'ಯಂತ್ರ ರಾಕ್ಷಸ ಮರ್ಧನ'ದಲ್ಲಿ ಅಪ್ರಾಯೋಗಿಕ ಆದರ್ಶವಾದ:
ಹೆಗ್ಗೋಡಿನ ಪ್ರಸನ್ನರವರು ತಮ್ಮ ದೇಸಿತನದ ಆದರ್ಶ ಪರಿಕಲ್ಪನೆಯನ್ನು ನಾಟಕ ರೂಪದಲ್ಲಿ ರಚಿಸಿ ನಿರ್ದೇಶಿಸಿದ್ದಾರೆ. ‘ಯಂತ್ರಗಳನ್ನು ಕಳಚೋಣ ಬನ್ನಿ’ ಎನ್ನುವುದು ಪ್ರಸನ್ನರವರ ಪ್ರತಿಪಾದನೆಯಾಗಿದ್ದು ಇದಕ್ಕೆ ಪೂರಕವಾಗಿ ‘ಯಂತ್ರ ರಾಕ್ಷಸ ಮರ್ಧಿನಿ’ ಎನ್ನುವ ಈ ನಾಟಕದಲ್ಲಿ ಯಂತ್ರಗಳಿಂದಾಗುವ ಅಪಾಯಗಳು ಹಾಗೂ ಅದರ ಅವಲಂಬನೆಯಿಂದ ಹೊರಬರುವ ಮಾರ್ಗೊಪಾಯಗಳನ್ನು ನೋಡುಗರಿಗೆ ಮನದಟ್ಟುಮಾಡಲು ಪ್ರಯತ್ನಿಸಿದ್ದಾರೆ. ಸಿಜಿಕೆ ಅಂತರಾಷ್ಟ್ರೀಯ ರಂಗೋತ್ಸವದ ಮೊದಲ ದಿನವಾದ 2015 ಏಪ್ರಿಲ್ 5 ರಂದು ‘ಸಂಸ’ ಬಯಲು ರಂಗ ಮಂದಿರದಲ್ಲಿ ಪ್ರದರ್ಶನಗೊಂಡ ಈ ನಾಟಕವನ್ನು
‘ರಂಗನಿರಂತರ’ ರಂಗತಂಡವು ನಿರ್ಮಿಸಿದೆ.
ಇದನ್ನು ಒಂದು ನಾಟಕ ಎನ್ನುವುದಕ್ಕಿಂತಲೂ ಯಕ್ಷಗಾನ ಪ್ರಸಂಗ ಎನ್ನಬಹುದಾಗಿದೆ. ಎಲ್ಲಾ ಪಾರ್ಮೆಟ್ ಯಕ್ಷಗಾನದ ಮಾದರಿಯಲ್ಲೇ ಇದ್ದು ಸಬ್ಜೆಕ್ಟ್ ಮಾತ್ರ ಸಮಕಾಲೀನ ಸಮಸ್ಯೆಯನ್ನು ಚರ್ಚಿಸುತ್ತದೆ. ನಾಟಕೀಯ ಅಂಶಗಳು ಕಡಿಮೆಯಿದ್ದು ಸಂದೇಶಾತ್ಮಕ ನೆಲೆಯಲ್ಲಿ ಈ ಯಕ್ಷಗಾನ ಪ್ರಹಸನವನ್ನು ಪ್ರಸೆಂಟ್ ಮಾಡಲಾಗಿದೆ.
ಆಕೆ ಹಳ್ಳಿಯ ಹೆಂಗಸು ಹೆಸರು ಸಣ್ಣತಿಮ್ಮಿ. ಯಂತ್ರಗಳನ್ನು ಬಳಸದೇ ಸರಳವಾಗಿ ಬದುಕುತ್ತಿರುವ ಆಕೆ ಯಂತ್ರರಾಕ್ಷಸನಿಗೆ ಬಲು ದೊಡ್ಡ ಸವಾಲು. ಯಂತ್ರ ಮೋಹಕ್ಕೊಳಗಾಗದೇ ನೆಮ್ಮದಿಯಾಗಿ ಬದುಕುತ್ತಿರುವ ಸಣ್ಣತಿಮ್ಮಿಯನ್ನು ಹೇಗಾದರೂ ಮಾಡಿ ಯಂತ್ರಗಳನ್ನು ಬಳಸುವಂತೆ ಮಾಡಲು ಯಂತ್ರರಾಕ್ಷಸ ಏನೇನೆಲ್ಲಾ ಆಸೆ ಆಮಿಷಗಳನ್ನು ತೋರಿಸಿದರೂ ಆಕೆ ಜಗ್ಗುವುದಿಲ್ಲ. ಒತ್ತಡಗಳಿಗೆ ಬಗ್ಗುವುದಿಲ್ಲ. ಕೊನೆಗೆ ಯಂತ್ರರಾಕ್ಷಸನೇ ಸೋತು ಸಣ್ಣತಿಮ್ಮಿಗೆ ಶರಣಾಗುವ ಮೂಲಕ ಪ್ರಸನ್ನನವರು ತಮ್ಮ ಪ್ರತಿಪಾದನೆಯಲ್ಲಿ ಗೆಲುವು ಸಾಧಿಸುತ್ತಾರೆ.
