ಬುಧವಾರ, ಸೆಪ್ಟೆಂಬರ್ 12, 2018

ಅಕಾಡೆಮಿ ಅಧ್ಯಕ್ಷರ ಅಸಂಗತ ಪ್ರಸಂಗ: (ಪ್ರಹಸನ)



(ನಾಟಕ ಅಕಾಡೆಮಿಯ ಕಛೇರಿಯ ಲಾಬಿಯಲ್ಲಿ ಅಕಾಡೆಮಿ ಅಧ್ಯಕ್ಷರು ಅಪರೂಪಕ್ಕೆ ಕೂಲ್ ಮೂಡಲ್ಲಿ ವಿರಾಜಮಾನರಾಗಿದ್ದಾರೆ. ಆಗ ಸುಮಾರು ಎಂಬತ್ತು  ವರ್ಷದ ವ್ಯಕ್ತಿಯೊಬ್ಬರು ವಿನೀತಭಾವದಿಂದ  ಪ್ರವೇಶಿಸಿ..)

ವ್ಯಕ್ತಿ : (ಮೆಲ್ಲಗಿನ ದ್ವನಿಯಲ್ಲಿ)  ಸಾರ್…  ನಮಸ್ಕಾರ ಸಾರ್... 

ಅಧ್ಯಕ್ಷರು : (ಜೋರಾಗಿ ನಾಟಕೀಯತೆಯಿಂದಾ) ಓಹೋಹೋ ನಮಸ್ಕಾರ... ಬರಬೇಕು ಬರಬೇಕು ಹಿರಿಯರು.. ಕೂತ್ಕೊಳ್ಳಿ... ಹೇಳಿ ಏನಾಗಬೇಕಿತ್ತು..

ವ್ಯಕ್ತಿ : (ಹೆದರಿ ಎರಡು ಹಜ್ಜೆ ಹಿಂದಿಟ್ಟು.. ಮುಂದೆ ಬಂದು ಸೋಫಾದ ಮೂಲೆಯಲ್ಲಿ ಆತಂಕದಿಂದ ಕುಳಿತುಕೊಳ್ಳುತ್ತಾ) ಸಾರ್.. ಅದು..ಅದು.. 

ಅಧ್ಯಕ್ಷರು : ಅಯ್ಯೋ  ಪರವಾಗಿಲ್ಲ ಹೇಳ್ರಿ.. ಏನಾಗಬೇಕಿತ್ತು...

ವ್ಯಕ್ತಿ : ಅಂತಾದ್ದೇನಿಲ್ಲ ಸರ್... ಅಧ್ಯಕ್ಷರನ್ನ ಕಾಣಬೇಕಿತ್ತು...

ಅಧ್ಯಕ್ಷರು : ಪರವಾಗಿಲ್ಲ ಅಂತಾ ಹೇಳಿದ್ನಲ್ಲಾ.. ಅದೇನಾಗಬೇಕಿತ್ತು  ಅದನ್ನ ಮೊದಲು ಹೇಳ್ರೀ..

ವ್ಯಕ್ತಿ : ಸಾರ್... ಅದು.. ಅದು ಏನಂದ್ರೆ... ಅದು...

ಅಧ್ಯಕ್ಷರು : ಇಲ್ಲಿಗೆ ಯಾಕೆ ಬಂದ್ರಿ ಅನ್ನೋದೆ ಮರ್ತಿರೋ ಹಾಗೆ ಕಾಣ್ಸುತ್ತೆ. ಎಷ್ಟೇ ಆದ್ರೂ ನಿಮಗೂ ತುಂಬಾ ವಯಸ್ಸಾಗಿದೆ, ವಯಸ್ಸಲ್ಲಿ ಮರೆವು ಸಹಜ... ಈಗ ನೋಡ್ರಿ ನನ್ನಂತಾ ನನಗೇನೇ ಯಾರ ಹೆಸರೂ ನೆನಪೇ ಇರೋದಿಲ್ಲ..  ವಿದ್ಯಾರಣ್ಯನಿಗೆ ಹಿರಣ್ಣಯ್ಯ ಅಂತೇನೆ.. ಗಣೇಶ ಅನ್ನೋರಿಗೆ ದಿನೇಶಾ ಅಂತೇನಿ.. ಇನ್ಯಾರಿಗೋ ಮತ್ತೇನೋ ಕರೀತೇನೆ.. ಇನ್ನು ನಿಮಗೆ ಮರೆವು ಅದೂ ವಯಸ್ಸಲ್ಲಿ ಸಹಜ ಬಿಡಿ... ನಿಧಾನವಾಗಿ ನೆನಪಿಸಿಕೊಂಡು ಹೇಳಿ... ಅಂದಂಗೆ ನಿಮ್ಮ ಹೆಸರೇನು ಯಜಮಾನ್ರೆ..

ವ್ಯಕ್ತಿ : ಸಾರ್.. ನನ್ನ ಹೆಸರು ಏನಂತಾ ಕೇಳಿದ್ರಾ? ವೆಂಕಟಶೇಷಾದ್ರಿ ಅಚ್ವುತ್ ಆಚಾರಿ ಅಂತಾ ಸಾರ್.. ನಾನು ವೃತ್ತಿ ರಂಗಭೂಮಿ ಕಲಾವಿದಾ, ಕಾಲದಲ್ಲಿ ಎಷ್ಟೊಂದು ನಾಟಕ ಮಾಡಿದ್ದೀನಿ... ಎಷ್ಟೊಂದು ಪಾತ್ರಾ ಹಾಕೀದೀನಿ. ಭಕ್ತ ಪ್ರಹ್ಲಾದ ನಾಟಕದಾಗ ದುರ್ಯೋಧನನ ಪಾತ್ರ ಅದ್ಬುತವಾಗಿ ಮಾಡ್ತಿದ್ದೆ...

