ಸಿರಿಗೆರೆಯ ತರಳಬಾಳು ಬ್ರಹನ್ಮಠದ 2೦ನೇ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳ ಬದುಕು ಹಾಗೂ ಸಾಧನೆಯನ್ನು ರಂಗರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವೇ ‘ಮಹಾಬೆಳಗು’ ನಾಟಕ ಪ್ರಯೋಗ. ಸಿರಿಗೆರೆಯ ತರಳಬಾಳು ಮಠದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದಿ. ರಾಜಶೇಖರ ಹನುಮಲಿಯವರು ರಚಿಸಿದ ಈ ನಾಟಕವನ್ನು ವೈ.ಡಿ.ಬದಾಮಿಯವರು ನಿರ್ದೇಶಿಸಿದ್ದು ಸಾಣೇಹಳ್ಳಿಯ ಶಿವಸಂಚಾರದ ಕಲಾವಿದರು ಅಭಿನಯಿಸಿದ್ದಾರೆ. ರಂಗನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರವು ಜಂಟಿಯಾಗಿ ಬೆಂಗಳೂರಿನ ಸಂಸ ಬಯಲು ರಂಗ ಮಂದಿರದಲ್ಲಿ ಎಪ್ರಿಲ್ 29 ರಿಂದ ಮೂರು ದಿನಗಳ ಕಾಲ ಆಯೋಜಿಸಿದ ಸಿ.ಆರ್.ಸಿಂಹ ನೆನಪಿನ ‘ಶಿವಸಂಚಾರ’ ನಾಟಕೋತ್ಸವದಲ್ಲಿ 2014 ಎಪ್ರಿಲ್ 29ರಂದು ‘ಮಹಾಬೆಳಗು’ ನಾಟಕವು ಪ್ರದರ್ಶನಗೊಂಡಿತು.
ನಾಟಕರಂಗದಲ್ಲೂ ಆಸಕ್ತಿ ತಳೆದ ಶಿವಕುಮಾರ ಸ್ವಾಮೀಜಿಗಳು ವಿಶ್ವಬಂಧು ಮರಳಸಿದ್ದ, ಶರಣಸತಿ-ಲಿಂಗಪತಿ, ಮರಣವೇ ಮಹಾನವಮಿ ಹಾಗೂ ಶಿವಕುಲ ಹೀಗೆ ನಾಲ್ಕು ನಾಟಕಗಳನ್ನು ಬರೆದರು, ಹಲವಾರು ನಾಟಕಗಳನ್ನು ಆಡಿಸಿದರು. ಅವರ ಕಾಲಾನಂತರ ‘ಮಹಾಬೆಳಗು’ ನಾಟಕಕ್ಕೆ ನಾಯಕರೂ ಆದರು. ರಂಗಭೂಮಿಗೂ ಹಾಗೂ ತರಳಬಾಳು ಮಠಕ್ಕೂ ಅದೇನೋ ಕರಳುಬಳ್ಳಿ ಸಂಬಂಧವಿರುವಂತಿದೆ. ನಾಟಕ ಎನ್ನುವುದು ಜನರನ್ನು ನೇರವಾಗಿ ಮುಟ್ಟಬಹುದಾದ ಪ್ರಭಾವಶಾಲಿ ಮಾಧ್ಯಮ ಎಂದು ಅರಿತ ಶಿವಕುಮಾರ ಸ್ವಾಮೀಜಿಗಳು ನಾಟಕಗಳನ್ನು ಶರಣ ತತ್ವ ಪ್ರಚಾರಕ್ಕೆ ಹಾಗೂ ಜನರ ಜಾಗೃತಿಗೆ ಪರಿಕರವಾಗಿ ಬಳಸಿಕೊಂಡರು. ಅದನ್ನೇ ಮುಂದುವರೆಸಿದ ತರಬಾಳು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಸ್ವಾಮಿಗಳು ಸಾಣೇಹಳ್ಳಿಯಲ್ಲಿ ರೆಪರ್ಟರಿ, ರಂಗಶಾಲೆ ಹಾಗೂ ನಾಟಕೋತ್ಸವಗಳ ಮೂಲಕ ರಂಗಕ್ರಾಂತಿಯನ್ನೇ ಶುರುಮಾಡಿ ನಾಟಕದ ಸ್ವಾಮಿ ಎನ್ನಿಸಿಕೊಂಡರು. ಈ ವರ್ಷ ಶಿವಕುಮಾರ ಸ್ವಾಮೀಜಿಗಳ ಶತಮಾನೋತ್ಸವ ವರ್ಷ. ಸ್ವಾಮಿಗಳ ನೆನಪಿಗಾಗಿ ಅವರ ಬದುಕನ್ನಾಧರಿಸಿದ ಮಹಾಬೆಳಗು ನಾಟಕ ಹಾಗೂ ಶಿವಕುಮಾರ ಸ್ವಾಮೀಜಿಗಳೇ ರಚಿಸಿದ ಶರಣಸತಿ-ಲಿಂಗಪತಿ ಮತ್ತು ವಿಶ್ವಬಂಧು ಮರುಳಸಿದ್ಧ ನಾಟಕಗಳನ್ನು ಈ ವರ್ಷದ ಶಿವಸಂಚಾರ ತಿರುಗಾಟಕ್ಕೆ ಆಯ್ಕೆ ಮಾಡಿಕೊಂಡು ಕಳೆದ ನವೆಂಬರ್ 1 ರಿಂದ ರಾಜ್ಯಾದ್ಯಂತ ಪ್ರದರ್ಶನಗಳನ್ನು ಮಾಡಲಾಗುತ್ತಿದೆ. ತಿರುಗಾಟದ ಕೊನೆಯ ಹಂತದಲ್ಲಿ ಬೆಂಗಳೂರಿನಲ್ಲಿ ಮೂರು ನಾಟಕಗಳೂ ಪ್ರದರ್ಶನಗೊಳ್ಳುತ್ತಿವೆ.