ಇಲ್ಲಿ ಸಣ್ಣತಿಮ್ಮಿಯ ಪಾತ್ರ ಪ್ರಸನ್ನನವರ ಆಶಯದ ಪ್ರತಿರೂಪವಾಗಿದೆ. ಇಡೀ ನಾಟಕ ಜಾಗತೀಕರಣದ ಕಾಲಘಟ್ಟದಲ್ಲಿ ಅವಾಸ್ತವವೆನಿಸುವ ಆದರ್ಶವಾದವೊಂದರ ರೂಪಕವಾಗಿದೆ. ಈ ರೂಪಕದಲ್ಲಿ ಪ್ರತಿಪಾದಿಸಿದಂತೆ ಯಂತ್ರಗಳ ಮೇಲಿನ ಅವಲಂಬನೆಗಳಿಂದ ಮುಕ್ತವಾಗುವಂತಹ ಸಮಾಜ ನಿರ್ಮಾಣ ನಿಜಕ್ಕೂ ಬಲು ಸುಂದರವಾಸ ಕಲ್ಪನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯಸಾಧುವೆಂಬುದೇ ಪ್ರಶ್ನೆ. ಬಹುಷಃ ಈ ನಾಟಕ ನೋಡಿದವರು, ಮಾಡಿದವರು, ಮಾಡಿಸಿದವರು ಎಲ್ಲರೂ ಸಹ ಈ ನಾಟಕ ವಿರೋಧಿಸುವ ಮೊಬೈಲ್, ಇಂಟರನೆಟ್, ಈಮೇಲ್ ಬಳಕೆದಾರರೇ ಆಗಿದ್ದಾರೆ. ಪ್ರಸನ್ನನವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಪ್ರತಿ ದಿನ ಒಂದಿಲ್ಲೊಂದು ಯಂತ್ರಗಳ ಫಲಾನುಭವಿಗಳಾಗಿದ್ದಾರೆ. ನೋಡುಗರಲ್ಲಿ ಆ ಕ್ಷಣದ ಭಾವತೀವ್ರತೆಯನ್ನು ಈ ನಾಟಕ ಸೃಷ್ಟಿಸಿದರೂ ತೀವ್ರ ಬದಲಾವಣೆಯನ್ನೇನೂ ತರಲಾರದು. ಈ ನಾಟಕ ಯಾರನ್ನೇ ಆಗಲಿ ಬದಲಾವಣೆ ಮಾಡಲು ಸಾಧ್ಯವಿಲ್ಲವಾದರೂ ನೋಡುಗರನ್ನು ಚಿಂತನೆಗೆ ತೊಡಗಿಸುವಲ್ಲಿ ಸಫಲವಾಗಿದೆ.
