ಬುಧವಾರ, ಏಪ್ರಿಲ್ 30, 2014

ಬಹುಮುಖಿ ರಂಗ ಪ್ರತಿಭೆ ‘ಮಾಲತೇಶ ಬಡಿಗೇರ’ : ಒಂದು ವ್ಯಕ್ತಿ ಚಿತ್ರಣ




ಮಾಲತೇಶ ಬಡಿಗೇರ್

ಇಂದು ಮೇ ಒಂದು, ಕಾರ್ಮಿಕರ ದಿನ, ರಂಗಭೂಮಿಯಲ್ಲೂ ಸಹ ಅಸಂಘಟಿತ ಕಾರ್ಮಿಕರಿದ್ದಾರೆ. ಅವರು ನೇಪತ್ಯದಲ್ಲಿ ದುಡಿಯುತ್ತಾರೆ. ನಾಟಕಗಳ ಯಶಸ್ಸಿಗಾಗಿ ತುಡಿಯುತ್ತಾರೆ.  ಯಾವುದೇ ರೀತಿಯ ಬದುಕಿನ ಭದ್ರತೆ ಇಲ್ಲದೇ, ಪಿಎಫ್, ಪೆನ್ಶನ್, ಗ್ರಾಚುವೆಟಿ ಹಾಗೂ ಯಾವೊಂದು ಸರಕಾರದ ಸವಲತ್ತುಗಳಿಲ್ಲದೇ ದುಡಿಯುತ್ತಾರೆ. ರಂಗಭೂಮಿಯಲ್ಲಿ ಕೆಲಸ ಮಾಡುವವರನ್ನು ನಾವು ಕಾರ್ಮಿಕರು ಎನ್ನದೇ ತಂತ್ರಜ್ಞರು ಎಂದು ಗುರುತಿಸುತ್ತೇವೆ. ರಂಗಕರ್ಮಿಗಳು ಎಂದು ಗೌರವಿಸುತ್ತೇವೆ. ಅಂತಹ ಗೌರವಾನ್ವಿತ ವೃತ್ತಿಪರತೆಯುಳ್ಳ ರಂಗಭೂಮಿಯನ್ನೇ ನಂಬಿ ಯಶಸ್ವಿಯಾದ ರಂಗಕರ್ಮಿಯೊಬ್ಬನನ್ನು ಕಾರ್ಮಿಕರ ದಿನದ ನೆನಪಿನಲ್ಲಿ ಇಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. 

ರಂಗಭೂಮಿಯಲ್ಲಿ ನಟರಿದ್ದಾರೆ, ನಿರ್ದೇಶಕರಿದ್ದಾರೆ, ರಂಗಸಂಘಟಕರಿದ್ದಾರೆ, ರಂಗಸಜ್ಜಿಕೆ ವಿನ್ಯಾಸಗಾರರಿದ್ದಾರೆ, ಪ್ರಸಾಧನ ಪಟುಗಳಿದ್ದಾರೆ, ವಸ್ತ್ರವಿನ್ಯಾಸಗಾರರಿದ್ದಾರೆ, ರಂಗಪರಿಕರ ನಿರ್ಮಾಣಗಾರರಿದ್ದಾರೆ, ಚಿತ್ರಕಲಾವಿದರಿದ್ದಾರೆ, ಮುಖವಾಡ ತಯಾರಿಸುವವರೂ ಇದ್ದಾರೆ, ಇವರೆಲ್ಲರೂ ಇದ್ದರೆ ಒಂದು ಸಂಪೂರ್ಣ ನಾಟಕ ನಿರ್ಮಾಣವಾಗುತ್ತದೆ. ಆದರೆ ಎಲ್ಲಾ ಕೆಲಸಗಳಲ್ಲೂ ಎಕ್ಸಪರ್ಟ ಆಗಿರುವ ವ್ಯಕ್ತಿ ಕನ್ನಡ ರಂಗಭೂಮಿಯಲ್ಲಿ ಯಾರಾದರೂ ಇದ್ದರೆ ಅದು ಮಾಲತೇಶ ಬಡಿಗೇರ್. ಬಹುಷಃ ನಾಟಕ ರಚನೆ ಹಾಗೂ ಸಂಗೀತ ಸಂಯೋಜನೆಯನ್ನು ಹೊರತು ಪಡಿಸಿ ರಂಗನಿರ್ಮಾಣದ ಎಲ್ಲಾ ಆಯಾಮಗಳನ್ನು ಸಮರ್ಥವಾಗಿ ಕಟ್ಟಿಕೊಡುವ ಕೌಶಲ ಮಾಲತೇಶಗೆ ದಕ್ಕಿದೆ. ಮಾಲತೇಶರವರ ಅಸ್ತಿತ್ವ ಇರುವುದು ಅವರ ಬಹುಮುಖಿ ಪ್ರತಿಭೆಯಲ್ಲಿ.


ಮಾಲತೇಶ ಬಡಿಗೇರ ಅಪ್ಪಟ ಗ್ರಾಮೀಣ ದೇಸಿ ಪ್ರತಿಭೆ. ಗದಗ ಜಿಲ್ಲೆಯ ಕೊಂಚಿಗೇರಿ ಎನ್ನುವ ಪುಟ್ಟ ಹಳ್ಳಿಯಲ್ಲಿ 1971ರಲ್ಲಿ ಹುಟ್ಟಿದ ಮಾಲತೇಶ ಎಸ್ಎಸ್ಎಲ್ಸಿ ನಂತರ ಐದು ವರ್ಷಗಳ ಕಾಲ ಕಲಿತಿದ್ದು ಚಿತ್ರಕಲೆಯಲ್ಲಿ ಡಿಪ್ಲೋಮಾ, ಆಸಕ್ತಿ ಹೊಂದಿದ್ದು ನಾಟಕ ಕಲೆ. ರಂಗಾಸಕ್ತಿ ಸಾಗರದ ಹೆಗ್ಗೋಡಿನವರೆಗೂ ಅವರನ್ನು ಕರೆದುಕೊಂಡು ಹೋಯಿತು. 1995ರಲ್ಲಿ ನೀನಾಸಂ ನಲ್ಲಿ ರಂಗಭೂಮಿ ಕುರಿತು ಒಂದು ವರ್ಷದ ಡಿಪ್ಲೋಮಾ ಮುಗಿಸಿ, ಮತ್ತೊಂದು ವರ್ಷ ರಂಗ ತಿರುಗಾಟದಲ್ಲಿ ಭಾಗವಹಿಸಿ ನಾಟಕದ ಹಲವು ಆಯಾಮಗಳಲ್ಲಿ ತರಬೇತಿ ಪಡೆದರು. ನಂತರ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದು ಪೋಸ್ಟರ್ ಬರೆಯುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ತದನಂತರ ರಂಗಭೂಮಿಯನ್ನೇ ಬದುಕಾಗಿಸಿಕೊಂಡು, ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ರಂಗಭೂಮಿಯಲ್ಲಿ ಕಳೆದ ಎರಡು ದಶಕಗಳಿಂದ ರಂಗಪ್ರಕಾರದ ಎಲ್ಲಾ ವಿಭಾಗಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಒಂದು ರೀತಿಯಲ್ಲಿ ರಂಗಭೂಮಿಯ ಆಸ್ತಿಯೇ ಆಗಿಹೋದರು. ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಕನ್ನಡ ರಂಗಭೂಮಿಯನ್ನೂ ಬೆಳೆಸಿದರು ಹಾಗೂ ತಾವೂ ಬೆಳೆದರು.ಮಾಲತೇಶ ಬಡಿಗೇರರ ಬಹುಮುಖಿ ಸೃಜನಶೀಲ ರಂಗಕೌಶಲಗಳ ಒಂದು ಸಂಕ್ಷಿಪ್ತ ಮಾಹಿತಿ ಹೀಗಿದೆ.