ಜನವಿರೋಧಿ ಪುರೋಹಿತಶಾಹಿ ಮೌಲ್ಯಗಳನ್ನು ಶತಮಾನಗಳಿಂದ ಅನುಷ್ಟಾನಗೊಳಿಸಿ ಜನಸಮುದಾಯವನ್ನು ಜಾತಿ ಮತ ವರ್ಗಗಳನ್ನಾಗಿ ಒಡೆದಾಳಿದ ಸನಾತನ ಮಠ-ಮಾನ್ಯಗಳು ಸಮಾಜದ ಸರ್ವಾಂಗೀನ ಬೆಳವಣಿಗೆಗೆ ಮಾರಕವಾಗಿದ್ದವು. ಇಂತಹ ಕರ್ಮಠ ಪರಂಪರೆ ವಿರೋಧಿಸಿದ ಬಸವಾದಿ ಶರಣರು ಎಲ್ಲಾ ಜಾತಿಯ ದುಡಿಯುವ ಜನರಿರುವ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ತದನಂತರ ಜಂಗಮ ಪರಂಪರೆಯ ಹಲವಾರು ಮಠಗಳು ನಾಡಿನಾದ್ಯಂತ ಸ್ಥಾಪಿತಗೊಂಡು ಸ್ಥಾವರಗಳಾದವು. ಜಾತಿಗೊಂದು ಮಠ, ಮಠಕ್ಕೊಂದು ಪೀಠ, ಪೀಠಕ್ಕೊಬ್ಬ ಜಗದ್ಗುರುಗಳು ಉದ್ಬವಿಸಿದರು. ಬರುಬರುತ್ತಾ ಅರಾಜಕತೆಯ ಅತಿರೇಕಕ್ಕೊಳಗಾದ ಮಠಗಳು ವ್ಯಭಿಚಾರದ ಕೇಂದ್ರಗಳಾದವು. ಧರ್ಮರಾಜಕರಣದೊಂದಿಗೆ ಸ್ಥಳೀಯ ಜಾತಿರಾಜಕಾರಣವೂ ಸೇರಿ ಧಾರ್ಮಿಕ ಕೇಂದ್ರಗಳು ತಂತ್ರ-ಕುತಂತ್ರಗಳ ಬೀಡುಗಳಾದವು. ಸಿರಿಗೆರೆಯ ತರಳಬಾಳು ಮಠವೂ ಸಹ ಇದಕ್ಕೆ ಹೊರತಾಗಿರಲಿಲ್ಲ.
ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯ ಒತ್ತಡಕ್ಕೊಳಗಾಗಿ ಹಾಗೂ ಅನಿರೀಕ್ಷಿತವಾಗಿ ಜಗದ್ಗುರುಪಟ್ಟಕ್ಕೆ ಬಂದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನಿಜಕ್ಕೂ ತರಳಬಾಳು ಬ್ರಹನ್ಮಠಕ್ಕೆ ಮಹಾಬೆಳಗೆ ಆಗಿದ್ದರು. ಸ್ವಾರ್ಥಪರತೆ, ಜಾತೀಯತೆ ಹಾಗೂ ಮೌಢ್ಯತೆಗಳ ಅಂಧಕಾರದಲ್ಲಿ ಸಿರಿಗೆರೆ ಮಠ ಕುಸಿಯುತ್ತಿರುವಾಗ ಅಲ್ಲಿ ತುಂಬಿರುವ ಕತ್ತಲನ್ನು ಬಯಲುಮಾಡಿ, ಜಾತಿವಾದಿಗಳ ಮುಖವಾಡ ಬೆತ್ತಲುಮಾಡಿ ಮಠಕ್ಕೊಂದು ಜಾತ್ಯಾತೀತತೆಯ ಮಾನ್ಯತೆ ತಂದು ಕೊಟ್ಟು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದವರು ಶಿವಕುಮಾರ ಸ್ವಾಮಿಗಳು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆ ಮಠದಲ್ಲಿ ಆಗ ಅದೆಷ್ಟು ಕರ್ಮಠತನ ತುಂಬಿತ್ತೆಂದರೆ ಅದನ್ನು ವಿರೋಧಿಸಿದ ಹಿರಿಯ ಸ್ವಾಮೀಜಿಗಳಾದ ಗುರುಶಾಂತ ಸ್ವಾಮಿಗಳನ್ನೇ ವಿಷ ಕೊಟ್ಟು ಕುತಂತ್ರದಿಂದ ಕೊಲ್ಲಿಸಲಾಯಿತು. ತದನಂತರ ಜಗದ್ಗುರು ಪಟ್ಟಕ್ಕೆ ಬಂದ ಶಿವಕುಮಾರ ಸ್ವಾಮಿಗಳ ಮುಂದಿರುವ ಹಾದಿ ಸುಗಮವಾಗೇನೂ ಇರಲಿಲ್ಲ. ಹೆಜ್ಜೆ ಹೆಜ್ಜೆಗೂ ಅಡತಡೆಗಳು ಬಂದವು. ಆದರೂ ಗಟ್ಟಿಯಾಗಿ ನಿಂತು ಎಲ್ಲವನ್ನೂ ತಮ್ಮ ಆತ್ಮಸ್ತೈರ್ಯದಿಂದ ಎದುರಿಸಿದ ಸ್ವಾಮಿಗಳು ಮಠವನ್ನು ನಿತ್ಯ ಲೂಟಿಯಿಂದ ತಪ್ಪಿಸಿದರು, ಸ್ವಾರ್ಥಿಗಳನ್ನು ದೂರವಿಟ್ಟರು, ಜಾತಿವಾದಿಗಳನ್ನು ಬಗ್ಗುಬಡಿದರು ತಾವು ಕನಸಿದ ಜಾತಿರಹಿತ ಶಿಕ್ಷಣ ಸಮೂಹ ಸಾಮ್ರಾಜ್ಯವನ್ನು ಕಟ್ಟಿದರು. ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿದರು, ತಮ್ಮದೇ ಆದ ರೀತಿಯಲ್ಲಿ ಬಸವ ತತ್ವ ಪ್ರಚಾರ ಮಾಡಿದರು. ಈ ಎಲ್ಲಾ ಸಾಮಾಜಿಕ ಚಟುವಟಿಕೆಗಳಿಂದಾಗಿ ತರಳಬಾಳು ಬ್ರಹನ್ಮಠ ಹೆಮ್ಮರವಾಗಿ ಬೆಳೆಯಿತು. ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಆಶ್ರಯ ಕೊಟ್ಟಿತು. ಈ ನಿಟ್ಟಿನಲ್ಲಿ ಶಿವಕುಮಾರ ಸ್ವಾಮಿಗಳ ಸಾಧನೆ ಅಗಾಧವಾದದ್ದು. ಈ ಎಲ್ಲಾ ವಿಚಾರಗಳನ್ನು ಈ ನಾಟಕದಲ್ಲಿ ದೃಶ್ಯಗಳ ಕಟ್ಟಿಕೊಡಲಾಗಿದೆ. ಬಡ ಮಠವೊಂದನ್ನು ತಮ್ಮ ಪರಿಶ್ರಮದಿಂದ ಉನ್ನತಿಯತ್ತ ಕೊಂಡೊಯ್ದ ಶಿವಕುಮಾರ ಸ್ವಾಮಿಗಳ ರೀತಿಯನ್ನು ಮತ್ತು ಸಾಧನೆಯನ್ನು ಪ್ರದರ್ಶನ ಮಾಧ್ಯಮದ ಮೂಲಕ ಹೇಳುವಲ್ಲಿ ‘ಮಹಾಬೆಳಗು’ ನಾಟಕ ಸಫಲವಾಗಿದೆ.
