ಸೋಮವಾರ, ಏಪ್ರಿಲ್ 8, 2019

ವಿಕ ವರದಿಯೂ.. ಸ್ಥಗಿತಗೊಂಡ ಕಲಾಗ್ರಾಮದ ರಂಗಮಂದಿರವೂ




ಮಾರ್ಚ್ 31 ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ "ಕಲಾಗ್ರಾಮದ ಸುವರ್ಣ ಸಮುಚ್ಚಯ ಮೂರು ತಿಂಗಳಿಂದ ಸ್ಥಗಿತಗೊಂಡಿದೆ" ಎಂದು ವರದಿಯಾಗಿದೆ. ಆದರೆ ಸ್ಥಗಿತಕ್ಕೆ ಕಾರಣವನ್ನು ಮರೆಮಾಚಲಾಗಿದೆ. ಬೆಂಕಿಯಿಂದ  ಕ್ಯಾಬಿನ್ ಸುಟ್ಟು ಸ್ಥಗಿತವಾಗಿದೆ ಎಂಬುದನ್ನು  ಬರೆಯಬೇಕಿತ್ತು ಬರೆದಿಲ್ಲ. ಅಚ್ಚರಿ ಎಂದರೆ "ಸಭಾಂಗಣ ಸ್ಥಗಿತಗೊಂಡಿರುವುದರಿಂದ ಕೆಲವು ನಾಟಕ ತಂಡಗಳು ತಾವೇ ದ್ವನಿ ಬೆಳಕು ವ್ಯವಸ್ಥೆಯನ್ನು ಮಾಡಿಕೊಂಡು ಪ್ರದರ್ಶನ ನೀಡಬೇಕಾಗಿದೆ" ಎಂದೂ ವರದಿಯಾಗಿದೆ. ರಂಗಮಂದಿರವೇ ಸ್ಥಗಿತವಾಗಿದೆ ಎಂದ ಮೇಲೆ ಪ್ರದರ್ಶನ ಮಾಡುವುದಾದರೂ ಹೇಗೆ ಸಾಧ್ಯಇದೆಂತಾ ವಿರೋಧಾಬಾಸದ ಸುದ್ದಿ

ಕಳೆದ ವರ್ಷ ಡಿಸೆಂಬರ್ 13 ರಂದು ಬೆಳ್ಳಂಬೆಳಿಗ್ಗೆ 5 ಗಂಟೆಗೆ ಅಚಾನಕ್ಕಾಗಿ ಕಲಾಗ್ರಾಮದ ರಂಗಮಂದಿರದ ಲೈಟ್ ಕಂಟ್ರೋಲ್ ರೂಂನಲ್ಲಿ ಬೆಂಕಿ ಬಿದ್ದು ದ್ವನಿ ಹಾಗೂ ಬೆಳಕಿನ ಉಪಕರಣಗಳು ಸುಟ್ಟು ಕರಕಲಾದವು. ಅದು ಶಾರ್ಟ್ ಸರ್ಕೂಟ್ನಿಂದ ಸುಟ್ಟಿದ್ದಲ್ಲ ಅಧಿಕಾರಿಗಳಿಬ್ಬರ ನಡುವಿನ ಮುಸುಕಿನ ಗುದ್ದಾಟದ ಫಲವಾಗಿ ಬೆಂಕಿ ಹಚ್ಚಲಾಯಿತು ಎನ್ನುವ ಸಂದೇಹವನ್ನು ಇಲಾಖೆಯ ಅಧಿಕಾರಿಗಳೇ ವ್ಯಕ್ತಪಡಿಸುತ್ತಾರೆ. ಪೊಲೀಸ್ ವಿಚಾರಣೆ  ಮಾಡಿದರೆ ಸತ್ಯ ಹೊರಬರಬಹುದಾಗಿದೆ. ಆದರೆ ಅದಕ್ಕೆ ಇಲಾಖೆ ತಯಾರಿಲ್ಲ.. ಡಿ.12 ರಾತ್ರಿ ನಾಟಕ ಪ್ರದರ್ಶನದ ನಂತರ ವಿದ್ಯುತ್ತಿನ ಮೇನ್ ಡಿಪಿ ಆಪ್ ಮಾಡಲಾಗಿದ್ದರೂ ವೈರ್ ಗಳಲ್ಲಿ ಕರೆಂಟ್ ಹರಿದು ಶಾರ್ಟ್ ಸರ್ಕಿಟ್ ಆಗಿದ್ದು ವಿಸ್ಮಯದ ಸಂಗತಿ.

