ಮಂಗಳವಾರ, ಜುಲೈ 23, 2019

ವೃತ್ತಿರಂಗಭೂಮಿ ಕೇಂದ್ರ ಅಸ್ಥಿತ್ವಕ್ಕೆ; ಜಯವಾಗಲಿ ಗಂಗಾಧರಸ್ವಾಮಿಯವರ ಸಾರಥ್ಯಕ್ಕೆ :






 ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ದಿವಂಗತ ಎಂ.ಪಿ.ಪ್ರಕಾಶರವರಿಗೆ ಕಲೆ, ಸಾಹಿತ್ಯ ಹಾಗೂ ರಂಗಭೂಮಿಯ ಬಗ್ಗೆ ಅಪಾರವಾದ ಒಲವಿತ್ತು. ಅವರು ಸ್ವತಃ ನಾಟಕಗಳಲ್ಲಿ ಅಭಿನಯಿಸಿ, ನಾಟಕ ರಚಿಸಿ, ರಂಗತಂಡವನ್ನೂ ಆರಂಭಿಸಿದ್ದರು. ರಂಗ ರೆಪರ್ಟರಿಯೊಂದನ್ನು ಕಟ್ಟುವ ಆಸೆಯಿಂದಾ ಏಣಗಿ ನಟರಾಜರವರ ಸಾರಥ್ಯದಲ್ಲಿ  ಅದನ್ನೂ ಆರಂಭಿಸಿದರಾದರೂ ಅದು ಹೆಚ್ಚು ಕಾಲ ಮುಂದುವರೆಯಲಿಲ್ಲ. ಬದಲಾಗುತ್ತಿರುವ ಕಾಲದ ತೀವ್ರತೆಯಲ್ಲಿ ಸೊರಗುತ್ತಿರುವ ವೃತ್ತಿರಂಗಭೂಮಿಗೆ ಹೇಗಾದರೂ ಕಾಯಕಲ್ಪ ಕೊಡಬೇಕೆಂಬ ಬಯಕೆ ಎಂ.ಪಿ.ಪ್ರಕಾಶರವರದ್ದಾಗಿತ್ತು. ವೃತ್ತಿಪರವಾದ ವೃತ್ತಿರಂಗಭೂಮಿ ಕೇಂದ್ರವೊಂದನ್ನು ಆರಂಭಿಸಬೇಕು ಹಾಗೂ ಅದರ ಮೂಲಕ ವೃತ್ತಿರಂಗಭೂಮಿಯಲ್ಲಿ ಕಾಲಕ್ಕೆ ತಕ್ಕ ಹಾಗೆ ಸೂಕ್ತ ಬದಲಾವಣೆಗಳನ್ನು ತರುವ ಪ್ರಯತ್ನವಾಗಬೇಕು ಎನ್ನುವುದು ಅವರ ಆಶಯವಾಗಿತ್ತು. ರಂಗಬದ್ದತೆ ಮತ್ತು ಪ್ರತಿಭೆ ಇರುವ ಕಲಾವಿದರ ಕೊರತೆಯನ್ನು ನಾಟಕ ಕಂಪನಿಗಳು ಅನುಭವಿಸುತ್ತಿವೆ. ಅದಕ್ಕಾಗಿ ಯುವಕರಿಗೆ ಅಭಿನಯ ತರಬೇತಿಯನ್ನು ಕೊಟ್ಟು ನಟ ಪರಂಪರೆಯನ್ನು ಮತ್ತೆ ಮುಂದುವರೆಸಬೇಕು.. ನಾಟಕ ಕಂಪನಿಗಳಲ್ಲಿ ದುಡಿಯುವ ರಂಗಕರ್ಮಿಗಳ ಮಕ್ಕಳಿಗೆ ವಸತಿ ಶಾಲೆಯನ್ನು ಸ್ಥಾಪಿಸಬೇಕು..  ಹೀಗೆ ಹಲವಾರು ಕನಸುಗಳನ್ನು ಮಾನ್ಯ ಎಂ.ಪಿ.ಪ್ರಕಾಶರವರು ಕಂಡಿದ್ದರು. ಅವರು ಇನ್ನಷ್ಟು ಕಾಲ ಅಧಿಕಾರದಲ್ಲಿ ಇದ್ದಿದ್ದರೆ ಇನ್ನೂ ಹತ್ತಾರು ವರ್ಷಗಳ ಕಾಲ ಬದುಕಿದ್ದರೆ ಈ ಕನಸೂ ಸಹ ನನಸಾಗುತ್ತಿತ್ತೇನೋ.. ಆದರೆ ತಮ್ಮ ಕಣ್ಣಲ್ಲಿ ಕನಸುಗಳನ್ನು ಇಟ್ಟುಕೊಂಡೇ ಬಹು ಬೇಗ ನಿರ್ಗಮಿಸಿದರು.  ಆದರೆ.. ಅವರ ಅಗಲಿಕೆಯ ಎಂಟು ವರ್ಷಗಳ ನಂತರ  ಎಂ.ಪಿ.ಪ್ರಕಾಶರವರು ಬಿತ್ತಿದ ವೃತ್ತಿರಂಗಭೂಮಿ ಕೇಂದ್ರದ ಬೀಜ ಈಗ ಮೊಳೆತು ಬೆಳೆಯಲು ಆರಂಭಿಸಿದೆ. ನನಸಾಗುವ ಲಕ್ಷಣಗಳೂ ಕಾಣುತ್ತಿವೆ ಎಂಬುದು ಕನ್ನಡ ರಂಗಭೂಮಿಗೆ ಸಂತಸದ ಸಂಗತಿ.

ಕೊಂಡಜ್ಜಿ ಮೋಹನ್‌ರವರು

ಎಂ.ಪಿ.ಪ್ರಕಾಶರವರ ಕನಸನ್ನು ನನಸಾಗಿಸಲು ಕೆಲವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾಲಕಾಲಕ್ಕೆ ಸರಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಅದರಲ್ಲಿ ಪ್ರಮುಖವಾದವರು ಕೊಂಡಜ್ಜಿ ಮೋಹನ್‌ರವರು. ಎಂಎಲ್‌ಸಿ ಆಗಿರುವ ಮೋಹನ್‌ರವರು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಮನವಿಗಳನ್ನು ಮಾಡಿಕೊಂಡು ಮನವರಿಕೆ ಮಾಡಿಕೊಟ್ಟರು. ದಾವಣಗೆರೆಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳರವರು ವೃತ್ತಿರಂಗಭೂಮಿ ಕೇಂದ್ರದ ಸ್ಥಾಪನೆಯ ಕುರಿತು ಲೇಖನಗಳನ್ನು ಬರೆಬರೆದು ಸರಕಾರವನ್ನು ಹಾಗೂ ಇತರ ರಂಗಕರ್ಮಿಗಳನ್ನು ಎಚ್ಚರಿಸುತ್ತಲೇ ಬಂದರು ಹಾಗೂ ಸಿಎಂ ರವರಿಗೆ ಖುದ್ದಾಗಿ ಮನವಿ ಪತ್ರವನ್ನು ಕೊಟ್ಟು ಒತ್ತಾಯಿಸಿದರು. ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದ ಮಾನ್ಯ ಉಮಾಶ್ರೀಯವರು ರಂಗಭೂಮಿಯಿಂದಲೇ ಬಂದ ಕಲಾವಿದೆಯಾಗಿದ್ದರಿಂದ ಅವರೂ ಸಹ ಈ ವಿಷಯದಲ್ಲಿ ಆಸಕ್ತಿಯನ್ನು ತೆಗೆದುಕೊಂಡರು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಮಾನ್ಯ ವಿಶುಕುಮಾರರವರೂ ಸಹ ಹೆಚ್ಚು ಮುತುವರ್ಜಿವಹಿಸಿದರು. ಈ ಎಲ್ಲರ ಪ್ರಾಮಾಣಿಕ ಪ್ರಯತ್ನ ಹಾಗೂ ಸತತ ಒತ್ತಾಯಗಳಿಂದಾಗಿ ಮಾನ್ಯ ಸಿದ್ದರಾಮಯ್ಯನವರು ವೃತ್ತಿ ರಂಗಭೂಮಿ ಕೇಂದ್ರದ ಸ್ಥಾಪನೆಗೆ ಅಧೀಕೃತ ಅನುಮೋದನೆಯನ್ನು ಕೊಟ್ಟು ಬಜೆಟ್ಟಿನಲ್ಲಿ ಒಂದು ಕೋಟಿ ರೂಪಾಯಿಗಳನ್ನೂ ಮೀಸಲಿಟ್ಟರು. ಕೊಂಡಜ್ಜಿ ಮೋಹನ್‌ರವರ ಒತ್ತಾಯದ ಮೇರೆಗೆ ಮಧ್ಯಕರ್ನಾಟಕದ ದಾವಣಗೆರೆಯ ಕೊಂಡಜ್ಜಿಯಲ್ಲಿ ವೃತಿರಂಗಭೂಮಿ ಕೇಂದ್ರ ಸ್ಥಾಪನೆ ಮಾಡುವುದಾಗಿ ನಿಶ್ಚಯಿಸಲಾಯಿತು. ದಾವಣಗೆರೆಯ ಪ್ರಭಾವಿ ರಾಜಕಾರಣಿಯಾಗಿರುವ ಶಾಮನೂರು ಶಿವಶಂಕರಪ್ಪನವರೂ ಕೂಡಾ ಈ ಪ್ರಸ್ತಾವನೆಗೆ ಬೆಂಬಲಿಸಿದರು.
 
ವಿಶುಕುಮಾರರವರು
ಹೀಗೆ.. ಅಧಿವೇಶನದಲ್ಲಿ ಘೋಷಣೆಯಾಗಿ, ಅನುದಾನ ಮೀಸಲಿಟ್ಟು ಎರಡು ವರ್ಷಗಳೇ ಕಳೆದವು. ಈ ನಡುವೆ ಸಿದ್ದರಾಮಯ್ಯನವರು ಹಾಗೂ ಉಮಾಶ್ರೀಯವರು ಮಾಜಿಗಳಾಗಿದ್ದರು. ಚುನಾವಣೆಯಲ್ಲೆ ಒಂದಿಷ್ಟು ಕಾಲ ಕೊಚ್ಚಿಹೋಯಿತು.  ಕಾಂಗ್ರೆಸ್ ಸರಕಾರ ಹೋಗಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು. ತದನಂತರ ಕೇಂದ್ರ ಚುನಾವಣೆ.. ಆನಂತರ ಅಸ್ಥಿರ ರಾಜಕೀಯ ಬೆಳವಣೆಗೆ.. ಹೀಗೆ ನಮ್ಮ ವೃತಿರಂಗಭೂಮಿ ಕೇಂದ್ರದ ಅನುಷ್ಟಾನಕ್ಕೆ ಕಾಲ ಕೂಡಿ ಬರಲೇ ಇಲ್ಲಾ. ಆದರೆ.. ಅಧಿಕಾರಿಗಳು ಸುಮ್ಮನಿರಲಿಲ್ಲ. ವಿಶುಕುಮಾರರವರು ಮಾಜಿ ಆಗುವ ಮುನ್ನ ಹಲವಾರು ಸಭೆಗಳನ್ನು ನಡೆಸಿದರು. ವೃತಿ ರಂಗಭೂಮಿ ಕೇಂದ್ರ ಎಲ್ಲಿ ಸ್ಥಾಪನೆಯಾಗಬೇಕು, ಯಾರಿಗೆ ಅದರ ಹೊಣೆಗಾರಿಕೆ ಕೊಡಬೇಕು ಎನ್ನುವುದನ್ನೆಲ್ಲಾ ನಿರ್ಧರಿಸಿದರು. ಮೂರು ಜನ ರಂಗಕರ್ಮಿಗಳ ಹೆಸರನ್ನು ಸರಕಾರಕ್ಕೆ ಸೂಚಿಸಲಾಗಿತ್ತು. ಅಷ್ಟರಲ್ಲಿ ಸಂಸ್ಕೃತಿ ಇಲಾಖೆಯಿಂದಾ ಜಯಮಾಲರವರು ಹೋಗಿ ಮಾನ್ಯ ಡಿ.ಕೆ.ಶಿವಕುಮಾರರವರು ಸಚಿವರಾಗಿಯಾಗಿತ್ತು. ಆದರೆ ಕೊಂಡಜ್ಜಿ ಮೋಹನ್‌ರವರು ಮಾತ್ರ ಬೆಂಬಿಡದ ಭೂತದಂತೆ ಕಡತದ ಹಿಂದೆ ಬಿದ್ದಿದ್ದರು, ವಿಶುಕುಮಾರರವರು ನಿವೃತ್ತರಾಗುವ ಕೊನೆಯ ದಿನವೇ ಫೈಲಿಗೆ ಅವರ ಸಹಿ ಮಾಡಿಸಿ ಸಚಿವಾಲಯಕ್ಕೆ ಕಳಿಸುವ ವ್ಯವಸ್ಥೆ ಮಾಡಿ ಫಾಲೋಅಪ್ ಮಾಡುತ್ತಲೇ ಇದ್ದರು. ಕೆಲವು ಅತೃಪ್ತ ಶಾಸಕರ ಮುನಿಸಿನಿಂದ ಅಲ್ಪ ಮತಕ್ಕೆ ಒಳಗಾದ ಸಮ್ಮಿಶ್ರ ಸರಕಾರ ಇನ್ನೇನು ಬೀಳುತ್ತದೆ ಎನ್ನುವ ಸಂದರ್ಭದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರರವರು ಮಾಜಿಯಾಗುವ ಮುನ್ನ ತಮ್ಮ ಇಲಾಖೆಯ ಕಡತಗಳನ್ನು ಅರ್ಜೆಂಟಾಗಿ ವಿಲೇವಾರಿ ಮಾಡತೊಡಗಿದರು. ಹಾಗೆ ಮುಕ್ತಿ ಪಡೆದ ಕಡತದಲ್ಲಿ ಈ ವೃತಿ ರಂಗಭೂಮಿ ಕೇಂದ್ರದ್ದೂ ಒಂದು.

2019 ಜುಲೈ 19ರಂದು ಕರ್ನಾಟಕ ಸರ್ಕಾರದ ಅಧೀಕೃತ ಅಧಿಸೂಚನೆ ಹೊರಬಿತ್ತು. ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ವೃತಿ ರಂಗಭೂಮಿ ಕೇಂದ್ರದ ವಿಶೇಷಾಧಿಕಾರಿಯನ್ನಾಗಿ ಮೈಸೂರಿನ ಪಿ.ಗಂಗಾಧರಸ್ವಾಮಿಯವರನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯಪಾಲರ ಆದೇಶದಾನುಸಾರ ಅವರ ಹೆಸರಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನ ಕಾರ್ಯದರ್ಶಿಗಳ ಸಹಿಯೊಂದಿಗೆ ಹೊರಬಂದ ಅಧಿಸೂಚನೆಯ ಪತ್ರ ರಂಗಕರ್ಮಿಗಳಲ್ಲಿ ಹರುಷವನ್ನು ತಂದಿತು.

