ಗುರುವಾರ, ಸೆಪ್ಟೆಂಬರ್ 6, 2018

ಕೆಂಪೇಗೌಡ ಪ್ರಶಸ್ತಿ ಪ್ರಹಸನ ಮತ್ತು ಕಪ್ಪಣ್ಣನವರ ನಿರಾಕರಣೆ ಪ್ರಸಂಗ:




ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಶಸ್ತಿ ಪ್ರದಾನ ಮಾಡುವಲ್ಲಿ ವರ್ಷದಿಂದ ವರ್ಷಕ್ಕೆ ತನ್ನದೇ ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿದೆ. ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೆಂಪೇಗೌಡರ ಜನ್ಮದಿನಾಚರಣೆಯಂದು ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸಾಧಕರನ್ನು ಗೌರವಿಸುವ ಸ್ತುತ್ಯಾರ್ಹ ಕೆಲಸವನ್ನು ಮಾಡುತ್ತಲೇ ಬಂದಿದೆ. ಪ್ರಶಸ್ತಿ ಕೊಡುವ ಹಿಂದಿರುವ ಸದಾಶಯದ ಬಗ್ಗೆ ಯಾರಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಾಧಕರನ್ನು ಗುರುತಿಸಿ ಗೌರವಿಸುವುದು ಒಂದು ನಾಗರೀಕ ಸಮಾಜದ ಕರ್ತವ್ಯವೂ ಆಗಿದೆ.

ಆದರೆ.. ಪ್ರಶಸ್ತಿ ಪ್ರದಾನದ ಹಿಂದಿರುವ ಮೂಲ ಉದ್ದೇಶಕ್ಕೆ ಬಿಬಿಎಂಪಿ ಎಳ್ಳು ನೀರು ಬಿಟ್ಟು ಅದೆಷ್ಟೋ ವರ್ಷಗಳೇ ಆಗಿವೆ. ಕೆಂಪೇಗೌಡರ ಹೆಸರುಳಿಸುವ ಬದಲು ಅವರ ಹೆಸರಿಗೆ ಕಳಂಕ ತರುವ ರೀತಿಯಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯುತ್ತಿರುವುದು ಬೆಂಗಳೂರಿಗರು ತಲೆತಗ್ಗಿಸುವಂತಹ ಸಂಗತಿ. ಕೆಂಪೇಗೌಡರ ಹುಟ್ಟಿದ್ದು ಜೂನ್ 27ರಂದು. ಕೆಂಪೇಗೌಡರ ದಿನಾಚರಣೆ ಮಾಡಬೇಕಾದದ್ದೂ ಪ್ರತಿ ವರ್ಷ ಜೂನ್ 27ರಂದು. ಜನ್ಮ ದಿನಾಚರಣೆಯ ಪ್ರಯುಕ್ತ  ಕೊಡಮಾಡುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಾದದ್ದೂ ಜೂನ್ 27ರಂದು. ಆದರೆ.. ನಮ್ಮ ಸರಕಾರಕ್ಕೆ ಹಾಗೂ ಬಿಬಿಎಂಪಿಗೆ ಇದು ಯಾವುದೂ ಲೆಕ್ಕವೇ ಇಲ್ಲ. ತಮಗಿಷ್ಟ ಬಂದಾಗ, ಅನುಕೂಲವಾದಾಗ ಕೆಂಪೇಗೌಡರ ಜಯಂತಿಯನ್ನು ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸುತ್ತಿರುವುದೇ ಪ್ರಶ್ನಾರ್ಹವಾಗಿದೆ. 



ಈ ಸಲವಂತೂ (2018) ಕೆಂಪೇಗೌಡರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಮೂರು ಸಲ ಮುಂದೂಡುತ್ತಲೇ ಹೋಗಿ ನಾಲ್ಕನೇ ಸಲ ಪೂರ್ಣಗೊಂಡಿದ್ದು ಪಾಲಿಕೆಯ ಅದ್ವಾನಗಳ ದಾಖಲೆಗಳ ಪಟ್ಟಿಗೆ ಹೊಸ ಸೇರ್ಪಡೆ. ಅದು ಯಾಕೋ ಈ ವರ್ಷ ಪ್ರಶಸ್ತಿಗಾಗಿ ಆಯ್ಕೆಯಾದವರ ನಸೀಬೇ ಸರಿ ಇರಲಿಲ್ಲ. ಪ್ರತಿ ಸಲ ಹೊಸ ಬಟ್ಟೆ ತೊಟ್ಟು ಪ್ರಶಸ್ತಿ ಗೌರವ ಪಡೆಯಲು ಇನ್ನೇನು ಸಿದ್ದರಾಗಿ ಬರಬೇಕು ಅನ್ನುವುದರೊಳಗೆ ಸಮಾರಂಭವೇ ಮುಂದೂಡಲ್ಪಡುತ್ತಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮೊದಲ ಬಾರಿಗೆ ಮುಂದೂಡಲಾಯಿತು. ತದನಂತರ ಜುಲೈ ತಿಂಗಳಲ್ಲಿ ದಿನಾಂಕ ನಿಗದಿ ಮಾಡಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾರ್ಯನಿಮಿತ್ತ ದೆಹಲಿಗೆ ಹೋಗಿದ್ದರಿಂದ ಆಗಸ್ಟ್ 8ಕ್ಕೆ ಕೆಂಪೇಗೌಡ ದಿನಾಚರಣೆ ಮತ್ತೆ ಮುಂದಕ್ಕೆ ಹೋಯಿತು. ಪುರಸ್ಕೃತರು ಪ್ರಶಸ್ತಿ ಪಡೆಯಲು ಇನ್ನೇನು ಒಂದು ದಿನ ಬಾಕಿ ಇರುವಂತೆಯೇ ಆಗಸ್ಟ್ 7ರಂದು ಕರುಣಾನಿಧಿಯವರು ತೀರಿಕೊಂಡಿದ್ದರಿಂದ ಮತ್ತೆ ಸಮಾರಂಭವನ್ನು ಆಗಸ್ಟ್ 16ಕ್ಕೆ ಮುಂದೂಡಲಾಯಿತು.
ಈ ಸಲವಾದರೂ ಪ್ರಶಸ್ತಿ ಸಿಕ್ಕೀತೆಂಬ ನಂಬಿಕೆಯಿಂದ ಪ್ರಶಸ್ತಿಗೆ ಆಯ್ಕೆಯಾದ ಬಹುತೇಕರು ತಯಾರಾಗಿ ಬಂಧು ಬಾಂಧವ ಮಿತ್ರರನ್ನೆಲ್ಲಾ ಸಮಾರಂಭಕ್ಕೆ ಕರೆದುಕೊಂಡು ಖುಷಿಯಿಂದಲೇ ಪಾಲಿಕೆಯ ಗಾಜಿನ ಮನೆಗೆ ಬಂದಿದ್ದರು. ಬೆಳಿಗ್ಗೆಯಿಂದಾ ಕೆಂಪೇಗೌಡರ ದಿನಾಚರಣೆಯ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು. ಮಧ್ಯಾಹ್ನ ಕೆಲವಾರು ಆಯ್ದ ಪೌರಕಾರ್ಮಿಕರಿಗೆ ಪ್ರಶಸ್ತಿಯನ್ನೂ ಕೊಡಮಾಡಲಾಯಿತು. ಇನ್ನೇನು ಸಂಜೆ 6ಕ್ಕೆ ಪ್ರಶಸ್ತಿ ಪ್ರಧಾನ ನಡೆಯಬೇಕು, ಮುಖ್ಯ ಮಂತ್ರಿಗಳು ಬರಬೇಕಿತ್ತು. ಪಾಲಿಕೆಯ ಆವರಣದಲ್ಲಿರುವ ಡಾ. ರಾಜಕುಮಾರ್ ಗಾಜಿನ ಸಭಾಂಗಣ ಜನರಿಂದ ತುಂಬತೊಡಗಿತ್ತು.. ಆದರೆ.. ಸಂಜೆ 5ಕ್ಕೆ ಮಾಜಿ ಪ್ರಧಾನಿ ವಾಜಪೇಯಿಯವರು ತೀರಿಕೊಂಡ ಸುದ್ದಿ ಬಂತು. ಮತ್ತೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ರದ್ದಾಗಿ ಹೋಯಿತು. ಬಂದ ದಾರಿಗೆ ಸುಂಕವಿಲ್ಲವೆಂದು ಪ್ರಶಸ್ತಿಗೆ ಆಯ್ಕೆಗೊಂಡವರು ನಿರಾಸೆಯಿಂದ ಗೊಣಗುತ್ತಲೇ ಮನೆಗೆ ತೆರಳಿದರು. ಮೂರು ಸಲ ಸಮಾರಂಭವನ್ನು ರದ್ದು ಮಾಡಿ ಮುಂದೂಡಿದ್ದಕ್ಕೆ ಮಾಡಲಾದ ಒಟ್ಟು ಖರ್ಚು ಐವತ್ತು ಲಕ್ಷ ರೂಪಾಯಿಗಳು. ಅರ್ಧ ಕೋಟಿಯಷ್ಟು ಬೆಂಗಳೂರಿನ ತೆರಿಗೆದಾರರ ಹಣ ವ್ಯರ್ಥವಾಗಿ ಹೋಯಿತು. 

