ಅರಮನೆ ಗುರುಮನೆ ಸಂಘರ್ಷದಲ್ಲಿ ಬಲಿಯಾದ ಜನದ್ವನಿ :
ಹ್ಯಾಟ್ಸಾಪ್ ಟು ಬಿ.ಸುರೇಶ್, ಹ್ಯಾಟ್ಸಾಪ್ ಟು ಮಂಡ್ಯ ರಮೇಶ್. ಈ ಕ್ರಿಯಾಶೀಲ ಜೋಡಿ ಕನ್ನಡ ರಂಗಭೂಮಿಯಲ್ಲಿ ಇಲ್ಲಿವರೆಗೂ ಅಸಾಧ್ಯವಾದದ್ದನ್ನು ಸಾಧ್ಯಗೊಳಿಸಿದ್ದಾರೆ. ನಿರಂಜನರ ‘ಮೃತ್ಯುಂಜಯ’ ಕಾದಂಬರಿಯನ್ನು ನಾಟಕವಾಗಿ ಮಂಡ್ಯ ರಮೇಶ್ ರವರ ನೇತೃತ್ವದ ‘ನಟನ’ ತಂಡ ನಿರ್ಮಿಸಿದ್ದರೆ. ಬಿ.ಸುರೇಶರವರು ನಿರ್ದೇಶಿಸಿದ್ದಾರೆ. 4500 ವರ್ಷಗಳ ಹಿಂದೆ ಈಜಿಪ್ತ ದೇಶದಲ್ಲಿ ನಡೆದಿರಬಹುದಾದ ಘಟನೆಯೊಂದರ ಎಳೆಯನ್ನಾಧರಿಸಿ ನಿರಂಜನರು ‘ಮೃತ್ಯುಂಜಯ’ ಎನ್ನುವ ಬ್ರಹತ್ ಕಾದಂಬರಿಯನ್ನು 70 ರ ದಶಕದಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ಕೊಟ್ಟರು. ಏಳು ವರ್ಷಗಳ ಹಿಂದೆ ಸಿ.ವೀರಣ್ಣನವರು ಈ ಕಾದಂಬರಿಗೆ ರಂಗರೂಪಕೊಟ್ಟರು. ಆ ನಂತರ ‘ಮೃತ್ಯುಂಜಯ’ ವನ್ನು ನಾಟಕವಾಗಿಸಲು ಕೆಲವು ಪ್ರಯತ್ನಗಳು ನಡೆದವಾದರೂ ಅದು ಸಾಧ್ಯವಾಗಲೇ ಇಲ್ಲ. ‘ಸಮುದಾಯ’ ದಂತಹ ಸಂಘಟನೆ ಸಹ ಎರಡು ಬಾರಿ ಈ ರಂಗಪಠ್ಯವನ್ನು ನಾಟಕವಾಗಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಾಗಲೇ ಇಲ್ಲ. ಬೇರೆ ಯಾರೂ ‘ಮೃತ್ಯುಂಜಯ’ದ ಸಹವಾಸಕ್ಕೇ ಹೋಗಲಿಲ್ಲ. ಆದರೆ ಈಗ ಮೈಸೂರಿನ ‘ನಟನಾ’ ರಂಗತಂಡವು ಈ ಸಾಹಸಕ್ಕೆ ಮುಂದಾಯಿತು. ಬಿ.ಸುರೇಶ್ ದಿಗ್ಧರ್ಶನಕ್ಕೆ ಸಿದ್ದವಾದರು. ಮೂರು ವಾರಗಳ ಕಾಲ ಸತತ ತಾಲಿಂ, ಮೂವತ್ಮೂರು ಜನ ನಟವರ್ಗದವರ ಶ್ರಮ, ಏಳು ಜನ ತಂತ್ರಜ್ಞರ ಪರಿಶ್ರಮ, ಮಂಡ್ಯ ರಮೇಶರವರ ಸಮರ್ಥ ನಿರ್ವಹನೆ ಹಾಗೂ ಬಿ.ಸುರೇಶರವರ ಪರಿಕಲ್ಪನೆಯಲ್ಲಿ ‘ಮೃತ್ಯುಂಜಯ’ ನಾಟಕವಾಗಿ ರೂಪಗೊಂಡಿತು.
ಸಿಜಿಕೆ ಅಂತರಾಷ್ಟ್ರೀಯ ರಂಗೋತ್ಸವದ ಎರಡನೇ ದಿನವಾದ 2015 ಏಪ್ರಿಲ್ 6 ರಂದು ‘ಸಂಸ’ ಬಯಲು ರಂಗಮಂದಿರದಲ್ಲಿ ‘ಮೃತ್ಯುಂಜಯ’ ನಾಟಕ ತುಂಬಿದ ಗೃಹದಲ್ಲಿ (ಹೌಸ್ಪುಲ್) ಪ್ರದರ್ಶನಗೊಂಡು ನೋಡುಗರಲ್ಲಿ ಸಂಚಲನವನ್ನು ಸೃಷ್ಟಿಸಿತು. ಆಧುನಿಕ ಕನ್ನಡ ರಂಗಭೂಮಿಗೆ ಒಂದು ಮೈಲುಗಲ್ಲಾಗಿ ‘ಮೃತ್ಯುಂಜಯ’ ಸೇರ್ಪಡೆಯಾಯಿತು. ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ಏಳುನೂರಕ್ಕೂ ಹೆಚ್ಚು ಪುಟಗಳ ‘ಮೃತ್ಯಂಜಯ’ ವನ್ನು ರಂಗಪಠ್ಯವಾಗಿ ರೂಪಾಂತರಿಸುವುದೇ ಒಂದು ಸವಾಲಿನ ಕೆಲಸ. ಇನ್ನು ಈ ರಂಗಪಠ್ಯವನ್ನು ಎರಡು ಗಂಟೆಯ ನಾಟಕವಾಗಿಸುವುದು ಇನ್ನೂ ಕಷ್ಟ. ಇಂತಹ ಕಷ್ಟಸಾಧ್ಯವಾದ ಕೆಲಸವನ್ನು ಸಿ.ವೀರಣ್ಣನವರು ಹಾಗೂ ಬಿ.ಸುರೇಶರವರು ಮಾಡಿದ್ದಾರೆ. ಓದುವ ಸಂಸ್ಕೃತಿಯೇ ನಾಶವಾಗಿ ಕೇವಲ ನೋಡುವ ಸಂಸ್ಕೃತಿಯೇ ಪ್ರಧಾನವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಆ ಬ್ರಹತ್ ಕಾದಂಬರಿಯನ್ನು ಓದಲು ಸಾಧ್ಯವಾಗಿಲ್ಲದವರಿಗೆ ಕಾದಂಬರಿಯ ಆಶಯಕ್ಕೆ ಭಂಗ ಬರದಂತೆ 2 ಗಂಟೆಯಲ್ಲಿ ದೃಶ್ಯಗಳ ಮೂಲಕ ತೋರಿಸಲು ಕಾರಣೀಕರ್ತರಾದ ಎಲ್ಲರಿಗೂ ರಂಗಭೂಮಿ ಅಭಿನಂದನೆ ಸಲ್ಲಿಸಲೇಬೇಕಿದೆ.
