ಬುಧವಾರ, ಮೇ 31, 2017

ಏಸೂ ಯಕ್ಷ ಪ್ರಸಂಗಕ್ಕೆ ಮತೀಯವ್ಯಾಧಿಗಳ ಕಾಟ; ನಿಲ್ಲಬೇಕು ಕೋಮುವಾದಿಗಳ ಆಟ:




ಕರಾವಳಿ ಜಿಲ್ಲೆಗಳಲ್ಲಿ ಹಿಂದೆಂದಿಗಿಂತಲೂ ಈಗ ಮತೀಯವಾದ ಮಿತಿಮೀರಿದ್ದಂತೂ ನಿರ್ವಿವಾದ. ಕೋಮುವಾದಿ ಶಕ್ತಿಗಳು ಈ ಬುದ್ದಿವಂತರ ನಾಡಲ್ಲಿ ಬೇರು ಬಿಟ್ಟು ಸಮಾಜವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಲೇ ಬಂದಿವೆ. ಈಗ ಈ ಮತಿಯ ಶಕ್ತಿಗಳ ಉರಿಗಣ್ಣು ಕಲೆಯ ಮೇಲೂ ಬಿದ್ದಿದೆ. ಯಾವುದನ್ನು ಮಾಡಬೇಕು.. ಯಾವುದನ್ನು ಮಾಡಬಾರದು ಎಂಬ ಅನಧೀಕೃತ ಆದೇಶಗಳು ಜಾರಿಯಾಗುತ್ತಿವೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ವಿವಾದ ಜೋರಾಗಿದೆ. ಮೇ 27ರಂದು ಮಂಗಳೂರಿನಲ್ಲಿ ಮಹಾಚೇತನ-ಏಸುಕ್ರಿಸ್ತ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗದ ಪುಸ್ತಕವೊಂದರ  ಬಿಡುಗಡೆ  ಹಾಗೂ ಅವತ್ತು ಈ ಪುಸ್ತಕ ಆಧಾರಿತ ತಾಳಮದ್ದಳೆ ಪ್ರದರ್ಶನವೂ ಏರ್ಪಾಡಾಗಿತ್ತು. ಏಸೂ ಕ್ರಿಸ್ತನ ಬದುಕಿನ ಕತೆಯನ್ನು ಯಕ್ಷಕಲೆಯ ಮೂಲಕ ಹೇಳುವುದು ಈ ಪ್ರಸಂಗದ ಉದ್ದೇಶವಾಗಿದೆ.  ಮತೀಯವಾದಿಗಳ ಮಂಡೆಗೆ ಬೆಂಕಿ ಹತ್ತಿಕೊಳ್ಳಲು ಇನ್ನೇನು ತಾನೇ ಬೇಕು? ತಗೋ ಶುರುವಾಯಿತು ಪೇಸ್ಬುಕ್, ವಾಟ್ಸಾಪ್, ಟ್ವೀಟರ್‌ಗಳಲ್ಲಿ ಹಿಂದೂತ್ವದ ಗುತ್ತಿಗೆದಾರರಿಂದ ಹುಸಿ ಗರ್ಜನೆ. ಏಸುವಿನ ಪ್ರಸಂಗ ಕುರಿತು ಯಕ್ಷಗಾನ ಪುಸ್ತಕ ಬರೆದಿದ್ದೇ ತಪ್ಪು, ಪ್ರಕಟಿಸಿದ್ದಂತೂ ಅಪರಾಧ, ಇನ್ನು ತಾಳಮದ್ದಲೆ ಮಾಡಿ ಜನರ ಮುಂದೆ ಪ್ರದರ್ಶಿಸುವುದಂತೂ ಮಹಾಪರಾಧ.. ಎಂಬಂತೆ ಹಿಂದುತ್ವದ ಭಾವಿಯೊಳಗಿಳಿದು ಮೆದುಳು ಮಲಿನ ಮಾಡಿಕೊಂಡ ಕಪ್ಪೆಗಳು ನಿರಂತರವಾಗಿ ಒಟಗುಡತೊಡಗಿದವು.  ಪುಸ್ತಕ ಬರೆದವರನ್ನು, ತಾಳಮದ್ದಲೆ ಆಯೋಜಿಸಿದವರನ್ನು ಅಷ್ಟೇಯಾಕೆ ಅದರಲ್ಲಿ ಭಾಗವಹಿಸುವ ಕಲಾವಿದರನ್ನು ವಾಚಾಮ ಗೋಚರವಾಗಿ ನಿಂದಿಸತೊಡಗಿದವು.

ಯಕ್ಷಗಾನ ಹಿಂದೂಗಳ ಕಲೆಯಾಗಿದ್ದು ಕ್ರಿಸ್ತನನ್ನು ವೈಭವೀಕರಿಸುವುದು ಅಕ್ಷಮ್ಯ ಅಪರಾಧ ಎನ್ನುವಂತೆ ಹಿಂದುತ್ವದ ಉಗ್ರ ಪ್ರತಿಪಾದಕರು ಗುಲ್ಲೆಬ್ಬಿಸಿದ್ದಾರೆ. ಯಕ್ಷಗಾನ ಕಲೆಯನ್ನು ಧರ್ಮಾತೀತವಾಗಿ ಜನರು ನೋಡಿ ಬೆಳೆಸಿದ್ದಾರೆ. ಅದು ಹಿಂದೂಗಳ ಕಲೆಯಾಗಿರದೇ ಜನರ ಕಲೆಯಾಗಿದೆ. ಜನಪದ ಕಲೆಯಾಗಿದೆ. ಅದನ್ನು ಕೆಲವು ಮೇಲ್ವರ್ಗದವರು ಹೈಜಾಕ್ ಮಾಡಿದ್ದು ನಿಜವಾದರೂ ಕಾಸು ಕೊಟ್ಟು ಅಹೋರಾತ್ರಿ ನೋಡಿ ಉತ್ತೇಜಿಸಿದ ಪ್ರೇಕ್ಷಕರು ಎಲ್ಲಾ ಧರ್ಮೀಯರಾಗಿದ್ದಾರೆ. ಆದರೆ ಈಗ ಈ ಮತಾಂಧರಿಗೆ ಯಕ್ಷಗಾನವು ಹಿಂದೂಗಳ ಕಲೆಯಾಗಿದೆ. ಅದರಲ್ಲೂ ಪುರೋಹಿತಶಾಹಿ ಕಲೆ ಎಂದೂ ನಂಬಿಸಲಾಗುತ್ತದೆ. ಈಗ ಮತಾಂತರದ ಆರೋಪವನ್ನು ಯಕ್ಷಗಾನ ಪ್ರಸಂಗದ ಮೇಲೆ ಹಾಕಿ ವಿಕ್ಷಿಪ್ತ ಸಂಚಲನ ಸೃಷ್ಟಿಸುವ ಹುನ್ನಾರ ಸೃಷ್ಟಿಸಲಾಗುತ್ತಿದೆ.

ಏಸುವಿನ ಯಕ್ಷಗಾನ ಪ್ರಸಂಗ ಎಲ್ಲಿ ಮತಾಂತರಕ್ಕೆ ಪ್ರಚೋದಿಸುವುದೋ ಎಂಬ ಆತಂಕ ಈ ಕೋಮುವಾದಿಗಳಿಗೆ. ಕಪೋಲ ಕಲ್ಪಿತ ಹಿಂದೂ ಪುರಾಣಗಳನ್ನು ನೋಡಿ ಅದೆಷ್ಟು ಜನ ಅನ್ಯ ಧರ್ಮಿಯರು ಹಿಂದೂಗಳಾಗಿ ಮತಾಂತರ ಹೊಂದಿದ್ದಾರೆ? ಹಾಗೆಯೇ ಅನ್ಯ ಧರ್ಮದ ದೇವರುಗಳ ನಾಟಕ-ಯಕ್ಷಗಾನಗಳನ್ನು ನೋಡಿದಾಕ್ಷಣ ಪ್ರೇರೇಪಿತರಾಗಿ ಹಿಂದೂಗಳೆನ್ನುವವರು ಅನ್ಯ ಧರ್ಮಕ್ಕೆ  ಮತಾಂತರ ಹೊಂದಿ ಬಿಡುತ್ತಾರಾ? ನಾಟಕ, ಯಕ್ಷಗಾನಗಳಿಗೆ ಅಲ್ಲಾಡಿ ಹೋಗುವಷ್ಟು ದುರ್ಬಲವಾಗಿದೆಯಾ ಇವರು ಪ್ರತಿಪಾದಿಸುವ ಹಿಂದೂ ಧರ್ಮ? ಕೇವಲ ಒಂದು ಯಕ್ಷಗಾನ ಪ್ರಸಂಗದಿಂದ  ನೋಡಿದವರು ಮತಾಂತರ ಹೊಂದುತ್ತಾರೆಂಬದು ಈ ಧರ್ಮಾಂಧರ ಆರೋಪವೇ ನಿಜವಾದಲ್ಲಿ ರಾಜ್ಯಾಂದ್ಯಂತ ಇರುವ ಕ್ರಿಶ್ಚಿಯನ್ ಶಾಲೆ ಕಾಲೇಜುಗಳಲ್ಲಿ ಓದುವ ಲಕ್ಷಾಂತರ ಹಿಂದೂ ಧರ್ಮಿಯರ ಮಕ್ಕಳೆಲ್ಲಾ ಮತಾಂತರಗೊಳ್ಳಬೇಕಾಗಿತ್ತಲ್ಲವೇ?   


ಇಷ್ಟಕ್ಕೂ ಇದೇನೂ ಹೊಸದಾಗಿ ಬರೆದ ಯಕ್ಷಪ್ರಸಂಗವಂತೂ ಅಲ್ಲವೇ ಅಲ್ಲಾ. ನಾಲ್ಕು ದಶಕದ ಹಿಂದೆಯೇ ಮುಳಿಯ ಕೇಶವಯ್ಯ ಎನ್ನುವವರು ಈ ..ಏಸೂ ಮಹಾತ್ಮೆ ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಹಾಗೂ ಆ ಪ್ರಸಂಗವು ಕಲಾವರಳಿ ಕರ್ನಾಟಕ ಅಷ್ಟೇ ಅಲ್ಲಾ ಬಾಂಬೆಯಲ್ಲಿಯೂ ಸಹ ಪ್ರದರ್ಶನ ಆಗಿತ್ತು. ನೂರಾರು ಪ್ರದರ್ಶನಗಳನ್ನು ಕಂಡು ಜನಪ್ರೀಯವಾಗಿದ್ದ ಈ ಯಕ್ಷಪ್ರಸಂಗವು ಆಗ ಇಂಗ್ಲೀಷ್ ಹಾಗೂ ಜರ್ಮನ್ ಭಾಷೆಗೂ ಅನುವಾದಗೊಂಡು ಪ್ರದರ್ಶನಗೊಂಡಿತ್ತು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಮಲ್ಪೆ ರಾಮದಾಸ ಸಾಮಗರವರೇ ಏಸುವಿನ ಪಾತ್ರ ವಹಿಸಿದ್ದರು. ಈಗ ಮುಳಿಯ ಕೇಶವಯ್ಯನವರ ಮಕ್ಕಳು ಈಗ ಅದೇ ಕೃತಿಯನ್ನು ಮುದ್ರಿಸಿ ಪ್ರಕಟಿಸುತ್ತಿದ್ದಾರೆ. ಈ ಕೃತಿಯಲ್ಲಿ ಚಂದಸ್ಸಿನ ಚೌಕಟ್ಟಿನಲ್ಲಿ ರಚನೆಯಾದ 200 ಪದ್ಯಗಳಿವೆ. ಯಕ್ಷಗಾನ ಪ್ರಸಂಗಕ್ಕೆ ಬೇಕಾದ ರಸಾನುಭವವನ್ನೂ ಸೇರಿಸಲಾಗಿದೆ. ಆದರೆ.. ಆಗೆಲ್ಲಾ ಇರದ ಪ್ರತಿರೋಧ ಈಗ್ಯಾಕೆ ಶುರುವಾಯಿತು? ಅದೇ ಪುಸ್ತಕದ ಬಿಡುಗಡೆಯ ದಿನ, ಹಳೇ ಯಕ್ಷಗಾನದ ತಾಳಮದ್ದಲೆಯ ಸಮಯದಲ್ಲಿ ಯಾಕೆ ಈ ಮತೀಯವಾದಿಗಳು ಮತ್ತೇರಿದಂತೆ ಆಡತೊಡಗಿದವು. ಯಾಕೆಂದರೆ ಆಗ ಇಡೀ ಕರಾವಳಿ ಪ್ರದೇಶದಲ್ಲಿ ಕೋಮುಸಾಮರಸ್ಯೆ ತುಂಬಿತ್ತು. ಕೋಮುಗಳಿ ನಡುವೆ ದಳ್ಳುರಿ  ಹಚ್ಚುವ ಶಕ್ತಿಗಳು ಪ್ರಭಲವಾಗಿರಲಿಲ್ಲಾ. ಜನರು ನಾಟಕವನ್ನು ನಾಟಕವಾಗಿ,,, ಯಕ್ಷಗಾನವನ್ನು ಯಕ್ಷಕಲೆಯಾಗಿ ನೋಡುತ್ತಿದ್ದರು. ಆದರೆ.. ಕಳೆದೆರಡು ದಶಕಗಳಿಂದ ಕರಾವಳಿಯ ಚಿತ್ರಣವೇ ಕೇಸರೀಕರಣಗೊಂಡಿದೆ. ಹಿಂದೂ ಶ್ರೇಷ್ಟತೆಯ ವ್ಯಸನವನ್ನು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ. ಅನ್ಯ ಧರ್ಮಗಳ ತುಚ್ಚೀಕರಣವನ್ನೂ ಯುವಕರ ಮೆದುಳಲ್ಲಿ ತುರುಕಲಾಗಿದೆ.