ಹೀಗೆ ಕಾರ್ಯಕ್ರಮ ಕೆಲವಾರು ಬಾರಿ ಮುಂದೂಡಿದ್ದರಿಂದ ಕೇವಲ ಹಣ ಮಾತ್ರ ವ್ಯರ್ಥವಾಗಲಿಲ್ಲಾ ಪ್ರಶಸ್ತಿಯ ಫಲಾನುಭವಿಗಳಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು. ಮೊದಲು ಪ್ರಶಸ್ತಿ ಬೇಕೆಂದು ಕೇವಲ 160 ಅರ್ಜಿಗಳು ಬಂದಿದ್ದವು. ತದನಂತರ ಪ್ರಶಸ್ತಿ ಪಡೆಯಬೇಕೆಂಬುವವರು ಸಾಧ್ಯವಾದ ಎಲ್ಲಾ ಮಾರ್ಗಗಳನ್ನು ಹುಡುಕತೊಡಗಿದರು. ವಾರ್ಡ ಕಾರ್ಪೋರೇಟರ್‌ಗಳಿಂದ ಹಿಡಿದು ಶಾಸಕರು, ಮಂತ್ರಿಗಳು, ಮುಖ್ಯ ಮಂತ್ರಿಗಳಿಂದ ಶಿಪಾರಸ್ಸು ಪತ್ರಗಳು ಹಾಗೂ ಒತ್ತಡಗಳು ಪಾಲಿಕೆಯ ಆಯುಕ್ತರು ಹಾಗೂ ಮೇಯರ್‌ಗಳಿಗೆ ಬರತೊಡಗಿದವು. ಕೊನೆಗೆ ಅಳೆದು ಸುರಿದು 300 ಜನರಿಗೆ ಪ್ರಶಸ್ತಿಯನ್ನು ಅಧೀಕೃತವಾಗಿ ಘೋಷಿಸಲಾಗಿತ್ತು. ಅಷ್ಟೂ ಜನರಿಗೆ ಹಾರ ಶಾಲು ಪ್ರಮಾಣ ಪತ್ರ ಹಾಗೂ ಸ್ಮರಣಪಲಕಗಳು ಸಿದ್ದವಾಗಿದ್ದವು. ವಾಜಪೇಯಿಯವರ ಸಾವಿನ ಸುದ್ದಿ ಇನ್ನು ಕೇವಲ ಮೂರುಗಂಟೆ ಲೇಟಾಗಿ ಬಂದಿದ್ದರೂ ಮುನ್ನೂರೂ ಜನರು ಪ್ರಶಸ್ತಿ ಪಡೆಯುತ್ತಿದ್ದರು. ಆದರೆ ಯಾವಾಗ ಸಮಾರಂಭ ಮತ್ತೆ ಮುಂದಕ್ಕೆ ಹೋಯಿತೋ ಪ್ರಶಸ್ತಿ ಆಕಾಂಕ್ಷಿಗಳ ಒಳದಾರಿಗಳ ಪ್ರಯತ್ನ ಜೋರಾಯಿತು. ಕೆಲವರು ಶಿಪಾರಸ್ಸುಗಳನ್ನು ಬಳಸಿ ಪಾಲಿಕೆ ಕಛೇರಿಯಿಂದ ಪ್ರಶಸ್ತಿ ಘೋಷಣೆಯ ಪತ್ರವನ್ನು ಪಡೆದುಕೊಂಡರು. ಇನ್ನು ಕೆಲವರು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುವ ದಿನವೂ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಕೊಂಡರು. ಇನ್ನು ಕೆಲವರಂತೂ ಅತ್ತ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದರೆ ಇತ್ತ ತಮ್ಮ ಹೆಸರನ್ನೂ ಪ್ರಶಸ್ತಿಗೆ ಕರೆಯಬೇಕೆಂದು ನಿರೂಪಕರನ್ನು ಒತ್ತಾಯಿಸತೊಡಗಿದರು. 