ಈ ಪ್ರಹಸನದ ಆಶಯವನ್ನು ಭಾಗಷಃ ಒಪ್ಪಬಹುದಾದರೂ ಸಂಪೂರ್ಣವಾಗಿ ಒಪ್ಪಲಾಗದು. ಯಾಕೆಂದರೆ ಯಾವುದೇ ಯಂತ್ರ ಇಲ್ಲವೇ ತಂತ್ರಜ್ಞಾನವನ್ನು ಸಮರ್ಥವಾಗಿ ನಿಯಂತ್ರಿತವಾಗಿ ಬಳಸಿದರೆ ಅದರ ಪ್ರಯೋಜನವನ್ನು ಸಮರ್ಪಕವಾಗಿ ಪಡೆಯಬಹುದಾಗಿದೆ. ಕಂಪ್ಯೂಟರ್ ಒಂದು ಯಂತ್ರವಾದ್ದರಿಂದ ಅದನ್ನು ಬಳಸುವುದಿಲ್ಲ ಎಂದರೆ ನಾವಿನ್ನೂ ಒತ್ತು ಮಳೆಗಳನ್ನು ಜೋಡಿಸಿ ಮುದ್ರಿಸಬೇಕಾಗಿತ್ತು.ಯಂತ್ರಗಳ ಬಳಕೆಯನ್ನು ವಿರೋಧಿಸುವ ಪ್ರಸನ್ನರವರು ಬರೆದ ಪ್ರತಿಯೊಂದು ಪುಸ್ತಕಗಳೂ ಸಹ ಇದೇ ಕಂಪ್ಯೂಟರ್ ಮೂಲಕವೇ ಡಿಟಿಪಿಗೊಳಗಾಗಿ ಯಂತ್ರಗಳಲ್ಲೇ ಮುದ್ರಣವಾದವುಗಳಾಗಿವೆ. ಉಪಗ್ರಹಗಳನ್ನು ನಿರಾಕರಿಸಿದರೆ ಪ್ರಕೃತಿ ವಿಕೋಪಗಳ ಕುರಿತು ಮಾಹಿತಿಯೇ ಸಿಗದೇ ಅದೆಷ್ಟೋ ಅವಗಡಗಳಾಗಬಹುದಾಗಿದೆ. ಕೃಷಿಯಲ್ಲಿ ಯಂತ್ರಗಳನ್ನು ಬಳಸುವುದಿಲ್ಲ ಎಂದು ಹಠ ಹಿಡಿದರೆ ಹುಟ್ಟುವ ಜನಸಂಖ್ಯೆಗನುಗುಣವಾಗಿ ಆಹಾರವನ್ನು ಬೆಳೆಯುವುದಾದರೂ ಹೇಗೆ?
ಸಂವಹನ, ಪ್ರಸರಣ ಹಾಗೂ ಉತ್ಪಾದನೆ ಮುಂತಾದವುಗಳಿಗೆ ಯಂತ್ರಗಳ ಬಳಕೆ ಅತ್ಯಗತ್ಯವಾಗಿದೆ. ಪ್ರತಿಯೊಂದು ಯಂತ್ರವನ್ನೂ ಸಹ ಸುಖಲೋಲುಪತೆಗೂ ಬಳಸಬಹುದು ಹಾಗೂ ಅನಿವಾರ್ಯತೆಗಳ ಈಡೇರಿಕೆಗೂ ಬಳಸಬಹುದಾಗಿದೆ. ಯಂತ್ರಗಳ ಅತಿಯಾದ ದುರುಪಯೋಗವನ್ನು ವಿರೋಧಿಸಿ ಅತ್ಯಗತ್ಯವೆನಿಸುವ ಕೆಲಸಗಳಿಗೆ ಉಪಯೋಗಿಸಬೇಕಿದೆ. ಯಂತ್ರಗಳ ಬಳಕೆ ನಿಲ್ಲಿಸಿದರೆ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆಗಳೇ ಜಾಸ್ತಿಯಾಗುತ್ತವೆ. ಜೀವರಕ್ಷಕವಾಗಿ ಪ್ರಯೋಜನಕ್ಕೆ ಬರುವ ಯಂತ್ರಗಳನ್ನು ವಿರೋಧಿಸಲಾಗದು. ಯಂತ್ರಗಳನ್ನು ಸಂಪೂರ್ಣ ತ್ಯಜಿಸಿ ಬದುಕಲು ಸಾಧ್ಯವಿಲ್ಲವಾದರೂ ಈ ನಾಟಕದ ಕೊನೆಗೆ ಹೇಳಿದ ಹಾಗೆ ಯಂತ್ರಗಳೇ ಮನುಷ್ಯನನ್ನು ನಿಯಂತ್ರಿಸುವ ಹಾಗಾಗಬಾರದು ಎನ್ನುವ ಆಶಯವನ್ನು ಒಪ್ಪಬಹುದಾಗಿದೆ. ಈ
ನಾಟಕದಲ್ಲಾದ ಒಂದು ವಿಪರ್ಯಾಸವೇನೆಂದರೆ ತನ್ನನ್ನು ವಿರೋಧಿಸಿದ ಸಣ್ಣತಿಮ್ಮಿಯನ್ನು ಸಂಹರಿಸಲು ಯಂತ್ರ
ರಾಕ್ಷಸ ಯಂತ್ರಪ್ರಣೀತ ಶಸ್ತ್ರಾಸ್ತ್ರಗಳನ್ನು ಬಿಟ್ಟು ಯಂತ್ರವಲ್ಲದ ಕತ್ತಿಯನ್ನು ಬಳಸುವುದು.
