“ಅವತ್ತು ಶೇಷಾದ್ರಿಪುರದ ನಟರಾಜ ಸಿನೆಮಾಮಂದಿರದ ಪಕ್ಕದಲ್ಲಿರುವ ವರದಾಚಾರ್ಯ ರಂಗಮಂದಿರದಲ್ಲಿ 2006, ಜನವರಿ 1 ರ ಹೊಸವರ್ಷದ
ದಿನದಂದು ನನ್ನ ಮದುವೆ. ಬೆಳಿಗ್ಗೆಯಿಂದ ಹಲವಾರು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಸಂಜೆ ಏಳಕ್ಕೆ ಸಾಂಕೇತಿಕವಾಗಿ ಹಾರ ಬದಲಾಯಿಸಿ ನಾನು ಮದುವೆಯಾದ ದಿನ. ‘ಗಟ್ಟಿಮೇಳವಿಲ್ಲ, ತಾಳಿಕಟ್ಟಲಿಲ್ಲ ಇದೂ ಒಂದು ಮದುವೇನಾ?’ ಎಂದು ಮೂಗು ಮುರಿದ ಸಂಪ್ರದಾಯವಾದಿಗಳೂ ಮದುವೆಗೆ ಬಂದಿದ್ದರು. ಇದೆಂತಾದ್ದು ಖಗ್ರಾಸ್ ಅಮವಾಸ್ಯೆ ದಿನ ಯಾವೊಂದು ಮುಹೂರ್ತ ಕೂಡಾ ನೋಡದೇ ಮದುವೆ ಮಾಡಿಕೊಳ್ಳುವುದೇ ಇವರು ಸಂಸಾರ ನೆಟ್ಟಗೆ ಮಾಡಿದಂಗೆ’ ಎಂದು ಆಡಿಕೊಂಡರು ಕೆಲವರು. ‘ಮದುವೆ ಎಂದರೆ ಹೀಗೆ ಯಾವುದೇ ಆಡಂಬರವಾಗಿರದೇ ಸರಳವಾಗಿರಬೇಕು’ ಎಂದು ಹಾರೈಸಿದವರು ಹಲವರು. ಈ ಎಲ್ಲಾ ಹಾರೈಕೆ ಮತ್ತು ಹಂಗಿಸುವೆಕೆಯ ನಡುಮಧ್ಯೆ ಸಿಕ್ಕಾಪಟ್ಟೆ ಆತಂಕದಲ್ಲಿ ನಾನಿದ್ದೆ. ಯಾಕೆಂದರೆ ನನ್ನ ಮೇಲೆ ಆರೆಸ್ಟ್ ವಾರೆಂಟ್ ಇತ್ತು. ಪೊಲೀಸರು ಎರಡು ದಿನದಿಂದ ನನ್ನನ್ನು ಹುಡುಕುತ್ತಿದ್ದರು. ಇದು ಕೆಲವೇ ಕೆಲವು ರಂಗಗೆಳೆಯರಿಗೆ ಮಾತ್ರ ಗೊತ್ತಿತ್ತು.
ಏನಂತಾ ಮಾಡಬಾರದ ತಪ್ಪು ಮಾಡಿದ್ದೆ ನಾನು? ಪೋಲೀಸರೇಕೆ ಹುಡುಕುತ್ತಿದ್ದರು?. ವಿವರ ಹೀಗಿದೆ. ಸುಮ್ಮನಿರದೇ ಇರುವೆ ಬಿಟ್ಟುಕೊಂಡರು ಅಂತಾರಲ್ಲ ಹಾಗೆ ನಾನೂ ಸಹ ನನ್ನ ಮದುವೆಗೆ ಎರಡು ದಿನಗಳ ಮುನ್ನ ಕಲಾಕ್ಷೇತ್ರದ ಕ್ಯಾಂಟೀನ್ ಬಳಿ ಒಬ್ಬ ಮಹಿಳೆಯ ಕೆನ್ನೆಗೆ ಬಾರಿಸಿದ್ದೆ. ಬಹುಷಃ ಅದೇ ಮೊಟ್ಟಮೊದಲ ಬಾರಿಗೆ ಮಹಿಳೆಯೊಬ್ಬಳ ಮೇಲೆ ನಾನು ಕೈಮಾಡಿದ್ದು. ಅದೇ ಕೊನೆ ಕೂಡಾ. ರವೀಂದ್ರ ಕಲಾಕ್ಷೇತ್ರದಲ್ಲಿ ಹೀಗೊಬ್ಬಳಿದ್ದಳು, ಒಂದೇ ಒಂದು ಅಕ್ಷರ ಬರೆಯಲು ಬರದಿದ್ದರೂ ನಾಲ್ಕು ಪುಟದ ರೋಲ್ಕಾಲ್ ಪತ್ರಿಕೆಯೊಂದನ್ನು ತಿಂಗಳಿಗೊಮ್ಮೆ ಪ್ರಿಂಟ್ ಮಾಡಿಸಿಕೊಂಡು ಬಂದು ಸಿಕ್ಕವರಿಗೆಲ್ಲ ಉಚಿತವಾಗಿ ಹಂಚುತ್ತಿದ್ದಳು. ಬ್ಲಾಕ್ಮೇಲ್ ಮಾಡುವುದೇ ಅವಳ ಉಪದಂದೆ ಆಗಿತ್ತು. ದೇಹಮಾರಾಟ ಪ್ರಮುಖ ವ್ಯವಹಾರವಾಗಿತ್ತು. ಅವತ್ತು ರಂಗಭೂಮಿಯ ಬಗ್ಗೆ ಅತ್ಯಂತ ಕೀಳಾಗಿ ಮಾತಾಡಿದಳು. ಜೊತೆಗೆ ನಮ್ಮ ‘ಇಪ್ಟಾ’ ತಂಡದ ಬಗ್ಗೆಯೂ ಕೆಟ್ಟದಾಗಿ ಆಪಾದನೆ ಮಾಡತೊಡಗಿದಳು. ನಾನು ‘ಇಪ್ಟಾ’ ಸಂಘಟನೆಯ ಸಂಚಾಲಕನಾಗಿದ್ದೆ. ಸಿಟ್ಟು ನೆತ್ತಿಗೆರತೊಡಗಿತ್ತು. ಅದ್ಯಾಕೋ ಅವತ್ತು ನನ್ನ ಮೇಲೆ ನಿಯಂತ್ರಣವನ್ನು ಕಳೆದುಕೊಂಡೆ. ಎಲ್ಲರೆದುರೇ ಕೆನ್ನೆಗೆ ಬಾರಿಸಿಯೇ ಬಿಟ್ಟೆ. ಅವಳು ಬಾಯಿ ಬಡಿದುಕೊಳ್ಳತೊಡಗಿದಳು.
