ಶನಿವಾರ, ಏಪ್ರಿಲ್ 12, 2014

ಹಣ ಬಾಚಿಕೊಂಡ ರಂಗಗುತ್ತಿಗೆದಾರರು- ಕಾರ್ಮಿಕರಾದ ಕಲಾವಿದರು.



ರಾಜಕೀಯಕ್ಕೆ ಪ್ರಚಾರ ಪರಿಕರವಾದ ಬೀದಿನಾಟಕ

 
ಸುರೇಶಕುಮಾರ ಮತ್ತು ಮಾಳವಿಕಾ ಬೀದಿನಾಟಕ ಪ್ರಚಾರ ಉದ್ಘಾಟನೆ ಬಿಜೆಪಿ ಕೇಂದ್ರ ಕಚೇರಿಯ ಮುಂದೆ



 ಬೀದಿ ರಂಗಭೂಮಿ ತನ್ನ ಪಾಡಿಗೆ ಮಾತ್ರ ಏನನ್ನೂ  ಸಾಧಿಸಲಾರದು. ಆದರೆ ಅದು ಪ್ರಜಾಪ್ರಭುತ್ವವಾದಿ ಆಂದೋಲನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸಬೇಕು. ಮಾಧ್ಯಮದಿಂದಲೇ ನಾವು ಹೊಸ ಜಾಗತಿಕ ದೃಷ್ಟಿಕೋನವನ್ನು ಬೆಳೆಸಬಹುದು. ಸಮಜವನ್ನು ದಹಿಸುತ್ತಿರುವ ಶಾಶ್ವತವಾದ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚಿಸಬಹುದು ಹಾಗೂ ಜನರು ಕಾರ್ಯೋನ್ಮುಖರಾಗಲು ಕರೆ ಕೊಡಬಹುದು. ಹೀಗೆ ಸಪ್ದರ್ ಹಶ್ಮಿ ಹೇಳುತ್ತಾರೆ.

ಆದರೆ... ಈಗ ಬೀದಿರಂಗಭೂಮಿಯ ಸ್ಥಿತಿ ನಾಯಿಪಾಡಾಗಿದೆ. ಹಾದಿ ಬೀದಿಯಲ್ಲಿ ಸದ್ದು ಮಾಡುತ್ತಿದ್ದ ಬೀದಿ ನಾಟಕದ ತಮಟೆಯ ನಾದದಲ್ಲಿ ಈಗ ಬರೀ ಪ್ರಚಾರವೇ ತುಂಬಿದೆ. ಯಾವಾಗ ಜಾಗತೀಕರಣ ಎನ್ನುವುದು ತನ್ನ ಕದಂಬ ಬಾಹುಗಳಲ್ಲಿ ಇಡೀ ದೇಶವನ್ನು ಮಾಯಾಸದೃಶವಾಗಿ ಆಕ್ರಮಿಸಿಕೊಂಡಿತೋ ಆಗಿನಿಂದ ಬೀದಿನಾಟಕದ ಸ್ವರೂಪವೇ ಬದಲಾಗಿಹೋಯಿತು. ಪಕ್ಕಾ ವ್ಯಾಪಾರೀಕರಣಗೊಂಡಿತು. ಹೋರಾಟದ ನೆಲೆ ಹಾಗೂ ಸಾಂಸ್ಕೃತಿಕ ಸೆಲೆಯಾಗಿದ್ದ ಬೀದಿನಾಟಕ ಮಾಧ್ಯಮ ಇಂದು ವಸ್ತುಗಳ, ವ್ಯಕ್ತಿಗಳ, ಸೇವೆಗಳ ಕುರಿತ ಪ್ರಚಾರಕ್ಕೆ ಬಳಕೆಯಾಗತೊಡಗಿತು. ಯಾವಾಗ ಪ್ರತಿಭಟನಾ ಮಾಧ್ಯಮವೊಂದು ಪ್ರಚಾರದ ಮಾಧ್ಯಮವಾಯಿತೋ ಬೀದಿ ನಾಟಕದ ಮೂಲ ಉದ್ದೇಶವೇ ಹಳ್ಳಹಿಡಿಯಿತು.

  
ಅರವತ್ತು ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕೆಲವರು ಬೀದಿನಾಟಕವನ್ನು ಪಾಂಪ್ಲೆಟ್ ಪೇಪರ್, ಘೋಷನೆಯ ಹಾದಿ ಎಂದೆಲ್ಲಾ ಲೇವಡಿ ಮಾಡುತ್ತಿದ್ದರು. ಪ್ರಸನ್ನನಂತವರು ಸಹ ಬೀದಿನಾಟಕದ ಅಗತ್ಯವಿಲ್ಲ ರಂಗನಾಟಕಗಳೇ ರಂಗಭೂಮಿಗೆ ಬೇಕು ಎಂದು ಬೀದಿ ನಾಟಕದ ಪಾರಂನ್ನು ವಿರೋಧಿಸಿದ್ದರು. ವಿರೋಧವನ್ನು ಲೆಕ್ಕಿಸದೇ .ಎಸ್.ಮೂರ್ತಿ,ಡಾ.ವಿಜಯಮ್ಮನಂತವರು ಬೀದಿನಾಟಕವನ್ನು ರಂಗಚಳುವಳಿಯಾಗಿ ಬಳಸಿ ಯಶಸ್ವಿಯಾದರು. ಸಾಮಾಜಿಕ ಸಮಸ್ಯೆಗಳನ್ನು ಬೀದಿ ನಾಟಕದ ಮೂಲಕ ವಿಶ್ಲೇಷಿಸಿ ಜನರನ್ನು ಜಾಗೃತಗೊಳಿಸತೊಡಗಿದರು. ಇಪ್ಟಾ ಸಾಂಸ್ಕೃತಿಕ ಸಂಘಟನೆಯು ಬೀದಿ ನಾಟಕವನ್ನು ಸಾಮಾಜಿಕ ಪರಿಣಾಮ ಬೀರುವ ಅಸ್ತ್ರವನ್ನಾಗಿ ಪ್ರಯೋಗಿಸಿ ಯಶಸ್ವಿಯಾಯಿತು. ಆಮೇಲೆ ಅಸ್ತಿತ್ವಕ್ಕೆ ಬಂದ ಸಮುದಾಯ ಸಂಘಟನೆಯು ಸಿಜಿಕೆಯವರ ಬೆಲ್ಚಿ ನಾಟಕದ ಮೂಲಕ ಬೀದಿ ನಾಟಕಕ್ಕೆ ಜನಾಲೊಂದನದ ಆಯಾಮವನ್ನು ಕೊಟ್ಟಿತು. ನಂತರ ಅನೇಕ ಪ್ರಗತಿಪರ ಸಂಘಗಳು, ಸಾಮಾಜಿಕ ಕಳಕಳಿಯಿರುವ ತಂಡಗಳು ಬೀದಿನಾಟಕವನ್ನು ನಾಡಿನಾದ್ಯಂತ ಆಡಿ ಜನರಲ್ಲಿ ಜಾಗೃತಿಯನ್ನುಂಟುಮಾಡಲು ಪ್ರಯತ್ನಿಸಿದರು. ಬೀದಿ ನಾಟಕದ ಒಂದು ಪರಂಪರೆಯೇ ಕರ್ನಾಟಕದಲಿ ಸದೃಡವಾಗಿ ಬೆಳೆಯಿತು. ರೀತಿಯ ಬೀದಿನಾಟಕಗಳಿಗೆ ಒಂದು ತಾತ್ವಿಕ ನೆಲೆಯಿತ್ತು, ವಿಪ್ಲವದ ವಿವೇಚನೆಯಿತ್ತು, ವ್ಯವಸ್ಥೆ ಬದಲಾವಣೆಯ ಸಂಕಲ್ಪವಿತ್ತು. ಮತ್ತು ಮಾಡುವವರಲ್ಲಿ ನಿಸ್ವಾರ್ಥವೂ ಇತ್ತು.

