ಗುರುವಾರ, ಸೆಪ್ಟೆಂಬರ್ 29, 2016

ದಲ್ಲಾಳಿಗಳ ಸಂತೆಯಲ್ಲಿ ನಿಷ್ಟುರವಾದಿಯ ಆತ್ಮನಿವೇದನೆ :



ಪ್ರತಿ ಸಲ ಸಾಂಸ್ಕೃತಿಕ ಕ್ಷೇತ್ರದೊಳಿಗಿನ ಸ್ವಾರ್ಥಹಿತಾಸಕ್ತಿಗಳ ಕುರಿತು, ರಂಗಭೂಮಿಯಲ್ಲಿ ಬೇರುಬಿಟ್ಟಿರುವ ದಲ್ಲಾಳಿ ದುರುಳರ ಕುರಿತು ವಿಶ್ಲೇಷನಾತ್ಮಕ ಲೇಖನ ಬರೆದಾಗಲೂ ಆಯಾ ಲೇಖನದಲ್ಲಿ ಪ್ರಸ್ತಾಪಗೊಂಡವರಿಂದ ಹಾಗೂ ಅವರ ಹಿಂಬಾಲಕರಿಂದ ಬರುವ ಆರೋಪ ಪ್ರತ್ಯಾರೋಪಗಳು ಬಹಳ ವಿಶಿಷ್ಟವಾದವುಗಳು. ಈತನಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ, ಬೇರೆಯವರಿಗೆ ಸಿಕ್ಕ ಅವಕಾಶಗಳು ಇವನಿಗೆ ಸಿಗಲಿಲ್ಲ ಎನ್ನುವ ಅಸೂಯೇಯೆ ಅಕ್ಷರ ರೂಪದಲ್ಲಿ ಹೊರಗೆ ಬರುತ್ತವೆ. ಸರಕಾರಿ ಸವಲತ್ತುಗಳು ಸಿಗಲಿಲ್ಲ ಎನ್ನುವ ಆಕ್ರೋಶಕ್ಕೆ ಲೇಖನ ಬರೆಯುತ್ತಾನೆ. ಇವನೇನೂ ಸಾಚಾನಾ... ಸರಕಾರಿ ಹಣವನ್ನು ತಿಂದೇ ಇಲ್ಲವಾ?... ಹರಿಶ್ಚಂದ್ರನ ತುಂಡು ಈತ ಸತ್ಯವನ್ನೇ ಹೇಳುವ ಗುತ್ತಿಗೆದಾರ.. ನಮಗ್ಗೊತ್ತಿಲ್ಲವಾ ಈತನ ಅಸಲೀತನ.. ಬೇರೆಯವರಿಗೆ ಬುದ್ದಿ ಹೇಳುವ ಈತ ಮಾಡೋದಾದರೂ ಏನು?, ಹಣ ಮಾಡುವ ತಾಕತ್ತಿಲ್ಲದ್ದರಿಂದ ಹೀಗೆಲ್ಲಾ ಕಿರಿಚಾಡುತ್ತಾನೆ... ಅಧಿಕಾರ ಪದವಿ ಪ್ರಶಸ್ತಿ ಪಡೆಯಲಿಕ್ಕೂ ತಾಕತ್ತು ಬೇಕೆ ಹೊರತು ಬರೀ ಇವನಂತಾ ನಿಯತ್ತು ಕೆಲಸಕ್ಕೆ ಬಾರದು.., ತಾನೂ ಸರಕಾರಿ ಅನುದಾನಗಳನ್ನು ಪಡೆಯಲಿ ಬೇಡಾ ಅಂದವರಾರು? ತಾನು ತಿನ್ನುವುದಿಲ್ಲ, ತಿನ್ನುವವರನ್ನೂ ಬಿಡುವುದಿಲ್ಲ ಅಂದರೆ ಹೇಗೆ... ಹೀಗೆ ಹಲವಾರು ಸಂದರ್ಭದಲ್ಲಿ ನನ್ನ ಬೆನ್ನ ಹಿಂದೆ ನನ್ನ ಬಗ್ಗೆ ಆಡಿಕೊಂಡವರ ಮಾತುಗಳು ಬೇಕಾದಷ್ಟಿವೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಮುಂದೇನೇ ಕೆಲವರು ತಮ್ಮ ಅಸಮಾಧಾನವನ್ನೂ ತೋಡಿಕೊಂಡು ಹಗುರಾಗಿದ್ದಾರೆ.

ಇದು ನನ್ನೊಬ್ಬನ ಸಮಸ್ಯೆಯಲ್ಲ.  ಇದ್ದುದದನ್ನು ಇದ್ದಂಗೆ ಹೇಳುವ, ನೇರವಾಗಿ ಬರೆಯುವ ಎಲ್ಲಾ ಬರಹಗಾರರ ಮೇಲಿರುವ ಆರೋಪವೂ ಇಂತಹವುದೇ ಆಗಿವೆ. ಯಾರಾದರೂ ಸತ್ಯ ಹೇಳುತ್ತಾರೆಂದರೆ ಅವರು ಅವಕಾಶವಂಚಿತರಾಗಿದ್ದಾರೆ, ಯಾರಾದರೂ ನಿಯತ್ತಾಗಿದ್ದಾರೆಂದರೆ ಅವರಿಗೆ ಸವಲತ್ತು ಪಡೆಯುವ ಯೋಗ್ಯತೆ ಇಲ್ಲ. ಯಾರಾದರೂ ಅಕ್ರಮಗಳನ್ನು ಕುರಿತು ಬರೆಯುತ್ತಾರೆಂದರೆ ಅಕ್ರಮ ಎಸಗಿ ಲಾಭ ಮಾಡಿಕೊಳ್ಳುವ ತಾಕತ್ತಿಲ್ಲ. ಯಾರಾದರೂ ವ್ಯವಸ್ಥೆಯನ್ನು ಟೀಕಿಸುತ್ತಾರೆಂದರೆ ವ್ಯವಸ್ಥೆ ಜೊತೆ ರಾಜಿ ಆಗಿ ಲಾಭ ಪಡೆಯುವ ಅದೃಷ್ಟವಿಲ್ಲ ಎಂದೆಲ್ಲಾ ಆರೋಪಿಸುವ ಅವಕಾಶವಾದಿ ಫಲಾನುಭವಿಗಳ ಪಡೆಯೇ ಇಂದು ಬೇರೆ ಕ್ಷೇತ್ರಗಳಂತೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಬೇರುಬಿಟ್ಟಿವೆ. ಆರೋಪ ಮಾಡಿದವರನ್ನೇ ಆರೋಪಿಯನ್ನಾಗಿಸುವುದು, ಕಳ್ಳತನವನ್ನು ಕಂಡುಹಿಡಿದವರನ್ನೇ ಬಲುಗಳ್ಳ ಎಂದು ದೂರುವುದು, ಮಾಡುತ್ತಿರುವುದು ತಪ್ಪೆಂದು ತೋರಿದವರನ್ನು ತಪ್ಪಿತಸ್ತರನ್ನಾಗಿ ಸಾಬೀತು ಮಾಡಲು ಹೆಣಗಾಡುವುದೆಲ್ಲಾ ಮಾಮೂಲಿಯಾಗಿಬಿಟ್ಟಿದೆ. ಆತ್ಮಸಾಕ್ಷಿಯನ್ನು ಮಾರಿಕೊಂಡ ಬಹುತೇಕರು ಹೀಗೆ ಬುದ್ದಿಹೇಳಿದವರ ಜೊತೆಗೆ ಗುದ್ದಾಡಲು ಪ್ರಯತ್ನಿಸುತ್ತಾರೆ. ಅದೂ ಆಗದಿದ್ದಲ್ಲಿ ಬದ್ದತೆ ಇರುವವರನ್ನೂ ಸಹ ಕಳ್ಳರು ಲಾಭಕೋರರು ಇಲ್ಲವೇ ಅಯೋಗ್ಯರು ಎಂದು ಸುಳ್ಳು ಸುದ್ದಿ ಹಬ್ಬಿಸಲು ಪ್ರಯತ್ನಿಸಿ ತಮ್ಮ ಸಾಚಾತನವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾರೆ. ಕಳೆದ ದಶಕದಿಂದ ಈ ಸಮಸ್ಯೆಯನ್ನು ತೀವ್ರವಾಗಿ ನಾನು ಅನುಭವಿಸುತ್ತಿದ್ದೇನೆ. ಪ್ರತಿ ಸಲ ನನ್ನ ವಿರುದ್ದ ಹುಸಿ ಆರೋಪಗಳು ಕೇಳಿ ಬಂದಾಗಲೆಲ್ಲಾ ಸಾಕ್ಷಿ ಸಮೇತ ಸಾಬೀತುಮಾಡಲು ಸವಾಲು ಹಾಕಿದ್ದೇನೆ. ಆದರೆ ನನ್ನ ಸವಾಲನ್ನು ನೇರಾ ನೇರಾ ಎದುರಿಸದೇ ಬೆನ್ನ ಹಿಂದೆ ಸುಳ್ಳು ವದಂತಿಗಳನ್ನು ಹರಡುವುದನ್ನೇ ಕಾಯಕ ಮಾಡಿಕೊಳ್ಳುವವರಿಗೇನು ಮಾಡುವುದು. ಅವರು ಹೇಳಿದ್ದನ್ನು ನಂಬುವವರಿಗೆ ಅದು ಹೇಗೆ ಸತ್ಯವನ್ನು ಮನದಟ್ಟುಮಾಡುವುದು?  


ಬಹುಷಃ ನಾನು ಇಲ್ಲಿವರೆಗೂ ನನ್ನ ಸ್ವಂತದ ವಿಚಾರ ಕುರಿತು ಲೇಖನ ಬರೆದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳಲು ಹೋಗಿಲ್ಲ. ಅಂತಹ ಶ್ರೇಷ್ಟತೆಯ ವ್ಯಸನವೂ ನನಗಿಲ್ಲ. ಆದರೆ.. ಇತ್ತೀಚೆಗೆ ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಗಾಳಿ ಸುದ್ದಿಯನ್ನು ಹರಡುತ್ತಿರುವುದರಿಂದ ಹಾಗೂ ನನ್ನನ್ನೂ ಅವಕಾಶವಾದಿ ಎಂದು ಸಾಬೀತುಪಡಿಸಲು ಹರಸಾಹಸ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಈ ಲೇಖನದ ಮೂಲಕ ಆತ್ಮನಿವೇದನೆ ಮಾಡಿಕೊಳ್ಳಬೇಕಾಯಿತು. ಕನ್ನಡ ರಂಗಭೂಮಿಗೆ ಸ್ವಹಿತಾಸಕ್ತಿಯಿಂದ ಬಂದು ಮೂರು ದಶಕಗಳೇ ಆಯಿತು. ನಟನಾಗಿ ಆರಂಭಗೊಂಡ ನನ್ನ ರಂಗಾಸಕ್ತಿ ಆಮೇಲೆ ರಂಗನಿರ್ದೇಶನ, ನಾಟಕ ರಚನೆ, ರಂಗಸಂಘಟನೆ, ರಂಗಪತ್ರಿಕೆ, ರಂಗಶಿಕ್ಷಣ ಹಾಗೂ ಬರವಣಿಗೆಯತ್ತ ವಿಸ್ತಾರಗೊಳ್ಳುತ್ತಾ ಹೋಯಿತು. ಎ.ಎಸ್.ಮೂರ್ತಿ, ಆರ್.ನಾಗೇಶ್, ಸಿಜಿಕೆ, ಎಂ.ಎಸ್.ಸತ್ಯೂ ಮುಂತಾದ ರಂಗದಿಗ್ಗಜರ ಗರಡಿಯಲ್ಲಿ ಪಳಗಿದ ನಾನು ರಂಗಭೂಮಿಯತ್ತ ಅಪಾರವಾದ ಒಲವು ಹಾಗೂ ಆಸಕ್ತಿ ಬೆಳೆಸಿಕೊಂಡಿದ್ದಂತೂ ಸತ್ಯ. ಮೂಲಭೂತವಾಗಿ ಎಡಪಂಥೀಯ ಸಂಘಟನೆಯ ಕಾರ್ಯಕರ್ತನಾಗಿ, ಸಂಘಟನಾ ಕಾರ್ಯದರ್ಶಿಯಾಗಿ ದಶಕಗಳ ಕಾಲ ತೊಡಗಿಸಿಕೊಂಡ ನಾನು ಒಂದೂವರೆ ದಶಕಗಳ ಕಾಲ ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಕರ್ನಾಟಕ ರಾಜ್ಯ ಖಜಾಂಚಿಯಾಗಿ ಹಾಗೂ ಬೆಂಗಳೂರು ಇಪ್ಟಾದ ಸಂಘಟನಾ ಸಂಚಾಲಕನಾಗಿ ಸಾಮಾಜಿಕ ಬದ್ದತೆಯಿಂದಾ ಕೆಲಸ ಮಾಡಿದ್ದೇನೆ. ಮಾಡುತ್ತಿದ್ದೇನೆ. ಬಹುಷಃ  ಎಡಪಂಥೀಯ ಪ್ರಗತಿಪರ ಚಿಂತನೆಗಳು ನನ್ನ ಮೇಲೆ ಪ್ರಭಾವಬೀರದೇ ಹೋಗಿದ್ದರೆ ನಾನೂ ಸಹ ಭ್ರಷ್ಟ ವ್ಯವಸ್ಥೆಯ ಜೊತೆಗೆ ಶಾಮೀಲಾಗಿ ಅವಕಾಶವಾದಿಯಾಗುತ್ತಿದ್ದೆನೇನೋ? ಇನ್ನೊಂದಿಷ್ಟು ಸರಕಾರಿ ಸವಲತ್ತುಗಳನ್ನು ಅನುದಾನಗಳನ್ನು ಪಡೆದು, ಲಾಭಿ ಮಾಡಿ ಒಂದಿಷ್ಟು ಪ್ರಶಸ್ತಿಗಳನ್ನು  ಪಡೆದು ಮೆರೆಯಬಹುದಾಗಿತ್ತು. ಸಂಘಟನಾ ಶಕ್ತಿ, ಬರವಣಿಗೆಯ ಯುಕ್ತಿ ಹಾಗೂ ಪತ್ರಕರ್ತನೆನ್ನುವ ಬ್ರಾಂಡ್‌ಗಳನ್ನು ಬಳಸಿದ್ದರೆ, ಸರಕಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದರೆ, ಜಾತಿ ರಾಜಕಾರಣ ಮಾಡಿದ್ದರೆ, ರಾಜಕೀಯ ನಾಯಕರುಗಳಿಗೆ ಬಕೆಟ್ ಹಿಡಿದಿದ್ದರೆ, ದಲ್ಲಾಳಿಗಳ ಜೊತೆಗೆ ರಾಜಿಯಾಗಿದ್ದರೆ... ಇನ್ನೂ ಏನೇನೋ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಅವಕಾಶಗಳಿಗಂತೂ ಬರವಿರಲಿಲ್ಲ. ಆದರೆ ಅದಕ್ಕೆ ಅದ್ಯಾಕೋ ಮನಸ್ಸು ಎಂದೂ ಒಪ್ಪಲೇ ಇಲ್ಲ. ಕೇವಲ ನನ್ನನ್ನು ನಾನು ಹೊಗಳಿಕೊಳ್ಳಲು ಇಲ್ಲವೇ ಬೇರೆಯವರ ಮುಂದೆ ನನ್ನ ಸಾಚಾತನವನ್ನು ಸಾಬೀತು ಮಾಡಲು ಈ ಮಾತನ್ನು ನಾನು ಹೇಳುತ್ತಿಲ್ಲ. ಆತ್ಮನಿವೇದನೆ ಮಾಡಿಕೊಳ್ಳುವಾಗ ಅವಾಸ್ತವಗಳಿಗೆ ಅವಕಾಶವಿಲ್ಲ.