ಇದು ಕಥಾನಕಾಧಾರಿತ ನಾಟಕವಾಗಿರದೇ ವ್ಯಕ್ತಿಯೊಬ್ಬರ ಸಮಾಜಮುಖಿ ಸಾಧನೆಯ ಮುಖವಾಣಿಯಾಗಿದೆ. ಆದರೆ ಈ ವ್ಯಕ್ತಿ ಬರೀ ವ್ಯಕ್ತಿಯಾಗಿರದೇ ಸಮಾಜದ ಶಕ್ತಿಯೂ ಆಗಿ ಬೆಳೆದಿದ್ದರಿಂದ ಈ ನಾಟಕಕ್ಕೆ ಸಾಮೂಹಿಕತೆ ಮೂಡಿಬಂದಿದೆ. ಶಿವಕುಮಾರ ಸ್ವಾಮೀಜಿಗಳು ಅನಿರೀಕ್ಷಿತವಾಗಿ ಜಗದ್ಗುರು ಪಟ್ಟಕ್ಕೆ ಬಂದಾಗಿನಿಂದ ಹಿಡಿದು ಅವರು ಶಿವಾಧೀನರಾಗುವವರೆಗೂ ಸಿರಿಗೆರೆಯ ತರಳಬಾಳು ಬ್ರಹನ್ಮಠದಲ್ಲಿ ನಡೆದ ಪ್ರಮುಖ ಬಿಡಿ ಬಿಡಿ ಘಟನೆಗಳನ್ನು ಹೆಣೆದು ಒಂದು ಬಂಧದಲ್ಲಿ ಜೋಡಿಸಲು ಪ್ರಯತ್ನಿಸಲಾಗಿದೆ. ಆದರೆ ಹಾಗೆ ದೃಶ್ಯಗಳನ್ನು ಕಟ್ಟುವಾಗ ಜಾಳುಜಾಳಾದಂತೆನಿಸುತ್ತದೆ. ನಾಟಕದ ಮೇಲೆ ನಿರ್ದೇಶಕರ ಹಿಡಿತ ತಪ್ಪಿಹೋಗಿದೆ. ಶಿವಕುಮಾರರ ಸಾಧನೆಯನ್ನು ಕಥೆಯಾಗಿ ಕಂಟಿನ್ಯೂಟಿಗಳ ಮೂಲಕ ಕಟ್ಟಿಕೊಡದೇ ಬಿಡಿ ಬಿಡಿ ದೃಶ್ಯಗಳಾಗಿ ವಿಂಗಡಿಸಿ ನಾಟಕವಾಗಿಸಿದ್ದರಿಂದಾಗಿ ನೋಡುಗರಿಗೆ ಸಂಪೂರ್ಣ ಅನುಭವ ದಕ್ಕದಂತಾಗಿದೆ. ಕೆಲವು ದೃಶ್ಯಗಳು ವೇಗವಾಗಿ ಬದಲಾದರೆ ಇನ್ನು ಕೆಲವು ದೃಶ್ಯಗಳು ನಿಧಾನಗತಿಯಿಂದಾಗಿ ಎಳೆದಂತಾಗಿ ನೋಡುಗರಿಗೆ ಬೋರ್ ಹೊಡಿಸಿದವು. ಕೆಲವು ಸನ್ನಿವೇಶಗಳಂತೂ ಕೇವಲ ಮಾಹಿತಿಗಳನ್ನು ಕೊಡಲೆಂದೇ ಅಳವಡಿಸಿದಂತಿದೆ. ಉದಾಹರಣೆಗೆ ಭಾರತ ಸೇವಾ ದಳದ ಹರ್ಡೆಕರ್ ಬರುವ ದೃಶ್ಯ ನಾಟಕಕ್ಕೆ ಅನಗತ್ಯವಾಗಿತ್ತು. ಇಂತಹ ಕೆಲವು ದೃಶ್ಯಗಳು ನಾಟಕದ ನಡೆಗೆ ಅಡೆತಡೆಯನ್ನುಂಟುಮಾಡುವಂತಿವೆ.ಕೆಲವೊಮ್ಮೆ ಮಾಹಿತಿಗಳಿಗಾಗಿಯೇ ದೃಶ್ಯಗಳನ್ನು ಸಂಯೋಜಿಸಿದಂತಿದ್ದು ಈ ರೀತಿಯ ದೃಶ್ಯಗಳು ನಾಟಕವನ್ನು ಸಾಕ್ಷಚಿತ್ರವನ್ನಾಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇಡೀ ನಾಟಕ ಪರಿಷ್ಕರಣೆಗೊಳಪಡಿಸಿ ಹಂತಹಂತವಾಗಿ ಅನುಕ್ರಮವಾಗಿ ಅಗತ್ಯವಿರುವ ದೃಶ್ಯಗಳನ್ನು ಜೋಡಿಸಿದ್ದರೆ ಚೆನ್ನಾಗಿತ್ತು.
