ಗುರುವಾರ, ಏಪ್ರಿಲ್ 24, 2014

ಕುಪ್ಪಳಿಯಲ್ಲಿ ಕುವೆಂಪುರವರ ‘ಕಿಂದರಿಜೋಗಿ’ ಕಲರವ :



                                         
ಬೊಮ್ಮನಹಳ್ಳಿ ಕಿಂದರಿಜೋಗಿ ಕುವೆಂಪುರವರ ಕಥನ ಕವನ. ಆಂಗ್ಲ ಕವಿ ಬ್ರೌನಿಂಗ್ ಬರೆದ ದಿ ಪೀಯಡ್ ಪೈಪರ್ ಆಪ್ ದಿ ಹಾಮೆಲಿನ್ ಎಂಬ ಕಥನ ಕವನದ ಪ್ರೇರಣೆಯಿಂದ ಕುವೆಂಪುರವರು ಮಕ್ಕಳಿಗಾಗಿ ಕಿಂದರಿಜೋಗಿಯನ್ನು ರಚಿಸಿದ್ದರು. ಕುವೆಂಪುರವರಿಗೆ ಪ್ರಸಿದ್ದಿಯನ್ನು ತಂದು ಕೊಟ್ಟ ಕವಿತೆ ಮೊಟ್ಟ ಮೊದಲ ಬಾರಿಗೆ 1928ರಲ್ಲಿ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಂಘದಿಂದ ಪ್ರಕಟಿಸಿದ ಕಿರಿಯ ಕಾಣಿಕೆ ಕವನ ಸಂಕಲನದಲ್ಲಿ ಪ್ರಿಂಟ್ ಆಯಿತು. ಶಿಶುಕವಿತೆಯೊಳಗಿನ ದೃಶ್ಯಸಾಧ್ಯತೆಯಿಂದಾಗಿ ಹಲವಾರು ಶಾಲೆಕಾಲೇಜುಗಳಲ್ಲಿ, ರಂಗಶಿಬಿರಗಳಲ್ಲಿ ಇದು ನಾಟಕವಾಗಿ ಪ್ರದರ್ಶನಗೊಂಡಿತು. ಕವಿತೆಯಿಂದ ಅಪಾರವಾಗಿ ಪ್ರಭಾವಿತರಾದ ರಂಗದಿಗ್ಗಜ ಬಿ.ವಿ.ಕಾರಂತರವರು ಮೈಸೂರಿನ ರಂಗಾಯಣಕ್ಕೆ ....ಕಿಂದರಜೋಗಿಯನ್ನು ನಾಟಕವಾಗಿಸಿ ಕವಿತೆಯೊಂದನ್ನಾಧರಿಸಿ ಇಷ್ಟು ಸೊಗಸಾಗಿ ನಾಟಕಮಾಡಬಹುದು ಎಂದು ತೋರಿಸಿಕೊಟ್ಟರು. ಕಥನ ಕವನದಲ್ಲಿರುವ ಗೇಯತೆ, ಭಾಷಾಲಾಲಿತ್ಯ ಹಾಗೂ ದೃಶ್ಯವೈಭವದ ಸಾಧ್ಯತೆಗಳು ಮಕ್ಕಳ ಮನಸ್ಸನ್ನು ಸೂರೆಗೊಂಡವು. ಪ್ರೇಕ್ಷಕರನ್ನು ಆಕರ್ಷಿಸಿದವು.

ಮಕ್ಕಳ ರಂಗಶಿಬಿರಗಳಿಗೆ ಹೇಳಿ ಮಾಡಿಸಿದಂತಹ ನಾಟಕವಿದು. ಎಷ್ಟು ಜನ ಮಕ್ಕಳಿದ್ದರೂ ಅವರನ್ನೊಳಗೊಂಡು ನಾಟಕವಾಗಬಹುದಾದ ಸಾಧ್ಯತೆ ಕಿಂದರಜೋಗಿಯಲ್ಲಿದೆ. ಯಾಕೆಂದರೆ ನಾಟಕದಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು ಇಲಿಗಳು. ಊರ ತುಂಬಾ ತುಂಬಿಕೊಂಡ ಇಲಿಗಳ ಪಾತ್ರಗಳಿಗೆ ಅದೆಷ್ಟು ಮಕ್ಕಳನ್ನು ಬೇಕಾದರೂ ಬಳಸಿಕೊಳ್ಳಬಹುದಾಗಿದೆ. ಹಾಗೂ ಕಥನ ಕವನವನ್ನು ಮೊದಲೇ ರೆಕಾರ್ಡ ಮಾಡಿದರಂತೂ ಮಕ್ಕಳಿಗೆ ಹೆಚ್ಚು ಶ್ರಮವೂ ಇರುವುದಿಲ್ಲ. ಹೀಗಾಗಿ ಶಾರ್ಟ ಟರ್ಮ ಮಕ್ಕಳ ವರ್ಕಶಾಪ್ಗಳ ಫೆವೆರೆಟ್ ನಾಟಕ ಇದಾಗಿದೆ.


