(ರಾಜಕೀಯಕ್ಕೆ ಪ್ರಚಾರ ಪರಿಕರವಾದ ಬೀದಿ ನಾಟಕ' ಎನ್ನುವ ಲೇಖನವನ್ನು ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕಟಿಸಲಾಗಿತ್ತು.
ಆ ಲೇಖನದಲ್ಲಿರುವ ಕೆಲವು ಮಿಸ್ಟೆಕ್ಸಗಳನ್ನು ಗುರುತಿಸಿ
ನಮ್ಮ ಹಿರಿಯ ರಂಗಕರ್ಮಿಗಳಾದ ಗುಂಡಣ್ಣನವರು ಪ್ರತಿಕ್ರಿಯಿಸಿದ್ದಾರೆ. ಅವರ ಅನುಭವ ಅಪಾರ. ಅದರಲ್ಲೂ
ಸಮುದಾಯ ಸಂಘಟನೆಯನ್ನು ಮೊದಲಿನಿಂದ ಬೆಳೆಸಿದವರು. ಸಮುದಾಯದ ಜೊತೆಜೊತೆಗೆ ಬೆಳೆದವರು. ಈ ಪತ್ರದ ಮುಖೇನ
ಕೆಲವು ಪೂರಕ ಮಾಹಿತಿಗಳನ್ನು ಸಹ ಕೊಟ್ಟಿದ್ದಾರೆ. ಗುಂಡಣ್ಣನವರ ಪ್ರತಿಕ್ರಿಯೆಯ ಪತ್ರವನ್ನು ಯಾವುದೇ
ಬದಲಾವಣೆ ಇಲ್ಲದೆ ಇಲ್ಲಿ ಪ್ರಕಟಿಸಲಾಗಿದೆ. ಗುಂಡಣ್ಣನವರಿಗೆ ಧನ್ಯವಾದಗಳು)
ಆತ್ಮೀಯ ಶಶಿಕಾಂತ್ ಯಡಹಳ್ಳಿ ಅವರೇ,
ದಿನಾಂಕ 12 ಏಪ್ರಿಲ್ 2014 ರಂದು ತಮ್ಮ ಪ್ರಸಿದ್ದ ರಂಗಭೂಮಿ ವಿಶ್ಲೇಷಣೆ ಪತ್ರಿಕೆಯಲ್ಲಿ, ರಾಜಕೀಯಕ್ಕೆ ಪ್ರಚಾರ ಪರಿಕರವಾದ ಬೀದಿ ನಾಟಕ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಸಮುದಾಯ ಬೀದಿ ನಾಟಕಗಳ ಬಗ್ಗೆ ಕೆಲವು ಮಾತುಗಳನ್ನು ಬರೆದಿರುತ್ತೀರಿ. ಹಾಗೆಯೆ ಮುಂದುವರೆದು, ಪ್ರಸನ್ನ ಅವರು ಬೀದಿ ನಾಟಕಗಳ ಅಗತ್ಯವಿಲ್ಲ, ರಂಗನಾಟಕಗಳೇ ರಂಗಭೂಮಿಗೆ ಬೇಕು ಎಂದಿದ್ದರು ಎಂದು ಬರೆದಿರುತ್ತೀರಿ.
ನಾನು 1975 ರಿಂದ ಸಮುದಾಯದೊಟ್ಟಿಗೆ ಗುರುತಿಸಿಕೊಂಡಿರುತ್ತೇನೆ. ಅದಕ್ಕೂ ಮುಂಚಿತವಾಗಿ ಬಿ.ವಿ.ಕಾರಂತರ ಒಟ್ಟಿಗೆ ಹಾಗೂ ನಂತರದಲ್ಲಿ ರಂಗ ಸಂಪದ ತಂಡದೊಟ್ಟಿಗೆ ಗುರುತಿಸಿಕೊಂಡಿದ್ದೆ. ಬೆಂಗಳೂರಿನಲ್ಲಿ ಆಗಿರುವ ಆಗಿನ ಕಾಲದ ಹಲವಾರು - (ಸಂಪೂರ್ಣ ಎನ್ನುವುದು ಗರ್ವದ ಮಾತಾಗುತ್ತದೆ) ರಂಗಭೂಮಿ ಹಾಗೂ ಬೀದಿ ನಾಟಕ ಪ್ರಾಕಾರಗಳ ಚಟುವಟಿಕೆಗಳನ್ನು ಖುದ್ದಾಗಿ ನೋಡಿರುತ್ತೇನೆ ಮತ್ತು ಹೆಚ್ಚಿನ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತೇನೆ.
