ವಿಫಲವಾಯ್ತು ಉಮಾಶ್ರೀಯವರ
ವರ್ತಮಾನದ ನೋಟ;
ಸಚಿವೆ ಉಮಾಶ್ರೀಯವರಿಗೊಂದು
ಮಹತ್ವಾಕಾಂಕ್ಷೆ ಇತ್ತು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೊತೆಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ಸಚಿವರೂ ಆಗಿದ್ದರಿಂದ ಮಹಿಳೆ ಮತ್ತು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ನಾಟಕಗಳನ್ನು
ನಿರ್ಮಿಸಿ ಮಹಿಳೆಯರಲ್ಲಿ ಜಾಗೃತಿ ಹಾಗೂ ಸ್ವಾಭಿಮಾನಿ ಬದುಕನ್ನು ರೂಪಿಸಲು ಪ್ರೇರಣೆಯಾಗಬೇಕು ಹಾಗೂ
ತಾವು ನಿರ್ವಹಿಸುತ್ತಿರುವ ಎರಡೂ ಇಲಾಖೆಗಳಿಗೆ ಒಂದಿಷ್ಟು ನ್ಯಾಯಸಲ್ಲಿಸಬೇಕು ಎನ್ನುವುದು ಉಮಾಶ್ರೀಯವರ
ಹೆಬ್ಬಯಕೆಯಾಗಿತ್ತು. “ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಹೊಸ ನಾಟಕಗಳ ಕೊರತೆ ಇದೆ.
ಅದರಲ್ಲೂ ಮಹಿಳಾ ಕೇಂದ್ರಿತ ನಾಟಕಗಳಂತೂ ನಗಣ್ಯವಾಗಿವೆ. ನಾಟಕಕಾರರಂತೂ ಬೆರಳೆಣಿಕೆಯಷ್ಟಿದ್ದಾರೆ.
ಹೊಸ ನಾಟಕಕಾರರು ಬರುತ್ತಿಲ್ಲಾ.. ಈ ಎಲ್ಲಾ ಕೊರತೆಗಳನ್ನು ನೀಗಿಕೊಳ್ಳಲು ಮಹಿಳೆ ಮತ್ತು ಮಕ್ಕಳ ಕುರಿತಾಗಿ
ಹೊಸ ನಾಟಕಗಳು ರಚನೆಯಾಗಬೇಕು ಹಾಗೂ ನಾಡಿನಾದ್ಯಂತ ಪ್ರದರ್ಶನಗೊಂಡು ಶೋಷಿತ ಮಹಿಳೆ ಹಾಗೂ ಮಕ್ಕಳ ಪರ
ದ್ವನಿಯಾಗಬೇಕು” ಎನ್ನುವುದು ಉಮಾಶ್ರೀಯವರ ಅದಮ್ಯ ಬಯಕೆಯಾಗಿತ್ತು. ರಂಗಕಲಾವಿದೆಯೂ
ಆಗಿರುವ ಉಮಾಶ್ರೀಯವರು ರಂಗಭೂಮಿ ಹಾಗೂ ಮಹಿಳೆಯರ ಬಗ್ಗೆ ತೋರಿಸಿದ ಕಾಳಜಿ ಕಳಕಳಿ ನಿಜಕ್ಕೂ ಅಭಿನಂದನೀಯ.
ತಮ್ಮ ಈ ಯೋಜನೆಯನ್ನು ಅಧಿಕಾರಿಗಳ
ಜೊತೆಗೆ ಹಾಗೂ ತಮಗೆ ಗೊತ್ತಿದ್ದ ರಂಗಕರ್ಮಿಗಳ ಜೊತೆಗೆ ಮೂರು ವರ್ಷಗಳ ಹಿಂದೆಯೇ ಉಮಾಶ್ರೀಯವರು ಚರ್ಚಿಸಿದ್ದರು.
ಹಾಗೂ ಅನುಷ್ಟಾನಕ್ಕೆ ತರಲು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಉದ್ದೇಶಕ್ಕಾಗಿಯೇ ಎರಡು ಕೋಟಿ ರೂಪಾಯಿಗಳಷ್ಟು ಮೊತ್ತವನ್ನು
ಇಲಾಖೆಯಲ್ಲಿ ಕಾಯ್ದಿರಿಸಿದ್ದರು. ಆದರೆ.. ದಿನಗಳು ಉರುಳಿದವೇ ಹೊರತು ಉಮಾಶ್ರೀಯವರ ಮಹತ್ವಾಂಕಾಂಕ್ಷಿ
ಯೋಜನೆ ಜಾರಿಗೆ ಬರಲೇ ಇಲ್ಲಾ. ಇಲಾಖೆಯ ಅಧಿಕಾರಿಗಳ ನಿಧಾನಗತಿಯಿಂದ ಬೇಸತ್ತ ಸಚಿವೆ ಖುದ್ದಾಗಿ ಡಾ.ಚಂದ್ರಶೇಖರ್
ಕಂಬಾರರ ಮನೆಗೆ ಹೋಗಿ ಈ ಯೋಜನೆಯ ನೇತೃತ್ವವನ್ನು ವಹಿಸಿಕೊಳ್ಳಲು ಮನವಿ ಮಾಡಿದರು. ಒಂದು ಕಮಿಟಿಯನ್ನೂ
ಸಹ ನಿಯಮಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಎರಡು ಕೋಟಿ ರೂಪಾಯಿಗಳ ಇಡೀ ಯೋಜನೆಯನ್ನು
ಕಾರ್ಯರೂಪಕ್ಕೆ ತರುವುದೆಂದು ನಿರ್ಧಾರವಾಯಿತು ಹಾಗೂ ನಿರ್ವಹಣೆಗಾಗಿ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರನ್ನು
ನಿಯಮಿಸಲಾಯಿತು. ಇಂತಹ ಒಂದು ಯೋಜನೆ ರೂಪಗೊಳ್ಳಬೇಕಾದದ್ದು ನಾಟಕ ಅಕಾಡೆಮಿಯ ಅಧ್ಯಕ್ಷರಿಂದ ಇಲ್ಲವೇ
ರಂಗಭೂಮಿಯ ಕಳಕಳಿ ಇರುವ ರಂಗಕರ್ಮಿಗಳಿಂದ. ಇದಕ್ಕೆ ಸಂಬಂಧಪಟ್ಟವರೇ ಒಂದು ಯೋಜನೆ ರೂಪಿಸಿ ಇಲಾಖೆಯ
ಮಂತ್ರಿಗಳ ಮೇಲೆ ಒತ್ತಡ ತಂದು ಅಗತ್ಯ ಹಣ ಬಿಡುಗಡೆ ಮಾಡಿಸಿಕೊಂಡು ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗಿತ್ತು. ಆದರೆ.. ಇಲ್ಲಿ ಎಲ್ಲಾ ಉಲ್ಟಾ. ಸ್ವತಃ ಸಚಿವರೇ ಯೋಜನೆಯೊಂದನ್ನು
ಆಲೋಚಿಸಿ ನಾಟಕ ಅಕಾಡೆಮಿ ಹಾಗೂ ಸಂಸ್ಕೃತಿ ಇಲಾಖೆಯ ಮೇಲೆ ಒತ್ತಡ ತಂದು ಕೇಳಿದಷ್ಟು ಹಣ ಕೊಡುತ್ತೇನೆ
ಎಂದರೂ ಯಾರೂ ಆಸಕ್ತಿ ತೋರದೇ ನಿರ್ಲಕ್ಷಿಸಿದ್ದು ಅಕ್ಷಮ್ಯ
ಹಾಗೂ ಪಟ್ಟು ಬಿಡದೇ ಯೋಜನೆಗೆ ಚಾಲನೆ ನೀಡಿದ ಸಚಿವೆ ಉಮಾಶ್ರೀಯವರ ರಂಗಬದ್ದತೆ ಶ್ಲಾಘನೀಯ.
ಅಂತೂ ಇಂತೂ ಉಮಾಶ್ರೀಯವರ ಆಸಕ್ತಿ
ಹಾಗೂ ಒತ್ತಾಯದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು “ಮಹಿಳೆ ಮತ್ತು ಮಕ್ಕಳು- ವರ್ತಮಾನದ
ನೋಟ”
ಎನ್ನುವ ಯೋಜನೆಯೊಂದನ್ನು ರೂಪಿಸಿತು. ತಾಂತ್ರಿಕವಾಗಿ ನಾಟಕ ಅಕಾಡೆಮಿಯ ಮೂಲಕವೇ ಈ ರಂಗಕಾರ್ಯ ಮಾಡಬೇಕಾಗಿತ್ತು.
ಆದರೆ.. ನಾಟಕ ಅಕಾಡೆಮಿಯ ಕ್ರಿಯಾಶೀಲತೆಯ ಮೇಲೆ ಯಾರಿಗೂ ನಂಬಿಕೆ ಇಲ್ಲದ್ದರಿಂದ ಕೇವಲ ಹೆಸರಿಗೆ ಮಾತ್ರ
ನಾಟಕ ಅಕಾಡೆಮಿಯನ್ನು ಬಳಸಿಕೊಂಡು ಎಲ್ಲಾ ನಿಯಂತ್ರಣ ಹಾಗೂ ವ್ಯವಸ್ಥೆಯನ್ನು ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಅಧಿಕಾರಿಗಳೇ ನೋಡಿಕೊಳ್ಳುವಂತಹ ವ್ಯವಸ್ಥೆಯೊಂದು ರೂಪಗೊಂಡಿತು. ಮೊದಲು ಆಯ್ದ ಬರಹಗಾರರನ್ನು ಒಂದು ಕಡೆ ಸೇರಿಸಿ ನಾಟಕ ಬರೆಸುವುದು,
ಅದನ್ನು ನಾಡಿನ ಕ್ರಿಯಾಶೀಲ ರಂಗತಂಡಗಳ ಮೂಲಕ ನಾಟಕಗಳನ್ನು ನಿರ್ಮಿಸಿ ನಾಡಿನಾದ್ಯಂತ ಪ್ರದರ್ಶಿಸುವುದು
ಈ ಯೋಜನೆಯ ಉದ್ದೇಶವಾಗಿತ್ತು. ಇದರಿಂದಾಗಿ ಒಂದಿಷ್ಟು
ಹೊಸ ನಾಟಕಕಾರರು ಬರುತ್ತಾರೆ, ಹೊಸ ನಾಟಕಗಳು ರಂಗಭೂಮಿಗೆ ದಕ್ಕುತ್ತವೆ, ರಂಗತಂಡಗಳ ಮೂಲಕ ಹಲವಾರು
ಕಲಾವಿದರುಗಳಿಗೆ ಹಾಗೂ ಕೆಲವು ನಿರ್ದೇಶಕರುಗಳಿಗೆ ಕೆಸವೂ ದೊರೆಯುತ್ತದೆ, ಹೊಸ ಕಲಾವಿದರುಗಳೂ ಸಹ ಮೂಡಿಬರಬಹುದಾಗಿದೆ..
ಎನ್ನುವ ಆಶಯ ಸಚಿವೆ ಉಮಾಶ್ರೀಯವರದ್ದಾಗಿತ್ತು. ಆದರೆ.. ಉಮಾಶ್ರೀಯವರು ಅಂದುಕೊಂಡಿದ್ದೇ ಒಂದು.. ಆಗಿದ್ದೇ
ಬೇರೊಂದು. ಅಸಲಿಗೆ ಆಗಿದ್ದಾದರೂ ಏನು? ಉಮಾಶ್ರೀಯವರ ಲೆಕ್ಕಾಚಾರ ಎಲ್ಲಿ ತಪ್ಪಿತು? ಎಲ್ಲಾ ಇದ್ದು
ಇಡೀ ಯೋಜನೆ ಯಾಕೆ ವಿಫಲವಾಯಿತು? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಈ ಲೇಖನದ
ಹಿಂದಿರುವ ಉದ್ದೇಶ. ಮುಂದಿನ ಸರಕಾರಿ ಯೋಜನೆಗಳು ಈ ರೀತಿ ಹಳ್ಳ ಹಿಡಿಯಬಾರದು ಹಾಗೂ ಈ ಯೋಜನೆಯಲ್ಲಿ
ಪಾಲ್ಗೊಂಡು ಫಲಾನುಭವಿಗಳಾದ ಎಲ್ಲಾ ರಂಗಕರ್ಮಿಗಳು ತಮ್ಮನ್ನು ತಾವು ಪರಿಶೀಲನೆಗೆ ಒಡ್ಡಿಕೊಳ್ಳಲು ಪ್ರೇರಣೆಯಾಗಲಿ
ಎನ್ನುವುದೇ ಈ ಲೇಖನದ ಆಶಯ.
