“ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!, ಉಳುತಿರುವ ಒಕ್ಕಲಿಗನೆದೆಯಲ್ಲಿ ನಾನಿರುವೆ! ಎಲ್ಲಿ ಹೊಲೆಯನು ತನ್ನ ಕಾರ್ಯದಲ್ಲಿ ತೊಡಗಿಹನೋ ಅಲ್ಲಿ ನಾನವನ ಪಕ್ಕದೊಳಿರುವೆ, ಕುಂಟರನು, ಕುರುಡರನು, ದೀನರನು, ಅನಾಥರನು ಕೈ ಹಿಡಿದು ಪೊರೆಯುತಿಹನೆಡೆಯಿರುವೆ” ಎಂದು ಶಿವ ‘ಜಲಗಾರ’ ನಾಟಕದಲ್ಲಿ ಹೇಳಿದಾಗ ಅದನ್ನು ಕೇಳಿದವರಿಗೆ ಓದಿದವರಿಗೆ ನೋಡಿದವರಿಗೆ ಅನನ್ಯ ಅನುಭವವನ್ನು ಕೊಟ್ಟಿತು. ಒಂದು ವರ್ಗ ಶಿವನನ್ನು ದುಡಿಯುವ ಜನರಿಂದ ದೂರಗೊಳಿಸಿ ಮಂದಿರದಲ್ಲಿ ಬಂದಿಸಿಟ್ಟು ಉತ್ಸವಮೂರ್ತಿಯನ್ನಾಗಿ ಮಾಡಿದ್ದನ್ನು ‘ಜಲಗಾರ’ ನಾಟಕದ ಮೂಲಕ ಕುವೆಂಪು ಪ್ರಶ್ನಿಸುತ್ತಾರೆ. “ಊರ ತೋಟಿಯು ನೀನು, ಜಗದ ತೋಟಿಯು ನಾನು” ಎಂದು ಪರಮಶಿವ ಪ್ರತ್ಯಕ್ಷನಾಗಿ ಕಸಗೂಡಿಸುವವನಿಗೆ ‘ಜಲಗಾರ’ ನಾಟಕದಲ್ಲಿ ಹೇಳುತ್ತಾನೆ. ಕುವೆಂಪುರವರ ‘ಜಲಗಾರ’ ನಾಟಕದ ಪರಿಕಲ್ಪನೆಯ ವಿಸ್ಮಯವಿದು.
ನಾವು ಪ್ರತಿ ದಿನ ಬೀದಿಗೂಡಿಸುವವರನ್ನು ನೋಡುತ್ತಲೇ ಇರುತ್ತೇವೆ. ನಿರ್ಲಕ್ಷಿಸುತ್ತಲೇ ಇರುತ್ತೇವೆ. ಆದರೆ ಎಂದೂ ಅವರ ಕಾಯಕನಿಷ್ಟೆಯ ಬಗ್ಗೆ ಎರಡು ಒಳ್ಳೆಯ ಮಾತಾಡುವುದಿಲ್ಲ. ಅವರ ಜೊತೆಗೆ ಆತ್ಮೀಯತೆಯಿಂದ ವರ್ತಿಸುವುದಿಲ್ಲ. ತಮ್ಮ ಜೀವನದ ಬಹುಭಾಗ ಸಮಾಜದ ಸೇವೆಗಾಗಿಯೇ ದುಡಿಯುವ ಜನಾಂಗವನ್ನು ಕನಿಷ್ಟ ಮಾನವೀಯತೆಯಿಂದಲೂ ನೋಡುವುದಿಲ್ಲ. ಆದರೆ ಕುವೆಂಪು ಶ್ರಮಜೀವಿಗಳಲ್ಲಿ ದೇವರನ್ನು ಕಾಣುತ್ತಾರೆ, ಶಿವನನ್ನೇ ಜಲಗಾರನನ್ನಾಗಿಸುತ್ತಾರೆ, ಕಸಗುಡಿಸುವವನಲ್ಲೂ ಶಿವನನ್ನು ಕಾಣಲು ಪ್ರೇರೇಪಿಸುತ್ತಾರೆ. ಕೊನೆಗೆ ಶಿವನನ್ನೇ ಜಗದ ಜಲಗಾರನೆಂದು ಹೇಳುತ್ತಾ ಶ್ರಮಜೀವಿಗಳಿಗೆ ಮಹತ್ತರವಾದ ಗೌರವವನ್ನು ‘ಜಲಗಾರ’ ನಾಟಕದ ಮೂಲಕ ಸಲ್ಲಿಸುತ್ತಾರೆ.