ನಟನೆ : ನೀನಾಸಂ ತಿರುಗಾಟದ ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಕರ್ನಾಟಕದಾದ್ಯಂತ ಒಂದು ವರ್ಷಗಳ ಕಾಲ ನೂರಾರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.

ಮಾಲತೇಶ ನಿರ್ದೇಶನದ ನಾಟಕ 'ಬೂಟು ಬಂದೂಕುಗಳ ನಡುವೆ'

ನಾಟಕ ನಿರ್ದೇಶನ : ಕನ್ನಡ ರಂಗಭೂಮಿಯಲ್ಲಿ ರಂಗನಿರ್ದೇಶಕರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕನಿಷ್ಟ ವರ್ಷಕ್ಕೆರಡು ನಾಟಕಗಳನ್ನು ತಪ್ಪದೇ ನಿರ್ದೇಶಿಸುತ್ತಿರುವ ಮಾಲತೇಶ ಇಲ್ಲಿವರೆಗೂ ಐವತ್ತಕ್ಕೂ ಹೆಚ್ಚು ಮಕ್ಕಳ ಹಾಗೂ ದೊಡ್ಡವರ ನಾಟಕಗಳನ್ನು ನಿರ್ದೇಶಿಸಿದ್ದಾರೆ. 1999 ರಲ್ಲಿ ಬೀದರ್ ರಂಗಶಿಬಿರದಲ್ಲಿ ಗುಡುಸಲಿನ ಗುಡುದಾಶಿ ಹಾಗೂ ಮೈಸೂರು ಬ್ಯಾಂಕ್ ಕನ್ನಡ ಬಳಗಕ್ಕೆ ಭೀಷ್ಮ ಸಹಾನಿಯವರ ಮಾಧವಿ ನಾಟಕವನ್ನು ನಿರ್ದೇಶಿಸುವ ಮೂಲಕ ರಂಗನಿರ್ದೇಶನವನ್ನು ವೃತ್ತಿಯಾಗಿ ಆರಂಭಿಸಿದರು. ತದನಂತರ ರಾವಿನದಿಯ ದಂಡೆಯಲ್ಲಿ, ರಾಕ್ಷಸ, ತಿರುಕರಾಜ, ಸತಹೊಮ ಅರಗಿನ ಬೆಟ್ಟ, ರೋಮಿಯೋ ಜೂಲಿಯೆಟ್, ಅಂಧಯುಗ, ತುಕ್ರನ ಕನಸು, ಹುಲಿಯ ನೆರಳು, ಬೂಟು ಬಂದೂಕುಗಳ ನಡುವೆ, ಕರಿಭಂಟ, ನಮ್ಮೂರ ಗಾಂಧಿ, ಮಂಟೇಸ್ವಾಮಿ ಕಥಾ ಪ್ರಸಂಗ, ವೆಂಕಟಿಗನ ಹೆಂಡತಿ, ಸ್ಮಶಾನ ಕುರುಕ್ಷೇತ್ರ, ಮಹಾಮಾರಿ, ಗುಳಿಗೆ ಗುಮ್ಮ.... ಹೀಗೆ ಒಂದಾದ ಮೇಲೊಂದರಂತೆ ನಾಟಕಗಳು ನಿರ್ದೇಶಿಸಲ್ಪಟ್ಟವು.
 
ತಮ್ಮ ಅದಮ್ಯ ತಂಡಕ್ಕೆ ಮಾಲತೇಶ ನಿರ್ದೇಶಿಸಿದ ನಾಟಕ 'ಗಿರಿಜಾ ಕಲ್ಯಾಣ'

ರಂಗಸಂಘಟನೆ : ಬಹುರೂಪಿ ಮತ್ತು ಅದಮ್ಯ ರಂಗ ಸಂಸ್ಕೃತಿ ಎನ್ನುವ ಎರಡು ರಂಗತಂಡಗಳನ್ನು ಹುಟ್ಟಿ ಹಾಕಿ ತಮ್ಮದೇ ರಂಗತಂಡಕ್ಕೆ ಕೆಲವಾರು  ನಾಟಕಗಳನ್ನು ಬಡಿಗೇರ ನಿರ್ದೇಶಿಸಿದ್ದಾರೆ. ತಮ್ಮ ರಂಗತಂಡದ ನಾಟಕೋತ್ಸವಗಳನ್ನೂ ಆಯೋಜಿಸಿದ್ದಾರೆ. ಇತ್ತೀಚೆಗೆ ಕೆ.ಹೆಚ್.ಕಲಾಸೌಧದಲ್ಲಿ ಅದಮ್ಯ ರಂಗ ಸಂಸ್ಕೃತಿ ರಂಗೋತ್ಸವದಲ್ಲಿ sಸುರ್ಗಿ ಗುಡ್ಡದ ಮರೆಯಲ್ಲಿ, ಶೂದ್ರ ತಪಸ್ವಿ, ಗಿರಿಜಾ ಕಲ್ಯಾಣ ಎನ್ನುವ ಮೂರು ನಾಟಕಗಳ ನಾಟಕೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕರ್ನಾಟಕ ಸಚಿವಾಲಯ ಕ್ಲಬ್ನಲ್ಲಿ ಮೇ 7 ರಿಂದ 15ರವರೆಗೆ ಏಳುದಿನಗಳ ಮಾಲತೇಶ ಬಡಿಗೇರ ನಿರ್ದೇಶನದ ನಾಟಕೋತ್ಸವ ಆಯೋಜನೆಗೊಂಡಿದ್ದು ಸ್ಮಶಾನ ಕುರುಕ್ಷೇತ್ರ, ಸೂರ್ಯಶಿಕಾರಿ, ಸುರ್ಗಿ ಗುಡ್ಡದ ಮರೆಯಲ್ಲಿ, ಗಿರಿಜಾ ಕಲ್ಯಾಣ, ಮದುವೆ ಹೆಣ್ಣು, ರಾಕ್ಷಸ ಎನ್ನುವ ಮಾಲತೇಶ ನಾಟಕಗಳು ಪ್ರದರ್ಶನಗೊಂಡಿವೆ. 



