ಆತ್ಮೀಯ ರಂಗಕರ್ಮಿ ಶಶಿಧರ್ ಅಡಪರವರಿಗೆ,
ಬಹುಷಃ ನೀವು ಪೋನ್ ಮಾಡಿ ನಿಮ್ಮ ಮನಸ್ಸಿನ ತಲ್ಲಣಗಳನ್ನು ನನ್ನಲ್ಲಿ ಹಂಚಿಕೊಳ್ಳದೇ ಹೋಗಿದ್ದರೆ ಈ ಪತ್ರ ಬರೆಯುವ ಅಗತ್ಯತೆ ಬರುತ್ತಿರಲಿಲ್ಲ. ಇಲ್ಲವೇ ನನ್ನ ಲೇಖನದ ಕುರಿತು ನೀವು ಮಾಡಿದ ಆರೋಪಗಳಿಗೆ ಪೋನಲ್ಲಿ ಉತ್ತರಿಸಲಾದರೂ ನನಗೆ ಅವಕಾಶ ನೀಡಿದ್ದರೆ ಈ ಪತ್ರವನ್ನು ನಾನು ಬರೆಯುತ್ತಲೂ ಇರಲಿಲ್ಲ. ನಿಮ್ಮ ಮನಸ್ಸಲ್ಲಿ ಉಳಿದಿರಬಹುದಾದ ಕಹಿಯನ್ನು ತೆಗೆದುಹಾಕಲು, ಲೇಖನದ ಹಿಂದಿರುವ ಕಳಕಳಿಯನ್ನು ತಿಳಿಸಲು ಹಾಗೂ ನಿಮ್ಮ ಸಕಾರಾತ್ಮಕ ಆಲೋಚನೆಗೆ ನಕಾರಾತ್ಮಕವಾಗಿ ಹುಳಿ ಹಿಂಡಿದವರ ಹುನ್ನಾರನ್ನು ಬಯಲು ಮಾಡಲು ಈ ಪತ್ರ ಬರೆಯುವುದು ಅನಿವಾರ್ಯವಾಗಿತ್ತು.
ಮೊದಲನೆಯದಾಗಿ,‘ ಸಿಜಿಕೆ ರಂಗೋತ್ಸವ’ದ ಕುರಿತು ನನ್ನ ಲೇಖನವು ನಿಮ್ಮ ಮನಸ್ಸನ್ನು ಘಾಸಿಗೊಳಿಸಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ. ಹಾಗೂ ಏಕಮುಖಿಯಾದರೂ ಸರಿ ನಿಮ್ಮ ಅನಿಸಿಕೆಗಳನ್ನು ಜಂಗಮವಾಣಿಯ ಮೂಲಕ ಹಂಚಿಕೊಂಡಿರುವುದಕ್ಕೆ ಅಭಿನಂದಿಸುತ್ತೇನೆ. ಅಭಿನಂದನೆ ಯಾಕೆಂದರೆ ನಿಮ್ಮಲ್ಲಿ ಇನ್ನೂ ಪ್ರಜ್ಞೆ ಎನ್ನುವುದು ಜಾಗೃತವಾಗಿದೆ ಹಾಗೂ ಆತ್ಮಸಾಕ್ಷಿ ಎನ್ನುವುದು ಕ್ರಿಯಾಶೀಲವಾಗಿದೆ. ಆದ್ದರಿಂದಲೇ ನೀವು ಅಕ್ಷರ ಕ್ರಿಯೆಗೆ ತಕ್ಷಣ ಪ್ರತಿಕ್ರಿಯೆ ಕೊಡಲು ಸಾಧ್ಯವಾಗಿದೆ. ಸೂಕ್ಷ್ಮಪ್ರಜ್ಞೆ ಕಳೆದುಕೊಂಡ ಹಾಗೂ ಆತ್ಮಸಾಕ್ಷಿಯನ್ನು ಮಾರಿಕೊಂಡ ಕೆಲವಾರು ದಲ್ಲಾಳಿ ರಂಗಕರ್ಮಿಗಳಿರುವ ರಂಗಭೂಮಿಯಲ್ಲಿ ಇನ್ನೂ ನೀವು ನೇರವಂತಿಕೆಯನ್ನು ಉಳಿಸಿಕೊಂಡಿರುವುದು ವಿಸ್ಮಯದ ಸಂಗತಿಯಾಗಿದೆ. ಕುತಂತ್ರ, ಕೃತಕತೆ ಇಲ್ಲದೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ತೋರಿದ ನಿಮಗಿದೋ ತುಂಬು ಹೃದಯದ ನಮಸ್ಕಾರಗಳು. ನೀವು ಮತ್ತು ನಿಮ್ಮಂತ ಕೆಲವರು ರಂಗಭೂಮಿಯ ಆಶಾಕಿರಣವಾಗಿದ್ದೀರಿ. ಕನ್ನಡ ರಂಗಭೂಮಿಗೆ ‘ರಂಗನಿರಂತರ’ವೊಂದೇ ನಾಯಕತ್ವ ಕೊಡಬಹುದಾದ ಸಾಧ್ಯತೆಗಳು ನಿಚ್ಚಳವಾಗಿವೆ. ಸಿಜಿಕೆ ಎನ್ನುವ ಹೆಸರಿನ ಶಕ್ತಿ ಹಾಗೂ ನಿಮ್ಮಂತವರ ರಂಗಭಕ್ತಿ ಎರಡೂ ಸೇರಿ ರಂಗಭೂಮಿಗೆ ಹೊಸ ಸಂಚಲನವನ್ನುಂಟು ಮಾಡಿದ್ದಂತೂ ಸುಳ್ಳಲ್ಲ.
ಎರಡನೆಯದಾಗಿ, ನಾನು ಲೇಖನದಲ್ಲಿ ಉಲ್ಲೇಖಿಸಿದ ಬಹುತೇಕ ಸಂಗತಿಗಳನ್ನು ನೀವು ಒಪ್ಪಿಕೊಂಡಿದ್ದೀರಿ. ಹಾಗೂ ರಂಗೋತ್ಸವದಲ್ಲಾದ ನ್ಯೂನ್ಯತೆಗಳನ್ನು ಮುಂದೆ ಸರಿಪಡಿಸಿಕೊಳ್ಳಲು ಈ ಲೇಖನ ಸಹಕಾರಿ ಎಂದೂ ಹೇಳಿದ್ದೀರಿ. ಈ ಸಲದ ಸಿಜಿಕೆ ರಂಗೋತ್ಸದಲ್ಲಿ ಹೆಚ್ಚಾಗಿರುವ ಬ್ರಾಹ್ಮಣರ ಪ್ರಾಭಲ್ಯ, ನಾಟಕಗಳ ಆಯ್ಕೆಯಲ್ಲಾದ ಸಮಸ್ಯೆಗಳೆಲ್ಲವನ್ನೂ ಒಪ್ಪಿಕೊಂಡು ಬದಲಾಯಿಸಿಕೊಳ್ಳುವ ಮಾತನ್ನಾಡಿದ್ದೀರಿ. ಇದು ನಿಮ್ಮ ದೊಡ್ಡತನವನ್ನು ತೋರಿಸುತ್ತದೆ. ಒಂದು ಲೇಖನದ ಕೆಲಸ ಇಷ್ಟೇ. ರಂಗಕಾರ್ಯವನ್ನು ದಾಖಲಿಸುವುದು ಹಾಗೂ ಆಕಸ್ಮಿಕವಾಗಿ ಏನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನ್ಯೂನ್ಯತೆಗಳಾದಲ್ಲಿ ತಿಳಿಸುವುದು ಒಬ್ಬ ಲೇಖಕನ ಕರ್ತವ್ಯವೂ ಆಗಿದೆ. ಅದು ಹೇಗೆ ನಾಟಕವೆನ್ನುವುದು ಸಮಾಜದ ಕನ್ನಡಿಯಾಗಿದೆಯೋ ಹಾಗೆಯೇ ರಂಗಲೇಖನ ಎನ್ನುವುದು ರಂಗಭೂಮಿಯ ಕನ್ನಡಿಯಾಗಿದೆ ಎನ್ನುವುದನ್ನೂ ಬಹುಷಃ ನೀವು ಒಪ್ಪಿಕೊಳ್ಳುತ್ತೀರೆಂದುಕೊಂಡಿದ್ದೇನೆ. ಹಾಗೂ ಒಂದು ಲೇಖನ ರಂಗಸಂಘಟನೆಯಲ್ಲಿ ಕನಿಷ್ಟ ಬದಲಾವಣೆಯಾಗುವ ಹಾಗೆ ಪ್ರಯೋಜನಕ್ಕೆ ಬಂದರೂ ಅದು ಸಾರ್ಥ್ಯಕತೆಯನ್ನು ಪಡೆಯುತ್ತದೆನ್ನುವುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ನೀವೇ ಹೇಳಿದಂತೆ ಈ ಲೇಖನ ಮುಂದಿನ ವರ್ಷದ ಸಿಜಿಕೆ ರಂಗೋತ್ಸವದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಸಹಕಾರಿಯಾದರೆ ನನ್ನ ಶ್ರಮ ಸಾರ್ಥಕ ಎಂದುಕೊಳ್ಳುತ್ತೇನೆ.
ಶಶಿಧರ್ರವರೆ ನಿಮಗೆ ನೋವು ತಂದಿರುವುದು ಕಾರ್ಯಪ್ಪನವರ ನಾಟಕ ರದ್ದತಿಯ ಕುರಿತು ಲೇಖನದಲ್ಲಿ ಪ್ರಸ್ತಾಪವಾಗಿದ್ದರ ಬಗ್ಗೆ. ‘ಮೊದಲು ರಂಗೋತ್ಸವದಲ್ಲಿ ಪ್ರದರ್ಶಿಸಲು ನಾಟಕ ಮಾಡಲು ಹೇಳಿ ಆನಂತರ ಯಾವೊಂದು ಸೂಕ್ತ ಮಾಹಿತಿಯನ್ನೂ ಕಾರ್ಯಪ್ಪನವರಿಗೆ ಕೊಡದೇ ಬೇರೆ ನಾಟಕಕ್ಕೆ ಅವಕಾಶವನ್ನು ಕೊಡಲಾಯಿತು’ ಎನ್ನುವುದನ್ನು ಮತ್ತು ಅದಕ್ಕೆ ಕಾರಣಗಳೇನು ಎನ್ನುವುದನ್ನು ಲೇಖನದಲ್ಲಿ ಬರೆಯಲಾಗಿತ್ತು. ನನ್ನ ಲೇಖನದಲ್ಲಿ ಪ್ರಸ್ತಾಪಿಸಲಾದ ಯಾವುದೇ ಮಾಹಿತಿಯೂ ಊಹಾಪೋಹದಿಂದ ಬರೆದದ್ದಲ್ಲ. ಯಾರು ನಿಮ್ಮ ಮಾತನ್ನು ನಂಬಿ ನಾಟಕ ನಿರ್ಮಿಸಿ ಪ್ರದರ್ಶನಕ್ಕೆ ಅವಕಾಶ ಸಿಗದೇ ಹತಾಶೆಗೊಂಡರೋ ಅವರು ತೋಡಿಕೊಂಡ ನೋವುಗಳೇ ಲೇಖನದಲ್ಲಿ ಪದಗಳಾಗಿವೆ. ಸಾಕ್ಷಿ ಆಧಾರ ಪುರಾವೆಗಳಿಲ್ಲದೇ ನಾನೆಂದೂ ಲೇಖನವನ್ನು ಬರೆಯುವುದಿಲ್ಲ. ಯಾವಾಗ ಸಮಸ್ಯೆ ಅನುಭವಿಸಿದವರೇ ಖುದ್ದಾಗಿ ತಮ್ಮ ದುಃಖವನ್ನು ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ತೋಡಿಕೊಂಡಾಗ, ನೊಂದವರಿಗೆ ಸಾಂತ್ವನ ಹೇಳಬೇಕಾದವರೇ ಮೌನವಹಿಸಿದ್ದಾಗ, ಅದನ್ನು ಲೇಖನದಲ್ಲಿ ದಾಖಲಿಸುವುದು ತಪ್ಪು ಎನ್ನುವ ನಿಮ್ಮ ಭಾವನೆ ಅದು ಹೇಗೆ ಸರಿ ಎನ್ನುವುದನ್ನು ಆಲೋಚಿಸಿ.
ನಿಮ್ಮ ಸಂಕಟಕ್ಕೆ ಇನ್ನೊಂದು ಪ್ರಮುಖ ಕಾರಣ “ಜಾತಿ ಕಾರಣಕ್ಕೆ ಕಾರ್ಯಪ್ಪನವರ ನಾಟಕವನ್ನು ಕೈ ಬಿಡಲಾಯಿತು” ಎಂದು ಲೇಖನದಲ್ಲಿ ಪ್ರಸ್ತಾಪಿಸಿದ್ದು. ಅಡಪರವರೇ ಇದು ನಾನು ಮಾಡುವ ಆರೋಪವಲ್ಲ. ಅಥವಾ ಈ ಇಲ್ಲದ ಆರೋಪವನ್ನು ಸೃಷ್ಟಿಸಿ ಅದನ್ನು ನಿಮ್ಮ ಮೇಲೆ ಹೇರಬೇಕೆನ್ನುವ ಕೆಟ್ಟ ಅಭಿಲಾಷೆಯೂ ನನ್ನದಲ್ಲ.
ಖುದ್ದು ಕಾರ್ಯಪ್ಪನವರು ಹಾಗೂ ಮಾಲತೇಶ ಬಡಿಗೇರರು ‘ಈ ಬ್ರಾಹ್ಮಣ ಲಾಬಿಯಿಂದಾಗಿ ಇದೆಲ್ಲಾ ಆಯಿತು’ ಎಂದು ದಿಟ್ಟವಾಗಿ ಹಾಗೂ ಸ್ಪಷ್ಟವಾಗಿಯೇ ಹೇಳಿದ್ದಾರೆ. ನಿಮಗೆ ಬೇಕಾದರೆ ಇದಕ್ಕೂ ನಾನು ಸೂಕ್ತ ನಂಬಲರ್ಹ ಸಾಕ್ಷಗಳನ್ನು ಒದಗಿಸಬಲ್ಲೆ. ‘ಸುಸ್ಥಿರ ಬದುಕಿನತ್ತ ರಂಗಭೂಮಿ’ ಆಶಯಕ್ಕೆ ನಮ್ಮ ನಾಟಕ ಅತ್ಯಂತ ಸೂಕ್ತವಾಗಿತ್ತು, ನಾಟಕವನ್ನೂ ಸಹ ಶ್ರಮವಹಿಸಿ ಕಟ್ಟಲಾಗಿತ್ತು. ಬೇರೆ ಬ್ರಾಹ್ಮಣರ ನಾಟಕಕ್ಕೆ ಅವಕಾಶ ಮಾಡಿಕೊಡಲು ನಮ್ಮ ನಾಟಕವನ್ನು ನಿರಾಕರಿಸಲಾಯಿತು..” ಎಂಬುದು ಕಾರ್ಯಪ್ಪನವರ ಅನುಭವಜನ್ಯ ಅಭಿಪ್ರಾಯವಾಗಿದೆ. ಅದನ್ನೇ ಲೇಖನದ ಭಾಗವಾಗಿ ಉಲ್ಲೇಖಿಸಲಾಗಿದೆ.