ಸಾಗರದ ಸ್ಪಂದನ ರಂಗತಂಡವು ಕುವೆಂಪು ಪ್ರತಿಷ್ಠಾನದ ಸಹಯೋಗದೊಂದಿಗೆ ಎಪ್ರಿಲ್ 10 ರಿಂದ 20ರವರೆಗೆ ಹತ್ತು ದಿನಗಳ ಕಾಲ ಕುವೆಂಪುರವರ ಕುಪ್ಪಳಿಯಲ್ಲಿ ಮಳೆಬಿಲ್ಲು ಎನ್ನುವ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಿತ್ತು. ಶಿಬಿರದಲ್ಲಿ ವಿವಿಧ ಬಗೆಯ ತರಬೇತಿಗಳ ಜೊತೆಗೆ ಕಿಂದರಜೋಗಿ ನಾಟಕವನ್ನು ಕಲಿಸಲಾಯಿತು. 2014, ಎಪ್ರಿಲ್ 20 ಶಿಬಿರದ ಸಮಾರೋಪದ ದಿನದಂದು ಎಪ್ಪತ್ತೆರಡು ಮಕ್ಕಳಿಂದ ಕಿಂದರಜೋಗಿ ನಾಟಕ ಪ್ರದರ್ಶಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ತಮ್ಮ ಮಕ್ಕಳು ಮಾಡುವ ನಾಟಕವನ್ನು ನೋಡಲು ಬಂದ ಪ್ರೇಕ್ಷಕರು ಆನಂದದ ಕಡಲಲ್ಲಿ ತೇಲಿದರು. ಇಡೀ ಮಕ್ಕಳ ಕಾರ್ಯಾಗಾರದ ನಿರ್ದೇಶಕಿಯಾಗಿ ಹಾಗೂ ಕಿಂದರಜೋಗಿ ನಾಟಕದ ನಿರ್ದೇಶಕಿಯಾಗಿ ಸ್ಪಂದನ ತಂಡದ ರೂವಾರಿ ಎಂ.ವಿ.ಪ್ರತಿಭಾ ತೆಗೆದುಕೊಂಡ ಶ್ರಮ ಸಾರ್ಥಕವಾಯಿತು.

ಕುವೆಂಪುರವರು ಬರೆದಂತೆಯೇ ಕಿಂದರಜೋಗಿಯನ್ನು ಪ್ರಸ್ತುತ ಪಡಿಸಿದ್ದರೆ ಅದು ಒಂದು ನೃತ್ಯ ರೂಪಕವಾಗುತ್ತಿತ್ತು. ಆದರೆ ಅದರಲ್ಲಿ ಮಕ್ಕಳ ಅಭಿನಯ ಸಾಧ್ಯತೆಗೆ ಹೆಚ್ಚು ಅವಕಾಶವಿಲ್ಲದ್ದನ್ನು ಮನಗಂಡ ನಿರ್ದೇಶಕಿ ಕೆಲವಾರು ದೃಶ್ಯಗಳನ್ನು ಸೃಷ್ಟಿಸಿ ಅದಕ್ಕೆ ಪೂರಕವಾಗಿ ಕಥನ ಕವನದ ಹಾಡುಗಳನ್ನು ಬಳಿಸಿಕೊಂಡು ಒಂದು ಸಂಗೀತ ನೃತ್ಯಮಯ ನಾಟಕವನ್ನು ಕಟ್ಟಿಕೊಟ್ಟರು. ಕೆಲವೊಂದು ದೃಶ್ಯಗಳನ್ನು ಇಂಪ್ರೂವೈಸ್ ಮಾಡುವ ಅವಕಾಶವನ್ನು ಮಕ್ಕಳಿಗೆ ಕೊಟ್ಟಿದ್ದರಿಂದ ಮಕ್ಕಳ ಕ್ರಿಯಾಶೀಲತೆಯೂ ಸಹ ನಾಟಕದಲ್ಲಿ ಮೂಡಿಬಂದಿತು. ಕೇವಲ ಹೇಳಿಕೊಟ್ಟಂತೆ ನಟಿಸುವುದಕ್ಕೆ ಮಾತ್ರ ಮಕ್ಕಳು ಬಳಕೆಯಾಗದೇ ನಾಟಕ ಕಟ್ಟುವ ಪ್ರಕ್ರಿಯೆಯಲ್ಲೂ ಸಹ ಅವರ ಸಹಭಾಗಿತ್ವ ಹಾಗೂ ಮಕ್ಕಳ ಕ್ರಿಯಾಶೀಲತೆಯ ಬಳಕೆ ಶಿಬಿರದ ನಾಟಕದ ವಿಶೇಷತೆಯಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತಂದು ಪ್ರೋತ್ಸಾಹಿಸುವುದು ಮಕ್ಕಳ ಕಾರ್ಯಾಗಾರದ ಆಶಯವೂ ಆಗಿದೆ