ಪ್ರಸನ್ನನವರ ಐಡಿಯಾಲಾಜಿಯ ವಾಸ್ತವತೆ ಹಾಗೂ ಅವಾಸ್ತವತೆಯನ್ನು ಪಕ್ಕಕ್ಕಿಟ್ಟು ರಂಗಪ್ರಯೋಗ ಸಾಧ್ಯತೆಗಳನ್ನು ಗಮನಿಸಿದರೆ, ತಮ್ಮ ಯಂತ್ರವಿರೋಧವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನವೇ ಅದ್ಬುತವಾಗಿದೆ. ಮಾಮೂಲಿ ನಾಟಕ ರೂಪದಲ್ಲಿ ಈ ವಸ್ತುವನ್ನು ಕಟ್ಟಿಕೊಟ್ಟಿದ್ದರೆ ಬೀದಿ ನಾಟಕವಾಗುತ್ತಿತ್ತು. ಯಾಕೆಂದರೆ ಈ ಪ್ರಹಸನದಲ್ಲಿ ಚರ್ಚಿಸಲಾದ ವಸ್ತುವೇ ಸಂದೇಶಾತ್ಮಕವಾಗಿದೆ ಹಾಗೂ ಪ್ರತಿಭಟನಾತ್ಮಕವಾಗಿದೆ. ಆದರೆ ಈ ಘೋಷನಾತ್ಮಕತೆಯನ್ನು ಕಲಾತ್ಮಕವಾಗಿ ಹೇಳಲು ಯಕ್ಷಗಾನ ಕಲಾಪ್ರಕಾರವನ್ನು ಬಳಸಲಾಗಿದೆ. ಆ ಬಣ್ಣಬಣ್ಣದ ಯಕ್ಷವೇಷ, ಕುಣಿತ, ಚಲನೆ, ಮಾತುಗಾರಿಕೆಗಳು ನೋಡುಗರನ್ನು ಆಕರ್ಷಿಸುತ್ತವೆ. ಜೊತೆಗೆ ಎದೆಬಡಿತ ಹೆಚ್ಚಿಸುವಂತಹ ಚಂಡೆ ಮದ್ದಲೆ ವಾದ್ಯಗಳು ಹಾಗೂ ಭಾಗವತರ ವಿಶಿಷ್ಟವಾದ ಗಾಯನ ಶೈಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತವೆ. ವಿರಾಟರೂಪದ ಯಕ್ಷ ಖಳಪಾತ್ರದ ಜೊತೆಗೆ ಪಂಚ್ ಕೊಡುವ ಮಾತುಗಾರಿಕೆಯ ಹಾಸ್ಯಪಾತ್ರವನ್ನು ಜೊತೆಸೇರಿಸಿ ಪ್ರೇಕ್ಷಕರಿಗೆ ಬರಪೂರ್ ಮನರಂಜನೆಯನ್ನು ಕೊಟ್ಟಿರುವುದರಿಂದ ಇಡೀ ನಾಟಕ ನೋಡಿಸಿಕೊಂಡು ಹೋಗುತ್ತದೆ. ಹಾಗೂ ಸಣ್ಣತಿಮ್ಮಿ ಪಾತ್ರದ ಮಾರ್ಮಿಕ ಮಾತುಗಳು ಕೇಳುಗರಲ್ಲಿ ಕಚಗುಳಿ ಇಡುತ್ತವೆ. ನಾಟಕದ ವಸ್ತು ವಿಷಯಕ್ಕಿಂತ ಅದರೆ ನಿರೂಪನೆ ಮಾಡಿದ ಕ್ರಮವೇ ಸೊಗಸಾಗಿದೆ. ರಂಜನೆಯ ಮೂಲಕ ಬೋಧನೆಯನ್ನು ಹೇಳುವಲ್ಲಿ ‘ಯಂತ್ರ ರಾಕ್ಷಸ ಮರ್ಧಿನಿ’ ನಾಟಕ ಯಶಸ್ವಿಯಾಗಿದೆ.