ಮೈನಾ
ಚಂದ್ರುಗೆ ಮೌನ ಶೃದ್ದಾಂಜಲಿ
|
ಅದೆಲ್ಲಿದ್ದನೋ ಆ ಕಪ್ಪನೆಯ ದಪ್ಪನೆಯ ಉದ್ದನೆ ಕೂದಲಿನ ವ್ಯಕ್ತಿ. ಓಡಿ ಬಂದ. ಆ ಹೆಂಗಸನ್ನು ಗದರಿಸಿದ. ‘ಮೊದಲು ಇಲ್ಲಿಂದ ಹೋಗಿಬಿಡಿ ಅವಳ ಸಹವಾಸ ಸರಿಯಲ್ಲ’ ಎಂದು ನನ್ನನ್ನ ಕೈಹಿಡಿದುಕೊಂಡು ಸ್ವಲ್ಪ ದೂರ ಬಂದು ಕಳುಹಿಸಿದ. ಹಾಗೇ ನಾನು ಮುಂದೆ ಬಂದರೆ ಅಂಬಾಸ್ಡಾರ್ ಕಾರನಲ್ಲಿ ಸಿಜಿಕೆ ಕುಳಿತಿದ್ದರು. ‘ಏನಾಯ್ತು ಏನದು ಗಲಾಟೆ?’ ಎಂದು ಸಿಜಿಕೆ ಕೇಳಿದಾಗ ಎಲ್ಲಾ ಹೇಳಿದೆ. “ಸರಿಯಾಗಿ ಮಾಡಿದ್ರಿ ಬಿಡಿ’ ಎಂದು ನಕ್ಕ ಸಿಜಿಕೆ ಇದ್ದಕ್ಕಿದ್ದಂಗೆ ‘ಅದ್ಯಾಕ್ರೀ ಆ ಕೊಚ್ಚೆ ಮೇಲೆ ಕಲ್ಲು ಹಾಕಿದ್ರಿ, ದರಿದ್ರ ಅದು, ಇಂತವರಿಂದಲೇ ಕಲಾಕ್ಷೇತ್ರದ ವಾತಾವರಣ ಗಬ್ಬೆದ್ದು ಹೋಗಿದ್ದು’ ಎಂದರು. ‘ಏನು ವರಿ ಮಾಡಬೇಡಿ, ಹೋಗಿ ನಿಮ್ಮ ಮದುವೆ ತಯಾರಿ ಮಾಡಿಕೊಳ್ಳಿ, ಮುಂದೆ ಬಂದಿದ್ದನ್ನ ನಾನು ನೋಡ್ಕೊಳ್ತೇನೆ” ಎಂದು ಬೆನ್ನು ತಟ್ಟಿದರು. ಅದು ಸಿಜಿಕೆ.
ಆದರೆ ಆ ಹೆಂಗಸು ಹೋಗಿ ಪೊಲೀಸ್ ಸ್ಟೇಶನಲ್ಲಿ ನನ್ನ ವಿರುದ್ಧ ಕಂಪ್ಲೇಂಟ್ ಕೊಟ್ಟುಬಿಟ್ಟಳು. ಅದೂ ನನಗೆ ಗೊತ್ತಾಗಿದ್ದೇ ಮರುದಿನ. ಅದೇ ಉದ್ದಕೂದಲಿನ ಕಪ್ಪನೆಯ ವ್ಯಕ್ತಿ ನನ್ನ ಹತ್ತಿರ ಬಂದು ಹೇಳಿದಾಗ. ‘ನಿಮ್ಮ ಮೇಲೆ ಆರೆಸ್ಟ್ ವಾರೆಂಟ್ ಇದೆ. ಇಲ್ಲಿಂದ ಮೊದಲು ಹೋಗಿಬಿಡಿ, ಬೇಲ್ಗೆ ರೆಡಿ ಮಾಡ್ಕೊಳ್ಳಿ’ ಎಂದು ಎಚ್ಚರಿಸಿದ. ಪಕ್ಕದಲ್ಲಿರೋರಿಗೆ ಕೇಳಿದೆ ‘ಆತ ಯಾರು?’ ಅಂತ. ಆಗ ಗೊತ್ತಾಗಿದ್ದೆ ‘ಮೈನಾ ಚಂದ್ರು’ ಎಂದು. ಚಂದ್ರುಗೆ ನನ್ನ ಬಗ್ಗೆ ಗೊತ್ತಿತ್ತು. ಪತ್ರಿಕೆಗಳಲ್ಲಿ ನನ್ನ ಲೇಖನಗಳನ್ನು ಓದಿದ್ದ. ಆದರೆ ನನಗೆ ಅವರ ಪರಿಚಯವಿರಲಿಲ್ಲ. ಆದರೆ ಅವರ ಕಳಕಳಿ ಮಾತ್ರ ನನಗೆ ಇಷ್ಟ ಆಯಿತು. ಈ ಕೇಸಿನ ಕಂಪ್ಲೇಂಟ್ನಲ್ಲಿ ಮೈನಾ ಚಂದ್ರುವನ್ನು ಸಾಕ್ಷಿಯಾಗಿ ಅವರ ಅರಿವಿಗೆ ಬಾರದೇ ಅವಳು ನಮೂದಿಸಿದ್ದಳು. ನಂತರ ಸಿಜಿಕೆ ಹತ್ತಿರ ಮಾತಾಡಿದೆ. ‘ಕಂಪ್ಲೆಂಟ್ ಕೊಟ್ಕೋಂಡ್ರೆ ಕೊಟ್ಕೊಳ್ಳಿ ಬಿಡ್ರಿ, ಇಡೀ ಥೇಯಟರನಲ್ಲಿ ಯಾರೂ ಅವಳ ಪರವಾಗಿ ಸಾಕ್ಷಿ ಹೇಳೊದಿಲ್ಲ. ಕೇಸು ಬಿದ್ದೊಗುತ್ತೆ, ಚಿಂತೆ ಬಿಡಿ ಹೋಗಿ ನೆಮ್ಮದಿಯಾಗಿ ಮದುವೆ ಆಗಿ’ ಎಂದು ಅಭಯ ಕೊಟ್ಟಾಗ ನನಗೊಂಚೂರು ನೆಮ್ಮದಿ. ಆದರೆ ಆ ಪಾಪಿ ಹೆಂಗಸು ಅದು ಹೇಗೋ ನನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಯಾರಿಂದಲೋ ತೆಗೆದುಕೊಂಡು ಪೊಲೀಸ್ ಸ್ಟೇಶನ್ಗೆ ಹೋಗಿ ‘ಒಂದನೆ ತಾರೀಖು ಮದುವೆ ಇದೆ. ಹೋಗಿ ಬಂಧಿಸಲೇ ಬೇಕು’ ಎಂದು ಹಠಹಿಡಿದಿದ್ದಳು. ಮೈನಾ ಖುದ್ದಾಗಿ ಅವಳಿಗೆ ‘ಇದೆಲ್ಲಾ ಬೇಡಾ, ಕೇಸು ವಾಪಸ್ ಪಡೆದುಕೋ’ ಎಂದು ಕೇಳಿದರೂ ಆಕೆ ಯಾರ ಮಾತನ್ನೂ ಕೇಳಲೇ ಇಲ್ಲ. ಅತ್ತ ನನ್ನ ಮದುವೆ ನೆಪದಲ್ಲಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯತ್ತ ಗಮನ ಕೊಟ್ಟೆನಾದರೂ ಮನದೊಳಗೆ ಒಂದು ಆತಂಕ ಇದ್ದೇ ಇತ್ತು.
