1944ರಲ್ಲಿ ಕುವೆಂಪುರವರು ‘ಶೂದ್ರ ತಪಸ್ವಿ’ ದೃಶ್ಯಕಾವ್ಯವನ್ನು ಬರೆದು ಪ್ರಕಟಿಸಿದಾಗ ಕನ್ನಡ ಸಾರಸ್ವತಲೋಕ ಬೆಚ್ಚಿಬಿದ್ದಿತ್ತು. ‘ವಾಲ್ಮೀಕಿ ರಾಮಾಯಣವನ್ನು ಬದಲಾಯಿಸುವ ಸಾಹಸವೇ ಈ ಅಬ್ರಾಹ್ಮಣ ಕುವೆಂಪುಗೆ’ ಎಂದು ನಾಲ್ಕು ದಿಕ್ಕಿನಿಂದ ಸನಾತನವಾದಿಗಳು ಆಕ್ರೋಶ ವ್ಯಕ್ತಪಡಿಸಿದರು. ಜಾತಿಗರ್ವ ಹಾಗೂ ಶಾಸ್ತ್ರದ ಮೌಡ್ಯತೆ ಮತ್ತು ಪರಂಪರಾಗತ ವರ್ಣಾಶ್ರಮ ಅಸಮಾನ ಸಂಸ್ಕೃತಿಯನ್ನು ಶ್ರೀರಾಮನ ಮೂಲಕವೇ ‘ಶೂದ್ರ ತಪಸ್ವಿ’ಯಲ್ಲಿ ಕುವೆಂಪು ಪ್ರಶ್ನಿಸಿದ್ದರು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವಾಲ್ಮೀಕಿ ವಿರಚಿತ ರಾಮಾಯಣದ ಉತ್ತರಕಾಂಡದಲ್ಲಿ ಶಂಭೂಕವಧಾ ಪ್ರಸಂಗ ಬರುತ್ತದೆ. ಸೀತಾಪರಿತ್ಯಾಗದ ನಂತರ ರಾಮನಲ್ಲಿಗೆ ಬಂದ ವೃದ್ಧ ಬ್ರಾಹ್ಮಣನು ತನ್ನ ಮಗನ ಸಾವಿಗೆ ಶೂದ್ರನಾದ ಶಂಭೂಕನ ತಪಸ್ಸೇ ಕಾರಣವೆಂದು ಆರೋಪಿಸುತ್ತಾನೆ. ನಾರದನ ಪ್ರಚೋದನೆಗೊಳಗಾದ ರಾಮನು ಇದು ವರ್ಣಾಶ್ರಮ ಧರ್ಮಶಾಸ್ತ್ರಕ್ಕೆ ವಿರೋಧವೆಂದು ಭಾವಿಸಿ ಶಂಭೂಕನನ್ನು ಹುಡುಕಿಕೊಂಡು ಹೋಗಿ ಖಡ್ಗದಿಂದ ಸಂಹರಿಸಿ ಧರ್ಮವನ್ನು ರಕ್ಷಿಸುತ್ತಾನೆ. ‘ವಾಲ್ಮೀಕಿಯ ಅಂಕಿತದಲ್ಲಿರುವ ಈ ಅಸಹ್ಯಕರವಾದ ವರ್ಣಭ್ರಾಂತಿಯ ಕಥೆ ಹಾಸ್ಯಕ್ಕೆ ಮೂರ್ಖ ಕಿರೀಟವಿಟ್ಟಂತೆ’ ಎಂದು ಕುವೆಂಪುರವರು ಲೇವಡಿ ಮಾಡುತ್ತಾರೆ.
ಮುಂದೆ ಭವಭೂತಿ ತನ್ನ ‘ಉತ್ತರ ರಾಮಚರಿತ’ದಲ್ಲಿ ಶಂಭೂಕವಧೆಗೆ ವಿಕ್ಷಪ್ತ ಕಾರಣವನ್ನು ಕೊಡುತ್ತಾನೆ. ಶಂಭೂಕನನ್ನು ವಧೆ ಮಾಡಿದ ರಾಮನಿಗೆ ಪಶ್ಚಾತ್ತಾಪವಾಗುತ್ತದೆ. ಸತ್ತ ಶಂಭೂಕನಿಂದ ಶಾಪಗ್ರಸ್ತ ಗಂಧರ್ವ ಎದ್ದು ಬಂದು ತನ್ನ ಶಾಪವಿಮೋಚನೆಗಾಗಿ ರಾಮನಿಗೆ ಕೃತಜ್ಞತೆ ಹೇಳುತ್ತಾನೆ. ‘ಸತ್ಸಂಗದಿಂದ ಮರಣ ಸಂಭವಿಸಿದರೂ ಅದು ಶ್ರೇಯಸ್ಕರ’ ಎಂಬುದನ್ನು ಸಾಬೀತುಪಡಿಸಲು ಭವಭೂತಿ ಪ್ರಯತ್ನಿಸುತ್ತಾನೆ.