ಯಕ್ಷಗಾನ ಪ್ರಸಂಗಗಳಲ್ಲಿ ಹಾಡು ಸಂಗೀತಕ್ಕೆ ಕೊರತೆ ಎಲ್ಲಿದೆ. ಈ ‘ಯಂತ್ರ ರಾಕ್ಷಸ..” ದಲ್ಲೂ ಸಹ ಹಾಡುಗಳು ತುಂಬಾ ಪ್ರಾಸಂಗಿಕವಾಗಿವೆ. ಹಾಡು ಸಂಗೀತಕ್ಕೆ ತಕ್ಕಂತೆ ಯಕ್ಷಪಾತ್ರಗಳ ಕುಣಿತ ಮೇಳೈಸಿ ರಂಗದಂಗಳದಲ್ಲಿ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ. ಒಂದು ಸಂತಸದ ಸಂಗತಿ ಏನೆಂದರೆ.. ಯಕ್ಷಗಾನದ ಭಾಗವತರ ಹಾಡುಗಳು ಕರಾವಳಿ ಕನ್ನಡಿಗರನ್ನು ಹೊರತು ಪಡಿಸಿ ಬೇರೆ ಪ್ರದೇಶದವರಿಗೆ ಪೂರ್ಣಪ್ರಮಾಣದಲ್ಲಿ ಅರ್ಥವಾಗುವುದು ಸುಲಭಸಾಧ್ಯವಲ್ಲ. ಆದರೆ.. ಈ ಯಂತ್ರ ರಾಕ್ಷಸ ಯಕ್ಷ ಪ್ರಸಂಗದಲ್ಲಿ ಭಾಗವತರ ಹಾಡು ಹಾಗೂ ಮಾತುಗಳು ಸ್ಪಷ್ಪವಾಗಿ ಅರ್ಥವಾಗುತ್ತಿದ್ದು ಎಲ್ಲಾ ಪ್ರದೇಶದಿಂದ ಬಂದ ಕನ್ನಡಿಗರಿಗೆ ಸುಲಭಗ್ರಾಹ್ಯವಾಗಿದ್ದು ಕಮ್ಯೂನಿಕೇಟ್ ಮಾಡುವುದರಲ್ಲಿ ಈ ಪ್ರಹಸನ ಯಶಸ್ವಿಯಾಗಿದೆ. ಬೆಳಕಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇದ್ದಿರಲಿಲ್ಲ ಹಾಗೂ ಈ ಪ್ರಸಂಗಕ್ಕೆ ಅದರ ಅಗತ್ಯವೂ ಇರಲಿಲ್ಲ. ಯಕ್ಷಗಾನದಲ್ಲಿ ವಿಶೇಷ ರಂಗವಿನ್ಯಾಸದ ಅಗತ್ಯವೂ ಇಲ್ಲವಾದ್ದರಿಂದ ಇಲ್ಲಿಯೂ ಕೂಡಾ ಯಕ್ಷಗಾನದ ಮಾದರಿಯಲ್ಲೇ ಭಾಗವತರ ಎತ್ತರದ ಟೇಬಲ್ ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಸೆಟ್ ಬಳಕೆಯಾಗಿಲ್ಲ ಹಾಗೂ ಈ ಕಲಾಪ್ರಕಾರಕ್ಕೆ ಅದು ಅವಶ್ಯಕವೂ ಅಲ್ಲ. ಆದರೆ ನಾಟಕದಲ್ಲಿ ಬಳಸಲಾಗುವ ರಂಗತಂತ್ರಗಳು ಇಲ್ಲಿ ಬಳಕೆಯಾಗಿಲ್ಲದಿದ್ದರೂ ಹಾಡು, ಸಂಗೀತ, ಅಭಿನಯ ಹಾಗೂ ಕುಣಿತಗಳು ರಂಗತಂತ್ರಗಳ ಕೊರತೆ ಕಾಣದಂತೆ ವೈಭವೀಕರಣಗೊಂಡಿವೆ.
ಯಾವುದೇ ಯಕ್ಷಗಾನ ಜಾನಪದ ಕಲಾ ಪ್ರಕಾರದಲ್ಲಿ ಜನರನ್ನು ಅತೀ ಹೆಚ್ಚು ರಂಜಿಸುವುದು ಖಳಪಾತ್ರಗಳು ಹಾಗೂ ಹಾಸ್ಯ ಪಾತ್ರಗಳು. ಈ ನಾಟಕದಲ್ಲಿ ಈ ಎರಡು ಪಾತ್ರಗಳನ್ನೇ ಪ್ರಮುಖವಾಗಿ ಎಸ್ಟ್ಯಾಬ್ಲಿಷ್ ಮಾಡಿದ್ದರಿಂದ ಪ್ರೇಕ್ಷಕರ ರಂಜನೆಗೆ ಕೊರತೆ ಇರಲಿಲ್ಲ. ಹಿಮ್ಮೇಳದಲ್ಲಿ ಉದಯ ಜ್ಯೋತಿಗುಡ್ಡರವರ ಭಾಗವತಿಕೆ, ರಾಘವೇಂದ್ರ ಬಿಡುವಾಳರವರ ಚಂಡೆ ಹಾಗೂ ಸುರೇಂದ್ರರವರ ಮದ್ದಲೆಯ ಜುಗುಲ್ಬಂಧಿಯನ್ನು ಈ ನಾಟಕ ನೋಡಿಯೇ ಅನುಭವಿಸಬೇಕು. ರಾಧಾಕೃಷ್ಣ ಉರಾಳರು ಯಂತ್ರ ರಾಕ್ಷಸನಾಗಿ ಅದ್ಭುತ ಕುಣಿತದ ಜೊತೆಗೆ ಅಭಿನಯಿಸಿ ನೋಡುಗರ ಆಕರ್ಷನೆಯ ಕೇಂದ್ರಬಿಂದುವಾದರು. ಉರಾಳರಿಗೆ ಪೈಪೋಟಿ ಕೊಡುವಂತೆ ವಿದೂಷಕ ಪಾತ್ರದಲ್ಲಿ ಶ್ರೀನಾಥರವರು ನಟಿಸಿದ್ದಾರೆ. ಸಣ್ಣತಿಮ್ಮಿಯ ಪಾತ್ರದಲ್ಲಿ ದು.