ಬೊಮ್ಮನಹಳ್ಳಿ ಎಂಬ ಊರಲ್ಲಿ ಎಲ್ಲಿನೋಡಿದರಲ್ಲಿ ಇಲಿಗಳ ಹಾವಳಿ. ಊರ ತುಂಬಾ ವಿಪರೀತವಾಗಿ ಇಲಿಗಳು ಮಾಡುತ್ತವೆ ದಾಳಿ. ಏನೇ ಮಾಡಿದರೂ ಇಲಿಗಳ ಉಪಟಳ ನಿಯಂತ್ರಣಕ್ಕೆ ಬರುವುದಿಲ್ಲ. ಇಲಿಗಳಿಂದ ಊರನ್ನು ಮುಕ್ತಗೊಳಿಸಿದರೆ ಕೇಳಿದ್ದು ಕೊಡುತ್ತೇನೆ ಎಂದು ಊರಗೌಡ ಡಂಗೂರ ಸಾರಿಸುತ್ತಾನೆ. ಕಿನ್ನುರಿ ಬಾರಿಸುತ್ತಾ ಬರುವ ಕಿಂದರಜೋಗಿ ಹತ್ತುಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟರೆ ಇಲಿಗಳ ಬಾಧೆಯಿಂದ ಊರನ್ನು ಉಳಿಸುವುದಾಗಿ ಹೇಳುತ್ತಾನೆ. ಗೌಡ ಒಪ್ಪುತ್ತಾನೆ. ಕಿಂದರಜೋಗಿ ತನ್ನ ಕಿನ್ನುರಿ ನುಡಿಸಿ ಎಲ್ಲಾ ಇಲಿಗಳನ್ನೂ ಊರ ಹೊರಗಿನ ಗುಹೆಯೊಳಗೆ ಕರೆದುಕೊಂಡು ಹೋಗಿ ಬಿಟ್ಟುಬರುತ್ತಾನೆ. ಆದರೆ ನಾಣ್ಯಕೊಡಲು ಗೌಡ ನಿರಾಕರಿಸಿ ಮೋಸಮಾಡುತ್ತಾನೆ. ದ್ರೋಹದಿಂದ ಬೇಸರಗೊಂಡ ಕಿಂದರಜೋಗಿ ಕಿನ್ನುರಿನುಡಿಸುತ್ತಾ ಊರಿನ ಎಲ್ಲಾ ಮಕ್ಕಳನ್ನೂ ಆಕರ್ಷಿಸಿ ತನ್ನ ಜೊತೆಗೆ ಕರೆದುಕೊಂಡು ಹೋಗಿ ಮಾಯವಾಗುತ್ತಾನೆ. ಊರಲ್ಲಿ ಮಕ್ಕಳ ಹೆತ್ತವರ ಶೋಕ ಮೇರೆ ಮೀರುತ್ತದೆ. ಗೌಡನನ್ನು ಶಪಿಸುತ್ತಾರೆ. ಇದು ಕಿಂದರಜೋಗಿ ಕಥನ ನಾಟಕದ ಸಂಕ್ಷಿಪ್ತ ಕಥೆ