ವಾಲ್ಮೀಕಿ ರಾಮಾಯಣದಲ್ಲಿ ಶಂಭೂಕವಧೆಯಿಂದಾಗಿ ವರ್ಣಾಶ್ರಮದ ಅಸಮಾನತೆ ಹಾಗೂ ಶೋಷಣೆಯನ್ನು ಖಾಯಂಗೊಳಿಸಲು ಪ್ರಯತ್ನಿಸಲಾಯಿತು. ಭವಭೂತಿಯ ‘ಉತ್ತರ ರಾಮಚರಿತ’ದಲ್ಲಿ ಶಂಭೂಕನ ಹತ್ಯೆಗೆ ಶಾಪವಿಮೋಚನಾ ಕಲ್ಪನೆಯನ್ನು ಸೃಷ್ಟಿಸಲಾಯಿತು. ಆದರೆ ಈ ಎರಡೂ ಜೀವವಿರೋಧಿತನವನ್ನು ಪ್ರಶ್ನಿಸಿದ ಕುವೆಂಪುರವರು ತಮ್ಮ ‘ಶೂದ್ರ ತಪಸ್ವಿ’ಯಲ್ಲಿ ಶೂದ್ರನ ತಪಸ್ಸನ್ನು ಸಮರ್ಥಿಸಿಕೊಳ್ಳುತ್ತಲೇ ಪುರೋಹಿತಶಾಹಿಯ ಅಟ್ಟಹಾಸವನ್ನು ಮಟ್ಟಹಾಕುವ ಪ್ರಯತ್ನವನ್ನು ಮಾಡುತ್ತಾರೆ. ಅದಕ್ಕಾಗಿ ಬ್ರಹ್ಮಾಸ್ತ್ರ ಪರಿಕಲ್ಪನೆಯನ್ನು ಕುವೆಂಪು ಮಾರ್ಮಿಕವಾಗಿ ಬಳಸುತ್ತಾರೆ. ಅದೇನೆಂದರೆ...
ಬ್ರಹ್ಮಾಸ್ತ್ರದಿಂದ ಶೂದ್ರತಪಸ್ವಿಯನ್ನು ಸಂಹರಿಸಲು ಬ್ರಾಹ್ಮಣ ಒತ್ತಾಯಿಸುತ್ತಾನೆ. ‘ಬ್ರಹ್ಮಾಸ್ತ್ರ ಭಯಂಕರವಾದದ್ದು ತನ್ನ ಶತ್ರುವನ್ನು ಹುಡುಕಿ ಕತ್ತರಿಸದೇ ಬಿಡದು’ ಎಂದು ಹೇಳಿದ ರಾಮ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಆ ಅಸ್ತ್ರ ಶಂಭೂಕನ ಬದಲು ಬ್ರಾಹ್ಮಣ ಸಂಹಾರಕ್ಕೆ ಮುಂದಾಗುತ್ತದೆ. ಸಾವಿಗೆ ಹೆದರಿದ ಆ ಹಾರವ ರಾಮನಲ್ಲಿ ಕ್ಷಮೆಕೋರುತ್ತಾನೆ. ಶ್ರೀರಾಮ ಆತನಿಗೆ ಕ್ಷಮಾದಾನ ಮಾಡಿ ಆತನ ಮಗನನ್ನೂ ಬದುಕಿಸುತ್ತಾನೆ. ಇಡೀ ಪ್ರಕರಣವನ್ನು ಸುಖಾಂತ್ಯವಾಗುತ್ತದೆ.
ಇಲ್ಲಿ ಕುವೆಂಪುರವರ ಸಮತೂಕದ ಪ್ರಜ್ಞೆ ಅನಾವರಣಗೊಂಡಿದೆ. ಅತ್ತ ಶಂಭೂಕನೂ ಸಾಯಬಾರದು ಇತ್ತ ಬ್ರಾಹ್ಮಣ ಪುತ್ರನೂ ಬದುಕಬೇಕು ಹಾಗೂ ಪುರೋಹಿತಶಾಹಿಗಳ ಗರ್ವಭಂಗವಾಗಬೇಕು ಎಂಬುದು ಕುವೆಂಪುರವರ ‘ಶೂದ್ರತಪಸ್ವಿ’ಯ ಆಶಯವಾಗಿದೆ. ದುಡಿಯುವ ವರ್ಗಗಳ ಶತ್ರುಗಳಾಗಿದ್ದ ಪುರೋಹಿತಶಾಹಿಗಳ ಪ್ರತಿನಿಧಿಯಾಗಿದ್ದ ಬ್ರಾಹ್ಮಣನನ್ನು ಬ್ರಹ್ಮಾಸ್ತ್ರ ಪ್ರಯೋಗದಿಂದ ಶಿಕ್ಷಿಸುವುದು ಸೂಕ್ತವಾಗಿತ್ತಾದರೂ ಕುವೆಂಪುರವರು ಜೀವಹಾನಿಯನ್ನು ಮಾಡಬಯಸಲಿಲ್ಲ. ಅದು ಅವರ ಆಶಯವು ಆಗಿರಲಿಲ್ಲ. ಯಾವ ಶ್ರೀರಾಮನನ್ನು ಮುಂದಿಟ್ಟುಕೊಂಡು ಪುರೋಹಿತಶಾಹಿ ವರ್ಗ ತಮ್ಮ ವರ್ಣಾಶ್ರಮ ಸಂಸ್ಕೃತಿಯನ್ನು ಮುಂದುವರೆಸಲು ಸತತವಾಗಿ ಪ್ರಯತ್ನಿಸುತ್ತಿತ್ತೋ ಅದೇ ಶ್ರೀರಾಮನನ್ನು ಕೇಂದ್ರವಾಗಿಟ್ಟುಕೊಂಡ ಕುವೆಂಪುರವರು ಪುರೋಹಿತಶಾಹಿಯ ಜನವಿರೋಧಿ ವರ್ಣಾಶ್ರಮ ಕಲ್ಪನೆಯನ್ನು ‘ಶೂದ್ರತಪಸ್ವಿ’ಯಲ್ಲಿ ಛಿದ್ರಗೊಳಿಸುತ್ತಾರೆ. ಕೆಳವರ್ಗದ ವ್ಯಕ್ತಿಗಳೂ ಸಹ ತಮ್ಮ ಸ್ವಸಾಮರ್ಥ್ಯದಿಂದ ಉನ್ನತ ಹಂತ ತಲುಪಬಹುದಾದ ಸಾಧ್ಯತೆಯನ್ನು ಬೆಂಬಲಿಸುತ್ತಾರೆ.
