ಗುರುವಾರ, ಏಪ್ರಿಲ್ 3, 2014

“ಅಕಾಡೆಮ್ಮಿಗಳ ಮೇಲೆ ನೀತಿ ಸಂಹಿತೆಯ ನೆರಳು”


ಕೋಮಾದಿಂದ ನಿದ್ರೆಗೆ ಜಾರಿದ ಅಕಾಡೆಮಿಗಳು

                                                
 ಅಂತೂ ಇಂತೂ ಅಳೆದು ಸುರಿದು ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಸರಕಾರ ಆಯ್ಕೆ ಮಾಡಿ 2014 ಫೆಬ್ರವರಿ 26 ರಂದು ಅಧಿಕೃತವಾಗಿ ಆದೇಶ ಹೊರಡಿಸಿತು. ಒಂದು ಮಗು ಹುಟ್ಟೊದಕ್ಕೆ ಒಂಬತ್ತು ತಿಂಗಳು ಹೇಗೆ ಬೇಕೋ ಹಾಗೇನೇ ಸರಕಾರ ಅಕಾಡೆಮಿಗಳಿಗೆ  ವಾರಸದಾರರನ್ನು ಆಯ್ಕೆ ಮಾಡಲು ತೆಗೆದುಕೊಂಡಿದ್ದು ಬರೋಬ್ಬರಿ ಒಂಬತ್ತು ತಿಂಗಳು. ಕೊನೆಗೂ ಗಜಗರ್ಭದ ಸರಕಾರಿ ಹೆರಿಗೆ ಏನೋ ಆಯಿತು. ಆದರೆ ಅದು ಸುಸೂತ್ರವಂತೂ ಆಗಲಿಲ್ಲ. ಸರಕಾರ ಅದಕ್ಕಾಗಿ ಮಾಡಿದ ಸಿಜೇರಿಯನ್ ಆಪರೇಶನ್ಗಳಿಗೆ ಲೆಕ್ಕವೇ ಇಲ್ಲ. ಹಾಕಿದ ಲೆಕ್ಕಾಚಾರಗಳಿಗೆ ತುದಿಮೊದಲಿಲ್ಲ.

ಯಾಕೆಂದರೆ ಅಕಾಡೆಮಿಗಳಿಗೆ ಆಯ್ಕೆ  ಪ್ರಕ್ರಿಯೆ ಎಂದರೆ ಯೋಗ್ಯರನ್ನು ಪರಿಣಿತರನ್ನು ನಿಯಮಿಸುವುದು ಅಲ್ಲವೇ ಅಲ್ಲ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಅದಕ್ಕೆ ರಾಜಕೀಯ ಸಮೀಕರಣ, ಜಾತಿ ಧರ್ಮಗಳ ಲೆಕ್ಕಾಚಾರ, ಮೀಸಲಾತಿ, ಸಾಮಾಜಿಕ ಬ್ಯಾಲನ್ಷಿಂಗು.....ಆಳುವ ಸರಕಾರದ ಕಾರ್ಯಕರ್ತರು, ಬೆಂಬಲಿಗರು, ಹಿಂಬಾಲಕರು... ಹೀಗೆ ಇನ್ನೂ ಏನೇನೋ ಮಾನದಂಡಗಳು. ರಾಜಕೀಯ ಎನ್ನುವುದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನೂ ಹೇಗೆ ಆಕ್ರಮಿಸಿಕೊಂಡು ತನ್ನಳತೆಗೆ ತಕ್ಕಂತೆ ಆಟವಾಡಿಸುತ್ತದೆ ಎನ್ನುವುದಕ್ಕೆ ಅಕಾಡೆಮಿಗಳ ರಾಜಕೀಯ ನೇಮಕಾತಿ ಆಯ್ಕೆ ಪ್ರಕ್ರಿಯೆಯೇ ಸಾಕ್ಷಿಯಾಗಿದೆ.
 
ಕಾಂಗ್ರೆಸ್ ಸರಕಾರ 2013 ಮೇ ನಲ್ಲಿ ಅಸ್ತಿತ್ವಕ್ಕೆ ಬಂತು. ಜೂನ್ ತಿಂಗಳಲ್ಲಿ ಎಲ್ಲಾ ಅಕಾಡೆಮಿ ಅಧ್ಯಕ್ಷರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆಯಲಾಯಿತು. ಅಲ್ಲಿಂದ ಸರಿಯಾಗಿ ಒಂಬತ್ತು ತಿಂಗಳ ನಂತರ ಅಕಾಡೆಮಿ ಪ್ರಾಧಿಕಾರಗಳಿಗೆ ಸರಕಾರಿ ನೇಮಕಾತಿ ನಡೆಯಿತು. ಅದೂ ಚುನಾವಣೆ ಇನ್ನೇನು ಡಿಕ್ಲೇರ್ ಆಗುತ್ತೆ ಅನ್ನುವಾಗ ಅವಸರವಸರದಲ್ಲಿ ಆದೇಶ ಹೊರಡಿಸಲಾಯಿತು. ಬಹುತೇಕ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರುಗಳು ಫೆಬ್ರವರಿ 27ರಂದೇ ತಮ್ಮ ಹುದ್ದೆ ಅಲಂಕರಿಸಿದರು.

