರ್ದೇಶಿಸಿದ್ದು
ಒಂದಕ್ಕಿಂತ ಒಂದು ಸೊಗಸಾದ ನಾಟಕಗಳಾಗಿ ಮೂಡಿಬಂದು ಕನ್ನಡ ರಂಗಭೂಮಿಯಲ್ಲಿ ಮೈಲುಗಲ್ಲುಗಳಾಗಿವೆ. ಇತ್ತೀಚೆಗೆ
ಮಹಾಭಾರತದ ಭೀಷ್ಮನ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ರಂಗವರ್ಷ ತಂಡಕ್ಕೆ “ಭೀಷ್ಮ” ಎನ್ನುವ ಏಕವ್ಯಕ್ತಿ ನಾಟಕವನ್ನೂ
ಬಚ್ಚಿ ಬರೆದಿದ್ದರು ಇದನ್ನೂ ಸಹ ಚಂದ್ರುರವರೇ ನಿರ್ದೇಶಿಸಿದ್ದು ಈಗಾಗಲೇ ಐದಾರು ಪ್ರಯೋಗಗಳನ್ನು ಕಂಡಿದೆ.
ರಂಗಸಂಪದ ತಂಡಕ್ಕೆ “ಯರ್ಮ” ನಾಟಕವನ್ನು ಬರೆದುಕೊಟ್ಟಿದ್ದು,
ರಂಗನಿರಂತರ ತಂಡಕ್ಕೆ ಚೌಟರ ಕಾದಂಬರಿ ಆಧರಿಸಿದ ‘ಮಿತ್ತಬೈಲು ಯಮನಕ್ಕೆ’ ಹಾಗೂ ಸಹದೇವ ನಾಟಕಗಳನ್ನು
ರಚಿಸಿಕೊಟ್ಟಿದ್ದಾರೆ. ಬಿ.ಜಯಶ್ರೀಯವರ ತಂಡಕ್ಕೆ ‘ಪಚ್ಚೆ’ ಎನ್ನುವ ಮಕ್ಕಳ ನಾಟಕವನ್ನು
ಬಚ್ಚಿ ರಚಿಸಿದ್ದಾರೆ. ತಮ್ಮ ಬಹುತೇಕ ನಾಟಕಗಳಿಗೆ ಹಾಡುಗಳನ್ನೂ ಅವರೇ ರಚಿಸಿದ್ದು ಅವರ ಇನ್ನೊಂದು
ವಿಶೇಷ. “ಈ
ಜಗ ಸೋಜಿಗದ ಜಾಗ, ಅರಿತವರಿಲ್ಲಾ ಆಳ ಅಗಲ..” ಎನ್ನುವಂತಹ ಸರಳ ಪದಗಳ ಜೋಡನೆಯ
ಅವರ ಹಾಡುಗಳು ನಾಟಕದ ಪ್ರೇಕ್ಷಕರನ್ನು ತಂಗಾಳಿಯ ಹಾಗೆ ಆವರಿಸಿಕೊಳ್ಳುತ್ತಿದ್ದವು. ಸೂಳೇರಿಪಾಳ್ಯರವರ
ನಾಟಕಗಳು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಲು ಅವರ ಕಾವ್ಯಾತ್ಮಕತೆ ಹೊಂದಿದ ಮಾರ್ಮಿಕ ಸಂಭಾಷಣೆಗಳೇ
ಕಾರಣವಾಗಿದ್ದವು. ಬಹುತೇಕ ಸಂಭಾಷಣೆಗಳು ನೋಡುಗರ ಮೆದುಳನ್ನು ಮುಟ್ಟಿ ಕೇಳುಗರ ಮನಸ್ಸನ್ನು ತಟ್ಟುತ್ತಿದ್ದವು.
ಕವಿ ಒಬ್ಬ ನಾಟಕಕಾರನಾದರೆ ದೃಶ್ಯಕಾವ್ಯ ಸೃಷ್ಟಿಯಾಗುವುದೆಂಬುದಕ್ಕೆ ಸೂಳೇರಿಪಾಳ್ಯರವರ ನಾಟಕಗಳೇ ಸಾಕ್ಷಿಯಾಗಿವೆ.
