ಆಧುನಿಕ ಕನ್ನಡ ರಂಗಭೂಮಿಯ
ಕನಸು ಹಾಗೂ ರಂಗಕರ್ಮಿಗಳ ಕನವರಿಕೆ ಈ ‘ರಂಗಮಂದಿರ ಪ್ರಾಧಿಕಾರ’. ಬಿ.ವಿ.ವೈಕುಂಟರಾಜುರವರು
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಂಗಮಂದಿರ ಪ್ರಾಧಿಕಾರದ ಕನಸಿನ ಬೀಜವನ್ನು ಬಿತ್ತಿದ್ದರು.
ರಂಗಮಂದಿರಗಳ ನಿರ್ಮಾಣ ಹಾಗೂ ನಿರ್ವಹಣೆಗೆಂದೇ ರಂಗಮಂದಿರ ಪ್ರಾಧಿಕಾರವೊಂದನ್ನು ಸರಕಾರ ಸ್ಥಾಪಿಸಬೇಕು
ಎಂಬ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಆದರೆ.. ಅವರ ಕನಸು ನನಸಾಗಲೇ ಇಲ್ಲ, ಆದರೆ.. ಅವರು ಬಿತ್ತಿದ
ಬೀಜ ಹುಸಿಹೋಗಲಿಲ್ಲ. ವೈಕುಂಟರಾಜುರವರು ಅಧ್ಯಕ್ಷರಾಗಿದ್ದಾಗ ಅಕಾಡೆಮಿಯ ಸದಸ್ಯರಾಗಿದ್ದ ಜೆ.ಲೊಕೇಶರವರು
ಆ ಕನಸಿನ ಬೀಜವನ್ನು ಕಾಪಿಟ್ಟುಕೊಂಡು ಬಂದಿದ್ದರು. ಯಾವಾಗ ಜೆ.ಲೋಕೇಶರವರು ಪ್ರಸ್ತುತ ನಾಟಕ ಅಕಾಡೆಮಿಯ
ಅಧ್ಯಕ್ಷರಾದರೋ ಆಗ ಅವರ ಮನಸುಖರಾಯನ ಮನಸಿನಲ್ಲಿ ಸುಪ್ತವಾಗಿದ್ದ ರಂಗಮಂದಿರ ಪ್ರಾಧಿಕಾರದ ಕನಸಿಗೆ
ಚಾಲನೆ ಕೊಡುವ ಪ್ರಯತ್ನವನ್ನು ಆರಂಭಿಸಿದರು.
ಏನಿದು ರಂಗಮಂದಿರ ಪ್ರಾಧಿಕಾರ?
: ಈಗ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕನ್ನಡ ಭಾಷಾಭಾರತಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರಗಳೆಂಬ
ಅರೆಸ್ವಾಯತ್ತ ಸಂಸ್ಥೆಗಳಿವೆ. ಈ ಪ್ರಾಧಿಕಾರದ ಅಧ್ಯಕ್ಷರುಗಳಿಗೆ ಕ್ಯಾಬಿನೆಟ್ ದರ್ಜೆಯ ಮಾನ್ಯತೆ ಇದೆ.
ಅವರು ಕನ್ನಡ ಭಾಷೆ ಮತ್ತು ಅಕ್ಷರ ಸಂಸ್ಕೃತಿಯನ್ನು ಉಳಿಸಲು ಹಾಗೂ ಬೆಳೆಸಲು ಹಲವಾರು ಯೋಜನೆಗಳನ್ನು
ಹಾಕಿಕೊಳ್ಳುತ್ತಾ ಬಂದಿದ್ದಾರೆ. ಅದೇ ರೀತಿ ರಂಗಮಂದಿರಗಳ ಪ್ರಾಧಿಕಾರವೊಂದು ಅಸ್ತಿತ್ವಕ್ಕೆ ಬರಬೇಕೆಂಬುದು
ರಂಗಕರ್ಮಿಗಳ ಬಯಕೆಯಾಗಿದೆ. ಯಾಕೆಂದರೆ..