ನಾಟಕ ಅಕಾಡೆಮಿಗೆ ಎಲ್.ಬಿ. ಶೇಖ ಮಾಸ್ತರ್, ಸಾಹಿತ್ಯ ಅಕಾಡೆಮಿಗೆ ಮಾಲತಿ ಪಟ್ಟಣಶೆಟ್ಟಿ, ಜಾನಪದ ಅಕಾಡೆಮಿಗೆ ಪಿಚ್ಚಳ್ಳಿ ಶ್ರೀನಿವಾಸ, ಶಿಲ್ಪಕಲಾ ಅಕಾಡೆಮಿಗೆ ಮಹದೇವಪ್ಪ ಶಂಭುಲಿಂಗಪ್ಪ, ಲಲಿತಕಲಾ ಅಕಾಡೆಮಿಗೆ ಡಾ. ಎಂ.ಎಸ್.ಮೂರ್ತಿ, ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಗಂಗಮ್ಮ ಕೇಶವಮೂರ್ತಿ, ಯಕ್ಷಗಾಣ ಬಯಲಾಟ ಅಕಾಡೆಮಿಗೆ ನಾಡೋಜ ಬೆಳಗಲ್ ವೀರಣ್ಣ, ಕೊಡವ ಸಾಹಿತ್ಯ ಅಕಾಡೆಮಿಗೆ ಪ್ರೊ. ಇಟ್ಟೀರ ಕೆ ಬಿದ್ದಪ್ಪ, ತುಳು ಸಾಹಿತ್ಯ ಅಕಾಡೆಮಿಗೆ ಪ್ರೊ.ಜಾನಕಿ ಬ್ರಹ್ಮಾವರ್, ಕೊಂಕಣಿ ಸಾಹಿತ್ಯ ಅಕಾಡೆಮಿಗೆ ರೋನಾಲ್ಡ್ ಎಸ್ ಕ್ಯಾಸ್ತಲಿನೋ, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಬಿ..ಮಹಮದ್ ಹನೀಪ್,  ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ.ಕೆ.ವಿ.ನಾರಾಯಣ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಡಾ.ಬಂಜಗೆರೆ ಜಯಪ್ರಕಾಶ್.... ಒಟ್ಟು ಹತ್ತು ಅಕಾಡೆಮಿ ಹಾಗೂ ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನೂ ಜೊತೆಗೆ ಸದಸ್ಯರನ್ನೂ ಸರಕಾರ ನಿಯಮಿಸಿತು.

  ಎಲ್ಲಾ ಆಯ್ಕೆಗಳನ್ನು ಒಮ್ಮೆ ಗಮನಿಸಿ. ಇದರಲ್ಲಿ ಜಾತಿ ಸಮೀಕರಣವಿದೆ, ಧರ್ಮಾಧಾರಿತ ಆಯ್ಕೆಗಳಿವೆ, ಮಹಿಳಾ ಪ್ರಾತಿನಿದ್ಯ, ಅಲ್ಪಸಂಖ್ಯಾತರ ಕೋಟಾ, ಮೀಸಲಾತಿ ಕೋಟಾ.... ಹೀಗೆ ಎಲ್ಲಾ ರಾಜಕೀಯ ಸಮೀಕರಣಗಳು ಆಯ್ಕೆಯ ಹಿಂದಿನ ಮಾನದಂಡಗಳಾಗಿವೆ. ಎಲ್ಲಾ ಅಕಾಡೆಮಿಗಳು ರಾಜಕೀಯ ಕ್ಷೇತ್ರಗಳಲ್ಲ. ಇವುಗಳು ಅಸ್ಥಿತ್ವಕ್ಕೆ ಬಂದಿರುವುದು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಲೆಂದು ಹಾಗೂ ಬೆಳೆಸಲೆಂದು. ಆದರೆ ಸರಕಾರ ಅನುದಾನ ಕೊಡುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಕಾಡೆಮಿಗಳಿಗೆ ರಾಜಕೀಯ ಪ್ರೇರಿತ ನೇಮಕಾತಿ ಮಾಡುವುದು ನಿಜಕ್ಕೂ ಆತಂಕಕಾರಿಯಾಗಿದೆ. ನಿಜವಾದ ಸಾಹಿತಿಗಳು, ರಂಗಕರ್ಮಿಗಳು, ಸಾಂಸ್ಕೃತಿಕ ಕ್ಷೇತ್ರದ  ಸಾಧಕರು ಶಿಪಾರಸ್ಸುಗಳನ್ನು ತೆಗೆದುಕೊಂಡು ಹೋಗಿ ರಾಜಕಾರಣಿಗಳ ಹಿಂದೆ ಬಿದ್ದು ಅಕಾಡೆಮಿಯ ಅಧ್ಯಕ್ಷತೆಗಾಗಿ ಪ್ರಯತ್ನಿಸುವುದು ಮುಜುಗರದ ಕೆಲಸ. ಹೀಗಾಗಿ ಸ್ವಾಭಿಮಾನ ಇರುವವರು ಯಾರೂ ರಾಜಕೀಯದವರ ಮುಂದೆ ಬೇಡಿಕೊಳ್ಳುವುದಿಲ್ಲ. ಆದರೆ ಈಗ ರಾಜಕೀಯ ಅನ್ನುವುದು ಸಾಂಸ್ಕೃತಿಕ ಲೋಕವನ್ನೂ ಪ್ರವೇಶಿಸಿಬಿಟ್ಟಿದೆ. ಅಧಿಕಾರಕ್ಕಾಗಿ, ಅನುಕೂಲತೆಗಾಗಿ, ಪ್ರಶಸ್ತಿಗಳಿಗಾಗಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬಹುತೇಕರು ಯಾವು ಯಾವುದೋ ರಾಜಕೀಯ ಪಕ್ಷಗಳ ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ.  ಹಾಗೂ ಇಂತಹುದೊಂದು ಅನಿವಾರ್ಯತೆಯನ್ನು ನಮ್ಮ ರಾಜಕೀಯ ವ್ಯವಸ್ಥೆ ಸೃಷ್ಟಿಸಿದೆ. ಒಂದು ರಾಜಕೀಯದವರ ಜೊತೆಗೆ ಗುರುತಿಸಿಕೊಂಡು ಸವಲತ್ತುಗಳನ್ನು ಪಡೆಯಬೇಕು ಇಲ್ಲವೇ ನಿರ್ಲಕ್ಷಿತರಾಗಿ ಮೂಲೆಗುಂಪಾಗಬೇಕು ಎನ್ನುವಂತಹ ಪರಿಸ್ಥಿತಿಯನ್ನು ಬಂಡವಾಳಶಾಹಿ ವ್ಯವಸ್ಥೆ ರೂಪಿಸಿದೆ. ಇಂತಹ ವ್ಯವಸ್ಥೆಯ ಹುನ್ನಾರಕ್ಕೆ ಅನೇಕಾನೇಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಹಾಗೂ ಶಕ್ತಿಗಳು ಬಲಿಯಾಗಿವೆ

ನಾಟಕ  ಅಕಾಡೆಮಿಯ ಹಿಂದಿನ ಅಧ್ಯಕ್ಷರ ಜೊತೆ ಇಲಾಖೆ ಆಯುಕ್ತರಾಗಿದ್ದ ಬಳಿಗಾರ್ , ಮುಖ್ಯಮಂತ್ರಿ ಚಂದ್ರು
  