ಆದರೆ.... ಯಾವಾಗ ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ಬೀದಿರಂಗ ಮಾಧ್ಯಮ ತಲುಪುತ್ತದೆಂಬುದು ನಮ್ಮ ಸರಕಾರಗಳಿಗೆ ಮನವರಿಕೆಯಾಯಿತೋ ಆಗ ಸರಕಾರ ತನ್ನ ಸಾಧನೆಗಳನ್ನು ಜನರಿಗೆ ತಿಳಿಸಲು ಬೀದಿ ನಾಟಕ ತಂಡಗಳಿಗೆ ಹೊರಗುತ್ತಿಗೆ ಕೊಡಲು ಆರಂಭಿಸಿತು. ಇದರಿಂದ ಪ್ರೇರೇಪಿತರಾದ ಫಾರೆನ್ ಪಂಡೆಡ್ ಎನ್ಜಿಓ ಗಳು ತಮ್ಮದೇ ಕಾರ್ಯಕರ್ತರಿಗೆ ತರಬೇತಿಯನ್ನು ಕೊಟ್ಟು ಬೀದಿನಾಟಕಗಳ ಮೂಲಕ ತಮ್ಮ ಉದ್ದೇಶಗಳನ್ನು ಬೀದಿಗಳಲ್ಲಿ ಸಾರತೊಡಗಿದರು. ಇದು ಎಲ್ಲಿವರೆಗೂ ಮುಂದುವರೆಯಿತೆಂದರೆ ಲೈಂಗಿಕ ರೋಗಿಗಳನ್ನು ಬೀದಿನಾಟಕದ ಮೂಲಕ ಸೆಳೆದು ತಮ್ಮ ಕ್ಲಿನಿಕ್ಗೆ ಬರುವಂತೆ ಮಾಡಲು ಕೆಲವು ಆಸ್ಪತ್ರೆಗಳೂ ಎನ್ಜಿಓ ಗಳಿಗೆ ಗುತ್ತಿಗೆ ಕೊಡತೊಡಗಿದರು. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ತಂಪುಪಾನೀಯಗಳನ್ನು ಮಾರಲೂ ಸಹ ಬೀದಿನಾಟಕಗಳನ್ನು ಬಳಸಿದವೆಂದ ಮೇಲೆ ಬೀದಿ ಮಾಧ್ಯಮದ ಗತಿಯನ್ನು ಊಹಿಸಬಹುದು. ಬೀದಿ ನಾಟಕ ತಂಡಗಳು ರಾತ್ರೋ ರಾತ್ರಿ ಹುಟ್ಟಿಕೊಂಡವು, ಕಲಾವಿದರು ದಿನಗೂಲಿಗಳಾಗಿ ಬಳಕೆಯಾದರು, ರಂಗಭೂಮಿಯಲ್ಲಿ ಸಕ್ರೀಯರಾಗಿದ್ದ ಕೆಲವರು ಬೀದಿನಾಟಕಗಳ ಗುತ್ತಿಗೆದಾರರಾಗಿ ಕಾಸಿಗಾಗಿ ಕಲೆಯನ್ನು ಹಾಗೂ ಕಲಾವಿದರನ್ನು ಮಾರಿಕೊಂಡರು. ಇಷ್ಟೆಲ್ಲಾ ಆದಮೇಲೆ ನಮ್ಮ ರಾಜಕೀಯ ಪಕ್ಷಗಳು ಸುಮ್ಮನಿರುತ್ತವೆಯಾ. ಚುನಾವಣೆ ಬಂದಾಗ ಬೀದಿ ನಾಟಕ ಅನ್ನೋದು ಚುನಾವಣಾ ಪ್ರಚಾರದ ಭಾಗವಾಯಿತು. ಅದರಲ್ಲೂ ಬಿಜೆಪಿ ಪಕ್ಷ ಬೀದಿ ನಾಟಕದ ಪ್ರಭಾವವನ್ನು ಗುರುತಿಸಿ ಮಾಧ್ಯಮವನ್ನು ಕಳೆದ ಮೂರು ದಶಕಗಳಿಂದ ತನ್ನ ಚುನಾವಣಾ ಪ್ರಚಾರಕ್ಕೆ ತುರುಸಿನಿಂದ ಬಳಸಿಕೊಳ್ಳುತ್ತಾ ಬಂದಿದೆ. ಹೀಗಾಗಿ ಪ್ರತಿಭಟನಾ ಮಾಧ್ಯಮವಾಗಿದ್ದ, ಹೋರಾಟಗಾರರಿಗೆ ಸಾಮಾಜಿಕ ಬದಲಾವಣೆಯ ಅಸ್ತ್ರವಾಗಿದ್ದ ಬೀದಿರಂಗ ಮಾಧ್ಯಮ ಬರುಬರುತ್ತಾ ತನ್ನತೀವ್ರತೆಯನ್ನು ಕಳೆದುಕೊಂಡು ಮಾರಾಟದ ಸರಕಾಗಿ ಈಗ ಪ್ರಚಾರಮಾಧ್ಯಮವಾಗಿದ್ದೊಂದು ದುರಂತ

