ಮಂಗಳವಾರ, ಮಾರ್ಚ್ 31, 2015

ಮುಂಬೈ ಕನ್ನಡಿಗರ ತುಳು ನಾಟಕ “ಆಟಿ ತಿಂಗೊಲ್ದ ಒಂಜಿ ದಿನ” :



ಕಾಳಿದಾಸನು ಭಾರತೀಯ ಸಾಹಿತ್ಯ ಹಾಗೂ ನಾಟಕ ಪರಂಪರೆಗೆ ಅಪೂರ್ವವಾದ ಕೊಡುಗೆಯನ್ನು ಕೊಟ್ಟ ಮಹಾಕವಿ. ಕಾಳಿದಾಸ ಕವಿಯ ಋತುಸಂಹಾರ, ಮೇಘದೂತ, ಅಭಿಜ್ಞಾನ ಶಾಕುಂತಲ... ಮುಂತಾದವುಗಳು ಮೇರು ಕೃತಿಗಳಾಗಿವೆ. ಅಂತಹ ವರಕವಿ ಕಾಳಿದಾಸನ ಮಹಾನ್ ಕೃತಿಗಳನ್ನಾಧರಿಸಿ, ಆತನ ವ್ಯಕ್ತಿತ್ವವನ್ನು ಊಹಿಸಿ ಬರೆದ ಮೊಟ್ಟ ಮೊದಲ ನಾಟಕ ಆಷಾಡದ ಒಂದು ದಿನ. 1958 ರಲ್ಲಿ ಹೆಸರಾಂತ ನಾಟಕಕಾರ ಮೋಹನ್ ರಾಕೇಶ್ರವರು ಆಷಾಡ್ ಕಾ ಏಕ್ ದಿನ್ ಹೆಸರಲ್ಲಿ ಹಿಂದಿ ಭಾಷೆಯಲ್ಲಿ ರಚಿಸಿದ ನಾಟಕ ಭಾರತೀಯ ರಂಗಪರಂಪರೆಯಲ್ಲಿ ವಿಶೇಷವಾಗಿದೆ. ವಿಶಿಷ್ಟ ನಿರೂಪನಾ ತಂತ್ರ, ರಚನಾ ಕೌಶಲ್ಯ, ಪ್ರಯೋಗಶೀಲತೆ ಹಾಗೂ ಭಾಷಾ ಸೌಂದರ್ಯಗಳಿಂದಾಗಿ ಆಷಾಡದ ಒಂದು ದಿನ ನಾಟಕವು ರಂಗಭೂಮಿಯಲ್ಲಿ ಸಂಚಲನವನ್ನುಂಟುಮಾಡಿತ್ತು. ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ನಾಟಕವು ಅನುವಾದವಾಗಿ ಪ್ರದರ್ಶನಗೊಂಡಿದೆ. ಈಗ ಮೊಟ್ಟ ಮೊದಲ ಬಾರಿಗೆ ತುಳು ಭಾಷೆಯಲ್ಲಿ ಆಟಿ ತಿಂಗೊಲ್ದ ಒಂಜಿ ದಿನ ಹೆಸರಿನಲ್ಲಿ ಪ್ರದರ್ಶನವಾಗುತ್ತಿದೆ.

ಡಾ. ಭರತ್ ಕುಮಾರ್ ಪೊಲಿಪು ರವರು ಮೋಹನ್ ರಾಕೇಶ್ರವರ ನಾಟಕವನ್ನು ತುಳುಗೆ ಅನುವಾದಿಸಿ ಮುಂಬಯಿಯ ಕರ್ನಾಟಕ ಸಂಘದ ಕಲಾಭಾರತಿ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ಬೆಂಗಳೂರಿನ ದೃಶ್ಯ ತಂಡವು ಆಯೋಜಿಸಿದ್ದ ದೃಶ್ಯ ನಾಟಕೋತ್ಸವದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ದಿನವಾದ 2015 ಮಾರ್ಚ 27ರಂದು ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಂಡು ನೋಡುಗರಲ್ಲಿ ಬೆರಗು ಸೃಷ್ಟಿಸಿತು.