‘ಮೃತ್ಯುಂಜಯ’ ನಾಟಕದ ಕಥಾಸಾರ ಹೀಗಿದೆ. ಈಜಿಪ್ತ್ ದೇಶದ ರಾಜ ಪೆರೋಗೂ ರಾಜಗುರು ಹೇಪಾಟ್ಗೂ ನಡುವೆ ಅಧಿಕಾರದ ಮೇಲಾಟದಲ್ಲಿ ಸಂಘರ್ಷವುಂಟಾಗಿ ಎರಡು ಬಣಗಳಾಗುತ್ತವೆ. ಒಬ್ಬರನ್ನೊಬ್ಬರು ಪದಚ್ಯುತಗೊಳಿಸಲು ಕುತಂತ್ರಗಳನ್ನು ಹೆಣೆಯುತ್ತಿರುತ್ತಾರೆ. ಕಂದಾಯಾಧಿಕಾರಿಗಳ ಹೆಚ್ಚಿನ ಕಂದಾಯ ವಸೂಲಿ ಹಾಗೂ ಸಾಮಂತ-ಭೂಮಾಲೀಕರ ಶೋಷಣೆಯ ವಿರುದ್ಧ ರೈತರು ಮೆನಕ್ಟಾ ಎನ್ನುವವನ ಮುಂದಾಳತ್ವದಲ್ಲಿ ದಂಗೆ ಎದ್ದು ನೀರಾಣೆ ಪ್ರಾಂತ್ಯದಲ್ಲಿ ತಮ್ಮದೇ ಆದ ರೈತರ ಆಡಳಿತವನ್ನು ಸ್ಥಾಪಿಸಿಕೊಂಡು ಜನಪರ ಆಡಳಿತ ನಡೆಸುತ್ತಾರೆ. ಮೆನಕ್ಟಾನ ಬೆಂಬಲವನ್ನು ಪಡೆದು ರಾಜಗುರುವನ್ನು ಮಟ್ಟಹಾಕುವ ತಂತ್ರದ ಭಾಗವಾಗಿ ರಾಜ ಹಾಗೂ ಮಹಾಮಂತ್ರಿ ಆತನನ್ನು ರಾಜಧಾನಿಗೆ ಆಹ್ವಾನಿಸುತ್ತಾರೆ. ರಾಜಗುರುವಿನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮಹಾರಾಣಿ ನೆಫಟಮ್ ತನ್ನ ಚಾಣಾಕ್ಷತೆಯಿಂದ ರಾಜ ಹಾಗೂ ರಾಜಗುರುವಿನ ನಡುವೆ ಸಂಧಾನವೇರ್ಪಡಿಸಿ ತನ್ನ ಮಗನಿಗೆ ಪಟ್ಟಾಭಿಷೇಕವಾಗುವ ಹಾಗೆ ತಂತ್ರಗಾರಿಕೆ ರೂಪಿಸಿ ಅದರಲ್ಲಿ ಯಶಸ್ವಿಯಾಗುತ್ತಾಳೆ. ರಾಜಗುರುವಿನ ಸಮರ್ಥಕರಾದ ಸಾಮಂತರು ಹಾಗೂ ಭೂಮಾಲೀಕರ ಒತ್ತಾಸೆಯಂತೆ ಅವರ ವಿರುದ್ಧ ಬಂಡಾಯವೆದ್ದ ರೈತನಾಯಕ ಮೆನಕ್ಟಾನ ತಲೆದಂಡಕ್ಕೆ ಪ್ರಭುತ್ವ ಹಾತೊರೆಯುತ್ತದೆ. ಆಳುವ ವರ್ಗದ ಕುತಂತ್ರದ ಭಾಗವಾಗಿ ಮೆನಕ್ಟಾನ ಮೇಲೆ ರಾಜದ್ರೋಹ ಹಾಗೂ ಧರ್ಮದ್ರೋಹದ ಆರೋಪ ಹೊರೆಸಿ ಹುಸಿ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆ ಕೊಡಲಾಗುತ್ತದೆ. ನೀರಾಣೆ ಪ್ರಾಂತ್ಯದ ಜನರ ಮೇಲೆ ಸೈನ್ಯ ತನ್ನ ದೌರ್ಜನ್ಯವನ್ನು ಮೆರೆಯುತ್ತದೆ. ಅಳಿದುಳಿದ ಜನ ಮೆನಕ್ಟಾನ ಆಶಯಗಳ ಅನುಷ್ಟಾನಕ್ಕಾಗಿ ಬದ್ದರಾಗುವ ಮೂಲಕ ನಾಟಕ ಕೊನೆಯಾಗುತ್ತದಾದರೂ ನೋಡುಗರನ್ನು ಆಲೋಚನೆಗೆ ಪ್ರೇರೇಪಿಸುತ್ತದೆ.
ದೇಶ-ಕಾಲ ಯಾವುದಾದರೇನು ಪ್ರಭುತ್ವ ಎನ್ನುವುದು ಶೋಷಣೆಯ ಕೇಂದ್ರ ಎನ್ನುವುದು ಮನುಕುಲದ ಇತಿಹಾಸದಲ್ಲಿ ಬಹುತೇಕ ಸಾಬೀತಾಗಿದೆ. ಯಾವುದೋ ದೇಶದಲ್ಲಿ ನಾಲ್ಕೂವರೆಸಾವಿರ ವರ್ಷಗಳ ಹಿಂದೆ ನಡೆದಿರಬಹುದಾದ ರಾಜಕೀಯ ಪ್ರಸಂಗವೊಂದು ಕಾಲ ದೇಶಗಳನ್ನು ಮೀರಿ ಅದು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗುತ್ತದೆ ಎನ್ನುವುದಕ್ಕೆ ‘ಮೃತ್ಯುಂಜಯ ನಾಟಕವೇ ಸಾಕ್ಷಿಯಾಗಿದೆ. ‘ಅರಮನೆ ಮತ್ತು ಗುರುಮನೆ’ ಅಂದರೆ ಆಡಳಿತ ಮತ್ತು ಧರ್ಮದ ನಡುವಿನ ಸಂಘರ್ಷ ಮತ್ತು ಸಾಮರಸ್ಯ ಎರಡೂ ಹೊಸದೇನಲ್ಲ. ಇವೆರಡೂ ಆಳುವ ವರ್ಗದ ಅವಿಭಾಜ್ಯ ಅಂಗಗಳೇ ಆಗಿವೆ. ಭೂಮಾಲೀಕರುಗಳು ಪ್ರಭುತ್ವದ ಮಹಾಪೋಷಕರಾಗಿರುತ್ತಾರೆ. (ಈಗ ಬಂಡವಾಳಶಾಹಿಗಳು ಪ್ರಭುತ್ವದ ಮಹಾಪೋಷಕರಾಗಿರುವಂತೆ) ರಾಜರು ಹಾಗೂ ಭೂಮಾಲೀಕರುಗಳ ನಡುವೆ ಸೇತುವೆಯಾಗಿ ಧರ್ಮಪಾಲಕರು ದೇವರ ಹೆಸರಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಯಾವಾಗ ದುಡಿಯುವ ವರ್ಗ ಶೋಷಣೆಯನ್ನು ವಿರೋಧಿಸಿ ಬಂಡಾಯವೇಳುತ್ತದೆಯೋ ಆಗ ತಮ್ಮ ನಡುವೆ ಇರುವ ಅಧಿಕಾರ ಹಂಚಿಕೆಯ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಈ ಎಲ್ಲಾ ಶೋಷಕರೂ ಒಂದಾಗುತ್ತಾರೆ. ಬಂಡಾಯದ ನಾಯಕರನ್ನು ಒಲಿಸಿಕೊಂಡೋ ಇಲ್ಲವೇ ಕುತಂತ್ರದಿಂದ ಕೊಂದೋ ಕ್ರಾಂತಿಯ ತೀವ್ರತೆಯನ್ನು ಹತ್ತಿಕ್ಕುತ್ತಾರೆ ಹಾಗೂ ಸೈನ್ಯಬಲದಿಂದ ಪ್ರಭುತ್ವವನ್ನು ವಿರೋಧಿಸಿದ ಜನಸಮುದಾಯದ ಮೇಲೆ ಆಕ್ರಮಣ ಮಾಡುತ್ತಾರೆ. ಈ ರೀತಿಯ ಘಟನೆಗಳು ಮನುಕುಲದ ಚರಿತ್ರೆಯಲ್ಲಿ ಹಾಸುಹೊಕ್ಕಾಗಿದೆ. ಪರಿವರ್ತಿತ ರೂಪದಲ್ಲಿ ಈಗಲೂ ಸಹ ಜಗತ್ತಿನಾದ್ಯಂತ ಇದೇ ರೀತಿ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂಘರ್ಷ ನಡೆಯುತ್ತಲೇ ಬಂದಿದೆ. ವರ್ಗಸಂಘರ್ಷ ಎನ್ನುವುದು ಮಾನವ ಸಮಾಜದಲ್ಲಿ ನಿರಂತರ ನಡೆಯುವ ಕ್ರಿಯೆಯಾಗಿದೆ. ಅಸಮಾನತೆ ಇರುವವರೆಗೂ ನಿರಂತರವಾಗಿರುತ್ತದೆ. ಈ ‘ಮೃತ್ಯುಂಜಯ’ ನಾಟಕವು ಆಳುವ ವರ್ಗದಲ್ಲಿ ಅಧಿಕಾರಕ್ಕಾಗಿ ನಡೆಯುವ ಆಂತರಿಕ ಷಡ್ಯಂತರಗಳನ್ನು ಹಾಗೂ ವರ್ಗಸಂಘರ್ಷದಲ್ಲಿ ಬಲಿಪಶುವಾಗುವ ದುಡಿಯುವ ವರ್ಗಗಳ ಅಸಹಾಯಕತೆಯನ್ನು ಅನಾವರಣಗೊಳಿಸುತ್ತದೆ.