ನನ್ನ ಆತ್ಮೀಯ ಗುರುಗಳಾದ ಆರ್.ನಾಗೇಶ್‌ರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರನ್ನು ಅಭಿನಂದಿಸಲೆಂದು ಮೊದಲ ದಿನ ಅಕಾಡೆಮಿಯ ಚೇಂಬರಿನಲ್ಲಿ ಅವರನ್ನು ಬೇಟಿಯಾಗಿದ್ದನ್ನು ಬಿಟ್ಟರೆ ಆ ನಂತರ ಅವರ ಮೂರು ವರ್ಷಗಳ ಕಾಲಾವಧಿಯಲ್ಲಿ ಮತ್ತೆ ಅಕಾಡೆಮಿಯ ಮೆಟ್ಟಿಲು ಹತ್ತಲಿಲ್ಲ. ಈಗ ಪ್ರಸ್ತುತ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ.ಬಂಜಗೆರೆ ಜಯಪ್ರಕಾಶ್ ರವರ ಜೊತೆ ದಶಕಗಳ ಕಾಲ ಒಡನಾಡಿಯಾಗಿದ್ದವ ನಾನು. ಅನೇಕ ಜನಪರ ಹೋರಾಟಗಳಲ್ಲಿ ಅವರ ಜೊತೆಯಾಗಿದ್ದವನು. ಆದರೆ ಅವರು ಪ್ರಾಧಿಕಾರದ ಅಧ್ಯಕ್ಷರಾದಾಗಿನಿಂದ ಇಲ್ಲಿವರೆಗೂ ಅವರನ್ನು ಹೋಗಿ ನೋಡಲಿಲ್ಲ, ಯಾವುದೇ ಸಹಾಯ ಸಹಕಾರ ಕೇಳಲಿಲ್ಲ, ಇಂತವರಿಗೆ ಇಂತದ್ದು ಮಾಡಿ ಎಂದು ಎಂದೂ ರೆಕಮೆಂಡ್ ಮಾಡಲಿಲ್ಲ. ಯಾರೇ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರಲಿ ಅವರನ್ನು ಒಂದೇ ಒಂದು ಸಲ ಮಾತ್ರ ಬೇಟಿ ಮಾಡಿ ಅಭಿನಂದಿಸಿ ಸಾಧ್ಯವಾದರೆ ಒಂದು ಸಂದರ್ಶನ ಪಡೆದಿದ್ದೇನೆಯೇ ಹೊರತು ಎಂದೂ ಯಾರಿಂದಲೂ ಯಾವ ಉಪಕಾರವನ್ನಾಗಲೀ, ಸಹಕಾರವನ್ನಾಗಲೀ  ಬಯಸಲಿಲ್ಲ. ನಂಬಿಕೆ ಇಲ್ಲದವರು ಇನ್ನೂ ನಮ್ಮೊಂದಿಗಿರುವ ಮಾಜಿ ಅಧ್ಯಕ್ಷರಾದ ಮರುಳಸಿದ್ದಪ್ಪನವರು, ಕಪ್ಪಣ್ಣನವರು, ಬಿ.ವಿ.ರಾಜಾರಾಮ್‌ರವರು ಹಾಗೂ ಹಾಲಿ ಅಧ್ಯಕ್ಷ ಶೇಖ ಮಾಸ್ತರರನ್ನು ಕೇಳಿ ಕನ್ಪರಂ ಮಾಡಿಕೊಳ್ಳಬಹುದಾಗಿದೆ. ಈ ಎಲ್ಲಾ ಅಧ್ಯಕ್ಷರುಗಳು ರಂಗಭೂಮಿಗೆ ಒಳಿತನ್ನು ಮಾಡಿದಾಗ ಶ್ಲಾಘಿಸಿ ಬರೆದಿದ್ದೇನೆ, ತಪ್ಪು ನಿರ್ಣಯಗಳನ್ನು ತೆಗೆದುಕೊಂಡಾಗ ಟೀಕಿಸಿಯೂ ಬರೆದಿದ್ದೇನೆ. ಆದರೆ ಎಂದೂ ಯಾರನ್ನೂ ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಿಲ್ಲ. ಇದಕ್ಕೆ ಈ ಎಲ್ಲರೂ ಸಾಕ್ಷಿಯಾಗಿದ್ದಾರೆ.

ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿರಲಿ, ಇಲ್ಲವೇ ನಿರ್ದೇಶಕರಾದಿಯಾಗಿ ಯಾವುದೇ ಅಧಿಕಾರಿಗಳನ್ನು ಎಂದೂ ಅವರ ಕಛೇರಿಗಳಿಗೆ ಹೋಗಿ ಬೇಟಿಯಾಗಿದ್ದೇ ಇಲ್ಲ. ಒಂದೆರಡು ಸಲ ಹೋಗಿದ್ದರೂ ಅದು ಪ್ರತಿಭಟನೆ ಸಲ್ಲಿಸಲು ರಂಗಸಂಗಾತಿಗಳ ಜೊತೆಗೆ ಹೋಗಿದ್ದೆ. ಎಂದೂ ಯಾವುದೇ ಅಧಿಕಾರಿಗಳಿಂದ ಯಾವುದೇ ರೀತಿ ಸಹಾಯ ಪಡೆದಿಲ್ಲ, ಬೇರೆಯವರಿಗೆ ಸಹಾಯ ಮಾಡಿ ಎಂದೂ ರೆಕಮೆಂಡ್ ಮಾಡಿಲ್ಲ. ಕಳೆದ ಹದಿನಾರು ವರ್ಷಗಳಿಂದ ಸೃಷ್ಟಿ ಅಕಾಡೆಮಿ ಎನ್ನುವ ಸಾಂಸ್ಕೃತಿಕ ಸಂಸ್ಥೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಾನು ಈ ಸಂಸ್ಥೆಯ ಮೂಲಕ ಹಲವಾರು ಬೀದಿ ನಾಟಕಗಳನ್ನು, ವೇದಿಕೆ ನಾಟಕಗಳನ್ನು, ರಂಗಸಂಬಂಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಜೊತೆಗೆ ಮೂರು ಸಾವಿರಕ್ಕೂ ಹೆಚ್ಚು ಯುವಜನರಿಗೆ ಅಭಿನಯದ ಕುರಿತು ತರಬೇತಿಯನ್ನು ಕೊಡುತ್ತಲೇ ಬಂದಿರುವೆ. ಆದರೆ ಇವತ್ತಿನವರೆಗೂ ಎಂದೂ ಯಾವುದೇ ಸರಕಾರಿ ಇಲಾಖೆಯಿಂದಲೂ ಒಂದೇ ಒಂದು ರೂಪಾಯಿ ಅನುದಾನವನ್ನು ಪಡೆದಿಲ್ಲ ಹಾಗೂ ಅನುದಾನ ಕೊಡಿ ಎಂದು ಅರ್ಜಿಯನ್ನೂ ಸಲ್ಲಿಸಿಲ್ಲ. ಪಡೆಯಲೇ ಬಾರದೆಂಬ ಹಠವಂತೂ ಇಲ್ಲ. ಆದರೆ ಈ ಸಧ್ಯಕ್ಕೆ ಅದರ ಅಗತ್ಯವಿಲ್ಲ. ಯಾರು ಬೇಕಾದರೂ ನಾಟಕ ಅಕಾಡೆಮಿಗೆ ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆರ್‌ಟಿಐ ಅರ್ಜಿ ಹಾಕಿ ನಾನಾಗಲೀ ನನ್ನ ಸಂಸ್ಥೆಯಾಗಲೀ ಏನಾದರೂ ಸಹಾಯ ಪಡೆದಿದ್ದೇನಾ ಎಂದು ಕನ್ಪರಂ ಮಾಡಿಕೊಳ್ಳಬಹುದಾಗಿದೆ.


ಗಾಜಿನ ಮನೆಯಲ್ಲಿರುವವರು ಮತ್ತೊಬ್ಬರ ಮನೆಗೆ ಕಲ್ಲು ಹೊಡೆಯಬಾರದು ಎನ್ನುವ ಅರಿವು ನನಗಿದೆ. ನಾನೇ ಅವಕಾಶವಾದಿಯಾಗಿದ್ದರೆ ಬೇರೆಯವರನ್ನು ಟೀಕಿಸುವ ಅರ್ಹತೆ ನನಗಿರುವುದಿಲ್ಲ ಎನ್ನುವ ತಿಳಿವೂ ನನಗಿದೆ. ನಾನು ಯಾವತ್ತೂ ಬಯಲಲ್ಲಿಯೇ ನಿಂತವನು ಹಾಗೂ ನಿಲ್ಲ ಬಯಸುವವನು. ಸಮಾಜದ ಸಮಸ್ಯೆಗಳನ್ನಾಗಲೀ ಇಲ್ಲವೇ ರಂಗಭೂಮಿಯಲ್ಲಾಗುವ ನ್ಯೂನ್ಯತೆಗಳನ್ನಾಗಲೀ ಏಕಾಂಗಿಯಾಗಿ ಸರಿಪಡಿಸುತ್ತೇನೆ ಎನ್ನುವ ದುರಹಂಕಾರ ನನ್ನದಲ್ಲ. ನನ್ನ ಇತಿ ಮಿತಿಗಳ ಅರಿವು ನನಗಿದೆ.  ಆದರೆ ಕಣ್ಣಮುಂದೆ ಆಗುತ್ತಿರುವ ಅನ್ಯಾಯಗಳನ್ನು ನೋಡಿಕೊಂಡೂ ಸುಮ್ಮನಿರುವುದು ನನ್ನಿಂದ ಆಗದ ಮಾತು.  ಮೊದಲಿನಿಂದಲೂ ಹೋರಾಟದ ಮನೋಭವವನ್ನು ಬೆಳೆಸಿಕೊಂಡು ಬಂದ ನನಗೆ ಅದ್ಯಾಕೋ ಯಾವುದೇ ರೀತಿಯ ಶೋಷಣೆಗಳಾದರೂ ಸಹಿಸಿಕೊಳ್ಳಲು ಸಾಧ್ಯವಾಗದೇ ಯಾವುದೇ ರೂಪದಲ್ಲಿ ಸಿಡಿದೇಳುತ್ತೇನೆ. ನನ್ನ ನಾಟಕಗಳ ಮೂಲಕ, ಕವಿತೆಗಳ ಮೂಲಕ, ಲೇಖನಗಳ ಮೂಲಕ, ಸಮೂಹ ಮಾಧ್ಯಮಗಳ ಮೂಲಕ, ಜಾಲತಾಣಗಳ ಮೂಲಕ, ಪತ್ರಿಕೆಗಳ ಮೂಲಕ, ಇಲ್ಲವೇ ಹೋರಾಟಗಳ ಮೂಲಕ  ಭ್ರಷ್ಟತೆ ಮತ್ತು ಅವಕಾಶವಾದಿತನಗಳ ವಿರುದ್ಧ ನನ್ನ ಪ್ರತಿಭಟನೆಯನ್ನು ನಿರಂತರವಾಗಿ ಚಲನಶೀಲವಾಗಿಸಿಕೊಂಡು ಬಂದಿದ್ದೇನೆ.

ನನ್ನ ಪ್ರತಿಭಟನಾತ್ಮಕ ಮನೋಭಾವ ಹಲವರಿಗೆ ಇಷ್ಟವಾದರೆ ಕೆಲವರಿಗೆ ಅಸಹನೀಯವಾಗಿದೆ. ವಿಚಾರಗಳನ್ನು ವಿಚಾರಗಳ ಮೂಲಕ, ವಿಡಂಬನೆಗಳನ್ನು ಸಂವಾದದ ಮೂಲಕ ಎದುರಿಸುವ ಬದಲು ಇಲ್ಲಸಲ್ಲದ ಆರೋಪಗಳ ಮೂಲಕ ನನ್ನ ಬದ್ದತೆಯನ್ನು ಡೈಲ್ಯೂಟ್ ಮಾಡುವ ಹಾಗೂ ನನ್ನನ್ನೂ ಅಪರಾಧಿಯನ್ನಾಗಿಸುವ ಹುನ್ನಾರಗಳು ನೇಪತ್ಯದಲ್ಲಿ ನಡೆಯುತ್ತಿವೆ. ಇದೆಲ್ಲಾ ನಿನಗೆ ಯಾಕೆ ಬೇಕು, ನಿನಗೇನಾಗಬೇಕು ಅದನ್ನು ಹೇಳು ಎಂದು ಬುದ್ದಿ ಹೇಳಿ ನನ್ನನ್ನು ನೈತಿಕವಾಗಿ ಕುಸಿಯುವಂತೆ ಮಾಡಲು ಕೆಲವು ಸಾಂಸ್ಕೃತಿಕ ದಲ್ಲಾಳಿಗಳು ಪ್ರಯತ್ನಿಸಿದರಾದರೂ ಸಫಲರಾಗಲಿಲ್ಲ. ಸತ್ಯ ಹೇಳುತ್ತೇನೆ ವ್ಯವಹಾರಿಕ ದೃಷ್ಟಿಯಿಂದ ನೋಡಿದರೆ ನನ್ನ ಬರವಣಿಗೆಗಳಿಂದ ನನಗೆ ಆರ್ಥಿಕವಾಗಿ ಎಂತಹ ಲಾಭವೂ ಇಲ್ಲ.  ಪ್ರಜಾವಾಣಿ, ಅಗ್ನಿ ಮುಂತಾದ ಕೆಲವು ಪತ್ರಿಕೆಗಳು ಬರೆದ ಲೇಖನಕ್ಕಾಗಿ ಕೊಡಮಾಡುವ ಮುನ್ನೂರು ನಾನೂರು ರೂಪಾಯಿಗಳಿಂದ ನನಗೆಂತದೂ ಪ್ರಯೋಜನವಿಲ್ಲ. ಯಾರದೋ ಮೇಲಿನ ಸೇಡಿಗಾಗಲಿ, ಟೈಂ ಪಾಸ್ ಮಾಡಲಾಗಲಿ, ವ್ಯಯಕ್ತಿಕ ಲಾಭಕ್ಕಾಗಲೀ, ಇಲ್ಲವೇ ಬರೆಯಲೇಬೇಕೆಂಬ ತೆವಲಿಗಾಗಲೀ ನಾನೆಂದೂ ಬರೆದವನಲ್ಲ.

 
ಇಪ್ಟಾ ಕಲಾವಿದರೊಂದಿ
ಅದ್ಯಾಕೋ ಚಿಕ್ಕವಯಸ್ಸಿನಿಂದಲೂ ರಂಗಭೂಮಿಯ ಬಗ್ಗೆ ಅದೆಂತದೂ ವಿಚಿತ್ರ ಸೆಳೆತ. ನಾಟಕಗಳತ್ತ ಸದಾ ಅಂತರಂಗದ ಎಳೆತ. ರಂಗಭೂಮಿ ಎನ್ನುವುದು ಸಮಾಜದ  ಕನ್ನಡಿಯಾಗಬೇಕು. ನ್ಯೂನ್ಯತೆಗಳನ್ನು ತೆರೆದು ತೋರುವ ಕನ್ನಡಿಯಲ್ಲಿ ಲೋಪದೋಷಗಳು ಇರಬಾರದು ಎಂದುಕೊಂಡವನು ನಾನು. ರಂಗಕನ್ನಡಿಯಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಪ್ಪುಕಲೆಗಳನ್ನು ಮಾಡಿದರೆ ಅದನ್ನು ಸರಿಪಡಿಸುವ ಮಾರ್ಗೋಪಾಯಗಳತ್ತ ಬರವಣಿಗೆಯಿಂದ ಎಚ್ಚರಿಸುವ ಕೆಲಸವನ್ನು ಮಾಡುತ್ತ ಬಂದಿದ್ದೇನೆ. ಮನುಷ್ಯರಾದ ನಮ್ಮ ತಲೆಯ ಮೇಲೆ ಸಮಾಜದ, ಶ್ರಮಿಕರ ಋಣ ಬೆಟ್ಟದಷ್ಟಿದೆ. ಅದನ್ನು ತೀರಿಸಲು ಈ  ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ. ಸಾಧ್ಯವಾದಷ್ಟು ನಮಗೆ ಗೊತ್ತಿರುವ ಕಾಯಕದ ಮೂಲಕ ಒಂದಿಷ್ಟಾದರೂ ಋಣಕ್ಕೆ ಪ್ರತಿಯಾಗಿ ಕಂದಾಯವನ್ನಾದರೂ ಸಂದಾಯ ಮಾಡಬೇಕಿದೆ. ಅದಕ್ಕಾಗಿ ನಾನು ಆಯ್ದುಕೊಂಡ ಮಾರ್ಗ ಬರವಣಿಗೆ. ಬರವಣಿಗೆಯ ವಿಭಿನ್ನ  ಪ್ರಕಾರಗಳ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದಿದ್ದೇನೆ.

