ಬಹುತೇಕರು "ಕಾವ್ಯೇಶು ನಾಟಕಂ
ರಮ್ಯಂ"
ಎಂದು ತಮ್ಮ ಭಾಷಣಗಳಲ್ಲಿ, ಮಾತುಗಳಲ್ಲಿ,
ಕೃತಿಗಳಲ್ಲಿ ಹೇಳಿದ್ದನ್ನು ಕೇಳಿರಬಹುದು ನೋಡಿರಬಹುದು. ಎಲ್ಲರೂ ಈ ಮಾತನ್ನು ಸಾರ್ವಕಾಲಿಕ ಸತ್ಯ
ಎಂದು ಹೇಳುವುದೂ ಸಹ ಒಂತರಾ ಕ್ಲೀಷೆಯಾಗಿದೆ. ಇತ್ತೀಚೆಗೆ ನಾಟಕ ಅಕಾಡೆಮಿಯ ಪ್ರಶಸ್ತಿ
ಸಮಾರಂಭದಲ್ಲಿ ನಿರೂಪಣೆ ಮಾಡುತ್ತಿದ್ದವರೊಬ್ಬರು “"ಕಾವ್ಯೇಶು ನಾಟಕಂ ರಮ್ಯಂ ಎಂದು ಭರತಮುನಿ ಹೇಳಿದ್ದಾರೆ” ಎಂದು
ಹೇಳಿದಾಗ ಕೇಳಿದವರಿಗೆ ಗಾಬರಿಯಾಯಿತು. ಅದನ್ನು
ಕೇಳಿದ ಇನ್ನೊಬ್ಬರು ನನ್ನ ಕಿವಿಯೊಳಗೆ “ಹಾಗಂತ ಹೇಳಿದ್ದು ಕವಿ ಕಾಳಿದಾಸ ಅಲ್ಲವೇ? ಭರತ ಮುನಿ
ಯಾವಾಗ ಹೇಳಿದ್ದು” ಎಂದು ಕೇಳಿದರು. ಆದರೆ.. "ಕಾವ್ಯೇಶು ನಾಟಕಂ ರಮ್ಯಂ ಎಂದು ಹೇಳಿದ್ದು ಭರತಮುನಿಯೂ ಅಲ್ಲಾ, ಕವಿ
ಕಾಳಿದಾಸನೂ ಅಲ್ಲಾ” ಎಂದು ನಾನು ಹೇಳಿದಾಗ ಅವರಿಗೆ ನನ್ನ ಮಾತಿನ ಮೇಲೆಯೇ ಸಂದೇಹ ಬಂದು “ಈತನಿಗೆ
ಏನೂ ಗೊತ್ತಿಲ್ಲ ಬಿಡು” ಎನ್ನುವ ಭಾವ ಅವರ ಮುಖದಲ್ಲಿ ಮೂಡಿತು.
ಕವಿ
ಕಾಳಿದಾಸ "ಕಾವ್ಯೇಶು ನಾಟಕಂ ರಮ್ಯಂ" ಅಂತಾ ಹೇಳಿದ್ದು ಎಂದು ಬಹುತೇಕರು ತಪ್ಪಾಗಿ
ಗ್ರಹಿಸಿದ್ದಾರೆ. ಹಾಗೂ
ಅವಕಾಶ ಸಿಕ್ಕಾಗಲೆಲ್ಲಾ ಕಾಳಿದಾಸನ ಹೆಸರಲ್ಲೇ ಈ ಶ್ಲೋಕದ ಮೊದಲ ಸಾಲುಗಳನ್ನೂ ಹೇಳುತ್ತ ತಮ್ಮ
ಪಾಂಡಿತ್ಯವನ್ನೂ ಪ್ರದರ್ಶಿಸುತ್ತಾರೆ. ಆದರೆ.. ಈ ಶ್ಲೋಕವನ್ನು ಹೇಳಿದ್ದು ಕಾಳಿದಾಸನಾಗಿರದೇ,, ಕಾಳಿದಾಸ
ಬರೆದ ಅಭಿಜ್ಞಾನ ಶಾಕುಂತಲ ನಾಟಕದ ಕುರಿತು ವಿಮರ್ಶೆಯನ್ನು ಮಾಡುವ ಒಬ್ಬ ಕಾವ್ಯಮಿಮಾಂಸಕಾರನು ಈ
ಕೆಳಗಿನಂತೆ ಆ ಸಂಸ್ಕೃತ ನಾಟಕದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.
