ಮಂಗಳವಾರ, ಫೆಬ್ರವರಿ 14, 2017

ಆರುಂಧತಿ ಆಲಾಪಕೆ ರಂಗಾಲಂಕಾರದ ಲೇಪ :



ರಂಗವಿಮರ್ಶೆ :


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಆಯೋಜನೆಗೊಂಡ ಮಹತ್ವಾಂಕಾಂಕ್ಷಿ ಪ್ರಾಜೆಕ್ಟ್ ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟ ಹವ್ಯಾಸಿ ರಂಗಭೂಮಿ ನಾಟಕೋತ್ಸವ. ಫೆ.13 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ಆರಂಭಿಕ ನಾಟಕವಾಗಿ ಎಸ್.ರಾಮನಾಥರವರು ರಚಿಸಿದ ಆರುಂಧತಿ ಆಲಾಪ ನಾಟಕ ಪ್ರದರ್ಶನಗೊಂಡಿತು. ಕೊಡಗಿನ ರಂಗಭೂಮಿ ಪ್ರತಿಷ್ಠಾನದ ಕಲವಿದರುಗಳಿಗೆ ಅಡ್ಡಂಡ ಕಾರ್ಯಪ್ಪರವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ತಲ್ಲಣ ತಳಮಳ ಹಾಗೂ ಹೊಸ ಬದುಕನ್ನು ಕಟ್ಟುವ ಕಾತುರಗಳನ್ನು ಅನಾವರಣಗೊಳಸುವ ನಿಟ್ಟಿನಲ್ಲಿ ಆರುಂಧತಿ ಆಲಾಪ ನಾಟಕ ಮೂಡಿಬಂದಿದೆ. ಕುಡಿತಕ್ಕೆ ಒಳಗಾದ ಪತಿ ತೀರಿಕೊಂಡ ವಿಧವೆ ಅರುಂಧತಿ ತನ್ನ ಬಾಲ್ಯ ಸ್ನೇಹಿತ ಚಿದಂಬರ್ ಜೊತೆಗೆ ಸಖ್ಯ ಬೆಳೆಸುತ್ತಾಳೆ.. ಕುಡಿತವನ್ನೇ ರೂಢಿಸಿಕೊಂಡು ಹಾದಿತಪ್ಪಿದ ಮಗ ಅಚ್ಚುತ ಊರು ತೊರೆದಾಗ ಆತನ ಪ್ರಿಯತಮೆ ಕನಕ ಆತ್ಮಹತ್ಯೆ ಮಾಡಿಕೊಂಡು ಬಿಂಬದ ರೂಪದಲ್ಲಿ ಬಂದು ಆರುಂಧತಿ ಜೊತೆಗೆ ತಲ್ಲಣಗಳನ್ನು ಹಂಚಿಕೊಳ್ಳುತ್ತಾಳೆ. ಊರವರ ಕೊಂಕು ಮಾತುಗಳನ್ನು ಕೇಳಿ ಕೆರಳಿದ ಅಚ್ಚುತ ತಾಯಿಗೆ ಚುಚ್ಚುಮಾತುಗಳಿಂದ ನಿಂದಿಸುತ್ತಾನೆ. ರೋಸಿಹೋದ ಆರುಂಧತಿ ಚಿದಂಬರ್ ಜೊತೆಗೆ ಹೋಗುವ ಮೂಲಕ ವಿಮೋಚನೆ ಕಂಡುಕೊಳ್ಳುತ್ತಾಳೆ. ಇಡೀ ನಾಟಕದ ಕಥಾಹಂದರ ಹೀಗೆ ತುಂಬಾನೇ ತೆಳುವಾಗಿದ್ದು ಇದಕ್ಕೆ ರಂಗತಂತ್ರಗಳನ್ನು ಸಮರ್ಥವಾಗಿ ಬಳಸುವ ಮೂಲಕ ನಾಟಕವನ್ನು ಆಕರ್ಷಣೀಯವಾಗಿ ಮಾಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಹೆಣ್ಣು ಗಂಡನಿಗೆ ಅಡಿಯಾಳಾಗಿರಬೇಕು ಹಾಗೂ ಗಂಡನಿಲ್ಲದೇ ಹೋದರೂ ಆಕೆ ತನ್ನ ಪಾತಿವೃತ್ಯವನ್ನು ಕಾಪಾಡಿಕೊಂಡೇ ಬದುಕು ಸವೆಸಬೇಕು ಎನ್ನುವ ಸ್ತ್ರೀವಿರೋಧಿ ಕಟ್ಟಳೆಯನ್ನು ಪಿತೃಪ್ರಧಾನ ಸಮಾಜ ಅನಾಧಿಕಾಲದಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಶೀಲದ ಗಡಿಯನ್ನು ದಾಟಿದ ಹೆಣ್ಣು ಸಮಾಜದ ದೃಷ್ಟಿಯಲ್ಲಿ ಅಷ್ಟೇ ಅಲ್ಲಾ ಮನೆಯವರ ಮನಸಲ್ಲೂ ಕೀಳಾಗಿ ಕಾಣತೊಡಗುತ್ತಾಳೆ ಎನ್ನುವುದನ್ನು ಆರುಂಧತಿ ನಾಟಕದಲ್ಲಿ ತೋರಿಸಲಾಗಿದೆ. ಮಹಿಳೆಯ ಮೇಲೆ ಹೇರಲಾದ ಕಟ್ಟುಪಾಡುಗಳು ಹಾಗೂ ಅದನ್ನು ಮೀರಬಯಸುವ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಈ ನಾಟಕದ ಆಶಯವಾಗಿದೆಯಾದರೂ ಅದು ಎಲ್ಲಿಯೂ ಸಮರ್ಥವಾಗಿ ಮೂಡಿಬರಲಾರದೇ ಇಡೀ ನಾಟಕ ಪೇಲರವಾಗಿದೆ. ಎಲ್ಲರಿಗೂ ಗೊತ್ತಿರಬಹುದಾದ ನಿಟ್ಟಿನಲ್ಲೇ ಒಂದು ಸಣ್ಣ ಎಳೆಯನ್ನು ಹಿಡಿದು ನಾಟಕ ಕಟ್ಟಲು ಹೊರಟಿದ್ದರಿಂದ ದಿಟ್ಟ ಹೆಣ್ಣಿನ ಗಟ್ಟಿ ದ್ವನಿಯಾಗಬೇಕಾಗಿದ್ದ ನಾಟಕದ ವಸ್ತು ವಿಷಯ ಸೊರಗಿಹೋಗಿದೆ.