ಬೀದಿನಾಟಕದ ಪ್ರಮುಖ ಕಾಂಟ್ರಾಕ್ಟರ್ ಆದವರು ಯಶವಂತ್ ಸರದೇಶಪಾಂಡೆ. ಬಹುಷಃ ಆಧುನಿಕ ರಂಗಭೂಮಿಯಲ್ಲಿ ನಾಟಕವನ್ನು ವ್ಯಾಪಾರಿ ಉದ್ಯಮವನ್ನಾಗಿಸಿಕೊಂಡು ಹೇರಳ ಹಣ ಸಂಪಾದಿಸಿದವರು ಯಾರಾದರೂ ಇದ್ದರೆ ಅದು ಸರದೇಶಪಾಂಡೆ.   ವಿನಾಶಕಾರಿಯಾದ ಕೋಕಾಕೋಲಾ ಕಂಪನಿಗೂ ಬೀದಿನಾಟಕದ ಮೂಲಕ ಪ್ರಚಾರ ಮಾಡಿದ ಅಗ್ಗಳಿಕೆ ವಾಮನಮೂರ್ತಿಯದು. ಹಲವು ವರ್ಷಗಳಿಂದ ಬೀದಿನಾಟಕಗಳ ಮೂಲಕ ಬಿಜೆಪಿ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವ ಗುತ್ತಿಗೆಯನ್ನು ಸರದೇಶಪಾಂಡೆ ಪಡೆದಿದ್ದಾರೆ. ಪ್ರಚಾರ ಮಾಧ್ಯಮಗಳಾದ ಮೊಬೈಲ್, ಇಂಟರನೆಟ್, ಟಿವಿ ಗಳನ್ನು ಕಾರ್ಪೋರೇಟ್ ಮಾದರಿಯಲ್ಲಿ ಬಳಸಿ ಜನರಲ್ಲಿ  ಭ್ರಮೆಯನ್ನು ಯಶಸ್ವಿಯಾಗಿ ಬಿತ್ತುತ್ತಿರುವ ಬಿಜೆಪಿ ಪಕ್ಷ ಬೀದಿನಾಟಕದಂತಹ ಪ್ರಭಲ ಮಾಧ್ಯಮವನ್ನೂ ಸಹ ವ್ಯಾಪಕವಾಗಿ ಬಳಸುತ್ತಿದೆ. ತನ್ನ ಹಣದ ಬಲದಿಂದ ಕಲಾವಿದರನ್ನು, ರಂಗಕರ್ಮಿಗಳನ್ನು ಹಾಗೂ ಕಲೆಯನ್ನೂ ಸಹ ಕೊಂಡುಕೊಂಡು ಜನರನ್ನು ಮರಳು ಮಾಡಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಕೆಲವು ರಂಗಕರ್ಮಿಗಳನ್ನು ಬಿಜೆಪಿ ಸಾಕುತ್ತಾ ಬಂದಿದೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ಬಿಜೆಪಿ ಪರ ರಂಗಕರ್ಮಿಗಳನ್ನು ನಾಟಕ ಅಕಾಡೆಮಿಗೆ ನೇಮಕಮಾಡಲಾಗಿತ್ತು. ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಯಶವಂತ ಸರದೇಶಪಾಂಡೆ, ಗಣೇಶ ಯಾಜಿ ಹಾಗೂ ಗೀತಾ ವಿಶ್ವನಾಥ ಮೂವರೂ ಬಾರಿಯ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬೀದಿನಾಟಕ ತಂಡಗಳನ್ನು ಸಿದ್ದಮಾಡಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿವೆ. ಪುರೋಹಿತಶಾಹಿ ಮೂಲದ ವ್ಯಕ್ತಿಗಳು ಪರೋಹಿತಶಾಹಿ ಪಕ್ಷದ ಪರವಾಗಿ ಬೀದಿನಾಟಕಗಳ ಮೂಲಕ ಶತಾಯ ಗತಾಯ ಪ್ರಚಾರಮಾಡಿ ಮೋದಿಯನ್ನು ಪ್ರಧಾನಿಯನ್ನಾಗಿ  ಮಾಡುವ ಕನಸು ಕಾಣುತ್ತಿದ್ದಾರೆ ಜೊತೆಗೆ ಅವಕಾಶವನ್ನು ಬಳಸಿಕೊಂಡು ಬೇಕಾದಷ್ಟು ಹಣವನ್ನೂ ಮಾಡಿಕೊಳ್ಳುತ್ತಿದ್ದಾರೆ. ಕಲೆಯನ್ನು ಕೋಮುವಾದಿ ಪಕ್ಷಕ್ಕೆ ಮಾರಿಕೊಂಡು ತಮ್ಮ ನೆಲೆಯನ್ನು  ಕಂಡುಕೊಳ್ಳುತ್ತಿದ್ದಾರೆ. ಕಲೆಯ ಬೆಲೆಯನ್ನು ಬೀದಿಯಲ್ಲಿ ಹರಾಜಾಕುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಬೀದಿನಾಟಕ ಪ್ರದರ್ಶನವನ್ನು ಉದ್ಘಾಟಿಸಿದವರು ನಮ್ಮ ರಂಗಭೂಮಿಯ ಹೆಮ್ಮೆಯ ರಂಗಕರ್ಮಿ ನಾಗಾಭರಣ. ಟೌನ್ಹಾಲ್ ಮುಂದೆ ಹಾಕಿದ್ದ ವೇದಿಕೆಯಲ್ಲಿ ಅನಂತಕುಮಾರ್, ಮದನ್ ಪಟೇಲ್, ನಾಗಾಭರಣರು ಬೀದಿನಾಟಕ ಪ್ರಕಾರದ ಚುನಾವಣಾ ಪ್ರಚಾರಕ್ಕೆ ಚಾಲನೆ ಇತ್ತಿದ್ದರು. ಯಥಾಪ್ರಕಾರ ಬಿಜೆಪಿಯ ಆಸ್ಥಾನ ಕಲಾವಿದ ಯಶವಂತ ಸರದೇಶಪಾಂಡೆ ಬೀದಿನಾಟಕಗಳ ಗುತ್ತಿಗೆ ಪಡೆದು ಪ್ರದರ್ಶನದ ಹೊಣೆ ಹೊತ್ತಿದ್ದರು

'ನಾಯಕ' ಬೀದಿ ನಾಟಕ ಪ್ರದರ್ಶನ ಬಿಜೆಪಿ ಕೇಂದ್ರ ಕಚೇರಿ ಮುಂದೆ
  
ಬಾರಿ ೨೦೧೪ರ ಲೋಕಸಭಾ ಚುನಾವಣೆಗಾಗಿ ಎಪ್ರಿಲ್ 17ರಂದು ಕರ್ನಾಟಕದಲ್ಲಿ ಮತದಾನ ನಡೆಯುತ್ತಿದೆ. ಯಥಾಪ್ರಕಾರ ಬಿಜೆಪಿ ಬೀದಿನಾಟಕದ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಎಪ್ರಿಲ್ 7 ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಪ್ರಧಾನ ಕಛೇರಿಯ ಮುಂದೆಯೇ ಬೀದಿನಾಟಕದ ಚುನಾವಣೆ ಪ್ರಚಾರದ ಉದ್ಘಾಟನೆಯನ್ನು ಮಾಜಿ ಸಚಿವ ಸುರೇಶ್ ಕುಮಾರ, ಬಿಜೆಪಿಯ ಸಹ ವಕ್ತಾರೆ ಮಾಳವಿಕಾ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನಾ ಹಾಗೂ ರಾಜ್ಯ ಬಿಜೆಪಿ ಜಾಹೀರಾತು ಮತ್ತು ಸೃಜನಶೀಲ ವಿಭಾಗದ ಸಂಚಾಲಕ ಮಾಲತೇಶ ಭಟ್ಟರವರು ತಮಟೆ ಬಡಿಯುವುದರ ಮೂಲಕ ನೆರವೇರಿಸಿದರು. ಬೀದಿ ನಾಟಕ ಪ್ರದರ್ಶನದ ಕೋಆರ್ಡಿನೇಟರ್ ಗಣೇಶ ಯಾಜಿಯವರಾದರೆ ಬೀದಿನಾಟಕ ಪ್ರದರ್ಶನದ ಪ್ರಮುಖ ರೂವಾರಿ ಯಶವಂತ್ ಸರದೇಶಪಾಂಡೆ.

ಬೀದಿನಾಟಕದ ಚುನಾವಣಾ ಪ್ರಚಾರಾಂದೋಲನದಲ್ಲಿ ಸೀತಾಪತಿಯವರು ಬರೆದ ನಾಯಕ ಹಾಗೂ ಸರದೇಶಪಾಂಡೆಯವರ ಆಲ್ ದಿ ಬೆಸ್ಟ್ ಇಂಡಿಯಾ ಎನ್ನುವ ಎರಡು ಬೀದಿನಾಟಕಗಳನ್ನು ಸಿದ್ದಪಡಿಸಲಾಗಿದೆ. ನಾಯಕ ನಾಟಕ ಬರೆದ ಸೀತಾಪತಿ ಎನ್ನುವುದು ಪಕ್ಕಾ ಬೇನಾಮಿ ಹೆಸರು. ಯಾರು ಸ್ಕ್ರಿಪ್ಟಿನ ಜನಕ ಎಂದು ಮೂಲ ಹುಡುಕಿದರೆ ಅದು ಹೋಗಿ ಮುಟ್ಟುವುದು ಸಿಟಿ ಮಾರ್ಕೆಟ್ ಬಳಿ ಇರುವ ಎಸ್.ಎಲ್.ಎನ್ ಕಾಲೇಜನ್ನು, ಕಾಲೇಜಲ್ಲಿ ಪ್ರೊ. ಕೂಡ್ಲು ವೆಂಕಟಪ್ಪ ಎನ್ನುವ ಡಾಕ್ಟರೇಟ್ ಮಾಡಿದ ಜಾನಪದ ವಿಧ್ವಾಂಸ ಪ್ರಾದ್ಯಾಪಕರಿದ್ದಾರೆ. ಪಕ್ಕಾ ಆರ್ಎಸ್ಎಸ್ ವ್ಯಕ್ತಿ. ತನ್ನ ಹೆಸರನ್ನು ಮರೆಮಾಚಿ ಮೋದಿಯನ್ನು ಹಾಡಿ ಹೊಗಳುವಂತಹ ನಾಯಕ ಎನ್ನುವ ಬೀದಿ ನಾಟಕದ ಸ್ಕ್ರಿಪ್ಟನ್ನು ಬರೆಯಲು ತಮ್ಮ ಪ್ರತಿಭೆಯನ್ನು ಬಳಸಿಕೊಂಡಿದ್ದಾರೆ. ತಮ್ಮ ಹೆಸರಿಗೆ ಬದಲಾಗಿ ಸೀತಾಪತಿ ಎಂದು ಬೇನಾಮಿ ಹೆಸರನ್ನು ಇಟ್ಟುಕೊಂಡಿರುವುದರಲ್ಲೂ ಮರ್ಮವಿದೆ. ಸೀತಾಪತಿ ಎಂದರೆ ಶ್ರೀರಾಮ. ರಾಮನ ಹೆಸರಲ್ಲಿ ನಕಲಿ ರಾಮಭಕ್ತರ ಕುರಿತು ನಾಟಕ ಬರೆದ ವೆಂಕಟಪ್ಪ ತಮ್ಮ ಸಂಘ ಪರಿವಾರ ನಿಷ್ಟೆಯನ್ನು ಸಾಬೀತುಮಾಡಿದ್ದಾರೆ