ಉಮಾಶ್ರೀಯವರು ಯಾವಾಗ ಜ್ಞಾನಪೀಠವೇರಿ
ವಿಶ್ರಾಂತ ಜೀವನ ನಡೆಸುತ್ತಿರುವ ಕಂಬಾರರನ್ನು ಈ “ಮಹಿಳೆ ಮತ್ತು ಮಕ್ಕಳು-ವರ್ತಮಾನದ
ನೋಟ”
ಯೋಜನೆಗೆ ಪ್ರಧಾನ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರೋ ಆಗಲೇ ಯೋಜನೆ ದಿಕ್ಕು ತಪ್ಪುವುದರ ಮುನ್ಸೂಚನೆ
ಆಗಿತ್ತು. ಯಾಕೆಂದರೆ ವಯೋಸಹಜ ಸಮಸ್ಯೆಗಳಿಂದ ಪರದಾಡುತ್ತಿರುವ ಕಂಬಾರರ ಪಂಚೇಂದ್ರಿಯಗಳು ಮೊದಲಿನ ಹಾಗೆ
ಕೆಲಸಮಾಡುತ್ತಿಲ್ಲ, ಕಿವಿಗಳು ಮಂದವಾಗಿವೆ, ಮಾತುಗಳಲ್ಲಿ ಆಲೋಚನೆಗಳಲ್ಲಿ ಸ್ಪಷ್ಟತೆಗಳಿಲ್ಲ. ಆದರೂ
ಅವರನ್ನು ಉತ್ಸವ ಮೂರ್ತಿಯಾಗಿಯಾದರೂ ಇರಿ ಎಂದು ಒಪ್ಪಿಸಬಾರದಿತ್ತು. ನಾಟಕ ಕಮ್ಮಟದ ಉಸ್ತುವಾರಿಗಾಗಿ
ಕಂಬಾರರಿಗೆ ಎರಡು ಲಕ್ಷ ರೂಪಾಯಿ ಕೊಟ್ಟು ಬಾಕಿ ಎಲ್ಲ ಭತ್ಯೆಗಳ ಜೊತೆಗೆ ಅವರ ಇತರೇ ಅಗತ್ಯಗಳನ್ನೂ
ಪೂರೈಸಿದ್ದರಿಂದ ಕಂಬಾರರು ಒಪ್ಪಿದರು. ಆದರೆ ಇಡೀ ಯೋಜನೆಗೆ ಅವರ ಕೊಡುಗೆ ಸೀಮಿತವಾಗಿತ್ತು. ಆದರೂ
ಉಮಾಶ್ರೀಯವರಿಗೆ ಕಂಬಾರರ ಹೆಸರು ಯೋಜನೆಗೆ ಬೇಕಾಗಿತ್ತು.
ಆದರೆ.. ಇಡೀ ಯೋಜನೆಯನ್ನು
ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆಸಿದವರು ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಸಂಸ್ಕೃತಿ ಇಲಾಖೆಯ
ನಿರ್ದೇಶಕರಾದ ದಯಾನಂದರವರು. ಕೇವಲ ನಾಟಕ ಶಿಬಿರದ ನಿರ್ದೇಶಕರಾಗಿ ಆಯ್ಕೆಗೊಂಡ ಕೆವೈಎನ್‌ರವರು ಹೆಚ್ಚು ಕಡಿಮೆ ಇಡೀ ಯೋಜನೆಯ ರೂವಾರಿಗಳಾದರು. ಆಗಾಗ ಹಳಿ ತಪ್ಪುತ್ತಿದ್ದ
ಯೋಜನೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಿದರು. ಅದಕ್ಕಾಗಿ ಅನೇಕಾನೇಕ ರಾಜಿಗಳನ್ನೂ ಮಾಡಿಕೊಂಡರು.
ಮಾಡಿಕೊಂಡ ರಾಜಿಗಳನ್ನು ಸಮರ್ಥಿಸಿಕೊಂಡರು. ಯೋಜನೆಯ ನಾಯಕತ್ವ ಕಂಬಾರರದ್ದಾದರೂ ಕೆವೈಎನ್ ಕಾರ್ಯಕಾರೀ
ನಿರ್ದೇಶಕರ ಹಾಗೆ ಕೆಲಸ ಮಾಡಿದರು. ಹೇಗೋ ಇಡೀ ಯೋಜನೆ ಕುಂಟುತ್ತಾ ಎಡವುತ್ತಾ ದಡ ಸೇರಿದ್ದಕ್ಕೆ ಕೆವೈಎನ್
ಕಾರಣವಾಗಿದ್ದಂತೂ ಸುಳ್ಳಲ್ಲಾ.
ನಾಟಕ ರಚನಾ ಕಮ್ಮಟ : ಮೊಟ್ಟಮೊದಲು ಕೆವೈಎನ್ ಸಾರಥ್ಯದಲ್ಲಿ
ನಾಟಕ ರಚನಾ ಕಮ್ಮಟವೊಂದು ಕುಪ್ಪಳ್ಳಿಯಲ್ಲಿ 2016 ಮೇ 20 ರಿಂದ ಮೂರು ದಿನಗಳ ಕಾಲ ನಡೆಸಲಾಯಿತು. ಈ
ಶಿಬಿರದಲ್ಲಿ ನಾಟಕ ರಚನೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲೇ ಕೆವೈಎನ್ ಎಡವಿದರು. ಯಾವುದೇ
ಸರಕಾರಿ ಪ್ರಾಜೆಕ್ಟ್ ಮಾಡಿದರೂ ಮೊದಲು ಪತ್ರಿಕೆಯಲ್ಲಿ ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸಿ.. ಆಸಕ್ತಿ
ವಹಿಸಿ ಬಂದವರಲ್ಲಿ ಸೂಕ್ತವಾದವರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಇವೆಲ್ಲವನ್ನೂ ನಿರ್ಲಕ್ಷಿಸಿದ
ಕೆವೈಎನ್ ಸಾಹೇಬರು ತಮಗೆ ಬೇಕಾದವರಿಗೆ ಮಾತ್ರ ತಿಳಿಸಿ ಕಮ್ಮಟಕ್ಕೆ ಆಹ್ವಾನಿಸಿದರು. ಮೂಲಭೂತವಾಗಿ
ಕೆವೈಎನ್ ಕವಿ ಹಾಗೂ ಪ್ರಾದ್ಯಾಪಕರು. ಅವರ ಸಂಪರ್ಕದಲ್ಲಿರುವ ಕವಿಗಳನ್ನು, ಕಥೆಗಾರರನ್ನು, ಸಾಹಿತ್ಯ
ವಲಯದವರನ್ನು ನಾಟಕ ರಚನೆಗೆ ಕರೆಸಿಕೊಂಡರು. ಈ ಹಿಂದೆ ಕವಿಗಳಾಗಿದ್ದ ಕೆವೈಎನ್‌ರವರನ್ನು ಆಹ್ವಾನಿಸಿದ
ಸಿಜಿಕೆಯವರು ನಾಟಕ ರಚನಾ ಕಮ್ಮಟ ಮಾಡಿದ್ದು.. ಅದರಲ್ಲಿ ಕೆವೈಎನ್ ಬರೆದ ನಾಟಕದಿಂದ ಅವರೂ ನಾಟಕಕಾರರು
ಆದರು ಎನ್ನುವ ಸ್ವಾನುಭವವನ್ನೇ ನಂಬಿದ ಈ ಮೇಷ್ಟ್ರು ಕವಿಗಳು ಹಾಗೂ ಬರಹಗಾರರನ್ನೇ ನಾಟಕ ಕಮ್ಮಟಕ್ಕೆ ಆಯ್ಕೆಮಾಡಿಕೊಂಡರು.
ನಾಟಕ ಬರೆಯಲಿ ಬಿಡಲಿ ನಾಟಕ ಕಮ್ಮಟಕ್ಕೆ ಮೂರು ದಿನ ಬಂದರೆ ಸಾಕು ಟಿಎ ಡಿಎ ಜೊತೆಗೆ ಹತ್ತು ಸಾವಿರ
ಹಣ ಕೊಡುವುದು ಗ್ಯಾರಂಟಿ ಎಂದು ಹೇಳಿದ್ದೂ ಸಹ ಒಂದು ಕಾರಣವಾಗಿ ಐವತ್ತಕ್ಕೂ ಹೆಚ್ಚು ಜನರು ನಾಟಕ ರಚನಾ
ಕಮ್ಮಟದಲ್ಲಿ ಭಾಗವಹಿಸಿದರು.
ಯಾವ ಕೆಲಸಕ್ಕೆ ಯಾರನ್ನು ಆಯ್ಕೆ
ಮಾಡಿಕೊಳ್ಳಬೇಕು ಎನ್ನುವುದು ಗೊತ್ತಿಲ್ಲದೇ ಹೋಗಿದ್ದರಿಂದ ನಾಟಕ ರಚನಾಕಾರರ ಆಯ್ಕೆಯಲ್ಲೇ ಮೊದಲು ತಪ್ಪು
ಮಾಡಲಾಯಿತು. ಈಗಾಗಲೇ ಒಂದೆರಡು ನಾಟಕಗಳನ್ನು ಬರೆದವರನ್ನು ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು
ಗುರುತಿಸಿ ನಾಟಕ ರಚನೆಗೆ ಆಹ್ವಾನಿಸಿದ್ದರೆ ಗಟ್ಟಿಯಾದ ನಾಟಕಗಳು ಬರುತ್ತಿದ್ದವೇನೋ? ಹೋಗಲಿ ಕಮ್ಮಟಕ್ಕೆ
ಆಯ್ಕೆಮಾಡಿ ಆಹ್ವಾನಿಸಿದವರಿಗೆ ಕನಿಷ್ಟ ನಾಟಕ ರಚನೆಯ ವ್ಯಾಕರಣವನ್ನಾದರೂ ಮೂರು ದಿನಗಳ ಶಿಬಿರದಲ್ಲಿ
ಕಲಿಸಿಕೊಡಬಹುದಾಗಿತ್ತು. ಭಾಗವಹಿಸಿದ ಬಹುತೇಕರಿಗೆ ಅದರ ನಿರೀಕ್ಷೆ ಇತ್ತು. ಆದರೆ.. ಮೂರು ದಿನಗಳಲ್ಲಿ
ಯಾವ ಸಂಪನ್ಮೂಲ ವ್ಯಕ್ತಿಗಳೂ ನಾಟಕ ರಚನೆಯ ತಂತ್ರಗಳ ಬಗ್ಗೆಯಾಗಲೀ ಇಲ್ಲವೇ ದೃಶ್ಯಗಳನ್ನು ಕಟ್ಟುವ
ಕೌಶಲ್ಯದ ಬಗ್ಗೆಯಾಗಲೀ ಪಾಠಗಳನ್ನು ಮಾಡಲೇ ಇಲ್ಲಾ. ಮೂರು ನಾಟಕಗಳನ್ನು ಆಯ್ದು ಮೊದಲೇ ಎಲ್ಲರಿಗೂ ಕೊಟ್ಟು
ಓದಿಕೊಂಡು ಬರಬೇಕೆಂದು ಹೇಳಿದ್ದರೂ ಬಹುತೇಕರು ಆ ಕೆಲಸ ಮಾಡಿರಲಿಲ್ಲಾ ಹಾಗೂ ಆ ಮೂರು ನಾಟಕಗಳ ಬಗ್ಗೆಯೂ
ಸಮಗ್ರವಾಗಿ ಚರ್ಚೆಯನ್ನೂ ಮಾಡಲಾಗಲಿಲ್ಲಾ, ಮಾಡಿದ್ದರೂ
ಅದರಿಂದ ನಾಟಕ ರಚನೆಗೆ ಹೆಚ್ಚು ಪ್ರಯೋಜನವೂ ಆಗುತ್ತಿರಲಿಲ್ಲ.
ನಾಟಕ ಅಂದರೇನು? ನಾಟಕದ ವಸ್ತು
ವಿಷಯಗಳ ಆಯ್ಕೆ ಹೇಗಿರಬೇಕು? ಆಯ್ದ ವಿಷಯವನ್ನು ಹೇಗೆ ಪ್ಲಾಟ್ ಮಾಡಿಕೊಳ್ಳಬೇಕು, ವಸ್ತುವಿನ ನಿರೂಪಣೆಯ
ಕ್ರಮ ಯಾವ ರೀತಿ ಇರಬೇಕು? ಪಾತ್ರ ಸೃಷ್ಟಿ ಮತ್ತು ಪೋಷಣೆಯ ಕ್ರಮಗಳೇನು? ಆರಂಭ.. ಬೆಳವಣಿಗೆ.. ಹಾಗೂ
ಅಂತ್ಯಗಳೆಂಬ ಸೂತ್ರದ ಮಹತ್ವವೇನು? ಸಂಘರ್ಷಗಳನ್ನು ಹೇಗೆ ನಿರೂಪಿಸಬೇಕು? ದೃಶ್ಯಗಳನ್ನು ಹೇಗೆ ಕಟ್ಟಬೇಕು..
ಎನ್ನುವ ಮಾಹಿತಿಗಳನ್ನು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಕೊಡಬೇಕಾಗಿತ್ತು.
