ಸೋಮವಾರ, ಏಪ್ರಿಲ್ 28, 2014

ಸುವರ್ಣ ಸಂಭ್ರಮದತ್ತ “ರಂಗಭೂಮಿ ಉಡುಪಿ”; ಒಂದು ಸಿಂಹಾವಲೋಕನ



                                     

    
ರಂಗಭೂಮಿ ಉಡುಪಿ ರಂಗತಂಡವು ಕಂಪನಿ ಶೈಲಿಯ ನಾಟಕಗಳಿಂದ ಆಧುನಿಕ ನಾಟಕಗಳಿಗೆ ಪರಿವರ್ತನೆಗೊಂಡಿತು.  ನಾಟಕ ರಚನಾ ಸ್ಪರ್ಧೆಗಳಿಂದ ಹೊಸ ನಾಟಕಗಳ ಹುಟ್ಟಿಗೆ ಕಾರಣವಾದರೆ ನಾಟಕ ರಚನಾ ಕಮ್ಮಟದಿಂದಾಗಿ ಹೊಸ ನಾಟಕಕರರಿಗೆ ಪ್ರೇರಣೆಯನ್ನೊದಗಿಸಿತು.  ರಂಗಸ್ಪರ್ಧೆಗಳ ಮೂಲಕ ವಿಭಿನ್ನ ಬಗೆಯ ತಾಂತ್ರಿಕ ಕೌಶಲದ ನಾಟಕಗಳ ಪ್ರದರ್ಶನಕ್ಕೆ ವೇದಿಕೆಯಾಯಿತು. ಬೇರೆ ಕಡೆಯ ಉತ್ತಮ ನಾಟಕ ಪ್ರದರ್ಶನಗಳಿಗೆ ಉಡುಪಿಯಲ್ಲಿ ವೇದಿಕೆಯನ್ನೊದಗಿಸಿತು. ರಂಗ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಹೊಸ ಕಲಾವಿದರು ರಂಗಭೂಮಿಗೆ ಬರಲು ಕಾರಣಯಿತು. ವಿಚಾರಗೋಷ್ಠಿ ಹಾಗೂ ರಂಗಸಂವಾದಗಳ ಮೂಲಕ ವೈಚಾರಿಕವಾಗಿ ಅಪ್ಡೇಟ್ ಆಗುವ ಕೆಲಸವನ್ನು ರಂಗಭೂಮಿ ಉಡುಪಿ ರಂಗತಂಡವು ಮಾಡಿತು. ರಂಗಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯವನ್ನು ತಾನು ಒರೆಗೆ ಹಚ್ಚಿಕೊಳ್ಳುವ ಕೆಲಸವನ್ನೂ ರಂಗ ತಂಡ ಕ್ರಿಯಾಶೀಲವಾಗಿ ಮಾಡುತ್ತಾ ಬಂದಿದೆ. ಮಕ್ಕಳ ರಂಗಶಿಬಿರಗಳನ್ನು ನಡೆಸುತ್ತಾ, ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಾ ಅರ್ಧ ದಶಕದಿಂದ ಸಾರ್ಥಕ ರೀತಿಯಲ್ಲಿ ಉಡುಪಿಯಲ್ಲಿ ರಂಗಚಟುವಟಿಕೆಗಳನ್ನು ನಡೆಸುತ್ತಿದೆ. ಇಂತಹ ಒಂದು ವಿಶಿಷ್ಟ ರಂತ ತಂಡದ ಬಗ್ಗೆ ರಂಗತಂಡದ ರೂವಾರಿ ಆನಂದ ಗಾಣಿಗರವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಲೇಖನದಲ್ಲಿದೆ.


ಆನಂದ ಗಾಣಿಗರವರು

ಹವ್ಯಾಸಿ ರಂಗತಂಡವೊಂದು ನಿರಂತರವಾಗಿ ಅದೆಷ್ಟು ವರ್ಷ ರಂಗಬದ್ಧತೆಯನ್ನಿಟ್ಟುಕೊಂಡು ಕ್ರಿಯಾಶೀಲವಾಗಿ ಹಲವು ರಂಗ ಆಯಾಮಗಳಲ್ಲಿಕಾರ್ಯನಿರ್ವಹಿಸಬಲ್ಲುದು? ಒಂದು ರಂಗತಂಡದ ರೂವಾರಿಯ ಆಸಕ್ತಿ ಇರುವಷ್ಟು ವರ್ಷ ಇಲ್ಲವೇ ಹಾಗೆ ಆಸಕ್ತಿ ಇರುವ ರಂಗ ಮುಖ್ಯಸ್ಥ ಕಾಲವಶವಾಗುವವರೆಗೂ ಎನ್ನುವುದು ಬಹುತೇಕ ರಂಗಭೂಮಿ ಸಂದರ್ಭದಲ್ಲಿ ಸಾಬೀತಾಗಿದೆ. ಆದರೆ ಮಾತಿಗೆ ಅಪವಾದ ಎನ್ನುವಂತೆ ಉಡುಪಿಯಲ್ಲಿ ಕಳೆದ 49 ವರ್ಷಗಳಿಂದ ರಂಗತಂಡವೊಂದು ನಿರಂತರವಾಗಿ ರಂಗಚಟುವಟಿಕೆಗಳಲ್ಲಿ ನಿರತವಾಗಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ರಂಗಕ್ರಿಯೆ ಮುಂದುವರೆದಿದೆ. ಅದು ರಂಗಭೂಮಿ (ರಿ) ಉಡುಪಿ ರಂಗತಂಡದ ಯಶೋಗಾಥೆ. ಅಚ್ಚರಿ ಎನ್ನಿಸಿದರೂ ಇದು ಸತ್ಯ. ನಾಟಕಗಳ ನಿರ್ಮಾಣ ಮತ್ತು ಪ್ರದರ್ಶನ, ನಾಟಕ ಸ್ಪರ್ಧೆಗಳ ಆಯೋಜನೆ,  ಯುವಕರಿಗೆ ರಂಗ ತರಬೇತಿ ಕಾರ್ಯಾಗಾರಗಳು, ನಾಟಕ ರಚನಾ ಕಮ್ಮಟಗಳು, ಸಾಧಕರಿಗೆ ರಂಗಸನ್ಮಾನಗಳು, ಮಕ್ಕಳ ಬೇಸಿಗೆ ಶಿಬಿರಗಳು, ರಂಗಸಂವಾದಗಳು, ರಂಗಭೂಮಿ ಕುರಿತು ವಿಚಾರ ಸಂಕಿರಣಗಳು ಜೊತೆಗೆ ಪುಸ್ತಕ ಬಿಡುಗಡೆ, ಕಾವ್ಯಗಾಯನ, ಕಲಾತ್ಮಕ ಚಿತ್ರಗಳ ಪ್ರದರ್ಶನ... ಹೀಗೆ ಹಲವಾರು ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಆಯಾಮಗಳಲ್ಲಿ ರಂಗಭೂಮಿ ಉಡುಪಿ ಅವ್ಯಾಹತವಾಗಿ ತೊಡಗಿಕೊಂಡಿದೆ.

ಇದೆಲ್ಲಾ ಹೇಗೆ ಸಾಧ್ಯವಾಯಿತು? ಒಬ್ಬ ವ್ಯಕ್ತಿ ಅಪಾರವಾದ ಕಲಾಸಕ್ತಿ ಹಾಗೂ ರಂಗಪ್ರೀತಿಯನ್ನಿಟ್ಟುಕೊಂಡು ನಾಯಕತ್ವದ ವ್ಯಕ್ತಿತ್ವವನ್ನು ಹೊಂದಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ! ಎಂಬುದನ್ನು ಸಾಬೀತುಪಡಿಸಿದವರು ಕುತ್ವಾಡಿ ಆನಂದ ಗಾಣಿಗ ರವರು. ವಿಚಿತ್ರ ವಿಶಿಷ್ಟ ಹಾಗೂ ವಿಕ್ಷಿಪ್ತ ವ್ಯಕ್ತಿತ್ವವನ್ನು ಹೊಂದಿದ್ದ ನಿಷ್ಟುರವಾದಿ ಆನಂದ ಗಾಣಿಗರವರು ವ್ಯಕ್ತಿ ಕೇಂದ್ರಿತವಾಗಬಹುದಾಗಿದ್ದ ರಂಗತಂಡವನ್ನು ಸಾಮುದಾಯಿಕಗೊಳಿಸಿದ್ದೇ ಒಂದು ರಂಗಪವಾಡ. ಸಾಂಪ್ರದಾಯಿಕ ಸನಾತನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಉಡುಪಿಯ ಪುರೋಹಿತಶಾಹಿ ಕರ್ಮಠ ವ್ಯವಸ್ಥೆಯಲ್ಲಿ ಅಬ್ರಾಹ್ಮಣ ವ್ಯಕ್ತಿಯೊಬ್ಬ ರಂಗಶಕ್ತಿಯಾಗಿ ಬೆಳೆದು ಒಂದು ರಂಗತಂಡವನ್ನು ಪೋಷಿಸಿ ಹೆಮ್ಮರವಾಗಿ ಬೆಳೆಸಿ ಉಳಿಸಿದ ರೀತಿಯೇ ಅದ್ಬುತ. ಸನಾತನ ಮೂಢನಂಬಿಕೆಗಳನ್ನು ಪ್ರಶ್ನಿಸುತ್ತಲೇ ಪುರೋಹಿತಶಾಹಿ ಮನಸ್ಸುಗಳನ್ನೂ ಸಹ ರಂಗಭೂಮಿ ಚಟುವಟಿಕೆಗಳಲ್ಲಿ ಬಳಸಿಕೊಂಡು ರಂಗಲೋಕವೊಂದನ್ನು ಉಡುಪಿಯಲ್ಲಿ ಕಟ್ಟಿದ್ದೊಂದು ವಿಸ್ಮಯ. ಸಾಂಪ್ರದಾಯಿಕ ಸಂಸ್ಕೃತಿಯ ಹಿಡಿತವಿರುವ ಉಡುಪಿಯಲ್ಲಿ ಪುರೋಹಿತಶಾಹಿ ನಂಬಿಕೆಗಳನ್ನೇ ವಿರೋಧಿಸುವಂತಹ ಸೂರ್ಯಶಿಕಾರಿಯಂತಹ ಹಲವು ನಾಟಕಗಳನ್ನು  ನಿರ್ಮಿಸಿ ಪ್ರದರ್ಶಿಸಿದ್ದು ಹಾಗೂ ಹಲವಾರು ವೈಚಾರಿಕ ನಾಟಕಗಳ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿಕೊಟ್ಟಿದ್ದು ಅಚ್ಚರಿದಾಯಕವಾದದ್ದು. ಒಂದು ಕರ್ಮಠ ವ್ಯವಸ್ಥೆಯಲ್ಲಿದ್ದುಕೊಂಡೇ ಅದನ್ನು ವಿರೋಧಿಸಿ ಜೀರ್ಣಿಸಿಕೊಳ್ಳುವುದು, ಪುರೋಹಿತಶಾಹಿ ಮನಸ್ಥಿತಿಯವರ ಜೊತೆಗಿದ್ದುಕೊಂಡೇ ಮೌಡ್ಯತೆಯನ್ನು ಪ್ರತಿರೋಧಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ಅಂತಹ ಸಾಧ್ಯತೆಗಳನ್ನು ಸಾಕಾರಗೊಳಿಸಿದ್ದು ಗಾಣಿಗರವರ ಸಾಧನೆಯಾಗಿದೆ. ಆನಂದ ಗಾಣಿಗರವರನ್ನು ಹೊರತು ಪಡಿಸಿ ರಂಗಭೂಮಿ ಉಡುಪಿ ರಂಗತಂಡವನ್ನು ಮಾತ್ರ ಪರಿಗಣಿಸಲು ಸಾಧ್ಯವೇ ಇಲ್ಲ. ಹೀಗಾಗಿ ಗಾಣಿಗರವರ ರಂಗಬದುಕಿನ ಪಯಣದ ಜೊತೆಗೆ ರಂಗಭೂಮಿ ಉಡುಪಿ ರಂಗತಂಡದ ಸಾಧನೆಯನ್ನು ನೋಡೋಣ.


ಆನಂದ ಗಾಣಿಗರವರು
ಆನಂದ ಗಾಣಿಗರು ಹುಟ್ಟಿದ್ದು (21-05-1936) ಉಡುಪಿಯ ಪಕ್ಕದಲ್ಲೇ ಇರುವ ಕುತ್ವಾಡಿ ಗ್ರಾಮದಲ್ಲಿ. ಓದಿದ್ದು ಬೆಳೆದಿದ್ದು ಎಲ್ಲಾ ಉಡುಪಿಯ ಅಕ್ಕಪಕ್ಕದಲ್ಲೇ. ನೌಕರಿಗೆ ಸೇರಿದ್ದು ಕೂಡಾ  ಉಡುಪಿಯ ಜೀವನ ವಿಮಾ ನಿಗಮದಲ್ಲಿ. ಆರು ಅಡಿ ಎತ್ತರದ ಸ್ಪುರದ್ರೂಪಿಯಾಗಿದ್ದ ಅದ್ಬುತ ಶಾರೀರವಿರುವ ಆನಂದರವರಿಗೆ ನಟನೆಯಲ್ಲಿ ಅಪಾರವಾದ ಆಸಕ್ತಿ. ಯಕ್ಷಗಾನವೆಂದರೆ ಪಂಚಪ್ರಾಣ. ಹೀಗಾಗಿ ಸಮಯ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ಕಂಪನಿ ಶೈಲಿಯ ನಾಟಕಗಳಲ್ಲಿ ಹಾಗೂ ಯಕ್ಷಗಾನ ಪ್ರಸಂಗಗಳಲ್ಲಿ ಅಭಿನಯಿಸುತ್ತಿದ್ದರು. ಅಂಬಲಪಾಡಿಯ ಲಕ್ಷ್ಮೀ ಜನಾರ್ಧನ ಯಕ್ಷಗಾನ ಮಂಡಳಿ ಸೇರಿ ಕಂಸ, ವಾಲಿ, ಕರ್ಣ... ಮುಂತಾದ ಯಕ್ಷಗಾನ ಪ್ರಸಂಗಗಳಲ್ಲಿ ಅಮೋಘವಾಗಿ ಅಭಿನಯಿಸಿದರು. ಅದು 1965ನೇ ಇಸ್ವಿ. ತನ್ನಂತೆಯೇ ರಂಗಾಸಕ್ತಿ ಇರುವ ಉಡುಪಿಯ ಎಲ್ಐಸಿ ಮತ್ತು ಸಿಂಡಿಕೇಟ್ ಬ್ಯಾಂಕಿನ ಕೆಲವು ರಂಗಾಸಕ್ತ ಉದ್ಯೋಗಿಗಳನ್ನು ಸೇರಿಸಿಕೊಂಡು ರಂಗಭೂಮಿ ಉಡುಪಿ ಎನ್ನುವ ರಂಗಸಂಸ್ಥೆಯೊಂದನ್ನು ಉಡುಪಿಯಲ್ಲಿ ಅಸ್ತಿತ್ವಕ್ಕೆ ತಂದ ಆನಂದ ಗಾಣಿಗರವರು ರಂಗತಂಡದ ಪ್ರಧಾನ ಕಾರ್ಯದರ್ಶಿಯಾದರು.

