ರಂಗವಿಮರ್ಶೆ :
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಆಯೋಜನೆಗೊಂಡ ಮಹತ್ವಾಂಕಾಂಕ್ಷಿ ಯೋಜನೆ “ಮಹಿಳೆ ಮತ್ತು ಮಕ್ಕಳ ವರ್ತಮಾನದ
ನೋಟ”
ಹವ್ಯಾಸಿ ರಂಗಭೂಮಿ ನಾಟಕೋತ್ಸವ. ಫೆ.16 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅರುಣ್ ಜೋಳದ ಕೂಡ್ಲಿಗಿಯವರು
ರಚಿಸಿದ ‘ಗಣಿಗಣಮನ’ ನಾಟಕ ಪ್ರದರ್ಶನಗೊಂಡಿತು.
ಬಳ್ಳಾರಿಯ ರಂಗಜಂಗಮ ರಂಗತಂಡದ ಕಲಾವಿದರುಗಳಿಗೆ ಶಿವಶಂಕರ ನಾಯ್ಡುರವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಗಣಿಹಗರಣಗಳಿಗೆ
ಬಲು ಪ್ರಸಿದ್ದಿಯಾದದ್ದು. ಒಂದು ಕಡೆ ಗಣಿದನಿಗಳ ತೀರದ ಸಂಪತ್ತಿನ ದಾಹವಾದರೆ ಇನ್ನೊಂದು ಕಡೆ ದುಡಿಯುವ
ಜನತೆ ಬದುಕು ಕಟ್ಟಿಕೊಳ್ಳಲು ನಡೆಸುವ ಹೋರಾಟದ ಅನಿವಾರ್ಯತೆ. ಗಣಿದಣಿಯೊಬ್ಬ ಐಶಾರಾಮಿ ಪಂಚತಾರಾ ಹೋಟೇಲ್
ಕಟ್ಟಲು ಬಡಜನತೆಯ ಭೂಮಿಯನ್ನು ಕಬಳಿಸಲು ನಡೆಸಿದ ದಬ್ಬಾಳಿಕೆ ಹಾಗೂ ಅದಕ್ಕೆ ವಿರುದ್ಧವಾಗಿ ತಿರುಗಿ
ಬಿದ್ದವರ ಪರಿಪಾಟಲನ್ನು “ಗಣಿಗಣಮನ” ನಾಟಕ ಅನಾವರಣಗೊಳಿಸುತ್ತದೆ.
ಉಳ್ಳವರ ಹಾಗೂ ಇಲ್ಲದವರ ನಡುವಿನ ಸಂಘರ್ಷವನ್ನು ಹೇಳುವ ಈ ವಾಚ್ಯಪ್ರಧಾನ ನಾಟಕವು ಈ ದೇಶದ ವರ್ಗಸಂಘರ್ಷದ
ಒಂದು ಮಾದರಿಯಾಗಿದೆ.
ಆದರೆ.. ಇಂತಹ ಸಮಕಾಲೀನ ಸಂದರ್ಭದ
ಸನ್ನಿವೇಶವನ್ನು ಬರೀ ಮಾತುಗಳ ಮೂಲಕ ನೇರಾನೇರಾ ಕಟ್ಟಿಕೊಡುವುದು ಬೀದಿನಾಟಕದಲ್ಲಿ ಮಾತ್ರ ಸಾಧ್ಯ.
ಕಲೆಯ ಸೂಕ್ಷ್ಮತೆಗಳ ಅಳತೆಗೆ ಒಗ್ಗದ ಇಂತಹ ವಿಷಯಗಳು ರಂಗವೇದಿಕೆಗೆ ಸೂಕ್ತ ಎನ್ನಿಸುವುದಿಲ್ಲ. ಆದರೂ
ಅಂತಹುದೊಂದು ನಾಟಕ ರಚನೆಯ ಪ್ರಯತ್ನವನ್ನು ಅರುಣ್ ಜೋಳದ ಕೂಡ್ಲಿಗಿರವರು ಮಾಡಿದ್ದಾರೆ. ವೃತ್ತಿ ರಂಗಭೂಮಿಯ
ಹಿನ್ನಲೆಯಿಂದ ಬಂದ ಶಿವಶಂಕರ್ ನಾಯ್ಡುರವರು ತುಂಬಾ ಜಾಳುಜಾಳಾಗಿ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.
