ಸೋಮವಾರ, ಏಪ್ರಿಲ್ 8, 2019

ಕಾಲನಿಗೆ ಕರುಣೆಯಿಲ್ಲ; ರಂಗಕರ್ಮಿ ಮಾಲತಿ ಮೇಡಂ ಇನ್ನಿಲ್ಲ



ರಂಗಭೂಮಿಯನ್ನೇ ನಂಬಿ ಬದುಕಿದ ಸೃಜನಶೀಲ ಹಿರಿಯ ಜೀವವೊಂದು ಇಂದು ಎಪ್ರಿಲ್ 1 ರಂದು ಶಾಶ್ವತವಾಗಿ ನೇಪತ್ಯಕ್ಕೆ ಸೇರಿಹೋಯಿತು

ಎಪ್ಪತ್ತರ ದಶಕದಲ್ಲಿ ಸಮುದಾಯ ರಂಗಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು "ಕಲೆಗಾಗಿ ಕಲೆಯಲ್ಲಾ, ಜನರಿಗಾಗಿ ಕಲೆ" ಎಂದು ನಂಬಿ ನಡೆದ ಸಾಗರದ ಎಸ್.ಮಾಲತಿಯವರು (66ವರ್ಷ) ಹಲವಾರು ವಿಶೇಷ ನೆನಪಿನ ಗಂಟನ್ನು ಆತ್ಮೀಯರ ತಲೆಯೊಳಗಿರಿಸಿ  ಜಗದ ನಂಟಿನಿಂದ ಖಾಯಂ ಆಗಿ ದೂರಾಗಿದ್ದಾರೆ.

ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿಯೂ ಹುಟ್ಟಿನಿಂದ ಬಂದ ರೂಢಿಗತ ನಂಬಿಕೆ, ಆಚರಣೆ, ಮೌಢ್ಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ಬದಲಾಯಿಸಿಕೊಂಡು ನಡೆ ನುಡಿಗಳಲ್ಲಿ ಸಾಕಷ್ಟು ವೈಚಾರಿಕ ಅರಿವನ್ನು ಮೂಡಿಸಿಕೊಂಡಿದ್ದ ಮಾಲತಿಯವರು ಇನ್ನಿಲ್ಲವಾಗಿದ್ದಾರೆ.



ಕಳೆದ ಎರಡು ವಾರಗಳಿಂದ ಹಚ್ 1 ಎನ್ 1 ಬಾಧೆಗೊಳಗಾಗಿ ತೀವ್ರ ಅನಾರೋಗ್ಯಕ್ಕೆ ಗುರಿಯಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಸಾವನ್ನು ಗೆಲ್ಲಲು ಪ್ರತಿಕ್ಷಣ ಹೋರಾಡುತ್ತಿದ್ದ ಮಾಲತಿಯವರು ಸಾವನ್ನೇ ಸೋಲಿಸಿ ಬದುಕಿ ಬಂದಾರು ಎಂದು ನಂಬಿಕೊಂಡಿದ್ದ ರಂಗಕರ್ಮಿಗಳ ನಿರೀಕ್ಷೆಯನ್ನು ಹುಸಿ ಮಾಡಿ ಅಪಾರ ನಿರಾಸೆಯನ್ನುಂಟು ಮಾಡಿ ಹೊರಟೇ ಹೋದರು...ಹುಟ್ಟಾ ಛಲಗಾತಿಯನ್ನು ನಿಷ್ಕರುಣಿಯಾದ ಹಠವಾದಿ ಕಾಲ ಕೊನೆಗೂ ಆಪೋಷಣೆ ತೆಗೆದುಕೊಂಡಿತು..

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗಕಲೆಯಲ್ಲಿ ಪದವಿ ಪಡೆದು ಬಂದು ಕರ್ನಾಟಕದ ಕೆಲವಾರು ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿ ಸದಾ ಒಂದಿಲ್ಲೊಂದು ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಿದ್ದ ಮಾಲತಿ ಮೇಡಂ ಕೊನೆಗಾಲದಲ್ಲಿ ಕಾಲನ ನಿರ್ದೇಶನಕ್ಕೆ ತಲೆಬಾಗಿದರು. .

ಖಾಸಗಿ ಜೀವನದ  ಏರುಪೇರಿನ  ಅಂಕುಡೊಂಕು ದಾರಿಯಲ್ಲೂ ಬಣ್ಣದ ಬದುಕಿನ ಬಂಡಿಯನ್ನು ಅದು ಹೇಗೋ ಸಂಬಾಳಿಸಿಕೊಂಡು ಮುನ್ನಡೆಸಿಕೊಳ್ಳುತ್ತಲೇ, ವ್ಯಯಕ್ತಿಕ ಬದುಕಿನ ಸರಣಿ ಆಘಾತಗಳಿಂದ ಹೊರಬರಲು ರಂಗಕ್ರಿಯಾಶೀಲತೆಯನ್ನೇ ಮೆಟ್ಟಲು ಮಾಡಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಂಡು ಬಂದ  ಮಾಲತಮ್ಮ ರಂಗೈಕ್ಯರಾದರು.