 ಈ ಕಥೆಯಲ್ಲಿ ಕೊನೆಗೆ ಮಕ್ಕಳೆಲ್ಲಾ ಹೆತ್ತವರ ಬಿಟ್ಟು ಹೋಗುವುದು ನಿರಾಶೆಯ ಸಂಕೇತವಾಗಬಾರದೆಂದೋ ಅಥವಾ ಹಾಗೆ ಮಾಯವಾದ ಮಕ್ಕಳ ಹೆತ್ತವರ ಗೋಳು ತಡೆಯಲಾರದೆಯೋ ನಾಟಕದ ನಿರ್ದೇಶಕಿ ಕ್ಲೈಮ್ಯಾಕ್ಸನ್ನು ಒಂದಿಷ್ಟು ಬದಲಾಯಿಸಿದ್ದಾರೆ.  ಊರವರಿಗೆ ಪಾಠ ಕಲಿಸಲು ಮಕ್ಕಳನ್ನು ಮಾಯಮಾಡಿದ ಜೋಗಿ ಮಕ್ಕಳ ಜೊತೆಗೆ ನಲಿದು ಕುಣಿದು ತದನಂತರ ಮತ್ತೆ ಮಕ್ಕಳೆಲ್ಲರನ್ನೂ ಊರಿಗೆ ಕರೆತಂದು ಅವರವರ ಹೆತ್ತವರಿಗೆ ಒಪ್ಪಿಸುತ್ತಾನೆ. ಇದೊಂದು ರೀತಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನುಂಟು ಮಾಡುವಂತಿದೆ.  ಕುವೆಂಪುರವರು ತಮ್ಮ ಕಥನ ಕವನದಲ್ಲಿ ಊರಗೌಡ ಮಾಡಿದ ದ್ರೋಹಕ್ಕೆ ಊರವರಿಗೆಲ್ಲಾ ಶಿಕ್ಷೆಕೊಟ್ಟು ಪಾಠಕಲಿಸುತ್ತಾರೆ. ಯಾರೋ ಒಬ್ಬ ಮಾಡಿದ ವಿಶ್ವಾಸ ಘಾತುಕತನಕ್ಕೆ ಊರ ಜನರೆಲ್ಲಾ ಯಾಕೆ ಬಲಿಯಾಗಬೇಕು? ಇದರಲ್ಲಿ ಮಕ್ಕಳ ಪಾಲಕರ ತಪ್ಪೇನು? ಎನ್ನುವ ಪ್ರಶ್ನೆ ಪ್ರಮುಖವಾಗುತ್ತದೆ. ಆದರೆ ಪ್ರಶ್ನೆಗೆ ನಾಟಕದ ನಿರ್ದೇಶಕಿ ಪ್ರತಿಭಾ ತಮ್ಮ ಮಕ್ಕಳ ನಾಟಕದ ಮೂಲಕ ಸೂಕ್ತ ಉತ್ತರವನ್ನೂ ಕೊಟ್ಟಿದ್ದಾರೆ. ಕುವೆಂಪುರವರ ಕಲ್ಪನೆಗೆ ತಮ್ಮ ಪರಿಕಲ್ಪನೆಯನ್ನು ಸೇರಿಸಿ ಶಿಕ್ಷೆ ಮತ್ತು ಕ್ಷಮೆ ಎರಡನ್ನೂ ನಾಟಕದಲ್ಲಿ ಪ್ರಸ್ತುತಪಡಿಸುತ್ತಾರೆ.  ಗೌಡ ಮಾತು ಕೊಟ್ಟು ತಪ್ಪಿದ ಕಾರಣಕ್ಕೆ ಮಕ್ಕಳನ್ನು ಮಾಯಮಾಡಿದ ಜೋಗಿ ಶಿಕ್ಷೆಯನ್ನು ಕೊಟ್ಟು ಕೊಟ್ಟ ಮಾತಿಗೆ ತಪ್ಪುವುದು ಅಪರಾಧ ಎನ್ನುವುದನ್ನೂ ಹೇಳುತ್ತಲೇ ನಂತರ ಮಕ್ಕಳಿಗೆಲ್ಲಾ ಖುಷಿಯನ್ನು ಹಂಚಿ ಗೌಡ ಮಾಡಿದ ತಪ್ಪನ್ನು ಕ್ಷಮಿಸಿ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೇ ಮಕ್ಕಳನ್ನು ಮರಳಿ ಹೆತ್ತವರತ್ತ ಸೇರಿಸುವುದಿದೆಯಲ್ಲ ಇದು ನಿಜಕ್ಕೂ ಸಕಾರಾತ್ಮಕ ನಿಲುವಾಗಿದೆ. ಮಹಿಳೆಯನ್ನು ಕ್ಷಮಯಾ ಧರಿತ್ರಿ ಎನ್ನುತ್ತಾರೆ. ಮಹಿಳೆಯೊಬ್ಬಳು ನಾಟಕದ ನಿರ್ದೇಶಕಿಯಾಗಿದ್ದರಿಂದ ತನ್ನ ಕ್ಷಮಾಗುಣವನ್ನು ತೋರಿಸಿ ಜೋಗಿಯಲ್ಲೂ ಕರುಣೆಯನ್ನು ಹುಟ್ಟಿಸಿ ಇಡೀ ನಾಟಕವನ್ನು ಸುಖಾಂತ್ಯಗೊಳಿಸಿದ್ದು ನಾಟಕದ ವೈಶಿಷ್ಟ್ಯತೆಯಾಗಿದೆ. ಪ್ರತಿಭಾರವರು ಒಂದು ಮಗುವಿನ ತಾಯಿಯೂ ಆಗಿದ್ದರಿಂದ ಮಗುವನ್ನು ಕಳೆದುಕೊಂಡ ತಾಯಿಯ ವೇದನೆ ಏನೆಂಬುದನ್ನು ಅರ್ಥಮಾಡಿಕೊಂಡು ಮಕ್ಕಳನ್ನು ಹೆತ್ತವರಿಂದ ಅಗಲಿಸುವ ಕಾರ್ಯವನ್ನು ನಾಟಕದಲ್ಲಿ ಮಾಡಲು ಹೋಗದೇ ಜೊತೆ ಸೇರಿಸಿದ್ದು ನಿಜಕ್ಕೂ ಅನನ್ಯವಾಗಿರುವಂತಹುದಾಗಿದೆ. ತಾಯಿ ಮಮತೆ ಎನ್ನುವುದೇ ಇದಕ್ಕೆ.  ಕಿಂದರಜೋಗಿಯಲ್ಲಿ ಕುವೆಂಪುರವರಿಗೆ ಬಾಧಿಸದ ಮಕ್ಕಳ ಅಗಲಿಕೆಯ ನೋವು ಪ್ರತಿಭಾರವರ ಮಾತೃಮಮತೆಯ ಅರಿವಿಗೆ ಬಂದಿದ್ದರಿಂದಲೇ ನಾಟಕದ ಕ್ಲೈಮ್ಯಾಕ್ಸ್ ಸಕಾರಾತ್ಮಕವಾಗಿ ಬದಲಾಗಲು ಸಾಧ್ಯವಾಯಿತು. ಇದಕ್ಕಾಗಿ ನಿರ್ದೇಶಕಿ ಅಭಿನಂದನಾರ್ಹರು.