ಸರಸ್ವತಿಯವರು ಆಂಗಿಕಾಭಿನಯಕ್ಕಿಂತಲೂ ವಾಚಿಕಾಭಿನಯ ಹಾಗೂ ಸಾತ್ವಿಕಾಭಿನಯದಲ್ಲಿ ಗಮನ ಸೆಳೆಯುತ್ತಾರೆ. ಮೂರೇ ಪ್ರಮುಖ ಪಾತ್ರಗಳನ್ನು ಇಟ್ಟುಕೊಂಡು ಜಾಗತಿಕ ಸಮಸ್ಯೆಯೊಂದನ್ನು ಯಕ್ಷ ಪ್ರಹಸನ ರೂಪದಲ್ಲಿ ಕಟ್ಟಿಕೊಟ್ಟ ನಿರ್ದೇಶಕರ ಕ್ರಿಯಾಶೀಲತೆ ಅಭಿನಂದನಾರ್ಹವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ತಾವು ನಂಬಿ ಆಚರಿಸುತ್ತಿರುವ ಸಿದ್ದಾಂತವೊಂದನ್ನು ರಂಗರೂಪದಲ್ಲಿ ತಂದು ತಮ್ಮ ಚಿಂತನೆಗಳನ್ನು ಜನರಿಗೆ ತಲುಪಿಸುತ್ತಿರುವ ಪ್ರಸನ್ನನವರ ಮಹತ್ವಾಂಕಾಂಕ್ಷೆ ಬಲು ದೊಡ್ಡದು.
ಯಂತ್ರಗಳ ಮೇಲಿನ ಮನುಷ್ಯರ ಅವಲಂಬನೆ ಹೆಚ್ಚುತ್ತಿರುವ ಪ್ರಸ್ತುತ ಜಾಗತೀಕರಣದ ಸಂದರ್ಭದಲ್ಲಿ ಈ ‘ಯಂತ್ರ ರಾಕ್ಷಸ ಮರ್ಧಿನಿ’ ನಾಟಕವು ಯಂತ್ರಗಳು ಸೃಷ್ಟಿಸಬಹುದಾದ ಅಪಾಯಗಳ ಕುರಿತು ಒಂದು ಪ್ರಾತ್ಯಕ್ಷಿಕತೆಯನ್ನು ಯಕ್ಷಪ್ರಸಂಗ ರೂಪದಲ್ಲಿ ಪ್ರೇಕ್ಷಕರಿಗೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ. ಈ ನಾಟಕ ನೋಡಿದವರು ಮೊಬೈಲ್, ಕಂಪ್ಯೂಟರ್, ಇಂಟರನೆಟ್ ಮೊದಲಾದ ಆಧುನಿಕ ಯಂತ್ರಗಳನ್ನು ಬಳಸುವುದನ್ನು ಬಿಡುತ್ತಾರೆನ್ನುವುದು ಭ್ರಮೆಯಾದರೂ ಜನರು ಯಂತ್ರಗಳ ಗುಲಾಮರಾಗದಂತೆ ಎಚ್ಚರಿಸುವಲ್ಲಿ ಈ ನಾಟಕ ಸಫಲವಾಗಿದೆ. ಆದರೆ ಯಾರು ಏನೇ ಹೇಳಲಿ, ಹೇಳಲು ಕೇಳಲು ಪ್ರಸನ್ನರವರ ಯಂತ್ರವಿರೋಧಿ ವಾದ ತುಂಬಾ ಚೆನ್ನಾಗಿದೆ ಆದರ್ಶಮಯವಾಗಿದೆ. ಆದರೆ... ಅನುಕರಣೆಗೆ ಆಚರಣೆಗೆ ಅಪ್ರಾಯೋಗಿಕವಾಗಿದೆ. ಈಗ ಬೇಕಾಗಿರುವುದು ಯಂತ್ರಗಳನ್ನು ಕಳಚುವುದಲ್ಲ. ಅದು ಎಲ್ಲರಿಗೂ ಸಾಧ್ಯವೂ ಇಲ್ಲ. ಯಂತ್ರಗಳು ಈಗ ಜನರ ನಾಡಿಮಿಡಿತವಾಗಿವೆ. ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಜನರು ಯಂತ್ರಗಳ ಗುಲಾಮರಾಗದೇ ಅಗತ್ಯವಿದ್ದಷ್ಟು ಬಳಸುವುದು ಹೇಗೆ, ನಮ್ಮ ಮುಂದಿನ ಜನಾಂಗವನ್ನು ಯಂತ್ರಗಳು ಆಳದಿರುವ ಹಾಗೆ ನೋಡಿಕೊಳ್ಳುವುದು ಹೇಗೆ ಎಂದು ಜನರಲ್ಲಿ ವಿವೇಚನೆ ಮೂಡಿಸುವುದೊಂದೆ ಈಗ ಇರುವ ಮಾರ್ಗವಾಗಿದೆ.
