“ರಾಜಕೀಯ ಅನ್ನೋದು ಕಿಟಕಿಯಿಂದ ಹಾರಿ ಬರಬಹುದು, ಅಥವಾ ದಾರಿಯಿಲ್ಲದಲ್ಲಿ ದಾರಿ ಹುಡುಕಬಲ್ಲುದು, ಅಥವಾ ದಾರಿ ಇಲ್ಲವೇ ಇಲ್ಲ ಅನ್ನೋಣ ಆಗ ಗಾಳಿಗುಂಟ ಬಂದು ನಿಮ್ಮ ಮನೆ ಹಾಗೂ ಮನಸ್ಸನ್ನ ಆಕ್ರಮಿಸಬಲ್ಲುದು” ಇದು ಕಂಬಾರರ ಹರಕೆಯಕುರಿ ನಾಟಕದ ಸಿದ್ಲಿಂಗು ಪಾತ್ರದ ಮಾತುಗಳು. ವಾಸ್ತವದಲ್ಲಿ ಈಗ ಆಗುತ್ತಿರುವುದು ಸಹ ಅದೆ. ರಾಜಕೀಯ ಅನ್ನೋದು ಊರು ಊರುಗಳನ್ನು ಪ್ರವೇಶಿಸಿದೆ, ಮನೆಮನೆಗಳನ್ನು ಹೊಕ್ಕಿದೆ, ಮನಮನಗಳಲ್ಲಿ ತನ್ನ ಬೇರುಗಳನ್ನು ಬಿಡುತ್ತಿದೆ. ಇದರಿಂದಾಗಿ ಮನೆಮನೆಗಳಲ್ಲಿ ವೈಮನಸ್ಸು, ಗ್ರಾಮ ಗ್ರಾಮಗಳಲ್ಲಿ ಅಂತಃಕಲಹ ದಿನನಿತ್ಯದ ಸಂಗತಿಯಾಗಿದೆ. ಮನಗಳನ್ನು ಒಡೆದು, ಮನೆಗಳನ್ನು ಛಿದ್ರಗೊಳಿಸಿ, ಊರುಗಳನ್ನು ಇಬ್ಬಾಗಿಸಿದ ರಾಜಕೀಯ ಪಕ್ಷಗಳು ಹಾಗೂಆಯಾ ಪಕ್ಷಗಳ ಹಿಂಬಾಲಕರು ಇಡೀ ದೇಶವನ್ನೇ ರಾಜಕೀಯದ ಆಡಂಬೋಲ ಮಾಡಿಕೊಂಡು ಬಿಟ್ಟಿವೆ.
ಯಾವ ಕ್ಷೇತ್ರವೂ ಕೂಡಾ ಈಗ ರಾಜಕೀಯದಿಂದ ಹೊರತಾಗಿಲ್ಲ. ಸಿನೆಮಾ ಕ್ಷೇತ್ರದಲ್ಲಿ ಹೆಸರು ಹಣ ಮಾಡಿದವರಂತೂ ತಮಗೆ ಅನುಕೂಲಕರವಾಗುವ ಯಾವುದೋ ಒಂದು ಪಕ್ಷದ ಜೊತೆಗೆ ಗುರುತಿಸಿಕೊಳ್ಳುತ್ತಾರೆ. ಆ ಪಕ್ಷದ ರಾಜಕಾರಣಿಗಳನ್ನು ಬೆಂಬಲಿಸುತ್ತಾರೆ. ಬೇಕಾದಷ್ಟು ಪಾರ್ಟಿಫಂಡ್ ಸಿಕ್ಕರೆ ಚುನಾವಣೆಗೂ ನಿಲ್ಲುತ್ತಾರೆ. ಹಣಕ್ಕಾಗಿ ಯಾವ ಪಕ್ಷಕ್ಕೆ ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಇಲ್ಲಿ ಹಣ, ಅಧಿಕಾರ ಮತ್ತು ಅದರಿಂದಾಗುವ ವ್ಯಕ್ತಿಗತ ಪ್ರಯೋಜನಗಳು ಮುಖ್ಯವಾಗುತ್ತವೆಯೇ ಹೊರತು ದೇಶದ ಹಿತ, ತತ್ವ ಸಿದ್ದಾಂತ, ನೈತಿಕ ಪ್ರಜ್ಞೆಗಳು ಮುಖ್ಯವೆನಿಸುವುದೇ ಇಲ್ಲ. ಹೀಗಾಗಿ ರೀಲ್‌ನ ಹೀರೋ ಹಿರೋಯಿನ್ಗಳು ಈಗ ರಿಯಲ್ ಆಗಿ ರಾಜಕೀಯದಲ್ಲಿ ತೊಡಗಿಕೊಂಡು ಯಾವುಯಾವುದೋ ಪಕ್ಷದ ಬಾವುಟ ಹಿಡಿದುಕೊಂಡು ಜನರನ್ನು ಮರಳುಮಾಡಲು ಶತಾಯಗತಾಯ ಪ್ರಯತ್ನಿಸುತ್ತಲೇ ಇದ್ದಾರೆ. ಈ ರಾಜಕೀಯದ ರೋಗ ಈಗ ಕೆಲವು ಸಾಹಿತಿಗಳಿಗೆ, ಬುದ್ದಿಜೀವಿಗಳಿಗೆ ಅಂಟಿಕೊಂಡಿದೆ. ಕೆಲವರು ತಮ್ಮ ತಮ್ಮ ಅನುಕೂಲ ನೋಡಿಕೊಂಡು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಯಾವುದೋ ಒಂದು ಪಕ್ಷದ ಪರವಾಗಿ ವಾಲುತ್ತಾರೆ. ಇಂತಹ ಭ್ರಷ್ಟ ರಾಜಕೀಯಕ್ಕೆ ಬೆಂಬಲಿಸಿ ಈ ಸಲದ ಸಂಸತ್ತಿನ ಚುನಾವಣೆಗೆ ನೇರವಾಗಿ ಪ್ರಚಾರಕ್ಕೆ ಇಳಿದವರಲ್ಲಿ ಗಿರೀಶ ಕಾರ್ನಾಡ ಹಾಗೂ ಡಾ.ಮರುಳಸಿದ್ದಪ್ಪನವರು ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರೂ ಸಹ ರಂಗಭೂಮಿಗೆ ಸಂಬಂಧಿಸಿದವರು. ಈ ಸಲ ಈ ಇಬ್ಬರಿಗೂ ಏನಾಯಿತೋ ಏನೋ ಗೊತ್ತಿಲ್ಲ ಕಾಂಗ್ರೆಸ್ ಪರ ಚುಣಾವಣಾ ಪ್ರಚಾರಕ್ಕೆ ಬೀದಿಗಿಳಿದು ಬಿಟ್ಟಿದ್ದಾರೆ. ಯಾವುದೋ ಒಂದು ಪಕ್ಷವನ್ನೋ ವ್ಯಕ್ತಿಯನ್ನೋ ಬೆಂಬಲಿಸುವುದು ಅವರವರ ವಿವೇಚನೆಗೆ ಬಿಟ್ಟಿದ್ದು ಹಾಗೂ ಅದು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಸಂವಿದಾನ ಕೊಟ್ಟ ಹಕ್ಕಾಗಿದೆ. ಆದರೆ ಯಾವಾಗ ತಮ್ಮ ವರ್ಚಸ್ಸನ್ನು ಬಳಸಿಕೊಂಡು ಇಂತಹುದೇ ಪಕ್ಷಕ್ಕೆ ಮತ ಹಾಕಿ, ಇಂತವನನ್ನೇ ಆರಿಸಿ ತನ್ನಿ ಎಂದು ಜನರ ಮೇಲೆ ಒತ್ತಾಸೆಯನ್ನು ತರುತ್ತಿರುವುದು ಜ್ಞಾನಪೀಠಿಗಳಿಗೆ ಶೋಬೆತರುವಂತಹುದಲ್ಲ.
