ಬುಧವಾರ, ಆಗಸ್ಟ್ 23, 2017

ಶತಾಯುಷಿ ಬಾಳಪ್ಪಜ್ಜ ಚಿರನಿದ್ರೆಗೆ ; ಅಕ್ಷರ ನಮನ ರಂಗಸಾಧಕನಿಗೆ..


ನಡೆ ನುಡಿ ಸಿದ್ದಾಂತದ ಏಣಗಿ ಬಾಳಪ್ಪಜ್ಜ ದಿವಂಗತ :  

 
ಹೋಗಿ ಬರ‍್ತೀನ್ರಯ್ಯಾ ನಮ್ಮೂರಿಗೆ...
ಎಲ್ಲರಿಗೂ ಶರಣಾರ್ಥಿ ದಯದೋರಿ ಕಳುಹಿಸಿರಿ..

ಹಿಂದಿಲ್ಲ ಮುಂದಿಲ್ಲ, ನಾ ತಂದದ್ದೇನಿಲ್ಲ
ಎಲ್ಲ ನೀವೇ ನೀಡಿ ನೆರವಾದಿರಿ ಎನಗೆ
ಹೆಂಡತಿ ಮಕ್ಕಳ ಸಂಸಾರ ಬೆಳೆಸಿದಿರಿ
ಮಮಕಾರವಿದ್ದರೇನು ಬಿಟ್ಟು ಹೋಗಲೇಬೇಕು...

ಬದುಕಿದ್ದ ಕಾಲದಲಿ ಏನೇನೋ ಮಾಡಿದೆ
ತಪ್ಪೇನೋ ಒಪ್ಪೇನೋ ಒಪ್ಪಿಸಿಕೊಳ್ಳಿರಯ್ಯ
ಹೋಗೆಂದ ದೇವನು ಬಾ ಎಂದು ಕರೆವನು
ಎಲ್ಲರಿಗೂ ಶರಣಾರ್ಥಿ ಎಲ್ಲರಿಗೂ ಶರಣಾರ್ಥಿ..

ಎಂದು ಜೋಳದರಾಶಿ ದೊಡ್ಡನಗೌಡರು ರಚಿಸಿದ ಈ ಹಾಡನ್ನು ಈ ಅಭಿಜಾತ ಕಲಾವಿದ ರಂಗ ವೇದಿಕೆಯ ಮೇಲೆ ನಿಂತು ವಿದಾಯ ಗೀತೆ ಹಾಡತೊಡಗಿದರೆ ಕೇಳಿದ ಪ್ರೇಕ್ಷಕರ ಕಣ್ಣೆವೆಗಳು ಹಸಿಯಾಗುತ್ತಿದ್ದವು. ಆದರೆ.. ಈಗ ನಿಜವಾಗಿಯೂ ಮರಳಿ ಬಾರದ ಲೋಕಕ್ಕೆ ಹೋಗುವ ಮುನ್ನ ಹೋಗಿ ಬರ‍್ತೀನ್ರಯ್ಯಾ ಅಂತಾ ಒಂದೇ ಒಂದು ಮಾತನ್ನೂ ಹೇಳದೇ ಹೋಗಿಬಿಟ್ಟರು. ಬಹುಷಃ ಹೇಳಲು ಬಾಯಿದ್ದರೆ ಕೊನೆಯ ಕ್ಷಣದಲ್ಲೂ ಅದೇ ವಿದಾಯ ಗೀತೆಯನ್ನು ಹಾಡುತ್ತಿದ್ದರೋ ಏನೋ? ಆದರೆ.. ಕಾಲನ ಕರೆ ಬರುವ ಒಂದು ತಿಂಗಳ ಮುಂಚೆಯೇ ದಿವ್ಯ ಮೌನಕ್ಕೆ ಶರಣಾಗಿದ್ದರು. ಹೇಳಬೇಕೆಂದರೂ ಮಾತುಗಳೇ ನಿಂತು ಹೋಗಿದ್ದವು. ಜೀವಮಾನವೆಲ್ಲಾ ಹಾಡಿದ ಸಿರಿಕಂಠದ ಕೋಗಿಲೆ ಮೂಕವಾಗಿತ್ತು. ಆಗ ಅವರಿಗೆ ಸರಿಯಾಗಿ ಒಂದುನೂರಾ ನಾಲ್ಕು ವರ್ಷಗಳ ವಯಸ್ಸು. ಅಷ್ಟರಲ್ಲಿ ಆಗಲೇ ಮೂರ‍್ನಾಲ್ಕು ಜನ್ಮಕ್ಕಾಗುವಷ್ಟು ಕ್ರಿಯಾಶೀಲ ಕೆಲಸವನ್ನು ಮಾಡಿಯಾಗಿತ್ತು. ನಿಸರ್ಗ ನಿಯಮಕ್ಕೆ ತಲೆಬಾಗಿ ಹೋಗಿಯೇ ಬಿಟ್ಟರು. ಮತ್ತೆ ಇನ್ನು ಮರಳಿ ಬರುವ ಮಾತೇ ಇಲ್ಲಾ. ಅವರು ಇಟ್ಟ ದಿಟ್ಟ ಹೆಜ್ಜೆಗಳು ಮಾತ್ರ ರಂಗಚರಿತ್ರೆಯಲ್ಲಿ ದಟ್ಟವಾಗಿ ಮೂಡಿದವು. ಅವರ ಭೌತಿಕ ಕಾಯ 2017ರ ಆಗಸ್ಟ್ 18ರಂದು ನಿಶ್ಚಲವಾಯಿತು, ಆಗಸ್ಟ್ 19ರಂದು ಪಂಚಭೂತಗಳಲ್ಲಿ ಲೀನವಾದರೂ ಅವರ ಹೆಸರು ವೃತ್ತಿ ರಂಗಭೂಮಿಯ ಇತಿಹಾಸದಲ್ಲಿ ಅಚ್ಚಳಿಯದೇ ಮೂಡಿತು. ಅವರ ಅಗಲಿಕೆಯ ನೆನಪು ರಂಗಕರ್ಮಿಗಳನ್ನು ಇನ್ನಿಲ್ಲದಂತೆ ಕಾಡಿತು.

ಅದು ಬಲು ದೊಡ್ಡ ಜೀವ. ಅವರು ಮನುಕುಲಕೆ ಮಾದರಿಯಾಗುವಂತಾ ಬದುಕು ಬಾಳಿದ ಕಲಾವಿದ. ಅವರ ಹೆಸರು ಬಾಳಪ್ಪ ಎಂದರೆ ಯಾರಿಗೆ ಗೊತ್ತಾಗುತ್ತೋ ಇಲ್ಲವೋ ಗೊತ್ತಿಲ್ಲಾ. ಆದ್ರೆ ಏಣಗಿ ಬಾಳಪ್ಪ ಎಂದರೆ ಗೊತ್ತಿಲ್ಲಾ ಎನ್ನುವ ರಂಗಕರ್ಮಿಗಳೇ ಇಲ್ಲಾ. ಸವದತ್ತಿ ಹಾಗೂ ಬೈಲಹೊಂಗಲ ತಾಲೂಕಿನ ಗಡಿಭಾಗದ ಪುಟ್ಟ ಹಳ್ಳಿ ಏಣಗಿಯಲ್ಲಿ ಹುಟ್ಟಿದ ಅಪ್ಪಟ ಗ್ರಾಮೀಣ ಪ್ರತಿಭೆಯೊಂದು ಬಾಳಿ ಬೆಳೆದು ಬೆಳಗಿದ ರೀತಿ ನಿಜಕ್ಕೂ ವಿಸ್ಮಯ. ಅವರು ನಡೆದ ದಾರಿಯನ್ನು ನೆನಸಿಕೊಂಡರದೇ ತನ್ಮಯ.

ಕನ್ನಡ ವೃತ್ತಿ ರಂಗಭೂಮಿಯನ್ನು ದೊಡ್ಡ ದೊಡ್ಡ ನಟರು ಆಳಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿದ್ದಾರೆ. ತಮ್ಮ ಕಲಾಪ್ರೌಢಿಮೆಯಿಂದ ಸಾಕಷ್ಟು ಹೆಸರು ಮಾಡಿದವರಿದ್ದಾರೆ, ನಾಟಕ ಕಂಪನಿಗಳನ್ನು ಕಟ್ಟಿ ಮೆರೆದವರಿದ್ದಾರೆ, ಜನಪ್ರೀಯತೆಯನ್ನು ಪಡೆದವರೂ ಬೇಕಾದಷ್ಟಿದ್ದಾರೆ. ಆದರೆ.. ಬಾಳಪ್ಪನವರಂತೆ ಸರಳವಾಗಿ, ಸಜ್ಜನಿಕೆಯಿಂದಾ, ನಡೆದಂತೆ ನುಡಿದು ತುಂಬು ಬದುಕನ್ನು ತೃಪ್ತಿಯಿಂದ ಬದುಕಿದವರು ಯಾರೂ ಇಲ್ಲವೇ ಇಲ್ಲಾ. ಅಪರೂಪದಲ್ಲಿ ಅಪರೂಪವಾಗಿದ್ದಂತಹ ನಮ್ಮ ಏಣಗಿ ಬಾಳಪ್ಪಜ್ಜನವರ ಬದುಕು ಮತ್ತು ಸಾಧನೆ ರಂಗಭೂಮಿಯವರಿಗೆಲ್ಲಾ ಆದರ್ಶನೀಯ. ಅವರ ಅಗಲಿಕೆಯ ಸಂದರ್ಭದಲ್ಲಿ ಅಕ್ಷರ ನಮನಗಳನ್ನು ಹೇಳುವುದೇ ಈ ಲೇಖನದ ದ್ಯೇಯ..

1914 ರಲ್ಲಿ ಬೆಳಗಾವಿ ಜಿಲ್ಲೆಯ ಏಣಗಿ ಗ್ರಾಮದಲ್ಲಿ ಕರಿಬಸಪ್ಪ ಹಾಗೂ ಬಾಳಮ್ಮ ದಂಪತಿಗಳಿಗೆ ಹುಟ್ಟಿದ ಬಾಳಪ್ಪನವರ ಬಾಲ್ಯ ಬಲು ಕಷ್ಟಕರವಾಗಿತ್ತು. ಬಾಳಪ್ಪನವರಿಗೆ ಮೂರು ವರ್ಷ ತುಂಬುವ ಮೊದಲೇ ಅಪ್ಪ ತೀರಿಕೊಂಡರು. ನಾಲ್ಕನೇ ಕ್ಲಾಸ್‌ವರೆಗೆ ಓದಿದ್ದ ಬಾಳಪ್ಪನವರು ಆರ್ಥಿಕ ತಾಪತ್ರಯಗಳಿಂದಾಗ ಓದು ನಿಲ್ಲಿಸಿ ದನಕಾಯಬೇಕಾಯಿತು. ಹಳ್ಳಿಗಳಲ್ಲಿ ಆಗಾಗ ಪ್ರದರ್ಶನಗೊಳ್ಳುತ್ತಿದ್ದ ಬಯಲಾಟಗಳತ್ತ ಚಿತ್ತ ಬೆಳೆಯಿತು. ಕಂಚಿನ ಕಂಠ ಹಾಗೂ ಸುಶ್ರಾವ್ಯವಾದ ಹಾಡುಗಾರಿಕೆಯಿಂದಾಗಿ ಊರವರ ಗಮನ ಸೆಳೆದ ಬಾಳಪ್ಪನವರಿಗೆ ಮೊದಲ ಬಾರಿಗೆ ಮಾರ್ಕಂಡೇಯ ಬಯಲಾಟದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೂ ಸಹ ಆಕಸ್ಮಿಕ. ಪ್ರದರ್ಶನದ ಸಮಯಕ್ಕೆ ಸರಿಯಾಗಿ ಗಣಪತಿ ಪಾತ್ರ ಮಾಡುತ್ತಿದ್ದ ಬಾಳಪ್ಪನವರ ಅಣ್ಣ ಬರಲಾಗದ್ದರಿಂದ ಆ ಪಾತ್ರವನ್ನು ಬಾಳಪ್ಪನವರೇ ಮಾಡಿ ಗ್ರಾಮಸ್ಥರ ಗಮನ ಸೆಳೆದರು. ನಂತರ ಲವ-ಕುಶ ಬಯಲಾಟದಲ್ಲಿ ಲವನ ಪಾತ್ರಕ್ಕೆ ಜೀವತುಂಬಿದರು.  ಆಗ ಅವರಿಗೆ ಕೇವಲ ಎಂಟು ವರ್ಷಗಳ ಎಳೆಯ ಬಾಲ್ಯ. ಅದೃಷ್ಟ ಅವರಿಗೆ ಮತ್ತೊಂದು ಆಕಸ್ಮಿಕ ಅವಕಾಶವನ್ನೊದಗಿಸಿತು. ನರಗುಂದದಲ್ಲಿ ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ನಟಿಸಬೇಕಾಗಿದ್ದ ಭರತನ ಸೇವಕನ ಪಾತ್ರದಾರಿ ಬಂದಿರಲಿಲ್ಲ. ಅದೂ ಸಹ ಅಚಾನಕ್ಕಾಗಿ ಬಾಳಪ್ಪನವರಿಗೆ ಒಲಿದುಬಂದು ನಾಟಕರಂಗ ಪ್ರವೇಶಕ್ಕೆ ಅನುಕೂಲವಾಯಿತು. ಮುಂದೆ ಹುಕ್ಕೇರಿ ನಾಯಕರ ಕಂಪನಿ ಅದೇ ಪಾದುಕಾ ಪಟ್ಟಾಭಿಷೇಕ ನಾಟಕವನ್ನು ಬೈಲಹೊಂಗಲದಲ್ಲಿ ಮಾಡದಾಗಲೂ ಕೂಡಾ ಭರತನ ಪಾತ್ರದಾರಿ ಕೈಕೊಟ್ಟಿದ್ದ. ಮತ್ತೆ ಆ ಪಾತ್ರವೂ ಸಹ ತಾನಾಗಿಯೇ ಬಾಳಪ್ಪನವರನ್ನು ಹುಡುಕಿಬಂತು. ದಶರತನ ಪಾತ್ರದಲ್ಲಿ ನಟಿಸಿದ್ದ ಪ್ರಸಿದ್ದ ನಾಟಕಕಾರರಾದ ಶಿವಲಿಂಗಸ್ವಾಮಿಗಳು ಬಾಳಪ್ಪನವರ ಪಾತ್ರವನ್ನು ಮೆಚ್ಚಿದರು. ಮುಂದೆ 1928ರಲ್ಲಿ ಶಿವಲಿಂಗಸ್ವಾಮಿಗಳು ತಮ್ಮದೇ ಆದ ಲಿಂಗರಾಜ ನಾಟ್ಯ ಸಂಘವನ್ನು ಕಟ್ಟಿದಾಗ ಬಾಳಪ್ಪನವರನ್ನು ತಮ್ಮ ನಾಟಕ ಕಂಪನಿಗೆ ಕರೆಯಿಸಿಕೊಂಡರು. ಆಗ ಬಾಳಪ್ಪನವರಿಗೆ ವಯಸ್ಸು ಕೇವಲ ಹನ್ನೆರಡು. ಹೀಗೆ ಅದೃಷ್ಟ ಕರೆದಲ್ಲೆಲ್ಲಾ, ಅವಕಾಶ ಸಿಕ್ಕಲ್ಲೆಲ್ಲಾ ಹೊರಟ ಈ ಗ್ರಾಮೀಣ ಪ್ರತಿಭೆ ಬಾಳಪ್ಪನವರ ಬದುಕಿನ ರಂಗಪಯಣ ಬಲು ರೋಚಕವಾದದ್ದು. 

