ಶನಿವಾರ, ಏಪ್ರಿಲ್ 18, 2015

“ಸಿಜಿಕೆ ರಾಷ್ಟ್ರೀಯ ರಂಗೋತ್ಸವ”ದ ಸುತ್ತ ಬ್ರಾಹ್ಮಣ್ಯದ ಹುತ್ತ ?

ನಾಟಕಗಳ ಆಯ್ಕೆಯಲ್ಲಿ ವಿಫಲವಾದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ



ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ರಂಗನಿರಂತರ ಸಾಂಸ್ಕೃತಿಕ ಸಂಘವು ಕಳೆದ ವರ್ಷದಿಂದ ಆರಂಭಿಸಿದೆ. ಸಲ ನಡೆದ ಎರಡನೇ ವರ್ಷದ ರಂಗೋತ್ಸವವು 2015, ಏಪ್ರಿಲ್ 5 ರಿಂದ 11 ರವರೆಗೆ ಒಟ್ಟು ಏಳು ದಿನಗಳ ಕಾಲ ಸಂಸ ಬಯಲು ರಂಗ ಮಂದಿರದಲ್ಲಿ ಅದ್ದೂರಿಯಾಗಿ ನಡೆದು ಆಧುನಿಕ ಕನ್ನಡ ರಂಗಚರಿತ್ರೆಯಲ್ಲಿ ದಾಖಲಾಯಿತು. ಯಾರು ಏನೇ ಹೇಳಲಿ ಕನ್ನಡ ರಂಗಭೂಮಿ ಬೆಳೆದಿದೆ ಬೆಳೆಯುತ್ತಿದೆ. ಬಡಾವಣೆ ನಾಟಕೋತ್ಸವ, ಬೆಂಗಳೂರು ನಾಟಕೋತ್ಸವ, ಕರ್ನಾಟಕ ನಾಟಕೋತ್ಸವಗಳಿಂದ ಹಿಡಿದು ರಾಷ್ಟ್ರೀಯ ನಾಟಕೋತ್ಸವದವರೆಗೂ ರಂಗಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಎನ್ಎಸ್ಡಿ, ಕೇಂದ್ರ ಸಾಹಿತ್ಯ ಅಕಾಡೆಮಿಗಳು ಅರ್ಧರ್ಧ ಕೋಟಿ ಖರ್ಚು ಮಾಡಿ ನ್ಯಾಷನಲ್ ಥೀಯಟರ್ ಫೆಸ್ಟಿವಲ್ಗಳನ್ನು ಮಾಡುವುದು ದೊಡ್ಡ ಕೆಲಸವೇನಲ್ಲ. ಆದರೆ ರಂಗಾಸಕ್ತರ ಗುಂಪೊಂದು ಸೇರಿ, ರಂಗಕರ್ಮಿಯೊಬ್ಬರ ನೆನಪಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ್ದು ಬಹುಷಃ ಇದೇ ಮೊದಲನೆಯದಾಗಿದೆ. ಸಿಜಿಕೆ ಎನ್ನುವ ರಂಗಗಾರುಡಿಗ ಮಾಡಿ ಹೋದ ಮೋಡಿಯ ಪರಿ ಮತ್ತು ಪರಿಣಾಮ ಇದು. ರಂಗಕರ್ಮಿಗಳ ಒಂದು ಪಡೆಯನ್ನೇ ಸೃಷ್ಟಿಸಿ, ರಂಗನಿರಂತರವನ್ನು ಹುಟ್ಟಿಸಿ, ರಂಗಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಪ್ರೇರೇಪಣೆಯನ್ನಿತ್ತು ಮರೆಯಾದ ಸಿಜಿಕೆ ಎನ್ನುವ ವ್ಯಕ್ತಿ ಈಗ ರಂಗಶಕ್ತಿಯಾಗಿ ತನ್ನ ಅನುಪಸ್ಥಿತಿಯಲ್ಲೂ ಸಹ ರಂಗಕ್ರಿಯೆಯನ್ನು ಮುನ್ನಡೆಸುತ್ತಿರುವುದು ಕನ್ನಡ ರಂಗಭೂಮಿಯಲ್ಲಿ ಪವಾಡ ಸದೃಶವಾಗಿದೆ.


ರಂಗನಿರಂತರದ ಅಧ್ಶಕ್ಷರಾದ ಶಶಿಧರ್  ಅಡಪ
ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಲು ಮೊದಲನೆಯದಾಗಿ ಬೆಂಗಳೂರಿನಲ್ಲಿ ಸೂಕ್ತ ರಂಗಮಂದಿರಗಳೇ ಇಲ್ಲ. ಇರುವುದೊಂದು ರವೀಂದ್ರ ಕಲಾಕ್ಷೇತ್ರ ರಿಪೇರಿಗಾಗಿ ಮುಚ್ಚಿ ಹಲವಾರು ತಿಂಗಳುಗಳೇ ಕಳೆದಿವೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಕಲಾಕ್ಷೇತ್ರದ ಹಿಂದಿನ ಬಯಲು ರಂಗಮಂದಿರವನ್ನೇ ಪ್ರೀಸೀನಿಯಂ ಮಾದರಿಯಲ್ಲಿ ತಯಾರು ಮಾಡಿ, ಸೈಡ್ ವಿಂಗ್ಸಗಳು, ಬೆಳಕು ಪರಿಕರಗಳೆಲ್ಲವನ್ನೂ ವ್ಯವಸ್ಥೆಗೊಳಿಸುವುದು ಸುಲಬದ್ದಲ್ಲ. ಆದರೆ ಬಯಲು ಬಯಲಾಗಿರುವ ಸಂಸ ಬಯಲು ಮಂದಿರವನ್ನು ನಾಟಕೋತ್ಸವಕ್ಕೆ ಸಜ್ಜುಗೊಳಿಸಿ ಅಲ್ಲೊಂದು ಸಾಂಸ್ಕೃತಿಕ ಸಂಭ್ರಮದ ವಾತಾವರಣವನ್ನು ಸೃಷ್ಟಿಸುವಲ್ಲಿ ಶಶಿಧರ್ ಅಡಪ ಮತ್ತು ಅವರ ನೇಪತ್ಯದ ತಂಡ ಯಶಸ್ವಿಯಾಯಿತು. ಆರು ದಿನಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ರಂಗೋತ್ಸವದ ಕೊಟ್ಟಕೊನೆಯ ದಿನ ಮಳೆರಾಯ ಧಾರಾಕಾರವಾಗಿ ಸುರಿದ ಪರಿಣಾಮ ಸಮಾರೋಪದ ಸಂಭ್ರಮ ಸೂತಕದ ಮನೆಯಾಯಿತು. ರಂಗವೇದಿಕೆಯಲ್ಲಿ ಪ್ರದರ್ಶನಗೊಳ್ಳಬೇಕಾಗಿದ್ದ ನಾಟಕ ಕಲಾಕ್ಷೇತ್ರದ ಒಳಗಿನ ಎಂಟ್ರನ್ಸ್ನಲ್ಲಿ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಎಂತಹ ಪ್ರತಿಕೂಲ ಅವ್ಯವಸ್ಥೆಗಳನ್ನೂ ಸಹ ಅನುಕೂಲಕರವಾಗಿ ಬದಲಾಯಿಸಿಕೊಂಡು ನಾಟಕ ನಿಲ್ಲದಂತೆ ನೋಡಿಕೊಳ್ಳುವುದು ರಂಗಭೂಮಿಯ ಚಲನಶೀಲತೆಗೆ ಸಾಕ್ಷಿಯಾಗಿದೆ. ನಿಟ್ಟಿನಲ್ಲಿ ಇಡೀ ರಂಗೋತ್ಸವ ಯಶಸ್ವಿಯಾಗಿದೆ.


 
ಸಿಜಿಕೆ ರಂಗೋತ್ಸವದಲ್ಲಿ ಪ್ರಸನ್ನರವರು 
ಏಳು ದಿನಗಳ ದ್ವಾವಿಢ ಭಾಷೆಗಳ ರಂಗೋತ್ಸವ, ಪ್ರತಿ ದಿನ ಸಂಜೆ ಒಂದೊಂದು ನಾಟಕಗಳ ಪ್ರದರ್ಶನ. ಜೊತೆಗೆ ಪರ್ಯಾಯ ವೇದಿಕೆ ಕಾರ್ಯಕ್ರಮಗಳು. ಕಾವ್ಯ ಭೂಮಿಯಲ್ಲಿ ಕಾವ್ಯವಾಚನ, ಚಿತ್ರಭೂಮಿಯಲ್ಲಿ ಚಿತ್ರಕಲಾ ಪ್ರದರ್ಶನ, ರಂಗಸಂವಾದ, ಹಿರಿಯ ರಂಗಕರ್ಮಿಗಳೊಂದಿಗೆ ಹರಟೆ ಕಾರ್ಯಕ್ರಮ ಮೆಟ್ಟಿಲು ಮೆಲಕು.... ಇವೆಲ್ಲಾ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಆಯೋಜನೆಗೊಂಡ ವೈವಿಧ್ಯಮಯ ನಾಟಕ ಹಾಗೂ ನಾಟಕೇತರ ಕಾರ್ಯಕ್ರಮಗಳು. ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದರೆ ಕೊಟ್ಟಕೊನೆಯದಾಗಿ ಅವಕಾಶ ಮಾಡಿಕೊಡಲಾಗುತ್ತದೆ. ನಾಟಕಗಳನ್ನು ಕೇವಲ ಜನರಂಜನೆಯ ಸರಕಾಗಿ ಸಾಹಿತ್ಯಕ್ಷೇತ್ರ ಪರಿಭಾವಿಸಿ ಮಲತಾಯಿ ಧೋರಣೆ ತೋರಿದ್ದು ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ಅನೇಕ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಾಬೀತಾಗಿದೆ. ಆದರೆ ರಂಗನಿರಂತರದ ರಂಗೋತ್ಸವದಲ್ಲಿ ಸಾಹಿತಿ-ಕವಿಗಳನ್ನು ಕರೆದು ಗೌರವಿಸಿ ಸಹನೆಯಿಂದ ಕಾವ್ಯವಾಚನ ಕೇಳಿ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಆದರವನ್ನು ಕೊಟ್ಟಿದ್ದು ಮಾದರಿ ಕೆಲಸವಾಗಿದೆ. ರಂಗಭೂಮಿಯ ತಾಯಿ ಪ್ರೀತಿಯನ್ನು ನೋಡಿಯಾದರೂ ಮಲತಾಯಿ ಧೋರಣೆ ತೋರುವ ಸಾಹಿತ್ಯಕ್ಷೇತ್ರ ನಾಟಕಗಳಿಗೆ ಮಾನ್ಯತೆ ಗೌರವ ಹಾಗೂ ಆದರವನ್ನು ಕೊಡುವುದನ್ನು ಕಲಿಯಬೇಕಿದೆ. ನಾಟಕದ ಉತ್ಸವದ ಭಾಗವಾಗಿ ನಾಟಕೇತರ ಕ್ರಿಯಾಶೀಲತೆಗೂ ಅವಕಾಶವನ್ನೊದಗಿಸಿ ರಂಗಾಸಕ್ತರಲ್ಲಿ ಕಾವ್ಯಾಸಕ್ತಿ ಹಾಗೂ ಚಿತ್ರಕಲಾಸಕ್ತಿ ಮೂಡುವಂತೆ ಪ್ರೇರೇಪಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ.