ರಂಗಜಂಗಮ ಸಿಜಿಕೆ |
ಸತ್ಯ ಯಾವತ್ತಿದ್ದರೂ ಕಹಿಯಾಗಿರುತ್ತದೆ ಅಡಪರವರೆ, ಆ ಕಹಿ ಕೆಲವರಿಗೆ ವಿಷವಾಗಿ ತೋರಿದರೆ ನನ್ನ ಅಭ್ಯಂತರವೇನಿಲ್ಲ. ಆದರೆ...
‘ಯಾವುದೋ ಸಣ್ಣ ಪ್ರಮಾಣದ ವಿಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಲೇಖನ ಬರೆದಿದ್ದೀರಿ’ ಎಂದು ನೀವು ನನ್ನ ಮೇಲೆ ಗಂಭೀರವಾದ ಆರೋಪವನ್ನು ಮಾಡಿದ್ದೀರಿ. ನನಗೆ ಗೊತ್ತಿರುವ ಹಾಗೆ ಇದು ನಿಮ್ಮ ಸ್ವಂತ ಅನಿಸಿಕೆ ಅಲ್ಲವೇ ಅಲ್ಲ. ಸತ್ಯ ಹೇಳುವವರಿಗೆ ವಿಷ ಕಕ್ಕುವವರು ಎನ್ನುವುದು ಬ್ರಾಹ್ಮಣ ಸಂಜಾತರಾಡುವ ಮಾತುಗಳಾಗಿವೆ. ಪುರೋಹಿತಶಾಹಿತ್ವವನ್ನು ವಿರೋಧಿಸುವವರೆಲ್ಲರೂ ವಿಷಕಾರಿಗಳಾಗಿ ಅವರಿಗೆ ತೋರುತ್ತಾರೆ. ಶೂದ್ರರ ಬಾಯಲ್ಲಿ ಇಂತಹ ಮಾತುಗಳು ಸ್ವಂತಿಕೆಯಿಂದ ಬರುವುದಿಲ್ಲ. ಆದರೂ ನಿಮ್ಮ ಆರೋಪವನ್ನು ಗಂಭೀರವಾಗಿಯೇ ಪರಿಗಣಿಸಿ ಉತ್ತರಿಸುತ್ತೇನೆ. ಮೊದಲನೆಯದಾಗಿ ಇಡೀ ಲೇಖನದಲ್ಲಿ ಶಶಿಧರ್ ಅಡಪರವರ ಬಗ್ಗೆ ಎಲ್ಲೂ ನಕಾರಾತ್ಮಕವಾಗಿ ಒಂದೇ ಒಂದು ಪದವನ್ನು ಬಳಸಲಾಗಿಲ್ಲ. ಇದನ್ನು ನೀವು ಒಪ್ಪಿಕೊಂಡಿದ್ದೀರಿ. ರಂಗನಿರಂತರದ ರಂಗಶಕ್ತಿ ಹಾಗೂ ರಂಗಭಕ್ತಿಯ ಕುರಿತೂ ಎಲ್ಲೂ ಚಕಾರವೆತ್ತಿಲ್ಲ. ನನಗೆ ಸಿಜಿಕೆಯವರ ಮೇಲೆ ಇರುವ ಗೌರವವೇ ಅವರು ಕಟ್ಟಿ ಬೆಳೆಸಿದ ‘ರಂಗನಿರಂತರ’ದ ಮೇಲೂ ಇದೆ. ಸಿಜಿಕೆ ಆಶಯಕ್ಕೆ ವಿರುದ್ಧವಾದ ನಿಲುವುಗಳನ್ನು ‘ರಂಗನಿರಂತರ’ ತೆಗೆದುಕೊಂಡಾಗ ನನಗೆ ನಿಜಕ್ಕೂ ತುಂಬಾ ನೋವಾಗುತ್ತದೆ. ಹಾಗೂ ಆ ನೋವು ಅಕ್ಷರ ರೂಪದಲ್ಲಿ ಹೊರಬರುತ್ತದೆ.
“ರಂಗನಿರಂತರ ಕನ್ನಡ ರಂಗಭೂಮಿಯ ಶಕ್ತಿಯಾಗಿ ಬೆಳೆಯಬೇಕಿದೆ. ಸುಸ್ಥಿರ ರಂಗಭೂಮಿಯ ನಿರ್ಮಾಣದತ್ತ ರಂಗನಿರಂತರ ನಾಯಕತ್ವ ಕೊಡಬೇಕಿದೆ” ಎನ್ನುವ ಮಹದಾಸೆಯನ್ನು ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ. ‘ಜಾತಿಯ ಸೋಂಕು ರಂಗೋತ್ಸವಕ್ಕೆ ಯಾವುದೇ ರೀತಿಯಲ್ಲಿ ಸೋಂಕದಂತೆ ಎಚ್ಚರವಹಿಸಬೇಕಾಗಿದೆ’ ಎಂಬ ಸದಾಶಯ ಇಡೀ ಲೇಖನದ್ದಾಗಿದೆ. ಇದರಲ್ಲಿ ನಿಮಗೆಲ್ಲಿ ವಿಷಕಾರಕ ಪದಗಳು ಕಂಡುಬಂದವು. ‘ಕಾರ್ಯಪ್ಪನವರ ನಾಟಕ ಜಾತಿ ರಾಜಕಾರಣಕ್ಕೆ ಬಲಿಯಾಯಿತು’ ಎನ್ನುವ ಮಾತುಗಳು ನಿಮಗೆ ಸಿಕ್ಕಾಪಟ್ಟೆ ಹರ್ಟ ಮಾಡಿವೆ ಎಂದು ಹೇಳಿದ್ದೀರಿ. ಅರೆ...
ಈ ಮಾತುಗಳನ್ನು ನಾನು ಸೃಷ್ಟಿಸಿದ್ದಲ್ಲ ಅವೆಲ್ಲವೂ ಕಾರ್ಯಪ್ಪನವರ ಹಾಗೂ ಬಡಿಗೇರರ ಮಾತುಗಳು. ಅವರ ನೋವಿಗೆ, ಅವರ ಆಕ್ರೋಶಕ್ಕೆ ನಾನು ಅಕ್ಷರ ರೂಪ ಕೊಟ್ಟಿದ್ದೇನಷ್ಟೇ !. ‘ರಂಗಕ್ರಿಯೆಯಲ್ಲಿ ಜಾತೀಯತೆಯ ಪ್ರಸ್ಥಾಪವೇಕೆ?’ ಎನ್ನುವುದು ನಿಮ್ಮ ಇನ್ನೊಂದು ಪ್ರಶ್ನೆ. ಇದನ್ನು ನಾನೊಬ್ಬನೇ ಆಕ್ಷೇಪಿಸುತ್ತಿಲ್ಲ. ಈ ಸಲದ ನಾಟಕೋತ್ಸವದಲ್ಲಿ ಬ್ರಾಹ್ಮಣರ ಪ್ರಾಭಲ್ಯ ಹೆಚ್ಚಾಯಿತು ಹಾಗೂ ಅದು ಸಿಜಿಕೆ ಆಶಯಕ್ಕೆ ವಿರುದ್ಧವಾದದ್ದು ಎನ್ನುವುದು ಬಹುತೇಕ ರಂಗಕರ್ಮಿಗಳ ಅನಿಸಿಕೆಯೂ ಆಗಿದೆ. ನಿಮ್ಮ ರಂಗೋತ್ಸವದ ಪೂರ್ವಭಾವಿ ಸಭೆಯಲ್ಲಿ ಶ್ರೀಮಾನ್ ಕಪ್ಪಣ್ಣನವರು ಈ ಬ್ರಾಹ್ಮಣರ ಪ್ರಾಭಲ್ಯದ ಬಗ್ಗೆ ನಿಮಗೆ ಎಚ್ಚರಿಸಿದ್ದರಲ್ಲವೇ. ಆಗಲಾದರೂ ‘ರಂಗನಿರಂತರ’ ಯಾಕೆ ಎಚ್ಚರಗೊಳಲಿಲ್ಲ. ಯಾಕೆ ಈ ನಾಟಕೋತ್ಸವಕ್ಕಾಗಿಯೇ ನಿಮ್ಮ ಮಾತಿನಂತೆ ನಿರ್ಮಾಣಗೊಂಡ ಉಪಭಾಷೆಯ ನಾಟಕವೊಂದನ್ನು ಕೈಬಿಟ್ಟು ಯಾವತ್ತೋ ಸಿದ್ದವಾಗಿದ್ದ ಇನ್ನೊಂದು ಉಪಭಾಷೆಯ ನಾಟಕಕ್ಕೆ ಅವಕಾಶ ಮಾಡಿಕೊಟ್ಟಿರಿ. ಇಲ್ಲಿ ಜಾತಿಯತೆ ನಾನು ಸೃಷ್ಟಿಸಿದ್ದಲ್ಲ. ಆ ರೀತಿಯ ಅನುಮಾನ ಬರುವಂತೆ ಮಾಡಿದ್ದು ನೀವು ಹಾಗೂ ಈ ರಂಗೋತ್ಸವದ ರೂವಾರಿಗಳು ಎನ್ನುವ ಸತ್ಯವನ್ನು ಅದು ಹೇಗೆ ನಿರ್ಲಕ್ಷಿಸಲು ಸಾಧ್ಯ? ಅಡಪರವರೇ ನಾನು ಬರೆದಿದ್ದೆಲ್ಲವೂ ನಿಮಗೆ ಸತ್ಯ ಅನ್ನಿಸದೇ ಇರಬಹುದು, ನಾನು ದಾಖಲಿಸಿದ್ದು ನಿಮಗೆ ವಿಷ ಎನ್ನಿಸಬಹುದು. ಆದರೆ...
ನಮ್ಮ ನಿಮ್ಮ ಈ ಸತ್ಯ ಅಸತ್ಯಗಳ ನಡುವೆ ನಾಟಕವೊಂದು ಬಲಿಯಾಯಿತಲ್ಲ ಅದಕ್ಕೆಂತಾ ಪರಿಹಾರವನ್ನೊದಗಿಸುತ್ತೀರಿ. ಹಾಗೂ ಆ ನಾಟಕ ಬಲಿಯಾಗುವುದಕ್ಕೆ ಜಾತಿ ಪ್ರೀತಿಯೇ ಕಾರಣವೆಂದು ಅವಕಾಶವಂಚಿತರು ಹೇಳುತ್ತಿದ್ದಾರಲ್ಲಾ ಅದಕ್ಕೇನಂತೀರಿ? ನಾನು ಇರುವುದನ್ನು ಇದ್ದ ಹಾಗೆ ಬರೆದರೆ ನಿಮಗೆ ವಿಷಕಾರುವ ಹಾಗೆನಿಸುತ್ತದೆ. ಆದರೆ ಕಾರ್ಯಪ್ಪನವರು, ಬಡಗೇರರವರು ತಮ್ಮ ಸಂಕಟಗಳನ್ನು ಹೇಳಿಕೊಂಡರೆ ಅದೂ ಕೂಡಾ ನಿಮಗೆ ವಿಷವಾಗಿಯೇ ಕಾಣಿಸುತ್ತದೆ. ಆದರೆ ಒಂದು ನಾಟಕವನ್ನು ವಿನಾಕಾರಣ ಕೈಬಿಟ್ಟು ಜಾತಿ ಕಾರಣಕ್ಕೆ ಇನ್ನೊಂದು ನಾಟಕಕ್ಕೆ ಅವಕಾಶ ಮಾಡಿಕೊಟ್ಟವರು ಹಾಗೂ ಅದಕ್ಕೆ ಪ್ರೇರೇಪಿಸಿದವರು ನಿಮಗೆ ಅಮೃತಧಾರೆ ಹರಿಸುವಂತೆ ಕಾಣಿಸುತ್ತಿದ್ದಾರೆ. ಜಾತಿಕಾರಣವನ್ನು ಪ್ರಶ್ನಿಸುವವರು ಕೆಟ್ಟವರು ಹಾಗೂ ಜಾತಿಕಾರಣಕ್ಕೆ ರಂಗಭೂಮಿಯನ್ನು ಕಲುಷಿತಗೊಳಿಸುವವರು ಒಳ್ಳೆಯವರು ಎನ್ನುವುದು ನಿಮ್ಮ ಭಾವನೆಯಾ?