ಇದಕ್ಕಿಂತಲೂ ದೊಡ್ಡ ಅಪಾಯಕಾರಿಯಾವುದೆಂದರೆ, ನಿಜವಾದ ಸಾಧಕರನ್ನು ಬಿಟ್ಟು ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಅಕಾಡೆಮಿಯ ಅಧ್ಯಕ್ಷತೆ ಹಾಗೂ ಸದಸ್ಯತ್ವವನ್ನು ಹಂಚುವುದು. ಕಳೆದ ಬಿಜೆಪಿ ಸರಕಾರ ಬಹುತೇಕ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಬಿಜೆಪಿ ಹಾಗೂ ಆರ್ಎಸ್ಎಸ್ ಬೆಂಬಲಿಗರನ್ನೇ ಆಯ್ಕೆ ಮಾಡಿ ಅಕಾಡೆಮಿಗಳನ್ನು ರಾಜಕೀಕರಣ ಗೊಳಿಸಿತ್ತು. ಇದರಿಂದಾಗಿ ಬದ್ದತೆ ಮತ್ತು ದೂರದೃಷ್ಟಿ ಇಲ್ಲದ ಅಧ್ಯಕ್ಷರುಗಳು ರಾಜಕೀಯದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಅಕಾಡೆಮಿಯ ಮೂಲ ಉದ್ದೇಶಗಳನ್ನೇ ಗಾಳಿಗೆ ತೂರಿದರು. ಪ್ರಶಸ್ತಿಗಳನ್ನು ಹಂಚುವುದನ್ನೇ ತಮ್ಮ ಅಧ್ಯಕ್ಷಗಿರಿಯ ಕಾಯಕವಾಗಿಸಿಕೊಂಡರು. ಕೆಲವು ಅಧ್ಯಕ್ಷರು ಹಾಗೂ ಸದಸ್ಯರು ಪ್ರಶಸ್ತಿಗಳನ್ನು ಮಾರಿಕೊಂಡರು. ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪ್ರಶಸ್ತಿ ಪದಕಗಳನ್ನೇ ನುಂಗಿ ನೀರುಕುಡಿದರು.

ಈಗ ಸಿಎಂ ಪಟ್ಟಕ್ಕೆ ಬಂದ ಸಿದ್ದರಾಮಯ್ಯನವರು ಕೆಲವು ಬುದ್ದಿಜೀವಿಗಳ ಕೈಗೆ ಅಕಾಡೆಮಿ ಅಧ್ಯಕ್ಷರುಗಳ ಹೆಸರನ್ನು ಸೂಚಿಸುವ ಕೆಲಸ ಕೊಟ್ಟರು. ಜೊತೆಗೆ ಸಾಮಾಜಿಕ ನ್ಯಾಯ ಹಾಗೂ ಜಾತಿ-ಧರ್ಮ-ಲಿಂಗಾಧಾರಿತವಾಗಿ ಸಮೀಕರಣಗೊಳಿಸಿ ಆಯ್ಕೆ ಮಾಡಿರೆಂದು ಕಂಡೀಶನ್ ಕೂಡಾ ಹಾಕಿದರು. ನಿಜವಾದ ಬುದ್ದಿಜೀವಿಗಳಾಗಿದ್ದರೆ ಯೋಗ್ಯರನ್ನು ಆಯ್ಕೆ ಮಾಡುತ್ತೇವೆಯೇ ಹೊರತು  ಜಾತಿ-ಧರ್ಮಾಧಾರಿತವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ, ಸಾಹಿತ್ಯ ಸಂಸ್ಕೃತಿ ಕ್ಷೇತ್ರವೆನ್ನುವುದು ರಾಜಕೀಯವಲ್ಲ ಎಂದು ವಿರೋಧಿಸಬೇಕಾಗಿತ್ತು. ಆದರೆ ಬರಗೂರು, ಮರುಳಸಿದ್ದಪ್ಪ .... ಮುಂತಾದವರು ರಾಜಕೀಯ ಸೂತ್ರಬದ್ದ ರೀತಿಯಲ್ಲಿ ತಮಗೆ ತೋಚಿದವರ ಪಟ್ಟಿ ತಯಾರಿಸಿ ಮುಖ್ಯಮಂತ್ರಿಗೆ ರವಾಣಿಸಿದರು. ಜೊತೆಗೆ ಕಾ..ಚಿಕ್ಕಣ್ಣ, ಸಂಸ್ಕೃತಿ ಮಂತ್ರಿಣಿ ಉಮಾಶ್ರೀ ಇಬ್ಬರೂ ಸಹ ತಮ್ಮದೇ ಆದ ಸಂಬಾವ್ಯ ಅಧ್ಯಕ್ಷರ ಪಟ್ಟಿಯನ್ನು ತಯಾರಿಸಿದರು. ಹಾಗೂ ಇನ್ನೂ ಕೆಲವರು ಅಧ್ಯಕ್ಷಗಿರಿ ಆಕಾಂಕ್ಷೆಯುಳ್ಳ ಪ್ರಭಾವಿಗಳು ಕಾಂಗ್ರೆಸ್ ಪಕ್ಷದ ಮಂತ್ರಿ, ಶಾಸಕರ ಮೂಲಕ ಸಿದ್ದರಾಮಯ್ಯನವರ ಮೇಲೆ ಒತ್ತಡ ತರತೊಡಗಿದರು. ಹಲವು ದಿಕ್ಕಿನಿಂದ ಬಂದ ಒತ್ತಡಗಳಿಂದಾಗಿ ಸಿದ್ದರಾಮಯ್ಯ ನೇಮಕಾತಿ ಪ್ರಕ್ರಿಯೆಯನ್ನು ಒಂಬತ್ತು ತಿಂಗಳುಗಳ ಕಾಲ ಮುಂದೂಡುತ್ತಲೇ ಬಂದರು. ತಮ್ಮದೇ ಪಕ್ಷದ ರಾಜಕಾರಣಿಗಳು ಹಾಗೂ ಬುದ್ದಿಜೀವಗಳ ಆಯ್ಕೆ ಪಟ್ಟಿಯಲ್ಲಿ ಯಾವುದನ್ನು ಒಪ್ಪಿಕೊಳ್ಳಲಿ  ಎನ್ನುವ ಸಂದಿಗ್ಧತೆಯಲ್ಲೇ ಮುಖ್ಯಮಂತ್ರಿ ಯಾವುದೇ ನಿರ್ಧಾರ ತೆಗೆದುಕೊಳ್ಳದಾದರು.
 