ರಂಗಭೂಮಿ ಉಡುಪಿ ಬೆಳೆದುಬಂದ ಹಾದಿ : ರಂಗತಂಡದ ಮೊಟ್ಟಮೊದಲ ನಾಟಕ ಕೆ.ಎಸ್.ಬೆಟದೂರರು ಬರೆದ ರಾಷ್ಟ್ರಭಕ್ತಿ. ಕೆ.ವೆಂಕಟಾಚಲ ಭಟ್ಟರವರು ನಿರ್ದೇಶಿಸಿದ ನಾಟಕದಲ್ಲಿ ಪ್ರಮುಖ ಪಾತ್ರವಹಿಸಿದವರು ಆನಂದ್ ಗಾಣಿಗರವರು. ಅವರ ದೇಶಪ್ರೇಮಕ್ಕೆ ಬಹುದೊಡ್ಡ ಸಾಕ್ಷಿ ರಂಗಭೂಮಿ ತಂಡದಿಂದ ನಿರ್ಮಿಸಿದ ಮೊದಲ ನಾಟಕ ರಾಷ್ಟ್ರಭಕ್ತಿ. ಅದ್ಯಾಕೋ ನಾಟಕ ಒಂದೇ ಒಂದು ಪ್ರದರ್ಶನವನ್ನು ಕಂಡಿತು. 1966ರಲ್ಲಿ ಮಹಾಂತೇಶ ಶಾಸ್ತ್ರಿಗಳ ಅಣ್ಣತಮ್ಮ, ಎಚ್.ಎನ್.ಹೂಗಾರರು ಬರೆದ ಪುತ್ತಳಿ ಎನ್ನುವ ಎರಡು ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಲಾಯಿತು. 1967 ರಲ್ಲಿ ದುತ್ತರಿಗಿಯವರ ಸಾದ್ವೀಮಣಿ, ರಾಮಸಂಜೀವಯ್ಯನವರ ಋಣಾನುಬಂಧ ಹಾಗೂ ಎನ್.ಕೆ.ಶಂಕರಪ್ಪನವರ ಮಂಗಳಾ ಎನ್ನುವ ಮೂರು ನಾಟಕಗಳನ್ನು ನಿರ್ಮಿಸಿ ಪ್ರಯೋಗಿಸಿದರು. 1968 ರಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಚದುರಂಗರ ಕುಮಾರರಾಮ ನಾಟಕಗಳನ್ನು ಆಡಿಸಲಾಯಿತು. ಮಂಗಳಾ ಮತ್ತು ಕುಮಾರರಾಮ ನಾಟಕಗಳು ತಲಾ ಹದಿನಾಲ್ಕು ಪ್ರದರ್ಶನಗಳನ್ನು ಕಂಡವು. ಹೀಗೆ 1965 ರಿಂದ 1977 ವರೆಗಿನ ಹನ್ನೆರಡು ವರ್ಷಗಳಲ್ಲಿ ಹದಿನೇಳು ನಾಟಕಗಳನ್ನು ರಂಗಭೂಮಿ ಉಡಪಿ ತಂಡವು ನಿರ್ಮಿಸಿ ಹಲವಾರು ಪ್ರದರ್ಶನಗಳನ್ನು ನೀಡಿದರು. ಇದರಲ್ಲಿ ಬಹುತೇಕ ನಾಟಕಗಳನ್ನು ಆನಂದ ಗಾಣಿಕಗರವರು ಪರಿಷ್ಕರಿಸಿ ಸ್ಕ್ರಿಪ್ಟ್ ಸಿದ್ದಪಡಿಸಿದರೆ, ಹದಿನಾಲ್ಕು ನಾಟಕಗಳನ್ನು ಕೆ.ವೆಂಕಟಾಚಲ ಭಟ್ರವರು ನಿರ್ದೇಶಿಸಿದ್ದರು. ಅಣ್ಣ ತಮ್ಮ ಹಾಗೂ ಮಾತೃದೇವೋಭವ ಎರಡು ನಾಟಕಗಳನ್ನು  ರಾಯಭಾರಿ ವಾರಪತ್ರಿಕೆಯ ಸಂಪಾದಕರಾಗಿದ್ದ ಎಸ್.ಎಲ್. ನಾರಾಯಣ ಭಟ್ ರವರು ನಿರ್ದೇಶಿಸಿದ್ದರೆ 1977 ರಲ್ಲಿ ಆಶುನಾಟಕ ಹೆಸರಿನಲ್ಲಿ ಸ್ವತಃ ಆನಂದ ಗಾಣಿಗರವರು ನಾಟಕ ರಚಿಸಿ ನಿರ್ದೇಶಿಸಿ ಮೂಲಕ ನಾಟಕಕಾರರೂ ಹಾಗೂ ರಂಗನಿರ್ದೇಶಕರಾದರು. ಮೂರು ದಶಕಗಳ ಕಾಲದ ತಮ್ಮ ಎಲ್ಐಸಿ ವೃತ್ತಿಯ ಜೊತೆಗೆ ರಂಗಚಟುವಟಿಕೆಗಳನ್ನು ಮುಂದುವರೆಸಿದರು. ಕಳೆದ 49 ವರ್ಷಗಳಿಂದ ಪ್ರತಿ ವರ್ಷ ಎರಡು ಇಲ್ಲವೇ ಮೂರು ನಾಟಕಗಳನ್ನು ರಂಗಭೂಮಿ ಉಡುಪಿ ರಂಗತಂಡವು ನಿರ್ಮಿಸಿ ಪ್ರದರ್ಶಿಸಿದೆ.
 
ಪೌರಾಣಿಕ ನಾಟಕದಲ್ಲಿ ಆನಂದ ಗಾಣಿಗರವರು
ಆರಂಭದ ಹನ್ನೆರಡು ವರ್ಷಗಳ ಕಾಲ ರಂಗಭೂಮಿ ಉಡುಪಿ ನಿರ್ಮಿಸಿದ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳೆಲ್ಲಾ ಕಂಪನಿ ನಾಟಕ ಶೈಲಿಯಲ್ಲಿದ್ದವು. ಅದೇ ಪರದೆಗಳು, ಎದ್ದು ನಿಂತ ಮೈಕ್ಗಳು, ಅತಿರೇಕದ ಮೆಲೋಡ್ರಾಮಾ ಅಭಿನಯಗಳಿರುವ ನಾಟಕಗಳವು. ಆಗ ನಮ್ಮ ನಾಡಿನಾದ್ಯಂತ ವೃತ್ತಿ ಕಂಪನಿ ನಾಟಕಗಳು ಹಾಗೂ ಇಂತಹ ನಾಟಕಗಳ ಶೈಲಿಯನ್ನು ಅನುಕರಿಸುವ ಹವ್ಯಾಸಿ ತಂಡಗಳ ನಾಟಕಗಳು ವಿಜ್ರಂಭಿಸುತ್ತಿದ್ದವು. ಜೊತೆಗೆ ಕೈಲಾಸಂ, ಶ್ರೀರಂಗರವರು ಪಾಶ್ಚಾತ್ಯ ರಂಗಭೂಮಿ ಪ್ರಭಾವಕ್ಕೊಳಗಾಗಿ ಆಧುನಿಕ ನಾಟಕ ಪರಂಪರೆಯೊಂದನ್ನು ಶುರು ಮಾಡಿದ್ದರು. 1967 ರಲ್ಲಿ ಬಿ.ವಿ.ಕಾರಂತರು ಎನ್ಎಸ್ಡಿ ಯಿಂದ ಬಂದನಂತರ ಆಧುನಿಕ ನಾಟಕಗಳಿಗೆ ಹೊಸ ಭಾಷ್ಯವನ್ನೇ ಬರೆದರು. ತದನಂತರ 1972 ಫೆಬ್ರವರಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರತಿಮಾ ನಾಟಕ ರಂಗ ಆಯೋಜಿಸಿದ ಲಂಕೇಶರ ಸಂಕ್ರಾತಿ ಹಾಗೂ ದೊರೆ ಈಡಿಪಸ್ ಮತ್ತು ಚಂದ್ರಶೇಖರ್ ಕಂಬಾರರ ಜೋಕುಮಾರಸ್ವಾಮಿ ನಾಟಕಗಳು ರಂಗದಿಗ್ಗಜ ಬಿ.ವಿ.ಕಾರಂತರ ನಿರ್ದೇಶನದಲ್ಲಿ ಪ್ರದರ್ಶನಗೊಂಡು ಆಧುನಿಕ ರಂಗಭೂಮಿಗೆ ದಿಕ್ಸೂಚಿಯಾದವು. ಒಂದು ಸ್ವದೇಶಿ, ಒಂದು ವಿದೇಶಿ ಹಾಗೂ ಇನ್ನೊಂದು ಜಾನಪದ ಹೀಗೆ ಮೂರು ಪ್ರಕಾರಗಳ ಪ್ರಮುಖ ನಾಟಕಗಳು ರಂಗಭೂಮಿಯ ದಿಕ್ಕನ್ನೇ ಬದಲಾಯಿಸಿದವು. ಆಧುನಿಕ ರಂಗನಾಟಕಗಳ ಅಲೆಗಳು ನಾಡಿನಾದ್ಯಂತ ಹರಡಿ ಹಲವಾರು ಹವ್ಯಾಸಿ ತಂಡಗಳು ಹೊಸ ಬಗೆಯ ನಾಟಕಗಳನ್ನು ಆಡತೊಡಗಿದರು.

ಹಾಗೆ ಬೀಸಿದ ಬದಲಾವಣೆ ಗಾಳಿಗೆ ಆನಂದ ಗಾಣಿಗರೂ ಪ್ರಭಾವಿತರಾಗಿ ರಂಗಭೂಮಿ ಉಡುಪಿ ರಂಗತಂಡವನ್ನು ಹೊರ ಪರಿವರ್ತನೆಗೆ ತೆರೆದುಕೊಳ್ಳುವಂತೆ ಮಾಡಿದರು. ಕಂಪನಿ  ಶೈಲಿಯ ನಾಟಕಗಳನ್ನೇ ಮಾಡುತ್ತಿದ್ದರೆ ರಂಗಭೂಮಿ ಉಡುಪಿ ತಂಡ ಯಾವಾಗಲೋ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿತ್ತು. ಆದರೆ ಯಾವಾಗಲೂ ಹೊಸತನಕ್ಕೆ ತೆರೆದುಕೊಳ್ಳುವ, ಹೊಸ ಸಾಹಸಕ್ಕೆ ಸದಾ ತುಡಿಯುತ್ತಿದ್ದ ಆನಂದ ಗಾಣಿಗರು ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಚಲನಶೀಲತೆಗೊಳಗಾಗಿ ಕಂಪನಿ ಶೈಲಿಯ ನಾಟಕ ಪರಂಪರೆಯ ಪೊರೆಯನ್ನು ಕಳಚಿಕೊಂಡು ಆಧುನಿಕ ನಾಟಕಗಳನ್ನು ತಮ್ಮ ರಂಗತಂಡಕ್ಕೆ ಅಳವಡಿಸಿಕೊಂಡರು. ಕಾಲ ಪ್ರದೇಶ ಹಾಗೂ ಪರಿಸ್ಥಿತಿಗೆ ಹೊಂದಿಕೊಂಡು ವ್ಯಕ್ತಿ ತನ್ನ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಇಂತಹ ಬದಲಾವಣೆಗೆ ನಾನೂ ಹೊರತಲ್ಲ... ಎಂದು ತಮ್ಮ ಲೇಖನದಲ್ಲಿ ಆನಂದ ಗಾಣಿಗರವರೇ ಬರೆದುಕೊಂಡು ತಮ್ಮ ಚಲನಶೀಲತೆಯನ್ನು ದಾಖಲಿಸಿದ್ದಾರೆ. ಬದಲಾಗದ್ದು ಬಹಳ ದಿನ ಬದುಕದು ಎನ್ನುವ ಪರಮ ಸತ್ಯವನ್ನು ಗಾಣಿಗರು ಸರಿಯಾಗಿ ಅರ್ಥಮಾಡಿಕೊಂಡಿದ್ದರು. ಅದಕ್ಕೆ ಪೂಕವಾಗಿ ತಮ್ಮನ್ನು ಹಾಗೂ ತಮ್ಮ ರಂಗತಂಡವನ್ನೂ ಪರಿವರ್ತಿಸಿಕೊಂಡರು. ತಮ್ಮ ನಾಟಕಗಳ ಖಾಯಂ ನಿರ್ದೇಶಕರನ್ನೂ ಬದಲಾಯಿಸಿದರು.

1978 ರಲ್ಲಿ ತಲೆದಂಡ ನಾಟಕವನ್ನು ತೆಗೆದುಕೊಂಡು ಹೊಸ ತಲೆಮಾರಿನ ರಂಗ ನಿರ್ದೇಶಕ ರಾಮದಾಸ ರವರಿಗೆ ನಿರ್ದೇಶನದ ಜವಾಬ್ದಾರಿ ವಹಿಸಿದರು. 1979ರಲ್ಲಿ ಜೋಕುಮಾರಸ್ವಾಮಿ ನಾಟಕವನ್ನು ಅಮೃತ ಸೊಮೇಶ್ವರ ಅವರಿಂದ ತುಳುವಿಗೆ ಅನುವಾದಿಸಿ ರಾಮದಾಸ ಹಾಗೂ ಆನಂದ ಗಾಣಿಗ ಇಬ್ಬರೂ ಜಂಟಿಯಾಗಿ ನಿರ್ದೇಶಿಸಿದರು. ಎರಡು ವರ್ಷಗಳಲ್ಲಿ ನಾಟಕ ಹನ್ನೆರಡು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಯಿತು. ಯಶಸ್ಸಿನಿಂದ ಉತ್ತೇಜಿತರಾದ ಗಾಣಿಗ ಹಾಗೂ ರಂಗಭೂಮಿ ತಂಡದ ರಂಗಗೆಳೆಯರು 1981 ರಲ್ಲಿ ಲಂಕೇಶರ ಸಂಕ್ರಾಂತಿ ನಾಟಕವನು ತೆಗೆದುಕೊಂಡು ರಾಮದಾಸ ಹಾಗೂ ಗಾಣಿಗರು ಜಂಟಿಯಾಗಿ ನಿರ್ದೇಶಿಸಿದರು. ನಾಟಕವೂ ಸಹ ಎರಡು ವರ್ಷಗಳಲ್ಲಿ ಒಂಬತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ತದನಂತರ ಚಂದ್ರಶೇಖರ ಕಂಬಾರರ ನಾಯಿಕತೆ, ಹರಕೆಯ ಕುರಿ ಹಾಗೂ ಸಾಂಬಶಿವ ಪ್ರಹಸನ,  ಹೂಲಿ ಶೇಖರರವರ ಗಾಂಧೀನಗರ, ಉತ್ಪಲದತ್ತರವರ ಸೂರ್ಯಶಿಕಾರಿ, ಶಿವರಾಮ ಕಾರಂತರ ಹೇಮಂತ, ಬಿ.ವಿ.ಕಾರಂತರ ಪಂಜರಶಾಲೆ..... ಹೀಗೆ  1978ರಿಂದ ಆನಂದ ಗಾಣಿಗರು ಕಾಲವಶವಾದ 2010ರವರೆಗಿನ 32 ವರ್ಷಗಳಲ್ಲಿ 26 ಆಧುನಿಕ ನಾಟಕಗಳನ್ನು ರಂಗಭೂಮಿ ಉಡುಪಿ ರಂಗತಂಡ ನಿರ್ಮಿಸಿ ಪ್ರದರ್ಶಿಸಿದೆ. ಇದರಲ್ಲಿ ನಾಲ್ಕು ತುಳು ಭಾಷೆಯ ನಾಟಕಗಳೂ ಸೇರಿವೆ.