ಯಂತ್ರಗಳಿಗಿಂತಲೂ ಯಂತ್ರಗಳ ಪ್ರಮೋಟರಗಳಿದ್ದಾರಲ್ಲ ಬಂಡವಾಳಶಾಹಿಗಳು ಹಾಗೂ ಸಾಮ್ರಾಜ್ಯಶಾಹಿಗಳು ಅವರನ್ನು ಮೊದಲು ರಂಗಮಾಧ್ಯಮಗಳಲ್ಲಿ ಬೆತ್ತಲೆ ಮಾಡಬೇಕಿದೆ. ಸರಕು ಸಂಸೃತಿಯನ್ನು ಮೊದಲು ಶತಾಯ ಗತಾಯ ವಿರೋಧಿಸಬೇಕಿದೆ. ಸ್ವದೇಶಿ ನಿರ್ಮಿತ ಯಂತ್ರಗಳನ್ನು ಬಳಸುವ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುವ ಕುರಿತು ಜಾಗ್ರತಿ ಮೂಡಿಸುವಲ್ಲಿ ಪ್ರಸನ್ನರಂತಹ ಹೋರಾಟಗಾರರು ಶ್ರಮಿಸುವ ಅಗತ್ಯತೆ ಇದೆ. ಇದು ಬಿಟ್ಟು ಟಿವಿ ಬಳಸಬೇಡಿ, ಮೊಬೈಲ್ ಬಿಸಾಕಿ, ಕಂಪ್ಯೂಟರ್ ತೊರೆಯಿರಿ...
ಎಂದೆಲ್ಲಾ ನಾಟಕದ ಮೂಲಕ ಹೇಳಿದರೆ ಜನ ನಾಟಕ ನೋಡಿ ನಕ್ಕುಬಿಡುತ್ತಾರೆಯೇ ಹೊರತು ಬದಲಾಗುವುದಿಲ್ಲ. ಯಾವುದು ಆಯಾ ಕಾಲಕ್ಕೆ ಪ್ರ್ಯಾಕ್ಟಿಕಲ್ ಎನ್ನಿಸುತ್ತದೋ ಅವುಗಳನ್ನು ಬೋದಿಸಿದರೆ ಜನರು ಆಲೋಚಿಸುತ್ತಾರೆ. ಯಾವ ಯಂತ್ರವನ್ನು ಬಳಸಬೇಕು ಯಾವುದನ್ನು ಬಳಸಬಾರದು, ಎಷ್ಟು ಬಳಸಬೇಕು ಎಷ್ಟು ಬಿಡಬೇಕು...
ಎನ್ನುವುದರ ಕುರಿತ ಅರಿವನ್ನು ಜನರಲ್ಲಿ ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಈ ನಿಟ್ಟಿನತ್ತ ಪ್ರಸನ್ನನವರು ಚಿತ್ತ ಹರಿಸಬೇಕಷ್ಟೇ.
