ಇತ್ತೀಚೆಗೆ ಬರಗೂರು ರಾಮಚಂದ್ರಪ್ಪನವರಿಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ಮೂಡುಬಿದೆರೆಗೆ ಹೋಗಿ ಸಿರಿನುಡಿಯಲ್ಲಿ ಶಿಕ್ಷಣೋದ್ಯಮಿಯಿಂದ ಸಂತೋಷದಿಂದಲೇ ಸನ್ಮಾನ ಸ್ವೀಕರಿಸಿದ ನಂತರ ಕೆಲವರು ವಿರೋಧಿಸಿದ ತಕ್ಷಣ “ಅಯ್ಯೋ ನನಗೆ ಯಾರೂ ಸನ್ಮಾನಕ್ಕೆ ಹೋಗಬೇಡಿರೆಂದು ಹೇಳಲೇ ಇಲ್ಲಾ, ನನಗೆ ಗೊತ್ತಾಗದೇ ಹೋಗಿ ಪ್ರಮಾದ ಮಾಡಿದೆ, ಸನ್ಮಾನದ ಹಣವನ್ನು ಚೆಕ್ ಮೂಲಕ ವಾಪಸ್ ಮಾಡಿದೆ” ಎಂದು ಜಾರಿಕೊಂಡರು. ಈಗ ಬರಗೂರರಿಗೆ ಮತ್ತೇನಾಯಿತೋ ಏನೋ ಚಂದ್ರಶೇಖರ್ ಕಂಬಾರರನ್ನು ‘ಕನ್ನಡದ ಬ್ರೆಕ್ಟ್’ ಎಂದು ಕರೆದು ತಮ್ಮ ಪರಮ (ಅ)ಜ್ಞಾನವನ್ನು ಪ್ರದರ್ಶಿಸಿದ್ದಾರೆ.
ಯುಜಿಸಿ ಯು “ಡಾ. ಚಂದ್ರಶೇಖರ್ ಕಂಬಾರರ ಸಾಹಿತ್ಯ ಒಂದು ಅವಲೋಕನ’’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು 2014 ಮಾರ್ಚ 29ರಂದು ಜಗದ್ಗುರು ರೇಣುಕಾಚಾರ್ಯ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿತ್ತು. ಈ ಸೆಮಿನಾರ್ ನ್ನು ಉದ್ಘಾಟಿಸಿ ಮಾತನಾಡಿದ ಬರಗೂರರು “ ಚಂದ್ರಶೇಖರ ಕಂಬಾರರು ಕನ್ನಡದ ಬ್ರೆಕ್ಟ್” ಎಂದು ಹೇಳಿ ಅದಕ್ಕೆ ಸಮರ್ಥನೆಗಳನ್ನು ಕೊಟ್ಟರು. ‘ಬಂಡವಾಳಶಾಹಿಗಳನ್ನು ಬ್ರೆಕ್ಟ್ ಟೀಕಿಸಿದ ರೀತಿಯಲ್ಲಿ ಕಂಬಾರರು ಜಮೀನ್ದಾರಿ ಪದ್ದತಿಯನ್ನು ತಮ್ಮ ನಾಟಕದಲ್ಲಿ ಟೀಕಿಸಿದ್ದಾರೆ’ ಎಂದು ಹೇಳುತ್ತಾ ಕಂಬಾರರ ನಾಟಕಗಳು ವ್ಯಕ್ತಿ ಪ್ರಜ್ಞೆಯ ಜೊತೆಗೆ ಸಾಮುದಾಯದ ಪ್ರಜ್ಞೆಯನ್ನೂ ಗಟ್ಟಿಯಾಗಿ ಬಿಂಬಿಸುತ್ತವೆ’’ ಎಂದು ಹೇಳಿದರು. ಜೊತೆಗೆ ಜಾಗತಿಕರಣದ ಆಕ್ರಮಣದ ಸಂದರ್ಭದಲ್ಲಿಯೂ ನೆಲಮೂಲ ಸಂಸ್ಕೃತಿ ಅಳಿಯದಂತೆ ಕಾವ್ಯ ನಾಟಕಗಳನ್ನು ರಚಿಸಿರುವ ಕಂಬಾರರು ನವ್ಯ ನವೋದಯ ಯಾವುದೇ ಪಂಥಕ್ಕೆ ಸೇರದೆ ಜನಪದ ಪ್ರಜ್ಞೆಯ ಜತೆಯಲ್ಲಿ ಆಧುನಿಕವಾದ ಬಹುಮುಖಿ ಒಳನೋಟವನ್ನು ಹೊಂದಿದೆ” ಎಂದು ಕಂಬಾರರ ಕುರಿತು ತಮ್ಮ ಆಧುನಿಕ ಸಂಶೊಧನೆಯನ್ನು ಸಮರ್ಥಿಸಿಕೊಂಡರು.
ಬರಗೂರರಿಗೆ ಕಂಬಾರರನ್ನು ಸಮರ್ಥಿಸಿಕೊಳ್ಳಬೇಕೆಂದಿದ್ದರೆ ಅವರ ನಾಟಕ-ಸಾಹಿತ್ಯಗಳ ಅಂಶಗಳನ್ನು ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲಿ ವಿರೋಧಿಸುವವರಾರು? ಹೊಗಳಲೇಬೇಕೆಂದಿದ್ದರೆ ಕಂಬಾರರನ್ನು ಕನ್ನಡದ ಅದ್ಬುತ ನಾಟಕಕಾರ ಎಂದು ಹೊಗಳಲಿ ಬೇಡ ಎಂದವರಾರು? ಆದರೆ ಕಂಬಾರರನ್ನು ಬ್ರೆಕ್ಟ್ನಿಗೆ ಹೋಲಿಸುವ ಅಗತ್ಯವೇನಿತ್ತು? ಬ್ರೆಕ್ಟ್ ಮತ್ತು ಕಂಬಾರ ಇಬ್ಬರೂ ನಾಟಕಗಳನ್ನು ಬರೆದಿದ್ದಾರೆಂಬುದನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಸಾಮ್ಯತೆಯೂ ಈ ಇಬ್ಬರಲ್ಲೂ ಇಲ್ಲ. ಬ್ರೆಕ್ಟ್ ಒಬ್ಬ ಮಹಾನ್ ಮಾನವತಾವಾದಿ. ಕಂಬಾರರೊಳಗೊಬ್ಬ ಮನುವಾದಿಯನ್ನು ಅವರ ನಾಟಕಗಳ ಮೂಲಕ ಗುರುತಿಸಬಹುದಾಗಿದೆ. ಬ್ರೆಕ್ಟ್ ಒಬ್ಬ ಎಡಪಂಥೀಯ ಪ್ರಗತಿಪರ ವಿಚಾರವಾದಿ. ಆದರೆ ಕಂಬಾರರಿಗೆ ಯಾವುದೇ ಪಂಥ ಅಥವಾ ಸಿದ್ದಾಂತಗಳೆಂಬುದು ಇಲ್ಲವೇ ಇಲ್ಲ. ಇತ್ತ ಎಡವೂ ಅಲ್ಲದ, ಅತ್ತ ಬಲವೂ ಅಲ್ಲದ, ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಳ್ಳದ ಕಂಬಾರರನ್ನು ಬ್ರೆಕ್ಟ್ಗೆ ಹೋಲಿಸುವುದೇ ಒಂದು ರೀತಿ ಕುಚೋದ್ಯ.