'ಕರ್ಣಭಾರ ' ನಾಟಕದ ದೃಶ್ಯ |
“ಬ್ರಾಹ್ಮಣರಿಗೆ ನಾಯಕತ್ವ ಕೊಟ್ಟರೂ ನಮಗೆ ಅವರ ಮೇಲೆ ಹೇಗೆ ನಿಯಂತ್ರಣವನ್ನು ಸಾಧಿಸಬೇಕು ಎಂಬುದು ಗೊತ್ತಿರದಷ್ಟು ಮುಠ್ಠಾಳರಲ್ಲ” ಎಂದು ನೀವೇ ಹೇಳಿದ್ದೀರಿ. “ನಮ್ಮನ್ನು ನಾವೇ ಯಾಕೆ ಕನಿಷ್ಟರು ಎಂದುಕೊಳ್ಳಬೇಕು ನಮಗೂ ನಾವೇನೆಂಬುದನ್ನು ಸಾಧಿಸುವ ತಾಕತ್ತಿದೆ” ಎಂದೂ ಸಮರ್ಥಿಸಿಕೊಂಡಿದ್ದೀರಿ. ನಿಮ್ಮ ಈ ರೀತಿಯ ಕಾನ್ಪಿಡೆನ್ಸನ್ನು ನಾನು ಒಪ್ಪಿಕೊಳ್ಳಬಹುದಾಗಿತ್ತಾದರೂ ಅಡ್ಡಂಡ ಕಾರ್ಯಪ್ಪನವರು ಹೇಳಿದ ಮಾತುಗಳು ನಿಮ್ಮದು ಓವರ್ ಕಾನ್ಪಿಡೆನ್ಸ ಎಂದು ಸಾಬೀತುಪಡಿಸಿದವು. ನಾನೂ ಸಹ ನಿಮ್ಮ ಹಾಗೆಯೇ ‘ಎಲ್ಲಾ ಬ್ರಾಹ್ಮಣರೂ ಕೆಟ್ಟವರಲ್ಲ, ಆ ಸಮುದಾಯದಲ್ಲೂ ಜನಪರ ಪ್ರಗತಿಪರರೂ ಇದ್ದಾರೆ’ ಎಂದು ಹೇಳಿ ಕಾರ್ಯಪ್ಪನವರ ಬ್ರಾಹ್ಮಣ ವಿರೋಧಿ ಆಕ್ರೋಶವನ್ನು ತಣ್ಣಗಾಗಿಸಲು ಪ್ರಯತ್ನಿಸಿದೆ. ಆದರೆ ಕಾರ್ಯಪ್ಪನವರು ಹೇಳಿದ ಮಾತುಗಳು ನನ್ನ ಚಿಂತನಾ ಕ್ರಮಕ್ಕೆ ಸವಾಲೆಸೆದವು. “ನೋಡಿ ಈ ಬ್ರಾಹ್ಮಣರಲ್ಲಿ ಬಲಪಂಥೀಯ ಬ್ರಾಹ್ಮಣರು ಇದ್ದಹಾಗೆಯೇ ಎಡಪಂಥೀಯ ಬ್ರಾಹ್ಮಣರೂ ಇದ್ದಾರೆ. ಬಲಪಂಥೀಯ ಬ್ರಾಹ್ಮಣರನ್ನು ಸುಲಭವಾಗಿ ಗುರುತಿಸಿ ಹುಷಾರಾಗಿರಬಹುದು. ಅವರು ನಾಮ ಜನಿವಾರ ಗಂಟೆ ಪೂಜೆ ಹೋಮ ಹವನ ಹಾಗೂ ಸಂಪ್ರದಾಯವಾದಿತನದಿಂದಾಗಿ ತಮ್ಮ ನಿಲುವೇನು ಎನ್ನುವುದನ್ನು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಾರೆ. ಆದರೆ ಈ ಎಡ ಬ್ರಾಹ್ಮಣರಿದ್ದಾರಲ್ಲಾ ತುಂಬಾ ಅಪಾಯಕಾರಿಗಳು. ಬಹಿರಂಗವಾಗಿ ಬ್ರಾಹ್ಮಣ್ಯವನ್ನು ವಿರೋಧಿಸುತ್ತಾರೆ, ದಲಿತರ ಪರವಾಗಿಯೇ ಮಾತಾಡುತ್ತಾರೆ, ಪ್ರಗತಿಪರರಾಗಿಯೇ ಗುರುತಿಸಿಕೊಳ್ಳುತ್ತಾರೆ. ಆದರೆ ಅಂತರಂಗದಲ್ಲಿ ಜಾತಿ ಪ್ರೀತಿಯನ್ನು ಎಂದೂ ಬಿಟ್ಟುಕೊಡುವುದಿಲ್ಲ. ಎಡವಿರಲಿ ಬಲವಿರಲಿ ಎಲ್ಲಿದ್ದರೂ ತಮ್ಮತನವನ್ನು ಸಾಧಿಸುತ್ತಾರೆ ಹಾಗೂ ಅಲ್ಲಿರುವ ಬ್ರಾಹ್ಮಣೇತರರನ್ನು ಬಳಸಿಕೊಂಡು ವಿರೋಧಿಸಿದವರನ್ನು ತಂತ್ರಗಾರಿಕೆಯಿಂದಾ ಹೊರಗೆ ಹಾಕಿ ಅಂತಿಮವಾಗಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಳ್ಳುತ್ತಾರೆ.....” ಎಂದು ಕಾರ್ಯಪ್ಪನವರು ಹೇಳಿದಾಗ ನಿಜಕ್ಕೂ ನನ್ನನ್ನು ಮರುಚಿಂತನೆಗೆ ದೂಡಿತು.
ಕಳೆದ 20 ವರ್ಷಗಳಿಂದ ತೀವ್ರಎಡಪಂಥೀಯ ಹಾಗೂ ಎಡಪಂಥೀಯ ಪಕ್ಷ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡು ಕೆಲಸ ಮಾಡಿದ ನನಗೆ ಈ ಒಂದು ಸರಳ ಸತ್ಯ ಯಾಕೆ ಹೊಳೆಯಲಿಲ್ಲ ಎನ್ನುವ ಗಿಲ್ಟ್ ಕಾಡಿದ್ದಂತೂ ಸುಳ್ಳಲ್ಲ. ನಾನೂ ಸಹ ಎಡಪಂಥೀಯ ಪಕ್ಷದ ಸಾಂಸ್ಕೃತಿಕ ಸಂಘಟನೆಯಾದ ‘ಇಪ್ಟಾ’ದ ಪದಾಧಿಕಾರಿ ಹಾಗೂ ಸಂಘಟಕನಾಗಿ ಕಳೆದ ಒಂದೂವರೆ ದಶಕದಿಂದ ನನ್ನ ಮಿತಿಯೊಳಗೆ ಶ್ರಮಿಸಿದ್ದೇನೆ. ನಮ್ಮದೇ ಎಡಪಂಥೀಯ ಪಕ್ಷದ ಬ್ರಾಹ್ಮಣ ನಾಯಕರು ನನ್ನ ಮುಂದೆ ಹೊಗಳಿ ಹಿಂದೆ ತಂತ್ರಗಳನ್ನು ಮಾಡಿ ತೊಂದರೆ ಕೊಟ್ಟಿದ್ದನ್ನು ನಾನೆಂದೂ ಮರೆಯಲಾಗದು. ಇದನ್ನೆಲ್ಲಾ ನೆನಪಿಸಿಕೊಂಡಾಗ ಕಾರ್ಯಪ್ಪನವರ ಮಾತುಗಳಲ್ಲಿರುವ ಒಂದಿಷ್ಟು ಪ್ರಾಯೋಗಿಕ ಸತ್ಯವನ್ನು ಕುರಿತು ಮರುಚಿಂತನೆ ಮಾಡುವಂತಾಯಿತು. ಅದೆಷ್ಟೇ ಜಾತಿ ಬಿಟ್ಟಿದ್ದೇನೆಂದರು ಸ್ವಜಾತಿ ಪ್ರೀತಿ ಎನ್ನುವುದು ಎಲ್ಲಕ್ಕಿಂತ ಮಿಗಿಲು ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಇಷ್ಟರ ಮೇಲೇಯೂ ನೀವು ಬ್ರಾಹ್ಮಣರ ನಾಯಕತ್ವದಲ್ಲಿಯೇ ರಂಗನಿರಂತರವನ್ನು ಕಟ್ಟುತ್ತಾ ಅವರನ್ನು ನಿಯಂತ್ರಿಸುತ್ತೇವೆ ಎನ್ನುವುದಾದರೆ ಅಡಪರವರೇ ನಿಮ್ಮ ಆಶಯ ಯಶಸ್ವಿಯಾಗಲಿ ಎಂದು ಆಶಿಸುವೆ.
ಶಶಿಧರ್ ಅಡಪ ಸರ್….. ಸಿಜಿಕೆ ರಂಗೋತ್ಸವದ ಕುರಿತು ನನಗೆ ಕೆಲವು ಸಂದೇಹಗಳಿವೆ, ಪ್ರಶ್ನೆಗಳಿವೆ.....
ನನ್ನ ಸಂದೇಹಗಳು ನನ್ನೊಬ್ಬನದೇ ಆಗಿರದೇ ಕೆಲವಾರು ಸಿಜಿಕೆ ಅಭಿಮಾನಿಗಳದ್ದಾಗಿವೆ. ತಾಳ್ಮೆಯಿಂದ ಓದಿ ಸಾಧ್ಯವಾದರೆ ಸಹನೆಯಿಂದ ಉತ್ತರಿಸುತ್ತೀರೆಂದು ನಂಬಿರುವೆ. ಇದರಲ್ಲಿ ನಿಮ್ಮ ರಂಗಬದ್ಧತೆಯನ್ನು ನಾನು ಪ್ರಶ್ನಿಸುತ್ತಿಲ್ಲ. ನಿಮ್ಮ ಮಾರಾಲಿಟಿಯನ್ನು ಡಿಪ್ರೆಸ್ ಮಾಡ್ತಿಲ್ಲ. ಅವಮಾನ ಮಾಡಬೇಕು ಎನ್ನುವ ಉದ್ದೇಶವಂತೂ ಕಿಂಚಿತ್ತೂ ಇಲ್ಲ. ರಂಗನಿರಂತರ ಇನ್ನೂ ಪರಿಣಾಮಕಾರಿಯಾಗಿ ವಿವಾದಾತೀತವಾಗಿ ಬೆಳೆಯಬೇಕು, ಸಿಜಿಕೆರವರ ರಂಗಾಶಯಗಳು ಈಡೇರಬೇಕು ಹಾಗೂ ಪ್ರಾಮಾಣಿಕ ನಾಯಕತ್ವದ ಕೊರತೆಯನ್ನು ಹೊಂದಿರುವ ಪ್ರಸ್ತುತ ರಂಗಭೂಮಿಯ ನೇತೃತ್ವವನ್ನು ರಂಗಬದ್ಧತೆ ಇರುವ ‘ರಂಗನಿರಂತರ’ ವಹಿಸಿಕೊಳ್ಳಬೇಕು ಎನ್ನುವ ಸಕಾರಾತ್ಮಕ ಸದಾಶಯ ಮಾತ್ರ ಆ ಲೇಖನದ ಹಾಗೂ ಈ ಪತ್ರದ ಮೂಲಭೂತ ಉದ್ದೇಶವಾಗಿದೆ. ನಿಮ್ಮ ಸ್ವಭಾವಕ್ಕೆ ತಕ್ಕಂತೆ ಸಕಾರಾತ್ಮಕವಾಗಿ ತೆಗೆದುಕೊಂಡರೆ ನನಗೆ ಸಂತೋಷ, ಇಲ್ಲವೇ ಬೇರೆ ಕೆಲವರ ಮಾತು ಕೇಳಿ ‘ನೀವ್ಯಾರ್ರೀ ಇದನ್ನೆಲ್ಲಾ ಕೇಳೋದಿಕ್ಕೆ’ ಎಂದರೂ ನನಗೇನೂ ಬೇಸರವಿಲ್ಲ. ಯಾಕೆಂದರೆ ಯಾರಾದರೂ ತಮ್ಮ ಸ್ವಂತ ಹಣಹಾಕಿ ಹೇಗಾದರೂ ನಾಟಕೋತ್ಸವ ಮಾಡಿಕೊಳ್ಳಲಿ ಅದನ್ನು ಕೇಳುವುದಕ್ಕೆ ಯಾರೂ ಹೋಗುವುದಿಲ್ಲ. ಅದು ಅವರವರ ಆಶಯ. ಆದರೆ ಯಾವಾಗ ಸಾರ್ವಜನಿಕರ ಹಣ ಪಡೆದು ರಂಗೋತ್ಸವ ಮಾಡಲಾಗುತ್ತದೋ ಆಗ ಸಾರ್ವಜನಿಕರಿಗೆ ಪ್ರಶ್ನಿಸುವ ಹಕ್ಕು ಲಭ್ಯವಾಗುತ್ತದೆ. ಯಾವಾಗ ಸಿಜಿಕೆಯವರು ಕಟ್ಟಿಬೆಳೆಸಿದ ರಂಗತಂಡವೊಂದು ಅವರ ಆಶಯಕ್ಕೆ ವಿರುದ್ಧವಾದ ನಿಲುವನ್ನು ಪಡೆಯುತ್ತದೋ ಅದನ್ನು ಕೇಳಲು ಸಿಜಿಕೆಯ ಒಡನಾಡಿಗಳಿಗೆ ಅಭಿಮಾನಿಗಳಿಗೆ ಹಕ್ಕಿದೆ ಎಂದು ಭಾವಿಸಿದ್ದೇನೆ.
ಇದೆಲ್ಲದಕ್ಕಿಂತಲೂ ನನಗೆ ವ್ಯಯಕ್ತಿಕವಾಗಿ ಸಿಜಿಕೆ ಕುರಿತು ಅಪಾರವಾದ ಗೌರವವಿದೆ. ಅವರ ಕೊನೆಯ ದಿನಗಳಲ್ಲಿ ಅವರೊಂದಿಗೆ ಸಾಕಷ್ಟು ಒಡನಾಡಿದ್ದೇನೆ. ಅವರ ರಂಗಾಶಯ ಮತ್ತು ಉದ್ದೇಶಗಳ ಕುರಿತು ದಿನಗಂಟಲೆ ಚರ್ಚಿಸಿದ್ದೇನೆ. ಅವರ ಕುರಿತಾಗಿಯೇ ‘ರಂಗಜಂಗಮನಿಗೆ ರಂಗನಮನ’ ಎನ್ನುವ ಪುಸ್ತಕವನ್ನೂ ಬರೆದಿದ್ದೇನೆ. ಆ ಪುಸ್ತಕವನ್ನು ನಿಮ್ಮ ‘ರಂಗನಿರಂತರ’ ವೇ ಪ್ರಕಟಿಸಿದೆ. ಹಲವಾರು ಸೆಮಿನಾರುಗಳಲ್ಲಿ ಸಿಜಿಕೆ ಕುರಿತು ಪ್ರಬಂಧ ಮಂಡಿಸಿದ್ದೇನೆ. ಡಾ.ಕೆ.ವೈ.ನಾರಾಯಣಸ್ವಾಮಿಯಂತವರು ‘ಸಿಜಿಕೆ ಭಜನೆ ಸಲ್ಲದು’ ಎಂದಾಗ ಸೆಮಿನಾರಿನಲ್ಲೆ ಸಿಡಿದೆದ್ದು ಪ್ರತಿಭಟಿಸಿ ನನ್ನ ವಿಚಾರ ಮಂಡಿಸಿದ್ದೇನೆ. ಸಿಜಿಕೆ ಮೇಲೆ ಮಾಡಲಾದ ರಾಜಕೀಯ ಹಾಗೂ ಮಠ ಪ್ರೇರಿತ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನೂ ಕೊಟ್ಟಿದ್ದೇನೆ. ಕಳೆದ ಸಲ ಸಿಜಿಕೆ ರಂಗೋತ್ಸವಕ್ಕೆ ಕಪ್ಪಣ್ಣನವರು ಅಡ್ಡಗಾಲು ಹಾಕಿದ್ದಾಗ ಪ್ರತಿಭಟನಾತ್ಮಕ ಲೇಖನವನ್ನೇ ಬರೆದು ರಂಗಕರ್ಮಿಗಳಿಗೆ ತಿಳಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಸಿಜಿಕೆ ರಂಗೋತ್ಸವದ ಕುರಿತು ಹಾಗೂ ಸಿಜಿಕೆ ಆಶಯದ ವಿರೋಧಿ ಅಂಶಗಳನ್ನು ಕುರಿತು ನನ್ನ ಲೇಖನದಲ್ಲಿ ಪ್ರಸ್ಥಾಪಿಸಿದ್ದೇನೆ. ಹೀಗಾಗಿ ನನಗೆ ಇನ್ನೂ ಕೆಲವು ಸಂದೇಹಗಳಿವೆ. ಉತ್ತರಿಸಿದರೆ ಉಪಕಾರವಾಗುತ್ತದೆ.