ಯಾಕೆಂದರೆ ಅಲ್ಲಿ ಬಂದ ಬಹುತೇಕರಿಗೆ ನಾಟಕ ರಚನೆ ಎನ್ನುವುದು ಹೊಸದಾಗಿತ್ತು. ಎಲ್ಲರಿಗೂ ನಾಟಕ ರಚನೆಯ
ವ್ಯಾಕರಣವನ್ನು ಹೇಳಿಕೊಡುವ ಅಗತ್ಯವಿತ್ತು. ಆದರೆ.. ನಾಟಕ ರಚನಾ ಕಮ್ಮಟ ಎಂದು ಕರೆಸಿ ನಾಟಕ ರಚನೆಯನ್ನೇ
ಹೇಳಿಕೊಡದೇ ಇದ್ದುದರಿಂದ ಬಹುತೇಕರಿಗೆ ನಿರಾಶೆಯಾಯಿತು. ಬರೆಯುವ ನಾಟಕದ ಸಾರಲೇಖನವನ್ನಾದರೂ ಬರೆದು
ಕೊಡಿ ಎಂದು ಕಟ್ಟಾಜ್ಞೆ ಮಾಡಿದ್ದರೂ ಅರ್ಧಕ್ಕರ್ಧ ಶಿಬಿರಾರ್ಥಿಗಳು ಬರೆದು ಕೊಡಲಿಲ್ಲಾ. ಸಾರಾಂಶ ಬರೆದು
ಓದಿದವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಸಂಪನ್ಮೂಲ ವ್ಯಕ್ತಿಗಳೇ ನಾಟಕಕಾರರೇ ಆಗಿರಲಿಲ್ಲಾ. ಬಹುತೇಕರಿಗೆ
ನಾಟಕ ಬರೆದ ಅನುಭವವೂ ಇರಲಿಲ್ಲಾ. ಹೀಗಾಗಿ ಮೊದಲ ಹಂತದ ರಚನಾ ಕಮ್ಮಟವೇ ತನ್ನ ಆಶಯದಲ್ಲಿ ಸಂಪೂರ್ಣ
ಯಶಸ್ವಿಯಾಗಲಿಲ್ಲ. ಒಂದು ತಿಂಗಳಲ್ಲಿ ಎಲ್ಲರೂ ನಾಟಕಗಳನ್ನು ಬರೆದು ಕಳುಹಿಸಿಕೊಡಬೇಕು ಎಂಬ ಪರಮಾನು
ಹೊರಡಿಸಿದರೂ, ಇಲಾಖೆ ಪತ್ರಗಳನ್ನು ಬರೆದು ಜ್ಞಾಪಿಸಿದರೂ, ಆಯ್ಕೆಯಾದ ನಾಟಕಕ್ಕೆ ಮತ್ತೆ ಕಾಲು ಲಕ್ಷ
ರೂಪಾಯಿ ಕೊಡುತ್ತೇವೆಂದು ಹೇಳಿದರೂ ಬಹುತೇಕರು ನಾಟಕಗಳನ್ನು ಬರೆದು ಪೂರ್ಣಗೊಳಿಸಿರಲಿಲ್ಲ, ಕೊಟ್ಟಿದ್ದ
ಕಾಲಾವಕಾಶ ಒಂದು ತಿಂಗಳು ಹೋಗಿ ಎರಡು ತಿಂಗಳಾಯಿತು.
ನಾಟಕ ಪರಿಷ್ಕರಣಾ ಕಮ್ಮಟ
: ಕುಪ್ಪಳ್ಳಿಯಲ್ಲಿ
ಮತ್ತೆ ಜುಲೈ 22ರಿಂದ ಮೂರು ದಿನಗಳ ಕಾಲ ನಾಟಕ ಪರಿಷ್ಕರಣಾ ಕಮ್ಮಟ ಮಾಡಲಾಯಿತು. ಈ ಕಮ್ಮಟದಲ್ಲಿ ಮೂರೂ
ದಿನಗಳ ಕಾಲ ಇರಲೇಬೇಕೆಂಬ ನಿಯಮ ಮಾಡಿದರೂ ಕೆಲವರು ತಮಗನುಕೂಲವಾದಾಗ ಬಂದು ನಾಟಕ ಓದಿ ಹೋದರು. ಒಟ್ಟು
ಮೂವತ್ತೇಳು ಜನರು ಪರಿಷ್ಕರಣಾ ಕಮ್ಮಟದಲ್ಲಿ ನಾಟಕಗಳನ್ನು ಓದಿದರು. ಹೀಗೆ ಓದಿದ ನಾಟಕಗಳನ್ನು ಆಯ್ಕೆ
ಮಾಡಿಕೊಳ್ಳಲು ಕೆಲವು ಸಂಪನ್ಮೂಲ ವ್ಯಕ್ತಿಗಳನ್ನು ದಿನಕ್ಕೆ ಐದು ಸಾವಿರ ಗೌರವಧನ ಹಾಗೂ ಟಿಎ ಡಿಎ ಕೊಟ್ಟು
ಕರೆಸಲಾಗಿತ್ತು. ನಾಟಕಗಳನ್ನು ಆಯ್ಕೆ ಮಾಡಲು ನಾಟಕ ರಚನೆಯಲ್ಲಿ ಅಪಾರ ಅನುಭವ ಇರುವವರು ಬೇಕಾಗಿತ್ತು.
ನಾಟಕಕಾರರಾಗಿ ಉತ್ತಮ ನಾಟಕಗಳನ್ನು ಕೊಟ್ಟವರು ಇರಬೇಕಿತ್ತು. ಆದರೆ.. ಸಂಪನ್ಮೂಲ ವ್ಯಕ್ತಿಗಳಲ್ಲಿ ಬಹುತೇಕರು ನಾಟಕಕಾರರೂ ಅಲ್ಲಾ.. ರಂಗವಿಮರ್ಶಕರೂ
ಆಗಿರಲಿಲ್ಲಾ. ಸಾಹಿತ್ಯ ವಲಯದವರು, ಅನುವಾದಕರು, ರಂಗನಿರ್ದೇಶಕರುಗಳಿಗೆ ನಾಟಕ ಆಯ್ಕೆಯ ಜವಾಬ್ದಾರಿ
ವಹಿಸಲಾಯಿತು. ನಾಟಕದ ಸ್ವರೂಪ, ಬಳಸಿದ ರಂಗತಂತ್ರಗಳು, ರಂಗಸಾಧ್ಯತೆಗಳು ಹಾಗೂ ದೃಶ್ಯ ಸಂಯೋಜನೆಗಳ
ಬಗ್ಗೆ ಹೆಚ್ಚು ಅನುಭವ ಇರುವವರು ನಾಟಕಗಳ ಆಯ್ಕೆಯನ್ನು ಮಾಡಬಹುದಾಗಿತ್ತು. ಹೂಲಿ ಶೇಖರ್, ರಾಜೇಂದ್ರ
ಕಾರಂತ್‌ರಂತಹ ಅನುಭವಿ ನಾಟಕಕಾರರು ಆಯ್ಕೆದಾರರಾಗಿದ್ದರೆ ಸೂಕ್ತವಾಗುತ್ತಿತ್ತು. ಹೀಗಾಗಿ ನಾಟಕಗಳನ್ನು
ಆಯ್ಕೆ ಮಾಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಯಡವಿದ್ದು ಎರಡನೆಯ ಪ್ರಮಾದವಾಗಿತ್ತು.
ನಾಟಕ ಬರೆದು ಅನುಭವವಿಲ್ಲದವರಿಂದ ಹಾಗೂ ನಾಟಕ ರಚನೆಯ ಕುರಿತು ಸೂಕ್ತ ಪೂರ್ವಭಾವಿ ತರಬೇತಿ ದೊರೆಯದ್ದರಿಂದ
ಬಹಳಷ್ಟು ನಾಟಕಗಳು ದುರ್ಬಲವಾಗಿದ್ದವು.
ಪೌರಾಣಿಕ, ಚಾರಿತ್ರಿಕ ಇಲ್ಲವೇ
ಜಾನಪದಗಳಿಂದ ಕೂಡಿದ ವಸ್ತುವನ್ನು ಹೊಂದಿರುವ ನಾಟಕಗಳು ಇರಬಾರದು ಹಾಗೂ ಸ್ವತಂತ್ರ ನಾಟಕಗಳ ರಚನೆ ಮಾಡಬೇಕು
ಎನ್ನುವುದು ಈ ಕಮ್ಮಟದ ಪ್ರಮುಖ ನಿಯಮವಾಗಿತ್ತು. ಆದರೆ.. ಸ್ವತಂತ್ರ ವಿಷಯವನ್ನು ಆಯ್ದು ನಾಟಕ ಮಾಡಲು
ಸಾಧ್ಯವಾಗದ ಅರ್ಧಕ್ಕರ್ಧ ಶಿಬಿರಾರ್ಥಿಗಳು ಈ ರೂಲನ್ನು ಬ್ರೇಕ್ ಮಾಡಿದರು, ಹಾಗೂ ಆಯ್ಕೆಯಾದ ನಾಟಕಗಳಲ್ಲಿ
ಇಂತಹ ನಾಟಕಗಳೇ ಹೆಚ್ಚು ಆಯ್ಕೆಯಾಗಿದ್ದೊಂದು ವಿಪರ್ಯಾಸ. ನಾಟಕ ಕಮ್ಮಟದ ನಿರ್ದೇಶಕರಾದ ಡಾ.ಕೆವೈಎನ್
ಕಮ್ಮಟದಲ್ಲಿ ಮಾಡಿದ ಎಲ್ಲಾ ನಿಬಂಧನೆಗಳೂ ಮುರಿದು ಬಿದ್ದವು, ಹಾಗೂ ನಿಯಮಬಾಹಿರತೆಯನ್ನೂ ಒಪ್ಪಿಕೊಂಡು
ರಾಜಿಯಾಗುವ ಅನಿವಾರ್ಯತೆ ನಾರಾಯಣಸ್ವಾಮಿಗಳದ್ದಾಗಿತ್ತು. ಈ ಸಂಪನ್ಮೂಲ ಮಹನೀಯರು ಕೆಲವು ಉತ್ತಮ ನಾಟಕಗಳನ್ನು
ರಿಜೆಕ್ಟ್ ಮಾಡಿದರೆ ಇನ್ನು ಕೆಲವು ದುರ್ಬಲ ನಾಟಕಗಳನ್ನು ಆಯ್ಕೆ ಮಾಡಿದರು. ಅವರ ಮಾನದಂಡಗಳು ಅವರಿಗೆ
ಪ್ರೀತಿ ಅನ್ನೋತರ ಆಯಿತು. ನಾಟಕಕಾರರಾಗಿ ಹೆಸರು ಮಾಡಿದ ರಾಜಪ್ಪ ದಳವಾಯಿಯವರ ನಾಟಕ ಮೊದಲ ಸುತ್ತಿನಲ್ಲೇ
ನಿರಾಕರಣೆಗೆ ಒಳಗಾಯಿತು. ನಿಜಕ್ಕೂ ಅದೊಂದು ಉತ್ತಮ ನಾಟಕವಾಗಿತ್ತು. ಡಾ.ವಿಕ್ರಂ ವಿಸಾಜಿಯವರು ಬರೆದ
ಚರಿತ್ರೆ ಆಧರಿಸಿದ ನಾಟಕ ಕಾವ್ಯಾತ್ಮಕವಾಗಿ ಚೆನ್ನಾಗಿತ್ತು.. ಆದರೆ ಆಯ್ಕೆ ಮಾಡುವವರಿಗೆ ಅದು ಇಷ್ಟವಾಗಲಿಲ್ಲಾ.
ಹುಲಿಕುಂಟೆ ಮೂರ್ತಿಯವರು ಸಾವಿತ್ರಿಬಾಯಿ ಪುಲೆಯವರ ಕುರಿತು ಬರೆದ ನಾಟಕವೂ ಆಯ್ಕೆಯಾಗಬೇಕಿತ್ತು. ಆದರೆ
ಅದೂ ಕೂಡಾ ರಿಜೆಕ್ಟ್ ಮಾಡಲಾಯಿತು. ಇವೆರಡೂ ನಾಟಕಗಳು
ಚಾರಿತ್ರಿಕ ಹಿನ್ನಲೆಯುಳ್ಳವುಗಳು ಎನ್ನುವುದೇ ಅವುಗಳ
ನಿರಾಕರಣೆಗೆ ಕಾರಣವಾಗುವುದಾದರೆ ಬಹುತೇಕ ನಾಟಕಗಳು ಆತರದ ಹಿನ್ನೆಲೆಯಲ್ಲಿ ರಿಜೆಕ್ಟಾಗಬೇಕಾಗಿತ್ತು.
ಆದರೆ ॒ಆಯ್ಕೆ ಮಾಡುವವರಿಗೆ ಅವರದೇ
ಆದ ಮಾನದಂಡಗಳಿದ್ದವು.
