ಸೋಮವಾರ, ಸೆಪ್ಟೆಂಬರ್ 10, 2018

ನಾಜಿ ದೊರೆಯ ಖಾಜಿ ನ್ಯಾಯ; ಪ್ರಹಸನ


(ನಾಜಿ ದೊರೆಯ ಒಡ್ಡೋಲುಗ. ಪ್ರಜೆಯೊಬ್ಬ ದೂರು ಕೊಡಲು ಆತಂಕದಿಂದ ಬರುತ್ತಾನೆ)

ಪ್ರಜೆ : ದೊರೆಗಳೇ... ಜನತೆ ಅತೀವ ಸಂಕಷ್ಟದಲ್ಲಿದೆ. ನಮ್ಮ ಬದುಕು ಮುಳುಗುತ್ತಿದೆ, ನಮಗೀಗ ನೀವೇ ದಾರಿ ದಿಕ್ಕು..

ದೊರೆ : (ಮೌನ)

ಪ್ರಜೆ : ಪ್ರಜೆಗಳ ನೋವು ನಿವಾರಿಸಬೇಕಾದ ತಾವೇ ಹೀಗೆ ಮೌನವಾಗಿದ್ದರೆ ನಮ್ಮ ಗತಿಯೇನು ಮಹಾಪ್ರಭು..

ದೊರೆ : (ಮೌನ)

ಪ್ರಜೆ : ನಾವಿರುವ ಪ್ರದೇಶದಲ್ಲಿ ತಾಮ್ರ ತಯಾರಿಸುವ ಕಾರ್ಖಾನೆ ಇದೆ ಪ್ರಭು.. ಅದರಿಂದ ಹೊರಬರುವ ಕಲುಷಿತ ನೀರು ನದಿಗೆ ಸೇರಿ ಜಲಚರಗಳು ಸಾಯುತ್ತಿವೆ‌. ಆ ನದಿಯ ನೀರು ಬಳಸಿದ ಜನರು ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದಾರೆ. ಹುಟ್ಟುತ್ತಿರುವ ಹಸುಗೂಸುಗಳು ಅಂಗವೈಕಲ್ಯ ಬಾಧೆಯಿಂದ ನರಳುತ್ತಿವೆ. ತಾಮ್ರದ ಗಣಿಗಾರಿಕೆ ಮುಚ್ಚಿಸಿ ನಮ್ಮನ್ನು ಬದುಕಿಸಿ ಪ್ರಭು.

ದೊರೆ : (ಮೌನ)

ವಿಧೂಷಕ : ಇಂತಹ ಚಿಲ್ಲರೇ ಸಂಗತಿಗಳಿಗೆಲ್ಲಾ ನಮ್ಮ ಆದರನೀಯ ನಾಜಿ ದೊರೆಗಳು ಉತ್ತರಿಸಲು ಎಂದಾದರೂ ಸಾಧ್ಯವೇ?  ನಮ್ಮದೇ ರಾಜ ಪರಿವಾರದ ಪುರೋಹಿತರು ಉತ್ತರ ಕೊಡುತ್ತಾರೆ ಕೇಳಿ ಪಾವನರಾಗಿ.

ರಾಜಪುರೋಹಿತ : ಇಂತಹ ಮೂರ್ಖರಿಗೆ ಅದು ಹೇಗೆ ಗೊತ್ತಾಗುತ್ತದೆ ತಾಮ್ರದ ಮಹತ್ವ. ತಾಮ್ರ ಎನ್ನುವುದು ಲೋಹಗಳಲ್ಲೇ ಶ್ರೇಷ್ಟವಾದದ್ದು ಗೊತ್ತೆ. 

ಪ್ರಜೆ : ಅದು ಹಾಗಲ್ಲ ಮಾಹಾಸ್ವಾಮಿ. ನನ್ನ ಪ್ರಶ್ನೆ ಏನೆಂದರೆ..?

ವಿಧೂಷಕ : ಶ್!  ಇಲ್ಲಿ ಪ್ರಶ್ನೆ ಕೇಳುವುದನ್ನು ನಿಷೇಧಿಸಲಾಗಿದೆ.. 