ಶಿವಕುಮಾರ ಸ್ವಾಮಿಯವರ ಮಾತುಗಳು ಈ ನಾಟಕದಲ್ಲಿ ಸರ್ವಾಧಿಕಾರಿ ಧೋರಣೆಯುಳ್ಳವರಂತೆ ಕಂಡರೂ ಅವರ ಕಾಲಘಟ್ಟದ ಮಠದ ಅರಾಜಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಮಠದ ಜಾತಿವಾದಿ ಸ್ವಾರ್ಥಿಗಳಿಂದ ಬಂದ ವಿರೋಧವನ್ನೆದುರಿಸಲು ಇದು ಅನಿವಾರ್ಯವಾಗಿತ್ತೆಂಬುದನ್ನು ಈ ನಾಟಕ ಸಾಬೀತುಪಡಿಸುತ್ತದೆ. ಆದರೆ ಮಹಾಸ್ವಾಮಿಗಳ ಬಾಯಲ್ಲಿ ಒಂದಿಷ್ಟು ಶಿಷ್ಟಪದಗಳನ್ನು ಪ್ರೇಕ್ಷಕ ಅಪೇಕ್ಷಿಸುತ್ತಾನೆ. ಆದರೆ ಅಂತಹ ಉದಾತ್ತ ಪಾತ್ರದ ಬಾಯಲ್ಲಿ ‘ಮಿಂಡ್ರಿಗುಟ್ಟಿದ ಸೂಳೆಮಗನೇ’ ಎನ್ನುವ ಬೈಗುಳಗಳು ಶೋಭಿಸುವುದಿಲ್ಲ. ಯಾಕೆಂದರೆ ಇದು ಮಹಿಳೆಯರನ್ನು ಕೆಟ್ಟದಾಗಿ ನಿಂದಿಸುವ ಬೈಗಳಾಗಿದೆ. ಅಹಿಂಸೆಯನ್ನು ಪ್ರತಿಪಾದಿಸುವ ಶರಣ ಮಠದ ಜಗದ್ಗುರುಗಳು ಸಿಟ್ಟನ್ನು ನಿಗ್ರಹಿಸಲಾಗದೇ ದೈಹಿಕ ಹಲ್ಲೆಯನ್ನೂ ಮಾಡುತ್ತಾರೆ ಹಾಗೂ ‘ಇನ್ನೊಮ್ಮೆ ಹೀಗೆ ಮಾಡಿದರೆ ಬಲಿಹಾಕಿ ಬಿಡುತ್ತೇನೆ’ ಎಂದೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಾಸ್ತವದಲ್ಲಿ ಸ್ವಾಮಿಗಳು ಯಾವುದೋ ಕಾರಣಕ್ಕೆ ಹೀಗೆಲ್ಲಾ ವ್ಯಕ್ತಿ ಹಿಂಸೆ ನಿಂದನೆಗಳಿಗಿಳಿದಿದ್ದರೂ ನಾಟಕವಾಗಿ ತೋರಿಸುವಾಗ ಒಂದಿಷ್ಟು ಮುಂಜಾಗೃತೆ ವಹಿಸಬೇಕಾಗಿತ್ತು. ಇಲ್ಲವಾದರೆ ಇದು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಮೂಡಿಸುತ್ತದೆ. ‘ನಮ್ಮ ಮಹಾಸ್ವಾಮಿಗಳೇ ಅವಾಚ್ಯವಾಗಿ ಬೈಯುತ್ತಾರೆ, ಹೊಡೆಯುತ್ತಾರೆ, ದಮಕಿ ಕೊಡುತ್ತಾರೆಂದಮೇಲೆ ನಾವು ಅಂತಹುದನ್ನು ಮಾಡಿದರೆ ತಪ್ಪೇನು?’ ಎಂದು ಜನರು ಸಮರ್ಥಿಸಿಕೊಳ್ಳುತ್ತಾರೆ. ಸ್ವಾಮಿಗಳ ನಡೆ ನುಡಿ ಜನರಿಗೆ ಮಾದರಿಯಾಗಿರಬೇಕೆ ಹೊರತು ಸ್ವಾಮಿಗಳೇ ಸಾಮಾನ್ಯ ಜನರಂತಾಡಬಾರದು. ಇದು ಶರಣ ತತ್ವಕ್ಕೆ ವಿರೋಧಿ ನಡೆಯಾಗಿದೆ. ಈ ನಾಟಕದಲ್ಲಿ ಒಂದಿಷ್ಟು ಮಹಿಳಾ ವಿರೋಧಿತನವೂ ಇದೆ. ಕುಡುಕನ ಬಾಯಲ್ಲಿ ಮಹಿಳೆಯರಿಗೆ ‘ಫೀಗರ್ರು, ಹಳೇ ಟ್ರಂಕು’ ಎಂದು ಹೇಳಿಸಿ ಲೇವಡಿ ಮಾಡುವುದು ಸಿನೆಮಾ ಸಂಸ್ಕೃತಿಯಾಗಿದೆಯೇ ಹೊರತು ಮಠದ ಸಂಸ್ಕೃತಿಯಲ್ಲ. ಕೆಟ್ಟ ನಡತೆ ಹಾಗೂ ಕೆಟ್ಟ ಮಾತುಗಳನ್ನೇ ನೋಡುಗರು ಪಾಲೋ ಮಾಡುವ ಸಾಧ್ಯತೆಗಳ ಬಗ್ಗೆ ಕೂಡಾ ನೈತಿಕತೆ ಬೋಧಿಸುವ ಮಠಗಳು ಯೋಚಿಸಬೇಕಿದೆ. ಶಿವಕುಮಾರ ಮಹಾಸ್ವಾಮಿ ಎನ್ನುವ ಮಹಾಬೆಳಗನ್ನು ತೋರಿಸುವ ದಾವಂತದಲ್ಲಿ ಆ ಬೆಳಕಿನ ಕೆಳಗಿರುವ ಕತ್ತಲೆಯನ್ನೂ ತೋರಿಸಿರುವುದು ಈ ನಾಟಕದ ಶಕ್ತಿ ಹಾಗೂ ದೌರ್ಬಲ್ಯ ಎರಡೂ ಆಗಿದೆ.