ನಾಟಕಗಳ ಆಯ್ಕೆ : ಹಾಗೂ ಹೀಗೂ ಮೂರು ದಿನಗಳ
ನಾಟಕ ಪರಿಷ್ಕರಣಾ ಕಮ್ಮಟ ನಡೆಯಿತು. ಆದರೆ.. ಕಂಬಾರರ ನೇತೃತ್ವದಲ್ಲಿ ನಡೆದ ಅಂತಿಮ ಆಯ್ಕೆಯ ಪಟ್ಟಿಯನ್ನು
ನೋಡಿದಾಗ ಸಂಪನ್ಮೂಲ ವ್ಯಕ್ತಿಗಳೇ ದಿಗಿಲುಬಿದ್ದರು. ಯಾವ ನಾಟಕ ನಾಟಕವಾಗಲು ಸಾಧ್ಯವೇ ಇಲ್ಲಾ ಎಂದು
ಆಯ್ಕೆ ಸಮಿತಿಯವರು ಹೇಳಿ ರಿಜೆಕ್ಟ್ ಮಾಡಿದ್ದರೋ ಅಂತಹ ನಾಟಕಗಳು ಅಂತಿಮವಾಗಿ ಆಯ್ಕೆಯಾಗಿದ್ದವು. ಒಂದೇ
ಒಂದು ನಾಟಕದ ರೀಡಿಂಗ್ ಕೇಳದ ಹಾಗೂ ಯಾವ ನಾಟಕದ ಸ್ಕ್ರಿಪ್ಟ್ ಓದದ ಕಂಬಾರರು ನಾಟಕಗಳನ್ನು ಅಂತಿಮವಾಗಿ
ಆಯ್ಕೆ ಮಾಡಿದರು ಎನ್ನುವುದೇ ವಿಪರ್ಯಾಸ. ನಾಟಕದ ಆಯ್ಕೆ ಮಾಡುವವರು ಕಡಿಮೆ ಅಂಕ ಹಾಕಿದ ನಾಟಕಗಳು ಆಯ್ಕೆಯಾಗಿದ್ದು
ತಿಳಿದ ಸಂಪನ್ಮೂಲ ವ್ಯಕ್ತಿಗಳೂ ಬೇಸರ ಮಾಡಿಕೊಂಡರು. ಆಯ್ಕೆ ಸಮಿತಿಯಲ್ಲಿದ್ದ ನಟರಾಜ ಹೊನ್ನವಳ್ಳಿಯವರು
ನಾಟಕಗಳ ಆಯ್ಕೆ ತೃಪ್ತಿಕರವಾಗಿಲ್ಲವೆಂದು ತಮ್ಮ ಅತೃಪ್ತಿಯನ್ನು ಹೊರಹಾಕಿದರು. ನಾಟಕಗಳ ಅಂತಿಮ ಆಯ್ಕೆಯಲ್ಲೂ
ಕಾಣುವ ಹಾಗೂ ಕಾಣದ ಶಕ್ತಿಗಳ ಕೈವಾಡ ಇದೆ ಎಂದು ಕೆಲವರು ಮಾತಾಡಿಕೊಂಡರು. ಹೇಗಾದರೂ 20 ಹವ್ಯಾಸಿ ನಾಟಕಗಳನ್ನು
ಹಾಗೂ 10 ವೃತ್ತಿ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಬಂದಿರುವ
37 ಜನರಲ್ಲಿ 30 ನಾಟಕಗಳು ಆಯ್ಕೆಯಾದವು. ನಾಲ್ಕಾರು ಉತ್ತಮ ನಾಟಕಗಳು ಮೌಲ್ಯಮಾಪಕರ ನಿರ್ಲಕ್ಷದಿಂದಾಗಿ
ನಿರಾಕರಣೆಗೊಳಗಾದರೆ.. ಕೆಲವಾರು ದುರ್ಬಲ ನಾಟಕಗಳು ಆಯ್ಕೆಯಾದವು. ಹೀಗೆ ಆಯ್ಕೆಯಾದ ನಾಟಕಗಳ ಕೃತಿಕಾರರಿಗೆ
ಇಪ್ಪತ್ತೈದು ಸಾವಿರ ಹಣವನ್ನೂ ಕೊಡುವುದಂತೂ ಖಚಿತವಾಯಿತು.
ರಂಗತಂಡಗಳ ಆಯ್ಕೆ : ಹಾಗೂ ಹೀಗೂ ನಾಟಕಗಳ ಆಯ್ಕೆ
ಮಾಡಲಾಯಿತು. ಆದರೆ.. ಈ ನಾಟಕಗಳನ್ನು ಪ್ರದರ್ಶಿಸಲು
ನಾಟಕ ತಂಡಗಳು ಬೇಕಾಗಿತ್ತು. ತರಾತುರಿಯಲ್ಲಿ ಜುಲೈ25ರಂದು
ಕೆಲವಾರು ನಾಟಕ ತಂಡಗಳ ಮುಖ್ಯಸ್ತರನ್ನು ಕುಪ್ಪಳ್ಳಿಗೆ ಕರೆಸಲಾಯಿತು. ಅವರ ಮುಂದೆ ಆಯ್ಕೆಯಾದ ನಾಟಕಗಳ
ಸ್ಕ್ರಿಪ್ಟ್ ಇಟ್ಟು ಕೈಗೆ ಒಂದು ಲಕ್ಷ ರೂಪಾಯಿಗಳ ಚೆಕ್ ಕೊಟ್ಟು ಇನ್ನೂ ಮೂರು ಲಕ್ಷ ರೂಪಾಯಿಗಳನ್ನು
ಕೊಡಮಾಡಲಾಗುವುದು ಎನ್ನುವ ಭರವಸೆಯನ್ನೂ ಕೊಡಲಾಯಿತು.
ರಂಗತಂಡಗಳನ್ನು ಅದ್ಯಾವ ಮಾನದಂಡದಿಂದ ಆಯ್ಕೆ ಮಾಡಲಾಯಿತೋ ಗೊತ್ತಿಲ್ಲಾ. ಬೆಂಗಳೂರು ನಗರ ಹೊರತು ಪಡಿಸಿ
ಬೇರೆ ಜಿಲ್ಲೆಗಳ ಪ್ರಾತಿನಿದ್ಯತೆ ಇರುವಂತೆ ನೋಡಿಕೊಳ್ಳಲಾಯಿತು. ಆದರೆ.. ರಂಗಬದ್ದತೆ ಇರುವ ರಂಗತಂಡಗಳ ಆಯ್ಕೆ ಮಾಡಬೇಕಾಗಿತ್ತು.
ಅದರ ಬದಲಾಗಿ ಸರಕಾರ ಕೊಡುವ ಹಣಕ್ಕಾಗಿಯೇ ನಾಟಕ ಮಾಡಲು ಉತ್ಸುಕರಾಗಿ ಬಂದವರಿಗೆ ನಾಟಕ ಪ್ರದರ್ಶನ ಮಾಡಲು
ಅವಕಾಶ ಕೊಡಲಾಯಿತು. ಕೆಲವು ರಂಗತಂಡಗಳು ನಿಜಕ್ಕೂ ರಂಗಬದ್ದತೆಯಿಂದ ಕೆಲಸ ಮಾಡುತ್ತಿರುವುದರಲ್ಲಿ ಸಂದೇಹವಿಲ್ಲ.
ಅದರೆ.. ಇನ್ನು ಕೆಲವು ಅನುದಾನಕ್ಕಾಗಿಯೇ ನಾಟಕ ಮಾಡುವ ರಂಗತಂಡಗಳೂ ಆಯ್ಕೆಯಾಗಿದ್ದವು. ರಂಗನಿರ್ದೇಶಕರ
ಆಯ್ಕೆಯನ್ನು ರಂಗತಂಡಗಳ ರೂವಾರಿಗಳಿಗೆ ಬಿಡಲಾಯಿತು ಹಾಗೂ ನಿರ್ದೇಶಕರಿಗೆ ಅರ್ಧ ಲಕ್ಷ ಸಂಭಾವಣೆ ಕೊಡುವ
ಮಾತಾಯಿತು.
ಉತ್ತಮ ಕ್ರಿಯಾಶೀಲ ನಿರ್ದೇಶಕರು
ದುರ್ಬಲ ರಂಗಪಠ್ಯದಲ್ಲೂ ಸೂಕ್ತ ಬದಲಾವಣೆ ಮಾಡಿಕೊಂಡು ಅತ್ಯೂತ್ತಮ ನಾಟಕ ಕಟ್ಟಿ ಕೊಡುತ್ತಾರೆ. ಅದಕ್ಕೆ
ಸಿಜಿಕೆ, ಬಿ.ವಿ.ಕಾರಂತರಂತವರೇ ಮಾದರಿ. ಆದರೆ.. ರಂಗತಂಡಗಳು ತಮಗನುಕೂಲವಾಗುವಂತಹ ನಿರ್ದೇಶಕರುಗಳನ್ನು
ಕರೆಸಿಕೊಂಡು ನಾಟಕ ಕಟ್ಟಲು ನೋಡಿದರು. ಹೀಗಾಗಿ ಬಹುತೇಕ ನಾಟಕಗಳು ಕಳಪೆಯಾಗಿ ಹೊರಹೊಮ್ಮಿದವು. ಡಾ.ಶ್ರೀಪಾದ
ಭಟ್, ಮಾಲತೇಶ್ ಬಡಿಗೇರ್, ಮಂಜುನಾಥ ಬಡಿಗೇರ್, ಜೋಸೆಪ್, ಕೃಷ್ಣಮೂರ್ತಿ ಕವತ್ತಾರ್.. ರವರಂತಹ ನಿರ್ದೇಶಕರುಗಳನ್ನು
ಆಹ್ವಾನಿಸಿ ನಾಟಕಗಳನ್ನು ಮಾಡಿಸಿದ್ದರೆ ಜಾಳು ಜಾಳಾದ ನಾಟಕಗಳಲ್ಲೂ ಕಾಳುಗಳನ್ನು ಕಾಣಬಹುದಾಗಿತ್ತು.
ಉಡುಪಿ, ಕೊಡಗು ರಂಗತಂಡಗಳು ಸರಕಾರ ಕೊಟ್ಟ ಸಹಾಯಧನಕ್ಕೆ ತಕ್ಕುದಾದ ಸೆಟ್, ಕಾಸ್ಟೂಮ್ ಮಾಡಿ ನಾಟಕಗಳನ್ನು
ರಿಚ್ ಆಗಿ ಕಟ್ಟಿಕೊಟ್ಟರೆ ಬಹುತೇಕ ರಂಗತಂಡಗಳ ನಾಟಕಗಳು ಬಡತನದಲ್ಲಿ ನಾಟಕ ಕಟ್ಟಿಕೊಟ್ಟವು. ಇಷ್ಟೆಲ್ಲಾ
ಹಣ ಕೊಟ್ಟರೂ ಪ್ರದರ್ಶನಗಳು ಕಳೆಗಟ್ಟಲಿಲ್ಲ ಎನ್ನುವ ಚಂತೆ ಯೋಜನೆಯ ಆಯೋಜಕರನ್ನು ಕಾಡಿದ್ದಂತೂ ಸತ್ಯ.
ರಂಗಪ್ರದರ್ಶನ : 2016 ಅಕ್ಟೋಬರ್ ಇಲ್ಲವೇ
ನವೆಂಬರ್ ತಿಂಗಳಲ್ಲಿ ಎಲ್ಲಾ ನಾಟಕಗಳ ಪ್ರದರ್ಶನಗಳೂ ಆಗಬೇಕಾಗಿತ್ತು. ಅದಕ್ಕಾಗಿ ಕೆಲವು ರಂಗತಂಡಗಳು
ಸಿದ್ದತೆ ನಡೆಸಿದರೆ ಇನ್ನು ಕೆಲವು ರಂಗತಂಡಗಳು ನೆಮ್ಮದಿಯಾಗಿ ಮಲಗಿದ್ದವು. ನಾಟಕಗಳ ಸಿದ್ದತೆಯ ಮೇಲೆ
ಹದ್ದಿನ ಕಣ್ಣಿಟ್ಟಿದ್ದ ಕೆವೈಎನ್ ಟೀಂ ರಂಗತಂಡಗಳ ಮೇಲೆ ಒತ್ತಾಯ ಹೇರುತ್ತಲೇ ಇತ್ತು. ಕೆಲವು ನಾಟಕಗಳು
ಸಿದ್ದವಾದವಾದರೂ ಬೆಂಗಳೂರಿನಲ್ಲಿ ನಾಟಕೋತ್ಸವ ಮಾಡುವ ದಿನಾಂಕ ಮಾತ್ರ ಮುಂದಕ್ಕೆ ಹೋಗತೊಡಗಿತು. ಅಂತೂ
ಇಂತೂ ಫೆಬ್ರುವರಿ 13 ರಿಂದ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರ ಹಾಗೂ ಕಲಾಗ್ರಾಮದಲ್ಲಿ ಏಕಕಾಲದಲ್ಲಿ
“ಮಹಿಳೆ
ಮತ್ತು ಮಕ್ಕಳ ವರ್ತಮಾನದ ನೋಟ” ಎನ್ನುವ ಹವ್ಯಾಸಿ ರಂಗಭೂಮಿ ನಾಟಕೋತ್ಸವ ಆಯೋಜನೆಗೊಂಡಿತು.