'ನಾಯಕ' ಬೀದಿ ನಾಟಕ ಪ್ರದರ್ಶನ ಬಿಜೆಪಿ ಕೇಂದ್ರ ಕಚೇರಿ ಮುಂದೆ

ಎರಡೂ ನಾಟಕಗಳ ಪ್ರದರ್ಶನಕ್ಕೆ ರಾಜ್ಯ ಚುನಾವಣಾ ಆಯೋಗ ಏಕಗವಾಕ್ಷಿ ಅನುಮತಿಯನ್ನೂ ನೀಡಿದೆ. ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1900 ಬೀದಿನಾಟಕಗಳ ಪ್ರದರ್ಶನಗಳು ನಡೆಯುತ್ತಿವೆ. ಪ್ರಮುಖವಾಗಿ ಯಶವಂತ ಸರದೇಶಪಾಂಡೆಯವರ ಎರಡು ತಂಡಗಳು, ಬೆಂಗಳೂರಿನ ರಂಗಶಿಖರ, ದೃಶ್ಯ ರಂಗ ಕಲಾ ಸಂಘ, ಮಯೂರ ಕಲಾ ರಂಗ, ಕುಮಟಾದ ಗುಂಜಾವನ ಕಲಾ ಬಳಗ ಹಾಗೂ ದಾವಣಗೆರೆಯ ಆರ್.ಟಿ.ಅರುಣ್ಕುಮಾರ್ ತಂಡದವರು ರಾಜ್ಯಾದ್ಯಂತ ಬೀದಿನಾಟಕಗಳ ಮೂಲಕ ಬಿಜೆಪಿ ಪರ ಓಟಿನ ಪ್ರಚಾರ ಮಾಡುತ್ತವೆ. ಪ್ರತಿಯೊಂದು ತಂಡವೂ ಹತ್ತು ಉಪತಂಡಗಳನ್ನು  ಹೊಂದಿದ್ದು ಒಂದೊಂದು ತಂಡದಲ್ಲಿ ಹತ್ತು ಕಲಾವಿದರಿರುತ್ತಾರೆ. ಒಟ್ಟಾರೆ ಸುಮಾರು 600 ಕಲಾವಿದರು ಬಿಜಿಪಿ ಪ್ರಾಯೋಜಿತ ಬೀದಿನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ.

ಆದರೆ ಇದು ಸಹ ಬೇನಾಮಿ ಲೆಕ್ಕವೇ. ಬೀದಿನಾಟಕದ ವ್ಯವಸ್ಥೆ ಪಕ್ಕಾ ಕಾರ್ಪೋರೇಟ್ ಲೆಕ್ಕಾಚಾರದಲ್ಲಿದೆ. ಒಬ್ಬ ಪ್ರಮುಖ ಗುತ್ತಿಗೆದಾರ ತನ್ನ ಕುಲಬಾಂಧವರಿರುವ ಕೆಲವು ಪ್ರಮುಖ ತಂಡಗಳನ್ನು ಗುರುತಿಸಿ ಗುತ್ತಿಗೆ ಕೊಡುತ್ತಾನೆ. ಹಾಗೆ ಗುತ್ತಿಗೆ ಪಡೆದ ತಂಡದ ಪ್ರಮುಖ ಮತ್ತೆ ಇಪ್ಪತ್ತು ತಂಡಗಳ ಮುಖ್ಯಸ್ಥರನ್ನು ಕರೆದು ಬೀದಿನಾಟಕದ ತುಂಡುಗುತ್ತಿಗೆ ಕೊಡುತ್ತಾನೆ. ಒಂದೊಂದು ತಂಡದಲ್ಲಿ ಹತ್ತು ಜನ ಕಲಾವಿದರಿರುತ್ತಾರೆ. ಹೀಗಾಗಿ ಹತ್ತು ಪ್ರಮುಖ ತಂಡಗಳು ಹಾಗೂ ಪ್ರತಿ ತಂಡಕ್ಕೆ ಇಪ್ಪತ್ತು ಉಪತಂಡಗಳು ಅಂದರೆ ಒಟ್ಟು ಇನ್ನೂರು ತಂಡಗಳಾದವು. ಹಾಗೂ ಎರಡು ಸಾವಿರ ಕಲಾವಿದರಿಗೆ ನಟಿಸಲು ಅವಕಾಶವಾಯ್ತು. ಒಂದೊಂದು ತಂಡವು ಆರು ದಿನಗಳ ಕಾಲ ಪ್ರತಿ ದಿನ ಕನಿಷ್ಟ ಐದು ಪ್ರದರ್ಶನಗಳನ್ನು ನೀಡಲೇಬೇಕು. ಅಂದರೆ ಒಂದು ತಂಡ ಒಟ್ಟು ಮುವತ್ತು ಪ್ರದರ್ಶನಗಳನ್ನು ಕೊಡುತ್ತದೆ. ಇನ್ನೂರು ತಂಡಗಳು ಸೇರಿ ಒಟ್ಟು ಆರು ಸಾವಿರ ಬೀದಿ ನಾಟಕಗಳ ಪ್ರದರ್ಶನಗಳನ್ನು ಮಾಡುತ್ತವೆ. ಆದರೆ ಬಿಜೆಪಿ ತನ್ನ ಪ್ರೆಸ್ ನೋಟ್ನಲ್ಲಿ ಹೇಳುತ್ತದೆ ಕೇವಲ 1900 ಪ್ರದರ್ಶನಗಳನ್ನು ಮಾಡಲಾಗುತ್ತದೆ. ಹಾಗೂ ಚುನಾವನಾ ಆಯೋಗದಿಂದ ಇಷ್ಟೇ ಪ್ರದರ್ಶನಕ್ಕೆ ಅನುಮತಿಯನ್ನು ಪಡೆದಿದೆ. ಆದರೆ ಯಾಕೆ ಬಿಜೆಪಿ ಹೀಗೆ ಸುಳ್ಳು ಮಾಹಿತಿ ಕೊಡುತ್ತದೆ? ಯಾಕೆಂದರೆ ಬೀದಿ ನಾಟಕದ ಮೇಲೆ ಖರ್ಚು ಮಾಡುವ ಹಣ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ಸೇರ್ಪಡೆಯಾಗುತ್ತದೆ. ಹೀಗಾಗಿ ರಾಮನ ಲೆಕ್ಕದಲ್ಲಿ ಎರಡು ಸಾವಿರ ಶೋಗಳನ್ನು ತೋರಿಸಿ ಕೃಷ್ಣನ ಲೆಕ್ಕದಲ್ಲಿ ಆರು ಸಾವಿರ ಶೋಗಳನ್ನು ಮಾಡುವುದು ರಾಜಕೀಯ ಪಕ್ಷದ ಒಳಗುಟ್ಟು. ಯಾವ ಬೀದಿಯಲ್ಲಿ ಎಷ್ಟು ನಾಟಕ ಮಾಡಲಾಗಿದೆಯೆಂದು ಲೆಕ್ಕ ಇಡುವವರಾರು? ಕೋಟಿಗಂಟಲೆ ಕಪ್ಪು ಹಣ ಇರುವ ರಾಜಕಾರಣಿಗಳಿಗೆ ಹಾಗೂ ಪಕ್ಷಗಳಿಗೆ ಆರುಸಾವಿರ ಬೀದಿ ನಾಟಕದ ಹಣ ಜುಜುಬಿ ಎನ್ನುವುದಾಗಿದೆ.