1. 1. ‘ಸಮುದಾಯ’ದವರಿಗೆ ಹೊರಗುತ್ತಿಗೆ ಯಾಕೆ? :
ಅಡಪರವರೆ, ನಿಮ್ಮ ಉದ್ದೇಶ ಸಿಜಿಕೆ ಆಶಯಗಳನ್ನು ಸಾಕಾರಗೊಳಿಸುವುದೇ ಆಗಿದ್ದರೆ ಯಾಕೆ ಅವರ ಆಶಯಕ್ಕೆ ವಿರುದ್ಧವಾದದ್ದಕ್ಕೆ ಪ್ರೋತ್ಸಾಹ ಕೊಟ್ಟಿದ್ದೀರಿ. ಸಿಜಿಕೆ ‘ಸಮುದಾಯ’ ಸಂಘಟನೆಗೆ ತಮ್ಮ ತನು ಮನ ಧನವನ್ನು ಅರ್ಪಿಸಿದವರೆಂದು ಎಲ್ಲರಿಗೂ ಗೊತ್ತು. ಆ ಸಂಘಟನೆಯಲ್ಲಿರುವವರ ನಿಲುವನ್ನು ಪ್ರಶ್ನಿಸಿ ಸಿಜಿಕೆ ಹೊರಗೆ ಬಂದು ‘ರಂಗನಿರಂತರ’ ಕಟ್ಟಿದರು. ರಂಗನಿರಂತರದ ಹುಟ್ಟು ‘ಸಮುದಾಯ’ ಸಂಘಟನೆಗೆ ಪರ್ಯಾಯವಾಗಿ ಪ್ರತಿಭಟನಾತ್ಮಕ ನೆಲೆಯಲ್ಲಿ ಕಟ್ಟಲಾಯಿತು ಎಂದು ‘ಸಿಜಿಕೆ’ ಸ್ವತಃ ಹೇಳಿದ್ದಾರೆ. ಸಮುದಾಯ ಬಿಟ್ಟಿದ್ಯಾಕೆ? ಎನ್ನುವ ಕುರಿತ ಭಾಗಷಃ ವಿವರಗಳನ್ನು ಅವರ ಆತ್ಮಕಥೆ
‘ಕತ್ತಾಲ ಬೆಳದಿಂಗಳೊಳಗೆ’ ದಾಖಲಿಸಿದ್ದಾರೆ. ಇನ್ನೂ ಕೆಲವಾರು ಜಾತೀಯತೆಗೆ ಸಂಬಂಧಿಸಿದ ಸಂಗತಿಗಳನ್ನು ನನಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ...
ಯಾವ ‘ಸಮುದಾಯ’ ಸಂಘಟನೆಯಿಂದ ಬೇಸರಗೊಂಡು ಬಂಡಾಯವೆದ್ದು ‘ರಂಗನಿರಂತರ’ವನ್ನು ಸಿಜಿಕೆ ಕಟ್ಟಿದರೋ, ಇಂದು ಸಿಜಿಕೆಯವರ ಅನುಪಸ್ಥಿತಿಯಲ್ಲಿ ಅದೇ ‘ರಂಗನಿರಂತರ’ ವು ‘ಸಮುದಾಯ’ದಲ್ಲಿದ್ದವರಿಗೆ ಹಾಗೂ ಪ್ರಸ್ತುತ ಇರುವವರಿಗೆ ಸಿಜಿಕೆ ರಂಗೋತ್ಸವದ ನಾಯಕತ್ವವನ್ನು ಮತ್ತು ನೀತಿ ನಿರೂಪಣೆ ನಿರ್ದೇಶನ ಮಾಡುವ ಅಧಿಕಾರವನ್ನು ಕೊಟ್ಟಿರುವುದು ಯಾಕೆ? ಸಿಜಿಕೆ ಪ್ರತಿರೋಧಿಸಿ ಬಿಟ್ಟು ಬಂದ ಸಂಸ್ಥೆಯಲ್ಲಿರುವವರಿಗೆ ಇಡೀ ರಂಗೋತ್ಸವವನ್ನು ಬೌದ್ಧಿಕ ಹೊರಗುತ್ತಿಗೆ ಕೊಟ್ಟಿರುವುದು ಸಿಜಿಕೆ ಆಶಯಕ್ಕೆ ವಿರೋಧವಲ್ಲವೆ? ಇಲ್ಲಿ ‘ಸಮುದಾಯ’ದ ರಂಗಬದ್ಧತೆ ಹಾಗೂ ಆ ಸಂಘಟನೆಯಲ್ಲಿರುವವರ ಸಾಮಥ್ಯವನ್ನು ನಾನು ಪ್ರಶ್ನಿಸುತ್ತಿಲ್ಲ. ಕನ್ನಡ ರಂಗಭೂಮಿಗೆ ‘ಸಮುದಾಯ’ ಸಂಘಟನೆ ಕೊಟ್ಟ ಕೊಡುಗೆಯ ಮೇಲೆ ನನಗೆ ಗೌರವ ಹಾಗೂ ಹೆಮ್ಮೆಯಿದೆ. ಯಾಕೆಂದರೆ ‘ಸಮುದಾಯ’ ಕೂಡಾ ನಮ್ಮ ‘ಇಪ್ಟಾ’ದ ಸಹೋದರ ಸಂಘಟನೆಯಾಗಿದೆ. ಆದರೆ ನನ್ನ ಆಕ್ಷೇಪಣೆ ಇರುವುದು ಸಿಜಿಕೆ ವಿರೋಧಿಸಿದ ಸಂಘಟನೆ ಹಾಗೂ ವ್ಯಕ್ತಿಗಳಿಗೆ ‘ರಂಗನಿರಂತರ’ ಕರೆದು ನಾಯಕತ್ವವನ್ನು ಕೊಟ್ಟಿರುವುದಾಗಿದೆ. ಅಕಸ್ಮಾತ್ ಸಿಜಿಕೆಯವರಿದ್ದಲ್ಲಿ ಹೀಗೆ ಮಾಡುತ್ತಿದ್ದರಾ? ಹೋಗಲಿ ಸಿಜಿಕೆಯವರೇ ದೊಡ್ಡ ರೀತಿಯಲ್ಲಿ ಅನೇಕ ನಾಟಕೋತ್ಸವಗಳನ್ನು ‘ರಂಗನಿರಂತರ’ದಿಂದಲೇ ಆಯೋಜಿಸಿದ್ದರಲ್ಲಾ ಆಗ ಅವರು ತಮ್ಮ ತಂಡದ ಇಲ್ಲವೇ ರಂಗೋತ್ಸವದ ನಾಯಕತ್ವವನ್ನು ಬೇರೆಯವರಿಗೆ ಎಂದಾದರೂ ಬಿಟ್ಟುಕೊಟ್ಟಿದ್ದರಾ? ಈ ಕುರಿತು ಒಂದಿಷ್ಟು ಸಕಾರಾತ್ಮಕವಾಗಿ ಯೋಚಿಸಬಹುದಾಗಿದೆ. ಚರ್ಚೆ ಸಂವಾದ ಮಾಡಬೇಕಾಗಿದೆ.
2. ಬ್ರಾಹ್ಮಣ ಪಾರುಪತ್ಯ ಯಾಕೆ? : ಸಿಜಿಕೆಯವರು ಬ್ರಾಹ್ಮಣರನ್ನು ಅದರಲ್ಲೂ ಬ್ರಾಹ್ಮಣ್ಯವನ್ನು ಶತಾಯಗತಾಯ ವಿರೋಧಸುತ್ತಿದ್ದರೆಂಬುದು ಅವರ ಜೊತೆಗೆ ಒಡನಾಡಿದವರಿಗೆಲ್ಲಾ ಗೊತ್ತಿರುವ ವಿಚಾರ. ‘ಸಂಸ’ ಕಟ್ಟೆಯ ಮೇಲೆ ಕುಳಿತು ರಂಗಭೂಮಿಯಲ್ಲಿ ಪುರೋಹಿತಶಾಹಿ ಯಜಮಾನಿಕೆ ಹಾಗೂ ತಂತ್ರಗಾರಿಕೆಯ ಕುರಿತು ಹಲವಾರು ಬಾರಿ ಸಿಜಿಕೆ ತಮ್ಮದೇ ಆದ ರೀತಿಯಲ್ಲಿ ಸಂಸ್ಕೃತ ಪದಗಳನ್ನು ಬಳಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದರು. ಈ ವಿಷಯ ಅವರ ಆತ್ಮೀಯ ಒಡನಾಡಿಗಳಾಗಿದ್ದ ಅಡಪರವರಿಗೆ ತಿಳಿಯದ್ದೇನಲ್ಲ. ಆದರೆ ಈಗ ಸಿಜಿಕೆ ಅನುಪಸ್ಥಿತಿಯಲ್ಲಿ ಬ್ರಾಹ್ಮಣ ಸಮುದಾಯದ ಮೆದುಳುಗಳಿಗೆ ಇಡೀ ರಂಗೋತ್ಸವದ ನೀತಿ ನಿರೂಪಣೆ ನಿರ್ದೇಶನದ ಹೊಣೆಗಾರಿಕೆ ಕೊಟ್ಟಿದ್ಯಾಕೆ? ಎಂದು ನಾನೊಬ್ಬನೇ ಪ್ರಶ್ನಿಸುತ್ತಿಲ್ಲ ಹಲವಾರು ರಂಗಕರ್ಮಿಗಳು ತಮ್ಮತಮ್ಮಲ್ಲೇ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟೇ ಯಾಕೆ ನಿಮ್ಮ ರಂಗೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕಪ್ಪಣ್ಣನವರು ನೇರವಾಗಿಯೇ ಸಿಜಿಕೆ ರಂಗೋತ್ಸವದಲ್ಲಿ ಬ್ರಾಹ್ಮಣರ ಪಾರುಪತ್ಯವನ್ನು ಆಕ್ಷೇಪಿಸಿದ್ದಾರೆ. ಇದೇ ವಿಷಯವನ್ನು ನಾನು ಲೇಖನದಲ್ಲಿ ಬರೆದು ಆಕ್ಷೇಪಿಸಿದರೆ ವಿಷಕಾರುತ್ತೇನೆಂದು ಆರೋಪಿಸಿದ್ದು ಅದೆಷ್ಟರ ಮಟ್ಟಿಗೆ ಸರಿ?
ಅಡಪರವರೇ ನನಗೆ ಯಾರ ಮೇಲೂ ವ್ಯಯಕ್ತಿಕವಾದ ದ್ವೇಷವಿಲ್ಲ. ಭಾರೀಘಾಟ್ರವರು ಸಹ ನಮ್ಮ ಸಹೋದರ ಸಂಘಟನೆಯವರಾಗಿದ್ದರಿಂದ ಗೌರವವಿದೆ.
ಪ್ರಸನ್ನರವರ ಸಮಾಜಮುಖಿ ಆಲೋಚನೆ ಮತ್ತು ಬದ್ಧತೆಗಳಿಗೆ ನನ್ನ ಅಭಿನಂದನೆಗಳಿವೆ. ಇನ್ನು ನಾನು ರಂಗನಿರಂತರದ ಭಾಗವಾಗಿರದಿದ್ದರೂ ಸಿಜಿಕೆ ಇದ್ದಾಗಿನಿಂದಲೂ ರಂಗನಿರಂತರದೊಂದಿಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಯಾರನ್ನೂ ವ್ಯಯಕ್ತಿಕವಾಗಿ ದ್ವೇಷಿಸದೇ ಕೇವಲ ರಂಗನಿರಂತರದ ಹಿತಾಸಕ್ತಿಯಿಂದ ಹಾಗೂ ಸಿಜಿಕೆಯವರ ಆಶಯದ ಮೇಲಿರುವ ಬದ್ಧತೆಯಿಂದಾಗಿ ನಾನು ಪ್ರತಿಕ್ರಿಯಿಸಿದ್ದೇನೆ. ಬ್ರಾಹ್ಮಣ್ಯದ ತಂತ್ರಗಾರಿಕೆಯ ಮೇಲೆ ನನಗೆ ಇವತ್ತಿಗೂ ಅಸಮಾಧಾನವಿದೆ. ಕೆಲವು ಪ್ರಗತಿಪರರೆಂದುಕೊಳ್ಳುವ ಬ್ರಾಹ್ಮಣರ ಸ್ವಜಾತಿ ಪ್ರೀತಿಯ ಕುರಿತು ಈಗಲೂ ಆಕ್ಷೇಪನೆ ಇದೆ. ಆದರೆ ನಾನು ಬ್ರಾಹ್ಮಣರು ಎನ್ನುವ ಒಂದೇ ಕಾರಣಕ್ಕೆ ಅವರನ್ನು ದ್ವೇಷಿಸುವುದಿಲ್ಲ. ರಂಗಭೂಮಿಗೆ ಬ್ರಾಹ್ಮಣ ಸಮುದಾಯದವರ ಕೊಡುಗೆಯನ್ನು ಶ್ಲಾಘಿಸುತ್ತಲೇ ಕೆಲವು ಬ್ರಾಹ್ಮಣರ ಕುಲಬಾಂಧವ್ಯ ಪ್ರೀತಿಯನ್ನು ಹಾಗೂ ಅದಕ್ಕಾಗಿ ಮಾಡುವ ಗುಂಪುಗಾರಿಕೆಯನ್ನು ಮತ್ತು ಸ್ವಜನಪಕ್ಷಪಾತವನ್ನು ಸಿಜಿಕೆಯವರ ಹಾಗೆಯೇ ನಾನೂ ಸಹ ಶತಾಯಗತಾಯ ವಿರೋಧಿಸುತ್ತೇನೆ. ಅಂತಹ ಸ್ವಜಾತಿಯ ಪ್ರೀತಿ ಎನ್ನುವುದು ಪ್ರಸ್ತುತ ‘ಸಿಜಿಕೆ ರಂಗೋತ್ಸವ’ದಲ್ಲಿ ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ವ್ಯಾಕುಲನಾಗಿದ್ದೇನೆ. ಒಂದೇ ಸಮುದಾಯದ ನಿರ್ದೇಶಕರ ನಾಟಕಗಳಿಗೆ ಸಿಜಿಕೆ ರಂಗೋತ್ಸವದಲ್ಲಿ ಹೆಚ್ಚು ಅವಕಾಶ ಕೊಟ್ಟಿದ್ದಕ್ಕಾಗಿ ಎಲ್ಲರ ಹಾಗೆಯೇ ನನಗೂ ಬೇಸರವಿದೆ. ಈ ರೀತಿಯ ವೃತಾ ಆರೋಪಕ್ಕೆ ನಮ್ಮೆಲ್ಲರ ನೆಚ್ಚಿನ ‘ರಂಗನಿರಂತರ’ ಒಳಗಾಯಿತಲ್ಲಾ ಎನ್ನುವ ನೋವು ಕೂಡಾ ನನ್ನನ್ನು ಕಾಡಿದ್ದಿದೆ. ಯಾವ ಬ್ರಾಹ್ಮಣರನ್ನು ಸಿಜಿಕೆ ವಿರೋಧಿಸುತ್ತಿದ್ದರೋ ಅಂತಹ ಸಮುದಾಯದವರನ್ನೇ ಕರೆದು ಸಿಜಿಕೆ ರಂಗೋತ್ಸವದ ಬೌದ್ಧಿಕ ಉಸ್ತುವಾರಿ ವಹಿಸುವ ಅಗತ್ಯವಿತ್ತಾ? ಸಿಜಿಕೆ ಜೀವಂತವಾಗಿದ್ದರೆ ಈ ರೀತಿ ಎಂದಾದರು ಬ್ರಾಹ್ಮಣರಿಗೆ ತಮ್ಮ ಸಂಘಟನೆಯ ನಾಯಕತ್ವ ವಹಿಸುವ ಕನಿಷ್ಟ ಸಾಧ್ಯತೆಗಳಿದ್ದವಾ? ಸಿಜಿಕೆ ಒಡನಾಡಿಗಳಾದ ನೀವು ಸಿಜಿಕೆ ಇದ್ದಿದ್ದರೆ ಇಂತಹ ಸಂದರ್ಭದಲ್ಲಿ ಹೇಗೆ ರಿಯಾಕ್ಟ್ ಮಾಡುತ್ತಿದ್ದರು ಎನ್ನುವುದನ್ನು ಅರಿತು ‘ರಂಗನಿರಂತರ’ ಕಾರ್ಯಕ್ರಮ ರೂಪಿಸಿದ್ದರೆ ಅವರ ಆಶಯಕ್ಕೆ ನ್ಯಾಯ ಸಲ್ಲಿಸಬಹುದಾಗಿತ್ತಲ್ಲವೆ? ನಾನು ಬ್ರಾಹ್ಮಣ ಸಂಜಾತ ರಂಗನಿರ್ದೇಶಕರ ರಂಗಬದ್ದತೆಯನ್ನಾಗಲೀ ಇಲ್ಲವೇ ಪ್ರತಿಭೆಯನ್ನಾಗಲೀ ಇಲ್ಲಿ ಪ್ರಶ್ನಿಸುತ್ತಿಲ್ಲ, ನನ್ನ ಪ್ರಶ್ನೆ ಇರುವುದು ಒಂದೇ ಸಮುದಾಯದವರ ನಿರ್ದೇಶನದ ಬಹುತೇಕ ನಾಟಕಗಳಿಗೆ ಯಾಕೆ ಅವಕಾಶ ಕೊಡಲಾಯಿತು? ಹಾಗೂ ಈ ನಾಟಕಗಳ ಆಯ್ಕೆಯಲ್ಲಿ ಯಾವ ಕಾಣದ ಕೈ ಕೆಲಸ ಮಾಡಿತು?