ಕಿಂದರಿಜೋಗಿ ಒಂದು ಅದ್ಬುತವಾದ ಮಕ್ಕಳ ಪ್ಯಾಂಟಸಿ ಕಥಾನಕ. ಮಕ್ಕಳ ಮನೋರಂಗಭೂಮಿಯ ಕಲ್ಪನಾಲೋಕದ ಅನಾವರಣ ಇಲ್ಲಿದೆ. ಯಾವುದಾದರೂ ನೀತಿ ತತ್ವವನ್ನು ಹೇಳಲು ಕಾಲ್ಪನಿಕ ಕಥೆಗಳನ್ನು ಬಳಸಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ. ಹೆಸರಿಗೆ ಕಿಂದರಿಜೋಗಿ ಮಕ್ಕಳ ನಾಟಕವಾದರೂ ನಿಜಾರ್ಥದಲ್ಲಿ ಇದು ಮಕ್ಕಳು ಅಭಿನಯಿಸುವ ದೊಡ್ಡವರ ಕುರಿತ ನಾಟಕವೇ ಆಗಿದೆ. ಇಡೀ ನಾಟಕದಲ್ಲಿ ದೊಡ್ಡವರ ಪಾತ್ರಗಳೇ ಹೆಚ್ಚಿವೆ. ಮಕ್ಕಳ ಪಾತ್ರಗಳು ಕಡಿಮೆ ಇವೆ. ಆದರೆ ದೊಡ್ಡವರ ಪಾತ್ರಗಳನ್ನೂ ಸಹ ಮಕ್ಕಳೇ ಅಭಿನಯಿಸುವುದರಿಂದಾಗಿ ಇದನ್ನು ಮಕ್ಕಳ ನಾಟಕ ಎನ್ನಬಹುದಾಗಿದೆ. ನುಡಿದಂತೆ ನಡೆಯಬೇಕು, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎನ್ನುವ ಸತ್ಯವನ್ನು ಸಾರುವ ನಾಟಕದ ಆಶಯ ಮಕ್ಕಳೂ ಹಾಗೂ ದೊಡ್ಡವರಿಗಿಬ್ಬರಿಗೂ ನೀತಿಪಾಠವನ್ನು ಹೇಳುತ್ತದೆ. ನಾಟಕದ ಮೂಲಕ ದೊಡ್ಡವರಿಗೆ ಸತ್ಯದರ್ಶನವನ್ನು ಹಾಗೂ ಮಕ್ಕಳಿಗೆ ಆದರ್ಶವನ್ನೂ ಹೇಳುವ ಪ್ರಯತ್ನವನ್ನು ಕುವೆಂಪುರವರು ಮಾಡಿದ್ದಾರೆ.

ರಂಜನೆಯ ಮೂಲಕ ಬೋಧನೆಯೇ ನಾಟಕ ಎಂದು ಭರತಮುನಿ ಹೇಳಿದ್ದು ಪ್ರತಿಭಾ ನಿರ್ದೇಶನದ   ಮಕ್ಕಳ ನಾಟಕದಲ್ಲಿ ಪಕ್ಕಾ ವರ್ಕಔಟ್ ಆಗಿದೆ. ಇಲಿಗಳನ್ನು ಇಲಿಗಳಾಗಿಯೇ ಬಳಸದೇ ಅವು ಮನುಷ್ಯರ ಹಾಗೆ ಮಾತಾಡುತ್ತವೆ, ಮ್ಯೂಸಿಕ್ ಹಾಕಲು ಹೇಳಿ ಮಾಡರ್ನ ಡಾನ್ಸ್ ಮಾಡುತ್ತವೆ, ತರೇವಾರಿ ಕಿರುಕುಳ ಕೊಡುತ್ತವೆ. ಇಲಿಗಳ ತುಂಟುತನವನ್ನು ನೋಡುವುದೇ ಪ್ರೇಕ್ಷಕರಿಗೆ ಬರಪೂರ್ ಮನರಂಜನೆ. ಜೊತೆಗೆ ಶಾಲೆಯ ದೃಶ್ಯವನ್ನು ಸೃಷ್ಟಿಸಿ ಅಲ್ಲಿ ಶಿಕ್ಷಕ ಮತ್ತು ಶಿಷ್ಯರ ನಡುವಿನ ಹಾಸ್ಯ ಪ್ರಸಂಗಗಳನ್ನು ಸೃಷ್ಟಿಸಿ ನಗು ಹುಟ್ಟಿಸಲಾಗಿದೆ. ಹೋಮ ಮಾಡಿ ಇಲಿ ಓಡಿಸುವೆನೆಂಬ ಮಠದ ಸ್ವಾಮಿಗಳ ಮುಖವಾಡ ಬಯಲುಮಾಡಲಾಗಿದೆ... ಹೀಗೆ ಅನೇಕ ಬಿಡಿ ಸನ್ನಿವೇಶಗಳನ್ನು ಹಾಸ್ಯಮಯವಾಗಿ ನಿರೂಪಿಸುತ್ತಲೇ ಕೊನೆಗೆ ಜೋಗಿಯ ಮಾಂತ್ರಿಕ ಆಗಮನ, ಗೌಡನ ದ್ರೋಹ ಹಾಗೂ ಮಕ್ಕಳ ಮಾಯವಾಗುವ ಪ್ರಸಂಗಗಳನ್ನು ಮಾರ್ಮಿಕವಾಗಿ ಕಟ್ಟಲಾಗಿದೆ. ಆರಂಭದಿಂದ ಕೊನೆವರೆಗೂ ಪ್ರೇಕ್ಷಕರನ್ನು ನಕ್ಕು ನಲಿಸಿದ ನಾಟಕ ಕೊಟ್ಟ ಕೊನೆಗೆ ಕೊಟ್ಟ ಮಾತು ತಪ್ಪಿದರೆ ಆಘಾತ ಅನುಭವಿಸಬೇಕಾಗುತ್ತದೆ ಎನ್ನುವ ನೈತಿಕ ಪಾಠವನ್ನು ಹೇಳುತ್ತದೆ. ಹಾಗೂ ನಾಟಕದ ನಿರ್ಮಾಣದ ಎಲ್ಲಾ ಹಂತಗಳಲ್ಲಿ ತೊಡಗಿಕೊಂಡ ಮಕ್ಕಳಲ್ಲಿ ನೈತಿಕ ಪ್ರಜ್ಞೆಯನ್ನು ಹುಟ್ಟಿಸುವುದೇ ನಾಟದ ಸಾರ್ಥಕತೆಯಾಗಿದೆ