ಅಧ್ಯಕ್ಷರು : ನಾಟಕಕ್ಕೂ ದುರ್ಯೋಧನನಿಗೂ ಏನ್ರೀ ಕನೆಕ್ಷನ್ನು.. ಬಹುಷಃ  ಎಲ್ಲಿರುವನು ನಿನ್ನ ಹರಿ’ ಎಂದು ಅಬ್ಬರಿಸುವ  ಕೀಚಕನ ಪಾತ್ರ ಮಾಡಿರಬಹುದು ನೀವು ಆರಾಧ್ಯರೆ..

ವ್ಯಕ್ತಿ : ನಾನು ಆರಾಧ್ಯ ಅಲ್ಲಾ ಸಾರ್ ಆಚಾರಿ ಅಂತಾ.. ಅದು ಕೀಚಕನ ಪಾತ್ರ  ಅಲ್ಲಾ.. ಅದು ಅದು.. ಹಾಂ ನೆನಪಾಯ್ತು.. ಹಿರಣ್ಯಕಶಪು ಪಾತ್ರ... ಆಹಾ ಗದೆ ಹಿಡ್ಕೊಂಡು ಸ್ಟೇಜಿಗೆ ಬಂದ್ರೆ ನಾಟಕ ಮುಗಿಯೋವರೆಗೂ ಜನಾ ಸಿಳ್ಳೆ ಹೊಡಿತಾನೇ ಇರ್ತಿದ್ರು.. ಚೆಪ್ಪಾಳೆ ಹೊಡೀತಾನೇ ಇರ್ತಿದ್ರು.. ಇನ್ನೂ ಆ ಸಿಳ್ಳೆ ಚಪ್ಪಾಳೆಗಳ ಸದ್ದು ನನ್ನ ಕಿವಿಯಲ್ಲಿ ಗುಣುಗುಣುಸ್ತಾನೇ ಇವೆ..

ಅಧ್ಯಕ್ಷರು : ಹೌದೌದು.. ಪಾತ್ರದ ತಾಕತ್ತೇ ಅಂತಾದ್ದು.. ನಿಮ್ಮಂತಾ ದೊಡ್ಡ ಕಲಾವಿದರು ಅಕಾಡೆಮಿ ಕಡೆ ಯಾಕೆ ಬಂದ್ರಿ.. ಈಗಲಾದ್ರೂ ಏನಾದ್ರೂ ನೆನಪಾಯ್ತಾ ಅಯ್ಯಂಗಾರರೆ..

ವ್ಯಕ್ತಿ : ಅಯ್ಯೋ ಅಯ್ಯಂಗಾರ ಅಲ್ಲಾ ಸಾರ್... ನಾನು ಆಚಾರ್, ಅಚ್ಚುತ ಆಚಾರಿ, ಇನ್ನೂ ಪೂರ್ತಿ ಹೆಸರು ಹೇಳಬೇಕೆಂದರೆ ವೆಂಕಟಶೇಷಾದ್ರಿ  ಅಚ್ಚುತ್ ಆಚಾರಿ.. ಊರ್ಪ್ ಕಲಾಕೇಸರಿ ನಟಭಯಂಕರ ಆಚಾರ್... 

ಅಧ್ಯಕ್ಷರು : ಓಹೋಹೋ ಗೊತ್ತಾಯ್ತು ಬಿಡಿ.. ಗೊತ್ತಾಯ್ತು.. ನಟಭಯಂಕರರು ಅಕಾಡೆಮಿಗೆ ಯಾಕೆ ಬಂದಿದ್ದು..?

ವ್ಯಕ್ತಿ : ಸರ್.. ಅದು.. ಅದು..ಅದೇನಪಾ ಅಂತಂದ್ರೆ...

ಅಧ್ಯಕ್ಷರು : ಅದೇ ಅದು ಏನು ಅಂತಾ ಬೇಗ ಹೇಳ್ರಿ.. ಇಲ್ಲಾಂದ್ರೆ ನಂಗೂ ಎಲ್ಲಾ  ಮರ್ತೋಗುತ್ತೆ..

ವ್ಯಕ್ತಿ : ಸಾರ್.. ನಂಗೆ...ಹೆಂಗಾರ ಮಾಡಿ ಸಲ ಕೊಡಿಸ್ಲೇಬೇಕು ಸಾರ್...

ಅಧ್ಯಕ್ಷರು : ಅದೇ ಏನು ಕೊಡಿಸ್ಬೇಕು ಹೇಳಿ ಆದ್ಯರೆ...

ವ್ಯಕ್ತಿ : ಅಯ್ಯೋ, ಆದ್ಯರೆ ಅಲ್ಲಾ ಸಾರ್, ಆಚಾರಿ ಅನ್ನಿ ಸಾಕು.. ಅಕಾಡೆಮಿಯಿಂದ ಅದೇನೋ ಕೋಡ್ತಾರಂತಲ್ಲಾ.. ಅವಾರ್ಡು.. ನಂಗೂ ಒಂದು ತಗೊಂಡು ಸಾಯಬೇಕು ಅಂತಾ ಬಾಳಾ ಇಚ್ಚಾ ಆಗೇದ.. ನಾನೂ ಒಬ್ಬ ವೃತ್ತಿ ರಂಗಭೂಮಿಯ ಕಲಾವಿದ ಅನ್ನೋದನ್ನ  ನನ್ನ ಆ ಕಾಲದ ಅಭಿಮಾನಿಗಳೇ ಮರ್ತೆ ಬಿಟ್ಟಿದ್ದಾರೆ ಸಾರ್.. ನೀವೊಂದ್ ಅವಾರ್ಡ ಕೊಟ್ಟಬಿಟ್ರೆ ಅವ್ರೆಲ್ಲಾ ಮತ್ತೆ ನನ್ನ ನೆನಸ್ಕೋತಾರೆ. ‘ಈ ನಟ ಭಯಂಕರ ಅಚಾರಿ ಇನ್ನೂ ಬದ್ಕಿದ್ದಾನೆ’ ಅಂತಾ ತಿಳ್ಕೊತಾರೆ.. ಹೆಂಗಾದ್ರೂ ಮಾಡಿ ಸಲ ಒಂದೇ ಒಂದು ಅವಾರ್ಡ ಕೊಡ್ಸಿ ಸಾರ್... ನೆಮ್ಮದಿಯಾಗಿ ಸಾಯ್ತೀನಿ..