ರಂಗೋಪಜೀವಿಗಳಿಂದ ರಂಗಭೂಮಿಗೆ ಅಪಾಯವಿದೆ. ರಂಗಭೂಮಿಯಲ್ಲಿ  ಕೆಲವು ಗೆದ್ದಲುಗಳು ಒಳಗಿಂದೊಳಗೆ ರಂಗಸೌಧಕ್ಕೆ ರಂದ್ರ ಕೊರೆಯುತ್ತಿವೆ. ಅವುಗಳ ಕುರಿತು ಸಂಬಂಧಪಟ್ಟವರನ್ನು ಎಚ್ಚರಿಸದೇ ಇದ್ದರೆ ಇಡೀ ರಂಗಭೂಮಿ ದಲ್ಲಾಳಿಗಳ ಏಕಸಾಮ್ಯಕ್ಕೊಳಗಾಗಿ ಕಲೆ ಎನ್ನುವುದು ಮಾರಾಟದ ಸರಕಾಗುತ್ತದೆ. ಕಲೆ ವ್ಯಾಪಾರವಾಗದೇ ಕಲೆಯಾಗಿಯೇ ಉಳಿಯಬೇಕು, ಕಲೆ ಜನರಿಗಾಗಿ ಬಳಕೆಯಾಗಬೇಕು, ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧನವಾಗಬೇಕು ಎಂದು ನಂಬಿ ಅದಕ್ಕೆ ಪೂರಕವಾಗಿ ರಂಗಬರಹಗಳನ್ನು ಬರೆಯುತ್ತಾ ಬಂದಿರುವೆ. ನನ್ನ ಬರಹದಿಂದ ರಂಗದಲ್ಲಾಳಿಗಳು ಬದಲಾಗಿ ಬಿಡುತ್ತಾರೆ, ಭ್ರಷ್ಟ ಅಧಿಕಾರಿಗಳು ಒಳ್ಳೆಯವರಾಗುತ್ತಾರೆ, ಅವಕಾಶವಾದಿಗಳು ಸರಿಹೋಗುತ್ತಾರೆ ಎನ್ನುವ ಭ್ರಮೆಯಂತೂ ಖಂಡಿತಾ ಇಲ್ಲ. ಅವರು ಬದಲಾಗುವುದೂ ಇಲ್ಲ. ಆದರೆ ಈ ಭ್ರಷ್ಟರ ಬಗ್ಗೆ, ದಲ್ಲಾಳಿಗಳ ದಗಲ್ಬಾಜಿತನದ ಬಗ್ಗೆ ಜನರಲ್ಲಿ ಅರಿವು ಮೂಡಲಿ ಎನ್ನುವುದು ನನ್ನ ಬರಹಗಳ ಹಿಂದಿನ ಆಶಯವಾಗಿದೆ. ಕಲೆ ಹಾಗೂ ಕಲಾವಿದರಿಗಾಗಿ ಇಲಾಖೆಯ ಮೂಲಕ ಸರಕಾರ ಕೊಡಮಾಡಿದ ಜನರ ಹಣ ಕೆಲವು ಸ್ವಾರ್ಥಿ ಜನರ ಪಾಲಾಗದೇ ಸಿಗಬೇಕಾದವರಿಗೆ, ಶ್ರಮಜೀವಿಗಳಿಗೆ ಸಿಗಲಿ ಎನ್ನುವುದು ನನ್ನ ಉದ್ದೇಶವಾಗಿದೆ.

ಹಾಗಂತಾ ಸರಕಾರಿ ಇಲಾಖೆ ಹಾಗೂ ಅಕಾಡೆಮಿಗಳಿಂದ ಧನಸಹಾಯ ಸಹಕಾರ ಅನುದಾನವನ್ನು  ತೆಗೆದುಕೊಳ್ಳುವುದನ್ನು ನಾನು ವಿರೋಧಿಸುತ್ತಿಲ್ಲ. ಹಾಗೆಯೇ ಹಣ ಪಡೆದವರೆಲ್ಲರೂ ದಲ್ಲಾಳಿಗಳು ಎಂದು ನಿಂದಿಸುತ್ತಿಲ್ಲ.  ನಿಜವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬದ್ದತೆಯಿಂದ ಕೆಲಸ ಮಾಡುವವರು ಸರಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲಿ. ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರೂ ಸರಕಾರಿ ಅನುದಾನವನ್ನು ತಮ್ಮ ಹಕ್ಕು ಎನ್ನುವಂತೆ ಕೇಳಿ ಪಡೆಯಲಿ. ಆದರೆ.. ಪಡೆದ ಹಣವನ್ನು ಪಡೆದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲಿ. ನಾನು ವ್ಯಯಕ್ತಿಕವಾಗಿ  ಇಲ್ಲಿವರೆಗೂ ಯಾವುದೇ ಅನುದಾನವನ್ನು ಪಡೆಯದಿದ್ದರೂ ಎಲ್ಲರಿಗೂ ಒತ್ತಾಯದಿಂದ ಸರಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಹೇಳುತ್ತೇನೆ. ಕೆಲವರಿಗೆ ಅನುದಾನಕ್ಕೆ ಅರ್ಜಿ ಹಾಕಿ ಎಂದು ಒತ್ತಾಯಿಸಿದ್ದೇನೆ. ಗೊತ್ತಿಲ್ಲದ ಹೊಸಬರಿಗೆ ಅನುದಾನದ ದಾರಿ ದಿಕ್ಕುಗಳನ್ನೂ ತೋರಿಸಿದ್ದೇನೆ. ರಂಗಭೂಮಿಯಲ್ಲಿ ಕೆಲಸ ಮಾಡುವವರು ಆ ಅನುದಾನವನ್ನು ಹಾಗೂ ಸರಕಾರದ ಪ್ರಾಯೋಜನೆಯನ್ನು ಬಳಸಿಕೊಳ್ಳದೇ ಹೋದರೆ ಆ ಎಲ್ಲಾ ಸವಲತ್ತುಗಳು ರಂಗದಲ್ಲಾಳಿಗಳ ಪಾಲಾಗುತ್ತವೆ. ಕಲಾವಿದರಿಗೆ ಚಿಲ್ಲರೆ ಕಾಸು ಕೊಟ್ಟು ಲಕ್ಷಾಂತರ ರೂಪಾಯಿಗಳನ್ನು ಕೆಲವೇ ಕೆಲವು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಳ್ಳುತ್ತಾರೆ. 
 
ಸೃಷ್ಟಿ ಕಲಾವಿದರೊಂದಿಗೆ.
ಆದ್ದರಿಂದ ರಂಗಭೂಮಿಯಲ್ಲಿ ನಿಷ್ಟೆಯಿಂದ ತೊಡಗಿಕೊಂಡ ಎಲ್ಲಾ ರಂಗಕಲಾವಿದರು, ರಂಗಸಂಘಟಕರು ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಕಲಾವಿದರುಗಳು ಹಾಗೂ ತಂತ್ರಜ್ಞರು ಸರಕಾರದ ಎಲ್ಲಾ ಸವಲತ್ತುಗಳನ್ನೂ ಪಡೆದು ಕಲೆಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಲಿ. ಬಂದ ಹಣವನ್ನು ತಂಡದ ನಾಯಕರೊಬ್ಬರೇ ಬಳಸಿಕೊಳ್ಳದೇ ತಂಡದಲ್ಲಿ ಶ್ರಮಿಸಿದ ಎಲ್ಲಾ ಕಲಾವಿದರಿಗೂ ಹಂಚಿಕೆ ಮಾಡಲಿ. ಕೇವಲ ರಂಗಸಂಘಟಕ, ಇಲ್ಲವೇ ತಂಡದ ನಾಯಕ ಮಾತ್ರ ಫಲಾನುಭವಿಯಾಗದೇ ಪ್ರತಿಯೊಬ್ಬ ಕಲಾವಿದರೂ ಸಹ ತಮ್ಮ ಪ್ರತಿಭೆಗೆ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿ. ಹೀಗಾದಾಗ ಮಾತ್ರ ಕಲೆಯೂ ಉಳಿಯುತ್ತದೆ, ಕಲಾವಿದರೂ ಬದುಕುತ್ತಾರೆ. ಎಲ್ಲಿವರೆಗೂ ಕಲಾವಿದರು ಹಾಗೂ ಸರಕಾರಿ ಸವಲತ್ತುಗಳ ನಡುವೆ ದಲ್ಲಾಳಿವರ್ಗ ಇರುತ್ತದೆಯೋ ಅಲ್ಲಿವರೆಗೂ ಕಲೆಯೂ ಉದ್ದಾರವಾಗೋದಿಲ್ಲ,  ಕಲಾವಿದರಿಗಂತೂ ಯಾವುದೇ ಲಾಭವಿಲ್ಲ.

ಕಲಾವಿದರಿಗೆ ಸಿಗುವ ಮಾಶಾಸನ, ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರ ಸಂಭಾವಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇರವಾಗಿ ಕಲಾವಿದರ ಅಕೌಂಟಿಗೆ ಸಂದಾಯವಾಗುವಂತೆ ಮಾಡಿದೆ. ಇದಕ್ಕಾಗಿ  ಇಲಾಖೆಯ ಸಚಿವೆ ಉಮಾಶ್ರೀಯವರಿಗೂ ಹಾಗೂ ನಿರ್ದೇಶಕ ದಯಾನಂದರವರಿಗೂ ಧನ್ಯವಾದಗಳನ್ನು ಹೇಳಲೇಬೇಕಿದೆ. ಆದರೆ.. ಸರಕಾರ ಚಾಪೆಯ ಕೆಳಗೆ ತೂರಿದರೆ ದಲ್ಲಾಳಿಗಳಿಗೆ ರಂಗೋಲಿ ಕೆಳಗೆ ತೂರುವ ವಿದ್ಯೆ ಚೆನ್ನಾಗಿ ಗೊತ್ತಿದೆ. ಯಾವುದೇ ಸರಕಾರಿ ಪ್ರಾಜೆಕ್ಟಿನ ಗುತ್ತಿಗೆ ಪಡೆದ ದಲ್ಲಾಳಿಯೊಬ್ಬ ಕಲಾವಿದರೊಂದಿಗೆ ಮೊದಲೇ ಡೀಲಿಗಿಳಿದಿರುತ್ತಾನೆ. ಇಂತಹ ಕಾರ್ಯಕ್ರಮ ಮಾಡಿಕೊಟ್ಟರೆ ಇಷ್ಟು ಹಣ ಕೊಡುತ್ತೇನೆ, ಸರಕಾರದಿಂದ ಬಂದ ಹಣದಲ್ಲಿ ಇಷ್ಟನ್ನು ನೀನು ಮರಳಿ ಕೊಡಬೇಕು, ಯಾಕೆಂದರೆ ಈ ಗುತ್ತಿಗೆ ಪಡೆಯಲು ನಾನು ಅಧಿಕಾರಿಗಳಿಗೆಲ್ಲಾ ಪರ್ಸಂಟೇಜ್ ಕೊಡಬೇಕಾಗುತ್ತದೆ, ಅದನ್ನು ಕೈಯಿಂದ ಕೊಡಲು ಸಾಧ್ಯವಿಲ್ಲ. ಕಲಾವಿದರಿಂದಲೇ ಪಡೆಯಬೇಕಾಗುತ್ತದೆ ಎನ್ನವು ಸಬೂಬೂ ಹೇಳಿ ಕಲಾವಿದರಿಗೆ ನೇರವಾಗಿ ಸಂದಾಯವಾದ ಸರಕಾರಿ  ಹಣದಲ್ಲೂ ಪಾಲು ಪಡೆಯುವ ದಲ್ಲಾಳಿಗಳಿದ್ದಾರೆ. ತಂಡದ ನಾಯಕನೊಂದಿಗೆ ಪರ್ಸಂಟೇಜ್ ಡೀಲಿಗಿಳಿದ ದಲ್ಲಾಳಿ ಮುಖಂಡರೂ ಇದ್ದಾರೆ. ಹೀಗಾಗಿ ಸರಕಾರ ಅದೇನೇ ಡಿಜಟಲೀಕರಣ ಮಾಡಲಿ, ನೇರವಾಗಿ ಹಣ ಪಾವತಿ  ಮಾಡಲಿ ಅದರಲ್ಲಿ  ಸಿಂಹಪಾಲು ದಲ್ಲಾಳಿಗಳಿಗೆ ಹಾಗೂ ಒಂದಿಷ್ಟು ಅಧಿಕಾರಿಗಳಿಗೆ ಹೋಗುತ್ತದೆ. ಇಂತಹುದನ್ನು ಪ್ರಶ್ನಿಸುವ ಕೆಲಸವನ್ನು ನಾನು ಹಲವಾರು ಲೇಖನಗಳಲ್ಲಿ ಮಾಡಿದ್ದೇನೆ. ಸಮಸ್ತ ಚಿಕ್ಕ ದೊಡ್ಡ ಸಾಂಸ್ಕೃತಿಕ ಗುತ್ತಿಗೆದಾರರ ಪಾಲಿಗೆ ಖಳನಾಯಕನಾಗಿದ್ದೇನೆ. ಇವನೂ ತಿನ್ನೊಲ್ಲ ತಿನ್ನುವವರಿಗೂ ಬಿಡೋದಿಲ್ಲ ಎನ್ನವ ಆರೋಪಕ್ಕೆ ಗುರಿಯಾಗಿದ್ದೇನೆ. ಹಲವಾರು ಅಪಾಯಗಳನ್ನು ಉಪಾಯದಿಂದ ಎದುರಿಸಿದ್ದೇನೆ.


ಬರೆಯುವುದನ್ನೇ ನಿಲ್ಲಿಸಿ ಸುಮ್ಮನೆ ನಾಟಕಗಳನ್ನು ಮಾಡಿಸುತ್ತಾ, ಯುವಕರಿಗೆ ತರಬೇತಿಕೊಡುತ್ತಾ ಇದ್ದುಬಿಡೋಣ, ಯಾಕೆ ಸುಮ್ಮನೇ ಇಲ್ಲದ ಆರೋಪಗಳನ್ನು ಮೈಮೇಲೆಳೆದುಕೊಳ್ಳುವುದು, ಅನಗತ್ಯ ರಿಸ್ಕಗಳನ್ನು ಆಹ್ವಾನಿಸುವುದು ಎಂದು ಅದೆಷ್ಟೋ ಸಲ ನಿರ್ಧರಿಸಿದ್ದೂ ಇದೆ. ಆದರೆ... ನನ್ನನ್ನು ಹಾಗೂ ನನ್ನ ಬರಹಗಳನ್ನು ವಿರೋಧಿಸುವವರಿಗಿಂತಾ ಬೆಂಬಲಿಸುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ  ಹೆಚ್ಚಿನ ಸಂಖ್ಯೆಯಲ್ಲಿರುವ ಕಲಾವಿದರುಗಳೇ ನಿಜವಾಗಿ ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವುದು. ಅವರ ಆಶಯಗಳಿಗೆ ದ್ವನಿಯಾಗಿಯಾದರೂ ಬರೆಯುವುದು ಅನಿವಾರ್ಯವಾಗಿದೆ. ಕೆಲವರ ವಿರೋಧಕ್ಕಿಂತಲೂ ಹಲವರ ಆಶೋತ್ತರಗಳಿಗೆ ಪ್ರತಿದ್ವನಿಯಾಗುವುದು ನನಗೆ ಮುಖ್ಯವೆನಿಸುತ್ತದೆ. ಹಲವರಿಗೆ ರಂಗಭೂಮಿಯಲ್ಲಾಗುವ ಶೋಷಣೆಯ ಬಗ್ಗೆ ಗೊತ್ತಿದೆ. ಇನ್ನು ಕೆಲವರು ದಲ್ಲಾಳಿಗಳಿಂದ ದಬ್ಬಾಳಿಕೆಯನ್ನೂ ಅನುಭವಿಸಿದ್ದಾರೆ.. ಆದರೆ ಅವರಿಗೆ ತಮ್ಮ ಅಸಹನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ಗೊತ್ತಿಲ್ಲ. ಪ್ರತಿಭಟನೆ ವ್ಯಕ್ತಪಡಿಸಿದರೆ ಎಲ್ಲಿ ಈ ಪ್ರಭಾವಶಾಲಿ ದಲ್ಲಾಳಿಗಳು ತಮಗೆ ತೊಂದರೆ ಕೊಡುತ್ತಾರೋ , ಸಿಗಬೇಕಾದ ಸವಲತ್ತುಗಳಿಗೆ ಅಡೆತಡೆ ಮಾಡುತ್ತಾರೋ  ಎನ್ನುವ ಆತಂಕಗಳೂ ಸಹ ಕೆವಾರು ಕಲಾವಿದರ ಕೈ ಕಟ್ಟಿಹಾಕಿರುತ್ತವೆ. ಕಲಾವಿದರ ಮೇಲಾಗುವ ಶೋಷಣೆ, ರಂಗಭೂಮಿಯಲ್ಲಾಗುವ ಅನ್ಯಾಯಗಳನ್ನು ಬರೆದು ಮಾಧ್ಯಮಗಳ ಮೂಲಕ ಎಚ್ಚರಿಸುವ ಕೆಲಸವನ್ನು ಯಾರಾದರೂ ಮಾಡಲೇಬೇಕಿದೆ. ಅಕ್ಷರ ಮಾಧ್ಯಮದಲ್ಲಿ ದಾಖಲಿಸಬೇಕಿದೆ. ದಲ್ಲಾಳಿಗಳು ಸಾಗುವ ಲೂಟಿ ಮಾರ್ಗವನ್ನು ಬಂದ್ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಟ ರಸ್ತೆ ಉಬ್ಬುಗಳನ್ನಾದರೂ ಹಾಕಿ ಅವರ ವೇಗಕ್ಕೆ ಅಡೆತಡೆ ಹಾಕುವ ಕೆಲಸ ಆಗಬೇಕಿದೆ. ಅಂತಹ ಕೆಲಸವನ್ನು ನಾನು ರಂಗಬದ್ದತೆಯ ಭಾಗವಾಗಿ ಮಾಡುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದೇನೆ. ಅನ್ಯಾಯವನ್ನು ಎದುರಿಸುವಾಗ ಎದುರಾಗುವ ಎಲ್ಲಾ ರೀತಿಯ ಪ್ರತಿರೋಧವನ್ನು ಎದುರಿಸಲು ಸಿದ್ದನಾಗಿಯೇ ನಿಂತಿದ್ದೇನೆ.
        