ಕಲೆಯನ್ನು ಕಲೆಯಾಗಿ ಆಸ್ವಾದಿಸಬೇಕು.. ಧರ್ಮವನ್ನು ಖಾಸಗಿ ಆಚರಣೆಯಾಗಿ ಪಾಲಿಸಬೇಕು.. ಎಲ್ಲಾ ಧರ್ಮದ ದೇವರುಗಳೂ ಒಂದೇ ಎನ್ನುವ ಭಾವನೆ ಇರಬೇಕು ಎನ್ನುವ ಕನಿಷ್ಟ ವಿವೇಕವೂ ಇಲ್ಲದ ಈ ಬ್ರೇನ್‌ವಾಷ್ಡ್ ಹಿಂದುತ್ವವಾದಿಗಳಿಗೆ ಕಲೆ ಸಂಸ್ಕೃತಿಯ ಬಗ್ಗೆ ಅರಿವೇ ಇಲ್ಲವಾಗಿದೆ. ಎಲ್ಲವನ್ನೂ ಧರ್ಮಕ್ಕೆ ತಗಲಾಕುವ ತುರ್ತಿಗೆ ಬಿದ್ದು ಸಾಮಾಜಿಕ ಸೌಹಾರ್ಧತೆಯನ್ನು ಕೆಡಿಸುವ ಹುನ್ನಾರಗಳು ವ್ಯವಸ್ಥಿತವಾಗಿಯೇ ನಡೆಯುತ್ತಿವೆ. ನಾಟಕ ಇಲ್ಲವೇ ಯಕ್ಷಪ್ರಸಂಗಗಳನ್ನು ನೋಡಿ ಜನರು ಬದಲಾಗುವುದಾಗಿದ್ದರೆ ಈಗಾಗಲೇ ಇಡೀ ಸಮಾಜವೇ ಸತ್ಯ ನಿಷ್ಟೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕಿತ್ತು. ಈ ಮತೀಯವಾದಿ ಮನಸ್ಥಿತಿಯ ಮಹನೀಯರು ಎಂದೋ ಕೋಮುಸೌಹಾರ್ಧತೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಯಾಕೆಂದರೆ ಯಕ್ಷಗಾನದ ಬಹುತೇಕ ಪ್ರಸಂಗಗಳು ಉತ್ತಮ ಮೌಲ್ಯಗಳನ್ನೇ ಹೇಳುತ್ತವೆ. ಯಾವುದೇ ಪ್ರಸಂಗ ಕಳ್ಳನಾಗು, ಸುಳ್ಳನಾಗು, ಧರ್ಮಾಂಧನಾಗು, ಹಿಂಸೆಯನ್ನು ಪ್ರಚೋದಿಸು ಎಂದು ಹೇಳುವುದಿಲ್ಲಾ. ಹೀಗಿರುವಾಗ ಅನ್ಯ ಧರ್ಮದ ದೇವರ ಮಹಾತ್ಮೆ ಯಕ್ಷಗಾನವಾಗಿ ಪ್ರಕಟಗೊಂಡರೆ.. ಹಾಗೂ ಪ್ರದರ್ಶನವಾದರೆ ನೋಡಿದವರು ಮತಾಂತರಗೊಳ್ಳುತ್ತಾರೆ ಎನ್ನುವುದೇ ಅತ್ಯಂತ ಅಪ್ರಭುದ್ದ ವಿವೇಕರಹಿತವಾದ ಗ್ರಹಿಕೆ.

ಈ ಮತೀಯ ಶಕ್ತಿಗಳಿಗೆ ಬೇಕಾದದ್ದು ಯಕ್ಷ ಪ್ರಸಂಗದ ನೆಪದಲ್ಲಿ ಕೋಮುದ್ವೇಷವನ್ನು ಹೆಚ್ಚಿಸುವುದು ಹಾಗೂ ಸಾಧ್ಯವಾದರೆ ಹಚ್ಚಿದ ಕಿಡಿಗೆ ತಾವೇ ಗಾಳಿ ಹಾಕಿ.. ಉನ್ಮಾದದ ತೈಲ ಸುರಿದು ಬೆಂಕಿಯಾಗಿ ಮಾರ್ಪಡಿಸಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವವನ್ನು ಹುಟ್ಟಿಸುವುದು ಹಾಗೂ ಹಿಂದುತ್ವ ರಕ್ಷಕರಾಗಿ ತಮ್ಮನ್ನು ಗುರುತಿಸಿಕೊಳ್ಳುವುದು. ಇದಕ್ಕಾಗಿ ಯಾವುದೇ ಕಾರಣ ಸಿಕ್ಕರೂ ಸಾಕು ಇವರ ಹಿಂದುತ್ವ ತಕ್ಷಣ ಜಾಗೃತವಾಗಿಬಿಡುತ್ತದೆ. ಮತೀಯವಾದ ವ್ಯಾಧಿಯಾಗಿ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಆ ನಂತರ ಸಮಾಜದಲ್ಲಿ ಹರಡುತ್ತದೆ.

ಮೂಲಭೂತವಾಗಿ ಕರಾವಳಿ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಯಕ್ಷಗಾನ ಬಯಲಾಟವು ಜಾನಪದ ಕಲೆ. ಶೂದ್ರರು, ದಲಿತರು ಹಾಗೂ ದುಡಿಯುವ ವರ್ಗದವರು ಸೇರಿ ಬಯಲಾಟ ಪರಂಪರೆಯನ್ನು ಕಟ್ಟಿ ತಲೆಮಾರುಗಳಿಂದ ಬೆಳೆಸುತ್ತಾ ಬಂದಿದ್ದಾರೆ. ಬರುಬರುತ್ತಾ ಉತ್ತರ ಕರ್ನಾಟಕದಲ್ಲಿ ಬಯಲಾಟದ ಪ್ರಕಾರಗಳಾದ ದೊಡ್ಡಾಟ ಸಣ್ಣಾಟಗಳು ಅವತ್ತಿನಿಂದ ಇವತ್ತಿನವರೆಗೂ ದುಡಿಯುವ ವರ್ಗಗಳ ಪಾಲ್ಗೊಳ್ಳುವಿಕೆಯಲ್ಲೇ ನಡೆದು ಬರುತ್ತವೆ. ಆದರೆ ಬಯಲಾಟದ ಪ್ರಕಾರವೇ ಆದ ಯಕ್ಷಗಾನವು ಕರಾವಳಿ ಪ್ರದೇಶದಲ್ಲಿ ಬರುಬರುತ್ತಾ ಬ್ರಾಹ್ಮಣ ವರ್ಗದವರ ಪಾಲಾಗುತ್ತದೆ. ಯಕ್ಷಗಾನದ ಜನಪ್ರೀಯತೆಯನ್ನು ಕಂಡು ಬ್ರಾಹ್ಮಣ ಸಮುದಾಯದವರು ಈ ಕಲೆಯಲ್ಲಿ ತೊಡಗಿಕೊಳ್ಳುತ್ತಾರೆ ಹಾಗೂ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳು ಯಕ್ಷಗಾನಕ್ಕೆ ಅಪಾರವಾದ ಬೆಂಬಲವನ್ನು ಕೊಡುತ್ತಾ ಬಂದಿವೆ. ಹೀಗಾಗಿ ಕರಾವಳಿ ಕರ್ನಾಟಕದ ಬಹುತೇಕ ಯಕ್ಷಗಾನ ತಂಡಗಳು ಈಗಲೂ ಮೇಲ್ವರ್ಗದವರ ನಿರ್ವಹಣೆಯಲ್ಲಿವೆ. ಈ ಮತೀಯವಾದಿ ಶಕ್ತಿಗಳೂ ಸಹ ಯಕ್ಷಗಾನವೆಂದರೆ ಹಿಂದೂಗಳ ಅದರಲ್ಲೂ ಬ್ರಾಹ್ಮಣರ ಕಲೆ ಎಂದೇ ತಿಳಿದಂತಿವೆ. ಆದರೆ.. ಯಾವ ಕಲೆಯೂ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲಾ. ಹಾಗೇನಾದರೂ ಸೀಮಿತವಾದಲ್ಲಿ ಅದು ಜನರ ಕಲೆಯಾಗಿ ಉಳಿಯುವುದಿಲ್ಲಾ..


ಹಾಗೆಯೇ ಜನಮಾನಸದಲ್ಲಿರುವ ಈ ಪ್ರದರ್ಶಕ ಕಲೆಗಳು ದೇವರು, ಧರ್ಮ ಹಾಗೂ ಆಚರಣೆಗಳನ್ನು ಯಾವಾಗಲೂ ಚಿಕಿತ್ಸಕ ನೋಟದಲ್ಲೇ ನೋಡಿ ವಿಶ್ಲೇಷಿಸುತ್ತವೆ. ದೇವರನ್ನು ಭಜಿಸುವ, ಟೀಕಿಸುವ, ಹಾಗೂ ವಿಶ್ಲೇಷಿಸುವ ಆರೋಗ್ಯಕರ  ಬಹುತೇಕ ನಾಟಕಗಳಲ್ಲಿ ಹಾಗೂ ಯಕ್ಷ ಪ್ರಸಂಗಗಳಲ್ಲಿ ದೇವರುಗಳನ್ನು ಲೇವಡಿ ಮಾಡಲಾಗಿದೆ.. ಟೀಕಿಸಲಾಗಿದೆ.. ರಾವಣನನ್ನೇ ವೈಭವೀಕರಿಸಿ ಮಹಾ ಶಿವಭಕ್ತ ಎಂದು ಸಾರುವ ಪ್ರಸಂಗಗಳೂ ಪ್ರದರ್ಶನಗೊಂಡಿವೆ. ಪೌರಾಣಿಕ ಪಾತ್ರಗಳನ್ನು ವಿಮರ್ಶಿಸಲಾಗುತ್ತದೆ.. ಧರ್ಮದೊಳಗಿನ ಮೌಡ್ಯಗಳನ್ನು ಪ್ರಶ್ನಿಸಲಾಗುತ್ತದೆ. ಹೀಗಾಗಿ  ಪ್ರದರ್ಶಕ ಕಲೆಗಳು ಮತೀಯವಾದವನ್ನು ಪ್ರಚೋದಿಸುವುದಿಲ್ಲಾ. ಆದರೆ ಈ ಮತೀಯವ್ಯಾಧಿಗಳು ಕಲೆಯನ್ನು ಕಲೆಯಾಗಿ ಇರಲು ಬಿಡುತ್ತಿಲ್ಲಾ. ಯಕ್ಷಗಾನ ಆರಾಧಕ ಕಲೆಯಾಗಿದ್ದರೂ.. ಆಸ್ತಿಕತೆಯ ಕಲ್ಪಿತ ಮೌಲ್ಯವನ್ನು ಪ್ರಶ್ನಿಸಿದರೂ ಎಂದೂ ಕೋಮುಸಂಘರ್ಷಕ್ಕೆ ಪ್ರಚೋದಿಸುವುದಿಲ್ಲಾ. ಕೆಲವಾರು ಪ್ರಸಂಗಗಳಲ್ಲಿ ಹಿಂದೂ ಮುಸ್ಲಿಂ ಕೋಮುಸಾಮರಸ್ಯವನ್ನೂ ಪ್ರತಿಪಾದಿಸಲಾಗಿದೆ. ಎಲ್ಲಾ ದೇವರೂ ಒಂದೇ ಹಾಗೂ ಎಲ್ಲಾ ಧರ್ಮದವರೂ ಅವರವರ ಧರ್ಮಕ್ಕೆ ಬದ್ಧರಾಗಿರಬೇಕು ಎನ್ನುವ ತತ್ವವನ್ನೇ ಬಹುತೇಕ ಯಕ್ಷಪ್ರಸಂಗಗಳು ಸಾರಿವೆ. ಅನ್ಯ ಧರ್ಮಿಯರ ಪಾತ್ರವನ್ನು ಕೀಳಾಗಿ ಚಿತ್ರಿಸುವ ಉದಾಹರಣೆಗಳೂ ಇವೆಯಾದರು ಅವು ಕಡಿಮೆ.