ಸಮುದಾಯದ ಮೊದಲನೇ ರಂಗ ನಾಟಕ ಹುತ್ತವ ಬಡಿದರೆ. ನಂತರದಲ್ಲಿ ಪಾಠ - 1 ಮತ್ತು ಪಾಠ 2 ನಾಟಕ. ಅದರ ನಂತರದಲ್ಲಿ ತಾಯಿ ನಾಟಕ. ಈ ತಾಯಿ ನಾಟಕಕ್ಕೆ ಮೊದಲು ಸಿಜಿಕೆ ಮತ್ತು ನಂತರದಲ್ಲಿ ನಾನು ಒಂದು ತಿಂಗಳ ಅಂತರದಲ್ಲಿ ಸಮುದಾಯ ತಂಡವನ್ನು ಸೇರಿದೆವು. ನಂತರದ ನಡೆದ ಎಲ್ಲವೂ ನನ್ನ ವಯಕ್ತಿಕ ಜೀವನದಲ್ಲಿನ ಇತಿಹಾಸ.
ನಾನು ಸಮುದಾಯವನ್ನೇ ಆಗಲಿ, ಅಥವಾ ಅಂದಿನ ರಂಗ ತಂಡಗಳಾದ, ಶಕ-ಶೈಲೂಶರು,(ನಂತರದಲ್ಲಿ ಬೆನಕ),ರಂಗಸಂಪದ,ನಟರಂಗ, ದಿವಂಗತ ಬೆಮೆಲ್ ಬಸವರಾಜು ಮತ್ತು ಮಾನು ಅವರುಗಳ ತಂಡ (ಹೆಸರು ಕೂಡಲೇ ತಕ್ಷಣಕ್ಕ್ಕೆ ಜ್ನಾಪಕಕ್ಕೆ ಬರುತ್ತಿಲ್ಲ) ನಂತರದಲ್ಲಿ, ರಾಜಾರಾಂ ಅವರ ಕಲಾಗಂಗೋತ್ರಿ, ಅಬ್ಬೂರರ ಕನ್ನಡ ಸಾಹಿತ್ಯ ಕಲಾಸಂಘ, ಎ.ಎಸ್.ಮೂರ್ತಿಯವರ ಬಿಂಬ, ಚಿತ್ರ, ನಾಗೇಶ್‌ರ ಸೂತ್ರಧಾರ. ಮುಂತಾದ ತಂಡಗಳನ್ನು ಮತ್ತು ಇವುಗಳ ಚಟುವಟಿಕೆಗಳನ್ನು ಎμ ಬಲ್ಲೆನೋ, ಅμ ಪ್ರಸನ್ನ ಅವರನ್ನೂ ಸಹ ಬಲ್ಲೆ. ನನಗೇ ಆಗಲಿ, ಅಥವಾ ಅಂದು ಪ್ರಸನ್ನರೊಟ್ಟಿಗೆ ರಂಗ ಚಟುವಟಿಕೆಗಳನ್ನು ಮಾಡಿದ ಆರ್. ನಾಗೇಶ್, ಗಂಗಾಧರ ಸ್ವಾಮಿ, ಎಂಸಿ ಆನಂದ್, ಸಿಜಿಕೆ, ನಾನು, ಶಶಿ ಅಡಪ, ಎಂಜಿವೆಂಕಟೇಶ್, ಸನತ್ ಕುಮಾರ್. ಟಿವಿಎಂ, ಮಾಲತಿ, ಲಲಿತಾ, ಜನ್ನಿ, ಬಸು, ಸೂರಿ, ವಿಮಲಾ ಮುಂತಾದವರುಗಳಿಗೂ ಪ್ರಸನ್ನ ಅವರು ತಾವು ದಾಖಲಿಸಿರುವಂತೆ ಹೇಳಿರುವುದಿಲ್ಲ ಎಂದು ಅನ್ನಿಸುವುದಿಲ್ಲ ಎಂದು ಸ್ಪμ ಪಡಿಸಲಿಚ್ಚಿಸುತ್ತೇನೆ.
ಮುಂದುವರೆದು, ತಮಗೆ ಗೊತ್ತಿದ್ದರೆ ಕ್ಷಮಿಸಿ. ಗೊತ್ತಿಲ್ಲದಿದ್ದರೆ ದಾಖಲಿಸಿಕೊಳ್ಳಿ - ಬೆಲ್ಚಿ ಸಮುದಾಯದ ಮೊದಲ ಬೀದಿ ನಾಟಕ ಅಲ್ಲ. ಪ್ರಸನ್ನ ಅವರು ಸಮುದಾಯಕ್ಕೆ ಮೊದಲು, “ಮೂರು ರಾಜಕೀಯ ನಾಟಕಗಳು” (ಕುರ್ಚಿಗಳು; ಬೆಕ್ಕುಗಳು; ಮತ್ತು ಮತ್ತೊಂದು ನಾಟಕ ಮೂರು ಸೇರಿ ಮೂರು ರಾಜಕೀಯ ನಾಟಕಗಳು) ಅನ್ನುವ ಬೀದಿ ನಾಟಕವನ್ನು 75 ರ ಸಂದರ್ಭದಲ್ಲಿ ಮಾಡಿಸಿದ್ದರು. (ತುರ್ತು ಪರಿಸ್ಥಿತಿಗೂ ಮುನ್ನ) ಅದರ ಕೆಲವೇ ಪ್ರದರ್ಶನಗಳು ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಪ್ರದರ್ಶನ ಗೊಂಡಿತು. ನಂತರ ಇದು ದೆಹಲಿಯಲ್ಲಿ ಪ್ರಸನ್ನ ಅವರ ನಿರ್ದೇಶನದಲ್ಲೇ ಮರು ಪ್ರದರ್ಶನಗೊಂಡಿತು. ವಾಲ್ಟ್ರ್ ಡಿಸೌಜ಼ಾ ಮತ್ತು ಸುರೇಶ್ ಶೆಟ್ಟಿ ಅವರುಗಳು ಮರು ಪ್ರದರ್ಶನದಲ್ಲಿ ನಟಿಸಿದರು. ಈ ಅಣುಕು ಬೀದಿ ನಾಟಕದಲ್ಲಿ ಮಾತುಗಳು ಇರಲಿಲ್ಲ; ಖೌಲ ಕೇವಲ ಶಬ್ದಗಳು ಮತ್ತು ಸಂಜ್ನೆಗಳು ಮಾತ್ರ ಇದ್ದವು.