ನೇಪತ್ಯ : ಮೂಲತಃ ಚಿತ್ರಕಲಾವಿದರಾದ ಮಾಲತೇಶ ತಮ್ಮ ಚಿತ್ರಕಲಾ ಪ್ರತಿಭೆಯನ್ನು ರಂಗಭೂಮಿಗೆ ವಿಸ್ತರಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಬ್ರಹದಾಕಾರದ ಮುಖವಾಡಗಳನ್ನು ಮಾಡಬಲ್ಲರು, ಮುಖವಾಡಗಳ ತಯಾರಿಕೆಯಲ್ಲಿ ಸಿದ್ದಹಸ್ತರಾದವರು. ಕಸದಿಂದ ರಸ ಎನ್ನುವಂತೆ ಅನುಪಯುಕ್ತ ವಸ್ತುಗಳಿಂದ ಕಲಾಕೃತಿಯನ್ನು ಮಾಡುವ ಕಲಾವಂತಿಕೆ ಮೈಗೂಡಿಸಿಕೊಂಡಿದ್ದಾರೆ. ಯಾವುದೇ ನಾಟಕದ ಎಂತಹುದೇ ಪಾತ್ರವಿರಲಿ ಪಾತ್ರೋಚಿತವಾಗಿ ಮೇಕಪ್ ಮಾಡುತ್ತಾ ವ್ಯಕ್ತಿಗಳನ್ನು ಪಾತ್ರವಾಗಿಸುತ್ತಾರೆ. ನಾಟಕಗಳ ಬ್ಯಾಕ್ಡ್ರಾಪ್ ಪೈಂಟಿಂಗ್ನಲ್ಲಿ ಕೂಡಾ ಮಾಲತೇಶ ಪಳಗಿದ್ದಾರೆ. ನಾಟಕಕ್ಕೆ ಬೇಕಾದಂತಹ ರಂಗಪರಿಕರಗಳ ನಿರ್ಮಾಣವನ್ನು ಅದ್ಬುತವಾಗಿ ಮಾಡಿಕೊಡುವ ಮಾಲತೇಶರವರ ರಂಗಸಜ್ಜಿಕೆ ವಿನ್ಯಾಸ ನಾಟಕಗಳನ್ನು ಶ್ರೀಮಂತಗೊಳಿಸಿ ಸೌಂದರ್ಯಪ್ರಜ್ಞೆಯನ್ನು ಹೆಚ್ಚಿಸಬಹುದಂತಹುದಾಗಿದೆ. ಏನೇ ಮಾಡಿದರೂ ದೊಡ್ಡದಾಗಿ ಮಾಡುವುದು ಮಾಲತೇಶರವರ ವಿಶೇಷತೆ. ಹೀಗಾಗಿ ಅವರ ನಿರ್ದೇಶನದ ಎಲ್ಲಾ ನಾಟಕಗಳಲ್ಲೂ ರಂಗವಿನ್ಯಾಸ ಹಾಗೂ ರಂಗಪರಿಕರಗಳು ದೊಡ್ಡದಾಗೇ ಮೂಡಿಬಂದು ರಂಗದಂಗಳದಲ್ಲಿ ದೃಶ್ಯವೈಭವವನ್ನು ಸೃಷ್ಟಿಸುತ್ತವೆ. ತಮ್ಮ ಬಹುತೇಕ ನಾಟಕಕ್ಕೆ ತಾವೇ ವಸ್ತ್ರವಿನ್ಯಾಸವನ್ನೂ ಮಾಡುವ ಮೂಲಕ ಆಹಾರ್ಯಾಭಿನಯದಲ್ಲೂ ತಮ್ಮ ಕೈಚಳಕವನ್ನು ಬಡಿಗೇರರು ತೋರಿಸಿ ನಾಟಕದಲ್ಲಿ ಅದ್ದೂರಿತನವನ್ನು ಮೆರೆಯುತ್ತಾರೆ. ಹೀಗೆ... ನೇಪತ್ಯದ ಎಲ್ಲಾ ಕ್ರಿಯಾಶೀಲವಾದ ಕೆಲಸಗಳನ್ನು ನಿಭಾಯಿಸುವ ಕಲೆಯನ್ನು ಅಪಾರವಾದ ಪರಿಶ್ರಮದಿಂದ ಮಾಲತೇಶ ರೂಢಿಸಿಕೊಂಡಿದ್ದಾರೆ.


ಮಕ್ಕಳ ರಂಗಭೂಮಿ : 1998 ರಿಂದ ಸತತವಾಗಿ ಪ್ರತಿ ವರ್ಷವೂ ಮಕ್ಕಳ ರಂಗ ತರಬೇತಿ ಶಿಬಿರಗಳ ನಿರ್ದೇಶಕರಾಗಿ ಕಾರ್ಯಾಗಾರಗಳನ್ನು ನಡೆಸಿಕೊಡುತ್ತಾ ಶಿಬಿರದ ಭಾಗವಾಗಿ ನಾಟಕವನ್ನೂ ಸಹ ಮಕ್ಕಳಿಗೆ ನಿರ್ದೇಶಿಸಿದ್ದಾರೆ. 1998 ರಲ್ಲಿ ಬೆಂಗಳೂರು ಸಮುದಾಯದ ಮಕ್ಕಳ ಕಾರ್ಯಾಗಾರದಲ್ಲಿ ಕುವೆಂಪುರವರ ಮೊಂಡಣ್ಣನ ತಮ್ಮ, 1999 ರಲ್ಲಿ ಮೈಸೂರು ಬ್ಯಾಂಕ್ ಕನ್ನಡ ಬಳಗದ ಮಕ್ಕಳ ಶಿಬಿರದಲ್ಲಿ     ಅಂಧೇರಿ ನಗರಿ ಚೌಪಟ್ ರಾಜ, 2000 ದಲ್ಲಿ ಹರಪ್ಪನಹಳ್ಳಿ ಸಮುದಾಯಕ್ಕೆ ಒಂದು ಸಿಂಹದ ಕಥೆ, 2001 ರಲ್ಲಿ ಮೈಸೂರು ಬ್ಯಾಂಕ್ ಕನ್ನಡ ಬಳಗದ ಮಕ್ಕಳ ಶಿಬಿರದಲ್ಲಿ ಅಜ್ಜಿ ಕಥೆ, 2002ರಲ್ಲಿ ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನದ ಮಕ್ಕಳ ಶಿಬಿರದಲ್ಲಿ ಅಜ್ಜೀ ಕಥೆ, ೨೦೦೩ರಲ್ಲಿ ಮೈಸೂರು ಬ್ಯಾಂಕ್ ಕನ್ನಡ ಬಳಗಕ್ಕೆ ಗುಳಿಗೆ ಗುಮ್ಮ, 2004ರಲ್ಲಿ ಬಹುರೂಪಿ ತಂಡಕ್ಕೆ ಕಂಬಾರರ ಪುಷ್ಪರಾಣಿ, 2005 ರಲ್ಲಿ ಬೆಂಗಳೂರಿನ ಶಂಕರ ಫೌಂಡೇಶನ್ ಕಾರ್ಯಾಗಾರದಲ್ಲಿ ಹಬ್ಬ ಹಬ್ಬ ನೃತ್ಯರೂಪಕ..... ಹೀಗೆ ಹಲವಾರು ರಂಗತಂಡಗಳಿಗೆ ಮಾಲತೇಶ ಮಕ್ಕಳ ರಂಗಶಿಬಿರಗಳನ್ನು ನಡೆಸಿಕೊಟ್ಟು ಮಕ್ಕಳ ನಾಟಕಗಳನ್ನೂ ನಿರ್ದೇಶಿಸಿ ಮಕ್ಕಳ ರಂಗಭೂಮಿ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ.