ಬೆಂಕಿ ಹಚ್ಚಲಾದ ದಿನದಿಂದ ಅಂದರೆ ಕಳೆದ ಮೂರೂವರೆ ತಿಂಗಳಿಂದ ರಂಗಮಂದಿರ ಮುಚ್ಚಿದ್ದರಿಂದ ಮತ್ತು ವ್ಯವಸ್ಥಾಪಕ ಸಿಬ್ಬಂದಿಯನ್ನು ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ವರ್ಗಾಯಿಸಿದ್ದರಿಂದ ಅಲ್ಲಿ ಯಾವುದೇ ನಾಟಕ ಮಾಡಲು ಸಾಧ್ಯವಾಗಿಲ್ಲ. ಇಡೀ ಕಟ್ಟಡದ ವಿದ್ಯುತ್ ವ್ಯವಸ್ಥೆಯನ್ನೇ ನಿಷ್ಕ್ರೀಯಗೊಳಿಸಲಾಗಿದ್ದು ಮುಖ್ಯಮಂದಿರದ ಮೇಲಿರುವ ಸ್ಟುಡಿಯೋದಲ್ಲೂ ಸಹ ಕರೆಂಟ್ ಕಟ್ ಆಗಿ ಅಲ್ಲಿ ಕೂಡಾ ಕಾರ್ಯಕ್ರಮ ಮಾಡುವುದು ಅಸಾಧ್ಯವಾಗಿದೆ

ಎಲ್ಲಾ ವಾಸ್ತವ ಸಂಗತಿಗಳನ್ನು ಅಧ್ಯಯನ ಮಾಡಿ ವರದಿ ಮಾಡುವ ಬದಲು ವಿಜಯ ಕರ್ನಾಟಕದ ಪುಣ್ಯವತಿ ಎನ್ನುವ ವರದಿಗಾರ್ತಿ ಸ್ಥಗಿತಗೊಂಡ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎನ್ನುವ ತಪ್ಪು ಮಾಹಿತಿ ಕೊಟ್ಟಿದ್ದು ಸಮಂಜಸವಲ್ಲ. ರಂಗಭೂಮಿಯ ಗಂಧಗಾಳಿ ಇಲ್ಲದ ಪತ್ರಿಕಾ ವರದಿಗಾರರು ಕ್ಷೇತ್ರಕಾರ್ಯ ಮಾಡದೇ ಕಛೇರಿಯಲ್ಲಿ ಕೂತು ಬರೀ ಪೋನ್ ಲ್ಲಿ ವಿವರ ಪಡೆದು ರಂಗಭೂಮಿಯ ಸಮಸ್ಯೆಗಳ ಕುರಿತು ವರದಿ ಲೇಖನ ಬರೆದರೆ ಹೀಗೆ ತಪ್ಪು ಮಾಹಿತಿಗಳು ಪ್ರಕಟಗೊಳ್ಳುತ್ತವೆ. ಕುಷ್ಟಗಿಯಲ್ಲಿ ನಾಟಕ ಪ್ರದರ್ಶನ ರದ್ದು ಮಾಡಲಾದ ಕುರಿತ ವರದಿಯಲ್ಲೂ ಇದೇ ರೀತಿ ತಪ್ಪು ಮಾಹಿತಿಗಳಿದ್ದವು