ನಂತರದಲ್ಲಿ, ಬಾದಲ್ ಸರ್ಕಾರ್ ಅವರ ಮೂರನೇ ರಂಗಭೂಮಿಯ ಮೂರು ನಾಟಕಗಳು ಬಸವನಗುಡಿ ನ್ಯಾμನಲ್ ಕಾಲೇಜಿನ ಆವರಣದಲ್ಲೂ ಮತ್ತು ಅವರದೇ ಒಂದು ರಂಗ ನಾಟಕ ಬಾಲ ಭವನದಲ್ಲೂ (ಬೆಂಗಳೂರಿನ ಬಂಗಾಲಿ ಅಸ್ಸೋಸಿಯೇಶನ್ ನವರ ಸಹಾಯ-ಸಹಕಾರದೊಟ್ಟಿಗೆ) ನಡೆಯಿತು. ಇದರ ನಂತರ ಬಾದಲ್ ಸರ್ಕಾರ್ ಅವರು ಸಮುದಾಯ ರಾಜ್ಯ ಸಮಿತಿಗೆ ಎರಡು ಬಾರಿ ರಂಗ ವನ್ನು ಕುಂಬಳಗೂಡಿನಲ್ಲಿ ನಡೆಸಿಕೊಟ್ಟರು. ಈ ತರಬೇತಿ ಶಿಬಿರದ ನಂತರದ ಫಲಶ್ರುತಿಯೇ ಸಿಜಿಕೆ ಯ “ಬೆಲ್ಚಿ”, ಸಿಜಿಕೆ,ಪ್ರಸನ್ನ,ಲಕ್ಷಿ ಚಂದ್ರಶೇಕರ್ ಮತ್ತು ಎಂಸಿ ಆನಂದ್ ರವರುಗಳ ಸಾಮೂಹಿಕ ನಿರ್ದೆಶನದ “ಹೋರಾಟ”, ರಘುನಂದನ ಅವರ “ಪಂಚತಾರ”ಮುಂತಾದವುಗಳು.
ಇದರ ನಂತರದಲ್ಲಿ, ಸಮುದಾಯ ಬೆಂಗಳೂರಿನ ಭಾರತೀಯ ರಿರ್ಜ಼ವ್ ಬ್ಯಾಂಕ್ ಪಕ್ಕದಲ್ಲಿನ ವೈ.ಯಂ.ಸಿ..ಎ. ಸಭಾಂಗಣದಲ್ಲಿ “ವಾರಾಂತ್ಯದ ರಂಗಭೂಮಿ” ಎಂದು ಪ್ರತಿ ಭಾನುವಾರ ಮೂರನೇ ರಂಗಭೂಮಿಯ ಆಯಾಮದ ನಾಟಕಗಳನ್ನು ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸಿತು. ನಂತರದಲ್ಲಿ ನಾವು 15 ಅಕ್ಟೋಬರ್ 1979ರಿಂದ ಮೊದಲನೇ ಜಾತಾ ಗೆ ಹೊರಟಿದ್ದರಿಂದ ಈ ಮೇಲಿನ ಕಾರ್ಯಕ್ರಮವನ್ನು ನಿಲ್ಲಿಸಬಾರದು ಎಂದು ಕಲಾಗಂಗೋತ್ರಿ ತಂಡದವರಿಗೆ ಮನವಿ ಮಾಡಿಕೊಂಡು, ಅವರು ತಮ್ಮ ತಂಡದ ನಾಟಕಗಳಿಂದ ಈ ಕಾರ‍್ಯಕ್ರಮವನ್ನು ಮುಂದುವರೆಸಿಕೊಂಡು ಹೋದರು. ಹಾಗೆಯೇ, ಸಮುದಾಯ, ಚಿತ್ರಾ ಬೀದಿ ತಂಡ, ಮತ್ತು ಇನ್ನು ಹಲವು ತಂಡಗಳು ಭಾರತೀಯ ರಿರ್ಜ಼ವ್ ಬ್ಯಾಂಕ್ ಪಕ್ಕದಲ್ಲಿನ ನ್ಯೂ ಪಬ್ಲಿಕ್ ಕಛೇರಿಯ ಮುಂದಣ ಆವರಣದಲ್ಲಿ, ಎಲ್ಲ ತಂಡಗಳ ಬೀದಿ ನಾಟಕಗಳ ಪ್ರದರ್ಶನವನ್ನು ಮಾಡಿರುತ್ತೇವೆ. ಸಮುದಾಯದ ನಾವೆಲ್ಲರೂ ಹಾಗೂ ಚಿತ್ರಾ ತಂಡದಿಂದ ಮೂರ್ತಿ ಅವರು, ಬಿ.ಸುರೇಶ, ಗುರು, ಚಿಕ್ಕ ಇವರುಗಳು ಪ್ರದರ್ಶನ ನೀಡಿರುವುದು ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿದೆ.