ರಾಜಕೀಯ ಅಂದರೆ ಅಧಿಕಾರದ ಕೇಂದ್ರ. ರಾಜಕೀಯದಲ್ಲಿ ಸಕ್ರೀಯರಾದರೆ ಇಲ್ಲವೇ ರಾಜಕೀಯದವರ ಬೆಂಬಲಕ್ಕೆ ನಿಂತರೆ ಮುಂದೆ ಆಯಾ ಪಕ್ಷಗಳು ಅಧಿಕಾರಕ್ಕೆ ಬಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎನ್ನುವ ಸ್ವಾರ್ಥ ಮನೋಭಾವ ಹೊಂದಿದವರು ಸಾಂಸ್ಕೃತಿಕ ಕ್ಷೇತ್ರದಲ್ಲೂ ಬೇಕಾದಷ್ಟು ಜನರಿದ್ದಾರೆ. ದೇಶಕ್ಕೆ ಅಥವಾ ರಾಜ್ಯಕ್ಕೆ ಉತ್ತಮ ಜನಪರ ಆಡಳಿತ ಕೊಡುವಂತವರನ್ನು ಬೆಂಬಲಿಸುವ ಆಲೋಚನೆ ನಿಜವಾಗಿಯೂ ಇದ್ದವರ‍್ಯಾರೂ ಈ ಕೋಮುವಾದಿ ಭ್ರಷ್ಟ ಪಕ್ಷಗಳನ್ನು ಬೆಂಬಲಿಸಲು ಸಾಧ್ಯವೇ ಇಲ್ಲ. ಹಾಗೇನಾದರೂ ಜನವಿರೋಧಿ ಪಕ್ಷಗಳನ್ನು ಬೆಂಬಲಿಸುತ್ತಾರೆಂದರೆ ಅದರಲ್ಲಿ ದೇಶದ ಹಿತಕ್ಕಿಂತ ಇವರ ಸ್ವಾರ್ಥದ ಹಿತವೇ ಅಡಗಿದೆ ಎಂಬ ಗುಮಾನಿ ಬಾರದೇ ಇರದು. ಅವಕಾಶವಾದಿ ರಾಜಕಾರಣ ಎನ್ನುವುದು ಕೇವಲ ರಾಜಕೀಯದಲ್ಲಿ ಮಾತ್ರವಲ್ಲ ಅದು ಈಗ ಸಾಂಸ್ಕೃತಿಕ ಕ್ಷೇತ್ರದಲ್ಲೂ ವಿಷಬಳ್ಳಿಯಂತೆ ಹಬ್ಬಿ ನಿಂತಿದೆ.
ನಾಗಾಭರಣ |
ಕಳೆದ ಬಾರಿಯ ಸಂಸತ್ತಿನ ಚುನಾವಣೆಯಲ್ಲಿ ನಾಗಾಭರಣರವರು ಅನಂತಕುಮಾರರನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದರು. ಅವರ ಪರವಾಗಿ ಸಾರ್ವಜನಿಕ ವೇದಿಕೆಯಲ್ಲೇ ಮತ ಯಾಚಿಸಿದ್ದರು. ಬೀದಿ ನಾಟಕಗಳ ಮೂಲಕ ಬಿಜೆಪಿಗೆ ಮತ ಹಾಕಿ ಎಂಬ ಪ್ರಚಾರಕ್ಕೆ ಚಾಲನೆಯನ್ನೂ ಕೊಟ್ಟಿದ್ದರು. ಪ್ರತಿಭಟನೆಯ ಮಾಧ್ಯಮವಾದ ಬೀದಿ ನಾಟಕವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲು ಪ್ರೇರೇಪಿಸಿದರು. ಅನಂತಕುಮಾರರನ್ನು ಬೆಂಬಲಿಸಿದ್ದಕ್ಕೆ ಪ್ರತಿಫಲವಾಗಿ ನಾಗಾಭರಣ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ಯ ಮೊದಲ ಅಧ್ಯಕ್ಷರಾಗಿ ಆಯ್ಕೆಗೊಂಡರು. ರಾಜಕೀಯ ಪಕ್ಷಗಳನ್ನು ಬೆಂಬಲಿಸಿ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷತೆಗಳನ್ನು ಗಿಟ್ಟಿಸಿಕೊಂಡ ಕೆಲವಾರು ಸಾಹಿತಿಗಳು ಹಾಗೂ ರಂಗಕರ್ಮಿಗಳ ಪಟ್ಟಿಯೇ ಇದೆ. ಪ್ರಶಸ್ತಿ ಪುರಸ್ಕಾರ ಪಡೆದುಕೊಂಡವರೂ ಅನೇಕರಿದ್ದಾರೆ. ಇದರಿಂದಾಗಿ ರಾಜಕೀಯದವರ ಬೆಂಬಲವಿದ್ದರೆ ಬೇಕಾದಷ್ಟು ಪ್ರಯೋಜನ ಇದೆ ಎಂಬುದನ್ನು ಕಂಡುಕೊಂಡ ಇನ್ನೂ ಅನೇಕರು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸುತ್ತಾರೆ.
ಕನ್ನಡ ರಂಗಭೂಮಿಯ ಸೂಕ್ಷ್ಮ ಪ್ರಜ್ಞೆಯ ವಿಕ್ಷಿಪ್ತ ನಿರ್ದೇಶಕ ಪ್ರಕಾಶ ಬೆಳವಾಡಿಗೆ ಅದೇನು ರಾಜಕೀಯ ವೈರಸ್ ಅಂಟಿಕೊಂಡಿದೆಯೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಬಿಜೆಪಿ ಪರ ನಿಲುವು ತಳೆದು ಮೋದಿ ಜಪ ಮಾಡತೊಡಗಿದ್ದಾರೆ. ಪ್ರಗತಿಪರರ ಜೊತೆಗೆ ಬೆಳೆದ ಬೆಳವಾಡಿ ಈಗ ಕೋಮುವಾದಿ ಪಕ್ಷವನ್ನು ಬೆಂಬಲಿಸುವುದಕ್ಕೆ ರಾಜಕೀಯ ಹಿತಾಸಕ್ತಿ ಕಾರಣವೋ ಇಲ್ಲಾ ಪುರೋಹಿತಶಾಹಿ ಮನಸ್ಥಿತಿ ಕಾರಣವೋ ?
ಕನ್ನಡ ರಂಗಭೂಮಿಯ ಸೂಕ್ಷ್ಮ ಪ್ರಜ್ಞೆಯ ವಿಕ್ಷಿಪ್ತ ನಿರ್ದೇಶಕ ಪ್ರಕಾಶ ಬೆಳವಾಡಿಗೆ ಅದೇನು ರಾಜಕೀಯ ವೈರಸ್ ಅಂಟಿಕೊಂಡಿದೆಯೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಬಿಜೆಪಿ ಪರ ನಿಲುವು ತಳೆದು ಮೋದಿ ಜಪ ಮಾಡತೊಡಗಿದ್ದಾರೆ. ಪ್ರಗತಿಪರರ ಜೊತೆಗೆ ಬೆಳೆದ ಬೆಳವಾಡಿ ಈಗ ಕೋಮುವಾದಿ ಪಕ್ಷವನ್ನು ಬೆಂಬಲಿಸುವುದಕ್ಕೆ ರಾಜಕೀಯ ಹಿತಾಸಕ್ತಿ ಕಾರಣವೋ ಇಲ್ಲಾ ಪುರೋಹಿತಶಾಹಿ ಮನಸ್ಥಿತಿ ಕಾರಣವೋ ?