ಈಗ ಏಸು ಕ್ರಿಸ್ತನ ಮಹಿಮೆಯನ್ನು ಸಾರುವ ಯಕ್ಷಪ್ರಸಂಗಕ್ಕೆ ಎಂದೂ ಇಲ್ಲದ ವಿರೋಧ ಯಾಕೆ ವ್ಯಕ್ತವಾಗುತ್ತಿದೆ?. ಯಾಕೆಂದರೆ ಕರಾವಳಿ ಕರ್ನಾಟಕದಲ್ಲಿ ಮತೀಯವಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದುತ್ವದ ಹುಸಿ ವೈಭವೀಕರಣ ಜಾಸ್ತಿಯಾಗುತ್ತಿದೆ. ಈ ವಿಕ್ಷಿಪ್ತ ಮನಸ್ಥಿತಿ ಯಕ್ಷಗಾನದಂತಹ ಕಲೆಯ ಕ್ಷೇತ್ರವನ್ನೂ ಪೀಡಿಸುತ್ತಿದೆ. ಕೋಮುವಾದಿ ಪಕ್ಷ ಹಾಗೂ ಸಂಘಟನೆಗಳು ಸದಾ ಪ್ರಚಾರದಲ್ಲಿರಲು ಹಾಗೂ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಸಂದರ್ಭಗಳನ್ನೂ ಉಪಯೋಗಿಸಿಕೊಳ್ಳುತ್ತವೆ. ಕಲೆಯೂ ಸಹ ಇದಕ್ಕೆ ಹೊರತಲ್ಲಾ. ಇದು ಸಾಮಾಜಿಕ ಸೌಹಾರ್ಧತೆಗೆ ಅಪಾಯಕಾರಿಯಾಗಿದೆ. ಏಸೂಕ್ರಿಸ್ತನ ಯಕ್ಷಪ್ರಸಂಗದಿಂದ ಯಾವ ಮತಾಂತರವೂ ಸಾಧ್ಯವಿಲ್ಲವಾದರೂ ಈ ಹಿಂದುತ್ವವಾದಿಗಳ ಮತಾಂಧತೆಯನ್ನಂತೂ ಉದ್ದೀಪನಗೊಳಿಸಿದೆ. ಇವರ ಉದ್ದೀಪನೆ ಉನ್ಮಾದವಾಗಿ ಜನರಲ್ಲಿ ತಳಮಳವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಕರಾವಳಿ ಕರ್ನಾಟಕದಲ್ಲಿ ಇರುವವರೆಲ್ಲರೂ ಮತೀಯವಾದಿಗಳಲ್ಲಾ. ಬಹುಸಂಖ್ಯಾತರಿಗೆ ಈ ಕೋಮು ಗಲಭೆ, ಹಿಂಸಾಪಾತ, ಧರ್ಮದ್ವೇಷಗಳು ಬೇಕಾಗೆ ಇಲ್ಲಾ. ಆದರೆ.. ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ಈ ಮತೀಯವಾದಿಗಳು ತಮ್ಮ ಧರ್ಮದ್ವೇಷ ಪ್ರಚೋದನೆಯನ್ನು ಸಮಾಜದಲ್ಲಿ ಪಸರಿಸಿ ಆತಂಕದ ವಾತಾವರಣವನ್ನು ನಿರ್ಮಿಸುತ್ತಲೆ ಇರುತ್ತಾರೆ. ಅದರಲ್ಲೇ ಅವರ ಅಸ್ತಿತ್ವವಿದೆ. ಆದರೆ ಈ ಹುನ್ನಾರಗಳನ್ನು ಪ್ರಜ್ಞಾವಂತರು ಪ್ರತಿರೋಧಿಸಬೇಕು. ಮತೀಯಶಕ್ತಿಗಳ ಈ ಅತಿರೇಕವನ್ನು ದಕ್ಷಿಣ ಕನ್ನಡ ಮಾತ್ರವಲ್ಲಾ ಇಡೀ ಕರ್ನಾಟಕದ ಕಲಾವಿದರು, ರಂಗಕರ್ಮಿಗಳು, ಯಕ್ಷಗಾನ ತಂಡಗಳ ಮುಖ್ಯಸ್ತರುಗಳು ಹಾಗೂ ಸಾಹಿತ್ಯಕ- ಸಾಂಸ್ಕೃತಿಕ ಲೋಕದ ನಾಯಕರುಗಳು ಖಂಡಿಸಬೇಕು. ಕಲೆಯ ವಿಚಾರದಲ್ಲಿ ನಿರ್ಬಂಧಗಳನ್ನು ಹಾಕಲು ಬಯಸುವ ಕೋಮುವಾದಿಗಳ ಕುತಂತ್ರವನ್ನು ಧಿಕ್ಕರಿಸಬೇಕು. ಯಕ್ಷಗಾನ ಕಲಾವಿದರುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಬೇಕು. ಹಿಂದುತ್ವವಾದಿಗಳ ಹಿಕ್ಮತ್ತನ್ನು ಸೋಲಿಸಬೇಕಿದೆ. 

  -ಶಶಿಕಾಂತ ಯಡಹಳ್ಳಿ        






ಮಂಗಳವಾರ, ಮೇ 30, 2017

ರಂಗದ ಮೇಲೆ ಕಾಲೂರದೇ ಕುಂಟಿದ “ಒಂಟಿ ಕಾಲಿನ ನಡಿಗೆ” :



ಒಂಟಿ ಕಾಲಿನ ನಡಿಗೆ ನಾಟಕವಾದ ಗಳಿಗೆ :




ಆತ್ಮಕಥಾನಕಗಳನ್ನು ಅಕ್ಷರ ಮಾಧ್ಯಮದಲ್ಲೇ ಓದುವುದು ಚೆಂದ. ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ಸಂವಹನಗೊಳಿಸುವುದು ಅಂದುಕೊಂಡಷ್ಟು ಸುಲಭಸಾಧ್ಯವಲ್ಲ ಎಂಬುದು ಎಲ್.ಹನುಮಂತಯ್ಯನವರ ಆತ್ಮಕಥೆಯನ್ನು ಓದಿ ಆ ನಾಟಕವನ್ನೂ ನೋಡಿದವರಿಗೆ ಅನ್ನಿಸದೇ ಇರದು. ದಲಿತ-ಬಂಡಾಯ ಸಾಹಿತ್ಯ ಪ್ರಕಾರದ ಪ್ರಮುಖ ಕವಿ ಲೇಖಕ ಸಂಘಟಕರಾದ ಎಲ್.ಹುನುಮಂತಯ್ಯನವರು ಅಗ್ನಿ ವಾರಪತ್ರಿಕೆಯಲ್ಲಿ ತಮ್ಮ ಬದುಕಿನ ಪ್ರಮುಖ ಘಟನೆಗಳನ್ನು ದಾರಾವಾಹಿ (ಕಾಲಂ) ರೂಪದಲ್ಲಿ ಬರೆದಿದ್ದರು. ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಒಂಟಿ ಕಾಲಿನ ನಡಿಗೆ ಹೆಸರಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಬಿಇಎಲ್ ರಂಗಕರ್ಮಿ ಕೆ.ಜೆ.ಶಂಕರಪ್ಪನವರು ಈ ಆತ್ಮಕಥನವನ್ನು ಆಧರಿಸಿ ರಂಗರೂಪಗೊಳಿಸಿದ್ದು ಮಾಲತೇಶ ಬಡಿಗೇರರವರು ನಾಟಕವಾಗಿ ನಿರ್ದೇಶಿಸಿದ್ದಾರೆ. ಜೂನ್ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಒಂಟಿ ಕಾಲಿನ ನಡಿಗೆ ಪುಸ್ತಕದ ಬಿಡುಗಡೆಯ ನಂತರ ನಾಟಕವೂ ಪ್ರದರ್ಶನಗೊಂಡು ಎಲ್.ಹನುಮಂತಯ್ಯನವರ ಬದುಕು ಹಾಗೂ ಸಾಧನೆಯನ್ನು ಸಾದರಪಡಿಸಿತು.
ಎಲ್. ಹನುಮಂತಯ್ಯವಲ್ಲಿ ಬಂಡಾಯ ಸ್ವಭಾವ ಬೆಳೆದು ಬಂದ ಮೂಲ ಇರುವುದು ಅವರ ತಾತನಲ್ಲಿ ಎಂಬುದು ಈ ನಾಟಕದಿಂದ ಗೊತ್ತಾಯಿತು. ಊರ ತಳವಾರಿಕೆಯ ಕರಿಹನುಮ ಗೇಯಲು ಜಮೀನು ಬೇಕೆಂದು ಊರ ಗೌಡ ಹಾಗೂ ಶಾನುಭೋಗರನ್ನು ಒತ್ತಾಯಿಸಿ ನಿರಾಸೆಗೊಂಡು ಸುಮ್ಮನಾಗದೇ ರಾಮೇಶ್ವದಿಂದ ಮೈಸೂರಿಗೆ ಇನ್ನೂರು ಮೈಲಿ ದೂರ ನಡೆದೇ ಹೋಗಿ ಮೈಸೂರಿನ ಮಹಾರಾಜರಿಗೆ ಅರ್ಜಿಕೊಟ್ಟು ಭೂಮಿ ಹಕ್ಕಿಗೆ ಅನುಮತಿ ಪಡೆದುಕೊಂಡ ಛಲದಂಕ ಮಲ್ಲ. ದೇವರು ವರ ಕೊಟ್ಟರೂ ಪೂಜಾರಿಗಳು ವರ ಕೊಡದೇ ಸತಾಯಿಸಿದಾಗ ಶಾನುಭೋಗರನ್ನೇ ಅಡ್ಡಗಟ್ಟಿ ಹೆದರಿಸಿ ಭೂಮಿ ಮಂಜೂರು ಮಾಡಿಸಿಕೊಂಡು ಹೊಲದೊಡೆಯನಾದ ಕರಿಹನುಮನ ತೀವ್ರ ಪ್ರತಿಭಟನೆ ನಿಜಕ್ಕೂ ಶ್ಲಾಘನೀಯ. ತಾತನ ಛಲ ಹಾಗೂ ಪ್ರತಿಭಟನೆಯ ಮನೋಭಾವವನ್ನು ಬೆಳೆಸಿಕೊಂಡು ಸಂಕಷ್ಟದಿಂದ ಓದು ಕಲಿತು ಒಂಟಿ ಕಾಲಿನ ಅಂದರೆ ಕೊರತೆಗಳ ನಡಿಗೆಯಲ್ಲೇ  ಗುರಿಯತ್ತ ಸಾಗಿದ ಹನುಮಂತಯ್ಯನವರ ಸಾಧನೆ ಸಾಮಾನ್ಯವಾದುದೇನಲ್ಲಾ. ಜೀತಗಾರನ ಮಗನೊಬ್ಬ ಬರಹ, ಸಂಘಟನೆ ಹಾಗೂ ಹೋರಾಟಗಳ ಸಾಧ್ಯತೆಗಳನ್ನೆಲ್ಲಾ ಬಳಸಿಕೊಂಡು ಸಕ್ರೀಯ ರಾಜಕಾರಣಿಯಾಗಿ  ಶಾಸಕನಾಗಲು (ಎಂಎಲ್‌ಸಿ) ಸಾಧ್ಯವೆಂಬುದಕ್ಕೆ ಎಲ್.ಹನುಮಂತಯ್ಯನವರೇ ಉದಾಹರಣೆ. ಈ ನಾಟಕ ಕೂಡಾ ಇದನ್ನೇ ಹೇಳಲು ಪ್ರಯತ್ನಿಸುತ್ತದೆ.