1979 ರ ಮೊದಲ ಜಾತಾದಲ್ಲಿ ಕೋಲಾರ ಕಡೆಯ ತಂಡಕ್ಕೆ ಪ್ರಸನ್ನ ಅವರು, ಬೆಲ್ಚಿ ಮತ್ತು ಪತ್ರೆ ಸಂಗಪ್ಪನ ಕೊಲೆ ಪ್ರಕರಣ,ಛಾಸನಾಲ ಬೀದಿ ನಾಟಕಗಳನ್ನು ನಿರ್ದೇಶಿಸಿದರು. ಅದೇ ರೀತಿ, ಸಿಜಿಕೆ ಬೀದರ್ ಕಡೆಯ ತಂಡಕ್ಕೆ ಬೆಲ್ಚಿ, ಸಾಯಿಬಾಬ ಮಹಾತ್ಮೆ, ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ಕೋಲಾರ ತಂಡಕ್ಕೆ ಮಾಲತಿ ಅವರು “ಹೆಣ್ಣು” ಮತ್ತು “ಯಂತ್ರಗಳು” (ದೆಹಲಿಯ ಜನ ನಾಟ್ಯ ಮಂಚ್ ನ ಔರತ್ ಮತ್ತು ಮೆಶೀನ್ ನಾಟಕಗಳು) ನಾಟಕಗಳನ್ನು ನಿರ್ದೇಶಿಸಿದರು.
ನಿಮ್ಮ ಲೇಖನದಲ್ಲಿ ಸೂಚಿಸಲಾಗಿರುವ “ಎಲ್ಲಿಂದ ಬಂದಿರೆಂದು” ಹಾಡನ್ನು ಹರಪನಹಳ್ಳಿ ಸಮುದಾಯದ ಬಡಿಗೇರ್ ಮಾಸ್ತರರು ಬರೆದ್ದದ್ದು. ಬಣ್ಣದ ನಡೆ ಜಾತಾ ಸಂದರ್ಭದಲ್ಲಿ. ಈಗ ಈ ಹಾಡು ಸಮುದಾಯದ ಧ್ಯೇಯ ಸಂಗೀತವಾಗಿದೆ.
ಸಮುದಾಯ ತಂಡವು ಬೆಂಗಳೂರಿನಲ್ಲಿ ಬೀದಿ ನಾಟಕಗಳ ಚಟುವಟಿಕೆಗಳನ್ನು ಮೊದಲಿಗೆ ಆರಂಭಿಸಿದ್ದು ಎ.ಎಸ್.ಮೂರ್ತಿಗಳು ಎನ್ನುವ ಇತಿಹಾಸವನ್ನು ಇಂದಿಗೂ ನಾವು ನಮ್ಮ ತಂಡದ ಇವತ್ತಿನ ಬೀದಿ ನಾಟಕದ ಕಲಾವಿದರೆಲ್ಲರಿಗೂ ಅತ್ಯಂತ ಗೌರವದಿಂದ ದಾಖಲು ಮಾಡುತ್ತಾ ಇದ್ದೇವೆ. 70 ರ ದಶಕದ ಮುಂಚೆಗೂ ಮೂರ್ತಿ ಅವರ ಬೀದಿ, ಚಿತ್ರಾ ತಂಡಗಳ ಪ್ರದರ್ಶಿತ ಬೀದಿ ನಾಟಕಗಳ ಕಂಟೆಂಟ್ ಬಗ್ಗೆ ನಾವು ವಿμಶಣೆ ಮಾಡಿರಬಹುದು, ಆದರೆ, ಫಾರಂ ಬಗ್ಗೆ ಅವರೇ ಪ್ರಥಮರು ಎನ್ನುವ ಅಂಶವನ್ನು ಪ್ರಸನ್ನ ಮತ್ತು ಸಮುದಾಯದ ನಂತರದ ತಲೆಮಾರಿನ ನಾವೆಲ್ಲರೂ ಅತ್ಯಂತ ಗೌರವದಿಂದ ಗುರುತಿಸುತ್ತೇವೆ.