ಇಲ್ಲಿ ನಾಟಕಗಳನ್ನು ಮಾಡುವ ಮುನ್ನ ಅವುಗಳ ಕ್ವಾಲಿಟಿ ಚೆಕ್ ಮಾಡುವ ಕೆಲಸವನ್ನು ಶುರುಮಾಡಿದರು. ಅದಕ್ಕೆ
ನಾಟಕ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳನ್ನು ರಂಗತಂಡಗಳಿದ್ದಲ್ಲಿ ಕಳುಹಿಸಿ ನಾಟಕಗಳನ್ನು ನೋಡಿ ರಿಪೋರ್ಟ
ಕೊಡಲು ನಿಯಮಿಸಲಾಯಿತು. ಈಗಲೂ ಸಹ ಕಳಪೆ ನಾಟಕಗಳನ್ನು ರಿಜೆಕ್ಟ್ ಮಾಡಿ ಇರುವುದರಲ್ಲೇ ಉತ್ತಮ ನಾಟಕಗಳನ್ನು
ಆಯ್ಕೆ ಮಾಡುವ ಕೊಟ್ಟಕೊನೆಯ ಅವಕಾಶವಿತ್ತು. ತುಮಕೂರಿನ ಹೆಚ್ಚ.ಎಂ.ರಂಗಯ್ಯ ಹಾಗೂ ಕೆಜಿಎಪ್ ಗೆಳೆಯರ
ಬಳಗ ತಂಡದ ನಾಟಕಗಳನ್ನು ಪ್ರದರ್ಶನಕ್ಕೆ ಯೋಗ್ಯವಲ್ಲ ಎಂದು ರಿಜೆಕ್ಟ್ ಮಾಡಲಾಯಿತು. ನಾಟಕಕಾರ್ತಿಯ
ಹಟಮಾರಿತನದಿಂದಾಗಿ ರಾಮಕೃಷ್ಣ ಬೆಳ್ತೂರು ನಿರ್ದೇಶನದ ಅಗ್ನಿದಿವ್ಯ ನಾಟಕವೂ ಪ್ರದರ್ಶನ ಕೊಡದಂತಾಯಿತು.
ಒಟ್ಟು ಅಂತಿಮವಾಗಿ ಆಯ್ಕೆಯಾದ 20 ನಾಟಕಗಳಲ್ಲಿ ಒಂದು ನಾಟಕವನ್ನು ಯಾರೂ ಪ್ರದರ್ಶಿಸಲು ಆಯ್ಕೆ ಮಾಡಿಕೊಳ್ಳಲೇ
ಇಲ್ಲಾ. ಉಳಿದ 19 ನಾಟಕಗಳಲ್ಲಿ ಒಟ್ಟು 16 ನಾಟಕಗಳು ಅಂತಿಮವಾಗಿ ಪ್ರದರ್ಶನಗೊಂಡವು. ಆದರೆ ಅಷ್ಟೂ
ನಾಟಕಗಳಲ್ಲಿ ರಂಗ ಇತಿಹಾಸದಲ್ಲಿ ದಾಖಲಾಗುವಂತಹ ಒಂದೇ ಒಂದು ನಾಟಕವೂ ಮೂಡಿ ಬರಲಿಲ್ಲ ಎನ್ನುವುದು ಬೇಸರದ
ಸಂಗತಿ.
ಈಡೇರದ ಆಶಯ: “ಮಹಿಳೆ ಮತ್ತು ವರ್ತಮಾನದ ನೋಟ” ನಾಟಕೋತ್ಸವವು ಫೆ.13 ರಂದು
ರವೀಂದ್ರ ಕಲಾಕ್ಷೇತ್ರದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆ ಮಾಡಲು ಬರಬೇಕಾಗಿದ್ದ ಸಚಿವೆ ಉಮಾಶ್ರೀಯವರು
ಅನಾರೋಗ್ಯದ ನೆಪಹೇಳಿ ತಪ್ಪಿಸಿಕೊಂಡರು. ಇಷ್ಟೆಲ್ಲಾ ಪ್ರಯತ್ನ ಪಟ್ಟರೂ ಕಳಪೆ ನಾಟಕಗಳು ಹೆಚ್ಚಾಗಿ
ಮೂಡಿಬಂದಿವೆ ಎನ್ನುವ ರಿಪೋರ್ಟ ಅವರಿಗೆ ಮೊದಲೇ ತಲುಪಿತ್ತು. ಅವರು ಅಂದು ಕೊಂಡ ಹಾಗೆ ಈ ಪ್ರಾಜೆಕ್ಟಲ್ಲಿ
ಏನೂ ನಡೆಯಲೇ ಇಲ್ಲ ಎನ್ನುವ ಬೇಸರ ಅವರದ್ದಾಗಿತ್ತು. ತಾವು ಕಂಡ ಕನಸೊಂದು ಈ ರೀತಿ ವಿಫಲವಾಗುವುದನ್ನು
ನೋಡಿ ಆತಂಕಗೊಂಡಿದ್ದ ಉಮಾಶ್ರೀಯವರು ನಾಟಕೋತ್ಸವದ ಉದ್ಘಾಟನೆ ಮಾಡಲು ಬರಲೇ ಇಲ್ಲಾ. ಕಂಬಾರರೇ ಉದ್ಘಾಟನೆ
ಮಾಡಿ ಸಂತಸ ಪಟ್ಟರು. ಉದ್ಘಾಟನೆಯ ದಿನ ಆಶಯ ಭಾಷಣ ಮಾಡಿದ ಡಾ.ಕೆವೈಎನ್ ಪಂಡಿತರು “ಇಂತಹ ಪ್ರಯತ್ನ ಇಡೀ ದೇಶದಲ್ಲೇ
ಎಲ್ಲೂ ಇಲ್ಲೀವರೆಗೂ ಆಗಿಲ್ಲಾ, ಇಷ್ಟೊಂದು ನಾಟಕಗಳನ್ನು ಬರೆಸಿ ಆಡಿಸಿದ್ದು ಒಂದು ದಾಖಲೆ, ಸರಕಾರಿ
ಯೋಜನೆಗಳನ್ನು ಅನುಮಾನಿಸುತ್ತೇವೆ, ಆದರೆ ಇಂತಹ ಯೋಜನೆಯಲ್ಲೂ ಕಲಾಕೃತಿಗಳು ಬರಬಹುದಾಗಿವೆ, ಹೀಗೆ ಅನುಮಾನಿಸಿದವರಿಗೆ
ಈ ನಾಟಕೋತ್ಸವ ತಕ್ಕ ಉತ್ತರ ಕೊಡುತ್ತದೆ.” ಎಂದು ತಮ್ಮ ಬೆನ್ನನ್ನು ತಾವೇ
ತಟ್ಟಿಕೊಂಡರು. ಆದರೆ ಇಂತಹ ಪ್ರಯತ್ನ ಎಲ್ಲಿಯೂ ಆಗದಿರುವುದೇ ಉತ್ತಮ ಎನ್ನುವುದು ನಾಟಕೋತ್ಸವ ನಿರೂಪಿಸಿತು
ಹಾಗೂ ಸರಕಾರಿ ಯೋಜನೆಗಳು ಎಂದರೆ ಕಳಪೆ ಎಂದು ಅನುಮಾನಿಸುವವರ ಅನಿಸಿಕೆಯನ್ನು ಸಮರ್ಥಿಸುವ ಎಲ್ಲ ಲಕ್ಷಣಗಳೂ
ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಬಹುತೇಕ ನಾಟಕಗಳಲ್ಲಿ ಕಂಡುಬಂದಿದ್ದು, ಕೆವೈ ನಾರಾಯಣಸ್ವಾಮಿಯಂತಹ
ಪ್ರತಿಭಾನ್ವಿತರೂ ಸಹ ಹೀಗೆ ಆತ್ಮವಂಚನೆ ಮಾಡಿಕೊಂಡು ಹಸಿಸುಳ್ಳುಗಳನ್ನು ಹೇಳಿ ತಮ್ಮ ವಿಫಲತೆಗೆ ಸಮರ್ಥನೆಗಳನ್ನು
ಕೊಡಲು ಸಾಧ್ಯವೆನ್ನುವುದು ಸಾಬೀತಾಯಿತು.
ಮಾಡೋರಲ್ಲಿ ಉತ್ಸಾಹವಿಲ್ಲಾ..
ನೊಡೋರು ಬರಲೇ ಇಲ್ಲಾ
: ಈ ನಾಟಕೋತ್ಸವದಲ್ಲಿ ಭಾಗವಹಿಸಿದ ಹಲವಾರು ತಂಡದ ನಾಟಕಗಳಲ್ಲಿ ಪೋರ್ಸ ಎನ್ನುವುದೇ ಇರಲಿಲ್ಲಾ. ಕೆಲವು
ನಾಟಕಗಳಂತೂ ನೋಡುಗರ ಸಹನೆಯನ್ನು ಕೆಣಕುವಂತಿದ್ದವು. ಯಾವುದೇ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾಡಲಾಗುವ
ನಾಟಕಗಳು ಇಲ್ಲಿ ಪ್ರದರ್ಶನಗೊಂಡ ಕೆಲವಾರು ಕೆಟ್ಟ ನಾಟಕಗಳಿಗಿಂತಾ ಉತ್ತಮವಾಗಿದ್ದವು. ಇದು ಸರಕಾರಿ
ನಾಟಕೋತ್ಸವವೆಂದೋ ಇಲ್ಲವೇ ಬೇರೆ ಊರಿನ ತಂಡಗಳ ನಾಟಕಗಳೊಂದೋ ಬೆಂಗಳೂರಿನ ರಂಗಪ್ರೇಕ್ಷಕರು ನಾಟಕ ನೋಡಲು
ಬರಲೇ ಇಲ್ಲಾ. ಆರಂಭದ ದಿನವೇ ನೂರರಷ್ಟಿದ್ದ ಪ್ರೇಕ್ಷಕರನ್ನು ನೋಡಿ ಕಂಬಾರರೇ ನೋಡುಗರ ಅನುಪಸ್ಥಿತಿಯ
ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತಾಡಿದರು. ತದನಂತರವೂ ಸಹ ಪ್ರತಿ ದಿನ ಪ್ರೇಕ್ಷಕರ ಸಂಖ್ಯೆ ಇಳಿಯುತ್ತಲೇ
ಹೋಯಿತು. ಕಲಾಕ್ಷೇತ್ರದ ಕಾಲು ಭಾಗವೂ ತುಂಬಿರಲಿಲ್ಲ. ಕೊನೆಯ ದಿನ ಬೇಲೂರು ರಘುನಂದನ್ ರವರ ವ್ಯಕ್ತಿಗತ ಪ್ರಯತ್ನದಿಂದ ಕಲಾಕ್ಷೇತ್ರ
ಅರ್ಧದಷ್ಟು ತುಂಬಿದ್ದು ಬಿಟ್ಟರೆ ಪ್ರತಿ ದಿನವೂ ಕಲಾಕ್ಷೇತ್ರ ಕುರ್ಚಿಗಳು ಖಾಲಿ ಖಾಲಿ. ದಿನಕ್ಕೊಂದು
ನಾಟಕ ನೋಡುವುದೇ ಕಷ್ಟವಾಗಿರುವಾಗ ಎರಡೆರಡು ನಾಟಕಗಳ ಪ್ರದರ್ಶನ ಮಾಡಿದ್ದನ್ನು ಅರಗಿಸಿಕೊಳ್ಳಲು ಪ್ರೇಕ್ಷಕರಿಗೆ
ಕಷ್ಟವಾಯಿತು. ಒಂದು ನಾಟಕದ ನಂತರ ಇನ್ನೊಂದು ನಾಟಕದವರಿಗೆ
ಲೈಟಿಂಗ್ ಮಾಡಿಕೊಳ್ಳಲೂ ಸಹ ಅಗತ್ಯ ಸಮಯ ಸಿಗದೇ ಎರಡನೇ ನಾಟಕದವರು ತೊಂದರೆ ಅನುಭವಿಸಿದರು. ಇನ್ನು
ಕಲಾಕ್ಷೇತ್ರದ ಲೈಟಿಂಗ್ ಹಾಗೂ ಸೌಂಡ್ ಅವ್ಯವಸ್ಥೆಯಂತೂ
ಎಲ್ಲಾ ನಾಟಕ ತಂಡದವರಿಗೆ ಖಳನಾಯಕನ ಹಾಗೆ ಕಾಡಿದ್ದಂತೂ ಸುಳ್ಳಲ್ಲ.