ಐತಿಹಾಸಿಕವೆಂದು ತೋರುವ ನಾಟಕ ಐತಿಹಾಸಿಕವಲ್ಲವಾದರೂ ಐತಿಹಾಸಿಕ ಐತಿಹ್ಯಗಳೊಂದಿಗೆ ಕಾಳಿದಾಸನ ಬದುಕಿನ ಕಥಾನಕವನ್ನು ಊಹಾತ್ಮಕವಾಗಿ ಕಟ್ಟಿಕೊಡುವ ಒಂದು ಪ್ರಯತ್ನವಾಗಿದೆಅಸಾಮಾನ್ಯ ಗ್ರಾಮೀಣ ಕಾವ್ಯ ಪ್ರತಿಭೆ ಕಾಳಿದಾಸನನ್ನು ಉಜ್ಜಯಿನಿ ರಾಜನು ಆಹ್ವಾನಿಸಿ ಆಸ್ಥಾನ ಕವಿಯನ್ನಾಗಿಸಿಕೊಳ್ಳುತ್ತಾನೆ. ತನ್ನ ಇಚ್ಚೆಗೆ ವಿರುದ್ಧವಾಗಿ ಜೊತೆಯಲ್ಲಿರುವವರ ಒತ್ತಾಯಕ್ಕೊಳಗಾಗಿ ರಾಜನ ಆಹ್ವಾನವನ್ನು ಕಾಳಿದಾಸ ಒಪ್ಪಿಕೊಳ್ಳುವ ಅನಿವಾರ್ಯತೆಗೊಳಗಾಗುತ್ತಾನೆ. ಕಾಳಿದಾಸ ಹಾಗೂ ಮಲ್ಲಿಕಾ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿರುತ್ತಾರೆ. ರಾಜಕುಮಾರಿ ಪ್ರಿಯಂಗುಮಂಜರಿ ಸಹ ಕಾಳಿದಾಸನ ಮೇಲೆ ಮೋಹಕ್ಕೊಳಗಾಗಿ ಆತನನ್ನು ಮದುವೆಯಾಗುತ್ತಾಳೆ. ಮಲ್ಲಿಕಾಳ ಅಗಲಿಕೆ ಕಾಳಿದಾಸನನ್ನು ಸದಾ ಕಾಡುತ್ತದೆ. ಆತನ ಕಾವ್ಯಕ್ಕೆ ಮಲ್ಲಿಕಾಳೇ ಸ್ಪೂರ್ತಿಯಾಗಿರುತ್ತಾಳೆ. ಕಾಳಿದಾಸ ರಾಜಾಶ್ರಯದಲ್ಲಿ ಕಳೆದುಹೋಗುತ್ತಾನೆ. ಕೊನೆಗೊಮ್ಮೆ ಎಲ್ಲವನ್ನೂ ತೊರೆದು ಮಲ್ಲಿಕಾಳನ್ನು ಹುಡುಕಿ ಬಂದ ಕಾಳಿದಾಸನಿಗೆ ಆಘಾತ ಕಾಯ್ದಿರುತ್ತದೆ. ತಾಯಿಯ ಒತ್ತಡ ಹಾಗೂ ಸಾಮಾಜಿಕ ಅನಿವಾರ್ಯತೆಗಳಿಗೊಳಗಾಗಿ ಮಲ್ಲಿಕಾ ಕಾಳಿದಾಸನ ಸ್ನೇಹಿತ ವಿಲೋಮನನ್ನು ಮದುವೆಯಾಗಿ ಒಂದು ಮಗುವಿನ ತಾಯಿಯೂ ಆಗಿರುತ್ತಾಳೆ. ತನ್ನ ಅಪಾರವಾದ ನಿರೀಕ್ಷೆ ಹೀಗೆ ನಿರಾಸೆಗೊಂಡಿದ್ದನ್ನು ನೋಡಿ ಹತಾಶೆಗೊಂಡು ಕಾಳಿದಾಸ ನಿರ್ಗಮಿಸುತ್ತಾನೆ. ಇದು ನಾಟಕದ ಸಂಕ್ಷಿಪ್ತ ಕಥೆ. ಆದರೆ ಕಥೆಯೊಳಗೆ ಹಲವು ಆಯಾಮಗಳು ಬಿಚ್ಚಿಕೊಳ್ಳುತ್ತವೆ. ನೋಡುಗರನ್ನು ಆಲೋಚನೆಗೆ ಹಚ್ಚುತ್ತವೆ.