ಈ ಸಂದರ್ಭದಲ್ಲಿ ಇಬ್ಬರು ರಂಗವ್ಯಕ್ತಿಗಳು ನಾನು ಕೇಳದೇ ಇದ್ದರೂ ಸಹಾಯಕ್ಕೆ ಬಂದರು. ಒಬ್ಬರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಕಪ್ಪಣ್ಣ ಹಾಗೂ ಇನ್ನೊಬ್ಬರು ರಂಗಕರ್ಮಿ ನಾಗರಾಜಮೂರ್ತಿ. ಈ ಇಬ್ಬರೂ ಜನವರಿ ಒಂದರಂದು ಪೊಲೀಸ್ ಸ್ಟೇಶನ್ಗೆ ಖುದ್ದಾಗಿ ಹೋಗಿ ಇನ್ಸಪೆಕ್ಟರ್ ಮೇಲೆ ಒತ್ತಡ ತಂದು ‘ಬೇಲ್ ತರುವವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಇದು ರಂಗಭೂಮಿಗೆ ಸಂಬಂಧಿಸಿದ ವಿಷಯ’ ಎಂದು ವಿನಂತಿಸಿಕೊಂಡರು. ಇನ್ನೇನು ನಾನು ನನ್ನ ಸಂಗಾತಿಯೊಂದಿಗೆ ಹಾರ ಬದಲಾಯಿಸಿಕೊಳ್ಳುವುದು ಒಂದು ಗಂಟೆ ಬಾಕಿ ಇತ್ತು. ಆಗ ನನಗೊಂದು ಪೋನ್ ಬಂತು. “ಮಿತ್ರಾ ಚಿಂತೆ ಬೇಡ. ನಾನೀಗ ನಿಮ್ಮ ಮದುವೆಗೆ ಬರುವ ಸ್ಥಿತಿಯಲ್ಲಿ ಇಲ್ಲ. ಆ ಹೆಂಗಸಿನ ಬಗ್ಗೆಯಾಗಲೀ ಇಲ್ಲವೇ ಪೊಲೀಸರ ಬಗ್ಗೆಯಾಗಲೀ ವರ್ರೀನೇ ಮಾಡ್ಕೋಬೇಡಾ, ಈ ಸದ್ಯಕ್ಕೆ ಪ್ರಾಬ್ಲಂ ಸಾಲ್ವ ಆಗಿದೆ, ಏನೇ ಬಂದರೂ ನಾನಿದ್ದೇನೆ....ಚಿಂತೆ ಮಾಡಬೇಡ” ಎಂದು ತೊದಲುತ್ತಾ ನನಗೆ ಮೊಬೈಲನಲ್ಲಿ ಧೈರ್ಯವನ್ನು ಹೇಳಿದ್ದು ಅದೇ ಮೈನಾ ಚಂದ್ರು. ನಂತರ ಓಡಿ ಬಂದ ಸಬ್ಬನಹಳ್ಳಿ ರಾಜು ಲೇಟೆಸ್ಟ್ ವಿದ್ಯಮಾನಗಳನ್ನು ತಿಳಿಸಿ ‘ಆತಂಕವಿಲ್ಲದೇ ಮದುವೆ ಕಾರ್ಯ ಸಾಗಲಿ’ ಎಂದು ಹಾರೈಸಿದ. ನಾನು ನಿಟ್ಟುಸಿರು ಬಿಟ್ಟೆ. ರಂಗಭೂಮಿಯಲ್ಲಿ ಯಾರಿಗೆ ಅದೆಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ರಂಗಕರ್ಮಿಯೊಬ್ಬ ಅಪಾಯದಲ್ಲಿರುವುದು ತಿಳಿದರೆ ಉಳಿದವರು ಅವನ ರಕ್ಷಣೆಗೆ ಧಾವಿಸಿ ಬರುವುದು ಇದೆಯಲ್ಲಾ ಇದೇ ರಂಗಭೂಮಿ ಬೆಸೆಯುವ ಆತ್ಮೀಯತೆ. ಈ ಎಲ್ಲದರ ಹಿಂದೆ ಇದ್ದವನು ಮೈನಾ ಚಂದ್ರು. ನಂತರ ನಾನು ಬೇಲ್ ಪಡೆದೆ. ಕೋರ್ಟಲ್ಲಿ ಕೇಸ್ ನಡೆಯಿತು. ಮೈನಾ ಎಂದೂ ಸಾಕ್ಷಿ ಹೇಳಲು ಬರಲೇ ಇಲ್ಲ. ಕೊನೆಗೊಂದು ದಿನ ಇಡೀ ಕೇಸೆ ಬಿದ್ದು ಹೋಯಿತು. ಆದರೆ ಮೈನಾ ನನ್ನ ಆತಂಕದ ಪರಿಸ್ಥಿತಿಯಲ್ಲಿ ಅಪರಿಚಿತನಾದ ನನಗೆ ಮಾಡಿದ ಸಹಾಯ ಮಾತ್ರ ಪ್ರತಿ ವರ್ಷ ಜನವರಿ ಒಂದರಂದು ನನ್ನ ಮದುವೆಯ ವಾರ್ಷಿಕೋತ್ಸವದ ದಿನದಂದು ನನಗೆ ಮರೆಯದೇ ನೆನಪಾಗುತ್ತದೆ. ಮುಂದೆ ಚಂದ್ರು ನನ್ನ ಆತ್ಮೀಯ ರಂಗಗೆಳೆಯರಲ್ಲಿ ಒಬ್ಬನಾದ. ಪತ್ರಿಕೆಯಲ್ಲಿ ಬರುವ ನನ್ನ ಲೇಖನಗಳನ್ನು ಓದಿ ಜಗಳವಾಡುವಷ್ಟು ಹತ್ತಿರವಾದ. ಆದರೆ ಇದ್ದಕ್ಕಿದ್ದಂಗೆ 2008 ಸೆಪ್ಟಂಬರ್ 18 ರಂದು ತನ್ನ 42 ನೆಯ ವಯಸ್ಸಲ್ಲಿ ಖಾಯಂ ಆಗಿ ನಮ್ಮೆಲ್ಲರನ್ನೂ ಅಗಲಿಹೋದ. ಅಂತಹ ಮಾನವೀಯ ವ್ಯಕ್ತಿ ಈಗ ಕೇವಲ ನೆನಪು ಮಾತ್ರ ಎನ್ನುವುದು ಅತ್ಯಂತ ಖೇದಕರ ಸಂಗತಿ. ಸಾಯಬಾರದ ವಯಸ್ಸಲ್ಲಿ ಸತ್ತು ಹೋದ ಕಲಾವಿದ ಚಂದ್ರು ಕುರಿತು ಇದಕ್ಕಿಂತ ಹೆಚ್ಚಿಗೆ ಹೇಳಲು ನನಗೆ ಸಾಧ್ಯವೇ ಇಲ್ಲ” .
