ನಮಗೆ
ಕೊಟ್ಟೂರಲ್ಲಿ ನಾಟಕ ಪ್ರದರ್ಶನ ನಿಲ್ಲಿಸಿದ ವಿಚಾರ ಗೊತ್ತಾಗಿದ್ದೇ ಮಂಗಳವಾರ... ಆದರೆ
ಸೋಮವಾರವೇ ಕಲಾವಿದರ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಯವರನ್ನು ಬೇಟಿ ಮಾಡಿದೆ
ಎಂದು ವಿಕ ಪತ್ರಿಕೆಯಲ್ಲಿ ವರದಿ ಆಗಿದ್ದರಲ್ಲಿ ಸತ್ಯಾಂಶ ಇಲ್ಲ. ಹಾಗೂ ಯಾವುದೇ ನಿಯೋಗ
ಹೋಗಿ ಖುದ್ದಾಗಿ ಚುನಾವಣಾಧಿಕಾರಿಗಳನ್ನು ಬೇಟಿ ಆಗಿಲ್ಲ ಮತ್ತು 2 ನೇ ಪ್ರದರ್ಶನ
ನೀಡಬಾರದೆಂದೂ ಚುನಾವಣಾಧಿಕಾರಿಗಳು ಹೇಳಿಲ್ಲ. ನಾಟಕ ಅಕಾಡೆಮಿಯ ಅಧ್ಯಕ್ಷರು ಪೋನ್ ಮೂಲಕ
ಸಂಬಂಧಿಸಿದ ಚುನಾವಣಾಧಿಕಾರಿ ಯವರೊಂದಿಗೆ ಮಾತಾಡಿ ಮನವರಿಕೆ ಮಾಡಿಕೊಟ್ಟಿದ್ದಾರೆ ಹಾಗೂ
ಅಕಾಡೆಮಿಯಿಂದ ಅಧೀಕೃತವಾಗಿ ಪತ್ರ ಬರೆದು ಬೋಜಣ್ಣನ ಮೂಲಕ ತಲುಪಿಸಿದ್ದಾರೆ. ವಿಜಯ
ಕರ್ನಾಟಕದಲ್ಲಿ ಇವತ್ತು ಪ್ರಕಟವಾಗಿರುವ ವರದಿಯ ಕೆಲವು ಸಾಲುಗಳು ವೃತ್ತಿ ಕಂಪನಿ
ಮಾಲೀಕರಿಗೆ ತಪ್ಪು ಸಂದೇಶವನ್ನು ಕೊಡದೇ ಇರಲಿ ಎನ್ನುವುದಕ್ಕೇ ಈ ಕ್ಲಾರಿಫಿಕೇಶನ್
ಕೊಡಬೇಕಾಗಿದೆ.
ನಿಜವಾಗಿ
ಆಗಿದ್ದೇನೆಂದರೆ... ಮಾರ್ಚ್ 10ರ ಭಾನುವಾರ ಸಂಜೆ ಕೊಟ್ಟೂರಿನ ನಾಟಕ ಕಂಪನಿಗೆ ಬಂದ
ಲೋಕಲ್ ಮುನ್ಸಿಪಾಲ್ಟಿಯ ಪ್ರತಿನಿಧಿಗಳು "ಚುನಾವಣೆಯ ನೀತಿ ಸಂಹಿತೆ ಜಾರಿಗೆ
ಬಂದಿರುವುದರಿಂದ ರಾತ್ರಿ ನಾಟಕ ಮಾಡಕೂಡದು" ಎಂದು ಹೇಳಿ ರಾತ್ರಿಯ ಪ್ರದರ್ಶನ ರದ್ದು
ಮಾಡಿಸಿದರು. ಯಾಕೆಂದು ಕೇಳಲು ಬೆಳಿಗ್ಗೆ ಹಗರಿಬೊಮ್ಮನಹಳ್ಳಿಯ ಚುನಾವಣಾಧಿಕಾರಿಗಳ
ಕಛೇರಿಗೆ ತೆರಳಿದ ಎರಡೂ ನಾಟಕ ಕಂಪನಿಯ ಮ್ಯಾನೇಜರರವರಿಗೂ ಸಹ ರಾತ್ರಿ ಪ್ರದರ್ಶನ
ಮಾಡಬಾರದೆಂದೇ ಆದೇಶಿಸಿದರು..
ಇದೆಲ್ಲಾ ನಡೆದಿದ್ದು ಮೌಖಿಲ
ಆದೇಶದಿಂದಲೇ ಹೊರತು ಯಾವುದೇ ಲಿಖಿತ ಆದೇಶ ಹೊರಡಿಸಿಲ್ಲ ಹಾಗೂ ವಿಕ ಪತ್ರಿಕೆಯಲ್ಲಿ
ಪ್ರಕಟಗೊಂಡಂತೆ ಯಾವುದೇ ನೊಟೀಸನ್ನೂ ಯಾರೂ ಯಾರಿಗೂ ಕೊಡಲಾಗಿಲ್ಲ.. ವಿಜಯ ಕರ್ನಾಟಕದಲ್ಲಿ
ವರದಿಯಾದಂತೆ ಕೊಟ್ಟೂರಲ್ಲಿಯಾಗಲಿ ಇಲ್ಲವೇ ಬೆಂಗಳೂರಿನಲ್ಲಿಯೇ ಆಗಲಿ ಯಾವುದೇ ಕಲಾವಿದರ
ಆಯೋಗ ಇಲ್ಲವೇ ನಿಯೋಗ ಹೋಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಬೇಟಿಯಾಗಿ
ಒತ್ತಾಯಿಸಿ ಮನವಿ ಪತ್ರವನ್ನೂ ಕೊಟ್ಟಿಲ್ಲ. ಹೀಗಾಗಿ ವಿಕ ಪತ್ರಿಕೆಯಲ್ಲಿ ಈ ಕುರಿತು
ಬಂದ ಮಾಹಿತಿ ತಪ್ಪಾಗಿದೆ. ವರದಿ ಮಾಡಿದವರ ಗ್ರಹಿಕೆಯಲ್ಲೇ ದೋಷವಿದೆ.
"ನಾಟಕ
ಪ್ರದರ್ಶನ ಚುನಾವಣಾ ವ್ಯಾಪ್ತಿಗೆ ಬರುವುದಿಲ್ಲ" ಎಂದು ಮುಖ್ಯ ಚುನಾವಣಾಧಿಕಾರಿಗಳ
ಹೇಳಿಕೆ ಪ್ರಕಟಿಸಿದ ಪ್ರಜಾವಾಣಿಯ ವರದಿ ಸರಿಯಾಗಿದೆ. ಮತ್ತು ಇದೇ ಈ ಸಧ್ಯಕ್ಕೆ
ರಂಗಭೂಮಿಗೆ ಬೇಕಾಗಿದೆ...
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