ಮೇಲ್ನೋಟಕ್ಕೆ ಇದು ಕಾಳಿದಾಸನ ಕಥೆ ಎನಿಸಿದರೂ ಮಲ್ಲಿಕಾಳನ್ನು ಕೇಂದ್ರವಾಗಿರಿಸಿಕೊಂಡೇ ಕಥೆ ಸಾಗುತ್ತದೆ. ಮಲ್ಲಿಕಾಳ ಪ್ರೇಮ, ವಿರಹ, ನಿರೀಕ್ಷೆ, ನಿರಾಸೆಗಳೆಲ್ಲವನ್ನೂ ಮೂರು ಅಂಕಗಳಲ್ಲಿ ಬಿಚ್ಚಿಡುವ ನಾಟಕ ಆಕೆಯ ಆಂತರಿಕ ತಲ್ಲಣಗಳನ್ನು ಅನಾವರಣಗೊಳಿಸುತ್ತದೆ. ಇಷ್ಟವಿಲ್ಲದಿದ್ದರೂ ಸಾಮಾಜಿಕ ಕಟ್ಟುಪಾಡು ಹಾಗೂ ಮನೆಯವರ ಒತ್ತಡಕ್ಕೆ ಅದು ಹೇಗೆ ಹೆಣ್ಣು ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಗೊಳಗಾಗುತ್ತಾಳೆಂಬುದಕ್ಕೆ ನಾಟಕದ ಮಲ್ಲಿಕಾಳ ಬದುಕೆ ಸಾಕ್ಷಿಯಾಗಿದೆ. ಕವಿ ಹಾಗೂ ಆತನ ಕಾವ್ಯಕನ್ನಿಕೆಯ ನಡುವೆ ನೇರ ಸಂವಹನದ ಕೊರತೆಯಿಂದಾಗಿ ಇಬ್ಬರೂ ಚಿರವಿರಹಿಗಳಾಗಿ ಬದುಕಬೇಕಾದ ವಿಪರ್ಯಾಸಕ್ಕೆ ನಾಟಕ ಕನ್ನಡಿ ಹಿಡಿಯುತ್ತದೆ. ಶೃಂಗಾರ ಕವಿ ಕಾಳಿದಾಸನ ಕುರಿತಾದ ನಾಟಕ ವಿರಹರಸವನ್ನೇ ಸ್ಪುರಿಸುತ್ತದೆ. ವಸಂತದ ಕುರುಹುಗಳೇ ಇಲ್ಲದಂತ ಆಷಾಡದ ಅಗಲಿಕೆ ಒಂದು ದಿನ ಮಾತ್ರ ಅಲ್ಲ ನಾಟಕದಾದ್ಯಂತ ಅನುರಣಿಸಿದೆ.

ಗ್ರಾಮೀಣ ಪರಿಸರದ ಕವಿಯೊಬ್ಬನನ್ನು ರಾಜಾಶ್ರಯ ಎನ್ನುವುದು ಅದು ಹೇಗೆ ಭ್ರಮೆಯನ್ನು ಸೃಷ್ಟಿಸಿ ಸೃಜನಶೀಲ ವ್ಯಕ್ತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಸ್ವಾತಂತ್ರ್ಯ ರಹಿತನನ್ನಾಗಿಸುತ್ತದೆ ಎನ್ನುವುದಕ್ಕೆ ಕಾಳಿದಾಸ ಬಹುದೊಡ್ಡ ಸಾರ್ವಕಾಲಿಕ ಉದಾಹರಣೆಯಾಗಿದ್ದಾನೆ. ಆಗ ಮಾತ್ರವಲ್ಲ ಪ್ರಸ್ತುತ ಈಗಲೂ ಸಹ ಹಲವಾರು ಕವಿಗಳು, ಸಾಹಿತಿಗಳು ಆಳುವ ವರ್ಗಗಳೊಂದಿಗೆ ರಾಜಿಯಾಗಿ ತಮ್ಮ ಮೂಲ ಬೇರು ಹಾಗೂ ಆಶಯಗಳಿಂದ ವಿಮುಖರಾಗಿದ್ದಾರೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ವ್ಯವಸ್ಥೆ ಕೊಡಮಾಡುವ ಸ್ಥಾನ, ಸನ್ಮಾನ, ಪದಕ, ಪ್ರಶಸ್ತಿಗಳ ಪ್ರಲೋಭನೆಯ ಭ್ರಮೆಗೆ ಸಿಕ್ಕು ಸಿಕ್ಕಿನಿಂದ ಹೊರಬರದೇ ಜೊತೆಗೆ ಹಳೆಯ ಹಳವಂಡಗಳಿಂದ ದೂರಾಗದೇ ತಲ್ಲಣಗೊಳ್ಳುವ ರಾಜಾಶ್ರಿತ ಪ್ರತಿಭೆಗಳ ಪ್ರತೀಕವಾಗಿ ಕಾಳಿದಾಸ ನಾಟಕದಲ್ಲಿ ಮೂಡಿಬಂದಿದ್ದಾನೆ.