  
ಅತೀ ಕಡಿಮೆ ಅವಧಿಯ ರಂಗಶಿಬಿರಗಳಲ್ಲಿ ನಾಟಕದ ತಾಲಿಮಿಗೆ ಹೆಚ್ಚು ಸಮಯ ಸಿಗುವುದಿಲ್ಲ. ಹೀಗಾಗಿ ಇಡೀ ನಾಟಕ ಅಂದುಕೊಂಡಷ್ಟು ಶಿಸ್ತುಬದ್ಧವಾಗಿ ಬಂದಿಲ್ಲ. ಅಷ್ಟೊಂದು ವೃತ್ತಿಪರತೆಯನ್ನು ಅಪೇಕ್ಷಿಸಲೂ ಸಾಧ್ಯವೂ ಇಲ್ಲ. ಆದರೆ ಮಕ್ಕಳು ವೇದಿಕೆಯ ಮೇಲೆ ಏನೇ ಮಾಡಿದರೂ ಚೆಂದ. ಮಕ್ಕಳು ಮಾಡುವ ಮಿಸ್ಟೇಕಗಳೂ ಸಹ ಪೋಷಕ ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುತ್ತವೆ. ಹೀಗಾಗಿ ಚಿಕ್ಕ ಪುಟ್ಟ ರಂಗಶಿಸ್ತಿನ ಕೊರತೆಗಳನ್ನು ಬದಿಗಿಟ್ಟು ಇಡೀ ನಾಟಕವನ್ನು ಒಟ್ಟಾರೆಯಾಗಿ ಸವಿದರೆ ನೋಡುಗರು ಅಪಾರವಾಗಿ ಖುಷಿಪಡಬಹುದಾಗಿದೆ. ಮಕ್ಕಳ ಜೊತೆ ಮಕ್ಕಳಾಗಿ ನಲಿಯಬಹುದಾಗಿದೆ. ಅಭಿನಯದ  ಅನುಭವವಿಲ್ಲದ 10 ರಿಂದ 15 ವರ್ಷದೊಳಗಿನ ಮಕ್ಕಳು ನಾಲ್ಕೇ ದಿನದಲ್ಲಿ ಪಾತ್ರೋಚಿನ ನಟನೆಯನ್ನೂ ಮಾಡಿ, ಸಂಭಾಷಣೆಗಳನ್ನು ತಪ್ಪಿಲ್ಲದಂತೆ ಹೇಳಿದ್ದು ವಿಸ್ಮಯ ಹುಟ್ಟಿಸುವಂತಹುದು. ಮಕ್ಕಳಲ್ಲಿರುವ ಗ್ರಹಿಕೆ ಮತ್ತು ಅನುಕರಣೆಯ ಶಕ್ತಿ ದೊಡ್ಡವರಿಗಿಂತಾ ದೊಡ್ಡದು ಎನ್ನುವುದಕ್ಕೆ ಸಾಕ್ಷಿ  ಅತೀ ಕಡಿಮೆ ಸಮಯದಲ್ಲಿ  ಗಮನಾರ್ಹ ನಟನೆ ನೀಡಿದ ಈ ಮಕ್ಕಳದ್ದಾಗಿದೆ. 