ಬರ್ಟೊಲ್ಟ್ ಫ್ರೆಡರಿಕ್ ಬ್ರೆಕ್ಟ್ |
ಯುಜಿನ್ ಬರ್ಟೊಲ್ಟ್ ಫ್ರೆಡರಿಕ್ ಬ್ರೆಕ್ಟ್ ಒಬ್ಬ ಜರ್ಮನಿ ಸಂಜಾತ ಶ್ರೇಷ್ಠ ಕವಿ ಹಾಗೂ ಪ್ರಖ್ಯಾತ ನಾಟಕಕಾರ. ಜಗತ್ತಿನ ರಂಗಭೂಮಿಯ ಇತಿಹಾಸದಲ್ಲಿ ಷೇಕ್ಸಫೀಯರ್, ಮೋಲಿಯೇರ್ನಂತಹ ನಾಟಕಕಾರರ ಜತೆ ನಿಲ್ಲುವ ಹೆಸರು ಅವರದು. ಕವಿಯಾಗಿ, ನಾಟಕಕಾರನಾಗಿ, ನಟನಾಗಿ, ನಿರ್ದೇಶಕನಾಗಿ, ರಂಗಸಿದ್ದಾಂತ ಪ್ರತಿಪಾದಕರಾಗಿ ಜಗತ್ಪ್ರಸಿದ್ದನಾಗಿರುವ ಬ್ರೆಕ್ಟ್ ತನ್ನ ವಿಶಾಲ ಮಾನವೀಯ ಚಿಂತನೆಗಳಿಂದ, ಪ್ರಗತಿಪರ ವಿಚಾರಗಳಿಂದ ಒಬ್ಬ ಚರಿತ್ರಾರ್ಹ ವ್ಯಕ್ತಿಯಾದವರು. ಸಮಾಜವಾದಿಯಾಗಿದ್ದ ಬ್ರೆಕ್ಟ್ ತನ್ನ ಎಡಪಂಥೀಯ ಮಾನವೀಯ ವಿಚಾರಗಳನ್ನು ತನ್ನೆಲ್ಲಾ ಕೃತಿಗಳ ಮೂಲಕ ಸಮರ್ಥಿಸಿಕೊಂಡವರು. ಬಂಡವಾಳಶಾಹಿ ಆಳುವ ವ್ಯವಸ್ಥೆಯನ್ನೇ ಶತಾಯ ಗತಾಯ ವಿರೋಧಿಸಿದವರು. 1928ರಲ್ಲಿ ಮೊದಲ ಬಾರಿಗೆ ಬ್ರೆಕ್ಟ್ ರಚಿಸಿದ ‘ಬಾಲ್’ ನಾಟಕದಲ್ಲಿ ಸಮಾಜದ್ರೋಹಿ ಸ್ವೇಚ್ಛಾಚಾರಿ ಕವಿಯೊಬ್ಬನನ್ನು ಲೇವಡಿ ಮಾಡಿದರು.. ಅದೇ ವರ್ಷ ಬ್ರೆಕ್ಟ್ ಬರೆದ ‘ದಿ ತ್ರಿ ಪೆನ್ನಿ ಅಪೇರ’ ಎಂಬ ಸಂಗೀತ ನಾಟಕವು ಪ್ರದರ್ಶನವಾದ ದಿನದಂದೇ ಆತನ ಹೆಸರು ಜರ್ಮನಿಯ ಉದ್ದಗಲಕ್ಕೂ ಹರಡಿತು. ಆ ನಾಟಕದಲ್ಲಿ ‘ಏಳಿ ಎದ್ದೇಳಿ ಕೊಳೆತ ಕ್ರಿಶ್ಚಿಯನ್ನರೇ...” ಎಂದು ಧರ್ಮಾಂಧತೆಯನ್ನೆ ಲೇವಡಿಮಾಡಿದ್ದ ಬ್ರೆಕ್ಟ್
ಮಧ್ಯಮ ವರ್ಗದ ಬೂರ್ಜ್ವಾ ಪ್ರೇಕ್ಷಕರನ್ನು ತನ್ನ ನಾಟಕಗಳಲ್ಲಿ ವಿಡಂಬನೆ ಮಾಡಿದ. ತನ್ನ ಕಾಲದ ಭ್ರಷ್ಟ ಸಮಾಜದ ಹೊಲಸನ್ನು ಎತ್ತಿ ತೋರಿಸಿದ. ವಿಟರು, ಸೂಳೆಯರು, ತಲೆಹಿಡುಕರು, ಕೊಲೆಗಡುಕರು ತುಂಬಿದ ಸಮಾಜದ ಪಾತಕ ಪ್ರಪಂಚವನ್ನು ಹಾಗೂ ಭ್ರಷ್ಟ ಅಧಿಕಾರಿಗಳು, ಲಂಚಕೋರ ಶ್ರೀಮಂತರೇ ಪ್ರಧಾನವಾಗಿರುವ ಶಿಷ್ಟ ಜೀವನವನ್ನು ಒಂದರ ಪಕ್ಕದಲ್ಲಿನ್ನೊಂದನ್ನಿಟ್ಟು ಹೋಲಿಸಿದ ಬ್ರೆಕ್ಟ್ ತನ್ನ ಸಮಾಜದ ಎಲ್ಲಾ ವರ್ಗದ ಜನರು ಕೆರಳಿ ಕನಲುವಂತೆ ನಾಟಕಗಳನ್ನು ಬರೆದ.
ಬರ್ಟೊಲ್ಟ್ ಫ್ರೆಡರಿಕ್ ಬ್ರೆಕ್ಟ್ |
ಬ್ರೆಕ್ಟ್ ತನ್ನ ಮುಕ್ತ ರಂಗಭೂಮಿ (ಎಫಿಕ್ ಥಿಯೇಟರ್) ಪರಿಕಲ್ಪನೆಯನ್ನು ತನ್ನ ನಾಟಕಗಳ ಮೂಲಕ ನಿರೂಪಿಸಿದ. ‘ದಿ ಮೇಷರ್ಸ ಟೇಕನ್’ ಎಂಬ ಅಪ್ಪಟ ಕಮ್ಯೂನಿಸ್ಟ್ ಸಿದ್ದಾಂತದ ನಾಟಕವನ್ನೇ ಬರೆದ. ಕ್ರಾಂತಿಯ ಪ್ರಚಾರಕ್ಕೆ ಪೂರಕವಾಗಿ 1932ರಲ್ಲಿ ರಷ್ಯನ್ ಸಾಹಿತಿ ಮ್ಯಾಕ್ಸಿಂ ಗಾರ್ಕಿಯ ‘ಮದರ್’ ಕಾದಂಬರಿಯನ್ನು ರಂಗರೂಪಕ್ಕಿಳಿಸಿದ. ‘ಮದರ್ ಕರೇಜ್’ ನಾಟಕದ ಪ್ರದರ್ಶನವನ್ನು ಜರ್ಮನಿಯಲ್ಲಿ ನಿಷೇಧಿಸಲಾಯಿತು. ನಾಜಿ ವ್ಯವಸ್ಥೆಯನ್ನು ವಿರೋಧಿಸಿದ್ದರಿಂದ ಬ್ರೆಕ್ಟ್ ಕಡುಕಷ್ಟಗಳನ್ನು ಎದುರಿಸಬೇಕಾಯಿತು. 1933ರಲ್ಲಿ ಹಿಟ್ಸರ್ ಅಧಿಕಾರಕ್ಕೆ ಬಂದಾಗ ಬ್ರೆಕ್ಟ್ ಬರೆದ ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಜರ್ಮನಿಯಿಂದ ತಲೆತಪ್ಪಿಸಿಕೊಂಡು ಯಾವುಯಾವುದೋ ದೇಶದಲ್ಲಿ ತನ್ನ ಸಿದ್ದಾಂತಗಳೊಂದಿಗೆ ಬ್ರೆಕ್ಟ್ ಬದುಕಿದ. ದೇಶಭ್ರಷ್ಟನಾಗಿ ಅಲೆದ. ಕೊನೆಗೆ ಬದುಕು ಅರೆಸಿ ಅಮೇರಿಕಕ್ಕೆ ಹೋದರೂ ಆ ದೇಶ ಆತನನ್ನು ಅವಮಾನಿಸಿತು. ದೇಶದ್ರೋಹದ ಮೊಕದ್ದಮೆ ಹೂಡಿ ವಿಚಾರಣೆಗೊಳಪಡಿಸಿತು. ಮತ್ತೆ ಯುರೋಪಿಗೆ ಬಂದ. ಎಂತಹುದೇ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಹ ತನ್ನ ನಾಟಕ ರಚನೆ ಮತ್ತು ಕಾವ್ಯ ಕಟ್ಟುವಿಕೆಯನ್ನು ಬ್ರೆಕ್ಟ್ ನಿಲ್ಲಿಸಲೇ ಇಲ್ಲ. ಕೊಟ್ಟಕೊನೆಗೆ ಪೂರ್ವ ಬರ್ಲಿನ್ನಲ್ಲಿ ನೆಲೆ ನಿಂತು ತನ್ನ ನಾಟಕಗಳ ಮೂಲಕ ಪ್ರಸಿದ್ದನಾದ. ಸರಕಾರ ತನಗೆ ಕೊಟ್ಟ ಕಾರನ್ನು ಬಿಟ್ಟು ತನ್ನ ಹಳೆಯ ಮೋಟಾರು ಗಾಡಿಯಲ್ಲೇ ಸುತ್ತುತ್ತಿದ್ದ. ನಾಟಕ ಶಾಲೆಯೊಂದನ್ನು ಹುಟ್ಟುಹಾಕಿದ. ‘ಬರ್ಲಿನರ್ ಆನ್ಸೆಂಬಲ್’ ನಾಟಕ ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸಿದ.