ಆಷಾಢದ... ನಾಟಕದಲ್ಲಿ ಅನಿವಾರ್ಯತೆಗಳೇ ಬಹುಮುಖ್ಯ ಪಾತ್ರವಹಿಸುತ್ತವೆ. ಕಾಳಿದಾಸನಿಗೆ ಆಸ್ಥಾನ ಕವಿಯಾಗಿ ಸಕಲ ಗೌರವಕ್ಕೆ ಪಾತ್ರವಾಗುವ ಅನಿವಾರ್ಯತೆ. ಮಲ್ಲಿಕಾಳಿಗಂತೂ ಹೆತ್ತವರ ಒತ್ತಾಯ ಹಾಗೂ ಸಮಾಜದ ಒತ್ತಡಕ್ಕೊಳಗಾಗಿ ವಿಲೋಮನನ್ನು ಮದುವೆಯಾಗಲೇ ಬೇಕಾದ ಅನಿವಾರ್ಯತೆ. ವಿಲೋಮನಿಗೆ ಹೇಗಾದರೂ ಮಾಡಿ ಮಲ್ಲಿಕಾಳನ್ನು ಪಡೆಯಲೇಬೇಕೆನ್ನುವ ಅನಿವಾರ್ಯತೆ. ಹೀಗೆ ಮೂರು ಪಾತ್ರಗಳು ಅನಿವಾರ್ಯತೆಯ ಸುಳಿಗೆ ಸಿಕ್ಕಿ ಪ್ರೇಮ ವಂಚಿತರಾಗಿ ತಳಮಳಿಸುವುದೇ ನಾಟಕದ ವಸ್ತು ವಿಷಯವಾಗಿದೆ. ತ್ರಿಕೋನ ಪ್ರೇಮ ಕಥಾನಕದಲ್ಲಿ ಪ್ರೀತಿಯನ್ನು ಹುಡುಕುವ ಮೂವರ ನಿರೀಕ್ಷೆಗೆ ನಿರಾಸೆಯೇ ಉತ್ತರವಾಗಿ, ಬದುಕು ಪೂರಾ ಆಷಾಢದ ಅಗಲಿಕೆಯೇ ನಿರಂತರವಾಗುತ್ತದೆ. ಕೊನೆಗೂ ಅನಿವಾರ್ಯತೆಗಳ ತಿರುಗುಣಿಯಲ್ಲಿ ಸಿಕ್ಕ ಪ್ರೇಮ ಯಾರಿಗೂ ದಕ್ಕದೇ ಬಲಿಪಶುವಾಗುತ್ತದೆ.
         
ಆಟಿ ತಿಂಗೊಲ್ದ ಒಂಚಿ ದಿನ ನಾಟಕದ ಕಥಾ ನಿರೂಪನೆಗೆ ಬಳಸಿದ ತಂತ್ರಗಾರಿಕೆ ತುಂಬಾ ಕುತೂಹಲಕಾರಿಯಾಗಿದೆ. ಇದು ಕಾಳಿದಾಸನದೇ ಕಥೆ ಇರಬಹುದು ಆದರೆ ನಾಟಕದ ಮುಕ್ಕಾಲು ಭಾಗ ಕಾಳಿದಾಸ ಕಾಣಿಸಿಕೊಳ್ಳುವುದೇ ಇಲ್ಲ. ಮೊದಲ ದೃಶ್ಯದಲ್ಲಿ ಕಾಣಿಸಿಕೊಂಡು ಉಜ್ಜಯಿನಿಗೆ ತೆರಳುವ ಕಾಳಿದಾಸ ಮತ್ತೆ ರಂಗದ ಮೇಲೆ ಬರುವುದೇ ನಾಟಕದ ಕ್ಲೈಮ್ಯಾಕ್ಸನಲ್ಲಿ. ನಾಟಕದ ನಾಯಕನೇ ಇಲ್ಲದೇ ಬಹುತೇಕ ನಾಟಕ ಮುನ್ನಡೆಯುತ್ತದೆ. ಆದರೆ ಪ್ರತಿ ಹಂತದಲ್ಲೂ ಕಾಳಿದಾಸ ಪರೋಕ್ಷವಾಗಿ ಪ್ರಸ್ತುತನಾಗುತ್ತಲೇ ಇರುತ್ತಾನೆ. ಎಲ್ಲಾ ಪಾತ್ರಗಳ ಮಾತಲ್ಲಿ ಕಾಳಿದಾಸನ ಇರುವು ಗೋಚರಿಸುತ್ತಲೇ ಇರುತ್ತದೆ. ಹಾಗೆಯೇ ನಾಟಕದಾದ್ಯಂತ ಮಲ್ಲಿಕಾ ಪಾತ್ರದ ಮೂಲಕ ಕಾಳಿದಾಸನನ್ನು ತೋರಿಸುವ ಪ್ರಯತ್ನ ಮಾರ್ಮಿಕವಾಗಿ ಮೂಡಿಬಂದಿದೆ. ಎಲ್ಲಾ ಪಾತ್ರಗಳ ಮೂಲಕ ಕಾಳಿದಾಸನೇ ಮಾತಾಡುತ್ತಾ ಹೋಗುವಂತಹ ನಾಟಕದ ನಿರೂಪನಾ ಕ್ರಮ 60  ದಶಕದಲ್ಲಿ ಸಂಚಲನವನ್ನು ಹುಟ್ಟಿಸಿತ್ತು. ಈಗಲೂ ಸಹ ನಾಟಕ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿದ್ದು ಭಾರತೀಯ ರಂಗಭೂಮಿಯಲ್ಲಿ ಒಂದು ಕ್ಲಾಸಿಕ್ ಪ್ರಯೋಗವೆನಿಸಿಕೊಂಡಿದೆ.