‘ಇಲ್ಲಿವರೆಗೂ ಬರೆದ ಕವನಗಳಲ್ಲಿ
ಉತ್ತಮವಾದವುಗಳನ್ನು ಆಯ್ಕೆ ಮಾಡಿಕೊಡು ಕವನ ಸಂಕಲನವನ್ನು ಪ್ರಕಟಿಸುವೆ’ ಎಂದು ಬಚ್ಚಿ ಸಿಕ್ಕಾಗೆಲ್ಲಾ
ಕೇಳುತ್ತಲೇ ಇದ್ದೆ. ಕೊಡುತ್ತೇನೆಂದು ಪ್ರತಿ ಬಾರಿ ಆಶ್ವಾಸನೆ ಕೊಡುತ್ತಲೇ ಇದ್ದವ ಕವಿತೆಗಳನ್ನು ಮಾತ್ರ
ಕೊಡಲೇ ಇಲ್ಲ. ಆದರೆ ಅವರ ಕವಿತೆಯನ್ನು ಕೇಳಿ ಆಸ್ವಾದಿಸುವ ತೀವ್ರತೆ ಹೆಚ್ಚಿದಾಗಿ “ಬಚ್ಚಿ ಒಂದು ಪದ್ಯ ಹೇಳು” ಎಂದು ಕೇಳಿದರೆ ಸಾಕು ಬಗಲುಚೀಲದಿಂದ
ಚೀಟಿಯೊಂದನ್ನು ಬಿಚ್ಚಿ ಸಂಭ್ರಮದಿಂದ ತಾನು ನಿನ್ನೆನೋ ಮೊನ್ನೆನೋ ಬರೆದಿಟ್ಟಿದ್ದ ಕವಿತೆಯನ್ನು ಬಚ್ಚಿ
ಓದುತ್ತಿದ್ದ ರೀತಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. “ಬಚ್ಚಿ ಈ ನಿನ್ನ ಕವಿತೆ ಚೆನ್ನಾಗಿದೆ
ಕೊಡು ವಾಟ್ಸಾಪ್ಪಿಗೆ ಹಾಕ್ತೀನಿ, ಪೋಸ್ಬುಕಲ್ಲಿ ಪೋಸ್ಟ್ ಮಾಡ್ತೀನಿ.. ಆಸಕ್ತರೆಲ್ಲರೂ ಓದಲಿ” ಎಂದು ಪರಿಪರಿಯಾಗಿ ಕೇಳಿದರೂ
ಜಪ್ಪಯ್ಯಾ ಅಂದ್ರೂ ಕವಿತೆ ಕೊಡ್ತಿರಲಿಲ್ಲ. ಕವಿತೆ ಓದು ಎಂದರೆ ಎರಡು ಹೆಜ್ಜೆ ಮುಂದೆ ಬರುತ್ತಿದ್ದ
ಬಚ್ಚಿ ಅದ್ಯಾಕೋ ಪ್ರಚಾರ ಅಂದ್ರೆ ನಾಲ್ಕು ಹೆಜ್ಜೆ ಹಿಂದೆ ಸರಿಯುತ್ತಿದ್ದ. ಕೊನೆಗೂ ಸಾಹಿತ್ಯಲೋಕಕ್ಕೆ
ಅಪರಿಚಿತನಾಗಿಯೇ ಉಳಿದ. ತನ್ನೊಳಗಿದ್ದ ಕವಿಯನ್ನು ತನ್ನ ಮನದಾನಂದಕೆ ಸೀಮಿತಪಡಿಸಿಕೊಂಡ. ಇದರಿಂದ ಬಚ್ಚಿಗೆಷ್ಟು
ನಷ್ಟವಾಯ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಾವ್ಯಲೋಕಕ್ಕೆ ನಷ್ಟವಾಗಿದ್ದಂತೂ ಸತ್ಯ. ಅವರ ಒಂದೇ ಒಂದು
ಪ್ರಕಟಿತ ಕೃತಿ “ನಿದ್ದೆಯಲಿ ನಗುವ ಹುಡುಗ”. ಇದೊಂದು ಜಾನಪದ ಕಥೆಗಳ ಸಂಗ್ರಹದ
ಪುಸ್ತಕ.