ಅಚ್ಚರಿಯ ಸಂಗತಿ ಏನೆಂದರೆ ಈ ‘ಮೃತ್ಯುಂಜಯ’ ದಲ್ಲಿ ನಿರ್ಣಾಯಕ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಒಬ್ಬ ಮಹಿಳೆ. ಅದೂ ಈ ನಾಟಕದ ಖಳನಾಯಕಿ ಮಹಾರಾಣಿ ನೆಫಟಿಮ್. ಅಧಿಕಾರದಾಹದಿಂದ ಕಿತ್ತಾಡುತ್ತಿದ್ದ ರಾಜ ಹಾಗೂ ರಾಜಗುರುವಿನ ಸಂಘರ್ಷದ ತೀವ್ರತೆಯನ್ನು ಕಡಿಮೆಗೊಳಿಸಲು ತನ್ನ ದೇಹ-ಸೌಂದರ್ಯವನ್ನು ಬಳಸುವ ಮಹಾರಾಣಿ ತನ್ನ ಮಗನನ್ನು ರಾಜನಾಗಿಸುವ ನಿಟ್ಟಿನಲ್ಲಿ ಎಲ್ಲದಕ್ಕೂ ಸಿದ್ದಳಾಗುತ್ತಾಳೆ. ಮಹಿಳಾಪರ ದೋರಣೆಯುಳ್ಳ ನಿರಂಜನರು ಅದು ಯಾಕೆ ಮಹಿಳೆಯನ್ನು ಇಡೀ ‘ಮೃತ್ಯುಂಜಯ’ ನಾಟಕದ ಖಳನಾಯಕಿಯನ್ನಾಗಿ ಚಿತ್ರಿಸಿದರೋ ಗೊತ್ತಿಲ್ಲ. ಮಹಾರಾಣಿಯನ್ನು ನಿರ್ಧಯಿ, ಸಮಯಸಾಧಕಿಯನ್ನಾಗಿ ಬಿಂಬಿಸಿದರೋ ಗೊತ್ತಿಲ್ಲ. ಶೇಕ್ಸಪೀಯರನ ಮ್ಯಾಕಬೆತ್ ನಾಟಕದ ಲೇಡಿ ಮ್ಯಾಕಬೆತ್ ರೀತಿಯಲ್ಲಿ ಅರಸೊತ್ತಿಗೆಯನ್ನು ತನ್ನ ಸುಪರ್ಧಿಗೆ ಪಡೆಯಲು ಈ ನಾಟಕದ ಮಹಾರಾಣಿ ತನ್ನದೇ ಆದ ರೀತಿಯಲ್ಲಿ ತಂತ್ರಗಾರಿಕೆಯನ್ನು ರೂಪಿಸುತ್ತಾಳೆ ಹಾಗೂ ಅದಕ್ಕಾಗಿ ತನ್ನ ದೇಹವನ್ನೇ ಮಾಧ್ಯಮವಾಗಿ ಬಳಸಿಕೊಳ್ಳುತ್ತಾಳೆ. ಹೆಣ್ಣು ಇರುವುದೇ ಭೋಗಕ್ಕಾಗಿ ಎನ್ನುವ ಶೋಷಕ ವ್ಯವಸ್ಥೆಯಲ್ಲಿ ಪುರುಷರ ಈ ಭೋಗಲಾಲಸೆಯ ದೌರ್ಬಲ್ಯವನ್ನೇ ಚದುರಂಗದ ದಾಳವನ್ನಾಗಿ ಮಾಡಿಕೊಂಡು ತನ್ನ ಉದ್ದೇಶವನ್ನು ಮಹಾರಾಣಿ ಸಾಧಿಸುತ್ತಾಳೆ. ರಾಜನನ್ನು ರಾಜಗುರುವನ್ನು ನ್ಯಾಯಾಂಗವನ್ನೂ ಮೀರಿ ಇಡೀ ವ್ಯವಸ್ಥೆಯ ಮೇಲೆ ತನ್ನ ಅಧಿಕಾರದ ಹಿಡಿತವನ್ನು ಬಿಗಿಗೊಳಿಸಿಕೊಳ್ಳುತ್ತಾಳೆ. ಎಡಪಂಥೀಯ ಚಳುವಳಿಗಳ ಹಿನ್ನೆಲೆಯುಳ ನಿರಂಜನರು ಹಾಗೂ ಪ್ರಗತಿಪರ ಚಟುವಟಿಕೆಗಳ ಭಾಗವಾಗಿರುವ ಬಿ.ಸುರೇಶರವರು ಮಹಿಳೆಯನ್ನು ಅದ್ಯಾಕೆ ಇಷ್ಟೊಂದು ಕ್ರೂರಿಯನ್ನಾಗಿ, ವ್ಯಭಿಚಾರಿಣಿಯನ್ನಾಗಿ, ನಿರ್ಧಯಿಯನ್ನಾಗಿ, ಖಳನಾಯಕಿನ್ನಾಗಿ ತಮ್ಮ ಕಾದಂಬರಿ ಹಾಗೂ ನಾಟಕದಲ್ಲಿ ಬಿಂಬಿಸಿದರು ಎನ್ನುವುದು
ನಿಜಕ್ಕೂ ಅಚ್ಚರಿದಾಯಕ ಸಂಗತ. ಇದರಿಂದಾಗಿ ‘ನೋಡಿ ಹೆಣ್ಣು ತನ್ನ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡಬಹುದು, ಅದಕ್ಕೆ ಹೆಣ್ಣನ್ನು ನಂಬಬಾರದು, ಹೆಣ್ಣು ಎನ್ನುವುದು ಮಾಯೆ, ಹೆಣ್ಣಿನ ನೆಲೆ ತಿಳಿದವರಿಲ್ಲ...’ ಎಂದು ಈಗಾಗಲೇ ಸಮಾಜದ ಬಹುತೇಕ ಪುರುಷರಲ್ಲಿ ಇರಬಹುದಾದ ಸ್ತ್ರೀವಿರೋಧಿತನಕ್ಕೆ ಸಮರ್ಥನೆ ಕೊಡುವಂತೆ ಈ ನಾಟಕದ ಖಳನಾಯಕಿ ಪಾತ್ರ ಮೂಡಿಬಂದಿದೆ. ಅಥವಾ ವರ್ಗಸಂಘರ್ಷದ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ದೃಷ್ಟಿಕೋನದಲ್ಲಿ ಈ ನಾಟಕವನ್ನು ನೋಡಿ ಶೋಷಕ ವರ್ಗದ ಹೆಂಗಸರು ಹೀಗೆ ನಿರ್ಧಯಿ ಖಳನಾಯಕಿಯರಾಗಿರುತ್ತಾರೆ ಎಂದು ಹೇಳುವುದು ‘ಮೃತ್ಯುಂಜಯ’ದ ಆಶಯದಲ್ಲೊಂದಾಗಿದೆಯಾ ?
ಈ ನಾಟಕದ ಹೆಸರು ‘ಮೃತ್ಯುಂಜಯ’ವಾದರೂ ನಾಟಕದ ನಾಯಕನೇ ಶಿರಚ್ಚೇದನಕ್ಕೊಳಗಾಗಿ ಹತನಾಗುತ್ತಾನೆ. ಹಾಗಾದರೆ ಮೃತ್ಯುವನ್ನು ಜಯಿಸಿದವರಾದರೂ ಯಾರು? ಇಲ್ಲಿ ವಾಚ್ಯಾರ್ಥವನ್ನು ಬಿಟ್ಟು ಸೂಚ್ಯಾರ್ಥವನ್ನು ಗಮನಿಸಬೇಕಾಗಿದೆ. ಜನಪರ ಹೋರಾಟದಲ್ಲಿ ಮನುಷ್ಯ ಮೃತಪಟ್ಟರೂ ಅವರ ಜೀವಪರ ಆಶಯ ಮಾತ್ರ ನಿರಂತರವಾಗಿ ‘ಮೃತ್ಯುಂಜಯ’ವಾಗುವ ಸಾರ್ವಕಾಲಿಕ ಸತ್ಯವನ್ನು ಈ ನಾಟಕ ಹೇಳುತ್ತದೆ. ವರ್ಗಸಂಘರ್ಷದ ಹೋರಾಟದಲ್ಲಿ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಜನಹೋರಾಟವನ್ನು ಮುನ್ನೆಡೆಸಿದವರು ಪ್ರಭುತ್ವಕ್ಕೆ ಬಲಿಯಾಗಬಹುದಾದರೂ ‘ಆ ಸ್ವಾತಂತ್ರ್ಯದ ತೀವ್ರತೆ ಮಾತ್ರ ಲಾವಾರಸವಾಗಿ ಜನರೆದೆಯಲ್ಲಿ ಇದ್ದೇ ಇರುತ್ತದೆ, ಮತ್ತೆ ಸಿಡಿಯುವ ಅವಕಾಶಕ್ಕಾಗಿ ಕಾಯುತ್ತಿರುತ್ತದೆ’ ಎನ್ನುವುದನ್ನು ಈ ನಾಟಕದ ಅಂತ್ಯ ಬಲು ಸೂಚ್ಯವಾಗಿ ಹೇಳುತ್ತದೆ. ಪ್ರಭುತ್ವ ವಿರೋಧಿ ಆಕ್ರೋಶವನ್ನು ಬಿ.