ಅಧ್ಯಕ್ಷರು : ಅಲ್ಲಾ ಆರಾದ್ಯರೆ, ಅಲ್ಲಲ್ಲಾ ಅಯ್ಯಂಗಾರರೆ.. ಹೋ ಹಾಳು ಮರವು... ಹಾಂ ನೆನಪಾಯ್ತು ನೋಡಿ.. ಆಚಾರರೆ... ನೀವು ಎಷ್ಟೊಂದು ನಾಟಕದಲ್ಲಿ ಮೇನ್ ಪಾತ್ರಾ ಮಾಡೀರಿ ಹೌದಲ್ವೊ...

ವ್ಯಕ್ತಿ : ಹೌದರೀ ಸರ ಹೌದು..

ಅಧ್ಯಕ್ಷರು : ನಿಮ್ಮ ಅಭಿನಯ ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿದು ವನ್ಸ್ ಮೋರ್ ಅಂತಿದ್ರು ಹೌಂದಲ್ಲೋ..

ವ್ಯಕ್ತಿ :  (ಹೆಮ್ಮೆಯಿಂದ)  ಹೌದರೀ ಸರ ಹೌದು..ಹೌದೌದು..

ಅಧ್ಯಕ್ಷರು : ನಿಮ್ಮ ಭಯಂಕರ ನಟನೆ ನೋಡಿ ಜನರು ನಿಮ್ಮ ಪ್ರತಿ ಡೈಲಾಗಿಗೂ ಚಪ್ಪಾಳೆ ಮೇಲೆ ಚಪ್ಪಾಳೆ ಹೊಡಿತಾನೇ ಇರ್ತಿದ್ರು.. ಹೌಂದಲ್ಲೋ..

ವ್ಯಕ್ತಿ : (ಭಾರೀ ಖುಷಿಯಿಂದ ) ಹೌದರೀ ಸರ ಹೌದೌದು.. ನೂರಕ್ಕ ನೂರು ಖರೇ ಮಾತ್ರಿ ನಿಮ್ದು..

ಅಧ್ಯಕ್ಷರು : ನಿಮ್ಮಂತಾ ದೊಡ್ಡ ಕಲಾವಿದರಿಗೆ ಒಂದೊಂದು ಚಪ್ಪಾಳೆನೂ ಒಂದೊಂದು ಅವಾರ್ಡ ಸಿಕ್ಕಿದ್ದಕ್ಕಿಂತ ಹೆಚ್ಚು ಖುಷಿ ಕೊಡ್ತಿದ್ದವು ಹೌದಲ್ಲಾ...

ವ್ಯಕ್ತಿ : ಹೌದರೀ ಸರ ಹೌದು.. ಚಪ್ಪಾಳೆಗಳ ಬೋರ್ಗರಿತದ ಮುಂದ ಯಾವ ಅವಾರ್ಡಗಳೂ ಲೆಕ್ಕಕ್ಕಿಲ್ಲ ಬಿಡ್ರಿ.. ಜನಾ ನನ್ನ ಪಾತ್ರಾ ನೋಡಿ ನಾಟಕದ ಟೆಂಟ್ ಹಾರಿ ಹೋಗುವಂಗ ಸೀಟಿ ಹೊಡದ್ ಕೇಕೆ ಹಾಕತಿದ್ರು.. ಆಯೇರಿ ಮಾಡ್ತಿದ್ರು.. ನೋಟು.. ನೋಟಿನ ಹಾರಾ ಹಾಕ್ತಿದ್ರು, ಹೆಗಲಮ್ಯಾಗ ಹೊತ್ಕೊಂಡ್ ಮೆರಸತಿದ್ರು... 

ಅಧ್ಯಕ್ಷರು :  ನಿಮ್ಮಂತಾ ಕಲಾವಿದರಿಗೆ ಅಂತಾ ಕೇಕೆ, ಸಿಳ್ಳೆ, ಚಪ್ಪಾಳೆಗಳ ಮುಂದೆ  ಜುಜಬಿ ಅವಾರ್ಡಗಳು ಯಾವ ಲೆಕ್ಕ ಹೇಳ್ರೀ ಆದ್ಯಾರರೇ..

ವ್ಯಕ್ತಿ : ನನ್ನ ಹೆಸರು ಏನಾದ್ರೂ ತಪ್ಪಾಗಿ ಕರೀರಿ ಚಿಂತಿಲ್ಲ. ಆದರ ನನ್ನ ದೊಡ್ಡ ಕಲಾವಿದ ಅಂತಾ ನೀವೊಬ್ಬರಾದ್ರೂ ಒಪ್ಪಕೊಂಡ್ರಲ್ಲಾ   ಜನ್ಮಕ್ಕ ಅಷ್ಟ ಸಾಕು...  