ಅತೀ ಶೀಘ್ರ ಕೋಪವನ್ನೂ ಮೀರಿಸುವ ಅಕ್ಕರೆಯ ಮಾತುಗಳು, ಮುನಿಸಿಕೊಂಡ ಮುಖದಲ್ಲಿ ಮರುಕ್ಷಣ ಅರಳುವ ಮಂದಹಾಸವು ಮಾಲತಿಯವರನ್ನು ಹತ್ತಿರದಿಂದ ಬಲ್ಲವರಿಗೆ ವಿಸ್ಮಯ ಹುಟ್ಟಿಸುವ ಸಂಗತಿಗಳು. ತಂದೆಗಿರಬೇಕಾದ ಬಿಗಿತನ, ತಾಯಿಗಿರಬೇಕಾದ ಕ್ಷಮಾಗುಣ ಹಾಗೂ ಗುರುವಿಗಿರಬೇಕಾದ ಸಹನೆಗಳು ಒಟ್ಟಿಗೇ  ಮೇಳೈಸಿದ್ದ ಮಾಲತಿಯವರು ರಂಗತಂಡಗಳ ಕಲಾವಿದರನ್ನು ಪಳಗಿಸಿ ನಾಟಕ ಕಟ್ಟುವ ಕ್ರಿಯೆಯೇ ಅನುಕರಣೀಯ.  

ನಟಿಯಾಗಿ, ನಿರ್ದೇಶಕಿಯಾಗಿ, ರಂಗಸಂಘಟಕಿಯಾಗಿ, ಅನುವಾದಕಿಯಾಗಿ, ನಾಟಕಕಾರ್ತಿಯಾಗಿ, ಲೇಖಕಿಯಾಗಿ, ವಿಮರ್ಶಕಿಯಾಗಿ ಕಳೆದ ನಾಲ್ಕು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರೀಯವಾಗಿದ್ದ ಮಾಲತಕ್ಕನ ರಂಗಪಯಣವೇ ಅಧ್ಯಯನಾರ್ಹ. ಕೌಟುಂಬಿಕ, ಸಾಮಾಜಿಕ, ಆರ್ಥಿಕ ಅಡೆತಡೆ ಸಂಕಷ್ಟಗಳ ನಡುವೆಯೂ ಕೊನೆಯವರೆಗೂ ರಂಗಕಾಯಕದಲ್ಲಿ ನಿರತರಾಗಿದ್ದ ಮಾಲತಿಯವರು ಇನ್ನೂ ಹತ್ತಾರು ವರ್ಷಗಳ ಕಾಲ ಇರಬೇಕಿತ್ತು, ಇನ್ನೂ ಹಲವಾರು ನಾಟಕಗಳನ್ನು ಬರೆದು, ನಿರ್ದೇಶಿಸಬೇಕಿತ್ತು... ಆದರೆ ಕಾಲನಿಗೆ ಕರುಣೆ ಎಲ್ಲಿ?



ಇದನ್ನು ಹೇಳಬೇಕೋ ಬೇಡವೋ ಗೊತ್ತಿಲ್ಲ. ತಾಂತ್ರಿಕವಾಗಿ ಹೇಳುವಂತಿಲ್ಲ.. ಆದರೆ ಸಂದರ್ಭದಲ್ಲಿ ಹೇಳದೇ ಇರುವಂತಿಲ್ಲ. ಆಧುನಿಕ ಕನ್ನಡ ರಂಗಭೂಮಿಯ ಅತ್ಯುನ್ನತ ಪುರಸ್ಕಾರವಾದ ಬಿ.ವಿ.ಕಾರಂತ್ ಪ್ರಶಸ್ತಿಗೆ ಎರಡು ತಿಂಗಳ ಹಿಂದೆಯೇ ಮಾಲತಿಯವರು ಆಯ್ಕೆಯಾಗಿದ್ದರು. ಆದರೆ ಸರಕಾರ ಅಧೀಕೃತವಾಗಿ ಘೋಷಣೆ ಮಾಡುವವರೆಗೂ ಆಯ್ಕೆ ಕಮಿಟಿಯವರಾದಿಯಾಗಿ ಯಾರೂ ಹೇಳುವಂತಿರಲಿಲ್ಲ. ಬಿ.ವಿ.ಕಾರಂತ ಪ್ರಶಸ್ತಿಯನ್ನು ನಗುಮುಖದ ಸಂಭ್ರಮದಿಂದ ಬಂದು ಮಾಲತಿಯವರು ತೆಗೆದುಕೊಳ್ಳುವುದನ್ನು ನೋಡಲು ನಾವೆಲ್ಲಾ  ಕಾತುರರಾಗಿದ್ದೆವು. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಬೇಕಿತ್ತು. ತಮ್ಮ ರಂಗಸಾಧನೆಗೆ ಸಿಕ್ಕ ಪ್ರತಿಫಲವನ್ನು ಪಡೆದು ಅತೀ ಸಂತೋಷದಿಂದ ಮಾಲತಿಯವರು ನಿರ್ಗಮಿಸಬಹುದಾಗಿತ್ತು. ಆದರೆ... ಅಂದುಕೊಳ್ಳುವುದು ಒಂದಾದರೆ ಆಗುವುದೇ ಇನ್ನೊಂದು. ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳು ಹಾಗೂ ಚುನಾವಣಾ ನೀತಿಸಂಹಿತೆಯಿಂದಾಗಿ ಪ್ರಶಸ್ತಿ ಘೋಷಣೆ ಮುಂದೂಡಲ್ಪಟ್ಟಿತು ಕಾಲನಿಗೆ ಅದೇನು ಅಷ್ಟು ಅವಸರವಿತ್ತೋ ಗೊತ್ತಿಲ್ಲಾ... ಜೀವಮಾನದ ಸಾಧನೆಗಾಗಿ ದೊರಕಿದ ರಂಗಪುರಸ್ಕಾರವನ್ನು  ಮಾಲತಮ್ಮ ಸ್ವೀಕರಿಸುವ ಮುನ್ನವೇ ಅವರ ಚೇತನ ದೇಹದಿಂದ ದೂರಾಯಿತು

ಮಾಲತಿಯವರ ಏರುಪೇರಿನ ಬದುಕಿಗೆ ಕೊನೆಗಾಲದಲ್ಲಿ ಜೊತೆಯಾಗಿ ಅವರ ಬಾಳ ಪಯಣದಲ್ಲಿ ಸಂಗಾತಿಯಾದ ರಂಗನೇಪತ್ಯ ತಜ್ಞ ಪುರುಷೋತ್ತಮ ತಲವಾಟರವರ ತಾಳ್ಮೆ ಬಲು ದೊಡ್ಡದು. ಮಾಲತಿಯವರ ವಿಕ್ಷಿಪ್ತತೆಗಳನ್ನೆಲ್ಲಾ ಸಹನೆಯಿಂದಲೇ ಸರಿದೂಗಿಸಿಕೊಂಡು ಮಾಲತಮ್ಮನ ಉಳಿಗಾಲದ ಬದುಕನ್ನು ಸಹ್ಯವಾಗಿಸಿದ ತಲವಾಟರವರಿಗೆ ಸಂಗಾತಿಯ ಅಕಾಲಿಕ ಅಗಲಿಕೆಯ ನೋವನ್ನು ನುಂಗಿಕೊಳ್ಳುವ ಶಕ್ತಿ ದೊರೆಯಲಿ

ಹೋರಾಟದ ಬದುಕಿನ ಚಿತ್ರವಿಚಿತ್ರ ಹಾದಿಯಲಿ ತಮ್ಮದೇ ಆದ ಇತಿಮಿತಿಗಳನ್ನು ಮೀರಿ ರಂಗಸಾಧನೆ ಮಾಡಿ ಪುರುಷಪ್ರಧಾನ  ರಂಗಭೂಮಿಯಲ್ಲಿ  ಮಹಿಳಾ ರಂಗಕರ್ಮಿಯಾಗಿ ತಮ್ಮ ಅಸ್ಮಿತೆಯನ್ನು ಕೊನೆಯವರೆಗೂ ರಾಜಿರಹಿತವಾಗಿ ಉಳಿಸಿಕೊಂಡುಬಂದ ಎಸ್.ಮಾಲತಿಯವರಿಗೆ ಅತ್ಯಂತ ಅಭಿಮಾನದ ಅಂತಿಮ ರಂಗನಮನಗಳು.. 

ಜೀವಮಾನ ರಂಗಸಾಧನೆಯ ಪ್ರತಿಫಲವದು
ಇನ್ನೇನು ಸಿಗಬೇಕಿತ್ತು ಕಾಲನಿಗೆ ಕರುಣೆಯಿಲ್ಲ..!
ಗುರಿಮುಟ್ಟುವ ಮುನ್ನ ಬೇಕಿರಲಿಲ್ಲ ಮರಣ
ಸ್ವಲ್ಪ ಕಾಲ ಕಾಯಲೂ ಸಾವಿಗೆ ಸಮಯವಿಲ್ಲ!!

- ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