ಇಷ್ಟು ಹೇಳಿ ನನ್ನ ಮಾತು ಮುಗಿಸಿದೆ. ಚಂದ್ರುನ ನೆನಪುಗಳನ್ನು ನನ್ನ ಬದುಕಿನ ಬಹು ಮುಖ್ಯ ಘಟನೆಯೊಂದಿಗೆ ಸಮೀಕರಿಸಿ ಸಾರ್ವಜನಿಕ ಸಭೆಯಲ್ಲಿ ಹಂಚಿಕೊಂಡು ಹಗುರಾದೆ. ಎಪ್ರಿಲ್ ನಾಲ್ಕು ದಿವಂಗತ ಮೈನಾ ಚಂದ್ರು ಹುಟ್ಟಿದ ದಿನ. ಅವರ ನೆನಪಿಗಾಗಿ 2014 ಎಪ್ರಿಲ್ 4ರಂದು ‘ಜನಪದ’ ರಂಗತಂಡದ ಬಿ.ಜಿ.ರಾಮಕೃಷ್ಣ, ಶ್ರೀನಗರ ಚಂದ್ರು ಹಾಗೂ ರಂಗಗೆಳೆಯರು ‘ಮೈನಾ ಚಂದ್ರು ನೆನಪು’ ಕಾರ್ಯಕ್ರಮವನ್ನು ಕೆ.ಹೆಚ್.ಕಲಾಸೌಧದಲ್ಲಿ ಆಯೋಜಿಸಿದ್ದರು. ರಂಗ ನೇಪತ್ಯ ಶಿಲ್ಪಿ ಶಶಿಧರ್ ಅಡಪ, ಪತ್ರಕರ್ತ ರಾಜು ಮಳವಳ್ಳಿ ಹಾಗೂ ನನ್ನನ್ನು ಮೈನಾ ಚಂದ್ರುವಿನ ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಳ್ಳಲು ಆಹ್ವಾನಿಸಿದ್ದರು. ಆ ದಿನ ಯಾರಿಗೂ ಹೇಳಲಾರದ ನನ್ನ ಹಾಗೂ ಚಂದ್ರು ನಡುವಿನ ಅನುಭವವನ್ನು ಸಾರ್ವಜನಿಕವಾಗಿ ನೆನಪಿಸಿಕೊಂಡೆ. ನೆನಸಿಕೊಂಡಂತೆ ಕಣ್ಣಾಲಿಗಳು ತುಂಬಿಬಂದವು. ನಂತರ ವೇದಿಕೆ ಇಳಿದು ಕುಳಿತಾಗಲೂ ಮೈನಾ ಚಂದ್ರುವಿನ ಬದುಕು, ಸಾಧನೆ ಮತ್ತು ವೇದನೆ ನನ್ನ ಕಣ್ಣಮುಂದೆ ದಾರಾವಾಹಿಯಂತೆ ಮೂಡತೊಡಗಿತು. ಅದರ ಕೆಲವು ವಿವರಗಳು ಹೀಗಿವೆ.
ಬಿ.ಸುರೇಶರವರ ನಿರ್ದೇಶನದ ನಾಟಕವೊಂದರ
ಚಿತ್ರ.
ಮೈನಾ, ಬಿ.ಸುರೇಶ, ಸಿಹಿಕಹಿಚಂದ್ರು, ಬಿ.ಜಿ.ರಾಮಕೃಷ್ಣ ಮತ್ತಿತರರು.
|
ಎಂ.ಎನ್ ಚಂದ್ರು ಅಲಿಯಾಸ್ ಮೈನಾ ಚಂದ್ರು ಮೊಟ್ಟಮೊದಲಿಗೆ ನಾಟಕದಲ್ಲಿ ಬಣ್ಣ ಹಚ್ಚಿದ್ದು ತಮ್ಮ ಹದಿನಾರನೇ ವಯಸ್ಸಿನಲ್ಲಿ. 1982ರಲ್ಲಿ ಎಂ.ಇ.ಶ್ರೀಕಂಠಯ್ಯನವರು ನಿರ್ದೇಶಿಸಿದ್ದ ‘ಕುರಿದೊಡ್ಡಿ ಕುರುಕ್ಷೇತ್ರ’ದಲ್ಲಿ ಜುಂಜನ ಪಾತ್ರವನ್ನು ಕೊಟ್ಟು ಚಂದ್ರುವನ್ನು ರಂಗಭೂಮಿಗೆ ಪರಿಚಯಿಸಿದ್ದರು. ಆ ನಂತರವೂ ಅವಕಾಶ ಸಿಕ್ಕಾಗೆಲ್ಲಾ ನಾಟಕದಲ್ಲಿ ನಟಿಸುತ್ತಿದ್ದ ಮೈನಾನೊಳಗಿನ ಪ್ರತಿಭೆಯನ್ನು ಗುರುತಿಸಿದ್ದು ರಂಗದಿಗ್ಗಜ ಸಿ.ಜಿ.ಕೃಷ್ಣಸ್ವಾಮಿಯವರು. 1988ರಲ್ಲಿ ‘ಷೆಕ್ಸಪೀಯರನ ಸ್ವಪ್ನ ನೌಕೆ’ ನಾಟಕದಲ್ಲಿ ಅವಕಾಶವನ್ನು ಕೊಟ್ಟರು. ನಂತರ ಸಿಜಿಕೆಯವರ ನಾಟಕಗಳಲ್ಲಿ ಚಂದ್ರು ನಟಿಸುತ್ತಿದ್ದರು. ಸಿಜಿಕೆಗೆ ಮೈನಾ ಬಗ್ಗೆ ಅದೆಷ್ಟು ಒಲವು ಇತ್ತೆಂದರೆ ಸಿಜಿಕೆ ಯವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಮೈನಾ ಚಂದ್ರುರವರನ್ನು ಅಕಾಡೆಮಿಗೆ ಕೋಆಪ್ಟ್ ಸದಸ್ಯರನ್ನಾಗಿ ನಿಯಮಿಸಿಕೊಂಡಿದ್ದರು. ಕೆ.ಶಿವರುದ್ರಪ್ಪನವರ ನಿರ್ದೇಶನದ ‘ದೇವರ ಹೆಣ’ ನಾಟಕದಲ್ಲಿ ಕತ್ತಲ ಪಾತ್ರದಲ್ಲಿ ಮೈನಾ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದರು. ಜಯತೀರ್ಥ ಜ್ಯೋಶಿಯವರ ನಿರ್ದೇಶನದಲ್ಲಿ ‘ಜೋಕುಮಾರಸ್ವಾಮಿ’, ಬಿ.ಜಿ.ರಾಮಕೃಷ್ಣನವರ ನಿರ್ದೇಶನದಲ್ಲಿ ‘ಬೆಪ್ಪನ ಚಿತ್ರ’....
ಹೀಗೆ ಹಲವಾರು ನಾಟಕಗಳಲ್ಲಿ ಚಂದ್ರು ಅಭಿನಯಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಮೈನಾ ಚಂದ್ರು ರಂಗಭೂಮಿಯಲ್ಲಿ ಒಂದು ರೀತಿಯಲ್ಲಿ ಆಲ್ರೌಂಡರ್ ಆಗಿದ್ದ. ನಾಟಕ ರಚನೆ, ನಿರ್ದೇಶನ, ಅಭಿನಯ ಹಾಗೂ ರಂಗಸಂಘಟನೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ. ‘ಮೀನಾಕ್ಷಿ ಮರ್ಡರ್ ಮಿಸ್ಟ್ರಿ’ ನಾಟಕವನ್ನು ರೂಪಾಂತರಿಸಿ ನಿರ್ದೇಶಿಸಿದ, ನಾಗತಿಹಳ್ಳಿ ಚಂದ್ರಶೇಖರರವರ ಪುಟ್ಟ ಕಥೆಯನ್ನು ನಾಟಕವಾಗಿ ಬರೆದು ‘ಪುಟ್ಟಕ್ಕನ ಮೆಡಿಕಲ್ ಕಾಲೇಜು’ ನಾಟಕ ಹಾಗೂ ‘ಬೂಟು ಬಂಧೂಕಗಳ ನಡುವೆ’ ನಾಟಕವನ್ನೂ ನಿರ್ದೇಶಿಸಿದ.