ನನ್ನ ಬಗ್ಗೆ ನಾನೇ ಬರೆದುಕೊಳ್ಳುವುದು ಬಹಳಾ ಮುಜಗರದ ಸಂಗತಿ. ಆದರೇನು ಮಾಡಲಿ ವಿರೋಧಿಗಳು ಇಲ್ಲಸಲ್ಲದ ಸುಳ್ಳು ವದಂತಿಗಳನ್ನು ಹರಿಬಿಟ್ಟಾಗಲೂ ಸತ್ಯ ಹೇಳದಿದ್ದರೆ ಸುಳ್ಳುಗಳೇ ಅಧಿಕೃತವಾಗುವ ಅಪಾಯಗಳಿವೆ. ಯಾರು ಅದೆಷ್ಟೇ ಕಿವಿಕಚ್ಚಿದರೂ ನನ್ನನ್ನು ಬಲ್ಲವರು ವದಂತಿಗಳನ್ನು ನಂಬಲಾರರು. ಆದರೆ ನನ್ನ ಬದುಕು ಹಾಗೂ ಬದ್ದತೆ ಬಗ್ಗೆ ಗೊತ್ತಿಲ್ಲದವರು ತಪ್ಪು ಮಾಹಿತಿಗಳನ್ನೇ ನಿಜವೆಂದು ನಂಬುವ ಸಾಧ್ಯತೆಗಳಿವೆಯಾದ್ದರಿಂದಲೇ ಈ ಆತ್ಮನಿವೇದನೆ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಯಿತು. ಯಾರಿಗೇ ಆಗಲಿ ನನ್ನ ಕುರಿತಾಗಲೀ ಇಲ್ಲವೇ ನನ್ನ ಬರಹದ ಬಗ್ಗೆಯಾಗಲೀ ಸಂದೇಹಗಳಿದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. (98440 25119). ರಂಗಭೂಮಿ ಒಳಿತಿಗಾಗಿ, ಕಲೆಗಾಗಿ ದುಡಿಯುವ ತುಡಿಯುವ ಜೀವಗಳ ಜೊತೆಗೆ ನಾನು ಸದಾ ಒಡನಾಡಿಯಾಗಿ ನಿಲ್ಲುತ್ತೇನೆ. ರಂಗಭೂಮಿಯನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧಿಸ ಬಯಸುವ ರಂಗದ್ರೋಹಿಗಳ ವಿರುದ್ಧವಾಗಿ ಶತಾಯಗತಾಯ ನನ್ನ ಮಿತಿಯೊಳಗೆ ಪ್ರತಿಭಟಿಸುತ್ತೇನೆಂದು ನಾನು ಆರಾಧಿಸುವ ರಂಗಭೂಮಿಯ ಮೇಲೆ ಪ್ರಮಾಣ ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿರುವವರು, ಬೇರೆಯವರ ಲೋಪದೋಷಗಳ ಬಗ್ಗೆ ಟೀಕೆ ಟಿಪ್ಪಣಿ ವಿಡಂಬನೆಗಳನ್ನು ಬರೆಯುವವರು ಪಾರದರ್ಶಕವಾಗಿರಬೇಕೆಂಬುದು ನನ್ನ ಇಚ್ಚೆ. ಅದನ್ನೇ ಇಲ್ಲಿವರೆಗೂ ರೂಢಿಸಿಕೊಂಡು ಬಂದಿದ್ದೇನೆ. ಅವಕಾಶವಾದಿ ಆಗುವಂತಹ ಅವಕಾಶಗಳನ್ನೆಲ್ಲಾ ನಿರಾಕರಿಸಿದ್ದೇನೆ. ರಂಗನಿಷ್ಟೆ ಹಾಗೂ ಸಾಮಾಜಿಕ ಬದ್ದತೆಯನ್ನು ಬದುಕಾಗಿಸಿಕೊಂಡಿದ್ದೇನೆ. ರಂಗಭೂಮಿಯ ಏಳಿಗೆಗಾಗಿ ನನ್ನ ಕೊಡುಗೆಯನ್ನು ಕೊಡಲು ಸೂಕ್ತ ಅವಕಾಶಗಳಿದ್ದರೆ ಅವುಗಳನ್ನೂ ಸಹ ಬಳಸಿಕೊಂಡು ರಂಗಬದ್ಧತೆಯಿಂದ ನಿಭಾಯಿಸಲು ಪ್ರಯತ್ನಿಸುತ್ತೇನೆಂದು ಮಾತುಕೊಡುತ್ತೇನೆ. ಈ ಆತ್ಮನಿವೇದನೆ ಅತಿ ಎನಿಸಿದರೆ, ಮಿತಿಮೀರಿದ್ದರೆ ಕ್ಷಮೆಯಿರಲಿ. ರಂಗಬದ್ದತೆ ಇರುವವರ ಹಾರೈಕೆಗಳು ಸದಾ ನನ್ನ ಜೊತೆಗಿರಲಿ.

                                                                                 -ಶಶಿಕಾಂತ ಯಡಹಳ್ಳಿ



ಬುಧವಾರ, ಸೆಪ್ಟೆಂಬರ್ 28, 2016

ರಂಗಾಯಣಕೆ ಲಾಭಿ ಶುರು; ಉತ್ತರಾಧಿಕಾರಿ ಯಾರು?

ರಂಗಾಯಣದ  ಉತ್ತರಾಧಿಕಾರಿ ಯಾರು?  ಹೇಗಿರಬೇಕು?



ಆಧುನಿಕ ಕನ್ನಡ ರಂಗಭೂಮಿಯಲ್ಲಿ ಸರಕಾರಿ ರೆಪರ್ಟರಿಯಾದ ರಂಗಾಯಣಕ್ಕೆ ತನ್ನದೇ ಆದ ಮಹತ್ವ ಇದೆ. 1989 ರಲ್ಲಿ ಬಿ.ವಿ.ಕಾರಂತರ ಪರಿಕಲ್ಪನೆಯಲ್ಲಿ ಮೈಸೂರಿನಲ್ಲಿ ಹುಟ್ಟಿ ಕರ್ನಾಟಕದಾದ್ಯಂತ ಬೆಳೆದು ಬಂದ ರಂಗಾಯಣವು ಕಾರಂತರ ನಂತರ ಹಲವಾರು ಏಳುಬೀಳುಗಳನ್ನು ಕಂಡಿದ್ದು ಇನ್ನೂ ಬದುಕಿ ರಂಗತಂಡವಾಗಿ ಉಸಿರಾಡುತ್ತಿದೆ. ಕಾರಂತರ ಆಶಯದಂತೆ ಕೇವಲ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ರಂಗಾಯಣವನ್ನು ಕರ್ನಾಟಕದ ಮೂರು ಪ್ರಮುಖ ಪ್ರಾಂತ್ಯಗಳಿಗೆ 2011 ರಲ್ಲಿ ವಿಸ್ತರಿಸಲಾಯಿತು. ಧಾರವಾಡ, ಶಿವಮೊಗ್ಗ ಹಾಗೂ ಕಲಬುರುಗಿಗಳಲ್ಲಿ ತಲಾ ಒಂದೊಂದು ರಂಗಾಯಣವನ್ನು ಆರಂಭಿಸಲಾಯಿತು. ಆದರೆ ಶಿವಮೊಗ್ಗ ಹಾಗೂ ಕಲಬುರಗಿ ರಂಗಾಯಣಗಳು ನಾಟಕ ಚಟುವಟಿಕೆಗಳಿಗಿಂತಾ ಆರಂಭದಿಂದಲೂ ಅಧಿಕಾರಿಗಳ ಅಸಹಕಾರ, ನಿರ್ದೇಶಕರುಗಳ ಅಹಂಕಾರ ಹಾಗೂ ಕಲಾವಿದರ ಒಳಜಗಳಗಳಿಂದಾಗಿ ಸುದ್ದಿಯಾದವು. ಆರ್ಥಿಕ ಅಶಿಸ್ತು ಹಾಗೂ ದುರಹಂಕಾರದ ವರ್ತನೆಯಿಂದಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಇಕ್ಬಾಲ್ ಅಹಮದ್‌ರವರನ್ನೂ ಹಾಗೂ ಜಾತಿನಿಂದನೆ, ಗುಂಪುಗಾರಿಕೆ ಮತ್ತು ಕಲಾವಿದೆಯರ ಮೇಲೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಕಲಬುರಗಿ ರಂಗಾಯಣದ ನಿರ್ದೇಶಕ ಪ್ರೊ.ಆರ್.ಕೆ.ಹುಡಗಿಯವರನ್ನು 2016 ಜುಲೈ 26 ರಂದು ಸರಕಾರ ವಜಾಗೊಳಿಸಿತು. ಜೊತೆಗೆ ಕಲಬುರುಗಿ ರಂಗಾಯಣದ ಕಲಾವಿದರನ್ನೂ ಸಹ ಮನೆಗೆ ಕಳುಹಿಸಿತು. ಈಗ ಈ ಎರಡೂ ರಂಗಾಯಣಗಳ ನಿರ್ದೇಶಕರ ಹುದ್ದೆ ಹಾಗೂ ಕಲಾವಿದರುಗಳ ಜಾಗ ಖಾಲಿಯಿದ್ದು ಸರಕಾರ ಈ ರಂಗಾಯಣದ ಸಹವಾಸವೇ ಬೇಡವೆಂದು ಸುಮ್ಮನಾಗಿದೆ.


ಜೊತೆಗೆ ಈಗ ಮೈಸೂರು ರಂಗಾಯಣದ ಹಾಲಿ ನಿರ್ದೇಶಕರಾದ ಹೆಚ್.ಜನಾರ್ಧನ್‌ರವರ ಅಧಿಕಾರವಧಿ ಸೆಪ್ಟಂಬರ್ 30ಕ್ಕೆ ಕೊನೆಗೊಳ್ಳುತ್ತದೆ. ಈಗಾಗಲೇ ರಾಜ್ಯಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಲಿ ನಿರ್ದೇಶಕ ದಯಾನಂದರವರಿಗೆ ಸೆ.೩೦ರಿಂದ ರಂಗಾಯಣದ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಕಲಬುರುಗಿ ರಂಗಾಯಣದ ಹೊಣೆಗಾರಿಕೆಯನ್ನು ಸಂಸ್ಕೃತಿ ಇಲಾಖೆಯ ಜಂಟಿನಿರ್ದೇಶಕ ಕೆ.ಹೆಚ್.ಚೆನ್ನೂರರವರಿಗೆ ಹಾಗು ಶಿವಮೊಗ್ಗ ರಂಗಾಯಣದ ಜವಾಬ್ದಾರಿಂiiನ್ನು ಇಲಾಖೆಯ ಜೆಡಿ ಬಲವಂತರಾವ್ ಪಾಟೀಲರವರಿಗೆ ವಹಿಸಿ ಆದೇಶಿಸಲಾಗಿದೆ. ಅಂದರೆ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂಬುದೇ ಇದರ ಒಳಾರ್ಥ. ನಾಲ್ಕು ರಂಗಾಯಣಗಳಲ್ಲಿ ಖಾಲಿ ಇರುವ ಮೂರು ನಿರ್ದೇಶಕರ ಹುದ್ದೆಗಳಿಗೆ ಅರ್ಹರನ್ನು ಸರಕಾರ ಆದಷ್ಟು ಬೇಗ ಆಯ್ಕೆ ಮಾಡುವುದಂತೂ ಅನುಮಾನ. ಆಡಳಿತಾಧಿಕಾರಿಗಳ ಮೂಲಕವೇ ರಂಗಾಯಣವನ್ನು ಮುನ್ನಡೆಸಿ ಆದಷ್ಟು ದಿನಗಳ ಕಾಲ ನಿರ್ದೇಶಕರ ಆಯ್ಕೆಯನ್ನು ಮುಂದೆ ತಳ್ಳೋಣ ಎನ್ನುವ ವಿಳಂಬ ಧೋರಣೆಯನ್ನು ಸರಕಾರ ಅನುಸರಿಸುವುದು ನಿಚ್ಚಳವಾಗಿದೆ.

ಯಾಕೆ ರಂಗಾಯಣಕ್ಕೆ ನಿರ್ದೇಶಕರ ಆಯ್ಕೆ ಹೀಗೆ ವಿಳಂಬಮಾಡಲಾಗುತ್ತಿದೆ. ಶಿವಮೊಗ್ಗ ಹಾಗೂ ಕಲಬುರುಗಿ ರಂಗಾಯಣಗಳ ನಿರ್ದೇಶಕರ ಹುದ್ದೆ ಖಾಲಿಯಾಗಿ ಎರಡು ತಿಂಗಳಾದರೂ ಇನ್ನೂ ನಿರ್ದೇಶಕರನ್ನು ಆಯ್ಕೆ ಯಾಕೆ ಮಾಡಿಲ್ಲ? ಯಾಕೆಂದರೆ ನಮ್ಮ ಸಂಸ್ಕೃತಿ ಇಲಾಖೆಗೆ ಹಾಗೂ ರಂಗಸಮಾಜಕ್ಕೆ ಇನ್ನೂ ಅರ್ಹ ಅಭ್ಯರ್ಥಿಗಳೇ ಸಿಕ್ಕುತ್ತಿಲ್ಲ. ಕೆಲವರು ಆಕಾಂಕ್ಷಿಗಳಾಗಿದ್ದರೂ ಬೆಂಗಳೂರು ಬಿಟ್ಟು ಹೋಗಿ ದೂರದ ರಂಗಾಯಣ ಮುನ್ನಡೆಸಲು ಇಚ್ಚಿಸುತ್ತಿಲ್ಲ. ಇಂತವರ ಬೇರುಗಳು ಬೆಂಗಳೂರಲ್ಲಿ ಆಳವಾಗಿ ಬೇರೂರಿವೆ. ಅವರ ಏನೇನೋ ರಂಗವ್ಯವಹಾರಗಳು  ಬೆಂಗಳೂರಲ್ಲಿವೆ. ಇನ್ನು ಕೆಲವರು ಹೋಗಲು ಸಿದ್ದರಾದರೂ ಅದು ರಂಗಸಮಾಜದವರಿಗೆ ಒಪ್ಪಿಗೆ ಆಗುತ್ತಿಲ್ಲ. ಕಳೆದ ಎರಡು ತಿಂಗಳಿಂದಲೂ ಖಾಲಿ ಇದ್ದ ಹುದ್ದೆಗಳಿಗೆ ನಿರ್ದೇಶಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ರಂಗಸಮಾಜದ ಒಂದಿಬ್ಬರು ಮುಂದಾಳುಗಳು ತಲೆ ಕೆರೆದುಕೊಳ್ಳುತ್ತಲೇ ಇದ್ದಾರಾದರೂ ಸೂಕ್ತ ವ್ಯಕ್ತಿಯನ್ನು ಹುಡುಕಲು ಸಾಧ್ಯವಾಗಿಲ್ಲ.  ಯಾಕೆಂದರೆ ಈಗಾಗಲೇ ಇದೇ ರಂಗಸಮಾಜದ ದೊಡ್ಡದ್ವನಿಯ ಸದಸ್ಯರುಗಳು ಈ ಹಿಂದೆ ಇಕ್ಬಾಲ್ ಹಾಗೂ ಹುಡುಗಿಯವರನ್ನು ಆಯ್ಕೆ ಮಾಡಿ ಸಾಕಷ್ಟು ಮುಖಬಂಗಕ್ಕೆ ಈಡಾಗಿದ್ದಾರೆ. ಈ  ಇಬ್ಬರ ಹೆಸರುಗಳನ್ನು ಪ್ರಸ್ತಾಪಿಸಿ ಆಯ್ಕೆಯಾಗುವಂತೆ ಮಾಡಿದವರ ಮೇಲೆಯೇ ಅಸಮರ್ಥರಿಗೆ ಮಣೆ ಹಾಕಿದ ಆರೋಪ ಬಂದಿದೆ. ಹೀಗಾಗಿ ಈ ಸಲವೂ ಆಯ್ಕೆಯಲ್ಲಿ ಯಡವಟ್ಟಾದರೆ ಇರುವ ಮಾನಮರ್ಯಾದೆಯೂ ಹೋಗುತ್ತದೆಂಬ ಭಯ ರಂಗಸಮಾಜದ ಸದಸ್ಯರನ್ನು ಕಾಡುತ್ತಿದೆ. ಹೀಗಾಗಿ ಯಾರೂ ಯಾರ ಹೆಸರನ್ನೂ ಸೂಚಿಸಲು ಮುಂದೆ ಬರುತ್ತಿಲ್ಲ. ಯಾರಾದರೂ ಯಾಕೆಂದು ಕೇಳಿದರೆ ನೀವೇ ಅರ್ಹ ವ್ಯಕ್ತಿಗಳ ಹೆಸರನ್ನು ಸೂಚಿಸಿ ಎನ್ನವ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಆ ಎರಡೂ ರಂಗಾಯಣಕ್ಕೆ ಮುಖ್ಯಸ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನೆನಗುದಿಗೆ ಬಿದ್ದಿದೆ. ಸರಕಾರವನ್ನು ಎಚ್ಚರಿಸಬೇಕಾದ ರಂಗಸಮಾಜ ನಿಷ್ಕ್ರೀಯವಾಗಿ ಮಲಗಿದೆ.