ಪುರೋಹಿತ : ಹೌದು. ನಮಗೆ ಪ್ರಶ್ನೆಗಳು ಅಂದರೆ ಆಗಿಬರುವುದಿಲ್ಲ. ಈಗ ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸು. ದೇವರಿಗೆ ಅಭಿಷೇಕ ಮಾಡಲು ಯಾವ ಲೋಹದ ಪಾತ್ರೆ ಬಳಸುತ್ತಾರೆ.

ಪ್ರಜೆ : ತಾಮ್ರದ ಪಾತ್ರೆ ಸ್ವಾಮಿ...

ಪುರೋಹಿತ : ಸರಿಯಾದ ಉತ್ತರ. ಪೂಜಾರಿಗಳು ದೇವರ ತೀರ್ಥ ಕೊಡುವುದು ಯಾವುದರಿಂದ?

ಪ್ರಜೆ : ತಾಮ್ರದ ಚಮಚೆಯಿಂದ ಗುರುಗಳೇ..

ಪುರೋಹಿತ : ಋಷಿ ಮುನಿಗಳು, ಮಹಾ ತಪಸ್ವಿಗಳು ಪವಿತ್ರ ನೀರು ಸಂಗ್ರಹಿಸುವುದಕ್ಕೆ ಮತ್ತು ವರ  ಶಾಪ ಕೊಡಲು ಯಾವ ಪಾತ್ರೆ ಬಳಸುತ್ತಾರೆ. 

ಪ್ರಜೆ : ತಾಮ್ರದ ಕಮಂಡಲ ಪೂಜ್ಯರೆ..

ಪುರೋಹಿತ : ತಾಮ್ರದ ಪಾತ್ರೆಯ ನೀರನ್ನೇ ಶತ ಶತಮಾನಗಳಿಂದ ಪವಿತ್ರ ತೀರ್ಥವೆಂದು ಬಳಸುತ್ತಾ ಬರಲಾಗುತ್ತಿದೆ. ನೀವು ನಿಜಕ್ಕೂ ಮಹಾ ಪುಣ್ಯವಂತರು. ಹರಿಯುವ ನದಿಯ ನೀರೇ ತಾಮ್ರದ ನೀರಾಗಿದ್ದಕ್ಕೆ ಸಂತಸ ಪಡಿ. ಅಮೃತ ಸಮಾನ ಪವಿತ್ರ ನೀರಿನ ನಿತ್ಯ ಸೇವನೆಯಿಂದ ಜನರ ಆರೋಗ್ಯ ಹೆಚ್ಚುತ್ತದೆ, ಆಯಸ್ಸು ವೃದ್ದಿಸುತ್ತದೆ... ಯಾರೋ ದ್ರೋಹಿಗಳ ಮಾತು ಕೇಳಿ ಇಂತಹುದಕ್ಕೆಲ್ಲಾ ದೊರೆಗೆ ದೂರು ಕೊಟ್ಟರೆ ದೇವರು ಮೆಚ್ಚುವನಾ? ನಮ್ಮ ಪರಮ ಪವಿತ್ರ ಧರ್ಮ ಒಪ್ಪುವುದಾ..?

ದೊರೆ : ( ಮಂದಹಾಸ ಮತ್ತು ಮೌನ)

ಪ್ರಜೆ : ತಾಮ್ರದ ನೀರಿಂದ ಇಷ್ಟೆಲ್ಲಾ ಪ್ರಯೋಜನೆ ಇದೆಯೆಂದು ಗೊತ್ತಿರಲಿಲ್ಲಾ ಮಹಾಂತರೆ, ದಯವಿಟ್ಟು ಆ ನಮ್ಮ ಪವಿತ್ರ ನದಿಯ ನೀರನ್ನು  ತಂದಿರುವೆ ತಾವು ಸೇವಿಸಿ ದೊರೆಗಳಿಗೂ ಕುಡಿಸಬೇಕೆಂದು ನಮ್ಮ ಸವಿನಯ ಪ್ರಾರ್ಥನೆ.