ಇಂತಹ ಕ್ಲಾಸಿಕ್ ನಾಟಕವನ್ನು ಡಾ.ಭರತ್ ಕುಮಾರ್ ಪೊಲಿಪುರವರು ತುಳು ಭಾಷೆಯಲ್ಲಿ ಅನನ್ಯವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ತುಳು ಭಾಷೆ ಅರ್ಥವಾಗದ ಪ್ರೇಕ್ಷಕರಿಗೂ ಸಹ ನಾಟಕ ತನ್ನ ದೃಶ್ಯ ಸಂಯೋಜನೆಯ ಕೌಶಲ್ಯದಿಂದಾಗಿ ಅನುಭವಕ್ಕೆ ದಕ್ಕುತ್ತದೆ. ಒಂದೂ ಮುಕ್ಕಾಲು ಗಂಟೆಗಳ ಸುದೀರ್ಘ ಅವಧಿ ಅದು ಹೇಗೆ ಕಳೆಯಿತು ಎನ್ನುವುದೇ ಪ್ರೇಕ್ಷಕರಿಗೆ ಗೊತ್ತಾಗದಂತೆ ಆಟಿ ತಿಂಗೊಲ್ದ ಒಂಜಿ ದಿನ ನಾಟಕ ನೋಡಿಸಿಕೊಂಡು ಹೋಗುತ್ತದೆ. ಕಲಾವಿದರ ಅಭಿನಯ ಸಾಮರ್ಥ್ಯವನ್ನು ಬಳಸಿಕೊಂಡು ಇಡೀ ನಾಟಕವನ್ನು ನಿರ್ದೇಶಕರು ಪ್ರಸ್ತುತಪಡಿಸಿದ್ದಾರೆ. ಅಭಿನಯಕ್ಕೆ ಪೂರಕವಾಗಿ ನಾಟಕದಾದ್ಯಂತ ಗಮನಸೆಳೆಯುವುದು ಪ್ರತಿ ಪಾತ್ರಗಳ ಮೂವಮೆಂಟ್ ಹಾಗೂ ಬ್ಲಾಕಿಂಗ್. ಯಾವ ಪಾತ್ರಗಳೂ ಹೆಚ್ಚು ಹೊತ್ತು ನಿಂತಲ್ಲಿ ನಿಲ್ಲದೇ ಕುಂತಲ್ಲಿ ಕೂಡದೇ ಚಲನಶೀಲವಾಗಿರುವುದು ನಾಟಕದ ವಿಶೇಷತೆಯಾಗಿದೆ.

ಅಭಿನಯವನ್ನು ಪ್ರಮುಖವಾಗಿಟ್ಟುಕೊಂಡು ಪೂರಕವಾಗಿ ರಂಗತಂತ್ರಗಳನ್ನು ಬಳಸಿಕೊಂಡಿದ್ದರಿಂದ ನಾಟಕ ಅಭಿನಯ ಪ್ರಧಾನ ನಾಟಕವಾಗಿದೆ. ಸಂಭಾಷಣೆಯೇ ನಾಟಕದ ಜೀವಾಳವಾದರೂ ತನ್ನ ಚಲನಶೀಲತೆ ಹಾಗೂ ಆಂಗಿಕ-ಸಾತ್ವಿಕ ಅಭಿನಯಗಳಿಂದಾಗಿ ಪ್ರತಿ ಪಾತ್ರವೂ ನೋಡುಗರ ಅಂತರಂಗವನ್ನು ತಟ್ಟುತ್ತವೆ. ಹೀಗಾಗಿ ಮಾತುಗಳು ಬರೀ ಮಾತಾಗದೇ ಅಭಿನಯದ ಭಾಗವಾಗಿ ನಾಟಕದ ಸೊಗಸನ್ನು ಹೆಚ್ಚಿಸಿವೆ. ನಾಟಕದಾದ್ಯಂತ ಗಮನಸೆಳೆಯುವುದು ಮಲ್ಲಿಕಾ ಪಾತ್ರಧಾರಿ ಸುಧಾಶೆಟ್ಟಿ ರವರ ಮನೋಜ್ಞವಾದ ಅಭಿನಯ. ಸುಧಾಶೆಟ್ಟಿರವರು ನಗು ಮಿಶ್ರಿತ ವಿಷಾದವನ್ನು ಅಭಿನಯಿಸುವ ರೀತಿಯನ್ನು ನೋಡಿಯೇ ಅನುಭವಿಸಬೇಕು. ಕೊನೆಯ ದೃಶ್ಯದಲ್ಲಂತೂ  ಮಲ್ಲಿಕಾಳ ಅಭಿನಯ ನೋಡುಗರೆದೆಯಲ್ಲಿ ಕರುಣಾರಸಾನುಭವ ಸಂಚಲನವನ್ನು ಹೊಮ್ಮಿಸುವಂತಿತ್ತು. ಕಾಳಿದಾಸನ ಪಾತ್ರದಲ್ಲಿ ಮೋಹನ್ ಮಾರ್ನಾಡರವರ ಅಭಿನಯ ಹಾಗೂ ಸಂಭಾಷಣಾ ಸೊಗಸು ಪ್ರೇಕ್ಷಕರನ್ನು ಬೆರಗುಗೊಳಿಸುವಂತಿತ್ತು. ಖಳನಾಯಕ ವಿಲೋಮನ ಪಾತ್ರದಲ್ಲಿ ಅವಿನಾಶ್ ಕಾಮತ್ರವರು ತಮ್ಮ ವಿಶಿಷ್ಟವಾದ ಆಂಗಿಕಾಭಿನಯದಲ್ಲಿ ವಿಜ್ರಂಭಿಸುತ್ತಾರೆ. ವಿಶೇಷವೇನೆಂದರೆ ತುಳು ಭಾಷೆ ಗೊತ್ತಿಲ್ಲದ ಅವಿನಾಶ್ ನಾಟಕಕ್ಕಾಗಿಯೇ ಭಾಷೆಯನ್ನು ರೂಢಿಸಿಕೊಂಡು ಅಭಿನಯಿಸಿದ್ದು ಅವರ ರಂಗಬದ್ದತೆಗೆ ಸಾಕ್ಷಿಯಾಗಿದೆ ಮೂರೂ ಪಾತ್ರಧಾರಿಗಳು ಒಬ್ಬರಿಗಿಂತಾ ಒಬ್ಬರು ಅಭಿನಯದಲ್ಲಿ ಪೈಪೋಟಿಗೆ ಬಿದ್ದಂತೆ ಅಭಿನಯಿಸಿ ನೋಡುಗರಲ್ಲಿ ಸಂಚಲನವನ್ನುಂಟುಮಾಡುವಲ್ಲಿ ಸಫಲರಾಗಿದ್ದಾರೆ. ಉಳಿದೆಲ್ಲಾ ಪಾತ್ರಧಾರಿಗಳೂ ಸಹ ತಮ್ಮ ಪಾತ್ರಗಳಿಗೆ ನ್ಯಾಯಸಲ್ಲಿಸಲು ಶ್ರಮಿಸಿದ್ದಾರೆ.