ಸಂಸ್ಕೃತಿ ಇಲಾಖೆ ಮಂತ್ರಿಣಿ ಉಮಾಶ್ರಿ
ಯಾವಾಗ ಸಂಸತ್ತಿನ ಚುನಾವಣೆ ಡಿಕ್ಲೇರ್ ಆಗುವುದರಲ್ಲಿತ್ತೋ ಆಗ ಕೆಲವು ವ್ಯಕ್ತಿಗಳನ್ನು ಸಂತೈಸಲು ಹಾಗೂ ಕೆಲವು ಶಕ್ತಿಗಳನ್ನು ಸಂತೃಪ್ತಿ ಪಡಿಸಲು ಸಿದ್ದರಾಮಯ್ಯ ಅಕಾಡೆಮಿಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡುವ ಒತ್ತಡದಲ್ಲಿ ಬಿದ್ದರು. ಇದರಿಂದ ರೋಸಿಹೋದ ಸಿಎಂ ತಮ್ಮ ನಂಬಿಗಸ್ತರಾದ ಕುಲಬಾಂಧವ ಕಾ..ಚಿಕ್ಕಣ್ಣನವರಿಗೆ ಎಲ್ಲಾ ಪಟ್ಟಿಗಳನ್ನು ಪರಿಶೀಲಿಸಿ ಉಮಾಶ್ರಿಯವರ ಜೊತೆ ಸಮಾಲೋಚಿಸಿ ಪೈನಲ್ ಪಟ್ಟಿ ತಯಾರಿಸಿಕೊಂಡು ಬರಲು ತಿಳಿಸಿದರು. ಅದರಂತೆ ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿದ ಚಿಕ್ಕಣ್ಣ ಇದೇ ಕೆಲಸ ಶುರುಹಚ್ಚಿಕೊಂಡರು. ಎಲ್ಲಾ ರೀತಿಯ ಸಮೀಕರಣಗಳನ್ನು ಮಾಡಿ ಉಮಾಶ್ರೀಯವರನ್ನು ಒಪ್ಪಿಸಿ ಅಂತಿಮ ಪಟ್ಟಿ ತಯಾರಿಸಲಾಯಿತು. ಅದಕ್ಕೆ ಫೆಬ್ರವರಿ 25ರಂದು ಸಿಎಂ ಸಹಿ ಹಾಕಿದರು.

ಹಾಗೆಯೇ ಅಧ್ಯಕ್ಷರ ಜೊತೆಗೆ ಸದಸ್ಯರುಗಳನ್ನೂ ಆಯ್ಕೆ ಮಾಡಲಾಯಿತು. ಸದಸ್ಯರ ಆಯ್ಕೆಯಲ್ಲಿಯೂ ಇದೇ ರಾಜಕೀಯ ಸಮೀಕರಣದ ಮಾನದಂಡವನ್ನೇ ಬಳಸಲಾಯಿತು. ಎಲ್ಲಾ ಆಯ್ಕೆಯ ಹಿಂದೆ ರಾಜಕೀಯ ಶಕ್ತಿಗಳು ಅಗೋಚರವಾಗಿ ಕೆಲಸ ಮಾಡಿದವು. ನಾಟಕ  ಅಕಾಡೆಮಿ ಸೇರಿದಂತೆ ಕೆಲವು ಅಕಾಡೆಮಿಗಳ ಬೈಲಾ ಪ್ರಕಾರ ಹತ್ತು ಜನ ಸದಸ್ಯರನ್ನು ಮಾತ್ರ ಸರಕಾರ ಒಂದು ಅಕಾಡೆಮಿಗೆ ಆಯ್ಕೆ ಮಾಡಬಹುದಾಗಿದೆ. ಹಾಗೂ ಹೆಚ್ಚುವರಿಯಾಗಿ ಮೂರು ಜನ ಸದಸ್ಯರ ಆಯ್ಕೆಯನ್ನು ಅಧ್ಯಕ್ಷರ ವಿವೇಚನೆಗೆ ಬಿಡಲಾಗಿದೆ. ಒಟ್ಟು ಹದಿಮೂರು ಜನ ಸದಸ್ಯರು ಆಯ್ಕೆ ಮಾಡಲು ಬೈಲಾದಲ್ಲಿ ಅವಕಾಶವಿದೆ. ಆದರೆ ಸದಸ್ಯರಾಗಲು ಅದೆಷ್ಟು ಜನರ ಒತ್ತಡ ಬಂದಿತ್ತೆಂದರೆ ಬೈಲಾದ ಕನಿಷ್ಟ ಅರಿವೂ ಇಲ್ಲದ ಸಂಸ್ಕೃತಿ ಇಲಾಖೆ ಮಂತ್ರಿಣಿ ಹತ್ತು ಜನರ ಬದಲಾಗಿ ಹದಿನೈದು ಜನ ಸದಸ್ಯರನ್ನು ಕೆಲವು ಅಕಾಡೆಮಿಗೆ ನಿಯಮಿಸಿಬಿಟ್ಟರು. ಇದರ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದ ಸಿದ್ದರಾಮಯ್ಯ ಸಹಿ ಹಾಕಿಬಿಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೂ ಸಹ ಬೈಲಾ ಬಗ್ಗೆ ಗಮನ ಕೊಡಲಿಲ್ಲ.

ಹೀಗಾಗಿ ಅಕಾಡೆಮಿಗೊಬ್ಬ ಅಧ್ಯಕ್ಷ ಹಾಗೂ ಕೆಲವು ಅಕಾಡೆಮಿಗಳಿಗೆ ಹದಿನೈದು ಜನ ಸದಸ್ಯರುಗಳ ಆಯ್ಕೆಗೆ ಅಧಿಕೃತ ಮುದ್ರೆ ಬಿದ್ದಿತು. ಆಗ ಅದ್ಯಾರೋ ಬೈಲಾ ತಾಂತ್ರಿಕ ಸಮಸ್ಯೆಯ ಬಗ್ಗೆ ಉಮಾಶ್ರೀಯವರಿಗೆ ಹೇಳಿದರೋ ಆಗ ಮಂತ್ರಿಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಳಮಳ ಶುರುವಾಯಿತು.   ಅಕಾಡೆಮಿಯ ಬೈಲಾ ಬಗ್ಗೆ ಅರಿವಿರುವ ಯಾರಾದರೂ ಒಬ್ಬ ನ್ಯಾಯಾಲಯದ ಮೆಟ್ಟಲೇರಿದರೆ ಇಡೀ ಸರಕಾರಿ ಆಯ್ಕೆ ಪ್ರಕ್ರಿಯೆಯೇ ರದ್ದಾಗುತ್ತಿತ್ತು ಹಾಗೂ ಸರಕಾರಕ್ಕೆ ಮುಖಭಂಗವಾಗುತ್ತಿತ್ತು. ಮುಂದಾಗಬಹುದಾದ ಅಪಾಯವನ್ನು ಅರಿತು ಸಂಸ್ಕೃತಿ ಇಲಾಖೆಯ ಬ್ರಹಸ್ಪತಿಗಳು ಹತ್ತು ಜನ ಸದಸ್ಯರ ಬದಲಾಗಿ ಹದಿನೈದು ಜನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ತರಾತುರಿಯಲ್ಲಿ ಜಿಓ (ಗವರ್ನಮೆಂಟ್ ಆರ್ಡರ್) ಮಾಡಲು ಸರಕಾರದ ಕಾರ್ಯದರ್ಶಿಗೆ ಕೇಳಿಕೊಂಡರು.