ಇಡೀ ದೇಶದಲ್ಲಿಯೇ ರಂಗಪ್ರಯೋಗಶೀಲತೆಗೆ
ಕನ್ನಡ ರಂಗಭೂಮಿ ಹೆಸರುವಾಸಿಯಾಗಿದೆ. ದೇಶದ ಯಾವುದೇ ರಾಜ್ಯಕ್ಕಿಂತಲೂ ಹೆಚ್ಚು ರಂಗಚಟುವಟಿಕೆಗಳು ಕರ್ನಾಟಕದಲ್ಲಿ
ನಡೆಯುತ್ತಿರುವುದು ನಮ್ಮ ರಾಜ್ಯದ ಹೆಮ್ಮೆ. ಹಿರಿಯ ರಂಗಕರ್ಮಿಗಳು ಸದಾ ಒಂದಿಲ್ಲೊಂದು ನಾಟಕ ಚಟುವಟಿಕೆಗಳಲ್ಲಿ
ತೊಡಗಿಕೊಂಡಿದ್ದರೆ, ಹೊಸ ತಲೆಮಾರಿನ ಯುವಕರೂ ಸಹ ನಾಟಕಗಳತ್ತ ಆಕರ್ಷಿತರಾಗಿ ತಮ್ಮದೇ ಆದ ರೀತಿಯಲ್ಲಿ
ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ಮಕ್ಕಳ ರಂಗಶಿಬಿರಗಳು, ಯುವಕರ ರಂಗಕಾರ್ಯಾಗಾರಗಳು
ನಾಡಿನಾದ್ಯಂತ ನಡೆಯುತ್ತಲೇ ಇವೆ.
ಆದರೆ.. ರಂಗಭೂಮಿಯಲ್ಲಿ ತೊಡಗಿಕೊಂಡಿರುವ
ಎಲ್ಲಾ ರಂಗಕರ್ಮಿ ಕಲಾವಿದರುಗಳಿಗೆ ತಮ್ಮ ನಾಟಕಗಳನ್ನು ಎಲ್ಲಿ ಪ್ರದರ್ಶಿಸಬೇಕು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ಯಾಕೆಂದರೆ.. ನಾಟಕದ ತಯಾರಿಗೆ ಬೇಕಾದ ತಾಲೀಮು ಕೊಠಡಿಗಳು ಹಾಗೂ ರಂಗಪ್ರದರ್ಶನಕ್ಕೆ ಅತ್ಯಂತ ಅಗತ್ಯವಾದ
ರಂಗಮಂದಿರಗಳ ಕೊರತೆ ತೀವ್ರವಾಗಿದೆ. ಈಗಾಗಲೇ ರಾಜ್ಯದ ಕೆಲವೆಡೆ ಸರಕಾರಿ ಸಭಾಂಗಣ ಸಮುದಾಯ ಭವನಗಳು
ಇವೆಯಾದರೂ ಅವುಗಳಲ್ಲಿ ಬಹುತೇಕವು ನಾಟಕಗಳ ಪ್ರದರ್ಶನಕ್ಕೆ ಪೂರಕವಾಗಿಲ್ಲ. ತಾಂತ್ರಿಕ ಪರಿಕರಗಳಂತೂ
ಮೊದಲೇ ಇಲ್ಲ. ತಾಲ್ಲೂಕು ಕೇಂದ್ರಗಳಲ್ಲಂತೂ ನಾಟಕಗಳನ್ನು ಪ್ರದರ್ಶಿಸಲು ಕನಿಷ್ಟ ಸೌಲಭ್ಯಗಳುಳ್ಳ ರಂಗಮಂದಿರಗಳೇ
ಇಲ್ಲ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಇರುವ ಬೆರಳೆಣಿಕೆಯಷ್ಟು ರಂಗಮಂದಿರಗಳು ನಿರಂತರವಾಗಿ ನಡೆಯುತ್ತಿರುವ
ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕಾಗುತ್ತಿಲ್ಲ. ನಾಟಕಗಳು ಸಿದ್ದವಾಗಿದ್ದರೂ ಅವುಗಳನ್ನು ಪ್ರದರ್ಶಿಸುವುದಕ್ಕೆ
ರಂಗಮಂದಿರಗಳೇ ಇಲ್ಲದಿರುವುದು ರಂಗಚಟುವಟಿಕೆಗಳನ್ನು ಕುಂಟಿತಗೊಳಿಸುತ್ತಿವೆ ಹಾಗೂ ಹೊಸ ತಲೆಮಾರಿನ
ಯುವಕರ ಆಸಕ್ತಿಯನ್ನು ಕುಂದಿಸುತ್ತಿದೆ.