ನಾಟಕದಲ್ಲಿ ಆಂಗಿಕ, ವಾಚಿಕ ಹಾಗೂ ಸಾತ್ವಿಕ ಅಭಿನಯಗಳು ಹಿತವಾಗಿ ಸಮ್ಮಿಶ್ರಗೊಂಡು ನಾಟಕದ ಯಶಸ್ಸಿಗೆ ಕಾರಣವಾಗಿವೆ. ಆದರೆ... ಆಹಾರ್ಯಾಭಿನಯದಲ್ಲಿ ತುಂಬಾ ರಾಜಿಮಾಡಿಕೊಂಡಂತಿದೆ. ನಾಟಕದ ಸನ್ನಿವೇಶ, ಪಾತ್ರ, ಕಾಲ, ಪ್ರದೇಶಗಳಿಗೆ ಹೊಂದಾಣಿಕೆಯಾಗದಂತಹ ಕಾಸ್ಟೂಮ್ಗಳನ್ನು ಬಳಸಲಾಗಿದೆ. ವಸ್ತ್ರವಿನ್ಯಾಸ ಮಾಡಿದ ದಾಕ್ಷಾಯಿಣಿಭಟ್ ರವರು ದಕ್ಷಿಣ ಭಾರತದ ಶೈಲಿಯಲ್ಲಿ ವಸ್ತ್ರವಿನ್ಯಾಸಗೊಳಿಸಿದ್ದು ಬೌಗೋಳಿಕವಾಗಿ ಹೊಂದಾಣಿಕೆಯಾಗುತ್ತಿಲ್ಲ. ಇಡೀ ನಾಟಕ ನಡೆಯುವುದು ಹಿಮಾಲಯ ಪ್ರದೇಶದಲ್ಲಿ ಎನ್ನುವುದಕ್ಕೆ ಇದೇ ನಾಟಕದಲ್ಲಿ ಪ್ರಸ್ತಾಪಗಳಿವೆ. ಆದರೆ ಉತ್ತರ ಭಾರತದಲ್ಲಿ ಅಂದಿಗೂ ಇಂದಿಗೂ ನಾಟಕದ ಪಾತ್ರಗಳು ಧರಿಸಿದಂತಹ ಕಾಸ್ಟೂಮ್ಸಗಳನ್ನು ಬಳಸುವುದು ರೂಢಿಯಲ್ಲಿಲ್ಲ. ಆದರೆ ದಾಕ್ಷಾಯಿಣಿರವರು ನಾಟಕದ ಪ್ರಾದೇಶಿಕತೆಯನ್ನು ಅಧ್ಯಯನ ಮಾಡದೇ ತಮಗನ್ನಿಸಿದ ರೀತಿಯಲ್ಲಿ ವಸ್ತ್ರವಿನ್ಯಾಸ ಗೊಳಿಸಿದ್ದು ಆಭಾಸಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಮಲ್ಲಿಕಾ ಹಾಗೂ ಅಂಬಿಕಾ ಪಾತ್ರಗಳಿಗೆ ಕಾಟನ್ ಸೀರೆ ಉಡಿಸಿದ್ದು ಸರಿಹೊಂದುವಂತಿಲ್ಲ. ಪಾತ್ರೋಚಿತ ಕಾಸ್ಟೂಮ್ಗಳ ವಿನ್ಯಾಸವನ್ನು ನಾಟಕ ಡಿಮ್ಯಾಂಡ್ ಮಾಡುತ್ತದೆ.