ನಿರ್ದೇಶಕ ಪ್ರಸನ್ನರವರು |
ಒಂದು ಸಂತಸದ ಸಂಗತಿ ಏನೆಂದರೆ ಒಂದೇ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯದೇ ಪ್ರಸನ್ನರವರು ಈ ಯಕ್ಷ ಪ್ರಸಂಗವನ್ನು ‘ರಂಗನಿರಂತರ’ ತಂಡಕ್ಕಾಗಿ ಅತೀ ಅವಸರದಲ್ಲಿ ನಿರ್ದೇಶಿಸಿದ್ದಾರೆ. ಇದು ಪ್ರಸನ್ನರವರ ನಿರ್ದೇಶನದ ನಾಟಕ ಎನ್ನುವುದಕ್ಕಿಂತಲೂ ಅವರ ಮಾರ್ಗದರ್ಶನದಲ್ಲಿ ತಯಾರಾದ ನಾಟಕ ಎನ್ನುವುದುತ್ತಮ. ಯಾಕೆಂದರೆ ಈ ನಾಟಕದ ಕಾನ್ಸೆಪ್ಟನ್ನು ಪ್ರಸನ್ನರವರು ದು.ಸರಸ್ವತಿಯವರಿಗೆ ಹೇಳಿದ್ದಷ್ಟೇ, ಉಳಿದದ್ದೆಲ್ಲವನ್ನೂ ದು.ಸರಸ್ವತಿ ಹಾಗೂ ಉರಾಳರು ಇಂಪ್ರುವೈಸ್ ಮಾಡಿಕೊಂಡಿದ್ದಾರೆ. ಕೊನೆಗೆ ಎರಡು ದಿನಗಳ ಕಾಲ ಇಡೀ ರಂಗತಂಡದ ಕಲಾವಿದರು, ಹಾಡುಗಾರರು, ಸಂಗೀತಗಾರರು...
ಪ್ರಸನ್ನರವರು ಹೋರಾಟ ಮಾಡುತ್ತಿರುವ ಬದನವಾಳುವಿಗೆ ಹೋಗಿ ಪ್ರಸನ್ನರವರಿಂದ ಪೈನಲ್ ಟಚ್ಪ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಈ ನಾಟಕ ಕಟ್ಟಿದ ಕ್ರೆಡಿಟ್ ಪ್ರಸನ್ನರವರಷ್ಟೇ ದು.ಸರಸ್ವತಿ ಹಾಗೂ ರಾಧಾಕೃಷ್ಣ ಉರಾಳರಿಗೆ ಸಲ್ಲಬೇಕು. ಕಲಾವಿದರಿದ್ದಲ್ಲಿ ನಿರ್ದೇಶಕರು ಹೋಗಿ ನಾಟಕ ಕಲಿಸುವುದು ರೂಢಿ. ಆದರೆ ಏಕ ಕಾಲಕ್ಕೆ ಜವಳಿ ಉದ್ಯಮ, ಚಳುವಳಿ ಮಾಧ್ಯಮದಲ್ಲಿ ತೊಡಿಗಿಸಿಕೊಂಡ ಪ್ರಸನ್ನರವರು ರಂಗನಿರ್ದೇಶನವನ್ನೂ ಮಾಡಬೇಕೆಂದರೆ ರಂಗತಂಡವೇ ಅವರಿದ್ದಲ್ಲಿ ಹೋಗಿ ಅವರಿಗೆ ಸಮಯ ಸಿಕ್ಕಾಗ ನಾಟಕವನ್ನು ಸಿದ್ದಗೊಳಿಸಿಕೊಳ್ಳುವ ಅನಿವಾರ್ಯತೆ ಇದೆ. ರಂಗಭೂಮಿಗೆ ಈ ರೀತಿಯಲ್ಲಾದರೂ ಪ್ರಸನ್ನರವರು ಕೊಡುಗೆ ಕೊಡಲಿ. ರಂಗತಂಡದವರೇ ಅವರಿದ್ದಲ್ಲಿಗೆ ಹೋಗಿ
ನಾಟಕಗಳನ್ನು ನಿರ್ಮಿಸಲಿ ಎಂದು ಆಶಿಸಬಹುದಾಗಿದೆ. ಯಂತ್ರ ರಾಕ್ಷಸ ಮರ್ಧನ ಎನ್ನುವ ಭಗೀರತ ಪ್ರಯತ್ನ ನಿರತ ಪ್ರಸನ್ನರವರು ಒಂದಿಷ್ಟು ಭ್ರಷ್ಟಾಚಾರ ರಾಕ್ಷಸ ಮರ್ಧನದತ್ತಲೂ ತಮ್ಮ ಚಿತ್ತ ಹರಿಸಿ ಕರ್ನಾಟಕದ ಅಣ್ಣಾ ಹಜಾರೆಯೋ ಇಲ್ಲವೇ ಕೇಜ್ರಿವಾಲವೋ ಆಗಿ ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಿರ್ಮಿಸಲು ಶ್ರಮಿಸಲಿ ಎನ್ನುವುದು ಕನ್ನಡ ರಂಗಭೂಮಿಯವರ ಅಂತರಂಗದ ಆಸೆಯಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