2014, ಎಪ್ರಿಲ್ 4ರಂದು ರಂಗವೇದಿಕೆಯ ಮೇಲೆ ‘ಜಲಗಾರಿಣಿ’ಗೆ ರಂಗಗೌರವವನ್ನು ಸಲ್ಲಿಸಿದ ಅಪರೂಪದ ಸಂದರ್ಭದಲ್ಲಿ ನೆನಪಾಗಿದ್ದೇ ಕುವೆಂಪುರವರ ‘ಜಲಗಾರ’ ನಾಟಕದ ಪಾತ್ರಗಳು ಹಾಗೂ ಮಾತುಗಳು. ‘ಜನಪದ’ ರಂಗತಂಡ ಮೈನಾ ಚಂದ್ರು ನೆನಪಿನ ಕಾರ್ಯಕ್ರಮವನ್ನು ಕೆ.ಹೆಚ್.ಕಲಾಸೌಧದಲ್ಲಿ ಹಮ್ಮಿಕೊಂಡಿತ್ತು. ಆ ಕಾರ್ಯಕ್ರಮದಲ್ಲಿ ಒಂದು ಸಾರ್ಥಕ ಕೆಲಸವನ್ನು ‘ಜನಪದ’ ತಂಡದ ಗೆಳೆಯರು ಮಾಡಿದರು. ಅಂದು ರವೀಂದ್ರ ಕಲಾಕ್ಷೇತ್ರದ ಜಲಗಾರಿಣಿ ಅಂದರೆ ಕಸಗುಡಿಸುವ ‘ಎಲ್ಲಮ್ಮ’ಳಿಗೆ ಸನ್ಮಾನ ಮಾಡಿ ಗೌರವಿಸಿದರು. ಯಸ್ ! ಇಟ್ಸ್ ಹ್ಯಾಪನ್ ಓನ್ಲಿ ಇನ್ ಥೇಯಟರ್!.
ಎಂದಾದರೂ ಎಲ್ಲಾದರೂ ಕಸಗುಡಿಸುವವರೊಬ್ಬರನ್ನು ಕರೆದು ವೇದಿಕೆಯಲ್ಲಿ ಸನ್ಮಾನಿಸಿದ್ದು ಯಾರಾದರೂ ನೋಡಿದ್ದೀರಾ? ಎಲ್ಲರಿಂದ ನಿರ್ಲಕ್ಷಿಸಲ್ಪಟ್ಟ ಕಾರ್ಮಿಕಳೊಬ್ಬಳಿಗೆ ಹೀಗೆ ಯಾವುದಾದರೂ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಗೌರವಿಸಿದ್ದನ್ನು ಕೇಳಿದ್ದೀರಾ? ಇಲ್ಲ ಎಂದಾದರೆ ಅದು ರಂಗಭೂಮಿಯಲ್ಲಿ ಮಾತ್ರ ಸಾಧ್ಯ ಎನ್ನುವುದಕ್ಕೆ ಸಾಕ್ಷಿ ‘ಎಲ್ಲಮ್ಮ’ಳ ಸನ್ಮಾನ ಸಮಾರಂಭ. ರಂಗಭೂಮಿಯ ಸಿದ್ದಾಂತವೇ ಹಾಗೆ, ಅದನ್ನು ಕುವೆಂಪುರವರು ‘ಮಲೆಗಳಲಿ ಮದುಮಗಳು’ ಕಾದಂಬರಿಯಲ್ಲಿ ಹೇಳಿದ ಹಾಗೆ. “ಇಲ್ಲಿ ಯಾರೂ ಮುಖ್ಯರೂ ಅಲ್ಲಾ, ಯಾರೂ ಅಮುಖ್ಯರೂ ಅಲ್ಲಾ..”. ಹೀಗಾಗಿ ಅಮುಖ್ಯರಾದವರೂ ಕೂಡಾ ಮುಖ್ಯರಾಗುತ್ತಾರೆ, ಗುರುತಿಸಲ್ಪಡುತ್ತಾರೆ, ಸನ್ಮಾನಿತರಾಗುತ್ತಾರೆ ಎನ್ನುವುದನ್ನು ‘ಜನಪದ’ ತಂಡದ ಗೆಳೆಯರು ತೋರಿಸಿಕೊಟ್ಟರು. ನಾಟಕ ರಂಗ ಬೇರೆಲ್ಲಾ ಕ್ಷೇತ್ರಗಳಿಗಿಂತ ಭಿನ್ನವಾಗಿ ನಿಲ್ಲುವುದೇ ಈ ನಿಟ್ಟಿನಲ್ಲಿ. ಇನ್ನೂ ರಂಗಭೂಮಿ ಬೇರೆ ಕ್ಷೇತ್ರಗಳಂತೆ ವ್ಯಾಪಾರೋಧ್ಯಮ ಆಗಿಲ್ಲದಿರುವುದರಿಂದ ಇಲ್ಲಿ ಇನ್ನೂ ಮಾನವೀಯ ತುಡಿತಗಳು, ಸ್ನೇಹಪರ ಅಂತಕರಣಗಳು, ಜೀವಪರ ಕಾರ್ಯಕ್ರಮಗಳು ಜೀವಂತವಾಗಿವೆ. ಹೀಗಾಗಿಯೇ ಇಲ್ಲಿ ಶ್ರಮಜೀವಿಗಳಿಗೂ ಒಂದು ಬೆಲೆಯಿದೆ ಹಾಗೂ ನೆಲೆಯಿದೆ.