ಇದರ ಜೊತೆಗೆ ನಾಟಕದ ರಸಾನುಭವದಲ್ಲಿ ಒಂದಿಷ್ಟು ವಿಘ್ನ ತಂದಿರುವುದು ಅನಗತ್ಯ ರಂಗವಿನ್ಯಾಸ. ಹಿಂಬದಿ ಹಾಗೂ ಬಲಬದಿಯಲ್ಲಿ ಕಿಟಕಿ ಸಮೇತ ಡಿಸೈನ್ ಗೋಡೆ ಮಾದರಿಯ ಸೆಟ್ ನಿಜಕ್ಕೂ ನಾಟಕದ ಹೈಲೈಟ್ ಆಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ....ರಂಗವೇದಿಕೆಯಲ್ಲಿ ಸಂಯೋಜನೆಗೊಳಿಸಿದ ಪ್ಲಾಟ್ ಪಾರಂಗಳು ವೇದಿಕೆಗೆ ಅತಿಯಾಗಿದ್ದು, ನಟರ ಅಭಿನಯ ಸ್ಪೇಸ್ನ್ನು ಆಕ್ರಮಿಸಿಕೊಂಡಂತಿವೆ. ನಟರ ಚಲನೆಗೆ ಅಡೆತಡೆಯನ್ನೊಡ್ಡಿವೆ. ನೋಡುಗರಿಗೂ ಸಹ ಅಸಹನೆಯನ್ನುಂಟುಮಾಡುವಂತಿದೆ. ಸನ್ನಿವೇಶವನ್ನು ಶ್ರೀಮಂತಗೊಳಿಸಬಹುದಾಗಿದ್ದ, ದೃಶ್ಯಕ್ಕೆ ಅಗತ್ಯವಾದ ಮೂಡನ್ನು ತರಬಹುದಾಗಿದ್ದ ಕಾಸ್ಟೂಮ್ ಹಾಗೂ ಸೆಟ್ ವಿಭಾಗದಲ್ಲಿ ಅಗತ್ಯ ಪೂರಕ ಬದಲಾವಣೆಗಳನ್ನು ಮಾಡಿದರೆ ಕ್ಲಾಸಿಕ್ ನಾಟಕ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ.

ನಾಟಕದ ಸುಂದರ ಹಾಡುಗಳನ್ನು ಕೇಳುಗರ ಹೃದಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಸಂಗೀತ ನಿರ್ದೇಶಕ ರಾಮಚಂದ್ರ ಹಡಪದರವರು ಆಲಾಪದ ಪ್ಲೇಸಮೆಂಟ್ ಮಾಡುವಲ್ಲಿ ವಿಫಲರಾಗಿ ಪ್ರೇಕ್ಷಕರಿಗೆ ಒಂಚೂರು ಕಿರಿಕಿರಿಯನ್ನುಂಟುಮಾಡಿದರು. ಆಲಾಪಗಳು ಮೂಡ್ ಸೃಷ್ಟಿಸುವಲ್ಲಿ ತುಂಬಾ ಅಗತ್ಯದ ಪಾತ್ರವಹಿಸುತ್ತವೆ. ಆದರೆ ನಟರು ಸಂಭಾಷಣೆ ಹೇಳುವಾಗ ಆಲಾಪಗಳು ಓವರ್ಲ್ಯಾಪ್ ಆದರೆ ಕೇಳುಗರಿಗೆ ಅಸಹನೀಯವೆನಿಸುತ್ತದೆ. ಬೆಳಕಿನ ವಿನ್ಯಾಸದಲ್ಲಿ ಅಂತಹ ಬದಲಾವಣೆಗಳೇನೂ ಇಲ್ಲ. ದೃಶ್ಯಗಳು ಬದಲಾದರೂ ಬೆಳಕಿನಲ್ಲಿ ಮೂಡಿಗೆ ತಕ್ಕಂತೆ ವ್ಯತ್ಯಾಸಗಳಿರಲಿಲ್ಲ.