ಹಿಂದೆ ಗಂಡ ಮಗನನ್ನು ಒಪ್ಪಿಕೊಂಡು ಬದುಕುತ್ತಿದ್ದೆ. ಈಗ ಎದುರಿಸಿ ಬದುಕುತ್ತೇನೆ.. ಎಂದು ಆರುಂಧತಿ ಮಾತಲ್ಲಿ ಹೇಳುತ್ತಾಳೆಯೇ ಹೊರತು ಕೃತಿಯಲ್ಲಿ ತೋರಿಸುವುದಿಲ್ಲಾ. ಮಗ ಬಾಯಿಗೆ ಬಂದಂತೆ ನಿಂದಿಸಿ ತುಚ್ಚೀಕರಿಸಿದರೂ ಬಾಯಿ ಬಿಚ್ಚದೇ ಬೆಚ್ಚಿ ಕುಳಿತ ಆರುಂಧತಿ ಮಗನನ್ನು ಎದುರಿಸುವ ದೈರ್ಯ ತೋರುವುದಲ್ಲಾ. ಬೈದು ಸಾಕಾಗಿ ಮನೆ ಬಿಟ್ಟು ಮಗ ಹೋದ ನಂತರ ಗೆಳೆಯ ಕೊಟ್ಟ ಕನ್ನಡಿ ಹಿಡಿದು ಕುಣಿದಾಡುತ್ತಾಳೆ. ಇಲ್ಲಿ ನಿಜವಾಗಿ ಆರುಂಧತಿಗೆ ಇರಬೇಕಾದದ್ದು ಹೊಸ ಗೆಳೆಯನ ಜೊತೆಗೆ ಸೇರುವ ಬಯಕೆಗಿಂತಲೂ ಸ್ತ್ರೀವಿರೋಧಿ ಮನಸುಗಳ ವಿರುದ್ದದ ದಿಟ್ಟ ದ್ವನಿ. ಆದರೆ.. ವಿರೋಧದ ನೆಲೆಯನ್ನು ಬಿಟ್ಟು ಪಲಾಯನವನ್ನು ಆಯ್ಕೆ ಮಾಡಿಕೊಂಡ ಆರುಂಧತಿ ವ್ಯವಸ್ಥೆಯನ್ನು ದಿಕ್ಕರಿಸುವ ಬದಲು ಅದರಿಂದ ದೂರಾಗಬಯಸುತ್ತಾಳೆ. ಇಂತಹುದನ್ನು ಮಾಡಿದರೆ ಸಮಾಜ ಓಡಿಹೋದವಳು ಎಂದು ಆರೋಪಿಸಿ ಮಹಿಳೆಯ ಮೇಲೆ ಕಳಂಕವನ್ನು ಹೊರೆಸಿ ಸುಖಿಸುತ್ತದೆ. ಅದರ ಬದಲಾಗಿ ಮಹಿಳೆಯ ಸ್ವಾಭಿಮಾನದ ಪ್ರತೀಕವಾಗಿ ಸಿಡಿದೆದ್ದು ನಿಂತು ತುಚ್ಚವಾಗಿ ನಿಂದಿಸಿದ ಮಗನ ಕೆನ್ನೆಗೆರಡು ಬಾರಿಸಿ ಪುರುಷ ದೌರ್ಜನ್ಯವನ್ನು ದಿಕ್ಕರಿಸಿ ಗೆಳೆಯನ ಜೊತೆಗೆ ಹೊಸ ಬದುಕನ್ನು ಅರಸಿ ಆರುಂಧತಿ ಹೊರಟಿದ್ದರೆ ಇಡೀ ನಾಟಕದ ದಿಕ್ಕೇ ಬದಲಾಗುತ್ತಿತ್ತು. ಅದು ಕೊಡುವ ಸಂದೇಶ ದುರಹಂಕಾರಿ ಪುರುಷರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರೆ ಅನೇಕ ನೊಂದ ಮಹಿಳೆಯರಲ್ಲಿ ದೈರ್ಯವನ್ನು ತುಂಬುತ್ತಿತ್ತು. 