ಶಾಲಾ ರಂಗಭೂಮಿ : ಕೆಲವು ಶಾಲೆಗಳಲ್ಲಿ ಹೋಗಿ ಆಯಾ ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಬ್ರಹತ್ ರೂಪಕಗಳನ್ನು ನಿರ್ದೇಶಿಸಿದ ಮಾಲತೇಶ ಅಲ್ಲೊಂದು ಪ್ಯಾಂಟಸಿ ಲೋಕವನ್ನೇ ಸೃಷ್ಟಿಸಿದ್ದರು. ಲಾಲ್ ಭಾಗ್ ಪಕ್ಕದಲ್ಲಿರುವ ಅಲ್ ಅಮೀನ್ ಶಾಲೆಗೆ ಆರು ವರ್ಷಗಳಿಂದ ಶಾಲಾ ವಾರ್ಷಿಕೋತ್ಸವದಲ್ಲಿ ಆರುನೂರರಿಂದ ಏಳುನೂರು ಮಕ್ಕಳನ್ನು ಬಳಸಿಕೊಂಡು ಒಂದೂವರೆ ಗಂಟೆಯ ಬ್ರಹತ್ ರೂಪಕವನ್ನು ಕಟ್ಟಿಕೊಟ್ಟು ತಮ್ಮೆಲ್ಲಾ ಪ್ರತಿಭೆಯನ್ನು ಧಾರೆಯೆರೆದು ಮಕ್ಕಳ ವಿಸ್ಮಯ ಪ್ರಪಂಚವನ್ನು ಅನಾವರಣಗೊಳಿಸಿದ್ದಾರೆ. ಟಿಪ್ಪು ಸುಲ್ತಾನ, ನಮ್ಮ ಬೆಂಗಳೂರು ಮುಂತಾದ ರೂಪಕಗಳು ಈಗಲೂ ಶಾಲೆಯ ಮಕ್ಕಳು ಹಾಗೂ ಪೋಷಕರ ನೆನಪಿನಲಿ ಅಚ್ಚಳಿಯದೇ ಉಳಿದಿವೆ. ದೇವನಹಳ್ಳಿಯ ಆಕಾಶ ಇಂಟರನ್ಯಾಶನಲ್ ಶಾಲೆ ವಾರ್ಷಿಕೋತ್ಸವದಲ್ಲಿ ಏಳುನೂರು ಮಕ್ಕಳನ್ನು ಬಳಸಿಕೊಂಡು ೨ಗಂಟೆಗಳ ಕರ್ನಾಟಕ ವೈಭವ ರೂಪಕ ಹಾಗೂ ಪಂಚತಂತ್ರ ಕಥೆಗಳನ್ನು ನಿರ್ದೇಶಿಸಿ ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿತರಾಗಿದ್ದಾರೆ. ಹೀಗೆ ಉರ್ದು ಹಾಗೂ ಇಂಗ್ಲೀಷ್ ಭಾಷೆಯ ಪ್ರಾಬಲ್ಯವಿರುವ ಶಾಲೆಗಳಲ್ಲಿ ಕನ್ನಡದ ನಿರ್ದೇಶಕ ಹೋಗಿ ಕನ್ನಡ ರೂಪಕವನ್ನು ಕಟ್ಟಿಕೊಡುವ ಸಾಹಸ ನಿಜಕ್ಕೂ ಶ್ಲಾಘನೀಯ

ಕಾಲೇಜು ರಂಗಭೂಮಿ : ಪ್ರತಿ ವರ್ಷ ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ರಂಗಸ್ಪರ್ಧೆಗಳಿಗಾಗಿ ನಾಟಕಗಳನ್ನು ನಿರ್ಮಿಸಲಾಗುತ್ತದೆ. 1999 ರಿಂದಲೂ ಪ್ರತಿವರ್ಷ ಒಂದಿಲ್ಲೊಂದು ಕಾಲೇಜಿನ ಯುವಕರಿಗೆ ಮಾಲತೇಶ ನಾಟಕಗಳನ್ನು ನಿರ್ದೇಶಿಸುತ್ತಾ ಬಂದಿದ್ದಾರೆ. ಸ್ಪರ್ಧೆ ಗಾಗಿ ನಾಟಕ ಸಿದ್ದಪಡಿಸುವಾಗ ಮಾಲತೇಶರಿಗೆ ಹೆಚ್ಚು ಬೇಡಿಕೆ ಬರುತ್ತದೆ ಯಾಕೆಂದರೆ ಮಾಲತೇಶ ನಾಟಕ ನಿರ್ದೇಶಿಸಿದರೆ ಬಹುಮಾನ ಗ್ಯಾರಂಟಿ ಎನ್ನುವುದು ಕಾಲೇಜುಗಳ ಆಡಳಿತ ಮಂಡಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಜಯನಗರದ ನ್ಯಾಷನಲ್ ಕಾಲೇಜು, ಎನ್ಎಂ ಕೆ ಆರ್ ವಿ ಪದವಿ ಪೂರ್ವ ಕಾಲೇಜು ಹಾಗೂ ಕೃಷಿ ವಿಶ್ವವಿದ್ಯಾಲಯ  ಹೀಗೆ... ಬೆಂಗಳೂರಿನ ಹಲವಾರು ಕಾಲೇಜುಗಳಿಗೆ ಪ್ರತಿ ವರ್ಷ ತಪ್ಪದೇ ನಾಟಕಗಳನ್ನು ನಿರ್ದೇಶಿಸಿದ್ದು ಹಾಗೆ ನಿರ್ದೇಶಿಸಿದ ನಾಟಕಗಳಿಗೆ ಬಹುಮಾನಗಳನ್ನೂ ತಪ್ಪದೇ ಪಡೆದಿದ್ದಾರೆ. ಜೊತೆಗೆ ಕಾಲೇಜಿನಲ್ಲಿ ರಂಗಕ್ರಿಯೆಗಳನ್ನು ಮಾಡುವ ಮೂಲಕ ಕಾಲೇಜಿನ ಯುವಕ ಯುವತಿಯರಿಗೆ ರಂಗಭೂಮಿಯ ವಿವಿಧ ಆಯಾಮಗಳ ಬಗ್ಗೆ ತರಬೇತಿಯನ್ನೂ ಕೊಡುತ್ತಾ ರಂಗನಿರ್ಮಿತಿಯಲ್ಲಿ ಅವರನ್ನು ಭಾಗಿದಾರರನ್ನಾಗಿಸುತ್ತಾ, ಕೆಲವರನ್ನು ರಂಗಕಲಾವಿದರನ್ನಾಗಿ ರೂಪಿಸುತ್ತಾ.... ಒಂದು ರೀತಿಯಲ್ಲಿ ಕಾಲೇಜಿನ ಆವರಣಗಳಲ್ಲಿ ರಂಗಪರಿಸರವನ್ನು ಬೆಳೆಸುವಲ್ಲಿ ಮಾಲತೇಶ ಸ್ತುತ್ಯಾರ್ಹ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಹೀಗೆ ಕಾಲೇಜು ರಂಗಭೂಮಿಯಿಂದ ಬಂದ ಹಲವು ನಟ ನಟಿಯರು ಆನಂತರವೂ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ ಉಳಿದವರು ರಂಗಾಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಪ್ರೇಕ್ಷಕರಾಗಿಯಾದರೂ ಬದಲಾಗಿದ್ದಾರೆ. ಕಾಲೇಜು ರಂಗಭೂಮಿ ಹವ್ಯಾಸಿ ರಂಗಭೂಮಿಗೆ ಸಂಪನ್ಮೂಲ ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡುತ್ತಾ ಬಂದಿದೆ. ನಿಟ್ಟಿನಲ್ಲಿ ಮಾಲತೇಶರವರ ಕೊಡುಗೆ ಗಮನಾರ್ಹವಾಗಿದೆ. ಕಾಲೇಜು ರಂಗಭೂಮಿಗೆ ಮಾಲತೇಶ ನಿರ್ದೇಶಿಸಿದ ಹಲವಾರು ನಾಟಕಗಳು ರಾಜ್ಯಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿವೆ.
  