ಪೂರಕ ರಂಗತಂತ್ರಗಳ ನ್ಯೂನ್ಯತೆಗಳ ನಡುವೆಯೂ ಕೇವಲ ಕಲಾವಿದರ ಅಭಿನಯ ಸಾಮರ್ಥ್ಯ ಹಾಗೂ ನಿರ್ದೇಶಕರ ಬ್ಲಾಕಿಂಗ್ ಮೂವಮೆಂಟ್ ಕೌಶಲ್ಯ ಹಾಗೂ ನಾಟಕದ ಸ್ಕ್ರಿಪ್ಟ್ನಲ್ಲಿರುವ ತಾಕತ್ತಿನಿಂದಾಗಿ ನಾಟಕ ಯಶಸ್ವಿಯಾಗಿದೆ. ಹಿನ್ನೆಲೆ ಸಂಗೀತ, ಬೆಳಕು ವಿನ್ಯಾಸ, ರಂಗಸಜ್ಜಿಕೆ ವಿನ್ಯಾಸ ಹಾಗೂ ವಸ್ತ್ರವಿನ್ಯಾಸಗಳನ್ನು ಸೂಕ್ತವಾಗಿ ಸಂಯೋಜನೆಗೊಳಿಸಿ ದೃಶ್ಯಗಳಿಗೆ ಅಗತ್ಯವಾದ ಮೂಡನ್ನು ಸೃಷ್ಟಿಸಿದ್ದರೆ ಆಟಿ ತಿಂಗೊಲ್ದ ಒಂಜಿ ದಿನ ನಾಟಕವು ತುಳು ರಂಗಭೂಮಿ ಅಷ್ಟೇ ಅಲ್ಲ ಕನ್ನಡ ರಂಗಭೂಮಿಯಲ್ಲೂ ಒಂದು ಕ್ಲಾಸಿಕ್ ರಂಗಪ್ರಯೋಗವಾಗುವುದರಲ್ಲಿ ಸಂದೇಹವೇ ಇಲ್ಲ.

ಮುಂಬೈನಂತಹ ಯಾಂತ್ರಿಕ ಮಹಾನಗರದಲ್ಲಿ ಕೆಲವಾರು ಕನ್ನಡಿಗರೆಲ್ಲಾ ಸೇರಿ ಕರ್ನಾಟಕ ಸಂಘದ ಆಶ್ರಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿರುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ಸಂಗತಿ. ಪ್ರತಿ ವರ್ಷ ನಾಟಕವನ್ನು ನಿರ್ಮಿಸಿ ಕರ್ನಾಟಕದಲ್ಲೂ ಸಹ ಕೆಲವಾರು ಪ್ರದರ್ಶನ ಕೊಡುತ್ತಾ ಬಂದಿರುವುದು ಹೊರನಾಡ ಕನ್ನಡಿಗರ ಮಾದರಿ ಕೆಲಸವಾಗಿದೆ. ಕರ್ನಾಟಕದಲ್ಲಿ, ಅದೂ ಬೆಂಗಳೂರಿನಲ್ಲಿ ಆಧುನಿಕ ಹವ್ಯಾಸಿ ರಂಗಭೂಮಿಯ ಕಾನ್ಸೆಪ್ಟ್ ಕುಲಗೆಟ್ಟು ವ್ಯಾಪಾರಿಕರಣಗೊಳ್ಳುತ್ತಿರುವಾಗ ಮುಂಬೈನಲ್ಲಿ ಡಾ.ಪೊಲೀಪು ಹಾಗೂ ಸಂಗಡಿಗರು  ನಿಜವಾದ ಅರ್ಥದಲ್ಲಿ ಹವ್ಯಾಸಿ ರಂಗಭೂಮಿಯನ್ನು ಸ್ವಾರ್ಥರಹಿತವಾಗಿ ಕಟ್ಟುತ್ತಿರುವುದು ಅಚ್ಚರಿದಾಯಕವಾಗಿದೆ. ಯಾಕೆಂದರೆ ಕಲಾಭಾರತಿ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಬೇರೆ ಕಡೆ ಯಾವುದೋ ಕೆಲಸವನ್ನು ಮಾಡುತ್ತಾ ಉಳಿದ ಸಮಯದಲ್ಲಿ ನಾಟಕ ನಿರ್ಮಿತಿಯಲ್ಲಿ ತೊಡಗಿಸಿಕೊಂಡು ತಮ್ಮ ಕಲೆ, ಸಮಯ, ಹಣವನ್ನು ಸಾರ್ಥಕಗೊಳಿಸುತ್ತಿರುವುದು ಕನ್ನಡ ರಂಗಭೂಮಿಯವರಿಗೆ ಆದರ್ಶನೀಯವಾಗಿದೆ. ಕಾಟಾಚಾರಕ್ಕೆ ನಾಟಕ ಮಾಡದೇ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ತಮ್ಮ ತನು ಮನ ಧನವನ್ನು ಸಮರ್ಪನಾ ಮನೋಭಾವದಿಂದ ರಂಗಾರ್ಪನೆ ಮಾಡಿ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಡುತ್ತಿರುವ ಮುಂಬೈ ಕರ್ನಾಟಕ ಸಂಘದ ಕಲಾಭಾರತಿ ತಂಡದ ಪ್ರತಿಯೊಬ್ಬ ಕಲಾವಿದರೂ ಅಭಿನಂದನೀಯರು.   

                      -ಶಶಿಕಾಂತ ಯಡಹಳ್ಳಿ
            
               











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