ಅಧ್ಯಕ್ಷರು :  ಮತ್ತೇ ನೀವಂದ್ರೇನು ಸುಮ್ಮನೇನಾ? ನೀವು ದುರ್ಯೋಧನನ ಪಾತ್ರಾ ಹಾಕ್ತಿದ್ರಿ. ಜನಾ ನಿಮ್ಮ ನಟನೆ ನೋಡಿ ಜೋರಾಗಿ ಉಚ್ಚೆ ಬಂದಿದ್ರು  ತಡಕೊಂಡು ಹುಚ್ಚೆದ್ದು ಕುಣಿತಿದ್ರು. ನೀವು ನಾಟಕದ ಮರುದಿನ ರಸ್ತೆ ಮೇಲೆ ಚಂಬ್ ಹಿಡ್ಕೊಂಡು ಕಕ್ಕ ಮಾಡೋಕೆ ಹೊರಟ್ರೆ ಸಾಕು..  ನಿಮ್ಮನ್ನ ನೋಡಿದ ನಿಮ್ಮ ಅಭಿಮಾನಿಗಳು “ಲೇ ಅಲ್ಲಿ ನೋಡ್ರೋ ದುರ್ಯೋಧನ ಚರಿಗಿ ತೊಗೊಂಡು ಹೊಂಟಾನ’ ಅಂತಾ ಗುರುತಿಸಿ ಮಾತಾಡ್ಕೊಂತಿದ್ರು. ನೀವು ಅಷ್ಟು ಫೇಮಸ್ ಆಗಿ ಹೋಗಿದ್ರಿ.. 

ವ್ಯಕ್ತಿ : ಇನ್ನೇನು ಕಕ್ಕ ಮಾಡೋಕೆ ಕೂಡಬೇಕು ಅನ್ನುದರಾಗ ಇನ್ಯಾರೋ ಬಂದು ‘ಬಾರೀ ಚೊಲೋ ಪಾತ್ರಾ ಮಾಡಿದ್ರಿ, ದುರ್ಯೋಧನ ಬೇರಲ್ಲಾ ನೀವು ಬೇರಲ್ಲಾ.. ಆಹಾ. ” ಅಂತಾ ಜನಾ ಹುಡುಕ್ಕೊಂಡು ಬಂದ್ ಹೊಗಳತಿದ್ರು.  ಅದ ಖುಷಿಯೊಳಗ ನಾ ತಗೊಂಡು ಹೋದ ಚರಗಿ ಅಲ್ಲೇ ಬಿಟ್ಟು, ಹೋದ ಕೆಲಸಾ ಮಾಡೂದು ಮರತಬಿಟ್ಟು, ಹಂಗ ಅವರ ಕೂಡ ಮಾತಾಡ್ಕೊಂಡು ವಾಪಸ್ ನಾಟಕದ ಟೆಂಟಿಗೆ ಬರ್ತಿದ್ದೆ.    

ಅಧ್ಯಕ್ಷರು : ನಾನೂ ಅದನ್ನೇ ಹೇಳ್ತಿದ್ದೀನಿ ಅಯ್ಯನವರೆ.. ಈ ತಿನ್ನೋದು ವಿಸರ್ಜಿಸೋದು ದಿನಾ ಇರೋದೆ. ಆದರೆ ಇದೆಲ್ಲಾದಕ್ಕಿಂತಾ ಅಭಿಮಾನಿಗಳ ಅಭಿಮಾನ ದೊಡ್ಡದು. ಅದಕ್ಕಿಂತಾ ದೊಡ್ಡದು ಈ  ಜಗತ್ತಿನಾಗ ಇರುದಾದ್ರೂ ಏನು?. ಕಲಾವಿದರಾದವರಿಗೆ ಹಣ ಹೊಟ್ಟಿ ಹಸಿವಿ ಅಷ್ಟ ಯಾಕ್ ಬಹಿರ್ದಶೆಗಳಿಗಿಂತಾ ಜನರ ಚಪ್ಪಾಳೆ ಮುಖ್ಯ, ಜನರ ಹೊಗಳಿಕೆ ಬಹಳಾ ಮುಖ್ಯ, ಚಪ್ಪಾಳೆಗಳನ್ನ ತಿಂದುಂಡು ಮಲಗಿದ್ರೂ ಚೆಂದನೆಯ ನಿದ್ದೆ ಬರೋದಂತೂ ಗ್ಯಾರಂಟಿ. ಪ್ರೇಕ್ಷಕರು ನಿಮ್ಮನ್ನ ದುರ್ಯೋಧನ, ಹಿರಣ್ಯಕಶಪು, ರಾವಣ.. ಅಂತಾ ಪಾತ್ರದ ಮೂಲಕ ಗುರುತಿಸ್ತಾರೆಯೇ ಹೊರತು ಅಕಾಡೆಮಿ ಪ್ರಶಸ್ತಿ ಪಡೆದವರು ಅಂತಾ ಗುರುತಿಸೋದಿಲ್ಲ ಅಲ್ವಾ ಅಯ್ಯಂಗಾರರೇ…