ಹಾಗಾದರೆ ಯಾರಿಗೋಸ್ಕರ ಈ ನಾಟಕಗಳನ್ನು
ಮಾಡಿದ್ದು. ಯಾರಿಗೋಸ್ಕರ ಎರಡು ಕೋಟಿ ರೂಪಾಯಿಗಳಷ್ಟು ಹಣವನ್ನು ವ್ಯಯಿಸಿದ್ದು. ವೃತ್ತಿ ರಂಗಭೂಮಿಯ
ನಾಟಕಗಳನ್ನೂ ಸೇರಿದಂತೆ ಒಟ್ಟು ಇಪ್ಪತ್ಮೂರು ನಾಟಕಗಳು ಪ್ರದರ್ಶನಗೊಂಡಿವೆ . ಒಟ್ಟು ಖರ್ಚಾದ ಹಣ ಎರಡು
ಕೋಟು ರೂಪಾಯಿಗಳು. ಎರಡು ಕೋಟಿಯನ್ನು ಇಪ್ಪತ್ಮೂರು ನಾಟಕಗಳಿಗೆ ಸಮನಾಗಿ ಹಂಚಿಕೆ ಮಾಡಿದರೆ ಒಂದೊಂದು
ನಾಟಕಕ್ಕೂ ಎಂಟೂಮುಕ್ಕಾಲು ಲಕ್ಷ ರೂಪಾಯಿ ಆಗುತ್ತದೆ. ಇದರಲ್ಲಿ ನಾಟಕಕಾರನಿಗೆ ಮೂವತೈದು ಸಾವಿರ, ನಿರ್ದೇಶಕರಿಗೆ
ಐವತ್ತು ಸಾವಿರ, ರಂಗತಂಡಕ್ಕೆ ಮೂರುವರೆ ಲಕ್ಷ ರೂಪಾಯಿಗಳನ್ನು ಕೊಟ್ಟರೆ ಒಟ್ಟು ಒಂದು ನಾಟಕಕ್ಕೆ ನಾಲ್ಕು
ಲಕ್ಷದಾ ಮೂವತ್ತೈದು ಸಾವಿರ ರೂಪಾಯಿ ಆಗುತ್ತದೆ. ಇನ್ನು ಮಿಕ್ಕಿದ ನಾಲ್ಕು ಲಕ್ಷದ ನಲವತ್ತು ಸಾವಿರ
ರೂಪಾಯಿಗಳು ಯೋಜನೆಯ ಪ್ರಧಾನ ನಿರ್ದೇಶಕರುಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ, ಕಮಿಟಿಯ ಸದಸ್ಯರಿಗೆ
ಹಾಗೂ ಇನ್ನಿತರ ವ್ಯವಸ್ಥೆಗಳಿಗೆ ಹೋಗಿದೆ ಎಂದರೆ ಸರಕಾರಿ ಹಣ ಹೇಗೆಲ್ಲಾ ದುರುಪಯೋಗವಾಗುತ್ತದೆ ಎನ್ನುವುದು
ಅರ್ಥವಾಗದ ವಿಷಯವೇನಲ್ಲಾ. ಅಂದರೆ.. ಒಂದು ನಾಟಕಕ್ಕೆ ವೆಚ್ಚವಾಗುವ ಒಟ್ಟು ಹಣದಷ್ಟೇ ಮೊತ್ತ ನಾಟಕದ
ಯೋಜನೆಗೆ ಖರ್ಚಾಗುತ್ತದೆ ಅಂದರೆ ನಾಟಕೋತ್ಸವದ ಹಿಂದಿನ ನಿಜವಾದ ಉದ್ದೇಶವೇನು ಎನ್ನುವುದು ತಿಳಿಯುತ್ತದೆ.
ಮೂಗಿಗಿಂತಾ ಮೂಗುತಿ ಭಾರ ಎನ್ನುವ ಹಾಗೆ ನಾಟಕಕ್ಕಿಂತಾ ನಾಟಕದ ಯೋಜನಾ ವೆಚ್ಚವೇ ಅತಿಯಾಗಿದೆ. ನಾಟಕದ
ಹೆಸರಲಿ ಫಲಾನುಭವಿಗಳಾದವರೇ ಹೆಚ್ಚು ಲಾಭವನ್ನು ಪಡೆಯುವುದು ಸರಕಾರಿ ಯೋಜನೆಗಳಲ್ಲಿ ಮಾಮೂಲಾಗಿದೆ.
ಈಡೇರದ ನಾಟಕದ ಉದ್ದೇಶ: ಇಷ್ಟಕ್ಕೂ ಈ ನಾಟಕೋತ್ಸವದ ಉದ್ದೇಶವಾದರೂ ಈಡೇರಿತಾ? ಹೊಸ
ನಾಟಕಕಾರರು ಸೃಷ್ಟಿಯಾಗಬೇಕಾಗಿತ್ತು.. ಆಗಲಿಲ್ಲಾ. ಯಾಕೆಂದರೆ ಶೆಕಡಾ 90ರಷ್ಟು ಜನರು ಮೊದಲ ಬಾರಿಗೆ ನಾಟಕ ಬರೆದವರಾಗಿದ್ದು ಇನ್ನೂ ನಾಟಕ ರಚನೆಯ ಗ್ರಾಮರ್
ಅವರಿಗೆ ಗೊತ್ತಾಗಲಿಲ್ಲಾ, ಗೊತ್ತಿದ್ದವರು ಹೇಳಿಕೊಡಲಿಲ್ಲಾ. ಹೇಗೋ ಆಯ್ಕೆಯಾದ ನಾಟಕಗಳು ಪ್ರದರ್ಶನಗೊಂಡಾಗ
ಕಳಪೆ ಎಂದು ಗೊತ್ತಾದ ಕೂಡಲೇ ನಾಟಕ ಬರೆದವರಲ್ಲಿ ನಿರುತ್ಸಾಹ ಮೂಡಿ ಮುಂದೆ ನಾಟಕ ಬರೆಯುವ ಆಸಕ್ತಿಯೇ
ಕುಂದಿದರೆ ಅತಿಶಯವೇನಿಲ್ಲಾ. ಹೋಗಲಿ ರಂಗತಂಡಗಳಾದರೂ
ಸದೃಢವಾದವಾ? ಕೆಲವು ರಂಗತಂಡಗಳ ನಾಯಕರು ಈ ಸರಕಾರಿ
ಪ್ರಾಜಕ್ಟಲ್ಲಿ ಒಂದಿಷ್ಟು ಹಣ ಮಾಡಿಕೊಂಡರು. ಮೂವತ್ತು ಸಾವಿರದಷ್ಟು ಖರ್ಚು ಮಾಡಿ ಮೂರು ಲಕ್ಷ
ಹಣವನ್ನು ಗಳಿಸಿಕೊಂಡರು. ಆದರೆ.. ಬಹುತೇಕ ಕಲಾವಿದರುಗಳಿಗೆ ಯಾವುದೇ ಹಣ ತಲುಪಲಿಲ್ಲ. ಯಾವಾಗ ಸರಕಾರ
ಕೊಟ್ಟ ಹಣ ಕಲಾವಿದರಿಗೆ ಸಂಭಾವನೆ ರೂಪದಲ್ಲಿ ಸಿಗಲಿಲ್ಲವೋ ಆಗ ಅವರಲ್ಲಿ ರಂಗಬದ್ದತೆ ಮೂಡಲಿಲ್ಲಾ.
ಕೆಲವರು ಬಂದರು ಇನ್ನು ಕೆಲವರು ಕೈಕೊಟ್ಟರು.. ಒಟ್ಟಾರೆ ನಾಟಕದ ಕ್ವಾಲಿಟಿ ಕಡಿಮೆಯಾಯಿತು. ಕೆಲವು
ರಂಗತಂಡಗಳ ಸೆಟ್ ಎಷ್ಟೊಂದು ಕಳಪೆಯಾಗಿತ್ತೆಂದರೆ ಅತ್ಯಂತ ಬಡತನದ ರಂಗತಂಡದ ನಾಟಕ ಮಾಡಿದಂತಿತ್ತು.
ಇನ್ಸಪೆಕ್ಟರ್ ಪೊಲೀಸ್ ಪಾತ್ರದಾರಿಗಳಿಗೆ ಹಾಕಿಕೊಳ್ಳಲು ಬೂಟು ವರದಿಗಳೂ ಇಲ್ಲದಷ್ಟು ಬಡತನ ಆವರಿಸಿತ್ತು.
ಸರಕಾರ ಕೊಡಮಾಡುವ ಇಷ್ಟೊಂದು
ಹಣದಲ್ಲಿ ಎಂತಹ ಶ್ರೀಮಂತವಾದ ನಾಟಕ ಮಾಡಿಸಬಹುದಾಗಿತ್ತು. ಆದರೆ ಹಣದ ಹಪಾಹಪಿಗೆ ಬಿದ್ದ ಕೆಲವು ತಂಡಗಳ
ಸಂಘಟಕರು ತಾವು ಲಾಭಮಾಡಿಕೊಂಡು ನಾಟಕವನ್ನು ಸೊರಗಿಸಿದರು. ಹೋಗಲಿ ಪ್ರೇಕ್ಷಕರಿಗಾದರೂ ಈ ನಾಟಕೋತ್ಸವದಿಂದ
ಲಾಭವಾಯಿತಾ ಅಂದರೆ ಅದೂ ಆಗಲಿಲ್ಲಾ. ರಂಗಮಂದಿರದತ್ತ ಪ್ರೇಕ್ಷಕರು ಬರಲೇ ಇಲ್ಲಾ. ಕಲಾಗ್ರಾಮದ ಪುಟ್ಟ ರಂಗಮಂದಿರ ಒಂದು ದಿನವೂ ಪೂರ್ತಿ ತುಂಬಲಿಲ್ಲಾ.
ರವೀಂದ್ರ ಕಲಾಕ್ಷೇತ್ರವಂತೂ ಪ್ರೇಕ್ಷಕರಿಲ್ಲದೇ ಬಣಬಣ. ಒಟ್ಟು ಯೋಜನೆಗೆ ಎರಡು ಕೋಟಿ ಖರ್ಚು ಮಾಡುವ
ಸರಕಾರಿ ಇಲಾಖೆ ನಾಟಕೋತ್ಸವದ ಪ್ರಚಾರಕ್ಕೆ ಒಂದಿಷ್ಟು ಖರ್ಚು ಮಾಡಬಹುದಾಗಿತ್ತು. ಆದರೆ.. ಪ್ರಚಾರವೇ
ಶೂನ್ಯವಾಗಿತ್ತು. ಕನಿಷ್ಟ ದಿನಪತ್ರಿಕೆಗಳ ನಗರದಲ್ಲಿಂದು ಕಾಲಂನಲ್ಲೂ ಸಹ ನಾಟಕ ಪ್ರದರ್ಶನದ ಕುರಿತು
ಮಾಹಿತಿ ಇರಲಿಲ್ಲಾ. ಆಹ್ವಾನ ಪತ್ರಗಳು ರಂಗಕರ್ಮಿಗಳಿಗೆ ತಲುಪಲಿಲ್ಲಾ. ಇಲಾಖೆಯಾಗಲಿ, ಈ ಯೋಜನೆಯ ಫಲಾನುಭವಿಗಳಾಗ
ಆಯೋಜಕರಾಗಲೀ ಪ್ರೇಕ್ಷಕರನ್ನು ಕರೆತರಲು ಪ್ರಯತ್ನಿಸಲೇ ಇಲ್ಲಾ. ಬಹುಷಃ ನಾಟಕಗಳು ಕಳಪೆಯಾಗಿದ್ದರಿಂದ
ಪ್ರೇಕ್ಷಕರು ಬಂದು ಬೈದುಕೊಂಡು ಹೋಗುವುದು ಬೇಡವೆಂದು ಪ್ರಚಾರವನ್ನೇ ಕೈಬಿಟ್ಟರೋ ಏನೋ? ಗೊತ್ತಿಲ್ಲಾ..
ಆದರೆ ಪ್ರೇಕ್ಷಕರು ಬಾರದೇ ಹೋಗಿದ್ದಕ್ಕೆ ಅವರಿಗೆ ನಷ್ಟವೇನೂ ಇಲ್ಲಾ. ಮಿಸ್ ಮಾಡಿಕೊಳ್ಳುವಂತಹ ನಾಟಕಗಳ್ಯಾವವೂ
ಪ್ರದರ್ಶನಗೊಳ್ಳಲೇ ಇಲ್ಲಾ. ಈ ನಾಟಕೋತ್ಸವವನ್ನು ಹೇಗಾದರೂ ಮಾಡಿ ಮುಗಿಸಿದರೆ ಸಾಕು ಎನ್ನುವುದೇ
ಆಯೋಜಕರ, ಸಂಚಾಲಕರ ಹಾಗೂ ಇಲಾಖೆಯವರ ದಾವಂತವಾದಂತಿತ್ತು.
ಮೊದಲಿನಿಂದಲೂ ಯಾರಿಗೂ ಅಂತಹ ಆಸಕ್ತಿ ಇಲ್ಲದ ಈ ಯೋಜನೆಯನ್ನು ಸಚಿವೆಯವರ ಒತ್ತಾಸೆಯ ಮೇಲೆ
ಮಾಡಿದಂತಿತ್ತು.
ವೈಪಲ್ಯಕ್ಕೆ ಕಾರಣಗಳೇನು
? : ಫೆ.
19ರಂದು ಧಾರವಾಡದಲ್ಲಿ ನಡೆದ ಹವ್ಯಾಸಿ ರಂಗಭೂಮಿಯ ಸಮಾವೇಶದಲ್ಲಿ ಸಚಿವೆ ಉಮಾಶ್ರೀಯವರು ಆಶಯ ಭಾಷಣ
ಮಾಡುತ್ತಾ “ಸಾಂಸ್ಕತಿಕ ಕೆಲಸಗಳಿಗೆ ಸರಕಾರ ಕೇಳಿದಷ್ಟು ಹಣ ಕೊಡುತ್ತಿದೆ..
ಕೊಟ್ಯಾಂತರ ರೂಪಾಯಿಗಳ ಅನುದಾನ ಕೊಡುತ್ತಿದೆ ಆದರೂ ಉದ್ದೇಶಿತ ಕೆಲಸಗಳು ಆಗುತ್ತಿಲ್ಲಾ..” ಎಂದು ಬೇಸರ ವ್ಯಕ್ತಪಡಿಸಿದರು.