ಆಲ್ ದಿ ಬೆಸ್ಟ್ ಇಂಡಿಯಾಬೀದಿನಾಟಕ ಪ್ರದರ್ಶನ
 
ಹೋಗಲಿ ಬಿಡಿ ಒಂದು ವಾರಗಳ ಕಾಲ ನಮ್ಮ ಕೆಲವು  ಕಲಾವಿದರಿಗೆ ಕೆಲಸವಾದರೂ ಸಿಕ್ಕಿತಲ್ಲ ಎಂದು ಸಂತಸ ಪಡುವವರೂ ಇದ್ದಾರೆ. ಆದರೆ ಅಲ್ಲಿಯೂ ಶೋಷಣೆ ನಡೆಯುತ್ತಿದೆ. ಪ್ರತಿ ದಿನ ಒಬ್ಬ ಕಲಾವಿದನಿಗೆ ಒಂದು ಸಾವಿರ ರೂಪಾಯಿ ಕೊಡಬೇಕು ಎಂದು ಮುಖ್ಯ ಗುತ್ತಿಗೆದಾರರು ಬಿಜೆಪಿ ಜೊತೆಗೆ ಒಪ್ಪಂದ ಮಾಡಿಕೊಂಡು ಲೆಕ್ಕ ಹಾಕಿ ಈಗ ಒಟ್ಟು ಖರ್ಚಿನ ಅರ್ಧದಷ್ಟು ಹಣವನ್ನು ತೆಗೆದುಕೊಂಡಿದ್ದಾರೆ. ಆದರೆ ಬೀದಿ ನಾಟಕದ ಮುಖ್ಯ ಗುತ್ತಿಗೆದಾರ ತನ್ನ ಸಹ ಗುತ್ತಿಗೆದಾರನೊಂದಿಗೆ ಹಾಗೂ ಸಹ ಗುತ್ತಿಗೆದಾರ ತುಂಡು ಗುತ್ತಿಗೆದಾರನ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ನನಗಿಷ್ಟು ನಿನಗಿಷ್ಟು ಎಂದು ನಿರ್ಧಾರಮಾಡಿಕೊಂಡಿದ್ದಾರೆ. ಹೀಗಾಗಿ ಒಬ್ಬ ತುಂಡು ಗುತ್ತಿಗೆದಾರ ತಂಡವು 400 ಇಲ್ಲವೇ 500 ರೂಪಾಯಿಗಳನ್ನು ಪ್ರತಿದಿನ ಉರಿಬಿಸಿಲಲ್ಲಿ ನಾಟಕ ಮಾಡಿ ಶ್ರಮಿಸುವ ಕಲಾವಿದರಿಗೆ ಕೊಟ್ಟು ಉಳಿದದ್ದನ್ನು ಗುತ್ತಿಗೆದಾರರ ಪಡೆಯೇ ಹಂಚಿಕೊಂಡು ಲಾಭಮಾಡಿಕೊಳ್ಳುತ್ತದೆ. ಕೊಟ್ಟ ಕೊನೆಗೆ ಯಾವ ಡೀಲ್ ಗೊತ್ತಿಲ್ಲದ ನಾಟಕದ ಕಲಾವಿದರು ಶೋಷಣೆಗೊಳಗಾಗುತ್ತಾರೆ. ಹೇಳಿದಷ್ಟು ಹಣವೂ ಕೈಗೆ ಬರುತ್ತದೆ ಎಂಬುದು ಗ್ಯಾರಂಟಿ ಇಲ್ಲ. ಹೀಗೆ ತಂಡದ ರೂವಾರಿಗಳು ಗುತ್ತಿಗೆದಾರರಾಗಿ ಹಾಗೂ ಕಲಾವಿದರು ಕಾರ್ಮಿಕರಾಗಿ ದುಡಿಯುವ ವಿಪರ್ಯಾಸ ರಂಗಭೂಮಿಯಲ್ಲೂ ಬಂದಿರುವುದು ಖೇದಕರ. ಯಶವಂತ ಸರದೇಶಪಾಂಡೆಯವರಂತೂ ಇತ್ತ ಬಿಜೆಪಿ ಪಕ್ಷದಿಂದಲೂ ಹಣ ಪಡೆದು ಆತ್ತ ಅನಂತಕುಮಾರರಿಂದಲೂ ಹಣ ಪಡೆದು ತಮ್ಮ ರಂಗಗುತ್ತಿಗೆಯಲ್ಲಿ ಭಾರೀ ಲಾಭ ಮಾಡಿಕೊಂಡಿದ್ದಾರೆಂದು ಬೀದಿ ನಾಟಕದ ಕಲಾವಿದರೇ ಮಾತಾಡಿಕೊಳ್ಳುತ್ತಿದ್ದಾರೆ.

ಯಾರಿಗೆ ಬೇಕಾದವರಿಗೆ ಬೀದಿನಾಟಕ ಮಾಡಲು ಇಲ್ಲಿ ಅವಕಾಶವಿಲ್ಲ. ಎಲ್ಲಾ ನಾಟಕ ತಂಡದ ರೂವಾರಿಗಳೂ ಬ್ರಾಹ್ಮಣರೇ ಆಗಿದ್ದಾರೆ. ಆದರೆ ಕಲಾವಿದರು ಮಾತ್ರ ಎಲ್ಲಾ ಜಾತಿಯವರಾಗಿದ್ದಾರೆ. ನಾಯಕತ್ವ ಯಾವತ್ತೂ ಬ್ರಾಹ್ಮಣ ಸಂಜಾತರ ಕೈಯಲ್ಲೇ ಇರಬೇಕು ಹಾಗೂ ಎಲ್ಲಾ ಜಾತಿವರ್ಗದವರನ್ನು ದುಡಿಸಿಕೊಳ್ಳಬೇಕು ಎನ್ನುವುದು ಬಿಜೆಪಿಯ ಪಾಲಸಿ. ಹೀಗಾಗಿ ಬಹುತೇಕ ಕಲಾವಿದರು ಪಕ್ಷನಿಷ್ಟೆಯಿಂದಲ್ಲಾ ಕೇವಲ ಹಣ ಮಾಡಿಕೊಳ್ಳುವ ಆಸೆಯಿಂದ ನಟಿಸುತ್ತಿದ್ದಾರೆ. ದಿನಗೂಲಿಯಾಗಿ ಉರಿಬಿಸಿಲಿನಲ್ಲಿ ರಾಜ್ಯಾದ್ಯಂತ ಬೀದಿ ಬೀದಿ ಸುತ್ತುತ್ತಿದ್ದಾರೆ.  ಬೆವರು ಹರಿಸುತ್ತಿದ್ದಾರೆ. ಬೀದಿನಾಟಕ ತಂಡದ ಆಯೋಜಕರು ಬಿಜೆಪಿ ಕಚೇರಿಗಳಲ್ಲಿ ತಣ್ಣಗೆ ಕುಳಿತು ಹಣ ಎಣಿಸಿಕೊಳ್ಳುತ್ತಿದ್ದಾರೆ. ಬೀದಿ ನಾಟಕದ ಮಾನ ಬೀದಿ ಬೀದಿಗಳಲ್ಲಿ ಹರಾಜಾಗುತ್ತಿದೆ.