ಅಭಿನಯ ತರಬೇತಿ ಶಾಲೆಗಳಲ್ಲಿ
ಹೊಸ ವಿದ್ಯಾರ್ಥಿಗಳಿಗೆ ಒಂದು ವಿಷಯ ಕೊಟ್ಟು ಇಂಪ್ರೂವೈಸ್ ಮಾಡಲು ಹೇಳಿದಾಗ ಪೂರ್ವ ಯೋಜನೆ ಇಲ್ಲದೇ
ವಿದ್ಯಾರ್ಥಿಗಳು ತಮಗನ್ನಿಸಿದಂತೆ ಮಾಡಿ ತೋರಿಸುತ್ತಾರೆ. ಅದೇ ರೀತಿ ಈ ‘ಗಣಿಗಣಮನ’ ನಾಟಕ ಮೂಡಿಬಂದಿದೆ. ದೃಶ್ಯಗಳ
ನಡುವೆ ಚೆಂದ ಬಂಧಗಳ ಹಂಗು ಹರಿದು ಚಿತ್ತ ಬಂದತ್ತ ನಾಟಕ ಸಾಗುತ್ತಾ ನೋಡುಗರ ಸಹನೆಯನ್ನು ಇನ್ನಿಲ್ಲದಂತೆ
ಕೆಣಕುತ್ತದೆ. ನಾಟಕದಾದ್ಯಂತ ಅಗತ್ಯಕ್ಕೆ ಮೀರಿ ಬರೀ ಮಾತು ಹರಟೆಗಳು ತುಂಬಿವೆ. ಎಷ್ಟೊಂದು ಎಳೆತ ಆಗಿದೆಯೆಂದರೆ
ಮ್ಯಾನೇಜರ್ ಸಿಗರೇಟಿಗೆ ಬೆಂಕಿ ಹತ್ತುತ್ತಿರಲಿಲ್ಲಾ ಆದರೆ ಆತ ಪ್ರಯತ್ನ ಬಿಡುತ್ತಿರಲಿಲ್ಲಾ. ಮ್ಯಾನೇಜರನಿಗೆ
ಬರುತ್ತಿದ್ದ ಪೋನ್‌ಗಳಂತೂ ನಿಲ್ಲಲೇ ಇಲ್ಲಾ. ಜನ ಆಗಾಗ ಜೋರಾಗಿ ನಗುತ್ತಿದ್ದುದೇನೋ ನಿಜ,, ಆದರೆ ಅದು
ರಂಗದ ಮೇಲೆ ನಡೆಯುತ್ತಿದ್ದ ನಟರ ಬಾಲಿಶತನಕ್ಕೆ ನೋಡುಗರ ಪ್ರತಿಕ್ರಿಯೆಯಾಗಿತ್ತು. ನಿರೂಪನೆಯಂತೂ ತುಂಬಾನೇ
ಪೇರಲವಾಗಿದೆ. ನಟರುಗಳ ಮಾತಲ್ಲಿ ಪೋರ್ಸ ಕೊರತೆ ಇದ್ದು.. ಅಭಿನಯದಲ್ಲಿ ತಾಕತ್ತೆಂಬುದು ಇರದೇ.. ಸಂಭಾಷಣೆಗಳಲ್ಲಿ
ಅಸ್ಪಷ್ಟತೆ ವಿಪರೀತವಾಗಿತ್ತು. ನಿರ್ದೇಶಕರ ಹಿಡಿತಕ್ಕೆ
ನಾಟಕವಂತೂ ದಕ್ಕಲೇ ಇಲ್ಲಾ, ಪ್ರೇಕ್ಷಕರಿಗೆ ನಿರಾಶೆಯಾಗುವುದಂತೂ ತಪ್ಪಲಿಲ್ಲಾ.