ಕಾರ್ಮಿಕ ರಂಗಭೂಮಿ : ಹೆಚ್ ಎಂ ಟಿ ತುಮಕೂರಿನಲ್ಲಿ ಒಂದು ವರ್ಷಗಳ ಕಾಲ ನೇಪತ್ಯದ ಕೆಲಸ ಮಾಡಿ ಸಮ್ಮುಖ ತಂಡದ ಹುಟ್ಟಿಗೆ ಮಾಲತೇಶ ಕಾರಣೀಕರ್ತರಲ್ಲೊಬ್ಬರಾದರು. ಮೈಕೋ ನಾಗನಾಥಪುರ ಕಾರ್ಖಾನೆಯ ಕಾರ್ಮಿಕರ ಸಮನ್ವಯ ತಂಡಕ್ಕೆ ನಾಲ್ಕು ವರ್ಷಗಳಿಂದ ಅರಗಿನ ಬೆಟ್ಟ, ಸೂರ್ಯಶಿಕಾರಿ, ಚಿರಸ್ಮರಣೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಕಾರ್ಮಿಕರಿಗೆ ಡೋಹರನೆಂಬ ಕಕ್ಕಯ್ಯ ಹಾಗೂ ಸುರ್ಗಿ ಗುಡ್ಡದ ಮರೆಯಲ್ಲಿ ಎಂಬ ಎರಡು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹೀಗೆ ಕೆಲವಾರು ಕಾರ್ಖಾನೆಗಳಲ್ಲಿ ಕನ್ನಡ ನಾಟಕಗಳನ್ನು ನಿರ್ದೇಶಿಸುವ ಮೂಲಕ ಕಾರ್ಮಿಕ ರಂಗಭೂಮಿಗೆ ತಮ್ಮ ಕೊಡುಗೆಯನ್ನು ಕೊಟ್ಟ ಮಾಲತೇಶ ಬಡಿಗೇರ್ ಕಾರ್ಮಿಕ ಕಲಾವಿದರು ರಂಗಕ್ರಿಯೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. 

ಹವ್ಯಾಸಿ ರಂಗಭೂಮಿ : ಯಾವುದೇ ಒಂದು ತಂಡಕ್ಕೆ ಸೀಮಿತಗೊಳ್ಳದೇ ನಾಡಿನಾದ್ಯಂತ ಕರೆದಲ್ಲೆಲ್ಲಾ ಹೋಗಿ ನಾಟಕಗಳನ್ನು ಮಾಲತೇಶ ನಿರ್ದೇಶಿಸಿದ್ದಾರೆ. ಬೆಂಗಳೂರು, ಗಂಗಾವತಿ, ಗದಗ, ತಿಪಟೂರು, ತುಮಕೂರು, ಗುಲ್ಬರ್ಗ, ಹೊನ್ನಾವರ, ಸಾಣೆಹಳ್ಳಿ, ನಾಗತಿಹಳ್ಳಿ, ಹಂಪಿ, ಮಂಗಳೂರು, ಉಡುಪಿ.... ಹೀಗೆ ರಾಜ್ಯದ ಹಲವಾರು ರಂಗತಂಡಗಳಿ ಆಹ್ವಾನದ ಮೇರೆಗೆ ಹೋಗಿ ಅಲ್ಲಿಯ ಕಲಾವಿದರಿಗೆ ಸೂಕ್ತ ತರಬೇತಿಯನ್ನು ಕೊಟ್ಟು ನಾಟಕವನ್ನು ನಿರ್ದೇಶಿಸಿ, ನೇಪತ್ಯದ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟು ಆಯಾ ತಂಡಗಳ ರಂಗ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹವ್ಯಾಸಿ ರಂಗಭೂಮಿಗೆ ರೀತಿಯ ಪ್ರೀಲ್ಯಾನ್ಸರ್ ನಿರ್ದೇಶಕರ ಅಗತ್ಯತೆ ತುಂಬಾ ಇದೆ. ಎಲ್ಲರೂ ತಮ್ಮದೇ ರಂಗತಂಡ ಕಟ್ಟಿಕೊಂಡು ತಮ್ಮ ನಾಟಕವನ್ನು ತಾವೇ ಕಟ್ಟಿಕೊಳ್ಳಲು ಪ್ರಯತ್ನಿಸಿದರೆ ಮಾಲತೇಶರವರು ಎಲ್ಲೆಲ್ಲಿ ನಿರ್ದೇಶಕನ ಕೊರತೆ ಇದೆಯೋ ಅಲ್ಲೆಲ್ಲಾ ಹೋಗಿ ಆಯಾ ಪರಿಸರಕ್ಕೆ ಹೊಂದಿಕೊಳ್ಳುವಂತಹ ನಾಟಕಗಳನ್ನು ಕಟ್ಟಿಕೊಟ್ಟು ಬಂದಿದ್ದಾರೆ. ಹವ್ಯಾಸಿ ರಂಗಭೂಮಿಯನ್ನು ಕಟ್ಟುವಲ್ಲಿ ಮಾಲತೇಶ ರೀತಿಯ ವೃತ್ತಿಪರತೆಯುಳ್ಳವರ ಅನಿವಾರ್ಯತೆ ಈಗ ತುಂಬಾ ಇದೆ. ತಮ್ಮದೇ ಸ್ವಂತ ರಂಗತಂಡ ಇದ್ದರೂ ಅದರ ಉಸ್ತುವಾರಿಯನ್ನು ತಮ್ಮ ಪತ್ನಿ ಛಾಯಾ ಭಾರ್ಗವಿಯವರಿಗೆ ಬಿಟ್ಟು ಉಳಿದೆಲ್ಲಾ ತಂಡಗಳಗೆ ನಾಟಕಗಳನ್ನು ಕಟ್ಟಿಕೊಡಲು ಉತ್ಸುಕತೆ ತೋರುವ ಮಾಲತೇಶರ ರಂಗಬದ್ಧತೆ ಪ್ರಶ್ನಾತೀತ.  

ನೌಕರ ರಂಗಭೂಮಿ : ಸರಕಾರಿ ಕಛೇರಿಗಳಲ್ಲಿ ಕೆಲಸಮಾಡುವ ಹಾಗೂ ನಾಟಕದ ಬಗ್ಗೆ ತುಡಿತವಿರುವ ಕೆಲವರು ಇದ್ದಾರೆ. ಇಂತಹ ಕೆಲ ಕಲಾಸಕ್ತರು ಬೆಂಗಳೂರಿನ ಕಬ್ಬನ್ ಪಾರ್ಕನಲ್ಲಿರುವ ಸಚಿವಾಲಯ ಕ್ಲಬ್ ನಲ್ಲಿ ಪ್ರತಿ ವರ್ಷ ನಾಟಕವನ್ನು ನಿರ್ಮಿಸುತ್ತಾರೆ. ಸಚಿವಾಲಯದ ಕ್ಲಬ್ ನಿರ್ಮಿಸುವ ಬಹುತೇಕ ನಾಟಕಗಳನ್ನು 2002 ರಿಂದ ಮಾಲತೇಶ ಬಡಿಗೇರ್ ನಿರ್ದೇಶಿಸುತ್ತಿದ್ದಾರೆ. ಸಚಿವಾಲಯ ಕ್ಲಬ್ ಸರಕಾರಿ ನೌಕರರಿಗೆ 2002ರಲ್ಲಿ ರಾವಿನದಿ ದಂಡೆಯಲ್ಲಿ ನಾಟಕವನ್ನು ಹಾಗೂ 2003 ರಲ್ಲಿ ಬೂಟು ಬಂದೂಕುಗಳ ನಡುವೆ ನಾಟಕವನ್ನು ನಿರ್ದೇಶಿಸಿದ್ದರು. ಎರಡೂ ನಾಟಕಗಳೂ ಸಹ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿವೆ.  ಈಗ ಕರ್ನಾಟಕ ಸಚಿವಾಲಯ ಕ್ಲಬ್ ಮಾಲತೇಶ ಬಡಿಗೇರ ನಿರ್ದೇಶನದ ಏಳು ನಾಟಕಗಳ ನಾಟಕೋತ್ಸವವನ್ನು ಮೇ 7 ರಿಂದ ಹಮ್ಮಿಕೊಂಡು ಮಾಲತೇಶರವರಿಗೆ ಗೌರವವನ್ನು ಸೂಚಿಸುತ್ತಿದೆ.