ದೊರೆ : (ಗಂಟುಮುಖ ಹಾಕಿ ಅಸಹನೆಯಿಂದ ಇದ್ದಕ್ಕಿದ್ದಂತೆ ಸಿಂಹಾಸನದಿಂದ ಇಳಿದು ತೆರಳುತ್ತಾನೆ)

ಪುರೋಹಿತ : ಯಾರಲ್ಲಿ. ಈ ಅಧಿಕ ಪ್ರಸಂಗಿಯನ್ನ ಈಗಲೇ ರಾಜದ್ರೋಹದ ಅಪರಾಧದ ಮೇಲೆ ಬಂಧಿಸಿ. ದೊರೆಗೆ ವಿಷಯುಕ್ತ ನೀರು ಕುಡಿಸಿ ಕೊಲ್ಲಲು ಪ್ರಯತ್ನಿಸಿದ ಮಹಾಪರಾಧಕ್ಕೆ ಸೆರೆಮನೆಗೆ ತಳ್ಳಿ. ಇವನ ಹಿಂದಿರುವ ಎಲ್ಲಾ ಬುದ್ದಿಜೀವಿಗಳನ್ನು ರಾಜದ್ರೋಹದ ಆರೋಪದ ಮೇಲೆ ಬಂಧಿಸಿ. ಇದು ರಾಜಾಜ್ಞೆ..  (ಪುರೋಹಿತನ ನಿರ್ಗಮನ ಹಾಗೂ ಪ್ರಜೆಯ ಬಂಧನ)

ವಿಧೂಷಕ : (ಜೋರಾದ ನಗು) ಹೌದೌದು.. ರಾಜದ್ರೋಹ, ದೇಶದ್ರೋಹ, ಧರ್ಮದ್ರೋಹ ರಾಷ್ಟ್ರದ್ರೋಹ, ನಗರ ನಕ್ಸಲ್ ರ ವಿದ್ರೋಹ... ಇನ್ನೂ ಏನೇನು ಆರೋಪ ಹೊರಿಸಲು ಸಾಧ್ಯವೋ ಅವನ್ನೆಲ್ಲಾ ಈ ಬಡಪಾಯಿಗಳ ಮೇಲೆ ಹಾಕಿ ಜಡಾಯಿಸಿ. ಪ್ರಶ್ನೆ ಕೇಳುವ ಪಾಪದ ಪ್ರಜೆಗಳನ್ನು ಜೈಲಿಗೆ ಕಳಿಸಿ, ಸುಳ್ಳು ವಿಚಾರಣೆ ನಡೆಸಿ ಗಲ್ಲಿಗೇರಿಸಿ. ಈ ಜನರಿಗೂ ಬುದ್ದಿಯಿಲ್ಲ. ಪ್ರಶ್ನಿಸುವುದೇ ದೇಶದ್ರೋಹ ಎನ್ನಲಾಗುವ ದೇಶದಲ್ಲಿ ಯಾಕೆ ಪ್ರಶ್ನಿಸುತ್ತಾರೋ. ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಚುಕಿ ಆಡಳಿತ ನಡೆಸುವ ನಾಜಿ ದೊರೆಯ ದುರಾಡಳಿತದಲ್ಲಿ ಜನರು ಅದ್ಯಾಕೆ ಹೀಗೆ ಪ್ರತಿಭಟಿಸುತ್ತಾರೋ? 
ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇನಲ್ಲ.. ಆದರೆ...

ಅಶರೀರವಾಣಿ : ಯಾರದು ಹಕ್ಕು ಹೋರಾಟ ಎನ್ನುವ ದೇಶದ್ರೋಹಿ. ಯಾರಲ್ಲಿ... ಇಂತಹ ರಾಜದ್ರೋಹಿಗಳನ್ನು ಈ ಕೂಡಲೇ ಬಂಧಿಸಿ...

ವಿಧೂಷಕ : (ಒಂದು ಕೈಯಿಂದ ಬಾಯಿ ಮುಚ್ಚಿಕೊಂಡು ಇನ್ನೊಂದು ಕೈಯನ್ನು ಅಂಡಿನ ಹಿಂದೆ ಬಾಲದಂತೆ ಅಲ್ಲಾಡಿಸುತ್ತಾ ನಾಯಿಯಂತೆ ಕುಂಯ್ ಗುಟ್ಟುತ್ತಾ ನಿರ್ಗಮಿಸುತ್ತಾನೆ, ಹಿನ್ನೆಲೆಯಲ್ಲಿ ಹಾಡೊಂದು ಕೇಳಿ ಬರುತ್ತದೆ..)

              - ಶಶಿಕಾಂತ ಯಡಹಳ್ಳಿ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