ಸಮುದಾಯದ ಎಲ್ಲ ಬೀದಿ ನಾಟಕಗಳ ಚಟುವಟಿಕೆಗಳಿಗೂ ಮೂಲ ಪ್ರೇರಣೆ ಕೇವಲ ಪ್ರಸನ್ನ ಅವರು ಎಂದು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಬೀದಿ ನಾಟಕಗಳ ನಿರ್ದೇಶನವನ್ನು ಪ್ರಸನ್ನ ಅವರು ಬೆರಳೆಕಿಯμ ಮಾಡಿರಬಹುದು, ಅಂದ ಮಾತ್ರಕ್ಕೆ ಅವರು ಬೀದಿ ನಾಟಕದ ಅಗತ್ಯವಿಲ್ಲ ಎಂದು ಖಂಡಿತಾ ಹೇಳಿಲ್ಲ ಮತ್ತು ಹಾಗೆ ಹೇಳಿರುವ ಸಾಧ್ಯತೆಗಳೂ ಇಲ್ಲ ಎಂದು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ.
ಅದೇ ರೀತಿ, ಕರ್ನಾಟಕದಲ್ಲಿ, ಇಪ್ಟಾ ತಂಡದ ಚಟುವಟಿಕೆಗಳು ಸಮುದಾಯ ಜಾತಾ ನಂತರದಲ್ಲಿ (1979 ರ ನಂತರದಲ್ಲಿ) ಪ್ರಾರಂಭವಾಯಿತು ಎಂದು ವಿನಮ್ರವಾಗಿ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ. ಇದರ ಬಗ್ಗೆಯೂ ಸಹ ನನ್ನ ಬಳಿ ಮಾಹಿತಿ ಇರುತ್ತದೆ. ಆದರೆ, ಅವುಗಳನ್ನು ಹೇಳಲು ಪ್ರಸ್ತುತತೆ ಈ ಪತ್ರದಲ್ಲಿ ಇರುವುದಿಲ್ಲವಾದ್ದರಿಂದ ಆ ವಿವರಣೆಗಳು ಈಗ ಬೇಡ.
ಕೊನೆಯಲ್ಲಿ, ತಮಗೆ ಯಾರಾದರೂ ಪ್ರಸನ್ನ ಮತ್ತು ಬೀದಿ ನಾಟಕಗಳ ಸಂಬಂಧದಲ್ಲಿ ತಪ್ಪು ಮಾಹಿತಿ ಕೊಟ್ಟಿರಬಹುದು. ಅಥವಾ ಪ್ರಸನ್ನರ ನಿರ್ದೇಶಿತ ರಂಗ ನಾಟಕಗಳ ಪಟ್ಟಿಯಲ್ಲಿ ಬೀದಿ ನಾಟಕಗಳ ಹೆಸರು ಇಲ್ಲದಿರುವುದರಿಂದ ನೀವೇ ಹೀಗೆ ಭಾವಿಸಿರಬಹುದು. ಇವೆರಡೂ ಸತ್ಯಕ್ಕೆ ದೂರವಾದ ಸಂಗತಿಗಳು ಎಂದು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ. ತಮ್ಮ ಲೇಖನದ ಪ್ರಾರಂಭಕ್ಕೆ ಸಂಗಾತಿ ಹಶ್ಮಿ ಯವರ ಬಹಳ ಒಳ್ಳೆಯ ಮಾತುಗ:ಳನ್ನು ಹೇಳಿದ್ದೀರ - ಅದಕ್ಕೆ ಅಭಿನಂದನೆಗಳು. ನಂತರ ಪ್ರಸನ್ನರ ಬಗ್ಗೆ ಬರೆದಿರುವ ತಪ್ಪು ಮಾಹಿತಿಗಾಗಿ ಈ ದೀರ್ಫವಾದ ಪತ್ರ. ದಯಮಾಡಿ, ಇದನ್ನು ನನ್ನ ಕಾಮೆಂಟ್ ಎಂದು ಭಾವಿಸಿ, ನಿಮ್ಮ ರಂಗಭೂಮಿ ವಿಶ್ಲೇಷಣೆ ಪತ್ರಿಕೆಯಲ್ಲಿ ಪ್ರಕಟಿಸಿ, ಇತಿಹಾಸವನ್ನು ಸರಿದಾರಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತೀರ ಎಂದು ಆಶಿಸುತ್ತೇನೆ.
ತಮ್ಮವ
ಗುಂಡಣ್ಣ ಸಿ.ಕೆ.
ಗುಂಡಣ್ಣನವರ
ಪ್ರತಿಕ್ರಿಯೆಗೊಂದು ಪತ್ರ.
ಆತ್ಮೀಯ
ರಂಗಕರ್ಮಿ ಗುಂಡಣ್ಣನವರಿಗೆ ನಮಸ್ಕಾರಗಳು.