ಗಿರೀಶ ಕಾರ್ನಾಡ |
ಇಷ್ಟಕ್ಕೂ ಈಗ ಕಾರ್ನಾಡರು ಹಾಗೂ ಮರುಳಸಿದ್ದಪ್ಪನವರು ಬೆಂಬಲಿಸಿದ್ದು ಕಾಂಗ್ರೆಸ್‌ನ ಹುರಿಯಾಳು ನಂದನ್ ನಿಲೇಕಣಿ ಯವರನ್ನು. ಈ ನಿಲೇಕಣಿ ವೃತ್ತಪರ ರಾಜಕಾರಣಿಯೂ ಅಲ್ಲ. ಯಾವುದೇ ತತ್ವ ಸಿದ್ದಾಂತಕ್ಕೆ ಬದ್ದನಾದ ವ್ಯಕ್ತಿಯೂ ಅಲ್ಲ. ಆತನೊಬ್ಬ ಕಾರ್ಪೊರೇಟ್ ಕುಳ. ಡೆಂಕಲ್ ಪ್ರಸ್ತಾವಣೆ ಊರ್ಜಿತಗೊಂಡು ಯಾವಾಗ ಭಾರತಕ್ಕೆ ಜಾಗತೀಕರಣ ಕಾಲಿಟ್ಟಿತೋ ಆಗಿನಿಂದ ಕಾರ್ಪೋರೇಟ್ ಸೆಕ್ಟರ್ ಎನ್ನುವುದು ದೈತ್ಯವಾಗಿ ಬೆಳೆದು ನಿಂತಿತು. ಭಾರತದ ಆಡಳಿತವನ್ನು ನಿಧಾನವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡ ಈ ಸೆಕ್ಟರ್ ಸರಕಾರಗಳನ್ನೇ ತಮ್ಮ ಹಿತಾಸಕ್ತಿಗೆ ತಕ್ಕಂತೆ ಆಟವಾಡಿಸತೊಡಗಿದವು. ಈಗಲೂ ಭಾರತವನ್ನು ರಾಜಕೀಯ ಪಕ್ಷಗಳು ಅಥವಾ ರಾಜಕಾರಣಿಗಳು ಆಳುತ್ತಿದ್ದಾರೆ ಎಂದುಕೊಂಡರೆ ಅದು ನಿಜಕ್ಕೂ ನಮ್ಮ ಭ್ರಮೆಯಾಗಿದೆ. ದೇಸಿ ಮತ್ತು ವಿದೇಶಿ ಮೂಲದ ಕಾರ್ಪೋರೆಟ್ಗಳು ಇಡೀ ದೇಶವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿವೆ. ರಿಲಾಯನ್ಸ್, ಇನ್ಪೋಸಿಸ್, ಟಾಟಾ, ಕೋಲಾ, ಪೆಪ್ಸಿ
... ಹೀಗೆ ಸಾವಿರಕ್ಕೂ ಹೆಚ್ಚು ಕಂಪನಿಗಳು ನಮ್ಮ ಸರಕಾರಗಳ ಹಿಂದೆ ನಿಂತು ತಮ್ಮ ಅನುಕೂಲಕ್ಕೆ ತಕ್ಕಂತೆ ದೇಶವನ್ನು ನಡೆಸುತ್ತಿವೆ. ಈ ನಿಲೇಕಣಿ ಸಹ ಇನ್ಪೋಸಿಸ್ ಎನ್ನುವ ದೈತ್ಯ ಕಾರ್ಪೊರೇಟ್ ಕಂಪನಿಯ ಸಂಸ್ಥಾಪಕ. ಆಧಾರ್ ಕಾರ್ಡನ ರೂವಾರಿ. ಈ ಆಧಾರ್ ಕಾರ್ಡ ಎನ್ನುವುದೇ ಬಲು ದೊಡ್ಡ ಶಡ್ಯಂತ್ರ. ಅದರ ಹಿಂದೆ ಅಂತರಾಷ್ಟ್ರೀಯ ಕಾರ್ಪೋರೇಟ್ ಜಾಲದ ಪಿತೂರಿಗಳಿವೆ. ಇಡೀ ಭಾರತದ ಜನರ ಜಾತಕವನ್ನು ಬಂಡವಾಳಶಾಹಿ ಕಂಪನಿಗಳಿಗೆ ಕೊಟ್ಟು ಅವರ ಮಾರುಕಟ್ಟೆಯನ್ನು ವಿಸ್ತರಿಸಲು ಸಹಕಾರಿಯಾಗುವಂತಹ ಹುನ್ನಾರಗಳಿವೆ. ಇಂತಹ ವ್ಯಾಪಾರಿ ಸಂಸ್ಕೃತಿಯ ಬಿಳಿಕಾಲರಿನ ವ್ಯಕ್ತಿ ಈಗ ನೇರವಾಗಿ ಚುನಾವಣೆಗೆ ನಿಂತಿದ್ದಾನೆ. ಈತನ ವಿರುದ್ದ ಬಿಜೆಪಿಯಿಂದ ನಿಂತಿದ್ದು ಅದೇ ನಾಜೂಕಯ್ಯ ಪರಮಭ್ರಷ್ಟ ಅನಂತಕುಮಾರ್. ಈ ಇಬ್ಬರ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಿಲೇಕಣಿ ಪರವಾಗಿ ಈ ನಮ್ಮ ಕಾರ್ನಾಡರು ಮರಳುಸಿದ್ದಪ್ಪನವರನ್ನು ಸೇರಿಸಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮೊದಲಿನಿಂದಲೂ ಕಾರ್ನಾಡರಿಗೆ ವಿದೇಶಿ ಸಂಸ್ಕೃತಿ, ವಿದೇಶಿಮಯ ಕಾರ್ಪೋರೇಟ್ ವಿಕೃತಿಗಳನ್ನು ಕಂಡರೆ ಅದೆಂತಹುದೋ ವ್ಯಾಮೋಹ. ಎಂದೂ ಯಾವುದೇ ಜನಪರ ಹೋರಾಟಗಳಲ್ಲಿ ಭಾಗವಹಿಸದ ಈ ಜ್ಞಾನಪೀಠ ಯಾವಾಗ ಬಾರ್ ಡಾನ್ಸರಗಳಿಗೆ ಕೆಲಸ ಇಲ್ಲದಾಯಿತೋ ಆಗ ಅವರ ಪರವಾಗಿ ಬೀದಿಗಿಳಿದರು. ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಬೇಕೆಂದು ರಚ್ಚೆಹಿಡಿದರು. ಅಹೋರಾತ್ರಿ ಬಾರ್ಗಳನ್ನು ಬೆಂಗಳೂರಿನಲ್ಲಿ ತೆರೆದಿಡಬೇಕೆಂದು ಒತ್ತಾಯಿಸಿದರು. ಇದರಿಂದಾಗಿಯೇ ಗೊತ್ತಾಗುತ್ತದೆ ಕಾರ್ನಾಡರ ಮನಸ್ಥಿತಿ ಎಂತಹುದೆಂದು. ಕಾರ್ನಾಡರ ಮುಕ್ತ ಸಂಸ್ಕೃತಿಯ ಉದಾಹರಣೆಯನ್ನು ನೋಡಬೇಕೆಂದರೆ ‘ರಂಗಶಂಕರ’ಕ್ಕೆ ಹೋಗಿ ನೋಡಿ. ಅಲ್ಲಿ ಪ್ರಾದೇಶಿಕತೆ ಎನ್ನುವುದು ಮಾಯವಾಗಿ ಎಲ್ಲವೂ ವಿದೇಶಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಕನ್ನಡ ನಾಟಕಗಳಿಗಿಂತ ಇಂಗ್ಲೀಷ್ ನಾಟಕಗಳೇ ಹೆಚ್ಚು ಪ್ರದರ್ಶನಗೊಳ್ಳುತ್ತಿವೆ. ರಂಗಶಂಕರದ ಈ ಕನ್ನಡ ವಿರೋಧಿ ಸಂಸ್ಕೃತಿಗೆ ಕಾರ್ನಾಡರ ಕೊಡುಗೆ ಹಾಗೂ ಪ್ರೇರಣೆ ತುಂಬಾ ಇದೆ. ಮೊದಲಿನಿಂದಲೂ ಕಾರ್ಪೋರೇಟ್ ಸಂಸ್ಕೃತಿಯ ಹರಿಕಾರರಾದ ಕಾರ್ನಾಡರಿಗೆ ಕಾರ್ಪೋರೇಟ್ ದಿಗ್ಗಜನೊಬ್ಬ ಚುನಾವಣೆಗೆ ನಿಂತಿದ್ದು ನಿಜಕ್ಕೂ ಹಾಲು ಕುಡಿದಷ್ಟು ಸಂತಸವಾಯಿತು. ಅದೂ ಅತ್ಯಂತ ಶ್ರೀಮಂತನಾಗಿರುವ ನಿಲೇಕಣಿಯ ಜೊತೆಗೆ ಅದೇನು ಒಳ ಒಪ್ಪಂದವಾಯಿತೋ ಏನೋ ಕಾರ್ನಾಡರು ನಿಲೇಕಣಿ ಪರವಾಗಿ ಓಟು ಕೇಳಲು ಬೀದಿ ಬೀದಿ ಸುತ್ತತೊಡಗಿದರು.