ವ್ಯಕ್ತಿ : ಆಚಾರಿ.. ಅಂತಾ ನನ್ನ ಯಾರೂ ಆಗ ಕರೀತಾನೇ ಇರಲಿಲ್ಲಾ.. ನೀವು ಹೇಳಿದಂತೆ ನನ್ನ ಪಾತ್ರದ ಹೆಸರಿಂದಲೇ ಕರೀತಿದ್ರು.. ಮರ್ಯಾದೆ ಕೊಡ್ತಿದ್ರು. ಆದು ಆಗಿನ ಕಾಲ.. (ತುಂಬಾ ಖಿನ್ನತೆಯಿಂದಾ) ಬರ್ತಾ ಬರ್ತಾ ನಂಗೂ ವಯಸ್ಸಾಯ್ತು, ಕಳೆದುಹೋದ ವಯಸ್ಸಿಗೆ ವಿರಾಟ ಪಾತ್ರಗಳು ಹೊಂದಾಣಿಕೆ ಆಗ್ತಿರಲಿಲ್ಲ. ಆಮೇಲೆ ದೃತರಾಷ್ಟ್ರ, ದಶರಥನಂತಹ ಮುದುಕರ ಪಾತ್ರ ಮಾಡಿದೆ. ಮತ್ತೂ ವಯಸ್ಸಾಯ್ತು.. ಯಾರೂ ಕರದು ಪಾತ್ರ ಕೊಡಲಿಲ್ಲಾ. ಕಿಸೆತುಂಬಾ ಆಯೇರಿ ಮಾಡ್ತಿದ್ದ ಜನರ ಹತ್ರ ಹೋಗಿ ‘ಅನಾರೋಗ್ಯ ಹೆಚ್ಚಾಗಿದೆ ಮಾತ್ರೆ ತಗೋಬೇಕು ಕಾಸ್ ಕೊಡಿ’ ಅಂತಾ ಗೋಗರೆದರೂ ಕರುಣೆಯಿಂದ ನೋಡಲಿಲ್ಲ. “ನಾನು ಅಂತಾ ನಾಟಕದಾಗ ಇಂತಾ ಪಾತ್ರ ಮಾಡ್ತಿದ್ದೆ” ಅಂತಾ ನಾನೇ ಹೇಳ್ಕೊಂಡು ತಿರುಗಾಡಿದ್ರೂ  ಕೇಳಿದ ಜನರು ನನ್ನ ಅನುಮಾನದಿಂದ ನೋಡ್ತಿದ್ರು. “ಈ ಮುದುಕ ದುರ್ಯೋಧನ ಅಂತಾ,, ಇಂವಾ ರಾವಣ ಅಂತಾ.. ಇವನಿಗೆಲ್ಲೋ ಭ್ರಮೆ. ಎಲ್ಲಿಯ ಹಿರಣ್ಯಕಶಪು.. ಇದೆಲ್ಲಿಯ ಹಳೆಯ ಮುದುಕಾ..” ಎಂದು ಲೇವಡಿ ಮಾಡಿ ಜನ ಮಜಾ ತಗೊಂಡು ಬಿದ್ದು ಬಿದ್ದು ನಗ್ತಿದ್ದರು. ಇಂತಹ ಅವಮಾನಗಳನ್ನ ತುಂಬಾನೇ ಸಹಿಸಿಕೊಳ್ತಾನೇ ಬದ್ಕಿದ್ದೀನಿ. ಬಾಳಾ ಅಂದ್ರೆ ಬಾಳಾ ಸಂಕಟ ಆಗುತ್ತೆ ಸಾಹೇಬ್ರೆ. ಐನೂರು ಸಾವಿರ ನೋಟುಗಳಿಗೆ ಚಲಾವಣೆಯಲ್ಲಿರೋವರೆಗೂ ಮಾತ್ರ ಬೆಲೆ.. ಅದು ಹಳೇದಾಗಿ ಡಿಮಾನಿಟೇಶನ್ನಿಗೆ ಒಳಗಾಗಿ ಬ್ಯಾನ್ ಆಗಿ ಬಿಟ್ರೆ, ಬಿಟ್ಟಿ ಕೊಟ್ರೂ  ಯಾರೂ ಅಂಡು ವರೆಸಿಕೊಳ್ಳೋಕೂ ತಗೊಳ್ಳೋದಿಲ್ಲಾ..  ಮುಗೀತು.. ಎಲ್ಲಾ ಮುಗೀತು..  ಆ ಯೌವನ, ಆ ಹುಮ್ಮಸ್ಸು, ಆ ಹೆಸರು, ಆ ಗೌರವ, ಆ ಅಭಿಮಾನಿಗಳ ಬಳಗ.. ಎಲ್ಲಾ ಕಳಕೊಂಡೆ.. ಈಗ ನನ್ನ ಹತ್ರ ಇರೋದು ಬರೀ ನೆನಪುಗಳು ಮಾತ್ರ ಸಾಹೇಬರೇ.. ಕ್ಷಣಕ್ಷಣಕ್ಕೂ ಕಾಡುವ ನೆನಪುಗಳು.. ನಿಮ್ಮ ಕೈಮುಗೀತೆನೆ ಒಂದೇ ಒಂದು ನಾಟಕ ಅಕಾಡೆಮಿ ಪ್ರಶಸ್ತಿ ಕೊಡಿಸಿ ಪುಣ್ಯ ಕಟ್ಕೊಳ್ಳಿ. (ಎದ್ದು ನಿಂತು ಅತೀ ಭಾವುಕತೆಯಿಂದಾ) ನೋಡ್ರಿ ಇಲ್ಲಿ  ನೋಡ್ರಿ..  ನಾನೂ ಒಬ್ಬ ಕಲಾವಿದ, ಸಾಕ್ಷಿ ಬೇಕಿದ್ರೆ ಇಲ್ಲಿ ನೋಡ್ರಿ ಅಕಾಡೆಮಿಯವರೇ ನನಗೆ ಅವಾರ್ಡ ಕೊಟ್ಟಾರ, ಪ್ರಮಾಣ ಪತ್ರ ಕೊಟ್ಟಾರ, ನೋಡ್ರಿ ಈ ಹಾರ, ಈ ಶಾಲು.. ಇದೆಲ್ಲವನ್ನು  ಮಿನಿಸ್ಟ್ರ ಕೈಯಲ್ಲಿ  ಕೊಡ್ತಿದ್ದಾರ. ಈಗಾದ್ರೂ ನಂಬ್ರಿ ನಾನೂ ಒಬ್ಬ ಕಲಾವಿದನಾಗಿದ್ದೆ, ಧುರ್ಯೋಧನ, ರಾವಣ, ಹಿರಣ್ಯಕಶುಪುವಿನಂತಹ ಮೇರು ಪಾತ್ರಗಳನ್ನ ಮಾಡ್ತಿದ್ದೆ, ಜನ ಚಪ್ಪಾಳೆ ಹೊಡೀತಿದ್ರು..” ಅಂತಾ ಜನರ ಮುಂದೆ ಹೋಗಿ ಹೇಳ್ತೀನಿ  ಸಾಹೇಬ್ರೆ.. ಯಾಕೆಂದರೆ ಈಗಿನ ಜನಾ ಎಲ್ಲದಕ್ಕೂ ಸಾಕ್ಷಿ, ಪುರಾವೆ, ಸಬೂಬು ಕೇಳ್ತಾರೆ.. ಬರೀ ಬಾಯಲ್ಲಿ ಹೇಳಿದ್ರೆ ನಂಬೋದಿಲ್ಲಾ ಸಾರ್.. (ಕಣ್ಣಲ್ಲಿಯ ನೀರನ್ನ ಒರೆಸಿಕೊಳ್ಳುತ್ತಾನೆ)