ತಮ್ಮ ಆಕರ್ಷಕ ದೇಹಸಿರಿ, ಅಪರೂಪದ ಕಂಠಸಿರಿ ಹಾಗೂ ವಿಶಿಷ್ಟ ಅಭಿನಯಗಳಿಂದಾಗಿ ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಬಾಲನಟನಾಗಿ, ಸ್ರ್ತೀ ಪಾತ್ರದಾರಿಯಾಗಿ ಒಂದಾದ ಮೇಲೊಂದು ನಾಟಕಗಳಲ್ಲಿ ಅಭಿನಯಿಸುತ್ತಾ ಕಂಪನಿ ಮಾಲೀಕರ ಹಾಗೂ ಪ್ರೇಕ್ಷಕರ ಗಮನವನ್ನು ಸೆಳೆದರು. ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ಬಾಳಪ್ಪನವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೂ ಸಹ ಆಕಸ್ಮಿಕವೇ. ಚಿಕ್ಕೋಡಿ ಶಿವಲಿಂಗಸ್ವಾಮಿಗಳ ಶಿರಸಿ ಮಾರಿಕಾಂಬಾ ನಾಟಕ ಮಂಡಳಿಯ ವೀರರಾಣಿ ರುದ್ರಮ್ಮ ನಾಟಕದಲ್ಲಿ ನಟಿಸಬೇಕಾಗಿದ್ದ ರುದ್ರಮ್ಮನ ಪಾತ್ರದಾರಿ ಬಾಗೀರಥಿಬಾಯಿ ಕೊನೆಯ ಗಳಿಗೆಯಲ್ಲಿ ಬಾರದೇ ಹೋದರು. ಆ ವಿರೋಚಿತ ಸ್ರ್ತೀ ಪಾತ್ರವನ್ನು ಆವಾಹಿಸಿಕೊಂಡು ಅಮೋಘವಾಗಿ ನಟಿಸಿದ ಬಾಳಪ್ಪನವರಿಗೆ ತದನಂತರ ನಾಯಕಿ ಪಾತ್ರಗಳೇ ಖಾಯಂ ಆದವು. ಶಿವಲಿಂಗಸ್ವಾಮಿಗಳ ಕಂಪನಿ ಮುಚ್ಚಿದಾಗ, ಆ ರಂಗಗುರುವಿನ ನೆನಪಿನಲ್ಲಿ ಮೊದಲ ಬಾರಿಗೆ ಸೂಡಿ ಹುಚ್ಚಪ್ಪನವರ ಜೊತೆಗೆ ಸೇರಿ ಬಾಳಪ್ಪನವರು ಗುರು ಸೇವಾ ಸಂಗೀತ ನಾಟಕ ಮಂಡಲಿ ನಾಟಕ ಕಂಪನಿಯನ್ನು ಶುರುಮಾಡಿದಾಗ ಅವರ ವಯಸ್ಸು ಕೇವಲ ಹದಿನೆಂಟು. ಬಿ.ಎ, ಕಿತ್ತೂರು ರುದ್ರಮ್ಮ, ಅಸ್ಪೃಶ್ಯತಾ ನಿವಾರಣೆ ಮುಂತಾದ ನಾಟಕಗಳು ಪ್ರದರ್ಶನಗೊಂಡವು. ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಬಂದಿದ್ದರಿಂದ ಮೂರೇ ವರ್ಷದಲ್ಲಿ ಈ ನಾಟಕ ಕಂಪನಿಯನ್ನು ತೊರೆದು ೧೯೩೬ ರಲ್ಲಿ ಸ್ವಂತ ನಾಟಕ ಕಂಪನಿಯನ್ನು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಕಟ್ಟಿದ ಬಾಳಪ್ಪನವರು ಅದಕ್ಕೆ ಕಿತ್ತೂರ ಸಂಗೀತ ನಾಟಕ ಮಂಡಳಿ ಎಂದು ಹೆಸರಿಟ್ಟರು. ಮೂರು ವರ್ಷಗಳ ಕಾಲ ಸಂಕಷ್ಟದಲ್ಲೆ ಈ ನಾಟಕ ಕಂಪನಿಯನ್ನು ನಡೆಸಿದ ಬಾಳಪ್ಪನವರು ನಷ್ಟಕ್ಕೆ ಒಳಗಾಗಿ ಕಂಪನಿ ಮುಚ್ಚಬೇಕಾಯಿತು. ಮುಂದೆ ಬೇರೆ ನಾಟಕ ಕಂಪನಿಗಳಲ್ಲಿ ಅತಿಥಿ ನಟರಾಗಿ ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕಿತ್ತೂರು ರುದ್ರಮ್ಮ, ಕಡ್ಲಿಮಟ್ಟಿ ಕಾಶೀಬಾಯಿ, ಪಠಾನ ಪಾಶದ ವೃಂದಾ.. ಪಾತ್ರಗಳನ್ನು ಅಭಿನಯಿಸುತ್ತಲೇ ತಮ್ಮ ಜನಪ್ರೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದರು.

ಎರಡು ಕಂಪನಿಗಳನ್ನು ಕಟ್ಟಿ ಕಷ್ಟ ನಷ್ಟ ಅನುಭವಿಸಿದರೂ ಛಲ ಬಿಡದ ಬಾಳಪ್ಪನವರು 1940 ರಲ್ಲಿ ಮತ್ತೆ ನಾಲ್ಕು ಜನರ ಪಾಲುದಾರಿಕೆಯಲ್ಲಿ ವೈಭವಶಾಲಿ ನಾಟಕ ಕಂಪನಿ ಹುಟ್ಟುಹಾಕಿದರು. ಆದರೆ ಮೂರೇ ತಿಂಗಳಲ್ಲಿ ಇಬ್ಬರು ಪಾಲುದಾರರು ಹೊರಹೋದರು. ಹಾಗೂ ಹೀಗೂ ಆರು ವರ್ಷಗಳ ಕಾಲ ವೈಭವಶಾಲಿಯನ್ನು ಮುನ್ನಡೆಸಿದ ಬಾಳಪ್ಪನವರ ಈ ಕಂಪನಿಯೂ ಎರಡನೇ ಸಲ ಹೋಳಾಯಿತು.  ಪ್ರತಿಕೂಲ ಪರಿಸ್ಥಿತಿಯಲ್ಲೂ ದೃತಿಗೆಡದ ಬಾಳಪ್ಪನವರು ತಮ್ಮ ಪಾಲಿಗೆ ಬಂದ ಪರಿಕರಗಳನ್ನು ತೆಗೆದುಕೊಂಡು ಹಠಕ್ಕೆ ಬಿದ್ದು ಸ್ವತಂತ್ರವಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದ ವರುಷದಲ್ಲಿ ಕಲಾವೈಭವ ನಾಟ್ಯ ಸಂಘ ವನ್ನು 1947 ರಲ್ಲಿ ಸ್ಥಾಪಿಸಿದರು. ಆ ನಂತರ ಹಿಂತಿರುಗಿ ನೋಡದ ಬಾಳಪ್ಪನವರು ನಾಟಕಗಳನ್ನು ಪ್ರದರ್ಶಿಸುತ್ತಲೇ ಹೋದರು. ಸಂಪೂರ್ಣ ರಾಮಾಯಣ, ಪಾದುಕಾ ಪಟ್ಟಾಭಿಷೇಕ, ಕುರುಕ್ಷೇತ್ರ, ಲಂಕಾದಹನ, ರಾಜಾಹರಿಶ್ಚಂದ್ರ ಹೀಗೆ ಒಟ್ಟು ಇಪ್ಪತ್ತು ಪೌರಾಣಿಕ ನಾಟಕಗಳನ್ನು ಮತ್ತು ಕಿತ್ತೂರು ರುದ್ರಮ್ಮ, ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಟಿಪ್ಪು ಸುಲ್ತಾನ.. ಸೇರಿದಂತೆ ಎಂಟು ಐತಿಹಾಸಿಕ ನಾಟಕಗಳನ್ನು ಹಾಗೂ ಧರ್ಮಪತ್ನಿ, ಕುಂಕುಮ, ಚಲೇಜಾವ್, ಸಂಪತ್ತಿಗೆ ಸವಾಲ್, ಶಾಲಾಮಾಸ್ತರ್,, ಹೀಗೆ ಮೂವತ್ತೈದಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ಬಾಳಪ್ಪನವರು ನಿರ್ಮಿಸಿ ನಾಡಿನಾದ್ಯಂತ ಸಾವಿರಾರು ಪ್ರದರ್ಶನಗಳನ್ನು ಮಾಡುತ್ತಾ ಕನ್ನಡ ವೃತ್ತಿ ರಂಗಭೂಮಿಗೆ ಅಪಾರವಾದ ಕೊಡುಗೆಗಳನ್ನು ಕೊಟ್ಟರು. 

ಕಲಾವೈಭವದ ಜಗಜ್ಯೋತಿ ಬಸವೇಶ್ವರ ನಾಟಕವಂತೂ ಅತ್ಯಂತ ಜನಪ್ರೀಯವಾಯಿತು. ಬಸವೇಶ್ವರರ ಪಾತ್ರವನ್ನು ಮಾಡುತ್ತಿದ್ದ ಬಾಳಪ್ಪನವರನ್ನು ಎಲ್ಲರೂ  ಬಸವಣ್ಣನವರ ತದ್ರೂಪವೆಂದೇ ಪರಿಗಣಿಸುವಂತಾಯಿತು. ಬಾಳಪ್ಪನವರ ಬಸವಣ್ಣನ ಪಾತ್ರದ ಅಭಿನಯವನ್ನು ನೋಡಿ ಭಕ್ತಿಯಿಂದ ತನ್ಮಯಗೊಂಡು ಭಾವಪರವಶರಾದ ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮಿಗಳು ಅದು ನಾಟಕ ಎನ್ನುವುದನ್ನೂ ಮರೆತು ಅನುಭವ ಮಂಟಪದ ದೃಶ್ಯ ನಡೆಯುತ್ತಿರುವಾಗಲೇ ವೇದಿಕೆ ಏರಿ ಬಾಳಪ್ಪನವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದರು. ಜನಸಾಮಾನ್ಯ ಪ್ರೇಕ್ಷಕರಂತೂ ಬಾಳಪ್ಪನವರ ಅಭಿನಯಕ್ಕೆ ಮಾರುಹೋಗಿ ಬಸವಣ್ಣನವರನ್ನೇ ಅವರಲ್ಲಿ ಕಾಣತೊಡಗಿದ್ದರು.  ಬಾಳಪ್ಪನವರ ಸಮಾಜ ಸೇವಾ ಮನೋಭಾವವನ್ನೂ ಇಲ್ಲಿ  ನೆನೆಯಲೇಬೇಕು. ಬಸವೇಶ್ವರ ನಾಟಕದ ಪ್ರದರ್ಶನ ಮುಗಿದ ನಂತರ ಜೋಳಿಗೆ ಹಿಡಿದು ಮುಖ್ಯದ್ವಾರದ ಬಳಿ ನಿಲ್ಲುತ್ತಿದ್ದ ಬಾಳಪ್ಪನವರ ಜೋಳಿಗೆಗೆ ಆ ನಾಟಕದ ಟಿಕೆಟ್ ಕಲೆಕ್ಷನ್‌ಗಿಂತಲೂ ಹೆಚ್ಚು ಹಣ ಸಂಗ್ರಹವಾಗುತ್ತಿತ್ತು.  ಹಾಗೆ ಬಂದ ಹಣವನ್ನು ಸ್ವಂತಕ್ಕೆ ಬಳಸದೇ ಬಾಗೇವಾಡಿಯ ಬಸವೇಶ್ವ ದೇವಸ್ಥಾನಕ್ಕೆ ಸಂದಾಯ ಮಾಡುತ್ತಿದ್ದರು. ಹಳಕಟ್ಟಿಯಂತಹ ವಿದ್ವಾಂಸರು ಆರ್ಥಿಕ ಸಮಸ್ಯೆಯಲ್ಲಿದ್ದಾಗಲೂ ಸಹ ಜೋಳಿಗೆಯ ಸಂಗ್ರಹವನ್ನು ಕೊಟ್ಟು ಸಹಾಯ ಮಾಡಿದ್ದರು. ಕೆರೆಯ ನೀರನು ಕೆರೆಗೆ ಚೆಲ್ಲಿದೆ ಇದರಲ್ಲಿ ನಂದೇನೂ ಇಲ್ಲಾ ಎನ್ನುವ ಸಾರ್ಥಕತೆಯನ್ನು ಬಾಳಪ್ಪನವರು ಅನುಭವಿಸಿದರು. 1965ರಲ್ಲಿ ಈ ನಾಟಕ ಕರ್ನಾಟಕಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ್ದು ಮಹಾರಾಷ್ಟ್ರದಲ್ಲಿ. ಬಸವೇಶ್ವರ ನಾಟಕ ಅದೆಷ್ಟು ಯಶಸ್ವಿಯಾಗಿತ್ತೆಂದರೆ ಮಹಾರಾಷ್ಟ್ರ ಸರಕಾರವೇ ಬೆಚ್ಚಿಬಿದ್ದಿತ್ತು.  ಗಡಿಭಾಗದಲ್ಲಿ ಕನ್ನಡ ಬೆಳೆಸಲು ಈ  ನಾಟಕ ಪ್ರೇರೇಪಿಸುತ್ತದೆ ಎಂದು ದಿಗಿಲುಗೊಂಡ ಮಹಾರಾಷ್ಟ್ರ ಸರಕಾರ ಬಸವೇಶ್ವರ ನಾಟಕ ಪ್ರದರ್ಶನದ ಅನುಮತಿಯನ್ನೇ ತಡೆಹಿಡಿದಿತ್ತು. ಹರಸಾಹಸ ಮಾಡಿ ಲೈಸನ್ಸ್ ಮತ್ತೆ ಪಡೆಯಲಾಯ್ತು. 