ಇಷ್ಟಕ್ಕೂ ಚಂದ್ರು ಜೊತೆ ಈ ಮೈನಾ ಹೆಸರು ಹೇಗೆ ಬಂತು? ಎನ್ನುವುದೊಂದು ಅಚ್ಚರಿಯ
ವಿಷಯ. ಯಾವುದೋ ನಾಟಕದಲ್ಲಿ ಮೈನಾ ಎನ್ನುವ ಪಾತ್ರ ಮಾಡಿದ್ದರು ಅದಕ್ಕೆ ಆ ಪಾತ್ರದ ಹೆಸರೇ ಚಂದ್ರುವಿನ
ಜೊತೆ ಸೇರಿಕೊಂಡಿತು ಎಂದು ಕೆಲವರು ನಂಬಿದ್ದಾರೆ. ಒಂದು ನಾಟಕದಲ್ಲಿ ಮೈನಾ ಹಕ್ಕಿ ಪಾತ್ರವನ್ನು ಚಂದ್ರು
ಮಾಡಿದ್ದರಿಂದ ಮೈನಾ ಚಂದ್ರು ಆದರು ಎಂದು ಮೈನಾ ಚಂದ್ರುವಿನ ಜೊತೆಗೆ ಬೆಳೆದ ಶ್ರೀನಗರ ಚಂದ್ರು ಅಭಿಪ್ರಾಯ
ಪಡುತ್ತಾರೆ. ಆದರೆ ಈ ಎರಡೂ ಕಲ್ಪನೆಗಳಲ್ಲಿ ಸತ್ಯವಿಲ್ಲ. ಮೈನಾ ಹೆಸರಿನ ಗುಟ್ಟಿರುವುದು ಗೋಕಾಕ್ ಚಳುವಳಿಯಲ್ಲಿ.
ಆಗ ಕರ್ನಾಟಕದಲ್ಲಿ ಗೋಕಾಕ ಚಳುವಳಿ ಕಾವೇರಿತ್ತು.
ಡಾ.ರಾಜಕುಮಾರರವರೇ ಗೋಕಾಕ ವರದಿ ಜಾರಿಗೆ ಒತ್ತಾಯಿಸಿ ಬೀದಿಗಿಳಿದಿದ್ದರು. ಕನ್ನಡ ಭಾಷೆಯ ಅಭಿಮಾನ
ಕನ್ನಡಿಗರಲ್ಲಿ ಮೇರೆ ಮೀರಿತ್ತು. ಆಗ ಎನ್.ಎಂ.ಚಂದ್ರು ಎನ್ನುವ ಕಲಾವಿದ ತನ್ನ ಹೆಸರಿನ ಮುಂದಿರುವ
ಇಂಗ್ಲೀಷ್ ಇನೀಶಿಯಲ್ ನ್ನು ದಿಕ್ಕರಿಸಿದ. ಆಂಗ್ಲ ಅಕ್ಷರಗಳ ಮೋಹ ತೊರೆದು ಯಾಕೆ ಕನ್ನಡ ಅಕ್ಷರಗಳನ್ನು ಬಳಸಬಾರದು ಎಂದು ಆಲೋಚಿಸಿದ. ಚಂದ್ರು ತಂದೆ
ಹೆಸರು ಮೈಲಾರಾ ನಾಗರಾಜ್ ಎನ್ನುವುದು. ಈ ಎರಡೂ ಪದಗಳ ಮೊದಲಿನ ಅಕ್ಷರಗಳನ್ನು ಸೇರಿಸಿಕೊಂಡು ಮೈನಾ ಚಂದ್ರು ಎಂದು ತನ್ನ ಹೆಸರನ್ನು
ಬದಲಾಯಿಸಿಕೊಂಡ. ಮಾತೃಬಾಷಾ ಅಭಿಮಾನ ಅಂದರೆ ಹೀಗಿರಬೇಕು. ಈಗ ಅದೆಷ್ಟು ಅಸಂಖ್ಯಾತ ಕನ್ನಡಿಗರು ತಮ್ಮ ಪ್ರತಿಷ್ಟೆಗೋ, ಫ್ಯಾಶನ್ನಿಗೋ,
ಆಂಗ್ಲಾಭಿಮಾನಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ ತಮ್ಮ ಹೆಸರಿನ ಮುಂದೆ ಇಂಗ್ಲೀಷ್ ಇನಿಷಿಯಲ್ ಗಳನ್ನು ಇಟ್ಟುಕೊಂಡಿದ್ದಾರೆ. ಅಂತವರಿಗೆಲ್ಲಾ
ಮೈನಾ ಚಂದ್ರುವಿನ ಕನ್ನಡಾಭಿಮಾನ ಮಾದರಿಯಾಗಬೇಕಾಗಿದೆ. ಅಂತವರು ತಮ್ಮ ಆಂಗ್ಲಮೋಹದಿಂದ ಹೊರಬಂದು ಕನ್ನಡ
ಇನೀಷಿಯಲ್ ಗಳನ್ನು ಇಟ್ಟುಕೊಂಡು ಕನ್ನಡತನ ಮೆರೆಯಬೇಕಿದೆ. ಈ ಭಾಷಾಭಿಮಾನದ ವಿಷಯದಲ್ಲಿ ಮೈನಾ ಚಂದ್ರುಗೆ ಅಭಿನಂದಿಸಲೇ ಬೇಕು.
ಮೈನಾ ಇದ್ದದ್ದೇ ಹಾಗೆ. ಯಾವಾಗಲೂ ಒಂದು ಗುಂಪು ಕಟ್ಟಿಕೊಂಡೇ ಇರುತ್ತಿದ್ದ. ನಿರಂತರವಾಗಿ ನಾಟಕ ಇಲ್ಲವೇ ಟಿವಿ ದಾರಾವಾಹಿ ನಟನೆ ಹಾಗೂ ನಿರ್ಮಾಣಗಳ ಬಗ್ಗೆಯೇ ಮಾತಾಡುತ್ತಿದ್ದ. ಹುಂಬುತನ ಅವರ ಐಡೆಂಟಿಟಿ ಎನ್ನುವ ಹಾಗಿತ್ತು. ಯಾಕೆಂದರೆ ಮೈನಾ ಬೆಳೆದದ್ದು ಸಿಜಿಕೆ ಗರಡಿಯಲ್ಲಿ. ತನ್ನಂತೆಯೇ ಇರುವ ಕೆಲವು ಅಲೆಮಾರಿ ಹುಡುಗರನ್ನು ಸೇರಿಸಿಕೊಂಡು 1990ರಲ್ಲಿ ‘ಜನಪದ’ ರಂಗತಂಡವನ್ನು ಕಟ್ಟಿದ. ಆಗ ಆ ರಂಗತಂಡದಲ್ಲಿದ್ದವರು ಬಿ.ಜಿ.ರಾಮಕೃಷ್ಣ, ಮುನಿ ಜನಪದ, ಕೃಷ್ಣಮೂರ್ತಿ...