ರಾಜ್ಯ ಮಟ್ಟದ ನಾಟಕ ರಚನಾ ಸ್ಪರ್ಧೆಗಳು : ಆನಂದ ಗಾಣಿಗರಿಗೆ ಉಡುಪಿಯಲ್ಲಿ ಹೊಸ ನಾಟಕಗಳನ್ನು ಕಟ್ಟಿ ರಂಗಭೂಮಿ ಉಡುಪಿ ರಂಗತಂಡಕ್ಕೆ ಹೊಸ ಇಮೇಜನ್ನು ತರಬೇಕೆಂಬ ಬಯಕೆ ಇತ್ತು. ಅದಕ್ಕಿಂತ ಆನಂದರವರು ಯಾವಾಗಲೂ ಹೊಸತನಕ್ಕಾಗಿ ಹಪಹಪಿಸುತ್ತಿದ್ದರು. ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳನ್ನು ಹೊರತು ಪಡಿಸಿ ಸಾಮಾಜಿಕ ನಾಟಕಗಳ ಸೃಷ್ಟಿಗೆ ಹೆಚ್ಚು ಗಮನ ಕೊಟ್ಟರು. ಹೀಗಾಗಿ ಹೊಸ ನಾಟಕಗಳ ಸೃಷ್ಟಿಗೆ ವೇದಿಕೆಯೊಂದನ್ನು ಹುಟ್ಟಿಸಿದರು. ಸಾಮಾಜಿಕ ನಾಟಕ ರಚನಾ ಸ್ಪರ್ಧೆಗಳನ್ನು ತಮ್ಮ ತಂಡ ಹುಟ್ಟಿದ ಆರಂಭದಿಂದಲೂ ಆಯೋಜಿಸಲು ತೊಡಗಿದರು. ಮೊದಲ ಸಾಮಾಜಿಕ ನಾಟಕ ರಚನಾ ಸ್ಪರ್ಧೆ ಆಯೋಜನೆಗೊಂಡಿದ್ದು 1967ರಲ್ಲಿ. ಒಟ್ಟು ಬಂದ 18 ನಾಟಕಗಳಲ್ಲಿ ಭದ್ರಾವತಿಯ ಎನ್.ಕೆ.ಶಂಕರಪ್ಪ ಬರೆದ ಮಂಗಳಾ ನಾಟಕ ಪ್ರಥಮ ಬಹುಮಾನ ಪಡೆಯಿತು. ನಾಟಕವನ್ನು ಗಾಣಿಗರು ಇನ್ನಷ್ಟು ಪರಿಷ್ಕರಿಸಿ ತಮ್ಮ ಗುರುಗಳಾದ ವೆಂಕಟಾಚಲ ಭಟ್ ರವರಿಂದ ನಿರ್ದೇಶನವನ್ನೂ ಮಾಡಿಸಿ ಪ್ರದರ್ಶಿಸಿದರು. ಒಟ್ಟು 14 ಪ್ರದರ್ಶನವನ್ನು ಕಂಡ ನಾಟಕ ಯಶಸ್ವಿಯಾಯಿತು. 1969 ರಲ್ಲಿ ಸ್ಪರ್ಧೆಗೆ ಬಂದ ಎಂಟು ರಂಗಪಠ್ಯಗಳಲ್ಲಿ ಉಡುಪಿಯ ವಿಠಲ ಶೆಟ್ಟಿಗಾರ್ ರಚಿಸಿದ ವಕೀಲರ ಮಗಳು ನಾಟಕ ಮೊದಲ ಪ್ರಶಸ್ತಿ ಪಡೆಯಿತು.  1974ರಲ್ಲಿ ನಡೆದ ಸಾಮಾಜಿಕ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹನ್ನೆರಡು ನಾಟಕಗಳಲ್ಲಿ ಮೊದಲ ಬಹುಮಾನಕ್ಕೆ ಯಾವುದೇ ನಾಟಕ ಅರ್ಹವಾಗಿಲ್ಲವೆಂದು ಹೇಳಿ ಕುಮಟಾದ ರೋಹಿದಾಸ ಮಹಾಲೆಯವರು ರಚಿಸಿದ ಮುಳ್ಳಿನ ಹಾಸಿಗೆ ನಾಟಕಕ್ಕೆ ಎರಡನೇ ಬಹುಮಾನ ಕೊಡಲಾಯಿತು.

1089 ರಂಗಭೂಮಿ ಉಡುಪಿ ರಂಗತಂಡದ 25ನೇ ವರ್ಷದ ರಜತಮಹೋತ್ಸವ. ವರ್ಷ ವಿಶೇಷವಾಗಿ ಸ್ಪರ್ಧೆಗಳನ್ನು ಏರ್ಪಡಿಸಿ ನಾಡಿನಾಧ್ಯಂತ ಪತ್ರಿಕೆಗಳ ಮೂಲಕ ಪ್ರಚಾರ ಮಾಡಿ ಸಾಮಾಜಿಕ ನಾಟಕಗಳನ್ನು ಆಹ್ವಾನಿಸಲಾಗಿತ್ತು. ಸ್ಪರ್ಧೆಗೆ ಬಂದ ಒಟ್ಟು ನಾಟಕಗಳ ಸಂಖ್ಯೆ 53. ಸ್ಪರ್ಧೆಯಲ್ಲಿ ಆಯ್ಕೆಯಾದ ಮೂರೂ ನಾಟಕಗಳು ಮುಂದೆ ರಂಗಭೂಮಿಯಲ್ಲಿ ಪ್ರಸಿದ್ದವಾದವು. ಇಳಕಲ್ ಡಾ.ಎಸ್.ಪಿ.ಪದ್ಮಪ್ರಸಾದ್ ರಚಿಸಿದ ಜುಮ್ನಾಳ ಧೂಳ್ಯಾನ ಪ್ರಸಂಗ ಮೊದಲ ಬಹುಮಾನ ಪಡೆಯಿತು. ಇಂದಿಗೂ ಆಗಾಗ ನಾಟಕವನ್ನು ಕೆಲವು ತಂಡಗಳು ಪ್ರದರ್ಶಿಸುತ್ತಿರುತ್ತವೆ. ಎರಡನೇ ಬಹುಮಾನ ತಿಪಟೂರಿನ ನಿಸರ್ಗಪ್ರೀಯರವರು ಬರೆದ ಅಗ್ನಿ ಯಾಗಿತ್ತು. ಡಾ.ಬಸವರಾಜ ಸಬರದ ರವರು ರಚಿಸಿದ ನರಬಲಿ ಮೂರನೇ ಬಹುಮಾನ ಪಡೆಯಿತು. ಸ್ಪರ್ಧೆಯ ತೀರ್ಪುಗಾರರು ಜಿ.ಕೆ.ಗೊವಿಂದರಾವ್, ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಚಿದಂಬರರಾವ್ ಜಂಬೆಯವರಂತಹ ದಿಗ್ಗಜರಾಗಿದ್ದರು.  ಜುಮ್ನಾಳ ಧೂಳ್ಯಾನ ಪ್ರಸಂಗ ನಾಟಕವನ್ನು ನಿರ್ಮಿಸಲು ಗಾಣಿಗರು ನಿರ್ಧರಿಸಿದರು. ಸುರೇಶ ಆನಗಳ್ಳಿ ನಾಟಕವನ್ನು ನಿರ್ದೇಶಿಸಿದರು. 1995ರಲ್ಲಿ  ರಂಗಭೂಮಿ ಉಡುಪಿಗೆ ಮೂವತ್ತು ವರ್ಷ ತುಂಬಿದಾಗ ಮತ್ತೆ ಸಾಮಾಜಿಕ ನಾಟಕ ರಚನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಒಟ್ಟು 45 ರಂಗಕೃತಿಗಳು ಸ್ಪರ್ಧೆಗೆ ಬಂದಿದ್ದು ಶಿವಮೊಗ್ಗದ ಗಜಾನನ ಶರ್ಮರವರ ಬೆಳ್ಳಿ ಬೆಳಕಿನ ಹಿಂದೆ ನಾಟಕಕ್ಕೆ ಮೊದಲ ಬಹುಮಾನ ದೊರೆತರೆ, ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರ ಸ್ವಯಂವರ ನಾಟಕಕ್ಕೆ ಎರಡನೇ ಬಹುಮಾನ ಬಂದಿತು. ಹೂಲಿ ಶೇಖರರವರ ಗಾಂಧಿನಗರ ನಾಟಕ ಮೆಚ್ಚುಗೆ ಬಹುಮಾನ ಗಳಿಸಿತು. ಚಂದ್ರಕಾಂತ ಕೂಸನೂರ, ಕೆ.ವಿ.ಅಕ್ಷರ, ರಾಮದಾಸ್ರಂತಹ ದಿಗ್ಗಜರು ನಾಟಕ ರಚನಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಮೊದಲ ಮೂರು ಬಹುಮಾನಗಳನ್ನು ಪಡೆದ ನಾಟಕಗಳನ್ನು ಬಿಟ್ಟು ಮೆಚ್ಚುಗೆ ಬಹುಮಾನ ಪಡೆದ ಗಾಂಧೀನಗರ ನಾಟಕವನ್ನು ನಿರ್ಮಿಸಲು ನಿರ್ಧರಿಸಿದ ಆನಂದ ಗಾಣಿಗರು ನಾಟಕ ಬರೆದ ಹೂಲಿ ಶೇಖರರವರನ್ನೇ ಉಡುಪಿಗೆ ಆಹ್ವಾನಿಸಿ ನಿರ್ದೇಶಿಸಲು ಒಪ್ಪಿಸಿದರು. ನಾಟಕವೂ ಯಶಸ್ವಿಯಾಯಿತು.

ಜೊತೆಗೆ 2010 ಆಗಸ್ಟ್ನಲ್ಲಿ ನಾಟಕ ರಚನಾ ಕಮ್ಮಟವನ್ನು ಆನಂದ ಗಾಣಿಗರ ಅನುಪಸ್ಥಿತಿಯಲ್ಲಿ ರಂಗಭೂಮಿ ಉಡುಪಿ ಆಯೋಜಿಸಿತ್ತು. ರಾಜ್ಯಾದ್ಯಂತ 60 ಜನ ಆಸಕ್ತ ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಗೋಪಾಡ್ಕರ್, ಸ್ವರೂಪ ಮುಂತಾದ ನಾಲ್ವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.  ಹೀಗೆ... ನಾಟಕ ರಚನಾ ಸ್ಪರ್ಧೆಗಳ ಮೂಲಕ ಹೊಸ ನಾಟಕಕಾರರ, ಹೊಸ ನಾಟಕಗಳ ಹುಟ್ಟಿಗೆ ಕಾರಣವಾದ ರಂಗಭೂಮಿ ಉಡುಪಿ ಆಧುನಿಕ ಕನ್ನಡ ರಂಗಭೂಮಿಗೆ ಉತ್ತಮ ನಾಟಕಗಳು ದಕ್ಕಲು ಕಾರಣೀಕರ್ತವಾಯಿತು. ಆನಂದ ಗಾಣಿಗರ ಕೆಲಸ ನಿಜಕ್ಕೂ ಸಾರ್ಥಕವಾದದ್ದು.