ತಮ್ಮ ಮಾಹಿತಿಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು. 'ಪ್ರಸನ್ನ ಅವರು ಬೀದಿ ನಾಟಕಗಳ ಅಗತ್ಯವಿಲ್ಲ, ರಂಗನಾಟಕಗಳೇ ರಂಗಭೂಮಿಗೆ ಬೇಕು' ಎಂದಿದ್ದರು ಎಂದು ನಾನು ಬರೆದಿದ್ದು ಸರಿಯಲ್ಲ ಎಂದು ನೀವು ಹೇಳಿದ್ದೀರಿ. ನಾನು ಊಹಾಪೋಹಗಳನ್ನಿಟ್ಟುಕೊಂಡು
ಲೇಖನಗಳನ್ನು ಬರೆಯುವುದಿಲ್ಲ. ಬಹುಷಃ 1975ರಲ್ಲಿ
ನಾನಿನ್ನೂ ಆರು ವರ್ಷದ ಬಾಲಕ. ಬಹುತೇಕ ಆಗಿನ ರಂಗಸಂಬಂಧಿತ ಘಟನೆಗಳು ನನ್ನ
ಅನುಭವಕ್ಕೆ ದಕ್ಕದ ವಿಚಾರ. ಆದರೆ.. ಆಗ ನಡೆದ
ಈ ಎಲ್ಲಾ ಮಾಹಿತಿಗಳನ್ನು ನನ್ನೊಂದಿಗೆ ಚರ್ಚಿಸಿದ್ದು ನನ್ನ ಗುರುಗಳಾದ ಎ.ಎಸ್.ಮೂರ್ತಿಗಳು. ಅವರೇ ಪ್ರಸನ್ನನವರು
ಆರಂಭದಲ್ಲಿ ಬೀದಿನಾಟಕಗಳ ಬಗ್ಗೆ ಒಲವು ತೋರದಿರುವುದನ್ನು ಹೇಳಿದ್ದರು. ಈಗ ಅವರಿಲ್ಲ. ಈ
ಘಟನೆಗೆ ಸಾಕ್ಷಿಯಾಗಿದ್ದ ಇನ್ನೊಬ್ಬ ರಂಗಕರ್ಮಿ ಪರೇಶಕುಮಾರ ಸಹಿತ ಬದುಕಿಲ್ಲ. ಅದೇ ತಾನೆ ಎನ್ ಎಸ್ ಡಿ ಮುಗಿಸಿಕೊಂಡು ಬಂದಿದ್ದ
ಪ್ರಸನ್ನನವರಲ್ಲಿ ಎ.ಎಸ್.ಮೂರ್ತಿಗಳು ಬೀದಿನಾಟಕ
ಮಾಡೋಣ ಕಡಿಮೆ ಖರ್ಚು ಹಾಗೂ ಹೆಚ್ಚು ಪರಿಣಾಮಕಾರಿ ಎಂದು ಕೇಳಿದ್ದರಂತೆ. 'ಈಗ ಬೀದಿನಾಟಕ ಮಾಡುವುದ ಅಗತ್ಯವಿಲ್ಲ ನಾನು 'ಹುತ್ತವ ಬಡಿದರೆ'
ನಾಟಕ ಮಾಡುತ್ತೇನೆ ಎಂದು ಪ್ರಸನ್ನ ಘೋಷಿಸಿದರಂತೆ. ನಂತರ
ಆಗಿನ ಕಾಲಕ್ಕೆ ಹನ್ನೆರಡು ಸಾವಿರ ಹಣ ಖರ್ಚು ಮಾಡಿ ಆ ನಾಟಕವನ್ನು ಪ್ರಸನ್ನನವರು ನಿರ್ದೇಶಿಸಿದರಂತೆ.
ತದನಂತರ ಕಲಾಕ್ಷೇತ್ರದಲ್ಲಿ ಹಲವಾರು ರಂಗಕರ್ಮಿಗಳ ಸಭೆಯೊಂದು ನಡೆದಿತ್ತು. ಹೋರಾಟಪರ ರಂಗಸಂಘಟನೆಯ ಅಸ್ತಿತ್ವದ ಕುರಿತು ಚರ್ಚೆ ನಡೆದಿತ್ತು. ಅಲ್ಲಿ ಕಿರಂ ರವರು 'ಸಮುದಾಯ' ಎಂದು
ಹೊಸ ಸಂಘಟನೆಗೆ ಹೆಸರನ್ನು ಸೂಚಿಸಿದರು. ಸಮುದಾಯದಿಂದ ಬೀದಿ ನಾಟಕಗಳನ್ನು
ಮಾಡುವುದುತ್ತಮ ತುಂಬಾ ಖರ್ಚು ಮಾಡಿ ರಂಗನಾಟಕಗಳನ್ನು ಮಾಡುವುದು ಸರಿಯಲ್ಲ ಎಂದು ಎ.ಎಸ್.ಮೂರ್ತಿಗಳು ಹಾಗೂ ಡಾ.ವಿಜಯಮ್ಮನವರು
ತಮ್ಮ ಅನಿಸಿಕೆ ಸಭೆಯ ಮುಂದಿಟ್ಟರು. ಆಗ ಸಿಟ್ಟಿಗೆದ್ದ ಡಿ.ಆರ್.ನಾಗರಾಜರವರು ''ಬೇಕಾದರೆ ಮೂರ್ತಿಗಳು
ಹಾಗೂ ವಿಜಯಮ್ಮ ಬೀದಿನಾಟಕ ಮಾಡಿಕೊಂಡು ಬೀದಿಯಲ್ಲಿ ಕುಣಿಯಲಿ' ಎಂದು ಅವಮಾನಕಾರಿಯಾಗಿ
ಮಾತಾಡಿದರು. ಆಗ ಆಕ್ರೋಶಗೊಂಡ ಮೂರ್ತಿಗಳು 'ಡಿಆರ್
ನೀನು ಈ ರೀತಿ ಅವಮಾನಕಾರಿಯಾಗಿ ಮಾತಾಡಿದರೆ ನಿನ್ನ ವಯಕ್ತಿಕ ಬೇನಾಮಿ ಸಂಬಂಧಗಳನ್ನು ಬೀದಿನಾಟಕದ ಮೂಲಕ
ಬಯಲಿಗೆಳೆಯುತ್ತೇನೆ...' ಎಂದು ಗುಡುಗಿದರು. ಆಗ
ಡಿಆರ್ ತಣ್ಣಗಾದರಂತೆ. ಇದೆಲ್ಲಾ ಆದರೂ ಪ್ರಸನ್ನ ಸುಮ್ಮನಿದ್ದರು.