ಅಧ್ಯಕ್ಷರು: ಸಮಾಧಾನ ಮಾಡಿಕೊಳ್ಳಿ.. ನಿಮ್ಮಂತವರ ಸಂಕಟಾ ನನಗೂ ಅರ್ಥ ಆಗುತ್ತೆ ಹಿರಿಯರೇ.. ಹಿರಿಯ ಸಾಧಕರನ್ನ ಗುರುತಿಸಿ ಪ್ರಶಸ್ತಿ ಕೊಡಿಸುವ ಕಾಲ ಎಂದೋ ಮುಗಿದೋಯ್ತು. ಇಲ್ಲಿ ನೂರು ನಾಟಕ ಬರೆದವರಿಗಿಂತಾ ಮೂರು ನಾಟಕ ಬರೆದೋರಿಗೆ ಇಲ್ಲಿ ಲಾಬಿ ಮಾಡಿ ಪ್ರಶಸ್ತಿ ಕೊಡಿಸಲಾಗುತ್ತದೆ. ಈ ವ್ಯವಸ್ಥೆಯೊಳಗೆ ನನ್ನಂತಾ ನಾನೂ ಏನೂ ಮಾಡಲು ಆಗದಂತಹ ಅಸಹಾಯಕತೆಯಲ್ಲಿದ್ದೇನೆ ಆಚಾರಿಗಳೇ. ನಿಮ್ಮಂತಾ ಮೇರು ಕಲಾವಿದರು ಅಕಾಡೆಮಿಗಳ ಪ್ರಶಸ್ತಿ ಗಿಶಸ್ತಿಗಳನ್ನೆಲ್ಲಾ ಮೀರಿ ಬೆಳದವರು. ನಿಮ್ಮ ಲೇವಲ್ಲಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು. ಅದಕ್ಕೆ ಟ್ರೈ ಮಾಡಿ.. 

ವ್ಯಕ್ತಿ : (ಸಮಾಧಾನಗೊಂಡು ಕೂತು)  ಹೌದಾ ಸಾರ್.. 

ಅಧ್ಯಕ್ಷರು : ಹೌದ್ರಿ.. ನಾಟಕ ಅಕಾಡೆಮಿ ಅವಾರ್ಡ್ ಜೊತೆ ಕೇವಲ ಇಪ್ಪತ್ತೈದು ಸಾವಿರ ಕೊಡ್ತಾರೆ. ಅದೇ ಗುಬ್ಬಿ ವೀರಣ್ಣ ಪ್ರಶಸ್ತಿ ಬಂದ್ರೆ ಐದು...ಐದು ಲಕ್ಷ ಕೊಡ್ತಾರೆ... ಎಲ್ಲಾ ಪತ್ರಿಕೆಗಳಲ್ಲಿ ಪ್ರಂಟ್ ಪೇಜಲ್ಲಿ ನಿಮ್ಮ ಪೋಟೋ ಪ್ರಿಂಟಾಗುತ್ತೆ. ನೀವಿನ್ನೂ ಬದ್ಕಿದ್ದೀರಿ ಅಂತಾ ಇಡೀ ರಾಜ್ಯಕ್ಕೆ ಗೊತ್ತಾಗುತ್ತೆ. ಮತ್ತೆ ನಿಮ್ಮ ಅಭಿಮಾನಿಗಳು ನಿಮಗೆ ಜೋರಾಗಿ ಚಪ್ಪಾಳೆ ಹೊಡೀತಾರೆ..ಸಿಳ್ಳೆ ಹಾಕ್ತಾರೆ... ಪಕ್ಕದಲ್ಲಿ ಸಂಸ್ಕೃತಿ ಇಲಾಖೆ ಅಂತಾ ಇದೆ. ಅಲ್ಲಿ ಹೋಗಿ ಗುಬ್ಬಿ ವೀರಣ್ಣ ಪ್ರಶಸ್ತಿ ಕೊಡಿ ಅಂತಾ ಕೇಳಿ ಅಯ್ಯಂಗಾರರೆ...