ಹೋಗಲಿ ರಂಗತಂತ್ರಗಳ ಬಳಕೆಯಲ್ಲಾದರೂ
ಒಂದಿಷ್ಟು ಕೌಶಲ್ಯ ತೋರಿಸಿದ್ದರೆ ನಾಟಕ ಸಹ್ಯವಾಗುತ್ತಿತ್ತು. ಆದರೆ.. ಬೆಳಕಿಗೊಂದು ವಿನ್ಯಾಸ ಇರಬೇಕು
ಎನ್ನುವ ಅರಿವೇ ಇಲ್ಲವಾಗಿದೆ. ಜನರಲ್ ಲೈಟಿಂಗ್‌ನಲ್ಲಿ ನಾಟಕ ನಡೆಯುವಂತಿದೆ. ಕಲಾಕ್ಷೇತ್ರದ ಬೆಳಕಿನ
ವ್ಯವಸ್ಥೆಯ ಕನಿಷ್ಟ ಸಾಧ್ಯತೆಗಳನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ. ಸಂಸ್ಕೃತಿ
ಇಲಾಖೆಯಿಂದ ಲಕ್ಷಾಂತರ ರೂಪಾಯಿಗಳ ಹಣವನ್ನು ಪಡೆದುಕೊಂಡಿದ್ದರೂ ಇಡೀ ನಾಟದಾದ್ಯಂತ ಎಲ್ಲಾ ವಿಭಾಗದಲ್ಲೂ
ಬಡತನ ಎದ್ದುಕಾಣುತ್ತಿತ್ತು. ರಂಗಸಜ್ಜಿಕೆಯಂತೂ ಬಡತನದ ಬೇಗೆಯಲ್ಲಿ ಬೆಂದು ಸೃಷ್ಟಿಗೊಂಡಂತಿತ್ತು.
ನಿರ್ದೇಶಕರೇ ಈ ನಾಟಕದಲ್ಲಿ ವೇಶಧಾರಿ, ಮ್ಯಾನೇಜರ್, ಪತ್ರಕರ್ತ ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದು
ತಮ್ಮ ಪೋಷಾಕುಗಳಿಗೆ ಮಾತ್ರ ಶ್ರೀಮಂತಿಕೆಯನ್ನು ತಂದುಕೊಂಡಿದ್ದು ಬಹುತೇಕ ಪಾತ್ರಗಳ ಕಾಸ್ಟೂಮ್‌ಗಳತ್ತ
ನಿರ್ಲಕ್ಷ ತೋರಿದಂತಿದೆ. ಹಳೇ ನಿವ್ಸ್ ಪತ್ರಿಕೆಗಳ ತುಂಡುಗಳನ್ನೇ ಇಸ್ಪೇಟ್ ಎಲೆಗಳನ್ನಾಗಿಸಿಕೊಂಡು
ಆಟ ಆಡುವುದನ್ನು ಈ ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ. ಈ ನಾಟಕದಲ್ಲಿ ಸಹ್ಯವಾಗಿದ್ದು ಆಗಾಗ ಅಗತ್ಯ
ಇರಲಿ ಬಿಡಲಿ ಮೂಡಿ ಬರುತ್ತಿದ್ದ ಹಾಡು ಮತ್ತು ಸಂಗೀತಗಳು ಮಾತ್ರ.