ಸುರೇಶರವರು ಕೇವಲ ಆಶಯಕ್ಕೆ ಮಿತಿಗೊಳಿಸಿ ‘ಮೃತ್ಯುಂಜಯ’ದ ಜನಹೋರಾಟದತೀವ್ರತೆಯನ್ನು ಡೈಲ್ಯೂಟ್ ಮಾಡಿದ್ದಾರೆ. ಶೋಷಿತ ಜನತೆಯ ಆಕ್ರೋಶ ಶೋಷಕ ವ್ಯವಸ್ಥೆಯನ್ನು ಸರ್ವನಾಶಮಾಡುವ ಮೂಲಕ ಗೆಲುವನ್ನು ಪಡೆಯಬಹುದಾದ ಸಾಧ್ಯತೆಯ ಅವಕಾಶದಿಂದ ನಾಟಕವನ್ನು ವಂಚಿಸಿದ್ದಾರೆ. ಈ ನಾಟಕದಲ್ಲೇ ತಮ್ಮ ಪ್ರಾಂತ್ಯಕ್ಕೆ ಹೋಗಿ ಜನರನ್ನು ಕರೆದುಕೊಂಡು ಬರಲು ವ್ಯವಸ್ಥೆಯೊಂದು ರೂಪಿತಗೊಂಡಿರುತ್ತದೆ. ಆದರೆ ಆ ಜನ ರಾಜಧಾನಿಯನ್ನು ತಲುಪುವುದೇ ಇಲ್ಲ. ತಮ್ಮ ನಾಯಕನ ಸಾವಿಗೆ ಪ್ರತಿಕ್ರಿಯೆಯಾಗಿ ರೈತಾಪಿವರ್ಗ ಸಿಡಿದೇಳುವುದನ್ನು 'ಮೃತ್ಯುಂಜಯ' ಬೆಂಬಲಿಸುವುದಿಲ್ಲ. ಅದರ ಬದಲಾಗಿ ಜನರ ಮೇಲೆ ಸೈನಿಕರ ದಬ್ಬಾಳಿಕೆಯನ್ನು ಮಾಡಿಸಿ ದುಡಿಯುವ ವರ್ಗವನ್ನೇ ಸರ್ವನಾಶಮಾಡಿಸುವ ತಂತ್ರವೊಂದು ಈ ನಾಟಕದಲ್ಲಿ ಮೇಲುಗೈ ಸಾಧಿಸಿದೆ. ಅಂದರೆ “ದುಡಿಯುವ ಜನರು ಅಸಹಾಯಕರು, ಪ್ರಭುತ್ವವನ್ನು ಎದುರು ಹಾಕಿಕೊಂಡರೆ ಸರ್ವನಾಶವನ್ನು ಎದುರಿಸಬೇಕು. ಅತ್ಯಾಚಾರ ಲೂಟಿ ಪ್ರಾಣಹತ್ಯೆಗೆ ಜನತೆ ಒಳಗಾಗಬೇಕಾಗುತ್ತದೆ” ಎನ್ನುವುದನ್ನು ಪರೋಕ್ಷವಾಗಿ ಸಾಬೀತುಪಡಿಸುವಂತಿರುವ ಈ ನಾಟಕ ಕೇವಲ ‘ಅನ್ಯಾಯಕ್ಕೆ ಶೋಷಣೆಗೆ ವಿರುದ್ಧವಾಗಿ ಹೋರಾಟದ ಕಿಡಿಗಳನ್ನು ನಿಮ್ಮೆದೆಯಲ್ಲಿ ಇಟ್ಟುಕೊಂಡರೆ ಸಾಕು’ ಎಂದು ಹೇಳುತ್ತದೆ. . ಜನಹೋರಾಟವನ್ನು ಮೆಟ್ಟಿನಿಂತು ಪಟ್ಟದಲ್ಲಿ ಕುಳಿತ ಶೋಷಕ ಪ್ರಭುತ್ವ ಅಟ್ಟಹಾಸಪಡುವಂತಹ ಹಾಗೂ ದುಷ್ಟ ಶಕ್ತಿಗಳೇ ಗೆಲ್ಲುವಂತಹ ಅಂತ್ಯ ಈ ನಾಟಕದಲ್ಲಿದೆ. ಬಿ.ಸುರೇಶರವರು ಈ ನಕಾರಾತ್ಮಕ ಪರಿಣಾಮಕ್ಕೆ ಹೊಸ ಹೊಳಹು ಕೊಟ್ಟು ಅಂತಿಮವಾಗಿ ಜನತೆಯ ವಿಜಯವನ್ನು ತೋರಿಸಿದ್ದರೆ ಹೋರಾಟಗಾರರಿಗೆ ಪ್ರೇರಣೆಯಾಗುತ್ತಿತ್ತು. ಜನಹೋರಾಟಕ್ಕೆ ಗೆಲುವು ತಂದುಕೊಟ್ಟು ಪ್ರಜಾಹೋರಾಟದಲ್ಲಿ ನಿರತರಾದವರಿಗೆ ಆತ್ಮಸ್ಥ್ಯರ್ಯವನ್ನು ತುಂಬುವಂತಹ ಅಂತ್ಯವನ್ನು ಕೊಟ್ಟರೆ ಈ ನಾಟಕ ಸಾರ್ಥಕತೆಯನ್ನು ಪಡೆಯುತ್ತದೆ. ಪ್ರಭುತ್ವದ ಷಡ್ಯಂತ್ರ್ಯಕ್ಕೆ ಬಲಿಯಾಗಿ ಜನಹೋರಾಟಗಳೇ ನೇಪತ್ಯಕ್ಕೆ ಸರಿದು ಆಳುವ ವರ್ಗಗಳ ಅಟ್ಟಹಾಸವೇ ಮೆರೆಯುತ್ತಿರುವ ಪ್ರಸ್ತುತ ಸಮಾಜದಲ್ಲಿ ಸ್ವಾರ್ಥರಹಿತ ಹೋರಾಟದ ಚೈತನ್ಯವನ್ನು ತುಂಬುವಂತಹ ರಂಗರೂಪಕ ‘ಮೃತ್ಯುಂಜಯ’ದ ಅಂತ್ಯವು ನಿರಂಜನರ ಕಾದಂಬರಿಯ ಆಶಯದಂತೆಯೇ ಇರಬೇಕಾದದ್ದು ಜನಹೋರಾಟಕ್ಕೆ ಕೊಡುವ ಮನ್ನಣೆಯಾಗಿದೆ. ‘ಗೆದ್ದೆ ಬಿಟ್ಟಿತು ನಮ್ಮ ಜನ, ಗೆಲ್ಲಲೇಬೇಕು ಹಳ್ಳಿ ಜನ’ ಎನ್ನುವ ಈ ನಾಟಕದ ಹಾಡಿನ ಆಶಯಕ್ಕೆ ವಿರುದ್ಧವಾಗಿ ಬದಲಾವಣೆ ತರುವಲ್ಲಿ ಗೆದ್ದ ಜನರನ್ನು ಕೊನೆಗೆ ಸರ್ವನಾಶಮಾಡಿಸಿ ಸೋಲಿಸಿದ್ದು ಯಾಕೋ ವಿಚಿತ್ರವಾಗಿದೆ.
ನಾಟಕದ ವಸ್ತು ವಿಷಯ ಅಂತ್ಯಗಳ ತಾರ್ಕಿಕ ಅಂಶಗಳನ್ನು ಪಕ್ಕಕ್ಕಿಟ್ಟು ಪ್ರದರ್ಶನದ ಕಡೆ ನೋಡಿದರೆ ಬಿ.ಸುರೇಶರವರ ನಿರ್ದೇಶನದ ಸಾಮರ್ಥ್ಯ ಹಾಗೂ ದೌರ್ಬಲ್ಯ ಎರಡರ ದರ್ಶನವಾಗುತ್ತದೆ. ಹೇಗೆ ಮಾಡಿದರೂ ಮೂರುಗಂಟೆ ಅವಧಿಗಿಂತ ಕಡಿಮೆ ಈ ನಾಟಕವನ್ನು ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ‘ಮೃತ್ಯುಂಜಯ’ ದ ಸ್ಕ್ರಿಪ್ಟ್ ಇದೆ. ಎಲ್ಲೇ ಎಡಿಟ್ ಮಾಡಿದರೂ ನಾಟಕದ ದೃಶ್ಯಗಳು ಲಿಂಕ್ ಕಳೆದುಕೊಳ್ಳುತ್ತವೆ. ಆದರೂ ಮೂರುಗಂಟೆಯ ನಾಟಕವನ್ನು ಎರಡೂವರೆ ಗಂಟೆಗಿಳಿಸಿ, ನಂತರ ಅದರಲ್ಲೂ ಕಡಿತಗೊಳಿಸಿ ಎರಡು ಗಂಟೆಗೆ ಮಿತಿಗೊಳಿಸಿ, ನಾಟಕದ ಆಶಯಕ್ಕೆ ವೇಗಕ್ಕೆ ವ್ಯತ್ಯಯ ಬರದಂತೆ ನಾಟಕ ಕಟ್ಟಿಕೊಡುವುದು ಸವಾಲಿನ ಕೆಲಸವಾಗಿದೆ. ಈ ಸವಾಲನ್ನು
ನಿಭಾಯಿಸುವಲ್ಲಿ ಸುರೇಶರವರು ಬಹುಪಾಲು ಯಶಸ್ವಿಯಾಗಿದ್ದಾರೆ. ಚಲನಶೀಲತೆ ಈ ನಾಟಕದ ದೃವ್ಯಗುಣವಾಗಿದೆ. ಎರಡು ಗಂಟೆಗಳ ಕಾಲ ನೋಡುಗರಿಗೆ ಎಲ್ಲಿಯೂ ಬೋರ್ ಹೊಡಿಸದೇ ನಾಟಕ ನಿರಂತರವಾಗಿ ನೋಡಿಸಿಕೊಂಡು ಹೋಗುತ್ತದೆ. ದೃಶ್ಯಗಳ ಜೊತೆಗೆ ಪಾತ್ರಗಳೂ ಸಹ ಚಲಿಸುತ್ತಲೇ ಇರುತ್ತವೆ. ಈ ನಾಟಕದ ಶಕ್ತಿ ಇರೋದೇ ಈ ಚಲನಶೀಲತೆಯಲ್ಲಿ. ಖಾಲಿ ಸ್ಟೇಜನ್ನು ಪಾತ್ರಗಳು ಆವರಿಸಿಕೊಳ್ಳುವುದು ಹಾಗೂ ನಾಟಕದಾದ್ಯಂತ ರಂಗವೇದಿಕೆ ಖಾಲಿಯಾಗದಂತೆ ನೋಡಿಕೊಂಡ ನಿರ್ದೇಶಕರು ಪ್ರೇಕ್ಷಕರಿಗೆ ಬೇರೆಕಡೆ ಗಮನ ಹರಿಸಲೂ ಅವಕಾಶಕೊಡದಂತೆ ನಾಟಕವನ್ನು ಚಲನಶೀಲಗೊಳಿಸಿದ್ದಾರೆ.