ಈ ರಂಗಗೌರವಕ್ಕೆ ‘ಎಲ್ಲಮ್ಮ’ ಅರ್ಹಳೂ ಆಗಿದ್ದಾರೆ. ಬಹುಷಃ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಮಾಡುವ ತಂಡಗಳಿಗೆ, ಕಲಾವಿದರಿಗೆ ‘ಎಲ್ಲಮ್ಮ’ಳ ಪರಿಚಯವಿರುತ್ತದೆ. ಅಕಸ್ಮಾತ್ ಪರಿಚಯವಿಲ್ಲದಿದ್ದರೂ ಎಲ್ಲಮ್ಮಳೇ ಬಂದು ಪರಿಚಯ ಮಾಡಿಕೊಂಡು ರಂಗತಂಡಗಳ ಬೇಕು ಬೇಡಗಳ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಬೆಳಿಗ್ಗೆ ಎಂಟರಿಂದ ಸಂಜೆ ಆರು ಹಾಗೂ ಅದಕ್ಕಿಂತ ಹೆಚ್ಚು ಸಮಯ ಇಡೀ ರವೀಂದ್ರ ಕಲಾಕ್ಷೇತ್ರದ ಒಳಗೆ ಹಾಗೂ ಹೊರಗೆ ತನ್ನ ಆರು ಜನ ಸಹಕೆಲಸಗಾರರ ಜೊತೆಗೆ ಸೇರಿ ಕಸಗೂಡಿಸಿ ಸ್ವಚ್ಚಗೊಳಿಸುವ ಎಲ್ಲಮ್ಮ ತನ್ನ ವೃತ್ತಿ ನಿಷ್ಟೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ‘ಎಲ್ಲಮ್ಮಳೊಬ್ಬಳೇನಾ ಕಸ ಗುಡಿಸುವುದು. ಅಂತಹ ಸಾವಿರಾರು ಜನ ಇದ್ದಾರೆ ಬೆಂಗಳೂರಿನಲ್ಲಿ’ ಎಂದು ಕೇಳಬಹುದು. ಆದರೆ ಎಲ್ಲಮ್ಮಳ ವಿಶೇಷತೆ ಇರುವುದು ಆಕೆಯ ಕರ್ತವ್ಯ ನಿಷ್ಟೆಯಲ್ಲಿ, ನಾಟಕದ ಮೇಲಿನ ಪ್ರೀತಿಯಲ್ಲಿ ಹಾಗೂ ಪ್ರಾಮಾಣಿಕತೆಯಲ್ಲಿ. ಎಂದೂ ಯಾರ ಮುಂದೆಯೂ ಕೈಚಾಚಿ ಟಿಪ್ಸ್ ಯಾಚಿಸದ ಎಲ್ಲಮ್ಮಳಿಗೆ ಯಾರಾದರೂ ಹಣ ಕೊಡಲು ಹೋದರೆ ‘ಇದೆಲ್ಲಾ ಯಾಕೆ ಬೇಕು ಸಾಮಿ, ಚೆನ್ನಾಗಿ ನಾಟಕ ಮಾಡಿ ಅದೇ ನನಗೆ ಟಿಪ್ಸು’ ಅನ್ನುವ ಧನವ್ಯರಾಗ್ಯದ ಗುಣ ಅಪರೂಪದ್ದು. ಉದಾಹರಣೆಗೆ ಅದೊಂದು ದಿನ ಮಂಡ್ಯದ ಕಡೆಯಿಂದ ರಂಗನಿದೇಶಕ ಬಿ.ಜಿ.ರಾಮಕೃಷ್ಣರವರು (ಬಿಜಿ) ಬಸ್ನಲ್ಲಿ ಬರುತ್ತಿರುವಾಗ ಎಲ್ಲಮ್ಮಳೂ ಅದೇ ಬಸ್ನಲ್ಲಿ ಹತ್ತಿದರು. ಒತ್ತಾಯಪೂರ್ವಕವಾಗಿ ಬಿಜಿ ಎಲ್ಲಮ್ಮಳ ಬಸ್ ಟಿಕೆಟ್ಗೆ ಹಣ ಕೊಟ್ಟರು. ಬೆಂಗಳೂರು ಸೇರಿದ ನಂತರವೂ ಎಲ್ಲಮ್ಮ ‘ಟಿಕೆಟ್ ಕಾಸು ಎಷ್ಟು ಹೇಳಿ ಕೊಡ್ತೇನೆ’ ಎಂದು ಸಿಕ್ಕಾಗೆಲ್ಲಾ ಬಿಜಿಗೆ ದುಂಬಾಲು ಬಿದ್ದರು. ಬಿಜಿ ಟಿಕೆಟ್ ಕಾಸು ಎಷ್ಟಾಯಿತೆಂದು ಇಂದಿಗೂ ಹೇಳಿಲ್ಲ. ಎಲ್ಲಮ್ಮ ಕೇಳುವುದು ತಪ್ಪಿಲ್ಲ.