ಈಗ ಉದ್ದೇಶಿತ ವೃತಿ ರಂಗಭೂಮಿ ಕೇಂದ್ರಕ್ಕೆ ಸರಕಾರಿ ಒಪ್ಪಿಗೆಯೂ ದೊರೆತಿದೆ, ಹಣವೂ ಇದೆ, ಅದಕ್ಕೊಬ್ಬರು ವಿಶೇಷ ಅಧಿಕಾರಿಯನ್ನೂ ನಿಯಮಿಸಲಾಗಿದೆ. ಆದರೆ.. ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾಣಕಮ್ಮನವರು ಮಾತ್ರ ವಿಶೇಷಾಧಿಕಾರಿಗಳಿಗೆ ಅಧೀಕೃತ ಸಮ್ಮತಿ ಪತ್ರ ಕೊಡುತ್ತಿಲ್ಲ. ಇನ್ನೂ ಪರಿಶೀಲಿಸಬೇಕು ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ. ಆದಷ್ಟು ಬೇಗ ವಿಶೇಷಾಧಿಕಾರಿಗಳಿಗೆ ಅಧೀಕೃತ ಪತ್ರದ ಮೂಲಕ ಅಧಿಕಾರ ಕೊಡಿ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು ಇಲಾಖೆಯ ನಿರ್ದೇಶಕಿಯವರಿಗೆ ಪತ್ರವನ್ನೂ ಬರೆದಿದ್ದಾರೆ. ಆದರೆ.. ಜಾಣಕಮ್ಮನವರು ಮನಸ್ಸು ಮಾಡುತ್ತಿಲ್ಲ. ಸರಕಾರದ ಆದೇಶವೇ ಆಗಿರುವಾಗ ಇಂದಿಲ್ಲ ನಾಳೆ ಅಧೀಕೃತ ಆಹ್ವಾನ ಪತ್ರ ಕೊಡಲೇಬೇಕಾಗುತ್ತದೆ. ಕೊಡುತ್ತಾರೆ.

ಆದರೆ.. ಈಗ ಮುಂದಿರುವ ಸವಾಲು ಏನೆಂದರೆ ವೃತ್ತಿ ರಂಗಭೂಮಿ ಕೇಂದ್ರವನ್ನು ಕಟ್ಟುವುದು ಹೇಗೆ ಎನ್ನುವುದು. ಇನ್ನೂ ಯಾರಿಗೂ ಸಾಗುವ ದಾರಿಯ ಸ್ಪಷ್ಟತೆ ಇಲ್ಲಾ. ವೃತ್ತಿರಂಗಭೂಮಿಯನ್ನು ಉಳಿಸಿ ಬೆಳೆಸುವ ಗುರಿ ಮಾತ್ರ ಗೊತ್ತಿದೆ. ಆದರೆ.. ಆ ಗುರಿ ಸಾಧನೆಗೆ ಯಾವ ರೀತಿಯ ರೂಪರೇಷೆಗಳಿವೆ ಎಂದು ಕೇಳಿದರೆ ಸರಿಯಾದ ಉತ್ತರ ಇಲ್ಲ. ದಾರಿಯೇ ಗೊತ್ತಿಲ್ಲದ ದಟ್ಟ ಕಾನನದಲ್ಲಿ ಹೊಸ ದಾರಿ ದಿಕ್ಕು ಹುಡುಕುವ ಪ್ರಯತ್ನವನ್ನು 69 ವರ್ಷ ವಯೋಮಾನದ ಉತ್ಸಾಹಿ ಪಿ.ಗಂಗಾಧರಸ್ವಾಮಿಯವರು ಮಾಡಬೇಕಿದೆ. ಅವರಿಗೂ ಯಾಕೆ ಮಾಡಬೇಕು ಎನ್ನುವುದು ಗೊತ್ತಿದೆಯೇ ಹೊರತು ಹೇಗೆ ಮಾಡಬೇಕು, ಏನು ಮಾಡಬೇಕು, ಯಾರ ಸಹಾಯ ಸಹಕಾರ ಪಡೆದು ಮಾಡಬೇಕು ಎನ್ನುವುದರ ಬಗ್ಗೆ ಸ್ಪಷ್ಟ ಮಾರ್ಗದರ್ಶನಗಳಿಲ್ಲ. ಈಗಿರುವ ಒಂದೇ ಒಂದು ಮಾರ್ಗದರ್ಶಿ ಮಾದರಿ ಅಂದರೆ ಅದು ರಂಗಾಯಣದ ಬೈಲಾ.. ಈ ಸಿದ್ಧ ಮಾದರಿಯನ್ನು ಇಟ್ಟುಕೊಂಡು ಹೊಸ ವೃತ್ತಿರಂಗಭೂಮಿ ಕೇಂದ್ರವನ್ನು ಕಟ್ಟುವ ಹರಸಾಹಸವನ್ನು ಶೂನ್ಯದಿಂದ ಆರಂಭಿಸಬೇಕಿದೆ.

ಆಧುನಿಕ ರಂಗಭೂಮಿಗೆ ಪೂರಕವಾಗಿ ಮೈಸೂರು ರಂಗಾಯಣವನ್ನು ಆರಂಭಿಸಲಾಯಿತು. ಆಗಿನಿಂದಲೂ ವೃತ್ತಿ ರಂಗಭೂಮಿಗೂ ಸಹ ರಂಗಾಯಣದಂತಹ ರೆಪರ್ಟರಿ ಬೇಕೆಂಬುದು ಕೆಲವು ವೃತ್ತಿರಂಗಭೂಮಿಯವರ ಬೇಡಿಕೆಯೂ ಆಗಿತ್ತು. ಈಗ ವೃತ್ತಿ ರಂಗಭೂಮಿ ಕೇಂದ್ರವನ್ನೂ ಸಹ ರಂಗಾಯಣದ ಮಾದರಿಯಲ್ಲಿ ಕಂಪನಿ ನಾಟಕ ಶೈಲಿಯ ರೆಪರ್ಟರಿಯನ್ನಾಗಿ  ಮಾಡಬೇಕಾ? ಅದು ಅಷ್ಟು ಸುಲಭವಾ? ರೆಪರ್ಟರಿ ಎಂದರೆ ಊರಿಂದೂರಿಗೆ ನಾಟಕ ತಂಡವನ್ನು ಕರೆದುಕೊಂಡು ಹೋಗುವಂತಹ ಸಂಚಾರಿ ರಂಗಭೂಮಿ. ಆಧುನಿಕ ರಂಗಭೂಮಿ ನಾಟಕಗಳಿಗಾದರೋ ಕಡಿಮೆ ಪರಿಕರಗಳಿರುತ್ತವೆಯಾದ್ದರಿಂದ ಸಂಚಾರ ಸುಲಭ. ಆದರೆ.. ವೃತ್ತಿ ರಂಗಭೂಮಿಯ ಪರದೆ, ಪರಿಕರಗಳನ್ನು ದಿನಕ್ಕೊಂದು ಊರಿಗೆ ತೆಗೆದುಕೊಂಡು ಹೋಗಿ ನಾಟಕವಾಡುವುದು ಕಷ್ಟಸಾಧ್ಯ. ವೃತ್ತಿ ರಂಗಭೂಮಿಯ ನಾಟಕಗಳೆಂದರೆ ಒಂದು ಸ್ಥಳದಲ್ಲಿ ತಿಂಗಳಾನು ಕಾಲ ಟೆಂಟ್ ಹಾಕಿ ನಾಟಕ ಮಾಡಿ ಕಲೆಕ್ಷನ್ ಕಡಿಮೆ ಆದಾಗ ಮತ್ತೊಂದು ಊರಿಗೆ ಹೋಗಿ ಟೆಂಟ್ ಹಾಕಲಾಗುತ್ತದೆ. ಈ ರೀತಿಯಲ್ಲಿ ರೆಪರ್ಟರಿಗೆ ಮಾಡಲು ಸಾಧ್ಯವಿಲ್ಲಾ. ಮಾಡಿದರೆ ಅದು ಇನ್ನೊಂದು ನಾಟಕ ಕಂಪನಿಯಾಗುತ್ತದಷ್ಟೇ.

ವಿಶೇಷಾಧಿಕಾರಿಯಾಗಿರುವ ಗಂಗಾಧರಸ್ವಾಮಿಯವರ ರಂಗಭೂಮಿಯ ಅನುಭವ ಬೇಕಾದಷ್ಟಿದೆ. ಸಮುದಾಯ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರು. ನೀನಾಸಮ್ ರಂಗಶಿಕ್ಷಣ ಸಂಸ್ಥೆಯಲ್ಲಿ ರಂಗಶಿಕ್ಷಕರಾಗಿದ್ದವರು. 1989ರಿಂದ ಇಪ್ಪತ್ತು ವರ್ಷಗಳ ಕಾಲ ಮೈಸೂರಿನ ರಂಗಾಯಣದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ನಟ, ನಿರ್ದೇಶಕ, ತರಬೇತುದಾರ, ನೇಪತ್ಯ ತಜ್ಞ, ಸಂಘಟಕರಾಗಿ ದುಡಿಯುತ್ತಾ ರಂಗಭೂಮಿಯನ್ನೇ ಬದುಕಾಗಿಸಿಕೊಂಡವರು. ರಾಜ್ಯಾದ್ಯಂತ ಅನೇಕ ರಂಗತರಬೇತಿ ಕಾರ್ಯಾಗಾರಗಳನ್ನು ನಿರ್ದೇಶಿಸಿ ಸಾವಿರಾರು ಯುವಕರಿಗೆ ರಂಗತರಬೇತಿಯನ್ನು ಕೊಟ್ಟವರು. ಇಂತಹ ಗಂಗಾಧರಸ್ವಾಮಿಯವರು ಪ್ರಯತ್ನಿಸಿದರೆ ಮಾದರಿ ವೃತ್ತಿ ರಂಗಭೂಮಿ ಕೇಂದ್ರವನ್ನು ಕಟ್ಟುವುದು ಅಸಾಧ್ಯದ ಸಂಗತಿ ಏನೂ ಅಲ್ಲ. ಆದರೆ.. ಅವರಿಗೂ ಮಿತಿಗಳಿವೆ, ಅವರೊಬ್ಬರಿಂದಲೇ ಈ ಎಲ್ಲವೂ ಆಗಲು ಸಾಧ್ಯವಿಲ್ಲ. ಸಂಸ್ಕೃತಿ ಇಲಾಖೆಯ ಸಹಾಯ, ವೃತ್ತಿ ರಂಗಭೂಮಿಯವರ ಸಹಕಾರ ಅತ್ಯಂತ ಅಗತ್ಯವಾಗಿದೆ.

ಮೊದಲು ಕೊಂಡಜ್ಜಿ ಎನ್ನುವ ಬೆಟ್ಟದಲ್ಲಿರುವ ಸ್ಕೌಟ್ ಮತ್ತು ಗೈಡ್ಸ್ ಬೇಸ್ ಕ್ಯಾಂಪ್ ಪ್ರದೇಶದಲ್ಲಿ ಬೇಸಿಕ್ ಇನ್ಪಾಸ್ಟ್ರಕ್ಚರ್ ನಿರ್ಮಿಸಬೇಕಾಗಿದೆ. ಇದಕ್ಕಾಗಿಯೇ ಒಂದು ವರ್ಷ ಬೇಕಾಗಬಹುದೇನೋ. ಅದರ ಜೊತೆಗೆ ವೃತ್ತಿ ರಂಗಭೂಮಿ ಕೇಂದ್ರದ ಉದ್ದೇಶ, ದಾರಿ, ಗುರಿಗಳನ್ನೆಲ್ಲ ನಿರ್ಧರಿಸಿ ವಿಸ್ತೃತ ರೂಪರೇಷೆಗಳನ್ನು ಸಿದ್ದಗೊಳಿಸಬೇಕಾಗಿದೆ. ರಂಗಾಯಣವನ್ನೇ ಮಾದರಿಯಾಗಿಟ್ಟುಕೊಂಡರೆ ಇಡೀ ಯೋಜನೆಗೆ ಸೀಮಿತತೆ ಬರುತ್ತದೆ. ರಂಗಾಯಣದಂತೆಯೇ ಇದು ಇನ್ನೊಂದು ವೃತ್ತಿರಂಗಭೂಮಿಯ ರೆಪರ್ಟರಿಯಾಗುತ್ತದಷ್ಟೇ. ಆದರೆ.. ಅದನ್ನು ಮೀರಿ ದೊಡ್ಡ ಕ್ಯಾನ್ವಾಸ್ ಸಿದ್ದಪಡಿಸಿಕೊಂಡು ಹಂತ ಹಂತವಾಗಿ ಯೋಜನೆ ಜಾರಿಮಾಡಬೇಕಾಗಿದೆ. ತುಂಬ ಅಗತ್ಯವಾಗಿ ಈ ವೃತ್ತಿ ರಂಗಭೂಮಿ ಕೇಂದ್ರದ ಉದ್ದೇಶಗಳಲ್ಲಿ ಇವುಗಳಿದ್ದರೆ ಉತ್ತಮ.

1.        ಹೊಸದಾಗಿ ಆರಂಭವಾಗುತ್ತಿರುವ ವೃತ್ತಿರಂಗಭೂಮಿ ಕೇಂದ್ರವು ಸಮಕಾಲೀನ ವೃತ್ತಿ ರಂಗಭೂಮಿಯ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಯೋಚಿಸಬೇಕಾಗಿದೆ.

2.       ರಂಗಾಸಕ್ತ ಯುವ ಕಲಾವಿದರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು ಸಿದ್ದಗೊಳಿಸಿ ವೃತ್ತಿಪರ ಕಲಾವಿದರ ಅಭಾವದಿಂದ ತತ್ತರಿಸುತ್ತಿರುವ ನಾಟಕ ಕಂಪನಿಗಳಿಗೆ ಕಳುಹಿಸುವ ಏರ್ಪಾಡು ಮಾಡಬೇಕಾಗಿದೆ. ಇದಕ್ಕಾಗಿ ಕಂಪನಿ ನಾಟಕ ಶೈಲಿಯ ಅಭಿನಯ ತರಬೇತಿಯು ವೃತ್ತಿರಂಗಭೂಮಿ ಕೇಂದ್ರದ ಮೊದಲ ಆದ್ಯತೆ ಆಗಬೇಕಾಗಿದೆ. ಅದಕ್ಕಾಗಿ  ಕಟ್ಟಡ, ರಂಗಮಂದಿರ ಇತ್ಯಾದಿಗಳಿಗಾಗಿ ಕಾಯದೇ ಕೊಂಡಜ್ಜಿಯಲ್ಲಿ ಈಗಿರುವ ಸಭಾಂಗಣವನ್ನೇ ಬಳಸಿ ರಂಗಾಸಕ್ತ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಂಡು ತರಬೇತಿ ಕಾರ್ಯವನ್ನು ಶುರುಮಾಡಬಹುದಾಗಿದೆ. ಅಭಿನಯ, ರಂಗಸಂಗೀತ, ರಂಗಪರಿಕರ, ನಿರ್ದೇಶನ, ನಾಟಕ ರಚನೆ.. ಹೀಗೆ ಮುಂತಾದ ವಿಭಾಗಗಳಲ್ಲಿ ವೃತ್ತಿಪರ ತರಬೇತಿಯನ್ನು ನೀಡಿದ್ದೇ ಆದರೆ ಮುಳುಗುತ್ತಿರುವ ನಾಟಕ ಕಂಪನಿಗಳು ತೇಲಲು ಬಹಳ ಸಹಾಯವಾಗುತ್ತದೆ.