ಕಾರ್ನಾಡರಿಗೆ ಜ್ಞಾನಪೀಠ ಬಂದಾಗಿನಿಂದ ತಲೆ ದೇಹದ ಮೇಲೆ ನಿಲ್ಲುತ್ತಿಲ್ಲ. ಕೀರ್ತಿ ಶನಿ ಹೆಗಲೇರಿ ಕುಳಿತಿದೆ. ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರರನ್ನು ಮೂರನೆಯ ದರ್ಜೆ ನಾಟಕಕಾರ ಎಂದು ಕಾರ್ನಾಡರು ಮೂದಲಿಸಿದಾಗಲೇ ಗೊತ್ತಾಗಿತ್ತು ಅವರಿಗೆ ಶ್ರೇಷ್ಟತೆಯ ವ್ಯಸನ ಎನ್ನುವುದು ಮನೋರೋಗವಾಗಿ ಕಾಡುತ್ತಿದೆ ಎಂದು. ಇಂತಹ ಕಾರ್ನಾಡರಿಗೆ ಒಂದು ಅಂತರಂಗದ ಆಸೆ ಇದೆ. ಅದು ನೊಬೆಲ್ ಪ್ರಶಸ್ತಿ. ಅದು ಅಂತರಾಷ್ಟ್ರೀಯ ಪ್ರಶಸ್ತಿಯಾಗಿದ್ದರಿಂದ ಅದನ್ನು ಪಡೆಯುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಸಾಯುವುದರೊಳಗೆ ಅದನ್ನು ಪಡೆಯಲೇಬೇಕೆಂಬುದು ಅವರ ಅಂತಿಮ ಆಸೆಯಾಗಿದೆ. ‘ನೈಪಾಲರಂತವರಿಗೆ ನೊಬೆಲ್ ಬಂದಿದ್ದು ತಪ್ಪು’ ಎಂದು ಹೇಳಿ ನೈಪಾಲರನ್ನು ಅವಮಾನಿಸಿದ್ದು ತನಗೆ ಬಂದಿಲ್ಲವಲ್ಲ ಎನ್ನುವ ಅಸೂಯೆಯಿಂದಲೇ. ಜೊತೆಗೆ ಕನ್ನಡದ ಬಹುತೇಕ ಸಾಹಿತಿಗಳು ಹಾಗೂ ಪ್ರಜ್ಞಾವಂತರು ‘ಕಾರ್ನಾಡರಿಗೆ ಜ್ಞಾನಪೀಠ ಪುರಸ್ಕಾರ ಸಿಕ್ಕಿದ್ದು ಅವರ ಯೋಗ್ಯತೆಯಿಂದಲ್ಲ ಅವರ ಸಾಂಸ್ಕೃತಿಕ ರಾಜಕಾರಣದಿಂದ’ ಎಂದು ಆಡಿಕೊಂಡಿದ್ದಾರೆ. ಕುಂ.ವೀರಭದ್ರಪ್ಪರವರಂತೂ ‘ಕಾರ್ನಾಡ ಹಾಗೂ ಅನಂತಮೂರ್ತಿಯವರಿಬ್ಬರೂ ಜ್ಞಾನಪೀಠ ಪ್ರಶಸ್ತಿಗೆ ಅನರ್ಹರು’ ಎಂದು ಬಹಿರಂಗವಾಗಿಯೇ ಆರೋಪಿಸಿ ಒಂದು ಚರ್ಚೆಯನ್ನೇ ಹುಟ್ಟುಹಾಕಿದ್ದರು. ‘ಕಾರ್ನಾಡ ಒಬ್ಬ ಶ್ರೇಷ್ಟ ಬರಹಗಾರನೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ” ಎಂದು ಚಂದ್ರಶೇಖರ ಪಾಟೀಲ್ ಮಾಧ್ಯಮದವರ ಮುಂದೇ ಹೇಳಿದರು. ಹೀಗಾಗಿ ಈ ಎಲ್ಲಾ ಆಪಾದನೆ ಹಾಗೂ ಆರೋಪಗಳನ್ನು ನೊಬೆಲ್ ಪ್ರಶಸ್ತಿ ಹೊಡೆದು ಹಾಕಬಲ್ಲುದು ಎನ್ನುವ ಭ್ರಮೆಯಲ್ಲಿರುವ ಕಾರ್ನಾಡರು ತಮ್ಮ ಬದುಕಿನ ಅಂತಿಮ ಆಸೆಯನ್ನು ಈಡೇರಿಸಿಕೊಳ್ಳಲು ಕಾರ್ಪೋರೇಟ್ ದೊರೆಗಳ ಬೆಂಬಲಕ್ಕೆ ನಿಂತಿದ್ದಾರೆ. ಯಾಕೆಂದರೆ ಅಂತರಾಷ್ಟ್ರೀಯವಾಗಿ ಪ್ರಭಾವ ಬೀರಬಹುದಾದ ಶಕ್ತಿ ನಿಲೇಕಣಿಯವರಿಗೆ ಇದೆ. ಈ ನಿಲೇಕಣಿ ಈ ಚುನಾವಣೆಯಲ್ಲಿ ಗೆದ್ದರೆ, ಕಾಂಗ್ರೆಸ್ ಕೇಂದ್ರದಲ್ಲಿ ಸರಕಾರ ರಚಿಸಿದರೆ ತನ್ನ ನೊಬೆಲ್ ಪ್ರಶಸ್ತಿಯ ಹಾದಿ ಸುಗಮವಾಗುತ್ತದೆಂಬುದನ್ನು ಕಾರ್ನಾಡರು ಚೆನ್ನಾಗಿ ಬಲ್ಲರು. ಆದ್ದರಿಂದ ಏಸಿ ರೂಮನ್ನು ತ್ಯಜಿಸಿ ಉರಿಬಿಸಿಲಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಮತಯಾಚಿಸಲು ಸುತ್ತುತ್ತಿದ್ದಾರೆ. ನೊಬೆಲ್ ಪ್ರಶಸ್ತಿ ಅಂದ್ರೆ ಸುಮ್ಮನೇನಾ?