ರಾಜ್ಯಮಟ್ಟದ ರಂಗಸ್ಪರ್ಧೆಗಳು : ರಂಗಭೂಮಿ ಉಡುಪಿ ರಂಗತಂಡಕ್ಕೆ ಹದಿನೈದು ವರ್ಷ ತುಂಬಿದ ಸಂದರ್ಭದಲ್ಲಿ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದು ರಾಜ್ಯ ಮಟ್ಟದ ಕನ್ನಡ ನಾಟಕಗಳ ಸ್ಪರ್ಧೆ ಗಳ ಆಯೋಜನೆ. ಡಾ.ಹೆಚ್.ಶಾಂತಾರಾಮ್ ರವರು ರಂಗಸ್ಪರ್ಧೆಯ ಕನಸನ್ನು ಕಂಡರು. ಆನಂದ ಗಾಣಿಗರು ಅವರ ಕನಸನ್ನು ನನಸಾಗಿಸಿದರು. ಕೇವಲ ರಂಗಪ್ರದರ್ಶನಗಳನ್ನು ಮಾಡುತ್ತಿದ್ದರೆ ಕೇವಲ ನಮ್ಮ ರಂಗತಂಡ ಮಾತ್ರ ಮಾಡಬೇಕಾಗುತ್ತದೆ. ಉಡುಪಿಯ ಜನರಿಗೆ ನಾಟಕ ನೋಡುವ ಸೀಮಿತ ಅವಕಾಶ ದೊರೆಯುತ್ತದೆ. ಆದ್ದರಿಂದ ರಂಗಸ್ಪರ್ಧೆಗಳನ್ನು  ಏರ್ಪಡಿಸಿ ನಾಡಿನ ವಿವಿಧ ರಂಗತಂಡಗಳನ್ನು ಆಹ್ವಾನಿಸಿ ವಿಭಿನ್ನ ಮಾದರಿಯ ನಾಟಕಗಳನ್ನು ಉಡುಪಿಯ ಜನರಿಗೆ ತೋರಿಸಬೇಕು ಹಾಗೂ ಬೇರೆ ತಂಡಗಳ ನಾಟಕ ಪ್ರದರ್ಶನಕ್ಕೆ ಅವಕಾಶಗಳನ್ನು ದೊರಕಿಸಿಕೊಡಬೇಕು ಹಾಗೂ ರಂಗತಂಡಗಳಲ್ಲಿ ಪೈಪೋಟಿಯನ್ನು ಬೆಳೆಸಿ ಪ್ರೋತ್ಸಾಹಿಸಬೇಕು ಎಂದು. ರಂಗಚಟುವಟಿಕೆಗಳನ್ನು ವಿಸ್ತರಿಸುವ ಒಂದು ನಿರ್ಧಾರದಿಂದಾಗಿ ಉಡುಪಿಗೆ ಮಾತ್ರ ಸೀಮಿತವಾಗಿದ್ದ ರಂಗಭೂಮಿ ಉಡುಪಿ ರಂಗತಂಡವು ಇಡೀ ನಾಡಿಗೇ ತಮ್ಮ ರಂಗ ಚಟುವಟಿಕೆಯನ್ನು ವಿಸ್ತರಿಸಿತು. ನಾಡಿನ ಅನೇಕ ರಂಗತಂಡಗಳ ನಾಟಕ ಪ್ರದರ್ಶನಗಳಿಗೆ ವೇದಿಕೆಯೊಂದು ನಿರ್ಮಿತಿಯಾಯಿತು. ಸಮಗ್ರ ರಂಗಭೂಮಿಯ ಇತಿಹಾಸದಲ್ಲಿ ಒಂದು ಮೈಲುಗಲ್ಲನ್ನೇ ರಂಗಸ್ಪರ್ಧೆಗಳು ಸ್ಥಾಪಿಸಿದವು. ನಾಟಕ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡ ತಂಡವೊಂದು ಕನ್ನಡ ರಂಗಭೂಮಿಗೆ ತನ್ನ ಬಾಗಿಲನ್ನು ತೆರೆಯುವ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಿತು. ರಂಗವಿಸ್ತರಣೆಯ ಹಿಂದೆ ಇದ್ದದ್ದು ಆನಂದ ಗಾಣಿಗ ಎನ್ನುವ ರಂಗಶಕ್ತಿಯ ಮುಂದಾಲೋಚನೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬದಲಾಗಬೇಕು ಹಾಗೂ ನಾಡಿನಾಧ್ಯತಂತ ಹೆಸರಾಗಲು ರಂಗಚಟುವಟಿಕೆಗಳನ್ನು ವಿಸ್ತರಿಸಬೇಕು ಎನ್ನುವ ಗಾಣಿಗ ರವರ ಆಲೋಚನೆ ರಂಗಭೂಮಿ ಉಡುಪಿ ತಂಡವನ್ನು ಕರ್ನಾಟಕದ ಪ್ರಮುಖ ರಂಗತಂಡಗಳ ಪಟ್ಟಿಯಲ್ಲಿ ಸೇರಿಸಿತು
1980ರಿಂದ ರಂಗಸ್ಪರ್ಧೆಗಳು ಉಡುಪಿಯಲ್ಲಿ ಆಯೋಜನೆಗೊಳ್ಳತೊಡಗಿದವು. ಮೊಟ್ಟಮೊದಲ ರಂಗಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕಾಲಿಗುಲ ನಾಟಕ ಪ್ರಥಮ ಬಹುಮಾನ ಗಳಿಸಿತು. ಈಗೆ 1080 ರಿಂದ ಈಗಿನವರೆಗೂ ಮೂವತ್ತೈದು ವರ್ಷಗಳಿಂದ ಒಂದು ವರ್ಷವೂ ಬಿಡದೇ ರಂಗಸ್ಪರ್ಧೆಗಳು ನಿರಂತರವಾಗಿ ವೃತದಂತೆ ನಡೆದುಕೊಂಡು ಬಂದಿರುವುದು ಕರ್ನಾಟಕದ ರಂಗಸ್ಪರ್ಧೆ ಇತಿಹಾಸದಲ್ಲಿ ದಾಖಲಾರ್ಹವಾಗುವಂತಹುದು. ಕಳೆದ ಮೂರುವರೆ ದಶಕಗಳಲ್ಲಿ ನಾನೂರಕ್ಕೂ ಹೆಚ್ಚು ವೈವಿದ್ಯಮಯ ನಾಟಕಗಳು ರಂಗಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದ್ದು. ನೂರಕ್ಕೂ ಹೆಚ್ಚು ರಂಗತಂಡಗಳು ಬಹುಮಾನ ವಿಜೇತರಾಗಿದ್ದಾರೆ. ಉಡುಪಿಯ ಜನರಿಗೆ ಅಷ್ಟೊಂದು ನಾಟಕಗಳನ್ನು ಪ್ರತಿವರ್ಷ ನೋಡಿ ನಲಿಯುವ ಅವಕಾಶವನ್ನು ರಂಗಭೂಮಿ ಉಡುಪಿ ವದಗಿಸಿಕೊಟ್ಟಿದೆ.

ಪ್ರತಿ ವರ್ಷ ಪತ್ರಿಕಾ ಪ್ರಕಟಣೆ ನೋಡಿ ಅರ್ಜಿ ಹಾಕಿಕೊಂಡ ಹಲವಾರು ನಾಟಕ ತಂಡಗಳಲ್ಲಿ ಉತ್ತಮವೆನ್ನಿಸುವ ಹನ್ನೆರಡು ನಾಟಕಗಳನ್ನು ಆಯ್ಕೆ ಮಾಡಿ ರಂಗಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ. ತುಂಬಾ ಪಾರದರ್ಶಕವಾದ ರೀತಿಯಲ್ಲಿ ವಿಜೇತ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾವುದೇ ವಶೀಲಿಬಾಜಿಗಿಲ್ಲಿ ಅವಕಾಶವೇ ಇಲ್ಲ. ಶ್ರೇಷ್ಟ ನಾಟಕ, ಶ್ರೇಷ್ಟ ನಿರ್ದೇಶನ, ಶ್ರೇಷ್ಟ ನಟ/ನಟಿ ಯಿಂದ ಹಿಡಿದು ರಂಗಪರಿಕರ, ಪ್ರಸಾದನ, ಬೆಳಕು ಮುಂತಾದ ನೇಪತ್ಯದ ತಂತ್ರಜ್ಞರಿಗೂ ಬಹುಮಾನಗಳನ್ನು ಕೊಡಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ಉಡುಪಿಗೆ ಹೋಗಿ ಬರುವ ಖರ್ಚನ್ನೂ ಕೊಟ್ಟು ಊಟ ತಿಂಡಿ ವಸತಿಯನ್ನೂ ಕಲ್ಪಿಸಿ ಬಹುಮಾನ ವಿಜೇತರಿಗೆ ಉತ್ತಮ ಮೊತ್ತದ ಹಣವನ್ನು ಪ್ರಶಸ್ತಿಪತ್ರ ಪುರಸ್ಕಾರಗಳನ್ನೂ ಕೊಡಲಾಗುತ್ತದೆ. ಪ್ರಥಮ ಬಹುಮಾನ ಪಡೆದ ತಂಡಕ್ಕೆ, ಹದಿನೈದು ಸಾವಿರ ರೂಪಾಯಿ ನಗದು ಬಹುಮಾನ ಕೊಟ್ಟರೆ, ದ್ವಿತೀಯ ಬಹುಮಾನ ಹತ್ತು ಸಾವಿರ ಹಾಗೂ ತ್ರಿತೀಯ ಬಹುಮಾನ ಐದು ಸಾವಿರ ರೂಪಾಯಿಗಳಾಗಿವೆ. ಉಳಿದೆಲ್ಲಾ ಬಹುಮಾನ ವಿಜೇತರಿಗೆ ತಲಾ ಸಾವಿರ ರೂಪಾಯಿ ನಗದು ಹಣ ಕೊಡಲಾಗುತ್ತದೆ. ಎಲ್ಲಾ ಬಹುಮಾನದ ಮೊತ್ತಗಳನ್ನು ಹಲವು ದಾನಿಗಳಿಂದ ಪಡೆಯಲಾಗುತ್ತದೆ. ಜೊತೆಗೆ ಪ್ರತಿವರ್ಷ ರಂಗಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಬಹುಮಾನ ಪಡೆದ ತಂಡ ಹಾಗೂ ನಾಟಕಗಳ ಸಂಪೂರ್ಣ ವಿವರಗಳನ್ನು ಹೊಂದಿದ ಕಲಾಂಜಲಿ ಎನ್ನುವ ಸ್ಮರಣ ಸಂಚಿಕೆಯನ್ನೂ ಹೊರತಂದು ರಂಗಸ್ಪರ್ಧಾ ಚಟುವಟಿಕೆಗಳನ್ನು ಹಾಗೂ ರಂಗಭೂಮಿ ಉಡುಪಿ ತಂಡದ ವಾರ್ಷಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಗಳನ್ನು ಅಕ್ಷರ ರೂಪದಲ್ಲೂ ದಾಖಲಿಸಲಾಗುತ್ತದೆ.

ರಂಗ ತರಬೇತಿ ಕಾರ್ಯಾಗಾರಗಳು  : 1980 ನಂತರ ಆಧುನಿಕ ನಾಟಕಗಳಿಗೆ ರಂಗಭೂಮಿ ಉಡುಪಿ ತಂಡ ಸಂಪೂರ್ಣವಾಗಿ ತೆರೆದುಕೊಂಡಿದ್ದರಿಂದ ಅಂತಹ ನಾಟಕಗಳಿಗೆ ಹೊಸ ಕಲಾವಿದರು ಬೇಕಾಯಿತು. ರಂಗಸ್ಪರ್ಧೆಗಳ ನಾಟಕಗಳ ವಿಭಿನ್ನತೆಗಳನ್ನು ನೋಡುತ್ತಾ ತಾವೂ ಅಂತಹ ನಾಟಕಗಳನ್ನು ನಿರ್ಮಿಸಬೇಕೆಂದರೆ ಪ್ರತಿಭಾನ್ವಿತ ತರಬೇತಾದ ಯುವ ಕಲಾವಿದರು ಬೇಕು ಎನ್ನುವುದನ್ನು ಆನಂದ ಗಾಣಿಗರು ಅರಿತರು. ಅಂತಹ ಕಲಾವಿದರ ಕೊರತೆಯನ್ನು ನೀಗಿಕೊಳ್ಳಲು ಅಗತ್ಯವಿದ್ದಾಗಲೆಲ್ಲಾ ರಂಗ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಮೂಲಕ ನಾಟಕಗಳನ್ನೂ ನಿರ್ಮಿಸಲಾಯಿತು. ಅನುಭವಸ್ತ ರಂಗಕರ್ಮಿಗಳನ್ನು ಕರೆಯಿಸಿ ಆಸಕ್ತ ಯುವಕ ಯುವಕರಿಗೆ ಅಭಿನಯದ ತರಬೇತಿಯನ್ನು ಕೊಡುವುದನ್ನು ರಂಗಭೂಮಿ ಉಡುಪಿ ರಂಗತಂಡ ಆರಂಭಿಸಿತು. ರಂಗಶಿಬಿರದ ಮೂಲಕವೇ ಹೊಸ ನಾಟಕವನ್ನು ನಿರ್ಮಿಸಲಾಗುತ್ತಿತ್ತು. 1985 ಮೇ ತಿಂಗಳಲ್ಲಿ 22 ದಿನಗಳ ಮೊದಲ ರಂಗ ತರಬೇತಿ ಕಾರ್ಯಾಗಾರವನ್ನು ರಂಗಾಯಣದಲ್ಲಿದ್ದ ಪಿ.ಗಂಗಾಧರಸ್ವಾಮಿಯವರು ನಡೆಸಿಕೊಟ್ಟರು. 22 ಜನ ಯುವಕ ಯುವತಿಯರು ಶಿಬಿರದಲ್ಲಿ ಭಾಗವಹಿಸಿದ್ದರು. ಸಿನೆಮಾದ ಉತ್ತಮ ನಟಿ ವಿನಯಾಪ್ರಸಾದರವರು ಕಾರ್ಯಾಗಾರದಿಂದಲೇ ನಟಿಯಾಗಿ ಹೊರಬಂದಿದ್ದು. ಮೊದಲ ಕಾರ್ಯಾಗಾರದಲ್ಲಿ ನಾಲ್ಕು ಕಿರುನಾಟಕಗಳನ್ನು ನಿರ್ಮಿಸಲಾಯಿತು. 1989 ಅಕ್ಟೋಬರ್ ತಿಂಗಳಲ್ಲಿ ಸುರೇಶ ಆನಗಳ್ಳಿ ನಿರ್ದೇಶನದಲ್ಲಿ ನಡೆದ ರಂಗಶಿಬಿರದಲ್ಲಿ ಜುಮ್ನಾಳ ಧೂಳ್ಯಾನ ಪ್ರಸಂಗ ನಾಟಕ ನಿರ್ಮಿಸಲಾಯಿತು. 2004 ಮೇನಲ್ಲಿ ಶ್ರೀನಿವಾಸ ಪ್ರಭು ರಂಗಶಿಭಿರವನ್ನು ನಡೆಸಿಕೊಟ್ಟರು. ರಂಗಭೂಮಿ ಉಡುಪಿಗೆ 40 ವರ್ಷವಾದ ಸಂದರ್ಭದಲ್ಲಿ ದೆಹಲಿ ಎನ್ ಎಸ್ ಡಿ ಯಿಂದ ಮೇ 27 ರಿಂದ ದೇಖ್ ಕಹಾನಿ ದೇಖ ಎನ್ನುವ ಹೆಸರಲ್ಲಿ ನಾಲ್ಕು ಹಿಂದಿ ನಾಟಕಗಳನ್ನು ಪ್ರದರ್ಶಿಸಿ ಎನ್ಎಸ್ಡಿ ನಾಟಕಗಳು ಹೇಗಿರುತ್ತವೆ ಎಂಬುದನ್ನು ಶಿಬಿರಾರ್ಥಿಗಳಿಗೆ ಹಾಗೂ ಉಡುಪಿಯ ನಾಗರಿಕರಿಗೆ ತೋರಿಸಲಾಯಿತು.