ಕೊನೆಗೂ ಸೆಪ್ಟಂಬರ್ 1 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿಗದಿಯಾದಂತೆ ನಡೆಯಿತು. ಇವತ್ತಾದರೂ ಪ್ರಶಸ್ತಿ ಸಿಗುವುದೋ ಇಲ್ಲವೋ ಎನ್ನುವ ಅನುಮಾನದಿಂದಲೇ ಪ್ರಶಸ್ತಿ ಘೋಷಿತರು ಬಂದಿದ್ದರು. ಇವತ್ತು ಯಾವುದೇ ಅವಗಡ ನಡೆಯದಿರಲೆಂದು ಮನಸ್ಸಲ್ಲಿ ಪ್ರಾರ್ಥಿಸುತ್ತಲೇ ಸಮಾರಂಭಕ್ಕೆ ಆತಂಕದಿಂದಲೇ ಆಗಮಿಸಿದ್ದರು. ಆದರೆ.. ಸೆಪ್ಟಂಬರ್ 1 ರಂದು ನಡೆದ ಈ ಸಮಾರಂಭ ದೇಶದಲ್ಲಿ ಎಲ್ಲಿಯೂ ನಡೆಯಲಾರದಷ್ಟು ಅಶಿಸ್ತಿನಿಂದ ಕೂಡಿತ್ತು.. ಗೊಂದಲದ ಗೂಡಾಗಿತ್ತು. ಪ್ರಶಸ್ತಿ ಎನ್ನುವುದು ಸಿಕ್ಕವರಿಗೆ ಸೀರುಂಡೆಯನ್ನುವಂತಾಗಿ ನೋಡುಗರಲ್ಲಿ ಅಸಹ್ಯವನ್ನು ತರಿಸುವಂತಿತ್ತು. ಪ್ರಶಸ್ತಿ ಪ್ರಧಾನ ಮಾಡಲು ಬರಬೇಕಾಗಿದ್ದ ಮುಖ್ಯಮಂತ್ರಿಗಳು ಬರಲೇ ಇಲ್ಲ. ಉಪಮುಖ್ಯಮಂತ್ರಿ ಪರಮೇಶ್ವರ್‌ರವರೊಂದಿಗೆ ಪಾಲಿಕೆಯ ಮಹಾಪೌರರು ಪ್ರಶಸ್ತಿಯನ್ನು ಕೊಡುವ ಪುಣ್ಯದ ಕೆಲಸವನ್ನು ನೆರವೇರಿಸಿಕೊಟ್ಟರು. ಯಾರ ಹೆಸರನ್ನು ಕೂಗಿದರೆ ಇನ್ಯಾರೋ ಬಂದು ಕೂತು ಪ್ರಶಸ್ತಿ ಪಡೆಯುತ್ತಿದ್ದರು. ಯಾರು ಪ್ರಶಸ್ತಿ ಪುರಸ್ಕೃತರು, ಯಾರು ಅಲ್ಲ ಎನ್ನುವುದು ಅಲ್ಲಿರುವ ಆಯೋಜಕರಿಗೆ ಗೊತ್ತೇ ಇರಲಿಲ್ಲ. ಯಾರು ಬಲಬಳಸಿ ಬಂದು ಕೂಡುವರೋ ಅವರಿಗೆ ಅವಸರದಲ್ಲಿ ಹಾರ ಹಾಕಿ ಶಾಲು ಹೊದಿಸಿ ಕೆಂಪೇಗೌಡರ ಪುತ್ತಳಿಯನ್ನು ಕೈಗಿಡಲಾಗುತ್ತಿತ್ತು. ಒಂದೊಂದು ಸಲಕ್ಕೆ ಇಪ್ಪತ್ತು ಜನರನ್ನು ಕೂಡಿಸಿ ಪ್ರಶಸ್ತಿ ಹಂಚಲಾಗುತ್ತಿತ್ತು. ಅದನ್ನು ಪಡೆಯಲು ನೂಕುನುಗ್ಗಲು. ಯಾಕೆಂದರೆ ಕೊನೆಕೊನೆಗೆ ಪ್ರಶಸ್ತಿಗಳೇ ಸಿಗುವುದು ಡೌಟಾಗಿತ್ತು. ಮತ್ತು ಅದು ಸಾಬೀತೂ ಆಯಿತು. ತಂದಿದ್ದು ಮುನ್ನೂರು ಕೆಂಪೇಗೌಡರ ಸ್ಮರಣ ಫಲಕಗಳು, ಪ್ರಶಸ್ತಿ ಪಡೆಯಲು ಹೇಗೇಗೋ ಆಯ್ಕೆಯಾಗಿ ಬಂದವರು 507 ಜನ. ಎಲ್ಲರಿಗೂ ಫಲಕ ಕೊಡುವುದಾದರೂ ಹೇಗೆ? ಇರುವಷ್ಟನ್ನು ಕೊಟ್ಟು ಕೊನೆಗೆ ಅರ್ಜೆಂಟಲ್ಲಿ ಹೆಚ್ಚುವರಿಯಾಗಿ ತರಿಸಲಾದ ಹಾರ ಶಾಲುಗಳನ್ನಷ್ಟೇ ಕೊಡಲಾಯಿತು. ಸಿಕ್ಕವರು ಇಷ್ಟಾದರೂ ಸಿಕ್ಕಿತಲ್ಲಾ ಎಂದು ಅತೃಪ್ತಿಯಿಂದ ಅಷ್ಟಕ್ಕೆ ತೃಪ್ತಿಪಡಬೇಕಾಯಿತು. ಒಂದಿಷ್ಟು ಜನರಿಗೆ ಅದೂ ಸಿಗಲಿಲ್ಲ. ಪ್ರಶಸ್ತಿ ಪಡೆಯುವ ನೂಕುನುಗ್ಗಲು ಕೊನೆಯವರೆಗೂ ಕಡಿಮೆಯಾಗಲಿಲ್ಲ.

ಪ್ರಶಸ್ತಿ ಎಂದರೆ ಜಾತ್ರೆಯಲ್ಲಿ ಹಂಚುವ ಕಡ್ಲೇಪುರಿಯಾ? ಕಡ್ಲೆಪುರಿಗೆ ಇರುವ ಬೆಲೆಯೂ ಪ್ರಶಸ್ತಿಗಳಿಗೆ ಇಲ್ವಾ? ಅಧೀಕೃತವಾಗಿ ಪ್ರಶಸ್ತಿಗಳು ಘೋಷಣೆಯಾಗಿ ಪತ್ರಿಕೆಗಳಲ್ಲಿ ಹೆಸರುಗಳು ಪ್ರಕಟಗೊಂಡಮೇಲೂ ಪ್ರಶಸ್ತಿ ಬೇಕೆಂದು ಹಂಬಲಿಸುವವರು ನಿಜಕ್ಕೂ ಸಾಧಕರಾ? ನನಗೊಂದು ಪ್ರಶಸ್ತಿ ಕೊಡಿ ಎಂದು ಬೇಡಿಕೊಳ್ಳುವುದೇ ಅವಮಾನಕಾರಿಯಲ್ಲವಾ? ಪ್ರಶಸ್ತಿ ಎನ್ನುವುದು ವ್ಯಕ್ತಿಯೊಬ್ಬರ ಸಾಧನೆಯನ್ನು ಗುರುತಿಸಿ ಕೊಡುವಂತಹುದೇ ಹೊರತು ನನಗೊಂದು ಪ್ರಶಸ್ತಿ ಕೊಡಿಸಿ ಎಂದು ದುಂಬಾಲು ಬೀಳುವುದಲ್ಲ. ಇಂತಹ ಅಪಚಾರಗಲಾದಾಗಲೇ ಪ್ರಶಸ್ತಿ ಅನ್ನುವುದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ನಿಜವಾಗಿ ಸಾಧನೆ ಮಾಡಿದವರಿಗೆ ದೊರೆಯದೇ ಶಿಪಾರಸ್ಸು, ಒತ್ತಡ, ಒತ್ತಾಯಗಳನ್ನು ಮಾಡಿ ಒಳದಾರಿಗಳನ್ನು ಬಳಸಿದ ಸಾಧಕರ ಸೋಗಿನ ಸಮಯಸಾಧಕರಿಗೆ ಪ್ರಶಸ್ತಿ ದೊರೆತು ಪ್ರಶಸ್ತಿಯ ಮರ್ಯಾದೆ ಮೂರಾಬಟ್ಟೆಯಾಗುತ್ತದೆ. ನಿಜಕ್ಕೂ ಕೆಲವು ಜನ ಸಾಧಕರಿಗೂ ಪ್ರಶಸ್ತಿ ಸಿಕ್ಕಿರುವುದು ಸಂತಸದ ಸಂಗತಿ. ಆದರೆ ಬೆಳೆಗಿಂತ ಕಳೆಯೇ ಹೆಚ್ಚೆನ್ನುವಂತೆ ಮುಕ್ಕಾಲು ಪಾಲು ಅನರ್ಹರಿಗೆ ಪ್ರಶಸ್ತಿ ದೊರಕಿದ್ದು ಅಸಹ್ಯಕರ.