ಇನ್ನು ನಾಟಕ ಅಕಾಡೆಮಿಯ ಅಧ್ಯಕ್ಷರು ಕಲಾಗ್ರಾಮ ರಂಗಮಂದಿರವನ್ನು ರೀಓಪನ್ ಮಾಡಿಸಲು ತುಂಬಾ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದಾರೆ. ಇಲಾಖೆಯ ನಿರ್ದೇಶಕಿಯವರಿಗೆ ಖುದ್ದಾಗಿ ಮನವಿ ಮಾಡಿಕೊಂಡರೂ ನಿರೀಕ್ಷಿತ ಫಲ ದೊರೆಯದಿದ್ದಾಗ ಅಕಾಡೆಮಿಯಿಂದ ಅಧೀಕೃತವಾಗಿ ಪತ್ರವನ್ನೂ ಬರೆದು ಒತ್ತಾಯಿಸಿದ್ದಾರೆ. ಆದರೆ ನಿರ್ದೇಶಕಿಯಮ್ಮನವರು ಬರೀ ಭರವಸೆ ಕೊಡುತ್ತಾ ಕಾಲ ತಳ್ಳುತ್ತಿದ್ದಾರೆ. ಅದೆಲ್ಲಾ ಸರಿ... ಆದರೆ " ಸಮುಚ್ಚಯ ಸ್ಥಗಿತಗೊಂಡಿರುವುದರಿಂದ ಪ್ರೇಕ್ಷಕರು ಚದುರಿ ಹೋಗುತ್ತಾರೆ, ಮತ್ತೆ ಅವರನ್ನು ಸಂಪಾದಿಸುವುದು ಕಷ್ಟ" ಎಂದು ಜೆ.ಲೊಕೇಶರವರು ಪ್ರೇಕ್ಷಕರ ಪರವಾದ ದ್ವನಿಯಾಗಿ ಹೇಳಿಕೆ ಕೊಟ್ಟಿದ್ದಕ್ಕೆ ಅಭಿನಂದನೆಗಳು. ಆದರೆ ಕಲಾಗ್ರಾಮಕ್ಕೆ ಬರುವ ಪ್ರೇಕ್ಷಕರು ಬಹುತೇಕ ಮಲ್ಲತ್ತಳ್ಳಿಯ ಸುತ್ತಮುತ್ತ ವಾಸಿಸುವವರೇ ಆಗಿದ್ದು.. ಚದುರಿ ಹೋಗಲು ಅಲ್ಲಿ ಅಕ್ಕಪಕ್ಕದಲ್ಲಿ ಸದಾ ನಾಟಕ ನಡೆಯುವ ರಂಗಮಂದಿರಗಳೇನಿಲ್ಲ. ಮತ್ತೆ ನಾಟಕ ಆರಂಭಿಸಿದರೆ ರಂಗಾಸಕ್ತರು ಎಲ್ಲಿದ್ದರೂ ನಾಟಕ ನೋಡಲು ಬರುತ್ತಾರೆ. ಇಲ್ಲಿ ಸಮಸ್ಯೆ ಇರುವುದು ಪ್ರೇಕ್ಷಕರದ್ದಲ್ಲ... ಪರ್ಯಾಯ ಮನರಂಜನಾ ಮಾಧ್ಯಮಗಳು ಬೇಕಾದಷ್ಟಿರುವಾಗ ಪ್ರೇಕ್ಷಕರು ರಂಗಪ್ರದರ್ಶನ ವಿರಹವನ್ನೇನೂ ಅನುಭವಿಸುವುದಿಲ್ಲ. ನಿಜಕ್ಕೂ ತೊಂದರೆಯಾಗಿದ್ದು ರಂಗತಂಡಗಳಿಗೆ. ತಿಂಗಳಿಗೆ ಕನಿಷ್ಟ ಹತ್ತರಿಂದ ಇಪ್ಪತ್ತು ರಂಗತಂಡಗಳು ಕಲಾಗ್ರಾಮದಲ್ಲಿ ನಾಟಕ ಮಾಡುತ್ತಿದ್ದವು. ಈಗ ತಂಡಗಳಿಗೆ ನಾಟಕ ಮಾಡಬೇಕೆಂದರೂ ಪ್ರದೇಶದಲ್ಲಿ ಪರ್ಯಾಯ ರಂಗಮಂದಿರಗಳಿಲ್ಲ. ಬೆಂ. ವಿಶ್ವವಿದ್ಯಾಲಯದಲ್ಲಿದೆಯಾದರೂ ಅದನ್ನು ರಂಗತಂಡಗಳಿಗೆ ಕೊಡುವುದಿಲ್ಲ. ಹೀಗಾಗಿ ರಂಗ ತಂಡಗಳು ನಿಜಕ್ಕೂ ಸಂಕಷ್ಟದಲ್ಲಿವೆ. ರಂಗತಂಡಗಳು ಹಾಗೂ ಅವುಗಳಲ್ಲಿ ತೊಡಗಿಕೊಂಡ ಕಲಾವಿದರು ಮತ್ತು ನೇಪತ್ಯ ತಜ್ಞರ ಕುರಿತು ಅಕಾಡೆಮಿ ಅಧ್ಯಕ್ಷರು ಕಾಳಜಿ ವ್ಯಕ್ತಪಡಿಸಿ ಪತ್ರಿಕೆಯವರಿಗೆ ಹೇಳಿಕೆ ಕೊಟ್ಟಿದ್ದರೆ ಸೂಕ್ತವಾಗುತ್ತಿತ್ತು