ತಾತ ಛಲದಿಂದ ಕಂದಾಯ ಭೂಮಿ ಪಡಿದಿದ್ದು, ತಂದೆ ಲೆಂಕಪ್ಪ ಜೀತ ಮಾಡುತ್ತಾ ಜೀವನ ಸಾಗಿಸಿದ್ದು, ತಾಯಿ ಚೆನ್ನಮ್ಮ ಹಾವು ಕಡಿದು ನರಳಿದ್ದು, ಓಲೆ ಕದ್ದ ಅತ್ತೆಯಿಂದ ತಾಯಿ ಉಪಾಯವಾಗಿ ಓಲೆ ಮರಳಿ ಪಡೆದಿದ್ದು, ಹತ್ತನೇ ತರಗತಿ ಮುಗಿಸಿದ ಹನುಮಂತಯ್ಯನವರು ಬೆಂಗಳೂರಿನ ಹಾಸ್ಟೆಲ್ ಸೇರಿದ್ದು, ಕಾಲೇಜಿನ ಲಲಿತಕಲಾ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಡಿಗ್ರಿ ಮುಗಿಸಿ ದಲಿತ ಸಂಘರ್ಷ ಸಮೀತಿ ಸೇರಿ ದೌರ್ಜನ್ಯ ವಿರೋಧಿಸಿ ಕಾಲ್ನಡಿಗೆ ಜಾತಾದ ನೇತೃತ್ವವಹಿಸಿದ್ದು, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದು, ಕಥೆಗಾರ ಬೆಸಗರಹಳ್ಳಿ ರಾಮಣ್ಣನವರು ಕೊನೆಗಾಲದಲ್ಲಿ ಜಾತಿ ವ್ಯವಸ್ಥೆಯ ಪಶ್ಚಾತ್ತಾಪಕ್ಕೊಳಗಾಗಿ ಬಲವಂತದಿಂದ ದಲಿತ ಹನುಮಂತಯ್ಯನವರಿಗೆ ಹಾಲು ಕುಡಿಸಿ ಆ ಎಂಜಲಾದ ಹಾಲನ್ನು ಸೇವಿಸಿದ್ದನ್ನೆಲ್ಲಾ.... ದೃಶ್ಯ ಹಾಗೂ ನಿರೂಪನೆಗಳ ಮೂಲಕ ಸಂವಹನ ಮಾಡುವ ಈ ನಾಟಕವು ಕೊನೆಗೆ ಸರ್ವಧರ್ಮ ಸಮಾನತೆಯನ್ನು ಸಾರುವ ಮೂಲಕ ಕೊನೆಯಾಗುತ್ತದೆ.

ಆತ್ಮಕಥೆಯಲ್ಲಿ ಇರುವ ವಿವರಗಳನ್ನೆಲ್ಲಾ ದೃಶ್ಯಕ್ಕಳವಡಿಸುವುದು ಅಸಾಧ್ಯ. ಅದಕ್ಕಾಗಿ ನರೇಟಿವ್ ಫಾರಂ ಬಳಸುವುದು ಅನಿವಾರ್ಯವಾಗುತ್ತದೆ.  ಸಾಧ್ಯವಾದಷ್ಟೂ ನಿರೂಪನೆಗಳಿಗಿಂತಾ ದೃಶ್ಯಗಳಲ್ಲಿ ನಾಟಕ ಕಟ್ಟಿಕೊಟ್ಟರೆ ಪ್ರದರ್ಶನ ಪ್ರೇಕ್ಷಕರ ಅನುಭವಕ್ಕೆ ದಕ್ಕುತ್ತದೆ. ನಿರೂಪನಾ ಪ್ರಧಾನವಾದ ಈ ನಾಟಕದಲ್ಲಿ ಅಗತ್ಯಕ್ಕೆ ತಕ್ಕಂತೆ ದೃಶ್ಯಗಳನ್ನೂ ಸಂಯೋಜನೆ ಮಾಡಲಾಗಿದೆಯಾದರೂ ಅವೆಲ್ಲಾ ಬಿಡಿ ಬಿಡಿ ಘಟನೆಗಳ ಪ್ರಸ್ತುತಿಯಾಗಿದ್ದು ಇಡಿಯಾಗಿ ನಾಟಕ ನೋಡಿದ ಅನುಭವ ದಕ್ಕಲಿಲ್ಲ. ದೃಶ್ಯಗಳ ಜೋಡನೆಯಲ್ಲಿ ಒಂದಕ್ಕೊಂದು ಲಿಂಕ್ ಇದ್ದಿದ್ದರೆ.. ಏನು ಹೇಳಬೇಕು ಎನ್ನುವುದು ನಿರ್ದೇಶಕರಿಗೆ ಸ್ಪಷ್ಟತೆ ಇದ್ದಿದ್ದರೆ.. ವಿವರಗಳಿಗಿಂತಾ ರೂಪಕಗಳಿಗೆ ಹೆಚ್ಚು ಗಮನ ಕೊಟ್ಟಿದ್ದರೆ.. ಆತ್ಮಕಥನ ನಾಟಕವಾಗಿ ಮೂಡಿ ಬರುತ್ತಿತ್ತು.


ಮಾಲತೇಶ ಬಡಿಗೇರರಂತಹ ಕ್ರಿಯಾಶೀಲ ನಿರ್ದೇಶಕರ ಮೇಲೆ ಅತೀ ಹೆಚ್ಚು ನಿರೀಕ್ಷೆಗಳಿರುತ್ತವೆ. ವಿಭಿನ್ನವಾಗಿ ನಾಟಕವನ್ನು ಮಾಡಿಸುತ್ತಾರೆ ಎನ್ನುವ ನಂಬಿಕೆ ಇರುತ್ತದೆ. ಆದರೆ ಅದ್ಯಾಕೋ ಈ ನಾಟಕವನ್ನು ಅತೀ ನೀರಸವಾಗಿ ಅವಸರದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ನಿರ್ದೇಶನದ ಛಾಪು ಕಾಣಿಸುತ್ತಿಲ್ಲಾ. ಉಚಲ್ಯಾ ನಾಟಕದ ಮಾದರಿಯಲ್ಲೇ ಎಲ್.ಹನುಮಂತಯ್ಯನವರ ಆತ್ಮಕಥನದ ಡಾಕ್ಯೂಡ್ರಾಮಾ ಮಾದರಿಯ ವಿನ್ಯಾಸವಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಈ ಆತ್ಮಕಥನವನ್ನು ನಾಟಕವಾಗಿಸಲು ಹೊಸ ಮಾದರಿಯ ವಿನ್ಯಾಸವನ್ನು ರೂಪಸಿ ರೋಚಕವಾಗಿ ನಿರ್ದೇಶಿಸಿದ್ದರೆ ಪ್ರೇಕ್ಷಕರ ಮನದೊಳಗೆ ಒಂಟಿ ಕಾಲಿನ ನಡಿಗೆ ಪಯಣಿಸಬಹುದಿತ್ತು. ಹಾಗಾಗಲಿಲ್ಲ ಎನ್ನುವುದೇ ಈ ನಾಟಕದ ಕೊರತೆಯಾಗಿದೆ.

ಆತ್ಮಕಥೆ ಯಾಕೆ ಬರೆಯಬೇಕು? ಅದರ ಉದ್ದೇಶವೇನು? ಎನ್ನುವ ಕುರಿತ ಆರಂಭಿಕ ಟಿಪ್ಪಣಿಗಳನ್ನೆಲ್ಲಾ ನಾಟಕದಲ್ಲಿ ಹೇಳುವ ಅಗತ್ಯವಿರಲಿಲ್ಲಾ. ಈ ಪೀಠಿಗೆ ಮುನ್ನುಡಿಗಳು ಪುಸ್ತಕಕ್ಕೆ ಸರಿ.. ನಾಟಕಕ್ಕೆ ಯಾಕೆ ಬೇಕರಿ..? ಹನುಮಂತಯ್ಯನವರೇ ಬರೆದ ಹಲವಾರು ಕವಿತೆಗಳ ಸಾಲುಗಳನ್ನೇ ಬಳಸಿಕೊಂಡು ಕಾವ್ಯಾತ್ಮಕ ಸಂಭಾಷಣೆಗಳನ್ನು ಹೆಣೆದು, ದೃಶ್ಯಗಳನ್ನು ಒಂದಕ್ಕೊಂದು ಪೂರಕವಾಗಿ ಜೋಡಿಸಿದ್ದರೆ ನಾಟಕ ದೃಶ್ಯಕಾವ್ಯವಾಗಬಹುದಾಗಿತ್ತು. ಸನ್ನಿವೇಶಕ್ಕೆ ಪೂರಕವಾಗಿ ಹನುಮಂತಯ್ಯನವರ ಪದ್ಯಗಳನ್ನು ನಾಟಕದಾದ್ಯಂತ ಅಗತ್ಯವಿದ್ದಾಗಲೆಲ್ಲಾ ರೂಪಕವಾಗಿಸಿ ಉಪಯೋಗಿಸಿದ್ದರೆ ನಾಟಕದ ಗತಿಯೇ ಭಿನ್ನವಾಗುತ್ತಿತ್ತು. ಕುತೂಹಲಕಾರಿ ಸನ್ನಿವೇಶ, ನಾಟಕೀಯ ತಿರುವುಗಳು, ರೋಚಕತೆ ಹುಟ್ಟಿಸುವ ಸಂಭಾಷಣೆ ಹಾಗೂ ಮುದಕೊಡುವ ಹಾಸ್ಯಪ್ರಜ್ಞೆ ಇಲ್ಲದೇ ಹೋದರೆ ಆತ್ಮಕತೆ ಆಧಾರಿತ ನಾಟಕಗಳು ನೀರಸವಾಗುತ್ತವೆ ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿ. ಜಾಳುಜಾಳಾಗಿರುವ ರಂಗರೂಪಕ್ಕೆ ಇನ್ನೂ ಗಟ್ಟಿತನ ಬರಬೇಕಿದೆ. ಬಿಡಿ ಬಿಡಿ ದೃಶ್ಯಗಳನ್ನು ಒಂದು ಬಂಧದಲ್ಲಿ ಜೋಡಿಸಿ ಇಡಿಯಾಗಿ ನಾಟಕವನ್ನು ಕಟ್ಟಬೇಕಿದೆ. ತಳಸಮುದಾಯದ ವ್ಯಕ್ತಿಯೊಬ್ಬ ಎಲ್ಲ ಕೊರತೆಗಳ ನಡುವೆಯೂ ಗಮನಾರ್ಹವಾಗಿ ಬೆಳೆದ ಪರಿಯನ್ನು ಪರಿಣಾಮಕಾರಿಯಾಗಿ ತೋರಿಸುತ್ತಾ ದಮನಿತ ವರ್ಗದ ಯುವಕರಿಗೆ ಪ್ರೇರಣೆಯಾಗುವಂತೆ ಈ ನಾಟಕ ಮೂಡಿ ಬರಬೇಕಿದೆ. ಅದಕ್ಕಾಗಿ ನಿರ್ದೇಶಕರು ಇಡೀ ನಾಟಕವನ್ನು ಮರಳಿ ಕಟ್ಟಬೇಕಿದೆ.


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬುದೇ ಇರಲಿಲ್ಲಾ. ಆದರೂ ಮಹಾರಾಜರ ಕಾವಲುಗಾರರನ್ನು ಬೇಟಿಯಾದ ಕರಿಹನುಮ ನಾನು ಗ್ರಾಮಾಂತರ ಜಿಲ್ಲೆಯಿಂದ ಬಂದೆ ಎನ್ನುವುದು ಬೇಕಿರಲಿಲ್ಲ. ತನ್ನ ಊರಿನ ಹೆಸರು ಹೇಳಿದ್ದರೆ ಸಾಕಿತ್ತು. ಕಾಲೇಜಿನ ಚುನಾವಣೆಯಲ್ಲಿ ಸಹಪಾಠಿಗಳೆಲ್ಲಾ ಹನುಮಂತಯ್ಯನವರಿಗೆ ಎಂದು ಗೌರವಪೂರ್ವಕವಾಗಿ ಸಂಬೋಧಿಸಿ ಮಾತಾಡುವುದು ಅನಗತ್ಯ. ಮುಂದೆ ಹನುಮಂತಯ್ಯವನವರು ಗೌರವಾನ್ವತರಾಗಿರಬಹುದು ಆದರೆ ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಗಳು ದಲಿತ ಹುಡುಗನಿಗೆ ಇಷ್ಟೊಂದು ಮರ್ಯಾದೆ ಕೊಟ್ಟು ಮಾತಾಡುವುದು ಅವಾಸ್ತವವೆನಿಸುತ್ತದೆ. ಮದ್ದೂರಯ್ಯನ ದೃಶ್ಯ ಇಲ್ಲದೆ ನಿರೂಪಕನ ಮಾತಲ್ಲಿ ಹೇಳಿಸಿದ್ದರೂ ನಾಟಕಕ್ಕೆ ಬಾಧೆ ಇರುತ್ತಿರಲಿಲ್ಲ. ಹನುಮಂತಯ್ಯನವರನ್ನೇ ನಿರೂಪಕರನ್ನಾಗಿ ತರುವ ಬದಲು ಗುಂಪು ಕೋರಸ್ ಬಳಿಸಿಯೇ ದೃಶ್ಯದ ವಿವರಗಳನ್ನು ಕಟ್ಟಿಕೊಟ್ಟಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು. ನಾಟಕದ ಕೊನೆಗೆ ಎಲ್ಲಾ ಧರ್ಮಗಳ ಸಿಂಬಲ್ ಬಳಸಿ ಸರ್ವಧರ್ಮ ಸಮನ್ವಯವನ್ನು ಹೇಳುವುದು ತುಂಬಾ ಘೋಷನಾತ್ಮಕವಾಗಿ ಬಂದಿದ್ದು, ನಾಟಕದ ಪಠ್ಯಕ್ಕೂ ಈ ಕ್ಲೈಮ್ಯಾಕ್ಸಿಗೂ ಸಂಬಂಧವೇ ಇಲ್ಲವಾಗಿದೆ. ಯಾಕೆಂದರೆ ನಾಟಕದಲ್ಲಿ ಎಲ್ಲೂ ಧರ್ಮಗಳ ಪ್ರಸ್ತಾಪವೇ ಬರುವುದಿಲ್ಲವಾದರೂ ಎಲ್ಲ ಧರ್ಮ ಸಮನ್ವಯದ ಸಂದರ್ಭ ಕೊನೆಗೆ ಬಂದಿದ್ದಾದರೂ ಯಾಕೆ? ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡದೇ ಇರದು.  ಹೀಗೆ.. ಕೆಲವಾರು ಬದಲಾಯಿಸಬಹುದಾದ ನ್ಯೂನ್ಯತೆಗಳನ್ನು ಸರಿಪಡಿಸಿದರೆ ಮುಂದಿನ ಪ್ರದರ್ಶನ ಇನ್ನೂ ಚೆನ್ನಾಗಿ ಮೂಡಿ ಬರಬಹುದಾಗಿದೆ.