ಮುಂತಾದ ರಂಗಮಿತ್ರರು. ಕೆಎಎಸ್ ಅಧಿಕಾರಿ ಕಮ್ ಸಿನೆಮಾ ನಟ ಶಿವರಾಂರವರು ಈ ‘ಜನಪದ’ ತಂಡದ ಗೌರವ ಅಧ್ಯಕ್ಷರಾಗಿದ್ದರು. ಈ ತಂಡದ ಮೊದಲ ನಾಟಕ ‘ಏಕಲವ್ಯ’, ಎನ್ಎಸ್ಡಿ ಇಂದ ಆಗತಾನೆ ಬಂದಿದ್ದ ಸುರೇಶ ಆನಗಳ್ಳಿಯವರಿಗೆ ಆರಂಭದ ಹಂತದಲ್ಲಿ ಈ ‘ಏಕಲವ್ಯ’ ನಾಟಕ ನಿರ್ದೇಶನದ ಅವಕಾಶವನ್ನು ಕೊಟ್ಟಿದ್ದೇ ನಮ್ಮ ಮೈನಾ ಚಂದ್ರು. ಹೊಟೇಲ್ ಸಪ್ಲೈಯರ್ಗಳು, ಕಾರ್ಮಿಕರು, ಕಲಾಕ್ಷೇತ್ರದಲ್ಲಿ ಸುಮ್ಮನೆ ಸುಳಿದಾಡುವ ಹುಡುಗರನ್ನು ಆತ್ಮೀಯತೆಯಿಂದ ಮಾತಾಡಿಸಿ, ಕೆಲವೊಮ್ಮೆ ಪುಸಲಾಯಿಸಿ ನಾಟಕದ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮೈನಾ ಹುಡುಕಿ ಕರೆತಂದ ಅನೇಕ ಹುಡುಗರು ಈಗ ನಾಟಕ ಹಾಗೂ ಟಿವಿ ಕ್ಷೇತ್ರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಈಗ ಟಿವಿ ದಾರಾವಾಹಿಗಳನ್ನು ಒಂದರ ನಂತರ ಒಂದನ್ನು ನಿರ್ದೇಶಿಸುತ್ತಿರುವ ಶ್ರೀನಗರ ಚಂದ್ರು ಕೂಡಾ ಒಬ್ಬರು. ಕುತೂಹಲಕ್ಕೆ ನಾಟಕ ನೋಡಲು ಬಂದಿದ್ದ ಶ್ರೀನಗರ ಚಂದ್ರುವನ್ನು ಕರೆದು ನಾಟಕದಲ್ಲಿ ತೊಡಗಿಸಿಕೊಂಡ ಮೈನಾ ಚಂದ್ರು ಆಮೇಲೆ ಟಿವಿಯ ಹಾದಿಯನ್ನು ತೋರಿಸಿದರು. ಮೈನಾ ನಂತರ ಶ್ರೀನಗರ ಚಂದ್ರು ಟಿವಿ ದಾರಾವಾಹಿಗಳ ನಿರ್ದೇಶನದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾರೆ. ಹೀಗೆ ಹಲವಾರು ಜನ ಯುವಕರನ್ನು ಕಲಾವಿದರನ್ನಾಗಿ ಬೆಳೆಸಿದ ಮೈನಾ ಚಂದ್ರುರವರನ್ನು ಅವರ ಜೊತೆಜೊತೆಗೆ ರಂಗಭೂಮಿಯಲ್ಲಿ ಬೆಳೆದ ಕೆಲವು ಗೆಳೆಯರು ಕಾರ್ಯಕ್ರಮ ಮಾಡಿ ನೆನಪಿಸಿಕೊಳ್ಳುತ್ತಿದ್ದಾರೆ.
ಮೈನಾ
ಕುರಿತು ಮಾತಾಡಲು 'ಜನಪದ' ತಂಡ ಆಹ್ವಾನಿಸಿದ ಅತಿಥಿಗಳು. |
ಮೈನಾ ಶೋಭಾರವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ಮಗ ಹುಟ್ಟಿದ್ದ. ಸಂಸಾರ ನಡೆಸಲೇಬೇಕಾಗಿತ್ತು. ನಾಟಕದಲ್ಲಿ ಬದುಕು ನಡೆಸುವುದು ಅಸಾಧ್ಯವಾದಾಗ ಟಿವಿಯತ್ತ ಮುಖ ಮಾಡಿದ ಮೈನಾ ಎನ್.ಎಸ್.ಶಂಕರ್ರವರ ‘ಶೋಧ’ ಟಿವಿ ದಾರಾವಾಹಿಯಲ್ಲಿ 1991ರಲ್ಲಿ ಅಭಿನಯಿಸಿದರು. ಹೋಗ್ಲಿ ಬಿಡಿ ಸರ್, ಮಹಾಯಜ್ಞ, ಕುಬೇರಪ್ಪ ಆಂಡ್ ಸನ್ಸ್....
ಹೀಗೆ ಹಲವಾರು ದಾರಾವಾಹಿಗಳನ್ನು ನಿರ್ದೇಶಿಸಿ ನೂರಾರು ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ ಚಂದ್ರು ಡಿಡಿ9 ದೂರದರ್ಶನಕ್ಕೆ ಕೆಲವು ಟೆಲಿಫಿಲಂಗಳನ್ನು ನಿರ್ಮಿಸಿದ. ಟಿವಿ ದಾರಾವಾಹಿಗಳಲ್ಲಿ ಅಭಿನಯಿಸುತ್ತಲೇ ಸಿನೆಮಾದಲ್ಲಿ ಸಿಕ್ಕ ಅವಕಾಶಗಳನ್ನೂ ಬಳಿಸಿಕೊಂಡು ಚಿಕ್ಕ ಪುಟ್ಟ ಪಾತ್ರಗಳಲ್ಲೂ ಗಮನಾರ್ಹವಾಗಿ ಅಭಿನಯಿಸಿ ಗಮನಸೆಳೆದ. ಉದಾಹರಣೆಗೆ ‘ಉಲ್ಟಾ ಪಲ್ಟಾ’ ಸಿನೆಮಾದಲ್ಲಿ ಉದ್ದನೆಯ ಜುಟ್ಟು ಬಿಟ್ಟುಕೊಂಡ ಹಳ್ಳಿಯ ಹುಡುಗ ಪೇಟೆಗೆ ಬಂದು ಎಡಬಿಡಂಗಿಯಾಗಿ ವರ್ತಿಸುವುದನ್ನು ನೋಡಿದವರು ಮೈನಾ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ಶೋಧ ಸೀರಿಯಲ್ ಡೈರೆಕ್ಟರ್ ಶಂಕರ್ ನಿರ್ದೇಶಿಸಿದ ಉಲ್ಟಾಪಲ್ಟಾ’ ಸಿನೆಮಾದ ನಿರ್ಮಾಣದಲ್ಲಿ ಮೈನಾ ಶ್ರಮ ಕೂಡಾ ಇತ್ತು. ಆ ಸಿನೆಮಾಗೆ ಸಹ ನಿರ್ಮಾಪಕ ಕೂಡಾ ಮೈನಾ ಚಂದ್ರುವೇ. ಚಂದ್ರು ಎಷ್ಟು ಭಾವಜೀವಿ ಆಗಿದ್ದನೋ ಅಷ್ಟೇ ಸ್ನೇಹಜೀವಿ ಕೂಡ. ಎಲ್ಲರನ್ನೂ ಮಿತ್ರಾ ಎಂದೇ ಕರೆಯುತ್ತಿದ್ದ. ಈ ಮಿತ್ರರ ಮೇಲೆ ಅದೆಷ್ಟು ವ್ಯಾಮೋಹ ಇತ್ತು ಎಂದರೆ ತನ್ನ ಒಬ್ಬನೇ ಮಗನ ಹೆಸರನ್ನೂ ‘ಮಿತ್ರ’ ಎಂದೇ ಇಟ್ಟು ಖುಷಿಪಟ್ಟ ಚಂದ್ರೂಗೆ ಮುಂದೆ ತನ್ನ ಕೆಲವು ಕೆಟ್ಟ ಗೆಳೆಯರ ಸಹವಾಸವೇ ಆತನ ಬದುಕಿಗೆ ಮುಳುವಾಗಿದ್ದೊಂದು ವಿಪರ್ಯಾಸ.