ಆದರೆ.. ಇಡೀ ನಾಟಕದಲ್ಲಿ ರಂಗತಂತ್ರಗಳನ್ನು ಬಳಸಿದ ರೀತಿ ಮಾತ್ರ ನೋಡುಗರ ಮನಸ್ಸನ್ನು ಸೆಳೆಯುವಂತಿದೆ. ತುಂಬಾ ಅನುಭವಿ ನೇಪತ್ಯ ತಜ್ಞರು ದೃಶ್ಯಗಳನ್ನು ಅಂದಗೊಳಿಸುವಲ್ಲಿ ಶ್ರಮಿಸಿದ್ದಾರೆ. ಶಶಿಧರ್ ಅಡಪರವರ ರಂಗಸಜ್ಜಿಕೆ ವಿನ್ಯಾಸ ಇಡೀ ನಾಟಕಕ್ಕೆ ಕಳೆ ತಂದುಕೊಟ್ಟಿದ್ದರೆ ಅದಕ್ಕೆ ಪೂರಕವಾಗಿ ಜೀವನಕುಮಾರ್ ಹೆಗ್ಗೋಡರವರ ಬೆಳಕಿನ ವಿನ್ಯಾಸ ಮಾಂತ್ರಿಕ ಸ್ಪರ್ಷ ಕೊಟ್ಟಿದೆ. ಮೈಸೂರಿನ ಕಿಶೋರ್ ಸಂಗೀತ ನಿರ್ದೇಶನ ನಾಟಕದ ದೃಶ್ಯಕ್ಕೆ ಅಗತ್ಯ ಮೂಡ್ ವದಗಿಸಿದೆ. ಕನಸುಗಳು ಕವಲೊಡೆಯುತ್ತಿವೆ ಒಡಲಾಳದಲ್ಲಿ ಎನ್ನುವಂತಹ ಹಾಡುಗಳು ಮಧುರವಾಗಿವೆ. ರಂಗಾಯಣದ ಪ್ರಮಿಳಾ ಬೇಂಗ್ರೆ ಹಾಗೂ ಅನಿತಾ ಕಾರ್ಯಪ್ಪರವರು ಜೊತೆಗೂಡಿ ಮಾಡಿದ ಪ್ರತಿ ಪಾತ್ರದ ವಸ್ತ್ರವಿನ್ಯಾಸ ಬಣ್ಣದ ಚಿತ್ತಾರ ಬಿಡಿಸಿದಂತಿದೆ. ನಾಟಕದ ಪ್ರತಿ ಪ್ರೇಮ್ ಸಹ ಪೇಂಟಿಂಗ್ ರೀತಿಯಲ್ಲಿ ಮೂಡಿ ಬಂದಿದೆ. ಆದರೂ ನಾಟಕ ನೋಡುಗರಲ್ಲಿ ನಿರಾಶೆ ಹುಟ್ಟಿಸಿದ್ದಕ್ಕೆ ಮೊದಲ ಕಾರಣ ನೀರಸವಾದ ಸ್ಕ್ರಿಪ್ಟ್ ಒಂದು ಕಡೆಯಾದರೆ ಇನ್ನೊಂದು ಕಡೆ ಕಲಾವಿದರುಗಳ ನೀರಸವಾದ ಅಭಿನಯ. ಕುಡುಕನ ಪಾತ್ರವೊಂದನ್ನು ಹೊರತು ಪಡಿಸಿ ಯಾವ ನಟನಟಿಯರ ವಾಚಿಕಾಭಿನಯದಲ್ಲಿ ಪೋರ್ಸ ಎನ್ನುವುದೇ ಇರಲಿಲ್ಲಾ. ಆಂಗಿಕಾಭಿಯದಲ್ಲೂ ಯಾಂತ್ರಿಕ ಚಲನೆಗಳಿದ್ದವೇ ಹೊರತು ಭಾವನಾತ್ಮಕ ಕ್ರಿಯೆ ಪ್ರತಿಕ್ರಿಯೆಗಳು ಹೊರಹೊಮ್ಮಲಿಲ್ಲಾ. ಇದ್ದುದರಲ್ಲಿ ಆರುಂಧತಿಯಾಗಿ ಅಭಿನಯಿಸಿದ ಅನಿತಾ ಕಾರ್ಯಪ್ಪರವರ ನಟನೆ ಪರವಾಗಿಲ್ಲವೆನಿಸಿದರೂ ಸಾತ್ವಿಕಾಭಿನಯದಲ್ಲಿ ಇನ್ನೂ ಪಳಗಬೇಕಿದೆ. ಈ ನಾಟಕದ ನಿರ್ದೇಶನ ಮಾಡಿ ತಮ್ಮ ರಂಗತಂಡದ ಸಂಘಟನೆಯನ್ನೂ ಮಾಡಿ ಚಿದಂಬರ ಎನ್ನುವ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ ಅಡ್ಡಂಡ ಕಾರ್ಯಪ್ಪನವರಿಗೆ ಪಾತ್ರದ ಒಳಗೆ ಸಂಪೂರ್ಣ ಇಳಿಯಲು ಸಾಧ್ಯವಾಗಿಲ್ಲ.