ಅವರ ಆತಂಕದ ಮಾತುಗಳು ವರ್ತಮಾನದ ನೋಟ ಯೋಜನೆಗೂ ಅನ್ವಯಿಸುವಂತಿದೆ. ಮೂರು ವರ್ಷಗಳ ಹಿಂದೆಯೇ ಹಣ ಕಾಯ್ದಿರಿಸಿದರೂ
ಈ ಯೋಜನೆ ಕುಂಟುತ್ತಾ ಸಾಗಿ ವಿಫಲತೆಯೊಂದಿಗೆ ಅಂತ್ಯವಾಗಿದ್ದು ಉಮಾಶ್ರೀಯವರಂತೆ ಬಹುತೇಕ ರಂಗಕರ್ಮಿಗಳಿಗೂ
ಬೇಸರ ತರಿಸಿದೆ. ಆರಂಭದಿಂದ ಅಂತ್ಯದ ವರೆಗೂ ಇಡೀ ಯೋಜನೆಯ ಪ್ಲಾನಿಂಗ್ ಹಾಗೂ ಅನುಷ್ಟಾನದಲ್ಲಿ ಬೇಕಾದಷ್ಟು
ನ್ಯೂನ್ಯತೆಗಳಿವೆ. ಮೊದಲನೆಯದಾಗಿ ವಿಷಯವೊಂದನ್ನು ಕೊಟ್ಟು ಬರಹಗಾರರಿಗೆ ಒಂದು ಚೌಕಟ್ಟನ್ನು ಹಾಕಿ
ನಾಟಕ ಬರೆಯಿರಿ ಎಂದು ಆದೇಶಿಸಿದ್ದೇ ತೀವ್ರ ಸಮಸ್ಯೆಯನ್ನುಂಟು
ಮಾಡಿದಂತಿದೆ. ಯಾಕೆಂದರೆ ಯಾವುದೇ ಸೃಜನಶೀಲ ಕೆಲಸಗಳು ಒತ್ತಾಯ ಒತ್ತಾಸೆಯಿಂದ ಮಾಡಲು ಸಾಧ್ಯವಿಲ್ಲಾ.
ಕಲಾಕ್ಷೇತ್ರದಲ್ಲಿ ಭಾಗವತರು ಆಯೋಜಿಸಿದ ವಿಚಾರ ಸಂಕಿರಣದಲ್ಲಿ ನಾ.ದಾಮೋದರ ಶೆಟ್ಟಿಯವರು “ಹೀಗೆಲ್ಲಾ ಹಣ ಕೊಟ್ಟು, ವಿಷಯವನ್ನು
ಮುಂದಿಟ್ಟು ನಾಟಕ ಬರೆಯಿಸುವುದು ಸಾಧ್ಯವಿಲ್ಲಾ” ಎಂದು ತಮ್ಮ ಅಸಮಾಧಾನ ತೋರಿಸಿದ್ದರು.
ಆದರೆ ಮುಂದೆ ಅದೇ ನಾದಾ ಸಾಹೇಬರು ಈ ಯೋಜನೆಯ ಭಾಗವಾಗಿ
ಕುಪ್ಪಳ್ಳಿಯಲ್ಲಿ ಕುಣಿದು ಕುಪ್ಪಳಿಸಿ ಕೆಟ್ಟ ನಾಟಕಗಳ ಆಯ್ಕೆಯಲ್ಲಿ ಪಾಲುದಾರರಾಗಿ ಸರಕಾರಿ ಯೋಜನೆಯ
ಫಲಾನುಭವಿಗಳಾಗಿದ್ದೊಂದು ವಿಪರ್ಯಾಸ. ಆದರೆ ಅವರು ಹೇಳಿದ ಮಾತುಗಳಲ್ಲಿ ಸತ್ಯವಿತ್ತು. “ಮಹಿಳೆ ಮಕ್ಕಳ ವರ್ತಮಾನದ ನೋಟ” ಎನ್ನುವ ವಸ್ತು ವಿಷಯವನ್ನು
ಮುಂದಿಟ್ಟುಕೊಂಡು ನಾಟಕವನ್ನು ಬರೆಯಲು ಅನೇಕರು ತಿಣುಕಿದರು. ಇದರಿಂದಾಗಿ ಕೆಲವು ನಾಟಕಗಳು ಘೋಷಣಾತ್ಮಕವಾಗಿ
ಮೂಡಿಬಂದರೆ.. ಇನ್ನು ಕೆಲವು ನಾಟಕಗಳಲ್ಲಿ ಒತ್ತಾಯಪೂರ್ವಕವಾಗಿ ಯೋಜನೆಯ ಉದ್ದೇಶ ಹೇರಿದಂತಿದೆ. ಕೆಲವು
ನಾಟಕಗಳಲ್ಲಿ ಪುರಾಣ ಚರಿತ್ರೆಗಳ ಘಟನೆಗಳಿಗೆ ವರ್ತಮಾನದ ನೋಟವನ್ನು ಸೇರಿಸುವ ಪ್ರಯತ್ನ ಮಾಡಲಾಗಿದೆ.
ಹೀಗಾಗಿ ಬಹುತೇಕ ನಾಟಕಗಳು ಸಹಜವಾಗಿ ಹುಟ್ಟುವ ಬದಲಾಗಿ ಸಿಜೇರಿಯನ್ ಕೂಸುಗಳಾಗಿವೆ. ಯೋಜನೆ ವಿಫಲವಾಗಲು
ಇದೂ ಕೂಡಾ ಒಂದು ಪ್ರಮುಖ ಕಾರಣವಾಗಿವೆ.
ವೈಫಲ್ಯದ ಹೊಣೆಗಾರಿಗೆ ರೂವಾರಿಗಳ
ಹೆಗಲಿಗೆ :
ಒಟ್ಟಾರೆ ಯೋಜನೆಯ ವಿಫಲತೆಯನ್ನು ನಾಟಕಕಾರರು, ರಂಗತಂಡಗಳು ಹಾಗೂ ನಿರ್ದೇಶಕರುಗಳ ಮೇಲೆ ಆರೋಪಿಸಿ ಜಾರಿಕೊಳ್ಳಲು
ಈ ಯೋಜನೆಯ ಸಂಚಾಲಕರುಗಳು, ಸಂಪನ್ಮೂಲ ವ್ಯಕ್ತಿಗಳು
ಹಾಗೂ ರೂವಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಸರಕಾರಿ ಯೋಜನೆಯ ಫಲಾನುಭವಿಗಳಾದ ಇವರೆಲ್ಲರೂ ವೈಫಲ್ಯದ
ಹೊಣೆಗಾರಿಕೆಯನ್ನು ಹೊರಲೇಬೇಕಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪೇಲಾದರೆ ಅದು ಶಿಕ್ಷಕರ ಮತ್ತು
ಪೋಷಕರ ಬೇಜವಾಬ್ದಾರಿತನಕ್ಕೂ ಕಾರಣವಾಗುವ ಹಾಗೆ ಇಲ್ಲಿ ನಾಟಕಗಳು ನಿರೀಕ್ಷಿತ ಯಶಸ್ಸು ಕಾಣಲು ವಿಫಲವಾಗಿದ್ದಕ್ಕೆ
ಪ್ರಧಾನ ನಿರ್ದೇಶಕರಾದ ಕಂಬಾರರು, ರೂವಾರಿಗಳಾದ ಕೆವೈಎನ್ ಹಾಗೂ ಯೋಜನಾ ಕಮಿಟಿಯ ಎಲ್ಲಾ ಸದಸ್ಯರುಗಳು
ಕಾರಣರಾಗಿದ್ದಾರೆ. ಅನನುಭವಿಗಳನ್ನು ನಾಟಕ ರಚನೆಗೆ ಆಯ್ಕೆ ಮಾಡಿದ್ದು, ಸೂಕ್ತ ತರಬೇತಿ ಕೊಡದೆ ಹಣ
ಕೊಟ್ಟು ನಾಟಕ ಬರೆಸಿದ್ದು, ನಾಟಕಗಳ ಆಯ್ಕೆಗೆ ಅನುಭವಿ ನಾಟಕಕರರನ್ನು ನಿಯಮಿಸದೇ ಇದ್ದದ್ದು, ರಂಗತಂಡಗಳ
ಆಯ್ಕೆಯಲ್ಲಿ ಯಡವಿದ್ದು, ರಂಗನಿರ್ದೇಶಕರುಗಳ ಆಯ್ಕೆಯಲ್ಲಿ ಅನುಭವವನ್ನು ಪರಿಗಣಿಸದೇ ಇದ್ದದ್ದು, ಕೊನೆಯ
ಹಂತದ ನಾಟಕಗಳ ಆಯ್ಕೆಯಲ್ಲಿ ಕಳಪೆ ನಾಟಕಗಳನ್ನು ಕೈಬಿಡದೇ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು..
ನಾಟಕೋತ್ಸವವನ್ನು ಐದು ತಿಂಗಳುಗಳ ಕಾಲ ಮುಂದೂಡಿದ್ದು... ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಇಡೀ ಯೋಜನೆಯ ಸದುದ್ದೇಶ ಅಸಫಲವಾಯಿತು. ಇದಕ್ಕೆ ಈ ಯೋಜನೆಯ ಅನುಷ್ಟಾನದ
ಜವಾಬ್ದಾರಿ ಹೊತ್ತ ಎಲ್ಲರೂ ಹೊಣೆಗಾರರೇ ಆಗಿದ್ದಾರೆ.
ಈ ಯೋಜನೆಯ ಫಲಾನುಭವಿಗಳಾದ ಸಂಘಟಕರು ನಾಟಕೋತ್ಸವಕ್ಕೊಂದು ಸಮಾರೋಪ ಸಮಾರಂಭವನ್ನೂ ಸಹ ಮಾಡದಷ್ಟು ನಿರುತ್ಸಾಹಿಗಳಾಗಿದ್ದರು.
ಕೇವಲ ಹಣ ಅಧಿಕಾರ ಸಂಪನ್ಮೂಲ ವ್ಯಕ್ತಿಗಳು ಇದ್ದರೆ ಯೋಜನೆಯೊಂದು ಯಶಸ್ವಿಯಾಗುತ್ತದೆ ಎನ್ನುವುದು ಭ್ರಮೆ
ಎನ್ನುವುದು ಮತ್ತೆ ಸಾಬೀತಾಯಿತು.
ನಿಜಕ್ಕೂ ಆತ್ಮಸಾಕ್ಷಿ ಅನ್ನುವುದೇನಾದರೂ
ಇದ್ದಲ್ಲಿ ಈ ಯೋಜನೆಯ ಅನುಷ್ಟಾನದ ಜವಾಬ್ದಾರಿ ಹೊತ್ತ ಎಲ್ಲರೂ ಈ ಕೂಡಲೇ ಪ್ರೆಸ್ ಮೀಟ್ ಮಾಡಿ ಸಾರ್ವಜನಿಕರ
ಕ್ಷಮೆ ಕೋರಿದರೆ ಅವರ ಪ್ರಾಮಾಣಿಕತೆಗೆ ಒಂದು ಅರ್ಥ ಬರುತ್ತದೆ. ಕನಿಷ್ಟ ತಮ್ಮಿಂದಾದ ತಪ್ಪುಗಳನ್ನಾದರೂ
ಒಪ್ಪಿಕೊಳ್ಳುವ ದೈರ್ಯವನ್ನು ತೋರಿ ರಂಗಾಸಕ್ತರ ನಂಬಿಕೆಯನ್ನು ಉಳಿಸಿಕೊಳ್ಳುವುದುತ್ತಮ. ಅದೂ ಆಗದಿದ್ದರೆ
ಸರಕಾರದಿಂದ ಪಡೆದ ಹಣವನ್ನು ಇಲಾಖೆಗೆ ವಾಪಸ್ ಕೊಟ್ಟು ತಮ್ಮ ಮೇಲೆ ನಂಬಿಕೆಯಿಟ್ಟ ಸಚಿವೆಯ ಉದ್ದೇಶವನ್ನು
ಸಮರ್ಥವಾಗಿ ನಿರ್ವಹಿಸಲು ಆಗದಿದ್ದುದಕ್ಕೆ ಉಮಾಶ್ರೀಯವರ ಕ್ಷಮೆಕೇಳಿ ಸರಕಾರಿ ಯೋಜನೆಗಳ ಸಹವಾಸದಿಂದ
ದೂರವಾಗಿದ್ದು ತಮ್ಮ ಘನತೆಯನ್ನು ಕಾಯ್ದುಕೊಳ್ಳುವುದು ಈ
ಫಲಾನುಭವಿ ಪಂಡಿತರುಗಳ ಮುಂದಿರುವ ಪ್ರಾಮಾಣಿಕ ಆಯ್ಕೆಯಾಗಿದೆ. ಇನ್ನು ಸೂಕ್ಷ್ಮತೆ ಹಾಗೂ ಆತ್ಮಸಾಕ್ಷಿ ಇದ್ದವರು ಈ ರೀತಿ
ಮಾಡುತ್ತಾರೆ. ಆತ್ಮವಂಚನೆಯೇ ಕಾಯಕವಾಗಿಸಿಕೊಂಡವರು ಮತ್ತೊಂದು ಸರಕಾರಿ ಪ್ರಾಜೆಕ್ಟಿಗಾಗಿ ಕಾಯ್ದು
ಸಾಂಸ್ಕೃತಿಕ ದಲ್ಲಾಳಿಗಳ ಲಿಸ್ಟಿಗೆ ಸೇರುತ್ತಾರೆ.