ಸುಸ್ಥಿರ ಬದುಕಿನತ್ತ ರಂಗಭೂಮಿ !?:  ಬಹುತೇಕ ರಂಗೋತ್ಸವಗಳಿಗೆ ನಿರ್ದಿಷ್ಟ ಗೊತ್ತು ಗುರಿ ಆಶಯಗಳಿರುವುದಿಲ್ಲ. ಕೆಲವು ಸಿದ್ದ ನಾಟಕಗಳನ್ನು ಕರೆಸಿ ಪ್ರದರ್ಶನಕ್ಕೆ ವೇದಿಕೆಯನ್ನೊದಗಿಸುವುದೇ ನಾಟಕೋತ್ಸವ ಎಂದು ಕೊಂಡವರೇ ಹೆಚ್ಚು. ಇಲ್ಲವೇ ಸರಕಾರಿ  ಸಂಸ್ಥೆಗಳ ಅನುದಾನವನ್ನು ಹೇಗೆಲ್ಲಾ ಪಡೆಯಬೇಕು ಎನ್ನುವ ಲಾಭಕೋರತನದ ಭಾಗವಾಗಿ ಕೆಲವಾರು ನಾಮಕಾವಸ್ಥಾ ನಾಟಕೋತ್ಸವಗಳು ಆಯೋಜನೆಗೊಂಡಿರುತ್ತವೆ. ರಂಗಭೂಮಿಯ ಪ್ರೀತಿಗಿಂತ ಇಲ್ಲಿ ರಂಗಭೂಮಿಯನ್ನು ಬಳಸಿಕೊಂಡು ಹಣ ಮಾಡುವುದು ಹೇಗೆ ಎನ್ನುವ ಲೆಕ್ಕಾಚಾರಗಳೇ ಕೆಲಸಮಾಡುತ್ತವೆ. ಅಂತಹುದರಲ್ಲಿ ಬಾರಿಯ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವಕ್ಕೆ ಒಂದು ನಿರ್ದಿಷ್ಟ ಉದ್ದೇಶ ಕಲ್ಪಿಸಲಾಗಿದೆ. ಹೆಗ್ಗೋಡಿನ ಪ್ರಸನ್ನರವರು ಸುಸ್ಥಿರ ಬದುಕಿನ ಅನುಷ್ಠಾನಕ್ಕಾಗಿ ಬದನವಾಳುವಿನಲ್ಲಿ ಚಳುವಳಿ ನಿರತರಾಗಿದ್ದು ಅವರ ಆಶಯದ ಭಾಗವಾಗಿ ರಂಗೋತ್ಸವಕ್ಕೆ ಸುಸ್ಥಿರ ಬದುಕಿನತ್ತ ರಂಗಭೂಮಿ ಎನ್ನುವ ಪರಿಕಲ್ಪನೆಯಲ್ಲಿ ಇಡೀ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ನಿಜಕ್ಕೂ ಇದೊಂದು ಆದರ್ಶವಾದಿ ಆಶಯ. ಸಮಾಜದ ಸುಸ್ಥಿರತೆಯತ್ತಲೇ ರಂಗಭೂಮಿ ಯಾವಾಗಲೂ ಮಿಡಿಯುತ್ತಿರುತ್ತವೆ. ಕೆಲವು ಜೀವವಿರೋಧಿ ವ್ಯಾಪಾರೋಧ್ಯಮ ನಾಟಕಗಳನ್ನು ಹೊರತು ಪಡಿಸಿ ಬಹುತೇಕವಾಗಿ ರಂಗಭೂಮಿ ಸಮಾಜದ ವಿಕ್ಷಿಪ್ತತೆಗೆ ಕನ್ನಡಿಯಾಗಿ ಕೆಲಸಮಾಡುತ್ತಲೇ ಬಂದಿದೆ. ಅದರಲ್ಲೂ ಆಧುನಿಕ ಕನ್ನಡ ರಂಗಭೂಮಿಯಂತೂ ವೈಚಾರಿಕ ನೆಲೆಗಟ್ಟಿನಲ್ಲಿಯೇ ಗಟ್ಟಿ ನೆಲೆಯನ್ನು ಕಂಡುಕೊಂಡಿದೆ. ಇಡೀ ದೇಶದಲ್ಲಿಯೇ ಕನ್ನಡ ರಂಗಪ್ರಯೋಗಗಳು ನಿಟ್ಟಿನಲ್ಲಿ ಗಮನ ಸೆಳೆದಿವೆ. (ಬದುಕನ್ನು ಅಸ್ತಿರಗೊಳಿಸುವ ನಾಟಕಗಳು ನಿಲ್ಲುವುದಿಲ್ಲ) ಸುಸ್ಥಿರ ಬದುಕಿಗಾಗಿ ತುಡಿಯುತ್ತಿರುವ ರಂಗಭೂಮಿಗೆ ಮತ್ತೆ ಸುಸ್ಥಿರ ಬದುಕಿನತ್ತ ರಂಗಭೂಮಿ ಎನ್ನುವ ಘೋಷಣೆ ಬೇಕಾಗಿತ್ತಾ? ಹೌದು ಬೇಕಾಗಿತ್ತು.


ಸಿಜಿಕೆ ರಂಗೋತ್ಸವದ ಮೊದಲ ದಿನ ತುಂಬಿದ ಸಂಸ ರಂಗಮಂದಿರ

ಯಾಕೆಂದರೆ ನಾಟಕ ಪ್ರಯೋಗಗಳ ವಸ್ತು ವಿಷಯಗಳು ಸಾಮಾಜಿಕ ಬದುಕಿನ ಸುಸ್ಥಿರತೆಗಾಗಿ ಹಂಬಲಿಸಿದರೂ ನಾಟಕವನ್ನು ಲಾಭಕೋರತನಕ್ಕಾಗಿ ಬಳಸಿಕೊಳ್ಳುವ ಸಾಂಸ್ಕೃತಿಕ ದಲ್ಲಾಳಿಗಳು ತಮ್ಮ ಸ್ವಾರ್ಥಕ್ಕಾಗಿ ಇಂದು ರಂಗಭೂಮಿಯನ್ನು ಅಸ್ಥಿರಗೊಳಿಸುತ್ತಿದ್ದಾರೆ. ಜನಾಶ್ರಿತವಾಗಿ ಸ್ವಾವಲಂಬಿಯಾಗಿದ್ದ ಕನ್ನಡ ರಂಗಭೂಮಿಯನ್ನು ಸರಕಾರಿ ಕೃಪಾಪೋಷಿತ ಪರಾವಲಂಬಿ ರಂಗಭೂಮಿಯನ್ನಾಗಿ  ಪರಿವರ್ತಿಸಿದ್ದಾರೆ. ಇಲಾಖೆಗಳು ಸರಕಾರಿ ಅನುದಾನವನ್ನು ಇಂದು ನಿಲ್ಲಿಸಿದರೆ ನಾಳೆಗೇ ಮುಕ್ಕಾಲು ಭಾಗ ರಂಗಚಟುವಟಿಕೆಗಳು ನಿಂತು ಹೋಗುವಂತಹ ಅಸ್ಥಿರತೆಯನ್ನು ರಂಗದಲ್ಲಾಳಿಗಳು ಸೃಷ್ಟಿಸಿದ್ದಾರೆ. ಸುಸ್ಥಿರ ಬದುಕಿನತ್ತ ಕನ್ನಡ ರಂಗಭೂಮಿ ಈಗಾಗಲೇ ಶತಮಾನದಿಂದ ತುಡಿಯುತ್ತಿದೆ. ಆದರೆ ರಂಗಭೂಮಿಯ ಸುಸ್ಥಿರತೆಗಾಗಿ ಮೊದಲು ರಂಗದಲ್ಲಾಳಿ ವರ್ಗದಿಂದ ರಂಗಭೂಮಿಯನ್ನು ಮುಕ್ತಗೊಳಿಸಬೇಕಿದೆ. ಸರಕಾರಿ ಇಲಾಖೆ ಹಾಗೂ ಅಕಾಡೆಮಿಗಳಲ್ಲಿರುವ ಭ್ರಷ್ಟಾಚಾರವನ್ನು ಮೊದಲು ಮಟ್ಟಹಾಕಬೇಕಿದೆ. ಅಲ್ಲಿವರೆಗೂ ರಂಗಭೂಮಿ ಸುಸ್ಥಿರ ಬದುಕನ್ನು ಪಡೆಯಲು ಸಾಧ್ಯವೇ ಇಲ್ಲ. ಬೇಲಿಗಳೇ ಎದ್ದು ಹೊಲ ಮೇಯುವ ವ್ಯವಸ್ಥೆಯನ್ನು ರೂಪಿಸಿಕೊಂಡಿರುವಾಗ ಹೊಲ ಸುಸ್ಥಿರವಾಗಿರಬೇಕು ಎಂದು ಬಯಸುವುದು ಜಾಣತನವಲ್ಲವೇ ಅಲ್ಲ. ಇದು ಪ್ರಸನ್ನರಂತಹ  ವಿವೇಚನೆಯುಳ್ಳವರಿಗೆ ತಿಳಿಯದ್ದೇನಲ್ಲ. ಆದರೆ.... ಸಂಘಟಿತ ರಂಗದಲ್ಲಾಳಿಗಳಿಲ್ಲದೇ ಪ್ರಸನ್ನರವರು ತಮ್ಮ ಹೋರಾಟವನ್ನು ಮುನ್ನಡೆಸಲು ಸಾಧ್ಯವೇ ಇಲ್ಲ ಎನ್ನುವ ಭ್ರಮೆಯನ್ನು ಇದೇ ಕಲ್ಚರಲ್ ಬ್ರೋಕರ್ಗಳು ಸೃಷ್ಟಿಸಿದ್ದಾರೆ. ಪ್ರಸನ್ನರವರು ತಮ್ಮ ಆಶಯದ ಸಾಕಾರಕ್ಕಾಗಿ ಇಂತವರನ್ನೇ ಅವಲಂಬಿಸಿದ್ದಾರೆ. ಜಮೀನ್ದಾರರು ಹಾಗೂ ಟಾಟಾ-ಬಿರ್ಲಾಗಳ ಕೃಪಾಪೋಷಣೆಯಲ್ಲಿ ಗಾಂಧೀಜಿ ಹರಿಜನೋದ್ಧಾರ ಆಚರಿಸಿದಂತೆ... ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ದಲ್ಲಾಳಿಗಳ ಜೊತೆಗೂಡಿ ಪ್ರಸನ್ನರವರು ಸುಸ್ಥಿರ ಬದುಕಿನ ಕನಸು ಕಾಣುತ್ತಿದ್ದಾರೆ. ಸುಸ್ಥಿರ ಬದುಕಿನತ್ತ ರಂಗಭೂಮಿ ಆಶಯಕ್ಕೆ ಬದ್ದವಾಗಿ ನಡೆದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಸಮಿತಿಯನ್ನೊಮ್ಮೆ ಗಮನಿಸಿದರೆ ಸಾಕು ರಂಗಭೂಮಿಯಿಂದ ಲಾಭ ಪಡೆದು ತಮ್ಮ ಸುಸ್ಥಿರ ಬದುಕನ್ನು ಕಟ್ಟಿಕೊಂಡ ಕೆಲವು ರಂಗದಲ್ಲಾಳಿಗಳ ಹೆಸರುಗಳು ರಾರಾಜಿಸುತ್ತವೆ. ಯಾರಾದರೂ ಮಾಹಿತಿ ಹಕ್ಕು ಚಲಾಯಿಸಿ ಇಂತವರ ಒಡೆತನದಲ್ಲಿರುವ ರಂಗತಂಡಗಳು ಪಡೆದ ಸರಕಾರಿ ಅನುದಾನ ಹಾಗೂ ನಿಜಕ್ಕೂ ಖರ್ಚಾದ ಹಣದ ಲೆಕ್ಕ ಕೇಳಿದರೆ ಇವರೆಲ್ಲಾ ನಾಟಕದ ಹೆಸರಲ್ಲಿ ಎಷ್ಟೆಷ್ಟು ಸರಕಾರಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನುವುದು ಬಟಾಬಯಲಾಗುತ್ತದೆ. ಇಂತವರನ್ನು ಕಟ್ಟಿಕೊಂಡು ಅದೆಂತಾ ಸುಸ್ಥಿರ ರಂಗಭೂಮಿಯನ್ನು ಕಟ್ಟಲು ಸಾಧ್ಯ?