‘ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ಕೊಡುವ ಸಮಯ ಮೀರಿದೆ’ ಎಂದು ಶಿಕ್ಷಣ ಮಂತ್ರಿ ಪೋನಲ್ಲಿ ಹೇಳಿದರೂ ಅದೆಲ್ಲಾ ಗೊತ್ತಿಲ್ಲಾ ಹೇಳಿದ ಕೆಲಸ ಮಾಡಲೇ ಬೇಕು ಎಂದು ಸ್ವಾಮೀಜಿ ಮಂತ್ರಿಗೆ ದಮಕಿ ಹಾಕುವುದು ಸರಿಎನ್ನಿಸುವಂತಿಲ್ಲ. ಶೇಕಡಾ ಇಪ್ಪತ್ತೈದು ಮಾರ್ಕ್ಸ ಪಡೆದ ಯುವಕನಿಗಾಗಿ ಯೋಗ್ಯತೆ ಇಲ್ಲದಿದ್ದರೂ ತಹಶೀಲ್ದಾರ್ ಕೆಲಸಕ್ಕೆ ಮಹಾಸ್ವಾಮಿಗಳು ಶಿಪಾರಸ್ಸು ಪತ್ರ ಕೊಡುವುದು ಜನವಿರೋಧಿತನವಾಗುತ್ತದೆ. ತಮಗೆ ಹಗುರವಾಗಿ ಮಾತಾಡಿದ ರಾಜಕಾರಣಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದನ್ನು ತಪ್ಪಿಸಲು ಕಾಂಗ್ರೆಸ್ ಅಧ್ಯಕ್ಷರಿಗೆ ಒತ್ತಡ ಹೇರಿ ಅದು ಸಾಧ್ಯವಾಗದಿದ್ದಾಗ ತಮ್ಮ ಪರವಾಗಿರುವ ವ್ಯಕ್ತಿಯನ್ನು ಚುನಾವಣೆಗೆ ಸ್ವಾಮೀಜಿಗಳು ನಿಲ್ಲಿಸುತ್ತೇನೆನ್ನುವುದು ಸ್ವಜನಪಕ್ಷಪಾತವೆನಿಸುತ್ತದೆ ಮತ್ತು ತಮ್ಮ ಧಾರ್ಮಿಕ ಕ್ಷೇತ್ರವನ್ನು ಬಿಟ್ಟು ಅನಗತ್ಯವಾಗಿ ರಾಜಕೀಯದ ಕೊಳೆಯನ್ನು ಮೈಗಂಟಿಸಿಕೊಂಡಂತಾಗುತ್ತದೆ. ಇದು ನಿಜವೇ ಅಗಿದ್ದರೂ ನಾಟಕದಲ್ಲಿ ತೋರಿಸುವ ಅಗತ್ಯವಿರಲಿಲ್ಲ. ಯಾಕೆಂದರೆ ಈಗಾಗಲೇ ‘ಧಾರ್ಮಿಕ ಕೇಂದ್ರಗಳು ರಾಜಕೀಯವನ್ನು ನಿಯಂತ್ರಿಸುತ್ತವೆ ಹಾಗು ರಾಜಕಾರಣಿಗಳಿಗೆ ಆಶ್ರಯದಾತರಾಗಿವೆ’ ಎಂಬ ಆರೋಪ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಅಂತಹ ಆರೋಪಕ್ಕೆ ಈ ನಾಟಕ ಪುಷ್ಟಿಕೊಡುವಂತಿದೆ. ಈ ನಾಟಕ ಒಂದು ರೀತಿಯಲ್ಲಿ ಶಿವಕುಮಾರ ಮಹಾಸ್ವಾಮಿಗಳ ಸಾಧನೆಯನ್ನು ಹೇಳುತ್ತಲೇ ಅವರ ನಕಾರಾತ್ಮಕ ಅಂಶಗಳನ್ನೂ ತಿಳಿಸುತ್ತದೆ. ಹೀಗಾಗಿ ತಮ್ಮ ಮಠವನ್ನು ಉದ್ದಾರಮಾಡಲು ಸ್ವಾಮಿಗಳು ಸಾಮ ದಂಡಗಳಿತ್ಯಾದಿಗಳನ್ನು ಬಳಸಿ ತಮ್ಮ ಧರ್ಮಾಧಿಕಾರವನ್ನು ದುರುಪಯೋಗಪಡಿಸಿಕೊಂಡರಾ? ಎನ್ನುವ ಸಂದೇಹ ಬರುವ ಹಾಗೆ ಈ ನಾಟಕ ಮೂಡಿಬಂದಿದೆ. ಸ್ವಾಮಿಗಳ ಈ ನಡೆ ಶರಣ ತತ್ವಕ್ಕೆ ಪೂರಕವಾ? ಎನ್ನುವ ಪ್ರಶ್ನೆಯನ್ನೂ ಈ ನಾಟಕ ಪ್ರೇಕ್ಷಕರ ಮುಂದಿಡುತ್ತದೆ.
ವೈ.ಡಿ.ಬದಾಮಿಯವರು ನಾಟಕದ ಆರಂಭಕ್ಕೆ ತಮ್ಮದೇ ಶೈಲಿಯಲ್ಲಿ ಮಾಂಟೇಜ್ಶಾಟ್ ಮಾದರಿ ಸ್ಟಿಲ್ಗಳನ್ನು ಸೃಷ್ಟಿಸಿದ್ದು ನಾಟಕಕ್ಕೆ ಪೂರಕವಾಗಿರದಿದ್ದರೂ ನೋಡಲು ಸೊಗಸಾಗಿವೆ. ಇನ್ನೂ ಒಂದು ದೃಶ್ಯ ಪ್ರೇಕ್ಷಕರ ಮನಸ್ಸಿನಲ್ಲಿ ರೆಜಿಸ್ಟರ್ ಆಗುವ ಮೊದಲೇ ಬ್ಲಾಕ್ ಔಟ್ ಆಗಿ ಮತ್ತೊಂದು ದೃಶ್ಯ ಮೂಡುತ್ತದೆ ಮತ್ತೆ ಮರೆಯಾಗುತ್ತದೆ. ಚಿಕ್ಕ ಚಿಕ್ಕ ದೃಶ್ಯಗಳು, ಮೂರ್ನಾಲ್ಕು ನಿಮಿಷಕ್ಕೂ ಬ್ಲಾಕ್ಔಟ್ಗಳು ನೋಡುಗರ ರಸಸ್ವಾದದಲ್ಲಿ ವ್ಯತ್ಯಯವನ್ನುಂಟುಮಾಡುತ್ತವೆ. ಜೊತೆಗೆ ಮಠದ ಸುತ್ತ ಕಕ್ಕಸು ತಡೆಯುವ ಉದ್ದೇಶದ ಸಾಬಿ ದೃಶ್ಯವನ್ನು ಅನಗತ್ಯವಾಗಿ ಹದಿನೈದು ನಿಮಿಷ ಎಳೆಯಲಾಗಿದೆ. ವೃತ್ತಿ ಕಂಪನಿ ನಾಟಕಗಳಲ್ಲಿ ಹಾಸ್ಯದ ಸೀನ್ ಬರುತ್ತಲ್ಲಾ ಹಾಗೆ ಈ ಸಾಬಿ ಸೀನನ್ನು ತುರುಕಿ ಲಂಭಿಸಲಾಗಿದ್ದು ನಾಟಕಕ್ಕೆ ಅನಗತ್ಯವೆನಿಸುತ್ತದೆ. ಈ ನಾಟಕದಲ್ಲಿ ಹಾಸ್ಯ ಸನ್ನಿವೇಶ ಎನ್ನುವುದು ಕೆಲವೊಮ್ಮೆ ಅಪಹಾಸ್ಯವೆನಿಸುತ್ತದೆ. ಉದಾಹರಣೆಗೆ ಒಬ್ಬ ಎಂಎ ಓದಿ ಕಾಲೇಜಿನ ಪ್ರಿನ್ಸಿಪಾಲ್ ಆಗಿರುವ ವ್ಯಕ್ತಿ ಬಪೂನ್ ಹಾಗೆ ವರ್ತಿಸುತ್ತಾ ಶಾಂತಂ ಪಾಪಂ ಹೇಳಲು ಬರದೇ ಶಾಂತಮ್ಮ ಪಾಪಮ್ಮ ಎಂದು ಹೇಳುವುದು ಹಾಸ್ಯಕ್ಕಾಗಿ ಹಾಸ್ಯವನ್ನು ಸೇರಿಸಿದಂತಿದೆ. ಇದರಿಂದಾಗಿ ಅಂತಹ ದಡ್ಡಶಿಖಾಮನಿ
ಪ್ರಿನ್ಸಿಪಾಲರನ್ನು ಸ್ವಾಮೀಜಿ ತಮ್ಮ ಶಿಕ್ಷಣ ಸಂಸ್ಥೆಯಲ್ಲೇಕೆ ಇಟ್ಟುಕೊಂಡರು ಎನ್ನುವ ಪ್ರಶ್ನೆ ಏಳುತ್ತದೆ.