ಈ ಪ್ರಶಸ್ತಿ ಹಂಚುವ ಪ್ರಹಸನದಲ್ಲಿ ನಿಜವಾದ ಸಾಧಕರನ್ನು ಕರೆದು ಅವಮಾನ ಮಾಡಿದ್ದಂತೂ ಸತ್ಯ. ಹಾಗೂ ಇದು ಕೆಂಪೇಗೌಡರಿಗೂ ಮಾಡಿದ ಅವಮಾನವೂ ಆಗಿದೆ. ಕೆಲವು ಪ್ರಜ್ಞಾವಂತರು ಪ್ರಶಸ್ತಿ ಸಮಾರಂಭದ ಅಸಹ್ಯಗಳಿಗೆ ಹೇಸರಿಸಿಕೊಂಡು ಪ್ರಶಸ್ತಿ ಪಡೆಯದೇ ಹೋಗಿದ್ದು ಈ ಸಮಾರಂಭ ಅದೆಷ್ಟು ಸಂವೇದನಾರಹಿತವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಹೀಗೆಯೇ ಕೆಂಪೇಗೌಡರ ಹೆಸರಿನ ಪ್ರಶಸ್ತಿ ಅಪಮೌಲೀಕರಣಗೊಳ್ಳುವುದೇ ಆದರೆ ಅದನ್ನು ರದ್ದು ಮಾಡುವುದೇ ಉತ್ತಮ. ಬೆಂಗಳೂರಿನ ಜನರು ಪರಿಶ್ರಮದಿಂದ ಕಟ್ಟಿದ ಎರಡು ಕೋಟಿಯಷ್ಟು ತೆರಿಗೆಯ ಹಣ ಪ್ರತಿ ವರ್ಷ ಪ್ರಶಸ್ತಿಯ ಹೆಸರಲ್ಲಿ ಹೀಗೆ ಪೋಲಾಗುವುದಾದರೂ ತಪ್ಪುತ್ತದೆ. ಕಳೆದ ವರ್ಷ 150 ಜನರಿಗೆ ಅಧೀಕೃತವಾಗಿ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಕೊಟ್ಟಿದ್ದು 200 ಜನರಿಗೆ. ಆಗಲೂ ಹೀಗೆಯೇ ಪ್ರಶಸ್ತಿ ಪ್ರಧಾನ ಸಮಾರಂಭ ಗೊಂದಲದ ಗೂಡಾಗಿತ್ತು. ಅದರಿಂದ ಪಾಠ ಕಲಿಯದ ಪಾಲಿಕೆಯು ಈ ಸಲ ಐನೂರಕ್ಕೂ ಹೆಚ್ಚು ಜನಕ್ಕೆ ಪ್ರಶಸ್ತಿಯನ್ನು ಹಂಚಿ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಂಡಂತಾಯ್ತು.


ಹೋಗಲಿ.. ಪ್ರಶಸ್ತಿಯ ಜೊತೆಗೆ ಕೊಡಮಾಡುವ ಇಪ್ಪತ್ತೈದು ಸಾವಿರ ರೂಪಾಯಿಗಳೂ ಸಹ ಈ ಸಲ ಯಾರಿಗೂ ದೊರಕುತ್ತಿಲ್ಲ. ಯಾಕೆಂದರೆ ಕೆಲವು ಪ್ರಶಸ್ತಿ  ಪುರಸ್ಕೃತರು ಕೆಂಪೇಗೌಡ ಪ್ರಶಸ್ತಿಯ ಹಣವನ್ನು ಕೊಡಗು ಸಂತ್ರಸ್ತರ ಪರಿಹಾರಕ್ಕೆ ಕೊಡಲು ಪಾಲಿಕೆಗೆ ಮನವಿ  ಮಾಡಿಕೊಂಡಿದ್ದಾರಂತೆ. ಆದ್ದರಿಂದ ಪ್ರಶಸ್ತಿಯ ಜೊತೆಗೆ ಕೊಡಲು ತೆಗೆದಿರಿಸಿದ್ದ ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಲು ಬಿಬಿಎಂಪಿ ನಿರ್ಧರಿಸಿದೆಯಂತೆ. ಆದರೆ.. ಎಲ್ಲಾ ಐನೂರು ಜನ ಪುರಸ್ಕೃತರೂ ತಮಗೆ ದೊರೆಯಬಹುದಾದ ಗೌರವಧನವನ್ನು ಕೊಡುತ್ತೇವೆಂದು ಎಲ್ಲೂ ಹೇಳಿಲ್ಲ. ಪ್ರಶಸ್ತಿ ಪುರಸ್ಕೃತರಲ್ಲಿ ಅನುಕೂಲಸ್ತರಾದವರು ಪರಿಹಾರ ಕಾರ್ಯಕ್ಕೆ ಪ್ರಶಸ್ತಿಯ ಹಣ ಕೊಟ್ಟಿದ್ದು ಅವರ ಮಾನವೀಯ ತುಡಿತವನ್ನು ತೋರಿಸುತ್ತದೆ. ಆದರೆ ಪ್ರಶಸ್ತಿ ಪಡೆದ ಎಲ್ಲರೂ ಸ್ಥಿತಿವಂತರಲ್ಲ. ಕೆಲವರು ಆರ್ಥಿಕ ಸಮಸ್ಯೆಯಿಂದ ನರಳುತ್ತಿದ್ದಾರೆ, ಇನ್ನು ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರಶಸ್ತಿಯ ಜೊತೆಗೆ ಬರುವ ಹಣ ತಮ್ಮ ತಾಪತ್ರಯ ನೀಗುವಲ್ಲಿ ಒಂದಿಷ್ಟು ಸಹಾಯಕ್ಕೆ ಬಂದೀತು ಎಂಬ ನಿರೀಕ್ಷೆಯಲ್ಲಿದ್ದವರೂ ಇದ್ದಾರೆ. ಆದರೆ ಕೆಲವೇ ಕೆಲವು ಜನರು ಒತ್ತಾಯಿಸಿದ್ದಾರೆಂದು ಹೇಳಿ ಎಲ್ಲರ ಪ್ರಶಸ್ತಿಯ ಹಣವನ್ನೂ ಪರಿಹಾರ ನಿಧಿಗೆ ಕೊಡುವ ನಿರ್ಣಯವನ್ನು ಬಿಬಿಎಂಪಿ ತೆಗೆದುಕೊಂಡಿದ್ದೂ ಸಹ ಏಕಪಕ್ಷೀಯವಾಗಿದೆ. ಪ್ರಶಸ್ತಿ ಹಣ ಯಾವಾಗ ಕೊಡುತ್ತೀರಾ? ಎಂದು ಕೇಳಿದವರಿಗೆ ಈಗ ಅದೆಲ್ಲಾ ಸಿಗೋದಿಲ್ಲಾ, ಪರಿಹಾರ ನಿಧಿಗೆ ಕೊಡಲಾಗಿದೆ ಎನ್ನುವ ಉತ್ತರ ಪಾಲಿಕೆಯ ಅಧಿಕಾರಿಗಳಿಂದ ದೊರೆಯುತ್ತಿದೆ. ಇದರಿಂದಾಗಿ ಹಲವರಿಗೆ ಅನ್ನುವ ಹಾಗೂ ಇಲ್ಲಾ ಅನುಭವಿಸು ಹಾಗೂ ಎಲ್ಲಾ ಎನ್ನುವಂತಹ ಧರ್ಮಸಂಕಟ ಕಾಡುತ್ತಿದೆ.