ಇಂತಹ ಅಪ್ಪಟ ದೇಸಿ ಪ್ರತಿಭೆಯನ್ನು
ಬಳಸಿಕೊಂಡವರು ಅನೇಕರಿದ್ದಾರೆ.. ಆದರೆ ಗುರುತಿಸಿ ಕರೆದು ಸನ್ಮಾನಿಸಿ ಗೌರವ ಕೊಟ್ಟವರು ಕಡಿಮೆ, ಪ್ರಶಸ್ತಿ
ಪದಕಗಳಂತೂ ದೂರದ ಮಾತು. ಬಚ್ಚಿ ಎಂದೂ ಅವುಗಳನ್ನು ಬಯಸಲೂ ಇಲ್ಲಾ.. ಗುರುತಿಸಿ ಕರೆದು ಕೊಡುವ ಮನಸ್ಸುಗಳೂ
ಹೆಚ್ಚಾಗಿಲ್ಲ. ಕಳೆದ ಸಲ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಸೂಳೇರಿಪಾಳ್ಯರಿಗೆ ಕೊಡಿಸಲೇ ಬೇಕೆಂದು
ನಾನಂತೂ ಅಕಾಡೆಮಿಯ ಸದಸ್ಯನಾಗಿ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟೆ. ಪತ್ರಕರ್ತ ಮಿತ್ರ ರಾಜು ಮಳವಳ್ಳಿಯಂತೂ
‘ಏನಾದರೂ
ಮಾಡಿ ಪ್ರಶಸ್ತಿ ಕೊಡಿಸು ಇನ್ನೆಷ್ಟು ದಿನ ಬದುಕುತ್ತಾನೆಂಬುದಕ್ಕೆ ಗ್ಯಾರಂಟಿ ಇಲ್ಲಾ’ ಎಂದು ಒತ್ತಾಯಿಸಿದರು. ನಾನೂ
ಸಹ ಅಕಾಡೆಮಿಯ ಅಧ್ಯಕ್ಷರನ್ನು ಇನ್ನಿಲ್ಲದಂತೆ ಕಾಡಿದೆ, ಬೇಡಿದೆ.. ಪ್ರಶಸ್ತಿ ಕೊಡಲೇ ಬೇಕೆಂದು ಒತ್ತಾಯಿಸಿದೆ.
ಆದರೆ.. ನಾಲ್ಕು ನಾಟಕಗಳ ರಂಗರೂಪ ಮಾಡಿದ ರಂಗಭೂಮಿಗೆ ಸಂಬಂಧವೇ ಇಲ್ಲದವರಿಗೆ ಪ್ರಶಸ್ತಿ ಕೊಡಲಾಯಿತೇ
ಹೊರತು ನಾಟಕವನ್ನೇ ಉಸಿರಾಡುತ್ತಿದ್ದ ಬಚ್ಚಿಗೆ ನಿರಾಕರಿಸಲಾಯಿತು. ‘ಮುಂದಿನ ವರ್ಷ ಸೂಳೇರಿಪಾಳ್ಯರವರಿಗೆ
ಗ್ಯಾರಂಟಿ ಪ್ರಶಸ್ತಿ ಕೊಡಿಸೋಣ’ ಎಂದು ಜೆ.ಲೊಕೇಶರವರು ಆಶ್ವಾಸನೆ ಕೊಟ್ಟಿದ್ದರು. ಆದರೆ..
ಈ ವರ್ಷ ಹಠಕ್ಕೆ ಬಿದ್ದು ಪ್ರಶಸ್ತಿ ಕೊಡಿಸಬೇಕೆಂದರೂ ಅದನ್ನು ತೆಗೆದುಕೊಳ್ಳಲು ನಾಟಕಕಾರನೇ ನಿರ್ಗಮಿಸಿಯಾಗಿದೆ.
ಇನ್ನು ಕೊಡುವುದಾದರೂ ಏನನ್ನು..? ಲೊಕೇಶರವರು ಬಚ್ಚಿಯ ಸಾವಿನ ಸುದ್ದಿ ಕೇಳಿದಾಗಿನಿಂದ ಅಂತರ್ಮುಖಿಯಾದರು.
ಪಶ್ಚಾತ್ತಾಪದಿಂದ ತೀವ್ರವಾಗಿ ನೊಂದು ಹೋದರು. ‘ಪ್ರತಿಭಾನ್ವಿತ ನಾಟಕಕಾರನಿಗೊಂದು
ಪ್ರಶಸ್ತಿ ಕೊಡಿಸಲಾಗಲಿಲ್ಲವಲ್ಲ’ ಎಂದು ಕೊರಗಿದರು, ಒಳಗೊಳಗೆ ಮರುಗಿದರು. ಆದರೆ..