ಆಲ್ ದಿ ಬೆಸ್ಟ್ ಇಂಡಿಯಾಬೀದಿನಾಟಕ ಪ್ರದರ್ಶನ
ಈಗ ಬಿಜೆಪಿ ಪ್ರಾಯೋಜಿತ ಎರಡು ನಾಟಕಗಳ ಕುರಿತು ಚರ್ಚಿಸಲೇಬೇಕಿದೆ. ಬಿಜೆಪಿ ಕಛೇರಿಯ ಮುಂದೆ ಮಾಡಿದ ನಾಯಕ ಬೀದಿ ನಾಟಕ ನೋಡಿದರೆ ಅದನ್ನು ಬೀದಿ ನಾಟಕ ಎಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಸಾಲಾಗಿ ನಿಂತ ಕೆಲವು ಕಲಾವಿದರು ತಮ್ಮ ತಮ್ಮ ಡೈಲಾಗ್ಗಳನ್ನು ಒಪ್ಪಿಸುತ್ತಿದ್ದರಷ್ಟೇ. ನಟನೆ, ಬ್ಲಾಕಿಂಗ್, ಮೂವಮೆಂಟ್ಗಳಿಗಿಲ್ಲಿ ಅವಕಾಶವೇ ಇಲ್ಲ. ಹೆಚ್ಚು ಕಡಿಮೆ ರಾಜಕಾರಣಿಯ ಭಾಷಣವನ್ನು ತುಂಡರಿಸಿ ಸಂಭಾಷಣೆ ಮಾಡಿ ಬೇರೆ ಬೇರೆಯವರ ಬಾಯಲ್ಲಿ ಹೇಳಿಸಿದಂತಿತ್ತು. ಇಷ್ಟಕ್ಕೂ ಇಪ್ಪತ್ತು ನಿಮಿಷಗಳ ಭಾಷಣಾಧಾರಿತ ಬೀದಿನಾಟಕದಲ್ಲಿ ಇದ್ದದ್ದು ಕೇವಲ ಮೋದಿ ಕುರಿತ ಭಜನೆ ಹಾಗೂ ಗುಜರಾತ್ ಅಭಿವೃದ್ದಿಯ ಕುರಿತ ಸುಳ್ಳುಗಳ  ಸರಮಾಲೆಗಳು. ಆದರೂ ನಾಟಕ ಸಹ್ಯ. ಯಾಕೆಂದರೆ ಇದನ್ನು ಬರೆದದ್ದು ಒಬ್ಬ ಪ್ರೊಪೆಸರ್ ಆಗಿದ್ದರಿಂದ ಕೇವಲ ಬಿಜೆಪಿ ಹಾಗೂ ಮೋದಿ ಕುರಿತು ಹೆಚ್ಚು ವಿಜ್ರಂಭಿಸಿದ್ದಾರೆ. ಆದರೆ ಇನ್ನೊಂದು ನಾಟಕವಿದೆಯಲ್ಲಾ ಯಶವಂತ ಸರದೇಶಪಾಂಡೆ ಎನ್ನುವ ರಂಗೋಧ್ಯಮಿ ಬರೆದ ‘‘ಆಲ್ ದಿ ಬೆಸ್ಟ್ ಇಂಡಿಯಾ ಅದು ಸಂಪೂರ್ಣ ದ್ವೇಷವನ್ನೇ ಬಿತ್ತಿ ಬೆಳೆಯುವಂತಿದೆ. ಮರಾಠಿ ನಾಟಕವನ್ನು ಕನ್ನಡದಲ್ಲಿ ರಿಮೇಕ್ ಮಾಡಿದ ಸರದೇಶಪಾಂಡೆ ಆಲ್ ದಿ ಬೆಸ್ಟ್ ಎನ್ನುವ ಜೀವವಿರೋಧಿ ನಾಟಕವನ್ನು ಮಾಡುತ್ತಲೇ ಬಂದಿದ್ದಾರೆ. ಇದರಲ್ಲಿ ಅಂಗವಿಕಲರನ್ನು ಅವಮಾನಿಸಿ ಅಂತವರಲ್ಲಿ ಕೀಳರಿಮೆಯನ್ನು ಹುಟ್ಟಿಸುವಲ್ಲಿ ನಾಟಕದ ಕೊಡುಗೆ ಬೇಕಾದಷ್ಟಿದೆ. ಅದೇ ನಾಟಕವನ್ನು ಆಧರಿಸಿ ಈಗ ಆಲ್ ದಿ ಬೆಸ್ಟ್ ಇಂಡಿಯಾ ಎನ್ನುವ ಹೆಸರಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬೀದಿನಾಟಕವಾಗಿಸಿದ್ದಾರೆ. ಅದೇ ಕುರುಡ, ಮೂಗ ಮತ್ತು ಕಿವುಡ ಪಾತ್ರಗಳನ್ನಿಟ್ಟುಕೊಂಡು ವಿಕೃತ ಬೀದಿ ನಾಟಕ ಕಟ್ಟಿದ್ದಾರೆ. ಕಾಂಗ್ರೆಸ್ನ್ನು ಕುರುಡನಿಗೂ, ಜನತಾದಳವನ್ನು ಕಿವುಡನಿಗೂ ಹಾಗೂ ಬಾಕಿ ಎಲ್ಲಾ ಪಕ್ಷಗಳನ್ನು ಮೂಗನಿಗೂ ಹೋಲಿಸಿ ಬಿಜೆಪಿ ಪಕ್ಷವನ್ನು ಮಾತ್ರ ಪಕ್ಕಾ ಸಾಚಾ ಪಕ್ಷ ಎನ್ನುವುದನ್ನು ಆಲ್ ದಿ ಬೆಸ್ಟ್ ಇಂಡಿಯಾ ಬೀದಿ ನಾಟಕ ಹೇಳುತ್ತದೆ. ಜೊತೆಗೆ ಕೇಜ್ರಿವಾಲ್ರವರನ್ನೂ ಸಹ ಕಸ ಹಾಕಿ ಕಸ ಗೂಡಿಸುವವ ಎಂದು ಬಿಂಬಿಸಲಾಗಿದೆ.  ಒಂದು ಪಕ್ಷದ ಸಾಧನೆ, ಯೋಜನೆಗಳ ಬಗ್ಗೆ ಅತಿರೇಕವಾಗಿ ಹೇಳಿಕೊಳ್ಳಲಿ ಯಾರು ಬೇಡ ಎಂದವರು. ಆದರೆ ಮತ್ತೊಂದು ಪಕ್ಷದವರನ್ನು ಹೀಯಾಳಿಸುವುದು ಹಾಗೂ ದ್ವೇಷವನ್ನು ಕಾರುವುದು ನಿಜಕ್ಕೂ ಅಸಹ್ಯಕರ. ಇದು ಮಸಿ ಬಟ್ಟೆ ಇದ್ದಿಲಿಗೆ ಲೇ ಕರಿಯಾ ಎಂದು ಮೂದಲಿಸಿದಂತೆ. ಜೊತೆಗೆ ಇನ್ನೂ ಕೆಲವು ಭ್ರಷ್ಟ ಪಕ್ಷಗಳನ್ನು ಕುರುಡ, ಕಿವುಡ, ಮೂಗರಿಗೆ ಹೋಲಿಸಿ ಅಂಗವಿಕಲರಿಗೆ ಅವಮಾನಮಾಡಿದ್ದು ಜೀವವಿರೋಧಿ ಕೆಲಸ.