3.       ವೃತ್ತಿರಂಗಭೂಮಿಯ ವರ್ತಮಾನ ಸಂಕಷ್ಟಕರವಾಗಿದ್ದರೂ ಅದರ ಇತಿಹಾಸ ಶ್ರೀಮಂತವಾಗಿದೆ. ಪಾರ್ಸಿ ಕಂಪನಿಗಳಿಂದ ಆರಂಭಗೊಂಡು ಈವರೆಗಿನ ವೃತ್ತಿರಂಗಭೂಮಿಯ ಪರಂಪರೆಯನ್ನು ಇಂದಿನ ಹಾಗೂ ಮುಂದಿನ ತಲೆಮಾರಿಗೆ ಕಾಯ್ದಿಟ್ಟುಕೊಳ್ಳಲು ಮ್ಯೂಜಿಯಮ್ ಒಂದನ್ನು ಕಾಲಮಿತಿಯಲ್ಲಿ ನಿರ್ಮಿಸಿ ಕೊಂಡಜ್ಜಿಯನ್ನು ವೃತ್ತಿರಂಗಭೂಮಿಯ ಹೆರಿಟೇಜ್ ಕೇಂದ್ರವಾಗಿಸಬಹುದಾಗಿದೆ. ಜೊತೆಗೆ ವೃತ್ತಿ ರಂಗಭೂಮಿಗೆ ಸೇರಿರುವ ಎಲ್ಲಾ ಮಾಹಿತಿಗಳನ್ನು ಡಿಜಟಲ್ ಮಾಧ್ಯಮದಲ್ಲಿ ದಾಖಲೀಕರಿಸಿ ಅಧ್ಯಯನ ಕೇಂದ್ರವೊಂದನ್ನೂ ಆರಂಭಿಸಬಹುದಾಗಿದೆ. 

4.       ವೃತ್ತಿರಂಗಭೂಮಿಯಲ್ಲಿ ಸಾಧನೆ ಮಾಡಿದ ಸಾಧಕರ ಸಂಪೂರ್ಣ ಮಾಹಿಸಿ ಕೇಂದ್ರವೂ ಇಲ್ಲಿ ಇರಬೇಕಾಗಿದ್ದು, ಇಲ್ಲಿವರೆಗೂ ಪ್ರದರ್ಶನ ಕಂಡ ನಾಟಕಗಳ ಸ್ಕ್ರಿಪ್ಟ್ ಬ್ಯಾಂಕ್ ಒಂದನ್ನು ಆರಂಭಿಸಿ ಮುದ್ರಿತ, ಕೈಬರಹದ, ಅಥವಾ ಝರಾಕ್ಸ್ ಪ್ರತಿಗಳ ರಂಗಕೃತಿಗಳನ್ನು ಹಾಗೂ ರಂಗಭೂಮಿ ಸಂಬಂಧಿಸಿದ ಪುಸ್ತಕಗಳನ್ನು ಒಂದು ಕಡೆ ಅನುಕ್ರಮವಾಗಿ ಶೇಖರಿಸಿಟ್ಟು ಗ್ರಂಥಾಲಯವೊಂದನ್ನು ಆರಂಭಿಸಬೇಕಿದೆ.

5.       ವೃತ್ತಿ ರಂಗಭೂಮಿಯ ವೈಫಲ್ಯಕ್ಕೆ ಕಾರಣಗಳೇನು? ನಾಟಕ ಕಂಪನಿಗಳ ಅವನತಿಗೆ ಕಾರಣವಾದ ಅಂಶಗಳೇನು? ಮತ್ತೆ ಕಂಪನಿ ನಾಟಕಗಳು ಪ್ರಬದ್ದಮಾನಕ್ಕೆ ಬರಲು ಆಗಬೇಕಾದ ಬದಲಾವಣೆಗಳೇನು? ಜನಪ್ರೀಯ ಕಲಾಮಾಧ್ಯಮಗಳನ್ನು ಉಳಿಸಿ ಬೆಳೆಸುವಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳೇನು?.. ಇಂತಹ ಅನೇಕ ವಿಷಯಗಳ ಕುರಿತು ಪ್ರಾಯೋಗಿಕ ತಜ್ಞರಿಂದ ವಿಚಾರಸಂಕಿರಣವನ್ನು ಆಗಾಗ ಆಯೋಜಿಸಬೇಕಾಗಿದೆ ಹಾಗೂ ಯುವ ಕಲಾವಿದರುಗಳ ಜೊತೆಗೆ ನಾಟಕ ಕಂಪನಿಗಳ ಮಾಲೀಕರು, ಕಲಾವಿದರುಗಳನ್ನು ಇದು ಒಳಗೊಳ್ಳಬೇಕಿದೆ.

6.       ವೃತ್ತಿ ಕಂಪನಿ ಮಾದರಿಯ ನಾಟಕಗಳನ್ನು ಮಾಡುವುದು ಇಲ್ಲವೇ ಕಂಪನಿ ನಾಟಕಗಳ ಉತ್ಸವವನ್ನು ಆಯೋಜಿಸುವುದೇ ಆದ್ಯತೆಯಾದರೆ ಉದ್ದೇಶಿತ ಕೇಂದ್ರವು ಇನ್ನೊಂದು ನಾಟಕ ಕಂಪನಿಯಾಗಬಹುದಾಗಿದೆ. ಆದರೆ.. ಇದರ ಉದ್ದೇಶ ನಾಟಕ ಮಾಡುವುದು ಇಲ್ಲವೇ ಮಾಡಿಸುವುದು ಆಗಿರದೇ ವೃತ್ತಿರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಬೇಕಾದ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯುವುದು ಹಾಗೂ ಎಲ್ಲಾ ರೀತಿಯ ಸಹಕಾರವನ್ನು ಒದಗಿಸುವುದೇ ಆದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದ್ದಕ್ಕೂ ಸಾರ್ಥಕತೆ ಬರುತ್ತದೆ.

7.        ಇದರ ಜೊತೆಗೆ ಮುಂದೆ ಸಾಧ್ಯವಾಗುವುದಾದರೆ ಮಾನ್ಯ ಎಂ.ಪಿ.ಪ್ರಕಾಶರ ಆಶಯದಂತೆ ವೃತ್ತಿ ನಾಟಕ ಕಂಪನಿಯಲ್ಲಿ ದುಡಿದ ಹಾಗೂ ದುಡಿಯುತ್ತಿರುವ ರಂಗಕರ್ಮಿ ಕಲಾವಿದರುಗಳ ಮಕ್ಕಳಿಗೆಂದೇ ಉಚಿತ ವಸತಿ ಶಾಲೆಯೊಂದನ್ನು ಆರಂಭಿಸಬಹುದಾಗಿದೆ.  

ಇದೆಲ್ಲವನ್ನೂ ಹೇಳುವುದಕ್ಕೆ ಬರೆಯುವುದಕ್ಕೆ ಬಲು ಸುಲಭದ ಕೆಲಸ. ಆದರೆ ಅನುಷ್ಟಾನಕ್ಕೆ ತರುವುದು ಬಲು ಕಷ್ಟ. ಈಗಾಗಲೇ ವೃತ್ತಿ ರಂಗಭೂಮಿ ಮತ್ತು ಆಧುನಿಕ ರಂಗಭೂಮಿಯ ನಡುವೆ ಕಂದರವೊಂದು ಮೊದಲಿನಿಂದಲೂ ಸೃಷ್ಟಿಯಾಗಿದೆ. ಅವರನ್ನು ಇವರು, ಇವರನ್ನು ಅವರು ಟೀಕಿಸುವುದು ಹಾಗೂ ತಮ್ಮದೇ ಉತ್ತಮವೆಂದು ಹೇಳಿಕೊಳ್ಳುವುದು ಆಕಾಲದಿಂದಲೂ ನಡೆದುಕೊಂಡೇ ಬಂದಿದೆ. ವೃತ್ತಿ ಕಂಪನಿ ನಾಟಕಗಳನ್ನು ಮೆಲೊಡ್ರಾಮಾಗಳೆಂದು ಹವ್ಯಾಸಿಗಳು ಮೂದಲಿಸಿದರೆ, ಆಧುನಿಕ ನಾಟಕಗಳನ್ನು ಯಾರು ನೋಡುತ್ತಾರೆಂದು ವೃತ್ತಿಯವರು ಟೀಕಿಸುತ್ತಾರೆ. ಯಾರು ಏನೇ ಹೇಳಲಿ ಈಗಲೂ ವೃತ್ತಿರಂಗಭೂಮಿ ತನ್ನ ಜನಪ್ರೀಯತೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಉಳಿಸಿಕೊಂಡಿದೆ ಹಾಗೂ ತನ್ನದೇ ಆದ ಪ್ರೇಕ್ಷಕ ವರ್ಗವನ್ನೂ ಹೊಂದಿದೆ. ಈಗಲೂ ಬಹುತೇಕ ಗ್ರಾಮಗಳಲ್ಲಿ ಗ್ರಾಮೀಣ ಹವ್ಯಾಸಿಗಳಿಂದ ನಿರ್ಮಿತಗೊಂಡು ಪ್ರದರ್ಶನಗೊಳ್ಳುತ್ತಿರುವ ನಾಟಕಗಳಲ್ಲಿ ಬಹುತೇಕವು ಕಂಪನಿ ಶೈಲಿಯ ನಾಟಕಗಳೇ. ಆಧುನಿಕ ರಂಗಭೂಮಿಯವರನ್ನು ವೃತ್ತಿಯವರು ಯಾವಾಗಲೂ ಗುಮಾನಿಯಿಂದಲೇ ನೋಡುತ್ತಾರೆ. ಆದರೆ ಹವ್ಯಾಸಿ, ವೃತ್ತಿ, ರೆಪರ್ಟರಿ.. ಹೀಗೆ ಎಲ್ಲಾ ವಿಧವಾದ ರಂಗಪ್ರಕಾರಗಳು ಸೇರಿಯೇ ಸಮಗ್ರ ಕನ್ನಡ ರಂಗಭೂಮಿಯಾಗಿದೆ.

ಈಗ ಹೊಸದಾಗಿ ಅಸ್ಥಿತ್ವವನ್ನು ಪಡೆಯುತ್ತಿರುವ ವೃತ್ತಿ ರಂಗಭೂಮಿ ಕೇಂದ್ರದ ರೂವಾರಿಗಳು ಯಾರಾಗಬೇಕು ಎನ್ನುವುದೂ ಸಹ ಅನೇಕ ಚರ್ಚೆಗೆ ಕಾರಣವಾಗಿತ್ತು. ವೃತ್ತಿರಂಗಭೂಮಿಯವರಿಗೆ ಇದು ಮೀಸಲಾಗಿರಬೇಕು ಹಾಗೂ ಅವರೇ ಅದನ್ನು ಮುನ್ನಡೆಸಬೇಕು ಎಂಬುದು ವೃತ್ತಿಗರ ಒತ್ತಾಯವಾಗಿತ್ತು. ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶೇಖ ಮಾಸ್ತರರ ನಾಯಕತ್ವದಲ್ಲಿ ದಾವಣಗೆರೆಯಲ್ಲಿ ಸೇರಿದ ನಾಟಕ ಕಂಪನಿಯ ಕೆಲವು ಮಾಲೀಕರು ಸರಕಾರಕ್ಕೆ ಹೀಗೆಂದು ಆಗ್ರಹಿಸಿದ್ದರು. ಕೊಂಡಜ್ಜಿಯಲ್ಲಿ ಈ  ಕೇಂದ್ರ ಆಗುವುದೇ ಬೇಡಾ ದಾವಣಗೆರೆಯ ಚಿಂದೋಡಿ ಲೀಲಾರವರ ರಂಗಮಂದಿರವೇ ಇದಕ್ಕೆ ಸೂಕ್ತ ಎನ್ನುವ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಹಾಗೂ ಈ ಕೇಂದ್ರಕ್ಕೆ ರೂವಾರಿಗಳಾಗಲು ಚಿಂದೋಡಿ ಬಂಗಾರೇಶ್, ಜೇವರಗಿ ರಾಜಣ್ಣ ಹಾಗೂ ಶ್ರೀಧರ್ ಈ ಮೂವರ ಹೆಸರನ್ನು ಶೇಖ ಮಾಸ್ತರರು ಮನವಿ ಪತ್ರದಲ್ಲಿ ಬರೆದು ಸಚಿವೆಯಾಗಿದ್ದ ಉಮಾಶ್ರೀಯವರಿಗೆ ಕೊಡಲಾಗಿತ್ತು. ಆದರೆ.. ಈ  ಯಾವ ಹೆಸರುಗಳನ್ನೂ ಪರಿಗಣಿಸದೇ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲರವರಿಂದ ಸ್ಥಳ ಪರಿಶೀಲನೆ ನಡೆಸಿ ಕೊನೆಗೆ ಕೊಂಡಜ್ಜಿಯಲ್ಲಿಯೇ ಕೇಂದ್ರ ಇರಬೇಕು ಹಾಗೂ ಆಯ್ಕೆ ಸಮಿತಿ ಶಿಪಾರಸ್ಸು ಮಾಡಿದ ಹೆಸರುಗಳಲ್ಲೆ ಒಂದು ಪೈನಲ್ ಆಗಬೇಕು ಎಂದು ಉಮಾಶ್ರೀಯವರು ಮೌಖಿಕವಾಗಿ ಆದೇಶಿಸಿದ್ದರು. ಪಿ.ಗಂಗಾಧರಸ್ವಾಮಿ, ಪ್ರಕಾಶ್ ಗರುಡ ಹಾಗೂ ಗೋಪಾಲಕೃಷ್ಣ ನಾಯರಿ.. ಈ ಮೂವರ ಹೆಸರನ್ನು ಸೂಚಿಸಲಾಗಿತ್ತು. ಕೊನೆಗೆ ಗಂಗಾಧರಸ್ವಾಮಿಯವರು ಆರಂಭಿಕ ವಿಶೇಷಾಧಿಕಾರಿಯಾಗಿ ನೇಮಕಗೊಂಡರು.