ಆದ್ದರಿಂದ.. ರಾಜಧಾನಿಯಿಂದ
ಜಿಲ್ಲಾ ಕೇಂದ್ರಗಳಿಗೆ, ಜಿಲ್ಲಾ ಕೇಂದ್ರಗಳಿಂದ ತಾಲೂಕು ಕೇಂದ್ರಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು
ವಿಸ್ತರಿಸುವ ಹಾಗೂ ವಿಕೇಂದ್ರೀಕರಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಈ ಉದ್ದೇಶಕ್ಕಾಗಿಯೇ ರಂಗಮಂದಿರದ
ಪ್ರಾಧಿಕಾರವೊಂದು ಅಸ್ತಿತ್ವಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಪೂರಕವಾದ ಅಂಶಗಳು ಈ ರೀತಿ
ಇವೆ.
1. ಕರ್ನಾಟಕದಲ್ಲಿ ಈಗಾಗಲೇ ಬೆಂಗಳೂರನ್ನೂ ಒಳಗೊಂಡಂತೆ
ಹಲವು ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರಗಳು ಅಸ್ತಿತ್ವದಲ್ಲಿವೆಯಾದರೂ ಅವುಗಳು ಬೇರೆ ಬೇರೆ ಸರಕಾರಿ
ಇಲಾಖೆಗಳ ಆಧೀನದಲ್ಲಿವೆ ಹಾಗೂ ಅವುಗಳಲ್ಲಿ ಬಹುತೇಕ ರಂಗಮಂದಿರಗಳು ಅವ್ಯವಸ್ಥೆಯ ಆಗರವಾಗಿದ್ದು, ಅಗತ್ಯ
ರಂಗಪರಿಕರಗಳ ಕೊರತೆಯಿಂದಾಗಿ ನಾಟಕ ಪ್ರದರ್ಶನಗಳಿಗೆ ಸೂಕ್ತವಾಗಿಲ್ಲ. ಕರ್ನಾಟಕ ಘನ ಸರಕಾರವು ರಂಗಮಂದಿರ
ಪ್ರಾಧಿಕಾರವೊಂದನ್ನು ಅಸ್ತಿತ್ವಕ್ಕೆ ತಂದು ಈಗಿರುವ ಎಲ್ಲಾ ರಂಗಮಂದಿರಗಳನ್ನು ಆ ಪ್ರಾಧಿಕಾರದ ಸ್ವಾಧೀನಕ್ಕೆ
ಕೊಡುವ ಮೂಲಕ ಇರುವ ರಂಗಮಂದಿರಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ
ನಡೆಯುವಂತೆ ನೋಡಿಕೊಳ್ಳಬಹುದಾಗಿದೆ.
2. ಕರ್ನಾಟಕದಲ್ಲಿ ರೆಪರ್ಟರಿಗಳು ಹಾಗೂ ರಂಗಶಾಲೆಗಳು ಬೇಕಾದಷ್ಟಿವೆ.