ನಾಲ್ಕು ಜನರನ್ನು ಹೊರತು ಪಡಿಸಿದರೆ ಬಹುತೇಕ ಎಲ್ಲಾ ಯುವ ನಟರೂ ನಾಟಕಕ್ಕೆ ಹೊಸಬರು. ನಟನೆಯ ಗಂಧಗಾಳಿ ಗೊತ್ತಿಲ್ಲದವರನ್ನು ಪಾತ್ರಕ್ಕೆ ಪೂರಕವಾಗಿ ಪಳಗಿಸಿ ಇಂತಹ ಐತಿಹಾಸಿಕ ಎನ್ನಬಹುದಾದ ಎಪಿಕ್ ನಾಟಕವನ್ನು ಕಟ್ಟಿಕೊಡುವುದು ಕಷ್ಟಸಾಧ್ಯವಾದದ್ದು. ಆದರೂ... ಅಪ್ರಭುದ್ದ ನಟರನ್ನು ಬಳಸಿಕೊಂಡು ಪ್ರಭುದ್ದ ನಾಟಕವನ್ನು ನಿರ್ದೇಶಿಸುವ ಸಾಹಸ ತೋರಿದ ಬಿ.ಸುರೇಶರವರ ತಾಳ್ಮೆ ಹಾಗೂ ರಂಗಬದ್ದತೆಯನ್ನು ಅಭಿನಂದಿಸಲೇಬೇಕು.
ಹೊಸ ನಟರ ಅಭಿನಯ ಸಾಮರ್ಥ್ಯದ ಮಿತಿ ಹಾಗೂ ತಮಗಿರುವ ಕಾಲಮಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕರು ನಾಟಕದ ಪಾರ್ಮ್ಯಾಟನ್ನೇ ಸರಳೀಕರಿಸಿಕೊಂಡಿದ್ದಾರೆ. ಪ್ರಿಸೀನಿಯಂ ನಾಟಕಕ್ಕೆ ಬೀದಿ ನಾಟಕದ ಸರಳ ತಂತ್ರಗಾರಿಕೆಯನ್ನು ಬ್ಲೆಂಡ್ ಮಾಡಿದ್ದಾರೆ. ‘ಮೃತ್ಯುಂಜಯ’ ರಂಗನಾಟಕವಾಗಿದ್ದರೂ ನಾಟಕದಾದ್ಯಂತ ಬೀದಿನಾಟಕದ ತಂತ್ರಗಳು ಢಾಳಾಗಿ ಎದ್ದುಕಾಣುತ್ತವೆ. ಸುತ್ತಲೂ ಪ್ರೇಕ್ಷಕರು ಇಲ್ಲ ಹಾಗೂ ನಟರು ವೃತ್ತಾಕಾರದೊಳಗೆ ಚಲಿಸುತ್ತಾ ಅಭಿನಯವನ್ನು ಮಾಡಬೇಕಾದ ಅಗತ್ಯವಿಲ್ಲ ಮತ್ತು ನಾಟಕ ನಡೆಯುವ ಸ್ಥಳ ಬೀದಿಯಲ್ಲ ಎನ್ನುವುದನ್ನು ಬಿಟ್ಟರೆ ಇಡೀ ನಾಟಕದಲ್ಲಿ ಬೀದಿನಾಟಕದ ತಂತ್ರಗಾರಿಕೆ ಹಾಸುಹೊಕ್ಕಾಗಿದೆ. ಯಾವ ಸೆಟ್ ಪ್ರಾಪರ್ಟಿಗಳನ್ನೂ ಬಳಸದೇ ಕೇವಲ ನಟರನ್ನೇ ಸೆಟ್ ಪ್ರಾಪರ್ಟಿಗಳಾಗಿ ಉಪಯೋಗಿಸಲಾಗಿದೆ. ನಟರೇ ಖುರ್ಚಿ-ಟೇಬಲ್ ಆಗುತ್ತಾರೆ, ಗಿಡಮರಗಳಾಗಿ ತೂಗುತ್ತಾರೆ. ಪಾತ್ರವಿಲ್ಲದಿದ್ದಾಗ ಬೆನ್ನುಮಾಡಿ ನಿಲ್ಲುತ್ತಾರೆ. ಪಾತ್ರವಿದ್ದಾಗ ಅಭಿನಯಿಸಿ ಮತ್ತೆ ಪ್ರಾಪರ್ಟಿಯಾಗುತ್ತಾರೆ. ರಂಗಪರಿಕರಗಳಿಲ್ಲದಿದ್ದರೆ ಮೈಮ್ ನಲ್ಲಿಯೇ ತೂಗಿಸಿಕೊಂಡು ಹೋಗುತ್ತಾರೆ. ಕೋಲುಗಳನ್ನು ಬಳಸಿ ಪಲ್ಲಕ್ಕಿಯನ್ನು ಕಾರಾಗ್ರಹವನ್ನು ಸೃಷ್ಟಿಸುತ್ತಾರೆ. ಬಹುತೇಕ ಪಾತ್ರಗಳು ಒಂದೇ ರೀತಿ ಯುನಿಫಾರಂ ಮಾದರಿಯ ಕಾಸ್ಟೂಮ್ಸ್ಗಳನ್ನು ಹಾಕಿರುತ್ತವೆ. ಸಂದೇಶಾತ್ಮಕವಾದ ಹಾಡುಗಳ ಬಳಕೆ ಮಾಡಿದ್ದಾರೆ... ಇವೆಲ್ಲಾ ಪಕ್ಕಾ ಬೀದಿನಾಟಕದ ಬೇಸಿಕ್ ತಂತ್ರಗಳೇ ಆಗಿವೆ. ಮೂಲದಲ್ಲಿ ಬಿ.ಸುರೇಶರವರು ಎ.ಎಸ್.ಮೂರ್ತಿಯವರ ಬೀದಿನಾಟಕದ ಗರಡಿಯಿಂದ ಬಂದವರಾಗಿದ್ದರಿಂದ ಇನ್ನೂ ಅವರಿಗೆ ಆ ಪಾರ್ಮ್ಯಾಟನಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿಲ್ಲ ಎಂಬುದನ್ನು ಈ ನಾಟಕ ಸಾಕ್ಷೀಕರಿಸುತ್ತದೆ. ಮತ್ತು ಕಡಿಮೆ ವೆಚ್ಚದಲ್ಲಿ- ಕಡಿಮೆ ಸಮಯದಲ್ಲಿ ಈ ನಾಟಕವನ್ನು ಕಟ್ಟಿಕೊಡಬೇಕಾದ ಅನಿವಾರ್ಯತೆಗೊಳಗಾದ ಸುರೇಶರವರಿಗೆ ಬೀದಿನಾಟಕದ ತಂತ್ರಗಾರಿಕೆ ವರದಾನವಾಗಿ ಪ್ರಯೋಜನಕ್ಕೆ ಬಂದಂತಿದೆ. ಹೋಗಲಿ ಯಾವ ಪಾರ್ಮ್ಯಾಟನಲ್ಲಾದರೂ ನಾಟಕ ಮಾಡಿಸಲಿ ಅದು ನಿರ್ದೇಶಕರಿಗೆ ಬಿಟ್ಟಿ ವಿಚಾರ. ನಾಟಕವೊಂದು ನೋಡುಗರಿಗೆ ಕಮ್ಯೂನಿಕೇಟ್ ಆಯಿತಾ ಎನ್ನುವುದೊಂದೇ ಪ್ರೇಕ್ಷಕರ ಮೂಲಭೂತ ಅಪೇಕ್ಷೆ. ಈ ಅಪೇಕ್ಷೆಯನ್ನು ಈ ನಾಟಕ ಈಡೇರಿಸುವಲ್ಲಿ ಸಫಲವಾಗಿದೆ. ರಂಗತಂತ್ರಗಳು ಹಳೆಯದೋ ಹೊಸದೋ ಎನ್ನುವುದಕ್ಕಿಂತ ಇಡೀ ನಾಟಕ ಪ್ರೇಕ್ಷಕರ ಅನುಭವಕ್ಕೆ ದಕ್ಕಿತಾ ಎಂದು ಪ್ರಶ್ನಿಸಿಕೊಂಡರೆ ಒಂದಿಷ್ಟು ನಿರಾಸೆಯುಂಟಾಗುತ್ತದೆ.
ಯಾಕೆಂದರೆ... ಪ್ರದರ್ಶನಗೊಂಡ ಇಡೀ ನಾಟಕ ನೋಡುಗರ ಬುದ್ದಿಗೆ ಸಿಕ್ಕಷ್ಟು ಭಾವನೆಗೆ ದಕ್ಕುವುದಿಲ್ಲ. ಅರ್ಥಕ್ಕೆ ದಕ್ಕಿದಷ್ಟು ಹೃದಯಕ್ಕೆ ಸ್ಪಂದಿಸುವುದಿಲ್ಲ. ಕಣ್ಣಿಗೆ ಕಂಡಷ್ಟು ಭಾವತೀವ್ರತೆಯನ್ನು ಹೊಮ್ಮಿಸುವುದಿಲ್ಲ. ಯಾವುದೇ ದೃಶ್ಯವೂ ನೋಡುಗರಲ್ಲಿ ತೀವ್ರ ರಸಾನುಭವವನ್ನು ಸ್ಪುರಿಸುವುದಿಲ್ಲ. ಕೊನೆಗೆ ರೈತನಾಯಕನ ಸಾವೂ ಸಹ ಮನ ಕಲಕುವುದಿಲ್ಲ. ಯಾಕೆ ಹೀಗೆ...? ಇದಕ್ಕೆ ಪ್ರಮುಖ ಕಾರಣ ನಟರ ಮೆಕ್ಯಾನಿಕಲ್ ಆದ ಅಭಿನಯ. ಸಾತ್ವಿಕಾಭಿನಯದ ಕೊರತೆಯಿಂದ ಇಡೀ ನಾಟಕ ನರಳುವಂತಿದೆ. ಅದು ನಟರ ಮಿತಿಯೂ ಆಗಿದೆ. ಜೊತೆಗೆ ಅತಿಯಾದ ಗುಂಪು ಬಳಕೆಯೂ ಕಾರಣವಾಗಿದೆ.