ಹೋಗಲಿ ಬಿಡಿ ಸಧ್ಯ ವರ್ಷದ ಸಿಜಿಕೆ ರಂಗೋತ್ಸವ ಆರ್ಥಿಕವಾಗಿ ಸುಸ್ಥಿರವಾಗಿದೆ. ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಐದು ದಿನಗಳ ನಾಟಕೋತ್ಸವಕ್ಕೆ ಐದು ಲಕ್ಷ ಕೊಟ್ಟಿದ್ದರೆ, ಸಲ ಏಳು ದಿನದ ನಾಟಕೋತ್ಸವಕ್ಕೆ ಹದಿನೈದು ಲಕ್ಷ ಅನುದಾನ ಕೊಟ್ಟಿದೆ. ವಾರ್ತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳೂ ಸಹ ಹೆಚ್ಚುವರಿ ಸಹಕಾರ ನೀಡಿವೆ. ಕೆಲವು ಸಿಜಿಕೆ ಅಭಿಮಾನಿಗಳೂ ಸಹ ಧನಸಹಾಯ ಮಾಡಿದ್ದಾರೆ. ಸಿಜಿಕೆ ರಂಗೋತ್ಸವದ ಅಂದಾಜು ಒಟ್ಟು  ವೆಚ್ಚ ಹದಿನೆಂಟು ಲಕ್ಷಗಳಾಗಿದ್ದು ಸರಕಾರಿ ಇಲಾಖೆಗಳ ಪ್ರಾಯೋಜನೆಯ ನೆರವು ರಂಗನಿರಂತರದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿದೆ ನಾಟಕೋತ್ಸವದ ಹೆಚ್ಚುಗಾರಿಕೆ ಏನೆಂದರೆ ಸರಕಾರಿ ಇಲಾಖೆಗಳಿಂದ ಬಂದ ಪ್ರತಿಯೊಂದು ಪೈಸೆಯೂ ಸಹ ರಂಗೋತ್ಸವಕ್ಕೆ ಖರ್ಚಾಗಿದೆಯೇ ಹೊರತು ಯಾರ ಜೇಬೂ ಸೇರಿಲ್ಲ. ಸರಕಾರಿ ಹಣ ಸಮರ್ಪಕವಾಗಿ ಬಳಕೆಯಾಗುವ ಹಾಗೆ ನೋಡಿಕೊಂಡಿದ್ದಕ್ಕೆ ರಂಗನಿರಂತರದ ಅಧ್ಯಕ್ಷರಾದ ಶಶಿಧರ್ ಅಡಪರವರನ್ನು ಅಭಿನಂದಿಸಲೇಬೇಕು. ಇಡೀ ರಂಗೋತ್ಸವದ ಜುಟ್ಟು ಜನಿವಾರಗಳನ್ನು ಬೇರೆಯವರಿಗೆ ಕೊಟ್ಟರೂ ಆರ್ಥಿಕತೆಯ ನಿಯಂತ್ರಣವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು ಅಚ್ಚುಕಟ್ಟಾಗಿ ಎಲ್ಲಿಯೂ ವ್ಯತ್ಯಯ ಬರದಂತೆ ಅಡಪರವರು ನೋಡಿಕೊಂಡು ರಂಗ ಶಿಸ್ತಿನ ಜೊತೆಗೆ ಆರ್ಥಿಕ ಶಿಸ್ತು ಸಹ ರಂಗಭೂಮಿ ಕಟ್ಟುವಲ್ಲಿ ಬಹುಮುಖ್ಯವಾದದ್ದು ಎಂದು ತೋರಿಸಿಕೊಟ್ಟರು. ಒಂದೊಂದು ನಾಟಕಕ್ಕೂ ನಲವತ್ತು ಸಾವಿರ ಗೌರವ ಸಂಭಾವನೆ ಕೊಟ್ಟು  ಮಿಕ್ಕೆಲ್ಲಾ ಖರ್ಚುವೆಚ್ಚಗಳನ್ನು ಭರಿಸಲಾಗಿದೆ. ನಾಟಕೋತ್ಸವ ಮುಗಿದ ನಂತರ ಸರಿಯಾಗಿ ಲೆಕ್ಕಾಚಾರ ಹಾಕಿದರೆ ಇಲಾಖೆಯ ಹಣ ಇನ್ನೂ ಉಳಿಯುವಂತಿದೆ. ಉಳಿದ ಹಣವನ್ನು ಮತ್ತೆ ರಂಗನಿರಂತರದ ರಂಗಕಾರ್ಯಕ್ರಮಗಳಿಗಾಗಿ ಬಳಸಬಹುದಾಗಿದೆ. ಇಲಾಖೆ ಹದಿನೈದು ಲಕ್ಷ ಅನುದಾನವನ್ನು ಕೊಟ್ಟಿದ್ದೇ ರಂಗನಿರಂತರದ ಒಂದು ವರ್ಷದ ರಂಗಚಟುವಟಿಕೆಗಳಿಗಾಗಿ. ಕೊಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾದರೆ ಅದೇ ಒಂದು ಆದರ್ಶವೆನಿಸುತ್ತದೆ. ರಂಗೋತ್ಸವದ ಎಲ್ಲಾ ಖರ್ಚು ವೆಚ್ಚಗಳನ್ನು ಬುಕ್ಲೆಟ್ ಮೂಲಕ ಹಾಗೂ ಇಂಟರನೆಟ್ನಲ್ಲಿ ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಿದರೆ ಇನ್ನೂ ಪಾರದರ್ಶಕವಾಗಿರುತ್ತದೆ. ಯಾಕೆಂದರೆ ಸರಕಾರಿ ಇಲಾಖೆಯ ಮೂಲಕ ಸಾರ್ವಜನಿಕರ ಹಣವನ್ನು ರಂಗೋತ್ಸವಕ್ಕೆ ಬಳಸಲಾಗಿದೆ. ಮತ್ತು ಜನರ ಹಣ ಹೇಗೆಲ್ಲಾ ಬಳಕೆಯಾಯಿತು ಎಂದು ತಿಳಿದುಕೊಳ್ಳುವುದು ಜನತೆಯ ಹಕ್ಕಾಗಿದೆ. ಹಾಗೂ ಪಾರದರ್ಶಕತೆ ಬೇರೆ ರಂಗದಲ್ಲಾಳಿಗಳಿಗೆ ಎಚ್ಚರಿಕೆಯ ಗಂಟೆಯಾಗುತ್ತದೆಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ರಂಗೋತ್ಸವದಲ್ಲಿ ವಾಲೆಂಟರ್ ಆಗಿ ಕೆಲಸ ನಿರ್ವಹಿಸಿದ ಸುಮಾರು ನಲವತ್ತಕ್ಕೂ ಹೆಚ್ಚು ಯುವ ರಂಗಕರ್ಮಿ-ಕಲಾವಿದರು ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ. ಸ್ವತಃ ಅಡಪರವರು, ಅಬ್ಬಯ್ಯ, ರಶ್ಮಿ ಹಾಗೂ ಜಪಿಓ ಚಂದ್ರುರಂತಹ ರಂಗನಿರಂತರದ ಪದಾಧಿಕಾರಿಗಳು ಸಹ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎರಡು ತಿಂಗಳುಗಳ ಕಾಲ ಅಹೋರಾತ್ರಿ ರಂಗೋತ್ಸವಕ್ಕೆ ಕೆಲಸ ಮಾಡಿದ್ದಾರೆ. ಇವರೆಲ್ಲರನ್ನೂ ಒಂದು ಗೂಡಿಸಿದ್ದು, ರಂಗಕ್ರಿಯೆಗಾಗಿ ಪ್ರೇರೇಪಿಸಿದ್ದು, ರಂಗೋತ್ಸವಕ್ಕಾಗಿ ದುಡಿಸಿದ್ದು ಹಣವಲ್ಲ, ಹೆಸರಿನ ಬಯಕೆಯಲ್ಲ ..... ಕೇವಲ ಸಿಜಿಕೆ ಎನ್ನುವ ಹೆಸರಿನಲ್ಲಿರುವ ಮಂತ್ರ ಶಕ್ತಿ.



ಸಿ.ಬಸವಲಿಂಗಯ್ಯನವರು
ಕಳೆದ ವರ್ಷ ಸಿಜಿಕೆ ರಂಗೋತ್ಸವದ ನಿರ್ದೇಶಕರಾಗಿದ್ದವರು ಸಿ.ಬಸವಲಿಂಗಯ್ಯನವರು. ನಟಕೋತ್ಸವ ಯಾವುದೇ ಆಶಯ ಉದ್ದೇಶಕ್ಕೆ ಕಟ್ಟುಬೀಳದೇ ಉತ್ತಮ ನಾಟಕಗಳ ಪ್ರದರ್ಶನವನ್ನು ಮಾತ್ರ ಮಾನದಂಡವಾಗಿಟ್ಟುಕೊಂಡಿತ್ತು. ಬಸವಲಿಂಗಯ್ಯನವರು ತಮ್ಮ ಎನ್ಎಸ್ಡಿ ಕಾಂಟ್ಯಾಕ್ಟ್ಸಗಳನ್ನು ಬಳಸಿಕೊಂಡು ಹಲವಾರು ಉತ್ತಮ ನಾಟಕಗಳನ್ನು ಆಯ್ಕೆ ಮಾಡಿ ಕರೆಸಿದ್ದರು. ಇಡೀ ನಾಟಕೋತ್ಸವ ವೃತ್ತಿಪರತೆಯುಳ್ಳ ನಾಟಕಗಳ ಪ್ರದರ್ಶನದಿಂದ ಕನ್ನಡ ಪ್ರೇಕ್ಷಕರ ಗಮನಸೆಳೆಯಿತು. ಹಾಗೂ ಕನ್ನಡ ರಂಗಭೂಮಿಯವರಿಗೆ ವಿಭಿನ್ನ ರೂಪದ ತಂತ್ರಗಾರಿಕೆಯ ನಾಟಕಗಳ ಕುರಿತು ಪ್ರಾತ್ಯಕ್ಷಿಕ ಪಾಠವನ್ನು ಹೇಳಿಕೊಡುವಂತಾಯ್ತು. ಪ್ರದರ್ಶನಗೊಂಡ ನಾಟಕಗಳಿಂದ ಕನ್ನಡ ರಂಗಭೂಮಿಯ ಯುವ ರಂಗಕರ್ಮಿಗಳಿಗೆ ಕಲಿಯುವುದು ಬೇಕಾದಷ್ಟಿತ್ತು. ಒಂದಕ್ಕಿಂತ ಒಂದು ನಾಟಕ ಅದ್ಭುತವೆನಿಸಿದವು. ರಾಷ್ಟ್ರೀಯ ನಾಟಕೋತ್ಸವ ಎಂದರೆ ಹೀಗಿರಬೇಕು ಎನ್ನುವ ರೀತಿಯಲ್ಲಿ ಕಳೆದ ಸಲದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಆಯೋಜನೆಗೊಂಡಿತ್ತು. ಅದಕ್ಕೆ ಹೋಲಿಸಿದರೆ ಬಾರಿಯ ನಾಟಕೋತ್ಸವ ಅತ್ಯಂತ ಪೇರಲವಾಗಿತ್ತು. ಪ್ರದರ್ಶನಗೊಂಡ ಯಾವುದೇ ನಾಟಕಗಳಲ್ಲಿ ವೃತ್ತಿಪರತೆ ಎನ್ನುವುದು ಇರಲಿಲ್ಲ. ರಂಗತಂತ್ರಗಳ ಬಳಕೆಯಲ್ಲಾಗಲೀ, ರಂಗನಿರೂಪಣೆಯಲ್ಲಾಗಲೀ ವಿಭಿನ್ನತೆ ಎನ್ನುವುದು ಕಂಡುಬರಲಿಲ್ಲ. ಯುವ ರಂಗಕರ್ಮಿಗಳಿಗೆ ಕಲಿಯುವಂತಹುದೇನೂ ಸಿಗಲಿಲ್ಲ. ಎಲ್ಲವೂ ಸರ್ವೇ ಸಾಧಾರಣ ನಾಟಕಗಳು. ಬಹುತೇಕ ನಾಟಕಗಳನ್ನು ನಾಟಕಗಳು ಎನ್ನುವುದಕ್ಕಿಂತಲೂ ಬೀದಿ ನಾಟಕಗಳು ಎನ್ನುವುದೇ ಸೂಕ್ತವೆನಿಸುತ್ತದೆ.

ಯಾಕೆ ಹೀಗಾಯಿತು? ನಾಟಕೋತ್ಸಕ್ಕೊಂದು ಆಶಯವನ್ನಿಟ್ಟಿದ್ದೇ ತಪ್ಪಾಯಿತಾ? ಅತ್ಯುತ್ತಮ ನಾಟಕಗಳ ಬದಲಾಗಿ ಸುಸ್ಥಿರ ಬದುಕಿಗಾಗಿ ರಂಗಭೂಮಿ ಎನ್ನುವ ರಂಗೋತ್ಸವದ ಉದ್ದೇಶಕ್ಕೆ ಪೂರಕವಾಗಿ ನಾಟಕಗಳನ್ನು ಆಯ್ಕೆ ಮಾಡಿದ್ದೇ ಎಡವಟ್ಟಾಯಿತಾ? ಗೊತ್ತಿಲ್ಲ. ಆದರೆ.... ವಸ್ತು, ವಿಷಯ, ಆಶಯ, ನಿರೂಪಣಾ ಕ್ರಮ, ತಂತ್ರಗಾರಿಕೆಯಲ್ಲಿ ಬಹುತೇಕ ನಾಟಕಗಳು ಬೀದಿ ನಾಟಕವನ್ನೇ ನೆನಪಿಸುವಂತಿದ್ದವು. ಎಪ್ಪತ್ತರ ದಶಕದ ಸಮುದಾಯದ ಘೋಷಣಾತ್ಮಕತೆಯನ್ನು ಪ್ರಸನ್ನರವರ ಮಾರ್ಗದರ್ಶನದಂತೆ ಈಗ ಇಲ್ಲಿ ಅಳವಡಿಸಲು ಹೋಗಿ ಇಡೀ ರಂಗೋತ್ಸವದ ರಂಗಪ್ರಯೋಗಗಳು ನಿರಾಶಾದಾಯಕವಾಗಿದ್ದವು. ಕಳೆದ ವರ್ಷ ಕನ್ನಡ ರಂಗಭೂಮಿಯಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹುಟ್ಟಿಸಿದ್ದ ಸಂಚಲನ ಸಲ ಸಂವಹನ ಮಾಡದೇ ಹೋಯಿತು. ರಂಗೋತ್ಸವದಲ್ಲಿ ಪೂರಕವಾದ ಸಂಭ್ರಮ, ವೈವಿದ್ಯಮಯ ಕಾರ್ಯಕ್ರಮಗಳೆಲ್ಲಾ ಕಳೆಗಟ್ಟಿದರೂ ಎಲ್ಲಾ ಇತ್ತು ಅದೇ ಇಲ್ಲ ಎನ್ನುವ ಹಾಗೆ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಬಹುದಾದಂತಹ ಕ್ವಾಲಿಟಿ ನಾಟಕಗಳು ಇಲ್ಲದೇ ರಂಗೋತ್ಸವ ಸಪ್ಪೆ ಎನಿಸಿತು. ಕನ್ನಡ ರಂಗಪ್ರೇಕ್ಷಕರು ಹಾಗೂ ರಂಗಕರ್ಮಿಗಳ ನಿರೀಕ್ಷೆ ಹುಸಿಯಾಗಿ ನಿರಾಸೆ ಹೆಚ್ಚಾಯಿತು.