ಒಟ್ಟಾರೆಯಾಗಿ ಒಂದು ಅನನ್ಯವಾದ
ರಂಗಯೋಜನೆ ಈ ರೀತಿ ತೋಪಾಗಿದ್ದಕ್ಕೆ ಅತ್ಯಂತ ಬೇಸರವಿದೆ. ಸಚಿವರಾದ ಉಮಾಶ್ರೀಯವರ ಮಹತ್ವಾಂಕಾಂಕ್ಷೆಯೊಂದು
ಈ ರೀತಿ ನಿಷ್ಪ್ರಯೋಜಕವಾಗಿದ್ದಕ್ಕೆ ಅವರಂತೆಯೇ ರಂಗಕರ್ಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸರಿಯಾಗಿ
ಯೋಜನೆಯನ್ನು ರೂಪಿಸಿದ್ದರೆ ಇಪ್ಪತ್ತರಲ್ಲಿ ಕನಿಷ್ಟ ಹತ್ತಾದರೂ ಉತ್ತಮ ನಾಟಕಗಳು ರಂಗಭೂಮಿಗೆ ಕೊಡುಗೆಯಾಗಿ
ದಕ್ಕಬಹುದಾಗಿತ್ತು. ಹಾಗಾಗಲಿಲ್ಲವೆಂಬ ನೋವು ರಂಗಬದ್ದತೆ ಇರುವವರನ್ನು ಕಾಡದೇ ಇರದು.
ಯಶಸ್ವಿಗೊಳಿಸುವ ಬಗೆ ಏನು?
: ಈ ನಾಟಕ
ರಚನಾ ಕಮ್ಮಟದಲ್ಲಿ ಉತ್ತಮವಾಗಿದ್ದೂ ಆಯ್ಕೆ ಆಗದ ಕೆಲವು ನಾಟಕಗಳನ್ನು ಮತ್ತೆ ಮರುಪರಿಶೀಲಿಸಿ ಹಾಗೂ
ಇಪ್ಪತ್ತು ನಾಟಕಗಳಲ್ಲಿ ಪ್ರದರ್ಶನಗೊಳ್ಳದ ಇನ್ನೂ
ನಾಲ್ಕು ನಾಟಕಗಳನ್ನು ಸೇರಿಸಿ ಇನ್ನೊಂದು ನಾಟಕೋತ್ಸವ ಮಾಡುವ ಆಲೋಚನೆ ಇದೇ ಯೋಜನೆಯ ಭಾಗವಾಗಿದೆ. ಈಗಾಗಲೇ
ವಿಫಲವಾದ ನಾಟಕಗಳಿಂದ ಪಾಠ ಕಲಿತು.. ಮುಂಬರುವ ನಾಟಕೋತ್ಸವವಾದರೂ ಜನಮೆಚ್ಚುವ ಹಾಗೆ ಆಗಲಿ ಎಂದು ಆಶಿಸಬೇಕಾಗಿದೆ.
ಕೆವೈಎನ್ ರಂತವರು ನಿಜಕ್ಕೂ ಮನಸ್ಸು ಮಾಡಿ ತಮ್ಮ ಸಂಪೂರ್ಣ ಪ್ರತಿಭೆಯನ್ನು ಬಳಸಿದರೆ ಉತ್ತಮ ನಾಟಕಗಳು
ಬರುವುದರಲ್ಲಿ ಸಂದೇಹವಿಲ್ಲಾ. ಎಂತಹ ಜಾಳುಜಾಳಾದ ನಾಟಕವನ್ನೂ ಸಹ ಮತ್ತೆ ಮತ್ತೆ ಪ್ರಯತ್ನಿಸಿದರೆ ಉತ್ತಮ
ನಾಟಕವನ್ನಾಗಿಸಬಹುದಾಗಿದೆ. ಪ್ರತಿಯೊಬ್ಬ ಯುವ ನಾಟಕಕಾರನನ್ನು ಮತ್ತೊಬ್ಬ ಅನುಭವಿ ನಾಟಕಕಾರರ ಜೊತೆಗೆ
ಕೂಡಿಸಿ ನಾಟಕವನ್ನು ಮರಳಿ ಕಟ್ಟುವ ಹಾಗೆ ಮಾಡಿದರೆ ಪ್ರದರ್ಶನಯೋಗ್ಯ ನಾಟಕ ಬರಬಹುದು. ಹಾಗೆಯೇ ಹಣಕ್ಕಾಗಿ ನಾಟಕ ಮಾಡದೇ ರಂಗಬದ್ದತೆಯಿಂದಾ ನಾಟಕ ಮಾಡುವ ರಂಗತಂಡಗಳನ್ನು
ಆಯ್ಕೆ ಮಾಡಿ.. ಅನುಭವಿ ನಿರ್ದೇಶಕನಿಗೆ ನಾಟಕ ಕಟ್ಟುವ ಜವಾಬ್ದಾರಿ ವಹಿಸಿ ನಾಟಕದ ನಿರ್ಮಾಣದ ಮೇಲೆ
ತೀವ್ರ ನಿಗಾವಹಿಸಿದಲ್ಲಿ ಜನಮಣ್ಣನೆ ಗಳಿಸುವಂತಹ ನಾಟಕ ಮೂಡಿಬರುವುದರಲ್ಲಿ ಸಂದೇಹವಿಲ್ಲಾ. ಈ ನಿಟ್ಟಿನಲ್ಲಿ
ಇಲಾಖೆಯ ಅಧಿಕಾರಿಗಳು, ಯೋಜನೆಯ ಸಂಚಾಲಕರುಗಳು ಆಲೋಚಿಸಿ ಮುಂದಿನ ನಾಟಕೋತ್ಸವವನ್ನು ಯಶಸ್ಸಿಗೊಳಿಸಲು
ಶ್ರಮಿಸುವುದು ಉತ್ತಮ. ಇದು ಕೇವಲ ಸರಕಾರಿ ಯೋಜನೆಯಾಗದೇ ರಂಗಭೂಮಿಯ ಬದ್ದತೆಯನ್ನು ತೋರುವ ಕಾರ್ಯಯೋಜನೆಯಾಗಬೇಕಿದೆ.
ಅಪಾರವಾದ ಪ್ರಾಮಾಣಿಕ ಸಿದ್ದತೆಯೊಂದಿಗೆ ಮುಂದಿನ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕಿದೆ. ಕಮಿಟಿಯಲ್ಲಿರುವ
ಅಯೋಗ್ಯರನ್ನು ಮೊದಲು ಹೊರಗೆ ಹಾಕಬೇಕಿದೆ. ಸ್ವಾರ್ಥರಹಿತ ರಂಗನಿಷ್ಟೆ ಇರುವವರ ಮಾರ್ಗದರ್ಶನದಲ್ಲಿ
ಇಡೀ ಯೋಜನೆ ಯಶಸ್ವಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸ್ವತಃ ಉಮಾಶ್ರೀಯವರು ಗಮನಹರಿಸಬೇಕಿದೆ.
ಈ ಹಿಂದೆ ಬಂದ ಎಲ್ಲಾ ಸರಕಾರಗಳಿಗಿಂತಲೂ
ಈಗಿರುವ ಸರಕಾರ ಸಾಂಸ್ಕೃತಿಕ ಕೆಲಸಗಳಿಗೆ ಅಪಾರವಾದ ಪ್ರೋತ್ಸಾಹ ಕೊಡುತ್ತಿದೆ. ಆರೋಪಗಳೇನೇ ಇದ್ದರೂ
ಉಮಾಶ್ರೀಯವರು ಬೇಕಾದಷ್ಟು ಯೋಜನೆಗಳಿಗೆ ಕೇಳಿದಷ್ಟು ಹಣವನ್ನು ಮಂಜೂರು ಮಾಡಿದ್ದಾರೆ. ಮುಖ್ಯಮಂತ್ರಿ
ಸಿದ್ದರಾಮಯ್ಯನವರು ಸಾಂಸ್ಕೃತಿಕ ಕ್ಷೇತ್ರಕ್ಕೆ ಯಾವ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ರಂಗಾಯಣದ
ಕಲಾವಿದರುಗಳ ನಿವೃತ್ತಿ ಹಣವನ್ನು ಕೇಳಿದ ಕೂಡಲೇ ಬಿಡುಗಡೆಗೊಳಿಸಿದರು. ರವೀಂದ್ರ ಕಲಾಕ್ಷೇತ್ರದ ನೆನಪಿನೋಕಳಿ
ಕಾರ್ಯಕ್ರಮಕ್ಕೆ ಹಣದ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಸಂಸ್ಕೃತಿ ಇಲಾಖೆಗಂತೂ ಕೇಳಿದಷ್ಟು ಅನುದಾನವನ್ನು
ಒದಗಿಸಲಾಗಿದೆ. ಸಮಸ್ಯೆ ಇರುವುದು ಹಣಕಾಸಿನ ಹರವಿನಲ್ಲಲ್ಲಾ, ಮಾಡಿದ ಯೋಜನೆಗಳಲ್ಲೂ ಅಲ್ಲಾ, ನಿಜವಾದ
ಸಮಸ್ಯೆ ಇರುವುದು ಯೋಜನೆಗಳ ಅನುಷ್ಠಾನದಲ್ಲಿ. ನ್ಯೂನ್ಯತೆ ಇರುವುದು ಸಾಂಸ್ಕೃತಿಕ ದಲ್ಲಾಳಿಗಳ ಸ್ವಾರ್ಥ
ಹಿತಾಸಕ್ತಿಗಳಲ್ಲಿ. ಎಲ್ಲಿವರೆಗೂ ಸರಕಾರಿ ಯೋಜನೆಗಳು ಪ್ರಾಮಾಣಿಕವಾಗಿರುವವರ ಮುಂದಾಳತ್ವದಲ್ಲಿ ನಡೆಯುವುದಿಲ್ಲವೋ
ಅಲ್ಲೀವರೆಗೂ ಅವು ಯಶಸ್ವಿಯಾಗುವುದಿಲ್ಲಾ. ಯೋಜನೆಯನ್ನು ರೂಪಿಸಿದ ನಂತರ ಅದರ ಅನುಷ್ಟಾನಕ್ಕೆ ಯೋಗ್ಯರಾದವರನ್ನು
ಆಯ್ಕೆ ಮಾಡುವಲ್ಲಿ ರಾಜಿಮಾಡಿಕೊಂಡರೆ ಇಡೀ ಯೋಜನೆ ಹಳ್ಳಹಿಡಿದಂತೆಯೇ. ಆದ್ದರಿಂದ ಸಾಂಸ್ಕೃತಿಕ ಲೋಕದಲ್ಲಿ
ಬೇರುಬಿಟ್ಟ ರಂಗದಲ್ಲಾಳಿಗಳನ್ನು, ಸಾಂಸ್ಕೃತಿಕ ಗುತ್ತಿಗೆದಾರರನ್ನು, ರಾಜಾಶ್ರಯಕ್ಕೆ ಹಾತೊರೆಯುವ
ಬುದ್ದೀಜೀವಿ ಪಂಡಿತ ವೇಷದಾರಿಗಳನ್ನು ಮೊದಲು ದೂರವಿಟ್ಟು ನಿಜಕ್ಕೂ ರಂಗಬದ್ದತೆಯಿಂದಾ ಪೂರ್ಣಾವಧಿ
ಕೆಲಸ ಮಾಡುವ ರಂಗಜೀವಿಗಳಿಗೆ ವಹಿಸಿಕೊಟ್ಟರೆ ಯೋಜನೆಗಳು ಯಶಸ್ವಿಯಾದಾವು. ಅಂತಹ ಪ್ರಾಮಾಣಿಕ ವ್ಯಕ್ತಿಗಳು
ಇಲ್ಲವೆಂಬುದು ಸಿನಿಕತನವಾದೀತು. ಇದ್ದಾರೆ.. ಹುಡುಕುವ ಕಣ್ಣುಗಳು ಬೇಕಷ್ಟೇ. ಅಂತಹ ದೂರದೃಷ್ಟಿ ಸಚಿವೆ
ಉಮಾಶ್ರೀಯವರಿಗೆ ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಬರಲಿ.. ವೆಚ್ಚಮಾಡುವ ಜನರ ಪ್ರತಿ ಪೈಸೆಯೂ
ಉದ್ದೇಶಿತ ಯೋಜನೆಗೆ ಖರ್ಚಾಗಲಿ... ಸಿಕ್ಕ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ರಂಗಭೂಮಿ ಸಮೃದ್ದವಾಗಿ
ಬೆಳೆಯಲಿ ಎನ್ನುವುದೇ ರಂಗಕರ್ಮಿ ಕಲಾವಿದರುಗಳ ಮನದಾಳದ ಬಯಕೆಯಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