ವಿಶ್ವವಿದ್ಯಾಲಯಗಳಲ್ಲೂ ರಂಗಭೂಮಿ ಕುರಿತು ಪದವಿ ಹಾಗೂ ಸ್ನಾತ್ತಕೋತ್ತರ ಪದವಿಗಳಿವೆ. ಅಲ್ಲಿ ತರಬೇತಾಗಿ
ಬರುವ ನೂರಾರು ರಂಗಾಸಕ್ತ ಯುವಕ ಯುವತಿಯರಿಗೆ ಕನ್ನಡ ರಂಗಭೂಮಿಯು ಮೂಲಭೂತ ಸೌಲಭ್ಯಗಳನ್ನು ಕೊಟ್ಟು
ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ರಂಗತರಬೇತಿ ಹೊಂದಿದ ಅನೇಕರು ಸಿನೆಮಾ, ಟಿವಿ ಕ್ಷೇತ್ರಗಳತ್ತ
ವಲಸೆ ಹೋಗುತ್ತಾರೆ ಇಲ್ಲವೇ ನಿರುತ್ಸಾಹಿಗಳಾಗಿ ರಂಗವಿಮುಖಿಗಳಾಗುತ್ತಾರೆ. ಇನ್ನು ಕೆಲವರು ಬೆಂಗಳೂರಿಗೆ
ಸೀಮಿತರಾಗುತ್ತಾರೆ. ಇಂತಹ ರಂಗವಿದ್ಯಾವಂತರುಗಳು ತಮ್ಮ ತಾಲ್ಲೂಕುಗಳಿಗೆ ಹೋಗಿ ಅಲ್ಲಿ ಸಾಂಸ್ಕೃತಿಕ
ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ರಂಗಮಂದಿರದಂತಹ ಸಾಂಸ್ಕೃತಿಕ ಕೇಂದ್ರಗಳ ಅವಶ್ಯಕತೆ ತುಂಬಾನೇ
ಇದೆ ಹಾಗೂ ಈ ಕೊರತೆಯನ್ನು ರಂಗಮಂದಿರ ಪ್ರಾಧಿಕಾರವೊಂದನ್ನು ಹುಟ್ಟುಹಾಕುವ ಮೂಲಕ ಪರಿಹರಿಸಬಹುದಾಗಿದೆ.
ಇಡೀ ದೇಶದಲ್ಲಿಯೇ ಇಂತಹುದೊಂದು ಯೋಜನೆ ಎಲ್ಲಿಯೂ ಇಲ್ಲವಾಗಿದ್ದು ಕರ್ನಾಟಕವೇ ಮೊದಲನೆಯದಾಗಿ ಅರಂಭಿಸುವ
ಮೂಲಕ ನಮ್ಮ ರಾಜ್ಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗಮನವನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ.
3. ಕಳೆದೊಂದು ಶತಮಾನ ಕಾಲದಿಂದ ನಿರಂತರವಾಗಿ ನಡೆದುಕೊಂಡು
ಬಂದ ವೃತ್ತಿ ಕಂಪನಿ ರಂಗಭೂಮಿಯೂ ಸಹ ಈಗ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಸಿದ್ದಮಾದರಿಯ ರಂಗಮಂದಿರಗಳಿಲ್ಲದೇ
ತಾತ್ಕಾಲಿಕ ಟೆಂಟ್ ರಂಗಮಂದಿರಗಳನ್ನು ಕಟ್ಟಿಕೊಂಡು, ಮಳೆಗಾಳಿ ಮಾಡುವ ನಷ್ಟಗಳನ್ನು ತಡೆದುಕೊಂಡು,
ಭೂಮಿಯ ಮಾಲೀಕರಿಗೆ ದುಬಾರಿ ಬಾಡಿಗೆಯನ್ನು ಕೊಟ್ಟುಕೊಂಡು, ಆಗಾಗ ರಂಗಮಂದಿರಗಳನ್ನು ಬದಲಾಯಿಸಿಕೊಂಡು
ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಸಕ್ರೀಯವಾಗಿದ್ದ ನೂರಾರು ವೃತ್ತಿ ನಾಟಕ ಕಂಪನಿಗಳು ಮೂಲ ಸೌಲಭ್ಯದ
ಕೊರತೆಯಿಂದಾಗಿ ಒಂದೊಂದಾಗಿ ತೆರೆಮರೆಗೆ ಸೇರಿಯಾಗಿವೆ. ಈಗ ಅಳಿದುಳಿದ ಕಂಪನಿಗಳು ತಮ್ಮ ಅಸ್ತಿತ್ವವನ್ನು
ಉಳಿಸಿಕೊಳ್ಳಲು ಏದುಸಿರು ಬಿಡುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲಿ ಕನಿಷ್ಟ ಸೌಲಭ್ಯವುಳ್ಳ ರಂಗಮಂದಿರಗಳನ್ನು
ಸರಕಾರವು ರಂಗಮಂದಿರ ಪ್ರಾಧಿಕಾರದ ಮೂಲಕ ಕಟ್ಟಿಕೊಟ್ಟಲ್ಲಿ ವೃತ್ತಿ ರಂಗಭೂಮಿ ಮತ್ತೆ ಮೊದಲಿನಂತೆ ತನ್ನ
ಶ್ರೀಮಂತಿಕೆಯನ್ನು ಮೆರೆಯಬಹುದಾಗಿದೆ.
4. ತಾಲ್ಲೂಕಿಗೊಂದು ರಂಗಮಂದಿರ ಅಸ್ತಿತ್ವಕ್ಕೆ ಬಂದರೆ
ಕೇವಲ ರಂಗಚಟುವಟಿಕೆಗಳು ಮಾತ್ರವಲ್ಲ ನೃತ್ಯ, ಸಂಗೀತ, ಜಾನಪದ, ಸಾಹಿತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು
ಗರಿಗೆದರುತ್ತವೆ. ತಾಲೂಕೊಂದರ ಸುತ್ತ ಮುತ್ತಲಿನ ಗ್ರಾಮಗಳ ಜನರಿಗೆ ಮನರಂಜನೆಯ ಜೊತೆಗೆ ಬೌದ್ದಿಕ ಬೆಳವಣಿಗೆಗೂ
ಸಾಂಸ್ಕೃತಿಕ ಕಾರ್ಯಕ್ರಮಗಳು ಜಾಗತೀಕರಣದ ಹೊಡೆತಕ್ಕೆ ಸಿಕ್ಕು ಮರೆಯಾಗುತ್ತಿರುವ ದೊಡ್ಡಾಟ, ಸಣ್ಣಾಟ,
ಶ್ರೀಕೃಷ್ಣಪಾರಿಜಾತ, ಬೊಂಬೆಯಾಟದಂತಹ ದೇಸಿ ಬಯಲಾಟ ಕಲೆಗಳು ಮತ್ತೆ ಮೊದಲಿನ ಖದರನ್ನು ಮರಳಿ ಪಡೆಯುತ್ತವೆ.
ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶಗಳೇ ಇಲ್ಲದೇ ಪರಿತಪಿಸುತ್ತಿರುವ ಕಲಾವಿದರುಗಳಿಗೆ ರಂಗಮಂದಿರಗಳು
ಮರುಹುಟ್ಟನ್ನು ಕೊಡಬಹುದಾಗಿವೆ. ಕಲಾಭಿವ್ಯಕ್ತಿಯನ್ನು ಹೆಚ್ಚಿಸಲು ಪ್ರೇರೇಪಣೆ ಸಿಗಬಹುದಾಗಿದೆ. ನಶಿಸುತ್ತಿರುವ
ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ನಿರಾಶೆಗೊಂಡ ಕಲಾವಿದರನ್ನು ಕ್ರಿಯಾಶೀಲಗೊಳಿಸುವ ಕೆಲಸ ರಂಗಮಂದಿರ
ಪ್ರಾಧಿಕಾರದಿಂದ ಆಗಬಹುದಾಗಿದೆ.
5. ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಪ್ರಸ್ತುತ
ಕರ್ನಾಟಕ ನಾಟಕ ಅಕಾಡೆಮಿಯು ನಿರ್ಣಯವೊಂದನ್ನು ಕೈಗೊಂಡು ರಂಗಮಂದಿರ ಪ್ರಾಧಿಕಾರವೊಂದನ್ನು ಅಸ್ತಿತ್ವಕ್ಕೆ
ತರಬೇಕೆಂದು ಕರ್ನಾಟಕ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಕರ್ನಾಟಕದ ಎಲ್ಲಾ ತಾಲೂಕುಗಳಲ್ಲೂ ರಂಗಮಂದಿರವನ್ನು
ನಿರ್ಮಿಸುವುದು ಹಾಗೂ ನಿರ್ವಹಿಸುವುದು ಸರಕಾರದ ಬೇರೆ ಬೇರೆ ಇಲಾಖೆಗಳಿಂದ ಸಾಧ್ಯವಾಗದು. ಆದ್ದರಿಂದ ಪ್ರಾಧಿಕಾರದ ಮೂಲಕ ತಾಲ್ಲೂಕಿಗೊಂದು ರಂಗಮಂದಿರವನ್ನು
ಆಧ್ಯತೆಯ ಮೇರೆಗೆ ಕಂತುಕಂತಾಗಿ ನಿರ್ಮಿಸಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಅನುಕೂಲ
ಮಾಡಕೊಡಬೇಕೆಂದು ನಾಟಕ ಅಕಾಡೆಮಿಯು ಕರ್ನಾಟಕ ಸರಕಾರಕ್ಕೆ ಈ ಪ್ರಸ್ತಾವನೆಯನ್ನು ಸಲ್ಲಿಸುತ್ತಿದೆ.
ಕರ್ನಾಟಕ ನಾಟಕ ಅಕಾಡೆಮಿಯು ಅತೀ ಕಡಿಮೆ ವೆಚ್ಚದಲ್ಲಿ ರಂಗಮಂದಿರವನ್ನು ನಿರ್ಮಿಸಲು ಬೇಕಾದ ನೀಲಿನಕ್ಷೆ
ಹಾಗೂ ಅಂದಾಜು ವೆಚ್ಚವನ್ನು ಸಿದ್ದಪಡಿಸಿದೆ. ಈ ಉದ್ದೇಶಿತ ಕರ್ನಾಟಕ ರಂಗಭೂಮಿ ಪ್ರಾಧಿಕಾರದ ಕರಡು
ರೂಪರೇಷೆಗಳು ಹಾಗೂ ಅಂಗರಚನೆಯನ್ನೂ ಸಹ ನಾಟಕ ಅಕಾಡೆಮಿಯು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತಿದೆ.