ರಂಗತಂತ್ರಗಳ ಬಳಕೆ, ದೃಶ್ಯಗಳ ಬ್ಲಾಕಿಂಗ್ ಹಾಗೂ ನಟರ ಮೂವಮೆಂಟ್‌ಗಳಿಗೆ ಕೊಟ್ಟಷ್ಟೇ ಮಹತ್ವವನ್ನು ನಟರಲ್ಲಿ ಭಾವತೀವ್ರತೆ ಹಾಗೂ ಮಾತುಗಾರಿಕೆ ಕಲಿಸುವ ನಿಟ್ಟಿನಲ್ಲಿ ಇನ್ನೂ ಪ್ರಯತ್ನಿಸಿದ್ದರೆ ನಿರ್ದೇಶಕರು ಗೆಲ್ಲುತ್ತಿದ್ದರು. ಹಾಗಾಗಲಿಲ್ಲವೆನ್ನುವುದೇ ಈ ನಾಟಕದ ಪ್ರಮುಖ ಕೊರತೆ.. ಮುಂದಿನ ಪ್ರದರ್ಶನಗಳಲ್ಲಿ ಸರಿಹೋಗಬಹುದಾದ ಸಾಧ್ಯತೆಗಳು  ಮುಕ್ತವಾಗಿವೆ. ಆರುಂಧತಿಯನ್ನು ಸಂದರ್ಭದ ಅನಿವಾರ್ಯತೆಗೆ ಒಗ್ಗಿಸುವ ಬದಲಾಗಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಗಟ್ಟಿ ದ್ವನಿಯಾಗಿ ಬಿಂಬಿಸಿದ್ದರೆ ದಮನಿತ ಮಹಿಳೆಯರಿಗೆ ಮಾದರಿಯಾಗಬಹುದಾಗಿತ್ತು. ತಮ್ಮ ಇಚ್ಚೆಗೆ ವಿರುದ್ಧವಾಗಿ ಬದುಕು ಸವೆಸುತ್ತಿರುವ ಹೆಣ್ಣು ಮಕ್ಕಳಿಗೆ ಆರುಂಧತಿ ಪ್ರೇರಣೆಯಾಗಬಹುದಾಗಿತ್ತು. ಈ ನಿಟ್ಟಿನಲ್ಲಿ ಒಂದಿಷ್ಟು ಯೋಚಿಸಿ ನಾಟಕದ ಅಂತ್ಯವನ್ನು ಬದಲಾಯಿಸಿ ಪ್ರಯೋಗವನ್ನು ಪರಿಷ್ಕರಿಸಿದರೆ ಈ ನಾಟಕ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನೊಂದು ಬೆಂದ ಅಸಂಖ್ಯಾತ ಆರುಂಧತಿಯಂತಹ ಮಹಿಳೆಯರಲ್ಲಿ ಆತ್ಮಸ್ತೈರ್ಯವನ್ನು ತುಂಬಬಹುದಾಗಿದೆ. 