3. ಜಾತಿ ಪ್ರೀತಿಗೆ ‘ಕೊಡವ’ ನಾಟಕ ಬಲಿಯಾಯಿತಾ? : ಈ ಆಕ್ಷೇಪ ಅಲ್ಲವೇ ಅಡಪರವರೇ ನಿಮ್ಮನ್ನು ತಲ್ಲಣಗೊಳಿಸಿದ್ದು. ನೀವು ಹೇಳುತ್ತಿದ್ದೀರಿ “ಇದರಲ್ಲಿ ಜಾತೀಯತೆ ಏನಿಲ್ಲ, ಶಶಿಧರ್ ಭಾರೀಘಾಟರೇ ಖುದ್ದಾಗಿ ಕಾರ್ಯಪ್ಪರವರನ್ನು ಸಂಪರ್ಕಿಸಿ ನಾಟಕವನ್ನು ಪ್ರದರ್ಶಿಸಲು ಮೊದಲು ಕೇಳಿದ್ದಾರೆ. ಹೀಗಾಗಿ ಅವರೇ ಸೂಚಿಸಿದ ನಾಟಕವನ್ನು ಅವರ್ಯಾಕೆ ಅವಕಾಶವಂಚಿತರನ್ನಾಗಿ ಮಾಡುತ್ತಾರೆ?” ಎನ್ನುವುದು ನಿಮ್ಮ ಸಮರ್ಥನೆ. ಆದರೆ ಕಾರ್ಯಪ್ಪನವರು ಹೇಳುವುದೇ ಬೇರೆಯಾಗಿದೆ. “ನನಗೆ ನಾಟಕ ಮಾಡಲು ಹೇಳಿದ್ದು ಶಶಿಧರ್ ಅಡಪರವರು, ಅವರ ಮಾತನ್ನು ನಂಬಿ ನಾನು ಮಡಕೇರಿಯಿಂದ ಕುಟುಂಬ ಸಮೇತ ಬೆಂಗಳೂರಿಗೆ ಬಂದು ರಂಗನಿರ್ದೇಶಕ ಮಾಲತೇಶ್
ಬಡಿಗೇರರ ಮನೆಯ ಪಕ್ಕದಲ್ಲೇ ಬಾಡಿಗೆ ಮನೆ ಮಾಡಿ ಕೊಡವ ಭಾಷೆಯ ನಾಟಕವನ್ನು ಸುಮಾರು ಎಪ್ಪತ್ತು ಸಾವಿರ ಹಣ ಖರ್ಚು ಮಾಡಿ ನಿರ್ಮಿಸಿದೆ. ಆದರೆ ರಂಗೋತ್ಸವದಲ್ಲಿ ಬೇರೆ ಬ್ರಾಹ್ಮಣ ನಿರ್ದೇಶಕರ ನಾಟಕಕ್ಕೆ ಅವಕಾಶವನ್ನು ಮಾಡಿಕೊಡಲು ನನ್ನ ನಾಟಕವನ್ನು ಕಿತ್ತೆಸೆಯಲಾಯಿತು. ನನ್ನ ಶ್ರಮ ಸಮಯ ಹಣ ವ್ಯರ್ಥವಾಯಿತು. ‘ಈಗ ಉಪಭಾಷೆಗಳಿಗೆ ಅವಕಾಶವಿಲ್ಲ, ದ್ವಾವಿಡ ಭಾಷೆಗಳ ನಾಟಕಗಳನ್ನು ಮಾತ್ರ ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು’ ಎಂದು ಸಬೂಬು ಹೇಳಿ ನಂತರ ತುಳು ಉಪಭಾಷೆಯ ನಾಟಕಕ್ಕೆ ಅವಕಾಶವನ್ನು ಕೊಡಲಾಯಿತು. ಇದು ಪಕ್ಕಾ ನಂಬಿಕೆ ದ್ರೋಹ. ದ್ರಾವಿಡ ಭಾಷಾ ರಂಗೋತ್ಸವ ಎಂದು ಹೇಳಿ ದ್ವಾವಿಡವಲ್ಲದ ಗೋವಾ ಕೊಂಕಣಿ ಭಾಷೆಯ ನಾಟಕಕ್ಕೂ ಅವಕಾಶ ಕೊಡಲಾಯಿತು. ಯಾವಾಗ ದ್ವಾವಿಡ ಭಾಷಾ ನಾಟಕೋತ್ಸವವೆಂದು ನಿರ್ಧರಿಸಲಾಗಿತ್ತೋ ಕೊಡವ ಕೂಡಾ ದ್ವಾವಿಡ ಭಾಷೆಯೇ ಅಲ್ಲವೇ. ದ್ವಾವಿಡವಲ್ಲದ ಭಾಷಾ ನಾಟಕಕ್ಕೆ ಯಾಕೆ ಅವಕಾಶ ಮಾಡಿಕೊಡಲಾಯಿತು. ಇದಕ್ಕೆಲ್ಲಾ ಮೂಲ ಕಾರಣ ಈ ರಂಗೋತ್ಸವದ ನಿರ್ದೇಶಕರ ಸ್ವಜಾತಿ ಪ್ರೀತಿಯೇ ಆಗಿದೆ” ಎಂದು ಕಾರ್ಯಪ್ಪನವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ರಂಗಕರ್ಮಿ ಅಡ್ಡಂಡ ಕಾರಿಯಪ್ಪ |
ಇದಕ್ಕೆ ಪೂರಕವಾಗಿ ಮಾಲತೇಶ್ ಬಡಿಗೇರರವರು ಸಹ “ ನನ್ನನ್ನು ಈ ಬ್ರಾಹ್ಮಣ ಸಮುದಾಯದವರು ತುಳಿಯುತ್ತಲೇ ಬಂದಿದ್ದಾರೆ. ಶಶಿಧರ್ ಭಾರೀಘಾಟರವರ ನೇತೃತ್ವದ ನಾಟಕ ಬೆಂಗಳೂರಿನಲ್ಲಿ ಪ್ರತಿ ವರ್ಷ ನಾನೂ ಕೂಡಾ ನನ್ನ ನಾಟಕ ಪ್ರದರ್ಶಿಸುತ್ತಿದ್ದೆ. ಆದರೆ ಈ ಸಲ ನನ್ನನ್ನು ಒಂದೇ ಒಂದು ಮೀಟಿಂಗ್ಗೂ ಕರೆಯಲಿಲ್ಲ. ನಾಟಕ ಮಾಡಿಸಲೂ ಹೇಳಲಿಲ್ಲ. ನಾನೇ ಅವಕಾಶ ಕೊಡಲು ಕೇಳಿದಾಗ ಎರಡನೇ ಕಂತಲ್ಲಿ ನೊಡೋಣ ಎಂದವರು ಆಗಲೂ ಕೊಡಲಿಲ್ಲ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದಾರೆ. ಸಿಜಿಕೆ ರಂಗೋತ್ಸವದಲ್ಲಿ ಕೂಡಾ ನನ್ನ ನಾಟಕಕ್ಕೆ ಅನ್ಯಾಯ ಮಾಡಿದರು. ರಂಗೋತ್ಸವಕ್ಕಿಂತಾ ಮೊದಲು ಇದೇ ಬಾರೀಘಾಟರವರು ಭೇಟಿಯಾದಾಗಲೆಲ್ಲಾ ಸಿಜಿಕೆ ರಂಗೋತ್ಸವದ ನಾಟಕದ ತಯಾರಿ ಕುರಿತು ವಿಚಾರಿಸಿದರು. ಸಿದ್ದಗೊಳ್ಳುತ್ತಿದೆ ಎಂದೇ ಹೇಳಿದ್ದೆ. ಹೇಳಿದ ಹಾಗೆಯೇ ನಾಟಕವನ್ನು ಸಿದ್ದಗೊಳಿಸಿದೆ. ಆದರೆ ಆ ನಂತರ ನಡೆದ ರಂಗೋತ್ಸವದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ‘ಮಾಲತೇಶ ಬಡಿಗೇರರು ನಿರ್ದೇಶಿಸುವ ನಾಟಕ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶಿಸುವ ಮಟ್ಟದಲ್ಲಿರೋದಿಲ್ಲ’ ಎಂದರಂತೆ. ನಾನು ನಿರ್ದೇಶಿಸಿದ ಹಲವಾರು ಕನ್ನಡ ನಾಟಕಗಳು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಪಡೆದಿವೆ. ಆದರೆ ಉದ್ದೇಶಪೂರ್ವಕವಾಗಿ ನನ್ನ ನಾಟಕವನ್ನು ಕುಂಟು ನೆಪ ಹೇಳಿ ಸಿಜಿಕೆ ರಂಗೋತ್ಸವದಿಂದ ತೆಗೆದು ಹಾಕಲಾಯಿತು. ಬ್ರಾಹ್ಮಣರು ತಮ್ಮ ಕುಲಬಾಂಧವತೆ ಮೆರೆಯಲು ನಮ್ಮ ನಾಟಕಕ್ಕೆ ಅನ್ಯಾಯ ಮಾಡಲಾಯಿತು.” ಹೀಗೆ ಮಾಲತೇಶ್ ನೇರವಾಗಿಯೇ ಹಲವಾರು ಉದಾಹರಣೆಗಳ ಜೊತೆಗೆ ತಮ್ಮ ಬ್ರಾಹ್ಮಣ ಜಾತಿ ಪ್ರೀತಿಯ ತಂತ್ರಗಾರಿಕೆಯ ವಿರುದ್ಧ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ.
ಅಡಪರವರೇ... ‘ಕೊಡವ ನಾಟಕವು ನೀವು ಹೇಳುವುದಕ್ಕಿಂತ ಮುಂಚೆಯೇ ಸಿದ್ದವಾಗಿತ್ತು’ ಎಂದು ನೀವು ನನಗೆ ಹೇಳಿದ್ದು ಸರಿಯಾ? ಅಥವಾ ‘ನಿಮ್ಮ ಮಾತನ್ನು ನಂಬಿ ನಾಟಕವನ್ನು ಶುರುಮಾಡಲಾಯಿತು’ ಎಂದು ಕಾರ್ಯಪ್ಪನವರು ಹೇಳಿದ್ದು ಸುಳ್ಳಾ?. ಭಾರೀಘಾಟರವರೇ ಕಾರ್ಯಪ್ಪನವರನ್ನು ಸಂಪರ್ಕಿಸಿ ರಂಗೋತ್ಸವದಲ್ಲಿ ನಾಟಕ ಮಾಡಲು ಹೇಳಿದ್ದರೆಂದು ನೀವು ನನಗೆ ಹೇಳಿದ್ದು ಸರಿಯಾ? ಇಲ್ಲವೇ ‘ಶಶಿಧರ್ ಅಡಪರವರೇ ನನಗೆ ಖುದ್ದಾಗಿ ರಂಗೋತ್ಸವಕ್ಕೆ ಕೊಡವ ಭಾಷೆ ನಾಟಕ ಮಾಡಲು ತಿಳಿಸಿದರು’ ಎಂದು ಕಾರ್ಯಪ್ಪನವರು ಹೇಳಿದ್ದು ಸುಳ್ಳಾ?.
ನಂತರ ‘ದ್ವಾವಿಢ ಭಾಷೆಗಳ ನಾಟಕಗಳಿಗೆ ಮಾತ್ರ ಅವಕಾಶ, ಉಪಭಾಷೆಗಳ ನಾಟಕಗಳಿಗಿಲ್ಲ’ ಎಂದು ನೀವು ಕಾರ್ಯಪ್ಪನವರಿಗೆ ಸಬೂಬು ಹೇಳಿ ತದನಂತರ ಉಪಭಾಷೆಯಾದ ತುಳು ಭಾಷೆಗೆ ಅವಕಾಶ ಕೊಟ್ಟು ಮಾತು ತಪ್ಪಿದ್ದು ಸರಿಯಾ? ಇಲ್ಲವೇ ಕಾರ್ಯಪ್ಪನವರು ಹೇಳುವುದೇ ಸುಳ್ಳಾ?. ‘ದ್ರಾವಿಢ ಭಾಷಾ ನಾಟಕಗಳನ್ನು ಮಾತ್ರ ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದು ಬಹಿರಂಗವಾಗಿಯೇ ಹೇಳಿದ ನೀವುಗಳು ಅದ್ರಾವಿಢ ಭಾಷೆಯಾದ ಕೊಂಕಣಿ ನಾಟಕಕ್ಕೆ ಯಾಕೆ ಅವಕಾಶ ಮಾಡಿಕೊಟ್ಟಿರಿ?, ಕೊಡವ ಭಾಷೆಯನ್ನು ಕೈಬಿಟ್ಟಿರಿ?’ ಎಂದು ಕಾರ್ಯಪ್ಪನವರು ಪ್ರಶ್ನಿಸುತ್ತಿರುವುದು ತಪ್ಪಾ? ಇಲ್ಲವೇ ಹೇಳಿದ್ದೊಂದು ಮಾಡಿದ್ದಿನ್ನೊಂದು ನೀತಿ ಸರಿಯಾ?, ‘ಕೊಡವ ನಾಟಕವನ್ನು ಕೈಬಿಟ್ಟಿದ್ದು ಬ್ರಾಹ್ಮಣ ನಿರ್ದೇಶಕರ ನಾಟಕಕ್ಕೆ ಅವಕಾಶ ಮಾಡಿಕೊಡಲೆಂದು ಹಾಗೂ ಅದಕ್ಕೆ ಶಶಿಧರ್ ಭಾರೀಘಾಟರ ಜಾತಿಪ್ರೀತಿಯೆ ಕಾರಣ ಎಂದು ಕಾರ್ಯಪ್ಪ ಹಾಗೂ ಬಡಿಗೇರರು ನೇರವಾಗಿ ಪ್ರಶ್ನಿಸುವುದರಲ್ಲಿ ಏನಾದರೂ ಸತ್ಯ ಇದೆಯಾ? ಇಲ್ಲವಾ?