ಮೈನಾ
ನೆನಪಲ್ಲಿ ಶಶಿಧರ್ ಅಡಪರವರು
|
ಬರುಬರುತ್ತಾ ಚಂದ್ರೂಗೆ ಅದೇನಾಯಿತೋ ಗೊತ್ತಿಲ್ಲ ಕುಡಿತ ಚಟಕ್ಕೆ ಅಂಟಿಕೊಂಡ. ರಂಗಭೂಮಿಯಲ್ಲಿದ್ದಾಗ ಯಾರಾದರೂ ಕುಡುಕರನ್ನು ಕಂಡರೆ ಬೈಯುತ್ತಿದ್ದ ಚಂದ್ರು ಮಧ್ಯಪಾನದ ದಾಸಾನುದಾಸನಾದ. ಟಿವಿ ದಾರಾವಾಹಿಗಳ ಏಕತಾನತೆಯಿಂದ ಬೇಸತ್ತು ಹೋದ. ಸಿನೆಮಾದಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಬೇಕಾದಷ್ಟು ಪ್ರಯತ್ನಿಸಿದರೂ ಅದು ಕೈಗೂಡಲಿಲ್ಲ. ಅವಕಾಶಗಳ ಕೊರತೆಯಿಂದ ಬೇಸರಗೊಂಡ. ಮತ್ತೆ ರಂಗಭೂಮಿಯತ್ತ ಬರಲೂ ಆಗದೇ, ದೃಶ್ಯಮಾಧ್ಯಮಗಳಲ್ಲಿ ಇರಲೂ ಆಗದೇ ಒಂದು ರೀತಿಯಲ್ಲಿ ತ್ರಿಶಂಕು ಸ್ಥಿತಿಯನ್ನು ಅನುಭವಿಸತೊಡಗಿದ. ಮನದಾಳದ ನೋವನ್ನು ಮರೆಯಲು ಮಧುರೆಯನ್ನು ಅಪ್ಪಿಕೊಂಡು ಮಧುಪಾನ ಪೀಡಿತನಾದ. ಸಿಕ್ಕಷ್ಟೇ ಯಶಸ್ಸಿನಿಂದಾಗಿ ಸುತ್ತಲೂ ಕೆಲವು ಚಟಸಾಮ್ರಾಟರ ಗುಂಪನ್ನು ಬೆಳೆಸಿಕೊಂಡ. ಕೆಟ್ಟ ಸಹವಾಸಕ್ಕೆ ಬಿದ್ದು ಗುಂಡಿನ ದಾಸನಾದ. ಮೊದಲು ಟಿವಿ ಕೆಲಸದ ಒತ್ತಡ ಹಾಗೂ ನಂತರ ಅವಕಾಶಗಳ ಕೊರತೆಯಿಂದಾಗ ಆರೋಗ್ಯವನ್ನು ಕಡೆಗಣಿಸಿ ಅನಾರೋಗ್ಯಕ್ಕೆ ತುತ್ತಾದ. ‘ಅದೊಂದು ದಿನ ‘ವೀರಪ್ಪನ್’ ಸಿನೆಮಾದಲ್ಲಿ ಪಾತ್ರ ಮಾಡುವ ಅವಕಾಶವನ್ನು ‘ಸಿಜಿಕೆ. ಕೊಡಿಸಿದ್ದರು. ಆದರೆ ಹೇಳಿದ ಸಮಯಕ್ಕೆ ಹೋಗಲಿಲ್ಲ ಎನ್ನುವ ಕಾರಣದಿಂದಾಗಿ ಸಿಕ್ಕ ಅವಕಾಶ ದೂರಾಯಿತು. ಭಾವಜೀವಿ ಚಂದ್ರೂಗೆ ಸಿಕ್ಕಾಪಟ್ಟೆ ನೋವಾಯಿತು. ಇದ್ದಕ್ಕಿದ್ದಂತೆ ಒಂದು ಪುಲ್ ಬಾಟಲ್ ರಮ್ ಕುಡಿದು ತನ್ನ ನಿರಾಶೆಯನ್ನು ಶಮನಗೊಳಿಸಿಕೊಂಡ’ ಎಂದು ಬಿ.ಜಿ.ರಾಮಕೃಷ್ಣ ಅತೀ ನೋವಿನಿಂದ ನೆನಪಿಸಿಕೊಳ್ಳುತ್ತಾರೆ.
ಮೈನಾ
ನೆನಪಲ್ಲಿ ಶಶಿಕಾಂತ ಯಡಹಳ್ಳಿ
|
ನಿಧಾನವಾಗಿ ಕುಡಿತ ಹಾಗೂ ಗುಟ್ಕಾ ಸೇವನೆ ಚಂದ್ರುನ ದೇಹದ ಮೇಲೆ ದುಷ್ಪರಿಣಾಮ ಬೀರತೊಡಗಿತು. ಬಿಪಿ-ಶುಗರ್ ಕಾಯಿಲೆಗಳು ಮೈನಾ ಮೇಲೆ ದಾಂಗುಡಿ ಇಡತೊಡಗಿದವು. ಜಾಂಡೀಸ್ ಬೇರೆ ಒಕ್ಕರಿಸಿಕೊಂಡಿತು. ಈ ಹೆಂಗರಳಿನ ವ್ಯಕ್ತಿಯ ಸಣ್ಣ ಕರುಳು ರಿಪೇರಿಯಾಗದಷ್ಟು ಡ್ಯಾಮೇಜ್ ಆಗಿಬಿಟ್ಟಿತು. ರಂಗ ಗೆಳೆಯರು ಸಂಯಮದಿಂದಿರಲು ಬೇಕಾದಷ್ಟು ಪರಿಪರಿಯಾಗಿ ಕೇಳಿಕೊಂಡರು. ಆದರೆ ಕೇಳುವ ಸ್ಥಿತಿಯಲ್ಲಿ ಮೈನಾ ಇರಲಿಲ್ಲ. ‘ಕುಬೇರಪ್ಪ ಆಂಡ್ ಸನ್ಸ್’ ಮೈನಾ ನಿರ್ದೇಶಿಸಿದ ಕೊಟ್ಟ ಕೊನೆಯ ದಾರಾವಾಹಿ. ನಂತರ ಒಂದು ದಿನ ಇದ್ದಕ್ಕಿದ್ದಂತೆ ಚಂದ್ರು ಕಾಣೆಯಾದ. ಒಂದು ವರ್ಷದವರೆಗೂ ಯಾರ ಸಂಪರ್ಕಕ್ಕೂ ಸಿಗಲೇ ಇಲ್ಲ. ‘ಮೈನಾ ಏನಾದ?’ ಎಂದು ಯಾರಿಗೂ ಗೊತ್ತಾಗಲೇ ಇಲ್ಲ. ವೃತ್ತಿಯಲ್ಲಿ ಡಾಕ್ಟರ್ಆಗಿದ್ದ ಚಂದ್ರುರವರ ಅಣ್ಣ
ಮೈನಾನ ದುಸ್ಥಿತಿಯನ್ನು ಕಂಡು ಮರುಗಿ ಮೈಸೂರಿಗೆ ಕರೆದುಕೊಂಡು ಹೋಗಿ ಟ್ರೀಟಮೆಂಟ್ ಕೊಡತೊಡಗಿದ್ದರು. ಹೊರಜಗತ್ತಿನ ಸಂಪರ್ಕ ಇಲ್ಲದ ಹಾಗೆ ನೋಡಿಕೊಂಡರು. ಚಂದ್ರು ಒಂದಿಷ್ಟು ಗೆಲುವಾಗತೊಡಗಿದರು. ಅದೊಂದು ದಿನ ಮತ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದರು. ಮೈನಾ ಬದಲಾಗಿದ್ದು ಕಂಡ ರಂಗಗೆಳೆಯರಿಗೆ ಸಂತಸವಾಯಿತು. ಆದರೆ ಆ ಸಂತೋಷ ತುಂಬಾ ದಿನ ಉಳಿಯಲಿಲ್ಲ. ಮತ್ತೆ ಚಂದ್ರು ಹಳೆ ಚಾಳಿಗೆ ಬಿದ್ದರು. ಚಂದ್ರು ಕುಡಿತವನ್ನು ಬಿಟ್ಟರೂ ಕುಡಿತ ಚಂದ್ರುವನ್ನು ಬಿಡಲೇ ಇಲ್ಲ. ಎರಡು ವರ್ಷಗಳ ಕಾಲ ನರಳಿದ, ಆ ನರಳಿಕೆಯ ನೋವನ್ನು ಮರೆಯಲೆಂದೇ ಕುಡಿದ. ಹೆಚ್ಚು ಹೆಚ್ಚು ಕುಡಿದಷ್ಟೂ ಹೆಚ್ಚೆಚ್ಚು ನರಳಿದ. ಸಾಯುವ ಮುನ್ನಾದಿನವೂ ಬೆಳಿಗ್ಗೆಯಿಂದ ಸಂಜೆವರೆಗೂ ಕುಡಿತಾನೇ ಇದ್ದನಂತೆ.