ಬಾಳಪ್ಪನವರು ಮೂವತ್ತೇಳು ವರ್ಷಗಳ ಕಾಲ ವೈಭವದಿಂದ ಮುನ್ನೆಡೆಸಿದ ಕಲಾವೈಭವ ನಾಟ್ಯ ಸಂಘವನ್ನು 1983ರಲ್ಲಿ ನಿಲ್ಲಿಸಿ ಕಲಾವಿದರಿಗೆಲ್ಲಾ ಕೈಲಾದಷ್ಟು ಸಹಾಯಮಾಡಿ ಹುಟ್ಟೂರಿಗೆ ಮರಳಿದರು. ಆರು ದಶಕಗಳ ನಿರಂತರ ರಂಗಭೂಮಿ ಕಾಯಕದಿಂದ ನಿವೃತ್ತಿ ಪಡೆದು ಕೃಷಿಕರಾಗಿ ಮುಂದುವರೆದರು. ನಟರಾಗಿ, ಗಾಯಕರಾಗಿ, ಸಂಗೀತಗಾರರಾಗಿ, ನಾಟಕ ಕಂಪನಿಯ ಮಾಲೀಕರಾಗಿ, ರಂಗ ಸಂಘಟಕರಾಗಿ ಬಾಳಪ್ಪನವರು ಮಾಡಿದ ಸಾಧನೆ ಹೇಳುತ್ತಾ ಹೋದರೆ ಮಹಾಪ್ರಬಂಧವೇ ಆದೀತು. ಬಾಳಪ್ಪನವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ (1973) ನೀಡಿ ಸನ್ಮಾನಿಸಿದೆ. ಕರ್ನಾಟಕ ನಾಟಕ ಅಕಾಡೆಮಿಯ (1976) ಪ್ರಶಸ್ತಿಯೂ ದೊರಕಿದೆ. ಕನ್ನಡ ಸಾಹಿತ್ಯ ಪರಿಷತ್ತು (1978) ಗೌರವಿಸಿದೆ. ರಾಜ್ಯ ಸರಕಾರದ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಯೂ (1995) ಬಾಳಪ್ಪನವರನ್ನು ಅರಸಿ ಬಂದಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ (1995) ಯೂ ಸಿಕ್ಕಿದೆ. ಕನ್ನಡ ವಿಶ್ವವಿದ್ಯಾಲಯವು (2005) ನಾಡೋಜ ಪ್ರಶಸ್ತಿ ಕೊಟ್ಟು ಪುರಸ್ಕರಿಸಿದೆ, ಕರ್ನಾಟಕ ವಿಶ್ವವಿದ್ಯಾಲಯವು (2006) ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಸನ್ಮಾನಿಸಿತು. ಬಾಳಪ್ಪನವರ ರಂಗಕಾಯಕಕ್ಕೆ ಎಷ್ಟೆಲ್ಲಾ ಪುರಸ್ಕಾರ ಸನ್ಮಾನಗಳನ್ನು ಕೊಟ್ಟರೂ ಕಡಿಮೆಯೇ ಎನ್ನುವಷ್ಟು ಅವರ ಸಾಧನೆ ಹಿರಿದಾಗಿದೆ. ಮುಂದಿನ ತಲೆಮಾರಿಗೆ ಬಾಳಪ್ಪನವರ ಛಲ, ಪ್ರತಿಭೆ, ಶಿಸ್ತು, ಸಂಯಮ, ವಿನಯವಂತಿಕೆ, ನೈತಿಕತೆ ಹಾಗೂ ರಂಗಸಂಘಟನಾ ಚಾತುರ್ಯಗಳು ಮಾದರಿಯಾಗಿವೆ. 

ಇದೆಲ್ಲವೂ ಅವರ ಸಾರ್ವಜನಿಕ ಬದುಕು ಹಾಗೂ ಸಾಧನೆಯ ಕುರಿತ ಮಾತಾಯಿತು. ಈ ರೀತಿಯ ಸಾಧನೆ ಮಾಡಿದವರೂ ಇದ್ದಾರೆ. ಸಾರ್ವಜನಿಕ ಬದುಕಲ್ಲಿ ಯಶಸ್ವಿಯಾದವರು ಸಂತೃಪ್ತ ಕೌಟುಂಬಿಕ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾದ ಹಲವಾರು ಉದಾಹರಣೆಗಳಿವೆ. ಆದರೆ.. ಬಾಳಪ್ಪನವರು ಕಟ್ಟಿಕೊಂಡ ವ್ಯಯಕ್ತಿಕ ಬದುಕು ವಿಶಿಷ್ಟವಾದದ್ದು. ಬಾಳಪ್ಪನವರು 1930ರಲ್ಲಿ ಸೋದರ ಮಾವನ ಮಗಳು ಮದುವೆಯಾದಾಗ ಅವರಿಗೆ ಕೇವಲ ಹದಿನಾರು ವರ್ಷ ವಯಸ್ಸು. ಅದೊಂದು ಬಾಲ್ಯವಿವಾಹ. ಅವರ ಹೆಂಡತಿ ತುಂಬಾ ಚಿಕ್ಕವಳಾಗಿದ್ದರಿಂದ ತವರು ಮನೆಯಲ್ಲೇ ಇದ್ದಳು. ಆದರೆ ಇವರಿಬ್ಬರೂ ಕೂಡಿ ಸಂಸಾರ ಮಾಡುವುದು ಆ ಕಾಲನಿಗೆ ಇಷ್ಟವರಿಲಿಲ್ಲವೇನೋ.. ಬಾಳಪ್ಪನವರ ಪತ್ನಿ ಚಿಕ್ಕ ವಯಸ್ಸಿನಲ್ಲೇ 1932ರಲ್ಲಿ ತೀರಿಹೋದರು. ಮಡದಿಯ ಅಗಲಿಕೆಯ ದುಃಖವನ್ನು ಮರೆಯಲು ಸಾಕಷ್ಟು ಸಾಹಸಪಟ್ಟರು. ತದನಂತರ ಅವ್ವನ ಒತ್ತಾಯಕ್ಕೆ 1935ರಲ್ಲಿ ಸಾವಿತ್ರಿಯವರನ್ನು ಮದುವೆ ಮಾಡಿಕೊಂಡರು. ಬಾಳಪ್ಪನವರ ಯಶಸ್ಸಿನ ಹಿಂದೆ ಅವ್ವ ಬಾಳಮ್ಮ ಹಾಗೂ ಮಡದಿ ಸಾವಿತ್ರಿಯವರ ಕೊಡುಗೆಯೂ ಬೇಕಾದಷ್ಟಿದೆ. ಮಗ ನಾಟಕ ಕಂಪನಿ ಮಾಡಿ ಎಲ್ಲಿ ದಿವಾಳಿ ಆಗ್ತಾನೋ ಎನ್ನುವ ಆತಂಕದಲ್ಲಿದ್ದ ಬಾಳವ್ವ ಮಗನ ನಾಟಕ ಕಂಪನಿ ಚೆನ್ನಾಗಿ ನಡೆಯುತ್ತಿರುವಾಗಲೆಲ್ಲಾ ಹೋಗಿ ಹಣ ತೆಗೆದುಕೊಂಡು ಬಂದು ಹೊಲ ಕೊಂಡುಕೊಳ್ಳುತ್ತಿದ್ದರು. ಹದಿನಾರೆಕರೆ ಇದ್ದ ಹೊಲದ ಸಂಪತ್ತನ್ನು ಎಂಬತ್ತೆಕರೆಗೆ ಏರಿಸಿದ್ದರ ಹಿಂದೆ ಬಾಳಮ್ಮನವರ ಶ್ರಮ ಅಪಾರವಾಗಿತ್ತು. ಪಾಲುದಾರಿಕೆಯ ನಾಟಕ ಕಂಪನಿ ಮುಳುಗಿ ನಷ್ಟವಾಗಿ ಕೋರ್ಟಲ್ಲಿ ದಾವೆ ಬಿದ್ದು ಇರುವ ಆಸ್ತಿ ಹರಾಜಿಗೆ ಬಂದಿದ್ದಾಗ ತಮ್ಮ ತಂದೆಯವರಿಂದ ಹಣ ಕೊಡಿಸಿ ಬಾಳಪ್ಪನವರನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ್ದೇ ಅವರ ಮಡದಿ ಸಾವಿತ್ರಿಯವರು. ಸಾವಿತ್ರಿ ಹಾಗೂ ಬಾಳಪ್ಪ ದಂಪತಿಗಳಿಗೆ ಒಟ್ಟು ಏಳು ಜನ ಮಕ್ಕಳು. ಅದರಲ್ಲಿ ನಾಲ್ಕು ಗಂಡು ಹಾಗೂ ಮೂರು ಹೆಣ್ಣು. 1992ರಲ್ಲಿ ಸಾವಿತ್ರಿಯವರು ತೀರಿಕೊಂಡರು. 