ಹರಕಲು ಬಟ್ಟೆಯ ತರಕಲು ಗಡ್ಡದ ಬ್ರೆಕ್ಟ್ ಯಾವಾಗಲೂ ಜನಸಾಮಾನ್ಯರಂತೆಯೇ ಬದುಕಿದ.
1956, ಆಗಸ್ಟ್ 14ರಂದು ಮೆದುಳಿನ ರಕ್ತಸ್ರಾವದಿಂದ ಕೊನೆಯುಸಿರೆಳೆದ. ಸಾಯುವುದಕ್ಕಿಂತಲೂ ಮುಂಚಿನ ದಿನದವರೆಗೂ ನಾಟಕದ ರಿಹರ್ಸಲ್ಸ್ ಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದ ಬ್ರೆಕ್ಟ್ನ ಕೊನೆಯ ಆಸೆ ಏನು ಗೊತ್ತೆ? ತಾನು ಸತ್ತ ನಂತರ ಯಾರೂ ಹೊಗಳಬಾರದು ಹಾಗೂ ತನ್ನ ಸಾವನ್ನು ವೈಭವೀಕರಣ ಮಾಡಬಾರದು’ ಎನ್ನುವುದಾಗಿತ್ತು. ‘ನನಗೆ ಸಮಾಧಿ ಶಿಲೆ ಬೇಡ, ಕೇವಲ ಸಮಾಧಿಯ ಮೇಲೆ ಬ್ರೆಕ್ಟ್ ಎಂದು ಬರೆದರೆ ಸಾಕು’ ಎಂದು ಸಾವಿಗೆ ಮುಂಚೆ ಹೇಳಿಯೇ ಬ್ರೆಕ್ಟ್ ತೀರಿಕೊಂಡಿದ್ದ.
ಜೋಕುಮಾರಸ್ವಾಮಿ ನಾಟಕದ ದೃಶ್ಯ |
ಇದು ಬ್ರೆಕ್ಟ್ನ ಬರಹ ಹಾಗೂ ಬದುಕಿನ ಸಂಕ್ಷಿಪ್ತ ವಿವರಣೆ. ಈಗ ಹೇಳಿ ಬ್ರೆಕ್ಟ್ನಿಗೆ ಕಂಬಾರರನ್ನು ಹೋಲಿಸಲು ಸಾಧ್ಯವೇ? ಯಾವ ಕೋನದಲ್ಲಿ ಕಂಬಾರ್ ಬ್ರೆಕ್ಟ್ನಾಗಿ ಕಾಣಲು ಸಾಧ್ಯ? ಈಗ ಕಂಬಾರರ ನಾಟಕಗಳನ್ನೇ ತೆಗೆದುಕೊಳ್ಳೋಣ. ಕಂಬಾರರು ತಮ್ಮ ಬಹುತೇಕ ನಾಟಕಗಳಲ್ಲಿ ಜಾನಪದವನ್ನು ಅವಲಂಬಿಸಿದ್ದಾರೆ. ಅವರ ಎಲ್ಲ ನಾಟಕಗಳಲ್ಲಿ ಹೆಣ್ಣು ಕಾಮದ ಪ್ರತಿಮೆ, ಫಲವತ್ತತೆಯ ಸಂಕೇತ, ಗಂಡಿನ ಭೋಗವಸ್ತುವಾಗಿದ್ದಾಳೆ. ‘ಮಹಿಳೆ ಪುರುಷನ ಲೈಂಗಿಕ ಸಾಧನ” ಎನ್ನುವ ಪುರುಷ ಪ್ರಧಾನ ಮಹಿಳಾ ವಿರೋಧಿ ತತ್ವವನ್ನೇ ಕಂಬಾರರು ತಮ್ಮ ನಾಟಕಗಳಲ್ಲಿ ಪ್ರತಿಪಾದಿಸುತ್ತಾರೆ. ಅವರ ಋಷ್ಯಶೃಂಗವಂತೂ ಕಾಮದ ಆಡಂಬೊಲವಾಗಿದೆ. ‘ಹೆಣ್ಣು ಅಂದರೆ ಕಾಮಿಗಳ’ ಎಂದು ಈ ನಾಟಕದಲ್ಲಿ ಹೇಳಲಾಗಿದೆ. ಉದಾಹರಣೆಗೆ...