ಯಂತ್ರ ರಾಕ್ಷಸ ಮರ್ಧಿನಿ ನಾಟಕದ ದೃಶ್ಯ
ಸಿಜಿಕೆ ರಾಷ್ಟ್ರೀಯ (?) ಬೀದಿನಾಟಕೋತ್ಸವ : ರಂಗನಾಟಕಗಳಿಗೂ ಹಾಗೂ ಬೀದಿ ನಾಟಕಗಳಿಗೂ ಇರುವ ವ್ಯತ್ಯಾಸವನ್ನು ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಬಹುದಾದ ನಾಟಕಗಳನ್ನು ಆಯ್ಕೆ ಮಾಡಿದವರು ಆಲೋಚಿಸಬೇಕಾಗಿತ್ತು. ಆದರೆ ಕೇವಲ ಆಶಯಕ್ಕೆ ಬದ್ದತೆ ತೋರಿ ರಂಗನಾಟಕದ ತಂತ್ರಗಾರಿಕೆ ಹಾಗೂ ವೃತ್ತಿಪರತೆಯನ್ನು ಕಡೆಗಣಿಸಿದ್ದರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವವು ಸಿಜಿಕೆ ರಾಷ್ಟ್ರೀಯ (?) ಬೀದಿನಾಟಕೋತ್ಸವವಾಗಿ ಕಂಡುಬಂದಿತು. ಇದಕ್ಕೆ ಹಲವಾರು ಪುರಾವೆಗಳನ್ನು ನಾಟಕೋತ್ಸವದಲ್ಲೇ ನೋಡಬಹುದಾಗಿದೆ. ಮೊಟ್ಟಮೊದಲನೆಯದಾಗಿ ರಂಗೋತ್ಸವದ ಮೊದಲನೇ ದಿನ ಪ್ರಸನ್ನರವರು ನಿರ್ದೇಶನದ ಯಂತ್ರ ರಾಕ್ಷಸ ಮರ್ಧಿನಿ ನಾಟಕ ಪ್ರದರ್ಶಿಸಲಾಯಿತು. ಯಕ್ಷಗಾನ ಮಾದರಿಯಲ್ಲಿ ಬೀದಿನಾಟಕವನ್ನು ಪ್ರಸನ್ನರವರು ಪ್ರಸ್ತುತ ಪಡಿಸಿದರು. ಯಂತ್ರಗಳು ಸೃಷ್ಟಿಸುವ  ಅಪಾಯಗಳನ್ನು ಹೇಳುತ್ತಾ ಸುಸ್ಥಿರ ಬದುಕಿಗೆ ಯಂತ್ರ ರಾಕ್ಷಸನಿಂದ ಬಿಡುಗಡೆ ಪಡೆಯಬೇಕಿದೆ ಎನ್ನುವ ಆಶಯ   ಬೀದಿ ನಾಟಕದ್ದಾಗಿತ್ತು. ಇದೇ ನಾಟಕವನ್ನು ಬದನವಾಳುವಿನ ಬೀದಿಯಲ್ಲಿ ಬೀದಿನಾಟಕದ ಹೆಸರಲ್ಲೇ ಪ್ರದರ್ಶಿಸಿದ್ದರಿಂದ ಇದನ್ನು ಪಕ್ಕಾ ಬೀದಿನಾಟಕ ಎನ್ನಲು ಯಾವುದೇ ಸಾಕ್ಷಿಗಳು ಬೇಕಾಗಿಲ್ಲ. ನಾಟಕಕ್ಕೆ ಯಾವುದೇ ರಂಗಪಠ್ಯವೆನ್ನುವುದನ್ನು ತಯಾರಿಸದೇ ಕೇವಲ ಕಲಾವಿದರು ವಿಷಯವನ್ನು ಇಂಪ್ರೂವೈಸ್ ಮಾಡಿಕೊಂಡಿದ್ದು ಎರಡು ದಿನಗಳ ಕಾಲ ಬದನವಾಳುವಿನಲ್ಲಿ ಹೋರಾಟ ನಿರತರಾಗಿರುವ ಪ್ರಸನ್ನರವರು ಒಂದಿಷ್ಟು ತಿದ್ದುಪಡಿಗಳನ್ನು ಮಾಡಿದರು. ಒಂದು ಬೀದಿನಾಟಕ ಹೇಗೆ ತಯಾರಾಗಲು ಸಾಧ್ಯವೋ ಹಾಗೇಯೇ ಯಂತ್ರ.... ನಾಟಕವೂ ತಯಾರಾಯಿತು. ಆದ್ದರಿಂದ ಯಂತ್ರ ರಾಕ್ಷಸ ಮರ್ಧಿನಿ ಯನ್ನು ಪ್ರಿಸೀನಿಯಂ ಮಾದರಿ ರಂಗಮಂದಿರದಲ್ಲಿ ಪ್ರದರ್ಶನಗೊಂಡಿದೆ ಎನ್ನುವುದನ್ನು ಹೊರತು ಪಡಿಸಿ ಯಾವುದೇ ದೃಷ್ಟಿಕೋನದಲ್ಲೂ ರಂಗನಾಟಕ ಎನ್ನಲು ಸಾಧ್ಯವೇ ಇಲ್ಲ. ಇದು ಬೀದಿ ನಾಟಕವಾಗಿದ್ದರಿಂದ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶಿಸಲು ಅರ್ಹತೆ ಪಡೆದಿಲ್ಲ. ಆದರೂ ಪ್ರಸನ್ನರವರ ಮೇಲಿನ ಗೌರವಕ್ಕೋ ಇಲ್ಲವೇ ಸಮುದಾಯ ಸಂಘಟಣೆಯ ಸಂಘಟಕರು ರಂಗೋತ್ಸವದ ನಿರ್ದೇಶಕರಾಗಿದ್ದಕ್ಕೋ ಬೀದಿನಾಟಕವನ್ನು ರಂಗನಾಟಕದ ಹೆಸರಲ್ಲಿ ಪ್ರದರ್ಶಿಸಿ ನೋಡುಗರನ್ನು ಭ್ರಮೆಯಲ್ಲಿಡಲು ಪ್ರಯತ್ನಿಸಲಾಗಿದೆ. ರಾಷ್ಟ್ರೀಯ ರಂಗೋತ್ಸವದ ಪರಿಕಲ್ಪನೆ ಲೋಕಲ್ ಬೀದಿನಾಟಕ ಪ್ರದರ್ಶನದಿಂದಾಗಿ ಮೊದಲ ದಿನವೇ ಚೂರುಚೂರಾಗಿದೆ.


ಎರಡನೇ ದಿನ ಪ್ರದರ್ಶನಗೊಂಡ ನಿರಂಜನರ ಕಾದಂಬರಿ ಆಧಾರಿಸಿ ಬಿ.ಸುರೇಶ್ರವರ ನಿರ್ದೇಶನದಲ್ಲಿ ತಯಾರಾದ ನಾಟಕ ಮೃತ್ಯುಂಜಯ. ಇದು ರಂಗನಾಟಕವಾದರೂ ನಾಟಕದಾದ್ಯಂತ ಬೀದಿ ನಾಟಕದ ತಂತ್ರಗಳನ್ನೇ ಬಹುತೇಕ ಬಳಸಲಾಗಿದೆ. ಎರಡೂ ಕಾಲು ಗಂಟೆಯ ಒಂದು ಸುದೀರ್ಘ ಬೀದಿ ನಾಟಕವನ್ನು ನೋಡಿದ ಅನುಭವವನ್ನು ಮೃತ್ಯುಂಜಯ ನಾಟಕ ನೋಡುಗರಿಗೆ ಕೊಟ್ಟಿದ್ದಂತೂ ಸುಳ್ಳಲ್ಲ. ನಾಟಕ ಇನ್ನೂ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಾದ ಮಟ್ಟಕ್ಕೆ ತಯಾರಾಗ ಬೇಕಾಗಿತ್ತು ಆದರೆ ಹಾಗಾಗದೇ ರಂಗದ ಮೇಲೆ ನಾಟಕದ ಗ್ರ್ಯಾಂಡ್ ರಿಹರ್ಸಲ್ ನೋಡಿದಂತಾಯಿತು. ಅವಸರದಲ್ಲಿ ಅನನುಭವಿ ನಟರನ್ನು ಬಳಸಿ ನಾಟಕವನ್ನು ನಿರ್ಮಿಸಿದ್ದರಿಂದ ನಾಟಕದಾದ್ಯಂತ ವೃತ್ತಿಪರತೆ ಕಂಡುಬರಲಿಲ್ಲ. ಐದನೇ ದಿನ ಪ್ರದರ್ಶನಗೊಂಡ ಸುರಿಂಗ್ ಎನ್ನುವ ಕೊಂಕಣಿ ನಾಟಕದೊಳಗೆ ಬೀದಿನಾಟಕದ ಒಂದು ತಂಡವೇ ಬಂದು ಗಣಿಗಾರಿಕೆಯಲ್ಲಿ ಕೆಲಸ ಮಾಡುವವರನ್ನು ಜಾಗೃತಿ ಮಾಡಿಸಲು ಪ್ರಯತ್ನಿಸಿ ಯಶಸ್ವಿಯಾಗುತ್ತದೆ. ಬರೀ ಮಾತುಗಾರಿಕೆಯ ನಾಟಕದಲ್ಲಿ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲು ಬೇಕಾದಂತಹ ರಂಗತಂತ್ರಗಳ ಬಳಕೆ ಇಲ್ಲವಾಗಿದೆ. ಇನ್ನು ಆರನೆಯ ದಿನ ಪ್ರದರ್ಶನಗೊಂಡ ಮಲಯಾಳಿ ನಾಟಕ ಚಕ್ಕಾ ಅಂತೂ ಸಂಪೂರ್ಣ ಬೀದಿನಾಟಕವೇ ಆಗಿದೆ ಮತ್ತು ರಂಗವೇದಿಕೆ ಬಿಟ್ಟು ಬೀದಿಯಲ್ಲೇ ಪ್ರದರ್ಶನಗೊಂಡು ತನ್ನ ಸ್ವರೂಪದ ಬಗ್ಗೆ ಪುರಾವೆ ಒದಗಿಸಿದೆ. ವೃತ್ತಾಕಾರದ ರಂಗವೇದಿಕೆ ನಿರ್ಮಿಸಿಕೊಂಡು ಎದುರು ಬದಿರಾಗಿ ಪ್ರೇಕ್ಷಕರನ್ನು ಕುಳ್ಳಿರಿಸಿಕೊಂಡು ಪಕ್ಕಾ ಬೀದಿನಾಟಕವೇ ಆಡಲ್ಪಟ್ಟಿದೆ. ನಾಟಕವನ್ನು ನಿರ್ದೇಶಿಸಿದ್ದು ಒಂದೆರಡು ಜನರಲ್ಲ, ಒಟ್ಟು ಏಳು ಜನರು. ಏಳು ಜನರು ಸೇರಿ ರೈತರ ಸಮಸ್ಯೆಯನ್ನಿಟ್ಟುಕೊಂಡು ದೃಶ್ಯಗಳನ್ನು ಇಂಪ್ರೂವೈಸ್ ಮಾಡಿ ಬೀದಿನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಅಂದರೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಂಡ ಏಳು ನಾಟಕಗಳಲ್ಲಿ ಎರಡು ಪಕ್ಕಾ ಬೀದಿ ನಾಟಕಗಳು ಹಾಗೂ ಇನ್ನೆರಡು ಬೀದಿನಾಟಕದ ತಂತ್ರಗಾರಿಕೆಯನ್ನು ಬಳಸಿಕೊಂಡ ನಾಟಕಗಳಾಗಿವೆ. ಹೀಗಾಗಿ ನಾಟಕೋತ್ಸವವನ್ನು ಸಿಜಿಕೆ ನೆನಪಿನ ಬೀದಿನಾಟಕೋತ್ಸವ ಎನ್ನಲು ಅಡ್ಡಿಯಿಲ್ಲ. ಬೀದಿನಾಟಕಗಳು ಎಂದರೆ ಎರಡನೇ ದರ್ಜೆಯ ನಾಟಕಗಳು ಎಂದರ್ಥವಲ್ಲ. ಬೀದಿನಾಟಕಗಳಿಗೂ ತಮ್ಮದೇ ಆದ ಘನತೆ, ಆಶಯಗಳಿವೆ. ಆದರೆ ರಂಗನಾಟಕೋತ್ಸವ ಎಂದು ಹೇಳಿ ಬೀದಿನಾಟಕ ತೋರಿಸಿದ್ದು ಸರಿಯಾದದ್ದಲ್ಲ.
         

ಇಡೀ ಸಿಜಿಕೆ ನಾಟಕೋತ್ಸವದಲ್ಲಿ ಗಮನ ಸೆಳೆದಿದ್ದು ಹಾಗೂ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲು ನಿಜವಾದ ವೃತ್ತಿಪರತೆ ಹಾಗೂ ಅರ್ಹತೆ ಇರುವುದು ಡಾ.ಶ್ರೀಪಾದ ಭಟ್ರವರ ನಿರ್ದೇಶನದ ತುಳು ನಾಟಕ ಕರ್ಣಭಾರಕ್ಕೆ ಮಾತ್ರ. ಇನ್ನೊಂದು ತೆಲುಗು ನಾಟಕ ರಾಜಿಗಾಡು ರಾಜಯ್ಯಾಡು ವನ್ನು ಅದ್ಯಾರು ಆಯ್ಕೆ ಮಾಡಿದರೋ ಗೊತ್ತಿಲ್ಲ, ಎರಡೂವರೆ ಗಂಟೆಯ ಸುದೀರ್ಘ ನಾಟಕದ ಪ್ರತಿ ಬ್ಲಾಕೌಟ್ ನಲ್ಲೂ ಜನ ರಂಗಮಂದಿರದಿಂದ ಗುಳೆ ಎದ್ದು ಹೋಗುತ್ತಿದ್ದರು. ತುಂಬಿದ ಸಂಸ ರಂಗಮಂದಿರ ನಾಟಕ ಅರ್ಧಭಾಗ ಪೂರೈಸುವಷ್ಟರಲ್ಲಿ ಪ್ರೇಕ್ಷಕರ ಸಂಖ್ಯೆ ನೂರು ಜನಕ್ಕಿಳಿದಿತ್ತು. ಇದರಲ್ಲಿ ಅರ್ಧದಷ್ಟು ಜನ ವಾಲೆಂಟಿಯರಗಳು ಅನಿವಾರ್ಯವಾಗಿ ಆಕಳಿಸುತ್ತಾ ಕುಳಿತಿದ್ದರು. ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುವಂತಹ ನಾಟಕವನ್ನು ರಾಷ್ಟ್ರೀಯ ರಂಗೋತ್ಸವದಲ್ಲಿ ಆಯ್ಕೆ ಮಾಡಿದ್ದೇ ಮೊದಲ ತಪ್ಪು. ಇನ್ನು ನಾಟಕೋತ್ಸವದ ಕೊಟ್ಟ ಕೊನೆಯ ನಾಟಕ ತಮಿಳಿನ ವಾಂಛಿಯಾರ್ ಕಾಂಡಂ. ಮಳೆಯ ಸಮಸ್ಯೆಯಿಂದ ಸಂಸ ಬಿಟ್ಟು ಕಲಾಕ್ಷೇತ್ರದ ಎಂಟ್ರನ್ಸ್ ನಲ್ಲಿ   ನಾಟಕ ಪ್ರದರ್ಶಿಸುವ ಅನಿವಾರ್ಯತೆ ಉಂಟಾಯಿತು. ಆದರೆ   ನಾಟಕ ಬಹುತೇಕರಿಗೆ ಅರ್ಥವಾಗಲೇ ಇಲ್ಲ. ಯಾವುದೇ ದೃಷ್ಟಿಯಿಂದ ನೋಡಿದರೂ ನಾಟಕ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶಿಸುವ ಮಟ್ಟದಲ್ಲಿಲ್ಲ.

ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೆ ಜನರ ಹಣ ಹಾಗೂ ಹಲವಾರು ರಂಗಕರ್ಮಿಗಳ ಶ್ರಮ ವ್ಯಯವಾಯಿತು. ಆದರೆ... ನಾಟಕಗಳ ತಪ್ಪು ಆಯ್ಕೆಯಿಂದಾಗಿ ಇಡೀ ನಾಟಕೋತ್ಸವ ನಿರಾಶೆಯನ್ನುಂಟು ಮಾಡಿತು. ಇದಕ್ಕೆ ಏನು ಕಾರಣ? ಮೊದಲನೆಯದಾಗಿ ರಂಗೋತ್ಸವಕ್ಕೆ ಚೌಕಟ್ಟುಗಳನ್ನು ಹಾಕಿ  ನಿರ್ಬಂಧಿಸಿಕೊಂಡಿದ್ದು ಪ್ರಮುಖ ಕಾರಣವಾಗಿದೆ. ಒಂದು ದ್ರಾವಿಢ ಭಾಷೆಗಳ ನಾಟಕಗಳಾಗಿರಬೇಕು ಹಾಗೂ ಇನ್ನೊಂದು ಸುಸ್ಥಿರ ಬದುಕಿನತ್ತ ರಂಗಭೂಮಿ ಆಶಯಕ್ಕೆ ನಾಟಕಗಳು ಪೂರಕವಾಗಿರಬೇಕು, ಎಂಬ ಎರಡು ಚೌಕಟ್ಟುಗಳಲ್ಲಿ ಇಡೀ ರಂಗೋತ್ಸವವನ್ನು ಬಂಧಿಸಿದ್ದರಿಂದ ರಾಷ್ಟ್ರೀಯ ರಂಗೋತ್ಸವದ ಪರಿಕಲ್ಪನೆಯೇ ವಿಫಲವಾಯಿತು. ರೀತಿಯ ನಿಬಂಧನೆಗಳನ್ನು ಹಾಕಿಕೊಂಡೇ ರಂಗೋತ್ಸವ ಮಾಡುವುದಾಗಿದ್ದರೆ ತಪ್ಪೇನಿಲ್ಲ ಮಾಡಲಿ ಬೇಡವೆಂದವರ್ಯಾರು? ಆದರೆ ನಾಟಕೋತ್ಸವದ ಹೆಸರನ್ನು ಬದಲಾಯಿಸಬೇಕಾಗಿತ್ತು. ಮೊದಲನೆಯ ನಿಬಂಧನೆಗೆ ರಂಗನಿರಂತರ ಬದ್ದವಾಗಿದ್ದರೆ ಸಿಜಿಕೆ ಬೀದಿನಾಟಕೋತ್ಸವ ಎಂದು ಹೆಸರಿಸಬೇಕಾಗಿತ್ತು. ಆಗ ಪ್ರೇಕ್ಷಕರ ನಿರೀಕ್ಷೆ ಅದೇ ಮಟ್ಟದ್ದಾಗಿರುತ್ತಿತ್ತು. ಇಲ್ಲವೇ ಎರಡನೇ ನಿಬಂಧನೆ ಪ್ರಮುಖವಾಗಿದ್ದರೆ ಸಿಜಿಕೆ ದ್ರಾವಿಢ ಭಾಷಾ ರಂಗೋತ್ಸವ ಎಂದು ಕರೆಯಬಹುದಾಗಿತ್ತು. ಆಗ ಪ್ರೇಕ್ಷಕರು ಮೊದಲೇ ಮಾನಸಿಕವಾಗಿ ಸಿದ್ದತೆ ಮಾಡಿಕೊಂಡೇ ನಾಟಕ ನೋಡಲು ಬರುತ್ತದ್ದರು ಇಲ್ಲವೇ ಬಿಡುತ್ತಿದ್ದರು. ಆದರೆ ಯಾವಾಗ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಎಂದು ಹೆಸರಿಟ್ಟರೋ ಆಗ ರಂಗಾಸಕ್ತರ ನಿರೀಕ್ಷೆ ಹೆಚ್ಚಾಗಿತ್ತು. ಹಾಗೂ ಹಿಂದಿನ ಸಲ ಆಯೋಜಿಸಿದ್ದ ರಂಗೋತ್ಸವದಲ್ಲಿ ಅತ್ಯುತ್ತಮವಾದ ವಿಶಿಷ್ಟ ನಾಟಕಗಳು ಪ್ರಯೋಗಗೊಂಡಿದ್ದರಿಂದ ಸಲವೂ ಸಲ ಅಂತಹ ಅಪರೂಪದ ನಾಟಕಗಳನ್ನು ನೋಡುವ ಅವಕಾಶವನ್ನು ಕಣ್ತುಂಬಿಕೊಳ್ಳಬೇಕೆಂದುಕೊಂಡು ಬಂದಿದ್ದ ಕನ್ನಡ ರಂಗಾಸಕ್ತ ಪ್ರೇಕ್ಷಕರಿಗೆ ಭಾರೀ ನಿರಾಶೆಯಾಯಿತು. ಯಾವುದೋ ಒಂದೂರಿನ ನಾಲ್ಕು ರಂಗತಂಡಗಳು ಹಾಗೂ ಅಕ್ಕಪಕ್ಕದ ಹಳ್ಳಿಯ ಮೂರು ತಂಡಗಳು ಸೇರಿಕೊಂಡು ನಾಟಕೋತ್ಸವವನ್ನು ಆಯೋಜಿಸಿ ಅದಕ್ಕೆ ಅಖಿಲ ಕರ್ನಾಟಕ ರಂಗೋತ್ಸವ ಎಂದು ಕರೆದಂತೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಭಾಸವಾಯಿತು. ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲಿಯೂ ಸಹ ಒಂದೋ ಎರಡೋ ಬೇರೆ ಭಾಷೆಯ ನಾಟಕಗಳನ್ನು ಕರೆಸಿ ಇಡೀ ನಾಟಕೋತ್ಸವವನ್ನು ರಾಷ್ಟ್ರೀಯ ಇಲ್ಲವೇ ಕೆಲವೊಮ್ಮೆ ಒಂದು ನೇಪಾಳಿ ನಾಟಕ ಕರೆಸಿ ಅಂತರಾಷ್ಟ್ರೀಯ ನಾಟಕೋತ್ಸವ ಎಂದು ಕರೆಯಲಾಗುತ್ತದೆ. ಇದು ನಿಜಕ್ಕೂ ಆಭಾಸಕಾರಿಯಾದದ್ದು.

ಬ್ರಾಹ್ಮಣೀಕರಣಗೊಂಡ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ?: ಸಲದ ಸಿಜಿಕೆ ರಂಗೋತ್ಸವ ಬ್ರಾಹ್ಮಣೀಕರಣಗೊಂಡಿದ್ದನ್ನು ಕೆಲವಾರು ರಂಗಕರ್ಮಿಗಳು ಗಮನಿಸಿದ್ದಾರೆ. ಕಳೆದ ಸಲದ ರಂಗೋತ್ಸವ ಜ್ಯಾತ್ಯಾತೀತವಾಗಿತ್ತು ಹಾಗೂ ಅಬ್ರಾಹ್ಮಣ ಸಿ.ಬಸವಲಿಂಗಯ್ಯನವರ ನೇತೃತ್ವದಲ್ಲಿ ಜಾತಿ ಕಳಂಕವನ್ನು ಹಚ್ಚಿಕೊಳ್ಳದೇ ನಿಜವಾದ ಅರ್ಥದಲ್ಲಿ ರಂಗೋತ್ಸವವಾಗಿತ್ತು ಎಂಬುದನ್ನು ಗಮನಿಸಿದ್ದ ಕೆಲವು ರಂಗಕರ್ಮಿಗಳು
ಸಿಜಿಕೆ ರಂಗೋತ್ಸವದ ನಿರ್ದೇಶಕ ಶಶಿಧರ ಭಾರಿಘಾಟ
ಸಲದ ರಂಗೋತ್ಸವದಲ್ಲಿ ಎದ್ದು ಕಾಣುವಂತೆ ಗೋಚರಿಸಿದ ಜಾತಿಕಾರಣವನ್ನು ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಂತೂ ಸತ್ಯ. ಇದಕ್ಕೆ ಅವರು ಕೊಡುವ ಕಾರಣಗಳನ್ನೂ ಅಲ್ಲಗಳೆಯುವಂತಿಲ್ಲಇಡೀ ರಂಗೋತ್ಸವದ ರೂಪರೇಷೆಯನ್ನು ಸಜ್ಜುಗೊಳಿಸಿದ ಪ್ರಸನ್ನ ಮತ್ತು ಭಾರಿಘಾಟ ಇಬ್ಬರೂ ಬ್ರಾಹ್ಮಣ ಸಮುದಾಯದವರು. ನಾಟಕೋತ್ಸವದ ಮೆದುಳು ಬ್ರಾಹ್ಮಣರದ್ದಾಗಿದ್ದು ಕೇವಲ ಕೈಕಾಲುಗಳಾಗಿ ಮಾತ್ರ ಅಬ್ರಾಹ್ಮಣರು ಕೆಲಸಕ್ಕೆ ಬಳಕೆಯಾಗಿದ್ದಾರೆ. ರಂಗೋತ್ಸವದ ನಿರ್ದೇಶಕರು ಬ್ರಾಹ್ಮಣರೇ ಆಗಿದ್ದು, ನಾಟಕೋತ್ಸವದ ಮೊದಲ ಮೂರು ಕನ್ನಡ ನಾಟಕಗಳ ನಿರ್ದೇಶಕರುಗಳೂ ಸಹ ಬ್ರಾಹ್ಮಣರೇ ಆಗಿದ್ದಾರೆ. ಮಲಯಾಳೀ ನಾಟಕದ ರೂವಾರಿಗಳೆಲ್ಲರೂ ಪುರೋಹಿತ ಮನೆತನದವರೇ ಆಗಿದ್ದಾರೆ. ಇಡೀ ನಾಟಕೋತ್ಸದಲ್ಲಿ ಬ್ರಾಹ್ಮಣೀಕರಣದ ಪ್ರಭಾವ ಎದ್ದು ಕಾಣುವಂತಿದೆ. ಯಾವ ಸಿಜಿಕೆ ಬ್ರಾಹ್ಮಣರನ್ನು ಶತಾಯ ಗತಾಯ ವಿರೋಧಿಸುತ್ತಿದ್ದರೋ... ಅಂತಹ ಸಿಜಿಕೆ ಹೆಸರಿನ ರಂಗೋತ್ಸವದಲ್ಲಿ ಬ್ರಾಹ್ಮಣರಿಗೆ ಪ್ರಾಮುಖ್ಯತೆ ಕೊಟ್ಟಿರುವುದು ಸಿಜಿಕೆ ಆಶಯಕ್ಕೆ ವಿರುದ್ಧವಾದದ್ದು ಎನ್ನುವ ಆರೋಪಗಳು ಕಲಾಕ್ಷೇತ್ರದ ಮೆಟ್ಟಿಲುಗಳಲ್ಲಿ ಕೇಳಿಬಂದಿತು. ಜಾತಿ ಕಾರಣದಿಂದಾಗಿಯೇ ನಾಟಕಗಳ ಆಯ್ಕೆಯಲ್ಲಿ ಸಮಸ್ಯೆಗಳಾದವು ಎಂಬ ಹೆಚ್ಚುವರಿ ಆರೋಪವೂ ಪ್ರತಿದ್ವನಿಸುತ್ತಿದೆ. ರಂಗಭೂಮಿಯಲ್ಲಿ ಹೆಚ್ಚಾಗಿ ಜಾತಿಕರಣ ಪ್ರಾಮುಖ್ಯವೆನಿಸುವುದಿಲ್ಲ. ಕೆಲವು ಪುರೋಹಿತಶಾಹಿ ಪ್ರಣೀತ ಹಾರವರಿದ್ದಾರೆ ಅವರು ಎಲ್ಲೇ ಹೋದರೂ ತಮ್ಮ ಜಾತಿಪ್ರೀತಿ ಬಿಡುವುದಿಲ್ಲ ಎಂದು ಆರೋಪಿಸುವವರ ಸಂಖ್ಯೆಯೂ ಕಡಿಮೆ ಏನಿಲ್ಲ.