ಈ ನಾಟಕ ಪ್ರಯೋಗವು ಅದ್ಯಾಕೋ ರಿಹರ್ಸಲ್ ಕೊರತೆಯನ್ನು ಹೊಂದಿರುವುದು ಕಂಡುಬರುತ್ತದೆ. ನಾಟಕದ ಮೊದಲಾರ್ಧ ಭಾಗದಲ್ಲಿ ಬರುವ ಎಲ್ಲಾ ಗುಂಪು ಸಂಯೋಜನೆಯಲ್ಲಿ ಗದ್ದಲ ಗೊಂದಲ ಮುಂದುವರೆದಿದೆ. ದ್ವಿತಿಯಾರ್ಧದಲ್ಲಿ ನಾಟಕ ಗಂಭೀರತೆಯನ್ನು ಪಡೆಯುತ್ತದೆ. ಈ ಪ್ರಯೋಗವನ್ನು ಪ್ರದರ್ಶನ ಎನ್ನುವುದಕ್ಕಿಂತಲೂ ಗ್ರ್ಯಾಂಡ್ ರಿಹರ್ಸಲ್ ಎನ್ನಬಹುದಾಗಿದೆ. ಇನ್ನೂ ಗುಂಪು ನಿರ್ವಹಣೆಯಲ್ಲಿ ಮುತುವರ್ಜಿ ವಹಿಸಿದ್ದರೆ, ದೃಶ್ಯ ಸಂಯೋಜನೆಯಲ್ಲಿ ಸ್ಪಷ್ಟತೆಯನ್ನು ತಂದಿದ್ದರೆ, ಅಗತ್ಯ ಪ್ರಾಪರ್ಟಿಗಳನ್ನು ಬಳಸಿದ್ದರೆ, ನಟರನ್ನು ಪಾತ್ರಕ್ಕೆ ಪೂರಕವಾಗಿ ಇನ್ನಷ್ಟು ಪಳಗಿಸಿದ್ದರೆ, ಕೋರಸ್ ಮಾತುಗಳಲ್ಲಿ ಏಕತೆ ದ್ವನಿಸಿದ್ದರೆ, ನಟರ ನಡುವೆ ಸಮನ್ವಯತೆಯನ್ನು ಸಾಧಿಸಿದ್ದರೆ, ಗುಂಪು ಚಲನೆಯ ವೈವಿದ್ಯಮಯ ಸಂಯೋಜನೆಯಲ್ಲಿ ಶಿಸ್ತನ್ನು ರೂಢಿಸಿದ್ದರೆ...
ನಿಜಕ್ಕೂ ಉತ್ತಮ ಪ್ರದರ್ಶನವೊಂದನ್ನು ಕೊಡಬಹುದಾಗಿತ್ತು. ಹೆಚ್ಚಾಗಿ ಮೊದಲ ಪ್ರದರ್ಶನದಲ್ಲಿ ಈ ರೀತಿಯ ನ್ಯೂನ್ಯತೆಗಳಾಗುವುದು ಸರ್ವೆಸಾಮಾನ್ಯ. ಮುಂದಿನ ಪ್ರದರ್ಶನದಲ್ಲಿ ಕೊರತೆಗಳನ್ನು ಸರಿಪಡಿಸಿ, ಕಲಾತ್ಮಕ ಅಂಶಗಳಿಗೆ ಹೆಚ್ಚು ಗಮನಕೊಟ್ಟು ನಾಟಕವನ್ನು ಪ್ರದರ್ಶನಯೋಗ್ಯ ಗೊಳಿಸುವ ಸಾಧ್ಯತೆಗಳು ಮುಕ್ತವಾಗಿದೆ. “ ನಾಳೆ ನಮ್ಮ ಮುಂದಿದೆ ಕನಸು ನಮ್ಮ ಎದುರಿದೆ.....” ಎಂಬ ಈ ನಾಟಕದ ಧ್ಯೇಯವಾಕ್ಯವನ್ನು ಒಂದಿಷ್ಟು ಬದಲಾಯಿಸಿ “ನಾಟಕ ನಮ್ಮ ಮುಂದಿದೆ, ಮುಂದಿನ ಪ್ರದರ್ಶನ ನಮ್ಮ ಎದುರಿದೆ” ಎಂದು ಕಲಾವಿದರಾದಿಯಾಗಿ ಎಲ್ಲರೂ ಪೂರ್ವಸಿದ್ದತೆಯನ್ನು ಖರಾರುವಕ್ಕಾಗಿ ಮಾಡಿಕೊಂಡರೆ ‘ಮೃತ್ಯುಂಜಯ’ ನಾಟಕ ವಿಜಯಿಯಾಗುತ್ತದೆ. ಜನಮನವನ್ನು ಸಮರ್ಪಕವಾಗಿ ತಲುಪುತ್ತದೆ.
ನಾಟಕದಲ್ಲಿ ಬಳಸಲಾದ ಅಭಿನಯದ ಶೈಲಿ ಮೇಯರ್ ಹೋಲ್ಡ್ನದ್ದಾದರೂ ಆಗಿರಲಿ, ಇಲ್ಲವೇ ನಮ್ಮ ಬೀದಿನಾಟಕದ್ದೇ ಆಗಿರಲಿ, ಒಟ್ಟಾರೆಯಾಗಿ ನಾಟಕವೊಂದು ಪ್ರೇಕ್ಷಕರ ಅನುಭವಕ್ಕೆ ದಕ್ಕುವುದು ಮುಖ್ಯ. ಪ್ರತಿ ಪಾತ್ರ ಹಾಗೂ ದೃಶ್ಯ ನೋಡುಗರ ಜೊತೆಗೆ ಸಂಹವನ ಮಾಡುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ನಿರ್ದೇಶಕರು ಹಾಗೂ ನಟರು ಸಮನ್ವಯತೆಯನ್ನು ಸಾಧಿಸಬೇಕಿದೆ. ‘ಮೃತ್ಯುಂಜಯ’ ನಾಟಕದಲ್ಲಿ ಮೂರು ಪಾತ್ರಗಳು ಹೆಚ್ಚು ಗಮನ ಸೆಳೆದವು. ಹುಚ್ಚ ‘ಮೆನ್ನ’ ನ ಪಾತ್ರದ ಮೇಘ ಸಮೀರ್ರು ತಮ್ಮ ವಿಕ್ಷಿಪ್ತ ನಟನೆ ಹಾಗೂ ಮಾರ್ಮಿಕ ಮಾತುಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರೆ, ಮಹಾಮಂತ್ರಿಯಾಗಿ ರಾಮುರವರ ವಿಶಿಷ್ಟವಾದ ಆಂಗಿಕ ಹಾಗೂ ವಾಚಿಕಾಭಿನಯ ನೋಡುಗರ ಗಮನ ಸೆಳೆಯಿತು. ಜೊತೆಗೆ ಮಹಾರಾಣಿ ನೆಫಟಿಮ್ ಪಾತ್ರವನ್ನು ಆವಾಹಿಸಿಕೊಂಡು ಅಭಿನಯಿಸಿದ ದಿಶಾ ರಮೇಶ್ರವರ ನಟನೆ ಸ್ತುತ್ಯಾರ್ಹ. ಮಿಕ್ಕೆಲ್ಲಾ ನಟ ನಟಿಯರೂ ಸಹ ತಮ್ಮ ಅಭಿನಯ ಸಾಮರ್ಥ್ಯಕ್ಕೆ ತಕ್ಕಂತೆ ನಟಿಸಿದ್ದರಾದರೂ ಪಾತ್ರವಾಗಲು ಇನ್ನೂ ಹೆಚ್ಚು ಪರಿಶ್ರಮ ವಹಿಸಬೇಕಿದೆ. ಪ್ರದರ್ಶನದಿಂದ ಪ್ರದರ್ಶನಕ್ಕೆ ತಮ್ಮ ನಟನಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ಬ್ಲಾಕಿಂಗ್ ಮೈವ್ಮೆಂಟಗಳ ಅಗತ್ಯತೆಯನ್ನು ಅರಿತುಕೊಂಡು ಒಂಚೂರು ಗೊಂದಲವಿಲ್ಲದಂತೆ ನಟಿಸಬೇಕಿದೆ. ತಮ್ಮ ನಟನಾ ಸಾಮರ್ಥ್ಯದಿಂದಲೇ ‘ಮೃತ್ಯುಂಜಯ’ ನಾಟಕವನ್ನು ಗೆಲ್ಲಿಸಬೇಕಿದೆ. ನಿರ್ದೇಶಕರು ಕೆಲವೊಂದು ಅದ್ಭುತವಾದ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಆದರೆ ನಟರು ಅವುಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಉದಾಹರಣೆಗೆ ಜನರು ಹಡಗಿನಲ್ಲಿ ಹೋಗುವ ದೃಶ್ಯ ಸೊಗಸಾಗಿದೆ ಆದರೆ ನಟರ ಚಲನೆಯಲ್ಲಿ ವ್ಯತ್ಯಾಸವಾಗಿದೆ.