“ಗಂಡುಳ್ಳ ಬಾಲೇರ ಸೈತ ಗಂಡಸರನ್ನ ಸಿಕ್ಕಾರೋ ಸಿಗಾಕಿಲ್ಲೋ ಅಂತ ಹುಡಿಕ್ಯಾಡಿ ತಿರಗತಾರ”....... “ಹರದಾಡೋ ಹರೇದ ಬೆಕ್ಕಗೋಳನ್ನ ಮುದಿಕೇರ ಸೈತ ಕದ್ದು ಕರೆದು ತಮ್ಮ ಹಾಲಗಡಿಗಿ ಮ್ಯಾಲ ಮುಚ್ಚಿಕೊಳ್ತಾರ”.... ಎಂದು ಕಂಬಾರರು ಹೆಂಗಸರ ಬಗ್ಗೆ ಕೆಟ್ಟದಾಗಿ ಬರಿದಿದ್ದಾರೆ. ಈ ನಾಟಕದ ಗೌಡತಿಯನ್ನಂತೂ ಕಾಮದಾಹಿಯನ್ನಾಗಿ ಚಿತ್ರಿಸಿದ ಕಂಬಾರರು ತನ್ನ ಕಾಮ ತಣಿಸಲು ತಾನು ಹೆತ್ತ ಮಗ ಬಾಳಗೊಂಡನನ್ನೇ “ಮೀಸಲದ ಮಿಂಡ ಬಾರೋ, ಮಿಂಡಿ ಬಿದರ ನಿಂತೇನೋ” ಎಂದು ಆಹ್ವಾನಿಸಿ ಯುಕ್ತಿಯಿಂದ ತನ್ನ ಆಸೆ ಈಡೇರಿಸಿಕೊಳ್ಳುತ್ತಾಳೆ. ಕಂಬಾರರ ನಾಟಕದ ಪ್ರಮುಖ ಹೆಣ್ಣು ಪಾತ್ರಗಳು ಲೈಂಗಿಕ ಬಯಕೆಯನ್ನೇ ಬಯಸಿ ನಿಂತಿರುತ್ತವೆ. ಜೋಕುಮಾರಸ್ವಾಮಿ ನಾಟಕದಲ್ಲಿ “ಹೆಣ್ಣೆಂದರೆ ಬರಿ ದೇಹ. ಎಷ್ಟು ತುಳಕ್ಯಾಡತಾಳೋ ನೋಡಿದವರ ಬಾಯಾಗ ನೀರ ಬರೋ ಹಂಗ ಮಸ್ತ ತುಂಬಿಕೊಂಡಾಳ” ಎನ್ನುವಂತಹ ಮಾತುಗಳು ಮಹಿಳಾ ವಿರೋಧಿಯಾಗಿವೆ. ಹೆಣ್ಣನ್ನು ಭೋಗದ ವಸ್ತು ಎನ್ನುವ ರೀತಿಯಲ್ಲೇ ನೋಡಲಾಗಿದೆ. “ಖರೇ ಹೆಂಗಸನ್ನ ಹಾಸಗಿ ಮಾಡಿ ಮಲಗಿದರ ಬೆವರ ಸುರಧಾಂಗ ಮಳಿ ಬರತೈತೋ..” ಎನ್ನುವ ಸಿರಿಸಂಪಿಗೆ ನಾಟಕದ ಮಾತುಗಳು ಹೆಣ್ಣಿರುವುದೇ ಅನುಭವಿಸಲಿಕ್ಕೆ ಎನ್ನುವ ರೀತಿಯಲ್ಲಿವೆ.
ನಾಯಿಕತೆ ನಾಟಕದ ಒಂದು ದೃಶ್ಯ |
ಕಂಬಾರರ ನಾಯಿಕತೆ ನಾಟಕದ ಡೈಲಾಗ್ ಹೀಗಿದೆ “ಬೇಕಂದರ ಕುಣಿತಾಳ, ಬ್ಯಾಡಂದರ ಹಾಸಿಗ್ಯಾಗತಾಳ, ಸೋಳಾ ವರ್ಷ ಬತ್ತೀಸ್ ಲಕ್ಷಣ, ಹತ್ತು ವರ್ಷ ಗ್ಯಾರಂಟಿ, ರಿಪೇರಿ ಚಾರ್ಜಿಲ್ಲ, ಬೇಡ್ರಪ್ಪೋ ಬೇಡ್ರಿ....
ಮೂಗಿಗೆ ಮುನ್ನೂರು, ಕಣ್ಣಿಗಿ ನಾನ್ನೂರು, ಮೂತಿಗೆ ಹತ್ತಾರುನೂರು, ಎದಿಗಿ ಎಂಟುನೂರು, ಸೊಂಟಕ ಸಾವಿರ....” ಹೆಣ್ಣನ್ನು ಈ ರೀತಿ ಹರಾಜಾಕುವ ಅಮಾನವೀಯತೆ ಕಂಬಾರರ ಆಲೋಚನಾ ಮೂಸೆಯಿಂದ ಹೊರಬಂದಿರುವುದು ಅವರ ಉದ್ದೇಶವನ್ನು ತಿಳಿಸುತ್ತದೆ. ಕಾಮದ ಮೂಲಕ ಕ್ರಾಂತಿಯನ್ನು ಪ್ರತಿಪಾದಿಸುವ ಕಂಬಾರರ ತಂತ್ರ ‘ಕಾಡುಕುದುರೆ’ ನಾಟಕದಲ್ಲಿದೆ. ಹೆಣ್ಣನ್ನು ಕುಂಟಲಗಿತ್ತಿ, ಹಾದರಗಿತ್ತಿ ಎಂದು ತೋರುವ ಪ್ರಯತ್ನವನ್ನು ಸಂಗ್ಯಾಬಾಳ್ಯಾದಲ್ಲಿ ನೋಡಬಹುದಾಗಿದೆ. ಹೀಗೆ ಕಂಬಾರರ ಬಹುತೇಕ ನಾಟಕಗಳಲ್ಲಿ ಹೆಣ್ಣಿನ ಕಾಮಾಭಿವ್ಯಕ್ತಿಯನ್ನು ವೈಭವೀಕರಿಸಲಾಗಿದೆ. ಕಾಮವೊಂದೇ ಮಹಿಳೆಯ ಬದುಕಿನ ಬಹುಮುಖ್ಯ ಆಶಯವೆಂದು ಹೇಳುತ್ತಾ ಆಕೆಯ ಬದುಕಿನ ವಿವಿಧ ಆಯಾಮಗಳನ್ನು ಮುಚ್ಚಿಡಲಾಗಿದೆ.
“ಒಬ್ಬ ಸಮಾನ ಸ್ತರದ ಗೆಳತಿಯಾಗಿ, ಸಂವೇದನಾಶೀಲ ಮಾನವ ಜೀವಿಯಾಗಿ, ಸ್ನೇಹ ವಾತ್ಸಲ್ಯಗಳಂತ ಇತ್ಯಾತ್ಮಕ ಸಂಬಂಧದಲ್ಲಿ ದೃಢವಾಗಿ ವ್ಯಕ್ತವಾಗುವಂತಹ ಒಂದೇ ಒಂದು ಸ್ತ್ರೀ ಕಲ್ಪನೆಯೂ ಕಂಬಾರರ ಕಾವ್ಯದಲ್ಲಿ ಕಾಣಸಿಗುವುದಿಲ್ಲ. ವಾಸ್ತವದ ಹೆಣ್ಣುಗಳು ಕೇವಲ ಮೊಲೆಗಳು, ಯೋನಿಗಳಾಗಿಯೋ ಅಥವಾ ಗೌಡತಿಯ ಹಾಗೆ ಮೀಸಲು ಮುರಿದುದರ, ಗರತಿತನ ನಷ್ಟವಾದುದರ ಪ್ರತೀಕಗಳಾಗಿ ಉಳಿಯುತ್ತವೆ...” ಎಂಬುದು ಕಂಬಾರರ ‘ಹೇಳತೇನಿ ಕೇಳ’ ಸಮಗ್ರಕಾವ್ಯವನ್ನು ವಿವರ್ಶಿಸಿದ ಡಾ. ಬಿ.ಎನ್.ಸುಮಿತ್ರಾಬಾಯಿಯವರ ಅನಿಸಿಕೆಗಳಾಗಿವೆ. ಈ ಅಭಿಪ್ರಾಯಗಳು ಕಂಬಾರರ ನಾಟಕಗಳಿಗೂ ಅನ್ವಯಿಸುತ್ತವೆ.