ಸಮಯದ ಕೊರತೆ ಏನೇ ಇರಲಿ ನಿರ್ದೇಶಕರು ಇನ್ನೂ ಸ್ವಲ್ಪ ರಂಗಶಿಸ್ತಿನತ್ತ ಗಮನಕೊಡಬೇಕಿತ್ತು. ಗುಂಪು ಬಳಕೆಯನ್ನು ಸರಿಯಾಗಿ ನಿರ್ವಹಿಸಿದ್ದರೆ ಅಲ್ಲಿ ಆಗುವ ಗೊಂದಲಗಳನ್ನು ಪರಿಹರಿಸಬಹುದಾಗಿತ್ತು. ಸ್ಟೇಜ್ ಬ್ಯಾಲನ್ಸಿಂಗ್, ಎಂಟ್ರಿ-ಎಕ್ಸಿಟ್ಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕಾಗಿತ್ತು.  ಬ್ಲಾಕಿಂಗ್ಗಳಲ್ಲಿ ಇನ್ನೂ ಹೆಚ್ಚು ಶ್ರದ್ಧೆ ವಹಿಸಬೇಕಿತ್ತು. ನಿರೂಪಕರನ್ನು ಇನ್ನೂ ಸಮರ್ಥವಾಗಿ ಬಳಸಬಹುದಾಗಿತ್ತು. ಹಾಡು ನೃತ್ಯ ಹಾಗೂ ಸಂಗೀತಕ್ಕೆ ಸರಿಯಾಗಿ ಸಿಂಕ್ ಮಾಡಬೇಕಾಗಿತ್ತು. ಸತೀಶ ಶಣೈರವರ ಬೆಳಕಿನ ವಿನ್ಯಾಸ ಪ್ರತಿ ದೃಶ್ಯಗಳಿಗೂ ಮೋಹಕತೆಯನ್ನು ಕೊಟ್ಟಿತು ಆದರೂ ಕ್ಲೈಮ್ಯಾಕ್ಸ ದೃಶ್ಯದಲ್ಲಿ ಬೆಳಕು ತುಂಬಾ ದುರ್ಭಲ ಎನಿಸಿತು. ಮಂಜುನಾಥ ಜೇಡಿಕುಣಿಯವರ ವರ್ಣಾಲಂಕಾರದಲ್ಲಿ ಪ್ರತಿಯೊಂದು ಮಗುವಿನ ಮುಖವೂ ಕಳೆಗಟ್ಟಿತ್ತು. ಪ್ರತಿಭಾರವರು ಎಪ್ಪತ್ತೆರಡೂ ಮಕ್ಕಳಿಗೆ ವಸ್ತ್ರವಿನ್ಯಾಸವನ್ನು ಮಾಡಿದ್ದು ವಿಶೇಷವಾಗಿತ್ತು. ರೆಕಾರ್ಡೆಡ್ ಹಾಡು ಹಾಗೂ ಸಂಗೀತ ನಿರ್ದೇಶನ ಶ್ರೀಕಾಂತ ಕಾಳಮಂಜಿಯವರದ್ದಾಗಿದ್ದರೆ ಲೈವ್ ಸಂಗೀತ ಹಾಗೂ ರಿಕಾರ್ಡೆಡ್ ಸಂಗೀತ ನಿರ್ವಹಣೆ ಪುಟ್ಟು ಸಾಗರ್ ರವರದ್ದಾಗಿತ್ತು.  ನಾಟಕದ ನಿರ್ಮಾಣದಲ್ಲಿ ತೀವ್ರವಾಗಿ ತೊಡಗಿಸಿಕೊಂಡು  ಮಕ್ಕಳನ್ನು ಸಂಭಾಳಿಸಿ ನಾಟಕ ನಿರ್ವಹಣೆ ಮಾಡಿದ್ದು ಧಾರವಾಡದ ವಿಜಯಶ್ರೀ ಮತ್ತು ಶಿವಮೊಗ್ಗದ ಜೀವನ್. ಶಿವಮೊಗ್ಗದ ಪತ್ರಕರ್ತಮಿತ್ರ ಶೃಂಗೇಶ ಹಾಗೂ ಶಿರ್ಶಿಯ ರಿಯಾಜ್ ಮತ್ತು ಸಾಗರದ ಅರುಣ್ ಇವರ ಪರಿಶ್ರಮ ಇಡೀ ಕಾರ್ಯಾಗಾರದ ಯಶಸ್ಸಿಗೆ ಕಾರಣವಾಗಿದೆ.

          
ಕುವೆಂಪುರವರ ಕಥನ ಕವನಾಧಾರಿತ ಕಿಂದರಿಜೋಗಿ ನಾಟಕವನ್ನು ಕುವೆಂಪುರವರ ಹುಟ್ಟೂರಾದ ಕುಪ್ಪಳಿಯಲ್ಲಿ ನಿರ್ಮಿಸಿ ಪ್ರದರ್ಶಿಸಿದ್ದು ಮೇರುಕವಿಗೆ ಸ್ಪಂದನ ರಂಗತಂಡ ಸಲ್ಲಿಸಿದ ರಂಗ ನಮನವಾಗಿದೆ. ವಿವಿಧ ಪ್ರಾಂತ್ಯಗಳಿಂದ ಬಂದ ಎಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ತರಬೇತುಗೊಳಿಸಿ, ಅಭಿನಯಕ್ಕೆ ಹದಗೊಳಿಸಿ ನಾಲ್ಕು ದಿನಗಳಲ್ಲಿ ನಾಟಕವನ್ನು ಕಟ್ಟಿಕೊಟ್ಟಿದ್ದು ಪ್ರತಿಭಾರವರ ಸಂಘಟನಾ ಸಾಮರ್ಥ್ಯ ಹಾಗೂ ನಿರ್ದೇಶನದ ಪ್ರತಿಭೆಗೆ ಸಾಕ್ಷಿಯಾಗಿದೆ. ಮಳೆಬಿಲ್ಲು ಮಕ್ಕಳ ರಂಗಶಿಬಿರಕ್ಕೆ ಕುವೆಂಪು ಸ್ಮಾರಕ ಭವನದಲ್ಲಿ ಅವಕಾಶವನ್ನೊದಗಿಸಿ ಸಕಲ ಅನುಕೂಲತೆಗಳನ್ನು ಮಾಡಿಕೊಟ್ಟ ಕುವೆಂಪು ಪ್ರತಿಷ್ಠಾನದ ಹಿರಿಯರಾದ ಕಡಿದಾಳ ಶಾಮಣ್ಣ ಹಾಗೂ ಕಡಿದಾಳ ಪ್ರಕಾಶರವರ ಸಹಕಾರ ಸ್ಮರಣಾರ್ಹವಾಗಿದೆ