ಆದರೆ ಆಯ್ಕೆ ಪ್ರಕ್ತಿಯೆ ಮುಗಿದ ನಂತರ ಜಿಓ ಮಾಡುವ ಹಾಗಿಲ್ಲವಲ್ಲ. ಹೀಗಾಗಿ ಆಯ್ಕೆ ಪ್ರಕ್ರಿಯೆಗಿಂತ ಹದಿನೈದು ದಿನ ಹಿಂದಿನ ದಿನಾಂಕ ನಮೂದಿಸಿ ಜಿಓ ಆರ್ಡರ್ ಪಡೆದು ಇಲಾಖೆಯ ಅಧಿಕಾರಿಗಳು ನಿಟ್ಟಿಸುರು ಬಿಟ್ಟರು. ಆದರೆ ತರಾತುರಿಯಲ್ಲಿ ಆರ್ಡರ್ ಮಾಡಿಸುವಾಗ ಅಕಾಡೆಮಿ ಅಧ್ಯಕ್ಷರು ಆಯ್ಕೆಮಾಡಬಹುದಾದ  ಮೂರು ಜನ ವಿವೇಚನಾ ಸದಸ್ಯರ ನೇಮಕಾತಿಯ ಬಗ್ಗೆ ಜಿಓ ಆರ್ಡರನಲ್ಲಿ ಸ್ಪಷ್ಟವಾಗಿ ನಮೂದಿಸುವುದನ್ನು ಮರೆತು ಬಿಟ್ಟರು. ಹೀಗಾಗಿ ಮತ್ತೆ ಗೊಂದಲ ಶುರುವಾಯಿತು. ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ ಬರಗೂರು ರಾಮಚಂದ್ರಪ್ಪನವರು ಕೋಆಪ್ಟ್ ಸದಸ್ಯರನ್ನೂ ಸರಕಾರವೇ ನೇಮಕಾತಿ ಮಾಡಿದ್ದು ತಪ್ಪು ಎಂದು ತಮ್ಮ ಅಸಹನೆಯನ್ನು ಹೊರಹಾಕಿದರು. ಅವರಿಗೆ ಜಿಓ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ತಮಗನ್ನಿಸಿದ್ದನ್ನು ಹೇಳಿದರು. ಈಗಲೂ ಸಹ ಅಕಾಡೆಮಿಗಳ ರೆಜಸ್ಟ್ರಾರಗಳಿಗೆ ಕೋಆಪ್ ಸದಸ್ಯರ ಆಯ್ಕೆ ಮಾಡುವ ಕುರಿತು ಅನುಮಾನಗಳಿವೆ. ಅವರು ಈಗ ಸರಕಾರಕ್ಕೆ ಕ್ಲಾರಿಫಿಕೇಶನ್ ಕೇಳಿ ಪತ್ರ ಬರೆದಿದ್ದಾರೆ.

ಅಧ್ಯಕ್ಷ ಸದಸ್ಯರ ನೇಮಕಾತಿಯೇನೋ ಆಯಿತು. ಅಧ್ಯಕ್ಷರುಗಳು ಅಕಾಡೆಮಿಯ ಚಾರ್ಜ ತೆಗೆದುಕೊಂಡಿದ್ದು ಆಯಿತು. ಆದರೆ ಅವರ ಕೆಲಸಗಳನ್ನು ಶುರುಮಾಡುವಂತಿಲ್ಲ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಯಾಕೆಂದರೆ ಚುನಾವಣೆಯ ನೀತಿ ಸಂಹಿತೆ ಮಾರ್ಚ ಐದರಿಂದ ಜಾರಿಯಲ್ಲಿದೆ. ಇದಕ್ಕಿಂತ ದೊಡ್ಡ ಮೂರ್ಖತನ ಯಾವುದಾದರೂ ಇದೆಯಾ. ಜನರ ಮೇಲೆ ಪ್ರಭಾವ ಬೀರಬಹುದಾದ, ಆಸೆ ಆಮಿಷ ತೋರಬಹುದಾದ ಚಟುವಟಿಕೆಗಳನ್ನು ನೀತಿ ಸಂಹಿತೆ ನಿರ್ಬಂಧಿಸುತ್ತದೆ. ಆದರೆ ನೀತಿ ಸಂಹಿತೆಯ ನೆಪದಲ್ಲಿ ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಸಹ ಮಾಡಬಾರದು ಎಂದು ನಿರ್ಧರಿಸುವುದು ಮೂರ್ಖತನದ ಲಕ್ಷಣವಲ್ಲದೇ ಇನ್ನೆನು. ಒಂದು ನಾಟಕೋತ್ಸವ ಮಾಡಿಸಿದರೆ, ಒಂದು ಸಾಹಿತ್ಯಕ ಕಾರ್ಯಕ್ರಮ ಮಾಡಿದರೆ ಹೋಗಲಿ ಅಕಾಡೆಮಿ ಸದಸ್ಯರನ್ನು ಕರೆದು ಕಾರ್ಯಕ್ರಮಗಳ ರೂಪರೇಷೆಗಳನ್ನು ರೂಪಿಸಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆ ಹೇಗಾಗುತ್ತದೆ? ನಿಜ ಹೇಳಬೇಕೆಂದರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಬಾರದು ಎಂದು ಯಾವುದೇ ನೀತಿ ಸಂಹಿತೆ ಇಲ್ಲ. ಚುನಾವಣಾ ಆಯುಕ್ತರು ಹಾಗೆ ಯಾವುದೇ ಆರ್ಡರ್ ಹೊರಡಿಸಿಲ್ಲ. ಆದರೆ ಅಕಾಡೆಮಿಗಳನ್ನು ಸಹ ರಾಜಕೀಯದ ಭಾಗವಾಗಿಯೇ ನೋಡುವ ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಅನತಿಯಂತೆ ಕಾರ್ಯ ನಿರ್ವಹಿಸುವ ಅಧಿಕಾರಿಗಳು ತಮಗೆ ತಾವೇ ನೀತಿ ಸಂಹಿತೆಯನ್ನು ಹಾಕಿಕೊಂಡು ಯಾವುದೇ ಅಕಾಡೆಮಿಯ ಚಟುವಟಿಕೆಗಳು ನಡೆಯದಂತೆ ನಿರ್ಬಂಧಿಸಿದ್ದಾರೆ.