ಬ್ರೆಕ್ಟ್ ನ 'ಮದರ್ ಕರೇಜ್' ನಾಟಕದ ದೃಶ್ಯ |
ಈಗ ಹೇಳಿ ಅದು ಹೇಗೆ ಕಂಬಾರರು ಕನ್ನಡದ ಬ್ರೆಕ್ಟ್ ಆಗಲು ಸಾಧ್ಯ? ಬ್ರೆಕ್ಟ್ ಅಸಮಾನ ವ್ಯವಸ್ಥೆಯನ್ನು ವಿರೋಧಿಸಿದ. ‘ಮದರ್ ಕರೇಜ್’ ನಾಟಕಗಳಲ್ಲಿ ಮಹಿಳೆಯರನ್ನು ಕ್ರಾಂತಿಯ ಹರಿಕಾರರನ್ನಾಗಿಸಿದ. ‘ಕಕೇಸಿಯನ್ ಚಾಕ್ ಸರ್ಕಲ್’ ನಾಟಕದಲ್ಲಿ ರಾಜಮನೆತನದ ಮಹಿಳೆಯ ನಿರ್ಧಯತೆ ಹಾಗೂ ದುಡಿಯುವ ವರ್ಗದ ಮಹಿಳೆಯೊಳಗಿನ ಮಮತೆಯನ್ನು ತೋರಿಸಿದ. ಬ್ರೆಕ್ಟ್ನ ಯಾವ ನಾಟಕದಲ್ಲೂ ಸಹ ಮಹಿಳೆ ಕಾಮದ ವಸ್ತುವಾಗಿಯೋ ಭೋಗದ ಪ್ರಾಣಿಯಾಗಿಯೋ, ಕಾಮಪಿಪಾಸುವಾಗಿಯೋ ಚಿತ್ರಿತವಾಗಿಲ್ಲ. ಬ್ರೆಕ್ಟ್ ಅದ್ಬುತ ಮಾನವೀಯತಾವಾದಿಯಾಗಿದ್ದ. ಮಹಿಳೆಯರನ್ನು ಅಪಾರವಾಗಿ ಗೌರವಿಸುವಂತವನಾಗಿದ್ದ. ಆದರೆ ನಮ್ಮ ಕನ್ನಡದ ಬ್ರೆಕ್ಟ್ (?) ಕಂಬಾರರು ಸಮಾನತಾವಾದಿಯೂ ಅಲ್ಲ, ತಮ್ಮ ಬರಹಗಳಲ್ಲಿ ಕೂಡಾ ಸಮಾಜವಾದವನ್ನು ಪ್ರತಿಪಾದಿಸಲಿಲ್ಲ. ಬ್ರೆಕ್ಟ್ ವ್ಯವಸ್ಥೆಯ ವಿರುದ್ದ ನಾಟಕ ಬರೆದು, ಆಡಿಸಿ ದೇಶಾಂತರಗೊಂಡು ಪಡಬಾರದ ಪಾಡು ಅನುಭವಿಸಿದ. ಆದರೆ ನಮ್ಮ ಕಂಬಾರರು ವ್ಯವಸ್ಥೆಯೊಂದಿಗೆ ರಾಜಿಯಾಗಿ ಹಲವಾರು ಅಧಿಕಾರ ಸವಲತ್ತುಗಳನ್ನು ಪಡೆದರು. ಎಲ್ಲೂ ಸರಕಾರದ ಜನವಿರೋಧಿ ನಿಲುವುಗಳನ್ನು ವಿರೋಧಿಸದೇ ಇರುವುದರಿಂದ ಹಾಗೂ ಆಳುವ ವ್ಯವಸ್ಥೆಯೊಂದಿಗೆ ಸದಾ ಸಹಕಾರ ಹೊಂದಿರುವುದರಿಂದ ‘ಜ್ಞಾನಪೀಠ’ ಪುರಸ್ಕೃತರೂ ಆದರು. ಬ್ರೆಕ್ಟ್ ನಾಟಕಕ್ಕಾಗಿ ಬದುಕನ್ನೇ ಮುಡುಪಾಗಿಟ್ಟ. ಬರೆದಂತೆ ಬದುಕಿದ. ಆದರೆ ಕಂಬಾರರು ತಾವು ಜನಪದದಿಂದ ಪ್ರೇರೇಪಿತರಾಗಿ ಜಾಣತನದಿಂದ ಬರೆದ ಜಾರತನದ ಒಂದೊಂದು ನಾಟಕವನ್ನೂ ತಮ್ಮ ಅನುಕೂಲತೆಗೆ ಮೆಟ್ಟಲುಗಳನ್ನಾಗಿ ಮಾಡಿಕೊಂಡು ಸದಾ ಸಂತೃಪ್ತ ಜೀವನವನ್ನು ನಡೆಸಿದರು. ಅನೇಕಾನೇಕ ಅಧಿಕಾರಗಳನ್ನು ಅನುಭವಿಸಿದರು. ಒಂದು ರೀತಿಯಲ್ಲಿ ಕಾಮವನ್ನು ವೈಭವೀಕರಿಸುತ್ತಾ ಇವರೂ ಬರೆದಂತೆ ಬದುಕಲು ಪ್ರಯತ್ನಿಸಿದರು!
ಬ್ರೆಕ್ಟ್
ನ 'ದಿ ಗುಡ್ ವುಮನ್ ಆಪ್ ಸಿಟಿಜನ್' ನಾಟಕದ ದೃಶ್ಯ
|
ಎತ್ತನ ಬ್ರೆಕ್ಟ್ ಎತ್ತನ ಕಂಬಾರ ಎತ್ತನದಿಂದೆತ್ತ ಸಂಬಂಧವಯ್ಯಾ? ಎಂದು ಪ್ರಶ್ನಿಸಬಹುದಾಗಿದೆ. ಬದುಕು, ಬರಹ ಹಾಗೂ ಸಿದ್ದಾಂತಗಳಲ್ಲಿ ಎಲ್ಲೂ ಈ ಇಬ್ಬರಿಗೂ ಏನಕೇನ ಸಂಬಂಧವಿಲ್ಲವೇ ಇಲ್ಲ. ಆದರೂ ಅದ್ಯಾಕೆ ಬಂಡಾಯದ ಬರಗೂರು ಈ ಇಬ್ಬರಲ್ಲಿ ಸಾಮ್ಯತೆಯನ್ನು ಕಂಡರು. ಅದು ಯಾಕೆ ಕಂಬಾರರನ್ನು ಕನ್ನಡದ ಬ್ರೆಕ್ಟ್ ಎಂದು ಸಾರ್ವಜನಿಕವಾಗಿ ಕರೆದರು? ಅವರ ಒಳಮರ್ಮವೇನು? ಅವರು ಕೊಟ್ಟ ಸಮರ್ಥನೆಗಳಿಗೆ ತಾರ್ಕಿಕತೆ ಇದೆಯಾ? ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ. “ಯಾವುದೇ ಒಂದು ಸಿದ್ದ ಮಾದರಿಯ ವ್ಯಾಪ್ತಿಗೆ ಒಳಪಡದ ಕಂಬಾರರ ಸಾಹಿತ್ಯ ವ್ಯಕ್ತಿ ಪ್ರಜ್ಞೆಯ ಜತೆಯಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಬಿಚ್ಚಿಡುತ್ತದೆ. ವ್ಯಕ್ತಿಯ ಅಂತರಂಗದ ಅನಾವರಣ ಅವರ ಸಾಹಿತ್ಯದ ಕೇಂದ್ರಬಿಂದು” ಎಂದು ಬರಗೂರರು ಸಮರ್ಥಿಸಿಕೊಂಡರು. ಇಲ್ಲಿಯೇ ವಿರೋಧಾಬಾಸವಿದೆ. ಬ್ರೆಕ್ಟ್ಗೆ ಒಂದು ಸಿದ್ದ ತಾತ್ವಿಕ ಮಾದರಿ ಇತ್ತು. ಅದು ಸಮಸಮಾಜದ ಪರಿಕಲ್ಪನೆಯಾಗಿತ್ತು. ಅನ್ಯಾಯದ ವಿರುದ್ದ ಹೋರಾಡುವುದಾಗಿತ್ತು. ಆದರೆ ಕಂಬಾರರಿಗೆ ಬರಗೂರರೇ ಹೇಳಿದಂತೆ ಯಾವುದೇ ಸಿದ್ದ ಮಾದರಿಗಳಿಲ್ಲ. ಕಂಬಾರರ ಸಾಹಿತ್ಯ ವ್ಯಕ್ತಿ ಪ್ರಜ್ಞೆಯನ್ನು ಬಿಚ್ಚಿಡುವುದು ಸತ್ಯ ಆದರೆ ಆ ರೀತಿಯ ವ್ಯಕ್ತಿ ಪ್ರಜ್ಞೆ ಕೇವಲ ಕಾಮವಾಸನೆಯಿಂದ ತುಂಬಿದ್ದಾಗಿದೆ. ಅದು ಸಾಮುದಾಯಿಕ ಪ್ರಜ್ಞೆ ಆಗಲು ಸಾಧ್ಯವೇ ಇಲ್ಲ. ವ್ಯಕ್ತಿಗತ ದೌರ್ಬಲ್ಯ ಅದು ಹೇಗೆ ಸಾಮಾಜಿಕವಾಗಲು ಸಾಧ್ಯ. ಆದರೆ ಬ್ರೆಕ್ಟ್ನ ಸಮಸಮಾಜ ಕಲ್ಪನೆ ಸಾಮುದಾಯಿಕವಾಗಿತ್ತು. ವ್ಯಕ್ತಿಯ ಅಂತರಂಗದ ಅನಾವರಣವನ್ನು ಕಂಬಾರರು ಮಾಡಿದ್ದು ಸರಿ ಆದರೆ ಆ ಅಂತರಂಗದ ಅನಾವರಣ ಕೇವಲ ಲೈಂಗಿಕ ಆಸಕ್ತಿಯ ಬಯಕೆಯೇ ಆಗಿತ್ತು ಎನ್ನುವುದೇ ತಕರಾರು. ‘ಕಂಬಾರರು ಜಮೀನ್ದಾರಿ ಪದ್ದತಿಯನ್ನು ಟೀಕಿಸಿದರು’ ಎಂದು ಬರಗೂರರ ಇನ್ನೊಂದು ವಾದ. ಆದರೆ ಕಂಬಾರರ ನಾಟಕಗಳಲ್ಲಿ ಬರುವ ಜಮೀನ್ದಾರರು ಕೇವಲ ಹೆಣ್ಣುಬಾಕರೇ ಆಗಿದ್ದಾರೆ. ಜಮೀನ್ದಾರ ಮತ್ತು ಆಳು ಇಬ್ಬರೂ
ಪ್ರಯತ್ನಿಸುವುದು ಹೆಣ್ಣನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ಅಂದರೆ ಅನುಭವಿಸಲು. ಕಂಬಾರರ ನಾಟಕಗಳಲ್ಲಿ ಗಂಡು ಶ್ರೀಮಂತನಿರಲಿ ಬಡವನಿರಲಿ ಹೆಣ್ಣನ್ನು ಭೋಗಿಸಲು ಪ್ರಯತ್ನಿಸುತ್ತಾನೆ. ಹೆಣ್ಣನ್ನು ಭೂಮಿಗೆ ಹೋಲಿಸಿದ ಕಂಬಾರರು “ಉಳುವವನೇ ಭೂಮಿಯ ಒಡೆಯ” ಎಂದು ತಮ್ಮ ನಾಟಕದಲ್ಲಿ ಪ್ರತಿಪಾದಿಸುತ್ತಾರೆ. ಜೋಕುಮಾರಸ್ವಾಮಿ ನಾಟಕ ಈ ಸಿದ್ದಾಂತಕ್ಕೆ ಬದ್ದವಾಗಿದೆ. ಹೆಣ್ಣಿಗೆ ಇಲ್ಲಿ ಆಯ್ಕೆಯ ಸ್ವಾತಂತ್ರ್ಯವಿಲ್ಲ. ‘ಯಾರು ಊಳಲು ಸಮರ್ಥನೋ ಅಂತವನೇ ಆಕೆಯ ಯಜಮಾನನಾಗುತ್ತಾನೆ’ ಎಂದು ಕಂಬಾರರು ಹೇಳುತ್ತಾರೆ. ಇದರ ಅರ್ಥ ಹೆಣ್ಣು ಇರುವುದೇ ಊಳಿಸಿಕೊಳ್ಳಲು ಅಂದರೆ ಆಳಿಸಿಕೊಳ್ಳಲು ಎನ್ನುವುದಾಗಿದೆ. ಇದು ಒಂದು ರೀತಿಯಲ್ಲಿ ಮನುವಾದವೇ ಆಗಿದೆ. ಹೀಗಾಗಿ ಮನುವಾದಿ ಕಂಬಾರರಿಗೂ ಮಾನವತಾವಾದಿ ಬ್ರೆಕ್ಟ್ನಿಗೂ ಯಾವುದೇ ಆಯಾಮದಲ್ಲೂ ಸಂಬಂಧ ಎನ್ನುವುದು ಇಲ್ಲವೇ ಇಲ್ಲ. ಹಾಗೇನಾದರೂ ಸಂಬಂಧವನ್ನು ಕಲ್ಪಿಸಿದರೆ ಅದು ಬ್ರೆಕ್ಟ್ನಂತಹ ಮಹಾ ಮಾನವತಾವಾದಿಗೆ ಮಾಡಿದ ಅವಮಾನವಾಗಿದೆ.
ಕಂಬಾರರ 'ಶಿವರಾತ್ರಿ' ನಾಟಕದ ದೃಶ್ಯ |
ಯಾಕೆ ಈ ಬರಗೂರು ಹೀಗೆ ಆಗಾಗ ಹೊಗಳಿಕೆಯ ತೆವಲಿಗೆ ಬೀಳುತ್ತಾರೆ? ಆಗ ಬಂಗಾರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಬಂಡಾಯ ಸಾಹಿತ್ಯ ಸಂಘಟನೆಯನ್ನೇ ಮೆಟ್ಟಲನ್ನಾಗಿ ಬಳಸಿ ಮೇಲಕ್ಕೇರಿದ ಬರಗೂರರು ಡಾ.ರಾಜಕುಮಾರ್ ಕುಟುಂಬದವರ ಶಿಪಾರಸ್ಸಿನ ಮೇರೆಗೆ ಬಂಗಾರಪ್ಪನವರ ಕೃಪಾಕಟಾಕ್ಷಕ್ಕೊಳಗಾಗಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅದೊಂದು ಸಾರ್ವಜನಿಕ ಸಮಾರಂಭದಲ್ಲಿ ಬಂಗಾರಪ್ಪನವರನ್ನು ಯದ್ವಾತದ್ವಾ ಹೊಗಳಿದ ಬರಗೂರರು ತಮಗೆ ಅಕಾಡೆಮಿಯ ಅಧಿಕಾರ ಕೊಟ್ಟು ಕಾಂಟೆಸ್ಸಾ ಕಾರನ್ನೂ ಕೊಟ್ಟ ಬಂಗಾರಪ್ಪನವರ ಋಣ ಸಂದಾಯ ಮಾಡಿದ್ದರು. ಬರಗೂರರಗಿಂತಲೂ ಒಂದು ಹೆಜ್ಜೆ ಮುಂದೆ ಹೋದ ಇನ್ನೊಬ್ಬ ಬಂಡಾಯ ಸಂಘಟನೆಯ ಆರಂಭದ ಮುಂದಾಳು ದಲಿತ ಕವಿ ಸಿದ್ದಲಿಂಗಯ್ಯನವರೂ ಸಹ ತಮ್ಮನ್ನು ಪ್ರಾಧಿಕಾರಕ್ಕೆ ಮರುನೇಮಕ ಮಾಡಿದ ಯಡಿಯೂರಪ್ಪನವರನ್ನು ‘ಆಧುನಿಕ ಬಸವಣ್ಣ’ ಎಂದು ಹೊಗಳಿ ತಮ್ಮ ಋಣ ತೀರಿಸಿಕೊಂಡರು. ಯಾವುದೋ ಬಲಪಂಥೀಯ ಬರಹಗಾರರು ಹೀಗೆ ಆಳುವವರ ಹೊಗಳುಭಟ್ಟರಾದರೆ ಬೇಸರವಿಲ್ಲ. ಅದು ಅವರ ಕಾಯಕವೆಂದು ನಿರ್ಲಕ್ಷಿಸಬಹುದು. ಆದರೆ ಸಮಾನತೆಯನ್ನು ಬೋಧಿಸುವ, ವ್ಯವಸ್ಥೆಯನ್ನು ವಿರೋಧಿಸಿ ಬಂಡಾಯದ ಬಾವುಟ ಹಾರಿಸಿ ‘ಕಾವ್ಯವಾಗಲಿ ಖಡ್ಗ’ ಎಂದು ಸಮಾಜದ ದಮನಿತರ ಬದುಕಲ್ಲಿ ಆಶಾಭಾವನೆಯನ್ನು ಹುಟ್ಟಿಸಿದವರೇ ಹೀಗೆ ಆಳುವ ವರ್ಗಗಳೊಡನೆ ರಾಜಿಮಾಡಿಕೊಂಡು ಹೊಗಳುಭಟ್ಟರಾಗಿರುವುದು ವಿಪರ್ಯಾಸಕರವಾಗಿದೆ.