ಚೇತನ್ ಹಾಗೂ ಸುದರ್ಶನರ ಬೆಳಕು ಸಂಯೋಜನೆ ಕೂಡಾ ಇನ್ನೂ ತನ್ನ ಕೌಶಲವನ್ನು ತೋರಬೇಕಿದೆ. ನಾಟಕದಲ್ಲಿ ಬೆಳಕಿರುವುದು ಕೇವಲ ದೃಶ್ಯಗಳನ್ನು ಬೆಳಗಲು ಮಾತ್ರವಲ್ಲ ಮೂಡ್ ಸೃಷ್ಟಿಸಲೂ ಎನ್ನುವುದನ್ನು ಅರಿಯಬೇಕಿದೆ. ಹಿಂದೆ ಸೈಕ್ ಇದೆ ಆದರೆ ಅದನ್ನು ದೃಶ್ಯದ ಮೂಡಿಗನುಗುಣವಾಗಿ ಬಣ್ಣ ಬದಲಾಯಿಸುವ ಮೂಲಕ ಬಳಸಿದ್ದರೆ ನಾಟಕದ ರಸಾನುಭವವನ್ನು ಹೆಚ್ಚಿಸಬಹುದಾಗಿತ್ತು. ತುಂಬಾ ನಟರಿದ್ದರಿಂದ ಕೆಲವರ ಮುಖದಲ್ಲಿ ಬೆಳಕಿದ್ದರೆ ಇನ್ನು ಕೆಲವರು ನೆರಳಲ್ಲಿರಬೇಕಾಗಿತ್ತು. ನಾಟಕದ ತಾಲಿಂ ಜೊತೆಗೆ ಲೈಟಿಂಗ್ ರಿಹರ್ಸಲ್ ಕೂಡಾ ಮಾಡಿದ್ದರೆ, ನಟರಿಗೆ ಬೆಳಕು ತೆಗೆದುಕೊಳ್ಳುವ ರೀತಿಯನ್ನು ತಿಳಿಸಿದ್ದರೆ ನಾಟಕ ಕಳೆಗಟ್ಟುವುದರಲ್ಲಿ ಸಂದೇಹವಿಲ್ಲ.
ಹಾಡುಗಳು ತುಂಬಾ ಅರ್ಥಪೂರ್ಣವಾಗಿವೆ. ಆದರೆ ಸಂಗೀತಕ್ಕೂ ಹಾಡಿಗೂ ಸಿಂಕ್ ಆಗುವಲ್ಲಿ ವ್ಯತ್ಯಯವಾಗಿದೆ. ವೇದಿಕೆಯಿಂದ ಲೈವ್ ಹಾಡನ್ನು ಕಲಾವಿದರು ಹಾಡಿದರೆ ಹಿಂದೆ ದೂರದಲ್ಲಿ ಸಂಗೀತ ಬರುವಂತಿದೆ. ಸಂಗೀತ ವಿಭಾಗದಲ್ಲಿ ಇನ್ನೂ ಹೆಚ್ಚು ಸುಧಾರಣೆ ಆಗಬೇಕಿದೆ. ದೋಣಿ ದೃಶ್ಯದಲ್ಲಿ ಯೋ... ಯೋ...
ಎನ್ನುವ ಆಲಾಪ ಸಂಚಲನ ಹುಟ್ಟಿಸುವಂತಿತ್ತು. ‘ಗೆದ್ದೆ ಬಿಟ್ಟಿತು ನಮ್ಮ ಜನ, ಗೆಲ್ಲಲೇಬೇಕು ಹಳ್ಳಿ ಜನ’ ಎನ್ನುವ ಘೋಷನಾತ್ಮಕವಾದ ಹಾಡಿಗೆ ಪೂರಕವಾಗಿ ಸಂಗೀತ ಸಂಯೋಜನೆ ಬೇಕಾಗಿತ್ತು. ರೈತಾಪಿ ವರ್ಗದ ಕಾಸ್ಟೂಮಗಳಲ್ಲಿ ಅಂತಹ ಹೇಳಿಕೊಳ್ಳುವಂತಹ ಬದಲಾವಣೆಗಳಿಲ್ಲದೇ ಏಕತಾನ ನೋಟಕ್ಕೆ ಕಾರಣವಾಗಿವೆ. ಎಲ್ಲರಿಗೂ ಬ್ರೌನ್ ಬಣ್ಣದ ಬಟ್ಟೆ ಮೇಲೆ ಬಿಳಿ ಅಂಗವಸ್ತ್ರವಿದೆ. ಆದರೆ ಬಿಳಿ ವೇಲ್ನಂತಹ ಬಟ್ಟೆಯನ್ನು ಬೇರೆ ಬೇರೆ ದೃಶ್ಯ ಸಂಯೋಜನೆಗೆ ಭಿನ್ನವಾಗಿ ಬಳಸಿದ ರೀತಿ ಸೊಗಸಾಗಿದೆ. ರಾಜ ರಾಣಿ ರಾಜಗುರು ಹಾಗೂ ಮಂತ್ರಿ ಪಾತ್ರಗಳ ವಸ್ತ್ರವಿನ್ಯಾಸ ಈಜಿಪ್ತ್ ಮಾದರಿಯಲ್ಲಿ ಸಿಂಪಲ್ ಆಗಿ ಚೆನ್ನಾಗಿವೆ. ಎಲ್ಲಕ್ಕಿಂತ ಅರ್ಥಪೂರ್ಣವಾಗಿರುವುದು ಸಿಂಬಾಲಿಕ್ ದಂಡಗಳು. ರಾಜನ ಕೈಯಲಿ ಪ್ರಶ್ನಾರ್ಥಕ ಚಿನ್ನೆ ಮಾದರಿಯ ರಾಜದಂಡ ಪ್ರಭುತ್ವವನ್ನೇ ಪ್ರಶ್ನಿಸುವಂತಿದ್ದರೆ, ರಾಜಗುರುವಿನ ಕೈಯಲ್ಲಿದ್ದ ನೇಣು ಕುಣಿಕೆಯ ಮಾದರಿಯ ಧರ್ಮದಂಡವು ಧರ್ಮಧಿಕಾರಿಗಳ ಶೋಷಣಾ ತಂತ್ರಗಳಿಗೆ ಸಾಂಕೇತಿಕವಾಗಿವೆ. ಮಂತ್ರಿಯ ಕೈದಂಡದಲ್ಲಿ ನಾಗರ ಹಾವಿನ ಹೆಡೆ ಇರುವುದು ಆಡಳಿತಶಾಹಿಯ ದೂರ್ತತನಕ್ಕೆ ಸಾಕ್ಷಿ ಹೇಳುತ್ತದೆ. ಜೊತೆಗೆ ಖಳನಾಯಕಿಯ ತಲೆಕಿರೀಟವೇ ನಾಗರ ಹೆಡೆಯಿಂದ ಮಾಡಿದ್ದು ಆ ಪಾತ್ರದ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಹೀಗೆ ಕೆಲವಾರು ಪರಿಕರಗಳನ್ನು ಸಾಂಕೇತಿಕವಾಗಿ ಬಳಸಿದ್ದು ನಿರ್ದೇಶಕರ ಕ್ರಿಯಾಶೀಲತೆಗೆ ಪ್ರತೀಕವಾಗಿದೆ.