ಹೀಗೆ ಅಕಾಡೆಮಿಗೊಬ್ಬ ರೆಜಿಸ್ಟ್ರಾರ್ ಎನ್ನುವ ಸರಕಾರಿ ಅಧಿಕಾರಿಯ ಅನಧೀಕೃತ ಆದೇಶವನ್ನು ಪ್ರಶ್ನಿಸುವ ಛಲ ಯಾವ ಅಕಾಡೆಮಿಯ ಅಧ್ಯಕ್ಷರಿಗೂ ಇಲ್ಲವೇ ಇಲ್ಲ. ಯಾಕೆಂದರೆ ಅವರಲ್ಲಿ ಬಹುತೇಕರು ರಾಜಕೀಯದವರಿಂದಲೆ ಅಧ್ಯಕ್ಷಗಿರಿ ಪಡೆದವರಾಗಿದ್ದಾರೆ. ಅಧ್ಯಕ್ಷರಾದವರಿಗೆ ನೀತಿ ಸಂಹಿತೆ ಕಾನೂನಿನ ಅರಿವಿದ್ದರೆ ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಮೂಲಕ ಪತ್ರವೊಂದನ್ನು ಚುನಾವಣಾ ಕಮಿಶನರ್ಗೆ ಬರೆದು ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವುದೇ ರೀತಿಯಲ್ಲಿ ಚುನಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿ ತಮ್ಮ ಚಟುವಟಿಕೆಗಳಿಗೆ ಅನುಮತಿ ಕೊಡಲು ಆಗ್ರಹಿಸಬಹುದಾಗಿತ್ತು. ಆದರೆ ಯಾವ ಅಕಾಡೆಮಿಯ ಅಧ್ಯಕ್ಷರೂ ಅಧಿಕಾರಿಗಳನ್ನು ಎದುರು ಹಾಕಿಕೊಂಡು, ಕಾನೂನುಗಳನ್ನು ತಿಳಿದುಕೊಂಡು ಚಟುವಟಿಕೆಗಳನ್ನು ನಡೆಸುವ ದೈರ್ಯ ಮತ್ತು ದಾರ್ಷತೆ ಹೊಂದಿಲ್ಲ. ಮೊದಲೇ ಕಳೆದ ಒಂಬತ್ತು ತಿಂಗಳಿಂದ ಎಲ್ಲಾ ಅಕಾಡೆಮಿಗಳ ಕೆಲಸ ಕಾರ್ಯಗಳು ಕೋಮಾದಲ್ಲಿವೆ ಯಾಕೆಂದರೆ ಅದಕ್ಕೆ ವಾರುಸುದಾರರೇ ಇರಲಿಲ್ಲ. ಈಗ ಅಕಾಡೆಮಿಗೆ ಅಧ್ಯಕ್ಷ ಸದಸ್ಯರುಗಳಿದ್ದಾರೆ ಆದರೆ  ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಕಾರ್ಯಚಟುವಟಿಕೆಗಳು ಸ್ಥಬ್ದವಾಗಿವೆ.

ಪ್ರಸ್ತುತ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್
ನಾಟಕ ಅಕಾಡೆಮಿಯ ವಿಷಯಕ್ಕೆ ಬಂದರೆ ಒಟ್ಟು ಹದಿನೈದು ಜನ ಸದಸ್ಯರನ್ನು ಸರಕಾರ ಆಯ್ಕೆ ಮಾಡಲಾಗಿದೆ. ಕೆ.ಎನ್.ರಾಮಕೃಷ್ಣ, ವಿ.ಎನ್.ಅಕ್ಕಿ, ಕಲ್ಪನಾ ನಾಗನಾಥ, ವಿ.ರಾಮಚಂದ್ರಯ್ಯ, ಉಮೇಶ್ ಸಾಲಿಯಾನ್, ಪಿ.ತಿಪ್ಪೇಸ್ವಾಮಿ, ಹೆಚ್.ಷಡಕ್ಷರಪ್ಪ, ಎಸ್.ಕೆ.ಕೊನೆಸಾಗರ್, ಅನ್ನಪೂರ್ಣ ಸಾಗರ್, .ವರಲಕ್ಷ್ಮೀ, ಹಾಲ್ಕುರಿಕೆ ಶಿವಶಂಕರ್, ರಾಜಪ್ಪ ಕಿರಸಗೂರ, ಎಸ್.ಕೆ.ಗುಣಶೀಲನ್, ಮುದ್ದಣ್ಣ ರಟ್ಟೇಹಳ್ಳಿ, ಕೆ.ಜಗುಚಂದ್ರ. ಸದಸ್ಯರುಗಳಲ್ಲಿ ಮೂವತ್ತು ವರ್ಷದಿಂದ ಹಿಡಿದು ಎಂಬತೈದು ವರ್ಷದ ವಯೋಮಾನದವರನ್ನು ಆಯ್ಕೆ ಮಾಡಲಾಗಿದೆ. ಇವರುಗಳ ಆಯ್ಕೆ ಹಿಂದಿರುವ ಮಾನದಂಡ ಹಾಗೂ ಶಿಪಾರಸ್ಸುಗಳು ಮತ್ತು ರಾಜಕೀಯ ಲಿಂಕ್ಗಳ ಬಗ್ಗೆ ಚರ್ಚಿಸಿ ಪ್ರಯೋಜನವಿಲ್ಲ. ಆದರೆ ಕಲ್ಪನಾ ನಾಗನಾಥ,  ಉಮೇಶ್ ಸಾಲಿಯಾನ್, ಎಸ್.ಕೆ.ಕೊನೆಸಾಗರ್, ಹಾಲ್ಕುರಿಕೆ ಶಿವಶಂಕರ್, ಎಸ್.ಕೆ.ಗುಣಶೀಲನ್, ಮುದ್ದಣ್ಣ ರಟ್ಟೇಹಳ್ಳಿ, ಕೆ.ಜಗುಚಂದ್ರರಂತಹ ಕೆಲವರನ್ನು ಹೊರತು ಪಡಿಸಿದರೆ ಉಳಿದವರು ರಂಗಭೂಮಿಯಲ್ಲಿ ಈಗ ಕ್ರಿಯಾಶೀಲವಾಗಿಲ್ಲ. ಯಾರು ಸಕ್ರೀಯರಾಗಿ ರಂಗಭೂಮಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೋ, ಯಾರಿಗೆ ಅಕಾಡೆಮಿಯ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಲು ಸಾಧ್ಯವೋ ಅಂತವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರೆ ಅಕಾಡೆಮಿಯ ಮೂಲಕ ರಂಗಭೂಮಿಗೆ ಸಹಾಯವಾಗುತ್ತಿತ್ತು. ಆದರೆ ನಮ್ಮ ರಾಜಕೀಯ ಹಿತಾಸಕ್ತಿಗಳು ಯಾವಾಗಲೂ ಅಕಾಡೆಮಿಯ ಉದ್ದೇಶದ ಬಗ್ಗೆ ಆಲೋಚಿಸುವುದೆ ಇಲ್ಲ. ಹೀಗಾಗಿಯೇ ಅಕಾಡೆಮಿಗಳು ಡಮ್ಮಿಯಾಗುತ್ತಿವೆ. ಸರಕಾರಿ ಕಛೇರಿಗಳ ಹಾಗೆ ನಿರರ್ಥಕವಾಗಿ ಕಾರ್ಯನಿರ್ವಹಿಸುತ್ತವೆ.