‘ಮಹಿಳೆ ಮತ್ತು ಮಕ್ಕಳ ವರ್ತಮಾಣದ
ನೋಟ”
ಎನ್ನುವ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ಮೂಡಬರಬೇಕಿತ್ತು. ಆದರೆ.. ಇಡೀ ನಾಟಕದಲ್ಲಿ ದುರ್ಬಿನ್
ಹಾಕಿ ಹುಡುಕಿದರೂ ಈ ವಿಷಯದ ಪ್ರಸ್ತುತತೆ ಇಲ್ಲಾ. ಕೇಂದ್ರ ವಿಷಯವನ್ನು ಬಿಟ್ಟು ಗಣಿಗಾರಿಕೆ, ಹೋಟೇಲ್
ಕಟ್ಟಲು ಬಡಜನರ ವಸತಿ ತೆರವುಗೊಳಿಸುವಿಕೆ ಹಾಗೂ ಗಣಿಧನಿಗಳ ದಬ್ಬಾಳಿಕೆಗಳ ಕುರಿತೇ ನಾಟಕ ಸುತ್ತುತ್ತದೆ.
ಕೂಲಿ ಕಾರ್ಮಿಕ ದಂಪತಿಗಳ ಮಗಳು ಯಾಕೆ ಕಾಣೆಯಾದಳೆಂಬುದು ಕೊನೆಯವರೆಗೂ ಗೊತ್ತಾಗುವುದೇ ಇಲ್ಲಾ. ರಿಜ್ವಾನಾ
ಎನ್ನುವ ವಕೀಲಿಕೆ ಕಲಿತ ಹೆಣ್ಣುಮಗಳು ತನ್ನ ಮನೆಯನ್ನು ಉಳಿಸಿಕೊಳ್ಳಲು ಗಣಿದೊರೆಗಳ ವಿರುದ್ಧ ನಿಲ್ಲುವ
ಸನ್ನಿವೇಶಗಳೂ ಸಹ ರೆಜಿಸ್ಟರ್ ಆಗುವಂತಿಲ್ಲಾ. ರಂಗಪಠ್ಯದಲ್ಲಿ ಒಂದು ಬಂಧವಿಲ್ಲದೇ.. ರಂಗಪ್ರದರ್ಶನದಲ್ಲಿ
ಚೆಂದವಿಲ್ಲದೇ ಇಡೀ ನಾಟಕ ನೋಡುಗರ ಸಹನೆಯನ್ನು ಕೊನೆಯವರೆಗೂ ಪರೀಕ್ಷಿಸುವಂತಿದೆ.
ನಾಟಕ ರಚನೆಕಾರರಿಗೆ ಮೂವತ್ತೈದು
ಸಾವಿರ, ನಿರ್ದೇಶಕರಿಗೆ ಅರ್ಧ ಲಕ್ಷ, ಇಡೀ ಪ್ರೋಡಕ್ಷನ್ನಿಗೆ ಮೂರು ತಿಂಗಳ ಮೊದಲೇ ಒಂದು ಲಕ್ಷ ಅಡ್ವಾನ್ಸ್
ಕೊಟ್ಟಿದ್ದು ಹಾಗೂ ಬಾಕಿ ಎರಡೂವರೆ ಲಕ್ಷ ಕೊಡಲಾಗುವುದು. ಈ ನಾಟಕದ ಮೇಲ್ವಿಚಾರಣೆ ಮಾಡುವವರಿಗೆ ಹಲವಾರು ಲಕ್ಷ. ಇಷ್ಟೆಲ್ಲಾ
ಹಣವನ್ನು ಸರಕಾರಿ ಇಲಾಖೆ ಧಾರಾಳವಾಗಿ ಕೊಟ್ಟರೂ ಈ ನಾಟಕೋತ್ಸವದಾದ್ಯಂತ ಬಹುತೇಕ ಕಳಪೆ ನಾಟಕಗಳು ಮೂಡಿ
ಬಂದಿದ್ದಕ್ಕೆ ಯಾರು ಹೊಣೆ ಹೊರಬೇಕು? ಇಂತಹ ಜಾಳುಜಾಳಾದ
ನೀರಸ ನಾಟಕವನ್ನು ಅದು ಹೇಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿಯಮಿತಗೊಂಡ ನಾಟಕಗಳ ಆಯ್ಕೆ ಸಮಿತಿ