ನಾಟಕದ ತಾಲೀಮಿನಲ್ಲಾಗುವ ಅವಗಡಗಳನ್ನು ಹಾಸ್ಯಕ್ಕಾಗಿ ಅತಿರೇಕ ಎನ್ನುವಂತೆ ತೋರಿಸಲಾಗಿದೆ. ಆದರೆ... ಸ್ವಾಮೀಜಿ ಪಾತ್ರದ ಬಾಯಲ್ಲಿ ಬರುವ ಹಲವಾರು ಸಹಜವಾದ ವಿಡಂಬನಾತ್ಮಕ ಮಾತುಗಳು ಮಾತ್ರ ನಿಜಕ್ಕೂ ನೋಡುಗರಲ್ಲಿ ನಗೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ವಚನಕ್ಕೂ ಕವ್ವಾಲಿ ನೃತ್ಯ ಸಂಯೋಜಿಸಿರುವುದು ನಿರ್ದೇಶಕರ ವಿಚಿತ್ರ ಖಯಾಲಿಗೆ ಸಾಕ್ಷಿಯಾಗಿದೆ.
ನಾಟಕದ ಬೆಳಕು ನಿರ್ವಹಣೆ (ರಮೇಶ ದಡದಹಳ್ಳಿ) ತುಂಬಾ ದುರ್ಬಲವಾಗಿತ್ತು. ದೃಶ್ಯಗಳಿಗೆ ಡೆಪ್ತ್ ಒದಗಿಸಲಾಗದೆ ಪ್ಲಾಟ್ ಲೈಟಿಂಗ್ನಿಂದಾಗಿ ಹಲವಾರು ದೃಶ್ಯಗಳು ಅಗತ್ಯ ಮೂಡನ್ನು ಹುಟ್ಟಿಸಲೇ ಇಲ್ಲ. ಬೆಳಕಿನಲ್ಲಿ ವ್ಯತ್ಯಾಸವೇ ಇಲ್ಲವಾಗಿದ್ದು ಕೇವಲ ಆನ್ ಆಪ್ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು. ನಾಗರಾಜರವರ ಹಾಡು ಹಾಗೂ ಸಂಗೀತ ಸೊಗಸಾಗಿತ್ತಾದರೂ ಅದಕ್ಕೆ ಹೆಚ್ಚು ಮಹತ್ವವನ್ನು ಕೊಡಲಾಗಿಲ್ಲ. ದೃಶ್ಯವೊಂದರಲ್ಲಿ ಪಿಟೀಲು ಬಾರಿಸುತ್ತಿದ್ದರೆ ಹಿನ್ನೆಲೆಯಲ್ಲಿ ಹಾರ್ಮೋನಿಯಂ ಹಾಗೂ ತಬಲ ಸಂಗೀತ ಬರುತ್ತಿರುವುದು ಆಭಾಸಕಾರಿ ಎನಿಸಿತು. ನಾಟಕದಲ್ಲಿ ಇರುವ ಸೀಮಿತ ಸೆಟ್ ಪ್ರಾಪರ್ಟಿಗಳನ್ನೇ ಬೇರೆ ಬೇರೆ ರೀತಿಯಲ್ಲಿ ಬಳಸಿ ಹಲವು ದೃಶ್ಯಗಳನ್ನು ಸಂಯೋಜಿಸಿದ್ದು ನಿರ್ದೇಶಕರ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಅಭಿನಯ ವಿಭಾಗದಲ್ಲಿ ನಟರು ಪಾತ್ರೋಚಿತವಾಗಿ ಅಭಿನಯಿಸಿದ್ದಾರಾದರೂ ಸ್ವಾಮೀಜಿ ಪಾತ್ರವನ್ನು ಹೊರತು ಪಡಿಸಿ ಯಾವುದೇ ಪಾತ್ರ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂತಿಲ್ಲ. ಇಡೀ ನಾಟಕವೇ ಸ್ವಾಮೀಜಿಮಯವಾಗಿದೆ. ಶಿವಕುಮಾರ ಸ್ವಾಮಿಗಳ ಪಾತ್ರದಾರಿಯಾದ ಶಂಕರ ಮೆಟ್ರಿಯವರು ಸ್ವಾಮಿಗಳನ್ನು ಸೊಗಸಾಗಿ ಅನುಕರಿಸಿದ್ದು ಪಾತ್ರವನ್ನೇ ತಮ್ಮೊಳಗೆ ಆಹ್ವಾನಿಸಿಕೊಂಡಿದ್ದಾರೆ. ಅದರಲ್ಲೂ ಹಿರಿಯ ಸ್ವಾಮಿಗಳಾದಾಗಿನ ನಟನೆ ಉತ್ತಮವಾಗಿ ಮೂಡಿಬಂದಿದೆ. ಸಂಭಾಷಣಾ ಸ್ಪಷ್ಟತೆ ಹಾಗೂ ಸಹಜ ನಟನೆಯಿಂದಾಗಿ ಶಂಕರ್ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ದೃಶ್ಯ ದೀರ್ಘವಾಗಿದ್ದರಿಂದ ಸಾಬಿ ಪಾತ್ರದಾರಿ ರಮೇಶ ಬಡಿಗೇರ್ ಅಭಿನಯ ಎದ್ದು ಕಾಣುವಂತಿದೆ.