“ ಕಾವ್ಯೇಶು ನಾಟಕಂ ರಮ್ಯಂ
ತತ್ರ ರಮ್ಯಾ ಶಕುಂತಲಾ
ತತ್ರಾಪಿ ಚ ಚತುರ್ಥೋಕಸ್ತತ್ರ
ಶ್ಲೋಕಚತುಷ್ಟಯಂ”
ಅಂದರೆ.. ಕಾವ್ಯಗಳಲ್ಲಿ ನಾಟಕವೇ
ರಮ್ಯವಾದದ್ದು, ನಾಟಕಗಳಲ್ಲಿ ಶಾಕುಂತಲ ನಾಟಕವೇ ರಮ್ಯವಾದದ್ದು, ಅದರಲ್ಲಿ ಕೂಡ ನಾಲ್ಕನೇ ಅಂಕವೇ
ರಮ್ಯವಾದದ್ದು, ಅದರಲ್ಲಿಯೂ ಆ ನಾಲ್ಕು ಶ್ಲೋಕಗಳು ರಮ್ಯವಾದದ್ದು.. ಎಂಬುದು ಈ ಶ್ಲೋಕದ ಅರ್ಥ.
ಕಾಳಿದಾಸನ ಶಾಕುಂತಲ ನಾಟಕದ ಕುರಿತು ಹೀಗೆ
ಶ್ಲೋಕ ಮೀಮಾಂಸೆ ಬರೆದಿದ್ದು ಯಾರು? ಎನ್ನುವುದೇ ಇಲ್ಲಿವರೆಗೂ ಗೊತ್ತಿಲ್ಲ. ಹೆಸರು
ಗೊತ್ತಿಲ್ಲದಿರುವುದರಿಂದ ಅನಾಮಿಕ ಕವಿಯ ಶ್ಲೋಕ ಮೀಮಾಂಸೆ ಎಂದೇ ಪಂಡಿತರು ಅರ್ಥೈಸುತ್ತಾರೆ. ಶತಶತಮಾನಗಳ
ಹಿಂದೆ ಯಾರೋ ಒಬ್ಬ ಅನಾಮಿಕ ಕವಿ ನಾಟಕವನ್ನು ಓದಿಯೋ ನೋಡಿಯೋ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಈಗಲೂ
ನಾವೆಲ್ಲಾ ಸಾರ್ವಕಾಲಿಕ ಸತ್ಯವೆಂದು ನಂಬುವುದ ಯಾಕೆ ಎನ್ನುವುದೇ ನನ್ನ ಸಂದೇಹ?
ಕಳೆದ ಒಂದು ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯನ್ನೇ
ತೆಗೆದುಕೊಂಡಾಗ ಅದು ಕಾಲಘಟ್ಟದ ಚಲನೆಯಲ್ಲಿ ಅನೇಕ ಪರಿವರ್ತನೆಗಳನ್ನು ಕಂಡಿದೆ. ನವೋದಯ, ನವ್ಯ,
ಪ್ರಗತಿಶೀಲ, ಬಂಡಾಯ ಎಂದು ಸಾಹಿತ್ಯದದಲ್ಲಾದ ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ನವೋದಯದ
ಕಾಲದ ಕವಿಗಳ, ಬರಹಗಾರರ ರಮ್ಯ ಪರಿಕಲ್ಪನೆಗಳೆಲ್ಲಾ ಈಗ ಬದಲಾಗಿ ವಾಸ್ತವವಾದಿ ಅಂಶಗಳು ಸಾಹಿತ್ಯದ
ಭಾಗವಾಗಿವೆ. ಹಾಗೆಯೇ ರಂಗಭೂಮಿಯಲ್ಲೂ ಸಹ ಹಿಂದಿನಿಂದ ನಂಬಿಕೊಂಡು ಬಂದಿದ್ದ “ಕಲೆಗಾಗಿ ಕಲೆ”
ಎನ್ನುವುದು “ಜನರಿಗಾಗಿ ಕಲೆ” ಎಂದು ಬದಲಾಗಿದೆ. ಇಂತಹ ಸಂದರ್ಭದಲ್ಲಿ ಕಾಳಿದಾಸದ ಕಾಲದ ರಮ್ಯತೆಯ
ಕಲ್ಪನೆಯೇ ಇನ್ನೂ ರಂಗಭೂಮಿಯಲ್ಲಿರಲು ಸಾಧ್ಯವೆ? ಭಾರತೀಯ ರಂಗಭೂಮಿ ರಮ್ಯತೆಯ ಕಾಲಘಟ್ಟವನ್ನು
ಎಂದೋ ಮೀರಿ ಬಹು ಆಯಾಮಗಳಲ್ಲಿ ಬದಲಾವಣೆಯನ್ನು ಕಂಡುಕೊಂಡಿದೆ. ಆದರೂ ಈ "ಕಾವ್ಯೇಶು ನಾಟಕಂ
ರಮ್ಯಂ"
ಎನ್ನುವ
ಪುರಾತನ ಶ್ಲೋಕ ಮಾತ್ರ ಈಗಲೂ ಸಹ ಕಾಳಿದಾಸನ ಹೆಸರಲ್ಲಿ ಬಹುತೇಕರ ಬಾಯಲ್ಲಿ ನಲಿದಾಡುತ್ತಲೇ ಇದೆ.