ಈ ನಾಟಕದ ಸಕಾರ ನಕಾರಗಳೇನೇ ಇರಲಿ..  ರಂಗಭೂಮಿಯ ಗಂಧಗಾಳಿ ಸುಳಿಯದ ಕೊಡಗಿನ ಮಡಕೇರಿಯಂತಹ ಪರಿಸರದಲ್ಲಿ ರಂಗತಂಡವನ್ನು ಬದ್ಧತೆಯಿಂದ ಕಟ್ಟಿ ಆಗಾಗ ನಾಟಕಗಳನ್ನು ಪ್ರದರ್ಶಿಸುತ್ತಾ ರಂಗಕಲೆಯನ್ನು ಕೊಡಗಿನ ಸಂಸ್ಕೃತಿಯ ಭಾಗವಾಗಿಸಲು ಪ್ರಯತ್ನಿಸುತ್ತಿರುವ ಅಡ್ಡಂಡ ಕಾರ್ಯಪ್ಪ ಹಾಗೂ ಅನಿತಾ ಕಾರ್ಯಪ್ಪ ದಂಪತಿಗಳ ರಂಗಭೂಮಿಯ ಪ್ರೀತಿ ಹಾಗೂ ಅದರ ರೀತಿ ನಿಜಕ್ಕೂ ಅಭಿನಂದನೀಯ. ಅನೇಕ ಅನಾನುಕೂಲತೆಗಳ ನಡುವೆಯೂ 'ಆರುಂಧತಿ ಆಲಾಪ' ಎನ್ನುವ ಸಾಧಾರಣ ನಾಟಕವನ್ನು  ರಂಗತಂತ್ರಗಳ ಮೂಲಕ ಆಕರ್ಷಣೀಯವಾಗಿ ಕಟ್ಟಿಕೊಟ್ಟ ಅಡ್ಡಂಡ ಕಾರ್ಯಪ್ಪನವರ ರಂಗಸಿದ್ದತೆ ಮಾದರಿಯಾಗಿದೆ. ಸಂಸ್ಕೃತಿ ಇಲಾಖೆ ಈ ನಾಟಕಕ್ಕೆ  ಕೊಡಮಾಡಿದ ಸಹಾಯಧನವನ್ನು ಸಂಪೂರ್ಣವಾಗಿ ಬಳಸಿ ರಿಚ್ ಆಗಿ ನಾಟಕವನ್ನು ನಿರ್ಮಿಸಿದ್ದು ಅಡ್ಡಂಡರವರ ರಂಗಪ್ರೀತಿಗೆ ಸಾಕ್ಷಿಯಾಗಿದೆ. ಇನ್ನೂ ಸ್ವಲ್ಪ ಪರಿಷ್ಕರಣೆಗೆ ಒಳಗಾಗಿ, ನಟರುಗಳನ್ನು ಇನ್ನಷ್ಟು ತರಬೇತಿಗೊಳಿಸಿ ಕೊಡಗಿನಾದ್ಯಂತ ನಾಟಕವನ್ನು ಪ್ರದರ್ಶಿಸಿದರೆ ಆ ಪ್ರದೇಶದಲ್ಲಿ ರಂಗಭೂಮಿ ಬೆಳೆಯಲು ಪ್ರೇರಣೆಯಾಗಬಲ್ಲುದು.    

 -ಶಶಿಕಾಂತ ಯಡಹಳ್ಳಿ




  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