ಶತಮಾನಗಳ ಧರ್ಮಾಂಧತೆಯನ್ನು ಯಾವಾಗ ಕುವೆಂಪುರವರು ‘ಶೂದ್ರತಪಸ್ವಿ’ಯಲ್ಲಿ ಪ್ರಶ್ನಿಸಿದರೋ ಆಗ ಪುರೋಹಿತಶಾಹಿ ಮನಸ್ಥಿತಿಯ ಲೇಖಕರು ತಮ್ಮ ವಿಮರ್ಶೆಗಳ ಮೂಲಕ ವಿರೋಧಿಸತೊಡಗಿದರು. ಆಗ “ಶ್ರೀ ಕಾರಂತರೋ, ಶ್ರೀರಂಗರೋ, ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರೋ ಬರೆದಿದ್ದರೆ...... ಬಹುಶಃ ಕವಿ ಬ್ರಾಹ್ಮಣೇತರ ಎಂಬರಿವಿನಿಂದ ಬ್ರಾಹ್ಮಣ ನಿಂದೆಗಾಗಿಯೋ ಕುಚೋದ್ಯಕ್ಕಾಗಿಯೋ ಈ ಕೃತಿ ರಚಿತವಾಗಿದೆ ಎಂಬ ವಿಕೃತಭಾವನೆಯಿಂದ ವಿಮರ್ಶೆ ಕಲುಷಿತವಾಗುವುದು ತಪ್ಪುತ್ತಿತ್ತೇನೋ...?” ಎಂದು ಕುವೆಂಪುರವರು ವಿಕೃತ ಮನಸ್ಸಿನ ವಿಮರ್ಶಕರಿಗೆ ವಿಷಾದಪೂರ್ಣವಾಗಿ ಪ್ರತಿಕ್ರಿಯಿಸಿದ್ದರು.
ಕುವೆಂಪರವರಿಗೆ ಈ ‘ಶೂದ್ರತಪಸ್ವಿ’ ನಾಟಕವಾಗುವುದು ಇಷ್ಟವಿರಲಿಲ್ಲ. “ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ ಮಹತ್ತನ್ನೂ ಹೊರಗಡೆಯ ಅಲ್ಪವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋಭೂಮಿಕೆಯಲ್ಲಿಯೇ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು.... ಮನೋವೇದಿಕೆಯ ಸಜೀವತೆಯ ಮತ್ತು ಶ್ರೀಮಂತತೆಯ ಮುಂದೆ ಹೊರಗಡೆಯ ನಾಟಕಶಾಲೆ ಒಂದು ದರಿದ್ರ ಪ್ರಯತ್ನ.....” ಎಂದು ಕುವೆಂಪುರವರು ‘ಶೂದ್ರತಪಸ್ವಿ’ಯ ಮುನ್ನುಡಿಯಲ್ಲಿ ಬರೆಯುತ್ತಾರೆ. ಆದರೆ ಈ ನಾಟಕ ಬರೆದು ಹದಿನೆಂಟು ವರ್ಷಗಳ ನಂತರ 1962ರಲ್ಲಿ ಕುವೆಂಪುರವರು ತಮ್ಮ “ಬೆರಳ್ಗೆ ಕೊರಳ್” ನಾಟಕವನ್ನು ನೋಡಿದ ಮೇಲೆ “ಬೆರಳ್ಗೆ ಕೊರಳ್” ಅಂತಹ ನಾಟಕವನ್ನೂ ಅತ್ಯದ್ಬುತವಾಗಿ ರಂಗಭೂಮಿಯ ಮೇಲೆ ಪ್ರೇಕ್ಷಕರು ರಸರೋಮಾಂಚಿತರಾಗುವಂತೆ ಪ್ರದರ್ಶಿಸಿ ಯಶಸ್ವಿಯಾಗಿರುವ ನಟಸಾಹಸಿಗಳಿಗೆ ಮುನ್ನುಡಿಕಾರನ ಈ ಉಕ್ತಿಯನ್ನು ಹುಸಿಗೊಳಿಸಲು ಸಾಧ್ಯವಾಗಬಹುದೇನೋ?” ಎಂದು ತಮ್ಮ ಅಭಿಪ್ರಯವನ್ನು ಬದಲಾಯಿಸಿಕೊಳ್ಳುತ್ತಾರೆ.