ಹೋಗಲಿ ಕಾರ್ನಾಡರಿಗೆ ನಿಲೇಕಣಿಯವರ ಮೇಲೆ ವ್ಯಾಮೋಹವಿದ್ದರೆ ‘ಅವರೊಬ್ಬರನ್ನೇ ಚುನಾವಣೆಯಲ್ಲಿ ಬೆಂಬಲಿಸುತ್ತೇನೆ’ ಎಂದು ಹೇಳಬಹುದಾಗಿತ್ತು. ಹಿಂದೆ ಜೀವರಾಜ ಆಳ್ವರವರು ಬಿಜೆಪಿ ಪಕ್ಷದಿಂದ ಚುನಾವಣೆಗೆ ನಿಂತಿದ್ದಾಗ ರಂಗಭೂಮಿಯಿಂದ ಅವರ ಬೆಂಬಲಕ್ಕೆ ನಿಂತವರು ಸಿಜಿಕೆ. ‘ರಾಜಕೀಯದವರನ್ನು ಬೈಯುವ ನೀವೇಕೆ ಕೋಮುವಾದಿ ರಾಜಕೀಯ ಪಕ್ಷದ ಬೆಂಬಲಕ್ಕೆ ನಿಂತಿದ್ದೀರಿ’ ಎಂದು ಸಿಜಿಕೆಯವರನ್ನು ಕೇಳಿದಾಗ, ”ರೀ ಯಾವ ಪಕ್ಷ ಕಟ್ಟಿಕೊಂಡು ನನಗೇನಾಗಬೇಕಿದೆ. ಎಲ್ಲಾ ಕಳ್ಳರೇ, ಆದರೆ ಜೀವರಾಜ ಆಳ್ವ ನನ್ನ ಆತ್ಮೀಯ ಸ್ನೇಹಿತರು. ನನಗೆ ಪಕ್ಷ ರಾಜಕೀಯಕ್ಕಿಂತ ಸ್ನೇಹ ಮಾತ್ರ ಮುಖ್ಯ. ಆದ್ದರಿಂದ ಅವರನ್ನು ಬೆಂಬಲಿಸುವೆ. ಆಳ್ವ ಯಾವುದೇ ಪಕ್ಷದಲ್ಲಿದ್ದರೂ ನನ್ನ ಬೆಂಬಲ ಇದ್ದೇ ಇದೆ. ರಾಜಕೀಯಕ್ಕಿಂತ ಗೆಳೆತನ ದೊಡ್ಡದು...” ಎಂದು ಹೇಳಿದರು. ಸಿಜಿಕೆಗೆ ಪಕ್ಷನಿಷ್ಟೆಗಿಂತ ಸ್ನೇಹನಿಷ್ಟೆ ದೊಡ್ಡದಾಗಿತ್ತು. ಆದರೆ.... ನಮ್ಮ ಕಾರ್ನಾಡರಿಗೆ ಈ ಯಾವ ಸ್ನೇಹ ನಿಷ್ಟೆಯೂ ಇಲ್ಲ. ನಿಲೇಕಣಿ ಅವರನ್ನಷ್ಟೇ ಅಲ್ಲ ಇಡೀ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತೇನೆ. ಎಲ್ಲರೂ ಕಾಂಗ್ರೆಸ್ಗೆ ಓಟ್ ಹಾಕಬೇಕು. ಈ ಆಪ್, ಜೆಡಿಎಸ್ ಪಕ್ಷಗಳು ಕಾಂಗ್ರೆಸ್‌ನ ಗೆಲ್ಲುವ ಹಾದಿಯಲ್ಲಿ ಅಡೆತಡೆಗಳು. ಎಲ್ಲರೂ ಒಂದಾಗಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಬೆಂಬಲಿಸಬೇಕು” ಎಂದು ಮಾಧ್ಯಮಗಳ ಮುಂದೆ ಉಡಾಫೆಯಾಗಿ ಹೇಳುತ್ತಾ ಚುನಾವಣಾ ಪ್ರಚಾರ ಮಾಡತೊಡಗಿದ್ದಾರೆ. ಗಿರೀಶ್ ಕಾರ್ನಾಡರ ಪ್ಯಾಸಿಸ್ಟ್ ಪಾಳೇಗಾರಿಕೆ ದೋರಣೆ ಮಾಧ್ಯಮಗಳ ಮೂಲಕ ಬಟಾಬಯಲಾಗಿ ಹೋಯಿತು. ಬುದ್ದಿಜೀವಿ ಎನ್ನುವ ಮುಖವಾಡ ಕಳಚಿಬಿದ್ದಿತು.
ಡಾ.ಮರುಳಸಿದ್ದಪ್ಪ |
ಅಚ್ಚರಿಯ ವಿಷಯವೆಂದರೆ ಕಾರ್ನಾಡರ ಜೊತೆಗೆ ಓಟ್ ಕೇಳುವಾಟದಲ್ಲಿ ಡಾ.ಮರುಳಸಿದ್ದಪ್ಪನವರೂ ಸಾಥ್ ಕೊಡುತ್ತಿರುವುದು. ಇವರಿಗೆಂತಹ ಮರುಳೋ ಏನೋ? ಮರುಳಸಿದ್ದಪ್ಪನವರ ಮಾವನವರಾದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಎಂದೂ ರಾಜಕಾರಣಕ್ಕೆ ಇಳಿದವರಲ್ಲ. ಬಹಿರಂಗವಾಗಿ ಯಾವುದೇ ರಾಜಕಾರಣಿಗಳನ್ನಾಗಲೀ ರಾಜಕೀಯ ಪಕ್ಷಗಳನ್ನಾಗಲೀ ಬೆಂಬಲಿಸಿದವರಲ್ಲ. ಆದರೆ.. ಯಾಕೆ ಮರುಳಸಿದ್ದಪ್ಪನವರು ಕಾರ್ನಾಡರ ಜೊತೆ ಸೇರಿ ನಿಲೇಕಣಿಯವರ ಪರ ಬೀದಿಗಿಳಿದರು. ಯಾಕೆಂದರೆ ಈ ಮರುಳಸಿದ್ದಪ್ಪನವರಿಗೆ ಕೋಮುವಾದಿ ಬಿಜೆಪಿಯ ಮೇಲೆ ಅಸಾಧ್ಯ ಸಿಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾರ್ನಾಡರು ‘ಬಿಜೆಪಿ ಸೋಲಿಸಬೇಕಾದರೆ ಕಾಂಗ್ರೆಸ್ ಬೆಂಬಲಿಸಲೇಬೇಕು’ ಎಂದು ನಂಬಿಸಿದ್ದಾರೆ. ಹಾಗೂ ಸಿದ್ದರಾಮಯ್ಯ ಸಿಎಂ ಆದ ಮೇಲೆ ಪ್ರಶಸ್ತಿ ಆಯ್ಕೆ ಕಮಿಟಿ, ಸಾಂಸ್ಕೃತಿಕ ನೀತಿ ನಿರೂಪನೆ ಹಾಗೂ ಅಕಾಡೆಮಿಗಳ ಅಧ್ಯಕ್ಷ ಸದಸ್ಯರ ಆಯ್ಕೆ ಮಾಡುವಲ್ಲಿ ಮರುಳಸಿದ್ದಪ್ಪ ಹಾಗೂ ಬರಗೂರರಂತಹ ಬುದ್ದಿಜೀವಿಗಳಿಗೆ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ನತ್ತ ಮರುಳಸಿದ್ದಪ್ಪನವರು ವಾಲಿದ್ದಾರೆ. ಆದರೆ ಮರುಳಸಿದ್ದಪ್ಪನವರಿಗೆ ಕೆಲವೊಂದು ಹುನ್ನಾರಗಳು ಅರ್ಥವಾಗುವುದೇ ಇಲ್ಲ.
ಈ ಕೋಮುವಾದಿಗಳಿಗಿಂತಲೂ ಈ ಕಾರ್ಪೊರೇಟ್ ಕಂಪನಿಗಳು ದೇಶದ ಸ್ಥಿರತೆ ಮತ್ತು ಭದ್ರತೆಗೆ ಬಲು ದೊಡ್ಡ ಅಪಾಯಕಾರಿಯಾದವರು. ಕೋಮುವಾದಿಗಳು ಧರ್ಮಾಧಾರಿತ ದ್ವೇಷದ ಬೆಂಕಿ ಹಚ್ಚಿದರೆ ಈ ಕಾರ್ಪೋರೇಟ್ ಕಂಪನಿಗಳು ಇಡೀ ದೇಶವನ್ನೇ ತಮ್ಮ ವ್ಯಾಪಾರಿ ಲಾಭಕ್ಕಾಗಿ ಯಾರಿಗೆ ಬೇಕಾದರೂ ಮಾರಿಬಿಡುತ್ತಾರೆ. ಈ ರಾಜಕೀಯದವರ ಭ್ರಷ್ಟತೆ ನಮ್ಮ ಕಣ್ಣಿಗೆ ಕಾಣುವಂತಹುದು. ಆದರೆ ಈ ಜಾಗತೀಕರಣದ ಹರಿಕಾರರಾದ ಕಾರ್ಪೋರೇಟ್ ಕಂಪನಿಗಳು ಯಾರ ಕಣ್ಣಿಗೂ ಕಾಣದ ಮಾಯಾವಿಗಳು. ವೈಟ್ ಕಾಲರ್ ಕುತಂತ್ರಿಗಳು. ಉದಾಹರಣೆಗೆ ನಮ್ಮ ಭ್ರಷ್ಟ ನಾಯಕರು ಎಷ್ಟು ಆಸ್ತಿಯನ್ನು ಭ್ರಷ್ಟಾಚಾರದಿಂದ ಲೂಟಿಹೊಡೆದು ಅಕ್ರಮವಾಗಿ ಸಂಪಾದಿಸಿದ್ದಾರೋ ಅದಕ್ಕಿಂತ ಹೆಚ್ಚು ಆಸ್ತಿಯನ್ನು ಈ ನಿಲೇಕಣಿ ಕಾರ್ಪೋರೇಟ್ ಸೆಕ್ಟರನಲ್ಲಿ ಸಂಪಾದಿಸಿದ್ದಾರೆ. ಒಬ್ಬ ನಿಲೇಕಣಿ ಈ ಚುನಾವಣೆಯಲ್ಲಿ ಜಯಗಳಿಸಿದರೆ ಸಾಕು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಪೋರೇಟ್ ಕಂಪನಿಗಳ ಸಿಇಓಗಳು ಅಭ್ಯರ್ಥಿಗಳಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ.