2002 ಎಪ್ರಿಲ್ನಲ್ಲಿ ಜೀವನರಾಮ್ ಸುಳ್ಯರವರು ರಂಗಶಿಬಿರದ ಹೊಣೆಹೊತ್ತು ಭಾಸ ಮಹಾಕವಿಯ ಭಾಸಭಾರತವನ್ನು ಸಿದ್ದಪಡಿಸಿದರು. 2008 ಅಕ್ಟೋಬರ್ ತಿಂಗಳಲ್ಲಿ 35 ದಿನಗಳ ರಂಗಶಿಬಿರದ ಜವಾಬ್ದಾರಿಯನ್ನು ಹೊತ್ತ ಮಂಡ್ಯ ರಮೇಶ ಯುಗಾಂತ ಮತ್ತು ಅಗ್ನಿರಾಜ ಎನ್ನುವ ಎರಡು ನಾಟಕಗಳನ್ನು ಸಿದ್ದಪಡಿಸಿದರು. 2010 ಮಾರ್ಚನಲ್ಲಿ ಹೆಗ್ಗೋಡಿನ ಪ್ರಸನ್ನನವರು 35 ಜನ ಶಿಬಿರಾರ್ಥಿಗಳಿಗೆ ನಟನೆಯ ಪಾಠ ಹೇಳಿಕೊಟ್ಟರು.  ಹೀಗೆ ರಂಗ ತರಬೇತಿ ಶಿಬಿರಗಳನ್ನು ಕಾಲಕಾಲಕ್ಕೆ ಆಯೋಜಿಸುವ ಮೂಲಕ ಹೊಸ ಹೊಸ ಯುವ ಕಲಾವಿದರು ತಂಡಕ್ಕೆ ದೊರೆತಂತಾಯಿತು ಹಾಗೂ ಯುವ ನಟ ನಟಿಯರೊಳಗಿನ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ಟಂತೆಯೂ ಆಯಿತು. ಆಧುನಿಕ ನಾಟಕಗಳನ್ನು ನಿರ್ಮಿಸಿದಂತಾಯಿತು, ಪ್ರತಿಭಾನ್ವಿತ ರಂಗಕರ್ಮಿಗಳ ಸಹಯೋಗ ಉಡುಪಿಯ ರಂಗಕಲಾವಿದರಿಗೆ ದೊರೆಯಿತು... ಉಡುಪಿಯಲ್ಲಿ ರಂಗಚಟುವಟಿಕೆ ಮುಂದುವರೆಯಿತು.

ರಂಗಸಂವಾದಗಳು ಹಾಗೂ ವಿಚಾರ ಸಂಕಿರಣಗಳು : ರಂಗಭೂಮಿ ಉಡುಪಿ ಕೇವಲ ನಾಟಕ ಪ್ರದರ್ಶನಗಳು ಹಾಗೂ ಸ್ಪರ್ಧೆಗಳಿಗೆ ಮಾತ್ರ ಸೀಮಿತವಾಗಿರದೇ ವೈಚಾರಿಕ ಚರ್ಚೆ ಸಂವಾದಗಳಿಗೂ ಕಾಲಕಾಲಕ್ಕೆ ಮಹತ್ವ ಕೊಟ್ಟಿದ್ದೊಂದು ವಿಶೇಷ. 1986 ರಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಕುರಿತು ಜಯದೇವ ಹಟ್ಟಂಗಡಿ ಮತ್ತು ಅವರ ಪತ್ನಿ ಖ್ಯಾತ ನಟಿ ರೋಹಿಣಿ ಹಟ್ಟಂಗಡಿಯವರಿಂದ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 1989 ರಲ್ಲಿ ರಂಗಭೂಮಿ ಸಾಗಿಬಂದ ಬಗೆ- ಆಧುನಿಕ ರಂಗಭೂಮಿ ಮತ್ತು ಅದರ ಸಾಧ್ಯತೆಗಳು ವಿಷಯ ಕುರಿತ ಸಂವಾದವನ್ನು ರಂಗದಿಗ್ಗಜ ಬಿ.ವಿ.ಕಾರಂತರು ನಡೆಸಿಕೊಟ್ಟರು. 1986ರಲ್ಲಿ ಕನ್ನಡ ನಾಟಕಗಳಲ್ಲಿ ಬಂಡಾಯದ ಚಿತ್ರಣ ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಜಯಪ್ರಕಾಶ ಮಾವಿನಕುಳಿಯವರು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರ ಬಂಡಾಯ ನಾಟಕಗಳು ಕುರಿತು ಪ್ರಬಂಧ ಮಂಡಿಸಿದರೆ, ಹೊಸ್ಕರೆ ಶಿವಸ್ವಾಮಿಯವರು ಬಂಡಾಯಪೂರ್ವ ಮತ್ತು ಬಳಿಕದ ಕನ್ನಡ ನಾಟಕಗಳ ಸ್ವರೂಪ ಕುರಿತು ಪ್ರಬಂಧ ಮಂಡಿಸಿದರು. 1990ರಲ್ಲಿ ರಂಗಭೂಮಿ ಉಡುಪಿ ರಜತ ಮಹೋತ್ಸವದ ಅಂಗವಾಗಿ  ಪರ್ವತವಾಣಿಯವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಬಿ.ವಿ.ವೈಕುಂಟರಾಜುರವರು ವಿಚಾರಸಂಕಿರಣವನ್ನು ಉದ್ಘಾಟಿಸಿದ್ದು ಜಾನಪದ ತಜ್ಞ ಮುದೇನೂರು ಸಂಗಣ್ಣನವರು ಅತಿಥಿಯಾಗಿದ್ದರು. ಆಗ ಡಾ.ಡಿ.ಆರ್.ನಾಗರಾಜ ರವರು ಕನ್ನಡ ರಂಗಭೂಮಿಯ ಮೇಲೆ ವಸಾಹತುಶಾಹಿಯ ಪರಿಣಾಮ ಕುರಿತು ಪ್ರಬಂಧ ಮಂಡಿಸಿದರೆ, ಹೆಗ್ಗೋಡಿನ ಕೆ.ವಿ.ಅಕ್ಷರರವರು ಆಧುನಿಕ ಕನ್ನಡ ರಂಗಭೂಮಿ ಪರಂಪರೆ ಕುರಿತು ಪ್ರಬಂಧ ಮಂಡನೆ ಮಾಡಿದರು. .ಕೆ.ಬೊಳವಾರುರವರು ಮಕ್ಕಳ ಹವ್ಯಾಸಿ ರಂಗಭೂಮಿ ಕುರಿತು, ಕೆ.ಜಿ.ಕೃಷ್ಣಮೂರ್ತಿಯವರು ಮಕ್ಕಳ ರಂಗಭೂಮಿ ಕುರಿತು ಹಾಗೂ ಡಾ.ಬಸವರಾಜ ಮಲಶೆಟ್ಟರವರು ಕರ್ನಾಟಕ ಜಾನಪದ ರಂಗಭೂಮಿ ಕುರಿತು ವಿಷಯ ಮಂಡನೆ ಮಾಡಿದರು. ನಂತರದ ಗೋಷ್ಠಿಗಳಲ್ಲಿ ಟಿ.ಪಿ.ಅಶೋಕ, ಡಾ.ಡಿ.ಆರ್.ನಾಗರಾಜ ರಂತಹ ಸಾಹಿತ್ಯ ಲೋಕದ ದಿಗ್ಗಜರು ಪ್ರಬಂಧಗಳನ್ನು ಮಂಡಿಸಿದರು.

ಇದೇ ರೀತಿ 2011 ರಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ವಿನಯ ಸುವರ್ಣರವರು ಸಮಕಾಲೀನ ರಂಗಭೂಮಿಯ ಪ್ರಯೋಗ ಮತ್ತು ಸಾಧ್ಯತೆಗಳು ಕುರಿತು ವಿಚಾರವನ್ನು ಮಂಡಿಸಿದರು. ರಂಗಭೂಮಿ ಉಡುಪಿ ನಲವತ್ತನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಂಡ್ಯ ರಮೇಶರವರು ಗ್ರಾಮೀಣ ಹವ್ಯಾಸಿ ರಂಗಭೂಮಿ ಸಮಸ್ಯೆಗಳು ಕುರಿತು, ಡಾ.ಹೇಮಾ ಪಟ್ಟಣಶೆಟ್ಟಿರವರು ಹವ್ಯಾಸಿ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರ ಕುರಿತು, ಸುರೇಶ ಆನಗಳ್ಳಿ ರಂಗಭೂಮಿ ಮತ್ತು ಆಧುನಿಕ ಸಮೂಹ ಮಾಧ್ಯಮ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಹೀಗೆ ಕಾಲ ಕಾಲಕ್ಕೆ ಹಲವಾರು ರಂಗಭೂಮಿಗೆ ಸಂಬಂಧಿಸಿದ ವಿಚಾರಗಳ ಕುರಿತು ಸಂವಾದ ಹಾಗೂ ವಿಚಾರಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಆಧುನಿಕ ರಂಗಭೂಮಿಗೆ ರಂಗಭೂಮಿ ಉಡುಪಿ ಸ್ಪಂದಿಸುವ ಕೆಲಸವನ್ನು ಮಾಡತೊಡಗಿತು. ಜೊತೆಗೆ ತಮ್ಮ ತಂಡದ ಸದಸ್ಯರು, ಕಾರ್ಯಕರ್ತರು, ಕಲಾವಿದರು,  ತಂತ್ರಜ್ಞರು ಹಾಗೂ ಉಡುಪಿಯ ರಂಗಾಸಕ್ತರಿಗೆ ರಂಗಭೂಮಿಯ ಹಲವಾರು ವೈಚಾರಿಕ ಆಯಾಮಗಳನ್ನು ಪರಿಚಯಿಸುತ್ತಾ ಅವರನ್ನು ಆಲೋಚನೆಗೆ ಪ್ರೇರೇಪಿಸಿತು. ರಂಗಭೂಮಿಯ ಕಟ್ಟುವಿಕೆಯಲ್ಲಿ ರೀತಿಯ ಸಂವಾದಗಳು ಸಹ ಬಹು ಮುಖ್ಯ ಎನ್ನುವುದನ್ನು ಆನಂದ ಗಾಣಿಗರು ವಿಚಾರಗೋಷ್ಠಿಗಳ ಮೂಲಕ ಸಾಬೀತುಪಡಿಸಿದರು.

ಬಾಹ್ಯ ರಂಗತಂಡಗಳ ಪ್ರದರ್ಶನಗಳು : ಕೇವಲ ರಂಗಭೂಮಿ ಉಡುಪಿ ನಿರ್ಮಾಣದ ನಾಟಕಗಳು ಮತ್ತು ರಂಗಸ್ಪರ್ಧೆಗಳ ನಾಟಕಗಳು ಮಾತ್ರವಲ್ಲ ಪರಊರಿನ ರಂಗತಂಡಗಳನ್ನು ಉಡುಪಿಗೆ ಆಹ್ವಾನಿಸಿ ಉತ್ತಮವಾದ ನಾಟಕಗಳನ್ನು ಪ್ರದರ್ಶಿಸಲು ಅವಕಾಶವನ್ನು ಮಾಡಿಕೊಡಲಾಗುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾತಾಡಿದಷ್ಟು ಗೌರವ ಧನವನ್ನೂ ಕೊಟ್ಟು ಕಳುಹಿಸಲಾಗುತ್ತದೆ. ನೀನಾಸಂ ತಿರುಗಾಟ ಮತ್ತು ಮರುತಿರುಗಾಟದ ನಾಟಕಗಳನ್ನು ಕಳೆದ ಐದು ವರ್ಷಗಳಿಂದ ರಂಗಭೂಮಿ ಉಡುಪಿ ತಂಡವು ಉಡುಪಿಯ ಎಂಜಿಎಂ ಕಾಲೇಜಿನ ರಂಗಮಂದಿರದಲ್ಲಿ ಆಯೋಜಿಸುತ್ತಿದೆ. ಕೇಳಿದಷ್ಟು ಸಂಭಾವಣೆ ಕೊಟ್ಟ ರಂಗಾಯಣದ ನಾಟಕಗಳನ್ನೂ ಕರೆಸಿ ಪ್ರದರ್ಶಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ವರ್ಷಕ್ಕೆ ಮೂರ್ನಾಲ್ಕು ನಾಟಕಗಳನ್ನಾದರೂ ಹೊರಗಡೆಯಿಂದ ಕರೆಸಿ ರಂಗಭೂಮಿ ಉಡುಪಿ ತಂಡದ ಸದಸ್ಯರಿಗೆ ಹಾಗೂ ಉಡುಪಿಯ ರಂಗಾಸಕ್ತರಿಗೆ ತೋರಿಸಲಾಗುತ್ತದೆ. ಹೀಗೆ ನಿರಂತರ ನಾಟಕ ಚಟುವಟಿಕೆಗಳಿಂದಾಗಿ ಉಡುಪಿಯಲ್ಲಿ ಒಂದು ಪ್ರೇಕ್ಷಕ ವರ್ಗವೇ ಹುಟ್ಟಿಕೊಂಡಿದೆ. ಹಾಗೂ ಪ್ರೇಕ್ಷಕರಲ್ಲಿ ರಂಗಾಭಿರುಚಿಯನ್ನು ಬೆಳೆಸುವಲ್ಲಿ ರಂಗಭೂಮಿ ಉಡುಪಿ ತಂಡ ನಿರತವಾಗಿದೆ. ಹಾಗೆಯೇ ರಂಗಭೂಮಿ ಉಡುಪಿ ರಂಗತಂಡ ಪ್ರತಿ ವರ್ಷ ಕನಿಷ್ಟ ಒಂದಾದರೂ ನಾಟಕವನ್ನು ನಿರ್ಮಿಸುತ್ತದೆ. ಹಾಗೂ ನಾಟಕವನ್ನು ಉಡುಪಿ ಧರ್ಮಸ್ಥಳ ಸೇರಿದಂತೆ ಆಹ್ವಾನ ಬಂದಲ್ಲೆಲ್ಲಾ ಹೋಗಿ ಪ್ರದರ್ಶಿಸುತ್ತದೆ. ಮೂಲಕ ರಂಗಭೂಮಿ ಉಡುಪಿ ರಂಗತಂಡದ ನಾಟಕ ಪರಂಪರೆ ಬೇರೆ ಊರಿನವರಿಗೂ ಪರಿಚಯಿಸಲಾಗುತ್ತದೆ ಹಾಗೂ ರಂಗಭೂಮಿ ಉಡುಪಿ ತಂಡದ ಕಲಾವಿದ ತಂತ್ರಜ್ಞರಿಗೂ ಬೇರೆ ಊರುಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಹೆಮ್ಮೆ ಇರುತ್ತದೆ.