ವ್ಯಕ್ತಿ : (ಖುಷಿಯಿಂದಾ ಎದ್ದು ನಿಂತು) ಹೌದಾ ಸಾರ್.. ಎಂತಾ ಮುತ್ತಿನಂತಾ ಸುದ್ದಿ ಹೇಳಿದ್ರೀ ಸಾರ್... ಯಾರೋ ನಂಗೆ ತಪ್ಪು ಮಾಹಿತಿ ಕೊಟ್ಟು ದಿಕ್ಕತಪ್ಪಿಸಿ ಇಲ್ಲಿ ಕಳಿಸಿದ್ರು.. ನೀವು ನನ್ನ ಯೋಗ್ಯತೆಯನ್ನ ಸರಿಯಾಗಿ ಗುರ್ತಿಸಿ ಅಯ್ಯಂಗಾರಿಗೆ ಸರಿಯಾದ ದಾರಿ ತೋರ್ಸಿದ್ರಿ.. ತತ್ ನಿಮ್ಮ ಜೊತೆ ಸೇರಿ ನನ್ನ ಹೆಸರೇ ಮರ್ತು ಅಯ್ಯಂಗಾರಿ ಅಂತಿದ್ದೀನಿ.. ನಾನು ಆಚಾರಿ.. ನಟ ಭಯಂಕರ ವೆಂಕಟಶೇಷಾದ್ರಿ ಅಚ್ಚುತ್ ಆಚಾರಿ.. ನಂಗೆ ಚಿಕ್ಕ ಪುಟ್ಟ ಅವಾರ್ಡ್ ಗಳ ಅಗತ್ಯಾನೇ ಇಲ್ಲಾ... ( ಎದ್ದು ಹೋಗುತ್ತಾ) ದೊಡ್ಡ ಅವಾರ್ಡ್ ಬೇಕು. ನಾನು ಇನ್ನೂ ಬದ್ಕಿದ್ದೇನೆ ಅಂತಾ ಎಲ್ಲರಿಗೂ ಗೊತ್ತು ಮಾಡೋವಂತಾ ಅವಾರ್ಡ ಬೇಕು... ಅವಾರ್ಡ ತಗೊಂಡೇ ಸಾಯಬೇಕು. ನಾನು ಸತ್ತರು ನಾ ತಗೊಂಡು ಅವಾರ್ಡ ನೋಡಿ ನನ್ನ ಮುಂದಿನ ಸಂತಾನ ಇಂತಾ ಒಬ್ಬ ನಟ ಭಯಂಕರ ನಮ್ಮ ವಂಶದಲ್ಲಿದ್ರೂ ಅಂತಾ ನೆನಪಿಸಿಕೊಳ್ಳಬೇಕ್ರಿ ಸಾಹೇಬರಾ.. ನಿಮ್ಮಿಂದಾ ಬಾಳಾ ಉಪಕಾರ ಆಯ್ತು.. ಬರ್ತೀನಿ..
( ಹೊರಟು ನಿಂತವರಿಗೆ ಮತ್ತೇನೋ ನೆನಪಾಗಿ ತಿರುಗಿ ನಿಂತು..)
ಅಂದಂಗೆ ಸಾರ್ ನೀವ್ಯಾರು..? ಇಲ್ಲೇನು ಕೆಲಸಾ ಮಾಡ್ಕೊಂಡಿದ್ದೀರಿ?

ಅಧ್ಯಕ್ಷರು : ನಾನು ಯಾರಾ..? ಹೌದು ನಾನ್ಯಾರು? ನಾನು.. ಅಯ್ಯೋ ನನ್ನ ಹೆಸರೇ ನಂಗೆ ಮರ್ತೋಗಿದೆಯಲ್ಲಾ.. (ಜೋರಾಗಿ) ಯಶೋದಮ್ಮಾ.. ಬಾಯಿಲ್ಲಿ.. ನನ್ನ ಹೆಸರೇನು?

ಸುಶೀಲಮ್ಮ : ಸಾರ್  ಕರದ್ರಾ ಸಾರ್. ನಾನು ಸುಶೀಲಮ್ಮಾ ಸಾರ್..

ಅಧ್ಯಕ್ಷರು : ಅದು ಗೊತ್ತಮ್ಮಾ... ನಿನ್ನ ಹೆಸರಲ್ಲಾ ನನ್ನ ಹೆಸರು ಏನು

ಸುಶೀಲಮ್ಮ : ಕಾಫಿ ತರಲಾ ಸಾರ್... ಸಕ್ಕರೆ ಕಮ್ಮೀನಾ ಜಾಸ್ತೀನಾ ಸಾರ್...

ಅಧ್ಯಕ್ಷರು : ಅಯ್ಯೋ  ಕಿವಡಮ್ಮನಿಗೆ ಹೆಂಗಪ್ಪಾ ಹೇಳೋದು.. ಕಾಫಿ ಅಲ್ಲಾ  ಹೆಸರು... ನನ್ನ ಹೆಸರು...

ಸುಶಿಲಮ್ಮ : ಮಸರು ಬೇಕಾ ಸಾರ್.. ಮಜ್ಜಿಗೆನೇ ತರ್ತೀನಿ ಸಾರ್..

ಅಧ್ಯಕ್ಷರು : (ಪರಾಪರಾ ಅಂತಾ ತಲೆ ಕೆರೆದುಕೊಳ್ಳುತ್ತಾ) ಏನೂ ಬೇಡ ಇಲ್ಲಿಂದಾ ಮೊದಲು ತೊಲಗು... (ಏನೋ ಹೊಳೆದಂತಾಗಿ) ಹಾಂ.. ಇಲ್ಲೇ ನನ್ನ ಹೆಸರಿನ ಸೈನ್ ಬೋರ್ಡ ಇದೆಯಲ್ಲಾ.. ರೀ ಆರಾಧ್ಯರೆ, ಅಲ್ಲಲ್ಲಾ ಅಯ್ಯಂಗಾರರೇ.. ಅಯ್ಯೋ ಆಚಾರರೇ.. ಅಲ್ಲಿ ನೋಡ್ರಿ.. ನನ್ನ ಹೆಸರು ಬಂಗಾರದ ಬಣ್ಣದಲ್ಲಿ ಪಳಪಳ ಹೊಳೆಯೋ ಹಂಗೆ ಕೆತ್ತಿ ಬರ್ಸಿದ್ದಾರೆ. ಅದರ ಕೆಳಗೆ ಅಧ್ಯಕ್ಷರು ನಾಟಕ ಅಕಾಡೆಮಿ ಅಂತಾನೂ ಬರ್ದಿದೆ. ಓದ್ರಿ... ( ಎಂದು ಪಕ್ಕಕ್ಕೆ ತಿರುಗುತ್ತಾನೆ. ವ್ಯಕ್ತಿ ಆಗಲೇ ಅಲ್ಲಿಂದ ಹೊರಟೇ ಹೋಗಿರ್ತಾರೆ..) ನಟ ಭಯಂಕರ ಎಲ್ಲಿ ಹೋದ್ರು ಸರಸಮ್ಮಾ...