ನಮ್ಮ ಕನ್ನಡ ರಂಗಭೂಮಿಯ ಸಂಘಟಕರಾದ ಶ್ರೀಮಾನ್ ಕಪ್ಪಣ್ಣನವರು ಮಾತ್ರ ತಮ್ಮ ಸ್ವಭಾವಕ್ಕೆ ವಿರುದ್ಧವಾದ ನಿಲುವನ್ನು ಪ್ರಶಸ್ತಿ ಸ್ವೀಕಾರದ ಕುರಿತು ತೆಗೆದುಕೊಂಡು ಇಡೀ ರಂಗಭೂಮಿಯವರಲ್ಲಿ ಅಪಾರ ಅಚ್ಚರಿಯನ್ನು ಹುಟ್ಟಿಸಿ ಶಾಕ್ ಕೊಟ್ಟರು. ಅವರ ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿಯೊಂದನ್ನು ತಿರಸ್ಕರಿಸಿದ್ದರು. ಕೆಂಪೇಗೌಡರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅವರ ಹೆಸರು ಉಳಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಕಾರ್ಯಕ್ರಮಕ್ಕೊಂದು ಯೋಜನೆಯೂ ಇರಲಿಲ್ಲ. ಕೊಡಗು ಕೇರಳದಲ್ಲಿ ಸಂಕಟವಿರುವಾಗ ಇಷ್ಟೊಂದು ಅದ್ದೂರಿ ಸಮಾರಂಭ ಅಗತ್ಯವಿತ್ತೇ? ಎಂದು ಪ್ರಶ್ನಿಸಿದ ಕಪ್ಪಣ್ಣನವರು ತಮಗೆ ಕೊಟ್ಟ ಪ್ರಶಸ್ತಿಯನ್ನು ತಿರಸ್ಕರಿಸುತ್ತಿರುವೆ ಎಂದು ಹೇಳಿಕೆ ಕೊಟ್ಟರು. ಅದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಾಕ್ಸ್ ಐಟಂ ಆಗಿ ಪ್ರಿಂಟ್ ಆಯಿತು. ಅರೆರೆ.. ಕಪ್ಪಣ್ಣನವರಿಗೆ ಯಾವಾಗ ಪ್ರಶಸ್ತಿ ವ್ಯರಾಗ್ಯ ಬಂದಿತು? ಪ್ರಶಸ್ತಿ ಪಡೆಯುವುದಕ್ಕೆ ಹಪಹಪಿಸುವ ಈ ಹಿರಿಯ ಜೀವ ಈಗ ಅದನ್ನು ತಿರಸ್ಕರಿಸುವ ಮಾತಾಡುತ್ತದೆ ಎಂದರೆ ಕೊನೆಗಾಲದಲ್ಲಿ ಕಪ್ಪಣ್ಣ ಬದಲಾಗಿದ್ದಾರೆ ಎನ್ನುವ ಸಂದೇಹ ಕೆಲವರನ್ನು ಕಾಡತೊಡಗಿತು.

ಈ ಪ್ರಶಸ್ತಿ ಘೋಷಣೆಯಾದಾಗಲೇ ಸಕಾರಣವಾಗಿ ತಿರಸ್ಕರಿಸಿದ್ದರೆ ಕಪ್ಪಣ್ಣನವರ ಮಾತಿನ ಮೇಲೆ ನಂಬಿಕೆ ಬರಬಹುದಾಗಿತ್ತು. ಕೊನೆಯ ಕ್ಷಣದವರೆಗೂ ಮೌನವಹಿಸಿ ಪ್ರಶಸ್ತಿಯನ್ನು ನಿರಾಕರಿಸುವೆ ಎಂದು ಹೇಳುವ ಅಗತ್ಯವಿರಲಿಲ್ಲ. ಪಾಲಿಕೆಯ ಈ ಪ್ರಶಸ್ತಿಯನ್ನು ಮೊದಲೇ ಒಪ್ಪಲೇಬಾರದಿತ್ತು. ಯಾಕೆಂದರೆ.. ಎಂದಾದರೂ ಮಂತ್ರಿ ಮುಖ್ಯಮಂತ್ರಿಯಾದವರು ಮತ್ತೆ ಮುನ್ಸಿಪಾಲಿಟಿ ಸದಸ್ಯರಾಗಲು ಬಯಸುತ್ತಾರೆಯೇ? ಎಂದಾದರೂ ರಾಜ್ಯಪ್ರಶಸ್ತಿಯ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು ಪಾಲಿಕೆ ಪ್ರಶಸ್ತಿಗೆ ಆಸೆ ಪಡುತ್ತಾರೆಯೇ? ಆದರೆ ನಮ್ಮ ಕಪ್ಪಣ್ಣನವರು ಈಗಾಗಲೇ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದಾರೆ, ರಂಗಭೂಮಿಯ ಪ್ರತಿಷ್ಟಿತ ಬಿ.ವಿ.ಕಾರಂತ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೂ ಈ ಲೋಕಲ್ ಪ್ರಶಸ್ತಿ ಬಂದಾಗಿ ಅದೂ ಇರಲಿ ಎಂದು ಮಾತಾಡದೇ ಮೌನವಹಿಸಿದ್ದಾರೆ. ಕೊನೆಗೆ ಪ್ರಶಸ್ತಿಯನ್ನು ಕುಂಟು ನೆಪಗಳನ್ನು ಹೇಳಿ ತಿರಸ್ಕರಿಸುವ ಹೇಳಿಕೆ ನೀಡಿದ್ದಾರೆ. 