ಡಾ.ಶ್ರೀಪಾದ ಭಟ್
ಆದರೆ....  ಪ್ರಸನ್ನ, ಬಿ.ಸುರೇಶ್, ಶ್ರೀಪಾದ ಭಟ್ ಮೂವರೂ ಸಹ ಜನಹೋರಾಟಗಳಿಂದ ಬಂದವರು. ಬ್ರಾಹ್ಮಣ್ಯವನ್ನು ಎಂದೋ ಕೈಬಿಟ್ಟವರು. ಬಿ.ಸುರೇಶ್ರವರ ಮೃತ್ಯುಂಜಯದಲ್ಲಿ ಗುರುಪೀಠದ ರಾಜಕಾರಣ ಹಾಗೂ ಸನಾತನವಾದವನ್ನು ವಿಡಂಬಿಸಿ ತೋರಿಸಲಾಗಿದೆ. ಶ್ರೀಪಾದ ಭಟ್ರವರ ನಾಟಕದಲ್ಲಂತೂ ಬ್ರಾಹ್ಮಣರನ್ನು ಇನ್ನಿಲ್ಲದಂತೆ ಲೇವಡಿ ಮಾಡಲಾಗಿದೆ. ಆದರೂ....ಹುಟ್ಟಿನಿಂದ ಬಂದ ಜಾತಿಯ ಆರೋಪಕ್ಕೆ ಜ್ಯಾತ್ಯಾತೀತರೆನಿಸಿಕೊಂಡವರು ಬಾಧ್ಯಸ್ತರಾಗಬೇಕಾಗಿರುವುದೊಂದು ವಿಪರ್ಯಾಸಕರ. ಸಾರ್ವಜನಿಕವಾಗಿ ಜಾತ್ಯಾತೀತರಾಗಿ ತೋರಿಸಿಕೊಂಡು ಆಂತರ್ಯದಲ್ಲಿ ಜಾತಿ ಪ್ರೀತಿಯನ್ನು ಇಟ್ಟುಕೊಂಡೇ ಇರುತ್ತಾರೆ ಎನ್ನುವ ಆರೋಪ ಯಾವುದೇ ಬ್ರಾಹ್ಮಣ ಸಂಜಾತ ಪ್ರಗತಿಪರರನ್ನೂ ಬಿಟ್ಟಿಲ್ಲ ಎನ್ನುವುದು ಪರಮಸತ್ಯ. ಆದರೆ ರೀತಿಯ ಆರೋಪ ಬಾರದಂತೆ ರಂಗನಿರಂತರದ ಅಧ್ಯಕ್ಷ ಶಶಿಧರ್ ಅಡಪರವರು ಮುನ್ನಚ್ಚೆರಿಕೆ ತೆಗೆದುಕೊಳ್ಳಬೇಕಾಗಿತ್ತು. ಮತ್ತು ಅವರಿಗೆ ಬ್ರಾಹ್ಮಣೀಕರಣದ ಆರೋಪದ ಅಪಾಯದ ಅರಿವಿತ್ತು. ಆದರೂ ಅದ್ಯಾಕೆ ಅನ್ಯತಾ ಆರೋಪವನ್ನು ಮೈಮೇಲೆಳೆದುಕೊಂಡರೋ ಗೊತ್ತಿಲ್ಲ. ನಾಟಕಗಳ ಆಯ್ಕೆಯಲ್ಲಿ ಒಂದಿಷ್ಟು ಮುತುವರ್ಜಿ ವಹಿಸಿದ್ದರೆ, ನಾಟಕೋತ್ಸವದ ನಾಯಕತ್ವವನ್ನು ಜ್ಯಾತ್ಯಾತೀತ ರಂಗಕರ್ಮಿಗೆ ವಹಿಸಿದ್ದರೆ ಸಿಜಿಕೆ ಆಶಯದ ವಿರೋಧಿತನದ ಆರೋಪದಿಂದ ಮುಕ್ತವಾಗಬಹುದಾಗಿತ್ತು.

ರಂಗೋತ್ಸವದಲ್ಲಿ ಅದೆಷ್ಟೇ ಬ್ರಾಹ್ಮಣೀಕರಣವನ್ನು ಅಲ್ಲಗಳೆದರೂ ಅದಕ್ಕೆ ಪೂರಕವಾಗಿ ಪುರಾವೆಯಾಗುವಂತಹ ಘಟನೆಗಳನ್ನು ಕೆಲವರು ಉದಾಹರಿಸುತ್ತಾರೆ. ಅದರಲ್ಲಿ ಪ್ರಮುಖವಾದದ್ದು ಅಬ್ರಾಹ್ಮಣರೆಂಬ ಕಾರಣಕ್ಕೆ ರಂಗೋತ್ಸವದಲ್ಲಿ ಪ್ರದರ್ಶನವಾಗಬೇಕಾಗಿದ್ದ ನಾಟಕವೊಂದನ್ನು ರದ್ದು ಮಾಡಲಾಗಿದೆ ಎನ್ನುವ ಆರೋಪ ಕೂಡಾ ನೊಂದವರಿಂದ  ಅಲ್ಲಲ್ಲಿ ಸದ್ದು ಮಾಡಿತು. ಇದರ ಹಿನ್ನೆಲೆ ಹೀಗಿದೆ. ಸಿಜಿಕೆ ರಂಗೋತ್ಸವದ ಪೂರ್ವಭಾವಿ ತಯಾರಿಯ ಸಭೆ ಕರೆದಿದ್ದಾಗ ದ್ರಾವಿಢ ಭಾಷೆಗಳ ನಾಟಕೋತ್ಸವ ಮಾಡುವುದೆಂದು ನಿರ್ಧರಿಸಲಾಗಿತ್ತು. ಕೊಡಗಿನ ರಂಗಕರ್ಮಿ ಅಡ್ಡಂಡ ಕಾರ್ಯಪ್ಪರವರಿಗೆ ಕೊಡಗು ಭಾಷೆಯಲ್ಲಿ ನಾಟಕವೊಂದನ್ನು ಸಿದ್ದಗೊಳಿಸಲು ಹೇಳಲಾಯಿತು. ರಂಗೋತ್ಸವದ ರೂವಾರಿಗಳ ಮಾತನ್ನು ನಂಬಿದ ಕಾರ್ಯಪ್ಪ ಹಾಗೂ ಅವರ ಶ್ರೀಮತಿ ಅನಿತಾ ಇಬ್ಬರೂ ಸೇರಿ ವಸುದೇಂದ್ರರವರ ಕಥೆಯನ್ನು ರಂಗರೂಪಗೊಳಿಸಿ ಬದಕ್ ಎನ್ನುವ ನಾಟಕವೊಂದನ್ನು  ಸಿದ್ದಮಾಡಿಕೊಂಡರು. ಮಾಲತೇಶ್ ಬಡಿಗೇರ್ರವರು ನಾಟಕವನ್ನು ನಿರ್ದೇಶಿಸಲು ಒಪ್ಪಿಕೊಂಡರು. ಮಡಕೇರಿಯಿಂದ ಕಾರ್ಯಪ್ಪ ದಂಪತಿಗಳು ಬೆಂಗಳೂರಿಗೆ ಬಂದು ಮಾಲತೇಶ್ ಬಡಿಗೇರರ ಮನೆಯ ಪಕ್ಕದಲ್ಲೇ ಬಾಡಿಗೆಗೆ ಮನೆಯನ್ನು ಪಡೆದುಕೊಂಡು 45 ದಿನಗಳ ಕಾಲ ನಾಟಕದ ತಾಲಿಂ ಮಾಡಿದರು. ಸ್ವತಃ ಕಾರ್ಯಪ್ಪ ದಂಪತಿಗಳು ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಜಿಕೆ ನಾಟಕೋತ್ಸವದ ನಿರ್ದೇಶಕರಾದ ಭಾರಿಭಾಟರವರೂ ಸಹ ಬಡಿಗೇರರವರನ್ನು ಬೆಟ್ಟಿಯಾದಾಗೆಲ್ಲಾ ನಾಟಕದ ಸಿದ್ದತೆಯ ಬಗ್ಗೆ ವಿಚಾಸುತ್ತಿದ್ದರು.  ಸಿಜಿಕೆ ರಂಗೋತ್ಸವದಲ್ಲಿ ತಮ್ಮ ನಾಟಕ ಪ್ರದರ್ಶನವಾಗುತ್ತದೆಂಬ ಸಂಭ್ರಮದಲ್ಲಿ ಸರ್ವಸಿದ್ದತೆ ಮಾಡಿಕೊಂಡರುಆದರೆ ಸಂಭ್ರಮ ಬಹುದಿನಗಳ ಕಾಲ ಉಳಿಯಲಿಲ್ಲ. ರಂಗೋತ್ಸವದ ರೂವಾರಿಗಳು ನಾಟಕ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಒಂದು ಮಾತನ್ನೂ ಸಹ ತಳಿಸುವ ಸೌಜನ್ಯ ತೋರದೇ ಕಾರ್ಯಪ್ಪನವರ ನಾಟಕವನ್ನು ರಂಗೋತ್ಸವದಿಂದ ಕೈಬಿಟ್ಟಿದ್ದರು.  ಆತಂಕದಿಂದ ಕಾರ್ಯಪ್ಪನವರು ಪೋನ್ ಮಾಡಿ ಕೇಳಿದಾಗ ರಂಗೋತ್ಸವದ ನಿಬಂಧನೆ ಬದಲಾಗಿದೆ. ಕೇವಲ ದ್ರಾವಿಡ ಭಾಷೆಗಳಾದ ಕನ್ನಡ, ಮಲಯಾಳಿ, ತೆಲುಗು, ತಮಿಳು... ಭಾಷೆಗಳ ನಾಟಕಗಳಿಗೆ ಮಾತ್ರ ನಾಟಕೋತ್ಸವದಲ್ಲಿ ಅವಕಾಶವಿದೆ ಎಂದು ಸಬೂಬು ಕೊಡಲಾಯಿತು. ಕನ್ನಡದ ಉಪಭಾಷೆಗಳಿಗೆ ಈಗ ಪ್ರಾಮುಖ್ಯತೆ ಇಲ್ಲ ಎಂಬುದನ್ನು ಸ್ಪಷ್ಟೀಕರಿಸಲಾಯಿತು. ತುಂಬಾ ನಿರಾಶೆಯಾದರೂ ಕಾರ್ಯಪ್ಪ ದಂಪತಿಗಳು ದೃತಿಗೆಡಲಿಲ್ಲ. ಆದರೆ ಅವರು ತಳಮಳಗೊಂಡಿದ್ದು ಸಿಜಿಕೆ ರಂಗೋತ್ಸವದ ನಾಟಕಗಳ ಪಟ್ಟಿಯನ್ನು ಗಮನಿಸಿದಾಗ.