ಆದರೆ... ಮೈಸೂರು ರಂಗಾಯಣದ ವಿಷಯ ಹಾಗಲ್ಲ. ಬೆಂಗಳೂರಿಗೆ ಹತ್ತಿರವಿರುವುದರಿಂದ ಬೆಂಗಳೂರಿನ ತಮ್ಮ ವ್ಯವಹಾರಗಳನ್ನು ನೋಡಿಕೊಂಡೂ ಮೈಸೂರು ರಂಗಾಯಣವನ್ನೂ ನಿಭಾಯಿಸುವ ಆಸೆಯಿಂದ ಇನ್ನೂ ಹಾಲಿ ನಿರ್ದೇಶಕರುಗಳ ಅವಧಿ ಇರುವಾಗಲೇ ನಿರ್ದೇಶಕರಾಗಲು ಲಾಭಿ  ಈಗಾಗಲೇ ಶುರುವಾಗಿದೆ. ಶಿವಮೊಗ್ಗ ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕ ಹುದ್ದೆಗೆ ಇಲ್ಲದ ಕಾಂಪಿಟೇಶನ್ ಮೈಸೂರು ರಂಗಾಯಣಕ್ಕೆ ಶುರುವಾಗಿದೆ. ಮೈಸೂರು ರಂಗಾಯಣ ಈಗಾಗಲೇ ಎಸ್ಟಾಬ್ಲಿಷ್ ಆಗಿದ್ದು ನಿರ್ದೇಶಕರಾದವರಿಗೆ ಅಲ್ಲಿ ಹೆಚ್ಚಿನ ಕೆಲಸವಿಲ್ಲವಾಗಿದ್ದರಿಂದ ಹಾಗೂ ಸರಕಾರಿ ಅನುದಾನ ಬೇಕಾದಷ್ಟಿರುವುದರಿಂದ ಮತ್ತು ಬೆಂಗಳೂರಿನ ಪಕ್ಕದಲ್ಲಿರುವುದರಿಂದ ನಿರ್ದೇಶಕರಾಗಲು ತಾಮುಂದು ನೀಮುಂದು ಎನ್ನುತ್ತಿದ್ದಾರೆ.


ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಲು ಪ್ರಮುಖ ಪೈಪೋಟಿ ಇರುವುದು ನಾಗಾಭರಣ ಹಾಗೂ ಕಪ್ಪಣ್ಣ ಈ ಇಬ್ಬರ ನಡುವೆ. ಒಂದು ಕಾಲದ ಗಳಸ್ಯ ಕಂಟಸ್ಯ ಗೆಳೆಯರಾದ ಈ ರಂಗೋಪಜೀವಿಗಳು ಈಗ ರಂಗಾಯಣದ ನಿರ್ದೇಶಕರಾಗಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ನಾಗಾಭರಣರವರು ಈಗಾಗಲೇ ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಹಾಗೂ ಕಳೆದ ಬಾರಿ ಎಂಪಿ ಚುಣಾವಣೆಯಲ್ಲಿ ಬಿಜೆಪಿ ಪಕ್ಷದ ಅನಂತಕುಮಾರ ಪರವಾಗಿ ಪ್ರಚಾರಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಹಾಗೂ ತಮ್ಮ ಪಕ್ಷನಿಷ್ಟೆಯಿಂದಾಗಿ ಅಕಾಡೆಮಿ ಅಧ್ಯಕ್ಷತೆಯ ಫಲಾನುಭವಿಗಳೂ ಆದರು. ಯಾವಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದಿತೋ  ಆಗ ರಾಜಕೀಯದಿಂದ ನಿರ್ಲಪ್ತರಾದರು. ಈಗ ಕಾಂಗ್ರೆಸ್ ಸರಕಾರದಲ್ಲೂ ಸಹ ತಮ್ಮ ಅಳಿದುಳಿದ ವರ್ಚಸ್ಸನ್ನು ಬಳಸಿ ಮೈಸೂರು ರಂಗಾಯಣದ ನಿರ್ದೇಶಕರಾಗಲು ಪ್ರಯತ್ನಿಸುತ್ತಿದ್ದಾರೆ. ಹಾಗೂ ಈ ನಾಗಾಭರಣರಂತವರು ಪಕ್ಷ ನಿಷ್ಠೆಗಿಂತಾ ಅಧಿಕಾರದ ನಿಷ್ಟೆ ದೊಡ್ಡದು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ರಾಜಕಾರಣವನ್ನೂ ಸಹ ತಮ್ಮ ಅಧಿಕಾರದ ಮೆಟ್ಟಲುಗಳನ್ನಾಗಿ ಮಾಡಿಕೊಳ್ಳಲು ಸದಾ ಹವಣಿಸುತ್ತಿದ್ದಾರೆ. ಬಿ.ಜಯಶ್ರೀಯವರು ರಂಗಾಯಣದ ನಿರ್ದೇಶಕರಾದಾಗ ಮೈಸೂರು ರಂಗಾಯಣದ ಜೊತೆಗೆ ತುಂಬಾನೇ ಒಡನಾಟ ಇಟ್ಟುಕೊಂಡಿದ್ದ ನಾಗಾಭರಣರವರು ಅಲ್ಲಿರುವ ಒಂದಿಬ್ಬರು ಕಲಾವಿದರುಗಳ ನಿಷ್ಟೆಯನ್ನು ತಮ್ಮ ಪರವಾಗಿಸಿಕೊಂಡಿದ್ದಾರೆ. ರಂಗಾಯಣದ ಒಳಗಿಂದಲೇ ನಾಗಾಭರಣವರ ಕುರಿತು ಒಳಒತ್ತಡ ತರುವ ಪ್ರಯತ್ನವೂ ಸಾಗಿದೆ. ಆದರೆ.. ಇವರ ಹಿಂದಿನ ಬಿಜೆಪಿ ನಿಷ್ಟೆ ಇವರ ಆಸೆಗೆ ಅಡ್ಡಗಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಪ್ರಯತ್ನವಂತೂ ಚಾಲ್ತಿಯಲ್ಲಿದೆ.

ಹಾಗೆಯೇ ಸಧ್ಯಕ್ಕೆ ಅಧಿಕೃತ ಅಧಿಕಾರವಿಲ್ಲದೇ ನಿರುದ್ಯೋಗಿಯಾಗಿರುವ ಕಲಾರತ್ನ ಕಪ್ಪಣ್ಣನವರೂ ಸಹ ಒಂದು ಕೈ ನೋಡೇ ಬಿಡೋಣವೆಂದು ಸಿದ್ದರಾಗಿದ್ದಾರೆ. ಕಪ್ಪಣ್ಣನವರಂತೂ ಎಂದೂ ಯಾವುದೇ ಪಕ್ಷಕ್ಕಾಗಲೀ  ಸಿದ್ದಾಂತಕ್ಕಾಗಲೀ ಬದ್ದರಾದವರಂತೂ ಅಲ್ಲವೇ ಅಲ್ಲ. ಯಾವ ಸರಕಾರ ಆಡಳಿತದಲ್ಲಿರುತ್ತದೆ ಆ ಸರಕಾರದ ಪರ ನಿಲುವನ್ನು ಹೊಂದಿರುವ ಪಕ್ಕಾ ರಂಗರಾಜಕಾರಣಿ. ಅವರಿಗೆ ಮುಖ್ಯವಾಗುವುದು ರಂಗನಿಷ್ಟೆಯೂ ಅಲ್ಲಾ, ಪಕ್ಷ ಬದ್ದತೆಯೂ ಅಲ್ಲಾ. ಕೇವಲ ಅಧಿಕಾರ, ಪದವಿ, ಪ್ರಶಸ್ತಿ ಹಾಗೂ ಇಲಾಖೆಯ ಗುತ್ತಿಗೆಗಳು ಮಾತ್ರ. ನಾಟಕ ಅಕಾಡೆಮಿಯ ಅಧ್ಯಕ್ಷರಾಗಲು ವಾರ್ತಾ ಇಲಾಖೆಯ ನೌಕರಿಗೆ ರಾಜೀನಾಮೆ ಕೊಟ್ಟು ಬಂದವರು. ಬಿಜೆಪಿ ಸರಕಾರ ಬಂದಾಗ ಕಾಂಗ್ರೆಸ್ ಸರಕಾರದಲ್ಲಿ ಆಯ್ಕೆಯಾದ ಅಕಾಡೆಮಿ ಅಧ್ಯಕ್ಷರೆಲ್ಲಾ ರಾಜೀನಾಮೆ ಕೊಡಬೇಕು ಎನ್ನುವ ಕೂಗೆದ್ದಾಗ ತಮ್ಮ ಖುರ್ಚಿಗೆ ಗಟ್ಟಿಯಾಗಿ ಅಂಟಿಕೊಂಡವರು. ಯಾರು ಏನೇ ಹೇಳಲಿ ಅವರ ಅಧಿಕಾರ ದಾಹ, ಪ್ರಶಸ್ತಿ ಮೋಹ ಹಾಗೂ ರಂಗವ್ಯವಹಾರದ ಕುರಿತ ಇರುವ ನಿಷ್ಟೆಯನ್ನು ಮೆಚ್ಚಿಕೊಳ್ಳಲೇ ಬೇಕು. ಸರಕಾರೀ ವ್ಯವಸ್ಥೆಯೊಳಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲ್ಲಿಯಾದರೂ ಅವಕಾಶ ಇದ್ದರೆ ಅಲ್ಲಿ ಕಪ್ಪಣ್ಣ ಮೊದಲಿಗರಾಗಿರುತ್ತಾರೆಂದೇ ಅರ್ಥ. ಕಲಾಕ್ಷೇತ್ರ-50 ನೆನಪಿನೋಕಳಿ ಕಾರ್ಯಕ್ರಮದ ಉದ್ಘಾಟನೆಗೆ ಐನೂರು ಜನ ಕಲಾವಿದರನ್ನು ಕರೆಸಿ ಉಮಾಶ್ರೀಯವರ ಮೌಖಿಕ ಆದೇಶದ ಮೇರೆಗೆ ಕಾರ್ಯಕ್ರಮ ರದ್ದು ಮಾಡಿ ಅವಮಾನಕ್ಕೀಡಾದ ಕಪ್ಪಣ್ಣರವರು ಉಮಾಶ್ರೀ ಹೇಳಿದ ಸುಳ್ಳನ್ನೇ ಪತ್ರಿಕೆಯವರ ಮುಂದೆ ಹೇಳಿದರೇ ಹೊರತು ಇರುವ ಸತ್ಯವನ್ನಲ್ಲ. ಅವಮಾನ ಸಹಿಸಿಕೊಂಡು ಯಾಕೆ ಅಲ್ಲಿದ್ದೀರಿ. ಕಮಿಟಿ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟು  ಹೊರಬರಬೇಕಲ್ಲವೇ ಎಂದು ಕಪ್ಪಣ್ಣನವರನ್ನು ಕೇಳಿದಾಗ ನಾನು ಹೊರಗೆ ಬಂದರೆ ಬೇರೆಯೊಬ್ಬರು ಅಲ್ಲಿ  ಬಂದು ಕುಳಿತುಕೊಳ್ಳುತ್ತಾರೆ, ಅದಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳುವ ಮೂಲಕ ತಮ್ಮ ಅಧಿಕಾರದ ನಿಷ್ಟೆಯನ್ನು ಸಾಬೀತುಮಾಡಿದರು. ಕಲಾವಿದರಲ್ಲದ, ನಿರ್ದೇಶಕರಲ್ಲದ ರಂಗರಾಜಕಾರಣಿ ಕಪ್ಪಣ್ಣನವರು ರಂಗಾಯಣದ ನಿರ್ದೇಶಕರಾಗಲು ಅದ್ಯಾವ ಮಾನದಂಡ ಇಟ್ಟುಕೊಂಡು ಆಕಾಂಕ್ಷಿಯಾಗಿದ್ದಾರೋ ಗೊತ್ತಿಲ್ಲ. ಆದರೂ ಪ್ರಯತ್ನವಂತೂ ನಿಂತಿಲ್ಲ.     

ಇವರಿಬ್ಬರ ನಡುವೆ ಗೋಪಾಲಕೃಷ್ಣ ನಾಯರಿ ಸಾಹೇಬರು ಸಹ ತಮ್ಮ ಹೆಸರನ್ನು ಚಲಾವಣೆಗೆ ಬಿಟ್ಟಿದ್ದಾರೆ. ಈ ಹಿಂದೆ ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಲು ನಾಯರಿ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಅದು ಆಗದೇ ಇದ್ದಾಗ ಕೋರ್ಟಿಗೂ ಹೋಗಿ ಸೋತಿದ್ದರು. ಈಗ ಮತ್ತೆ ಮೈಸೂರು ರಂಗಾಯಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಮೈಸೂರು ರಂಗಾಯಣಕ್ಕೆ ಇಲ್ಲಿವರೆಗೂ ನಿರ್ದೇಶಕರಾದವರಲ್ಲಿ ಬಿ.ವಿ.ರಾಜಾರಾಂರವರನ್ನು ಹೊರತು ಪಡಿಸಿ ಎಲ್ಲರೂ ಎನ್ ಎಸ್ ಡಿ ಇಂದ ಕಲಿತುಬಂದವರೇ ಆಗಿದ್ದರು. ಕಾರಂತರಿಂದ ಮೊದಲ್ಗೊಂಡು ಪ್ರಸನ್ನ, ಬಸವಲಿಂಗಯ್ಯ, ಜಂಬೆ, ಜಯಶ್ರೀ ಹಾಗೂ ಜನ್ನಿ ಈ ಎಲ್ಲರೂ ಸಹ ರಾಷ್ಟ್ರೀಯ ರಂಗಶಾಲೆಯ ಪ್ರೊಡಕ್ಟ್ ಆಗಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಆರೆಸ್ಸೆಸ್ಸ ಕಾರ್ಯಕರ್ತರಾದ ಬಿ.ವಿ.ರಾಜಾರಾಂರವರು ಅದು ಹೇಗೋ ಆರೆಸ್ಸೆಸ್ಸ ಪ್ರಮುಖ ಸಂತೋಷಜಿ ಯವರ ರೆಕಮೆಂಡೇಶನ್ ಮೇಲೆ ರಂಗಾಯಣಕ್ಕೆ ನಿರ್ದೇಶಕರಾಗಿದ್ದರೂ ತದನಂತರ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ಎನ್ ಎಸ್ ಡಿ ಪದವಿಯ ಕೃಪಾಕಟಾಕ್ಷ ಹಾಗೂ ಹಿರಿಯನ ಮತ್ತು ಜಾತಿಯ ಆಧಾರದಲ್ಲಿ ತಾವು ಮೈಸೂರು ರಂಗಾಯಣದ ನಿರ್ದೇಶಕರಾಗಲು ಅರ್ಹತೆ ಇದೆ ಎಂದು ಗೋಪಾಲಕೃಷ್ಣ ನಾಯರಿಯವರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ನಾಯರಿಯವರಿಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅನುದಾನ ಸಮಿತಿಯ ಸದಸ್ಯರ ಗ್ಯಾಂಗ್ ಸಪೋರ್ಟಿಗೆ ನಿಂತಿದೆ. ನಾಯರಿಯವರ ಸಾಮರ್ಥ್ಯಕ್ಕಿಂತಲೂ ಅವರ ಸುತ್ತ ಇರುವ ಈ ಸರಕಾರಿ ಬೊಕ್ಕಸದ ಫಲಾನುಭವಿಗಳ ಸಂಘವೇ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಯಾಕೆಂದರೆ ಈ ಫಲಾನುಭವಿಗಳು ಪರ್ಸೆಂಟೇಸ್ ಫಿಕ್ಸ್ ಮಾಡಿ ಬಹುದೊಡ್ಡ ಮಟ್ಟದ ಲೂಟಿ ಮಾಡಿದ್ದನ್ನು ಕರ್ನಾಟಕದ ರಂಗಕರ್ಮಿಗಳು ಮರೆಯಲು ಸಾಧ್ಯವೇ ಇಲ್ಲ.