ನಿರ್ದೇಶಕಿ ಎಂ.ವಿ.ಪ್ರತಿಭಾ
  ಸ್ಪಂದನ ಮಕ್ಕಳ ಶಿಬಿರದ ಕೊನೆಯಲ್ಲಿ ಕಿಂದರಿಜೋಗಿಯದೇ ರೀತಿಯಲ್ಲಿ ಮರೆಯಲಾರದ ಘಟನೆ ನಡೆಯಿತು. ಅದೇನೆಂದರೆ ಹತ್ತು ದಿನಗಳ ಕಾಲ ಜೊತೆಗಿದ್ದು ಹಾಡಿ ನಲಿದು ಕುಣಿದ ಮಕ್ಕಳು ಕೊನೆಯ ದಿನ ತಮ್ಮ ಪಾಲಕರ ಜೊತೆಗೆ ಮರಳೀ ಮನೆಗೆ ಹೋಗಲು ಮಾನಸಿಕವಾಗಿ ಸಿದ್ದರಿರಲಿಲ್ಲ. ನಾಟಕದ ಪ್ರದರ್ಶನಕ್ಕಿಂತ ಮುಂಚೆ ಹಲವಾರು ಮಕ್ಕಳಿಗೆ ಮೈಕ್ ಕೊಟ್ಟು ಮಾತಾಡಲು ಹೇಳಿದರೆ ಅದರಲ್ಲಿ ಬಹುತೇಕರು ನಮಗೆ ಹತ್ತು ದಿನಗಳಲ್ಲಿ ನಮ್ಮ ತಂದೆ ತಾಯಿಗಳ ನೆನಪೇ ಬರಲಿಲ್ಲ. ಈಗ ಮತ್ತೆ ಮನೆಗೆ ಹೋಗಲೂ ಮನಸ್ಸಿಲ್ಲ. ಹೀಗೆ ಇಲ್ಲಿಯೇ ಇರಬೇಕು ಎನ್ನಿಸುತ್ತಿದೆ... ಎಂದು ಅವಲತ್ತುಕೊಂಡರು. ನಾಟಕ ಮುಗಿದ ನಂತರವೂ ಹಲವಾರು ಮಕ್ಕಳು ಅಳುತ್ತಲೇ ತಮ್ಮ ಗೆಳೆಯರಿಗೆ, ಆಯೋಜಕರಿಗೆ, ನಿರ್ದೇಶಕಿಗೆ ವಿಧಾಯ ಹೇಳಿ ಭಾರವಾದ ಮನಸ್ಸಿನಿಂದ ಪಾಲಕರೊಂದಿಗೆ ಊರಿಗೆ ತೆರಳಿದರು. ಇದು ಕಿಂದರಜೋಗಿ ನಾಟಕದ ಮುಂದುವರಿದ ಭಾಗವೆನಿಸಿತು. ನಾಟಕದಲ್ಲೂ ಸಹ ಜೋಗಿಯೊಬ್ಬ ಊರ ಮಕ್ಕಳನ್ನು ಕರೆದುಕೊಂಡು ಹೋಗಿ ಅವರೊಂದಿಗೆ ಹಾಡುತ್ತಾ ಕುಣಿಯುತ್ತಾ ನಲಿದು ಸಂತಸವನ್ನು ಹಂಚುತ್ತಾನೆ. ಅದೇ ರೀತಿ ರಾಜ್ಯದ ಯಾವುಯಾವುದೋ ಊರುಗಳಿಂದ ಬಂದ ಎಪ್ಪತ್ತೆರಡು ಮಕ್ಕಳಿಗೆ ಹಾಡು ಕುಣಿತ ಅಭಿನಯ ಕಲಿಸುತ್ತಾ ಹತ್ತು ದಿನಗಳ ಕಾಲ ಜಗವ ಮರೆಯುವಂತೆ ಸಂತಸವನ್ನು ಹಂಚಿದ ಪ್ರತಿಭಾ ಎನ್ನುವ ರಂಗಜೋಗಿಣಿ ಅದೇನು ಮಕ್ಕಳಿಗೆ ಮಮತೆಯ ಮೋಡಿ ಮಾಡಿದ್ದರೋ ಗೊತ್ತಿಲ್ಲ, ಹೋಗು ಎಂದರೂ ಮಕ್ಕಳು ಹೆತ್ತವರ ಜೊತೆಗೆ ಹೋಗಲು ಸಿದ್ದರಾಗಲಿಲ್ಲ. ಇದೇ ಸಂಗೀತ, ನೃತ್ಯ ಹಾಗೂ ನಾಟಕ ಕಲೆಗಿರುವ ಶಕ್ತಿ. ಎಲ್ಲರನ್ನೂ ಭಾವನಾತ್ಮಕವಾಗಿ ಒಂದು ಮಾಡುವ  ಮೋಹಕತೆ ಇರುವುದೇ ಕಲಾಲೋಕದಲ್ಲಿ, ಜೋಗಿಯ ಕಿನ್ನುರಿಯಲ್ಲಿ. ಮಕ್ಕಳ ಕಲಾ ಕಾರ್ಯಾಗಾರದಲ್ಲಿ. ನಿಟ್ಟಿನಲ್ಲಿ  ಸ್ಪಂದನದ ಮಕ್ಕಳ ರಂಗಕಾರ್ಯಾಗಾರ ಸಫಲವಾಯಿತು. ಮಕ್ಕಳ ಪೋಷಕರನ್ನೇ ದಿಗ್ಮೂಢರನ್ನಾಗಿಸಿತು. ಮಕ್ಕಳ ಮತ್ತು ಪೋಷಕರ ದೃಷ್ಟಿಯಲ್ಲಿ ನಾಟಕ ಅತ್ಯಂತ ಯಶಸ್ವಿಯೆನಿಸಿತು. ಸ್ಪಂದನ ತಂಡ ಹಾಗೂ ತಂಡದ ರೂವಾರಿ ಪ್ರತಿಭಾರವರ ಪರಿಶ್ರಮ ಸಾರ್ಥಕವೆನಿಸಿತು.     


                                              -ಶಶಿಕಾಂತ ಯಡಹಳ್ಳಿ   

      
            









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