ನಾಟಕೋತ್ಸವಗಳು : ಪ್ರತಿವರ್ಷ ಜನವರಿ ತಿಂಗಳಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸಲಾಗುತ್ತದೆ. ಒಂದು ರಂಗಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನಾಟಕ, ಇನ್ನೊಂದು ರಂಗಭೂಮಿ ಉಡುಪಿ ತಂಡದ ನಾಟಕ ಹಾಗೂ ಮತ್ತೊಂದು ಬೇರೆ ಕಡೆಯಿಂದ ಆಹ್ಮಾನಿಸಲಾದ ನಾಟಕ. ಹೀಗೆ ಒಟ್ಟು ಮೂರು ನಾಟಕಗಳನ್ನು ಸೇರಿ ನಾಟಕೋತ್ಸವವನ್ನು ಮಾಡಲಾಗುತ್ತದೆ.  ವರ್ಷ ಆನಂದ ಗಾಣಿಗರ ಸ್ಮರಣಾರ್ಥ ಎಪ್ರಿಲ್ 25 ರಿಂದ 27 ವರೆಗೆ ಆನಂದೋತ್ಸವ ಎನ್ನುವ ಹೆಸರಿನಲ್ಲಿ ನಾಟಕೋತ್ಸವವನ್ನು ಏರ್ಪಡಿಸಿ ಮೈಸೂರಿನ ನಟನಾ ತಂಡದಿಂದ ಅಗ್ನಿಪಥ ಹಾಗೂ ಊರುಭಂಗ ನಾಟಕವನ್ನು, ಬೆಂಗಳೂರಿನ ಕಲಾಗಂಗೋತ್ರಿ ತಂಡದಿಂದ ಮೈಸೂರು ಮಲ್ಲಿಗೆ ಮತ್ತು ಪ್ರಸಂಗ ತಂಡದಿಂದ ಅನಭಿಜ್ಞ ಶಾಕುಂತಲ ನಾಟಕವನ್ನು ಪ್ರದರ್ಶಿಸಲಾಯಿತು.

ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ : ರಂಗಭೂಮಿ ಉಡುಪಿ ರಂಗತಂಡವು ಯಾವುದಾದರೂ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತು ಎಂದರೆ ಬಹುಮಾನ ಪುರಸ್ಕಾರಗಳು ಗ್ಯಾರಂಟಿ ಎಂದೇ ಲೆಕ್ಕಾಚಾರ. 1966 ರಿಂದ 2012ರವರೆಗೆ ಒಟ್ಟು 17 ರಂಗಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರತಿಯೊಂದು ಸ್ಪರ್ಧೆಯಲ್ಲೂ ಬಹುಮಾನಗಳನ್ನು ಕೊಳ್ಳೆಹೊಡಿದಿದೆ. 1966 ರಲ್ಲಿ ಕುಂದಾಪುರದ ರೂಪರಂಗ ತಂಡ ಏರ್ಪಡಿಸಿದ್ದ ರಂಗಸ್ಪರ್ಧೆಯಲ್ಲಿ ಭಾಗವಹಿಸಿ ಪುತ್ಥಳಿ ನಾಟಕವನ್ನು ಪ್ರದರ್ಶಿಸಲಾಗಿತ್ತು. ಅದಕ್ಕೆ ಶ್ರೇಷ್ಠ ನಾಟಕ, ಶ್ರೇಷ್ಠ ನಟಿ, ಉತ್ತಮ ನಟ, ಶ್ರೇಷ್ಟ ಹಾಡುಗಾರಿಕೆ ಬಹುಮಾನಗಳನ್ನು ಮುಡಿಗೇರಿಸಿಕೊಂಡಿತ್ತು. ತದನಂತರ ಮಂಗಳೂರಿನ ಕಲಾಭವನ ಏರ್ಪಡಿಸಿದ ರಂಗಸ್ಪರ್ಧೆಯಲ್ಲಿ ಏಳು ವರ್ಷಗಳ ಕಾಲ ಭಾಗವಹಿಸಿ ಪ್ರತಿ ಸಾರಿಯೂ ನಾಟಕದ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಪಡೆಯಲಾಗಿದೆ. ಜೋಗ್ ಫಾಲ್ಸ್, ಹಳೆಯಂಗಡಿ, ಕೋಟೇಶ್ವರ, ಅಜ್ಜಂಪುರ, ಬೈಂದೂರು, ಉಡುಪಿ... ಮುಂತಾದ ಊರುಗಳಲ್ಲಿ ನಡೆದ ರಂಗಸ್ಪರ್ಧೆಗಳಲ್ಲಿ ರಂಗಭೂಮಿ ಉಡುಪಿ ತಂಡದ ನಾಟಕಗಳು ಬಹುಮಾನಗಳ ಮೇಲೆ ಬಹುಮಾನಗಳನ್ನು ಗಳಿಸಿವೆ. ಒಂದೊಂದು ನಾಟಕವೂ ಐದರಿಂದ ಹತ್ತು ಬಹುಮಾನಗಳನ್ನು ಪಡೆದಿದ್ದು ರಂಗಭೂಮಿ ಉಡುಪಿ ರಂಗತಂಡಕ್ಕೆ ಹೆಮ್ಮೆಯ ವಿಷಯ. ಕಾಲಕ್ಕೆ ತಕ್ಕಹಾಗೆ ವೈಚಾರಿಕವಾಗಿ, ಕಲಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಬದಲಾಗುತ್ತಾ ಬಂದಿರುವುದು ಹಾಗೂ ರಂಗ ಕೈಂಕರ್ಯವನ್ನು ಬದ್ದತೆಯಿಂದ ಮಾಡುವುದು ರಂಗಭೂಮಿ ಉಡುಪಿ ಗೆ ಇಷ್ಟೊಂದು ಬಹುಮಾನ ಹಾಗೂ ಹೆಸರು ಬರಲು ಸಾಧ್ಯವಾಗಿದೆ. ಆನಂದ ಗಾಣಿಗರಂತ ರಂಗನಿಷ್ಠಾವಂತನ ದೂರದರ್ಶಿತ್ವ ಹಾಗೂ ಬದಲಾವಣೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಗುಣಗಳು ರಂಗಭೂಮಿ ಉಡುಪಿ ಯಶಸ್ಸಿಗೆ ಮೂಲಭೂತ ಕಾರಣವಾಗಿದೆ.

ಕಲಾತ್ಮಕ ಚಲನಚಿತ್ರ ಪ್ರದರ್ಶನ : ರಂಗಚಟುವಟಿಕೆಗಳ ಜೊತೆಗೆ ಉತ್ತಮ ಕಲಾತ್ಮಕ ಚಲನಚಿತ್ರಗಳನ್ನು ಉಡುಪಿಯ ಪ್ರೇಕ್ಷಕರಿಗೆ ಉಚಿತವಾಗಿ ತೋರಿಸುವ ಕಾರ್ಯಕ್ರಮವನ್ನು ಸಹ 2011 ರಿಂದ ಆರಂಭಿಸಿದೆ. ಹಿಂದಿಯ ದೂರ್, ಬೆಂಗಾಳಿಯ ಅಪರಾಜಿತೋ, ಕನ್ನಡದ ಮಲಯ ಮಾರುತ ಮತ್ತು ಬಿಂಬ, ವಿದೇಶದ ಸೈಕಲ್ ಥೀವ್ಸ್, ಕಲರ್ ಆಫ್ ಪ್ಯಾರಡೈಸ್.... ಮುಂತಾದ ಅಪರೂಪದ ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಇದೂ ಸಹ ಸಕಾರಾತ್ಮಕ ಸಾಂಸ್ಕೃತಿಕ ಬೆಳವಣಿಗೆಯೇ ಆಗಿದೆ. ಹೀಗೆ ಕೇವಲ ಸಿನೆಮಾಗಳನ್ನು ತೋರಿಸುವ ಬದಲಾಗಿ ಸಿನೆಮಾ ತೋರಿಸಿ ಅದರ ಕುರಿತು ಚರ್ಚೆ ಸಂವಾದ ಗಳನ್ನು ಏರ್ಪಡಿಸಿದರೆ ಇನ್ನೂ ಉತ್ತಮವೆನಿಸುತ್ತದೆ. ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ಏರ್ಪಡಿಸಿದರಂತೂ ಪ್ರಜ್ಞಾವಂತ ಸದಭಿರುಚಿಯ ಪ್ರೇಕ್ಷಕರನ್ನು ಹುಟ್ಟುಹಾಕಿದಂತಾಗುತ್ತದೆ. ನಿಟ್ಟಿನಲ್ಲಿ ರಂಗಭೂಮಿ ಉಡುಪಿ ರಂಗಗೆಳೆಯರು ಆಲೋಚಿಸುವುದುತ್ತಮ.


ಸಾಧಕರಿಗೆ ರಂಗಸನ್ಮಾನ ಮತ್ತು ಪ್ರಶಸ್ತಿ ಪುರಸ್ಕಾರ: ರಂಗಭೂಮಿ ಉಡುಪಿ ರಂಗತಂಡದ ರಂಗ ಚಟುವಟಿಕೆಯ ಭಾಗವಾಗಿ ಸಾಧಕರಿಗೆ ರಂಗಸನ್ಮಾನ ಕಾರ್ಯಕ್ರಮ ಕಳೆದ ಐದು ದಶಕಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. 1967 ರಿಂದ ಶುರುವಾದ ಆತ್ಮೀಯ ಸನ್ಮಾನ ಕಾರ್ಯಕ್ರಮದಲ್ಲಿ ಇಲ್ಲಿವರೆಗೂ ನಾಟಕ, ಸಂಗೀತ, ಯಕ್ಷಗಾನ, ಸಿನೆಮಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 52 ಜನರನ್ನು ಕರೆದು ಸನ್ಮಾನಿಸಿ ಗೌರವಿಸಲಾಗಿದೆ. ಇದರಲ್ಲಿ ವೃತ್ತಿ ರಂಗದ ಯು.ಕೆ.ವ್ಯಾಸರಾವ್, ಸಿನೆಮಾ ರಂಗದ ಟಿ.ಎನ್.ಬಾಲಕೃಷ್ಣ, ವಿನಯಾಪ್ರಸಾದ್ ಮತ್ತು ಶ್ರೀನಾಥ, ವೃತ್ತಿ ಕಂಪನಿಯ ಮಾಸ್ಟರ್ ಹಿರಣ್ಣಯ್ಯ, ಹರಿಕಥೆ ವಿದ್ವಾಂಸ ಗುರುರಾಜುರು ನಾಯ್ಡು, ಆಧುನಿಕ ರಂಗಭೂಮಿಯ ಬಿ.ವಿ.ಕಾರಂತ, ಶ್ರೀನಿವಾಸ ಪ್ರಭು, ಸದಾನಂದ ಸುವರ್ಣ, ಚಿದಂಬರರಾವ್ ಜಂಬೆ, ವೈದೇಹಿ.... ಮುಂತಾದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದ ಗಣ್ಯರಿದ್ದಾರೆ. ಸಾಧಕರನ್ನು ಸನ್ಮಾನಿಸುವ ಜೊತೆಗೆ ಅವರಿಗೆ ಪ್ರಶಸ್ತಿಗಳನ್ನೂ ಹಾಗೂ ಬಿರುದುಗಳನ್ನೂ ಕೊಡುವ ವಿಶೇಷತೆ ರಂಗತಂಡದ್ದಾಗಿದೆ. ಉದಾಹರಣೆಗೆ ರಂಗಕಲಾ ಶೇಖರ, ರಂಗಕಲಾ ಪ್ರವೀಣ, ರಂಗ ರತ್ನಾಕರ, ಅಭಿನಯ ಚತುರೆ, ರಂಗಭೂಷಣ, ರಂಗ ವಿಶಾರದ, ರಂಗ ವಿಭೂಷಣ... ಹೀಗೆ ಹಲವಾರು ನಾಮಾಂಕಿತಗಳಲ್ಲಿ ಸಾಧಕರಿಗೆ ಬಿರುದಾವಳಿಗಳನ್ನು ಕೊಟ್ಟು ಗರಿಷ್ಟ ಗೌರವವನ್ನು ಸಲ್ಲಿಸುವುದು ಆನಂದ ಗಾಣಿಗರು ಮೊದಲಿನಿಂದಲೂ ಪರಿಪಾಲಿಸಿಕೊಂಡು ಬಂದ ರಂಗಪರಂಪರೆಯಾಗಿದೆ. ನಾಟಕಗಳ ನಿರ್ಮಾಣದ ಮೂಲಕ ರಂಗಸಾಧನೆಯನ್ನು ಮಾಡುವುದರ ಜೊತೆಗೆ, ನಾಟಕದ ಕಲಾವಿದರು, ನಾಟಕಕಾರರನ್ನು ಪ್ರೋತ್ಸಾಹಿಸುವ ಜೊತೆಗೆ ಸಾಧಕರನ್ನು ಕರೆದು ಗೌರವಿಸುವಂತಹ ಸ್ತುತ್ಯಾರ್ಹ ಕೆಲಸವನ್ನೂ ರಂಗಭೂಮಿ ಉಡುಪಿ ಕಳೆದ ಐದು ದಶಕಗಳಿಂದ ಮಾಡುತ್ತಲೇ ಬಂದಿದೆ.