ಈಗ ವಿಶೇಷಾಧಿಕಾರಿಯಾಗಿ  ಆಯ್ಕೆಯಾದ ಗಂಗಾಧರಸ್ವಾಮಿಯವರ ದಾರಿಯೇನೂ ಸುಗಮವಾಗಿಲ್ಲ. ಆಧುನಿಕ ರಂಗಭೂಮಿಯವರ ಜೊತೆಯೇ ಹೆಚ್ಚು ಒಡನಾಟ ಇಟ್ಟುಕೊಂಡಿರುವ, ರಂಗಾಯಣದಂತಹ ರೆಪರ್ಟರಿಯಲ್ಲೇ ಎರಡು ದಶಕಗಳ ಕಾಲ ಶ್ರಮಿಸಿದ ಗಂಗಾಧರಸ್ವಾಮಿಯವರು ಮೊದಲು ವೃತ್ತಿರಂಗಭೂಮಿಯ ಆಳ ಅಗಲಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾಕೆಂದರೆ ಕಂಪನಿ ಮಾಲೀಕರ ಇಚ್ಚೆಗೆ ವಿರುದ್ಧವಾಗಿ ಗಂಗಾಧರಸ್ವಾಮಿಯವರನ್ನು ಸರಕಾರ ಆಯ್ಕೆ ಮಾಡಿದೆ. ಆದ್ದರಿಂದ ವೃತ್ತಿಕಂಪನಿಯವರಿಂದ ಸೌಹಾರ್ಧ ಸಹಕಾರವನ್ನು ಪಡೆದುಕೊಂಡು ವಿಶ್ವಾಸ ಗಳಿಸುವುದರ ಮೇಲೆ ಗಂಗಾಧರಸ್ವಾಮಿಯವರ ಕ್ಲಿಷ್ಟಕರದಾರಿಯ ಸುಗಮ ಪಯಣ ಅವಲಂಬಿಸಿದೆ. ಮೊದಲು ಗಂಗಾಧರಸ್ವಾಮಿಯವರು ವೃತ್ತಿರಂಗಭೂಮಿ ಹಾಗೂ ಆಧುನಿಕ ರಂಗಭೂಮಿಯ ಎಲ್ಲಾ ಅನುಭವೀ ರಂಗಕರ್ಮಿಗಳನ್ನು ಆಹ್ವಾನಿಸಿ ಸಭೆಯೊಂದನ್ನು ಕರೆದು ಅವರ ಸಲಹೆ ಸೂಚನೆ ಅನಿಸಿಕೆಗಳನ್ನೆಲ್ಲಾ ಸಮಾಧಾನದಿಂದ ಕೇಳಿ ಬರೆದುಕೊಂಡು ಸಾಧ್ಯವಾದದ್ದನ್ನು ಅಳವಡಿಸಿಕೊಂಡು ವೃತ್ತಿರಂಗಭೂಮಿ ಕೇಂದ್ರದ ರೂಪರೇಷೆಗಳನ್ನು ಸಿದ್ದಗೊಳಿಸಬೇಕಿದೆ. ಇದರಲ್ಲಿ ಯಶಸ್ವಿಯಾದರೆ ಮುಂದೆ ಸಂಸ್ಕೃತಿ  ಇಲಾಖೆಯ ಅಧಿಕಾರಿಗಳ ಮನವೊಲಿಸಿ ಹಂತಹಂತವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಸಫಲತೆ ಇದೆ.

ಒಟ್ಟಿನ ಮೇಲೆ ವೃತ್ತಿ ರಂಗಭೂಮಿ ಕೇಂದ್ರವು ರಾಜ್ಯದಲ್ಲಿ ಮಾತ್ರವಲ್ಲಾ ಇಡೀ ದೇಶದಲ್ಲೇ ಮಾದರಿ ಕೇಂದ್ರವಾಗಿ ರೂಪಗೊಳ್ಳಬೇಕು ಎನ್ನುವುದು ಸಮಗ್ರ ಕನ್ನಡ ರಂಗಭೂಮಿಯವರ ಆಶಯವಾಗಿದೆ. ಮಾನ್ಯ ಎಂ.ಪಿ.ಪ್ರಕಾಶರವರು ಕಂಡ ಕನಸು ನನಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಂಗಕರ್ಮಿ ಕಲಾವಿದರುಗಳು  ಪಿ.ಗಂಗಾಧರಸ್ವಾಮಿಯವರಿಗೆ ಬೆಂಬಲಿಸಬೇಕಿದೆ. ಈ ವೃತ್ತಿ ರಂಗಭೂಮಿ ಕೇಂದ್ರದ ಪ್ರಯೋಗ ಯಶಸ್ವಿಯಾಗಲಿ. ಇದೂ ಸಹ ರಂಗಾಯಣದಂತೆ ಸರಕಾರಿ ಬಿಳಿಯಾನೆಯಾಗದೇ ಬಹುಜನರ ಆಶೋತ್ತರಗಳಿಗೆ ಸ್ಪಂದಿಸುವ ಕೇಂದ್ರವಾಗಲಿ.

-ಶಶಿಕಾಂತ ಯಡಹಳ್ಳಿ   
    





ಶನಿವಾರ, ಜುಲೈ 20, 2019

ಕೇಂದ್ರ ಅಕಾಡೆಮಿ ಪ್ರಶಸ್ತಿ ನಿರಾಕರಣೆಯೂ ಹಾಗೂ ರಘುನಂದನ್‌ರವರ ಅಸಹಾಯಕತೆಯೂ..



ಅವತ್ತು ಜುಲೈ 16, ದೇಶದ ತುಂಬಾ ಗುರುಪೂರ್ಣಿಮೆ ಅಂತಾ ಹಲವರು ಸಂಭ್ರಮಿಸುತ್ತಿದ್ದರು. ತಮ್ಮ ತಮ್ಮ ಗುರುಗಳಿಗೆ ಅಭಿನಂದಿಸಿ ಗೌರವ ಸೂಚಿಸುತ್ತಿದ್ದರು. ಅವತ್ತೇ ರಂಗಗುರು ಒಬ್ಬರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೊಂದನ್ನು ಘೋಷಣೆ ಮಾಡಲಾಗಿತ್ತು. ವಿಷಯ ತಿಳಿದ ಕನ್ನಡ ರಂಗಭೂಮಿಯವರು ಸಂತಸದಿಂದ ಸಂಭ್ರಮಿಸಿದರು. ಕನ್ನಡ ದಿನಪತ್ರಿಕೆಯವರು ಪ್ರಶಸ್ತಿ ಪುರಸ್ಕೃತರ ಪೊಟೋ ಒಂದಕ್ಕಾಗಿ ಪರದಾಡಿದರು. ಎಲ್ಲಿ ಯಾರನ್ನು ಕೇಳಿದರೂ ಅಸಂಖ್ಯಾತ ಯುವರಂಗಕರ್ಮಿಗಳನ್ನು ರೂಪಿಸಿದ ಈ ರಂಗಗುರುವಿನ ಒಂದೇ ಒಂದು ಪೋಟೋ ರಾತ್ರಿಯವರೆಗೆ ಪ್ರಯತ್ನಿಸಿದರೂ ದೊರಕಲೇ ಇಲ್ಲಾ. ಪತ್ರಿಕೆಯವರು ನಾಟಕ ಅಕಾಡೆಮಿಯ ಅಧ್ಯಕ್ಷರನ್ನು ಪೊಟೋಗಾಗಿ ಒತ್ತಾಯಿಸತೊಡಗಿದರು. ಕೊನೆಗೆ ನಾನು ರಂಗಭೂಮಿಯ ಖಾಯಂ ಕ್ರಿಯೇಟಿವ್ ಪೊಟೋಗ್ರಾಫರ್ ಆಗಿರುವ ತಾಯ್ ಲೊಕೇಶ್‌ರನ್ನು ನಿದ್ದೆಯಿಂದ ಎಬ್ಬಿಸಿ ಶೀಘ್ರವಾಗಿ ಪೊಟೋ ಕಳಿಸಲು ಆಗ್ರಹಿಸಿದ ಮೇಲೆಯೇ ಒಂದೆರಡು ಪೊಟೋಗಳು ದೊರೆತವು, ವಾಟ್ಸಾಪ್ ಗುಂಪಲ್ಲಿ ಹಾಕಿದ್ದೇ ತಡ ಮರುಹಂಚಿಕೆಯಾದವು. ಮರುದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದಾಡಿದವು.

ಆದರೆ.. ರಂಗಭೂಮಿಯವರ ಈ ಉತ್ಸಾಹ ನಿರುತ್ಸಾಹವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಮರುದಿನದ ಮದ್ಯಾಹ್ನದ ಹೊತ್ತಿಗೆ ಪ್ರಶಸ್ತಿ ಪುರಸ್ಕೃತ ರಂಗಗುರು ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಅಕಾಡೆಮಿಗೆ ಪತ್ರ ಬರೆದು ನಿರಾಕರಿಸಿದ್ದು ಹಲವರಿಗೆ ಬೇಸರವನ್ನೂ ಇನ್ನು ಕೆಲವರಿಗೆ ಹೆಮ್ಮೆಯನ್ನೂ ಉಂಟುಮಾಡಿತು. ಪ್ರಶಸ್ತಿ ಪುರಸ್ಕಾರಕ್ಕಾಗಿ ಹಾತೊರೆಯುವ, ಅವುಗಳನ್ನು ಪಡೆಯಲು ಅನೇಕ ಹುನ್ನಾರ ಲಾಭಿಗಳನ್ನು ಮಾಡುವ ಹಲವರು (ಎಲ್ಲರೂ ಅಲ್ಲಾ) ಎಲ್ಲಾ ಕ್ಷೇತ್ರಗಳಲ್ಲಿರುವಂತೆ ರಂಗಭೂಮಿಯಲ್ಲೂ ಇರುವಾಗ, ತಾನಾಗಿಯೇ ಹುಡುಕಿಕೊಂಡು ಬಂದ ಕೇಂದ್ರ ಸರಕಾರದ ಅಕಾಡೆಮಿಯೊಂದರ ಪ್ರತಿಷ್ಟಿತ ಪ್ರಶಸ್ತಿಯನ್ನು ತಿರಸ್ಕರಿಸುವುದು ಎಲ್ಲರಿಂದ ಸಾಧ್ಯವಾಗದ ಮಾತು.  ಅದೂ ಪ್ರಶಸ್ತಿಯ ಜೊತೆಗೆ ಲಕ್ಷ ರೂಪಾಯಿಗಳ ನಗದು ಹಣವೂ ಬರುತ್ತಿರುವಾಗ ಹೀಗೆ ನಿರ್ಧಾಕ್ಷಿಣ್ಯವಾಗಿ ನಿರಾಕರಿಸಿದವರಾದರೂ ಯಾರು? ಅವರೇ ನೀನಾಸಮ್ಮಿನ ರಂಗಗುರು ಎಸ್.ರಘುನಂದನ್.



ಎಂದೂ ಹಣ ಮತ್ತು ಹೆಸರಿನ ಹಿಂದೆ ಹೋಗದೇ ತಮ್ಮ ಪಾಡಿಗೆ ತಾವು ರಂಗಗರಡಿಯಲ್ಲಿ ಮೂರು ದಶಕಗಳ ಕಾಲ ಅಭಿನಯದ ಪಟ್ಟುಗಳನ್ನು ಹೇಳಿಕೊಡುತ್ತಾ ಬಂದಿರುವ ರಂಗಭೂಮಿಯ ಜಗಜಟ್ಟಿ ಎಸ್.ರಘುನಂದನ್ ಹೀಗೊಂದು ಗಟ್ಟಿ ನಿರ್ದಾರ ತೆಗೆದುಕೊಳ್ಳುವುದಕ್ಕೆ ಕೊಟ್ಟ ಕಾರಣ ತಿಳಿಯಬೇಕಾದರೆ ಅವರು ಸಂಗೀತ ನಾಟಕ ಅಕಾಡೆಮಿಗೆ ಬರೆದ ಈ ಪತ್ರವೊಂದನ್ನು ಓದಲೇ ಬೇಕು.
ಸಂಗೀತ ನಾಟಕ ಅಕಾಡೆಮಿಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ತಾನು ಶುರುವಾದಂದಿನಿಂದಲೂ ತನ್ನ ಸ್ವಾಯತ್ತತೆಯನ್ನು ಬಹಳ ಮಟ್ಟಿಗೆ ಕಾಪಾಡಿಕೊಂಡು ಬಂದಿದೆ. ಅಂಥಹ ಅಕಾಡೆಮಿಯು 2018ರ ಇಸವಿಯ ತನ್ನ ಪ್ರಶಸ್ತಿಯನ್ನು ಬೇರೆ ಹಲವರಿಗೆ ನೀಡುವುದರೊಂದಿಗೆ ನನಗೂ ನೀಡಿದ್ದಕ್ಕಾಗಿ ಅಕಾಡೆಮಿಗೆ ಕೃತಜ್ಞನಾಗಿದ್ದೇನೆ.

ಆದರೆ, ಈವತ್ತು ದೇಶದ ಹಲವು ಕಡೆ ಮತಧರ್ಮದ ಹೆಸರಿನಲ್ಲಿ, ಪೊರೆಯುವ ದೇವರ ಹೆಸರಿನಲ್ಲಿ, ಮಾಡುವ ಊಟದ ಹೆಸರಿನಲ್ಲಿ ಗುಂಪುಹಲ್ಲೆಗಳು, ಕಗ್ಗೊಲೆಗಳು ನಡೆಯುತ್ತಿವೆ. ಅಧಿಕಾರದಲ್ಲಿರುವವರು ಇಂತಹ ಭೀಕರ ಹಿಂಸಾಚಾರ ಹಾಗೂ ಕಗ್ಗೊಲೆಗಳಿಗೆ ಕಾರಣವಾಗುವ ದ್ವೇಷವನ್ನು ಅಂತರ್‌ಜಾಲ ತಂತ್ರಜ್ಞಾನದ ಎಲ್ಲ ಪಟ್ಟುಗಳನ್ನು ಬಳಸಿ ಜನರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ. ಶಿಕ್ಷಣದ ಅತ್ಯುನ್ನತ ಸಂಸ್ಥೆಗಳಿಂದ ಮೊದಲುಗೊಂಡು ಕೆಳಮಟ್ಟದ ಶಾಲಾಕಾಲೇಜುಗಳವರೆಗೆ, ಎಲ್ಲೆಡೆಯೂ ಮತಾಂಧತೆಯಿಂದ ಕೂಡಿದ ಪಾಠಗಳನ್ನು, ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗಳಲ್ಲಿ ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಭಾರತೀಯತೆಯ ವಸುದೈವ ಕುಟುಂಬಮ್ ಅನ್ನುವುದರ ಅರ್ಥವನ್ನೇ ತಿರುಚಲಾಗುತ್ತಿದೆ. ಆದರೆ.. ಸಂಕರವೇ ಶಿವವಲ್ಲವೇ? ಅಯ್ಯೋ ನನ್ನ ದೇಶವೇ ಎಂದು ನನ್ನಂಥ ಕೋಟ್ಯಾಂತರ ಜನರು ಹಲುಬುವಂತಾಗಿದೆ.