ಶೇಖ ಮಾಸ್ತರ್ ನಾಟಕ ಅಕಾಡೆಮಿಯ ಅಧ್ಯಕ್ಷ ಆಗಲೇ ಬಾರದೆಂದು ಯಾವ ರಂಗಕರ್ಮಿಗಳು ಹಾಗೂ ರಂಗಭೂಮಿ ಕಾಂಟ್ರ್ಯಾಕ್ಟರ್ಗಳು ಶತಾಯ ಗತಾಯ  ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರು. ಜೆ.ಲೋಕೇಶ ಪರ ಸಹಿ ಸಂಗ್ರಹ ಮಾಡಿ ಸರಕಾರಕ್ಕೆ ಸಲ್ಲಿಸಿದ್ದರು. ಹಲವಾರು ಸಭೆಗಳನ್ನು ನಡೆಸಿದ್ದರು. ಸುದ್ದಿಗೋಷ್ಟಿಗಳನ್ನು ಮಾಡಿದ್ದರು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶೇಕ್ ಮಾಸ್ತರ್ ಆಯ್ಕೆಯಾಗುವುದನ್ನು ವಿರೋಧಿಸಿದ್ದರು. ಏನೇ ಆದರೂ ನಿಜವಾದ ರಾಜಕೀಯದವರ ಮುಂದೆ ರಂಗರಾಜಕೀಯದವರ ಆಟ ನಡೆಯಲಿಲ್ಲ, ಒತ್ತಡ ಪ್ರಯೋಜನಕಾರಿಯಾಗಲಿಲ್ಲ. ರಾಜಕೀಯ ಸಮೀಕರಣಗಳು ಹಾಗೂ ಮುಸ್ಲಿಂ ಕೋಮಿನ ಮಂತ್ರಿಯವರ  ಒತ್ತಡದಿಂದಾಗಿ ಕೊನೆಗೂ ಶೇಕ್ ಮಾಸ್ತರ್ ಎಲ್ಲಾ ರೀತಿಯ ರಂಗರಾಜಕೀಯಗಳನ್ನು ಮೀರಿ  ನಾಟಕ ಅಕಾಡೆಮಿಗೆ ಸರಕಾರದಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಯಾವಾಗ ತಮ್ಮ ತಂತ್ರಗಾರಿಕೆ ಟುಸ್ ಎಂದಿತೋ ಹಲವಾರು ರಂಗರಾಜಕಾರಣಿಗಳು ತಮ್ಮ ವರಸೆ ಬದಲಾಯಿಸಿದರು. ಶೇಕ್ ಮಾಸ್ತರರ ಸುತ್ತ ಸುಳಿದಾಡತೊಡಗಿದರು. ವೇದಿಕೆಯ ಮೇಲೆ ಹೊಗಳತೊಡಗಿದರು. ಶಾಲು ಹಾಕಿ ಸನ್ಮಾನಿಸತೊಡಗಿದರು. ಬೆನ್ನ ಹಿಂದೆ ಅಯೋಗ್ಯ ಎಂದು ಬೈಯವವರೇ ಎದುರುಗಡೆ ಮುಖಸ್ತುತಿಗಿಳಿದರು. ಇದಕ್ಕೆ ಹೇಳುವುದು ರಂಗರಾಜಕೀಯ ಎಂದು.  ಈ ಶೇಕ್ ಮಾಸ್ತರ್ ಸಹ  ಅಧ್ಯಕ್ಷರಾದ ಮರುದಿನ ಮಾಡಿದ ಕೆಲಸವೇನೆಂದರೆ ಕೆಲವು ಕಾಂಗ್ರೆಸ್ ಥಿಂಕ್ ಟ್ಯಾಂಕ್ಗಳ ಮನೆಗೆ ಹೋಗಿ ಆಶೀರ್ವಾದ ಪಡೆದು ಬಂದರು. ವಿಪರ್ಯಾಸವೇನೆಂದರೆ ಯಾವ ಕಪ್ಪಣ್ಣ ಶೇಖ ಮಾಸ್ತರ್ ಅಧ್ಯಕ್ಷರಾಗುವುದನ್ನು ಶತಾಯ ಗತಾಯ ವಿರೋಧಿಸಿದ್ದರೋ ಅಂತವರ ಮನೆಗೆ ಹೋದ ಶೇಕ್ ಮಾಸ್ತರ್ ಸಣ್ಣದೊಂದು ಸನ್ಮಾನ ಸ್ವೀಕರಿಸಿ  ಊಟ ಮಾಡಿ ತಾಂಬೂಲ ಹಾಕಿಕೊಂಡು ಧನ್ಯರಾದರು. ಇದಕ್ಕೆ ಹೇಳುವುದು ಅವಕಾಶವಾದಿತನ ಎಂದು. ಬೆಂಗಳೂರಿನ ರಂಗ ರಾಜಕೀಯದವರಿಗೆ ಪ್ರತಿಯಾಗಿ ಶೇಕ್ ಮಾಸ್ತರ್ ತಮ್ಮ ವೃತ್ತಿ ಕಂಪನಿ ರಾಜಕೀಯದ ಮೂಲಕ ಉತ್ತರಿಸತೊಡಗಿದರು.   