ಇತರೆ ಪ್ರಾಜೆಕ್ಟಗಳು : ಕೆಲವೊಮ್ಮೆ ಸರಕಾರಿ ಸಂಸ್ಥೆಗಳು ಸಹ ಮಾಲತೇಶರವರನ್ನು ಕರೆದು ರೂಪಕಗಳನ್ನು ನಿರ್ದೇಶಿಸಿಲು ಕೇಳಿಕೊಳ್ಳುತ್ತಾರೆ. ಹೇಳಿದ ಕೆಲಸವನ್ನು ಹೇಳಿದ ಸಮಯಕ್ಕೆ ಅಚ್ಚುಕಟ್ಟಾಗಿ ನೆರವೇರಿಸಿ ಕೊಡುವುದರಿಂದಾಗಿ ಮಾಲತೇಶರನ್ನು ಸರಕಾರಿ ಸಂಸ್ಥೆಗಳು ನಂಬುತ್ತವೆ. ಹಾಗೂ ಪ್ರೊಜೆಕ್ಟ್ಗಳನ್ನು ಕರೆದು ಕೊಡುತ್ತವೆ. ಪ್ರತಿ ವರ್ಷ ಆಗಸ್ಟ್ 15ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಮಾಣಿಕ್ ಷಾ ಪರೇಡ್ ಗ್ರೌಂಡನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತದೆ. ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಬೆಂಗಳೂರಿನ ಕೆಲವು ಪ್ರತಿಷ್ಟಿತ ಶಾಲೆಗಳು ಸಹ ನೃತ್ಯ ರೂಪಕಗಳನ್ನು ಕೊಡುತ್ತವೆ. ಆದರೆ ಮಾಲತೇಶ ಕಳೆದ ಐದು ವರ್ಷಗಳಿಂದ ಬಿಬಿಎಂಪಿಯ ಕಾರ್ಪೊರೇಶನ್ ಕನ್ನಡ ಶಾಲೆಗಳಿಂದ ಏಳುನೂರಕ್ಕೂ ಹೆಚ್ಚು ಮಕ್ಕಳನ್ನು ಆಯ್ಕೆ ಮಾಡಿಕೊಂಡು ವಿಶಿಷ್ಟ ರೂಪಕಗಳನ್ನು ನಿರ್ದೇಶಿಸುತ್ತಾರೆ. ಬೇರೆ ಶಾಲೆಗಳು ನೃತ್ಯ ರೂಪಕದಲ್ಲೇ ಸಾರ್ಥಕತೆ ಕಂಡರೆ ಮಾಲತೇಶ ನಾಟಕದ ರೂಪಕಗಳ ಮೂಲಕ ದೃಶ್ಯ ವೈಭವ ಸೃಷ್ಟಿಸುತ್ತಾರೆ. ಹಲಗಲಿ ಬೇಡರ ದಂಗೆ, ಮೈಲಾರ ಮಹಾದೇವ, ರಾಣಿ ಅಬ್ಬಕ್ಕ, ವಿಧುರಾಶ್ವತ್, ಮುಂಡರಗಿ ಭೀಮರಾಯ.... ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ದ ದಂಗೆಯೆದ್ದು ಹೋರಾಡಿ ವೀರ ಮರಣವನ್ನಪ್ಪಿದ ಮಹತ್ವದ ವ್ಯಕ್ತಿಗಳನ್ನು ನಾಟಕ ರೂಪಕದ ಮೂಲಕ ಹತ್ತಾರು ಸಾವಿರ ಪ್ರೇಕ್ಷಕರಿಗೆ ಪರಿಚಯಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಯನ್ನು ಪ್ರದರ್ಶಿಸುತ್ತಾರೆ. ಇದೊಂದು ನಿಜಕ್ಕೂ ಸಾರ್ಥಕ ಪ್ರಯತ್ನ. ಸ್ವಾತಂತ್ರ್ಯ ಯೋಧರಿಗೆ ಸಲ್ಲಿಸುವ ಬಹುದೊಡ್ಡ ಗೌರವ. ಮೂಲಕ ದೇಶಸೇವೆ ಹಾಗೂ ರಂಗಸೇವೆ ಎರಡನ್ನೂ ಒಟ್ಟೊಟ್ಟೊಗೆ ಮಾಡಿದಂತಾಗುತ್ತದೆ. ಜೊತೆಗೆ ರಂಗನಾಟಕಗಳ ಗಂಧ ಗಾಳಿ ಗೊತ್ತಿಲ್ಲದ ಕಾರ್ಪೋರೇಶನ್ ಶಾಲೆಯ ಮಕ್ಕಳಿಗೆ ನಾಟಕದ ರೂಪಕಗಳನ್ನು ಹೇಳಿ ಕೊಟ್ಟಂತೆಯೂ ಆಗುತ್ತದೆ. ಅಷ್ಟೊಂದು ಮಕ್ಕಳು ಸ್ವಾತಂತ್ರೋತ್ಸವದಲ್ಲಿ ರೂಪಕಗಳ ಮೂಲಕ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಮಾಣಿಕ್ ಷಾ ಗ್ರೌಂಡಿನಲ್ಲಿ ನಡೆಯುವ ರೂಪಕಗಳ ಪೈಪೋಟಿಯ ಸ್ಪರ್ಧೆಯಲ್ಲಿ ಪ್ರತಿಷ್ಟಿತ  ಶಾಲೆಗಳ ಸುಸಜ್ಜಿತ ವ್ಯವಸ್ಥೆಯ ನೃತ್ಯರೂಪಕಗಳನ್ನು ಹಿಂದಿಕ್ಕಿದ ಮಾಲತೇಶ ಕಾರ್ಪೋರೇಶನ್ ಮಕ್ಕಳಿಗೆ ತರಬೇತಿಯನ್ನು ಕೊಟ್ಟು ಕಳೆದ ಐದು ವರ್ಷಗಳಿಂದ ಪ್ರಥಮ ಬಹುಮಾನವನ್ನು ಪಡೆಯುತ್ತಾ ಬಂದಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. 