ಪ್ರಜಾವಾಣಿ ಪತ್ರಿಕೆಯಲ್ಲಿ ಕಪ್ಪಣ್ಣನವರ ಪ್ರಶಸ್ತಿ ತಿರಸ್ಕಾರದ ಸುದ್ದಿ ಓದಿದಾಗ ಕಪ್ಪಣ್ಣನವರನ್ನು ಬಲ್ಲ ಹಲವರಿಗೆ ಇದನ್ನು ನಂಬಲಾಗಲಿಲ್ಲ. ಕೆಲವರು ಕಪ್ಪಣ್ಣನವರು ಉತ್ತಮ ನಿರ್ಧಾರ ತೆಗೆದುಕೊಂಡು ಬಿಬಿಎಂಪಿಯ ಕಪಾಳಕ್ಕೆ ಹೊಡೆದಂತೆ ಪ್ರಶಸ್ತಿ ತಿರಸ್ಕರಿಸಿ ಮಾದರಿಯಾಗಿದ್ದಾರೆಂದು ನಂಬಿಕೊಂಡರು. ಆದರೆ.. ಅಲ್ಲಿ ಆಗಿದ್ದೇ ಬೇರೆ.  ಕಪ್ಪಣ್ಣ ಸಾಹೇಬರು ಎರಡನೇ ಬ್ಯಾಚಿನಲ್ಲೇ ಹೋಗಿ ಪ್ರಶಸ್ತಿ ಪಡೆಯುವವರ ಸಾಲಿನಲ್ಲಿ ಕೂತು ಹಾರ ಶಾಲು ಹಾಕಿಸಿಕೊಂಡು ಕೆಂಪೇಗೌಡರ ಪುತ್ತಳಿಯನ್ನು ಹಿಡಿದುಕೊಂಡು ಕೂತಿದ್ದರು. ಹಾಗೆ ಪ್ರಶಸ್ತಿಯನ್ನು ಪಡದುಕೊಂಡ ಕೆಲವೇ ನಿಮಿಷಗಳ ನಂತರ ಪ್ರಶಸ್ತಿಯನ್ನು ತಿರಸ್ಕರಿಸುತ್ತೇನೆಂದು ಪತ್ರಿಕೆಯವರ ಮುಂದೆ ಅವಲತ್ತುಕೊಂಡರು. ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪಡೆಯುವವರೆಗೂ ಕೊಡಗಿನ ಸಂತ್ರಸ್ತರ ಸಂಕಟದ ಅರಿವಿಲ್ಲದ ಕಪ್ಪಣ್ಣನವರಿಗೆ ಪ್ರಶಸ್ತಿ ಪಡೆದ ನಂತರ ಜ್ಞಾನೋದಯವಾಗಿ ಅರಿವಿಗೆ ಬಂದಿದ್ದೊಂದು ವಿಸ್ಮಯ.  ಪ್ರಶಸ್ತಿಯನ್ನು ಪಡೆಯಲು ಸಂಭ್ರಮದಿಂದಲೇ ಬಂದ ಕಪ್ಪಣ್ಣ ಯಾಕೆ ತಮ್ಮದೇ ನಿರ್ಧಾರ ಬದಲಿಸಿ ಪುರಸ್ಕೃತರಾದ ನಂತರ ಪ್ರಶಸ್ತಿ ತಿರಸ್ಕರಿಸಿದರು. ಕಪ್ಪಣ್ಣನವರನ್ನು ಹತ್ತಿರದಿಂದ ಬಲ್ಲವರಿಗೆ ಇದರಲ್ಲಿ ಅಚ್ಚರಿ ಪಡುವಂತಹುದೇನೂ ಇಲ್ಲಾ. ಅವರು ಯಾವಾಗ ಬೇಕಾದರೂ ತಮ್ಮ ಹೇಳಿಕೆ, ಬದ್ದತೆ ಹಾಗೂ ನಿಷ್ಟೆಯನ್ನು ಪೂರ್ವಸೂಚನೆ ಇಲ್ಲದೇ ಬದಲಿಸಬಲ್ಲರು. ರಂಗರಾಜಕಾರಣವನ್ನು ಅರೆದು ಕುಡಿದ ಕಪ್ಪಣ್ಣನವರಿಗೆ ಇದೆಲ್ಲಾ ಮಾಮೂಲು. ಏನಾದರಾಗಲಿ ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವ ಅಜೆಂಡಾವನ್ನೇ ಜೆಂಡಾ ಮಾಡಿಕೊಂಡು ಬಂದ ಕಪ್ಪಣ್ಣ ಅದಕ್ಕಾಗಿ ಯಾವಾಗಲೂ ಹಪಹಪಿಸುವುದು ಮುಚ್ಚಿಟ್ಟ ವಿಷಯವೇನಲ್ಲಾ.

ಇಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು? ಮುಖ್ಯಮಂತ್ರಿಯವರು ಬಂದು ಪ್ರಶಸ್ತಿ ಕೊಡುತ್ತಾರೆಂದು ಕಪ್ಪಣ್ಣ ಅಂದುಕೊಂಡಿದ್ದರು. ಅವರು ಬರದೇ ಇದ್ದಾಗ ನಿರಾಸೆಕಾಡಿತು. ಮೊಟ್ಟ ಮೊದಲ ಬ್ಯಾಚಿನಲ್ಲೇ ತಮ್ಮನ್ನು ಕರೆದು ಸನ್ಮಾನಿಸಿ ಗೌರವಿಸುತ್ತಾರೆಂದು ಕನಸು ಕಟ್ಟಿದ್ದರು. ಅದೂ ಆಗಲಿಲ್ಲ. ಯಾವಾಗ ಮೊದಲ ಸಾಲಿನ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವೆಂದು ಗೊತ್ತಾಯಿತೋ ಆಗ ಓಡಿ ಹೋಗಿ ನೋಡಿದರೆ ಮೂರನೇಯದೋ ನಾಲ್ಕನೆಯದೋ ಬ್ಯಾಚಿನಲ್ಲಿ ಅವರ ಹೆಸರಿತ್ತು. ಇದರಿಂದ ಆತಂಕಗೊಂಡ ಅವರು ಕೆಲವರನ್ನು ಗೋಗರೆದು ಎರಡನೇ ಬ್ಯಾಚಿನ ಸಾಲಿನಲ್ಲಿ ತಮ್ಮ ಹೆಸರು ಸೇರುವಂತೆ ನೋಡಿಕೊಂಡರು. ತಮ್ಮನ್ನು ಒಬ್ಬ ಗಣ್ಯಮಾನ್ಯರಂತೆ ಪರಿಗಣಿಸಿ ಗೌರವಿಸುತ್ತಾರೆಂಬ ಕಪ್ಪಣ್ಣನವರ ಆಸೆ ಈಡೇರಲೇ ಇಲ್ಲಾ. ಆ ಪ್ರಶಸ್ತಿಯ ಜಾತ್ರೆಯಲ್ಲಿ ಯಾರೂ ಅವರನ್ನು ಕ್ಯಾರೇ ಅನ್ನುವವರೇ ಇರಲಿಲ್ಲ. ಎಲ್ಲರಿಗೂ ಎಸೆದಂತೆ ಪ್ರಶಸ್ತಿಯನ್ನು ಕಪ್ಪಣ್ಣನವರಿಗೂ ಹಂಚಲಾಯಿತು. ಪ್ರಶಸ್ತಿ ಜೊತೆಗೆ ಕೊಡಮಾಡುವ ಹಣವಾದರೂ ಸಿಗುತ್ತದೆಂಬ ಆಸೆಯೂ ನಿರಾಸೆಯಾಗಿ ಅದೂ ಪರಿಹಾರ ನಿದಿಯ ಪಾಲಾಯ್ತು. ಇದೆಲ್ಲದರಿಂದಾಗಿ ಕಪ್ಪಣ್ಣನವರ ಈಗೋಗೆ ಸಿಕ್ಕಾಪಟ್ಟೆ ಹರ್ಟ ಆಯಿತು.