ಈ ಕಪ್ಪಣ್ಣ ಹಾಗೂ ನಾಗಾಭರಣ ಇಬ್ಬರನ್ನೂ ಸಚಿವೆ ಉಮಾಶ್ರೀಯವರು ಕಲಬುರಗಿ ಹಾಗೂ ಶಿವಮೊಗ್ಗದ ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿ ಅಲ್ಲಿಯೇ ಮೂರು ವರ್ಷ ಇದ್ದು ಆ ಪ್ರಾಂತೀಯ ರಂಗಾಯಣಗಳನ್ನು ಬೆಳೆಸಲು ಒತ್ತಾಯಿಸಿ ಅವಕಾಶ ಕೊಡಬೇಕು. ಇಂತಹುದೊಂದು ಆಪರ್ ಕೊಟ್ಟರೆ ಈ ರಂಗಾಯಣಗಳ ಸಹವಾಸವೇ ಬೇಡವೆಂದು ಈ ಇಬ್ಬರೂ ರೇಸ್‌ನಿಂದ ದೂರಾಗುವುದು ಖಚಿತ. ಯಾಕೆಂದರೆ ಇವರಿಗೆ ಬೆಂಗಳೂರಿನಲ್ಲಿರುವ ವ್ಯವಹಾರಗಳನ್ನು ಬಿಟ್ಟು ಹೋಗಿ ಶೂನ್ಯದಿಂದ ರಂಗಾಯಣವನ್ನು ಕಟ್ಟುವಂತಹ ವಯಸ್ಸಾಗಲೀ, ಮನಸ್ಸಾಗಲೀ ಇಲ್ಲವೇ ಇಲ್ಲ.


ಮೈಸೂರು ರಂಗಾಯಣಕ್ಕೆ ಈ ಸಲ ಹೊರಗಿನಿಂದ ಅಂದರೆ ಕನ್ನಡೇತರ ರಂಗನಿರ್ದೇಶಕರನ್ನು ಕರೆತಂದು ರಂಗಾಯಣದ ಹೊಣೆಗಾರಿಕೆ ವಹಿಸಿಕೊಡುವುದು ಸೂಕ್ತ.  ರಂಗಾಯಣದ ಒಳಿತಿಗಾಗಿ ಇದೊಂದು ಸಲ ಕನ್ನಡಿಗರು ಭಾಷಾಭಿಮಾನ ಪಕ್ಕಕ್ಕಿಟ್ಟು ರೆಪರ್ಟರಿ ಕಟ್ಟುವಲ್ಲಿ ಅನುಭವಸ್ತರಾದ ಹಾಗೂ ಈಗಾಗಲೇ ಅತ್ಯುತ್ತಮ ನಾಟಕಗಳನ್ನು ನಿರ್ದೇಶಿಸಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಂಗಕರ್ಮಿಯೊಬ್ಬರನ್ನು ಆಹ್ವಾನಿಸಿ ರಂಗಾಯಣದ ನಿರ್ದೇಶಕರನ್ನಾಗಿಸುವುದು ಸ್ವಾಗತಾರ್ಹ ಕ್ರಮ. ಕನ್ನಡಿಗರನ್ನು ಬಿಟ್ಟು ಬೇರೆಯವರನ್ನು ಸರಕಾರಿ ರಂಗರೆಪರ್ಟರಿಗೆ ಕರೆಸುವುದು ಕನ್ನಡವಿರೋಧಿತನ ಎನ್ನುವವರು ಗಮನಿಸಬೇಕಾದ ಒಂದು ಸತ್ಯವೇನೆಂದರೆ ನಮ್ಮ ಹೆಮ್ಮೆಯ ರಂಗನಿರ್ದೇಶಕ ಬಿ.ವಿ.ಕಾರಂತರನ್ನು ಮಧ್ಯಪ್ರದೇಶ ಸರಕಾರ ಭೂಪಾಲ ರಂಗಮಂಡಲ ರೆಪರ್ಟರಿಗೆ ನಿರ್ದೇಶಕರನ್ನಾಗಿ ನಿಯಮಿಸಿತ್ತು. ಅಲ್ಲಿ ನಿರ್ದೇಶಕರಾಗಿದ್ದಾಗ ಕಾರಂತರು ಕಟ್ಟಿಕೊಟ್ಟ ನಾಟಕಗಳನ್ನು ಇಡೀ ಭೂಪಾಲಿಗರಿಗೆ ಇಂದಿನವರೆಗೂ ಮರೆಯಲು ಸಾಧ್ಯವಾಗಿಲ್ಲ. ಈ ಸಲವಾದರೂ ಇಂತಹುದೊಂದು ಪ್ರಯೋಗಕ್ಕೆ ಸರಕಾರ ಮನಸ್ಸು ಮಾಡಬೇಕಿದೆ. ರಂಗಾಯಣದ ಹಿತಚಿಂತನೆಗಾಗಿಯೇ ಇರುವ ರಂಗಸಮಾಜದ ಸದಸ್ಯರುಗಳು ಈ ರೀತಿಯ ಪ್ರಪೋಸಲ್ ಅನ್ನು ಈ ಸಲ ಆಯ್ಕೆ ಸಭೆಯಲ್ಲಿ ಮಂಡಿಸುವ ಅಗತ್ಯವಿದೆ. ರಂಗಸಮಾಜದ ದುರಂತವೇನೆಂದರೆ ಮಂಡ್ಯರಮೇಶರವರನ್ನು ಹೊರತು ಪಡಿಸಿದರೆ ಅಲ್ಲಿ ಸಕ್ರೀಯ ರಂಗನಿರ್ದೇಶಕರು ಯಾರೂ ಇಲ್ಲವೇ ಇಲ್ಲ. ಅಲ್ಲಿರುವವರು ತಮ್ಮ ಅರಿವನ್ನು ವಿಸ್ತರಿಸಿಕೊಂಡು  ರಂಗಾಯಣದ ಒಳಿತಿಗಾಗಿ ಈ ಸಲ ಕನ್ನಡೇತರರಾದ ಸುಪ್ರಸಿದ್ದ ರಂಗಕರ್ಮಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ. ಸಚಿವೆ ಉಮಾಶ್ರೀಯವರಿಗೆ ಮನದಟ್ಟು ಮಾಡಬೇಕಿದೆ. ಮತ್ತದೇ ಕಪ್ಪಣ್ಣ, ನಾಗಾಭರಣ, ನಾಯರಿಗಳು ಬಂದು ಕೂತರೆ ಮೈಸೂರು ರಂಗಾಯಣ ಎನ್ನುವುದು ಈಗಿದ್ದಂತೆ ವೀಕೆಂಡ್ ಪ್ರದರ್ಶನದ ರಂಗತಂಡವಾಗಿಯೇ ಇರುತ್ತದೆ. ಅಂತರಾಷ್ಟ್ರೀಯ ಖ್ಯಾತಿಯ ರಂಗಕರ್ಮಿಗಳು ರಂಗಾಯಣದ ಜವಾಬ್ದಾರಿಯನ್ನು ವಹಿಸಿಕೊಂಡರೆ ಮೈಸೂರಿನ ವೀಕೆಂಡ್ ರಂಗಾಯಣವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚೆಚ್ಚು ವಿಭಿನ್ನವಾದ ನಾಟಕಗಳನ್ನು ಪ್ರದರ್ಶಿಸಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಬಹುದಾಗಿದೆ.


ಯಾರು ಏನೇ ಹೇಳಲಿ ಮೈಸೂರು ರಂಗಾಯಣ ಬಹಳಷ್ಟು ವರ್ಷಗಳಿಂದ ನಿಂತಲ್ಲೇ ನಿಂತಿದೆ. ಅದೇ ಹಳೆಯ ನಾಟಕಗಳ ರಿಪೀಟ್ ಶೋಗಳನ್ನೇ ಮಾಡುತ್ತಾ ಸ್ಟ್ಯಾಂಡ್ ಹಾಕಿ  ಸೈಕಲ್ ಹೊಡೆಯುತ್ತಿದೆ. ಅಲ್ಲಿರುವ ಕೆಲವು ಕಲಾವಿದರೂ ಸಹ ರಂಗಾಯಣದಲ್ಲಿ ಯಾಂತ್ರಿಕವಾಗಿ ಸರಕಾರಿ ನೌಕರರಂತೆ ಕೆಲಸಮಾಡುತ್ತಾ ತಮ್ಮ ಕ್ರಿಯಾಶೀಲತೆಯನ್ನು ಹೊರಗೆ ತೋರಿಸುತ್ತಿದ್ದಾರೆ. ಬದಲಾವಣೆ ಎನ್ನುವುದು ರಂಗಾಯಣಕ್ಕೆ ಬೇಕಾಗಿದೆ. ಅಂತಹ ಬದಲಾವಣೆಗೆ ಸರಕಾರ ಅವಕಾಶಮಾಡಿಕೊಡಬೇಕಿದೆ. ಇಲ್ಲವಾದರೆ ಸರಕಾರದ ಮೂಲಕ ರಂಗಾಯಣಕ್ಕೆ ಸಂದಾಯವಾಗುವ ಜನರ ಕೊಟ್ಯಾಂತರ ಹಣ ವ್ಯರ್ಥವಾಗುತ್ತದೆ. ಕಾರಂತರ ಮಹತ್ವಾಂಕಾಂಕ್ಷೆ ಮಣ್ಣು ಸೇರುತ್ತದೆ. ರಂಗಾಯಣ ಎನ್ನುವುದು ಕನ್ನಡಿಗರು ಸಾಕಿದ ಬಿಳಿಯಾನೆಯಾಗಿ ಸರಕಾರಕ್ಕೆ ಹೊರೆಯಾಗುತ್ತದೆ.

ಇದೇ ಮಾನದಂಡವನ್ನು ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣಗಳಿಗೂ ಅಪ್ಲೈ ಮಾಡುವುದು ಸೂಕ್ತ. ಈ ರಂಗಾಯಣಗಳನ್ನು ಮೊದಲಿನಿಂದ ಆರಂಭಿಸಿ ಕಟ್ಟಬೇಕಾಗಿದ್ದರಿಂದ ಅಲ್ಲಿಯ ಲೋಕಲ್ ರಂಗಕರ್ಮಿಗಳನ್ನು ಬಿಟ್ಟು ಬೇರೆ ಪ್ರಾಂತ್ಯದಿಂದ ರಂಗಬದ್ದತೆ ಇರುವ ರಂಗಕರ್ಮಿಯನ್ನು ಆಯ್ಕೆ ಮಾಡಿ ನಿರ್ದೇಶಕರನ್ನಾಗಿಸುವುದು ಸೂಕ್ತ. ಈಗಾಗಲೇ ಒಂದು ಸಲ ಸರಕಾರ ಆಯ್ಕೆ ಮಾಡಿ ಕೈಸುಟ್ಟುಕೊಂಡಿದೆ.  ಈಸಲ ಯಾರು ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಕಲಬುರಗಿ ಅಥವಾ ಶಿವಮೊಗ್ಗಕ್ಕೆ ಹೋಗಿ ಅಲ್ಲಿಯೇ ವಾಸ್ತವ್ಯ ಹೂಡಿ ರಂಗಾಯಣವನ್ನು ಸವಾಲಾಗಿ ಸ್ವೀಕರಿಸಿ ಬೆಳೆಸುತ್ತಾರೋ ಅಂತವರನ್ನು ನಿರ್ದೇಶಕರಾಗಿ ಆಯ್ಕೆ  ಮಾಡುವುದು ಒಳಿತು. ಲೋಕಲ್ ಇರುವವರನ್ನು ಆಯ್ಕೆ ಮಾಡಿದರೆ ಅಲ್ಲಿರುವ ಹಲವಾರು ರಂಗರಾಜಕೀಯಗಳ ಗೋಜಲಿನಲ್ಲಿ ಅವರಿಗೆ ಕೆಲಸ ಮಾಡಲು ಮುಕ್ತ ಅವಕಾಶಗಳೇ ಇರುವುದಿಲ್ಲ. 

ಹೊರಗಿನವರು ಸೂಕ್ತವಾಗಿಲ್ಲ ಎನ್ನುವುದಾದರೆ ಒಳಗಿನವರೇ ಇದ್ದಾರಲ್ಲ. ರಂಗಾಯಣದ ಕಲಾವಿದರುಗಳು. ಬಹುಷಃ ಮೈಸೂರು ರಂಗಾಯಣದ ಕಲಾವಿದರಷ್ಟು ಅನುಭವಿ ನಟರು ಕರ್ನಾಟಕದಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ. ಅವರಲ್ಲೇ ಯಾರನ್ನಾದರೂ ಆಸಕ್ತಿ ಇರುವವರನ್ನು ಶಿವಮೊಗ್ಗ ಹಾಗೂ ಕಲಬುರಗಿ ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಡೆಪ್ಯೂಟ್ ಮಾಡಿದರಾಯಿತು. ತಮ್ಮ ಎರಡೂವರೆ ದಶಕಗಳ ರಂಗಾಯಣದ  ಸುದೀರ್ಘ ಅನುಭವವನ್ನು ಪ್ರಾಂತೀಯ ರಂಗಾಯಣ ಕಟ್ಟುವಲ್ಲಿ ಬಳಸಿಕೊಳ್ಳಲಿ. ರಂಗಾಯಣದಲ್ಲಿರುವ ಪ್ರತಿಯೊಬ್ಬ ನಟ ನಟಿಯರ ಸಾಮರ್ಥ್ಯ ಬಲು ದೊಡ್ಡದು. ಆದರೆ ಅವರನ್ನು ಕೇವಲ ನಟನೆಗೆ ಮಾತ್ರ ಬಳಸಿಕೊಂಡು ಅವರಲ್ಲಿರುವ ಅಗಾದ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕಿದೆ. ನಟರಾಗಿ  ನಿರ್ದೇಶಕರಾಗಿ ವ್ಯವಸ್ಥಾಪಕರಾಗಿ ಇನ್ನೊಂದು ರಂಗಾಯಣ ಕಟ್ಟುವಲ್ಲಿ ಅವರ ಸೇವೆಯನ್ನೂ ಪಡೆಯುವುದು ಉತ್ತಮ. ಕೆಲವು ರಂಗಾಯಣಕ್ಕೆ ಮಾತ್ರ ಸೀಮಿತರಾಗಿದ್ದು ಅವರೂ ಸಹ ಹೊರಗಿನ ಜನರೊಂದಿಗೆ ಬೆರೆಯಲಿ.  ಸೇಪ್ ಜೋನಲ್ಲಿರುವ ಕಲಾವಿದರುಗಳಿಗೂ ರಂಗಸಂಘಟನೆಯ ಸುಖದುಃಖಗಳು ಅರ್ಥವಾಗಲಿ. ಕನಿಷ್ಟ ಒಂದೊಂದು ವರ್ಷಕ್ಕೆ ಒಬ್ಬೊಬ್ಬ ಕಲಾವಿದರನ್ನು ಒಂದೊಂದು ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿದರೆ ಅವರ ರಂಗಸಂಘಟನಾ ಸಾಮರ್ಥ್ಯ ರಂಗಭೂಮಿಯವರಿಗೂ ಗೊತ್ತಾಗಲಿ. ಒಂದು ತಾವು ಎಂತಹ ರಂಗಕೆಲಸಕ್ಕೂ ಸಲ್ಲುವವರು ಎಂದು ಅವರು ಸಾಬೀತುಪಡಿಸಲಿ ಇಲ್ಲವಾದರೆ ನಟನೆಯಷ್ಟೇ ನಮ್ಮ ಮಿತಿ ಎಂದು ಒಪ್ಪಿಕೊಳ್ಳಲಿ. ಸಚಿವೆ ಉಮಾಶ್ರೀಯವರು ರಂಗಸಮಾಜದ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಪ್ರಯೋಗ ಮಾಡಿದರೆ ಏನಾದರೂ ಒಂದಿಷ್ಟು ಸಕಾರಾತ್ಮಕ  ಬದಲಾವಣೆಗಳಾದರೂ ಆಗಬಹುದು. 