ನಿರ್ದೇಶಿಸಿದ ನಾಟಕಕ್ಕೆ ಪ್ರಶಸ್ತಿಗಳು : ಮಾಲತೇಶ ನಿರ್ದೇಶನದ ನಾಟಕ ಯಾವುದಾದರೂ ರಂಗಸ್ಪರ್ಧೆಯಲ್ಲಿ ಭಾಗವಹಿಸಿತೆಂದರೆ ಬಹುಮಾನ ಗ್ಯಾರಂಟಿ ಎನ್ನುವುದು ಜನಜನಿತ. ಜಯನಗರದ ಎಸ್.ಎಸ್.ಎಂ.ಆರ್.ವಿ ಪದವಿ ಕಾಲೇಜಿಗೆ ನಿರ್ದೇಶಿಸಿದ ಬಹುತೇಕ ನಾಟಕಗಳು ಬಹುಮಾನವನ್ನು ಪಡೆದು ಕಾಲೇಜಿಗೆ ಹೆಮ್ಮೆ ತಂದಿವೆ. 2000 ದಲ್ಲಿ ಊರುಭಂಗ ನಾಟಕದ ನಿರ್ದೇಶನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ಪ್ರಥಮ ಬಹುಮಾನ ಗಳಿಸಿತು. 2001ರಲ್ಲಿ ಜೊತೆಗಿರುವನು ಚಂದಿರ ನಾಟಕದ ನಿರ್ದೇಶನಕ್ಕೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪ್ರಶಸ್ತಿಯಲ್ಲಿ ಪ್ರಥಮ ಬಹುಮಾನ, 2002ರಲ್ಲಿ ಮಹಾಮಾಯಿ ನಾಟಕದ ನಿರ್ದೇಶನಕ್ಕೆ ಪ್ರಯೋಗರಂಗ ಕಾಲೇಜು ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, 2003ರಲ್ಲಿ ಸ್ಮಶಾನ ಕುರುಕ್ಷೇತ್ರ ನಾಟಕದ ನಿರ್ದೇಶನಕ್ಕೆಶಂಕರನಾಗ ರಂಗಸ್ಪರ್ಧೆಯಲ್ಲಿ ತೃತೀಯ ಬಹುಮಾನ, 2004ರಲ್ಲಿ ರೋಮಿಯೋ ಜೂಲಿಯಟ್ ನಾಟಕದ ನಿರ್ದೇಶನಕ್ಕೆ ಪ್ರಯೋಗರಂಗ ಕಾಲೇಜು ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, 2005ರಲ್ಲಿ ಅಂಧಯುಗ ನಾಟಕದ ನಿರ್ದೇಶನಕ್ಕೆ ಶಂಕರನಾಗ ರಂಗಸ್ಪರ್ಧೆಯಲ್ಲಿ ತೃತೀಯ ಬಹುಮಾನ, 2006ರಲ್ಲಿ ಮಾತೃಕ ನಾಟಕದ ನಿರ್ದೇಶನಕ್ಕೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಂಗಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ, 2006ರಲ್ಲಿ ಸಂಕ್ರಾಂತಿ ನಾಟಕದ ನಿರ್ದೇಶನಕ್ಕೆ ಪ್ರಯೋಗರಂಗ ಕಾಲೇಜು ಸ್ಪರ್ಧೆಯಲ್ಲಿ ಬಹುಮಾನ ಹೀಗೆ ಕಾಲೇಜು ಪ್ರತಿ ವರ್ಷವೂ ಮಾಲತೇಶರ ನಾಟಕಗಳಲ್ಲಿ ಹಲವಾರು ವಿಭಾಗಗಳಲ್ಲಿ ಬಹುಮಾನಗಳನ್ನು ಕೊಳ್ಳೆ ಹೊಡೆದಿದೆ. ಭಾರತ ಯಾತ್ರಾ ಕೇಂದ್ರ ಆಯೋಜಿಸುವ ಕಾಲೇಜುರಂಗ ಸ್ಪರ್ಧೆಗಳಲ್ಲಿ 1999 ರಿಂದ 2001ರವರೆಗೆ ಪ್ರತಿ ವರ್ಷ ಮಾಲತೇಶ ನಿರ್ದೇಶನದ ನಾಟಕಗಳು ಪ್ರಥಮ ಬಹುಮಾನ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿವೆ.

ಜೊತೆಗೆ ನ್ಯಾಷನಲ್ ಕಾಲೇಜಿಗೆ ನಿರ್ದೇಶಿಸಿದ ಮಾಧವಿ ಹಾಗೂ ರಾವಿನದಿಯ ದಂಡೆ ನಾಟಕದ ನಿರ್ದೇಶನಕ್ಕೆ, ಬಿಇಎಲ್ ಲಲಿತ ಕಲಾ ಸಂಘಕ್ಕೆ ನಿರ್ದೇಶಿಸಿದ ರಾಕ್ಷಸ ನಾಟಕದ ನಿರ್ದೇಶನಕ್ಕೆ, ಚೈತ್ರ ಕಲಾನಿಕೇತನಕ್ಕೆ ನಿರ್ದೇಶಿಸಿದ ಕರಿಭಂಟ ನಾಟಕದ ನಿರ್ದೇಶನಕ್ಕೆ ಬಡಿಗೇರರಿಗೆ ಪ್ರಥಮ ಬಹುಮಾನಗಳು ಲಭಿಸಿವೆ. ಮಹಾವೀರ ಜೈನ್ ಕಾಲೇಜು ಆಯೋಜಿಸಿದ್ದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ 2007 ರಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗ ಮತ್ತು 2008 ರಲ್ಲಿ ರಾಕ್ಷಸ ನಾಟಕಗಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರಕಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಭೂಮಿಕಾ ತಂಡಕ್ಕೆ 1999 ರಿಂದ 2007 ವರೆಗೆ ಪ್ರತಿ ವರ್ಷ ನಿರ್ದೇಶಿಸಿದ್ದ ಮೃಗ ಮತ್ತು ಸುಂದರಿ, ರಾಕ್ಷಸ, ಸ್ಮಶಾನ ಕುರುಕ್ಷೇತ್ರ, ಬೂಟು ಬಂದೂಕುಗಳ ನಡುವೆ, ಕರಿಭಂಟ, ರಾವಿ ನದಿಯ ದಂಡೆಯಲ್ಲಿ, ಮಹಾಮಾರಿ, ಗುಳಿಗೆ ಗುಮ್ಮ...ನಾಟಕಗಳು ಸತತವಾಗಿ ರಾಷ್ಟ್ರ ಮಟ್ಟದ ಯುವಜನೋತ್ಸವ ನಾಟಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದು ಕೃಷಿ ವಿಶ್ವವಿದ್ಯಾನಿಲಯಕ್ಕೆ ದೊಡ್ಡ ಹೆಸರು ತಂದು ಕೊಟ್ಟಿವೆ.