ಕುವೆಂಪುರವರ ಅಭಿಪ್ರಾಯದಂತೆ ‘ಶೂದ್ರತಪಸ್ವಿ’ಯನ್ನು ನಾಟಕವಾಗಿಸಲು ಸ್ವಲ್ಪ ಕಷ್ಟಸಾಧ್ಯವಾಗಿತ್ತು. ಅಂತಹ ಪ್ರಯತ್ನಗಳು ನಡೆದವಾದರೂ ಯಶಸ್ವಿಯಾಗಲಿಲ್ಲ. ಯಾಕೆಂದರೆ ಕುವೆಂಪುರವರು ಬಳಸಿದ ಹಳಗನ್ನಡ ಭಾಷೆ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಸಂವಹನಗೊಳ್ಳುತ್ತಿರಲಿಲ್ಲ. ಹೀಗಾಗಿ ಕುವೆಂಪುರವರ ದೃಶ್ಯಕಾವ್ಯವನ್ನು ಡಾ.ಜಿ.ಎಸ್.ಶಿವರುದ್ರಪ್ಪನವರು ಪ್ರಸ್ತುತ ಬಳಕೆಯ ಭಾಷೆಯಲ್ಲಿ ಸರಳ ರಂಗಪಠ್ಯವನ್ನಾಗಿ 1999ರಲ್ಲಿ ಕಟ್ಟಿಕೊಟ್ಟರು. ಹಳೆಗನ್ನಡದಿಂದ ಹೊಸಕನ್ನಡಕ್ಕೆ ಮೂಲ ದೃಶ್ಯಕಾವ್ಯದ ಆಶಯಕ್ಕೆ ಎಲ್ಲೂ ಚ್ಯುತಿ ಬರದಂತೆ ಅನುವಾದಿಸಿದರು. ಕುವೆಂಪುರವರ ಮನೋರಂಗಭೂಮಿಯ ಕಲ್ಪನಾ ಸಾಧ್ಯತೆಯನ್ನು ನಾಟಕ ರಂಗಭೂಮಿಯ ಪ್ರದರ್ಶನಾ ಸಾಧ್ಯತೆಯನ್ನಾಗಿ ಜಿಎಸ್ಎಸ್ ಬದಲಾಯಿಸಿದರು. ‘ನಾಟಕವಾಡುವ ದೃಷ್ಟಿಯಿಂದ ನಿಷ್ಪ್ರಯೋಜಕ’ ಎಂದು ಸ್ವತಃ ಕುವೆಂಪುರವರೇ ಹೇಳಿದ್ದನ್ನು ಬದಲಾಯಿಸಿ ಸರಳ ಭಾಷೆಯ ಪ್ರಯೋಗದಿಂದ ನಾಟಕವಾಡಲು ಸಾಧ್ಯ ಎಂಬುದನ್ನು ಜಿಎಸ್ಎಸ್ ತೋರಿಸಿಕೊಟ್ಟರು. ಜಿಎಸ್ಎಸ್ ರವರ ‘ಶೂದ್ರ ತಪಸ್ವಿ’ ರಂಗಪಠ್ಯವನ್ನು ಇಟ್ಟುಕೊಂಡು ಮೊಟ್ಟಮೊದಲ ಬಾರಿಗೆ 1999 ನವೆಂಬರ್ 21 ರಂದು ಕಲಾಗಂಗೋತ್ರಿ ರಂಗತಂಡವು ಬಿ.ವಿ.ರಾಜಾರಾಂರವರ ನಿರ್ದೇಶನದಲ್ಲಿ ‘ನಯನ’ ಸಭಾಂಗನದಲ್ಲಿ ನಾಟಕವಾಗಿ ಪ್ರದರ್ಶಿಸಿತು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತು ಚರ್ಚೆಯನ್ನು ಹುಟ್ಟುಹಾಕಿತು.
ತದನಂತರ ಈ ‘ಶೂದ್ರ ತಪಸ್ವಿ’ ನಾಟಕವನ್ನು ಕಳೆದ ಎಂಟು ವರ್ಷಗಳಿಂದ ‘ಅದಮ್ಯ ರಂಗ ಸಂಸ್ಕೃತಿ’ ರಂಗ ತಂಡವು ಛಾಯಾ ಭಾರ್ಗವಿಯವರ ನಿರ್ದೇಶನದಲ್ಲಿ ಇಪ್ಪತೈದಕ್ಕೂ ಹೆಚ್ಚು ಪ್ರಯೋಗಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಾ ಬಂದಿದೆ. 2014 ಎಪ್ರಿಲ್ 22ರಂದು ಬೆಂಗಳೂರಿನ ‘ಕೆ.ಹೆಚ್.ಕಲಾಸೌಧ’ದಲ್ಲಿ ‘ಶೂದ್ರ ತಪಸ್ವಿ’ ಮರುಪ್ರದರ್ಶನಗೊಂಡಿತು.