ದಯವಿಟ್ಟು ಕಾಡುವ ಈ ಸಂದೇಹಗಳಿಗೆ ರಂಗನಿರಂತರದ ಪರವಾಗಿ ಅದರ ಅಧ್ಯಕ್ಷರಾದ ನೀವು ಉತ್ತರಿಸಲು ಸಾಧ್ಯವಾ?. ಈ ಮೇಲಿನ ಯಾವುದೇ ಪ್ರಶ್ನೆಗಳನ್ನು ನಾನು ನಿಮ್ಮ ಮೇಲೆ ಹೇರುತ್ತಿಲ್ಲ, ವಿಷಕಾರುತ್ತಿಲ್ಲ. ಊಹಾಪೂಹದಿಂದ ಉಲ್ಲೇಖಿಸುತ್ತಿಲ್ಲ. ಈ ಎಲ್ಲದಕ್ಕೂ ಆಪ್ ದಿ ರಿಕಾರ್ಡ ಸಾಕ್ಷಿಗಳಿವೆ. ಇನ್ನೂ ಅನುಮಾನಗಳಿದ್ದರೆ ನನ್ನನ್ನೂ ಸೇರಿದಂತೆ ಇದಕ್ಕೆ ಸಂಬಂಧಿಸಿದವರೆಲ್ಲಾ ಒಂದೆಡೆ ಸೇರಿ ಮುಕ್ತವಾಗಿ ಚರ್ಚಿಸಬಹುದಾಗಿದೆ. ನನಗೆ ವ್ಯಯಕ್ತಿಕವಾಗಿ ಯಾವುದೇ ಒಂದು ಜಾತಿ ಧರ್ಮದ ಮೇಲೆ ಪ್ರೀತಿಯೂ ಇಲ್ಲಾ ದ್ವೇಷವೂ ಇಲ್ಲಾ ಅನ್ನುವುದನ್ನು ಸ್ಪಷ್ಟೀಕರಿಸುತ್ತೇನೆ. ಯಾವುದೇ ಜಾತಿಯವರಾಗಲಿ ರಂಗಭೂಮಿಯಲ್ಲಿ ಸ್ವಜನಪಕ್ಷಪಾತ ಮಾಡಿ ಬೇರೆಯವರನ್ನು ಅವಕಾಶ ವಂಚಿತರನ್ನಾಗಿ ಮಾಡಿದಾಗಲೂ ಬರಹದ ಮೂಲಕ ಪ್ರತಿಭಟನೆಯನ್ನು ದಾಖಲಿಸಿದ್ದೇನೆ. ನನ್ನ ಧರ್ಮ ‘ರಂಗಭೂಮಿ’, ನನ್ನ ಜಾತಿ ಕಲಾವಿದರ ಜಾತಿ ಎಂದುಕೊಂಡಿದ್ದೇನೆ. ಅಡಪರವರೇ, ನಿಮ್ಮ ಪ್ರಕಾರ ಬ್ರಾಹ್ಮಣ್ಯದ ಹುನ್ನಾರಗಳಿಲ್ಲವೆಂದಾದರೆ ಇನ್ಯಾವ ಪ್ರಭಲ ಕಾರಣಕ್ಕೆ ಸಿದ್ದಗೊಂಡ ಕಾರ್ಯಪ್ಪನವರ ನಾಟಕವನ್ನು ಅವಕಾಶ ವಂಚಿತ ಗೊಳಿಸಲಾಯಿತು? ಉಪಭಾಷೆಗಳ ನಾಟಕಗಳಿಗೆ ಅವಕಾಶವಿಲ್ಲ ಎಂದು ಕಾರ್ಯಪ್ಪನವರಿಗೆ ಹೇಳಿ ಅವರ ಕೊಡವ ನಾಟಕವನ್ನು ಕೈಬಿಟ್ಟು ತುಳು ನಾಟಕಕ್ಕೆ ಅವಕಾಶ ಮಾಡಿಕೊಡಲಾಯಿತು? ಎಂಬುದನ್ನಾದರೂ ಸ್ಪಷ್ಟವಾಗಿ ಹೇಳಿ.
4. ರಂಗೋತ್ಸವ ‘ಪ್ರಸನ್ನ’ಮಯವಾ? : ಸಿಜಿಕೆ ರಂಗೋತ್ಸವ ಮುಗಿದ ನಂತರ ಬಹುತೇಕರ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಮೂಡಿದ್ದು ಇದು ರಾಷ್ಟ್ರೀಯ ರಂಗೋತ್ಸವವಾ ಇಲ್ಲವೇ ಬೀದಿ
ನಾಟಕೋತ್ಸವವಾ? ಎನ್ನುವುದಾಗಿತ್ತು. ಈ ಕುರಿತು ಈಗಾಗಲೇ ನನ್ನ ಲೇಖನದಲ್ಲಿ ವಿವರಿಸಿದ್ದೇನೆ. ಆದರೆ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಸನ್ನರವರ ಮೇರು ಪ್ರತಿಭೆಗೆ ‘ರಂಗನಿರಂತರ’ ಮಾರುಹೋಗಿ ಅವರ ಇಷಾರೆಗೆ ತಕ್ಕಂತೆ ಕುಣಿಯುತ್ತಿದೆಯಾ?, ಅವರ ಅಪ್ರಾಯೋಗಿಕ ಆದರ್ಶವಾದವಾದ ‘ಸುಸ್ಥಿರ ಬದುಕಿನ’ ಅತಾರ್ಕಿಕ ಸಿದ್ದಾಂತದ ಪ್ರಚಾರಕ್ಕಾಗಿ ಸಿಜಿಕೆ ರಂಗೋತ್ಸವ ವೇದಿಕೆಯಾಗಿ ಬಳಸಲ್ಪಟ್ಟಿತಾ?. ಸಿಜಿಕೆ ಇದ್ದಲ್ಲಿ ತಮ್ಮ ತಂಡವನ್ನು ಯಾರದೋ ಸಿದ್ಧಾಂತದ ಪ್ರತಿಪಾದನೆಗೆ ಉಪಯೋಗಿಸಿಕೊಳ್ಳಲು ಅವಕಾಶ ಕೊಡುತ್ತಿದ್ದರಾ? ಸಂತೆ ಹೊತ್ತಿಗೆ ಮೂರು ಮೊಳ ನೇಯ್ದುಕೊಂಡು ಬಂದಂತಿದ್ದ ಬೀದಿನಾಟಕವನ್ನು ‘ರಂಗನಾಟಕ’ ಎನ್ನುವಂತೆ ಪ್ರದರ್ಶಿಸಿರುವುದು ಯಾಕೆ? ರಾಷ್ಟ್ರೀಯ ರಂಗೋತ್ಸವದ ಕಾನ್ಸೆಪ್ಟ್ನ್ನೇ ಪ್ರಸನ್ನರಿಗೋಸ್ಕರ ಬದಲಾಯಿಸಿದ್ದು ಯಾಕೆ? ಪ್ರಸನ್ನರವರು ಕೊಟ್ಟ ಘೋಷವಾಕ್ಯದ ಆಶಯಕೆ ತಕ್ಕ ಹಾಗೆ ಈ ರಂಗೋತ್ಸವದ ನಾಟಕಗಳನ್ನು ಆಯ್ಕೆ ಮಾಡುವ ದಾವಂತದಲ್ಲಿ ಇಡೀ ರಾಷ್ಟ್ರೀಯ ರಂಗೋತ್ಸವವನ್ನು ಬೀದಿ ನಾಟಕೋತ್ಸವದ ಹಾಗೆ ಆಯೋಜಿಸಿ ಆಡಿಕೊಳ್ಳುವವರ ಬಾಯಿಗೆ ರಸಗವಳ ಕೊಟ್ಟಂತಾಯಿತಲ್ಲಾ ಯಾಕೆ? ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ‘ರಂಗನಿರಂತರ’ ತಂಡದ ಒಂದು ರಂಗಪ್ರಯೋಗ ಇರಲೇಬೇಕೆಂಬುದಾಗಿದ್ದರೆ ಈಗಾಗಲೇ ಬಿಜಿ ರವರ ನಿರ್ದೇಶನದ ‘ಮಳೆ ಮಾಂತ್ರಿಕ’ ನಾಟಕ ಸಿದ್ಧವಾಗಿಯೇ ಇತ್ತಲ್ಲಾ ಅದನ್ನು ಬಿಟ್ಟು ಎರಡೇ ದಿನದಲ್ಲಿ ಪ್ರಸನ್ನರವರು ಕಟ್ಟಿಕೊಟ್ಟ ಇನಸ್ಟಂಟ್ ಬೀದಿನಾಟಕವನ್ನು ಪ್ರದರ್ಶಿಸುವ ಅಗತ್ಯವಾದರು ಏನಿತ್ತು?. ಇಡೀ ನಾಟಕೋತ್ಸವವೇ ಪ್ರಸನ್ನಮಯವಾಗಿರುವಂತೆ ಕಂಡುಬಂದಿತು. ಅಂದರೆ ‘ರಂಗನಿರಂತರ’ ವನ್ನು ಪ್ರಸನ್ನ ಹಾಗೂ ಅವರ ಕುಲಬಾಂಧವರು ನಿಯಂತ್ರಿಸುತ್ತಿದ್ದಾರಾ? ಹಾಗೇನಾದರೂ ಆಗಿದ್ದಲ್ಲಿ ಇದು ಸಿಜಿಕೆ ಆಶಯಕ್ಕೆ ವಿರುದ್ಧವಾದದ್ದಾಗಿದೆಯಲ್ಲವೇ? ಸಿಜಿಕೆ ಕೊನೆ ಉಸಿರಿರುವವರೆಗೂ ಎಂದೂ ತಮ್ಮ ಹಾಗೂ ತಮ್ಮ ತಂಡದ ಸೂತ್ರವನ್ನು ಬೇರೆಯವರ ಕೈಯಲ್ಲಿ ಕೊಡಲಿಲ್ಲ ಹಾಗೂ ಅವರೆಂದೂ ಬೇರೆಯವರ ನಿರ್ಣಯ ಹಾಗೂ ನಿರ್ಧಾರಗಳಿಗೆ ತಲೆಬಾಗುತ್ತಿರಲಿಲ್ಲ. ಆದರೆ ಅವರ ಅನುಪಸ್ಥಿತಿಯಲ್ಲಿ ‘ರಂಗನಿರಂತರ’ ತನ್ನೊಳಗಿನ ಶಕ್ತಿ ಹಾಗೂ ಯುಕ್ತಿಗಿಂತಾ ಹೊರಗಿನ ಶಕ್ತಿಗಳಿಗೆ ಬಲಿಯಾಗುತ್ತಿದೆಯಾ ಎನ್ನುವ ಸಂದೇಹ ರಂಗನಿರಂತರದ ಒಳಗಿರುವ ಹಾಗೂ ಹೊರಗಿರುವ ರಂಗಕರ್ಮಿಗಳನ್ನು ಕಾಡುತ್ತಿದೆ. ಇದಕ್ಕೆ ಸಮರ್ಥವಾಗಿ ಉತ್ತರಿಸುವ ಜವಾಬ್ದಾರಿ ರಂಗನಿರಂತರದ ಅಧ್ಯಕ್ಷರಾದ ಅಡಪರವರ ಮೇಲಿದೆ.
ಮೆಟ್ಟಿಲು ಮೆಲುಕಿನಲ್ಲಿ ಹಿರಿಯ ರಂಗಕರ್ಮಿಗಳು |
6. ಏನಾಗಬೇಕಾಗಿತ್ತು ಏನಾಯ್ತು? : ಸಿಜಿಕೆರವರ ರಾಷ್ಟ್ರೀಯ ರಂಗೋತ್ಸವದಲ್ಲಿ ಸಿಜಿಕೆ ಕುರಿತ ಕಾರ್ಯಕ್ರಮಗಳು ಹೆಚ್ಚಿರುವುದು ಅಪೇಕ್ಷಣೀಯ. ಆದರೆ ಇಡೀ ನಾಟಕೋತ್ಸದಲ್ಲಿ ಸಿಜಿಕೆ ಕೇವಲ ಹೆಸರಿಗೆ ಉತ್ಸವಮೂರ್ತಿಯಂತಾಗಿದ್ದು ಅವರ ಆಶಯ ವಿಚಾರಗಳ ಕುರಿತು ಚಿಂತನ ಮಂಥನ ನಡೆಯಲೇ ಇಲ್ಲ. ಸಿಜಿಕೆಯವರ ರಂಗಬದುಕು ಹಾಗೂ ಸಾಧನೆಯ ಕುರಿತು ರಂಗೋತ್ಸವದಲ್ಲಿ ಪ್ರತಿದಿನ ವಿಚಾರ ಸಂಕಿರಣ, ಚರ್ಚೆ ಸಂವಾದಗಳಿದ್ದಲ್ಲಿ ನಿಜಕ್ಕೂ ಸಿಜಿಕೆರವರನ್ನು ನೆನಪಿಸಿಕೊಂಡಂತಾಗುತ್ತಿತ್ತು ಹಾಗೂ ಹೊಸತಲೆಮಾರಿನ ಯುವಕರಿಗೆ ಸಿಜಿಕೆ ರಂಗಕೆಲಸಗಳು ಸ್ಪೂರ್ತಿಯಾಗುವ ಸಾಧ್ಯತೆ ಬೇಕಾದಷ್ಟಿತ್ತು. ಆದರೆ.... ಮಾಡಲೇ ಬೇಕಾದದ್ದನ್ನು ಬಿಟ್ಟು ರಂಗೋತ್ಸವದಲ್ಲಿ ಮಿಕ್ಕದ್ದನ್ನೆಲ್ಲಾ ಮಾಡಿದಂತಾಯಿತು. ಕಾವ್ಯ, ಚಿತ್ರಕಲೆ ಕುರಿತು ಪ್ರತಿದಿನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕೂ ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೂ ಏನು ನೇರಾ ನೇರ ಸಂಬಂಧ? ಹೋಗಲಿ ಈ ಕಾವ್ಯವೇದಿಕೆ ಹಾಗೂ ಚಿತ್ರಕಲಾವೇದಿಕೆಗಳು ಸಿಜಿಕೆ ಕುರಿತಾದ ಚಿತ್ರ ಇಲ್ಲವೇ ಕಾವ್ಯವನ್ನು ಸೃಷ್ಟಿಸಲು ಬಳಕೆಯಾದವಾ ಅಂದರೆ ಅದೂ ಇಲ್ಲಾ? ಮೆಟ್ಟಿಲು ಮೆಲುಕು ಎನ್ನುವ ರಂಗೋತ್ಸವದೊಳಗಿನ ಕಾರ್ಯಕ್ರಮ ಬೇರೆ ಹಿರಿಯ ತಂಡಗಳ ಸಾಧನೆಗಳನ್ನು ಚರ್ಚಿಸುವ ವೇದಿಕೆಯಾಯಿತೇ ಹೊರತು ಸಿಜಿಕೆ ಆಯಾ ತಂಡಗಳಿಗೆ ಹೇಗೆಲ್ಲಾ ಪ್ರೇರಣೆಯಾದರು ಹಾಗೂ ರಂಗಭೂಮಿಗೆ ಸಿಜಿಕೆ ಕೊಟ್ಟ ಕೊಡುಗೆ ಏನು ಎನ್ನುವುದರ ಮೇಲೆ ಮೆಲಕು ಆಗಲೇ ಇಲ್ಲ. ಮೆಟ್ಟಿಲ ಮೆಲುಕು ಕೂಡಾ ಸಿಜಿಕೆ ಮತ್ತು ರಂಗತಂಡಗಳ ನಡುವಿನ ಸಂಬಂಧದ ಮಿತಿಯಲ್ಲಿ ನಡೆಯದೇ ಕೇವಲ ಹರಟೆಕಟ್ಟೆಯಾಯಿತು.