ಆ ನಂತರ 'ಆಯಿತು ಈಗ ನಾನು ಮಾಡುವ ರಂಗನಾಟಕದಿಂದ ಆದಾಯ
ಬಂದರೆ ಅದರಲ್ಲಿ ಬೀದಿ ನಾಟಕವನ್ನು ಮಾಡೋಣವಂತೆ' ಎಂದು ಮೂರ್ತಿಯವರ ಕೋಪವನ್ನು
ಪ್ರಸನ್ನ ಕಡಿಮೆಗೊಳಿಸಿದರಂತೆ. ಇದರಿಂದಾಗಿ ಪ್ರಸನ್ನನವರಿಗೆ ಬೀದಿನಾಟಕಗಳಿಗಿಂತ
ರಂಗನಾಟಕಗಳತ್ತ ಹೆಚ್ಚು ಒಲವಿತ್ತು ಎನ್ನುವುದು ತಿಳಿಯುತ್ತದೆ. ಅದರಲ್ಲಿ
ತಪ್ಪೇನು ಇಲ್ಲ. ಅದು ಪ್ರಸನ್ನರವರ ನಿರ್ಧಾರವಾಗಿದೆ. ಇದರಲ್ಲಿ ಬೀದಿನಾಟಕ ಅಥವಾ ರಂಗನಾಟಕದಲ್ಲಿ ಯಾವುದು ಶ್ರೇಷ್ಠ ಅಥವಾ ಕನಿಷ್ಟ ಎನ್ನುವ ಪ್ರಶ್ನೆಗಳೇ
ಅಪ್ರಸ್ತುತ. ಈ ಮೇಲಿನ ಘಟನೆಗೆ ಡಾ.ವಿಜಯಮ್ಮನವರೇ
ಸಾಕ್ಷಿಯಾಗಿದ್ದಾರೆ. ಕೀರಂ, ಡಿಆರ್ ಈಗ ಬದುಕಿಲ್ಲದಿದ್ದರೂ
ಇನ್ನೂ ಕೆಲವರು ಅವತ್ತಿನ ಸಭೆಯಲ್ಲಿ ಭಾಗವಹಿಸಿದವರೂ ಇದ್ದಾರೆ. ನಾನು ಲೇಖನ
ಬರೆಯಬೇಕಾದರೆ ಸಾಧ್ಯವಾದಷ್ಟೂ ಒಬ್ಬರಿಗಿಂತ ಹೆಚ್ಚು ಜನರಲ್ಲಿ ಆ ಕುರಿತು ಚರ್ಚಿಸುತ್ತೇನೆ.
ಸಾಧ್ಯವಾದಷ್ಟೂ ಸತ್ಯಕ್ಕೆ ಹತ್ತಿರವಾಗಿಬೇಕು ಎನ್ನುವುದು ನನ್ನ ಆಶಯ. ಆದ್ದರಿಂದ ಈ ಎಲ್ಲಾ
ಘಟನೆಗಳ ಕುರಿತು ಡಾ.ವಿಜಯಮ್ಮನವರ ಜೊತೆ ಮಾತಾಡಿ ಕನ್ಪರಂ ಮಾಡಿಕೊಳ್ಳಬಹುದಾಗಿದೆ.