ನನಗೆ
ಗೊತ್ತಿರುವ ಹಾಗೆ
ನಾಟಕ
ಎನ್ನುವುದು ಎಲ್ಲಾ
ಕಲೆಗಳನ್ನು, ಸಾಹಿತ್ಯಕ ಪ್ರಕಾರಗಳನ್ನೂ ಹಾಗೂ ಅನೇಕಾನೇಕ ವಿಚಾರಗಳನ್ನೂ ತನ್ನ
ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಂಡು ಬೆಳೆಯುವ ಪ್ರದರ್ಶಕ ಮಾಧ್ಯಮ.
ನೃತ್ಯ,
ಸಂಗೀತ,
ಚಿತ್ರಕಲೆ, ಕಾವ್ಯಗಳೇ ಪೂರ್ಣ ಪ್ರಮಾಣದ ನಾಟಕವಾಗುವ ಸಾಧ್ಯತೆಗಳು
ಕಡಿಮೆ. ಆದರೆ ನಾಟಕದ
ಭಾಗವಾಗಬಹುದು. ಹಾಗಂತ
ನೃತ್ಯೇಶು ನಾಟಕಂ
ರಮ್ಯಂ...
ಸಂಗೀತೇಶು ನಾಟಕಂ
ರಮ್ಯಂ..
ಎನ್ನುವುದು ಸೂಕ್ತವಲ್ಲ. ಮೂಲತಃ
ಒಬ್ಬ
ಕವಿಯಾದ
ಕಾಳಿದಾಸನ ನಾಟಕದ ಅಭಿಮಾನಿಯೊಬ್ಬ ತನ್ನ
ಕಾಲಘಟ್ಟದಲ್ಲಿ " ಕಾವ್ಯೇಶು ನಾಟಕಂ
ರಮ್ಯಂ.."
ಎಂದು
ಹೇಳಿರಬಹುದೇ ಹೊರತು
ಅದೇ
ಸಾರ್ವಕಾಲಿಕ ಸತ್ಯವಲ್ಲ. ಮತ್ತು
ಈ
ರಮ್ಯತೆ
ಎನ್ನುವುದೆ ಕೆಲವೊಮ್ಮೆ ಭ್ರಮೆಗೆ ಪರ್ಯಾಯ
ಪದವಾಗಿರುತ್ತದೆ. ಬಹುತೇಕ ಸಾಂಪ್ರದಾಯಿಕ ಕಾವ್ಯ
ಪ್ರಕಾರಗಳು ರಮ್ಯತೆಯನ್ನು, ಅವಾಸ್ತವಗಳನ್ನು, ಊಹೆಗಳನ್ನು ರೂಪಕವಾಗಿಸುತ್ತವೆ. ಕಾವ್ಯದ
ಮುಖ್ಯ
ಗುಣಲಕ್ಷಣವೇ ರೂಪಕತೆ.
ಆದರೆ
ನಾಟಕ
ಹಾಗಲ್ಲ...
ಅದು
ಆಯಾ
ದೇಶಕಾಲದ ಸಮಾಜದ
ಪ್ರತಿಬಿಂಬ. ಅಲ್ಲಿ
ಅವಾಸ್ತವ ರಮ್ಯತೆಗಳಿಗಿಂತಾ ವಾಸ್ತವಿಕ ಸಮಸ್ಯೆಗಳ ಅನಾವರಣಕ್ಕೇ ಹೆಚ್ಚು
ಪ್ರಾಮುಖ್ಯತೆ. ನಾಟಕದ
ಮೂಲ
ಗುಣದ್ರವ್ಯವೂ ಸಹ
ವಾಸ್ತವ
ಸತ್ಯವನ್ನು ಹೇಳುತ್ತಾ ಜನರನ್ನು ಜಾಗೃತ
ಗೊಳಿಸುವುದೇ ಆಗಿದೆ.