ಈಗ ಮುಂದಿನ ಜ್ಞಾನಪೀಠವೇರಲು ಸಿದ್ಧತೆ ನಡೆಸಿರುವ ಡಾ.ಬರಗೂರರಿಗೆ ಡಾ.ಕಂಬಾರರ ಒಲುಮೆ ಬೇಕಾಗಿದೆ. ಜ್ಞಾನಪೀಠಕ್ಕೆ ಈಗ ಕರ್ನಾಟಕದಿಂದ ಬೇಕಾದಷ್ಟು ಜನ ಪ್ರತಿಸ್ಪರ್ಧಿಗಳಿದ್ದಾರೆ. ಕುಂವಿ ರವರ ಹೆಸರೂ ಓಡಾಡುತ್ತಿತ್ತು. ಯಾವಾಗಲೂ ಹೊಗಳಿಸಿಕೊಳ್ಳಲು ಇಷ್ಟ ಪಡುವ ಬರಗೂರರು ಸುಮ್ಮಸುಮ್ಮನೇ ಯಾರನ್ನೂ ಹೊಗಳುವುದಿಲ್ಲ. ಅದು ಅವರ ಜಾಯಮಾನವೂ ಅಲ್ಲ. ಅವರು ಯಾರನ್ನಾದರೂ ಹೊಗಳಿದರು ಎಂದರೆ ಅಲ್ಲಿ ಏನೋ ಗಮ್ಮತ್ತು ಇದೆ ಎಂತಲೇ ಅರ್ಥ. ‘ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು. ಬರಗೂರರ ಮನಸ್ಸಿನೊಳಗಿನ ಲೆಕ್ಕಾಚಾರವನ್ನು ಊಹಿಸಲು ಸಾಧ್ಯವೇ ಇಲ್ಲ, ಅವರದು ಚದುರಂಗದಾಟದ ನಡೆ’ ಎಂದು ಅವರ ಜೊತೆ ಇದ್ದು ಅವರ ಪ್ರತಿ ಪಟ್ಟುಗಳನ್ನು ಕಲಿತು ಭಿನ್ನಾಭಿಪ್ರಾಯದಿಂದಾಗಿ ಹೊರಬಂದವರೇ ಹೇಳುವ ಮಾತುಗಳಿವು. ಎಂದೂ ಬಂಡಾಯ ಸಂಘಟನೆಯಲ್ಲಿ ನೇರವಾಗಿ ಭಾಗಿಯಾಗದ, ಯಾವುದೇ ಬಂಡಾಯ ಮನೋಭಾವವನ್ನೂ ಹೊಂದಿರದ ಕಂಬಾರರನ್ನು ಇದ್ದಕ್ಕಿದ್ದಂತೆ ಅಟ್ಟಕ್ಕೇರಿಸಲಾಗಿದೆ ಎಂದರೆ ಬರುಗೂರರು ಯಾವುದೋ ಮೆಟ್ಟಿಲನ್ನು ಏರುವುದಕ್ಕೆ ಪ್ರಯತ್ನಿಸುತ್ತಿದ್ದಾರೆಂದೇ ಅರ್ಥ.
ಹೋಗಲಿ ಡಾ.ಬರಗೂರರಿಗೆ ಕಂಬಾರರ ನಾಟಕ, ಕಾವ್ಯದ ಮೇಲೆ ಅಷ್ಟೊಂದು ಅಕ್ಕರೆ ಇದ್ದಕ್ಕಿದ್ದಂತೆ ಹುಟ್ಟಿದರೆ ಅದೇನೂ ಅಪರಾಧವಲ್ಲ. ಕಂಬಾರರನ್ನು ಇಂದ್ರ ಚಂದ್ರ ಎಂದು ಹೊಗಳಿದರೂ ಅದು ಅವರ ವ್ಯಯಕ್ತಿಕ ಅನಿಸಿಕೆ. ಆದರೆ ಯಾವಾಗ ಬರಗೂರು ಕಂಬಾರರನ್ನು ಕನ್ನಡದ ಬ್ರೆಕ್ಟ್ ಎಂದು ಹೋಲಿಸಿ ಹೊಗಳಿದರೋ ಆಗ ಬ್ರೆಕ್ಟ್ ಬಗ್ಗೆ ಅಪಾರ ಗೌರವವುಳ್ಳವರಿಗೆ ಕಸಿವಿಸಿಯಾಯಿತು. ಕಾಮವಾದಿ ಕಂಬಾರರಿಗೂ ಸಮಾನತಾವಾದಿ ಬ್ರೆಕ್ಟ್ನಿಗೂ ಸಾಮ್ಯತೆಯನ್ನು ಹುಡುಕುವ ಬರಗೂರರ ಹುನ್ನಾರ ನಿಜಕ್ಕೂ ಬ್ರೆಕ್ಟ್ನಂತಹ ಮಾನವತಾವಾದಿಗೆ ಮಾಡಿದ ಅವಮಾನವಾಗಿದೆ. ಇದರರ್ಥ ಕಂಬಾರರು ಬರೆದಿದ್ದೆಲ್ಲಾ ನಿಷ್ಕೃಷ್ಟ ಎನ್ನುವುದು ಅರ್ಥವಲ್ಲ. ಕಂಬಾರರು ತಮ್ಮದೇ ಆದ ರೀತಿಯಲ್ಲಿ ಕೆಲವು ಜನಪ್ರೀಯ ನಾಟಕಗಳನ್ನು ಜಾನಪದದಿಂದಾಯ್ದು ಕೊಟ್ಟಿದ್ದಾರೆ. ಕನ್ನಡ ರಂಗಭೂಮಿಯನ್ನು ಅಷ್ಟರ ಮಟ್ಟಿಗೆ ಬೆಳೆಸಲು ಸಹಕಾರಿಯಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಕಂಬಾರರು ಬ್ರೆಕ್ಟ್ನಿಗೆ ಯಾವುದಕ್ಕೂ ಸಮ ಅಲ್ಲ ಎನ್ನುವುದನ್ನೂ ಗಟ್ಟಿದ್ವನಿಯಲ್ಲಿ ಹೇಳಲೇಬೇಕಿದೆ. ಬ್ರೆಕ್ಟ್ ಇನ್ನೂ ಸಾವಿರಾರು ವರ್ಷಕಳೆದರೂ ತನ್ನ ಬರಹಗಳ ಮೂಲಕ ಜಗತ್ತಿನಾದ್ಯಂತ ಜೀವಂತವಾಗಿರುತ್ತಾನೆ. ಜಗತ್ತಿನಲ್ಲಿ ಶೋಷಣೆ ಇರುವವರೆಗೂ ಆತನ ನಾಟಕಗಳು ಪ್ರದರ್ಶನಗೊಳ್ಳುತ್ತಲೆ ಇರುತ್ತವೆ. ಯಾಕೆಂದರೆ ಬ್ರೆಕ್ಟ್ ಬರೆದಿದ್ದು ಸಾರ್ವಕಾಲಿಕ ನಾಟಕಗಳನ್ನು. ಆದರೆ ಈಗಾಗಲೇ ಕಂಬಾರರ ನಾಟಕಗಳು ಇತಿಹಾಸ ಸೇರಿವೆ.