ಹಾಗೆಯೇ
' ಕರ್ನಾಟಕದಲ್ಲಿ ಇಪ್ಟಾ ತಂಡದ ಚಟುವಟಿಕೆಗಳು ಸಮುದಾಯ ಜಾತಾ ನಂತರದಲ್ಲಿ (1979 ರ ನಂತರದಲ್ಲಿ) ಪ್ರಾರಂಭವಾಯಿತು ಎಂದು ಹೇಳಿದ್ದೀರಿ. ಆದರೆ ಇಪ್ಟಾ
ಬೀದಿನಾಟಕವನ್ನು ಕನ್ನಡದಲ್ಲಿ ಆರಂಭಿಸಿದ್ದು 1944ರಲ್ಲಿ. 1943 ರಲ್ಲಿ ಬಾಂಬೆ ಇಪ್ಟಾ ಸಮ್ಮೇಳನಕ್ಕೆ
ಹೋಗಿ ಬಂದ ನಿರಂಜನರು ಅದರಿಂದ ಪ್ರೇರೇಪಿತರಾಗಿ 'ನಾವು ಮನುಷ್ಯರು' ಎನ್ನುವ ಬೀದಿ ನಾಟಕವನ್ನು ಬರೆದು
ಮಂಗಳೂರಿನ ಮೈದಾನದಲ್ಲಿ ಪ್ರದರ್ಶಿಸಿದರು. ಆ ನಂತರವೂ ಈ ಬೀದಿನಾಟಕದ ಯಶಸ್ಸಿನಿಂದ ಇದೇ ನಾಟಕವನ್ನು
ಸ್ಟೇಜ್ ಮೇಲೆ ಕೂಡಾ ಇಪ್ಟಾ ತಂಡ ಪ್ರದರ್ಶಿಸಿದೆ. ಹಾಗೆಯೇ ಬಾಂಬೆ ಇಪ್ಟಾ ಸಂಘಟನೆಯು ಬಾಂಬೆ ಕರ್ನಾಟಕ
ಪ್ರದೇಶದಲ್ಲಿ ಹಲವಾರು ಬೀದಿನಾಟಕಗಳನ್ನು ಹಿಂದಿ ಭಾಷೆಯಲ್ಲೂ ಬೇಕಾದಷ್ಟು ಸಲ ಪ್ರದರ್ಶಿಸಿದೆ. ನಿಮಗೆ
ಹೇಗೆ ಸಮುದಾಯದ ಪ್ರತಿ ವಿವರಗಳು ಗೊತ್ತಿವೆಯೋ ಹಾಗೆಯೇ ನಾನೂ ಸಹ ಇಪ್ಟಾ ಸಾಂಸ್ಕೃತಿಕ ಸಂಘಟನೆ ಕುರಿತು
ಒಂದಿಷ್ಟು ವಿವರಗಳನ್ನು ತಿಳಿದಿಕೊಂಡಿದ್ದೇನೆ. ಯಾಕೆಂದರೆ ಕಳೆದ ಒಂದೂವರೆ ದಶಕಗಳಿಂದ ನಾನು ಇಪ್ಟಾದ
ರಾಜ್ಯ ಖಜಾಂಚಿಯಾಗಿದ್ದೇನೆ ಹಾಗೂ ಬೆಂಗಳೂರಿನ ಇಪ್ಟಾ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದೇನೆಂದು ವಿನಯಪೂರ್ವಕವಾಗಿ
ಹೇಳುತ್ತಿದ್ದೇನೆ. ನಿಮಗೆ ಇನ್ನೂ ಹೆಚ್ಚಿನ ಮಾಹಿತಿಗಳು ಬೇಕಿದ್ದರೆ ಇಪ್ಟಾದ ಪ್ರಧಾನ ಕಾರ್ಯದರ್ಶಿಗಳಾದ
ಡಾ.ಸಿದ್ದನಗೌಡ ಪಾಟೀಲರನ್ನು ಕೇಳಿ ತಿಳಿದುಕೊಳ್ಳಬಹುದಾಗಿದೆ.
ಬೆಲ್ಚಿ
ನಾಟಕ ಸಮುದಾಯದ ಮೊದಲ ನಾಟಕವಲ್ಲವೆಂದು ನೀವು ತಿಳಿಸಿದ್ದನ್ನು ಒಪ್ಪಿಕೊಳ್ಳುತ್ತೇನೆ. ಹಾಗೂ ಪ್ರತಿಕ್ರಿಯೆಯ
ನೆಪದಲ್ಲಿ ಅನೇಕ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಇದೆಲ್ಲದಕ್ಕಿಂತಲೂ
ನಿಮ್ಮ ಸಂಯಮದ ಬರವಣಿಗೆ ನನಗೆ ತುಂಬಾ ಇಷ್ಟವಾಯಿತು. ಒಬ್ಬ ಅನುಭವಿ ರಂಗಕರ್ಮಿಯಿಂದ ಮಾತ್ರ ಇಂತಹ ಬರವಣಿಗೆ
ಸಾಧ್ಯ. ನಿಮ್ಮ ರಂಗ ಕಾಳಜಿಗೆ ಅಭಿನಂದನೆಗಳು. ಕಾಲಕಾಲಕ್ಕೆ ರಂಗಭೂಮಿ ವಿಶ್ಲೇಷಣೆ ಪತ್ರಿಕೆಯ ಲೇಖನಗಳನ್ನು
ಹೀಗೆಯೇ ವಿಶ್ಲೇಷಿಸುತ್ತಾ ತಿದ್ದುತ್ತಾ ಮಾಹಿತಿಗಳನ್ನು ಕೊಡುತ್ತಾ ಮಾರ್ಗದರ್ಶನ ಮಾಡುತ್ತಾ ಇರಿ ಎಂದು
ಆಶಿಸುತ್ತೇನೆ.
ವಂದನೆಗಳೊಂದಿಗೆ
ಶಶಿಕಾಂತ
ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