ಸೋಮವಾರ, ಏಪ್ರಿಲ್ 8, 2019

ಸಂಹಿತೆ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಲ್ಲದಿರಲಿ


ಚುನಾವಣೆಗಳು ಘೋಷಣೆ ಆಗಿದ್ದೇ ತಡ ಅಧಿಕಾರಿಗಳು ನೀತಿ ಸಂಹಿತೆಯ ನೆಪದಲ್ಲಿ ನಾಟಕ ಪ್ರದರ್ಶನಗಳಿಗೆ ಅಡತಡೆಯನ್ನುಂಟು ಮಾಡುವುದನ್ನು ಶುರು ಮಾಡಿಕೊಂಡಿದ್ದಾರೆ

ಬಳ್ಳಾರಿ ಜಿಲ್ಲೆಯ ಕೊಟ್ಟೂರು ಜಾತ್ರೆಯಲ್ಲಿ ಗುಬ್ಬಿಯ ಬಿ.ಎಸ್.ಆರ್ ನಾಟಕ ಕಂಪನಿ ಹಾಗೂ ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘಗಳು ಕ್ಯಾಂಪ್ ಹಾಕಿವೆ. 'ಮಂಗಳೂರು ಹುಡುಗ ಹುಬ್ಬಳ್ಳಿ ಹುಡುಗಿ' ಹಾಗೂ 'ಬಂದರss ನೋಡಾ ಬಂಗಾರಿ' ನಾಟಕಗಳು ಪ್ರದರ್ಶನಗೊಳ್ಳುತ್ತಿವೆ

ನಾಟಕಗಳ ಪ್ರದರ್ಶನಕ್ಕೆ ಅಧೀಕೃತವಾಗಿ ಒಂದು ತಿಂಗಳ ಅನುಮತಿಯನ್ನು ಈಗಾಗಲೇ ಪಡೆದು ಇನ್ನೂ ಎರಡು ವಾರವೂ ಆಗಿಲ್ಲ 'ರಾತ್ರಿ ಪ್ರದರ್ಶನ ರದ್ದು ಮಾಡಿ' ಎಂದು ಹಗರಿಬೊಮ್ಮನಹಳ್ಳಿಯ ಚುನಾವಣಾಧಿಕಾರಿ ಹಾಗೂ ತಹಶಿಲ್ದಾರರು ಇದ್ದಕ್ಕಿದ್ದಂತೆ ಮೌಖಿಕ ಆದೇಶ ನೀಡಿ ಮಾರ್ಚ 11 ರಿಂದ ಪ್ರದರ್ಶನ ನಿಲ್ಲಿಸಿದ್ದಾರೆ. ಮಾಡುವುದಿದ್ದರೆ ಸಂಜೆ 6 ಗಂಟೆಗೆ ನಾಟಕ ಆಡಿ ರಾತ್ರಿ 9. ಗಂಟೆಯ ಪ್ರದರ್ಶನ ರದ್ದು ಮಾಡಿ ಎಂದು ಹೇಳಿದ್ದಾರೆ.

ರಾತ್ರಿ ನಾಟಕ ಮಾಡಬಾರದು ಎಂದು ಯಾವ ಚುನಾವಣಾ ನೀತಿ ಸಂಹಿತೆಯ ಕಾನೂನಿನಲ್ಲಿದೆ. ನಾಟಕ ಪ್ರದರ್ಶನಗಳಿಗೆ ಹಾಕಿದ ನಿರ್ಬಂಧಗಳು ಸಿನೆಮಾ ಪ್ರದರ್ಶನಗಳಿಗೂ ಯಾಕೆ ಅಪ್ಲೈ ಆಗೋದಿಲ್ಲ. ಎರಡೂ ಮನರಂಜನಾ ಮಾಧ್ಯಮಗಳೇ ಆಗಿದ್ದರೂ ರಾತ್ರಿ ಸಿನೆಮಾಗಳನ್ನು ಪ್ರದರ್ಶಿಸಬಹುದು ಆದರೆ ನಾಟಕ ಪ್ರದರ್ಶನ ಮಾಡಬಾರದು ಎನ್ನುವುದು ತಾರತಮ್ಯ ಧೋರಣೆ ಅಲ್ಲವೇ