ಅನಗತ್ಯ ದೃಶ್ಯಗಳನ್ನು ಕಡಿತಗೊಳಿಸಿದ್ದರೆ, ನಿಧಾನಗತಿಯ ದೃಶ್ಯಗಳನ್ನು ಎಡಿಟ್ ಮಾಡಿ ವೇಗವನ್ನು ಹೆಚ್ಚಿಸಿದ್ದರೆ, ದೀರ್ಘವಾಗಿರುವ ದೃಶ್ಯಗಳಲ್ಲಿರುವ ಅನಗತ್ಯ ಎಳೆತವನ್ನು ನಿವಾರಿಸಿಕೊಂಡರೆ, ಸ್ವಾಮೀಜಿಗಳ ಬಾಯಿಂದ ಬರುವ ಅವಾಚ್ಯ ಶಬ್ದಗಳ ಬಳಕೆ ಹಾಗೂ ಹಿಂಸಾತ್ಮಕ ನಡವಳಿಕೆಗಳನ್ನು ಕೈಬಿಟ್ಟು, ಕುಡುಕನ ಮಹಿಳಾ ವಿರೋಧಿ ಮಾತುಗಳಿಗೆ ಕಡಿವಾಣ ಹಾಕಿದ್ದರೆ, ಸ್ವಾಮೀಜಿಗಳ ರಾಜಕೀಯ ಸಂಬಂಧಗಳನ್ನು ತೋರುವ ಹಾಗೂ ಅಪಾತ್ರನಿಗೆ ಶಿಪಾರಸ್ಸು ಮಾಡುವಂತಹ ಪುಟ್ಟ ದೃಶ್ಯಗಳನ್ನು ನಿವಾರಿಸಿಕೊಂಡಿದ್ದರೆ, ಹಾಸ್ಯ ಸನ್ನಿವೇಶಗಳಲ್ಲಿರುವ ಅಪಹಾಸ್ಯವನ್ನು ಕಡಿಮೆ ಮಾಡಿದರೆ, ನಾಟಕಕ್ಕೆ ಲಯಬದ್ದವಾದ ಚಲನಶೀಲತೆಯನ್ನು ಕೊಟ್ಟಿದ್ದರೆ, ನಾಟಕಕ್ಕೆ ಮೂಡ್ ಬರುವ ಹಾಗೆ ಬೆಳಕನ್ನು ವಿನ್ಯಾಸಗೊಳಿಸಿ ನಿರ್ವಹಿಸಿದ್ದರೆ, ರಂಗತಂತ್ರಗಳನ್ನು ಇನ್ನೂ ಸಮರ್ಥವಾಗಿ ಬಳಸಿಕೊಂಡಿದ್ದರೆ, ಸಾಧ್ಯವಿದ್ದಲ್ಲಿ ಭಾವತೀವ್ರತೆ ಇರುವಂತಹ ದೃಶ್ಯಗಳನ್ನು ಸೃಷ್ಟಿಸಿದ್ದರೆ.... ಈ ‘ಮಹಾಬೆಳಗು’ ನಾಟಕ ನಿಜಕ್ಕೂ ಅದ್ಬುತವಾಗಿ ಮೂಡಿಬರುತ್ತಿತ್ತು.
ಶಿವಕುಮಾರ ಮಹಾಸ್ವಾಮಿಗಳು ಪಟ್ಟಕ್ಕೆ ಬಂದು 150ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಾಡಿನಾದ್ಯಂತ ಸ್ಥಾಪಿಸಿ ಜಾತ್ಯಾತೀತವಾಗಿ ಸಮಾನ ಶಿಕ್ಷಣ ಅವಕಾಶ ವದಗಿಸಿರುವುದು, ಬಡ ವಿದ್ಯಾರ್ಥಿಗಳ ವಸತಿ ಹಾಗೂ ಊಟಕ್ಕಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿರುವುದು, ಶರಣರ ವಚನಗಳನ್ನು ಗ್ರಾಮೀಣ ಜನರಿಗೆ ತಲುಪಿಸಲು ‘ಅಕ್ಕನ ಬಳಗ’ ಸ್ಥಾಪಿಸಿರುವುದು, ಜನರಲ್ಲಿರುವ ಮೌಡ್ಯಗಳನ್ನು ನಿವಾರಿಸಲು ಪ್ರಯತ್ನಿಸುವುದು. ವಿಶ್ವಾದ್ಯಂತ ಶರಣರ ವಚನ ಹಾಗೂ ಬಸವ ತತ್ವ ಪ್ರಚಾರಕ್ಕಾಗಿ ‘ತರಳಬಾಳು ನಿಧಿ’ ಸ್ಥಾಪಿಸುವುದು, ದಾವಣಗೆರೆಯಲ್ಲಿ ಸುಸಜ್ಜಿತ ಅನುಭವ ಮಂಟಪ ಕಟ್ಟಿಸುವುದು, ಹಾಗೂ ಯಾರ ಒತ್ತಾಸೆ ಒತ್ತಡ ಇಲ್ಲದಿದ್ದರೂ ತಮ್ಮ ೬೦ನೇ ವರ್ಷಕ್ಕೆ ಸರಿಯಾಗಿ ಜಗದ್ಗುರು ಪಟ್ಟದಿಂದ ನಿವೃತ್ತರಾಗಿ ಉತ್ತರಾಧಿಕಾರಿಗಳಿಗೆ ಮಠದ ಅಧಿಕಾರ ಹಸ್ತಾಂತರ ಮಾಡಿದ್ದು, ತರಬಾಳು ಮಠದ ಮೂಲಪುರುಷ ಮರುಳಸಿದ್ದರ ಕುರಿತು ಭಾಮಿನಿ ಷಟ್ಪದಿಯಲ್ಲಿ ಮಹಾದೇವ ಬಣಕಾರರಿಂದ ಮಹಾಕಾವ್ಯವನ್ನು ರಚನೆ ಮಾಡಿಸಿ ತಮ್ಮ ಬದುಕಿನ ಕೊನೆಯ ಆಸೆ ಇಡೇರಿಸಿಕೊಂಡಿದ್ದು.... ಹೀಗೆ ಮುಂತಾದ ಸ್ತುತ್ಯಾರ್ಹ ಕಾರ್ಯಗಳಿಂದಾಗಿ ಶಿವಕುಮಾರ ಮಹಾಸ್ವಾಮಿಗಳು ಸ್ಮರಣೀಯರಾಗಿದ್ದಾರೆ. ಇಂತಹ ಮಹಾವ್ಯಕ್ತಿಯ ಸಾಧನೆಯನ್ನು ನಾಟಕದ ಮೂಲಕ ನಾಡಿನ ಜನತೆಗೆ ತಿಳಿಸುತ್ತಿರುವುದು ‘ಶಿವಸಂಚಾರ’ದ ಸ್ತುತ್ಯಾರ್ಹ ಕೆಲಸವಾಗಿದೆ. ಆದರೆ.. ಈ ನಾಟಕದ ಕೆಲವು ನಕಾರಾತ್ಮಕ ಅಂಶಗಳನ್ನು ಕೈಬಿಟ್ಟಿದ್ದರೆ, ನಾಟಕದಾದ್ಯಂತ ನೈತಿಕ ಪ್ರಜ್ಞೆಯನ್ನು ಅಳವಡಿಸಿಕೊಂಡಿದ್ದರೆ ನಾಟಕ ಇನ್ನೂ ಅರ್ಥಪೂರ್ಣವಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ.