ಹಾಗಾಗಿ ಆರಂಭದ ಹಂತದಲ್ಲಿರುವ ಈ ಎರಡೂ ರಂಗಾಯಣಗಳಿಗೆ ಒಬ್ಬ ಪೂರ್ಣಾವಧಿ ಸಕ್ರೀಯ ನಿರ್ದೇಶಕರ ಅಗತ್ಯವಿದೆ. ನಾಟಕ ನಿರ್ದೇಶನದಲ್ಲಿ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಅನುಭವ ಇದ್ದವರನ್ನು ಆಯ್ಕೆಮಾಡಬೇಕಿದೆ. ಈ ದೃಷ್ಟಿಯಿಂದ ಮೈಸೂರಿನ ಗಂಗಾಧರಸ್ವಾಮಿಯವರು ಇಲ್ಲವೇ ಎನ್‌ಎಸ್‌ಡಿಯ ವಾಲ್ಟರ್ ಡಿಸೋಜಾರವರು ನಿರ್ದೇಶಕರಾಗಲು ಅರ್ಹರಾಗಿದ್ದಾರೆ. ಯಾಕೆಂದರೆ ಗಂಗಾಧರಸ್ವಾಮಿಯವರು ಮೈಸೂರು ರಂಗಾಯಣದಲ್ಲೇ ಪಳಗಿದವರು ಹಾಗೂ ಧಾರವಾಡ ರಂಗಾಯಣವನ್ನೂ ಸಹ ಆರಂಭಕಾಲದಲ್ಲಿ ಮುನ್ನಡೆಸಿದವರು. ಹಾಗೂ ಸ್ವತಃ ಹವಾರು ನಾಟಕಗಳನ್ನು ನಿರ್ದೇಶಿಸಿದವರು. ಅವರಿಗೆ ಕಲಾವಿದರನ್ನು ಹಾಗೂ ಅಧಿಕಾರಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ತಂತ್ರಗಳು ಗೊತ್ತಿವೆ. ಅದೇ ರೀತಿ ವಾಲ್ಟರ್ ಡಿಸೋಜಾರವರು ಬಿಇಎಂಎಲ್ ಕಾರ್ಖಾನೆಯಲ್ಲಿ  ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದು ನಿವೃತ್ತರಾದವರು.  ಹಾಗೂ ನಿರಂತರವಾಗಿ ನಾಟಕಗಳನ್ನು ನಿರ್ದೇಶಿಸುತ್ತಲೇ ಬಂದವರು. ಜೊತೆಗೆ ಎನ್‌ಎಸ್‌ಡಿ ಪದವೀಧರರಾದವರು. ಇವರಿಗೂ ಸಹ ಕಲಾವಿದರನ್ನು  ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಅಧಿಕಾರಿಶಾಹಿಗಳ ಜೊತೆಗೆ ಹೇಗೆ ವರ್ತಿಸಬೇಕು ಎನ್ನುವ ಗುಟ್ಟುಗಳು ಗೊತ್ತಿವೆ. ಹೀಗಾಗಿ ಈಗಲೂ ಕ್ರಿಯಾಶೀಲವಾಗಿರುವ ಹಾಗೂ ಯಾವಾಗಲೂ ವಾದವಿವಾದಗಳಿಂದ ದೂರವಿರುವ ಈ  ಇಬ್ಬರನ್ನೂ ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದಲ್ಲಿ ಈಗಾಗಲೆ ತಪ್ಪು  ವ್ಯಕ್ತಿಗಳ ಆಯ್ಕೆಯಿಂದಾದ ಅವಮಾನ ಮರೆತು ಸರಕಾರ ನೆಮ್ಮದಿಯಾಗಿರಬಹುದು. ಹಾಗೂ ರಂಗಾಯಣದಲ್ಲಿ ಒಂದಿಷ್ಟು ಸಂಚಲನ ಸೃಷ್ಟಿಯಾಗಬಹುದು.

ಈ ನಿಟ್ಟಿನಲ್ಲಿ ರಂಗಸಮಾಜದ ಸದಸ್ಯರುಗಳು ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮತ್ತು ಇಲಾಖೆಯ ಸಚಿವೆ ಉಮಾಶ್ರೀಯವರು ಆಲೋಚನೆ ಮಾಡಿ ಸೂಕ್ತ ನಿರ್ಧಾರವನ್ನು ಕೈಗೊಂಡು ರಂಗಾಯಣವನ್ನು ವಿವಾದಾತೀತವಾಗಿ ಬೆಳೆಸಲು ಗಟ್ಟಿ ನಿರ್ದಾರವನ್ನು ತೆಗೆದುಕೊಳ್ಳಬೇಕಿದೆ. ಈ ರಂಗಾಯಣಗಳು ಕೇವಲ ಲೋಕಲ್ ರಂಗತಂಡಗಳ ರೀತಿಯಲ್ಲಿ ನಾಟಕ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಬೇಕಿದೆ. ಹಲವಾರು ಕಲಾವಿದರುಗಳನ್ನು ಹುಟ್ಟಿಸಬೇಕಿದೆ. ಆಯಾ ಪ್ರಾಂತ್ಯಗಳಲ್ಲಿ ರಂಗಚಟುವಟಿಕೆಗಳ ಬದಲಾಗಿ ರಂಗಚಳುವಳಿಯನ್ನು ರೂಪಿಸಬೇಕಾಗಿದೆ. ಅಂತಹ ದೂರದೃಷ್ಟಿ, ಜಾಣ್ಮೆ ಹಾಗೂ ತಾಳ್ಮೆ  ಇರುವವರು ಈ ರಂಗಾಯಣಗಳ ಚುಕ್ಕಾಣಿ ಹಿಡಿಯಬೇಕಿದೆ. ಒಟ್ಟಿನ ಮೇಲೆ ರಂಗಾಯಣ ಎನ್ನುವುದು ದೇಶ ವಿದೇಶಗಳಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಬೇಕಿದೆ. ದೇಶದ ರಂಗಚರಿತ್ರೆಯಲ್ಲಿ ಮಾದರಿಯಾಗಬೇಕಿದೆ. ರಂಗಜಂಗಮ ಬಿ.ವಿ.ಕಾರಂತರ ಕನಸು ನನಸಾಗಬೇಕಿದೆ.

                                                                                           -ಶಶಿಕಾಂತ ಯಡಹಳ್ಳಿ



ಮಂಗಳವಾರ, ಸೆಪ್ಟೆಂಬರ್ 27, 2016

ನುಡಿದಂತೆ ನಡೆಯದ ಸಚಿವೆ ಉಮಾಶ್ರೀ ಮತ್ತು ದಲ್ಲಾಳಿ ರಾಜಕಾರಣ:



"ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟ ಹಾಕಲು ಪ್ರಯತ್ನಿಸಲಾಗಿದೆ. ಕಲಾವಿದರ ಸಂಭಾವನೆ ಹೆಚ್ಚಿಸಿ ಆರ್ಟಿಜಿಎಸ್ ಮೂಲಕ ಮಾಶಾಸನ ಪಾವತಿಸಲಾಗುತ್ತಿದೆ. ಕಡತಗಳು ಡಿಜಟಲೀಕರಣವಾಗಿದ್ದು ಅಕ್ರಮ ತಪ್ಪಿಸಲು -ಆಡಳಿತ ಜಾರಿಮಾಡಲಾಗಿದೆ. ಯಾರೂ ಶೋಷಣೆ ಮಾಡುವ ದಲ್ಲಾಳಿಗಳ ಜೊತೆ ಯಾವ ಕಾರಣಕ್ಕೂ ಕೈಜೋಡಿಸಬಾರದು" ಎನ್ನುವ ಹಳೆಯ ಮಾತುಗಳನ್ನೇ ಸಚಿವೆ ಉಮಾಶ್ರೀಯವರು 2016, ಸೆ.27 ರಂದು ಕೋಲಾರದಲ್ಲಿ ನಡೆದ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ರಿಪೀಟಿಸಿದ್ದಾರೆಕಳೆದ ಒಂದು ವರ್ಷದಿಂದ ಗಟ್ಟಿ ಮಾಡಿದ ನಾಟಕದ ಡೈಲಾಗಿನಂತೆ ಮೇಲಿನ ವಾಖ್ಯಗಳನ್ನು ಹೋದಲ್ಲಿ ಬಂದಲ್ಲಿ ಹೇಳುತ್ತಾ ಚಪ್ಪಾಳೆ ಗಿಟ್ಟಿಸುತ್ತಿರುವ ಉಮಾಶ್ರೀಯವರ ನುಡಿ ಮೆಚ್ಚಬಹುದಾದರೂ ನಡೆ ಮಾತ್ರ ತದ್ವಿರುದ್ದವಾಗಿದ್ದೊಂದು ವಿಪರ್ಯಾಸ.

ಯಾಕೆಂದರೆ 'ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟಹಾಕಲು ಪ್ರಯತ್ನಿಸಲಾಗುತ್ತಿದೆ' ಎಂದು ಹೇಳುವ ಸಚಿವೆಯವರು ಸಾಂಸ್ಕೃತಿಕ ದಲ್ಲಾಳಿಗಳಿಗೆ ಸರಕಾರದ ಪ್ರಾಜೆಕ್ಟಗಳ ಉಸ್ತುವಾರಿಯನ್ನು ಯಾಕೆ ವಹಿಸಿ ಕೊಟ್ಟಿದ್ದಾರೆ? ಸರಕಾರ ಆಚರಿಸುವ ಯಾವುದೇ ಮಹಾನುಭಾವರ ಜಯಂತಿಗಳಿರಲಿ, ಉತ್ಸವಗಳಿರಲಿ ಅದರ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವುದು ಇದೇ ಸಾಂಸ್ಕೃತಿಕ ಗುತ್ತಿಗೆದಾರರಲ್ಲವೆ? ಕಳೆದ ಮೂರು ವರ್ಷದಿಂದ ಕುಂಟುತ್ತ ಎಡವುತ್ತ ಸಾಗುತ್ತಿರುವ ರವೀಂದ್ರ ಕಲಾಕ್ಷೇತ್ರ- 50 ಎನ್ನುವ ಸರಕಾರದ 5 ಕೋಟಿ ರೂಪಾಯಿಗಳ ಪ್ರಾಜೆಕ್ಟಿಗೆ ಉಮಾಶ್ರೀಯವರ ಆದೇಶದಂತೆ ರಚಿತವಾದ ಕಮಿಟಿಯಲ್ಲಿ ಇರುವ ಅಧ್ಯಕ್ಷರಾದಿಯಾಗಿ ಸದಸ್ಯರುಗಳಲ್ಲಿ ಮುಕ್ಕಾಲು ಭಾಗ ಸಾಂಸ್ಕೃತಿಕ ಗುತ್ತಿಗೆದಾರರೇ ಇದ್ದಾರಲ್ಲಾ ಇದು ಉಮಾಶ್ರೀಯವರಿಗೆ ಗೊತ್ತಿಲ್ಲವೆ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎನ್ನುವ ಹುಲುಸಾದ ಹುಲ್ಲುಗಾವಲಿನಲ್ಲಿ ಕಾವಲುಗಾರರ ಸಹಯೋಗದಲ್ಲಿ ಮೇಯುತ್ತಿರುವ ಹಣದಾಹಿ ಹೋರಿ ಹಾಗೂ ಮುದಿ ಎತ್ತುಗಳಿಗಂತೂ ಕೊರತೆ ಇಲ್ಲ. ಇಲಾಖೆಯಲ್ಲಿರುವ ಅಧಿಕಾರಶಾಹಿಗಳಿಗೂ ಹಾಗೂ ಗುತ್ತಿಗೆದಾರರಿಗೂ ಅವಿನಾಭಾವ ಸಂಬಂಧವಿರುವುದು ರಹಸ್ಯವಾದುದೇನಲ್ಲ. ಇಲಾಖೆಯ ಯಾವುದೇ ಯೋಜನೆಗಳಿರಲಿ ಅವುಗಳ ಕಾಂಟ್ರ್ಯಾಕ್ಟಗಳು ಸಿಕ್ಕುವುದು ಮತ್ತಿದೇ ಸ್ಥಾಪಿತ ದಲ್ಲಾಳಿಗಳಿಗೆ. ಹಣ ಮಾಡುವುದನ್ನೇ ದಂದೆ ಮಾಡಿಕೊಂಡ ಪ್ರಭಾವಶಾಲಿ ದಲ್ಲಾಳಿಗಳು ಕಲಾವಿದರನ್ನು ಶೋಷಿಸುವುದರಲ್ಲಿ ಸಂದೇಹವೇ ಇಲ್ಲ. ದಲ್ಲಾಳಿಗಳ ಕೈಗೆ ಪ್ರಾಜೆಕ್ಟಗಳನ್ನು ಕೊಟ್ಟು "ಕಲಾವಿದರೆ  ಶೋಷಣೆ ಮಾಡುವ ದಲ್ಲಾಳಿಗಳ ಜೊತೆ ಕೈಜೋಡಿಸಬೇಡಿ" ಎಂದು ಉಮಾಶ್ರೀಯವರು ವೇದಿಕೆಯ ಮೇಲೆ ಅಬ್ಬರಿಸುವುದರಲ್ಲಿ ಅದ್ಯಾವ ನೈತಿಕತೆ ಇದೆ.

ಇಲಾಖೆಯ ಅಧಿಕಾರಿಗಳ ಜೊತೆಗೆ ಸಂಘರ್ಷಕ್ಕೆ ಇಳಿದ ಇಲ್ಲವೇ ಉಮಾಶ್ರೀಯವರಿಗೆ ಘೇರಾವ್ ಹಾಕಿದ ಕೆಲವರ ವಿರುದ್ದ ನಾಮಕಾವಸ್ತೆ ಕ್ರಮ ತೆಗೆದುಕೊಂಡಂತೆ ಮಾಡಿ "ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದೆ" ಎನ್ನುವುದು ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆಯಾಗಿದೆ. ಇಲ್ಲವೇ ಇಲಾಖೆಯ ಅಧಿಕಾರಿಗಳು ಸಚಿವೆಯ ದಿಕ್ಕು ತಪ್ಪಿಸುತ್ತಿದ್ದಾರೆಸತ್ಯ ಏನೆಂದರೆ ಯಾರ ಮೇಲೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆಯೊ ಅಂತವರೆಲ್ಲಾ ತುಂಡು ಗುತ್ತಿಗೆದಾರರು. ಆದರೆ ಅಂದಿನಿಂದ ಇಂದಿನವರೆಗೂ ಸರಕಾರ ಬದಲಾದಂತೆ ತಮ್ಮ ನಿಯತ್ತನ್ನೂ ಬದಲಾಯಿಸುವ ಮುಖ್ಯ ಗುತ್ತಿಗೆದಾರರೆ ಇಲಾಖೆಯ ಪ್ರಾಜೆಕ್ಟಗಳನ್ನು, ಪ್ರಾಯೋಜಿತ ಅನುದಾನಗಳನ್ನು ಹಾಗೂ ಸರ್ವ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಮಾನ್ಯ ಉಮಾಶ್ರೀಯವರೇ ಇಂತವರಿಗೆ ಯೋಜನೆಗಳ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದಾರೆ. ಇಲಾಖೆಗೆ ಸಂಬಂಧಿತ ಯಾವುದೇ ಪ್ರಾಜೆಕ್ಟಿನ ಕಮಿಟಿಯನ್ನು ಸರಕಾರ ಮಾಡಿದರೂ ಸಮಿತಿಯ ಒಳಹೊರಗೆ ಮತ್ತದೆ ದಲ್ಲಾಳಿಗಳೆ ತುಂಬಿಕೊಂಡಿರುತ್ತಾರೆ. ಇದೆಲ್ಲಾ  ಉಮಾಶ್ರೀಯವರಿಗೆ ಗೊತ್ತಿಲ್ಲಾ ಎನ್ನುವಂತಿಲ್ಲ. ಸ್ಥಾಪಿತ ಗುತ್ತಿಗೆದಾರರನ್ನು ಬಿಟ್ಟರೆ ಅಧಿಕಾರಗಳಿಗೆ ಹಾಗೂ ಸಚಿವೆಗೆ ಬೇರೆ ದಾರಿಯಿಲ್ಲ. ಅಂತಹುದೊಂದು ದಲ್ಲಾಳಿಗಳ ಲಾಭಿ ಸದಾ ಕ್ರಿಯಾಶೀಲವಾಗಿರುತ್ತದೆ. ಅವಕಾಶ ಸಿಗದೇ ಹೋದರೆ ನೇರವಾಗಿ ಬೇರೆ ರಾಜಕಾರಣಿಗಳಿಂದ ಇಲ್ಲವೇ ಮುಖ್ಯಮಂತ್ರಿಗಳಿಂದಲೇ ಸಚಿವೆಯ ಮೇಲೆ ಒತ್ತಡ ತರವಷ್ಟು ಕೆಲವು ಸಾಂಸ್ಕೃತಿಕ ದಲ್ಲಾಳಿಗಳು ಪ್ರಭಾವಶಾಲಿಯಾಗಿವೆ. ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟ ಹಾಕಲು ಪ್ರಾಮಾಣಿಕವಾಗಿ ಕ್ರಮ ತೆಗೆದುಕೊಳ್ಳುವುದೇ ಆಗಿದ್ದರೆ  ಈಗಾಗಲೇ ಚಾಲ್ತಿಯಲ್ಲಿರುವ, ಎಲ್ಲಾ ಪ್ರಾಜೆಕ್ಟಗಳಲ್ಲಿ ಅದು ಹೇಗೋ ತೂರಿಕೊಳ್ಳುವ ದಲ್ಲಾಳಿಗಳನ್ನು ಹೊರದಬ್ಬಬೇಕಿದೆ. ಮೊದಲು ಎಲ್ಲಾ ಸರಕಾರಿ ಯೋಜನೆಗಳು, ಸಬ್ ಕಮಿಟಿಗಳು ಹಾಗೂ ಅನುದಾನಗಳಿಂದ ಮುಂದಿನ ಎರಡು ವರ್ಷಗಳ ಕಾಲ ಅಧೀಕೃತವಾಗಿ ಇಲ್ಲವೇ ಅನಧೀಕೃತವಾಗಿ ಸ್ಥಾಪಿತ ಗುತ್ತಿಗೆದಾರರನ್ನು ಭಹಿಷ್ಕರಿಸಲು ಸಚಿವೆ ಮೊದಲು ಸೀರಿಯಸ್ಸಾಗಿ ಕ್ರಮ ಕೈಗೊಳ್ಳಲಿ. ಹಗಲು ಧರೋಡೆಕೋರರಿಗೆ ಲೂಟಿ ಮಾಡಲು ಅವಕಾಶಕೊಟ್ಟು ಜನರೇ ಕಳ್ಳರ ಜೊತೆ ಕೈಜೋಡಿಸಬೇಡಿ ಎಂದು ಹೇಳಿಕೆ ಕೊಟ್ಟರೇನು ಬಂತು ಪ್ರಯೋಜನ.