6. ಈಗ
ಅಕಾಡೆಮಿಯು ವಿನ್ಯಾಸಗೊಳಿಸಿರುವ ರಂಗಮಂದಿರಕ್ಕೆ ತಗಲುವ ವೆಚ್ಚ ಅಂದಾಜು ಒಂದೂ ಕಾಲು ಕೋಟಿ
ರೂಪಾಯಿಗಳು. ಇದಕ್ಕೆ ಬೇಕಾದ ಸುಮಾರು 150/2೦೦ ಅಡಿಗಳ ಭೂಮಿಯನ್ನು ಜಿಲ್ಲಾ / ತಾಲ್ಲೂಕು ಪಂಚಾಯಿತಿ
ಆಡಳಿತ ರಂಗಮಂದಿರ ಪ್ರಾಧಿಕಾರಕ್ಕೆ ಕೊಡಮಾಡಿದಲ್ಲಿ, ಪ್ರಾಧಿಕಾರವು ಟೆಂಡರ್ ಮೂಲಕ ರಂಗಮಂದಿರವನ್ನು
ನಿರ್ಮಿಸಲು ಸಾಧ್ಯವಾಗುತ್ತದೆ. ಈ ಉದ್ದೇಶಿತ ರಂಗಭೂಮಿ ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಲು
ಕರ್ನಾಟಕ ಸರಕಾರವು ಮೂಲಧನವಾಗಿ 150ಕೋಟಿ ರೂಪಾಯಿಗಳನ್ನು ಪ್ರಾಧಿಕಾರಕ್ಕೆ ಮುಂದಿನ ಆಯವ್ಯಯದಲ್ಲಿ
ಮೀಸಲಿರಿಸಿದಲ್ಲಿ ಮುಂದೆ ಪ್ರಾಧಿಕಾರವು ರಂಗಮಂದಿರದ ಆದಾಯದ ಮೂಲಕ ಸ್ವಾವಲಂಬಿಯಾಗಿ ತನಗೆ ಬೇಕಾದ ಸಂಪನ್ಮೂಲಗಳನ್ನು
ತಾನೇ ಕ್ರೂಢೀಕರಿಸಿಕೊಳ್ಳುತ್ತದೆ. ಇದೂ ಅಸಾಧ್ಯವಾದಲ್ಲಿ ವಾರ್ಷಿಕವಾಗಿ ಮೂವತ್ತು ಲಕ್ಷ ರೂಪಾಯಿಗಳನ್ನಾದರೂ
ರಂಗಮಂದಿರ ಪ್ರಾಧಿಕಾರಕ್ಕೆ ಸರಕಾರವು ಬಜೆಟ್ ಮೂಲಕ ವದಗಿಸಿದಲ್ಲಿ ರಂಗಚಟುವಟಿಕೆಗಳಿರುವ ಕನಿಷ್ಟ 25
ತಾಲ್ಲೂಕುಗಳಲ್ಲಾದರೂ ರಂಗಮಂದಿರಗಳು ಅಸ್ತಿತ್ವಕ್ಕೆ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ.
ದೇಸಿ ಸಂಸ್ಕೃತಿ ಹಾಗೂ ಪಾರಂಪರಿಕ
ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ರಂಗಮಂದಿರ ಪ್ರಾಧಿಕಾರವೊಂದನ್ನು
ಆದಷ್ಟು ಬೇಗ ಅಸ್ತಿತ್ವಕ್ಕೆ ತಂದು ಕರ್ನಾಟಕದಾದ್ಯಂತ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ
ವ್ಯವಸ್ಥಿತ ಕಾರ್ಯಯೋಜನೆಯನ್ನು ರೂಪಿಸಬೇಕೆಂಬುದು ಕರ್ನಾಟಕ ನಾಟಕ ಅಕಾಡೆಮಿಯ ಅದಮ್ಯ ಆಶಯವಾಗಿದೆ.