ಬಹುತೇಕ
ಆಧುನಿಕ
ರಂಗಭೂಮಿಯ ನಾಟಕಗಳ
ಗುರಿಯಂತೂ ಪೌರಾಣಿಕ ಕಥೆಗಳ
ರಮ್ಯತೆ,
ಭ್ರಮೆ,
ಕಲ್ಪನೆಗಳನ್ನು ಒಡೆದು
ಹಾಕಿ
ಅದರೊಳಗಿನ ವಾಸ್ತವ
ಸತ್ಯಗಳನ್ನು ಆನ್ವೇಷಿಸುವುದು ಹಾಗೂ
ವಿಶ್ಲೇಷಿಸುವುದಾಗಿದೆ.
ಕಾಳಿದಾಸ, ಭರತ...
ಮುಂತಾದ
ಪೂರ್ವೀಕರು ಆಯಾ
ಕಾಲಘಟ್ಟದ ಜೊತೆಗಿನ ಅನುಸಂಧಾನವನ್ನು ಕೃತಿಯಾಗಿಸಿದ್ದಾರೆ... ಹಾಗೂ
ಆ
ಕಾಲದ
ಆಳುವ
ವ್ಯವಸ್ಥೆಯ ಭಾಗವಾಗಿಯೇ ತಮ್ಮ
ಕೃತಿಗಳನ್ನು ರಚಿಸಿದ್ದಾರೆ. ವೈದಿಕ
ಸಂಸ್ಕೃತಿಯ ಭಾಗವಾಗಿಯೇ ರಚಿತಗೊಂಡ ಸಂಸ್ಕೃತ ಗ್ರಂಥ
ರಚನೆಗಳು ಹಾಗೂ ಅವುಗಳ ಮೇಲೆ ಬಂದ
ಮೀಮಾಂಸೆಗಳೆಲ್ಲಾ ಸಾರ್ವಕಾಲಿಕವಾಗಲಾರವು. ಹೀಗಾಗಿ
ಸಾಹಿತ್ಯದ ಭಾಗವಾದ
ಕಾವ್ಯವು ತನ್ನ
ಪ್ರಕಾರದಲ್ಲಿ ಶ್ರೇಷ್ಟವಾಗಿರುವಂತೆಯೇ ನಾಟಕಗಳೂ ಸಹ ಪ್ರದರ್ಶಕ ಪ್ರಕಾರಗಳಲ್ಲಿ ಪ್ರಮುಖವಾದಂತದ್ದಾಗಿವೆ.
ನಾಟಕದಲ್ಲಿ ಕವಿತೆ
ಬಳಸಬಹುದು ಬಿಡಬಹುದು, ಕಾವ್ಯದಲ್ಲಿ ನಾಟಕೀಯತೆ ಇರಬಹುದು ಇಲ್ಲದಿರಬಹುದು. ಆದರೆ
ಈ
ಎರಡೂ
ಪ್ರಕಾರಗಳೂ ತಮ್ಮ
ರಚನಾ
ಕ್ರಮದಲ್ಲಿ , ಸ್ವರೂಪದಲ್ಲಿ, ಭಿನ್ನವಾದಂತಹವು. ಎಲ್ಲಾ
ಮಾಧ್ಯಮಗಳ ನಡುವೆ
ಕೊಡುಕೊಳ್ಳುವ ಸಂಬಂಧಗಳಿದ್ದಂತೆ ಕಾವ್ಯ
ಮತ್ತು
ನಾಟಕ
ಪ್ರಕಾರಗಳಲ್ಲೂ ಇರಬಹುದು, ಇದೆ.