1947ರಲ್ಲಿ ಕಲಾವೈಭವ ನಾಟ್ಯ ಸಂಘ ಕಟ್ಟಿದಾಗ ಆ ತಂಡದ ಮ್ಯಾನೇಜರ್ ವಿರುಪಾಕ್ಷರವರ ಮಗಳು ಲಕ್ಷೀದೇವಿಯವರನ್ನು 1951ರಲ್ಲಿ ಏಣಗಿ ಬಾಳಪ್ಪನವರು ಮದುವೆಯಾದರು. ಆಗಲೇ ತಾವು ನಿರ್ವಹಿಸುತ್ತಿದ್ದ ಸ್ತ್ರೀಪಾತ್ರಗಳಿಂದ ಮುಕ್ತಿ ಹೊಂದಿ ಆ ಹೊಣೆಗಾರಿಕೆಯನ್ನು ಲಕ್ಷ್ಮೀಯವರಿಗೆ ವಹಿಸಿದರು. ಲಕ್ಷ್ಮೀದೇವಿಯವರಂತೆಯೇ ಅವರ ತಂದೆ ವಿರುಪಾಕ್ಷಪ್ಪಾ ಬಳ್ಳಾರಿ ಹಾಗೂ ತಮ್ಮ ಕೃಷ್ಣಚಂದ್ರ ಇಬ್ಬರೂ ಕಲಾವೈಭವ ನಾಟ್ಯ ಸಂಘದ ಅಭ್ಯುದಯಕ್ಕಾಗಿ ಅಹೋರಾತ್ರಿ ಶ್ರಮಿಸಿದರು. ಇವರೆಲ್ಲರ ಪರಿಶ್ರಮದಿಂದಲೇ ಆ ಕಂಪನಿ ನಾಲ್ಕು ದಶಕಗಳ ಕಾಲ ತಾಳಿ ಬಾಳಿ ಬೆಳಗಿತು. ಅದಕ್ಕೆ ಬಾಳಪ್ಪನಂತವರ ಸಮರ್ಥ ನಾಯಕತ್ವವೂ ದೊರಕಿತ್ತು.  ಲಕ್ಷ್ಮೀದೇವಿಯವರಿಗೆ ಏಣಗಿ ನಟರಾಜ ಮತ್ತು ಭಾಗ್ಯಶ್ರೀ ಇಬ್ಬರು ಮಕ್ಕಳು. ಸದಾ ಏರಿಳಿತದಿಂದ ಕೂಡಿದ, ಲಾಭನಷ್ಟದ ನಾಟಕ ಕಂಪನಿಯನ್ನೂ ಕಟ್ಟಿಕೊಂಡು, ಎರಡೂ ಸಂಸಾರಗಳನ್ನೂ ಕಾಪಾಡಿಕೊಂಡು, ಒಟ್ಟು ಒಂಬತ್ತು ಮಕ್ಕಳನ್ನು ಓದಿಸಿ ಬೆಳೆಸಿ ಬದುಕಿನ ದಡಕ್ಕೆ ಸೇರಿಸಿದ ಬಾಳಪ್ಪನವರ ಕೌಟುಂಬಿಕ ನಿರ್ವಹನಾ ಜವಾಬ್ದಾರಿ ಕೂಡಾ ವಿಸ್ಮಯಕಾರಿಯಾಗಿದೆ. ಹಿರಿಯ ಮಗ ಬಸವರಾಜ್ ವೈದ್ಯ ವೃತ್ತಿಯಲ್ಲಿದ್ದರೆ, ಎರಡನೆಯ ಮಗ ಸುಭಾಷ್ ಏಣಗಿ ಇಂಜನೀಯರ್ ವೃತ್ತಿಯಲ್ಲಿದ್ದಾರೆ. ಮೂರನೆಯ ಮಗ ಮೋಹನ್ ವಕೀಲ್ ವೃತ್ತಿಯನ್ನು ಕೈಗೊಂಡಿದ್ದರೆ, ನಾಲ್ಕನೆಯವ ಅರವಿಂದ ಕೃಷಿ ವಿಜ್ಞಾನದ ಪದವೀಧರ. ಎಲ್ಲ ಮಕ್ಕಳೂ ಹೀಗೆ ನೌಕರಿ ಹಿಡಿದು ಪಟ್ಟಣ ಸೇರಿದರೆ ಊರಲ್ಲಿರುವ ಇರುವ ನೂರಾರು ಎಕರೆ ಜಮೀನನ್ನು ನೋಡಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಬಂದಾಗ ಅರವಿಂದರವರ ಮನವೊಲಿಸಿ ಗ್ರಾಮದಲ್ಲೇ ಇರಿಸಿ ಅನ್ನದಾತನನ್ನಾಗಿಸಿದ್ದು ಬಾಳಪ್ಪನವರ ಯೋಜನಾಬದ್ದ ರೀತಿಗೆ ಸಾಕ್ಷಿಯಾಗಿದೆ. ತಮ್ಮ ಕೊನೆಯ ಮಗನನ್ನು ಮಾತ್ರ ರಂಗಭೂಮಿಯಲ್ಲೇ ತೊಡಗಿಕೊಂಡು ಕಲಾಸೇವೆ ಮಾಡಲು ಪ್ರೇರೇಪಿಸಿದರು. ಹೆಗ್ಗೋಡಿನ ನೀನಾಸಮ್‌ಗೆ ಕಳುಹಿಸಿ ಆಧುನಿಕ ರಂಗಶಿಕ್ಷಣವನ್ನು ಕೊಡಿಸಿದರು. ಏಣಗಿ ನಟರಾಜರವರು ಅಭಿನಯದಲ್ಲಿ ಅಪ್ಪನನ್ನೂ ಮೀರಿಸುವಂತೆ ನಟಿಸಿ ಕನ್ನಡ ರಂಗಭೂಮಿಯ ಪ್ರತಿಭಾವಂತ ಕಲಾವಿದನಾಗಿ ಗುರುತಿಸಿಕೊಂಡರು. ಬಹು ಬೇಗ ಯಶಸ್ಸಿನ ಎತ್ತರಕ್ಕೆ ಏರಿ ಅಷ್ಟೇ ಬೇಗ ಅವಸಾನವನ್ನೂ ಕಂಡು ಅಕಾಲ ಮೃತ್ಯುವಿಗೆ ಈಡಾದ ನಟರಾಜರ ನಟನೆಯನ್ನು ನೋಡಿದವರು ಮರೆಯಲು ಸಾಧ್ಯವೇ ಇಲ್ಲ. ಹೀಗೆ ಪ್ರತಿಯೊಬ್ಬ ಗಂಡು ಮಕ್ಕಳನ್ನೂ ಒಂದೊಂದು ವೃತ್ತಿಯಲ್ಲಿ ಮುಂದುವರೆಸುವಂತೆ ಮಾಡಿದ ಬಾಳಪ್ಪನವರಿಗೆ ಇಪ್ಪತ್ನಾಲ್ಕು ಮೊಮ್ಮಕ್ಕಳು.
   
ಏಣಗಿ ಬಾಳಪ್ಪನವರು ಎಲ್ಲರಿಗೂ ಬೇಕಾಗಿದ್ದು ಅವರ ಸರಳವಾದ ಜೀವನ ಮತ್ತು ಅಪಾರವಾದ ವಿನಯವಂತಿಕೆಯಿಂದಾಗಿ. ಒಮ್ಮೆ ಬಸವಣ್ಣನ ಪಾತ್ರ ಮಾಡಿದ ನಂತರ ಬೆಳ್ಳಂಬೆಳಿಗ್ಗೆ ಬೀದಿ ಬದಿಯ ಅಂಗಡಿಯಲ್ಲಿ ಚಾ ಕುಡಿಯುತ್ತಿದ್ದ ಬಾಳಪ್ಪನವರನ್ನು ನೋಡಿದವರು ಅಲ್ಲಿ  ನೋಡ್ರೋ ಬಸವಣ್ಣ ಹೋಟಲಲ್ಲಿ ಚಾ ಕುಡೀತಿದ್ದಾನೆ ಅಂದರಂತೆ. ಅವತ್ತಿನಿಂದಾ ಬಾಳಪ್ಪನವರು ಟೀ ಕಾಫಿ ಕುಡಿಯುವುದನ್ನು ನಿಲ್ಲಿಸಿದ್ದಷ್ಟೇ ಅಲ್ಲಾ ಹೋಟೇಲಿಗೆ ಹೋಗುವುದನ್ನೇ ಬಿಟ್ಟರಂತೆ. ದೀರ್ಘಾಯುಶ್ಯದ ಗುಟ್ಟೇನು ಅಜ್ಜಾ ? ಎಂದು ಅವರನ್ನು ಕೇಳಿದರೆ ಮಗುವಿನಂತೆ ನಕ್ಕು ಬಿಸಿ ರೊಟ್ಟಿ, ಹಾಲು ಹೈನಾ ಮತ್ತು ಸಾಕಷ್ಟು ತಪ್ಪಲ ಪಲ್ಲೆ.. ಇಷ್ಟನ್ನೇ ಬದುಕಿನಾದ್ಯಂತ ತಿನ್ನುತ್ತಾ ಬಂದಿದ್ದರಿಂದಾ ಆಯಸ್ಸು ಗಟ್ಟಿಯಾಗಿದೆ ಎಂದು ಹೇಳುತ್ತಿದ್ದರು. ಎಲ್ಲಾ ಅನಗತ್ಯ ಚಟಗಳಿಂದ ದೂರಾಗಿ, ತಿನ್ನುವ ಆಹಾರದಲಿ ರೂಢಿಸಿಕೊಂಡ ಶಿಸ್ತು ಬಾಳಪ್ಪನವರನ್ನು ದೀರ್ಘಾಯುಶಿಯನ್ನಾಗಿಸಿದ್ದರೆ, ಅವರಲ್ಲಿರುವ ವಿನಯವಂತಿಕೆ ಅವರನ್ನು ಗೌರವಾನ್ವಿತರನ್ನಾಗಿಸಿತ್ತು. ಪ್ರತಿಯೊಬ್ಬ ಸಹಜೀವಿಯೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ನಡೆದುಕೊಂಡು ತಮ್ಮ ಉತ್ತಮ ನಡೆ ನುಡಿಗಳಿಂದಲೇ ಎಲ್ಲರನ್ನೂ ಪ್ರಭಾವಿಸಿದರು.

ಎಂದೂ ದ್ವಂದ್ವಾರ್ಥ ಸಂಭಾಷಣೆ ಹಾಗೂ ಅಶ್ಲೀಲ ದೃಶ್ಯಗಳ ನಾಟಕಗಳನ್ನು ಮಾಡಿಸದೇ ನೀತಿ, ನಿಯತ್ತನ್ನು ಹೇಳುವಂತಹ, ಸಾಮಾಜಿಕ ಪಿಡುಗುಗಳನ್ನು  ವಿರೋಧಿಸುವಂತಹ, ಭಾಷೆ ಸ್ವಾತಂತ್ರ್ಯವನ್ನು ಎತ್ತಿ  ಹಿಡಿಯುವಂತಹ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸುವ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು  ಕಲಾ ಮಾಧ್ಯಮದ ಮೂಲಕ ಸಾರ್ಥಕವಾಗಿ ನಿರ್ವಹಿಸಿದರು. ಬಾಳಪ್ಪನವರು ನಡೆ ನುಡಿಗಳನ್ನು ಸಿದ್ದಾಂತವನ್ನಾಗಿಸಿ ಬಸವಣ್ಣನವರು ತೋರಿದ ಮಾರ್ಗದಲ್ಲಿ ನಿಷ್ಟೆಯಿಂದ ನಡೆದರು. ನಿಜವಾದ ಲಿಂಗಾಯತರಾದರು. ಮಾನವೀಯತೆಯನ್ನು ಬದುಕಿನ ದ್ಯೇಯವಾಗಿಸಿಕೊಂಡು ನಿಜವಾದ ಅರ್ಥದಲ್ಲಿ ಮನುಷ್ಯರಾದರು. ಮನುಷ್ಯರೆಂದುಕೊಳ್ಳುವವರಿಗೆಲ್ಲಾ ಮಾದರಿಯಾದರು. ಸಾಮಾಜಿಕ ಜೀವನ ಹಾಗೂ ವ್ಯೆಯಕ್ತಿಕ ಬದುಕಿನಲ್ಲಿ ಗೆದ್ದರು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸತತ ಯತ್ನದಿಂದ ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಹಾಕುತ್ತಾ ಸಾಧನೆಯನ್ನು ಮಾಡಿದರು.

ಹೋಗಿ ಬಾ ಬಾಳಪ್ಪಜ್ಜಾ.. ನೀ ನಡೆದ ಹಾದಿ ನಮಗೆ ದಾರಿದೀಪವಾಗಿರಲಿ. ನೀ ಹಚ್ಚಿ  ಹೋದ ರಂಗ ದೀವಿಗೆ ರಂಗಭೂಮಿಗೆ ಬೆಳಕಾಗಲಿ. ನೀ ಬಿತ್ತಿ ಬೆಳೆದ ರಂಗಕಲೆಯೆಂಬ ಆಲದ ಮರ ಮುಂದಿನ ತಲೆಮಾರಿನ ಕಲಾವಿದರಿಗೆ ನೆರಳಾಗಲಿ. ನಿನ್ನ ಆದರ್ಶಮಯ ಬದುಕು ಮತ್ತು ಸಾಧನೆ ಯುವ ಸಾಧಕರಿಗೆ ಪ್ರೇರಣೆಯಾಗಲಿ. ಶರಣು ಶರಣಾರ್ಥಿ ಶಿವಶರಣ  ಬಾಳಪ್ಪನವರಿಗೆ..  ಶರಣು ಶರಣಾರ್ಥಿ ರಂಗಜಂಗಮ  ಬಾಳಪ್ಪಜ್ಜನವರಿಗೆ.. 

-ಶಶಿಕಾಂತ ಯಡಹಳ್ಳಿ


 




ಬುಧವಾರ, ಆಗಸ್ಟ್ 16, 2017

ವಿಕಲಾಂಗ ಸಾಂಸ್ಕೃತಿಕ ನೀತಿ! : ಆಳುವವರಿಗ್ಯಾಕಿಂತಾ ಭೀತಿ?



ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗುವಂತಹ ಸಾಂಸ್ಕೃತಿಕ ನೀತಿಯೊಂದು ಈ ನಮ್ಮ ಕರುನಾಡಿಗೆ ಇರಬೇಕೆಂಬುದು ದಶಕಗಳ ನಿರೀಕ್ಷೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಂತಹುದೊಂದು ನೀತಿಯ ಜಾರಿಗೆ ಚಾಲನೆ ದೊರಕಿತು. ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಕರ್ನಾಟಕಕ್ಕೊಂದು ಸಾಂಸ್ಕೃತಿಕ ನೀತಿಯ ಕರಡನ್ನು ಸಿದ್ದಪಡಿಸಲು ಆದೇಶಿಸಲಾಯಿತು. ಆ ಸಮಿತಿ ಎರಡು ವರ್ಷಗಳ ಕಾಲ ಸರಣಿ ಸಭೆಗಳನ್ನು ಮಾಡಿ, ನಾಡಿನಾದ್ಯಂತಾ ಸುತ್ತಿ, ತಮಗೆ ಸರಿಕಂಡವರ ಅಭಿಪ್ರಾಯಗಳನ್ನು ಪಡೆದು, ಒಂದಿಷ್ಟು ಅಧ್ಯಯನವನ್ನೂ ಮಾಡಿ ಅಂತೂ ಇಂತೂ ಸಾಂಸ್ಕೃತಿಕ ನೀತಿಯ ಕರಡನ್ನು ಸಿದ್ದಪಡಿಸಿ ಅದರಲ್ಲಿ 44 ಶಿಪಾರಸ್ಸುಗಳನ್ನು ಸರಕಾರಕ್ಕೆ ಸಲ್ಲಿಸಿತ್ತು.  