ಇದು ಕೇವಲ ಅಕಾಡೆಮಿಯಿಂದ ಮಾತ್ರ ಆಗುವ ಕೆಲಸವಲ್ಲಾ. ಸರಕಾರ ಯಾವಾಗಲೂ ಮನ್ನಣೆ ಕೊಡುವುದು ಜನಾಗ್ರಹಕ್ಕೆ. ‘ಕಡಿಮೆ ಬಾಡಿಗೆ ದರದಲ್ಲಿ ಸುಸಜ್ಜಿತವಾದ
ರಂಗಮಂದಿರಗಳು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಸಿಗಬೇಕು ಹಾಗೂ ಅವುಗಳೆಲ್ಲವನ್ನೂ ನಿರ್ಮಿಸಿ
ನಿರ್ವಹಿಸಲು ರಂಗಮಂದಿರ ಪ್ರಾಧಿಕಾರವೊಂದನ್ನು ಸರಕಾರ ಅಸ್ತಿತ್ವಕ್ಕೆ ತರಬೇಕು’ ಎಂದು ರಾಜ್ಯಾದ್ಯಂತ ಇರುವ
ರಂಗಕರ್ಮಿ ಕಲಾವಿದರುಗಳು ಸರಕಾರವನ್ನು ಒತ್ತಾಯಿಸಬೇಕಿದೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದ
ಜನಪ್ರತಿನಿಧಿಗಳನ್ನು ಆಯಾ ಪ್ರದೇಶದ ರಂಗಕರ್ಮಿಗಳ ನಿಯೋಗ ಬೇಟಿಯಾಗಿ ಸರಕಾರದ ಅಧಿವೇಶನದಲ್ಲಿ ಪ್ರಾಧಿಕಾರದ
ಕುರಿತು ದ್ವನಿ ಎತ್ತಲು ಆಗ್ರಹಿಸಬೇಕಿದೆ. ಇದೂ ಸಾಧ್ಯವಾಗದೇ ಹೋದರೆ ಈ ನಾಡಿನ ಕಲೆ, ಸಾಹಿತ್ಯ ಹಾಗೂ
ಸಾಂಸ್ಕೃತಿಕ ಕ್ಷೇತ್ರದವರೆಲ್ಲಾ ಒಂದಾಗಿ ಸೇರಿ ಸಾಂಸ್ಕೃತಿಕ ಹಿತಾಸಕ್ತಿಗಾಗಿ ಸಂಘಟಿತ ಆಂದೋಲನವನ್ನೇ
ಶುರುಮಾಡಬೇಕಾಗಿದೆ. ಲೇಖಕರು ಪತ್ರಕರ್ತರುಗಳು ರಂಗಮಂದಿರ ಪ್ರಾಧಿಕಾರದ ಅಗತ್ಯ ಹಾಗೂ ಅನಿವಾರ್ಯತೆಗಳ
ಕುರಿತು ಲೇಖನಗಳನ್ನು ಬರೆದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಪೂಜಾ ಮಂದಿರಗಳಿಗಿಂತ ರಂಗಮಂದಿರಗಳು
ಮನುಷ್ಯರ ಮಾನಸಿಕ ಬೆಳವಣಿಗೆ ಹಾಗೂ ವೈಚಾರಿಕ ಆಲೋಚನೆಗಳಿಗೆ ಹೇಗೆ ಪ್ರೇರಕವಾಗಬಲ್ಲವು ಎಂಬುದನ್ನು
ಸಾಂಸ್ಕೃತಿಕ ಕ್ಷೇತ್ರದ ಹಿರಿಯರು ಆಳುವ ವ್ಯವಸ್ಥೆಗೆ ತಿಳಿಸಿ ಹೇಳಬೇಕಿದೆ. ಒಟ್ಟಿನ ಮೇಲೆ ಈ ನೆಲದ
ಭಾಷೆ, ಕಲೆ, ಸಂಸ್ಕೃತಿ ಉಳಿದು ಬೆಳೆಯಬೇಕೆಂದರೆ ನಾಡಿನಾದ್ಯಂತ ರಂಗಮಂದಿರಗಳು ಹುಟ್ಟುವುದು ಅನಿವಾರ್ಯವಾಗಿವೆ
ಹಾಗೂ ಇಂತಹ ರಂಗಮಂದಿರಗಳ ನಿರ್ಮಾಣ ಹಾಗೂ ವ್ಯವಸ್ಥಿತ ನಿರ್ವಹನೆಗೆ ಕರ್ನಾಟಕ ರಂಗಮಂದಿರ ಪ್ರಾಧಿಕಾರವೊಂದು
ಅಸ್ತಿತ್ವಕ್ಕೆ ಬರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಜಿಸಿ ದಿಟ್ಟ ನಿರ್ಧಾರವನ್ನು
ತೆಗೆದುಕೊಂಡು ನಾಟಕ ಅಕಾಡೆಮಿಯ ಉದ್ದೇಶಿತ ಯೋಜನೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.
-ಶಶಿಕಾಂತ ಯಡಹಳ್ಳಿ