ನೀತಿ ಸಂಹಿತೆಯ ಕರಿನೆರಳಲ್ಲೇ ಮಾರ್ಚ 15ರಂದು ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ್ ಮಾಸ್ತರರು ಎಲ್ಲಾ ಸದಸ್ಯರುಗಳ ಸಭೆಯನ್ನು ಕರೆದಿದ್ದರು. ಆದರೆ ಸಭೆಯಲ್ಲಿ ಯಾವುದೇ ವಿಷಯದ ಕುರಿತು ಚರ್ಚೆಗಳು ನಡೆಯಲೇ ಇಲ್ಲ. ಚರ್ಚೆ ಮಾಡುವುದಕ್ಕೂ ನೀತಿ ಸಂಹಿತೆಯ ಭಯ. ಕೋಆಪ್ಟ್ ಸದಸ್ಯರನ್ನು ನಿಯಮಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಯಾಕೆಂದರೆ ಅದಕ್ಕೆ ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಇಡೀ ಸಭೆ ಯಾವುದೇ ಚರ್ಚೆ ತೀರ್ಮಾಣಗಳಿಲ್ಲದೆ ಬರಕಾಸ್ತಾಯಿತು. ಬೈಲಾ ಪ್ರಕಾರ ಒಂದು ಸಭೆ ಆದ ನಂತರ ಮತ್ತೆ ಮೂರು ತಿಂಗಳ ಒಳಗೆ ಸಭೆ ನಡೆಸುವಂತಿಲ್ಲ. ಹೀಗಾಗಿ ಇನ್ನು ಮೂರು ತಿಂಗಳ ಕಾಲ ರಾಜ್ಯಾದ್ಯಂತ ಅಕಾಡೆಮಿಯ ಚಟುವಟಿಕೆಗಳಿಗೆ ಅಲ್ಪವಿರಾಮ. ಆದರೆ ಮೂರು ತಿಂಗಳೂ ಅಧ್ಯಕ್ಷರುಗಳ ಸಂಬಳ ತಿಂಗಳಿಗೆ ಇಪ್ಪತ್ತು ಪ್ಲಸ್ ಹತ್ತು ಟೋಟಲ್ ಮೂವತ್ತು ಸಾವಿರ ವ್ಯರ್ಥ. ಅಂದರೆ ಮೂರು ತಿಂಗಳಿಗೆ ಅಂದಾಜು ಒಂದು ಲಕ್ಷ ರೂಪಾಯಿ ಒಂದು ಅಕಾಡೆಮಿಗೆ. ಇನ್ನು ಹತ್ತು ಅಕಾಡೆಮಿ ಹಾಗೂ ಎರಡು ಪ್ರಾಧಿಕಾರದ ಅಧ್ಯಕ್ಷರುಗಳ ಸಂಬಳ ಲೆಕ್ಕ ಹಾಕಿದರೆ ಹನ್ನೆರಡು ಲಕ್ಷ ರೂಪಾಯಿಗಳು ಏನೇನೂ ಕೆಲಸವಾಗದೇ ಸುಮ್ಮನೆ ವ್ಯರ್ಥವಾಗುತ್ತಲ್ಲಾ ಎನ್ನುವ ಪರಿಜ್ಞಾನ ಸರಕಾರಕ್ಕೆ ಹಾಗೂ ಸಂಸ್ಕೃತಿ ಇಲಾಖೆಗಳಿಗೆ ಇದೆಯಾ. ಹೋಗಲಿ ಕಳೆದ ಒಂಬತ್ತು ತಿಂಗಳು ಹಾಗೂ ಈಗಿನ ಮೂರು ತಿಂಗಳು ಅಂದರೆ ಒಟ್ಟು ಒಂದು ವರ್ಷಗಳ ಕಾಲ ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಾಗು ಅಕಾಡೆಮಿಗೊಬ್ಬ ರೆಜಿಸ್ಟ್ರಾರ್ ಎನ್ನುವ ಸರಕಾರಿ ಅಧಿಕಾರಿಗೆ ಸುಮ್ಮನೆ ಕೂಡಿಸಿ ಸರಕಾರ ಸಂಬಳ ಕೊಡುತ್ತಿದೆಯಲ್ಲಾ. ಜನರ ಹಣ ಪೋಲಾಗುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?  ಯಾವ ಜನರ ತೆರಿಗೆ ಹಣ ಸರಕಾರದ ಮೂಲಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಖರ್ಚಾಗಬೇಕಾಗಿತ್ತೋ ಅದು ಈಗ ಹೀಗೆ ನಿರರ್ಥಕವಾಗಿ ಸೋರಿಹೋಗುವುದಕ್ಕೆ ಹೊಣೆ ಹೊರುವವರಾರು? ಸರಕಾರ ಅಕಾಡೆಮಿಗಳ ಅಧ್ಯಕ್ಷರ ಆಯ್ಕೆಯಲ್ಲಿ ಅನಗತ್ಯ ರಾಜಕೀಯ ಮಾಡುವುದನ್ನು ಪ್ರಶ್ನಿಸೋರು ಯಾರು? ಅಕಾಡೆಮಿಗಳು ಇರುವುದು ಆಯಾ ಕ್ಷೇತ್ರಗಳನ್ನು ಉಳಿಸಿ ಬೆಳೆಸುವುದಕ್ಕೋ ಇಲ್ಲವೇ ರಾಜಕಾರಣಿಗಳು ಹಾಗೂ ಅಧಿಕಾರಿವರ್ಗಗಳ ಇಶಾರೆಗೆ ತಕ್ಕಂತೆ ನಡೆಯುವುದಕ್ಕೋ

                                    -ಶಶಿಕಾಂತ ಯಡಹಳ್ಳಿ


                             ವಿವಿಧ ಅಕಾಡೆಮಿಗಳಿಗೆ ನೇಮಕಗೊಂಡ ಸದಸ್ಯರ ಪಟ್ಟಿ
  





 
           



         
         
         
           

               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