"ಸ್ವತಃ ಕಲಾವಿದೆಯಾದ ನನಗೆ ಕಲಾವಿದರ ಕಷ್ಟ ಚೆನ್ನಾಗಿ ಗೊತ್ತಿದೆ. ಕಲಾವಿದರ ಸಂಭಾವನೆ ಹೆಚ್ಚಿಸಲು ಶಕ್ತಿ ಮೀರಿ ಪ್ರಯತ್ನಿಸುವೆ" ಎಂದು ಇದೇ ಸಮಾರಂಭದಲ್ಲಿ ಸಚಿವೆ ಹೇಳಿದ್ದಾರೆ. ಅವರ ಪ್ರಯತ್ನ ಫಲದಾಯಕವಾಗಲಿ ಎಂದೇ ಆಶಿಸೋಣ. ಆದರೆ ಕಲಾವಿದರ ಕಷ್ಟದ ಅರಿವಿದ್ದ ಮಾಜಿ ಕಲಾವಿದೆ ರವೀಂದ್ರ ಕಲಾಕ್ಷೇತ್ರ- 50 'ನೆನಪಿನೋಕಳಿಎನ್ನುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗಾಗಿ 2016, ಜುಲೈ 6ರಂದು ನಾಡಿನ ಮೂಲೆಮೂಲೆಗಳಿಂದ 500ಕ್ಕೂ ಹೆಚ್ಚು ಕಲಾವಿದರನ್ನು ಬೆಂಗಳೂರಿನ ಕಲಾಕ್ಷೇತ್ರಕ್ಕೆ ಕರೆಸಿಕೊಂಡು ಇದ್ದಕ್ಕಿದ್ದಂತೆ ಇಡೀ ಕಾರ್ಯಕ್ರಮ ರದ್ದು ಮಾಡಿ ಕಲಾವಿದರನ್ನು ಅವಮಾನಿಸಿ ಕಳುಹಿಸಿದರಲ್ಲಾ ಆವಾಗ ಎಲ್ಲಿ ಹೋಗಿತ್ತು ತಾನೂ ಒಬ್ಬಳು ಕಲಾವಿದೆ ಆಗಿದ್ದೆ ಎನ್ನುವ ಪ್ಲಾಶಬ್ಯಾಕ್ ನೆನಪು. ಕಲಾವಿದರ ಕಷ್ಟ ಗೊತ್ತಿದ್ದವರು ಕಲಾವಿದರನ್ನು ಹೋಲಸೇಲಾಗಿ ಹೀಗೆ ಕರೆಸಿ ಅವಮಾನಿಸಲು ಸಾಧ್ಯವೇ? ನಿಜವಾದ ಕಲಾವಿದರಿಗೆ ಬೇಕಾದದ್ದು ಸರಕಾರ ಕೊಡುವ ಮಾಶಾಸನವಲ್ಲ.... ಆತ್ಮಗೌರವ. ಕಲಾವಿದರ ಸ್ವಾಭಿಮಾನದ ಮೇಲೆ ಗಾಯ ಮಾಡಿ ಮಾಸಾಶನ ಹೆಚ್ಚಿಸುವ ಮಾತಾಡಿ ಮಲಾಮು ಹಚ್ಚುವ ಸಚಿವೆಯ ಅಧಿಕಾರದ ಹುಚ್ಚಿಗೆ ಹೇಗೆ ಮದ್ದರೆಯುವುದು.

.ಹೋಗಲಿ... ಕಾರ್ಯಕ್ರಮ ರದ್ದು ಮಾಡಿದ ನಂತರ ಮತ್ತೆ ಸಿಎಂ ಕರೆಸಿ 2016, ಆಗಸ್ಟ್ 24 ರಂದು ಕಲಾಕ್ಷೇತ್ರ-50 'ನೆನಪಿನೋಕಳಿ' ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಾಯಿತಲ್ಲ ಆಗ ಹಿಂದೆ ಅವಕಾಶ ವಂಚಿತರನ್ನಾಗಿಸಿದ ಐನೂರು ಗ್ರಾಮೀಣ ಕಲಾವಿದರನ್ನು ಯಾಕೆ ಕರೆಸಿ ಕಲಾ ಪ್ರದರ್ಶನಕ್ಕೆ ಅವಕಾಶ ಕೊಡಲಿಲ್ಲ. ಅದೂ ಹೋಗಲಿ  ಅದೆಷ್ಟು ಜನ ಕಲಾವಿದರನ್ನು ವೇದಿಕೆ ಕಾರ್ಯಕ್ರಮದ ಉಸ್ತುವಾರಿಗೆ ಸೇರಿಸಿಕೊಂಡರು. ಒಬ್ಬರನ್ನೂ ಇಲ್ಲ. ಸನ್ಮಾನದ ಶಾಲು ಹಾರ ತಂದುಕೊಡುವ ಕಾಯಕವನ್ನೂ ಸಹ ರಂಗಸಂಘಟಕರು ಹಾಗೂ ದಲ್ಲಾಳಿಗಳೇ ಮಾಡಿ ಮಂತ್ರಿ ಮಾನ್ಯರ ಕೃಪಾಕಟಾಕ್ಷಕ್ಕೆ ಪೈಪೋಟಿಗಿಳಿದರಲ್ಲಾ ಅದರಲ್ಲಿ ಯಾವ ಕಲಾವಿದರ ಹಿತಾಸಕ್ತಿ ಇದೆ. ಇಲಾಖೆಯ ಮುಖ್ಯಸ್ತೆಯಾದ ಸಚಿವೆಯ ನಡೆ ಹಾಗೂ ನುಡಿಯಲ್ಲಿ ವೈರುದ್ಯಗಳಿದ್ದಾಗ ಅಧಿಕಾರಿಗಳಿಂದ ಅದೆಂತಾ ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯ. ಕಲಾವಿದರನ್ನು ಶೊಷಿಸಿ ಹಣಸಂಪಾದನೆ ಮಾಡುವುದನ್ನೇ ಕಾಯಕ ಮಾಡಿಕೊಂಡ ದಲ್ಕಾಳಿಗಳಿಗೂ ಹಾಗೂ ಕಲಾನಿಷ್ಟೆಗೂ ಹೊಂದಾಣಿಕೆಯಾಗದ ದೂರದ ಮಾತು. ಸಚಿವೆ ಉಮಾಶ್ರೀಯವರಿಗೆ ನಿಜವಾಗಿಯೂ ಕಲಾವಿದರ ಮೇಲೆ ಕಾಳಜಿ ಕಳಕಳಿ ಇದ್ದರೆ ಮೊದಲು ಸ್ಥಾಪಿತ ದಲ್ಲಾಳಿಗಳನ್ನು ಸರಕಾರದ ಎಲ್ಲಾ ಪ್ರಾಜೆಕ್ಟಗಳು, ಕಮಿಟಿಗಳು ಹಾಗೂ ಅನುದಾನಗಳಿಂದ ದೂರವಿಡಲಿ. ಸರಕಾರ ಕಲಾವಿದರ ಅಕೌಂಟಿಗೆ ಹಾಕಿದ ಹಣ ಅವರ ಬಳಕೆಗೆ ತಲುಪಿತಾ ಇಲ್ಲವೇ ಮತ್ತೆ ಒಂದಿಷ್ಟು ಪರ್ಸಂಟೇಜ್ ಹಣ ಕಲಾವಿದರ ಮೂಲಕ ದಲ್ಲಾಳಿಗಳಿಗೆ ಮರು ಸಂದಾಯವಾಯಿತಾ ಎನ್ನುವುದನ್ನು ಪರಿಶೀಲಿಸಲು ಪ್ರಾಮಾಣಿಕರಾದ ವಿಚಕ್ಷಣಾ ಸಮಿತಿ ರಚಿಸಲಿ. ಸರಕಾರದ ಎಲ್ಲಾ ಯೋಜನೆಗಳಲ್ಲಿ ಕಲಾವಿದರಾಗಿ ತೊಡಗಿಸಿಕೊಂಡವರಿಗೆ ಮಾತ್ರ ಆದ್ಯತೆ ಇರಲಿ


."ಜಾನಪದ ಇಂದು ಕೇವಲ ಕುಣಿತ ಹಾಡುಗಾರಿಕೆಗೆ ಸಂಬಂಧಿಸಿದ ಮೆಗಾ ಈವೆಂಟ್ ಆಗಿ ಬದಲಾಗಿದೆ. ಜನಪದ ಕಲಾವಿದರನ್ನು ಸಂಕ್ರಾಂತಿಯ ಎತ್ತುಗಳಂತೆ ಸಿಂಗರಿಸಲಾಗುತ್ತಿದೆ. ಅವರ ಬದುಕು ಕಿಚ್ಚಿನಂತೆ ಕಳೆದು ಹೋಗುತ್ತಿದೆ. ಬಗ್ಗೆ ಸರಕಾರ ಗಮನ ಹರಿಸಬೇಕು. ಜಾನಪದ ಕಲಾವಿದರನ್ನು ತನಗೆ ಬೇಕಾದಂತೆ ನಡೆಸಿಕೊಳ್ಳಬಾರದು..." ಎಂದು ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿ ಮಾತಾಡಿದ ಕೋಟಗಾನಹಳ್ಳಿ ರಾಮಯ್ಯನವರು ಬಲು ಮಾರ್ಮಿಕವಾಗಿ ಹೇಳಿ ಸಚಿವೆಗೆ ಪರೋಕ್ಷ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಇನ್ನೂ ಕಲಾವಿದೆ ಎನ್ನುವ ಸ್ವಾಭಿಮಾನ ಮನದಲ್ಲಿದ್ದರೆ ರಾಮಯ್ಯನವರ ಮನದಾಳದ ಮಾತುಗಳಲ್ಲಿರುವ ಒಳಾರ್ಥಗಳನ್ನು ಉಮಾಶ್ರೀಯವರು ಅರಿತು ಚಿಂತನ ಮಂಥನ ಮಾಡಿಕೊಳ್ಳಬೇಕಿದೆ.

ಮೊದಲು ರಂಗೋಪಜೀವಿಗಳನ್ನು ಹಂತ ಹಂತವಾಗಿ ದೂರವಿಡುವ ಪ್ರಯತ್ನವನ್ನು ಇಲಾಖೆಯ ವತಿಯಿಂದ ಮಾಡಲಿ. ಇಲಾಖೆಯ ಯಾವುದೇ ಕಾರ್ಯಕ್ರಮಗಳಿದ್ದರೂ ವೇದಿಕೆಯ ಉಸ್ತುವಾರಿ ಕಲಾವಿದರದ್ದೇ ಆಗಿರಲಿ. ಆಗ ಎಲ್ಲರೂ ಒಪ್ಪಬಹುದು ಕಲಾವಿದೆಯಾಗಿದ್ದ ಉಮಾಶ್ರೀಯವರು ನಿಜವಾಗಿಯೂ ಕಲಾವಿದರ ಮೇಲೆ ಅದಮ್ಯ ಕಾಳಜಿ ಕಳಕಳಿ ಹೊಂದಿದ್ದಾರೆಂದು. ಕಲಾವಿದರಿಗಾಗಿ ಇದೆಲ್ಲವನ್ನೂ ಮಾಡದೇ ಬರೀ ಮಾತುಗಳನ್ನು ಉದುರಿಸಿದರೆ ಅದು ರಾಜಕೀಯದವರ ಬೂಟಾಟಿಕೆ ಎನಿಸುತ್ತದೆ. ಈಗಾಗಲೇ ಅರ್ಧದಷ್ಟು ಜನ ಉಮಾಶ್ರೀಯವರ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಇನ್ನುಳಿದವರೂ ಸಹ ನಿರಾಸೆಹೊಂದುವ ಮುನ್ನ ಸಚಿವೆ ಎಚ್ಚರಗೊಂಡು ದಲ್ಲಾಳಿಗಳನ್ನು ಮಟ್ಟಹಾಕಿ, ಅಧಿಕಾರಿಗಳಿಗೆ ಮೂಗುದಾರ ಹಾಕಿ ಇಲಾಖೆಯ ಯೋಜನೆಗಳಲ್ಲಿ ಸಕ್ರೀಯ ಕಲಾವಿದರಿಗೆ ಹೆಚ್ಚು ಪಾಲುದಾರಿಕೆಯನ್ನು ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬಹುದಾಗಿದೆ. 

ಉಳಿದ ಇನ್ನೆರಡು ವರ್ಷಗಳ ಅಧಿಕಾರಾವಧಿಯಲ್ಲಿಯಾದರೂ ಮಾಜಿ ಕಲಾವಿದೆ, ಹಾಲಿ ಸಚಿವೆ ಕಲಾವಿದರ ಉಳಿವಿಗೆ ಹಾಗೂ ಕಲೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಸಾಂಸ್ಕೃತಿಕ ಲೋಕದಲ್ಲಿ ನಿತ್ಯಸ್ಮರಣೀಯರಾಗುತ್ತಾರೆ. ಇಲ್ಲವಾದರೆ ಅಧಿಕಾರಾವಧಿ ಮುಗಿದ ಬಳಿಕ ಎಲ್ಲರ ಅವಹೇಳನಕ್ಕೆ ಪಾತ್ರವಾಗಿ ಕಲಾವಿದರುಗಳ ಕಣ್ಣಲ್ಲಿ ನಿರ್ಲಕ್ಷಿತರಾಗುತ್ತಾರೆ. ಈಗ ತಮ್ಮ ಲಾಭಕ್ಕೋಸ್ಕರ ಸಚಿವೆಗೆ ಬಕೆಟ್ ಹಿಡಿಯುತ್ತಿರುವ ದಲ್ಲಾಳಿಗಳು ಆಗ ಮುಂದಿನ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವರ ಓಲೈಕೆಗೆ ಪ್ರಯತ್ನಿಸುತ್ತಿರುತ್ತಾರೆಉಮಾಶ್ರೀಯವರು ಅಧಿಕಾರದ ಭ್ರಮೆಯನ್ನು ಬಿಟ್ಟು, ವಂಧಿಮಾಗದಿ ಪಡೆಯನ್ನು ದೂರವಿಟ್ಟು ರಿಯಾಲಿಟಿಯನ್ನು ಅರ್ಥಮಾಡಿಕೊಂಡು ಕಲಾವಿದರ ಪರವಾಗಿ ಹಾಗೂ ಕಲೆಯ ಹಿತಾಸಕ್ತಿಗಾಗಿ ದುಡಿಯಲಿ, ಕಲೆಯಿಂದಾಗಿ ದೊರೆತ ಅಧಿಕಾರವನ್ನು ಸದ್ಬಳಿಕೆ ಮಾಡಿಕೊಳ್ಳಲಿ, ಹಾಗೂ ಸಾಂಸ್ಕೃತಿಕ ಲೋಕದಲ್ಲಿ ನಿತ್ಯಸ್ಮರಣೀಯರಾಗಲಿ ಎನ್ನುವುದೇ ಕಲಾವಿದರ ಹೆಬ್ಬಯಕೆಯಾಗಿದೆ. ಎಲ್ಲಾ ರಂಗಕಲಾವಿದರ ಮನದಾಳದ ನಿರೀಕ್ಷೆಯೂ ಆಗಿದೆ. 

                                                                           - ಶಶಿಕಾಂತ ಯಡಹಳ್ಳಿ