ಭಾರತ ಮತ್ತು ವಿಶಾಲ ಜಗತ್ತುಗಳ ಭವಿಷ್ಯವನ್ನು ರೂಪಿಸಬೇಕಾಗಿರುವ ಕನ್ಹಯ್ಯಕುಮಾರ್ ಅಂಥ ಹಲವು ಯುವಕರ ಮೇಲೆ, ಅವರು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾಗಲೇ ದೇಶದ್ರೋಹದ ಆರೋಪವನ್ನು ಹೊರೆಸಲಾಗಿದ್ದು ಅವರೆಲ್ಲಾ ನ್ಯಾಯಾಲಯಗಳಲ್ಲಿ ಆ ಪ್ರಕರಣವನ್ನು ಇನ್ನೂ ಎದುರಿಸುತ್ತಲೇ ಇದ್ದಾರೆ. ದೇಶದ ಅತ್ಯಂತ ಶೋಷಿತರು ಮತ್ತು ದಲಿತ ಜನರ ಪರವಾಗಿ ಕೋರ್ಟು-ಕಚೇರಿಗಳಲ್ಲಿ ವಾದಿಸುತ್ತಾ, ಅವರ ಅಪಾರ ಕಷ್ಟಗಳನ್ನು ಕುರಿತು ಲೇಖನ ಮತ್ತು ಪುಸ್ತಕಗಳನ್ನು ಬರೆಯುತ್ತಾ, ಅವರ ಹೋರಾಟವು ಅಹಿಂಸಾಮಾರ್ಗದಲ್ಲಿ ನಡೆಯುವಂತೆ ಸಲಹೆ ಸಹಕಾರ ನೀಡುತ್ತಾ, ಭಾರತದ ಸಂವಿಧಾನದ ಎಲ್ಲ ವಿಧಿವಿಧಾನಗಳನ್ನು ಪಾಲಿಸುತ್ತಾ, ಆ ನಮ್ಮ ಸಂವಿಧಾನದ ಜೀವಾಳವನ್ನು ಎತ್ತಿಹಿಡಿಯುತ್ತಾ, ನಿಸ್ವಾರ್ಥದಿಂದ ತಮ್ಮ ತಮ್ಮದೇ ರೀತಿಯಲ್ಲಿ ಹೋರಾಡುತ್ತ ಬಂದಿರುವ ಹಲವರ ವಿರುದ್ಧ ಯುಎಪಿಎ ಕಾಯಿದೆಯಡಿ ವಿಚಾರಣೆ ನಡೆಯುತ್ತಿದ್ದು, ಅವರಲ್ಲಿ ಹೆಚ್ಚಿನವರಿಗೆ ಜಾಮೀನು ಕೂಡ ಸಿಕ್ಕದೆ ಸೆರೆಮನೆಯಲ್ಲಿದ್ದಾರೆ. ದೇಶದ ಅತ್ಯಂತ ದಮನಿತರ ದನಿಯಾಗಿರುವವರು ಈ ಧಿಮಂತ ಧೀಮಂತೆಯರು. ಇಂಥವರನ್ನು ನಿರ್ವೀರ್ಯಗೊಳಿಸಿ, ಇವರ ಬಾಯಿಮುಚ್ಚಿಸಿದರೆ ಆ ದಮನಿತರ ದನಿಯನ್ನು ಅಷ್ಟರಮಟ್ಟಿಗೆ ಅಡಗಿಸಬಹುದು ಎಂದು ಪ್ರಭುತ್ವವು ನಿರ್ಧರಿಸಿದಂತಿದೆ. ಇದೆಲ್ಲ ಹೊಸದಲ್ಲ. ಈ ಹಿಂದೆ ಅಧಿಕಾರದಲ್ಲಿದ್ದವರೂ ಕೂಡಾ ಹೀಗೆಯೇ ಪ್ರಭುತ್ವದ ಶಕ್ತಿಯ ದುರ್ವಿನಿಯೋಗ ಮಾಡಿದ್ದಾರೆ.

ನಿಜವಾದ ದೇಶಪ್ರೇಮಿಗಳು, ಲೋಕೋಪಕಾರಿಗಳು, ಧರ್ಮಮಾರ್ಗಿಗಳು ಆಗಿರುವ ಮತ್ತು ಸಕಲ ಚರಾಚರಕ್ಕೆ ಲೇಸನ್ನುಂಟುಮಾಡಲು ಬದುಕುತ್ತಿರುವ ಇಂಥವರಿಗೆ ನನ್ನ ದೇಶದಲ್ಲಿ ಹೀಗೆ ಅನ್ಯಾಯವಾಗುತ್ತಿರುವಾಗ, ರಂಗಭೂಮಿಯ ಕಲಾವಿದನಾಗಿ, ಕವಿ-ನಾಟಕಕಾರನಾಗಿ, ಈ ದೇಶ ಮತ್ತು ಲೋಕದ ಪ್ರಜೆಯಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲಾರೆ. ಇದನ್ನು  ಸ್ವೀಕರಿಸಲು ನನ್ನ ಆತ್ಮಸಾಕ್ಷಿ, ಅಂತರ್ಯಾಮಿ  ಒಪ್ಪದು.

ಇದು ಪ್ರತಿಭಟನೆಯಲ್ಲ, ವ್ಯಥೆ. ಪ್ರಶಸ್ತಿಯನ್ನು ಸ್ವೀಕರಿಸಲು ಬಿಡದಿರುವ ಅಸಹಾಯಕತೆ. ಅಕಾಡೆಮಿಯ ಬಗ್ಗೆ ನನಗೆ ಗೌರವವಿದೆ. ಮತ್ತು ಈಗ ಮತ್ತು ಈ ಹಿಂದೆ ಇಂಥ ಪ್ರಶಸ್ತಿ ಪಡೆದ ನನ್ನೆಲ್ಲಾ ಸಹೊದ್ಯೋಗಿಗಳ ಬಗ್ಗೆ ಗೌರವವಿದೆ. ಅಕಾಡೆಮಿಯ ಸದಸ್ಯರಿಗೆ, ಮತ್ತೊಮ್ಮೆ ಕೃತಜ್ಞತೆಗಳು. ಅವರ ಕ್ಷಮೆ ಬೇಡುತ್ತಿದ್ದೇನೆ.  ಶಿವಕಾರುಣ್ಯವಿರಲಿ...

ಹೀಗೆಂದು ಪತ್ರವೊಂದನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಗೆ ಬರೆದ ರಘುನಂದನ್‌ರವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಪತ್ರದ ಸಾರಾಂಶ ಹಾಗೂ ಪ್ರಶಸ್ತಿ ನಿರಾಕರಣೆಯ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ಓದಿದ ರಘುನಂದನ್‌ರವರ ಶಿಷ್ಯಸಮೂಹಕ್ಕೆ ಬೇಸರದ ಜೊತೆಗೆ ತಮ್ಮ ರಂಗಗುರುವಿನ ಆದರ್ಶದ ನಿಲುವಿಗೆ ಹೆಮ್ಮೆಯೂ ಆಗಿದೆ. ಪ್ರತಿಭೆ ಮತ್ತು ಪರಿಶ್ರಮವನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಯೊಂದು ಹುಡುಕಿಕೊಂಡು ಬಂದಾಗ ಅದನ್ನು ನಿರಾಕರಿಸಿದ ರಘುನಂದನ್‌ರವರ ನಿರ್ಧಾರ ಮಾದರಿಯಾದದ್ದೇ ಇಲ್ಲವೇ ದುಡುಕಿನಿಂದ ಕೂಡಿದ್ದೇ ಎನ್ನುವ ಕುರಿತು ಸಂವಾದ ಸೃಷ್ಟಿಯಾಗಿದೆ.




1955 ನೇ ಇಸವಿಯಿಂದ ಇಲ್ಲಿಯವರೆಗೂ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಕನ್ನಡ ರಂಗಭೂಮಿಯಿಂದ  ನಿರ್ದೇಶನ ವಿಭಾಗದ ಪ್ರಶಸ್ತಿಗೆ ಆಯ್ಕೆಯಾದವರು 1976ರಲ್ಲಿ ಬಿ.ವಿ.ಕಾರಂತರು ಹಾಗೂ 2000ರಲ್ಲಿ ಪ್ರಸನ್ನರವರು ಮಾತ್ರ. ಈ ಪ್ರಶಸ್ತಿಗೆ ಆಯ್ಕೆಯಾದವರೆಲ್ಲಾ ರಂಗಭೂಮಿಯ ದಿಗ್ಗಜರೇ ಆಗಿದ್ದಾರೆ. ಇಂತಹ ಮಹಾಮಹಿಮರ ಸಾಲಿನಲ್ಲಿ ಸೇರುವ ಸದಾವಕಾಶ ಈ ಸಲ ಎಸ್.ರಘುನಂದನ್ ರವರಿಗೆ ತಾನಾಗಿಯೇ ಒಲಿದು ಬಂದಿತ್ತು. ಕಳೆದ ಆರೂವರೆ ದಶಕಗಳಲ್ಲಿ ಕೇಂದ್ರದ ಈ  ಪ್ರಶಸ್ತಿಗೆ ಕನ್ನಡ ರಂಗಭೂಮಿಯಿಂದ ಆಯ್ಕೆಯಾದ ಮೂರನೇ ನಿರ್ದೇಶಕರಾಗಿದ್ದರು ಎಸ್. ರಘುನಂದನ್ ರವರು.  ಆದರೆ.. ಅವರು ನೋ ಎಂದು ಬಿಟ್ಟರು. ಕನ್ನಡ ರಂಗಭೂಮಿ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಯಿಂದ ವಂಚಿತವಾಯಿತು. ಇನ್ನು ಮತ್ಯಾವಾಗ ಯಾರಿಗೆ ದೊರಕುತ್ತದೋ ಯಾರಿಗೆ ಗೊತ್ತು.  

ಇಷ್ಟಕ್ಕೂ ಬಂದ ಪ್ರಶಸ್ತಿಯನ್ನು ಸ್ವೀಕರಿಸುವುದು ಹಾಗೂ ನಿರಾಕರಿಸುವುದು ರಘುನಂದನ್‌ರವರ ವ್ಯಕ್ತಿಗತ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲಾ ಎನ್ನುವುದೂ ನಿಜ. ಆದರೆ ಈಗ ಬಂದ ಪ್ರಶಸ್ತಿ ವ್ಯಕ್ತಿಗತವಾಗಿ ಬಂದರೂ ಅದು ಸಾಮೂಹಿಕ ಕ್ರಿಯೆಯ ಫಲಶೃತಿಯೇ ಆಗಿದೆ. ರಂಗಕರ್ಮಿಯೊಬ್ಬರಿಗೆ ಪ್ರಶಸ್ತಿಯೊಂದು ಬಂದರೆ ಇಡೀ ರಂಗಭೂಮಿಗೆ ಅದು ದೊರೆತ ಸನ್ಮಾನ ಎಂದು ರಂಗಕರ್ಮಿಗಳೆಲ್ಲಾ ಹೆಮ್ಮೆಯಿಂದಾ ಸಂಭ್ರಮಿಸುತ್ತಾರೆ. ಅದೂ ಹಿಂದಿ ಭಾಷಾ ಕೇಂದ್ರಿತ ಕೇಂದ್ರ ಸರಕಾರದ ಅಕಾಡೆಮಿಯಿಂದ ಬಂದ ಪ್ರಶಸ್ತಿ ಎಂದರೆ ಭಾರತೀಯ ರಂಗಭೂಮಿಯಲ್ಲಿ ಕನ್ನಡ ರಂಗಭೂಮಿಗೆ ಸಂದ ಗೌರವವೇ ಆಗಿದೆ. ಅಂದರೆ ಭಾರತೀಯ ರಂಗಭೂಮಿಯಲ್ಲಿ ಕನ್ನಡ ರಂಗಭೂಮಿಯ ಗುರುತಿಸುವಿಕೆ ಇಲ್ಲಿ ಮುಖ್ಯವಾಗುತ್ತದೆ.



ರಘುನಂದನ್‌ರವರಂತಹ ಪ್ರತಿಭಾನ್ವಿತ ವ್ಯಕ್ತಿ ದೊಡ್ಡ ಪ್ರಶಸ್ತಿಗೆ ಭಾಜನರಾದರು ಎಂದರೆ ಅವರ ಕ್ರಿಯಾಶೀಲತೆಯ ಹಿಂದೆ ರಂಗಶಕ್ತಿಯೂ ಕೆಲಸಮಾಡಿರುತ್ತದೆ. ಕನ್ನಡ ರಂಗಭೂಮಿ ಇಂತಹ ಪ್ರತಿಭೆಗಳಿಗೆ ವೇದಿಕೆ ವದಗಿಸಿಕೊಟ್ಟಿರುತ್ತದೆ. ನೀನಾಸಮ್ ನಂತಹ ರಂಗಶಿಕ್ಷಣ ಕೇಂದ್ರ ನಾಟಕಗಳ ನಿರ್ದೇಶನಕ್ಕೆ ಅವಕಾಶವನ್ನು ಮಾಡಿ ಕೊಟ್ಟಿರುತ್ತದೆ. ಅನೇಕ ಕಲಾವಿದರುಗಳು ಹಾಗೂ ನೇಪತ್ಯ ತಜ್ಞರು ಅಭಿನಯಿಸಿ ನಾಟಕವನ್ನು ಯಶಸ್ವಿಗೊಳಿಸಿರುತ್ತಾರೆ. ಅಂದರೆ ಒಬ್ಬ ಸೃಜನಶೀಲ ವ್ಯಕ್ತಿಯ ಜೊತೆಗೆ ಅನೇಕಾನೇಕ ಪ್ರತಿಭೆಗಳೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡಿರುತ್ತವೆ. ಎಲ್ಲರ ಸಮೂಹ ಕ್ರಿಯೆಯ ಮೂಲಕ ನಿರ್ದೇಶಕನೂ ರೂಪಗೊಂಡಿರುವಾಗ ಬಂದ ಪ್ರಶಸ್ತಿಯ ಮೇಲಿನ ಹಕ್ಕು ವ್ಯಕ್ತಿಗತವಾಗಿರದೇ ಸಾಮೂಹಿಕವಾಗಿಯೂ ಇರುತ್ತದೆ. ಹೀಗಿರುವಾಗ ವ್ಯಕ್ತಿಯೊಬ್ಬ ಪ್ರಶಸ್ತಿಯನ್ನು ನಿರಾಕರಿಸುವುದು ಎಂದರೆ ಆ ವ್ಯಕ್ತಿ ಬೆಳೆಯಲು ಸಹಕರಿಸಿದ ಎಲ್ಲರನ್ನೂ ಎಲ್ಲವನ್ನೂ ನಿರಾಕರಿಸಿದಂತಾಗುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ. ಸಾಹಿತ್ಯ, ನೃತ್ಯ ಇಲ್ಲವೇ ಚಿತ್ರಕಲೆಯಂತಹ ಮಾಧ್ಯಮಗಳಲ್ಲಿ ವ್ಯಕ್ತಿಗತವಾದ ಪ್ರಯತ್ನವೇ ಮುಖ್ಯವಾಗಿರುತ್ತದೆ. ಅಂತವರಿಗೆ ಬಂದ ಪ್ರಶಸ್ತಿಗೆ ಅವರೊಬ್ಬರ ಪ್ರತಿಭೆ ಮತ್ತು ಪರಿಶ್ರಮವೇ ಬಹುತೇಕ ಕಾರಣವಾಗಿರುತ್ತದೆ. ಅದನ್ನು ನಿರಾಕರಿಸುವ ಇಲ್ಲವೇ ಪುರಸ್ಕರಿಸುವ ಸಂಪೂರ್ಣ ಸಾಮ್ಯತೆ ಅವರದ್ದಾಗಿರುತ್ತದೆ. ಆದರೆ ರಂಗಭೂಮಿ ಹಾಗಲ್ಲ. ಇದು ಸಾಮೂಹಿಕ ಪ್ರಕ್ರಿಯೆ. ಇಲ್ಲಿ ಒಬ್ಬರ ಪರಿಶ್ರಮದಿಂದ ಮಾತ್ರ ನಾಟಕ ಕಟ್ಟಲು ಸಾಧ್ಯವಿಲ್ಲ. ಬಹುಜನರ ಶ್ರಮ ಮತ್ತು ದೊರೆತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆದ ವ್ಯಕ್ತಿ ತನಗೆ ಬಂದ ಪ್ರಶಸ್ತಿ ಏಕಾಏಕಿ ನಿರಾಕರಿಸುವುದು ಪ್ರಶ್ನಾರ್ಹವಾಗಿದೆ.