ಸುಶೀಲಮ್ಮಾ : ಸಾರ್... ಸಿಟ್ಟಾಗಬೇಡಿ ಸಾರ್... ಮಜ್ಜಿಗೆ ಬೇಡಾಂದ್ರೆ ಬಿಡಿ.. ಮಸರು ತರ್ತೀನಿ ಇರಿ... ನಾನು ಸುಶೀಲಮ್ಮಾ ಸಾರ್.. ಸುಶೀಲಮ್ಮಾ..

ಅಧ್ಯಕ್ಷರು : ಯಾವುದೋ ಒಂದು ಅಮ್ಮಾ.. ಅಯ್ಯೋ ಯಾರಾದ್ರೂ ಈಯಮ್ಮನ್ನ ಇಲ್ಲಿಂದ ಕರ್ಕೊಂಡು ದೂರ ಹೋಗ್ರಯ್ಯಾ... (ಎದ್ದು ನಿಂತು ಸ್ವಗತದಲ್ಲಿ) ಅಯ್ಯೋ ಏನೂ ನೆನಪಾಗ್ತಿಲ್ವಲ್ಲಾನಾನ್ಯಾರು... ಏನಾಗಿದ್ದೆ... ಏನಾಗಿರುವೆ... ನನ್ನ ಹೆಸರೇನು... ಇಟ್ಟ ಹೆಸರೋ ಕೊಟ್ಟ ಹೆಸರೋ... ಕರಿಯೋ ಹೆಸರೋ...  ಯಾವುದೋ ಒಂದು ಹೆಸರು.. ಯಾವ ಹೆಸರಿಂದ ಕರೆದರೇನಾಯ್ತು... ಹೆಸರು ಬದಲಾದ್ರೆ ವ್ಯಕ್ತಿ ಬದಲಾಗತಾನಾ?  ನಾನು ನಾನೇ... ಹಾಂ... ಚಪ್ಪಾಳೆ.. ಒಂದೊಂದು ಚಪ್ಪಾಳೆ ಒಂದೊಂದು ಅವಾರ್ಡಿಗೆ ಸಮ.   ನಾನೂ ಈಗ ಡೈಲಾಗ ಹೇಳ್ತೇನೆ.. ಆದ್ರೆ ಒಂದು ಕಂಡೀಶನ್ನು ಏನಂದ್ರೆ.. ಎಲ್ರೂ ಚಪ್ಪಾಳೆ ತಟ್ಟಬೇಕು.. ( ಖುರ್ಚಿಯ ಮೇಲೆ ಹತ್ತಿ ನಿಂತು)  "ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ.. ಆದರೆ ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ" ಹಾಂ... ಇನ್ನೂ ಜೋರಾಗಿ ಚಪ್ಪಾಳೆ ಬೀಳಲಿ. ಏನು ಒನ್ಸ್ ಮೋರ್ ಅಂತೀರಾ ಅನ್ನಿ... ನಾನು ಎಂದೂ ನನ್ನ ಅಭಿಮಾನಿಗಳನ್ನ ನಿರಾಸೆ ಮಾಡುವುದಿಲ್ಲ. " ಹೆಸರಿಲ್ಲದೇ ಹಾದಿಯಲ್ಲಿ ನಡೆಯಬಹುದು... ಆದರೆ ಮರೆವಿನ ದಾರಿಯಲ್ಲಿ ಹೇಗೆ ನಡೆಯಲಿ ಹೇಳಿ
( ಹಿನ್ನೆಲೆಯಲ್ಲಿ ಜೋರಾದ ಚಪ್ಪಾಳೆ ಸದ್ದು... ಅಧ್ಯಕ್ಷರು ಎರಡೂ ಕೈ ಜೋಡಿಸಿ ತಲೆಯ ಮೇಲೆತ್ತಿ ನಮಸ್ಕರಿಸಿ ಸ್ಟಿಲ್ ಆಗುತ್ತಾರೆ. ಹಿನ್ನೆಲೆಯಲ್ಲಿ ಹಾಡು...)

   - ಶಶಿಕಾಂತ ಯಡಹಳ್ಳಿ

( ಕ್ಷಮಿಸಿ ನಾ ಇಲ್ಲಿ ಬರೆದಿದ್ದೆಲ್ಲಾ ತಮಾಷೆಗಾಗಿ. ಅರ್ಧ ಸತ್ಯಕ್ಕೆ ಇನ್ನರ್ಧ ಕಲ್ಪನೆಯನ್ನು ಸೇರಿಸಿ ಪ್ರಹಸನವನ್ನು ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇದು ಸಂಪೂರ್ಣ ಸತ್ಯವೂ ಅಲ್ಲಾ ಹಾಗಂತಾ ಸಂಪೂರ್ಣ ಸುಳ್ಳೂ ಅಲ್ಲಾ.. ನಾವು ನಾಟಕದವರು. ನಮ್ಮನ್ನು ನಾವೇ ಕಿಚಾಯಿಸಿಕೊಂಡು ಖುಷಿಪಡುವವರು. ಆಗಾಗ ಕಾಲೆಳೆದು ಕಾಲೆಳೆಸಿಕೊಂಡು ಸಂಭ್ರಮ ಪಡುತ್ತೇವೆ. ತಮಾಷೆಯನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕೆನ್ನುವ ಹಾಸ್ಯಪ್ರಜ್ಞೆ ನಮಗೆ ನಾಟಕದವರಿಗೆ ಇದ್ದೇ ಇದೆ. ಪ್ರಹಸನ ಓದಿದವರ ಮುಖದಲ್ಲಿ ಒಂದಿಷ್ಟು ಮಂದಹಾಸ ಮೂಡಿದರೆ ಬರೆದಿದ್ದಕ್ಕೂ ಸಾರ್ಥಕ.)