ಸೋಮವಾರ, ಏಪ್ರಿಲ್ 8, 2019

ಅನುದಾನ ಭಿಕ್ಷೆಯಲ್ಲ ಕಲಾವಿದರ ಹಕ್ಕು


ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕಲಾ ಸಂಘಗಳಿಗೆ ಕೊಡುತ್ತಿರುವ ವಾರ್ಷಿಕ ಆರ್ಥಿಕ ನೆರವನ್ನು ಅನುದಾನ ಎನ್ನುವುದಕ್ಕಿಂತಲೂ ಸಹಾಯಧನವೆನ್ನುವುದೆ ಸೂಕ್ತ. ಇಲ್ಲವಾದರೆ ಸರಕಾರ ದಾನಕೊಡುತ್ತದೆ ಕಲಾವಿದರು ಪಡೆದುಕೊಳ್ಳುತ್ತಾರೆ ಎಂಬ ಅರ್ಥ ಬರುತ್ತದೆ. ಯಾವುದೇ ಶ್ರಮಕ್ಕೆ ಪ್ರತಿಫಲವಾಗಿ ಕೊಡುವುದು ದಾನವಲ್ಲ. ಇಲ್ಲಿ ಯಾವುದೇ ಕಲಾವಿದ ತನ್ನ ಸ್ವಂತ ಬಳಕೆಗಾಗಿ ದಾನವನ್ನು ಭಿಕ್ಷೆಯಂತೆ ಸ್ವೀಕರಿಸುವುದೂ ಇಲ್ಲ. ಬಹುತೇಕ ಕಲಾವಿದರು (ರಂಗ ದಲ್ಲಾಳಿಗಳನ್ನು ಹೊರತುಪಡಿಸಿ) ಹಾಗೂ ಸಂಘಟಕರು ತಮ್ಮ ಂಸ್ಥೆಯ ವತಿಯಿಂದ ಒಂದು ವರ್ಷಗಳ ಕಾಲ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಮ್ಮ ಇತಿ ಮಿತಿಯಲ್ಲಿ ಹಮ್ಮಿಕೊಂಡಿರುತ್ತಾರೆ. ಹಾಗೂ ಕಲೆ ಸಂಗೀತ ನೃತ್ಯ ನಾಟಕಗಳ ಮೂಲಕ ಸಮಾಜದಲ್ಲಿ ಸಾಂಸ್ಕೃತಿಕ ಸೇವೆಯನ್ನು ಮಾಡುತ್ತಿರುತ್ತಾರೆ. ತಾವು ಮಾಡಿದ ಸಮಾಜಮುಖಿ ಕೆಲಸಕ್ಕೆ ಖರ್ಚಾಗುವ ಹಣವನ್ನು ಸರಕಾರದ ಇಲಾಖೆಯಿಂದ ಪಡೆಯುತ್ತಾರೆ. ಇದರಲ್ಲಿ ದಾನ ಎನ್ನುವ ಮಾತೆಲ್ಲಿದೆ.

ಜನರಿಗಾಗಿ ಮಾಡಿದ ಕೆಲಸಕ್ಕೆ ಪ್ರತಿಯಾಗಿ ಜನರ ತೆರಿಗೆ ಹಣದ ಅಲ್ಪ ಭಾಗವನ್ನು ಸರಕಾರಿ ಇಲಾಖೆಯ ಮೂಲಕ ಕಲಾ ಸಂಘಟನೆಗಳು ಸಹಾಯಧನದ ರೂಪದಲ್ಲಿ ಪಡೆಯುತ್ತವೆ. ಎಷ್ಟೋ ಸಲ ಇಲಾಖೆ ಕೊಡುವ ಸಹಾಯಧನಕ್ಕಿಂತಲೂ ಹೆಚ್ಚು ಹಣವನ್ನು ಸಂಘ ಸಂಸ್ಥೆಗಳು ಖರ್ಚು ಮಾಡಿ ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಹಾಗಾಗಿ ಸರಕಾರ ಕೊಡುತ್ತಿರುವ ಸಹಾಯಧನವು ಅನುದಾನವೂ ಅಲ್ಲಾ, ಮಹಾದಾನವೂ ಅಲ್ಲ

ಸಮಾಜಮುಖಿ ಕೆಲಸ ಮಾಡಿದ್ದಕ್ಕೆ, ಕಲೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಿದ್ದಕ್ಕೆ ಆಗಿರುವ ಖರ್ಚಿನ ಮರುಸಂದಾಯವಷ್ಟೇ.
ಸರಕಾರಕ್ಕೆ, ಸರಕಾರವನ್ನು ಪ್ರತಿನಿಧಿಸುವ ಮಂತ್ರಿ ಮಹೋದಯರಿಗೆ,ರೂಪದಲ್ಲಿ ಇಲಾಖೆಗೆ ಹಾಗೂ ಅಲ್ಲಿರುವ ಅಧಿಕಾರಿಗಳಿಗೆ ಕಲಾವಿದರೆಲ್ಲಾ ಸೇರಿ ಹೇಳಬೇಕಿದೆ‌ 'ಸರಕಾರ ಕೊಡುವ ಸಹಾಯಧನ ಭಿಕ್ಷೆಯಲ್ಲಾ ಅದು ನಮ್ಮ ಹಕ್ಕು' ಎಂದು. :ಪ್ರಭುತ್ವ ಕೊಡುತ್ತಿರುವುದು ದಾನವಲ್ಲಾ ಅದು ಕಲಾಸೇವೆಗೆ ದಕ್ಕಬೇಕಾದ ಪಾಲು' ಎಂದು

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