ಎಂತಹ ದೊಡ್ಡ ಮಟ್ಟದ ನಾಟಕದ ಪ್ರೊಡಕ್ಷನ್ ಆದರೂ ಚಿಕ್ಕ ಪುಟ್ಟ ವಸ್ತುಗಳನ್ನು ಪ್ರದರ್ಶನದ ದಿನ ಮರೆತು ಬರುವುದು ಸಾಮಾನ್ಯ. ಬೆಂಕಿಪಟ್ಟಣ, ಕ್ಯಾಂಡಲ್, ಎಣ್ಣೆ... ಹೀಗೆ. ನಾಟಕದ ಮೊದಲು ಪೂಜೆ ಮಾಡುವ ಸಂಪ್ರದಾಯವಿರುವ ರಂಗತಂಡಗಳಿಗಂತೂ ಇಂತಹವು ಬೇಕೆ ಬೇಕು. ಆದರೆ ಹೀಗೆ ಮರೆತು ಬರಬಹುದಾದ ವಸ್ತುಗಳನ್ನು ತನ್ನ ಬಳಿ ಜೋಪಾನವಾಗಿ ಇಟ್ಟುಕೊಂಡಿರುವ ಯಲ್ಲಮ್ಮ ತಾನೇ ಕೇಳಿ ಕೊಡುತ್ತಾಳೆ. ಚಿಕ್ಕ ಪುಟ್ಟ ಅಗತ್ಯಗಳನ್ನೆಲ್ಲಾ ಪೂರೈಸಿ ನಾಟಕ ಶುರುವಾಗುವ ಮುಂಚೆ ‘ಹೋಗಿ ಬರುತ್ತೇನೆ, ಚೆನ್ನಾಗಿ ನಾಟಕ ಮಾಡಿ’ ಎಂದು ಹಾರೈಸಿ ಮನೆಗೆ ಹೋಗುತ್ತಾಳೆ. ಆದರೆ ತಾನು ಮಾಡಿದ ಸಹಕಾರಕ್ಕೆ ಬದಲು ಎಂದೂ ಪ್ರತಿಫಲಾಪೇಕ್ಷೆ ಮಾಡದಿರುವುದೇ ಎಲ್ಲಮ್ಮನ ದೊಡ್ಡ ಗುಣ.
ಇಲ್ಲಿ ಎಲ್ಲಮ್ಮಳ ರಂಗಬದ್ಧತೆಗೆ ಇನ್ನೊಂದು ಘಟನೆಯನ್ನು ನೆನೆಯಲೇಬೇಕು. ಅದೊಂದು ದಿನ ಅದ್ಯಾವುದೋ ನಾಟಕೇತರ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ ನಡೆದಿತ್ತು. ಬೆಳಿಗ್ಗೆ ನಾಟಕವೊಂದರ ರಿಹರ್ಸಲ್ ಶುರುವಾಗಬೇಕಾಗಿತ್ತು. ಆದರೆ ಇಡೀ ಕಲಾಕ್ಷೇತ್ರದ ಪ್ರೇಕ್ಷಾಗ್ರಹ ಕಸದ ರಾಶಿಯಿಂದ ತುಂಬಿಹೋಗಿತ್ತು. ಎಲ್ಲಿ ನೋಡಿದಲ್ಲಿ ನೀರಿನ ಬಾಟಲ್ಗಳು, ಬಿಸ್ಕೆಟ್ ರಾಪರ್, ಚಿಪ್ಸ್ ಪಾಪಕಾರ್ನ ಮುಂತಾದ ತಿಂಡಿಗಳು ಚೆಲ್ಲಾಡಿದ್ದವು. ಇದನ್ನು ನೋಡಿ ಕೆಲವು ರಂಗಕರ್ಮಿಗಳು ದಿಗಿಲು ಬಿದ್ದರು. ಯಾರೋ ಒಬ್ಬರು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಲಾಕ್ಷೇತ್ರದ ಮ್ಯಾನೇಜರಿಗೆ ಪೋನ್ ಮಾಡಿ ವಿಷಯ ತಿಳಿಸಿದರು. ಇನ್ನೊಬ್ಬರು ಪತ್ರಿಕೆಯವರಿಗೆ ಪೋನ್ ಮಾಡಿದರು. ಆಗ ದಿಗಿಲಿಗೆ ಬಿದ್ದ ಅಧಿಕಾರಿಗಳು ಎಲ್ಲಮ್ಮನಿಗೆ ‘ಈ ಕೂಡಲೇ ಎಲ್ಲಾ ಕಸವನ್ನೂ ಗೂಡಿಸಿ ಸ್ವಚ್ಛಗೊಳಿಸಬೇಕು ಎಂದು ಆಜ್ಞಾಪಿಸಿದರು. ಆದರೆ ಎಲ್ಲಮ್ಮ ಜಗ್ಗಲಿಲ್ಲ. ‘ಪೇಪರನವರು