ಈಗಲೂ ಈ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸಾವಿರಾರು ಕೋಟಿ ಹಣ ಹರಿದು ಬರುತ್ತಿರುವುದೇ ಅಂಬಾನಿ, ಟಾಟಾ, ಇನ್ಪೋಸಿಸ್ನಂತಹ ಕಾರ್ಪೋರೇಟ್ ಕಂಪನಿಗಳಿಂದ. ಒಬ್ಬ ಅಂಬಾನಿಯ ಅನುಕೂಲಕ್ಕಾಗಿ ಕೇಂದ್ರ ಪೆಟ್ರೋಲಿಯಂ ಖಾತೆಯ ಮಂತ್ರಿಯನ್ನೇ ಬದಲಾಯಿಸಿ ಅಂಬಾನಿಗೆ ಅನುಕೂಲಕರವಾಗಿದ್ದ ಮೋಯ್ಲಿಯನ್ನು ಇದೇ ಕಾಂಗ್ರೆಸ್ ಪಕ್ಷ ಪೆಟ್ರೋಲಿಯಂ ಮಂತ್ರಿಗಿರಿಗೇರಿಸಿತು. ಆತ ಮಂತ್ರಿಯಾಗಿದ್ದೇ ತಡ ಅಂಬಾನಿಯ ತೈಲ ವ್ಯಾಪಾರೋಧ್ಯಮ ತನ್ನ ಬೆಲೆಯನ್ನು ಏರಿಸಿಕೊಂಡು ಸಾಮಾನ್ಯ ಜನರಿಗೆ ಹೊರೆಹೊರೆಸಿತು. ವಿಪರ್ಯಾಸ ನೋಡಿ ಇದೇ ರಿಲಾಯನ್ಸ್ ಕಂಪನಿ ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರಿಗೂ ಹಣದ ಹೊಳೆಯನ್ನು ಚುನಾವಣೆಗಾಗಿ ಹರಿಸುತ್ತಿದೆ. ಮೋದಿ ಹಾಗೂ ರಾಹುಲ್ ಇಬ್ಬರೂ ಅಂಬಾನಿಯ ಜೇಬಿನಲ್ಲಿದ್ದಾರೆಂದು ಕೆಜ್ರಿವಾಲ ಹೇಳುತ್ತಿದ್ದಾರೆ. ಅಂದರೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಪೂರಕವಾಗಿರಬೇಕು. ಅಂತಹುದೊಂದು ವ್ಯವಸ್ಥೆಯನ್ನು ಅಂಬಾನಿಯಂತವರು ಮಾಡಿಕೊಳ್ಳುತ್ತಾರೆ. ಗೆದ್ದು ಗದ್ದುಗೆ ಏರಿದ ಯಾವುದೇ ಪಕ್ಷ ಕಾರ್ಪೋರೇಟ್ ಕಂಪನಿಗಳ ಋಣ ತೀರಿಸಲು ಅವುಗಳ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾಗುತ್ತದೆ. ಹೆಸರಿಗೆ ಮಾತ್ರ ಯಾವುದೋ ಪಕ್ಷ ಆಳುತ್ತದೆ. ಆದರೆ ಬಸಿರು ಮಾತ್ರ ಕಾರ್ಪೋರೇಟ್ ಕಂಪನಿಗಳದ್ದು ತುಂಬುತ್ತದೆ. ಅಕಸ್ಮಾತ್ ನಿಲೇಕಣಿಯಂತಹ ಕಾರ್ಪೋರೇಟ್ ಕಂಪನಿಯ ದಿಗ್ಗಜ ಗೆದ್ದು ಕೇಂದ್ರದಲ್ಲಿ ಮಂತ್ರಿಯಾದರೆ ಕಾರ್ಪೋರೇಟ್ ಕಂಪನಿಗಳಿಗಂತೂ ಲೂಟಿಯ ಹಬ್ಬವೋ ಹಬ್ಬ. ಇಂತಹ ರಾಜಕೀಯ ಸೂಕ್ಷ್ಮಗಳು ಯಾಕೆ ಮರುಳಸಿದ್ದಪ್ಪನಂತಹ ಪ್ರಜ್ಞಾವಂತ ಸಾಹಿತಿಗಳಿಗೆ ಅರ್ಥವಾಗುವುದಿಲ್ಲ? ಎಲ್ಲ ಪ್ರಗತಿಪರ ವ್ಯಕ್ತಿಗಳು ಹಾಗೂ ಸಂಘಟನೆಗಳು ಈಗ ಕೋಮುವಾದಿ ಶಕ್ತಿಗಳನ್ನು. ಭ್ರಷ್ಟಾಚಾರಿ ಪಕ್ಷಗಳನ್ನು ಹಾಗೂ ಕಾರ್ಪೊರೇಟ್ ಕಂಪನಿಗಳ ವಕ್ತಾರರನ್ನು ಸಮಾನವಾಗಿ ವಿರೋಧಿಸಬೇಕಿದೆ. ಈ ಎಲ್ಲರೂ ಜಿಗಣಿಗಳೇ ಜನಸಾಮಾನ್ಯರ ರಕ್ತಕ್ಕೆ. ಇದನ್ನು ಮರುಳಸಿದ್ದಪ್ಪನಂತವರು ಅರ್ಥಮಾಡಿಕೊಳ್ಳಬೇಕಿದೆ.