ಬಹುತೇಕ ಪ್ರಜ್ಞಾವಂತರಂತೆ ರಘುರವರಿಗೂ ಪ್ರಭುತ್ವದ ದಮನ ಹಾಗೂ ದಮನಕಾರಿ ನೀತಿಗಳ ಮೇಲೆ ಆಕ್ರೋಶವಿದೆ. ಆದರೆ ಜನರ ತೆರಿಗೆ ಹಣದಿಂದಲೇ ನಡೆಯುವ, ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಸಿ ಉಳಿಸುವ ಕಾಯಕ್ಕಾಗಿಯೇ ಇರುವ ಅಕಾಡೆಮಿಯ ಬಗ್ಗೆ ರಘುರವರಿಗೂ ಗೌರವವಿದೆ. ಹಾಗೆಂದು ಅವರೇ ಪತ್ರದಲ್ಲಿ ಬರೆದಿದ್ದಾರೆ. ಈಗ ಅಕಾಡೆಮಿ ಕೊಟ್ಟ ಪ್ರಶಸ್ತಿಯು ನೇರವಾಗಿ ಪ್ರಭುತ್ವ ಅಂದರೆ ಸರಕಾರ ಕೊಟ್ಟ ಪ್ರಶಸ್ತಿ ಅಲ್ಲಾ. ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಒಟ್ಟಾರ ಅಭಿಪ್ರಾಯದ ತೀರ್ಮಾನವಾಗಿದೆ. ಸರಕಾರದ ನೇರ ಪ್ರಶಸ್ತಿಯಾಗಿದ್ದರೆ ವ್ಯವಸ್ಥೆಯನ್ನು ವಿರೋಧಿಸಿ ಪ್ರಶಸ್ತಿ ನಿರಾಕರಣೆ ಮಾಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಆದರೆ.. ವ್ಯವಸ್ಥೆಯಿಂದ ಅನುದಾನ ಪಡೆದರೂ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡೇ ಬರುತ್ತಿರುವ ಕೇಂದ್ರ ಅಕಾಡೆಮಿಯ ಪ್ರಶಸ್ತಿಯನ್ನು ನಿರಾಕರಿಸುವುದು ಅದೆಷ್ಟು ಸೂಕ್ತ ಎನ್ನುವ ಪ್ರಶ್ನೆಯನ್ನು ರಘುನಂದನ್‌ರವರ ಪ್ರಶಸ್ತಿ ನಿರಾಕರಣೆ ಏಕವ್ಯಕ್ತಿ ಚಳುವಳಿ ಹುಟ್ಟುಹಾಕಿದೆ. ಸರಕಾರದ ಅನುದಾನ ಪಡೆಯುವ ಅಕಾಡೆಮಿಯ ಪ್ರಶಸ್ತಿ ಇದಾಗಿರುವುದರಿಂದ, ಇದೂ ಸಹ ಪ್ರಭುತ್ವಕ್ಕೆ ನೇರ ಸಂಬಂಧ ಇರುವ ಪ್ರಶಸ್ತಿ ಎಂದು ಭಾವಿಸುವುದೇ ಆಗಿದ್ದರೆ ರಘುರವರು ಪಾಠ ಮಾಡಲು ಹಾಗೂ ನಿರ್ದೇಶನ ಮಾಡಲು ನೀನಾಸಮ್‌ನಿಂದ ಗೌರವಧನ ಪಡೆಯುತ್ತಾರಲ್ಲಾ ಅದೂ ಸಹ ಸರಕಾರದ ಅನುದಾನದಿಂದ ಬಂದ ಹಣವೇ ಅಲ್ಲವೇ? ಯಾಕೆಂದರೆ ಪ್ರತಿವರ್ಷ ನೀನಾಸಮ್ ಸರಕಾರಿ ಅನುದಾನವನ್ನು ಪಡೆಯುತ್ತಾ ಬರುತ್ತಿದೆ ಹಾಗೂ ಕೆಲವೊಮ್ಮೆ ವಿದೇಶಿ ಪೋರ್ಡ ಪೌಂಡೇಶನ್ನಿನಿಂದಲೂ ಧನಸಹಾಯ ಪಡೆದಿದೆ. ಪಡೆದ ಹಣದಲ್ಲಿ ರಂಗಭೂಮಿಯನ್ನೂ ಕಟ್ಟುತ್ತಿದ್ದು ಕಲಾವಿದರನ್ನು ಸಿದ್ದಗೊಳಿಸಿದೆ.

ಧನಸಹಾಯ ಮತ್ತು ಪ್ರಶಸ್ತಿಗಳು ಯಾರಿಂದ ಬಂದರೇನು ಅದನ್ನು ರಂಗಭೂಮಿಗೆ ಸದ್ಬಳಕೆ ಮಾಡಿಕೊಂಡು ನಾಟಕವನ್ನು ಕಟ್ಟುತ್ತಾ ಸಾಗಬೇಕು ಎನ್ನುವುದು ರಂಗಕರ್ಮಿ ಸಿಜಿಕೆಯವರ ಆಶಯವಾಗಿತ್ತು. ಸಿಜಿಕೆಯವರು ಹೇಳಿದ ಹಾಗೆಯೇ ಎಲ್ಲರೂ ಇರಬೇಕು ಎನ್ನುವುದು ಸೂಕ್ತವಲ್ಲವಾದರೂ ಸ್ವಾಯತ್ತ ಸಂಸ್ಥೆಯೊಂದು ಕೊಡಮಾಡುವ ಪ್ರಶಸ್ತಿಯನ್ನು ನಿರಾಕರಿಸುವುದರ ಪರಿಣಾಮ ಎಳ್ಳುಕಾಳಿನಷ್ಟಾದರೂ ಪ್ರಭುತ್ವದ ಮೇಲಾಗಲು ಸಾಧ್ಯವೇ? ಒಂದೆರಡು ದಿನ ಪತ್ರಿಕೆಯಲ್ಲಿ ಪ್ರಶಸ್ತಿ ನಿರಾಕರಣೆಯ ಪುಟ್ಟ ಸುದ್ದಿ ಬರಬಹುದು. ಒಂದಿಷ್ಟು ಜನ ಒಳ್ಳೆಯ ನಿರ್ಧಾರವೆಂದು ಬೆನ್ನುತಟ್ಟಬಹುದಷ್ಟೇ. ಈ ಉತ್ತಮ ನಿರ್ಧಾರವೆಂದು ಹೊಗಳಿದವರಲ್ಲಿ ಅನೇಕರು ತಮಗೆ ಈಗಾಗಲೆ ಬಂದಿರುವ ಪ್ರಶಸ್ತಿಗಳನ್ನು ನಿರಾಕರಿಸಿದವರೂ ಅಲ್ಲಾ ಹಾಗೂ ಮುಂದೆ ಬರಬಹುದಾದ ಯಾವುದೇ ಪ್ರಶಸ್ತಿಯನ್ನೂ ತಿರಸ್ಕರಿಸುವವರೂ ಅಲ್ಲಾ ಎನ್ನುವುದು ರಘುರವರ ಗಮನಕ್ಕಿರಲಿ.

ಆದರೆ ರಘುನಂದನ್‌ರವರು ತಮ್ಮೆಲ್ಲಾ ಅಭಿಪ್ರಾಯಬೇಧಗಳನ್ನು ಇಟ್ಟುಕೊಂಡೇ ಪ್ರಶಸ್ತಿಯನ್ನು ಸ್ವೀಕರಿಸಿದ್ದರೆ ಕೆಲವು ಸಕಾರಾತ್ಮಕ ಸಂದೇಶಗಳು ಬಿತ್ತರವಾಗುವ ಸಾಧ್ಯತೆಗಳೂ ಇತ್ತು.  ರಂಗಗುರುವಿಗೆ ಉನ್ನತ ಪ್ರಶಸ್ತಿಯೊಂದು ಬಂದಾಗ ಅವರ ಶಿಷ್ಯಗಣಕ್ಕೆ ಅದು ಮಾದರಿಯಾಗಿ ತಾವೂ ಸಹ ಪರಿಶ್ರಮದಿಂದಾ ಅಂತಹ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆಯಬೇಕು ಎಂಬ ಪ್ರೇರಣೆ ದೊರೆಯಬಹುದು. ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಭಾರತೀಯ ರಂಗಭೂಮಿಯಲ್ಲಿ ಕನ್ನಡ ರಂಗಭೂಮಿಯ ರಂಗಕರ್ಮಿಯೊಬ್ಬರು ಗುರುತಿಸಲ್ಪಡುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗುತ್ತಿತ್ತು. ಭಾರತೀಯ ರಂಗಭೂಮಿ ಎಂದರೆ ಹಿಂದಿ ಭಾಷಿಕ ರಾಜ್ಯಗಳ ರಂಗಭೂಮಿ ಎಂದೇ ಪರಿಗಣಿತವಾಗಿರುವಾಗ ಕನ್ನಡ ರಂಗಭೂಮಿಯವರು ಯಾವುದಕ್ಕೂ ಕಡಿಮೆ ಇಲ್ಲಾ ಎಂದು ಸಾಬೀತುಪಡಿಸಿದಂತಾಗುತ್ತಿತ್ತು ಹಾಗೂ ರಾಷ್ಟ್ರೀಯ ಮಟ್ಟದಲ್ಲಲಿ ಕನ್ನಡ ರಂಗಭೂಮಿಯ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಈಗ ಹೆಚ್ಚು ಕಡಿಮೆ ಅನಾಮಧೇಯರಾಗಿದ್ದುಕೊಂಡೇ ವರ್ಷಕ್ಕೊಂದೋ ಎರಡುಮೂರು ವರ್ಷಕ್ಕೊಂದೋ ನಾಟಕ ಬರೆದಾಡಿಸುವ ರಘುರವರಿಗೆ ರಾಷ್ಟ್ರೀಯ ರಂಗಭೂಮಿಯಿಂದ ನಾಟಕ ನಿರ್ದೇಶಿಸಲು ಆಹ್ವಾನ ಬರಬಹುದಾದ ಸಾಧ್ಯತೆಗಳೂ ಬೇಕಾದಷ್ಟಿದ್ದವು. ಎನ್‌ಎಸ್‌ಡಿ ಯಿಂದಲೇ ರಂಗಶಿಕ್ಷಣ ಪಡೆದು ಬಂದ ರಘುನಂದನ್‌ರವರಿಗೆ ರಾಷ್ಟ್ರೀಯ ನಾಟಕ ಶಾಲೆಯ ಬಗ್ಗೆ ತಕರಾರುಗಳಿವೆ. ಒಮ್ಮೆ ಅಲ್ಲಿ ನಾಟಕ ಮಾಡಿಸಲು ಹೋಗಿ ಸರಿಬರದೇ ಅರ್ಧಕ್ಕೆ ವಾಪಸ್ ಬಂದಿದ್ದಾರೆ. ಆದರೆ.. ರಾಷ್ಟ್ರೀಯ ರಂಗಭೂಮಿ ಎಂದರೆ ಕೇವಲ ಎನ್‌ಎಸ್‌ಡಿ ಒಂದೇ ಅಲ್ಲಾ ಹಾಗೂ ಪ್ರತಿಭೆ ಇದ್ದವರಿಗೆ ಅವಕಾಶಗಳಿಗೆ ಕೊರತೆಯೂ ಇಲ್ಲಾ. ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ಕನ್ನಡ ರಂಗಭೂಮಿಯ ಹೆಸರನ್ನು ಭಾರತೀಯ ರಂಗಭೂಮಿಯಲ್ಲಿ ಬೆಳೆಸುವ ಸಾಧ್ಯತೆಗಳನ್ನು ರಘುರವರು ಉಪಯೋಗಿಸಿಕೊಳ್ಳಬಹುದಾಗಿತ್ತು. ಮತ್ತು ಅವರಿಗೆ ಆ ಶಕ್ತಿ ಮತ್ತು ಸಾಮರ್ಥ್ಯ ಎರಡೂ ಇತ್ತು. ಕಾರಣ ಯಾವುದೇ ಇರಲಿ ಹೀಗೆ ಸ್ವಾಯತ್ತ ಅಕಾಡೆಮಿಯಿಂದ ಪ್ರತಿಭೆಗೆ ಸಂದ ಪ್ರಶಸ್ತಿಯನ್ನು ತಿರಸ್ಕರಿಸಿದರೆ ಮುಂದೆ ಬೇರೆ ಯಾವ ಪ್ರಶಸ್ತಿ ಪುರಸ್ಕಾರಗಳೂ ದೊರೆಯುವುದಿಲ್ಲ. ಅರ್ಹರೆಂದು ಪರಿಗಣಿಸಿ ಪ್ರಶಸ್ತಿ ಕೊಡಲು ಎಲ್ಲಾ ಸರಕಾರಿ ಹಾಗೂ ಖಾಸಗಿ ಸಂಘ, ಸಂಸ್ಥೆಗಳೂ ಹಿಂಜರಿಯುತ್ತವೆ. ರಘುನಂದನ್‌ರವರಂತಹ ವಿಶಿಷ್ಟ ಪ್ರತಿಭಾನ್ವಿತರಿಗೆ ಎಷ್ಟು ಪ್ರಶಸ್ತಿಗಳು ಬಂದರೂ ಅವೆಲ್ಲಾ ಕನ್ನಡ ರಂಗಭೂಮಿಗೆ ಬಂದಂತೆ.