ನಲವತ್ತು ವಯಸ್ಸು ಮುಗಿದು ಮೇಲೆ ಇನ್ನೊಂದು ವರ್ಷವಾಗಿತ್ತಷ್ಟೇ ಚಂದ್ರು ದೇಹದೊಳಗಿನ ‘ಮೈನಾ’ ಎನ್ನುವ ಚೈತನ್ಯದ ಹಕ್ಕಿ ಇದ್ದಕ್ಕಿದ್ದಂಗೆ ಸೆಪ್ಟಂಬರ್ ೧೮ ರಂದು ಹಾರಿಹೋಯಿತು. ಎಷ್ಟು ಬೇಗ ಚಿಕ್ಕ ವಯಸ್ಸಲ್ಲಿ ರಂಗಭೂಮಿಗೆ ಚಂದ್ರು ಬಂದಿದ್ದರೋ ಅಷ್ಟೇ ಬೇಗ ಜಗದ ರಂಗಭೂಮಿಯಿಂದ ನಿರ್ಗಮಿಸಿದರು. ಚಂದ್ರು ತನ್ನ ಬದುಕಿನ ದುರಂತನಾಯಕನ ಪಾತ್ರವನ್ನು ತಾನೆ ನಿರ್ವಹಿಸಿ ನೇಪತ್ಯಕ್ಕೆ ಜಾರಿದ. ಚಂದ್ರುವಿನ ಪ್ರತಿಭೆ ಅದೆಷ್ಟು ಅನುಕರಣೀಯವೋ ಅಷ್ಟೇ ಅವರ ದೌರ್ಬಲ್ಯ ಅನಾದರಿಣೀಯ. ಅದೆಷ್ಟು ಕಲಾವಿದರನ್ನು ಈ ಕುಡಿತ ಎನ್ನುವ ಮಾಯಾಂಗಿನಿ ಬಲಿತೆಗೆದುಕೊಂಡಿತೋ ಲೆಕ್ಕವಿಟ್ಟವರಾರು? ಚಂದ್ರೂ ಕೂಡಾ ಅಂತವರಲ್ಲಿ ಒಬ್ಬರಾಗಿದ್ದು ತುಂಬಾ ಬೇಸರದ ಸಂಗತಿ.
ಮೈನಾ
ನೆನಪಲ್ಲಿ ರಾಜು ಮಳವಳ್ಳಿ
|
“ಗಿಳಿಯು ಪಂಜರದೊಳಿಲ್ಲ ಓ ರಾಮ....
ಅಂಗೈಮೇಲೆ ಆಡೋ ಗಿಳಿ
ಮುಂಗೈಮೇಲೆ ಕೂಡೋ ಗಿಳಿ...
ಪ್ರೇಮದಿ ಸಾಕಿದ ಗಿಳಿ ಒಮ್ಮೆಲೆ ಸುಮ್ಮನಾಯಿತಲ್ಲೋ..”
ಎಂದು ರಾಮಚಂದ್ರ ಹಡಪದ, ಪ್ರಕಾಶ ಶೆಟ್ಟಿ ಮತ್ತು ಗೆಳೆಯರು ಮೈನಾ ನೆನಪಿನ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಕಾರಂತರ ‘ಸತ್ತವರ ನೆರಳು’ ನಾಟಕದ ಪುರಂದರದಾಸರ ಹಾಡನ್ನು ಹಾಡತೊಡಗಿದಾಗ ಮೈನಾ ಸಾವಿನ ಸೂತಕ ಎಲ್ಲರ ಮನಸ್ಸನ್ನಾವರಿಸಿತು. ಮೈನಾ ನೆನಪು ಅವನ ರಂಗಮಿತ್ರರೆಲ್ಲರನು ಬಿಡದೇ ಕಾಡಿತು. ಇಡೀ ಸಭಾಂಗನ ಮೈನಾ ಚಂದ್ರುವಿನ ನೆನಪಿಗೆ ಸಾಕ್ಷಿಯಾಯಿತು. ‘ಮೈನಾ ಚಂದ್ರೂನಂತಹ ಪ್ರತಿಭಾವಂತರು ಹುಟ್ಟಿಬರಲಿ ಹಾಗೂ ದುಷ್ಚಟಗಳಿಂದ ದೂರವಿರಲಿ’ ಎಂಬುದೊಂದೇ ಈ ಲೇಖನದ ಆಶಯ.
-ಶಶಿಕಾಂತ ಯಡಹಳ್ಳಿ
ಮೈನಾ ಅಭಿನಯಿಸಿದ 2ನೇ ನಾಟಕ ಬಿ.ಜಿ.ರಾಮಕೃಷ್ಣರವರ
ನಿರ್ದೇಶನದ ,ಬೆಪ್ಪನ ಚಿತ್ರ' ಪೊಟೋ.
ಮೈನಾ ಚಂದ್ರು ಜೊತೆಗೆ ಬಿ.ಜಿ.ರಾಮಕೃಷ್ಣ
ಅಭಿನಯಿಸುತ್ತಿರುವುದು
|
ಮೈನಾ ಅಭಿನಯಿಸಿದ 2ನೇ ನಾಟಕ ಬಿ.ಜಿ.ರಾಮಕೃಷ್ಣರವರ
ನಿರ್ದೇಶನದ ,ಬೆಪ್ಪನ ಚಿತ್ರ' ಪೊಟೋ.
ಮೈನಾ ಚಂದ್ರು ಜೊತೆಗೆ ಬಿ.ಜಿ.ರಾಮಕೃಷ್ಣ
ಅಭಿನಯಿಸುತ್ತಿರುವುದು
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