ಕಾಲ ಮಿಂಚಿ ಹೋಗಿತ್ತು. ‘ ಈ ವರ್ಷ ಅಕಾಡೆಮಿಯಿಂದ ಜೀವಮಾನದ ಸಾಧನೆಯ ಪ್ರಶಸ್ತಿ ಕೊಡಲಾಗುವುದು
ಬಾ’
ಎಂದು ಕರೆದರೂ ಮರಳಿ ಬಾರದ ಲೋಕಕೆ ಬಸಣ್ಣ ಹೋಗಿಯಾಗಿದೆ. ರಂಗಭೂಮಿಗೆ ಹಲವಾರು ಅಪರೂಪದ ನಾಟಕವನ್ನು
ಬರೆದುಕೊಟ್ಟು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಪ್ರತಿಭಾನ್ವಿತ ನಾಟಕಕಾರನಿಗೆ ಪ್ರಶಸ್ತಿಯೊಂದನ್ನು
ಕೊಟ್ಟು ಗೌರವಿಸಲಾಗಲಿಲ್ಲವಲ್ಲಾ ಎನ್ನುವ ಕೊರಗು ನನಗೂ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಜೆ.ಲೊಕೇಶರವರಿಗೂ
ಕೊನೆಯವರೆಗೂ ಬೆಂಬಿಡದೇ ಕಾಡದೇ ಬಿಡದು.
“ನೋಡು ಕೆಳಗಿದೆ ಕತ್ತಲೆ ಗುಂಡಿ
ಮೇಲಿದೆ ನೋಡು ಬೆಳಕಿನ ಕಿಂಡಿ..”
ಇವು ‘ಆರದಿರಲಿ ಬೆಳಕು’ ನಾಟಕಕ್ಕೆ ಬಚ್ಚಿ ಬರೆದ ಹಾಡಿನ
ಸಾಲುಗಳು. ಅದ್ಯಾವ ಬೆಳಕಿನ ಕಿಂಡಿಯನ್ನು ಹುಡುಕಿಕೊಂಡು ನಮ್ಮ ನಾಟಕಕಾರ ಬಾರದ ಲೋಕಕ್ಕೆ ಹೋದನೋ ಗೊತ್ತಿಲ್ಲ.
ಆದರೆ ಕತ್ತಲೆ ಗುಂಡಿಯಂತಾ ಬದುಕಲ್ಲೂ ಬೆಳಕಾಗುವಂತಹ ನಾಟಕಗಳನ್ನು ಬರೆದುಕೊಟ್ಟಿದ್ದಕ್ಕೆ ಬಚ್ಚಿಗೆ
ಕೋಟಿ ನಮನ. “ಕಳೆದ ಸಲ ಪ್ರಶಸ್ತಿಯೊಂದನ್ನು ಕೊಡಿಸಲಾಗದೇ ತಪ್ಪು ಮಾಡಿದ್ದೇನೆ
ಬಚ್ಚಿ.. ನನ್ನ ಅಪರಾದವನ್ನು ಈ ಸಲ ತಿದ್ದಿಕೊಳ್ಳುತ್ತೇನೆ.. ಬರುವಂತಿದ್ದರೆ ಮರಳಿ ಬಾ.. ನೀ ಬಾರದೇ
ಇದ್ದರೆ ಕೊನೆಯವರೆಗೂ ತಪ್ಪಿತಸ್ತ ಮನೋಭಾವ ಕಾಡದೇ ಇರದು. ಏನು ಮಾಡುವುದು “ಈ ಜಗ ಸೋಜಿಗದ ಜಾಗ, ಅರಿತವರಿಲ್ಲಾ
ಆಳ ಅಗಲ..”.
ಹಡೆದವ್ವ ಬರೆದ ಹಣೆಬರಹ ನಾಟಕಕ್ಕೆ
ಬಚ್ಚಿ ಬರೆದ ಈ ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳುವ
ಮೂಲಕ ಅಕಾಲಿಕವಾಗಿ ಅಗಲಿದ ಕವಿ ನಾಟಕಕಾರನಿಗೆ ರಂಗನಮನ ಸಲ್ಲಿಸುವೆ..
ಯಾರ ಹಣೆಯ ಮೇಲೆ ವಿಧಿಯಮ್ಮ
ಬರೆದ ಕತೆ
ಕತೆಗಿಲ್ಲ ಕೊನೆ, ಕೊನೆಯಿಲ್ಲದ
ವ್ಯಥೆ..
ಸತ್ತವರು ಸತ್ತರು ಬದುಕಿದವರಾ
ಕಥೆ
ಬದುಕಿದವರ ಹಣೆಬರಹ ಬರೆದವರು
ಯಾರು..?..
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