ಅಡ್ಡಂಡ್ ಕಾರ್ಯಪ್ಪನವರು
ಯಾಕೆಂದರೆ... ಕೇವಲ ದ್ರಾವಿ ಭಾಷೆಗಳ ರಂಗೋತ್ಸವ, ಉಪಭಾಷೆಗಳಿಗೆ ಅವಕಾಶವಿಲ್ಲ ಎಂದಿರುವುದಕ್ಕೆ ವಿರುದ್ಧವಾಗಿ ದ್ರಾವಿಡ ಭಾಷೆಯಲ್ಲದ ಕೊಂಕಣಿ ಭಾಷೆಯ ನಾಟಕ ಸೇರ್ಪಡೆಯಾಗಿತ್ತು. ಜೊತೆಗೆ ಕರ್ನಾಟಕದ ಉಪಭಾಷೆಯಾದ ತುಳು ನಾಟಕಕ್ಕೂ ಅವಕಾಶ ಸಿಕ್ಕಿತ್ತು. ಯಾಕೆ ಹೀಗೆ? ಎಂದು ಪ್ರಶ್ನಿಸಿದರೆ ಅಕಾರಣ ಸಬೂಬುಗಳನ್ನು ಕೇಳಬೇಕಾಯಿತು. ನಂತರ ಕಾರ್ಯಪ್ಪರವರು ತಮ್ಮದೇ ಮೂಲಗಳಿಂದ ವಿಚಾರಣೆ ಮಾಡಿದಾಗ ಅವರಿಗೆ ಗೊತ್ತಾಗಿದ್ದೇನೆಂದರೆ ಅವರ ಕೊಡವ ಭಾಷೆಯ ನಾಟಕದ ಬದಲಾಗಿ  ಶ್ರೀಪಾದ ಭಟ್ರವರ ತುಳು ನಾಟಕವನ್ನು ಸೇರಿಸಲು ಒತ್ತಡ ಬಂದಿತ್ತು ಎಂಬುದು. ಇದಕ್ಕಿಂತ ಹೆಚ್ಚಾಗಿ ಕಾರ್ಯಪ್ಪನವರ ನಾಟಕವನ್ನು ನಿರ್ದೇಶಿಸಿದವರು ತಳಸಮುದಾಯದ ಮಾಲತೇಶ್ ಬಡಿಗೇರ್ ಎನ್ನುವುದೂ ಸಹ ಕೊಡುಗು ನಾಟಕದ ಪ್ರದರ್ಶನ ರದ್ದಾಗಲು ಪ್ರಮುಖ ಕಾರಣವಾಯಿತು ತಂದು ಸ್ವತಃ  ಬಡಿಗೇರರವರೇ ಅವಲತ್ತುಕೊಂಡರು.  ಇಂತಹ ಸಂದರ್ಭದಲ್ಲಿ ಕುಲಬಾಂಧವತೆ ಎನ್ನುವುದು ಅವಕಾಶ ಸಿಕ್ಕಲ್ಲೆಲ್ಲಾ ತನ್ನ ತಂತ್ರಗಾರಿಕೆಯನ್ನು ಮೆರೆಯುತ್ತದೆ ಎನ್ನುವುದು ಸಾಬೀತಾಗುತ್ತದೆ. ಸಿಜಿಕೆ ರಂಗೋತ್ಸವದ ರೂವಾರಿಗಳ ಜಾತಿ ಕಾರಣದಿಂದಾಗಿ ಬಡಿಗೇರ್ ನಿರ್ದೇಶನದ ನಾಟಕವೊಂದು ಬಲಿಯಾಯಿತು ಹಾಗೂ ಕಾರ್ಯಪ್ಪ ದಂಪತಿಗಳ ಹಣ, ಶ್ರಮ, ಸಮಯ, ನಂಬಿಕೆ ವ್ಯರ್ಥವಾಯಿತು ಎನ್ನುವುದೇ ಅತ್ಯಂತ ಖೇದಕರ ಸಂಗತಿಯಾಗಿದೆ. ಇದೇ ಕಾರಣಕ್ಕೋ ಏನೋ ಸಿಜಿಕೆ ಯಾವಾಗಲೂ ಪುರೋಹಿತಶಾಹಿ ವ್ಯಕ್ತಿ ಹಾಗೂ ಶಕ್ತಿಗಳಿಂದ  ಒಂದು ಅಂತರವನ್ನು ಕಾಪಾಡಿಕೊಂಡೇ ಬಂದಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಬ್ರಾಹ್ಮಣ್ಯವನ್ನು ಹೀನಾಯಮಾನವಾಗಿ ನಿಂದಿಸುತ್ತಲೇ ಇದ್ದರು. ಇಂತಹ ಸಿಜಿಕೆಯವರ ಬ್ರಾಹ್ಮಣ್ಯ ವಿರೋಧಿ ಆಶಯಕ್ಕೆ ವಿರುದ್ದವಾಗಿ ಬ್ರಾಹ್ಮಣರಿಗೆ ನಾಯಕತ್ವವನ್ನು ವಹಿಸಿದ ರಂಗನಿರಂತರದ ಪ್ರಸ್ತುತ ನಿರ್ಧಾರವನ್ನು ಬ್ರಾಹ್ಮಣೇತರ ರಂಗಕರ್ಮಿಗಳು ತಮ್ಮತಮ್ಮಲ್ಲೇ ಪ್ರಶ್ನಿಸುತ್ತಿದ್ದಾರೆ. ಹಾಗೂ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಬ್ರಾಹ್ಮಣೀಕರಣದ ಹಿಡಿತವನ್ನು ಆಕ್ಷೇಪಿಸುತ್ತಿದ್ದಾರೆ. ಕಾರ್ಯಪ್ಪರವರ ನಾಟಕ ರದ್ದತಿ ಕುರಿತಾದ ವಿಚಾರವಾಗಿ ಪ್ರತಿಕ್ರಿಯಿಸಿದ ರಂಗನಿರಂತರದ ಅಧ್ಯಕ್ಷರಾದ ಶಶಿಧರ್ ಅಡಪರವರು "ನಾವು ರಂಗೋತ್ಸವ ಆಯೋಜಿಸುವುದಕ್ಕಿಂತ ಮೊದಲೇ ಕಾರ್ಯಪ್ಪನವರ ನಾಟಕ ಸಿದ್ದವಾಗಿತ್ತು. ಎಂಟು ದಿನಗಳ ಕಾಲ ನಮಗೆ ಥೇಯಟರ್ ಸಿಗದೇ ಇರುವುದರಿಂದ ಏಳು ದಿನಗಳಿಗೆ ನಾಟಕೋತ್ಸವವನ್ನು ಮಿತಿಗೊಳಿಸಬೇಕಾಗಿತ್ತು. ಅದಕ್ಕಾಗಿ ಕಾರ್ಯಪ್ಪನವರ ನಾಟಕವನ್ನು ಕೈಬಿಡಲಾಯಿತು" ಎನ್ನುತ್ತಾರೆ. ಆದರೆ ಇದನ್ನು ಅಲ್ಲಗಳೆಯುವ ಕಾರ್ಯಪ್ಪನವರು "ಅಡಪರವರು ಕೊಡವ ಭಾಷೆಯ ನಾಟಕ ಮಾಡು ಎಂದು ಹೇಳಿದ ನಂತರವೇ ನಾಟಕದ ನಿರ್ಮಾಣ ಶುರುಮಾಡಲಾಯಿತು. ಅದಕ್ಕಾಗಿ ನಿರ್ದೇಶಕರ ಸಂಭಾವನೆಯ ಸೇರಿದಂತೆ ಎಪ್ಪತ್ತು ಸಾವಿರದಷ್ಟು ಹಣ ಖರ್ಚಾಯಿತು. ನನಗೆ ಒಂದೇ ಒಂದು ಮಾತನ್ನೂ ಸಹ ತಿಳಿಸದೇ ನಮ್ಮ ನಾಟಕವನ್ನು ರದ್ದು ಮಾಡಿದ್ದು ನನಗಂತೂ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಆಘಾತವಾಯಿತು" ಎಂದು ನೊಂದುಕೊಳ್ಳುತ್ತಾರೆ. ಈ ಇಬ್ಬರ ತದ್ವಿರುದ್ದ ಹೇಳಿಕೆಯಲ್ಲಿ ಯಾವುದನ್ನು ನಂಬಬೇಕು ಹಾಗೂ ಬಿಡಬೇಕು ಎನ್ನುವುದಕ್ಕಿಂತ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಿದ್ದವಾದ ನಾಟಕವೊಂದು ಪ್ರದರ್ಶನಗೊಳ್ಳದೇ ಹೋಯಿತಲ್ಲಾ ಎನ್ನುವುದೇ ಬೇಸರದ ಸಂಗತಿ. ಯಾವುದೋ ಕಾಣದ ಕೈಗಳ ರಾಜಕೀಯಕ್ಕೆ ನಾಟಕವೊಂದು ಬಲಿಯಾಯ್ತಲ್ಲಾ ಎನ್ನುವುದೇ ಆತಂಕದ ವಿಷಯ. ಈಗ ಆಗಿದ್ದು ಆಗಿ ಹೋಯಿತು. ಮೊದಲು ಕಾರ್ಯಪ್ಪ ಹಾಗೂ ಅವರ ರಂಗತಂಡದವರಿಗೆ ಸಾಂತ್ವನ ಹೇಳಿ ಸಮಾಧಾನಗೊಳಿಸುವುದು ರಂಗನಿರಂತರದ ಸಂಘಟಕರ ಮೊದಲ ಕರ್ತವ್ಯವಾಗಬೇಕು. ಮೊದಲು ಒಪ್ಪಿಗೆ ನೀಡಿ ಆಮೇಲೆ ಹೇಳದೇ ಕೇಳದೇ ನಾಟಕ ರದ್ದು ಮಾಡಿದ್ದರಿಂದ ಮುಂದೆ ನಡೆಯುವ ರಂಗನಿರಂತರದ ಯಾವುದೇ ನಾಟಕೋತ್ಸವದಲ್ಲಿ ಕಾರ್ಯಪ್ಪನವರ 'ಬದಕ್' ನಾಟಕಕ್ಕೆ ಅವಕಾಶಮಾಡಿಕೊಟ್ಟು ಅವರಿಗಾದ ನೋವಿಗೆ ಕಾಂಪನ್ಸೆಟ್ ಮಾಡುವುದುತ್ತುಮ.  



ಸಿಜಿಕೆ
ಒಟ್ಟಾರೆಯಾಗಿ ಸಿಜಿಕೆ ಕಟ್ಟಿದ ರಂಗನಿರಂತರದಲ್ಲಿ ಸಿಜಿಕೆ ಆಶಯಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ರಂಗಕಾರ್ಯಗಳು ನಡೆಯುತ್ತಿರುವುದು ವಿಪರ್ಯಾಸ. ಇದರಲ್ಲಿ ಸಿಜಿಕೆಯವರ ತಪ್ಪೂ ಇದೆಯಾ? ಹೌದು! ಸಿಜಿಕೆಯವರು ಅನೇಕ ಕಲಾವಿದರನ್ನು ಹಾಗೂ ನೇಪತ್ಯ ರಂಗಕರ್ಮಿಗಳ ಒಂದು ಗುಂಪನ್ನೇ ಬೆಳೆಸಿದರು. ಆದರೆ ನಾಯಕತ್ವದ ಗುಣಗಳಿರುವ ರಂಗ ಸಂಘಟಕರನ್ನು ವೈಚಾರಿಕ ದೃಷ್ಟಿಕೋನದಲ್ಲಿ ಬೆಳೆಸಲಿಲ್ಲ ಎನ್ನುವುದು ರೀತಿಯ ವಿಫಲ ರಂಗೋತ್ಸವ ಸಾಬೀತು ಪಡಿಸುತ್ತದೆ. ಸಿಜಿಕೆ ರಂಗನಿರಂತರದ ಮೆದುಳಾಗಿದ್ದರೆ ಅವರ ಅನುಯಾಯಿಗಳೆಲ್ಲಾ ಕೈಕಾಲುಗಳಾಗಿ ಅವರು ಹೇಳಿದಂತೆ ಕೆಲಸ ಮಾಡುತ್ತಿದ್ದರು. ಈಗಲೂ ಸಿಜಿಕೆ ಅನುಯಾಯಿಗಳು ಕಾರ್ಯಕರ್ತರಾಗಿ ಬೇಕಾದ್ದೆಲ್ಲಾ ಕೆಲಸಗಳನ್ನು ಮಾಡುವ ಸಾಮರ್ಥ್ಯವಿರುವವರಿದ್ದಾರೆ, ಆದರೆ ವೈಚಾರಿಕ ಮೆದುಳಾಗಿ ಎಲ್ಲವನ್ನೂ ದೂರದೃಷ್ಟಿತನದಿಂದ ನಿಯಂತ್ರಿಸುವ ನಾಯಕತ್ವ ರಂಗನಿರಂತರದ ಕೊರತೆಯಾಗಿರುವಂತಿದೆ. ಆದ್ದರಿಂದಲೇ ಮೆದುಳನ್ನು ಬೇರೆಕಡೆಯಿಂದ ಆಮದು ಮಾಡಿಕೊಂಡು ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸುವ ಅನಿವಾರ್ಯತೆಗೆ ರಂಗನಿರಂತರ ಇಂದು ಶರಣಾಗಿದೆ. ಎರವಲು ಮೆದುಳಿನ ವಿಚಾರಧಾರೆಯನ್ನು ಆಧರಿಸಿ ರಂಗೋತ್ಸವದ ರೂಪರೇಷೆಗಳು ನಿರ್ದೇಶಿಸಲ್ಪಡುತ್ತವೆ.

ಹೀಗಾಗಿ ಮೊದಲು ರಂಗನಿರಂತರವು ತನ್ನದೇ ಆದ ಥಿಂಕ್ಟ್ಯಾಂಕನ್ನು ಹುಡುಕಿಕೊಳ್ಳಬೇಕಾಗಿದೆ. ಸಿಜಿಕೆ ನಾಟಕೋತ್ಸವದ ಹಿಂದಿರುವ ಉದ್ದೇಶ ಆಶಯವನ್ನು ನಿರ್ಧರಿಸಬೇಕಿದೆ. ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಬಹುದಾದ ನಾಟಕಗಳ ಕ್ವಾಲಿಟಿ ವೃತ್ತಿಪರತೆ ಹಾಗೂ ವೈಶಿಷ್ಟ್ಯತೆಗಳ ಕುರಿತು ತಲಸ್ಪರ್ಷಿ ವಿಚಾರಣೆಮಾಡಿ ಅತ್ಯುತ್ತಮವಾದದ್ದನ್ನು ಆಯ್ಕೆಮಾಡಬೇಕಿದೆ. ರಾಷ್ಟ್ರೀಯ ರಂಗೊತ್ಸವವೆಂದು ಅಪಾರ ನಿರೀಕ್ಷೆಗಳನ್ನಿರಿಸಿಕೊಂಡು ಐವತ್ತು ರೂಪಾಯಿ ಕೊಟ್ಟು ನಾಟಕ ನೋಡಲು ಬರುವ ರಂಗಾಸಕ್ತ ಪ್ರೇಕ್ಷಕರಿಗೆ  ನಿರಾಸೆ ಆಗದ ರೀತಿಯಲ್ಲಿ ನಾಟಕಗಳ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಜಾತಿಯ ಸೋಂಕು ರಂಗೋತ್ಸವಕ್ಕೆ ಯಾವುದೇ ರೀತಿಯಲ್ಲಿ ಸೋಂಕದಂತೆ ಎಚ್ಚರವಹಿಸಬೇಕಾಗಿದೆ. ಸಿಜಿಕೆ ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದ ರಂಗದಲ್ಲಾಳಿವರ್ಗವನ್ನು ರಂಗನಿರಂತರದಿಂದ ಒಂದು ಅಂತರದಲ್ಲಿಟ್ಟುಕೊಂಡೇ ಕಾರ್ಯಕ್ರಮಗಳನ್ನು ರೂಪಿಸುವುದು ಸಿಜಿಕೆಯ ಆಶಯಕ್ಕೆ ಕೊಡುವ ಮರ್ಯಾದೆಯಾಗಿದೆ. ಸಿಜಿಕೆ ಶತಾಯ ಗತಾಯ ವಿರೋಧಿಸಿದ ರಂಗವಿರೋಧಿಗಳನ್ನು ಸೇರಿಸಿಕೊಂಡು ರಂಗೋತ್ಸವವನ್ನು ರೂಪಿಸಿರುವುದು ಸಿಜಿಕೆಗೆ ಮಾಡುವ ಅವಮರ್ಯಾದೆಯಾಗಿದೆ. ಏನಾದರೂ ಆಗಲಿ ಯಾವುದೇ ಕಾರಣಕ್ಕೂ ಸಿಜಿಕೆ ಆಶಯಕ್ಕೆ ಎಲ್ಲೂ ಎಳ್ಳಷ್ಟೂ ವ್ಯತ್ಯಯ ಬಾರದಂತೆ ರಂಗನಿರಂತರ ತನ್ನ ರಂಗಚಟುವಟಿಕೆಗಳನ್ನು ರೂಪಿಸಿದರೆ ಮಹಾನ್ ರಂಗಚೇತನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ರಂಗನಿರಂತರವೂ ಸಹ ಸ್ವಾವಲಂಭಿಯಾಗಿ ಸದೃಢವಾಗಿ ಬೆಳೆಯುತ್ತದೆ. ನಿಟ್ಟಿನಲ್ಲಿ ಡಿ.ಕೆ.ಚೌಟರವರು, ಶಶಿಧರ್ ಅಡಪ ಹಾಗೂ ರಂಗನಿರಂತರದ ಎಲ್ಲಾ ಪದಾಧಿಕಾರಿಗಳು ಹಾಗೂ ಸಿಜಿಕೆಯ ಅಭಿಮಾನಿಗಳು ಆಲೋಚಿಸಬೇಕಿದೆ. ಸಿಜಿಕೆ ಹೆಸರಿನ ಬಳಕೆಗಿಂತ ಸಿಜಿಕೆ ಆಶಯಗಳ ಅನುಷ್ಠಾನಕ್ಕೆ ಮೊಟ್ಟಮೊದಲ ಆದ್ಯತೆ ಕೊಡಬೇಕಾಗಿದೆ. ರಂಗಭೂಮಿ ಸಕಾರಾತ್ಮಕವಾಗಿ ನಿರಂತರವಾಗಬೇಕಿದೆ. ರಂಗನಿರಂತರ ಕನ್ನಡ ರಂಗಭೂಮಿಯ ಶಕ್ತಿಯಾಗಿ ಬೆಳೆಯಬೇಕಿದೆ. ಸುಸ್ಥಿರ ರಂಗಭೂಮಿಯ ನಿರ್ಮಾಣದತ್ತ ರಂಗನಿರಂತರ ನಾಯಕತ್ವ ಕೊಡಬೇಕಿದೆ.    