ಈ ಕರಡಿನಲ್ಲಿ ರಾಜಕೀಯ ಹಿತಾಸಕ್ತಿಗೆ ಮಾರಕವಾದ ಅಂಶಗಳು ರಾಜಕಾರಣಿಗಳಿಗೆ ಅಸಹನೆ ತಂದವು. ಆಳುವ ವರ್ಗಗಳಲ್ಲಿ ಅಪಸ್ವರಗಳು ಕೇಳಿ ಬಂದವು. ಹೀಗಾಗಿ ಸಾಂಸ್ಕೃತಿಕ ನೀತಿಯ ಕರಡನ್ನು ಪರಿಷ್ಕರಿಸಲು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಮತ್ತೊಂದು ಸಚಿವ ಸಂಪುಟ ಉಪಸಮಿತಿಯನ್ನು ನಿಯಮಿಸಲಾಯಿತು. ಈ ಸಮಿತಿ ಮತ್ತೆ ಎಲ್ಲವನ್ನೂ ಪರಿಶೀಲಿಸಿ, ರಾಜಕೀಯ ಹಿತಾಸಕ್ತಿಗೆ ಪೂರಕವಲ್ಲದ ಪ್ರಮುಖ ಅಂಶಗಳನ್ನು ತೆಗೆದು ಹಾಕಿ ನಿಸ್ಸಾರವಾದ ಕರಡನ್ನು ಸಂಪುಟದ ಅನುಮೋದನೆಗೆ ಸಲ್ಲಿಸಿತು. 2017, ಆಗಸ್ಟ್ 7ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ (ಶಿಷ್ಟಾಚಾರ ರಹಿತ) ಸಾಂಸ್ಕೃತಿಕ ಕರುಡು ನೀತಿಯನ್ನು ಸರಕಾರ ಅಂಗೀಕರಿಸಿದೆ ಎಂದು ಘೋಷಿಸಲಾಯಿತು. ಇದರಿಂದ ಆಳುವ ವರ್ಗಗಳಿಗೆ ಸಂತಸವಾದರೆ ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನ ಹೆಚ್ಚಾಯಿತು. ಯಾವ ಉದ್ದೇಶಗಳ ಈಡೇರಿಕೆಗೆ ಈ ಕರಡು ನಿರ್ಮಾಣವಾಗಿತ್ತೋ ಆ ಮೂಲಭೂತ ಉದ್ದೇಶಗಳಿಗೆ ತಿಲಾಂಜಲಿಯನ್ನಿಡಲಾಗಿತ್ತು.  

ಸಾಂಸ್ಕೃತಿಕ ವಲಯವನ್ನು ಅಕಾಡೆಮಿಕ್ ಆಗಿ ನಿಯಂತ್ರಿಸುವುದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅದರ ಆಶ್ರಯದಲ್ಲಿರುವ ಎಲ್ಲಾ ಸರಕಾರಿ ಅಕಾಡೆಮಿಗಳು ಹಾಗೂ ಪ್ರಾಧಿಕಾರಗೂ ಮತ್ತು ಪ್ರತಿಷ್ಠಾನಗಳು. ಇವುಗಳನ್ನು ಸ್ವಾಯತ್ತ ಸಂಸ್ಥೆಗಳು ಎಂದು ಹೇಳಲಾಗುತ್ತಾದರೂ ಇವುಗಳ ನಿಯಂತ್ರಣ ಮಾತ್ರ ಆಳುವವರ ಕೈಯಲ್ಲಿ ಇರುವಂತೆ ಮೊದಲಿನಿಂದಲೂ ನೋಡಿಕೊಳ್ಳಲಾಗುತ್ತಿದೆ. ಈಗ ಮಂತ್ರಿಮಾನ್ಯರ ಕಪಿಮುಷ್ಠಿಯಿಂದ ಅಕಾಡೆಮಿಗಳನ್ನು ಸಂಪೂರ್ಣವಾಗಿ ವಿಮೋಚನೆಗೊಳಿಸಿದರೆ ಅವರೇಕೆ ಸುಮ್ಮನಿರುತ್ತಾರೆ?. ನಾಡಿನ ಎಲ್ಲಾ ಆಗು ಹೋಗುಗಳೂ ತಮ್ಮ ನಿಯಂತ್ರಣದಲ್ಲೇ ಇರಬೇಕೆಂದು ಬಯಸುವ ಅಧಿಕಾರಸ್ತರು ಅದು ಹೇಗೆ ತಾನೇ ತಮ್ಮ ಅಧಿಕಾರದ ಹಿಡಿತವನ್ನು ಸುಲಭದಲ್ಲಿ ಸಡಿಲಿಸುತ್ತಾರೆ?.
ಮೊದಲನೆಯದಾಗಿ ಸಂಸ್ಕೃತಿ ಇಲಾಖೆ ಹಾಗೂ ಅದರ ಅಂಗಸಂಸ್ಥೆಗಳಾದ ಅಕಾಡೆಮಿಗಳು ಹಾಗೂ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಜನಪ್ರತಿನಿಧಿಗಳನ್ನು ಖಡ್ಡಾಯವಾಗಿ ಆಹ್ವಾನಿಸಲೇಬೇಕು ಎನ್ನುವುದು ಹಿಂದಿನಿಂದ ಬಂದ ಸಾಂಪ್ರದಾಯಿಕ ಶಿಷ್ಟಾಚಾರ. ಇದಕ್ಕೆ ಇಂಗ್ಲೀಷಿನಲ್ಲಿ ಪ್ರೋಟೋಕಾಲ್ ಎನ್ನುತ್ತಾರೆ. ಅಂದರೆ ಈ ಮಹನೀಯರು ಕಾರ್ಯಕ್ರಮಗಳಿಗೆ ಬರಲಿ ಬಿಡಲಿ, ಅವರು ಕಾರ್ಯಕ್ರಮದ ದಿನ ಊರಲ್ಲಿ ಇರಲಿ ಬಿಡಲಿ, ಅವರ ಹೆಸರುಗಳನ್ನು ಮಾತ್ರ ಆಮಂತ್ರಣ ಪತ್ರಿಕೆಯಲ್ಲಿ ಖಡ್ಡಾಂiiವಾಗಿ ಮುದ್ರಿಸಬೇಕು ಎನ್ನುವ ವಿಕ್ಷಿಪ್ತ ಪ್ರೊಟೋಕಾಲ್ ಜಾರಿಯಲ್ಲಿದೆ. ಸಾಂಸ್ಕೃತಿಕ ನೀತಿಯಲ್ಲಿ ಈ ಆಭಾಸಕಾರಿಯಾದ ಪ್ರೋಟೋಕಾಲ್ ನೀತಿಯನ್ನು ತೆಗೆದುಹಾಕಿ ಯಾರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಹಾಗೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕು ಎನ್ನುವುದನ್ನು ಆಯಾ ಇಲಾಖೆಗಳ ಮುಖ್ಯಸ್ತರ ವಿವೇಚನೆಗೆ ಬಿಡಲಾಗಿತ್ತು. ಆದರೆ.. ಐಡೆಂಟಿಟಿ ಕ್ರೈಸಿಸ್ ರೋಗದಿಂದ ತೀವ್ರವಾಗಿ ನರಳುವ ಜನಪ್ರತಿನಿಧಿಗಳು ಇದಕ್ಕೆ ಒಪ್ಪುತ್ತಾರೆಯೇ?

ಸರಕಾರ ಕೊಡುವ ಅನುದಾನದಲ್ಲಿ ನಡೆಯುವ ಇಲಾಖೆ ಹಾಗೂ ಅಕಾಡೆಮಿಗಳ ಕಾರ್ಯಕ್ರಮಗಳಿಗೆ ಖಡ್ಡಾಯವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಹಾಗೂ ಅವರ ಹೆಸರುಗಳನ್ನು ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಿಸಲೇಬೇಕು ಮತ್ತು ಎಲ್ಲಾ ಸರಕಾರಿ ಅನುದಾನಿತ ಸಂಸ್ಥೆಗಳು ಈ ಶಿಷ್ಟಾಚಾರವನ್ನು ಖಡ್ಡಾಯವಾಗಿ ಪಾಲಿಸಲೇಬೇಕು ಎಂಬುದು ಮಂತ್ರಿ ಮಾನ್ಯರ ಬಯಕೆಯಾಗಿದೆ. ಹಾಗೂ ಇದೇ ಇಲ್ಲಿವರೆಗೂ ನಡೆದುಕೊಂಡು ಬಂದಿದೆ. ಇನ್ನು ಮುಂದೆ ಕೂಡಾ ಪ್ರೊಟೋಕಾಲ್ ಅನ್ನುವುದು ನಡೆಯುತ್ತಲೇ ಜಾರಿಯಲ್ಲಿರುತ್ತದೆ. ಯಾರಾದರೂ ತಪ್ಪಿದರೆ ಅವರನ್ನು ಕರೆದು ಛೀಮಾರಿ ಹಾಕಲಾಗುತ್ತದೆ. ಹಕ್ಕುಚ್ಯುತಿ ಅಸ್ತ್ರವನ್ನೂ ಬಳಸಬಹುದಾದ ಅವಕಾಶವೂ ಆಳುವವರ ಬತ್ತಳಿಕೆಯಲ್ಲಿರುತ್ತದೆ. 

ಆದರೆ.. ಬೆಲ್ಲದಂಗಡಿಯಲ್ಲಿ ಕಾಗೆಗಳಿಗೇನು ಕೆಲಸ ಎನ್ನುವ ಹಾಗೆ.. ಕಲೆ ಸಾಹಿತ್ಯ ಕ್ಷೇತ್ರಗಳ ಕಾರ್ಯಕ್ರಮಗಳಿಗೂ ರಾಜಕೀಯ ಕ್ಷೇತ್ರಗಳಿಗೂ ಎತ್ತನಿಂದೆತ್ತ ಸಂಬಂಧ? ಅಷ್ಟಕ್ಕೂ ಪ್ರೋಟೋಕಾಲ್ ಪ್ರಕಾರ ಈ ಜನಪ್ರತಿನಿಧಿಗಳನ್ನು ಕರೆದು ಕೂಡಿಸಿದರೂ ಅವರು ಅಲ್ಲಿ ಬಂದು ಕಲೆ ಸಾಹಿತ್ಯದ ಬಗ್ಗೆ ಮಾತಾಡುವ ಬದಲು ತಮ್ಮ ಸಾಧನೆ ವೇದನೆಗಳ ಕುರಿತೇ ಮಾತಾಡಿ ಇಡೀ ಸಮಾರಂಭವನ್ನು ತಮ್ಮ  ರಾಜಕೀಯ ಹಿತಾಸಕ್ತಿಗಾಗಿಯೇ ಬಳಸಿಕೊಳ್ಳುವುದು ಬಹುತೇಕ ಸಲ ಸಾಬೀತಾಗಿದೆ. ಯಾವುದೇ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲೇ ನಡೆದರೂ ಆಯಾ ಕ್ಷೇತ್ರವ್ಯಾಪ್ತಿಯ ಸಚಿವರು, ಶಾಸಕರು, ವಿರೋಧ ಪಕ್ಷದ ನಾಯಕರುಗಳು, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳನ್ನೂ ಖಡ್ಡಾಯವಾಗಿ ಆಹ್ವಾನಿಸಬೇಕು, ಅವರು ಬರದಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರುಗಳನ್ನು ಮುದ್ರಿಸಬೇಕು ಎನ್ನುವ ಶಿಷ್ಟಾಚಾರದ ನಿಯಮ ನಿಜಕ್ಕೂ ಅಸಹನೀಯ.

ಹೋಗಲಿ ಈ ಆಳುವವರ ಅದಮ್ಯ ಬಯಕೆಯಂತೆ ಸರಕಾರಿ ಅನುದಾನಿತ ಸಂಸ್ಥೆಗಳು ಶಿಷ್ಟಾಚಾರವನ್ನು ಪಾಲಿಸಲು ಬದ್ದವಾಗಲಿ. ಆದರೆ ಒಪ್ಪಿಕೊಂಡ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಖಡ್ಡಾಯವಾಗಿ ಒಪ್ಪಿತ ಸಮಯಕ್ಕೆ ಸರಿಯಾಗಿ ಬರುವ ಶಿಷ್ಟಾಚಾರವನ್ನು ಪಾಲಿಸುತ್ತಾರಾ? ಅದೂ ಇಲ್ಲಾ. ಎಷ್ಟೋ ಜನಪ್ರತಿನಿಧಿಗಳು ಬರುವುದೇ ಇಲ್ಲಾ. ಕೆಲವರು ಬಂದರೂ ಸಮಯಕ್ಕೆ ಸರಿಯಾಗಿ ಬಂದ ದಾಖಲೆಗಳೇ ಇಲ್ಲಾ. ಜನಪ್ರತಿನಿಧಿಗಳು ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದವರು ಕಾಯುತ್ತಲೇ ಇರಬೇಕು. ಬಂದ ಪ್ರೇಕ್ಷಕರು ಬೇಸರದಿಂದ ನಿಟ್ಟುಸಿರು ಬಿಡುತ್ತಲೇ ಇರಬೇಕು. ಈ ಜನಪ್ರತಿನಿಧಿಗಳು ಬಿಡುವಿದ್ದರೆ ತಮಗನುಕೂಲಕರವಾದ ಸಮಯಕ್ಕೆ ಬಂದು ರಾಜಕೀಯ ಭಾಷಣ ಮಾಡಿ ಹೋಗಬೇಕು. ಇದೆಲ್ಲಾ ಬೇಕೆ? ಕೊಟ್ಟ ಮಾತಿಗೆ ತಕ್ಕಂತೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭಕ್ಕೆ ಘನತೆಯನ್ನು ತಂದುಕೊಡಲು ಬಹುತೇಕ ಜನಪ್ರತಿನಿಧಿಗಳಿಗೆ ಸಾಧ್ಯವೇ ಇಲ್ಲವೆಂದ ಮೇಲೆ ಈ ಖಡ್ಡಾಯ ಶಿಷ್ಟಾಚಾರವಾದರೂ ಯಾಕೆ?