ಇಷ್ಟಕ್ಕೂ ಈ ನಾಟಕದ ಉದ್ದೇಶವಾದರೂ ಏನು? ಜಾತಿ ಅಸಮಾನತೆಯನ್ನು ಹೇಳಬೇಕಿತ್ತು. ಎಲ್ಲಿಯೂ ಅದರ ತೀವ್ರತೆ ಕಂಡುಬಂದಿಲ್ಲಾ. ಗೌಡತಿ ದಲಿತರಿಗೆ ಊಟ ನೀಡುವಾಗಲಾದರೂ ದೂರದಿಂದ ಎತ್ತೆತ್ತಿ ಮುದ್ದೆ ಎಸೆದಿದ್ದರೆ ಜಾತಿಯ ಭೀಕರತೆ ಸಾಂಕೇತಿಕವಾಗಿ ತೋರಿಸಿದಂತಾಗುತ್ತಿತ್ತು. ಹಸಿವಿಗಾಗಿ ಸುಳ್ಳು ಹೇಳಿದ ಹುಡುಗನ ನೋವನ್ನು ತೋರಿಸಿದಂತೆಯೇ ಗೌಡತಿಗೆ ದಲಿತರ ಬಗ್ಗೆ ಇರುವ ಅನಾದರವನ್ನೂ ತೋರಿತಬಹುದಾಗಿತ್ತು. ದಲಿತ ಸಮುದಾಯದಿಂದ ಬಂದ ಹನುಮಂತಯ್ಯನವರೇ ಕೇಂದ್ರವಾಗಿರುವ ಈ ನಾಟಕದಲ್ಲಿ ಜಾತಿ ಕಾರಣಕ್ಕೆ ಅವರು ಅನುಭವಿಸಿದ ನೋವು ಅವಮಾನಗಳು ಹಾಗೂ ಅವರು ಕಂಡುಕೊಂಡ ದಾರಿಗಳ ಬಗ್ಗೆ ಹೇಳಬಹುದಾಗಿತ್ತು. ಆತ್ಮಕಥೆಯಲ್ಲಿ ನಿರೂಪಗೊಂಡ ಅವರ ರಕ್ತಸಂಬಂಧಿ ಮದುವೆ ಹಾಗೂ ಅದರ ಪರಿಣಾಮಗಳಿಂದಾಗಿ ಬೆಳೆದು ನಿಂತ ಇಬ್ಬರು ಮಕ್ಕಳ ಸಾವಿನ ಸನ್ನಿವೇಶಗಳನ್ನಾದರೂ ಸೃಷ್ಟಿಸಿದ್ದರೆ ರಕ್ತಸಂಬಂಧದಲ್ಲಿ ಮದುವೆಯಾಗುವುದು ತಪ್ಪು ಎನ್ನುವ ಸಂದೇಶವನ್ನಾದರೂ ತಲುಪಿಸಬಹುದಿತ್ತು. ಅಂಬೇಡ್ಕರರವರ ಪ್ರಭಾವ ಅದು ಹೇಗೆ ಹನುಮಂತಯ್ಯನವರನ್ನು ಪ್ರಭಾವಿಸಿತು ಎನ್ನುವ ಕುರಿತ ಸನ್ನಿವೇಶ ಇದ್ದಿದ್ದರೆ ಅನೇಕರಿಗೆ ಅದು ಪ್ರೇರಣೆಯಾಗಬಹುದಾಗಿತ್ತು. ಆದರೆ... ಹಲವಾರು ಪ್ರಮುಖ ಅಂಶಗಳನ್ನು ಬದಿಗಿಟ್ಟು ಕೆಲವೇ ಬಿಡಿ ದೃಶ್ಯಗಳನ್ನು ಜಾಳುಜಾಳಾಗಿ ಕಟ್ಟಿಕೊಟ್ಟಿದ್ದರಿಂದ ನಾಟಕ ಪ್ರಾಯೋಗಿಕವಾಗಿ ದುರ್ಬಲವಾಯಿತು. ನೋಡುಗರಲ್ಲಿ ನಿರಾಶೆಯನ್ನುಂಟು ಮಾಡಿತು.
  

ನಾಟಕದಲ್ಲಿ ಆಗಾಗ ಬಳಸಿದ ಹಾಡುಗಳು ಸೊಗಸಾಗಿ ಮೂಡಿಬಂದಿವೆ. ಹನುಮಂತಯ್ಯನವರೇ ರಚಿಸಿದ ಶತಮಾನದ ಸೇಡಿನ ಕಿಡಿ ಜಗದೊಳಗಿನ ಲೋಕವೇ, ಒಡಲಿನಾಳದಿಂದ ಬಂದ ಅರಿವಿನ ಆಸ್ಪೋಟವೇ.. ಎನ್ನುವ ಆರಂಭಿಕ ಹಾಡು ಹಾಗೂ ಸಂಗೀತ ಕೇಳುಗರನ್ನು ಎಚ್ಚರಿಸುವಂತಿದೆ. ಆದರೆ ಇದಕ್ಕೆ ಪೂರಕವಾಗಿ ಕಲಾವಿದರು ನಿಂತಲ್ಲೇ ನಿಂತು ಕೈ ಎತ್ತುವ ಬದಲು ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ಚಲಿಸಿ ರೂಪಕವನ್ನು ಸೃಜಿಸಿದ್ದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಗುಬ್ಯಾರೋ ಮಳೆ ಬಂದು ಗುಬ್ಯಾರೋ.. ಮಣ್ಣಾಗಿ ಹೋದರು ಗುಬ್ಯಾರೋ.. ಎನ್ನುವ ಜಾನಪದ ಗೀತೆಯ ಬಳಕೆ ಹಾಗೂ ಅದಕ್ಕೆ ಪೂರಕವಾಗಿ ರೂಪಗೊಂಡ ಸನ್ನಿವೇಶವು ಪ್ರೇಕ್ಷಕರಲ್ಲಿ ಬರದ ತೀವ್ರತೆ ಹಾಗೂ ಬಡಜನರ ಬವಣೆಯ ಮೂಡನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಹಾಡಿಗೆ ಸಂಗೀತ ಸಂಯೋಜನೆ ಮಾಡುವಲ್ಲಿ ಸ್ವಾಮಿ ದಾಮನಹಳ್ಳಿಯವರು ಗೆದ್ದಿದ್ದಾರೆ. ಆದರೆ ನಾಟಕದಲ್ಲಿ ಸಂಭಾಷಣೆಗಳಿರುವಾಗ ಅನಗತ್ಯವಾಗಿ ಹಿನ್ನೆಲೆ ಸಂಗೀತ ಕೊಟ್ಟರೆ ಕೇಳುಗರಿಗೆ ಕಿರಿಕಿರಿಯಾಗುತ್ತದೆ ಎನ್ನುವ ಅರಿವು ಇದ್ದರೆ ಉತ್ತಮ.

ನವೀನ್ ಮಂಡ್ಯರವರು ಮಾಡಿದ ಬೆಳಕಿಗೆ ಒಂದು ಪಕ್ಕಾ ಸಂಯೋಜನೆ ಎನ್ನುವುದೇ ಇರಲಿಲ್ಲಾ. ಬೆಳಕು ಇರುವುದು ಕೇವಲ ದೃಶ್ಯಗಳನ್ನು ಬೆಳಗಲು ಮಾತ್ರವಲ್ಲಾ ನೋಡುಗರಲ್ಲಿ ಮೂಡ್ ಹುಟ್ಟಿಸಲು ಎನ್ನುವ ಅರಿವು ಇದ್ದಲ್ಲಿ ಬೆಳಕಿನ ವಿನ್ಯಾಸ ನಾಟಕಕ್ಕೆ ತನ್ನ ಕೊಡುಗೆಯನ್ನು ಕೊಡಲು ಸಾಧ್ಯ. ಈ ನಾಟಕದ ಆಶಯವನ್ನು ಹೇಳುವಂತಹ ಸ್ಥಿರವಾದ ಪೇಂಟಿಂಗ್ ಚಿತ್ರದ ಬ್ಯಾಕ್‌ಡ್ರಾಪ್ ಬಳಸಲಾಗಿದೆ. ಆದರೆ ಅದು ಎಲ್ಲಾ ದೃಶ್ಯಗಳಿಗೂ ಪೂರಕವಾಗುವಂತಿಲ್ಲಾ. ಉತ್ತಮ ರಂಗಸಜ್ಜಿಕೆ ವಿನ್ಯಾಸಕರಾದ ಮಾಲತೇಶ್ ಬಡಿಗೇರ್‌ರವರು ಸನ್ನಿವೇಶಗಳಿಗೆ ಪೂರಕವಾಗಿ ಸೆಟ್ ವಿನ್ಯಾಸಗೊಳಿಸಿದರೆ ಅಥವಾ ಅಗತ್ಯವಾದ ಬದಲಾವಣೆಗಳನ್ನು ಮಾಡಿದರೆ ನಾಟಕ ಇನ್ನೂ ಚೆನ್ನಾಗಿ ಮೂಡಿ ಬರುವುದರಲ್ಲಿ ಸಂದೇಹವಿಲ್ಲಾ.    


ನಾಟಕದ ಕಥಾ ನಿರೂಪಣೆಗೆ ಗುಂಪು ಕೋರಸ್ ತಂತ್ರಗಾರಿಕೆಯನ್ನು ಬಳಸಲಾಗಿದೆ. ಅದನ್ನೇ ಇನ್ನೂ ಸಮರ್ಥವಾಗಿ ನಾಟಕದಾದ್ಯಂತ ಸಂವಹನ ಮಾಡಿದ್ದರೂ ನಾಟಕ ಗೆಲ್ಲುತ್ತಿತ್ತು. ಆದರೆ.. ಹನುಮಂತಯ್ಯನವರ ಪಾತ್ರವನ್ನೂ ಸೃಷ್ಟಿಸಿ ಅವರಿಂದಲೂ ಘಟನೆಗಳ ನಿರೂಪನೆ ಮಾಡಿಸಿದ್ದು ಗೊಂದಲಕ್ಕೆ ಕಾರಣವಾಯಿತು. ಅತ್ತೆ ಪಾತ್ರ ಮಾಡಿ ಗಮನ ಸೆಳೆದ ಹನುಮಕ್ಕ ಹಾಗೂ ಬೆಸಗರಹಳ್ಳಿ ರಾಮಣ್ಣನವರ ಪಾತ್ರಕ್ಕೆ ಜೀವದುಂಬಿದ ಕಗ್ಗೆರೆ ಮಂಜ ಈ ಇಬ್ಬರನ್ನು ಹೊರತು ಪಡಿಸಿ ಮಿಕ್ಕೆಲ್ಲ ಪಾತ್ರದಾರಿಗಳೂ ಹೊಸಬರು. ಅವರಿಗೆ ಇನ್ನೂ ವಾಚಿಕ ಹಾಗೂ ಆಂಗಿಕ ತರಬೇತಿಯ ಅಗತ್ಯವಿದ್ದು ಎಲ್ಲರನ್ನೂ ಸಾತ್ವಿಕಾಭಿನಯದ ಕೊರತೆ ಇತ್ತು. ರಿಹರ್ಸಲ್ಸ್ ಕೊರತೆ ನಾಟಕದಾದ್ಯಂತ ಎದ್ದು ಕಾಣುವಂತಿದ್ದು ಅವಸರಕ್ಕೆ ನಾಟಕ ಮಾಡಿದ್ದು ಕಂಡುಬಂದಿತು. ಹನುಮಂತಯ್ಯನಂತಹ ಅನುಭವಿ ಬರಹಗಾರರು, ಮಾಲತೇಶ ಬಡಿಗೇರರಂತಹ ಕ್ರಿಯಾಶೀಲ ನಿರ್ದೇಶಕರು ಇದ್ದಾಗ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿರ್ದೇಶಕರ ಮೇಲಿದೆ. ಗುಂಪು ಬಳಕೆಯಲ್ಲೂ ಇನ್ನೂ ಆಕರ್ಷಕ ಸಂಯೋಜನೆ ಮಾಡಬಹುದಾಗಿದೆ. ನಿರ್ದೇಶಕರು ಹಾಗೂ ಕಲಾವಿದರುಗಳು ಇನ್ನೂ ಹೆಚ್ಚು ಪರಿಶ್ರಮ ವಹಿಸಿದರೆ ಮುಂದಿನ ಪ್ರದರ್ಶನದಲ್ಲಿ ಈ ನಾಟಕ ಇನ್ನೂ ಗಟ್ಟಿಯಾಗಿ ಮೂಡಿಬರಬಹುದಾಗಿದೆ. ಕನ್ನಡ ರಂಗಭೂಮಿಗೆ ಆತ್ಮಕತೆಯೊಂದು ಉತ್ತಮ ನಾಟಕವಾಗಿ ದಕ್ಕಬಹುದಾಗಿದೆ. 