ಕೆಲವೊಂದು ತಾರ್ಕಿಕ ಸಂದೇಹಗಳು ಈ ನಾಟಕದಲ್ಲಿವೆ. ದೇಶ ಯಾವುದೇ ಆಗಲಿ ರಾಜನ ಸ್ಥಾನ ಎತ್ತರದಲ್ಲಿರುತ್ತದೆ, ಆ ನಂತರ ಗುರುವಿನ ಸ್ಥಾನ. ಆದರೆ ಈ ನಾಟಕದ ಕ್ಲೈಮ್ಯಾಕ್ಸಿನಲ್ಲಿ ರಾಜ ಕೆಲಗಡೆ ಲೋಲೆಲ್ಲಿನಲ್ಲಿ ಕುಳಿತುಕೊಂಡಿದ್ದರೆ ರಾಜಗುರು ಎತ್ತರದಲ್ಲಿ ರಂಗದ ನಡುವೆ ನಿಂತಿರುವುದು ಯಾಕೋ ಆಯಾ ಸ್ಥಾನ ಮರ್ಯಾದೆಗೆ ತಕ್ಕುದಾಗಿಲ್ಲ. ಸಾಮಂತರು ಹಾಗೂ ಭೂಮಾಲೀಕರು ಮಹಾಮಂತ್ರಿಗೆ ರೋಪ್ ಹಾಕುವಂತೆ ಏರುದ್ವನಿಯಲ್ಲಿ ಮಾತಾಡುವುದು ಆಭಾಸಕಾರಿಯಾಗಿದೆ ಹಾಗೂ ಅವರವರ ಸ್ಥಾನ ಗೌರವಕ್ಕೆ ಸರಿ ಎನ್ನಿಸುವಂತಿಲ್ಲ. ರಾಜ, ರಾಜಗುರುವಾದಿ ಎಲ್ಲಾ ಪಾತ್ರಗಳೂ ನಾಟಕದಾದ್ಯಂತ ಬರಿಗಾಲಲ್ಲೇ ಇದ್ದರೂ ಮಹಾರಾಣಿ ಮಾತ್ರ ಪಾದುಕೆಗಳನ್ನು ಹಾಕಿದ ಏಕೈಕ ಪಾತ್ರವಾಗಿದೆ. ಬಹುತೇಕ ದೃಶ್ಯದಲ್ಲಿ ರಾಜ ಮತ್ತು ರಾಜಗುರು ಇಬ್ಬರೂ ಜನರು ಹೆಗಲ ಮೇಲೆ ಹೊರುವ ಪಲ್ಲಕ್ಕಿಯಲ್ಲೇ ಕುಳಿತಿರುವುದು ನೋಡಲು ಚೆನ್ನಾಗಿದೆಯಾದರೂ ವಾಸ್ತವವೆನ್ನಿಸುವುದಿಲ್ಲ. ಬಟ್ಟೆಗಳಲ್ಲಿ ಚಿತ್ರಬಿಡಿಸಿ ಭಿತ್ತಿಚಿತ್ರದಲ್ಲೇ ದೃಶ್ಯಕ್ಕೆ ಅಗತ್ಯವಾದ ಸೆಟ್ಗಳನ್ನು ತಯಾರಿಸಿದ್ದು ಈ ನಾಟಕದ ಅತ್ಯಂತ ಪ್ರಮುಖ ಅಂಶವಾಗಿದೆ. ಅರಮನೆ, ರಾಣಿಮನೆ, ಗುರುಮನೆ, ಅತಿಥಿಗೃಹ, ಕಾರಾಗ್ರಹ... ಹೀಗೆ ಕೆಲವಾರು ದೃಶ್ಯಸೃಷ್ಟಿಯಲ್ಲಿ ವಿಭಿನ್ನ ಮಾದರಿಯ ಭಿತ್ತಿಚಿತ್ರ ಪರದೆಗಳನ್ನು ಬಳಸುವ ಮೂಲಕ ಸೆಟ್ ಕ್ರಿಯೇಟ್ ಮಾಡಿದ್ದು ಈ ನಾಟಕದಲ್ಲಿ ತುಂಬಾ ಚೆನ್ನಾಗಿ ವರ್ಕಔಟ್ ಆಗಿದೆ.
‘ಮೃತ್ಯುಂಜಯ’ ನಾಟಕದಲ್ಲಿ ಒಂದು ಆದರ್ಶ ಆಡಳಿತದ ಪರಿಕಲ್ಪನೆಯನ್ನು ಕಟ್ಟಿಕೊಡಲಾಗಿದೆ. ಜನರ ಸಹಭಾಗಿತ್ವದಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಕಲ್ಪನೆ ತುಂಬಾ ಸೊಗಸಾಗಿದೆ. ದುಡಿಯುವ ಎಲ್ಲರೂ ಒಂದೇ, ಎಲ್ಲರೂ ಸಮಾನರು ಎಂಬ ಸಮಸಮಾಜದ ಆಶಯವನ್ನು ಈ ನಾಟಕದಲ್ಲಿ ಮೆನಕ್ಟಾ ಪಾತ್ರದ ಮೂಲಕ ಬಿಂಬಿಸಲಾಗಿದೆ. ‘ಜನರದ್ದೇ ಈ ಸರಕಾರ, ಜನರಿಂದ ಈ ಸರಕಾರ. ನಾಯಕರಿಲ್ಲ ಸಾಮಂತರಿಲ್ಲ ಸೈನ್ಯವಿಲ್ಲ ಕಾವಲು ಇಲ್ಲ, ಸ್ವತಂತ್ರವಾಗಿದೆ ಸರಕಾರ’ ಎನ್ನುವ ಈ ನಾಟಕದ ಹಾಡಿನ ಆಶಯ ದುಡಿಯುವ ವರ್ಗದ ಹೆಬ್ಬಯಕೆಯಾಗಿದೆ. ‘ಭ್ರಷ್ಟಾಚಾರ ರಹಿತ ಜನಾಡಳಿತ ನೆಮ್ಮದಿಯ ಸಮಾಜ ಸೃಷ್ಟಿಗೆ ಬೇಕಾಗಿದೆ’ ಎನ್ನುವ ಮಹತ್ತರವಾದ ವಿಚಾರವನ್ನು ಹೇಳುವ ‘ಮೃತ್ಯುಂಜಯ’ ನಾಟಕ ನೋಡುಗರಲ್ಲಿ ಅಂತಹ ಆದರ್ಶ ಆಡಳಿತದ ಕಲ್ಪನೆಯ ಕುರಿತು ಆಶಾಭಾವವನ್ನು ಹೆಚ್ಚಿಸುವಂತೆ ಮಾಡುತ್ತದೆ. ಜೊತೆಗೆ ಆಳುವ ವರ್ಗಗಳ ತಂತ್ರ ಷಡ್ಯಂತ್ರಗಳನ್ನು ಹಾಗೂ ಅಧಿಕಾರಿ ವರ್ಗದ ಕ್ರೌರ್ಯ-ಭ್ರಷ್ಟತೆಯನ್ನು, ಭೂಮಾಲೀಕರ ಜನವಿರೋಧಿತನವನ್ನು ‘ಮೃತ್ಯುಂಜಯ’ ನಾಟಕ ರಂಗದಂಗಳದಲ್ಲಿ ಬಯಲುಗೊಳಿಸುತ್ತದೆ. ನೋಡುಗರನ್ನು ಚಿಂತನೆಗೆ ಪ್ರೇರೇಪಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ನಾಟಕ ಮುಗಿದ ನಂತರ ನೋಡುಗರಲ್ಲಿ ಅನುರಣಿಸುವ ಹಾಡಿನ ಸಾಲುಗಳು...
“ ನಾಳೆ ನಮ್ಮ ಮುಂದಿದೆ
ಕನಸು ನಮ್ಮ ಎದುರಿದೆ.....
'ಮೃತ್ಯುಂಜಯ'ದ ನಿರ್ದೇಶಕ ಬಿ.ಸುರೇಶ್ |
ಯಾರು
ಏನೇ ಹೇಳಲಿ ತಮ್ಮ ಟಿವಿ ಧಾರಾವಾಗಿ ಹಾಗೂ ಸಿನೆಮಾಗಳ ನಿರ್ಮಾಣ ಹಾಗೂ ನಿರ್ದೇಶನದ ಬಿಡುವಿಲ್ಲದ ಸಮಯದಲ್ಲೂ
ಸಹ ರಂಗಭೂಮಿಯ ಮೇಲಿರುವ ಬದ್ದತೆಯಿಂದ ಬೆಂಗಳೂರಿನಿಂದ
ಮೈಸೂರಿಗೆ ಹೋಗಿ ಅಪರೂಪದ ನಾಟಕವೊಂದನ್ನು ಸ್ವಹಿತಾಸಕ್ತಿಯಿಂದ ಕಟ್ಟಿಕೊಟ್ಟ ಬಿ.ಸುರೇಶ್ ರವರು ನಿಜಕ್ಕೂ
ಅಭಿನಂದನಾರ್ಹರು. ಜೊತೆಗೆ ತಮ್ಮ ರಂಗಮಂದಿರ ನಿರ್ಮಾಣದ
ಹೊಣೆ, ಮಕ್ಕಳ ಬೇಸಿಗೆ ಶಿಬಿರದ ಆಯೋಜನೆ ಹಾಗೂ ಸತತ ನಾಟಕಗಳ ಪ್ರದರ್ಶನಗಳ ನಿರ್ವಹಣೆಯ ಒತ್ತಡಗಳಲ್ಲೂ
ಇಂತಹುದೊಂದು ಎಫಿಕ್ ನಾಟಕವನ್ನು ನಿರ್ಮಿಸಿ ನಿರ್ವಹಿಸಿದ
'ನಟನಾ'ದ ಮಂಡ್ಯ ರಮೇಶರವರ ರಂಗನಿಷ್ಟೆ ಪ್ರಶ್ನಾತೀತವಾದಂತಹುದು. 'ಮೃತ್ಯುಂಜಯ' ನಾಟಕ ಇನ್ನಷ್ಟು
ಪರಿಷ್ಕರಣೆಗೊಳಗಾಗಿ ಕರ್ನಾಟಕ ಹಾಗೂ ಹೊರನಾಡುಗಳಲ್ಲಿ ಹೆಚ್ಚೆಚ್ಚು ಪ್ರದರ್ಶನಗಳನ್ನು ಕಾಣಬೇಕಿದೆ.
ನಿರಂಜನರ ಕಾದಂಬರಿಯ ಆಶಯ ಈ ನಾಟಕದ ಮೂಲಕವಾದರೂ ಬಹುಜನರಿಗೆ ತಲುಪಬೇಕಿದೆ. ಈ ನಾಟಕ ನಿಜವಾದ ಅರ್ಥದಲ್ಲಿ ಆಧುನಿಕ ಹವ್ಯಾಸಿ ರಂಗಭೂಮಿಯಲ್ಲಿ ಮೈಲುಗಲ್ಲಾಗಲೇಬೇಕಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