ನಾಟಕ ಅಕಾಡೆಮಿಯ ಅದಕ್ಷ ಶೇಖ ಮಾಸ್ತರ್
ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅನುಪಸ್ಥಿತಿ ಪ್ರಧಾನವಾಗಿ ಕಂಡುಬಂದಿತು. ಯಾಕೆಂದರೆ ರಂಗಚಟುವಟಿಕೆಗಳನ್ನು ಪ್ರೋತ್ಸಹಿಸಲೆಂದೇ ಇರುವ ಸರಕಾರಿ ಅನುದಾನಿತ ಸಂಸ್ಥೆಯಾದ ನಾಟಕ ಅಕಾಡೆಮಿ ಸ್ವತಃ ಇಂತಹ ರಾಷ್ಟ್ರೀಯ ಅಂತರಾಷ್ಟ್ರೀಯ ನಾಟಕೋತ್ಸವಗಳನ್ನು ಆಯೋಜಿಸಬೇಕಿತ್ತು. ಅದನ್ನು ಮಾಡುವ ತಾಕತ್ತು ಹಾಗೂ ಇಚ್ಚಾಶಕ್ತಿ ಈಗಿರುವ ನಾಟಕ ಅಕಾಡೆಮಿಯ ಅಧ್ಯಕ್ಷರಿಗಾಗಲೀ ಇಲ್ಲವೆ ಸದಸ್ಯರಿಗಾಗಲೀ ಇಲ್ಲವೇ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ತಮ್ಮ ಕೈಲಿ ಆಗದ್ದನ್ನು ಬೇರೆಯವರು ಮಾಡುತ್ತಿದ್ದಾರೆಂದರೆ ಅವರಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಬೇಕಾದದ್ದು ನಾಟಕ ಅಕಾಡೆಮಿಯ ಪ್ರಥಮ ಕರ್ತವ್ಯವಾಗಿದೆ. ಆರ್ಥಿಕವಾಗಿ ಹೋಗಲಿ ನೈತಿಕವಾಗಿಯಾದರೂ ಸಪೋರ್ಟ ಮಾಡಬೇಕಾಗಿತ್ತು. ಅದೂ ಆಗದಿದ್ದರೆ ರಂಗೋತ್ಸವದಲ್ಲಿ ಅಕಾಡೆಮಿಯ ಬೆಂಗಳೂರು ನಿವಾಸಿ ಪದಾಧಿಕಾರಿಗಳಾದರೂ ಭಾಗವಹಿಸಿ ತಮ್ಮ ಉಪಸ್ಥಿತಿಯನ್ನು ತೋರಬೇಕಾಗಿತ್ತು. ಆದರೆ ಅಕಾಡೆಮಿಯೆನ್ನುವುದು ಸೂತಕದ ಮನೆಯಾಗಿದೆ ಎನ್ನುವುದು ಮತ್ತೆ ಸಾಬೀತಾಯಿತು. ನಾಟಕ ಅಕಾಡೆಮಿಯನ್ನ ಕ್ಯಾರೆ ಅನ್ನದ ಸಿಜಿಕೆ ರಂಗೋತ್ಸವದ ಆಯೋಜಕರು ಯಾವೊಂದು ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸದೇ ನಿರ್ಲಕ್ಷಿಸಿಬಿಟ್ಟಿದ್ದರಲ್ಲಿ ಅತಿಷಯವೇನೂ ಇಲ್ಲ. ಅಕಾಡೆಮಿಯ ಅಧ್ಯಕ್ಷ ಶೇಖ ಮಾಸ್ತರ್ ಮತ್ತು ಅವರ ಬಾಲದಂತಿರುವ ಅಕಾಡೆಮಿಯ ಕೋಆಪ್ಟ್ ಸದಸ್ಯ ಗುಡಿಹಳ್ಳಿ ಇಬ್ಬರೂ ಸಿಜಿಕೆ ರಂಗೋತ್ಸವದ ಉದ್ಘಾಟನೆಯ ದಿನ ಬಂದು ಮೂಲೆಯಲ್ಲಿ ಮೂಕಪ್ರೇಕ್ಷಕರಾಗಿ ಕುಳಿತಿದ್ದರೂ ಯಾರೂ ಬಂದು ಅವರನ್ನು ಮಾತಾಡಿಸುವವರೂ ಇರಲಿಲ್ಲ. ಯಾಕೆಂದರೆ ಇವರಾರು ಎನ್ನುವುದೂ ಸಹ ಬಹುತೇಕ ರಂಗಕರ್ಮಿಗಳಿಗೆ ಗೊತ್ತೇ ಇರಲಿಲ್ಲ. ಉದ್ಘಾಟನೆ ಮುಗಿದು ಪ್ರಸನ್ನರವರ ನಾಟಕ ಶುರುವಾಗುವ ಹೊತ್ತಿಗೆ ಇಬ್ಬರೂ ಮಹನೀಯರು ಎದ್ದು ಬಾರನ್ನು ಹುಡುಕಿಕೊಂಡು ಹೋಗಿದ್ದನ್ನು ನೋಡಿದವರಿಗೆ ಅಸಹ್ಯವೆನಿಸಿತು. ನಾಟಕ ಅಕಾಡೆಮಿಯ ಬ್ರಹಸ್ಪತಿಗಳಿಗೆ ನಾಟಕ ಚಟುವಟಿಕೆಗಳಿಗಿಂತ ತಮ್ಮ ವ್ಯಯಕ್ತಿಕ ತೆವಲುಗಳೇ ಮುಖ್ಯವಾದವು ಎಂದರೆ ಇವರು  ನಾಟಕ ಅಕಾಡೆಮಿಯಲ್ಲಿರಲು ಅದೆಷ್ಟು ಯೋಗ್ಯರು ಎನ್ನುವುದೇ ಪ್ರಶ್ನಾರ್ಹ?.  ರಂಗೋತ್ಸವಕ್ಕೆ ವೀಕ್ಷಕರನ್ನಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಆಯ್ದ ರಂಗಕರ್ಮಿಗಳನ್ನು ಆಹ್ವಾನಿಸಲಾಗಿತ್ತು. ಅದರಲ್ಲೂ ಸಹ ಒಬ್ಬನೇ ಒಬ್ಬ ಪ್ರಸ್ತುತ ನಾಟಕ ಅಕಾಡೆಮಿಯ ಸದಸ್ಯನಿರಲಿಲ್ಲ.

ಹೋಗಲಿ ಏಳು ದಿನಗಳ ಕಾಲ ಪ್ರತಿದಿನ ರಂಗಚರ್ಚೆ ಸಂವಾದಗಳಾದವು. ಆದರೆ ಯಾವೊಬ್ಬ ನಾಟಕ ಅಕಾಡೆಮಿಯ ಸದಸ್ಯ ಕೂಡಾ ಮುಖ ತೋರಿಸಲಿಲ್ಲ. ನಾಟಕ ಅಕಾಡೆಮಿಯ ಸದಸ್ಯರಾದ ಡಾ.ಶ್ರೀಪಾದ ಭಟ್ರವರದ್ದೇ ನಿರ್ದೇಶನದ ನಾಟಕ ಕರ್ಣಭಾರ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿತು. ಅದನ್ನು ನೋಡುವುದಕ್ಕೂ ನಾಟಕ ಅಕಾಡೆಮಿಯ ಸದಸ್ಯರುಗಳೂ ದಯೆತೋರಲಿಲ್ಲ. ನಾಟಕ ಅಕಾಡೆಮಿಗೆ ರಂಗಚಟುವಟಿಕೆಗಳೆಂದರೆ ಆಗುವುದಿಲ್ಲವೋ... ಇಲ್ಲವೇ ರಂಗಕರ್ಮಿಗಳಿಗೆ ನಾಟಕ ಅಕಾಡೆಮಿ ಎನ್ನುವುದೊಂದಿದೆ ಎನ್ನುವುದೇ ಮರೆತು ಹೋಗಿದೆಯೋ... ಒಟ್ಟಾರೆಯಾಗಿ ನಾಟಕ ಅಕಾಡೆಮಿಯು ತನ್ನ ಕನಿಷ್ಟ ಜವಾಬ್ದಾರಿಯನ್ನೂ ಸಹ ನಿಭಾಯಿಸಲಾಗದೇ ತನ್ನ ನಿರ್ಲಿಪ್ತತೆಯನ್ನು ಮುಂದುವರೆಸಿದ್ದು ಅಕ್ಷಮ್ಯ. ಸಿಜಿಕೆ ಇದೇ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಅವರ ಹೆಸರಲ್ಲಿ ನಡೆಯುವ ರಂಗೋತ್ಸವದಲ್ಲಿ ಪಾಲ್ಗೊಳ್ಳುವ ಕನಿಷ್ಟ ಸೌಜನ್ಯವೂ ನಾಟಕ ಅಕಾಡೆಮಿಯವರಿಗೆ ಇಲ್ಲವೆಂದಮೇಲೆ, ಅಕಾಡೆಮಿ ಕಛೇರಿಯ ಕೂಗಳತೆಯಲ್ಲೇ ರಂಗೋತ್ಸವ ನಡೆಯುತ್ತಿದ್ದರೂ ಹೋಗಿ ಭಾಗವಹಿಸಿ ಬೆಂಬಲಿಸುವ ಕನಿಷ್ಟ ನೈತಿಕ ಪ್ರಜ್ಞೆಯೂ ಅಕಾಡೆಮಿಯವರಿಗಿಲ್ಲ ಎಂದ ಮೇಲೆ ಅಕಾಡೆಮಿ ಎನ್ನುವುದಾದರೂ ಯಾಕಿರಬೇಕು? ಇದೇ ರೀತಿ ನಾಟಕ ಅಕಾಡೆಮಿಯ ಅಧ್ಯಕ್ಷ ಸದಸ್ಯರು ರಂಗನಿರ್ಲಕ್ಷವನ್ನು ಮುಂದುವರೆಸಿದರೆ ನಾಟಕ ಅಕಾಡೆಮಿಯನ್ನೇ ಬರಕಾಸ್ತಮಾಡಿ ಎಂಬ ಚಳುವಳಿಯನ್ನು ರಂಗಕರ್ಮಿಗಳು ಹಮ್ಮಿಕೊಳ್ಳುವ ಕಾಲವೂ ದೂರವಿಲ್ಲ. ಅಂತಹ ಒತ್ತಡವೊಂದು ಬರುವ ಮುಂಚೆಯೇ ನಾಟಕ ಅಕಾಡೆಮಿಯ ಅಧ್ಯಕ್ಷರಾದಿಯಾಗಿ ಸದಸ್ಯರುಗಳು ಎಚ್ಚೆತ್ತುಕೊಂಡು ರಂಗಚಟುವಟಿಕೆಗಳಿಗೆ ನಿರಂತರವಾಗಿ ಸ್ಪಂದಿಸುವುದನ್ನು ಕಲಿತುಕೊಳ್ಳಬೇಕು. ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಗೌರವಯುತವಾಗಿ ನಿರ್ಗಮಿಸಬೇಕು. ಇಲ್ಲವಾದರೆ ಸಿಜಿಕೆಯಂತವರು ತಮ್ಮ ಪರಿಶ್ರಮದಿಂದ ಕ್ರಿಯಾಶೀಲವಾಗಿ ಬೆಳೆಸಿದ ನಾಟಕ ಅಕಾಡೆಮಿ ಸೂತಕದ ಮನೆಯಾಗಿ, ಕನ್ನಡ ರಂಗಭೂಮಿಗೆ ಕಳಂಕವಾಗಿ ರಂಗಇತಿಹಾಸದಲ್ಲಿ ದಾಖಲಾಗುವುದರಲ್ಲಿ ಸಂದೇಹವಿಲ್ಲ

                                -ಶಶಿಕಾಂತ ಯಡಹಳ್ಳಿ           
                    
           
                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