                -ಶಶಿಕಾಂತ ಯಡಹಳ್ಳಿ    

     


ಸೋಮವಾರ, ಮೇ 29, 2017

ಬಂಡವಾಳಿಗರ ಬೆತ್ತಲಾಗಿಸುವ “ಚಿಲ್ಲರೆ ಸಮರಮ್” :





 
ಸರಕು ಸಂಸ್ಕೃತಿಯ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ದುಡಿಯುವ ವರ್ಗದವರ ಬದುಕು ಚಿದ್ರಗೊಳ್ಳುತ್ತಿದೆ. ದೊಡ್ಡ ಮೌಲ್ಯವಿಲ್ಲದೆ ಬರೀ ಸದ್ದು ಮಾಡುವ ಚಿಲ್ಲರೆಗಳ ಅಪಮೌಲ್ಯೀಕರಣ ಮಾಡಿ ನೋಟಿನ ಸಾಮ್ರಾಜ್ಯ ಸ್ಥಾಪಿಸಲು ಆಳುವ ವರ್ಗಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಬಹುಸಂಖ್ಯಾತ ದುಡಿಯುವ ಜನರ ಹಾಡು ಹಸೆ ಕಲೆ ಸಂಸ್ಕೃತಿಯನ್ನು ಒಡೆದು ಹಾಕಿ ಕಾರ್ಪೋರೇಟೀಕೃತ ಯಾಂತ್ರಿಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಬಂಡವಾಳಶಾಹಿಗಳ ಹುನ್ನಾರ ನಡೆಯುತ್ತಲೇ ಇರುತ್ತದೆ. ಹೀಗೆ... ಬಡವರ ಬದುಕು ಬವಣೆ ಹಾಗೂ ಬಂಡವಾಳಿಗರ ತಂತ್ರ-ಕುತಂತ್ರಗಳನ್ನು ಅನಾವರಣಗೊಳಿಸುವಂತಹ ಮಲಯಾಳಿ ನಾಟಕ ಚಿಲ್ಲರೆ ಸಮರಮ್.

ರಂಗನಿರಂತರ ಸಾಂಸ್ಕೃತಿಕ ಸಂಘವು ಮೇ15 ರಿಂದ 20ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಿತ್ತು. ಈ  ನಾಟಕೋತ್ಸವದ ಭಾಗವಾಗಿ ಮೇ 16 ರಂದು ಅರುಣ್ ಲಾಲ್‌ರವರ ನಿರ್ದೇಶನದಲ್ಲಿ ಕೇರಳದ ಲಿಟ್ಲ್ ಅರ್ಥ ಸ್ಕೂಲ್ ಆಫ್ ಥಿಯೇಟರಿನ ಕಲಾವಿದರಿಂದ ಚಿಲ್ಲರೆ ಸಮರಮ್ ನಾಟಕವು ಪ್ರದರ್ಶನಗೊಂಡು ನೋಡುಗರಲ್ಲಿ ಸೋಜಿಗವನ್ನು ಹುಟ್ಟಿಸಿತು. ಈ ನಾಟಕವನ್ನು ರಾಜೇಶ್‌ರವರು ರಚಿಸಿದ್ದು ಮಲೆಯಾಳಿ ಭಾಷೆಯಲ್ಲಿ ಪ್ರಸ್ತುತಗೊಂಡಿತು. 

ಬಂಡವಾಳಶಾಹಿ ಭಾರತದ ಸಮಕಾಲೀನ ಚಿತ್ರಣವನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡುವ ಈ ಚಿಲ್ಲರೆ ಸಮರಮ್ ನಾಟಕದ ಸಂಕ್ಷಿಪ್ತ ಸಾರ ಹೀಗಿದೆ. ದುಡಿಯುವ ಜನರು ಬುಡ್ಡೀ ದೀಪದ ಬೆಳಕಲ್ಲಿ ಹಾಡುಗಳನ್ನು ಹಾಡುತ್ತಾ, ಚಿಕ್ಕಪುಟ್ಟ ಚಿಲ್ಲರೆ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಬದುಕು ಸಾಗಿಸುತ್ತಿರುತ್ತಾರೆ. ನಗರಾಭಿವೃದ್ದಿ ಯೋಜನೆಯವರು ಬಂದು ಈ ಚಿಕ್ಕಪುಟ್ಟ ಪೆಟ್ಟಿ ಅಂಗಡಿಗಳನ್ನೆಲ್ಲಾ ತೆಗೆದು ಹಾಕಿ ಅಲ್ಲಿ ಬೃಹತ್ ವ್ಯಾಪಾರಿ ಮಾಲ್ ಕಟ್ಟಲು ಯೋಜನೆ ರೂಪಿಸುತ್ತಾರೆ. ಅವರ ಯೋಜನೆಗೆ ಈ ಚಿಲ್ಲರೆ ನಾಣ್ಯಗಳನ್ನು ಪ್ರಮುಖ ಅಡ್ಡಿಯೆಂದು ಭಾವಿಸುವ ಬಂಡವಾಳಿಗರು, ಬಡಜನರು ಹಾಗೂ ಚಿಲ್ಲರೆ ವ್ಯಾಪಾರಿಗಳೇ ಈ ನಾಣ್ಯಗಳ ವಹಿವಾಟಿಗೆ ಕಾರಣರೆಂದು ತಿಳಿದು ನಾಣ್ಯಗಳನ್ನು ಬ್ಯಾನ್ ಮಾಡಲು ಯೋಚಿಸುತ್ತಾರೆ. ಶ್ರಮಜೀವಿಗಳ ಹಾಡು ಹಾಗೂ ಬಳಸುವ ನಾಣ್ಯಗಳು ಅಭಿವೃದ್ದಿಗೆ ಮಾರಕವೆಂದು ತಿಳಿದು ಮೊದಲು 25 ಪೈಸೆಯನ್ನು ಬ್ಯಾನ್ ಮಾಡಿ ಆ ನಂತರ ಹಂತ ಹಂತವಾಗಿ ಎಲ್ಲಾ ನಾಣ್ಯಗಳನ್ನೂ ಅಪಮೌಲ್ಯ ಮಾಡಲು ಕಾರ್ಪೋರೇಶನ್ ಮೇಯರ್ ನಿರ್ಧರಿಸುತ್ತಾರೆ.

ದುಡಿಯುವ ಜನರ ಹಾಡು ಹಾಗೂ ಕುಣಿತಗಳನ್ನೂ ಕೂಡಾ ನಿಲ್ಲಿಸಿ ಅವರಿಗೆ ಹೊಸರೀತಿಯ ವಿಶೇಷ ಹಾಡು ಹಾಗೂ ನೃತ್ಯವನ್ನು ಹೇಳಿಕೊಡವ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ಬಂಡವಾಳಿಗರ ತಾಳಕ್ಕೆ ತಕ್ಕಂತೆ ಹಾಡು ಕುಣಿತಗಳನ್ನು ಮಾಡುತ್ತಾ ಶ್ರಮಜೀವಿಗಳು ಯಂತ್ರಗಳಾಗಿ ಮಾರ್ಪಡುತ್ತಾರೆ. ಯಾವಾಗ ಸಾಂಪ್ರದಾಯಿಕ ಹಾಡುಗಳು ಮತ್ತೆ ಜನರಿಂದ ದ್ವನಿಸುತ್ತವೋ ಆಗ ಯಂತ್ರಗಳು ನಿಂತು ಹೋಗುತ್ತವೆ. ನಗರಾಭಿವೃದ್ದಿ ಪ್ರತಿನಿಧಿಗಳು ಯಂತ್ರಗಳನ್ನು ಪರೀಕ್ಷಿಸಿ ಜನತೆಯ ಹಾಡೇ ಯಂತ್ರಗಳು ನಿಲ್ಲಲು ಕಾರಣವೆಂದು ಕಂಡುಹಿಡಿದು ಅವುಗಳನ್ನು ನಾಶಮಾಡಬೇಕು ಇಲ್ಲವೇ ವಸ್ತುಸಂಗ್ರಹಾಲಯದಲ್ಲಿ  ಇಡಬೇಕು ಎಂದು ಆಡಳಿತ ನಿರ್ಧರಿಸುತ್ತದೆ. ಯಾಂತ್ರೀಕೃತ ಹಾಡುಗಳಲ್ಲಿ ಬಂಧಿಯಾದ ಕಾರ್ಮಿಕರು ಮತ್ತೆ ತಮ್ಮ ಸಾಂಪ್ರದಾಯಿಕ ಹಾಡು ಹಾಗೂ ಕುಣಿತಗಳಿಂದ ಪ್ರೇರೇಪಿತರಾಗಿ ಬಂಡವಾಳಶಾಹಿಗಳ ಶೋಷಣೆಯ ವಿರುದ್ಧ ತಿರುಗಿ ಬಿಳುತ್ತಾರೆ. ನಾಣ್ಯಗಳಿರುವ ಮಣ್ಣಿನ ಹುಂಡಿ ಕೆಳಗೆ ಬಿದ್ದು ಚಿಲ್ಲರೆಗಳೆಲ್ಲಾ ಚೆಲ್ಲಾಪಿಲ್ಲಿಯಾಗುವಾಗ ನಾಟಕ ಅಂತ್ಯಗೊಳ್ಳುತ್ತದೆ. ನೋಡುಗರಲ್ಲಿ ಗೊಂದಲ ಹಾಗೂ ಸೋಜಿಗವನ್ನು ಹುಟ್ಟಿಸುತ್ತದೆ. 

ಮೇಲ್ನೋಟಕ್ಕೆ ಸರಳವೆಂದು ಅನ್ನಿಸುವ ಈ ನಾಟಕವು ಬಹಳ ಸಂಕೀರ್ಣವಾದ ಒಳನೋಟಗಳನ್ನು ಹೊಂದಿದೆ. ಯಾವ ದೃಶ್ಯಗಳೂ ನೇರವಾಗಿ ಏನನ್ನೂ ಹೇಳದೇ ಸಾಂಕೇತಿಕವಾಗಿ ಹಲವು ಅರ್ಥಗಳನ್ನು ಹೊಮ್ಮಿಸುತ್ತವೆ. ಬಡವರ ಹಾಗೂ ಬಂಡವಾಳಿಗರ ನಡುವೆ ನಡೆಯುವ ಅಸ್ತಿತ್ವದ ಸಂಘರ್ಷವೆಂಬುದು ನಾಟಕದ ಆಶಯವಾದರೂ ಅದನ್ನು ನಿರೂಪಿಸಲು ಬಳಸಿದ ದೃಶ್ಯ ಸಂಯೋಜನೆಗಳು ಒಗಟಿನಿಂದಾ ಕೂಡಿದಂತಿವೆ. ಇಲ್ಲಿ ಯಾವುದೇ ರೀತಿಯ ಸಿದ್ದ ಮಾದರಿಯ ಕಥೆ ಎಂಬುದು ಇಲ್ಲದೇ ಕೇವಲ ಉದ್ದೇಶಕ್ಕೆ ಬದ್ಧವಾದ ದೃಶ್ಯಜೋಡಣೆಗಳಿವೆ. ಅವೂ ಕೂಡಾ ಕ್ರಮಬದ್ಧವಾದ ನಿರೂಪನಾ ಶೈಲಿಯಲ್ಲಿಲ್ಲ. ಈ ನಾಟಕವನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ಮಲಯಾಳಿಯ ಸಾಮಾನ್ಯ ಪ್ರೇಕ್ಷಕರಿಗೆ ಸಾಧ್ಯವಿಲ್ಲದಿರುವಾಗ ಇನ್ನೂ ಮಲಯಾಳಂ ಭಾಷೆ ಗೊತ್ತಿಲ್ಲದವರಿಗೆ ಅರ್ಥವಾಗುವುದು ಕಷ್ಟಸಾಧ್ಯ. ಜನಸಾಮಾನ್ಯರ ಬವಣೆಯನ್ನೇ ಭಾರೀ ಭೌದ್ದಿಕ ನೆಲೆಯಲ್ಲಿ ಕಟ್ಟಿಕೊಡಲಾಗಿದ್ದರಿಂದ ನೋಡುಗರು ತಮ್ಮ ಗ್ರಹಿಕೆಗೆ ಸಿಕ್ಕಷ್ಟು ದಕ್ಕಿಸಿಕೊಳ್ಳಬೇಕಾಗಿದೆ.