ಶಿವಕುಮಾರ ಮಹಾಸ್ವಾಮಿಗಳ ಬದುಕನ್ನಾಧರಿಸಿ ಶ್ರೀ ಪಂಡಿತಾರಾದ್ಯ ಸ್ವಾಮಿಗಳು ‘ಅಂಕುಶ’ ಎನ್ನುವ ಹೆಸರಲ್ಲಿ ನಾಟಕವೊಂದನ್ನು ರಚಿಸಿದ್ದರು. ಈ ನಾಟಕವನ್ನು ಮೈಸೂರಿನ ಕೆ.ಎಸ್.ಶರತ್ ರವರು ಅರ್ಥಪೂರ್ಣವಾಗಿ ನಿರ್ದೇಶಿಸಿದ್ದರು. ಅದು 2007ರಲ್ಲಿ ಶಿವಸಂಚಾರದ ಕಲಾವಿದರಿಂದ ನಾಡಿನಾದ್ಯಂತ ಪ್ರದರ್ಶನಗೊಂಡಿತ್ತು. ಅಂಕುಶ ಹಾಗೂ ಮಹಾಬೆಳಗು ಎರಡೂ ನಾಟಕಗಳು ಒಬ್ಬ ಜಗದ್ಗುರುಗಳನ್ನೇ ಆಧರಿಸಿ ರಚಿಸಲ್ಪಟ್ಟಿದ್ದರೂ ‘ಅಂಕುಶ’ ನಾಟಕ ತಾತ್ವಿಕವಾಗಿ ಶ್ರೀಮಂತವಾಗಿತ್ತು. ಮಠಾಧೀಶರುಗಳ ಡೋಂಗಿತನವನ್ನು ಬೆತ್ತಲೆಗೊಳಿಸಿತ್ತು. ಅನಗತ್ಯ ದೃಶ್ಯ ಅನಾವಶ್ಯಕ ಹಾಸ್ಯ ಸನ್ನಿವೇಶಗಳಿಂದ ಮುಕ್ತವಾಗಿತ್ತು. ಮಹಾಬೆಳಗು ಸಾಕ್ಷಚಿತ್ರದ ಮಾದರಿಯಲ್ಲಿ ಆವರಣಗೊಂಡರೆ ಅಂಕುಶ ನಾಟಕ ತನ್ನ ನಾಟಕೀಯತೆಯಿಂದಾಗಿ ರಂಗಪ್ರಯೋಗವಾಗಿ ಅನಾವರಣಗೊಂಡಿತ್ತು. ಈಗ ‘ಮಹಾಬೆಳಗು’ ನಾಟಕ ನೋಡಿದವರಿಗೆ ‘ಅಂಕುಶ’ ನಾಟಕ ಕಾಡದೇ ಇರದು. ಹನುಮಲಿಯವರ ನಾಟಕಕ್ಕಿಂತ ‘ಅಂಕುಶ’ ನಾಟಕವನ್ನೇ ಮರು ನಿರ್ಮಿಸಿದ್ದರೆ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮಶತಮಾನೋತ್ಸವಕ್ಕೆ ಕಳೆ ಬರುತ್ತಿತ್ತು. ಆದರೆ ಅದ್ಯಾಕೆ ಉತ್ತಮ ನಾಟಕವನ್ನು ಬಿಟ್ಟು ಜಾಳುಜಾಳಾದ ‘ಮಹಾಬೆಳಗು’ ನಾಟಕವನ್ನು ಈ ಸಲ ಶಿವಸಂಚಾರಕ್ಕೆ ಆಯ್ಕೆ ಮಾಡಿದರೋ ಆ ಮರುಳಸಿದ್ದನೇ ಬಲ್ಲ.
2005
ರವರೆಗೆ ಅಂದರೆ
ಸಿಜಿಕೆ ಇರುವವರೆಗೂ ಸಾಣೇಹಳ್ಳಿ ಶಿವಸಂಚಾರದ ಪ್ರದರ್ಶನಗಳನ್ನು ‘ರಂಗನಿರಂತರ’ ಆಯೋಜಿಸುತ್ತಿತ್ತು. ಹಾಗು ಆಗ ಪ್ರೇಕ್ಷಕರ ಸಂಖ್ಯೆಯೂ ಬೇಕಾದಷ್ಟಿತ್ತು. ನಂತರ ‘ರಂಗಚೇತನ’ ರಂಗತಂಡ ಶಿವಸಂಚಾರದ ನಾಟಕಗಳನ್ನು ಆಯೋಜಿಸುತ್ತಿದ್ದುದರಿಂದ ಪ್ರಚಾರದ ಕೊರತೆ ಹೆಚ್ಚಾಗಿ ನಾಟಕಗಳಿಗೆ ಜನ ಬರುತ್ತಿರಲಿಲ್ಲ. ಪ್ರಯೋಗರಂಗ ಕೂಡಾ ನಾಟಕೋತ್ಸವ ಆಯೋಜಿಸಿದರೂ ಪ್ರೇಕ್ಷಕರ ಕೊರತೆ ಕಾಡುತ್ತಿತ್ತು. ಇದರಿಂದ ಬೇಸರಗೊಂಡ ಪಂಡಿತಾರಾದ್ಯ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಶಿವಸಂಚಾರದ ನಾಟಕಗಳ ಪ್ರದರ್ಶನಗಳನ್ನು ಮೂರುನಾಲ್ಕು ವರ್ಷಗಳಿಂದ ನಿಲ್ಲಿಸಿಬಿಟ್ಟಿದ್ದರು. ಆದರೆ ಈ ಸಲ ಸಿಜಿಕೆಯವರ ‘ರಂಗನಿರಂತರ’ ರಂಗತಂಡವು ಶಿವಸಂಚಾರ ನಾಟಕೋತ್ಸವದ ಆಯೋಜನೆಯ ಜವಾಬ್ದಾರಿಯನ್ನು ಮತ್ತೆ ವಹಿಸಿಕೊಂಡಿದ್ದರಿಂದ ಹಾಗೂ ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದರಿಂದ ‘ಮಹಾಬೆಳಗು’ ನಾಟಕಕ್ಕೆ ಸಂಸ ಬಯಲುರಂಗ ಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಮತ್ತೆ ಸಿಜಿಕೆ ಇದ್ದ ಆ ದಿನಗಳ ಸಂಭ್ರಮ ಮರುಕಳಿಸಿದಂತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದ್ದರಿಂದಾಗಿ ಶಿವಸಂಚಾರದ ನಾಟಕೋತ್ಸವ ಯಶಸ್ವಿಯಾಯಿತು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