ಪ್ರಶಸ್ತಿ ನಿರಾಕರಿಸುವ ರಘುನಂದನ್‌ರವರ ವ್ಯಕ್ತಿಗತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲಿ ಪ್ರಶ್ನಿಸುತ್ತಿಲ್ಲಾ. ಆದರೆ.. ಅದರಿಂದ ರಘುರವರಿಗಿಂತಾ ಕನ್ನಡ ರಂಗಭೂಮಿಗೆ ಒಂದಿಷ್ಟು ನಷ್ಟವಾಗಬಹುದು ಎಂಬ ಆತಂಕವಿದೆ. ಕನ್ನಡ ರಂಗಭೂಮಿಯನ್ನು ಬಿಟ್ಟು ರಘುನಂದನ್ ಇಲ್ಲಾ. ಅವರು ಅದರ ಭಾಗವಾಗಿಯೇ ಇದ್ದಾರೆ ಇರುತ್ತಾರೆ ಹಾಗೂ ಇರಬೇಕು. ಆದರೇನು  ಮಾಡುವುದು. ಅವರು ಒಮ್ಮೆ ನಿರ್ಧಾರವನ್ನು ತೆಗೆದುಕೊಂಡರೆ ಅದನ್ನು ಎಂದೂ ಬದಲಾಯಿಸಲಾರರು ಎಂಬುದು ರಘುನಂದನ್‌ರವರನ್ನು ಹತ್ತಿರದಿಂದ ಬಲ್ಲವರಿಗೆಲ್ಲಾ ಗೊತ್ತಿರುವ ಸಂಗತಿ. ಅಸಹಾಯಕತೆಯಿಂದಾಗಿ ಪ್ರಶಸ್ತಿ ನಿರಾಕರಿಸುವುದಕ್ಕಿಂತಲೂ ಅದನ್ನು ಸ್ವೀಕರಿಸುವುದಲ್ಲಿ ಕನ್ನಡ ರಂಗಭೂಮಿಯ ಗೌರವವಿದೆ ಎಂದು ಯಾರು ಅದೆಷ್ಟೇ ಹೇಳಿದರೂ ಅವರು ತಮ್ಮ ವ್ಯಯಕ್ತಿಕ ನಿರ್ಣಯವನ್ನು ಬದಲಾಯಿಸಲಾರರು. ಆದರೆ ವ್ಯಕ್ತಿಗಿಂತಾ ರಂಗಭೂಮಿ ದೊಡ್ಡದು. ಕನ್ನಡ ರಂಗಭೂಮಿಯ ಹಿರಿಮೆ ಮತ್ತು ಗರಿಮೆಗಳು ಬಹು ದೊಡ್ಡವು.

ಈ ರಘುನಂದನ್‌ರವರು ಇರುವುದೇ ಹೀಗೆ, ಒಂದು ರೀತಿಯಲ್ಲಿ ಅನುಭಾವಿಯ ಹಾಗೆ. ರಂಗಾನುಭಾವಿ ಎನ್ನಬಹುದೇನೋ? ಅನುಭಾವಿಗಳಿಗೆ ತಮ್ಮದೇ ಆದ ವಿಚಿತ್ರ ಹಾಗೂ ವಿಕ್ಷಿಪ್ತ ನಡೆಗಳಿರುತ್ತವೆ, ಅವು ಬೇರೆಯವರಿಗೆ ಅರ್ಥವೂ ಆಗುವುದಿಲ್ಲ, ಅರ್ಥೈಸುವ ಹಾಗೆ ಅನುಭಾವಿಗಳು ನಡೆದುಕೊಳ್ಳುವುದೂ ಇಲ್ಲಾ. ವಿಕ್ಷಿಪ್ತತೆ ಎನ್ನುವುದು ಈ ನಮ್ಮ ರಂಗಾನುಬಾವಿ ರಘುನಂದನ್‌ರವರ ಬದುಕಿನ ಅವಿಭಾಜ್ಯವೇ ಆಗಿದೆ. ರಘುರವರ ಗರಡಿಯಲ್ಲಿ ಪಳಗಿದವರಿಗೆ ಹಾಗೂ ಅವರನ್ನು ಹತ್ತಿರದಿಂದ ಬಲ್ಲವರಿಗೆ ಈ ವಿಕ್ಷಿಪ್ತತೆ ಹೊಸದೇನೂ ಅಲ್ಲಾ. ಎಲ್ಲದರಲ್ಲೂ ಪರ‍್ಪೆಕ್ಷನ್ ಬಯಸುವ ರಘುರವರ ಅತಿಯಾದ ಶಿಸ್ತನ್ನು ಅರಗಿಸಿಕೊಳ್ಳುವುದೇ ಕಷ್ಟಕರ. ಇದಕ್ಕೆ ಒಂದು ಉದಾಹರಣೆ ಹೀಗಿದೆ…

ಆರೇಳು ವರ್ಷಗಳ ಹಿಂದೆ ಜಯನಗರದ ಹೆಚ್.ಎನ್. ಕಲಾಕ್ಷೇತ್ರದಲ್ಲಿ ರಘುನಂದನ್‌ರವರ ನಿರ್ದೇಶನದ ಈ ನರಕ ಆ ಪುಳಕ ನಾಟಕವನ್ನು  ನೀನಾಸಮ್ ತಿರುಗಾಟದವರು  ಪ್ರದರ್ಶಿಸುತ್ತಿದ್ದರು. ಕಲಾವಿದರೆಲ್ಲಾ ಒಂದೇ ರೀತಿಯ ಯುನಿಪಾರಂ ಮಾದರಿಯ ಕಪ್ಪು ಬಟ್ಟೆಗಳನ್ನು ಧರಿಸಿ ಒಂದು ರೀತಿ ರಂಗಪರಿಕರದ ಭಾಗವಾಗಿಯೇ ನಟಿಸುತ್ತಿದ್ದರು. ನಿರ್ದೇಶಕರಾದ ರಘುನಂದನ್‌ರವರೂ ಸಹ ಕಲಾವಿದರು ಹಾಕಿದಂತಹ ಬಟ್ಟೆಯನ್ನೇ ತೊಟ್ಟು ಸಂಗೀತ ಮೇಳದಲ್ಲಿ ಕೂತಿದ್ದರು. ನಾಟಕ ಆರಂಭವಾಗಿ ಅರ್ಧ ಗಂಟೆಯಾಗಿರಬಹುದು ಅಷ್ಟರಲ್ಲಿ ಸಭಾಂಗಣದ ಹಿಂಬಾಗದಲ್ಲಿ ಯಾರದೋ ಮೊಬೈಲ್ ಪೋನ್ ರಿಂಗಾಯಿತು. ಅದನ್ನು ಕೇಳಿ ರಾಂಗಾದ ನಮ್ಮ ರಘೋತ್ತಮರು ರೌದ್ರಾವತಾರ ತಾಳಿ ನಾಟಕದ ಪ್ರದರ್ಶನವನ್ನು ನಿಲ್ಲಿಸಿ ರಿಂಗಾದ ಮೊಬೈಲ್ ಮಾಲೀಕನನ್ನು ಹಿಗ್ಗಾ ಮುಗ್ಗಾ ಬೈಯಲು ಆರಂಭಿಸಿದರು. ಅಷ್ಟೇ ಅಲ್ಲಾ ಆ ವ್ಯಕ್ತಿ ರಂಗಮಂದಿರದಿಂದ ಹೊರಗೆ ಹೋಗುವವರೆಗೂ ನಾಟಕ ಆರಂಭಿಸುವುದಿಲ್ಲವೆಂದು ಹಠಕ್ಕೆ ಬಿದ್ದರು. ಕೊನೆಗೂ ರಘುರವರ ಹಠವೇ ಗೆದ್ದಿತು. ಅಕ್ಕಪಕ್ಕದ ಪ್ರೇಕ್ಷಕರ ಆಗ್ರಹದ ಮೇರೆಗೆ ಆ ಮೊಬೈಲ್ ಮಾಲೀಕ ಹೊರಗೆ ಹೋದ. ನಾಟಕ ಶುರುವಾಯಿತು. ಪ್ರೇಕ್ಷಕರಿಗಂತೂ ಈ ಅನಿರೀಕ್ಷಿತ ಘಟನೆಯಿಂದಾಗಿ ಅಸಾಧ್ಯ ರಸಭಂಗವಾಯಿತು. ಇಡೀ  ನಾಟಕ ಯಾರೆಂದರೆ ಯಾರಿಗೂ ಅರ್ಥವಾಗಲೇ ಇಲ್ಲಾ. ಕಲಾವಿದರ ಆಂಗಿಕ ಸರ್ಕಸ್ ನೋಡಿದ್ದೊಂದೇ ನೋಡುಗರಿಗೆ ಲಾಭವಾಯಿತು. ಈ ನಾಟಕಕ್ಕೆ ನಾನು ಬರೆದ ವಿಮರ್ಶೆ ನೋಡುಗರಿಗೆ ನರಕ, ಆಡುವವರಿಗೆ ಪುಳಕ ಎನ್ನುವ ಶೀರ್ಷಿಕೆಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಅದನ್ನು ಓದಿದ ರಘುಸಾರ್ವಭೌಮರ ಪಿತ್ತ ನೆತ್ತಿಗೇರಿತು. ಆ ಪತ್ರಿಕೆಯ ಕಟ್ಟಿಂಗ್ ಹಿಡಿದುಕೊಂಡು ನೇರವಾಗಿ ನನ್ನನ್ನೇ ಹುಡುಕಿಕೊಂಡು ನಮ್ಮ ಇಪ್ಟಾ ಕಚೇರಿಯಿದ್ದ ಘಾಟೇಭವನಕ್ಕೆ ಬಂದರು. ಆದರೆ ಆಗ ನಾನು ಅಲ್ಲಿರದೇ ಸಿದ್ದನಗೌಡ ಪಾಟೀಲರು ಸಿಕ್ಕಿದ್ದರಿಂದ ಅವರ ಮುಂದೆ ತಮ್ಮ ಕೋಪತಾಪಗಳನ್ನೆಲ್ಲಾ ಪ್ರಕಟಿಸಿ ತಣ್ಣಗಾಗಿ ಹೊರಟು ಹೋದರು. ನಾಟಕದ ನಿರ್ದೇಶಕರಿಗೆ ಎಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೋ ಅಷ್ಟೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ನಾಟಕ ನೋಡಿದ ಪ್ರೇಕ್ಷಕರಿಗೆ ಹಾಗೂ ವಿಶ್ಲೇಷಕರಿಗೆ ಇರುತ್ತದೆಂಬ ಸರಳ ಸತ್ಯವನ್ನು ಈ ಅನುಭವಿ ನಿರ್ದೇಶಕರು ಮರೆತಿದ್ದರು.

ಯಾರು ಏನೇ ಹೇಳಲಿ.. ರಘುನಂದನ್‌ರವರ ನಾಟಕ ಕಟ್ಟುವ ಶಕ್ತಿ ಅದಮ್ಯವಾದದ್ದು. ಅವರು ವರ್ತಮಾನಕ್ಕಿಂತಾ ಭವಿಷ್ಯದ ರಂಗಸಾಧ್ಯತೆಗಳನ್ನು ತಮ್ಮ ನಾಟಕದ ಮೂಲಕ ದರ್ಶನ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಸಾಂಪ್ರದಾಯಿಕ ರಂಗ ನಿರ್ಮಿತಿಯನ್ನು ಒಡೆದು ಹಾಕಿ ಹೊಸದನ್ನು ಕಟ್ಟುವುದಕ್ಕೆ ತಮ್ಮೆಲ್ಲಾ ಪ್ರತಿಭೆಯನ್ನು ಮೀಸಲಿಡುತ್ತಾರೆ. ಅವರು ಒಂದು ರೀತಿಯಲ್ಲಿ ಕಾರ್ನಾಡರ ನಾಟಕದ ತುಘಲಕ್ ಇದ್ದ ಹಾಗೆ. ತುಘಲಕ್ ತನ್ನ ರಾಜ್ಯದ ಭವ್ಯ ಭವಿಷತ್ತಿನ ಪರಿಕಲ್ಪನೆಯನ್ನು ಸಾಕಾರ ಮಾಡಲು ಅನೇಕಾನೇಕ ಆದೇಶಗಳನ್ನು ಅನುಷ್ಟಾನಕ್ಕೆ ತರುತ್ತಾನಾದರೂ ಅದು ಯಾರಿಗೂ ಅರ್ಥವಾಗದೇ ಆತನಿಗೆ ಹುಚ್ಚನ ಪಟ್ಟವನ್ನು ಕಟ್ಟಿ ಇತಿಹಾಸದಲಿ ಹೀಯಾಳಿಸಲಾಯಿತು. ನಮ್ಮ ರಘುರವರ ವರ್ತನೆ ಹಾಗೂ ಕಟ್ಟಿದ ನಾಟಕಗಳನ್ನು ನೋಡಿದವರಿಗೆ ಅವರು ವಿಕ್ಷಿಪ್ತವಾಗಿ ಕಾಣುತ್ತಾರೆ. ಆದರೆ ಅವರ ಬೇರುಗಳು ದೇಸಿ ರಂಗಭೂಮಿಯಲ್ಲಿದ್ದರೂ ಕಲಾಕೃತಿಯ ರೆಂಬೆ ಟೊಂಗೆ ಟಿಸುಳುಗಳು ಭವಿಷ್ಯದ ರಂಗಭೂಮಿಯಲ್ಲಿರುತ್ತವೆ. ಯಾರಿಗೆ ಸುಲಭಕ್ಕೆ ಅರ್ಥವಾಗಲಿ ಬಿಡಲಿ ಸದಾ ಏನನ್ನಾದರೂ ಹೊಸದನ್ನು ಕೊಡುವ ರಘುನಂದನ್‌ರವರ ಪ್ರಯತ್ನ ಅಭಿನಂದನೀಯವಾದದ್ದು. ಸೆಟ್ ಪ್ರಾಪ್ಸ್‌ಗಳಿಗಿಂತಲೂ ನಟರ ದೇಹಭಾಷೆಯ ಮೂಲಕವೇ ನಾಟಕವನ್ನು ನಿರ್ಮಿಸುವ ರೀತಿ ಬೆರಗಾಗಿಸುವಂತಹುದು. ಹೇಗೆ ಅನುಭಾವಿಗಳನ್ನು ಸಂಪೂರ್ಣ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ನಮ್ಮ ರಘುನಂದನ್ ಎನ್ನುವ ರಂಗಾನುಭಾವಿಯೂ ಸಹ ಅರ್ಥವಾಗದ ಅಲ್ಲಮ. ಬೆತ್ತಲಾಗದೇ ಬಯಲು ಸಿಕ್ಕದೇನೋ ನಿಜ ಆದರೆ ಬೆತ್ತಲಾಗಲು ನಾವು ಸಿದ್ದರಾಗಿಲ್ಲ. ಅನುಭಾವಿಗಳಿಗೆ ಬಟ್ಟೆ ಮತ್ತು ಬೆತ್ತಲಿನ ನಡುವಿನ ವ್ಯತ್ಯಾಸದ ಅರಿವೇ ಇಲ್ಲ.
       
ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಹಲವಾರು ರಂಗಾಸಕ್ತ ವಿದ್ಯಾರ್ಥಿಗಳಿಗೆ ರಂಗಭೂಮಿಯ ಪಾಠ ಹೇಳಿಕೊಡುತ್ತಾ ಬಂದಿರುವ ರಘುನಂದನ್‌ರವರು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಅತ್ಯಂತ ಸರಳವಾಗಿ ಬದುಕನ್ನು ರೂಪಿಸಿಕೊಂಡಿರುವ ರಘುನಂದನ್‌ರವರ ರಂಗಶಿಸ್ತು ಮತ್ತು ರಂಗಬದ್ಧತೆ ಪ್ರಶ್ನಾತೀತ. ದೆಹಲಿಯ ರಾಷ್ಟ್ರೀಯ ರಂಗಶಾಲೆಯಲ್ಲಿ ತರಬೇತಿ ಪಡೆದು ಬಂದ ರಘುನಂದನ್‌ರವರು ದೆಹಲಿ ಹಾಗೂ ಬೆಂಗಳೂರಿನ ಎನ್‌ಎಸ್‌ಡಿ ಗಳ ನಡುವೆ ಸಮಾನ ಅಂತರವನ್ನು ಕಾಪಾಡಿಕೊಂಡೇ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡವರು. ಯಾವಾಗಲೂ ಪ್ರಚಾರಗಳಿಂದ ದೂರವೇ ಇದ್ದು ಅನಾಮದೇಯವಾಗಿ ಬದುಕುವ ರಘುನಂದನ್‌ರವರು ತಮ್ಮ ಪಾಡಿಗೆ ತಮಗನ್ನಿಸಿದ ಹಾಗೆ ನಾಟಕ ಕಟ್ಟುವ ಕಾಯಕವನ್ನು ಮಾಡಿಕೊಂಡು ಬಂದವರು. ಎಲ್ಲ ನೋಡಲಿ ಎಂದು ನಾಟಕ ಮಾಡಿದವರಲ್ಲ, ಪ್ರೇಕ್ಷಕರ ಚೆಪ್ಪಾಳೆಗೆ ರೋಮಾಂಚಿತರಾದವರೂ ಅಲ್ಲಾ. ಪ್ರಶಸ್ತಿ ಪುರಸ್ಕಾರಕ್ಕೆ ಆಸೆ ಪಟ್ಟವರೂ ಅಲ್ಲಾ. ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರೀಯವಾದವರೂ ಅಲ್ಲಾ. ಮೊನ್ನೆ ಪ್ರಶಸ್ತಿ ಬಂದಾಗ ಅವರ ಒಂದೇ ಒಂದು ಪೊಟೋ ಸಹ ಯಾರ ಬಳಿಯೂ ಇರಲಿಲ್ಲ. ನೀನಾಸಮ್ ವೆಬ್‌ಸೈಟಿನಲ್ಲೂ ಸಹ ರಘುರವರ ಭಾವಚಿತ್ರ ಮಾಹಿತಿ ವಿವರಗಳಿರಲಿಲ್ಲ.

ಇಂತಿಪ್ಪ ನಮ್ಮ ರಘುನಂದನ್‌ರವರು ಆರ್ಥಿಕವಾಗಿ ಸಬಲರೂ ಅಲ್ಲಾ, ನಿಗಧಿತ ಎನ್ನುವ ಆದಾಯವೂ ಅವರಿಗಿಲ್ಲ. ಈಗ ಬಂದಿದ್ದ ಅಕಾಡೆಮಿಯ ಪ್ರಶಸ್ತಿಯ ಜೊತೆಗೆ ಲಕ್ಷ ರೂಪಾಯಿ ನಗದು ಹಣವೂ ಸಿಕ್ಕುತ್ತಿತ್ತು. ಅದು ರಘುನಂದನ್‌ರವರ ಬದುಕಿಗೆ ಒಂಚೂರು ಆಧಾರವೂ ಆಗುತ್ತಿತ್ತು. ಇಲ್ಲವೇ ಅದೇ ಹಣದಿಂದ ಒಂದೆರಡು ನಾಟಕದ ಪ್ರೊಡಕ್ಷನ್ ಮಾಡಬಹುದಾಗಿತ್ತು. ಆದರೆ.. ಅವರ ಆದರ್ಶ ಮತ್ತು ನಿಷ್ಟುರತೆಗಳು ಬದುಕಿನ ಬವಣೆಗಳನ್ನೂ ಮೀರಿಸಿದಂತವಾಗಿದ್ದವು. ಪ್ರಭುತ್ವದ ಶೋಷಣೆಯ ವಿರುದ್ಧ ಹೋರಾಡಲು ಪ್ರಶಸ್ತಿ ನಿರಾಕರಣೆ ಎನ್ನುವ ಸಾಂಕೇತಿಕ ಕ್ರಮಕ್ಕಿಂತಲೂ ಬೇಕಾದಷ್ಟು ಮಾರ್ಗಗಳಿದ್ದವು. ಬಾದಲ್ ಸರ್ಕಾರರವರ ಹಾಗೆ ಪ್ರಭುತ್ವ ವಿರೋಧಿ ನಾಟಕಗಳನ್ನು ಮಾಡಿ ಜನರನ್ನು ಎಚ್ಚರಿಸಬಹುದಾಗಿತ್ತು. ಸಪ್ದರ್ ಹಸ್ಮಿಯವರ ಹಾಗೆ ವ್ಯವಸ್ಥೆಯ ಸರ್ವಾಧಿಕಾರವನ್ನು ಪ್ರತಿರೋಧಿಸಿ ಬೀದಿನಾಟಕಗಳ ಮೂಲಕ ನಿರ್ಲಿಪ್ತರಾದ ಜನರಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸಬಹುದಾಗಿತ್ತು. ಈ ಎಲ್ಲಾ ಸಾಧ್ಯತೆಗಳೂ ರಂಗಭೂಮಿಗೆ ಇವೆ. ಇಪ್ಟಾ ಸಾಂಸ್ಕೃತಿಕ ಸಂಘಟನೆ, ಸಮುದಾಯಗಳು ರಂಗಭೂಮಿಯನ್ನು ವ್ಯವಸ್ಥೆಯ ವಿರುದ್ಧದ ಅಸ್ತ್ರವನ್ನಾಗಿಸಿಕೊಂಡಿದ್ದು ಉದಾಹರಣೆಯಾಗಿವೆ. ಅಂತಹ ಸಂಘಟನೆಗಳು ಈಗ ಸುಸ್ತಾಗಿ ಸುಮ್ಮನಾಗಿರುವ ಸಂದರ್ಭದಲ್ಲಿ ರಘುರವರು ರಂಗಸಂಘಟನೆಯೊಂದನ್ನು ಹುಟ್ಟುಹಾಕಿ ಶೋಷಣೆಯ ವಿರುದ್ಧ ತೊಡೆತಟ್ಟಿದ್ದರೆ ಅದರ ಪರಿಣಾಮವೇ ಬೇರೆಯಾಗಿರುತ್ತಿತ್ತು.

ಆದರೆ.. ರಘುನಂದನ್‌ರವರು ದೇಶದ ನಕಾರಾತ್ಮಕ ವಿದ್ಯಮಾನಗಳಿಂದ ನಿರಾಸೆ ಹೊಂದಿ ಸಿನಿಕತನವನ್ನು ಬೆಳೆಸಿಕೊಂಡರಾ? ಅವರು ಅಕಾಡೆಮಿಗೆ ಬರೆದ ಪ್ರಶಸ್ತಿ ನಿರಾಕರಣೆಯ ಪತ್ರದ ಕೊನೆಯ ಪ್ಯಾರಾ ಓದಿದಾಗ ಅಂತಹ ಸಂದೇಹವೊಂದು ಹುಟ್ಟುತ್ತದೆ. ಇದು ಪ್ರತಿಭಟನೆಯಲ್ಲ ವ್ಯಥೆ. ಪ್ರಶಸ್ತಿಯನ್ನು ಸ್ವೀಕರಿಸಲು ಬಿಡದಿರುವ ಅಸಹಾಯಕತೆ...  ಶಿವಕಾರುಣ್ಯವಿರಲಿ... ಎಂದು ಬರೆಯುತ್ತಾರೆ. ಅಂದರೆ ಅವರು ತುಂಬಾನೇ ಈ ವ್ಯವಸ್ಥೆಯ ನಕಾರಾತ್ಮಕ ವಿದ್ಯಮಾನಗಳಿಂದ ವ್ಯಥೆ ಪಡುತ್ತಿದ್ದಾರೆ ಹಾಗೂ ಅಸಹಾಯಕರಾಗಿದ್ದಾರೆ. ತಮ್ಮ ಕೈಯಲ್ಲಿ ಏನೂ ಮಾಡಲು ಆಗದಷ್ಟು ಅಧೀರರಾಗಿದ್ದಾರೆ.. ಅದಕ್ಕೆ ಎಲ್ಲರಂತೆ ದೇವರಲ್ಲಿ ಶಿವಕಾರುಣ್ಯವಿರಲಿ ಎಂದು ಮೊರೆಯಿಡುತ್ತಿದ್ದಾರೆ. ಇಷ್ಟೊಂದು ಅಸಹಾಯಕತೆ ರಂಗಕರ್ಮಿಯೊಬ್ಬರಿಗೆ ಅಗತ್ಯವಿದೆಯಾ?. ರಂಗಭೂಮಿ ಎನ್ನುವುದು ಆಶಾವಾದವನ್ನು ಉಂಟುಮಾಡುವ ಮಾಧ್ಯಮವೇ ಹೊರತು ನಿರಾಶಾವಾದವನ್ನು ಹುಟ್ಟಿಸುವುದಲ್ಲಾ. ಎಂತಹ ಕ್ಲಿಷ್ಟಕರವಾದ ಸಂದರ್ಭ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ರಂಗಭೂಮಿ ಕಲಿಸಿಕೊಡುತ್ತದೆ. ಆದರೆ ಹಲವಾರು ಶಿಷ್ಯರಿಗೆ ಗುರುವಾದ ರಘುನಂದನ್‌ರವರ ಈ ರೀತಿಯ ಅಸಹಾಯಕತೆ ಖಂಡಿತಾ ಅವರ ಅಭಿಮಾನಿಗಳಿಗೆ ಹಾಗೂ ಶಿಷ್ಯವರ್ಗಕ್ಕೆ ಮಾದರಿಯಾಗುವಂತಹುದಲ್ಲ. ಆದರ್ಶವಾದಿ ಗುರುವನ್ನು ಅನುಸರಿಸುವ ಹಲವಾರು ಶಿಷ್ಯರುಗಳು ಇದ್ದೇ ಇರುತ್ತಾರೆ. ಅವರಿಗೆಲ್ಲಾ ಬದುಕಿನ ಉತ್ಸಾಹವನ್ನು ಹಾಗೂ ವ್ಯವಸ್ಥೆ ಒಡ್ಡುವ ಕೇಡನ್ನು ಗೆಲ್ಲುವ ಛಲವನ್ನು ಗುರುವಾದವನು ಕಲಿಸಿಕೊಡಬೇಕಾಗುತ್ತದೆ ಹಾಗೂ ಅದಕ್ಕೆಲ್ಲಾ ಮಾದರಿಯೂ ಆಗಬೇಕಾಗುತ್ತದೆ. ಆದರೆ ರಘುನಂದನ್‌ರವರ ಈ ವ್ಯಥೆ ಹಾಗೂ ಅಸಹಾಯಕತೆ ಖಂಡಿತಾ ಅನುಕರಣೀಯವಲ್ಲಾ. ಸಿನಿಕತನ ಎಂದಿಗೂ ಯಾರಿಗೂ ಆದರ್ಶನೀಯವಲ್ಲಾ.

ರಘುನಂದನ್‌ರವರಂತಹ ಪ್ರತಿಭೆಯ ಪರ್ವತಗಳು ಎಂದೂ ಅಸಹಾಯಕವಾಗದೇ ಇರಲಿ. ಶಿಷ್ಯ ಸಮೂಹವನ್ನು ನಿರಾಸೆಯತ್ತ ಎಂದೆಂದೂ ಪ್ರೇರೇಪಿಸದೇ ಇರಲಿ. ಪ್ರಶಸ್ತಿಯನ್ನು ತಿರಸ್ಕರಿಸುವುದೇ ಆದರೆ ಅಸಹಾಯಕತೆಯನ್ನು ವ್ಯಕ್ತಪಡಿಸದೇ ಧೀರೋದ್ದಾತ್ತವಾಗಿ ಪ್ರಭುತ್ವದ ದಮನದ ವಿರುದ್ಧದ ಸಾಂಕೇತಕ ಪ್ರತಿಭಟನೆಯ ಅಸ್ತ್ರವಾಗಿ ನಿರಾಕರಿಸಲಿ. ಆಗ ರಘುನಂದನ್ ಮಾದರಿಯಾಗಬಲ್ಲರು. ರಂಗಭೂಮಿಯ ಉರಿಯುವ ನಕ್ಷತ್ರವಾಗಬಲ್ಲರು. ಕನ್ನಡ ರಂಗಭೂಮಿಗೆ ಹೋರಾಟದ ಕಿಡಿಯನ್ನು ಹಚ್ಚಿದ ಹೋರಾಟಗಾರರಾಗಬಲ್ಲರು. ಸಾಧ್ಯವಾದರೆ ತಮ್ಮ ನಿರ್ಧಾರವನ್ನು ರಘುನಂದನ್‌ರವರು ಮರುಪರಿಶೀಲಿಸಬೇಕು ಹಾಗೂ ಆದಷ್ಟು ಬೇಗ ತಮ್ಮ ಅಸಹಾಯಕತೆಯನ್ನು ಮೀರಿ ರಂಗಾಸ್ತ್ರದ ಮೂಲಕ ಪ್ರಭುತ್ವದ ದಮನವನ್ನು ವಿರೋಧಿಸಬೇಕು ಎಂಬುದು ಕಳಕಳಿಯ ಮನವಿ.

-ಶಶಿಕಾಂತ ಯಡಹಳ್ಳಿ  


(ಪೊಟೋ ಕೃಪೆ : ತಾಯ್ ಲೊಕೇಶ್ )