ಇದು ಕೇವಲ ಅಧ್ಯಕ್ಷರಿಂದ ಅಥವಾ ನಾಲ್ಕಾರು ಜನರ ವ್ಯಕ್ತಿಗತ ವಿರೋಧದಿಂದಾಗುವ ಕೆಲಸವಲ್ಲ. ಬೆಂಗಳೂರಿನ ರಂಗಕರ್ಮಿ ಕಲಾವಿದರು ಒಂದಾಗಿ ಕಲಾಗ್ರಾಮದ ರಂಗಮಂದಿರವನ್ನು ಕಾಲಮಿತಿಯಲ್ಲಿ ರಂಗ ಪ್ರದರ್ಶನಕ್ಕೆ ಸನ್ನದ್ದಗೊಳಿಸಲು ಆಗ್ರಹಿಸಿ ಹಾಗೂ ಸಂಸ್ಕೃತಿ ಇಲಾಖೆಯ ವಿಳಂಬ ನೀತಿಯನ್ನು ವಿರೋಧಿಸಿ ಧರಣಿ, ಸತ್ಯಾಗ್ರಹ, ಹೋರಾಟಗಳನ್ನು ಆರಂಭಿಸಬೇಕಿದೆ. ಅಕಸ್ಮಾತ್ ತಾಂತ್ರಿಕ ಕಾರಣಗಳಿಂದ ರಿಪೇರಿ ಕೆಲಸ ವಿಳಂಬವಾಗುವುದೇ ಆದರೆ ತತ್ಕಾಲಿಕವಾಗಿಯಾದರೂ ದ್ವನಿ ಹಾಗೂ ಬೆಳಕಿನ ಉಪಕರಣಗಳನ್ನು ತಂದು ನಾಟಕ ಪ್ರದರ್ಶನ ಮಾಡಲು ರಂಗತಂಡಗಳಿಗೆ ಅವಕಾಶ ಮಾಡಿಕೊಡಲು ಒತ್ತಾಯ ಪೂರ್ವಕವಾಗಿ ಆಗ್ರಹಿಸಬೇಕಿದೆ. ಸುಮ್ಮನೇ ಕುಳಿತರೆ ಮುಚ್ಚಿದ ರಂಗಮಂದಿರ ತೆರೆಯದು.. ಹೋರಾಟಕ್ಕಿಳಿದರೆ ಜಯ ನಮ್ಮದು...

- ಶಶಿಕಾಂತ ಯಡಹಳ್ಳಿ 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