ಆಲ್ ದಿ ಬೆಸ್ಟ್ ಇಂಡಿಯಾವನ್ನೂ ಬೀದಿನಾಟಕ  ಎನ್ನುವ ಹಾಗಿಲ್ಲ. ಯಾಕೆಂದರೆ ಯಾವ ಕಲಾವಿದರೂ ಮಾತಾಡುವುದೇ ಇಲ್ಲ.  ಎಲ್ಲಾ ಕಲಾವಿದರ ಮಾತುಗಳನ್ನೂ ಮೊದಲೇ ರೆಕಾರ್ಡ ಮಾಡಲಾಗಿದೆ. ರೆಕಾರ್ಡೆಡ್ ಮಾತುಗಳಿಗೆ ಕಲಾವಿದರು ಕೈಬಾಯಿ ಆಡಿಸಿದರೆ ಆಯಿತು. ಇದೊಂದು ರೀತಿ ಬಿಜೆಪಿಯ ಸಧ್ಯದ ಸ್ಥಿತಿಯನ್ನು ಹೇಳುತ್ತದೆ. ಮೋದಿ ಹೇಳಿದ ಹಾಗೆ ಇಡೀ ಬಿಜೆಪಿಯ  ಎಲ್ಲಾ ನಾಯಕರೂ ಕೈಬಾಯಿ ಆಡಿಸುತ್ತಲೇ ಇದ್ದಾರೆ. ಮೋದಿಯ ರೆಕಾರ್ಡೆಡ್ ಭಾಷಣವನ್ನು ತೋರಿಸಿ ಮತ ಕೇಳುತ್ತಿದ್ದಾರೆ. ಯಾವುದೇ ನಾಯಕನಿಗೂ ಸ್ವಂತಿಕೆ ಅನ್ನುವುದಿಲ್ಲ.  ಪರೋಕ್ಷವಾಗಿ ಮೋದಿಯ ಸರ್ವಾಧಿಕಾರಿತನವನ್ನು ಈ ನಾಟಕದ ರಿಕಾರ್ಡೆಡ್  ಸಂಭಾಷಣೆಗಳು  ಸಾಂಕೇತಿಕವಾಗಿ ತೋರಿಸುತ್ತವೆ.  ಹೇಗೆ ಯಾವುದೇ ಬಿಜೆಪಿ ಪಕ್ಷದ ಯಾವುದೇ ಮುಖಂಡರೂ ತಮ್ಮ ಸ್ವಂತ ವಿಚಾರಗಳನ್ನು ಬಾಯಿ ಬಿಟ್ಟು ಹೇಳುವುದಿಲ್ಲವೋ ಹಾಗೆಯೇ ಈ ಬೀದಿ ನಾಟಕದ ಯಾವ ಕಲಾವಿದನಿಗೂ ಒಂದೇ ಒಂದು ಮಾತನ್ನು ಆಡಲು ಅವಕಾಶವಿಲ್ಲ. ಎಲ್ಲವನ್ನೂ ಮೊದಲೇ ಈ ಬೀದಿನಾಟಕದ ನಿರ್ದೇಶಕ ರೆಕಾರ್ಡ ಮಾಡಿಕೊಟ್ಟಿದ್ದಾನೆ. ಬೇರೆ ಪಕ್ಷಗಳು ಮೂಕರು ಹೌದೋ ಅಲ್ಲೋ ಗೊತ್ತಿಲ್ಲ. ಆದರೆ ಬಿಜೆಪಿಯ ಪರವಾಗಿ ಪ್ರಚಾರಕ್ಕೆ ಮಾಡುವ  ಈ ಬೀದಿ ನಾಟಕದ ಕಲಾವಿದರು ಮಾತ್ರ ನಿಜವಾದ ಮೂಕರು. ಏನೇ ಮಾತಾಡುವುದಿದ್ದರೂ ಟೇಪ್ ರಿಕಾರ್ಡರ್ ಮಾತಾಡುತ್ತದೆ. ಹೇಗಿದೆ ನೋಡಿ ಮೂಕನಾಟಕದ ಮೋಡಿ. ಎಲ್ಲಾ ಅನುಕೂಲ ಸಿಂಧು.
 

ಆಲ್ ದಿ ಬೆಸ್ಟ್ ಇಂಡಿಯಾಬೀದಿನಾಟಕ ಪ್ರದರ್ಶನ

ಆಲ್ ದಿ ಬೆಸ್ಟ್ ಇಂಡಿಯಾ ಬೀದಿ ನಾಟಕ ಬಿಜೆಪಿ ನಾಯಕರಿಗೆ ಅದೆಷ್ಟು ಇಷ್ಟವಾಗಿಹೋಯಿತೆಂದರೆ ನಾಯಕ ನಾಟಕವನ್ನು ಬಿಡಲಾಯಿತು. ಎಲ್ಲಾ ತುಂಡು ಗುತ್ತಿಗೆದಾರ ಬೀದಿ ನಾಟಕ ತಂಡಗಳಿಗೂ ಆಲ್ ದಿ ಬೆಸ್ಟ್ ಇಂಡಿಯಾ ಸ್ಕ್ರಿಪ್ಟನ್ನು ಕೊಡಲಾಯಿತು. ಬೀದಿ ಬೀದಿಗಳಲ್ಲಿ ಬೀದಿನಾಟಕ ಈಗ ದ್ವೇಷವನ್ನು ಬಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ನಾಟಕಕ್ಕೆ ಅನುಮತಿ ಕೊಟ್ಟ ಚುನಾವಣಾ ಆಯೋಗಕ್ಕೆ ಪಂಚೇಂದ್ರಿಯಗಳು ಸರಿ ಇವೆಯಾ ಎನ್ನುವ ಪ್ರಶ್ನೆ ಕಾಡುತ್ತದೆ.
         
ಚುನಾವಣಾ ಆಯೋಗದ ಕಣ್ಣೂ ಸಹ ಬೀದಿನಾಟಕದ ಮೇಲೆ ಬಿದ್ದಿದೆ. ಚುನಾವಣೆಯಲ್ಲಿ ಮತಹಾಕುವುದು ಜನರ ಆದ್ಯ ಕರ್ತವ್ಯ ಎಂದು ಪ್ರಚಾರ ಮಾಡಲು ಬೀದಿ ನಾಟಕವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ಅದು ಅವಲಂಬಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಗಳನ್ನು. ಬೆಂಗಳೂರು ಹೊರತು ಪಡಿಸಿ ಇಡೀ ಕರ್ನಾಟಕದಾದ್ಯಂತ ಚುನಾವಣಾ ಆಯೋಗದ ಪರ ಬೀದಿ ನಾಟಕಗಳನ್ನು ಜೋಗಿಲ ಸಿದ್ದರಾಜು ಎನ್ನುವ ಜಾನಪದ ಹಾಡುಗಾರ ಕೋಆರ್ಡಿನೇಟ್ ಮಾಡುತ್ತಿದ್ದರೆ, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಗೆ ಬರುತ್ತಿರುವ ಮೂರು ಲೋಕಸಭಾ ಕ್ಷೇತ್ರಗಳ ಬೀದಿನಾಟಕ ಪ್ರದರ್ಶನದ ಗುತ್ತಿಗೆಯನ್ನು ರಂಗಕರ್ಮಿ ನಾಗರಾಜಮೂರ್ತಿ ಪಡೆದಿದ್ದಾರೆ. ಒಟ್ಟು ಎಂಟು ಬೀದಿ ನಾಟಕ ತಂಡಗಳನ್ನು ನಾಗರಾಜಮೂರ್ತಿ ಮುನ್ನಡೆಸುತ್ತಿದ್ದಾರೆ.