ಬರೋವರೆಗೂ ನಾನು ಕಸ ಗೂಡಿಸೋದಿಲ್ಲ’ ಎಂದು ಬಿಟ್ಟಳು. ಬೇಕಾಬಿಟ್ಟಿಯಾಗಿ ಕಲಾಕ್ಷೇತ್ರವನ್ನು ಬಳಸಿ ಕಸದ ತೊಟ್ಟಿ ಮಾಡಿದವರ ವಿರುದ್ಧ ಎಲ್ಲಮ್ಮ ತನ್ನದೇ ಆದ ರೀತಿಯಲ್ಲಿ ಪ್ರತಿಭಟನೆ ತೋರಿಸಿದ್ದಳು. ಯಾವುದೇ ಒತ್ತಡಗಳಿಗೂ ಜಗ್ಗಲಿಲ್ಲ. ಪತ್ರಿಕೆಯವರು ಬಂದು ಪೋಟೋ ತೆಗೆದುಕೊಂಡ ನಂತರವೇ ತನ್ನ ಕಾಯಕ ಮುಂದುವರೆಸಿದಳು. ಇದು ಎಲ್ಲಮ್ಮಳ ರಂಗಬದ್ದತೆ. ಹಾಗಂತ ಎಲ್ಲಮ್ಮಳೇನೂ ಸರಕಾರದ ಖಾಯಂ ನೌಕರಳಲ್ಲ. ದಿನಗೂಲಿಯ ಮೇಲೆ ಕೆಲಸ ಮಾಡುವವಳು. ಕೆಲಸದ ಭದ್ರತೆ ಎನ್ನುವುದು ಇಲ್ಲವೇ ಇಲ್ಲ. ಸಾಕು ಹೋಗಮ್ಮ ಎಂದರೆ ಕೆಲಸ ಕಳೆದುಕೊಳ್ಳಲೇ ಬೇಕು. ‘ಕೆಲಸ ಹೋದರೂ ಚಿಂತೆಯಿಲ್ಲ ನಾನು ಕಸಗೂಡಿಸುವುದಿಲ್ಲ’ ಎನ್ನುವ ರಂಗನಿಷ್ಟೆ ಇದೆಯಲ್ಲ ಇದರಿಂದಾಗಿ ಎಲ್ಲಮ್ಮ ರಂಗಗೌರವಕ್ಕೆ ಅರ್ಹಳು. ತನಗರಿವಿಲ್ಲದ ರೀತಿಯಲ್ಲಿ ಎಲ್ಲಮ್ಮ ಸಾಂಸ್ಕೃತಿಕ ಪರಿಚಾರಿಕೆಯನ್ನು ಮಾಡುತ್ತಿದ್ದಾಳೆ.
ಕಲಾಕ್ಷೇತ್ರದ ಬೇರೆ ಕಾರ್ಮಿಕರು ತಮ್ಮ ಡ್ಯೂಟಿ ಅವಧಿ ಮುಗಿದ ನಂತರ ಐದು ಗಂಟೆಗೆಲ್ಲಾ ಮನೆಗೆ ಹೊರಡುತ್ತಾರೆ. ಆದರೆ ತನ್ನ ಸೇವಾ ಅವಧಿಯ ನಂತರವೂ ಕೆಲವೊಮ್ಮೆ ಸಮಯವನ್ನು ಲೆಕ್ಕಿಸದೇ ಸ್ವಂತ ಆಸಕ್ತಿಯಿಂದ ಕೆಲಸ ಮಾಡುವ ಎಲ್ಲಮ್ಮ ಬೇರೆಲ್ಲಾ ಶ್ರಮಜೀವಿಗಳಿಗೆ ಮಾದರಿಯಾಗಿದ್ದಾಳೆ. ಹೊಸಬರ ತಂಡವೊಂದು ನಾಟಕ ಮಾಡಲು ಕಲಾಕ್ಷೇತ್ರಕ್ಕೆ ಬಂದರೆ ಅವರನ್ನು ಹೋಗಿ ಮಾತಾಡಿಸುವ ಎಲ್ಲಮ್ಮ “ಹುಷಾರಾಗಿರಿ, ನಿಮ್ಮ ವಸ್ತುಗಳನ್ನು ಒಂದು ಕಡೆ ಇಡಿ. ಮೊಬೈಲ್ಗಳನ್ನು ಹೊರಗೆಲ್ಲೂ ಇಡಬೇಡಿ ಕಳ್ಳತನವಾಗಬಹುದು..” ಎಂದು ಮೊದಲೇ ಎಚ್ಚರಿಕೆಯನ್ನು ಕೊಡುತ್ತಾಳೆ. ಆ ಇಡೀ ತಂಡಕ್ಕೆ ತನ್ನ ಕೈಲಾದ ರೀತಿಯಲ್ಲಿ ಸಹಾಯ ಮಾಡುವುದೆಂದರೆ ಆಕೆಗೆ ಬಲು ಪ್ರೀತಿ. ರಂಗ ಕಲಾವಿದರ ಮೇಲಿರುವ ಆತ್ಮೀಯತೆ ಹಾಗೂ ನಾಟಕದ ಮೇಲಿರುವ ಎಲ್ಲಮ್ಮಳ ಆಸಕ್ತಿ ನಿಜಕ್ಕೂ ಶ್ಲಾಘನೀಯ.