ಛಾಯಾರವರು ಈ ನಾಟಕದಲ್ಲಿ ದೃಶ್ಯಕಾವ್ಯ ಸೃಷ್ಟಿಸಲು ತುಂಬಾನೆ ಶ್ರಮಿಸಿದ್ದಾರೆ. ಶೂದ್ರ ಶಂಭೂಕನನ್ನೇ ಹೋಲುವ ಇನ್ನೂ ಎರಡು ಪಾತ್ರಗಳನ್ನು ಹೆಚ್ಚಿಗೆ ಸೃಷ್ಟಿಸಿ ಹಾಡು ವಚನಗಳಿಗೆ ಪೂರಕವಾಗಿ ಬಳಸಿದ್ದು ವಿಶೇಷವೆನಿಸುತ್ತದೆ. ಬ್ರಹ್ಮಾಸ್ತ್ರ ಪರಿಕಲ್ಪನೆ ನಿರ್ದೇಶಕಿಯ ಸೃಜನಶೀಲತೆಯನ್ನು ತೋರಿಸುವಂತಿದೆ. ಅಸ್ತ್ರದ ಬದಲು ವ್ಯಕ್ತಿಯನ್ನೇ ಬಳಸಿ ಅದರ ಹಿಂದೆ ಮೃತ್ಯುವನ್ನು ಚಲನೆಗೊಳಪಡಿಸಿದ್ದು ಅತ್ಯಂತ ಸೂಕ್ತವಾಗಿದೆ. ಪೌರಾಣಿಕ ಮಿಥ್ನ್ನು ಮುರಿದು ಕಟ್ಟುವಂತಹ ‘ಶೂದ್ರ ತಪಸ್ವಿ’ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸುತ್ತಿರುವುದಕ್ಕೆ ಭರವಸೆಯ ರಂಗನಿರ್ದೇಶಕಿ ಛಾಯಾ ಭಾರ್ಗವಿ ಅಭಿನಂದನಾರ್ಹರು.
ಕುವೆಂಪರವರ ಕಾವ್ಯಭಾಷೆಯನ್ನೇನೋ ಜಿಎಸ್ಎಸ್ ರವರು ಸರಳಗನ್ನಡಕ್ಕೆ ಬದಲಾಯಿಸಿದರು. ಆದರೆ ಒಂದು ಸಂಪೂರ್ಣ ನಾಟಕವಾಗಬಹುದಾದ ಕಾಲಾವಧಿ ಸಾಲದು. ರಂಗಪಠ್ಯದಲ್ಲಿರುವುದನ್ನು ಇದ್ದಂತೆಯೇ ನಾಟಕವಾಗಿಸಿದರೆ ಅಂತಹ ನಾಟಕದ ಕಾಲಾವಧಿ ಅರ್ಧ ಗಂಟೆಯನ್ನೂ ಮೀರದು. ಆಗ ಅದು ಕಿರುನಾಟಕವೆನ್ನಿಸುತ್ತದೆ. ಹೀಗಾಗಿ ಕನಿಷ್ಟ ಒಂದು ಗಂಟೆಯ ನಾಟಕವನ್ನಾದರೂ ಮಾಡಬೇಕಾದ ಅನಿವಾರ್ಯತೆ ನಿರ್ದೇಶಕಿಯದ್ದಾಗಿದ್ದು ಅದಕ್ಕಾಗಿ ಕುವೆಂಪುರವರ ಕವಿತೆ ಹಾಗೂ ಸರ್ವಜ್ಞ ಕವಿಯ ವಚನಗಳನ್ನು ಬಳಸಲಾಗಿದೆ. ಹೀಗೆ ಬಳಸಿದ್ದು ನಾಟಕಕ್ಕೆ ದೀರ್ಘತೆಯನ್ನು ಒದಗಿಸಿದೆಯಾದರೂ ನೇರವಾದ ರಸ್ತೆಯಲ್ಲಿ ರಸ್ತೆ ಉಬ್ಬುಗಳು ಅಡೆತಡೆ ಮಾಡಿದಂತೆನಿಸುತ್ತದೆ. ನಡೆಯುತ್ತಿದ್ದ ದೃಶ್ಯವನ್ನು ನಿಲ್ಲಿಸಿ (ಫಾಜ್ ಮಾಡಿ) ಹಿನ್ನೆಲೆಯಲ್ಲಿ ಹಾಡು ಅಥವಾ ವಚನಗಳನ್ನು ಕೇಳಿಸಲಾಗುತ್ತಿದ್ದು ಅದಕ್ಕೆ ತಕ್ಕಂತೆ ಸಾಂಕೇತಿಕವಾಗಿ ಇಬ್ಬರು ಬೋಳುತಲೆಯ ಅರೆಬೆತ್ತಲೆ ವ್ಯಕ್ತಿಗಳ ನಿಧಾನಗತಿಯ ಮೂವಮೆಂಟನ್ನು ಸೃಷ್ಟಿಸಲಾಗಿದೆ. ಇದು ನಾಟಕದ ಸಮಯವನ್ನು ಬೆಳೆಸಲು