ಆದರೆ
ಬರೀ
ಕವಿತೆ
ನಾಟಕವಲ್ಲ... ಇಡೀ
ನಾಟಕ
ಕಾವ್ಯವಲ್ಲ.. ಹೀಗಾಗಿ ರಾಮಾಯಣ
ಮಹಾಭಾರತಗಳು ರಮ್ಯತೆ
ತುಂಬಿದ
ಮಹಾಕಾವ್ಯಗಳೇ ಹೊರತು
ನಾಟಕಗಳಲ್ಲ. ನಾಟಕವಾಗಿಸಬೇಕಾದರೆ ಮಹಾಕಾವ್ಯವನ್ನು ಇಡಿಯಾಗಿ ಇಲ್ಲವೆ
ಬಿಡಿಯಾಗಿ ರಂಗರೂಪಗೊಳಿಸಿ ರಂಗಮಾಧ್ಯಮಕ್ಕೆ ರೂಪಾಂತರಿಸಬೇಕು. ಅಷ್ಟಕ್ಕೂ ಕಾವ್ಯಗಳನ್ನು ಯಥಾವತ್ತಾಗಿ ರಂಗದ
ಮೇಲೆ ತರುತ್ತೇವೆ ಎಂದರೂ ಅದು ಕಾವ್ಯರೂಪಕವಾಗದೀತೆ ಹೊರತು ರಂಗನಾಟಕವಾಗಲಿಕ್ಕಿಲ್ಲ.
ಹಿಂದಿನದ್ದೆಲ್ಲೆವೂ ಪರಮ
ಶ್ರೇಷ್ಟ, ಸಂಸ್ಕೃತದಲ್ಲಿ ಹೇಳಿದ್ದೆಲ್ಲಾ
ಮಹತ್ತರವಾದದ್ದು, ಆಗಿನ ಕವಿಗಳು
ಹೇಳಿದ್ಯಲ್ಲಾ ಪರಮ
ಸತ್ಯ
ಎಂದು
ನಂಬಿಕೊಳ್ಳುವುದೂ ಮೌಡ್ಯವಾಗುತ್ತದೆ. ಪಾರಂಪರಿಕ ಮೌಲ್ಯ,
ಮೌಡ್ಯ
ಹಾಗೂ
ನಂಬಿಕೆಗಳ ರಮ್ಯತೆಯನ್ನು ಮುರಿದು
ವಾಸ್ತವ
ಪ್ರಜ್ಞೆಯೊಂದಿಗೆ ಮರಳಿ
ಕಟ್ಟುವುದೇ ಆಧುನಿಕ
ರಂಗಭೂಮಿಯ ವೈಶಿಷ್ಟ್ಯವಾಗಿದೆ. ವರ್ತಮಾನದ ವಿವೇಚನೆಯ ಭೂತಕನ್ನಡಿಯೊಳಗೆ ಪುರಾಣೇತಿಹಾಸವನ್ನು ಪರಿಶೀಲಿಸಿ ಸಾಂದರ್ಭಿಕ ಸತ್ಯಗಳನ್ನು ವೇದಿಕೆ
ಮೇಲೆ
ಪ್ರದರ್ಶಿಸುವುದೇ ಆಧುನಿಕ
ರಂಗಭೂಮಿಯ ಸಾಧನೆ.
ಕಾವ್ಯ ಮಿಮಾಂಸಕ ಹೇಳಿದಂತೆ ಕಾವ್ಯದಲ್ಲಿ ನಾಟಕ
ರಮ್ಯವಾಗಿದ್ದರೆ ಇರಲಿ..
ನಾಟಕದಲ್ಲಿ ವಾಸ್ತವ
ಪ್ರಜ್ಞೆಯ ಅರಿವು
ಸದಾ
ತುಂಬಿರಲಿ. ಭೂತಕಾಲದ ರಮ್ಯತೆಯ ಪರೀಧಿಯನ್ನು ಬೇಧಿಸಿ
ರಂಗಭೂಮಿ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಲಿ. ಕಣ್ಕಟ್ಟಿನ ರಮ್ಯಕಾವ್ಯಕ್ಕಿಂತಲೂ ಸಮಾಜದ ಸಂಕಟಗಳಿಗೆ ತುಡಿಯುವ ನಾಟಕ
ಇಂದಿನ
ಅಗತ್ಯವಾಗಲಿ. ಹಿಂದಿನ
ಪರಂಪರೆಯ ಸಕಲ
ಮೌಲ್ಯ
ಮೌಢ್ಯಗಳನ್ನು ವಾಸ್ತವದ ತೂತು
ಜಾಡಿಯಲ್ಲಿ ಸೋಸಿ
ತೆಗೆದು
ವರ್ತಮಾನದ ರಂಗಭೂಮಿ ಸದಾ
ಸತ್ಯಕ್ಕೆ ಹತ್ತಿರವಾಗಿರಲಿ..
- ಶಶಿಕಾಂತ ಯಡಹಳ್ಳಿ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ.
ಪ್ರತ್ಯುತ್ತರಅಳಿಸಿ