ಮಕ್ಕಳ ರಂಗಶಿಬಿರಗಳು : ಆನಂದ ಗಾಣಿಗರು ಕಾಲವಶರಾಗುವ ಸರಿಯಾಗಿ ಒಂದುವರ್ಷ ಮುಂದೆ ರಂಗಭೂಮಿ ಉಡುಪಿ ಕೊರತೆಯೊಂದನ್ನು ನಿವಾರಿಸಿದರು. ಮಕ್ಕಳ ರಂಗ ಶಿಬಿರವನ್ನು ಆಯೋಜಿಸಲು ಒಪ್ಪಿಗೆ ಕೊಟ್ಟರು. ಇದರ ಹಿಂದೆ ಮಂಡ್ಯ ರಮೇಶರವರ ಸಲಹೆ ಹಾಗೂ ಮಗ ಪ್ರದೀಪ್ ಚಂದ್ರರ ಒತ್ತಾಸೆ ಕಾರಣವಾಗಿತ್ತು. 2008 ರಲ್ಲಿ ಮಂಡ್ಯ ರಮೇಶರವರು ರಂಗಭೂಮಿ ಉಡುಪಿ ತಂಡಕ್ಕೆ ರಂಗ ತರಬೇತಿ ಕಾರ್ಯಾಗಾರಕ್ಕೆ ನಿರ್ದೇಶಕರಾಗಿ ಎರಡು ಉತ್ತಮ ನಾಟಕಗಳನ್ನು ನಿರ್ದೇಶಿಸಿದ್ದರು. ಹಾಗೂ ಮೈಸೂರಿನಲ್ಲಿ ಪ್ರತಿ ವರ್ಷ ಬೇಸಿಗೆ ರಜೆಗಳಲ್ಲಿ ತಮ್ಮ ನಟನಾ ರಂಗತಂಡದಿಂದ ರಜಾ ಮಜಾ ಎನ್ನುವ ಮಕ್ಕಳ ರಂಗ ಕಾರ್ಯಾಗಾರವನ್ನು ಆಯೋಜಿಸುತ್ತಲೇ ಬಂದಿದ್ದಾರೆ. ಮಂಡ್ಯ ರಮೇಶರವರ ಮಕ್ಕಳ ಶಿಬಿರದಿಂದ ಸ್ಪೂರ್ತಿ ಪಡೆದ ಪ್ರದೀಪ ಚಂದ್ರರವರು ತಾವೂ ಸಹ ಉಡುಪಿಯಲ್ಲಿ ರಜಾ ಮಜಾ ಶುರುಮಾಡಬೇಕು ಎಂದು ನಿರ್ಧರಿಸಿದರು. 2009 ಎಪ್ರಿಲ್ 15 ರಿಂದ ಒಂದು ತಿಂಗಳ ಕಾಲ ಉಡುಪಿಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ಮಕ್ಕಳ ರಂಗಶಿಬಿರ ಆರಂಭವಾಯಿತು. ಮಂಡ್ಯ ರಮೇಶರವರ ಮಾರ್ಗದರ್ಶನ ಹಾಗೂ ನಟರಾಜ ತಿಪಟೂರರ ನಿರ್ದೇಶನದಲ್ಲಿ 7 ರಿಂದ 15 ವರ್ಷದೊಳಗಿನ 210 ಮಕ್ಕಳು ಭಾಗವಹಿಸಿದ್ದರು. ಶಿಬಿರದ ಕೊನೆಗೆ ಗುರುರಾಜ ಮಾರ್ಪಳ್ಳಿಯವರ ನಿರ್ದೇಶನದಲ್ಲಿ ಬಿ.ವಿ.ಕಾರಂತರ ಪ್ರಸಿದ್ದ ಪಂಜರಶಾಲೆ ನಾಟಕವನ್ನು ಪ್ರದರ್ಶಿಸಲಾಯಿತು. ಇದರ ಯಶಸ್ಸಿನಿಂದ ಉತ್ತೇಜಿತರಾದ ರಂಗಭೂಮಿ ಉಡುಪಿ ಎಲ್ಲಾ ಬಳಗದವರು ಈಗ ಪ್ರತಿ ವರ್ಷ ಬೇಸಿಗೆಯಲ್ಲಿ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ದಾಖಲೆ ಸಂಖ್ಯೆಯ ಮಕ್ಕಳು ಭಾಗವಹಿಸುತ್ತಿದ್ದಾರೆ. ಮಕ್ಕಳಾಗಿರುವಾಗಲೇ ರಂಗಭೂಮಿಯ ವ್ಯಾಕರಣವನ್ನು ಕಲಿಸುವ ಮೂಲಕ ರಂಗಾಸಕ್ತಿಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸ ನಿಜಕ್ಕೂ ರಂಗಬೆಳವಣಿಗೆಯಲ್ಲಿ ಅಗತ್ಯವಾಗಿರುವಂತಹುದು. ಮಕ್ಕಳ ಮೂಲಕ ಅವರ ಪೋಷಕರು ಬಂದು ತಮ್ಮ ಮಕ್ಕಳಾಡುವ ನಾಟಕವನ್ನು ನೋಡಿ ರಂಗಾಸಕ್ತಿಯನ್ನು ಬೆಳೆಸಿಕೊಂಡರೆ ನಾಟಕಗಳಿಗೆ ಪ್ರೇಕ್ಷಕರ ಕೊರತೆಯನ್ನೂ ನೀಗಿಸಿಕೊಳ್ಳಬಹುದಾದ ಸಾಧ್ಯತೆಗಳು ಹೇರಳವಾಗಿವೆ. ನಿಟ್ಟಿನಲ್ಲಿ ರಂಗಭೂಮಿ ಉಡುಪಿ ಇತ್ತೀಚಿನ ವರ್ಷಗಳ ಬೆಳವಣಿಗೆ ತುಂಬಾ ಸಕಾರಾತ್ಮಕವಗಿದೆ.

ಆರ್ಥಿಕ ಶಿಸ್ತು ; ರಂಗಭೂಮಿಯ ತಾಕತ್ತು : ಇಷ್ಟಕ್ಕೂ ಒಂದು ರಂಗತಂಡ ಉಡುಪಿಯಂತಹ ಪಟ್ಟಣದಲ್ಲಿ ಕಳೆದ 49 ವರ್ಷಗಳಿಂದ ನಿರಂತರವಾಗಿ ಮುನ್ನಡೆಯುತ್ತಿರುವ ಹಿಂದಿರುವ ರಹಸ್ಯವಾದರೂ ಏನು? ಅದು ಪಾರದರ್ಶಕತೆ. ಎಲ್ಲಿ ಲೆಕ್ಕಪತ್ರಗಳಲ್ಲಿ ಗೋಲ್ಮಾಲ್ಗಳಿರುತ್ತವೋ, ಎಲ್ಲಿ ರಂಗತಂಡವೊಂದರ ರೂವಾರಿಗಳಲ್ಲಿ ವ್ಯಯಕ್ತಿಕ ಸ್ವಾರ್ಥ ತುಂಬಿ ತುಳುಕುತ್ತದೆಯೋ ಅಂತಹ ರಂಗತಂಡಗಳು ಹೆಚ್ಚು ದಿನ ಬಾಳಲಾರವು. ಆದರೆ ಯಾವಾಗ ಆನಂದ ಗಾಣಿಗರು ರಂಗಶಿಸ್ತಿನ ಜೊತೆಗೆ ಆರ್ಥಿಕ ಶಿಸ್ತಿನ ಬಗ್ಗೆ ಕಾಳಜಿವಹಿಸಿದರೋ, ಲೆಕ್ಕಪತ್ರಗಳ ವಿಚಾರಗಳಲ್ಲಿ ಪಾರದರ್ಶಕತೆಯನ್ನು ರೂಡಿಸಿಕೊಂಡರೋ ಆಗ ಬೇರೆಯವರಿಗೆ ಪ್ರಶ್ನಿಸಲು ಅವಕಾಶವೇ ಸಿಗದೇ ರಂಗತಂಡ ಯಾವುದೇ ಗುರುತರ ಸಮಸ್ಯೆಗಳಿಲ್ಲದೇ ಮುಂದುವರೆಯಿತು. ಆನಂದ ಗಾಣಿಗರು ನಟರಾಗಿ, ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ, ಅಂಕಣ ಬರಹಗಾರರಾಗಿ ಕಾರ್ಯನಿರ್ವಹಿಸಿ ರಂಗಭೂಮಿ ಉಡುಪಿ ರಂಗತಂಡವನ್ನು ಮುನ್ನಡೆಸಿದ್ದರೋ ಅದಕ್ಕಿಂತ ಹೆಚ್ಚಾಗಿ ಅವರೊಬ್ಬ ರಂಗ ಸಂಘಟಕರಾಗಿ ಯಶಸ್ವಿಯಾದರು. ತುಂಬಾ ಹಠವಾದಿ, ನಿಷ್ಟುರವಾದಿ ಎಂಬೆಲ್ಲಾ ವಿಶೇಷಣಗಳಿಂದ ಗಾಣಿಗರನ್ನು ಆರೋಪಿಸುವವರಿದ್ದಾರೆ. ಆದರೆ ಒಬ್ಬ ರಂಗಸಂಘಟಕನಿಗೆ ಗುಣಗಳು ಅನಿವಾರ್ಯವಾಗಿವೆ. ಮನೆಯ ಹಿರಿಯ ನಿಷ್ಟುರವಾದಿಯಾಗಿರದಿದ್ದರೆ ಮನೆಯೊಂದು ಮೂರು ಬಾಗಿಲು ಆಗಿ ಒಡೆದು ಹೋಗುತ್ತದೆ. ಅಂತಹುದಕ್ಕೆ ಅವಕಾಶವಿಲ್ಲದಂತೆ ರಂಗತಂಡವನ್ನು ಕಟ್ಟಿದವರು ಗಾಣಿಗರು. ಅವರ ರಂಗನಿಷ್ಟೆ ಎಷ್ಟಿತ್ತೆಂದರೆ ಎಲ್ಐಸಿ ಯಲ್ಲಿ ಕೆಲಸಮಾಡಬೇಕಾದಾಗ ಪ್ರಮೋಶನ್ ಕೊಟ್ಟು ಬೇರೆ ಕಡೆ ವರ್ಗಮಾಡಲಾಗುತ್ತದೆ. ಆದರೆ ಎಲ್ಲಿ ಉಡುಪಿಯಲ್ಲಿ ರಂಗಕ್ರಿಯೆಗಳು ಕುಂಟಿತವಾಗುತ್ತವೆಯೋ ಎಂದು ಆತಂಕದಿಂದ ಪ್ರಮೋಶನ್ನೇ ಬೇಡಾ ಉಡುಪಿಯಲ್ಲೇ ಇರುತ್ತೇನೆ ಎಂದು ಹಠ ಹಿಡಿದು ಉಡುಪಿಯಲ್ಲೇ ಉಳಿದು ರಂಗಭೂಮಿಯನ್ನು ಕಟು ಶಿಸ್ತಿನಿಂದ ಕಟ್ಟಿಬೆಳೆಸಿದವರು ಆನಂದ ಗಾಣಿಗರು.

ಪ್ರತಿ ವರ್ಷ ಚಾರ್ಟರ್ಡ ಅಕೌಂಟೆಂಟ್ರವರಿಂದ ವಸ್ತುನಿಷ್ಠವಾಗಿ ರಂಗತಂಡದ ಆದಾಯ ಖರ್ಚುಗಳ ಆಯವ್ಯಯದ ವರದಿಯನ್ನು ತಯಾರಿಸಿ ಪ್ರಿಂಟ್ ಮಾಡಿ ರಂಗಭೂಮಿ ಉಡುಪಿ ತಂಡದ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ, ಮಹಾಪೋಷಕರಿಗೆ, ಹಿರಿಯ ರಂಗಕರ್ಮಿಗಳಿಗೆ.... ಅಷ್ಟೇ ಅಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ, ನಾಟಕ ಅಕಾಡೆಮಿಗೆ, ಉಡುಪಿಯ ಜಿಲ್ಲಾಧಿಕಾರಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರರ್ಥ ಸರಕಾರಿ ಇಲಾಖೆಗಳಿಂದ ಹಣ ಹರಿದು ಬರುತ್ತದೆ ಎಂದಲ್ಲ. ಬಹುಷಃ ಗಾಣಿಗರವರು ಇರುವಷ್ಟೂ ವರ್ಷ ಸರಕಾರಿ ಇಲಾಖೆಯಿಂದ ಬಂದ ಹಣ ಅಷ್ಟಕ್ಕಷ್ಟೇ. ರಂಗಚಟುವಟಿಕೆಗಳಿಗೆ ದಾನಿಗಳಿಂದ ಹಣ ಪಡೆಯಲಾಗುತ್ತದೆ. ಉಡುಪಿಯ ಅಂಗಡಿಗಳಿಗೆ ಹೋಗಿ ನಾಗರೀಕರಿಂದ ಚಂದಾ ಕೇಳಿ ಹಣ ಸಂಗ್ರಹಿಸಲಾಗುತ್ತದೆ. ತಂಡದ ಸದಸ್ಯರು ಕೊಟ್ಟ ಹಣವನ್ನೂ ಸಂಗ್ರಹಿಸಲಾಗುತ್ತದೆ. ಪ್ರತಿ ವರ್ಷ ಮುದ್ರಿಸುವ ಸ್ಮರಣ ಸಂಚಿಕೆಯ ಜಾಹೀರಾತುಗಳಿಂದ ಒಂದಷ್ಟು ಹಣ ಕೂಡಿಡಲಾಗುತ್ತದೆ. ಹೀಗೆ ಬಂದ ಹಣಕ್ಕೆ ರಸೀದಿಯನ್ನು ಕೊಟ್ಟು ಲೆಡ್ಜರ್ಗಳಲ್ಲಿ ಲೆಕ್ಕವಿಟ್ಟು ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಹಾಗೂ ಉಳಿದ ಹಣವನ್ನು ಬ್ಯಾಂಕನಲ್ಲಿ ಡಿಪಾಜಿಟ್ ಇಟ್ಟು ಅದರಿಂದ ಬರುವ ಬಡ್ಡಿ ಹಣವನ್ನು ಮತ್ತೆ ರಂಗಕಾರ್ಯಗಳಿಗೆ ಬಳಸಲಾಗುತ್ತದೆ. ರಂಗಭೂಮಿ ಉಡುಪಿ ತಂಡ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ಆಡಿಟ್ ಮಾಡಿಸಲಾಗಿದೆ. ರೀತಿಯಲ್ಲಿ ಖಡ್ಡಾಯ ಆರ್ಥಿಕ ಪಾರದರ್ಶಿಕೆಯನ್ನು ರೂಡಿಸಿಕೊಂಡಿದ್ದರಿಂದಲೇ ರಂಗಭೂಮಿ ಉಡುಪಿ ನಿರಂತರವಾಗಿ ರಂಗಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ ಮತ್ತು ಮುಂದುವರೆದಿದೆ. ಎಲ್ಲಿವರೆಗೂ ಪ್ರಾಮಾಣಿಕತೆ ಮತ್ತು ರಂಗಬದ್ಧತೆ ಇರುತ್ತದೋ ಅಲ್ಲಿವರೆಗೂ ರಂಗ ತಂಡ ಆಬಾಧಿತವಾಗಿ ಮುಂದುವರೆಯುತ್ತದೆಂಬುದು ನಿಸ್ಸಂದೇಹ.