ಇಷ್ಟಕ್ಕೂ ನಾಟಕಗಳು ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ, ರಾಜಕಾರಣಿಗಳ ಹಂಗಲ್ಲೂ ಇಲ್ಲಾ. ಕಲೆ ನಾಟಕಗಳ ಬಗ್ಗೆ ಆಸಕ್ತಿ ಹಾಗೂ ಆಕರ್ಷಣೆ ಎರಡೂ ಇಲ್ಲದ ಅಧಿಕಾರಿಗಳಿಗೆ ನಾಟಕ ಪ್ರದರ್ಶನವೊಂದನ್ನು ನಿಲ್ಲಿಸಿದರೆ ನಾಟಕ ಕಂಪನಿಗೆ ಆಗುವ ನಷ್ಟದ ಬಗ್ಗೆ ಕನಿಷ್ಟ ಅರಿವಾದರೂ ಇದೆಯಾ? ಸಂಜೆ ಪ್ರದರ್ಶನಕ್ಕಿಂತಾ ರಾತ್ರಿ ಪ್ರದರ್ಶನವೇ ಯಾವಾಗಲೂ ಹೌಸ್ ಪುಲ್ ಆಗುವುದು ಮತ್ತು ಸಂಪಾದನೆ ತಂದು ಕೊಡುವುದು

ನಾಟಕ ಪ್ರದರ್ಶನವನ್ನೇ ನಂಬಿ ಪ್ರತಿ ನಾಟಕ ಕಂಪನಿಯಲ್ಲಿ ಮೂವತ್ತಕ್ಕೂ ಹೆಚ್ಚು ಜನ ಕಲಾವಿದರು ಬದುಕುತ್ತಿರುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಟಕ ಲೈಸನ್ಸ್ ಪಡೆದಿರುತ್ತಾರೆ. ಹೀಗೆ ಇದ್ದಕ್ಕಿದ್ದಂತೆ ನಾಟಕ ಪ್ರದರ್ಶನವನ್ನು ರದ್ದು ಮಾಡಿದರೆ ಕಲಾವಿದರ ಗತಿಯೇನು.? ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ನಾಟಕ ಕಂಪನಿ ಮಾಲೀಕರ ಸ್ಥಿತಿ ಏನು?
ಇವತ್ತು ಎರಡು ಕಂಪನಿಗಳ ನಾಟಕ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಮುಂದೆ ಚುನಾವಣೆ ಮುಗಿಯುವವರೆಗೂ ಯಾವುದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದನ್ನು ನಿರ್ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ರಂಗಕರ್ಮಿಗಳು ಸಂಸ್ಕೃತಿ ಇಲಾಖೆಯ ಸಚಿವರಿಗೆ ಕುರಿತು ತಿಳಿಸಿ ಅವರ ಮೂಲಕ ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ಒತ್ತಾಯಿಸಲು ಒತ್ತಡ ತರಬೇಕಿದೆ. ಅಕಾಡೆಮಿಯ ಅಧ್ಯಕ್ಷರು ಹಿರಿಯ ರಂಗಕರ್ಮಿಗಳ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯ ಚುನಾವಣಾಧಿಕಾರಿಯವರಿಗೆ ಮನವಿ ಕೊಟ್ಟು ಮನವರಿಕೆ ಮಾಡಬೇಕಿದೆ. ಕೆಲಸ ಅತ್ಯಂತ ತುರ್ತಾಗಿ ಆಗಬೇಕಿದೆ.. ಏನೇ ಬರಲಿ ಹೋಗಲಿ ರಂಗ ಪ್ರದರ್ಶನಗಳು ನಿಲ್ಲದಿರಲಿ..

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