ಕಾರ್ನಾಡರಿಗೆ ಕಾಂಗ್ರೆಸ್ ನಿಷ್ಟೆ ಇದ್ದರೆ ಇಟ್ಟುಕೊಳ್ಳಲಿ ಬೇಡವೆಂದವರಾರು? ಆದರೆ ಬೇರೆ ಪಕ್ಷಗಳೇ ಇರಬಾರದು ಎಂದು ಪ್ಯಾಸಿಸ್ಟ್ ರೀತಿಯಲ್ಲಿ ಹೇಳಿಕೆಗಳನ್ನು ಕೊಡುವುದೇ ಮೊದಲು ಜನವಿರೋಧಿಯಾಗಿದೆ. ಬಿಜೆಪಿ ಕೋಮುವಾದಿ ಪಕ್ಷ ಅದನ್ನು ಸೋಲಿಸಬೇಕು ಎನ್ನುವುದರಲ್ಲಿ ಯಾವುದೇ ಪ್ರಗತಿಪರರಲ್ಲಿ ಬಿನ್ನಾಭಿಪ್ರಾಯವಿಲ್ಲ. ಆದರೆ ಕಾಂಗ್ರೆಸ್ ಏನೂ ಪವಿತ್ರವಾದ ಪಕ್ಷ ಅಲ್ಲವಲ್ಲ. ಭ್ರಷ್ಟಾಚಾರದ ಹಗರಣಗಳಲ್ಲಿ ಈ ಎರಡೂ ಪಕ್ಷಗಳೂ ಮುಂಚೂಣಿಯಲ್ಲಿವೆಯಲ್ಲಾ. ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಚುನಾವಣೆಗಾಗಿ ಲಂಚ ಪಡೆದು ಸಿಕ್ಕಿ ಬೀಳಲಿಲ್ಲವೇ. ಕರ್ನಾಟಕದಲ್ಲಿ ಬಿಜೆಪಿ ಯಡಿಯೂರಪ್ಪ ಭ್ರಷ್ಟಾಚಾರದ ಎಲ್ಲಾ ಗಡಿಗಳನ್ನು ದಾಟಿ ಮೆರೆದರಲ್ಲವೇ. ಬಳ್ಳಾರಿ ರೆಡ್ಡಿಗಳು ಭ್ರಷ್ಟತೆಯ ಉತ್ತುಂಗವನ್ನು ತಲುಪಿದರಲ್ಲವೇ. ಇಲ್ಲಿ ಕಡಿಮೆ ಭ್ರಷ್ಟ ಹೆಚ್ಚು ಭ್ರಷ್ಟ ಎನ್ನುವ ಮಾನದಂಡಗಳು ಅನುಪಯುಕ್ತ. ಇಡೀ ದೇಶವನ್ನೇ ಗೆದ್ದಲಿನ ಹಾಗೆ ತಿಂದು ತೇಗಿದವರು ಈ ರಾಜಕೀಯ ಪಕ್ಷಗಳು. ಅಧಿಕಾರ ಸಿಕ್ಕರೆ ಸಾಕು ನುಂಗುವುದನ್ನೇ ಕಾಯಕಮಾಡಿಕೊಂಡವರು. ಇಂತಹ ಎರಡು ಬ್ರಹ್ಮಾಂಡ ಪಾತಕ ಪಕ್ಷಗಳಲ್ಲಿ ಒಂದನ್ನು ವಿರೋಧಿಸಿ ಇನ್ನೊಂದನ್ನು ಬೆಂಬಲಿಸುವುದೇ ಆತ್ಮದ್ರೋಹ ಮಾಡಿಕೊಂಡಂತೆ. ಜೊತೆಗೆ ಆಪ್ ನಂತಹ ಪಕ್ಷಗಳು ಇಲ್ಲವೇ ಇನ್ನೂ ತಾತ್ವಿಕ ತಳಹದಿಯನ್ನು ಹೊಂದಿರುವ ಎಡಪಕ್ಷಗಳು ಯಾಕೆ ಅಧಿಕಾರಕ್ಕೆ ಬರಬಾರದು?. ಜನರ ಕಷ್ಟಕ್ಕಾಗುವ ವ್ಯಕ್ತಿಗಳ್ಯಾಕೆ ಆರಿಸಿ ಬರಬಾರದು. ಇಂತಹ ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿಗಳ ಪರವಾಗಿ ಈ ಸೋ ಕಾಲ್ಡ್ ಬುದ್ದಿಜೀವಿ ಕಾರ್ನಾಡರು ಬೆಂಬಲಿಸಿ ಯಾಕೆ ಬೀದಿಗಿಳಿಯಬಾರದು?. ಭಾರತದಾದ್ಯಂತ ಕನಿಷ್ಟ ಮೂವತ್ತೇ ಜನ ಜನಪರ ಕಾಳಜಿ ಹೊಂದಿರುವ ನೈತಿಕ ಪ್ರಜ್ಞೆ ಇರುವಂತವರು ಅಸೆಂಬ್ಲಿಗೆ ಆರಿಸಿ ಹೋದರೂ ಸಾಕು ಜನರ ಪರವಾಗಿ ಹೋರಾಡಲು ಹಾಗೂ ಈ ಭ್ರಷ್ಟ ಪಕ್ಷಗಳ ಹುನ್ನಾರಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತಲ್ಲ.
ಕನ್ನಡ ಸಾಂಸ್ಕೃತಿಕ ಲೋಕದ ಬುದ್ದಿಜೀವಿಗಳು |
ಈ ಯಾವ ಸರಳ ಹೊಳಹುಗಳೂ ಕಾರ್ನಾಡರಂತವರಿಗೆ ಹೊಳೆಯುವುದೇ ಇಲ್ಲ. ಅವರ ಸ್ವಾರ್ಥ ಹಿತಾಸಕ್ತಿಯ ಮಹತ್ವಾಂಕಾಂಕ್ಷೆಯ ಮುಂದೆ ಜನಪರ ಕಾಳಜಿ ಎನ್ನುವುದು ತೃಣ ಸಮಾನವಾಗಿದೆ. ಹೀಗಾಗಿ ಶಕ್ತ ರಾಜಕಾರಣದ ವಿಕ್ಷಿಪ್ತ ಖಯಾಲಿಗೆ ಬಿದ್ದು ತಮ್ಮ ನಿಜವಾದ ಸಾಮಾಜಿಕ ಹೊಣೆಗಾರಿಕೆಯನ್ನು ಕಾರ್ನಾಡರು ಮರೆತಿದ್ದಾರೆ. ಒಂದು ಭ್ರಷ್ಟ ಪಕ್ಷವನ್ನು ಸೋಲಿಸಲು ಇನ್ನೊಂದು ಭ್ರಷ್ಟ ಪಕ್ಷದ ಪರವಾಗಿ ಓಟ್ ರಾಜಕೀಯ ಮಾಡುತ್ತಿದ್ದಾರೆ. ಅನಂತಮೂರ್ತಿ ಸಹ ಇದೇ ರೀತಿ ರಾಜಕೀಯ ಪಕ್ಷದವರ ಪರ ನಿಂತು ತಮ್ಮ ವರ್ಚಸ್ಸನ್ನು ಕಳೆದುಕೊಂಡರು. ಹೊಸನಾಡೊಂದನ್ನು ಕಟ್ಟುತ್ತೇನೆ ಎಂದು ತಮ್ಮ ಕಾವ್ಯದಲ್ಲಿ ಸಾರಿದ ಗೋಪಾಲಕೃಷ್ಣ ಅಡಿಗರು ‘ಜನಸಂಘ’ದಿಂದ ಚುನಾವಣೆಗೆ ನಿಂತು ಸೋತು ತಮ್ಮ ಹೆಸರನ್ನು ಹಾಳುಮಾಡಿಕೊಂಡರು. ಇತ್ತೀಚೆಗೆ ಚಂದ್ರಶೇಖರ ಪಾಟೀಲರವರೂ ಸಹ ರಾಜಕೀಯ ಉಮೇದಿಗೆ ಬಿದ್ದು ಚುನಾವಣೆಗೆ ನಿಂತು ಸೋತು, ಭ್ರಷ್ಟರ ಪಕ್ಷವಾಗ ಕೆಜಿಪಿ ಸೇರಿ ಅಳಿದುಳಿದ ಮರ್ಯಾದೆಂiiನ್ನು ಕಳೆದುಕೊಂಡರು. ಇಂತಹ ಅನೇಕ ಉದಾಹರಣೆಗಳನ್ನು ನೋಡಬಹುದಾಗಿದೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಸಮಾಜದ ಪಂಚೇಂದ್ರಿಯಗಳಿದ್ದಂತೆ. ಆಳುವ ವರ್ಗಗಳಿಂದ ಜನಸಾಮಾನ್ಯರಿಗೆ ಅನ್ಯಾಯವಾದಾಗಲೆಲ್ಲಾ ಅದನ್ನು ತಮ್ಮದೆ ಮಾಧ್ಯಮಗಳ ಮೂಲಕ ಪ್ರತಿಭಟಿಸಬೇಕು. ಯಾವಾಗಲೂ ಸಮಾಜದ ಸ್ವಾಸ್ಥಕ್ಕಾಗಿ ತಮ್ಮ ಪ್ರತಿಭೆಯನ್ನು ಧಾರೆಎರೆದು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಬಂಡವಾಳಶಾಹಿ ಆಳುವ ವ್ಯವಸ್ಥೆ ಯಾವಾಗಲೂ
ಜನವಿರೋಧಿಯೇ ಆಗಿರುತ್ತದೆ. ಆದ್ದರಿಂದ ಅಂತಹ ವ್ಯವಸ್ಥೆಯಿಂದ ಒಂದು ಅಂತರವನ್ನು ಕಾಪಾಡಿಕೊಂಡು ಸಮಾಜದ ದುಡಿಯುವ ವರ್ಗಗಳ ಪರವಾಗಿ ದ್ವನಿ ಎತ್ತಬೇಕು. ಆದರೆ ಇದೆಲ್ಲಾ ಗೊತ್ತಿದ್ದೂ ಭ್ರಷ್ಟ ರಾಜಕೀಯ ಪಕ್ಷವನ್ನು ಹಾಗೂ ವ್ಯಕ್ತಿಗಳನ್ನು ಬೆಂಬಲಿಸುವುದು ನಿಜಕ್ಕೂ ಅತ್ಮದ್ರೋಹ ಹಾಗೂ ಸಮಾಜದ್ರೋಹ. ಆಳುವ ವರ್ಗಗಳಿಗೆ ರೋಗಬಂದಾಗ ಚಿಕಿತ್ಸೆ ಕೊಡಲು ವೈದ್ಯರಾಗಿ ಸಾಂಸ್ಕೃತಿಕ ಲೋಕದವರು ಪ್ರಯತ್ನಿಸಬೇಕೇ ಹೊರತು ತಾವೇ ಆ ರೋಗವನ್ನು ಅಂಟಿಸಿಕೊಂಡು ರೋಗಪೀಡಿತ ನಾಡನ್ನು ಕಟ್ಟುವ ನಿಟ್ಟಿನತ್ತ ತಮ್ಮ ಜವಾಬ್ದಾರಿ ಮರೆತು ಶ್ರಮಿಸಬಾರದು. ಬಂಡವಾಳಶಾಹಿ ಆಡಳಿತ ಇರುವುದೇ ಜನರನ್ನು ಭ್ರಮೆಯಲ್ಲಿಟ್ಟು ಸಕಲ ಸವಲತ್ತುಗಳನ್ನು ಲೂಟಿಮಾಡಲು. ಆದರೆ ಕವಿಗಳು, ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು.... ತಮ್ಮ ತಮ್ಮ ಮಾಧ್ಯಮಗಳ ಮೂಲಕ ವ್ಯವಸ್ಥೆ ಸೃಷ್ಟಿಸಿದ ಭ್ರಮೆಯನ್ನು ಬೆತ್ತಲು ಮಾಡಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಬೇಕು.