ಸಾಂಕೇತಿಕತೆ ಹಾಗೂ ಬೌದ್ದಿಕತೆಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡಿದರೆ ಮನರಂಜನೆಗೇನೂ ಕೊರತೆ ಇಲ್ಲಾ. ಕಲಾವಿದರ ಚಿತ್ರವಿಚಿತ್ರ ಅತಿರೇಕದ ಅಭಿನಯ ಮತ್ತು ಎರೋಬಿಕ್ಸ್ ಮಾದರಿಯ ಆಕರ್ಷಕ ಆಂಗಿಕ ಸರ್ಕಸ್‌ಗಳು ಭಾಷೆಯ ಹಂಗನ್ನು ಹರಿದು ನೋಡುಗರನ್ನು ರಂಜಿಸುವಂತೆ ಮೂಡಿಬಂದಿವೆ. ದೃಶ್ಯಗಳನ್ನು ಕಟ್ಟುವಾಗ ಮಾಡಿದ ಅನೇಕಾನೇಕ ಗಿಮಿಕ್‌ಗಳು ಪ್ರೇಕ್ಷಕರಿಗೆ ಮುದನೀಡುವಂತಿವೆ. ಗಿಮಿಕ್‌ಗಳ ಮೂಲಕ ಜನಸಾಮಾನ್ಯ ನೋಡುಗರನ್ನೂ ಹಾಗೂ ಸಾಂಕೇತಿಕತೆಗಳ ಮೂಲಕ ಬುದ್ದಿಜೀವಿ ಪ್ರೇಕ್ಷಕರನ್ನು ಸೆಳೆಯುವ ಈ ನಾಟಕ ಬಂಡವಾಳಶಾಹಿ ವ್ಯವಸ್ಥೆಯನ್ನು ಲೇವಡಿ ಮಾಡುತ್ತಲೇ ಶ್ರಮಜೀವಿ ವರ್ಗಗಳ ಅಸಹಾಯಕತೆಯನ್ನು ವಿಡಂಬನಾತ್ಮಕವಾಗಿ ತೋರಿಸುವಲ್ಲಿ ಯಶಸ್ವಿಯಾಗಿದೆ.

ಪ್ರತಿಯೊಂದು ದೃಶ್ಯದ ಸಂಯೋಜನೆಯಲ್ಲೂ ನಿರ್ದೇಶಕರು ಸೃಷ್ಟಿಸಿದ ವಿಶಿಷ್ಟ ಹ್ಯೂಮರಸ್ ಕ್ರಿಯಾಶೀಲತೆ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದ್ದಂತೂ ಸುಳ್ಳಲ್ಲಾ. ಉದಾಹರಣೆಗೆ.. 25 ಪೈಸೆ ನಾಣ್ಯಕ್ಕೂ ಹಾಗೂ ಬೆಂಕಿಪೊಟ್ಟಣಕ್ಕೂ ನಡುವೆ ನಡೆದ ಪ್ರೇಮ ಪ್ರಸಂಗ ಅನನ್ಯವಾಗಿ ಮೂಡಿಬಂದಿದೆ. ಈ ಜೋಡಿಯನ್ನು ಬೇರೆ ಮಾಡಲು 25 ಪೈಸೆಯನ್ನು ಬ್ಯಾನ್ ಮಾಡುವ ಬಂಡವಾಳಿಗರು ಬೆಂಕಿಪೊಟ್ಟಣದ ಬೆಲೆಯನ್ನು 50 ಪೈಸೆಗೇರಿಸುವುದು ಶ್ರೀಮಂತರ ಶಡ್ಯಂತ್ರವನ್ನು ತೋರಿಸುತ್ತದೆ. ಶ್ರೀಮಂತರು ಹಾಗೂ ಬಡವರ ನಡುವಿನ ವ್ಯತ್ಯಾಸವನ್ನು ತೋರಿಸುತ್ತಲೇ ಅಧಿಕಾರಶಾಹಿಗಳ ಜನವಿರೋಧಿತನವನ್ನು ಈ ನಾಟಕ ಪ್ರಶ್ನಿಸುತ್ತದೆ. ಬಸ್ಟಾಪಲ್ಲಿ ಬೀಡಿ ಸೇದುವವನನ್ನು ವಿರೋಧಿಸುವ ಪೊಲೀಸ್ ಪೇದೆಯು ಸಿಗರೇಟ್ ಸೇದುವ ಶ್ರೀಮಂತನನ್ನು ಸಮರ್ಥಿಸಿಕೊಳ್ಳುವ ದೃಶ್ಯ ಇದಕ್ಕೊಂದು ಉದಾಹರಣೆ. ಹಾಗೆಯೇ ಅತ್ತ ಮೈತುಂಬಾ ಆಭರಣಗಳನ್ನು ಹಾಕಿದ ಮಹಿಳಾ ಮಾಡೆಲ್‌ಗಳ ವೈಭವವನ್ನು ವಿಜ್ರಂಭಿಸುತ್ತಲೇ, ಇತ್ತ ಒಂದು ಹೊತ್ತು ಊಟಕ್ಕಾಗಿ ಕಾಳು ಹಸನು ಮಾಡುವ ಬಡವನನ್ನೂ ತೋರಿಸುತ್ತಾ ಇರುವವರ ಹಾಗೂ ಇಲ್ಲದವರ ನಡುವಿನ ಅಜಗಜಾಂತರ ಅಂತರವನ್ನು ಸಾಂಕೇತಿಕವಾಗಿ ಮತ್ತು ಪರಿಣಾಮಕಾರಿಯಾಗಿ ಹೇಳಲಾಗಿದೆ. ಆಳುವ ವರ್ಗಗಳು ಅಭಿವೃದ್ದಿ ಹೆಸರಲ್ಲಿ ಅದು ಹೇಗೆ ಬಡಜನರ ನೆಲೆ ಹಾಗೂ ಸಂಸ್ಕೃತಿಯನ್ನು ನಾಶಮಾಡಿ ದುಡಿಯುವ ವರ್ಗಗಳನ್ನು ಯಂತ್ರಗಳಾಗಿ ದುಡಿಸಿಕೊಳ್ಳಬಯಸುತ್ತಾರೆಂಬುದನ್ನು ಈ ನಾಟಕ ವಿವರಿಸುತ್ತದೆ.

 
ಜಾಗತೀಕರಣವು ಮಧ್ಯಮ ಹಾಗೂ ಕೆಳಮಧ್ಯಮ ವರ್ಗಗಳ ಮೇಲೆ ಮಾಡಿದ ಹಾಗೂ ಮಾಡುತ್ತಿರುವ ದುಷ್ಪರಿಣಾಮಗಳನ್ನು ವಿನೋದಮಯ ದೃಶ್ಯಗಳ ಮೂಲಕ ಕಟ್ಟಿಕೊಡುತ್ತಾ ದುಡಿಯುವ ವರ್ಗಗಳ ಅಸಹಾಯಕತೆ ಹಾಗೂ ವಿಷಾದವನ್ನೂ ಈ ನಾಟಕ ಪರಿಣಾಮಕಾರಿಯಾಗಿ ತೋರಿಸಿದೆ. ದುಡಿಯುವ ವರ್ಗಗಳ ಬದುಕಿನ ಪ್ರೇರಕವಾದ ಶಕ್ತಿಯಾದ ಸಂಸ್ಕೃತಿಯನ್ನೇ ಸರ್ವನಾಶಮಾಡಲು ಬಂಡವಾಳಶಾಹಿ ಶಕ್ತಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಆದರೆ..  ಶ್ರಮಿಕ ವರ್ಗಗಳು ಎಲ್ಲಿವರೆಗೂ ತಮ್ಮ ಮೂಲ ದೇಸಿ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಾರೋ.. ಎಲ್ಲಿವರೆಗೂ ತಮ್ಮ ಹಾಡು ಹಸೆ ಕುಣಿತಗಳನ್ನು ತಮ್ಮ ಪ್ರತಿರೋಧದ ಶಕ್ತಿಯಾಗಿ ಬಳಸುತ್ತಾರೋ ಅಲ್ಲಿವರೆಗೂ ಜಾಗತೀಕರಣ ಅದೆಷ್ಟೇ ಪ್ರಯತ್ನಪಡಲಿ, ಬಂಡವಾಳಶಾಹಿಗಳು ಅದೆಷ್ಟೇ ಕುತಂತ್ರಗಳನ್ನು ಮಾಡಲಿ ಬಹುಸಂಖ್ಯಾತ ಜನರನ್ನು ಬಹುದಿನಗಳ ಕಾಲ ಶೋಷಿಸಲು ಸಾಧ್ಯವಿಲ್ಲಾ ಎನ್ನುವುದನ್ನು ಚಿಲ್ಲರೆ ಸಮರಮ್ ನಾಟಕ ಸಬೀತುಪಡಿಸಲು ಪ್ರಯತ್ನಿಸುತ್ತದೆ. ಬಂಡವಾಳಶಾಹಿಯ ಸರಕು ಸಂಸ್ಕೃತಿ ದುಡಿಯುವ ಜನರನ್ನು ಯಂತ್ರಗಳನ್ನಾಗಿಸಿದರೆ.. ಶ್ರಮಜೀವಿಗಳ ದೇಸಿ ಸಂಸ್ಕೃತಿಯು ಯಂತ್ರಗಳಂತೆ ದುಡಿಯುವವರನ್ನು ಮತ್ತೆ ಮನುಷ್ಯರನ್ನಾಗಿಸುತ್ತವೆ ಎಂಬುದನ್ನು ಪ್ರತಿಮಾತ್ಮಕವಾಗಿ ತೋರಿಸಲಾಗಿದೆ. ಕೊನೆಗೆ ಬಿರುಗಾಳಿಯ ಹಾಗೆ ದಂಗೆಯೆದ್ದ ಬಡಜನರ ಆಕ್ರೋಶವನ್ನು  ತಾಳಲಾಗದೆ ತರಗಲೆಗಳಾದ ಬಂಡವಾಳಶಾಹಿಗಳು ಹಾಗೂ ಅವರ ಕರೆನ್ಸಿಗಳು ಅಸ್ತಿಪಂಜರವಾಗುತ್ತವೆ ಎಂಬುದನ್ನು ಸಂಕೇತಗಳ ಮೂಲಕ ಮಾರ್ಮಿಕವಾಗಿ ತೋರಿಸಲಾಗಿದೆ. ವರ್ಗ ಸಂಘರ್ಷದಲ್ಲಿ ಸಂಘಟಿತರಾದರೆ ಅಂತಿಮವಾಗಿ ಬಹುಜನರೇ ಗೆಲ್ಲುವರು ಎಂಬ ಸಂದೇಶವನ್ನು ಈ ನಾಟಕ ಕೊಡುತ್ತದೆ.

ಈ ನಾಟಕದಲ್ಲಿ ಬಡಜನರ ಜೊತೆ ಬಂಡವಾಳಶಾಹಿಗಳು ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಈ ದೃಶ್ಯ ಅದೆಷ್ಟು ರೂಪಕಾತ್ಮಕವಾಗಿದೆ ಎಂದರೆ ಸಾಮ್ರಾಜ್ಯಶಾಹಿ ದೇಶಗಳು ಭಾರತದಂತಾ ಬಡದೇಶಗಳ ಜೊತೆಗೆ ಮಾಡಿಕೊಳ್ಳುವ ವಿಶ್ವ ವ್ಯಾಪಾರಿ ಅಗ್ರೀಮೆಂಟ್‌ನ್ನು ಲೇವಡಿ ಮಾಡುವಂತೆ ಮೂಡಿಬಂದಿದೆ. ಒಪ್ಪಂದದ ರೂಲ್ಸ್‌ಗಳನ್ನು ಬರೆದ ಟಾಯ್ಲೆಟ್ ಪೇಪರನ್ನು ದುಡಿಯುವ ವರ್ಗದ ಪ್ರತಿನಿಧಿಗಳ ಕೈಗೆ ಕೊಟ್ಟಾಗ ಅದು ಅವರ ಕೊರಳನ್ನು ಸುತ್ತಿಕೊಳ್ಳುತ್ತದೆ. ತದನಂತರ ಇಡೀ ಒಪ್ಪಂದ ಪತ್ರವನ್ನು ಬಂಡವಾಳಶಾಹಿಗಳ  ಪ್ರತಿನಿಧಿಗಳು ಕಮೋಡಿಗೆ ಹಾಕಿ ಪ್ಲಶ್ ಮಾಡುತ್ತಾರೆ. ಜನಸಾಮಾನ್ಯರ ಕಣ್ಣೊರೆಸುವ ಇಂತಹ ಅದೆಷ್ಟೋ ಒಪ್ಪಂದ, ಭರವಸೆ, ಆಶ್ವಾಸನೆಗಳನ್ನು ನಮ್ಮ ಆಳುವ ವರ್ಗ ಕೊಡುತ್ತಲೇ ಬಂದಿದೆ ಹಾಗೂ ಅವುಗಳನ್ನು ಈಡೇರಿಸದೇ ಜನರನ್ನು ಮೋಸಗೊಳಿಸುತ್ತವೆ ಎಂಬುದನ್ನು ಟಾಯ್ಲೆಟ್ ಪೇಪರ್ ಹಾಗು ಕಮೋಡ್‌ಗಳನ್ನು ರೂಪಕವಾಗಿ ಬಳಸಿ ಅತ್ಯಂತ ಮಾರ್ಮಿಕವಾಗಿ ತೋರಿಸಲಾಗಿದೆ. ಲೋಕಲ್ ಒಪ್ಪಂದಗಳ ಜೊತೆಗೆ ಜಾಗತಿಕ ಒಪ್ಪಂದಗಳೂ ಸಹ ಇದೇ ರೀತಿ ಎಂದು ಪರೋಕ್ಷವಾಗಿ ಹೇಳಲಾಗಿದೆ. 