ಇದೂ ಸಹ ಓಟ್ ರಾಜಕಾರಣದ ತಂತ್ರಗಾರಿಕೆಯೇ ಆಗಿದೆ. ಸಾಂಸ್ಕತಿಕ ಕಾರ್ಯಕ್ರಮಗಳನ್ನೂ ಸಹ ತಮ್ಮ ರಾಜಕಾರಣದ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವ ಹುನ್ನಾರದ ಭಾಗವೇ ಆಗಿದೆ. ಅದರ ಜೊತೆಗೆ ವೈಚಾರಿಕವಾಗಿ ಜಾಗೃತಗೊಂಡಿರುವ ಈ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಲಯದವರು ಎಲ್ಲಿ ತಮ್ಮ ಹಿತಾಸಕ್ತಿಗೆ ವಿರುದ್ದವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೋ, ಎಲ್ಲಿ ಜನರನ್ನು ತಮ್ಮ ವಿರುದ್ಧ ಎತ್ತಿಕಟ್ಟುತ್ತಾರೋ, ಎಲ್ಲಿ ತಮ್ಮ ನ್ಯೂನ್ಯತೆಗಳನ್ನು ಜನರ ಮುಂದೆ ತೆರೆದಿಡುತ್ತಾರೋ.. ಎನ್ನುವ ಭಯವೂ ಆಳುವವರಲ್ಲಿ ಆಳವಾಗಿದೆ. ಸರಕಾರ ಅನುದಾನ ಕೊಡುತ್ತದೆಯಾದ್ದರಿಂದ ಜನಪ್ರತಿನಿಧಿಗಳು ಖಡ್ಡಾಯವಾಗಿ ಆಹ್ವಾನಿತರಾಗಲೇಬೇಕು ಎನ್ನುವುದು ಆಳುವವರ ಆದೇಶವಾಗಿದೆ. ಆದರೆ.. ಸರಕಾರ ಕೊಡುವ ಅನುದಾನವನ್ನು ಈ ಯಾವ ಜನಪ್ರತಿನಿಧಿಗಳೂ ಸಹ ತಮ್ಮ ಜೇಬಿನಿಂದ ಕೊಡುವುದಿಲ್ಲಾ. ಆ ಎಲ್ಲಾ ಅನುದಾನದ ಹಣವನ್ನೂ ಸಹ ಜನಸಾಮಾನ್ಯರು ತೆರಿಗೆ ರೂಪದಲ್ಲಿ ಕೊಟ್ಟಿರುತ್ತಾರೆ. ಜನತೆಯ ಹಣವನ್ನು ಜನರ ಕಲೆ ಭಾಷೆ ಸಂಸ್ಕೃತಿ ಉಳಿಸಲು ಸರಕಾರ ಕೊಟ್ಟಿರುತ್ತದೆ. ಇದರ ನಡುವೆ ಈ ಜನಪ್ರತಿನಿಧಿಗಳು ಎನ್ನುವವರ ಸಾಂಸ್ಕೃತಿಕ ಯಜಮಾನಿಕೆ ಯಾಕೆ? ಜನರ ಹಣವನ್ನೂ ಜನತೆಯ ಹಿತಾಸಕ್ತಿಗಾಗಿ ಖರ್ಚುಮಾಡುವ ಮ್ಯಾನೇಜರ್ ಆಗಿ ಮಾತ್ರ ಈ ಜನಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಿರುತ್ತಾರೆ. ಆದರೆ ಈ ಮ್ಯಾನೇಜರುಗಳೇ ಯಜಮಾನರುಗಳು ಎಂದುಕೊಂಡು ಎಲ್ಲಾ ಕಡೆಗೂ ಮೂಗು ತೂರಿಸುವ ಕೆಲಸ ಮಾಡಿದರೆ ಅದು ನಿಜಕ್ಕೂ ಖಂಡನೀಯ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಪಚಾರವೆಸಗಿದಂತೆ.

ಹೇಗಾದರೂ ಮಾಡಿ ಜನಪ್ರತಿನಿಧಿಗಳ ಸಾಂಸ್ಕೃತಿಕ ಯಜಮಾನಿಕೆಯನ್ನು ಕಡಿಮೆಗೊಳಿಸಿ ಇಲಾಖೆ ಹಾಗೂ ಅಕಾಡೆಮಿಗಳನ್ನು ಇನ್ನಷ್ಟು ಸ್ವಾಯತ್ತಗೊಳಿಸಬೇಕೆಂಬ ಆಶಯದಿಂದ ಬರಗೂರರ ನೇತೃತ್ವದ ಸಮಿತಿಯು ಸಾಂಸ್ಕೃತಿಕ ನೀತಿಯಲ್ಲಿ ಪ್ರೋಟೋಕಾಲ್ ಪದ್ದತಿಯನ್ನು ತೆಗೆದು ಹಾಕಲಾಗಿತ್ತು. ಆದರೆ ಈ ಆಳುವ ವರ್ಗದವರು ಈ ಅಂಶವನ್ನು ಶತಾಯ ಗತಾಯ ವಿರೋಧಿಸಿ, ಮುಖ್ಯಮಂತ್ರಿಗಳ ಮೇಲೆ ಅಸಾಧ್ಯ ಒತ್ತಡ ತಂದು, ಸಾಂಸ್ಕೃತಿಕ ನೀತಿಯ ಕರಡನ್ನೇ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಪರಿಷ್ಕರಿಸುವಂತೆ ಆಗ್ರಹಿಸಿ ಅನಗತ್ಯವಾಗಿದ್ದ ಶಿಷ್ಟಾಚಾರದ ಪದ್ದತಿಯನ್ನು ಮತ್ತೆ ಮುಂದುವರಿಸುವಂತೆ ನೋಡಿಕೊಂಡರು. ಸಶಕ್ತವಾಗಿದ್ದ ಸಾಂಸ್ಕೃತಿಕ ನೀತಿಯನ್ನು ವಿಕಲಾಂಗಗೊಳಿಸಿದರು.

ಇಷ್ಟೇ ಅಲ್ಲಾ.. ಈ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರುಗಳ ಆಯ್ಕೆಯನ್ನು ರಾಜಕೀಯದವರ ಬದಲಾಗಿ ತಜ್ಞ  ಶೋಧನಾ ಸಮಿತಿಯೇ ನಿರ್ಣಯಿಸಬೇಕು ಎನ್ನವ ಶಿಪಾರಸ್ಸನ್ನೂ ಕೂಡಾ ಸಾಂಸ್ಕೃತಿಕ ನೀತಿಯಲ್ಲಿ ಮಾಡಲಾಗಿದೆ. ಇದೂ ಸಹ ಆಳುವ ಪ್ರಭುಗಳಿಗೆ ನುಂಗಲಾರದ ತುತ್ತಾಗಿ ಅಪತ್ಯವಾಗಿದೆ. ಶೋಧನಾ ಸಮಿತಿಗೆ ಒಬ್ಬ ಅಧ್ಯಕ್ಷರು ಹಾಗೂ ಕನಿಷ್ಠ ಮೂವರು, ಗರಿಷ್ಠ ಐವರು ಪರಿಣತ ಸದಸ್ಯರಿರಬೇಕು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಶೋಧನಾ ಸಮಿತಿ ಸದಸ್ಯರಾಗಿರಬೇಕು. ಸಾಮಾಜಿಕ, ಪ್ರಾದೇಶಿಕ ಹಾಗೂ ಮಹಿಳಾ ನ್ಯಾಯವನ್ನು ಪಾಲಿಸಿ ಸಮಿತಿಯನ್ನು ಸರಕಾರ ರಚಿಸಬೇಕು. ಸಮಿತಿಯು ಪ್ರತಿಯೊಂದು ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರನ್ನು ಸೂಚಿಸಬೇಕು. ಆ ಪಟ್ಟಿಯಲ್ಲಿರುವ ಒಬ್ಬರನ್ನು ಸರಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂಬುದು ಸಾಂಸ್ಕೃತಿಕ ನೀತಿಯ ಕರಡು ಪ್ರತಿಯಲ್ಲಿ ಶಿಪಾರಸ್ಸು ಮಾಡಲಾಗಿದೆ. ಮತ್ತು ಇದು ಸೂಕ್ತವಾದ ಕ್ರಮವೂ ಆಗಿದೆ.

ಯಾವುದೇ ಒಂದು ಕ್ಷೇತ್ರದ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಬೇಕಾದವರು ಆಯಾ ಕ್ಷೇತ್ರದಲ್ಲಿ ಅನುಭವ ಇರುವವರು ಎನ್ನುವುದು ನಿರ್ವಿವಾದ. ಆದರೆ ಭಾಷೆ ಕಲೆ ಸಾಹಿತ್ಯದ ಕುರಿತು ಆಳವಾದ ಅರಿವಿಲ್ಲದ, ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಕೆಲಸಗಳ ಬಗ್ಗೆ ತಿಳುವಳಿಕೆ ಇಲ್ಲದವರು ಅದು ಹೇಗೆ ತಾನೇ ಸಮರ್ಥರನ್ನು ಆಯ್ಕೆ ಮಾಡಲು ಸಾಧ್ಯ? ಪ್ರತಿ ಸಲ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ವಾರಸುದಾರರನ್ನು ಆಯ್ಕೆ ಮಾಡುವಾಗ ಈ ರಾಜಕೀಯದ ಒತ್ತಡ ವಿಪರೀತವಾಗಿರುತ್ತದೆ. ಸಂಸ್ಕೃತಿ ಸಚಿವಾಲಯವು ರಾಜಕೀಯ ಒತ್ತಡಕ್ಕೆ ಮಣಿದು ಅರ್ಹರಲ್ಲದವರನ್ನೂ ಆಯ್ಕೆ ಮಾಡಿದ ಸಂದರ್ಭಗಳು ಬೇಕಾದಷ್ಟಿವೆ. ಪಕ್ಷ ರಾಜಕಾರಣದ ಬೆಂಬಲಿಗರನ್ನು ಅಕಾಡೆಮಿಗೆ ನೇಮಿಸುತ್ತಾ ಬರಲಾಗಿದೆ. ಆಳುವ ಪಕ್ಷ ಬದಲಾದಂತೆಲ್ಲಾ ಆಯಾ ಪಕ್ಷಗಳ ಸಮರ್ಥಕರನ್ನು ಅಕಾಡೆಮಿಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಹೀಗಾಗಿ ಕಲೆ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಕೊಂಡವರೂ ಸಹ ಫಲಾನುಭವಿಯಾಗಲು ಯಾವುದಾದರೊಂದು ರಾಜಕೀಯ ಪಕ್ಷದ ಹಿಂಬಾಲಕರಾಗಬೇಕಾದ ಅನಿವಾರ್ಯತೆಯೊಂದು ಸೃಷ್ಟಿಸಲಾಗಿದೆ. ರಾಜಕೀಯ ಲಾಭಿ ಎನ್ನುವುದು ಅನರ್ಹರ ಆಯ್ಕೆಗೆ ದಾರಿಯಾಗುತ್ತದೆ. ಹೀಗಾಗಿ.. ಅಕಾಡೆಮಿಗಳು ಉದ್ದೇಶಿತ ಕೆಲಸ ಮಾಡದೇ ಅಪ್ರಸ್ತುತವಾಗುತ್ತಿವೆ. ಕಲಾವಿದರು,