ಸಮಾಜದ ಪ್ರಜ್ಞೆಯ ಸಂಕೇತವಾದ ಸಾಹಿತಿಗಳಿಗೆ, ಸಾಂಸ್ಕೃತಿಕ ವ್ಯಕ್ತಿಗಳಿಗೆ ಸಮಾಜಮುಖಿ ಆಶಯಗಳೇ ಪ್ರಧಾನವಾಗಬೇಕಿ ಹೊರತು ಸ್ವಾರ್ಥಪರತೆಯಲ್ಲ. ದಾರ್ಶನಿಕರಾಗಬಯಸುವವರಿಗೆ ರಾಜಕೀಯ ಪ್ರಜ್ಞೆ ಇರಬೇಕೇ ಹೊರತು ರಾಜಕೀಯ ಪರಾವಲಂಬಿತನ ಇರಬಾರದು. ಇದಕ್ಕೆ ಬಸವಣ್ಣ ಒಂದು ದೊಡ್ಡ ಉದಾಹರಣೆ. ಬಸವಣ್ಣನಿಗೆ ರಾಜಕೀಯ ಪ್ರಜ್ಞೆ ಇತ್ತು ಜೊತೆಗೆ ಶ್ರಮಿಕ ವರ್ಗದವರ ಕುರಿತು ಬದ್ದತೆಯೂ ಇತ್ತು. ತನ್ನೆಲ್ಲಾ ವಚನಗಳಲ್ಲಿ ಆಡಳಿತ ವ್ಯವಸ್ಥೆಯನ್ನು ವಿಡಂಬಿಸುವ ಕೆಲಸವನ್ನು ಬಸವಣ್ಣ ಮಾರ್ಮಿಕವಾಗಿ ಮಾಡುತ್ತಾನೆ. ಯಾವಾಗ ತನ್ನ ಜನಪರ ವಿಚಾರಗಳಿಗೆ ಆಳುವ ವರ್ಗಗಳಿಂದ ದಕ್ಕೆ ಬಂದಿತೋ ಆಗ ಬಸವಣ್ಣ ಹಿಂದು ಮುಂದು ನೋಡದೇ ಮಂತ್ರಿ ಪದವಿಯನ್ನು ತ್ಯಜಿಸಿ ಕಾಯಕ ಜೀವಿಗಳೊಂದಿಗೆ ಬೆರೆಯುತ್ತಾನೆ. ಅಕಸ್ಮಾತ್ ಕಾರ್ನಾಡ-ಅನಂತಮೂರ್ತಿಗಳ ಹಾಗೆ ಬಸವಣ್ಣ ರಾಜಕೀಯ ಹಪಾಹಪಿಗೆ ಬಿದ್ದು ಆಳುವ ವ್ಯವಸ್ಥೆಯೊಂದಿಗೆ ರಾಜಿಯಾಗಿ, ಸಾಂಪ್ರದಾಯಿಕ ಸಂಸ್ಕೃತಿಯ ಹರಿಕಾರನಾಗಿ ರಾಜನನ್ನು ಹೊಗಳುವ ವಚನಗಳನ್ನು ರಚಿಸಿದ್ದರೆ ಬಹುಷಃ
ಬಸವಣ್ಣ ಆ ಕಾಲಕ್ಕೆ ಅಪ್ರಸ್ತುತನಾಗಿ ಹೋಗಿಬಿಡುತ್ತಿದ್ದ. ಆದರೆ ತನ್ನ ರಾಜಕೀಯ ಪ್ರಜ್ಞೆ ಹಾಗೂ ದುಡಿಯುವ ವರ್ಗದ ಬಗ್ಗೆ ಇರುವ ನಿಷ್ಟೆಯಿಂದಾಗಿ ಬಸವಣ್ಣ ಸಾರ್ವಕಾಲಿಕ ವ್ಯಕ್ತಿಯಾಗಿ ಚರಿತ್ರೆಯಲ್ಲಿ ಬಹುದೊಡ್ಡ ದಾರ್ಶನಿಕನಾದ. ಬಸವಣ್ಣನವರ ಬದುಕು ಮತ್ತು ಬರಹ ನಮ್ಮ ಸಾಂಸ್ಕೃತಿಕ ಲೋಕದ ದಿಗ್ಗಜರಿಗೆ ಆದರ್ಶವಾಗಬೇಕು ಹಾಗೂ ಮುಂದಿನ ತಲೆಮಾರು ಹೆಮ್ಮೆಪಡುವಂತಹ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು. ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಪರ್ಯಾಯಗಳೇನು? ಹೇಗೆ ಈ ವ್ಯವಸ್ಥೆಯಲ್ಲಿ ಸಕರಾತ್ಮಕ ಬದಲಾವಣೆ ತರಲು ಸಾಧ್ಯ ಎನ್ನುವುದನ್ನು ತಮ್ಮ ಅನನ್ಯ ಅನುಭವ ಮತ್ತು ಪ್ರತಿಭೆಯಿಂದ ಅವಿಷ್ಕರಿಸಿ ಜನತೆಯ ಮುಂದೆ ಇಡಬೇಕು. ಎಲ್ಲಿವರೆಗೂ ಪರ್ಯಾಯವನ್ನು ಸೃಷ್ಟಿಸುವುದಲ್ಲವೋ ಅಲ್ಲಿವರೆಗೂ ಹಾಲಿ ಭ್ರಷ್ಟ ಶೋಷಕ ವ್ಯವಸ್ಥೆಯೇ ಮುಂದುವರೆಯುತ್ತದೆನ್ನುವುದು ನಿರ್ವಿವಾದ.
ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಲೋಕದ ಎಲ್ಲಾ ಪ್ರತಿಭಾನ್ವಿತರೂ ಆಲೋಚಿಸಬೇಕಾಗಿದೆ. ಭ್ರಷ್ಟ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ಪರ್ಯಾಯ ಜನಪರ ರಾಜಕೀಯ ವ್ಯವಸ್ಥೆಯೊಂದನ್ನು ರೂಪಿಸಬೇಕಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