ಆಯ್ಕೆಮಾಡಿಕೊಂಡಿತು ಎನ್ನುವುದೇ ಅಚ್ಚರಿದಾಯಕ ಸಂಗತಿ. ಈ ನಾಟಕವನ್ನು ನೋಡಿದ ನಂತರ ಆಯ್ಕೆ ಸಮಿತಿಯಲ್ಲಿರುವ
ರಾಜಾಶ್ರಿತ ಪಂಡಿತರ ಬಗ್ಗೆಯೇ ಅನುಮಾನ ಮೂಡುವುದರಲ್ಲಿ ಸಂದೇಹವಿಲ್ಲಾ. ಈ ನಾಟಕವಂತೂ ರಿಪೇರಿ ಮಾಡಲಾಗದಷ್ಟು
ದುರ್ಬಲವಾಗಿದೆ. ಆದಿಯಿಂದಾ ಅಂತ್ಯದವರೆಗೂ ಸಂಪೂರ್ಣ ಬದಲಾಯಿಸಿ ಬರೆದು ಮತ್ತೆ ಚೆಂದವಾಗಿ ಕಟ್ಟಿಕೊಟ್ಟರೆ
ಮಾತ್ರ ಪ್ರದರ್ಶನಕ್ಕೆ ಯೋಗ್ಯವಾಗಬಹುದಾಗಿದೆ. ಆದರೆ ಅದನ್ನು ಮಾಡುವ ಅಥವಾ ಮಾಡಿಸುವ ಸಾಧ್ಯತೆಯಂತೂ
ಕಾಣುತ್ತಿಲ್ಲಾ. ಜನತೆಯ ಹಣ ಹೀಗೆ ಪೋಲು ಮಾಡಿದವರನ್ನು ಕ್ಷಮಿಸಲಂತೂ ಸಾಧ್ಯವೇ ಇಲ್ಲಾ…
ಅರುಣ್ ಜೋಳದ ಕೂಡ್ಲಗಿಯವರು ಸೆನ್ಸಿಟಿವ್ ಬರಹಗಾರರು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಆಯ್ದ ವಸ್ತು ವಿಷಯವನ್ನು ನಾಟಕವಾಗಿಸುವ ಕಲೆ ಇನ್ನೂ ಅವರಿಗೆ ಸಿದ್ದಿಸಿಲ್ಲಾ. ವಸ್ತುವಿನ ಆಯ್ಕೆ, ದೃಶ್ಯಗಳ ಜೋಡಣೆ, ರೂಪಕ ಸಾಧ್ಯತೆ ಹಾಗೂ ನಿರೂಪಣೆಯ ಕೌಶಲ್ಯವನ್ನು ರೂಢಿಸಿಕೊಂಡರೆ ಉತ್ತಮ ನಾಟಕಗಳನ್ನೂ ಬರೆಯಬಹುದಾಗಿದೆ. ರಂಗಪಠ್ಯದಲ್ಲಿ ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿ ಮುರಿದು ಕಟ್ಟಬೇಕಾದದ್ದು ನಿರ್ದೇಶಕನ ಜವಾಬ್ದಾರಿ. ಆದರೆ ಶಿವಶಂಕರ್ ಇರುವುದನ್ನೇ ಕಟ್ಟುವ ಪರದಾಟದಲ್ಲೇ ತಮ್ಮ ಕಲಿತ ಬುದ್ದಿಯನ್ನೆಲ್ಲಾ ಬಳಸಿದ್ದಾರೆ. ಇಂತಹ ಕಾಂಟೆಂಪರರಿ ನಾಟಕವನ್ನು ಪ್ರದರ್ಶನಯೋಗ್ಯ ಮಾಡಲು ಬೇರೆಯದೇ ಆದ ಸಿದ್ದತೆ ಹಾಗೂ ರಂಗಬದ್ದತೆಗಳು ಬೇಕಾಗುತ್ತವೆ. ಆದರೆ...
-ಶಶಿಕಾಂತ
ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