ಪ್ರಶಸ್ತಿ ಪುರಸ್ಕಾರಗಳು : ಬಹುಮುಖಿ ಪ್ರತಿಭೆಯ ಮಾಲತೇಶ ಬಡಿಗೇರರು ರಂಗಸ್ಪರ್ಧೆಗಳಿಗೆ ನಿರ್ದೇಶಿಸಿದ ನಾಟಕಗಳೆಲ್ಲವೂ ಪ್ರಶಸ್ತಿ ಬಹುಮಾನಗಳನ್ನು ಗಳಿಸಿವೆ. 2006 ರಲ್ಲಿ ಕಲಾಗಂಗೋತ್ರಿ ತಂಡವು ಬಡಿಗೇರರ ನೇಪತ್ಯ ಕೌಶಲ್ಯಕ್ಕಾಗಿ ಪದ್ದಣ್ಣ ಪ್ರಶಸ್ತಿ ಕೊಟ್ಟು ಗೌರವಿಸಿತು. 2004ರಲ್ಲಿ ರಂಗನಿರಂತರ ಪುರಸ್ಕಾರ, 2006ರಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಅಂತರಂಗ ಪ್ರಶಸ್ತಿ, 2007ರಲ್ಲಿ ಗದಗ ಜಿಲ್ಲಾ ಸಾಹಿತ್ಯ ಬಳಗದ ಪ್ರಶಸ್ತಿ, 2008ರಲ್ಲಿ ತುಮಕೂರಿನ ಸಮ್ಮುಖ ಪ್ರಶಸ್ತಿ ಮತ್ತು ಮಂಡ್ಯದ ಜನದನಿ ಪ್ರಶಸ್ತಿ ಗಳು ಮಾಲತೇಶರ ಪ್ರತಿಭೆಗೆ ಸಂದಿವೆ. ಇದೆಲ್ಲದಕ್ಕಿಂತಲೂ 2006 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಉಸ್ತಾದ ಬಿಸ್ಮಿಲ್ಲಾ ಖಾನ್ ಪ್ರಶಸ್ತಿಯನ್ನು ಪ್ರಕಟಿಸಿ ಮಾಲತೇಶರವರನ್ನು  ದೆಲ್ಲಿಗೆ ಕರೆಸಿಕೊಂಡು ಪುರಸ್ಕರಿಸಿದ್ದು ಕನ್ನಡ ರಂಗಭೂಮಿಗೆ ಹೆಮ್ಮೆ ತರುವಂತಹ ಸಂಗತಿ. ಬಿ.ವಿ.ರಾಜಾರಾಮರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ ಮಾಲತೇಶ ಬಡಿಗೇರರು ನಾಟಕ ಅಕಾಡೆಮಿಯ ಸದಸ್ಯರಾಗಿ ತಮಗೆ ಸಿಕ್ಕ ಅವಕಾಶವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.


ಹೀಗೆ... ರಂಗಭೂಮಿಯ ವಿವಿಧ ಆಯಾಮಗಳಲ್ಲಿ ಕೆಲಸಮಾಡುವಂತಹ ಮಾಲತೇಶ ಬಡಿಗೇರ ನಿಜಕ್ಕೂ ಆಧುನಿಕ ಕನ್ನಡ ರಂಗಭೂಮಿಗೆ ಬಹುಮುಖಿ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರಿಗೊಂದು ನಾಟಕದ ಜವಾಬ್ದಾರಿಯನ್ನು ವಹಿಸಿದರೆ ಮುಗಿಯಿತು ಇಡೀ ನಾಟಕವನ್ನು ಅಚ್ಚುಕಟ್ಟಾಗಿ ಸಿದ್ದಗೊಳಿಸುತ್ತಾರೆ. ಅದಕ್ಕಾಗಿಯೇ ಮಾಲತೇಶ ಒಂದು ವರ್ಷ ಶಾಲೆಗೋ, ಕಾಲೇಜಿಗೋ, ಕಾರ್ಮಿಕರಿಗೋ , ನೌಕರರಿಗೋ ನಾಟಕವನ್ನು ನಿರ್ದೇಶಿಸಿದರೆ ಮುಗಿಯಿತು ಮತ್ತೆ ಪ್ರತಿ ವರ್ಷ ಮಾಲತೇಶರವರೇ ತಮ್ಮ ನಾಟಕ ನಿರ್ದೇಶಿಸಬೇಕು ಎನ್ನುವ ಒತ್ತಾಯ ಬರುತ್ತದೆ.  ನಟರಿಗೆ ತರಬೇತಿಯನ್ನು ಕೊಟ್ಟು, ನಾಟಕವನ್ನು ನಿರ್ದೇಶಿಸಿ, ರಂಗವಿನ್ಯಾಸ ಮಾಡಿ, ರಂಗಪರಿಕರಗಳನ್ನು ಸಿದ್ದಪಡಿಸಿ, ಕಾಸ್ಟೂಮ್ಸ ವಿನ್ಯಾಸ ಮಾಡಿ ಪ್ರತಿಯೊಬ್ಬ ಪಾತ್ರದಾರಿಗೂ ಮೇಕಪ್ ಮಾಡಿ, ಅಗತ್ಯ ಬಿದ್ದರೆ ಲೈಟಿಂಗ್ ಕೂಡಾ ನಿರ್ವಹಿಸಿ... ಇಡೀ ನಾಟಕವನ್ನು ಅದ್ಬುತವಾಗಿ ಕಟ್ಟಿಕೊಡುತ್ತಾರೆ. ಒಂದು ರೀತಿಯಲ್ಲಿ ಮಾಲತೇಶ ನಾಟಕವೊಂದರ ಕಂಪ್ಲೀಟ್ ಪುಲ್ಪ್ಯಾಕೆಜ್ ಇದ್ದ ಹಾಗೆ. ರಂಗಭೂಮಿಯನ್ನು ನಂಬಿಕೊಂಡು ಬದುಕುವವರು ತುಂಬಾನೆ ಪರದಾಡುತ್ತಾರೆ, ಯಾವಾಗಲೂ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಾರೆ ಎನ್ನುವ ಕ್ಲೀಷೆಯ ಮಾತುಗಳನ್ನು ಮಾಲತೇಶ ಸುಳ್ಳುಮಾಡಿದ್ದಾರೆ. ರಂಗಬದ್ದತೆಯನ್ನಿಟ್ಟುಕೊಂಡು ವೃತ್ತಿಪರವಾಗಿ ತೊಡಗಿಸಿಕೊಂಡರೆ ನಾಟಕರಂಗ ಕಾಮದೇನುವಾಗಬಹುದು, ಹೆಸರು ಹಣ ಗೌರವವನ್ನು ಕೊಡಬಲ್ಲುದು ಎಂಬುದಕ್ಕೆ ಸಾಕ್ಷಿ ಮಾಲತೇಶ ಬಡಿಗೇರರ ಸಂತೃಪ್ತ ಬದುಕು. ರಂಗದ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸುವುದರಿಂದಲೇ ವರ್ಷದ 365 ದಿನಗಳ ಕಾಲ ಯಾವಾಗಲೂ ಮಾಲತೇಶ ಬ್ಯೂಸಿಯಾಗಿಯೇ ಇರುತ್ತಾರೆ. ಒಂದಾದ ಮೇಲೆ ಒಂದು ನಾಟಕಗಳನ್ನು ನಿರ್ಮಿಸುತ್ತಾರೆ. ರಾಜ್ಯಾದ್ಯಂತ ರಂಗಕ್ರಿಯೆಗಳಿಗಾಗಿ ಸಂಚರಿಸುತ್ತಾರೆ. ಇಷ್ಟೊಂದು ವೈವಿದ್ಯಮಯ ಕೆಲಸಗಳನ್ನು ವೃತ್ತಿಪರವಾಗಿ ಮಾಡುವಂತಹ ಇನ್ನೊಬ್ಬ ರಂಗಕರ್ಮಿ ಪ್ರಸ್ತುತ ಪರಿಸ್ಥಿತಿಯಲ್ಲಿ ಕನ್ನಡ ರಂಗಭೂಮಿಯಲ್ಲಿ ಅಪರೂಪ. ಇಂತಹ ಅಪರೂಪದ ರಂಗಕರ್ಮಿ ಮಾಲತೇಶ ಬಡಿಗೇರ್ ನಿಜಕ್ಕೂ ಅಭಿನಂದನಾರ್ಹರು.  

                                                         -ಶಶಿಕಾಂತ ಯಡಹಳ್ಳಿ



ಮಾಲತೇಶ ನಿರ್ದೇಶಿಸಿದ ಕೆಲವು ನಾಟಕಗಳ ಚಿತ್ರಗಳು