ಕಂಬಾರರ 'ಹರಕೆಯ ಕುರಿ' ನಾಟಕದ ದೃಶ್ಯ |
ಯಾವಾಗಲೂ ಒಮ್ಮೆ ಅಪರೂಪಕ್ಕೆ ಪ್ರದರ್ಶನಗೊಳ್ಳುವ ‘ಹರಕೆಯ ಕುರಿ’ ಎನ್ನುವ ರಾಜಕೀಯ ನಾಟಕವನ್ನು ಹೊರತು ಪಡಿಸಿ ಅವರ ಬಹುತೇಕ ನಾಟಕಗಳು ಈಗ ಅಪ್ರಸ್ತುತವಾಗಿವೆ. ಅವರ ವ್ಯಕ್ತಿಗತ ವಿಕೃತ ಕಾಮ ಕೇಂದ್ರಿತ ನಾಟಕಗಳು ಈಗ ತಮ್ಮ ಆಕರ್ಷಣೆ ಕಳೆದುಕೊಂಡಿವೆ. ಕಂಬಾರರ ನಾಟಕಗಳು ಮುಂದಿನ ತಲೆಮಾರಿಗೆ ಪಳುವಳಿಕೆ ಅಷ್ಟೇ. ಅರ್ಧ ಶತಮಾನ ಕೂಡಾ ಬಾಳಿಕೆ ಬಾರದ ನಾಟಕಗಳನ್ನು ಬರೆದ ನಾಟಕಕಾರನನ್ನು ಸಾರ್ವಕಾಲಿಕ ನಾಟಕಗಳನ್ನು ಕೊಟ್ಟ ಬ್ರೆಕ್ಟ್ಗೆ ಹೇಗೆ ಸಮೀಕರಿಸಲು ಸಾಧ್ಯ? ಕಂಬಾರರ ಬದುಕಾಗಲೀ ಇಲ್ಲವೇ ಬರಹಗಳಾಗಲೀ ಖಂಡಿತ ಆದರ್ಶ ಸಮಾಜದ ಪರಿಕಲ್ಪನೆಗೆ ಪೂರಕವಾಗಿಲ್ಲ. ಆದರೆ ಬ್ರೆಕ್ಟ್ನ ಬದುಕು ಮತ್ತು ಬರಹಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ. ಇಷ್ಟೊಂದು ತಾತ್ವಿಕವಾಗಿ, ಸಮಾಜಮುಖಿಯಾಗಿ ಬರೆದು ಬದುಕಿದ ಬ್ರೆಕ್ಟ್ನಂತಹ ವ್ಯಕ್ತಿ ಹಿಂದೆಯೂ ಹುಟ್ಟಿಲ್ಲ ಮುಂದೆ ಹುಟ್ಟುತ್ತಾನೆನ್ನುವುದಕ್ಕೆ ಯಾವುದೇ ಕುರುಹುಗಳಿಲ್ಲ. ವ್ಯವಸ್ಥೆಯೊಂದಿಗೆ ಬರಗೂರರ ಹಾಗೆ ಇಲ್ಲವೇ ಕಂಬಾರರ ಹಾಗೇ ಬ್ರೆಕ್ಟ್ ಏನಾದರೂ ರಾಜಿಮಾಡಿಕೊಂಡಿದ್ದರೆ ಆತನನ್ನು ಹಿಟ್ಲರ್ನಂತಹ ಹಿಟ್ಲರೆ ತಲೆ ಮೇಲೆ ಕೂಡಿಸಿಕೊಂಡು ರಾಷ್ಟ್ರಕವಿಯಾಗಿ ಮೆರೆಸುತ್ತಿದ್ದ. ಆದರೆ ಬ್ರೆಕ್ಟ್ ತಾನು ನಂಬಿಕೊಂಡ ತತ್ವಗಳಿಗಾಗಿ ಬದುಕಿದ ಹಾಗೂ ಬರೆದ. ಕೊನೆಯ ಉಸಿರಿರುವವರೆಗೂ ರಂಗಭೂಮಿಗಾಗಿ ಮಿಡಿದ, ದುಡಿದ ಹಾಗೂ ಮಡಿದ. ಆತನ ಆದರ್ಶದ ಒಂದು ಅಂಶವನ್ನು ಈ ನಮ್ಮ ನಿವೃತ್ತ ಹೊಗಳುಬಟ್ಟರು ಅಳವಡಿಸಿಕೊಂಡರೆ ಸಾಕು ಕರ್ನಾಟಕದ ಸಾಹಿತ್ಯ-ನಾಟಕ ಲೋಕದಲ್ಲಿ ಅಮರರಾಗುತ್ತಿದ್ದರು. ಬರಗೂರರ ಆಶಯದಂತೆ ಕರ್ನಾಟಕದಲ್ಲೂ ಬ್ರೆಕ್ಟ್ನಂತೆ ಬರೆದು ಬದುಕುವವರು ಬೇಕಾಗಿದ್ದಾರೆ. ಅಸಮಾನ ಭ್ರಷ್ಟ ವ್ಯವಸ್ಥೆಯೊಂದಿಗೆ ಅಧಿಕಾರಕ್ಕಾಗಿ ರಾಜಿಮಾಡಿಕೊಳ್ಳುವ ಯಾರೂ ಸಹ ಬ್ರೆಕ್ಟ್ನ ಅಂಗುಷ್ಟಕ್ಕೂ ಸಮವಾಗಲಾರರೆಂಬುದು ಪರಮ ಸತ್ಯ.
-ಶಶಿಕಾಂತ ಯಡಹಳ್ಳಿ
ಬ್ರೆಕ್ಟ್ ನ 'ಥ್ರೀ ಪೆನ್ನಿ ಓಪೆರಾ' ನಾಟಕದ ದೃಶ್ಯ |
ಬ್ರೆಕ್ಟ್ನ
'ಕಕೇಸಿಯನ್ ಚಾಕ್ ಸರ್ಕಲ್' ನಾಟಕದ ದೃಶ್ಯ
|
ಬ್ರೆಕ್ಟ್ನ
'ದಿ ಲೈಪ್ ಆಪ್ ಗೆಲಿಲಿಯೋ' ನಾಟಕದ ದೃಶ್ಯ
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