 ಕರ್ನಾಟಕದಾದ್ಯಂತ ಒಟ್ಟು ೩೫ ತಂಡಗಳನ್ನು ಆಯ್ಕೆ ಮಾಡಿ ಮೂರುದಿನಗಳ ತರಬೇತಿಯನ್ನು ಕೊಟ್ಟು ಕೈಗೆ ಸ್ಕ್ರಿಪ್ಟ್ನ್ನು ಕೊಡಲಾಗಿದೆ. ಪ್ರತಿಯೊಂದು ತಂಡ ದಿನಕ್ಕೆ ಐದು ಪ್ರದರ್ಶನ ನೀಡುತ್ತಿದ್ದು ಎಲ್ಲಾ ತಂಡಗಳು ಆರು ದಿನಗಳಲ್ಲಿ 1050 ಪ್ರದರ್ಶನಗಳನ್ನು ನಾಡಿನ ಬೀದಿ ಬೀದಿಗಳಲ್ಲಿ ಕೊಡುತ್ತಿದೆ. ಆಯಾ ಜಿಲ್ಲಾಡಳಿತ ತಂಡಗಳಿಗೆ ಊಟ ವಸತಿ ಮತ್ತು ಸಾರಿಗೆಯ ವ್ಯವಸ್ಥೆಯನ್ನು ಮಾಡಬೇಕೆಂದು ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ. ಒಂದೊಂದು ತಂಡಕ್ಕೆ ಒಂದು ದಿನಕ್ಕೆ ಹದಿನೈದು ಸಾವಿರ ರೂಪಾಯಿ ಕೊಡುವುದೆಂದು ನಿರ್ಧರಿಸಲಾಗಿದ್ದು ಸಂಸ್ಕೃತಿ ಇಲಾಖೆಯಿಂದ ಹಣ ಬಿಡುಗಡೆಗೊಳ್ಳುತ್ತದೆ.  ಪ್ರತಿಯೊಂದು ತಂಡದಲ್ಲಿ ಹತ್ತು ಜನರಿರುತ್ತಾರೆ. ಇಲ್ಲಿಯೂ ಕೂಡಾ ತಂಡದ ರೂವಾರಿಗಳು ಹಣವನ್ನು ಪಡೆದು ಕಲಾವಿದರಿಗೆ 600 ರಿಂದ 800 ರೂಪಾಯಿಗಳನ್ನು ಪ್ರತಿ ದಿನಕ್ಕೆ ನೀಡುವುದಾಗಿ ಹೇಳಿದ್ದಾರೆ. ನಮ್ಮದು ಬಂಡವಾಳಶಾಹಿ ವ್ಯವಸ್ಥೆಯಾಗಿದ್ದರಿಂದ ಇಲ್ಲಿ ಗುತ್ತಿಗೆದಾರರು ಗರಿಷ್ಟ ಲಾಭಮಾಡಿಕೊಂಡರೆ ಕಲಾವಿದರು ಹಾಗೂ ಕನಿಷ್ಟ ವೇತನವನ್ನು ಪಡೆಯುತ್ತಾರೆ. ಕಲಾವಿದರನ್ನು ಕಾರ್ಮಿಕರ ಹಾಗೆ ದುಡಿಸಿಕೊಳ್ಳುವುದನ್ನು ಕಲಾವಿದರೇ ವಿರೋಧಿಸಬೇಕಿದೆ. ಇದು ಸರಕಾರಿ ಪ್ರೊಜೆಕ್ಟ್ ಆಗಿದ್ದರಿಂದ ಗುತ್ತಿಗೆದಾರರಿಗೆ ಹಣ ಕೊಡುವುದಕ್ಕಿಂತಲೂ ಸಂಸ್ಕೃತಿ ಇಲಾಖೆಯು ಪ್ರತಿಯೊಬ್ಬ ಕಲಾವಿದರ ಬ್ಯಾಂಕ್ ಅಕೌಂಟಿಗೆ ನೇರವಾಗಿ ಹಣವನ್ನು ಸಂದಾಯಮಾಡುವುದು ಉತ್ತಮ.

ಆಗ ಬೀದಿನಾಟಕಗಳಿಗೆ ಒಂದು ಸಂದೇಶವಿರುತ್ತಿತ್ತು ಹಾಗೂ ಜನಜಾಗೃತಿಯ ಉದ್ದೇಶವಿರುತ್ತಿತ್ತು. ಆದರೆ ಈಗ ಬೀದಿನಾಟಕವೆನ್ನುವುದು ರಾಜಕೀಯ ಪಕ್ಷದವರ ಕೈಗೆ ಸಿಕ್ಕು ಬರೀ ದ್ವೇಷವನ್ನು ಹರಡುತ್ತಿದೆ. ಚುನಾವಣಾ ಆಯೋಗದವರಿಗೆ ಪ್ರಚಾರ ಮಾಧ್ಯಮವಾಗಿದೆ.  ಬೀದಿ ನಾಟಕ ಎನ್ನುವ ಪ್ರತಿಭಟನಾ ಮಾಧ್ಯಮ ಹೀಗೆ ದುರುಪಯೋಗವಾಗುತ್ತಿದೆ. ಬೀದಿ ನಾಟಕಕ್ಕೆ ಇಂತಹ ದುರ್ಗತಿ ಬಂತಾ ಎಂದು ಬೇಸರವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಬೀದಿ ನಾಟಕ ಎನ್ನುವುದೂ ಸಹ ಗುತ್ತಿಗೆದಾರರಿಗೆ ಲಾಭ ತರುವ ವ್ಯಾಪಾರವಾಗಿ ಕಲಾವಿದರು ಕಾರ್ಮಿಕರಾದರಲ್ಲಾ ಎನ್ನುವ ಸಂಕಟ ನಿಜವಾದ ರಂಗಕರ್ಮಿಗಳನ್ನು ಕಾಡುತ್ತದೆ.

"ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ಜನರ ನಡುವಿನಿಂದ ಎಂದು ಹೇಳತೇವು ನಾವು.
ಮತ್ತೆ ಎತ್ತ ನಮ್ಮ ಪಯಣವೆಂದು ಕೇಳುತೀರಿ ನೀವು
ಮತ್ತೆ ಜನರತ್ತ ಪಯಣವೆಂದು ಹೇಳತೀವಿ ನಾವು…"

ಎನ್ನುವುದು ಪ್ರತಿಭಟನಾ ಮಾಧ್ಯಮವಾದ ಬೀದಿನಾಟಕಗಳ ಆರಂಭದ ಹಾಡಾಗಿತ್ತು. ಆದರೆ ರಾಜಕೀಯ ಪಕ್ಷಗಳು, ಸರಕಾರಗಳು ಹಾಗೂ ಬಂಡವಾಳ ಶಾಹಿಗಳ ಕೈಗೆ ಪರಿಕರವಾಗಿ ಸಿಕ್ಕು ಪ್ರಚಾರ ಮಾಧ್ಯಮವಾದ ಬೀದಿನಾಟಕಗಳ  ಆರಂಭದ ಹಾಡು ಹೀಗಿರಬಹುದಾಗಿದೆ….

"ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ರಾಜಕೀಯದ ನಡುವಿನಿಂದ ಎಂದು ಹೇಳತೇವು ನಾವು.
ಮತ್ತೆ ಎತ್ತ ನಮ್ಮ ಪಯಣವೆಂದು ಕೇಳುತೀರಿ ನೀವು
ಮತ್ತೆ ಪ್ರಚಾರದತ್ತ ಪಯಣವೆಂದು ಹೇಳತೀವಿ ನಾವು…"

                                    -ಶಶಿಕಾಂತ ಯಡಹಳ್ಳಿ

ಆಲ್ ದಿ ಬೆಸ್ಟ್ ಇಂಡಿಯಾಬೀದಿನಾಟಕ ಪ್ರದರ್ಶನ
 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