ಅಂದರೆ ಸಿಜಿಕೆಯವರನ್ನು ಪ್ರಮೋಟ್ ಮಾಡುವ ಬದಲಾಗಿ ಕವಿಗಳಿಗೆ ಹಾಗೂ ಚಿತ್ರಕಲಾವಿದರಿಗೆ, ಬೇರೆ ತಂಡದ ಹಿರಿಯರಿಗೆ ವೇದಿಕೆ ಒದಗಿಸಿಕೊಟ್ಟು ಸಿಜಿಕೆರವರನ್ನು ಡೈಲ್ಯೂಟ್ ಮಾಡುವ ಒಂದು ಹಿಡನ್ ಅಜೆಂಡಾ ಏನಾದರೂ ಇಲ್ಲಿ ಕೆಲಸ ಮಾಡಿದೆಯಾ? ನಾಟಕಕಾರ ಡಾ.ಕೆವೈಎನ್ ರವರು ಸಿಜಿಕೆ ಭಜನೆಯನ್ನು ವಿನಾಕಾರಣ ವಿರೋಧಿಸುತ್ತಾರೆ. ಅವರ ವಿರೋಧವನ್ನೇ ಕೆಲವರು ವರದಾನವಾಗಿ ಪರಿಗಣಿಸಿ ಸಿಜಿಕೆ ಕೇಂದ್ರಿತ ಕಾರ್ಯಕ್ರಮಗಳನ್ನು ರಂಗೋತ್ಸವದಲ್ಲಿ ರೂಪಿಸುವುದನ್ನು ಕೈಬಿಡಲಾಯಿತಾ? ಇಲ್ಲವೇ ಕೆಲವರಿಗೆ ಸಿಜಿಕೆ ರಂಗಭೂಮಿಯ ದೊಡ್ಡ ಶಕ್ತಿಯಾಗಿರುವುದು ಜೀರ್ಣಸಿಕೊಳ್ಳಲಾಗುತ್ತಿಲ್ಲ ಆದ್ದರಿಂದ ಸಾಧ್ಯವಾದಷ್ಟು ಅವರನ್ನು ಡೈಲ್ಯೂಟ್ ಮಾಡಿ ಅವರ ಆಶಯಕ್ಕೆ ವಿರುದ್ಧವಾದ ನೀತಿಗಳನ್ನು ನಿರೂಪಿಸಿ ಸಿಜಿಕೆ ಹಾಗೂ ಅವರ ಹೆಸರಿನ ರಂಗೋತ್ಸವದ ಮಹತ್ವವನ್ನು ಕಡಿಮೆಗೊಳಿಸುವ ಹಿಡನ್ ಹುನ್ನಾರವನ್ನೇನಾದರೂ ಮಾಡುತ್ತಿದ್ದಾರಾ? ಯಾಕೆಂದರೆ ಈ ರಂಗೋತ್ಸವದಲ್ಲಿ ನಾಯಕರಾಗಿ ತೊಡಗಿಸಿಕೊಂಡ ಹಲವಾರು ರಂಗಕರ್ಮಿಗಳನ್ನು ಸಿಜಿಕೆಯವರಿದ್ದಾಗ ಬೈದು ದೂರವಿಟ್ಟಿದ್ದರು. ಅಂತವರ ಅಂತರಂಗದಲ್ಲಿ ಸಿಜಿಕೆಯವರ ಮೇಲಿರುವ ಅಸಮಾಧಾನವೂ ಹೀಗೆ ಸಿಜಿಕೆಯವರ ಮಹತ್ವವನ್ನು ಕಡಿಮೆ ಮಾಡುವ ತಂತ್ರಗಾರಿಕೆಯ ಭಾಗವಾಗಿದೆಯಾ?
ಮೃತ್ಯುಂಜಯ ನಾಟಕದ ದೃಶ್ಯ |
ಸಿಜಿಕೆ ನಾಟಕೋತ್ಸವ ಸಿಜಿಕೆ ಕೇಂದ್ರಿಕೃತವಾಗದೇ ಸಿಜಿಕೆ ಆಶಯಕ್ಕೆ ವಿರುದ್ಧವಾದವುಗಳೇ ಪ್ರಾಮುಖ್ಯತೆಯನ್ನು ಪಡೆದಿರುವುದರಿಂದ ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತಿವೆ. ಇವು ಕೇವಲ ಆರೋಪಗಳಲ್ಲ. ಊಹಾಪೋಹಗಳೆಂದು ನಿರ್ಲಕ್ಷಿಸುವ ಹಾಗೂ ಇಲ್ಲ. ರಂಗನಿರಂತರ ತಂಡದವರು, ಸಿಜಿಕೆ ಅನುಯಾಯಿಗಳು ಹಾಗೂ ಅಭಿಮಾನಿಗಳು ಈ ರೀತಿಯ ಒಂದು ಸಾಧ್ಯತೆಯ ಬಗ್ಗೆ ಕೂಡಾ ಗಂಭೀರವಾಗಿ ಚರ್ಚೆ ಸಂವಾದ ಮಾಡಬೇಕಿದೆ. ಇಲ್ಲವಾದರೆ ಬಹಿರಂಗದಲ್ಲಿ ಸಿಜಿಕೆ ಪರವಾಗಿ ಉಘೇ ಉಘೇ ಅನ್ನುತ್ತಾ ಅಂತರಂಗದಲ್ಲಿ ಸಿಜಿಕೆ ಬಗ್ಗೆ ಅಸಮಾಧಾನವಿರುವ ಕೆಲವು ರಂಗನಾಯಕರುಗಳು ಕಂತುಕಂತುಗಳಲ್ಲಿ ಸಿಜಿಕೆಯ ಪ್ರಾಮುಖ್ಯತೆಯನ್ನು ಡೈಲ್ಯೂಟ್ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ರಂಗನಿರಂತರ ಅಥವಾ ರಂಗೋತ್ಸವದ ಹೊರಗಿದ್ದು ಸಿಜಿಕೆ ಪ್ರಾಭಲ್ಯ ಒಡೆಯಲು ಸಾಧ್ಯವಿಲ್ಲವೆಂದು ತಿಳಿದಿರುವ ರಂಗದಲ್ಲಾಳಿವರ್ಗದವರು ಒಳಗಡೆಯೇ ಸೇರಿಕೊಂಡು ಕಟ್ಟುವ ಮಾತಾಡುತ್ತಲೇ ಒಳಗೊಳಗೇ ಗೆದ್ದಲು ಹಿಡಿಸಿ ಸಿಜಿಕೆ ಹಾಗೂ ಅವರ ಸಂಘಟನೆಯನ್ನು ದುರ್ಬಲ ಗೊಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ಆಲೋಚಿಸಬೇಕಾದ ರಂಗನಿರಂತರ ಬೇರೆಯವರ ಕೈಗೊಂಬೆಯಾಗದೇ ಸಿಜಿಕೆ ಆಶಯಗಳಿಗೆ ಪೂರಕವಾದಂತಹ ಸಿಜಿಕೆ ಕೇಂದ್ರಿತ ರಂಗ ಚಟುವಟಿಕೆಗಳನ್ನೇ ಸ್ವಂತ ವಿವೇಚನೆಯನ್ನು ಬಳಸಿ ರೂಪಿಸುವುದುತ್ತಮ.
ಹೀಗೆ.... ಅಡಪರವರೇ, ಸಿಜಿಕೆ ರಂಗೋತ್ಸವದ ಸುತ್ತ ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ. ಅದನ್ನು ಬಗೆಹರಿಸುವ ತಾಳ್ಮೆ ಹಾಗೂ ಜಾಣ್ಮೆ ನಿಮ್ಮದಾಗಬೇಕಿದೆ. ನನ್ನ ಲೇಖನವು ರಂಗನಿರಂತರದ ಮುಂದಿನ ಚಟುವಟಿಕೆಗಳನ್ನು ಬದಲಾಯಿಸಲು ಸಹಕಾರಿ ಎನ್ನುವ ನಿಮ್ಮ ಮಾತು ಸತ್ಯವಾಗಿದ್ದರೆ ಮೊದಲು ನಿಮ್ಮನ್ನು ಹೊಗಳಿ ಹೊನ್ನಶೂಲಕ್ಕೇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವಂದಿಮಾಧಿಗ ಪಡೆಯಿಂದ ಒಂದು ಅಂತರವನ್ನು ಕಾಪಾಡಿಕೊಳ್ಳಿ. ಯಾರು ನೇರವಾಗಿ ನ್ಯೂನ್ಯತೆಗಳನ್ನು ಹೇಳುತ್ತಾರೋ ಅಂತವರ ಅನಿಸಿಕೆಗಳು ಕಹಿಯಾಗಿದ್ದರು ತೆಗೆದುಕೊಂಡು ಸರಿಯೆನಿಸಿದರೆ ಅಳವಡಿಸಿಕೊಳ್ಳಿ. ನಿಮಗೆ ಇದೆಲ್ಲಾ ಗೊತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ನೀವು ಯಾವುಯಾವುದೋ ಒತ್ತಡಕ್ಕೆ ಒಳಗಾಗಿ ಕೆಲವೊಮ್ಮೆ ಅನಿವಾರ್ಯವಾಗಿ ರಾಜಿಮಾಡಿಕೊಳ್ಳಬೇಕಾಗುತ್ತದೆಂದು ನನಗೆ ಗೊತ್ತಿದೆ. ಇಲ್ಲದಿದ್ದರೆ ಕಳೆದ ಬಾರಿ ಸಿಜಿಕೆ ರಂಗೋತ್ಸವವನ್ನು ವಿಫಲಗೊಳಿಸಲು ಪ್ರಯತ್ನಿಸಿದ ಕಪ್ಪಣ್ಣನವರನ್ನು ಕರೆದು ರಂಗೋತ್ಸವದ ಒಂದು ಅಂಗದ ನಾಯಕತ್ವವನ್ನು ವಹಿಸಿಕೊಡುತ್ತಿರಲಿಲ್ಲ. ನಿಮ್ಮ ಮನಸ್ಸು ದೊಡ್ಡದು. ಸಿಜಿಕೆ ವಿರೋಧಿಗಳನ್ನ, ಸಿಜಿಕೆಯವರು ವಿರೋಧಿಸಿದವರನ್ನ, ರಂಗನಿರಂತರದ ಬೆಳವಣಿಗೆಯನ್ನು ಸಹಿಸದವರನ್ನ ಕರೆಕರೆದು ರಂಗೋತ್ಸವದಲ್ಲಿ ತೊಡಗಿಸಿಕೊಂಡಿದ್ದೀರಿ.