ಇದನ್ನೆಲ್ಲಾ ದೃಶ್ಯಗಳ ಮೂಲಕ  ಹೇಳಲು ಬಳಸಿದ ರಂಗತಂತ್ರಗಳು ನೋಡುಗರಲ್ಲಿ  ಬೆರಗನ್ನು  ಹುಟ್ಟಿಸಿದವು. ದೃಶ್ಯದಿಂದ ದೃಶ್ಯಕ್ಕೆ ಆಗುವ ವೇಗದ ಬದಲಾವಣೆಗಳು ನೋಡುಗರ ಚಿತ್ತ ಅತ್ತಿತ್ತ ಅಲ್ಲಾಡದಂತೆ ಹಿಡಿದಿಟ್ಟವರು. ಇಡಿಯಾಗಿ ನಾಟಕ ಅರ್ಥವಾಗದಿದ್ದರೂ ಬಿಡಿಯಾಗಿ ದೃಶ್ಯಗಳು ಗಮನಸೆಳೆದವು. ಕನಿಷ್ಟ ಪ್ರಾಪರ್ಟಿಗಳನ್ನು ಬಳಸಿ ಗರಿಷ್ಟ ಅರ್ಥವನ್ನು ಹೊಮ್ಮಿಸಲಾಯಿತು. ರಟ್ಟಿನಿಂದ ಮಾಡಿದ ಪುಟ್ಟ ಬಾಕ್ಸ್‌ಗಳನ್ನು ಬಳಿಸಿದ ರೀತಿಯನ್ನಂತೂ ನೋಡುಗರ ಮರೆಯಲು ಸಾಧ್ಯವೇ ಇಲ್ಲಾ. ಅದೇ ಡಬ್ಬಾ ಮೇಲೆಕ್ಕೆತ್ತಿ ಹಿಡಿದು ಜುವೆಲರ್ರಿ ಮಾಡೆಲ್‌ಗಳ ಕಾಲುಗಳನ್ನು ಮಾತ್ರ ತೋರಿಸಿದ್ದು.. ತದನಂತರ ಡಬ್ಬದೊಳಗೆ ಕುಳಿತ ಮಾಡೆಲ್‌ಗಳು ತಮ್ಮ ಬಿಂಕ ಬಿನ್ನಾನ ಪ್ರದರ್ಶಿಸಿದ್ದು.. ಅದೇ ಡಬ್ಬಗಳು ಚಿಲ್ಲರೆ ಅಂಗಡಿಗಳಾಗಿ ಬದಲಾಗಿದ್ದು.. ಹೀಗೆ ಎರಡು ಮೂರು ರಟ್ಟಿನ ಡಬ್ಬಗಳನ್ನು ಬಳಸಿ ಹಲವಾರು ದೃಶ್ಯಗಳನ್ನು ಸಂಯೋಜಿಸಿ ನೋಡುಗರಲ್ಲಿ ಕುತೂಹಲವನ್ನು ಹುಟ್ಟಿಸಲಾಯಿತು. ಚಿಕ್ಕ ಗುಡಿಸಿಲಿನ ಬಾಗಿಲಿನಾಕಾರದ ಕಂಬಿಗೆ ಬೆಂಕಿ ಹಚ್ಚಿ ಬಡವರ ಗುಡಿಸಲು ಸುಟ್ಟ ವಾತಾವರಣವನ್ನು ತೋರಿಸಲಾಯಿತು. ಕಾರಿನ ಟೈರ್‌ಬಳಸಿ ದೊಡ್ಡದಾದ ನಾಣ್ಯವನ್ನು ಪ್ರದರ್ಶಿಸಿದ್ದು ಅಚ್ಚರಿಗೆ ಕಾರಣವಾಯಿತು. ಪ್ರಾಪರ್ಟಿಗಳು ಹಾಗೂ ಅವುಗಳನ್ನು ಬಳಸಿದ ರೀತಿಗಳೇ ಈ ನಾಟಕದ ಆಕರ್ಷಣೆಯನ್ನು ಹೆಚ್ಚಿಸಿದವು. 


ಈ ನಾಟಕ ನಿಂತಿರೋದೇ ನಟರುಗಳ ಅಭಿನಯದ ಮೇಲೆ. ಎಲ್ಲಾ ನಟರು ಪಾದರಸದಂತೆ ವೇದಿಕೆಯಾದ್ಯಂತ ಹರಿದಾಡಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. ಸುರೇಶ್, ಅಖಿಲ್, ಮಿಥುನ್, ಅಬಿದ್, ಶ್ರೀಚೇತ್, ಅನೀಶ್, ಜೀಶ್ನು.. ಈ ಏಳು ಜನ ಕಲಾವಿದರು ನಾಟಕದ ಎಲ್ಲಾ ಪಾತ್ರಗಳನ್ನು ಅಭಿನಯಿಸಿ ನಿರ್ವಹಿಸಿದ್ದಾರೆ. ಇವರೆಲ್ಲರ ಚಲನೆಯಲ್ಲಿರುವ ಪೋರ್ಸ, ಮಾತಿನಲ್ಲಿರುವ ಗಟ್ಸ್, ಹಾಗೂ ಆಂಗಿಕ ಕಸರತ್ತುಗಳಲ್ಲಿರುವ ಕರಾರುವಕ್ಕತೆ ಅಚ್ಚರಿಯನ್ನುಂಟುಮಾಡುವಂತಿವೆ. ನಟನೆಯಲ್ಲಿ ವೃತಿಪರತೆಯನ್ನು ಹೆಚ್ಚಿಗೆ ರೂಢಿಸಿಕೊಂಡಿದ್ದು ನಾಟಕದಾದ್ಯಮತ ಕಂಡುಬಂದಿತು. ನಿರ್ದೇಶಕ ನಟರುಗಳ ದೇಹಭಾಷೆಯನ್ನು ದುಡಿಸಿಕೊಂಡ ರೀತ ಶ್ಲಾಘನೀಯ. ಇಡೀ ನಾಟಕದಲ್ಲಿ ಮಹಿಳೆಯರ ಪಾತ್ರವನ್ನೂ ಸಹ ಗಂಡಸರೇ ನಟಿಸಿದ್ದು ನಾಟಕದ ಸಣ್ಣ ಕೊರತೆಯಾಗಿದೆ. ದೃಶ್ಯದಲ್ಲಿ ಮೂಡ್ ಸೃಷ್ಟಿಸಲು ಆಗಾಗ ಹಾಕುವ ಹೊಗೆಗಳು ಹಾಗೂ ಬುಡ್ಡಿ ದೀಪದ ಕೆರೋಸಿನ್ ವಾಸನೆಗಳು ಮುಂದಿನ ಸೀಟಿನ ಪ್ರೇಕ್ಷಕರ ನಾಸಿಕಕ್ಕೆ ಅಸಾಧ್ಯ ಕಿರಿಕಿರಿಯನ್ನುಂಟು ಮಾಡಿದ್ದರೂ ದೃಶ್ಯಗಳು ಕಣ್ಣಿಗೆ ಆನಂದವನ್ನುಂಟು ಮಾಡಿದ್ದರಿಂದ ಸಹನೀಯವಾದವು. 

ಬಹುತೇಕ ಅರೆಬೆತ್ತಲಾಗಿರುವ ದುಡಿಯುವ ವರ್ಗಗಳ ಪಾತ್ರಗಳು ಚಡ್ಡಿಯಲ್ಲಿವೆ, ಇಲ್ಲವೇ ಅದರ ಮೇಲೊಂದು ಮಾಸಿದ ಟವೆಲ್ ಸುತ್ತಿಕೊಂಡಿವೆ. ಆದ್ದರಿಂದ ಕಾಸ್ಟೂಮ್‌ಗಳ ಬಳಕೆ ಹೇಳಿಕೊಳ್ಳುವಂತ ವಿಶೇಷತೆ ಏನಿಲ್ಲಾ. ಬೆಳಕಿನ ವಿನ್ಯಾಸ ಈ ನಾಟಕದಲ್ಲಿ ಪಾತ್ರವಾಗಿ ಮೂಡಿಬಂದಿದೆ. ನಗರಸಭೆ ಅಧಿಕಾರಿಗಳು ಬಡಜನರ ವಿರುದ್ಧ ಶಡ್ಯಂತ್ರ ರಚಿಸುವಾಗ ಅವರ ಕೈಲಿರುವ ಬ್ಯಾಟರಿ ಬೆಳಕನ್ನೇ ಬಳಸಿ ದೃಶ್ಯ ಸಂಯೋಜಿಸಿದ್ದು ಅನನ್ಯವಾಗಿ ಮೂಡಿ ಬಂದಿದೆ. ಕೋರಸ್ ಮಾದರಿಯ ಹಾಡುಗಳು ಹಾಗೂ ಅದಕ್ಕೆ ಬಳಸಿದ ದೇಸಿ ಸಂಗೀತಗಳು ದೃಶ್ಯಕ್ಕೆ ಪೋರ್ಸನ್ನು ತಂದಿವೆ.  
 
ಒಟ್ಟಾರೆಯಾಗಿ ಸಮಕಾಲೀನ ಆರ್ಥಿಕ ಅಸಮಾನತೆಯನ್ನು ಹಾಗೂ ಅದಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತನ್ನದೇ ಆದ ರೀತಿಯಲ್ಲಿ ಹೇಳುವ ಚಿಲ್ಲರೆ ಸಮರಮ್ ನಾಟಕವು ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದೆ. ಸೂತ್ರಬದ್ಧ ಕಥೆಯ ಹಂಗಿಲ್ಲದೇ ಕೆಲವಾರು ಘಟನೆಗಳನ್ನು ಜೋಡಿಸಿ ಒಟ್ಟಾರೆ ಅಂದುಕೊಂಡ ಪರಿಣಾಮವನ್ನು ಅನಾವರಣಗೊಳಿಸಿದೆ. ಅಪೇಕ್ಷಿತ ಕಥೆಯ ಅಭಾವದಿಂದಾಗಿ, ಭಾಷಾ ಸಂವಹನದ ಕೊರತೆಯಿಂದಾ ಹಾಗೂ ಬೌದ್ಧಿಕ ವಸ್ತುವಿಷಯದ ರೂಪಕಗಳ ಸಂಕೀರ್ಣತೆಯಿಂದ ಯಾರಿಗೆ ಈ ನಾಟಕ ಎಷ್ಟು ಅರ್ಥವಾಯಿತೋ ಗೊತ್ತಿಲ್ಲಾ,  ಆದರೆ.. ಈ ನಾಟಕವನ್ನು ಅರ್ಥಮಾಡಿಕೊಂಡರೆ ನಮ್ಮ ಪ್ರಸ್ತುತ ಶೋಷಕ ವ್ಯವಸ್ಥೆಯ ಮುಖವಾಡಗಳನ್ನು ನೋಡಬಹುದಾಗಿದೆ. ಬಹುಜನರು ತಮ್ಮ ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಉಳಿಸಿಕೊಂಡು ಸಂಘಟಿತರಾದರೆ ಬಂಡವಾಳಿಗರ ಬಂಡವಾಳವನ್ನು ಬಯಲುಗೊಳಿಸಿ ಹಿಮ್ಮೆಟ್ಟಿಸಬಹುದು ಎನ್ನುವ ಸಂದೇಶವನ್ನು ಎದೆಗಿಳಿಸಿಕೊಳ್ಳಬಹುದಾಗಿದೆ. ಚಿಲ್ಲರೆ ಸಮರಮ್ ದುಡಿಯುವ ವರ್ಗಗಳ ಹೋರಾಟಗಳಿಗೆ ಪ್ರೇರಣೆಯಾಗಬಹುದಾಗಿದೆ. 

                                     -ಶಶಿಕಾಂತ ಯಡಹಳ್ಳಿ
(ಪೊಟೋಗಳ ಕೃಪೆ : ಥಾಯ್ ಲೋಕೇಶ್)