ಇದ್ದಕ್ಕಿದ್ದಂತೆ ಈ ಪ್ರಶಸ್ತಿಯೇ ಸರಿಯಿಲ್ಲಾ, ಕೊಡುವವರೂ ಸರಿಯಿಲ್ಲಾ, ತಮಗೆ ಗೌರವದಿಂದ ನಡೆಸಿಕೊಂಡಿಲ್ಲಾ ಎಂಬ ಅರಿವಾಯಿತು. ಹೊರಗೆ ಬಂದವರೆ ತಮ್ಮ ಪರಿಚಯದ ಪತ್ರಕರ್ತರ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಪ್ರಶಸ್ತಿ ಕೊಟ್ಟ ರೀತಿ ಸರಿಯಿಲ್ಲ ಎಂದು ಹೇಳಬಹುದಾಗಿತ್ತು.  ಆದರೆ ಆಗಷ್ಟೇ ಪ್ರಶಸ್ತಿಯನ್ನು ಪಡೆದುಕೊಂಡು ಅದನ್ನು ತಿರಸ್ಕರಿಸುತ್ತೇನೆ ಎಂದು ಘೋಷಿಸಿಕೊಂಡಿದ್ದು ಹಾಸ್ಯಾಸ್ಪದವಾಗಿ ಕಂಡಿತು. ಪತ್ರಿಕೆಯ ಪ್ರಂಟ್ ಪೇಜಲ್ಲಿ ಅದು ಪ್ರಕಟಗೊಂಡಿತು. ಅದನ್ನು ಓದಿದವರು ಕಪ್ಪಣ್ಣನವರು ಪ್ರಶಸ್ತಿಯನ್ನು ಪಡೆಯದೇ ತಿರಸ್ಕರಿದರು ಎಂದೇ ತಿಳಿದುಕೊಂಡರು. ಆದರೆ ಪ್ರಶಸ್ತಿಯನ್ನು ಪಡೆದುಕೊಂಡು ನಂತರ ತಿರಸ್ಕರಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದು ಬಹುತೇಕ ಜನರಿಗೆ ಗೊತ್ತಾಗಲೇ ಇಲ್ಲ. ಈಗ ಕೇಳಿದವರಿಗೆ ನಾನು ಪ್ರಶಸ್ತಿಯನ್ನು ಬಿಬಿಎಂಪಿಗೆ ವಾಪಸ್ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಮನೆಗೆ ತೆಗೆದುಕೊಂಡು ಹೋದ ಗಾಜಿನ ಚೌಕಟ್ಟಿನಲ್ಲಿರುವ ಕೆಂಪೇಗೌಡರ ಪುತ್ತಳಿ ಗಹಗಹಿಸಿ ನಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಹಸನಕ್ಕಿಂತಾ ಕಪ್ಪಣ್ಣನವರ ಪ್ರಶಸ್ತಿ ನಿರಾಕರಣೆ ಪ್ರಸಂಗ ಮನರಂಜನಾತ್ಮಕವಾಗಿದೆ.

ಈ ಸಲ ಕೆಂಪೇಗೌಡ ಪ್ರಶಸ್ತಿ ಪಡೆದ ಇನ್ನೊಬ್ಬ ಹೆಸರಾಂತ ರಂಗಕರ್ಮಿಯನ್ನು ಕೆಂಪೇಗೌಡ ಪ್ರಶಸ್ತಿ ಪಡೆದುಕೊಂಡಿರಾ? ಎಂದು ಕೇಳಿದರೆ. ನಾನಂತೂ ಪ್ರಶಸ್ತಿಯನ್ನು ತಿರಸ್ಕರಿಸೋದಿಲ್ಲ. ಆದರೆ ಆ ಗದ್ದಲದಲ್ಲಿ ಹೋಗಿ ತೆಗೆದುಕೊಳ್ಳಲು ಮನಸ್ಸಿಲ್ಲ. ಪಾಲಿಕೆಯವರೇ ನಮ್ಮ ಮನೆಗೆ ಪ್ರಶಸ್ತಿಯನ್ನು ತಂದುಕೊಡುತ್ತಾರೆ ಬಿಡಿ ಎಂದು ಬೇಸರದಿಂದಲೇ ಹೇಳಿದರು. ಅವರಿಗೆ ಈ ಗೊಂದಲಾಪುರದ ಅವಮಾನಕರವಾದ ಸಂತೆಯಲ್ಲಿ ಪ್ರಶಸ್ತಿ ಪಡೆದುಕೊಂಡೆ ಎಂದು ಹೇಳಲೂ ನಾಚಿಕೆಯಾಗುವಷ್ಟು ಪ್ರಶಸ್ತಿ ಪ್ರದಾನ ಸಮಾರಂಭ ಅದ್ವಾನವಾಗಿತ್ತು. ಕೆಲವರು ಪ್ರಶಸ್ತಿ ಪಡೆಯಲು ಬಂದು ಅಲ್ಲಿರುವ ಈ ಎಲ್ಲಾ ಅಸಹ್ಯಗಳನ್ನು ನೋಡಿ ತಮಗೆ ಈ ಪ್ರಶಸ್ತಿ ಯೋಗ್ಯವಾದುದಲ್ಲ ಎಂದುಕೊಂಡು ಪ್ರಶಸ್ತಿ ಪಡೆಯದೇ ಹೊರಟುಹೋಗಿ ತಮ್ಮ ಮೌನ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.  ಇನ್ನೂ ಹೇಳಿದರೆ ಇಂತಹ ಹಲವಾರು ಪ್ರಹಸನಗಳು ಬಿಚ್ಚಿಕೊಳ್ಳುತ್ತವೆ. ಆದರೆ ಈ ಬಿಬಿಎಂಪಿಗೆ ಯಾವಾಗ ಬುದ್ದಿ ಬರುತ್ತದೋ ಗೊತ್ತಿಲ್ಲ. ಪ್ರತಿ ವರ್ಷ ಇದೇ ರೀತಿ ಕೆಂಪೇಗೌಡರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾಗುವವರ ಸಂಖ್ಯೆಯನ್ನು ಪ್ರತಿ ವರ್ಷ ಏರಿಸುತ್ತಲೇ ಇರುತ್ತಾರೆ. ಪ್ರಶಸ್ತಿ ಪಡೆದುಕೊಳ್ಳ ಬಯಸುವ ಕೆಲವರಂತೂ ಆ ಪ್ರಶಸ್ತಿಗೆ ತಾವು ಅರ್ಹರಲ್ಲ, ತಮ್ಮ ಸಾಧನೆ ಏನೇನೂ ಸಾಲದು ಎಂದು ಗೊತ್ತಿದ್ದರೂ ಅದನ್ನು ಯಾವುಯಾವುದೋ ಮಾರ್ಗದಿಂದ ಪಡೆದುಕೊಳ್ಳಲು ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಂಡು ಪ್ರಯತ್ನಿಸುತ್ತಾರೆ.