ಜನಾಶ್ರಿತ ರಂಗಭೂಮಿಯನ್ನು ಕಟ್ಟಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಸರಕಾರಿ ಅನುದಾನಗಳಿಂದ ರಾಜಾಶ್ರಿತ ರಂಗತಂಡ ಕಟ್ಟುವುದು ಹಾಗೂ ಇಲಾಖೆಗಳ ಹಣಕಾಸನ್ನೇ ನಂಬಿ ಕಾರ್ಯಕ್ರಮಗಳನ್ನು ರೂಪಿಸುವುದು ನಿಜಕ್ಕೂ ಅಪಾಯಕಾರಿ. ಇಲಾಖೆಯ ಹಣ ಬಂದರೆ ಸರಿ ಇಲ್ಲವಾದರೆ ಜನರಿಂದಲೇ ದೇಣಿಗೆ ಪಡೆದು ನಾಟಕ ಕಟ್ಟುವುದು ರಂಗಭೂಮಿಗೆ ಆರೋಗ್ಯಕಾರಿ ಬೆಳವಣಿಗೆಯಾಗಿದೆ.  ರಂಗಭೂಮಿ ಉಡುಪಿ ರಂಗತಂಡ ಜನರ ಸಹಕಾರದಿಂದಲೇ ಜನರಿಗಾಗಿ ರಂಗಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವುದು ಸ್ವಾಗತಾರ್ಹ. ಕಳೆದ ನಾಲ್ಕಾರು ವರ್ಷಗಳಿಂದ ಕನ್ನಡ ಸಂಸ್ಕೃತಿ ಇಲಾಖೆ ವರ್ಷಕ್ಕೆ ನಾಟಕವೊಂದನ್ನು ಸ್ಪಾನ್ಸರ್ ಮಾಡುತ್ತಿದ್ದು ಇಪ್ಪತ್ತು ಸಾವಿರ ಹಣ ಕೊಡುತ್ತಿದೆಯಂತೆ. ಇದು ಆನೆಗೆ ಅರೆಕಾಸಿನ ಮಜ್ಜಿಗೆ ಖರ್ಚು ಮಾಡಿದಂತಾಗಿದೆ. ಒಂದಿಷ್ಟು ವ್ಯವಹಾರ ಬಲ್ಲ ಈಗಿನ ತಲೆಮಾರಿಯ ಪ್ರದೀಪ್ ಚಂದ್ರರಂತವರು ಇಲಾಖೆಯ ಅಧಿಕಾರಿಗಳಿಗೆ ದುಂಬಾಲು ಬಿದ್ದು ಕಳೆದ ವರ್ಷ ಕ್ರಿಯಾಯೋಜನೆ ಅನುದಾನದಿಂದ ಒಂದು ಲಕ್ಷ ಹಣ ಸರಕಾರಿ ಬಂದಿದೆ. ವರ್ಷ ಅನುದಾನವನ್ನು ಮೂರು ಲಕ್ಷಕ್ಕೆ ಹೆಚ್ಚಿಸಲಾಗಿದೆಯಂತೆ. ಆದರೆ ಇಲ್ಲಿವರೆಗೂ ಒಂದು ರೂಪಾಯಿಕೂಡಾ ಬಂದಿಲ್ಲ. ಆದರೆ. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿಗಳಾದ ವಾಸುದೇವ ರಾವ್ ರವರು 800 ಅಡಿ ಜಾಗವನ್ನು ಉಚಿತವಾಗಿ ಕೊಟ್ಟಿದ್ದು ಅದರಲ್ಲಿ ಒಂದು ಕಛೇರಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ದವಾಗಿದೆ. ಸದ್ಯ ಇದಕ್ಕಾದರೂ ಸಂಸ್ಕೃತಿ ಇಲಾಖೆ ಹತ್ತು ಲಕ್ಷ ಹಣ ಬಿಡುಗಡೆ ಮಾಡಿದ್ದು ಸಂತಸಕರ ವಿಚಾರ. ಸರಕಾರಿ ಕಛೇರಿಗಳಿಗೆ ಓಡಾಡುವುದನ್ನು ಹಾಗೂ ಅಧಿಕಾರಿಗಳ ಮುಂದೆ ಬೇಡಿಕೊಂಡು ಹಣ ತರುವುದನ್ನು ಆನಂದ ಗಾಣಿಗರು ಮಾಡುತ್ತಿರಲಿಲ್ಲ. ಒಂದು ರೀತಿಯಲ್ಲಿ ಮಹಾ ಸ್ವಾಭಿಮಾನಿಯಾಗಿದ್ದರವರು. ಹೀಗಾಗಿ ಜನಾಶ್ರಿತ ರಂಗಭೂಮಿಯನ್ನು ಕಟ್ಟಿದರು. ಏನೇ ಆಗಲಿ ಹಣ ಎಲ್ಲಿಂದಲೇ ಬರಲಿ ಎಲ್ಲಕ್ಕೂ ಸರಿಯಾಗಿ ಲೆಕ್ಕವನ್ನಿಟ್ಟು ರಂಗಕೆಲಸಗಳಿಗೆ ಬಳಸಿದರೆ ರಂಗಭೂಮಿ ಉಡುಪಿ ರಂಗತಂಡವು ಯಾವುದೇ ಅಡೆತಡೆ ಭಿನ್ನಾಭಿಪ್ರಾಯಗಳಿಲ್ಲದೇ ಇನ್ನೂ ಶತಮಾನಗಳಷ್ಟು ಕಾಲ ಮುಂದುವರೆಯಬಹುದಾಗಿದೆ. ಇದು ಆನಂದ ಗಾಣಿಗರವರ ಆಶಯವೂ ಆಗಿದೆ. ಅವರ ಸ್ವಾರ್ಥರಹಿತ ಶಿಸ್ತುಬದ್ದ ಜನಾಶ್ರಿತ ರಂಗಪರಿಕಲ್ಪನೆ ಈಗಿನ ಪೀಳಿಗೆಯ ಯುವಕರಿಗೆ ಮಾದರಿಯಾಗಬೇಕಿದೆ.

ಆನಂದ ಗಾಣಿಗ ನೇಪತ್ಯಕ್ಕೆ : 2010 ಎಪ್ರಿಲ್ 22ರಂದು ರಂಗಭೂಮಿ ಉಡುಪಿ ಎರಡನೇ ವರ್ಷದ ಮಕ್ಕಳ ಶಿಬಿರ ಆರಂಭವಾಗಿ ಕೇವಲ ಒಂದೇ ದಿನವಾಗಿತ್ತು.  ಮಾರನೆಯ ದಿನ ಎಪ್ರಿಲ್ 23 ರಂದು ರಂಗಭೂಮಿ ಉಡುಪಿ ರಂಗತಂಡದ ರೂವಾರಿ ಆನಂದ ಗಾಣಿಗರು ತಮ್ಮ ಬದುಕಿನ ರಂಗಪರದೆಯನ್ನು ಎಳೆದುಕೊಂಡು ನೇಪತ್ಯಕ್ಕೆ ಖಾಯಂಆಗಿ ಸೇರಿಹೋದರು. ತಾವು ಹುಟ್ಟು ಹಾಕಿದ ರಂಗಭೂಮಿ ಉಡುಪಿ ಯನ್ನು ತಮ್ಮ ಮಗ ಪ್ರದೀಪ್ ಮುಂದುವರೆಸಿಕೊಂಡು ಹೋಗುತ್ತಾನೆ, ನಾಟಕವನ್ನು ನಿರಂತರ ಮಾಡಲು ಅತ್ಯುತ್ತಮ ಕಲಾವಿದರು ಇದ್ದಾರೆ, ರಂಗಚಟುವಟಿಕೆಗಳನ್ನು ಪೋಷಿಸಲು ಉಡುಪಿಯಾದ್ಯಂತ ಮಹಾಪೋಷಕರು ಇದ್ದಾರೆ, ಮತ್ತು ಈಗ ಮುಂದಿನ ಭವಿಷ್ಯದ ಕಲಾವಿದರು, ಸಂಘಟಕರು ಮಕ್ಕಳ ಶಿಬಿರದಲ್ಲಿ ತಯಾರಾಗುತ್ತಿದ್ದಾರೆ.... ನನ್ನ ಕೆಲಸ ಇಲ್ಲಿಗೆ ಮುಗಿಯಿತು.. ಎಂದು ಕೊಂಡಂತೆ ಆನಂದ ಗಾಣಿಗರು ಮಕ್ಕಳ ಶಿಬಿರ ನಡೆಯುತ್ತಿರವಾಗಲೇ ಕಣ್ಮುಚ್ಚಿದರು. ಹೊಸ ತಲೆಮಾರಿಗೆ ತಮ್ಮ ರಂಗ ಜವಾಬ್ದಾರಿಗಳನ್ನು ಹೊರೆಸಿ ಮರಳಿ ಬಾರದ ಲೋಕಕ್ಕೆ ಹೊರಟೇ ಬಿಟ್ಟರು. ಎಪ್ಪತ್ತುನಾಲ್ಕು ವರ್ಷದ ಸಾರ್ಥಕ ಬದುಕನ್ನು ಬದುಕಿ ರಂಗದ್ದತೆಯನ್ನು ಮೆರೆದು ಇತರರಿಗೆ ಮಾದರಿಯಾದರು.

ಪ್ರದೀಪ ಚಂದ್ರ ಗಾಣಿಗ
ರಂಗಬದ್ದತೆ ಹೇಗಿದೆ ನೋಡಿ. ಅತ್ತ ಗಾಣಿಗರವರು ಕಾಲವಶರಾದರೂ ಇತ್ತ ಮಕ್ಕಳ ರಂಗಶಿಬಿರ ಮುಂದುವರೆಯಿತು. ರಂಗಭೂಮಿ ಉಡುಪಿ ಗೆ ಭದ್ರ ಬುನಾದಿಯನ್ನು ಹಾಕಿದ ಅದರ ರೂವಾರಿ ಇಲ್ಲವಾದರೂ ರಂಗಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ತೀವ್ರತೆಯನ್ನು ಪಡೆಯುತ್ತಾ ಸಾಗಿದವು. ಮೊದಲ ಬಾರಿಗೆ ರಂಗಭೂಮಿ ಉಡುಪಿ ತಂಡಕ್ಕೆ ಸ್ವಂತ ಕಟ್ಟಡವೊಂದು ನಿರ್ಮಾಣವಾಯಿತು. ಆನಂದ ಗಾಣಿಗರು ಅದೆಷ್ಟೋ ಪ್ರಯತ್ನ ಪಟ್ಟರೂ ಸಿಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯ ಅನುದಾನ ಕಳೆದ ಎರಡು ವರ್ಷಗಳಿಂದ ರಂಗತಂಡಕ್ಕೆ ಸಿಗತೊಡಗಿತು. ಆನಂದ ಗಾಣಿಗರು ಕಳೆದ ನಾಲ್ಕೂವರೆ ದಶಕಗಳಿಂದ ಎಳೆದ ರಂಗಭೂಮಿ ರಥವನ್ನು ಮುನ್ನಡೆಸಲು ಅವರ ಪುತ್ರ ಪ್ರದೀಪ್ ಚಂದ್ರ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಇನ್ನೂ ಇಬ್ಬರು ಹಿರಿಯ ಮಕ್ಕಳಾದ ಪ್ರಕಾಶ ಚಂದ್ರ ಮತ್ತು ಪ್ರವೀಣ್ ಚಂದ್ರ ತಮ್ಮನಿಗೆ ಸಾಥ ಕೊಟ್ಟಿದ್ದಾರೆ. ರಂಗಭೂಮಿ ಉಡುಪಿ ಎಲ್ಲಾ ಹಿರಿಯ ಪದಾಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ರಂಗತಂಡದ ಎಂಟುನೂರಕ್ಕೂ ಹೆಚ್ಚು ಸದಸ್ಯರು ಜೊತೆಯಲ್ಲಿದ್ದಾರೆ. ಉಡುಪಿಯ ರಂಗಾಸಕ್ತರ ದೊಡ್ಡ ಬಳಗ  ರಂಗತಂಡದ ರಂಗಚಟುವಟಿಕೆಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣೀಕರ್ತರಾದ ಆನಂದ ಗಾಣಿಗರು ಚಿರನಿದ್ರೆಯಲ್ಲಿದ್ದಾರೆ.


ಮತ್ತೆ ಹೊಸ ಹುರುಪಿನಿಂದ ಹೊಸ ಕನಸಿನಿಂದ
ಮುನ್ನುಗ್ಗುತ್ತಿದೆ ಉಡುಪಿಯಲ್ಲಿ ರಂಗಭೂಮಿ ತೇರು.

ಹೊಸಚಿಗುರೇನೋ ನಳನಳಿಸುತ್ತಿದೆ ಹೆಮ್ಮೆಯಿಂದ
ಕಾಪಿಟ್ಟು ಕಾಯುತ್ತಿದೆ ಹಳೇ ಬೇರು.

ಆನಂದ ಗಾಣಿಗರ ಅಪಾರ ಪರಿಶ್ರಮದಿಂದ
ಉಡುಪಿಯಾಗಿದೆ ರಂಗಚಟುವಟಿಕೆಗಳ ತವರು.

ಮೇರು ನಟನಿಗೆ ಬೀಳ್ಕೋಡೋಣ ಆನಂದದಿಂದ
ಮರೆಯದಿರಲೆಂದೂ ರಂಗದಿಗ್ಗಜನನ್ನು ಹೊಸ ತಲೆಮಾರು

                                          -ಶಶಿಕಾಂತ ಯಡಹಳ್ಳಿ




(ಉಡುಪಿಯಲ್ಲಿ 2014, ಎಪ್ರಿಲ್ 25ರಿಂದ 27ರವರೆಗೆ ಆನಂದ ಗಾಣಿಕಗರವರ ನೆನಪಿನಲ್ಲಿ ಆನಂದೋತ್ಸವ ಹೆಸರಿನಲ್ಲಿ ರಂಗಭೂಮಿ (ರಿ) ಉಡುಪಿ ರಂಗತಂಡವು ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ರಂಗತಂಡದ ಆತ್ಮೀಯ ಆಹ್ವಾನದ ಮೇರೆಗೆ ನಾನು ಎಪ್ರಿಲ್ ೨೬ರಂದು ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದೆ. ಅಂದು ವೇದಿಕೆಯ ಮೇಲೆ ನಾನು ಮಾತಾಡಿದ್ದರ ಸಾರಾಂಶವನ್ನು ಲೇಖನದಲ್ಲಿ ವಿವರವಾಗಿ ಬರೆಯುವ ಮೂಲಕ ರಂಗಭೂಮಿ ಉಡುಪಿ ರಂಗತಂಡ ಹಾಗೂ ರಂಗತಂಡದ ರೂವಾರಿಯಾಗಿದ್ದ ಆನಂದ ಗಾಣಿಗರವರ ಕುರಿತ ಹಲವಾರು ವಿಶಿಷ್ಟ ಮಾಹಿತಿಗಳನ್ನು ದಾಖಲಿಸಲು ಪ್ರಯತ್ನಿಸಿದ್ದೇನೆ. ಇದು ಬೇರೆ ರಂಗತಂಡಗಳಿಗೆ ಹಾಗೂ ರಂಗಕರ್ಮಿಗಳಿಗೆ ಮಾದರಿಯಾಗಬಹುದು ಎನ್ನುವ ಆಶಯ ಲೇಖನದ್ದಾಗಿದೆ. ಸಮಯದ ಮಿತಿಯಿಂದಾಗಿ ವೇದಿಕೆಯ ಮೇಲೆ ಹೇಳಲಾಗದ ಕೆಲವು ಮಹತ್ವದ ಪೂರಕ ವಿಷಯಗಳನ್ನೂ ಸಹ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಒಟ್ಟಾರೆಯಾಗಿ ರಂಗಭೂಮಿ ಉಡುಪಿ ಹಾಗೂ ಆನಂದ ಗಾಣಿಗರವರ ಕುರಿತು ಒಂದು ಪಕ್ಷಿನೋಟವನ್ನು ಕೊಡುವ ಪ್ರಯತ್ನ ಲೇಖನದಲ್ಲಿದೆ.)





          

 



             
               
            
      


               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