ಆದರೆ... ರಂಗನಿರಂತರದೊಳಗೆ ತೀವ್ರವಾಗಿ ತೊಡಗಿಸಿಕೊಂಡವರಲ್ಲಿರುವ ಅಸಮಾಧಾನವನ್ನು ನೀವು ಗುರುತಿಸದೇ ಹೋದಿರಿ. ರಂಗನಿರಂತರದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತೋಡಗಿಸಿಕೊಂಡವರಿಗೆ ರಂಗೋತ್ಸವದ ಕಾರ್ಯಕ್ರಮಗಳ ನಾಯಕತ್ವವನ್ನು ವಹಿಸಿಕೊಡದೇ ಹೊರಗಿನಿಂದ ಆಮದು ಮಾಡಿಕೊಂಡವರಿಗೆ ಜವಾಬ್ದಾರಿಗಳನ್ನು ವಹಿಸಿಕೊಟ್ಟಿರಿ. ಹೀಗಾಗಿ ದುಡಿಯುವದಕ್ಕೆ ನಾವು ಬೇಕು ನಾಯಕತ್ವ ಮಾತ್ರ ಹೊರಗಿನವರಿಗೆ ಸಿಗಬೇಕು ಎಂದರೆ ಹೇಗೆ? ಎಂದು ರಂಗನಿರಂತರದ ನಿರಂತರ ಒಡನಾಡಿಗಳು ತಮ್ಮತಮ್ಮಲ್ಲೇ ಬೇಸರಗೊಂಡಿದ್ದಾರೆ. ಅಂತವರ ಹೆಸರನ್ನು ನಾನು ಹೇಳಬಲ್ಲೆನಾದರೂ ಇಲ್ಲಿ ಬೇಕಾಗಿಲ್ಲ. ನಮ್ಮ ಮನೆಯ ಸದಸ್ಯರನ್ನು ಕಡೆಗಣಿಸಿ ಬೇರೆಯವರನ್ನು ಕರೆಕರೆದು ನಮ್ಮ ಮನೆಯ ಉಸ್ತುವಾರಿಯನ್ನು ವಹಿಸಿಕೊಟ್ಟರೆ ಕುಟಂಬದ ಸದಸ್ಯರಿಗೆ ಅಸಮಾಧಾನ ಆಗುವುದು ಸಹಜವಾಗಿದೆ. ಮೊದಲು ಈ ಅಸಮಾಧಾನದ ಕಾರಣಗಳನ್ನು ಪತ್ತೆಹಚ್ಚಿ ಮುನಿಸಿಕೊಂಡು ಯಾವುಯಾವುದೋ ನೆಪ ಹೇಳಿ ರಂಗೋತ್ಸವದಿಂದ ನಿರ್ಲಪ್ತರಾದವರನ್ನು ಸಮಾಧಾನ ಪಡಿಸಿ ‘ರಂಗನಿರಂತರ’ದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ತಕ್ಷಣದ ಅಗತ್ಯವಾಗಿದೆ. ‘ರಂಗನಿರಂತರ’ದೊಳಗೆ ಇರುವ ಸರ್ವಾಧಿಕಾರಿ ವರ್ತನೆಯುಳ್ಳವರ ಬಗ್ಗೆ ನಿಗಾ ಇರಲಿ, ಅವರ ಕಮಾಂಡಿಂಗ್ ನೇಚರ್ ನಿಮ್ಮ ಸಂಘಟನೆಯಲ್ಲಿ ತೀವ್ರ ಅಸಹನೆಯನ್ನು ಹುಟ್ಟುಹಾಕಿದೆ ಎನ್ನುವುದನ್ನು ಮರೆಯಬೇಡಿ. ಅತೀ ವೇಗದಲ್ಲಿ ಹೆಸರು ಮಾಡುತ್ತಿರುವ ಹಾಗೂ ಹೆಮ್ಮರವಾಗಿ ಬೆಳೆಯುತ್ತಿರುವ ‘ರಂಗನಿರಂತರ’ದ ಒಗ್ಗಟ್ಟನ್ನು ಮುರಿದು ಶಕ್ತಿಗುಂದಿಸಲು ಕೆಲವರು ಕಾಯುತ್ತಿದ್ದಾರೆ. ಅಂತವರು ರಂಗೋತ್ಸವದ ಒಳಗೂ ಹಾಗೂ ಹೊರಗೂ ಇದ್ದಾರೆ. ಈ ಸೂಕ್ಷ್ಮಗಳನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ ಅಡಪರವರೇ. ಇದು ನಿಮ್ಮ ರಂಗತಂಡದ ಆಂತರಿಕ ವಿಚಾರ. ಅದರ ಕುರಿತು ಮಾತಾಡಲು ನನಗೆ ಯಾವುದೇ ಹಕ್ಕಿಲ್ಲ. ಆದರೂ ಸಿಜಿಕೆರವರ ಮೇಲಿನ ಅಭಿಮಾನದಿಂದ, ನಿಮ್ಮ ರಂಗನಿಷ್ಟೆಯ ಮೇಲಿರುವ ಆತ್ಮೀಯತೆಯಿಂದ ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ನಾನು ಹೇಳಿದ್ದರಲ್ಲಿ ಒಂದಿಷ್ಟಾದರೂ ಸರಿ ಎನ್ನಿಸಿದರೆ ತೆಗೆದುಕೊಳ್ಳಿ. ಇಲ್ಲವೇ ಇದರಲ್ಲೂ ನಿಮಗೆ ವಿಷಮತೆ ಗೋಚರಿಸಿದರೆ ಬಿಟ್ಟುಬಿಡಿ. ನನ್ನ ಮಾತುಗಳು ನಿಮ್ಮಲ್ಲ ಒಂದಿಷ್ಟಾದರೂ ಚಿಂತನೆಗೆ ಪ್ರೇರೇಪಿಸಿದರೆ ನನ್ನ ಶ್ರಮ ಸಾರ್ಥಕ ಎಂದುಕೊಳ್ಳುತ್ತೇನೆ. ಯಾಕೆಂದರೆ ರಂಗದಲ್ಲಾಳಿಗಳಿಂದ ದುರ್ಬಲಗೊಳ್ಳುತ್ತಿರುವ ರಂಗಭೂಮಿಗೆ ಸಮರ್ಥ ನಾಯಕತ್ವವನ್ನು ಕೊಡಬಹುದಾದ ಆಶಾಕಿರಣವಾಗಿ ನನಗೆ ‘ರಂಗನಿರಂತರ’ ಕಂಡುಬರುತ್ತದೆ. ಆದ್ದರಿಂದ ಸ್ವಸಾಮರ್ಥ್ಯದಿಂದ ‘ರಂಗನಿರಂತರ’ ಬೆಳೆಯಬೇಕು ರಂಗಭೂಮಿಯನ್ನು ಬೆಳೆಸಬೇಕು ಎನ್ನುವುದು ನನ್ನ ವ್ಯಯಕ್ತಿಕ ಆಶಯವಾಗಿದೆ.
ಹಾಗೆಯೇ ಅಡಪರವರೇ, ಬೇರೆಯವರು ನಿಮ್ಮ ಮನಸ್ಸಲ್ಲಿ ನನ್ನ ಬಗ್ಗೆ ಹುಳಿಹಿಂಡುವ ಮೊದಲೇ ನಾನು ಒಂದೆರಡು ಮಾತುಗಳನ್ನು ಸ್ಪಷ್ಟೀಕರಿಸಲು ಬಯಸುತ್ತೇನೆ. ನಾನು ಯಾವುದೇ ಜಾತಿಯ ವಿರೋಧಿಯೂ ಅಲ್ಲಾ ಹಾಗೂ ಜಾತಿಪ್ರೇಮಿಯಂತೂ ಅಲ್ಲವೇ ಅಲ್ಲ. ಸಮಾಜದಲ್ಲಿ ಜಾತೀಯತೆ ತೊಲಗಿಸಲು ಈ ದೇಶದಲ್ಲಿ ಇನ್ನೆಷ್ಟು ಬಸವಣ್ಣ ಅಂಬೇಡ್ಕರರು ಹುಟ್ಟಿ ಬಂದರೂ ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಜ್ಯಾತ್ಯಾತೀತ ಸ್ವರೂಪದ ಕನ್ನಡ ರಂಗಭೂಮಿಯಲ್ಲಿ ಜಾತಿ ಕೋಮಿನ ವಿಷಮತೆ ಹಬ್ಬದಿರಲಿ ಎನ್ನುವುದು ನನ್ನ ಬಯಕೆ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸ್ವಜಾತಿ ಗುಂಪುಗಾರಿಕೆ ಮಾಡಿಕೊಂಡು ‘ನಿನ್ನ ಬೆನ್ನನ್ನು ನಾನು ಕೆರೆಯುತ್ತೇನೆ, ನನ್ನ ಬೆನ್ನನ್ನು ನೀನು ಕೆರೆ’ ಎನ್ನುವ ಜಾತಿವಾದಿಗಳು ರಂಗಭೂಮಿಯಲ್ಲಿರುವುದಂತೂ ಸುಳ್ಳಲ್ಲ. ಇಲಾಖೆಯ ಅನುದಾನವನ್ನು ಬಳಸಿಕೊಳ್ಳುವುದರಿಂದ ಹಿಡಿದು ಅಧಿಕಾರ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಳ್ಳುವುದಕ್ಕೂ ಈ ಜಾತಿಯ ಲಾಭಿ ನಿರಂತರವಾಗಿ ನಡೆದುಕೊಂಡು ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಯಡಹಳ್ಳಿ ರಂಗಭೂಮಿಯಲ್ಲಿ ಇಲ್ಲದ ಜಾತೀಯತೆ ತಂದು ರಂಗಭೂಮಿಯನ್ನು ಒಡೆಯಲು ಪ್ರಯತ್ನಸುತ್ತಿದ್ದಾನೆಂದು ಕೆಲವು ಹಾರವರು ಹೇಳಿಕೊಳ್ಳುತ್ತಿದ್ದಾರೆ. ಯಾರು ಅದೆಷ್ಟೇ ಹೇಳಲಿ, ರಂಗಭೂಮಿ ಅದೆಷ್ಟೇ ಜಾತ್ಯಾತೀತವೆಂದು ಘೋಷಿಸಿಕೊಳ್ಳಲಿ ಆದರೆ ಅಲ್ಲಿಯೂ ಕೂಡಾ ಜಾತಿ ಲಾಭಿ ಇರುವುದು ಸುಳ್ಳಲ್ಲ.
ಆಯಾ ಜಾತಿಯವರೇ ಆಯಾ ಜಾತಿಯವರನ್ನು ಒಬ್ಬರಿಗಿನ್ನೊಬ್ಬರು ಸಹಾಯ ಸಹಕಾರ ಕೊಟ್ಟು ಸನ್ಮಾನಿಸಿಕೊಳ್ಳುತ್ತಿರುವುದು ಕಣ್ಣಿಗೆ ಹೊಡೆಯುವಂತಿದೆ. ರಂಗರಾಜಕೀಯದ ಭಾಗವಾಗಿಯೇ ಜಾತಿರಾಜಕೀಯದ ಹುನ್ನಾರಗಳನ್ನು ಬೇಕಾದರೆ ನಾನು ಸಾಕ್ಷಿ ಸಮೇತ ನಿರೂಪಿಸಬಲ್ಲೆ. ಹೀಗಾಗಿ ರಂಗಭೂಮಿ ಜ್ಯಾತ್ಯಾತೀತ ಎನ್ನುವ ಸೋಗಲಾಡಿತನ ಬೇಕಾಗಿಲ್ಲ. ಹಾಗೂ ಯಾರದೋ ಜಾತಿಪ್ರೀತಿಯ ರಂಗರಾಜಕಾರಣಕ್ಕೆ ನಾಟಕವೊಂದು ಬಲಿಯಾದರೆ, ನಾಟಕ ತಂಡವೊಂದು ನೊಂದುಕೊಂಡರೆ, ಕಲಾವಿದರು ಕಂಗಾಲಾದರೆ ಅವರ ಸಂಕಷ್ಟಕ್ಕೆ ದ್ವನಿಯಾಗಬೇಕಾಗುವುದು ಲೇಖಕರ ಕರ್ತವ್ಯವಾಗಿದೆ. ರಂಗಭೂಮಿ ಸರ್ವತೋಮುಖವಾಗಿ ಜ್ಯಾತ್ಯಾತೀತವಾಗಿ ಬೆಳೆಯಬೇಕೆಂಬುದೇ ನನ್ನ ಬರವಣೆಗೆಯ ಹಿಂದಿರುವ ಪ್ರಾಮಾಣಿಕ ಉದ್ದೇಶವಾಗಿದೆ. ನಿಮಗಿದು ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ. ಈ ಪತ್ರ ತುಂಬಾ ದೀರ್ಘವಾಯಿತು. ಇನ್ನೂ ಹೇಳಬೇಕಾದದ್ದು ಬೇಕಾದಷ್ಟಿದೆ. ನನ್ನ ಅನಿಸಿಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೀರೆಂದು ಕೊಂಡಿದ್ದೇನೆ. ರಂಗಭೂಮಿಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಚರ್ಚೆ ಸಂವಾದಗಳಿಗೆ ನಾನು ಸದಾ ಸಿದ್ಧನಿದ್ದೇನೆಂದು ಗರ್ವದಿಂದಲ್ಲ ವಿನಯದಿಂದ ಹೇಳುತ್ತೇನೆ. ಸಿಜಿಕೆರವರ ಮೇಲಿರುವ ಗೌರವ ಹಾಗೂ ರಂಗನಿರಂತರದ ಮೇಲಿರವ ನಂಬಿಕೆಗಳು ನನಗೆ ಲೇಖನವನ್ನು ಹಾಗೂ ಈ ಪತ್ರವನ್ನು ಬರೆಯಲು ಪ್ರೇರೇಪಿಸಿವೆಯೇ ಹೊರತು ಇದರ ಹಿಂದೆ ಯಾವುದೇ ವ್ಯಯಕ್ತಿಕ ಹಿತಾಸಕ್ತಿಗಳಿಲ್ಲ. ಈ ರೀತಿಯ ನಿಷ್ಟುರ ಲೇಖನಗಳಿಂದ ಕೆಲವರ ದ್ವೇಷವನ್ನು ಕಟ್ಟಿಕೊಂಡಿದ್ದೇನೆಯೇ ಹೊರತು ಲಾಭವನ್ನಲ್ಲ. ರಂಗಭೂಮಿ ಎನ್ನುವುದು ನನಗೂ ಹಾಗೂ ನಿಮಗೂ ಒಂದು ಐಡೆಂಟಿಟಿಯನ್ನು ಕೊಟ್ಟಿದೆ. ನಿಮಗಂತೂ ಬದುಕನ್ನೆ ಕಟ್ಟಿಕೊಟ್ಟಿದೆ. ಅದಕ್ಕೆ ಋಣಿಯಾಗಿರಲೇ ಬೇಕಿದೆ. ‘ರಂಗನಿರಂತರ’ ನಿಮ್ಮ ನಾಯಕತ್ವದಲ್ಲಿ ಸಿಜಿಕೆ ಆಶಯಕ್ಕೆ ಎಲ್ಲೂ ವ್ಯತ್ಯಯ ಬರದಂತೆ ಸ್ವಂತ ವಿವೇಚನೆ ಮತ್ತು ನಾಯಕತ್ವದಲ್ಲಿ ಗಟ್ಟಿಯಾಗಿ ಬೇರೂರಿ ಹೆಮ್ಮರವಾಗಿ ಬೆಳೆಯಲಿ ಎನ್ನುವುದು ನನ್ನ ಮಹದಾಸೆಯಾಗಿದೆ.
ನನ್ನ
ಗ್ರಹಿಕೆಯಲ್ಲಿ ಅಥವಾ ಬರವಣಿಗೆಯಲ್ಲಿ ನಿಮಗೆ ಭಿನ್ನಾಭಿಪ್ರಾಯಗಳಿದ್ದರೆ ಸಕಾರಾತ್ಮಕ ಚರ್ಚೆ ಮಾಡಲು
ನಾನು ಮುಕ್ತನಾಗಿದ್ದೇನೆ. ನಾನು ಬರೆದಿದ್ದೇ ಅಂತಿಮ ಎನ್ನುವ ದುರಹಂಕಾರ ನನ್ನದಲ್ಲವೆಂದು ವಿನಯದಿಂದಲೇ
ಹೇಳುತ್ತೇನೆ. ಮತ್ತೊಮ್ಮೆ ನಿಮಗೆ ನನ್ನ ಲೇಖನದಿಂದ ಬೇಸರವಾಗಿದ್ದರೆ ಕ್ಷಮೆಕೋರುತ್ತೇನೆ. ನಿಮ್ಮ ರಂಗಬದ್ಧತೆಗೆ ರಂಗನಮನಗಳನ್ನು ಸಲ್ಲಿಸುತ್ತೇನೆ. ರಂಗಭೂಮಿ ಬೆಳೆಯಲಿ, ರಂಗನಿರಂತರ ನಿರಂತರವಾಗಲಿ ಎಂದು ಮನಸಾರೆ ಹಾರೈಸುತ್ತೇನೆ.
ವಂದನೆಗಳೊಂದಿಗೆ
ಶಶಿಕಾಂತ ಯಡಹಳ್ಳಿ
-ಶಶಿಕಾಂತ ಯಡಹಳ್ಳಿ