ಕೆಂಪೇಗೌಡರಿಗೆ ಅಪಮಾನ ಮಾಡುವಂತಹ ರೀತಿಯಲ್ಲಿ ನಡೆಯುತ್ತಿರುವ ಈ ಪ್ರಶಸ್ತಿ ಸಮಾರಂಭವನ್ನೇ ರದ್ದುಪಡಿಸಬೇಕು. ಹೀಗೆ ಬೇಕಾಬಿಟ್ಟಿ ಪ್ರಶಸ್ತಿಗಳನ್ನು ಒತ್ತಾಯ ತಂದವರಿಗೆಲ್ಲಾ ಅವರ ಅರ್ಹತೆಯನ್ನು ಒರೆಗೆ ಹಚ್ಚಿ ನೋಡದೇ ಹಂಚಿಕೆ ಮಾಡುವ ಕ್ರಮವನ್ನಾದರೂ ಬದಲಾಯಿಸಬೇಕು. ಅದಕ್ಕೆ ಪ್ರತಿ ವರ್ಷ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿಯೊಂದನ್ನು ಮಾಡಬೇಕು. ಆ ಸಮಿತಿಗೆ ಬೇರೆ ಬೇರೆ ಕ್ಷೇತ್ರಗಳಿಂದಾಯ್ದ ಹತ್ತು ಜನ ಹಿರಿಯ ಪ್ರಜ್ಞಾವಂತ ಸಾಧಕರನ್ನು ಸದಸ್ಯರನ್ನಾಗಿಸಬೇಕು ಹಾಗೂ ಅವರ ಹೆಸರನ್ನು ಗುಪ್ತವಾಗಿಡಬೇಕು. ಪಾಲಿಕೆಗೆ ಬಂದ ಎಲ್ಲಾ ಶಿಪಾರಸ್ಸುಗಳನ್ನು ಹಾಗೂ ಪ್ರಶಸ್ತಿ ಆಕಾಂಕ್ಷಿಗಳ ಸಾಧನೆಯ ವಿವರಗಳನ್ನು ಕಮಿಟಿಯವರಿಗೆ ತಲುಪಿಸಬೇಕು. ಗರಿಷ್ಟ ನೂರು ಜನ ಸಾಧಕರನ್ನು ಬೇರೆ ಬೇರೆ ಕ್ಷೇತ್ರಗಳಿಂದ ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಆ ಸಮಿತಿಯವರಿಗೆ ಕೊಡಬೇಕು. ಸಮಿತಿಯು ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡಿ ಪಾಲಿಕೆಯ ಆಯುಕ್ತರಿಗೆ ಪಟ್ಟಿ ಕೊಡಬೇಕು ಹಾಗೂ ಅದನ್ನು ಪಾಲಿಕೆ ಪತ್ರಿಕೆಗೆ ಬಿಡುಗಡೆ ಮಾಡಬೇಕು. ಪ್ರಶಸ್ತಿ ಬೇಕೆಂದು ಯಾರೇ ಎಷ್ಟೇ ಒತ್ತಡ ತೆಗೆದುಕೊಂಡು ಬಂದರೂ ಅದು ಸಮಿತಿಯವರ ಆಯ್ಕೆಗೆ ಬಿಟ್ಟಿದ್ದು, ಪಾಲಿಕೆಯವರು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು. ಈಗ ಐನೂರರಲ್ಲಿ ಐವತ್ತು ಜನ  ಸಾಧಕರು ಪ್ರಶಸ್ತಿಗೆ ಅರ್ಹರು ಇದ್ದರೆ, ಸಮಿತಿ ಮಾಡಿದಾಗ ನೂರು ಜನರಲ್ಲಿ ತೊಂಬತ್ತು ಜನ ನಿಜವಾದ ಸಾಧಕರಿಗೆ ಪ್ರಶಸ್ತಿ ದೊರೆಯಲು ಸಾಧ್ಯವಾಗುತ್ತದೆ. ಪ್ರಶಸ್ತಿಯ ಆಯ್ಕೆಯಲ್ಲಿ ಯಾವಾಗ ರಾಜಕೀಯದವರ ಹಸ್ತಕ್ಷೇಪ ಹಾಗೂ ಪ್ರಭಾವಿಗಳ ಶಿಪಾರಸ್ಸುಗಳು ತಪ್ಪುತ್ತವೆಯೋ ಆಗ ಕೆಂಪೇಗೌಡ ಪ್ರಶಸ್ತಿಗೆ ನಿಜವಾಗಿಯೂ ಉನ್ನತ ಮೌಲ್ಯ ಬರುತ್ತದೆ. ಕೆಂಪೇಗೌಡರ ಹೆಸರಿಗೂ ಒಂದು ಬೆಲೆ ಇರುತ್ತದೆ. ಮಹಾನಗರ ಪಾಲಿಕೆಗೂ ಒಂದು ಗೌರವ ಸಿಗುತ್ತದೆ. ಪ್ರಶಸ್ತಿ ಪಡೆದವರಿಗೂ ತೃಪ್ತಿ ದೊರೆಯುತ್ತದೆ. ಇದೆಲ್ಲಾ ಈ ವ್ಯವಸ್ಥೆಯಲ್ಲಿ ಆಗುವುದು ಅಸಾಧ್ಯವಾದರೂ ಕನಸು ಕಾಣುವುದರಲ್ಲಿ ತಪ್ಪೇನೂ ಇಲ್ಲವಲ್ಲಾ?


                   -ಶಶಿಕಾಂತ ಯಡಹಳ್ಳಿ.    


  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