ಅನಿವಾರ್ಯವಾಗಿದೆಯಾದರೂ ಪ್ರೇಕ್ಷಕರಿಗೆ ರಸಾನುಭಂಗವನ್ನುಂಟು ಮಾಡುವಂತಿದೆ. ಅರ್ಧಗಂಟೆಯ ನಾಟಕಕ್ಕೆ ಇನ್ನರ್ಧ ಗಂಟೆ ಹಾಡನ್ನು ಆಗಾಗ ಕೇಳಿಸಿ ರಂಗಕ್ರಿಯೆಯನ್ನು ನಿಧಾನಗೊಳಿಸಿದರೆ ಪ್ರೇಕ್ಷಕರಿಗೆ ಎಲ್ಲೋ ಅಸಹನೆಯನ್ನುಂಟುಮಾಡುತ್ತದೆ. ಒಂದು ರೀತಿಯಲ್ಲಿ ಶ್ರವ್ಯ ಮತ್ತು ದೃಶ್ಯಮಾಧ್ಯಮಗಳ ಕೊಲ್ಯಾಜ್ ಮಾಡಿದಂತಿದೆ. ಹಾಡು ಮತ್ತು ಚಲನೆಗಳು ಯಾವಾಗಲೂ ದೃಶ್ಯದ ಭಾಗವಾಗಿ ಹೊರಹೊಮ್ಮಬೇಕೆ ಹೊರತು ಒತ್ತಾಯಪೂರ್ವಕವಾಗಿ ತುರುಕಿದಂತಿರಬಾರದು ಎನ್ನುವುದಕ್ಕೆ ಈ ನಾಟಕ ಸಾಕ್ಷಿಯಾಗಿದೆ. ನಾಟಕದೊಳಗೆ ಇರುವ ಹಿಡನ್ ದೃಶ್ಯಗಳನ್ನು ಸೃಷ್ಟಿಸುವ ಅವಕಾಶಗಳನ್ನು ಉಪಯೋಗಿಸಬಹುದಾಗಿತ್ತು. ರಂಗಪಠ್ಯ ನಿಷ್ಟೆಯನ್ನು ಒಂದಿಷ್ಟು ಸಡಿಲಗೊಳಿಸಿ ನಿರ್ದೇಶನದ ವಿವೇಚನೆ ಬಳಸಬಹುದಿತ್ತು. ಉದಾಹರಣೆಗೆ.. ಬ್ರಾಹ್ಮಣನ ಮಗ ಕಾಡಿಗೆ ಬಂದು ಹಾವು ಕಚ್ಚಿ ಸಾಯುವ ದೃಶ್ಯವನ್ನು ತೋರಿಸಬಹುದಾಗಿತ್ತು.
ಆದರೆ... ದೃಶ್ಯದ ಮೊದಲಿಗೆ ಮೃತ್ಯು ಮತ್ತು ವೃಕ್ಷಭೈರವ ಮಾತಾಡುವಾಗ ಸತ್ತು ಬಿದ್ದ ಬ್ರಾಹ್ಮಣ ಪುತ್ರನನ್ನು ತೋರಿಸದೇ ದೃಶ್ಯದ ಕೊನೆಯಲ್ಲಿ ತೋರಿಸಿರುವುದು ಕಂಟಿನ್ಯೂಟಿ ಸಮಸ್ಯೆಯಾಗಿದೆ. ಶ್ರೀರಾಮಚಂದ್ರ ಅರಮನೆಯಲ್ಲಿರಲಿ ಕಾಡಲ್ಲಿರಲಿ ಯಾವಾಗಲೂ ತನ್ನ ಜೊತೆಗೆ ಬಿಲ್ಲು ಬಾಣಗಳನ್ನು ಹೊತ್ತು ತಿರುಗುತ್ತಿರುವುದು ಆಭಾಸಕಾರಿಯಾಗಿದೆ. ಯಾವಾಗ ಆ ಶಸ್ತ್ರಗಳು ಅಗತ್ಯವೋ ಆಗ ಮಾತ್ರ ತೋರಿಸಿದ್ದರೆ ಚೆನ್ನಾಗಿತ್ತು. ಸೀತಾಪರಿತ್ಯಾಗದ ನಂತರ ನಡೆಯುವ ದೃಶ್ಯದಲ್ಲಿ ಪ್ರೌಢ ವಯಸ್ಸಿನ ರಾಮನನ್ನು ತೋರಿಸಬಹುದಾಗಿತ್ತು. ಆದರೆ ಈ ನಾಟಕದಲ್ಲಿ ಯುವಕ ರಾಮನನ್ನು ತೋರಿಸಿದ್ದು ಅದ್ಯಾಕೋ ಪಾತ್ರೋಚಿತವಾಗಿಲ್ಲ. ಸಂಭಾಷಣೆಗಳು ನಡೆದಾಗ ಹಿನ್ನಲೆ ಸಂಗೀತ ಮತ್ತು ಆಲಾಪವನ್ನು ಕಡಿಮೆ ಮಾಡಿದ್ದರೆ ಮಾತುಗಳು ಸ್ಪಷ್ಟವಾಗಿ ಕೇಳುಗರನ್ನು ತಲುಪಬಹುದಾಗಿವೆ. ಜನಿವಾರವಿಲ್ಲದ ಬ್ರಾಹ್ಮಣ ಹಾಗೂ ಬ್ರಾಹ್ಮಣ ಪುತ್ರನನ್ನು ಈ ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ. ಕುವೆಂಪುರವರ ‘ಓ ಬನ್ನಿ ಸೋದರರೆ.. ವಿಶ್ವಪಥಕೆ..’ ಹಾಡಿನ ಬಳಕೆ ನಾಟಕದ ದೃಶ್ಯಕ್ಕೆ ಹೊಂದಾಣಿಕೆಯಾಗುವಂತಿಲ್ಲ. ಸರ್ವಜ್ಞನ ಕೆಲವು ವಚನಗಳು ನಾಟಕದ ಆಶಯಕ್ಕೆ ಪೂರಕವೆನಿಸಿದರು ಬಹುತೇಕ ಇರ್ರಿಲೆವೆಂಟ್ ಆಗಿವೆ. ಹಾಡು ಸಂಗೀತ ಪ್ರೀರಿಕಾರ್ಡೆಡ್ ಆಗಿದ್ದರಿಂದ ಹಾಗೂ ರಂಗಮಂದಿರದ ದ್ವನಿವ್ಯವಸ್ಥೆ ಸರಿಯಾಗಿಲ್ಲದ್ದರಿಂದ ಕೇಳುಗರಲ್ಲಿ ಮೂಡನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಲಿಲ್ಲ. ಶ್ಲೋಕಗಳನ್ನೂ ಸಹ ರೆಕಾರ್ಡ ಮಾಡಿದ್ದರಿಂದ ಅದಕ್ಕೆ ಸರಿಯಾಗಿ ನಟರ ಮೂಕಾಭಿನಯ ಸರಿಹೊಂದಲಿಲ್ಲ.
ಹೊಸ ನಟರ ಅಭಿನಯದ ಮೇಲೆ ನಿರ್ದೇಶಕಿ ತುಂಬಾ ಕೆಲಸಮಾಡಿ ಸೊಗಸಾದ ಅಭಿನಯ ಹೊರಹೊಮ್ಮುವಂತೆ ಮಾಡಿದ್ದಾರೆ. ಮೃತ್ಯುವಿನ ಪಾತ್ರದಲ್ಲಿ ಸಂತೋಷ ಶಿವಲಿಂಗ್ ನೋಡುಗರು ಬೆರಗಾಗುವಂತೆ ನಟಿಸಿದ್ದಾರೆ. ಬ್ರಾಹ್ಮಣನಾಗಿ ನೂತನ್ ಕುಮಾರ ನಟನೆ ಸೊಗಸಾಗಿತ್ತು. ಆದರೆ ಅದ್ಯಾಕೋ ಬಿಲ್ಲು ಬಾಣದ ಭಾರಕ್ಕೆ ಶ್ರೀರಾಮನಾದ ಆನಂದ್ ಕುಡ್ಡಣ್ಣವರವರ ಅಭಿನಯ ಸೊರಗಿದಂತಾಗಿತ್ತು. ಶಂಬೂಕ ಹಾಗೂ ಶಂಬೂಕನ ಕ್ಲೋನ್ ಪಾತ್ರಗಳಿಗೆ ಆಂಗಿಕ ಚಲನೆ ಮಾತ್ರ ಮುಖ್ಯವಾಗಿದ್ದರಿಂದ ಅಭಿನಯದ ಅಗತ್ಯ ಇರಲಿಲ್ಲ. ಪುಟ್ಟಣ್ಣಯ್ಯನವರ ಬೆಳಕು ನಿರ್ವಹಣೆ ದೃಶ್ಯಗಳನ್ನು ಬೆಳಗಿತ್ತಾದರೂ ನಡುನಡುವೆ ಅನಗತ್ಯವಾಗಿ ಬೆಳಕು ಹೆಚ್ಚುಕಡಿಮೆ ಆಗುತ್ತಿದ್ದುದು ದೃಶ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಸಿದ್ದರಾಮ ಕೇಶಾಪುರರ ಸಂಗೀತ ಹಾಗೂ ಹಾಡು ಸಂಯೋಜನೆ ಕೇಳಲು ತುಂಬಾ ಸೊಗಸಾಗಿದ್ದವು. ಮಾಲತೇಶ ಬಡಿಗೇರರ ಸರಳವಾದ ರಂಗವಿನ್ಯಾಸ ಈ ನಾಟಕದ ಪ್ರಮುಖ ಆಕರ್ಷಣೆಯಾಗಿದೆ. ಹಿನ್ನೆಲೆಯಲ್ಲಿ ಮರ ಹಾಗೂ ಪ್ಲಾಟ್ಪಾರಂಗಳನ್ನು ಬಳಸಿ ದೃಶ್ಯಸೃಷ್ಟಿಗೆ ಪೂರಕವಾದ ಮೂಡ್ ಕ್ರಿಯೇಟ್ ಮಾಡಲಾಗಿದೆ. ನಾಟಕದಲ್ಲಿ ವಾಲ್ಮೀಕದ ಪಕ್ಕದಲ್ಲಿ ಶಂಭೂಕನಿದ್ದಾನೆಂದು ಬ್ರಾಹ್ಮಣ ರಾಮನಿಗೆ ಹೇಳುತ್ತಾನೆ. ಆದರೆ ಅಲ್ಲಿ ವಲ್ಮೀಕವೇ ಇರುವುದಿಲ್ಲ. ಹೀಗಾಗಿ ಮರದ ಬುಡದಲ್ಲಿ ಹುತ್ತವನ್ನು ಸೃಷ್ಟಿಸಿದ್ದರೆ ಈ ಮಾತಿಗೆ ಪೂರಕವಾಗಿರುತ್ತಿತ್ತು. ಎಲ್ಲಾ ಪಾತ್ರಗಳಿಗೂ ಪಾತ್ರೋಚಿತವಾಗಿ ಮೇಕಪ್ ಮಾಡಿದ ಮಾಲತೇಶ ಅದ್ಯಾಕೋ ಮೃತ್ಯುವಿನ ಪಾತ್ರದಾರಿಯನ್ನು ಭಯಾನಕವಾಗಿ ಸೃಷ್ಟಿಸಿದ್ದಾರೆ. ಆದರೆ ಈ ನಾಟಕದಲ್ಲಿ ಮೃತ್ಯು ಅತ್ಯಂತ ಮಾನವೀಯವಾಗಿದೆ. ಶಂಭೂಕನ ಸಾವನ್ನು ವಿರೋಧಿಸುತ್ತದೆ. ಹೀಗಾಗಿ ಕೋರೆಹಲ್ಲುಗಳುಳ್ಳ ವಿಕಾರ ಮುಖಭಾವವನ್ನು ಸಾಪ್ಟ್ ಮಾಡುವುದು ಪಾತ್ರೋಚಿತವೆನಿಸುತ್ತದೆ.
“ಅರ್ಥವಾಯಿತು ಈಗ ಹೇ ಮಹಾಪ್ರಾಜ್ಞ, ಬುದ್ದಿಕಲಿಸಿದೆ ನೀನು. ಈ ಸಂಪ್ರದಾಯಬದ್ಧನಿಗೆ. ಶಾಸ್ತ್ರದಿಂದ ಮೂಢನಾದವನಿಗೆ. ಜಾತಿಗರ್ವದಿಂದ ಕುರುಡನಾದವನಿಗೆ. ಯಾವ ಜಾತಿಯ ಮರವಾದರೇನು ಸೌಧೆಯಾಗುವುದಕ್ಕೆ? ಬೆಂಕಿಗಿದೆಯೆ ಭೇದ? ದಳ್ಳುರಿಗೆ ದಾಕ್ಷಿಣ್ಯವೇ? ಯಾರಾದರೇನಂತೆ, ತಪಸ್ಸುಮಾಡುವವರೆಲ್ಲರೂ ಪೂಜ್ಯರೇ! ನಮಸ್ಕಾರವೇ ಪುಣ್ಯ, ತಿರಸ್ಕಾರವೇ ಪಾಪ”
ನಾಟಕದ ಕೊನೆಗೆ ಬ್ರಾಹ್ಮಣನು ಶ್ರೀರಾಮನಿಗೆ ಹೇಳುವ ಈ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ ಹಾಗೂ ಎಲ್ಲಾ ಪುರೋಹಿತಶಾಹಿ ಮನಸ್ಸುಗಳಿಗೆ ಪಾಠಹೇಳುವಂತಿವೆ. ಇಡೀ ನಾಟಕದ ಆಶಯವನ್ನು ಈ ಮಾತಿನಲ್ಲಿ ಕುವೆಂಪು ಹಿಡಿದಿಟ್ಟಿದ್ದಾರೆ. ಜಾತಿಶೇಷ್ಟತೆಯ ವ್ಯಸನದಿಂದ ರೋಗಗ್ರಸ್ಥವಾಗಿರುವ ಪುರೋಹಿತಶಾಹಿ ಮನಸ್ಸುಗಳಿಗೆ ಈ ನಾಟಕ ಚಿಕಿತ್ಸೆ ಕೊಡುವಂತೆ ಮೂಡಿಬಂದಿದೆ. ‘ನಮಸ್ಕಾರವೇ ಪುಣ್ಯ, ತಿರಸ್ಕಾರವೇ ಪಾಪ’ ಎನ್ನುವ ಅಪೂರ್ವವಾದ ಸಂದೇಶವನ್ನು ಸಾಕ್ಷಾತ್ಕಾರಗೊಳಿಸುವಲ್ಲಿ ‘ಶೂದ್ರ ತಪಸ್ವಿ’ ನಾಟಕವು ಸಫಲವಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