ಚನ್ನಪಟ್ಟಣದ ಕೊಣೂರು ಎನ್ನುವ ಗ್ರಾಮದ ಎಲ್ಲಮ್ಮಳನ್ನು ಮಂಡ್ಯದ ಕೋಡಳ್ಳಿಯ ಗಾರೆ ಕೆಲಸ ಮಾಡುವವನಿಗೆ ಮದುವೆ ಮಾಡಿಕೊಡಲಾಗಿತ್ತು. ಎರಡು ಹೆಣ್ಣು ಮಕ್ಕಳಾದವು. ಹಳ್ಳಿಯಲ್ಲಿ ಕುಟುಂಬ ನಿರ್ವಹಣೆಗೆ ಆರ್ಥಿಕ ತೊಂದರೆಯಾಯಿತು. 1976 ರಲ್ಲಿ ಇಡೀ ಕುಟುಂಬ ಬೆಂಗಳೂರಿಗೆ ವಲಸೆ ಬಂದಿತು. ನಂತರ ಹತ್ತು ವರ್ಷಗಳ ಕಾಲ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಲ್ಲಮ್ಮ 1986 ರಲ್ಲಿ ಯಾರದೋ ಶಿಪಾರಸ್ಸಿನ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದಿನಗೂಲಿ ನೌಕರಳಾಗಿ ಸೇರಿಕೊಂಡಳು. ಆಗ ಬರುತ್ತಿದ್ದುದು ತಿಂಗಳಿಗೆ ಕೇವಲ ಇನ್ನೂರು ರೂಪಾಯಿ ಸಂಬಳ. ಕುಡುಕ ಗಂಡನಿಗೆ ಗಾರೆ ಕೆಲಸ ಇದ್ದರೆ ಇತ್ತು ಇಲ್ಲದಿದ್ದರೆ ಇಲ್ಲ. ಹಾಗೂ ಹೀಗೂ ಕಡು ಕಷ್ಟದಲ್ಲಿ ಮಕ್ಕಳನ್ನು ಬೆಳೆಸತೊಡಗಿದಳು. ಹದಿನೈದು ವರ್ಷಗಳ ಹಿಂದೆ ಗಂಡ ಇದ್ದಕ್ಕಿದ್ದಂತೆ ತೀರಿಕೊಂಡ. ಎರಡು ಮಕ್ಕಳ ಜವಾಬ್ದಾರಿಯನ್ನು ಹೊತ್ತ ಎಲ್ಲಮ್ಮ ಪಡಬಾರದ ಪಾಡುಪಟ್ಟಳು. ಹಾಗೂ ಹೀಗೂ ಮಾಡಿ ತನ್ನ ಇಬ್ಬರೂ ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿದಳು. ಈಗ ಎಲ್ಲಮ್ಮನ ಸಂಬಳ ತಿಂಗಳಿಗೆ ಏಳು ಸಾವಿರ ರೂಪಾಯಿ. ಬೆಲೆ ಏರಿಕೆಯ ದಿನಮಾನದಲ್ಲಿ ಮನೆ ಬಾಡಿಗೆ, ಕುಟುಂಬದ ನಿರ್ವಹಣೆ ಹಾಗೂ
ಆರೋಗ್ಯದ ಖರ್ಚನ್ನು ನಿಭಾಯಿಸುತ್ತಿದ್ದಾಳೆ. ನಿಜಕ್ಕೂ ಸಾಹಸಿ ಮಹಿಳೆ.
ಎಲ್ಲಮ್ಮಳ ಮಾನವೀಯ ತುಡಿತ ರಂಗಭೂಮಿಯವರಿಗೆ ತಿಳಿದಿದ್ದು ರಂಗಜಂಗಮ ಸಿಜಿಕೆ ಮೂಲಕ. ಸಿಜಿಕೆ ತಮ್ಮ ಆತ್ಮಕಥನವಾದ ‘ಕತ್ತಾಲೆ ಬೆಳದಿಂಗಳೊಳಗ’ ಗ್ರಂಥದಲ್ಲಿ ಎಲ್ಲಮ್ಮಳ ಮಾನವೀಯತೆಯನ್ನು ಪ್ರಸ್ತಾಪಿಸಿದಾಗ. ಅದು 2000, ಜುಲೈ 19, ಸಿಜಿಕೆ ಯವರಿಗೆ ಹಾರ್ಟ ಅಟ್ಯಾಕ್ ಆಗಿ ಜನದೇವ ಆಸ್ಪತ್ರೆಗೆ ಎಡ್ಮಿಟ್ ಮಾಡಲಾಗಿತ್ತು. ಈ ಸುದ್ದಿ ಕೇಳಿ ಆತಂಕಕ್ಕೊಳಗಾದ ಎಲ್ಲಮ್ಮ ಆಸ್ಟತ್ರೆಗೆ ಓಡಿ ಹೋದಳು. ಐಸಿಯು ನಲ್ಲಿದ್ದ ಸಿಜಿಕೆ ಅವರ ಹತ್ತಿರ ಯಾರನ್ನೂ ವೈದ್ಯರು ಬಿಡುತ್ತಿರಲಿಲ್ಲ. ಸ್ವತಃ ಸಿಜಿಕೆ ಕುಟುಂಬವರ್ಗದವರೇ ಹೊರಗೆ ಕುಳಿತಿದ್ದರು. ಆಗ ಬಿರುಗಾಳಿಯಂತೆ ಕೈಯಲ್ಲಿ ಎಳನೀರು ಹಿಡಿದುಕೊಂಡು ನುಗ್ಗಿದ ಎಲ್ಲಮ್ಮ ಸಿಜಿಕೆಯವರನ್ನು ನೋಡಲೇಬೇಕೆಂದು ಹಠ ಹಿಡಿದಳು. ವಾರ್ಡ ಕಾವಲುಗಾರರೊಂದಿಗೆ ಜಗಳಕ್ಕೆ ಬಿದ್ದ ಎಲ್ಲಮ್ಮ ಮಾತಿನ ದಾದಾಗಿರಿಯ ಮೂಲಕ ವಾರ್ಡಿನೊಳಗೆ ನುಗ್ಗಿಯೇ ಬಿಟ್ಟಳು. ಅರಿವಿಲ್ಲದೇ ಮಲಗಿದ ಸಿಜಿಕೆಯನ್ನು ನೋಡಿ ಕಣ್ಣಲ್ಲಿ ನೀರು ತಂದು ಮಮ್ಮಲ ಮರುಗಿದ ಎಲ್ಲಮ್ಮನಿಗೆ ಅದೇನನ್ನಿಸಿತೋ ಏನೋ ತನ್ನ ಪರ್ಸನಿಂದ ನೂರು ರೂಪಾಯಿ ಹೊರತೆಗೆದು ಸಿಜಿಕೆಯವರು ಮಲಗಿದ ದಿಂಬಿನ ಕೆಳಗಿಟ್ಟು ‘ಬೇಗ ಗುಣಮಾಡು ಶಿವನೇ’ ಎಂದು ದೇವರನ್ನು ನೆನೆಸುತ್ತಾ ಹೊರಬಂದರು. ಎಲ್ಲಮ್ಮ ಸಿಜಿಕೆಗೆ ಸಂಬಂಧಿಕಳೇನೂ ಆಗಿರಲಿಲ್ಲ. ಸಿಜಿಕೆಯವರ ಮನೆಯ ಕೆಲಸದವಳೂ ಅಲ್ಲ. ಆದರೆ ಒಂದು ರೀತಿಯ ರಂಗಸಂಬಂಧವನ್ನು ಬೆಳೆಸಿಕೊಂಡಿದ್ದಳು. ಎಲ್ಲಮ್ಮ ಬಿಟ್ಟು ಹೋದ ನೂರು ರೂಪಾಯಿ ದೊಡ್ಡದೇನಲ್ಲಾ, ಆದರೆ ಅದನ್ನು ಕೊಡುವಂತಹ ದೊಡ್ಡ ಮನಸ್ಸಿದೆಯಲ್ಲಾ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಸಿಜಿಕೆ ಸಹ ಅದೇ ರೀತಿಯಾದ ಕಳಕಳಿಯನ್ನು ಶ್ರಮಜೀವಿ ವರ್ಗದವರ ಮೇಲೆ ಹೊಂದಿದ್ದರು.
ರಂಗಭೂಮಿಯಲ್ಲಿ ಕೆಲವರು ತಮ್ಮ ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು ಅವರಿಗೆ ಇವರು ಇವರಿಗೆ ಅವರು ಸನ್ಮಾನಿಸಿ ಸುಖಿಸುತ್ತಾರೆ. ಇನ್ನು ಕೆಲವು ಈವೆಂಟ್ ಮ್ಯಾನೇಜರ್ಗಳಂತಿರುವ ರಂಗಕರ್ಮಿಗಳು ತಾವೇ ತಮ್ಮ ಹಣ ಖರ್ಚು ಮಾಡಿ ತಮ್ಮ ಹುಟ್ಟುಹಬ್ಬ, ಸನ್ಮಾನ ಸಮಾರಂಭಗಳನ್ನು ವ್ಯವಸ್ಥೆ ಮಾಡಿಕೊಂಡು ಶ್ರೇಷ್ಟತೆಯನ್ನು ಮೆರೆಯುತ್ತಾರೆ. ಇನ್ನೂ ಕೆಲವು
ಸಾಂಸ್ಕೃತಿಕ ದಲ್ಲಾಳಿಗಳು ಸಂಸ್ಕೃತಿ ಇಲಾಖೆಯ ಹಣ ಪಡೆಯಲೆಂದೇ ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಏರ್ಪಡಿಸಿ ಯೋಗ್ಯತೆ ಇರಲಿ ಬಿಡಲಿ ತಮಗೆ ಬೇಕು ಬೇಕಾದವರಿಗೆ ಸನ್ಮಾನ ಸಮಾರಂಭಗಳನ್ನು ಏರ್ಪಡಿಸಿ ಆನಂದಿಸುತ್ತಾರೆ. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಹೊಂದಿದವರಿಗೇ ಮತ್ತೆ ಮತ್ತೆ ಕರೆದು ಪ್ರಶಸ್ತಿಗಳನ್ನು ಕೊಟ್ಟು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವವರೂ ಇದ್ದಾರೆ. ಇನ್ನು ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳಂತೂ ಶಿಪಾರಸ್ಸು, ಸರಕಾರಿ ಒತ್ತಡಗಳಿಗೊಳಗಾಗಿ ತಮ್ಮ ಮೌಲ್ಯವನ್ನೇ ಕಳೆದುಕೊಂಡಿದೆ. ಅಕಾಡೆಮಿಯ ಪ್ರಶಸ್ತಿಗಳನ್ನು ಹಣಕ್ಕಾಗಿ ಮಾರಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಪ್ರಶಸ್ತಿಯ ಜೊತೆ ಕೊಡಮಾಡುವ ಪದಕಗಳನ್ನೇ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ನುಂಗಿ ನೀರು ಕುಡಿದಿದ್ದು ಲೋಕಾಯುಕ್ತ ಕೋರ್ಟಲ್ಲಿ ವಿಚಾರಣೆ ನಡೆಯುತ್ತಿದೆ. ಯಾವುದೇ ಸ್ವಾರ್ಥ ಅಪೇಕ್ಷೆಗಳಿಲ್ಲದೇ ರಂಗನಿಷ್ಟೆಯಿಂದ ನಿಜವಾದ ಸಾಧಕರನ್ನು ಸನ್ಮಾನಿಸಿ ಗೌರವಿಸುವವರೂ ಇದ್ದಾರಾದರೂ ಅಂತವರ ಸಂಖ್ಯೆ ಕಮ್ಮಿ ಇದೆ. ಇಂತಹ ಸಂದರ್ಭದಲ್ಲಿ ಎಲ್ಲಮ್ಮಳ ರಂಗಕಳಕಳಿಯನ್ನು ಗುರುತಿಸಿದ ಬಿ.ಜಿ.ರಾಮಕೃಷ್ಣ ಮತ್ತು ಜನಪದ ತಂಡದ ಗೆಳೆಯರು ಮೈನಾ ನೆನಪಿನ ನೆಪದಲ್ಲಿ ಸನ್ಮಾನಿಸಿದ್ದು ಶ್ಲಾಘನೀಯ ಕೆಲಸವಾಗಿದೆ. ಸ್ಮರಣ ಫಲಕ, ಶಾಲು, ಹಾರ, ಹಣ್ಣುಗಳ ಜೊತೆಗೆ ಐದು ಸಾವಿರ ನಗದು ಹಣವನ್ನು ಕೊಟ್ಟು ಗೌರವಿಸಿದ್ದು ಕನ್ನಡ ರಂಗಭೂಮಿಯಲ್ಲಿ ಅವಿಸ್ಮರಣೀಯ ಘಟನೆಯಾಗಿದೆ.
‘ಏನನ್ನಿಸುತ್ತೆ ಎಲ್ಲಮ್ಮಾ’ ಎಂದು ಸನ್ಮಾನದ ನಂತರ ಎಲ್ಲಮ್ಮಳನ್ನು ಪ್ರಶ್ನಿಸಿದರೆ ಕಣ್ಣಲ್ಲಿ ಆನಂದಭಾಷ್ಟಗಳನ್ನು ತುಂಬಿಕೊಂಡ ಎಲ್ಲಮ್ಮ “ನನ್ನಂತ ಬಡವಿಯನ್ನು ಗುರುತಿಸಿ ಇಷ್ಟೊಂದು ಆದರಿಸಿದ್ದಕ್ಕೆ ನನ್ನ ಜೀವನದಲ್ಲಿ ಎಂದೂ ಆಗದಂತಹ ಆನಂದ ಆಯಿತು, ಯಾರಿಗೂ ಇಲ್ಲದ ಅದೃಷ್ಟ ನನಗೊಲಿದಿದ್ದಕ್ಕೆ ಹಾಗೂ ನನಗೆ ಇಂತಹ ಮರ್ಯಾದೆ ಕೊಟ್ಟಿದ್ದಕ್ಕೆ ನನ್ನ ಜೀವನ ಸಾರ್ಥಕವಾಯಿತು. ” ಎಂದು ಹೇಳಿ ಬದುಕಿನ ಬಲು ದೊಡ್ಡ ಸಾರ್ಥಕ್ಯವನ್ನು ಎಲ್ಲಮ್ಮ ಅನುಭವಿಸಿದಳು. ಎಲ್ಲಮ್ಮನಂತಹ ಮಾತೃಹೃದಯದ ಮಾನವೀಯತೆ ಇರುವವರ ಸಂತಾನ ಸಾವಿರವಾಗಲಿ. ಅಂತವರನ್ನು ಗುರುತಿಸಿ ಸನ್ಮಾನಿಸುವವರ ಸಂಖ್ಯೆ ಜಾಸ್ತಿಯಾಗಲಿ. ಶ್ರಮಿಕರ ಎದೆಯಲ್ಲಿ ಶಿವನನ್ನು ಕಾಣುವ ರಂಗಬಂಧುಗಳಿಗೆ ನೂರು ನಮನಗಳು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