ಆಯಾ ಕ್ಷೇತ್ರದ ತಜ್ಞರ ಸಮಿತಿಯೊಂದನ್ನು ಸರಕಾರವೇ ನೇಮಿಸಿ ಅರ್ಹರಾದ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರಕಾರಕ್ಕೆ ಶಿಪಾರಸ್ಸು ಮಾಡುವುದು ಉತ್ತಮ. ಬೇಕಾದರೆ ತಜ್ಞರ ತಂಡ ಎರಡು ಮೂರು ಪಟ್ಟು ಹೆಚ್ಚಿಗೆ ಹೆಸರನ್ನು ಸೂಚನೆ ಮಾಡಿ ಸರಕಾರಕ್ಕೆ ಶಿಪಾರಸ್ಸು ಮಾಡಲಿ. ಹಾಗೆ ಶಿಪಾರಸ್ಸು ಮಾಡಿದ ಹೆಸರಲ್ಲಿ ಸೂಕ್ತವೆನ್ನಿಸಿದವರನ್ನು ಸರಕಾರದ ಸಚಿವಾಲಯ ಆಯ್ಕೆ ಮಾಡಲಿ. ಇದೇ ಮಾನದಂಡವನ್ನು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಆಯ್ಕೆಯಲ್ಲಿ ಅನುಸರಿಸಲಾಗುತ್ತಿದೆ. ಅದೇ ರೀತಿ ಅಕಾಡೆಮಿಗಳ ಆಯ್ಕೆಯಲ್ಲೂ ಆಗಬೇಕು ಎನ್ನುವುದು ಸಾಂಸ್ಕೃತಿಕ ನೀತಿಯ ಆಶಯ. ಆದರೆ ಇದನ್ನೆಲ್ಲಾ ಆಳುವವರಿಗೆ ಮನದಟ್ಟು ಮಾಡುವುದಾದರೂ ಹೇಗೆ?. ಒಬ್ಬರು ಸಂಸ್ಕೃತಿ ಸಚಿವೆ ಉಮಾಶ್ರೀಯವರೋ ಇಲ್ಲವೇ ಒಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯನವರೋ ಸಾಂಸ್ಕೃತಿಕ ನೀತಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಬಯಸಿದರೆ ಅದು ಸಚಿವ ಸಂಪುಟದಲ್ಲಿ ಅನುಮೋದನೆಯೇ ಆಗದಂತೆ ನೋಡಿಕೊಳ್ಳುವ ವಿಕ್ಷಿಪ್ತ ಶಕ್ತಿಗಳು ಸಕ್ರೀಯವಾಗಿವೆ. ಅವು ಎಲ್ಲಾ ನಮೂನಿಯ ರಾಜಕೀಯ ಪಕ್ಷದಲ್ಲೂ ಹಾಸುಹೊಕ್ಕಾಗಿವೆ. ರಾಜಕೀಯದವರು ರಾಜಕೀಯ ಮಾಡಿಕೊಂಡಿರಲಿ, ಆದರೆ ಸಾಂಸ್ಕೃತಿಕ ನೀತಿ ನಿರ್ಣಯಗಳಲ್ಲಿ ಮೂಗು ತೂರಿಸದಿರಲಿ ಎನ್ನುವುದು ಎಲ್ಲಾ ಪ್ರಜ್ಞಾವಂತಹ ಬಯಕೆಯಾಗಿದೆ. ಆದರೆ ಈ ಆಳುವವರಿಗೆ ಅರ್ಥವಾಗುವಂತೆ ಹೇಳುವವರಾದರೂ ಯಾರು? ಬೆಕ್ಕಿಗೆ ಗಂಟೆ ಕಟ್ಟುವ ಬಗೆಯಾದರೂ ಏನು? ಹಾಗಾದರೆ ಈ ಸಂಸ್ಕೃತಿ ಇಲಾಖೆ, ಅಕಾಡೆಮಿ ಮತ್ತು ಪ್ರಾಧಿಕಾರಗಳು ಇರುವುದಾದರೂ ಯಾತಕ್ಕೆ? ಅವೆಲ್ಲವೂ ಕೂಡಾ ಆಳುವವರ ಹಿತಾಸಕ್ತಿಯನ್ನು ಕಾಪಾಡಲು ಬಳಕೆಯಾದರೆ, ಪಕ್ಷಗಳ ಎಜೆಂಟರುಗಳೇ ಅಕಾಡೆಮಿಗಳಲ್ಲಿ ತುಂಬಿಕೊಂಡರೆ ಈ ನಾಡಿನ ಜನರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾದರೂ ಹೇಗೆ? ಕಲಾವಿದರುಗಳು, ಸಾಹಿತಿಗಳು ಜೊತೆಗೆ ಮಾಧ್ಯಮದವರು ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷತೆ ಹಾಗೂ ಸದಸ್ಯಗಿರಿಗಾಗಿ  ಆಳುವವರ್ಗದವರ ಮರ್ಜಿ ಕಾಯುತ್ತಾ ಇರಬೇಕು, ಶಿಪಾರಸ್ಸುಗಳಿಗಾಗಿ ಯಡತಾಕುತ್ತಿರಬೇಕು, ರಾಜಕೀಯದವರ ಮನೆಯ ಬಾಗಿಲು ಕಾಯುತ್ತಿರಬೇಕು.. ಎನ್ನುವುದು ಜನಪ್ರತಿನಿಧಿಗಳ ತಂತ್ರಗಾರಿಕೆಯಾಗಿದೆ. ಪ್ರಜ್ಞಾವಂತ ಕಲಾವಿದರು ಹಾಗೂ ಸಾಹಿತಿಗಳಿಗಿಂತಾ ನಾವು ಮೇಲಿರುವವರು. ಅವರೆಲ್ಲಾ ನಮ್ಮ ಮುಂದೆ ಬಂದು ಪದವಿ ಪುರಸ್ಕಾರಕ್ಕಾಗಿ ಕೈಚಾಚಿ ಕೇಳುತ್ತಿರಬೇಕು, ಬಾಯಿಬಿಚ್ಚಿ ಬೇಡುತ್ತಿರಬೇಕು ಎನ್ನುವ ಅಹಮಿಕೆ ಕೂಡಾ ಈ ರಾಜಕಾರಣಿಗಳಿಗಿರುವುದು ಸುಳ್ಳಲ್ಲಾ.

ಹೋಗಲಿ ಸರಕಾರವೇ ಆಯ್ಕೆ ಮಾಡಿದ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರಿಗಾದರೂ ಪೂರ್ಣಾವಧಿ ಕೆಲಸ ಮಾಡಲು ಅವಕಾಶವಾದರೂ ಇದೆಯಾ ಅಂದರೆ ಅದೂ ಇಲ್ಲಾ. ಈ ಅವಧಿಯೂ ಸಹ ಮತ್ತೆ ರಾಜಕೀಯ ಹಿತಾಸಕ್ತಿಯನ್ನೇ ಅವಲಂಬಿಸಿದೆ. ನೇಮಕಗೊಂಡ ಅಧ್ಯಕ್ಷರ ಹಾಗೂ ಸದಸ್ಯರ ಅವಧಿ ಮೂರು ವರ್ಷಗಳು ಇಲ್ಲವೇ ಮುಂದಿನ ಆದೇಶದವರೆಗೆ ಎಂಬುದೇ ಮತ್ತೆ ಮುಂದುವರೆದಿದೆ. ಇದರಿಂದಾಗಿ ಆಳುವ ರಾಜಕೀಯ ಪಕ್ಷಗಳು ಬದಲಾದಾಗ ಸರಕಾರದ ಹಿತಾಸಕ್ತಿಯಂತೆ ಹಾಲಿ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಅವಧಿಪೂರ್ವವಾಗಿ ಮನೆಗೆ ಕಳಿಸಿ ತಮ್ಮ ಸರಕಾರಕ್ಕೆ ಬದ್ದವಾಗಿರುವವರನ್ನು ನೇಮಕ ಮಾಡಬಹುದಾಗಿದೆ. ಇದು ನಿಜಕ್ಕೂ ಅಪಾಯಕಾರಿಯಾದ ನಿಲುವು. ಯಾವುದೇ ಸರಕಾರದಿಂದ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ನೇಮಕಗೊಂಡ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಮೂರು ವರ್ಷಗಳ ಅವಧಿ ಪೂರೈಸಲು ಪೂರ್ಣ ಅವಕಾಶ ಇರಬೇಕು. ಅವರುಗಳು ಕಾಲಮಿತಿಯಲ್ಲಿ ಏನೇನೋ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ. ಅವುಗಳೆಲ್ಲಾ ಸಂಪೂರ್ಣಗೊಳಿಸಲು ಪೂರ್ಣಾವಧಿ ಬೇಕೆ ಬೇಕಾಗುತ್ತದೆ. ಸರಕಾರ ಬದಲಾಯಿತು ಎನ್ನುವ ಕಾರಣಕ್ಕೆ ಇದ್ದಕ್ಕಿದ್ದಂತೆ ನೇಮಕಗೊಂಡವರನ್ನು ಬದಲಾಯಿಸಿದರೆ ಹಮ್ಮಿಕೊಂಡ ಯೋಜನೆಗಳು ಹಾಳಾಗುತ್ತವೆ. ಅದಕ್ಕೆ ಖರ್ಚು ಮಾಡಿದ ಜನತೆಯ ತೆರಿಗೆಯ ಹಣ ವ್ಯರ್ಥವಾಗುತ್ತದೆ. ಹೀಗಾಗಿ.. ಯಾವುದೇ ಸರಕಾರ ಬಂದರೂ ನೇಮಕಗೊಂಡವರು ಕನಿಷ್ಟ ಮೂರು ವರ್ಷಗಳ ಕಾಲ ಮುಕ್ತವಾಗಿ  ಕೆಲಸ ಮಾಡುವಂತಹ ನಿಯಮ ಸಾಂಸ್ಕೃತಿಕ ನೀತಿಯ ಅನುಮೋದಿತ ಕರಡಿನಲ್ಲಿ ಇರಬೇಕಾಗಿತ್ತು. ಆದರೆ.. ಇದಕ್ಕೂ ಸಹ ಆಳುವ ವರ್ಗಗಳು ಅಡೆತಡೆ ಒಡ್ಡಿದರು. ಹೀಗಾಗಿ ಯಾವಾಗ ಸರಕಾರ ಬದಲಾಗುತ್ತೋ, ಯಾವಾಗ ತಮ್ಮನ್ನು ಬದಲಾಯಿಸಲಾಗುತ್ತದೋ ಎನ್ನುವ ಆತಂಕದಲ್ಲೇ ಅಧ್ಯಕ್ಷರು ಹಾಗೂ ಸದಸ್ಯರುಗಳ ಕೆಲಸ ನಿರ್ವಹಿಸಬೇಕಾಗಿದೆ. ಇದು ನಿಜಕ್ಕೂ ಸಾಂಸ್ಕೃತಿಕ ಯಜಮಾನಿಕೆಯ ಅತಿರೇಕವಾಗಿದೆ.
 
ವಿವಿಧ ಕಲಾ ಪ್ರಕಾರಗಳಲ್ಲಿನ ಕಲಾವಿದರು ಮತ್ತು ಸಾಹಿತಿಗಳ ಮಕ್ಕಳಿಗೆ ಜಾತಿ, ಧರ್ಮದ ಪರಿಗಣನೆ ಮೀರಿ ಆರ್ಥಿಕತೆಯನ್ನು ಮಾನದಂಡವಾಗಿಟ್ಟುಕೊಂಡು ಶೈಕ್ಷಣಿಕ ಮೀಸಲಾತಿ ನೀಡಬೇಕು. ಜಾನಪದ, ವೃತ್ತಿ-ಹವ್ಯಾಸಿ ರಂಗಭೂಮಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ಚಲನಚಿತ್ರದ ಕಲಾವಿದರು ಮತ್ತು ಸಾಹಿತ್ಯ ಕ್ಷೇತ್ರದ ಲೇಖಕರ ಮಕ್ಕಳಿಗೆ ಸಾಮಾನ್ಯ, ವೃತ್ತಿ ಹಾಗೂ ಉನ್ನತ ಶಿಕ್ಷಣದಲ್ಲಿ ಒಳಮೀಸಲಾಗಿ ನೀಡಬೇಕು ಎಂಬ ಶಿಪಾರಸ್ಸನ್ನೂ ಸಹ ಸಾಂಸ್ಕೃತಿಕ ನೀತಿಯಲ್ಲಿ ಮಾಡಲಾಗಿತ್ತು. ಈ ಅಂಶಕ್ಕೆ ಸಚಿವ ಸಂಪುಟದ ಉಪಸಮಿತಿ ಒಪ್ಪಿಗೆ ಸೂಚಿಸಿತ್ತು. ಆದರೆ... ಸಚಿವ ಸಂಪುಟ ಇದನ್ನು ನಿರಾಕರಿಸಿತು. ಮೊದಲನೆಯದಾಗಿ ಈ ರಾಜಕಾರಣಿಗಳಿಗೆ ತಮ್ಮತನ ಮೆರೆಯಲು ಕಲೆ ಸಾಹಿತ್ಯದ ವೇದಿಕೆಗಳು ಬೇಕು. ಓಟಿಗಾಗಿ ಜನರನ್ನು ತಲುಪಲು ಸಾಹಿತ್ಯ ಸಮಾವೇಶಗಳು ಬೇಕು. ಆದರೆ.. ಕಲೆ ಸಾಹಿತ್ಯಕ್ಕಾಗಿ ಬದುಕನ್ನೇ ಸವೆಸಿದ ಸಾಧಕರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕೊಡವುದು ಮಾತ್ರ ಬೇಕಾಗಿಲ್ಲಾ. ಯಾಕೆಂದರೆ.. ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಅಲ್ಪರಲ್ಲೇ ಅಲ್ಪಸಂಖ್ಯಾತರಾಗಿರುವ ಈ ಕಲಾವಿದರು ಹಾಗೂ ಸಾಹಿತಿಗಳನ್ನು ಓಟ್ ಬ್ಯಾಂಕ್‌ಗಳೆಂದು ಈ ರಾಜಕೀಯ ವರ್ಗ ಪರಿಗಣಿಸುವುದಿಲ್ಲಾ. ಎಲ್ಲಿ ಅಧಿಕಾರಕ್ಕೆ ಮೆಟ್ಟಲಾಗುವ ಓಟ್‌ಗಳು ಬರುವುದಿಲ್ಲವೋ ಅಲ್ಲಿ ಈ ಆಳುವ ವರ್ಗಗಳಿಗೆ ಆಸಕ್ತಿ ಇರುವುದಿಲ್ಲಾ. ಹೀಗಾಗಿ ಕಲೆ ಹಾಗೂ ಸಾಹಿತ್ಯ ಕ್ಷೇತ್ರದವರ ಮಕ್ಕಳಿಗೆ ಮೀಸಲಾಗಿ ಕೊಡಲು ಇವರು ಒಪ್ಪುವ ಸಾಧ್ಯತೆಗಳೇ ಇಲ್ಲಾ. ಕಲೆ ಹಾಗೂ ಸಾಹಿತ್ಯಕ್ಕಾಗಿ ಬದುಕನ್ನೇ ಧಾರೆಯೆರೆದವರ ಮಕ್ಕಳುಗಳು ಮೀಸಲಾತಿಯಿಂದ ಅವಕಾಶ ವಂಚಿತರನ್ನಾಗಿಸಿತು. ಈ ಶಿಪಾರಸ್ಸೂ ಸಹ ಬಿದ್ದು ಹೋಯಿತು. ಕಲೆ ಹಾಗೂ ಸಾಹಿತ್ಯ ಕ್ಷೇತ್ರವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕೆನ್ನುವವರು ಇನ್ನೊಮ್ಮೆ ಯೋಚಿಸುವಂತಾಯಿತು.

ಬಿ.ವಿ.ಕಾರಂತರ ಕನಸಿನ ರಂಗಾಯಣಗಳ ಉಸ್ತುವಾರಿಗಾಗಿ ಕರ್ನಾಟಕ ರಂಗಾಯಣ ಪ್ರಾಧಿಕಾರವೊಂದನ್ನು ರಚಿಸಬೇಕು ಎನ್ನುವ ಶಿಪಾರಸ್ಸನ್ನೂ ಸಹ ಈ ಸಾಂಸ್ಕೃತಿಕ ನೀತಿಯಲ್ಲಿ ಮಾಡಲಾಗಿತ್ತು. ಆದರೆ.. ಇದೂ ಸಹ ಸಚಿವ ಸಂಪುಟದ ಸಭೆಯಲ್ಲಿ ನಿರಾಕರಣೆಗೊಂಡಿತು. ಹೀಗೊಂದು ಪ್ರಾಧಿಕಾರ ರಚಿಸಿದ್ದರೆ ಈಗಿರುವ ನಾಲ್ಕೂ ಪ್ರಾದೇಶಿಕ ರಂಗಾಯಣಗಳು ಹಾಗೂ ಇನ್ನೂ ಅಸ್ಥಿತ್ವಕ್ಕೆ ಬರಬೇಕಾದ ಎರಡು ರಂಗಾಯಣಗಳು ಒಂದೇ ಪ್ರಾಧಿಕಾರದ ಅಡಿಯಲ್ಲಿ ಬರುತ್ತಿದ್ದವು. ಈಗ ರಂಗಸಮಾಜ ಮಾಡುತ್ತಿರುವ ಕೆಲಸವನ್ನೂ ಈ ಪ್ರಾಧಿಕಾರವೇ ಮಾಡಬಹುದಾಗಿತ್ತು. ಎಲ್ಲಾ ರಂಗಾಯಣಗಳ ಆಡಳಿತವನ್ನು ನೋಡಿಕೊಳ್ಳುವುದು, ಅಲ್ಲಿಯ ಬಿಕ್ಕಟ್ಟುಗಳನ್ನು ಕಾಲಕಾಲಕ್ಕೆ ಬಗೆಹರಿಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗ ತುಂಬಾ ಕಷ್ಟಕರವಾಗಿದೆ. ಗುಲಬರ್ಗಾ ಹಾಗೂ ಶಿವಮೊಗ್ಗ ರಂಗಾಯಣಗಳು ಸೃಷ್ಟಿಸಿದ್ದ ಬಿಕ್ಕಟ್ಟನ್ನು ಪರಿಹರಿಸಿ ಮತ್ತೆ ಹೊಸ ನಿರ್ದೇಶಕರುಗಳನ್ನು ನಿಯಮಿಸಲು ಸಂಸ್ಕೃತಿ ಸಚಿವಾಲಯ ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಎರಡು ವರ್ಷಗಳಿಂದ ಈ ಎರಡೂ ರಂಗಾಯಣಗಳಲ್ಲಿ ಏನೂ ಮಹತ್ತರ ಕೆಲಸಗಳಾಗದೇ ಅನುದಾನದ ಹಣ ಮಾತ್ರ ವ್ಯರ್ಥವಾಗಿ ಖರ್ಚಾಗುತ್ತಲೇ ಇದೆ. ಇದನ್ನೆಲ್ಲಾ ತಪ್ಪಿಸಲು ಪ್ರಾಧಿಕಾರವೊಂದನ್ನು ರಚಿಸಿದರೆ ರಂಗಾಯಣಗಳು ಸುರಳಿತವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗಬಹುದಾಗಿದೆ. ಆದರೆ.. ಆಳುವವರಿಗೆ ಇದು ಬೇಕಿಲ್ಲಾ. ಎಲ್ಲಾ ನೇಮಕಗಳೂ ತಮ್ಮ ನಿರ್ಣಯದಂತೆ ನಡೆಯಬೇಕು ಹಾಗೂ ತಮ್ಮ ಅಧಿಕಾರಿಗಳ ಮೂಲಕವೇ ಆಗಬೇಕು ಎನ್ನುವುದು ಜನಪ್ರತಿನಿಧಿಗಳೆನ್ನುವವರ ಹಿಡನ್ ಅಜೆಂಡಾವೇ ಆಗಿದೆ. ಅವರು ತಮ್ಮ ಹಿಡಿತವನ್ನು ಸಡಲಿಸಿ ಅಕಾಡೆಮಿ, ಪ್ರಾಧಿಕಾರಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಕೊಡಲು ಸಿದ್ದರಿಲ್ಲಾ. ಈ ರಾಜಕೀಯದ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರಬರದೇ ಯಾವ ಅಕಾಡೆಮಿ ಪ್ರಾಧಿಕಾರಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವೂ ಇಲ್ಲಾ. ತಾವೇ ನೇಮಕ ಮಾಡಿದ ಸಾಂಸ್ಕೃತಿಕ ಸಮಿತಿಯ ಪ್ರಮುಖ ಶಿಪರಸ್ಸುಗಳನ್ನು ಒಪ್ಪಿಕೊಳ್ಳಲೂ ಆಳವವರು ಸಿದ್ದರಿಲ್ಲ. ಹೀಗಾಗಿ ಯಾವ ಉದ್ದೇಶಕ್ಕಾಗಿ ಸಾಂಸ್ಕೃತಿಕ ನೀತಿ ಯನ್ನು ಜಾರಿಗೆ ತರಲು ಸರಕಾರ ಹೊರಟಿತ್ತೋ ಆ ಆಶಯವೇ ಸಂಪೂರ್ಣವಾಗಿ ಈಡೇರಲಿಲ್ಲ. 

ಸಾಂಸ್ಕೃತಿಕ ನೀತಿಯಲ್ಲಿ ರಾಜಕೀಯ ಹಿತಾಸಕ್ತಿಗೆ ತೊಡಕಾಗುವಂತಹ ಶಿಪಾರಸ್ಸುಗಳನ್ನು ತೆಗೆದು ಹಾಕುವ ಕೆಲಸವನ್ನು ಸಚಿವ ಸಂಪುಟ ಮಾಡಿ ತಮ್ಮ ಅಧಿಕಾರಕ್ಕೆ ಚ್ಯುತಿ ಬಾರದಂತೆ ಆಳುವವರು ನೋಡಿಕೊಂಡಿದ್ದಾರೆ. ನಾಡು ನುಡಿ ಕಲೆ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಿಂತಲೂ ಆಳುವವರಿಗೆ ತಮ್ಮ ಓಟು, ಅಧಿಕಾರ, ಪ್ರತಿಷ್ಠೆಗಳೇ ಬಹುಮುಖ್ಯ ಆಧ್ಯತೆಗಳಾಗಿವೆ. ಆಳುವವರ ಈ ಸಾಂಸ್ಕೃತಿಕ ವಿರೋಧಿ ನೀತಿಯನ್ನು ಪ್ರಶ್ನಿಸುವ, ಪ್ರತಿರೋಧಿಸುವ ದ್ವನಿಗಳು ತಣ್ಣಗಾಗಿವೆ. ಮೊದಲನೆಯದಾಗಿ ತಮ್ಮದೇ ಸಮಿತಿಯ ಸಾಂಸ್ಕೃತಿಕ ನೀತಿಯ ಮುಖ್ಯ ಶಿಪಾರಸ್ಸುಗಳನ್ನು ಕೈಬಿಟ್ಟಿದ್ದಕ್ಕೆ ಬರಗೂರು ರಾಮಚಂದ್ರಪ್ಪನವರು ದ್ವನಿ ಎತ್ತಬೇಕಿತ್ತು, ಆಳುವವರ ಅಧಿಕಾರ ದಾಹವನ್ನು ವಿರೋಧಿಸಬೇಕಿತ್ತು. ಆದರೆ ಅವರು ಹಾಗೆ ಮಾಡಲೇ ಇಲ್ಲಾ. ಸರಕಾರದ ಫಲಾನುಭವಿಗಳಾಗಿ ಅದರ ಋಣದಲ್ಲಿರುವ ಬರಗೂರರಿಗೆ ವಿರೋಧಿಸುವ ತಾಕತ್ತೂ ಇಲ್ಲವಾಗಿದೆ. ಹೋಗಲಿ ಇಡೀ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದವರಾದರೂ ಆಳುವವರ ಈ ಜನವಿರೋಧಿ ನೀತಿಯನ್ನು ವಿರೋಧಿಸಿ ಸಾಂಸ್ಕೃತಿಕ ನೀತಿಯ ಯಥಾವತ್ ಜಾರಿಗೆ ಒತ್ತಾಯಿಸಬೇಕಿತ್ತು. ಅದೂ ಆಗಲಿಲ್ಲ. ಹಾಗೇ ಒಗ್ಗಟ್ಟಾಗಿ ಪ್ರತಿಭಟಿಸಿ ಸರಕಾರದ ಮೇಲೆ ಒತ್ತಡವನ್ನು ಹೇರಿದ್ದರೆ ಸಾಂಸ್ಕೃತಿಕ ನೀತಿಯ ಪರವಾಗಿರುವ ಸಚಿವೆ ಉಮಾಶ್ರೀ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಬೆಂಬಲವೂ ಸಿಗುತ್ತಿತ್ತು. ಆದರೆ.. ಸಾಂಸ್ಕೃತಿಕ ಕ್ಷೇತ್ರದ ಹಿತಾಸಕ್ತಿಗೆ ಅನ್ಯಾಯವಾಗಿದ್ದರ ಬಗ್ಗೆ ಅರಿವಿದ್ದೂ ಆ ಕ್ಷೇತ್ರದ ದಿಗ್ಗಜರು ಜಾಣ ಮೌನಕ್ಕೆ ಶರಣಾಗಿದ್ದನ್ನು ಗಮನಿಸಿದರೆ ಅವರ ಬದ್ದತೆಯ ಮೇಲೆ ಗುಮಾನಿ ಬಾರದೇ ಇರದು.

ಎಲ್ಲಿವರೆಗೂ ಸಾಹಿತಿಗಳು, ಕಲಾವಿದರುಗಳು ಸದಾ ಜಾಗೃತವಾಗಿರುವುದಿಲ್ಲವೋ, ಎಲ್ಲಿವರೆಗೂ ಅನ್ಯಾಯದ ವಿರುದ್ಧ ಜನರನ್ನು ಎಚ್ಚರಿಸುವುದಿಲ್ಲವೋ ಅಲ್ಲಿವರೆಗೂ ಈ ನಾಡು ಸಕಾರಾತ್ಮಕವಾಗಿ ಬದಲಾಗುವುದಿಲ್ಲಾ. ಈ ನಾಡಿನ ಭಾಷೆ ಸಂಸ್ಕೃತಿಯ ಉಳಿವಿಗೆ ನಮ್ಮನ್ನು ಆಳುವವರಿಂದಲೇ ಅಪಾಯ ಒದಗಿದಾಗಲೂ ಪ್ರಜ್ಞಾವಂತರು ಮೌನವಾಗುತ್ತಾರೋ ಆಗ ನಾಡಿನ ಸಂಸ್ಕೃತಿ ಅನ್ಯರ ಸಾಂಸ್ಕೃತಿಕ ದಾಳಿಗೆ ಒಳಗಾಗಿ ತುಳಿತಕ್ಕೊಳಗಾಗುವುದರಲ್ಲಿ ಸಂದೇಹವಿಲ್ಲ. ಭಾಷೆ ಹಾಗೂ ಸಂಸ್ಕೃತಿಯ ಉಳಿವು ಜನಪ್ರತಿನಿಧಿಗಳಿಗೆ ಬೇಕಿಲ್ಲದಿರಬಹುದು ಆದರೆ ಈ ನಾಡ ಜನರಿಗೆ ಬೇಕಾಗಿದೆ. ಆ ಜನರನ್ನು ಎಚ್ಚರಿಸುವ ಹೊಣೆಗಾರಿಕೆ ಎಚ್ಚೆತ್ತ ಕಲಾವಿದರು ಹಾಗೂ ಸಾಹಿತಿಗಳ ಮೇಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಾಯಕತ್ವವೊಂದು ಈಗ ಬೇಕಾಗಿದೆ. ಅದನ್ನು ನಿಭಾಯಿಸುವ ದೀಮಂತ ವ್ಯಕ್ತಿ ಹಾಗೂ ಸಾಂಸ್ಕೃತಿಕ ಶಕ್ತಿಗಾಗಿ ಸಾಂಸ್ಕೃತಿಕ ಲೋಕ ಕಾಯುತ್ತಿದೆ.   

-ಶಶಿಕಾಂತ ಯಡಹಳ್ಳಿ